‘ಬಂಡವಾಳವಿಲ್ಲದ ಬಡಾಯಿ’. ಕನ್ನಡದ ಸೊಗಸಾದ ನುಡಿಗಟ್ಟುಗಳಲ್ಲಿ ಇದೂ ಒಂದು. ದಿವಂಗತ ಕೈಲಾಸಂ ಅವರು ತಮ್ಮ ಒಂದು ನಾಟಕಕ್ಕೆ ಇದೇ ಹೆಸರು ಇಟ್ಟಿದ್ದರು.

ಅಂತಃಸತ್ವ ಏನೂ ಇಲ್ಲದಿದ್ದರೂ ಮೇಲೆ ಮೇಲೆ ಬಡಿವಾರ ತೋರಿಸುತ್ತಿದ್ದರೆ ಬಂಡವಾಳವಿಲ್ಲದ ಬಡಾಯಿ ಎಂದೇ ಹೇಳುತ್ತಾರೆ.

ಷೇರುಪೇಟೆ ವಿಷಯದಲ್ಲೂ ಈಚೆಗೆ ಹೀಗೆ ಆಯಿತು. ಮಳೆಯೇ ಬರುತ್ತಿಲ್ಲ; ಬೆಳೆ ಇಲ್ಲ; ಹಣಕಾಸು ಚಲಾವಣೆ ಕಡಿಮೆ; ಬಡ್ಡಿದರ ಕಡಿಮೆ; ವಸ್ತುಗಳ ಬೇಡಿಕೆ ಕುಸಿದಿದೆ; ತಯಾರಕರು ಉತ್ಪಾದಿತ ವಸ್ತುಗಳನ್ನು ಮಾರಲು ಪಾಡುಪಡುತ್ತಾ ನಾನಾ ಬೆಲೆ ರಿಯಾಯ್ತಿ ಕೊಡುತ್ತಾರೆ ಮುಂತಾದ ಕಾರಣಗಳನ್ನು ನೀಡಿ ವಿಶ್ಲೇಷಕರು, ನೀರಸ ವಾತಾವರಣ ಎನ್ನುತ್ತಾರೆ. ಕೈಯಲ್ಲಿ ಕಾಸಿಲ್ಲ ಎನ್ನುವುದೇ ಎಲ್ಲ ಜನ ಸಾಮಾನ್ಯರ ಅಳಲು. ಸರ್ಕಾರವು ಹಣದುಬ್ಬರವನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದೇವೆ ಎಂದು ಪ್ರತಿವಾರ ಘೋಷಿಸುತ್ತಿದ್ದರೆ, ತಜ್ಞರು ಆರ್ಥಿಕ ಹಿಂಜರಿತ ಎಂದು ಕರೆಯುತ್ತಾರೆ. ಮುಂದಿನ ದಿನಗಳು ಹೇಗೆ ಎಂಬುದೇ ಎಲ್ಲರ ಕಾತರ.

ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಸರ್ಕಾರಗಳು ಹಣ ಖರ್ಚು ಮಾಡುತ್ತಿದ್ದರೆ ಅದು ನಾನಾ ರೂಪದಲ್ಲಿ ಉದ್ಯೋಗವನ್ನೂ, ಜನರ ಕೈಗೆ ಕಾಸನ್ನೂ ಒದಗಿಸುತ್ತದೆ. ಆದರೆ ಸರ್ಕಾರದ ಕೈಗೆ ಹಣ ಎಲ್ಲಿಂದ ಬರಬೇಕು? ಸಾಲ ತರುವ ಕಾರ್ಯ ಮುಗಿದುಹೋಗಿದೆ.

ಇಂಥ ಸನ್ನಿವೇಶದಲ್ಲಿ ಷೇರುಪೇಟೆ ಚಿಗುರಲು ಸಾಧ್ಯವೇ? ಹಾಗೆ ಚಿಗುರುತ್ತಿರುವ ವಿದ್ಯಮಾನ ಜೂನ್‌ ತಿಂಗಳ ಕೊನೇ ಭಾಗದಲ್ಲಿ ಕಾಣಿಸಿಕೊಂಡಿತು. ಇದು ಗೊಂದಲ ಹುಟ್ಟಿಸುವಂಥ ವಿದ್ಯಮಾನ. ಮುಂಗಾರು ಸಹಿತ ಜೋರಾಗಿ ಆರಂಭವಾಗಿರಲಿಲ್ಲ. ಇನ್ನೂ ಅನಿಶ್ಚಿತತೆ ಇತ್ತು. ಆಗ ಷೇರುಪೇಟೆ ಚುರುಕಾಗತೊಡಗಿತು.

ಷೇರುಪೇಟೆಯ ತೇಜಿ ಅಥವಾ ಮಂದಿ ಪ್ರವೃತ್ತಿಯನ್ನು ಸಾಮಾನ್ಯವಾಗಿ ಮುಂಬೈನ ಸೆನ್ಸೆಕ್ಸ್‌ ಎಂಬ ಮಾನದಂಡದಲ್ಲಿ ಅಳೆಯುತ್ತಾರೆ. ಬೇರೆ ಬೇರೆ ಕೆಲವೊಂದು ಮಾನದಂಡಗಳಿವೆ. ಅಂದರೆ ಸೆನ್ಸೆಕ್ಸ್‌ ಎಂಬುದು ಸೂಕ್ಷ್ಮ ಸಂವೇದಿ ಸೂಚ್ಯಂಕ. ಅದು ೨೦೦೩ರ ಜೂನ್‌ ೩೦ರಂದು ೩೬೦೦ ತಲುಪಿತು. ವಾಸ್ತವವಾಗಿ ಏಪ್ರಿಲ್‌ನಿಂದಲೇ ಸೂಚ್ಯಂಕ ಏರುಮುಖ. ಈಗ ಅದು ಸೆಪಟೆಂಬರ್‌ ಮೂರನೇ ವಾರದ ಅಂತ್ಯದಲ್ಲಿ ೪೨೧೭.

ಈ ಸೂಚ್ಯಂಕವು ಷೇರು ಬೆಲೆಗಳು ಒಟ್ಟಾರೆಯಾಗಿ ಏರುತ್ತಿವೆಯೇ; ಷೇರುಗಳು ದೊಡ್ಡ ಸಂಖ್ಯೆಯಲ್ಲಿ ಹಸ್ತಾಂತರಗೊಂಡು ವಹಿವಾಟಿಗೆ ಕಾರಣವಾಗಿಯೇ ಎಂಬುದಕ್ಕೆ ದಿಕ್ಸೂಚಿ.

ಸೆನ್ಸೆಕ್ಸ್‌ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಸುಮಾರು ಆರು ತಿಂಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಂಕ ಮೇಲಕ್ಕೆ ಹೋಗಿದೆ. ಅಂದರೆ ಷೇರು ಬೆಲೆಗಳು ಶೇ. ೩೦ಕ್ಕೂ ಹೆಚ್ಚು ವೃದ್ಧಿಗೊಂಡವು.

ಯಾವುದೋ ಕೆಲವು ಷೇರುಗಳು, ಅಂದರೆ ನಿರ್ದಿಷ್ಟ ಕ್ಷೇತ್ರದ (ಔಷಧ, ಸಿಮೆಂಟು ಇತ್ಯಾದಿ)  ಕಂಪೆನಿಗಳು ಲಾಭ ಮಾಡಿವೆ ಎಂಬ ಕಾರಣಕ್ಕೆ ಆ ಷೇರುಗಳು, ಹೆಚ್ಚಿನ ಬೆಲೆಗೆ ಮಾರಾಟವಾಗಿವೆ ಎಂಬುದೇನೂ ಇಲ್ಲ. ಮಾಹಿತಿ ತಂತ್ರಜ್ಞಾನ ಐ.ಟಿ. ಹೊರತುಪಡಿಸಿ ಮಿಕ್ಕೆಲ್ಲ ಷೇರುಗಳು ಒಟ್ಟಾರೆಯಾಗಿ ಬೆಲೆ ಏರಿಸಿಕೊಂಡಿವೆ. ಇದಕ್ಕೆ ಕಾರಣವೇನು?

ಇರಾಕ್‌ ಯುದ್ಧ ಕೊನೆಗೊಂಡಿದೆ. ಅಮೆರಿಕದ ಆರ್ಥಿಕತೆಯು ಭಯೋತ್ಪಾದನೆ ಘಟನೆ (ಸೆ.೧೧)ನಂತರ ಚೇತರಿಸಿಕೊಂಡಿದೆ. ವಿಶ್ವಾದ್ಯಂತ ಕಚ್ಚಾತೈಲ ಬೆಲೆ ಕುಸಿದು ಉದ್ಯಮಗಳಿಗೆಲ್ಲ ಅನುಕೂಲಾಗಿದೆ. ಭಾರತದಲ್ಲಿ ಬಡ್ಡಿದರಗಳನ್ನು ಇಳಿಸಿದ್ದರಿಂದ, ಸಣ್ಣ ಪುಟ್ಟ ಹೂಡಿಕೆದಾರರು ಸಹಾ ತಮ್ಮ ಉಳಿತಾಯದ ಹಣವನ್ನು ಷೇರುಗಳಲ್ಲಿ ತೊಡಗಿಸಲು ಮುಂದೆ ಬರುತ್ತಿದ್ದಾರೆ. ಮಳೆಮಾರುತಗಳು ಆಶಾದಾಯಕವಾಗಿವೆ. ಭಾರತದ ಕಂಪೆನಿಗಳಿಗೆಲ್ಲ ಯಾವುದೇ ಅಡೆತಡೆ ಇಲ್ಲದೆ ಲಾಭ ಮಾಡುತ್ತಿರುವುದು ಅವುಗಳ ಬ್ಯಾಲೆನ್ಸ್‌ ಷೀಟುಗಳಲ್ಲೇ ವ್ಯಕ್ತವಾಗುತ್ತಿದೆ. ಒಳ್ಳೆಯ ಡಿವಿಡೆಂಟ್‌ ಘೋಷಿಸುತ್ತಿವೆ… ಇತ್ಯಾದಿ… ಇತ್ಯಾದಿ ಕಾರಣಗಳೆಲ್ಲ ಚರ್ಚೆಗೆ ಬಂದವು. ಆದರೆ ಭಾರತದ ಷೇರುಪೇಟೆ ಚೇತರಿಸಿಕೊಳ್ಳುವುದಕ್ಕೆ ನಿಜವಾದ ಕಾರಣ ಏನೆಂಬುದು ಗೋಚರಕ್ಕೆ ಬರಲು ಬಹಳ ಕಾಲ ಹಿಡಿಯಲಿಲ್ಲ. ವಿದೇಶಿ ಹೂಡಿಕೆ ಸಂಸ್ಥೆಗಳು ಭಾರತದೊಳಕ್ಕೆ ಹಣ ಹೂಡಲು ಆರಂಭಿಸಿರುವುದು ಪತ್ತೆ ಆಯಿತು.

ಭಾರತವು ಸಾಲದ ಮೂಲದಿಂದ ಬಂಡವಾಳ ಕಂಡುಕೊಳ್ಳುವುದಕ್ಕೆ ಇನ್ನು ಸಾಧ್ಯವಿಲ್ಲ ಎಂದು ಮನವರಿಕೆ ಆದ ಮೇಲೆ, ಆರ್ಥಿಕ ಸುಧಾರಣಾ ಕ್ರಮಗಳು ಜಾರಿಗೆ ಬಂದ ೧೯೦೦ ಇಸವಿ ನಂತರ, ವಿದೇಶಿ ಬಂಡವಾಳವನ್ನು ದೇಶದೊಳಕ್ಕೆ ತಂದು ಷೇರುಪೇಟೆಗಳ ಮೂಲಕ ಉದ್ಯಮಗಳಲ್ಲಿ ತೊಡಗಿಸುವ ಸಂಸ್ಥೆಗಳಿಗೆ ಮನ್ನಣೆ ಹೆಚ್ಚಾಗಿದೆ. ಹೀಗೆ ಹಣ ತರುವ ಎಫ್‌.ಐ.ಐ.ಗಳು ಫಾರಿನ್‌ ಇನ್‌ವೆಸ್ಟ್‌ಮೆಂಟ್‌ ಇನ್‌ಸ್ಟಿಟ್ಯೂಷನ್‌ಗಳು, ಅಂದರೆ ವಿದೇಶಿ ಹೂಡಿಕೆ ಸಂಸ್ಥೆಗಳು ಭಾರತಕ್ಕೆ ಬಂಡವಾಳ ತರುವುದು ಅನಿರ್ಬಾಧಿತವೇನಲ್ಲ. ಏಷ್ಯಾ ಹಣ ಬಿಕ್ಕಟ್ಟು ಸಂಭವಿಸಿದಾಗ ಹಲವು ಏಷ್ಯನ್‌ ರಾಷ್ಟ್ರಗಳು ದಿವಾಳಿ ಅಂಚಿಗೆ ಬಂದಿದ್ದವು. ಈ ಸಂಸ್ಥೆಗಳು ಆ ದೇಶಗಳಲ್ಲಿ ಷೇರು ಖರೀದಿ ಮೂಲಕ ತೊಡಗಿಸಿದ್ದ ಹಣವನ್ನು ದಿಢೀರನೇ ವಾಪಸು ಪಡೆದಿದ್ದು ಏಷ್ಯ ರಾಷ್ಟ್ರಗಳ ಆರ್ಥಿಕ ಪತನಕ್ಕೆ ಕಾರಣವಾಗಿದ್ದವು. ಈ ಸಂಸ್ಥೆಗಳು ಬೇಕೆಂದಾಗ ಹಣ ತೊಡಗಿಸಿ ಷೇರು ಖರೀದಿಸುತ್ತವೆ. ಏಷ್ಯಾ ಬಿಕ್ಕಟ್ಟಿನಲ್ಲಿ ಭಾರತಕ್ಕೆ ಹೆಚ್ಚು ತೊಂದರೆ ಆಗಿರಲಿಲ್ಲ. ಏಕೆಂದರೆ ಈ ಸಂಸ್ಥೆಗಳು ಇತರ ಏಷ್ಯಾ ರಾಷ್ಟ್ರಗಳಲ್ಲಿ ಭಾರೀ ದೊಡ್ಡ ಮೊತ್ತ ತೊಡಗಿಸಿದ್ದವು. ಭಾರತದಲ್ಲಿ ಹೆಚ್ಚಾಗಿ ತೊಡಗಿಸಿರಲಿಲ್ಲ.

ಇಂಥ ಹಣ ಹೂಡಿಕೆ ಸಂಸ್ಥೆಗಳ ಉಸಾಬರಿಯೇ ಬೇಡವೆಂದು ಭಾರತವು ವಿದೇಶೀ ನೇರ ಬಂಡವಾಳ (ಎಫ್‌.ಡಿ.ಐ) ಆಕರ್ಷಿಸುವ ಮಾರ್ಗ ಹಿಡಿದಿದೆ. ಈ ಬಗೆಯ ಬಂಡವಾಳವು ಹೆಚ್ಚು ಜವಾಬ್ದಾರಿಯುತ. ವಿದೇಶಿ ಹೂಡಿಕೆದಾರನು ಭಾರತದಲ್ಲಿ ಯಾವುದಾದರೂ ನಿರ್ದಿಷ್ಟ ಉದ್ಯಮ ಯೋಜನೆಯಲ್ಲಿ ಮಾತ್ರ ಹಣ ತೊಡಗಿಸಬೇಕು. ಅದನ್ನು ಯಂತ್ರೋಪಕರಣ, ತಂತ್ರಜ್ಞಾನ ಮುಂತಾದ ರೂಪದಲ್ಲೂ ತೊಡಗಿಸಬಹುದು. ಹಣ ತೊಡಗಿಸಿದ ಯೋಜನೆಯಲ್ಲಿ, ಅಂದರೆ ಉದ್ಯಮದಲ್ಲಿ ಹೂಡಿಕೆದಾರ ಪಾಲ್ಗೊಳ್ಳಬೇಕು. ತೊಡಗಿಸಿದ ಬಂಡವಾಳವು ಲಾಭ ದುಡಿಯಲು ನೆರವಾಗಬೇಕು. ಬೇಡೆಂದಾಗ ಹಣ ಎತ್ತಿಕೊಂಡು ವಾಪಸಾಗಲು ಸಾಧ್ಯವಿಲ್ಲ. ಇದೇನೇ ಇದ್ದರೂ ಎಫ್‌ಐಐಗಳು ತರುವ ಬಂಡವಾಳಕ್ಕೆ ಭಾರತವು ಬಾಗಿಲು ಮುಚ್ಚಿಲ್ಲ.

೨೦೦೩ರ ಜೂನ್‌ನಿಂದ ಆರಂಭವಾದ ಷೇರುಪೇಟೆ ಚೇತರಿಕೆ ವಿದ್ಯಮಾನವನ್ನು ಸಮೀಕ್ಷಿಸುತ್ತಿರುವ ಕರಣ ೨೦೦೨ರ ಜೂನ್‌ನಲ್ಲಿ ಇದ್ದ ಪರಿಸ್ಥಿತಿ ಏನೆಂದು ನೋಡಬಹುದು. ಆ ವರ್ಷದ ಆ ತಿಂಗಳು ೩೮೧ ಕೋಟಿ ರೂಪಾಯಿನಷ್ಟು ಬಂಡವಾಳವನ್ನು ಎಫ್‌.ಐ.ಐ. ಗಳು ವಾಪಸು ತೆಗೆದುಕೊಂಡಿದ್ದವು. ಅಂದರೆ ಹಾಕಿದ್ದನ್ನು ವಾಪಸು ಪಡೆಯುವ (ಷೇರುಗಳನ್ನು ಮಾರುವ) ಕಾರ್ಯಕ್ರಮ ನಡೆದಿತ್ತು. ಎರಡು ತಿಂಗಳ ನಂತರ ಮತ್ತೆ ಹೂಡಿಕೆ ಆರಂಭವಾಯಿತು. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ವಾಪಸ್‌ ಪಡೆದಿದ್ದು ೧೦೦೦ ಕೋಟಿ ರೂಪಾಯಿನಷ್ಟು. ಮುಂದಿನ ತಿಂಗಳುಗಳಲ್ಲಿ ಏರಿ ಇಳಿದು ೨೦೦೩ರ ಮೇನಲ್ಲಿ ಮೊದಲ್ಗೊಂಡಂತೆ ಹಣ ಹೂಡಿಕೆ ಜೋರಾಗಿದೆ. ಜೂನ್‌ ಅಂತ್ಯದಲ್ಲಿ ಒಟ್ಟು ಹೂಡಿಕೆ ೨೩೩೧ ಕೋಟಿ ರೂಪಾಯಿ ಆಗಿತ್ತು.

ಇನ್ನೊಂದು ಲೆಕ್ಕಾಚಾರದ ಪ್ರಕಾರ ೨೦೦೨ರ ಪೂರಾ ವರ್ಷದಲ್ಲಿ ಈ ವಿದೇಶಿ ಹಣ ಪೂರೈಕೆ ಸಂಸ್ಥೆಗಳು ತೊಡಗಿಸಿದ ಒಟ್ಟು ಹಣ ೭೫೦೦ ಲಕ್ಷ ಡಾಲರ್‌. ಅಂದರೆ ೩೭೫೦ ಕೋಟಿ ರೂಪಾಯಿ.

ಅವ್ಯಾಹತವಾಗಿ ಹಣ ಹೂಡಿದ್ದರಿಂದ ೨೦೦೩ರ ಸಾಲಿನಲ್ಲಿ ಸೆಪ್ಟೆಂಬರ್‌ ಮಧ್ಯಭಾಗದವರೆಗೆ ೨೭೦ ಕೋಟಿ ಡಾಲರ್‌, ಅಂದರೆ ೧೩೫೦೦ ಕೋಟಿ ರೂಪಾಯಿ ಹಣವು ಭಾರತದ ಬಂಡವಾಳಪೇಟೆ ಸೇರಿದಂತಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಎಷ್ಟುಪಟ್ಟು ಬಂಡವಾಳ ಬರುತ್ತಿದೆ ಎಂಬುದನ್ನು ಸುಲಭವಾಗಿ ಲೆಕ್ಕ ಹಾಕಬಹುದು.

ಇದೇನಿದು ಕುತೂಹಲ? ವಿದೇಶಿ ಹೂಡಿಕೆದಾರರಿಗೆ ಭಾರತದ ಬಗೆಗೆ ಏಕೆ ಈ ಆಕರ್ಷಣೆ? ಸೋಜಿಗದ ಪ್ರಶ್ನೆ ಇದು.

ಭಾರತದಲ್ಲಿ ಕೇಂದ್ರ ಸಕಾðರ ಬದಲಾದರೂ ಆರ್ಥಿಕ ಸುಧಾರಣಾ ಕಾರ್ಯಕ್ರಮ ಸ್ವಲ್ಪವೂ ಬದಲಾಗಲಿಲ್ಲ. ಸತತವಾಗಿ ವಿಶ್ವಬ್ಯಾಂಕೇ ಮುಂತಾದ ಅಗ್ರ ಸಂಸ್ಥೆಗಳ ಮಾರ್ಗದರ್ಶನವನ್ನು ಚಾಚೂ ತಪ್ಪದೆ ಅನುಸರಿಸುತ್ತಿರುವುದರಿಂದ ಅಮೆರಿಕ ಮೂಲದ, ಅಮೆರಿಕ ಪ್ರೇರಣೆಗೆ ಹೆಸರಾದ, ಶಕ್ತಿಗಳು ಭಾರತವನ್ನು ಪ್ರಶಂಸಿಸುತ್ತಲೇ ಬಂದಿವೆ.

ಭಾರತೀಯರು ವಿದೇಶಗಳಲ್ಲಿ ಒಳ್ಳೆಯ ಹೆಸರು ಪಡೆದಿದ್ದಾರೆ. ವಿದೇಶಿ ವಾಣಿಜ್ಯೋದ್ಯಮ ಹಿತ ಕಾಪಾಡುವ ಚಟುವಟಿಕೆಗಳನ್ನು (ಗುತ್ತಿಗೆಯ ಮುಂತಾದ ಕಾಮಗಾರಿಗಳನ್ನು) ನಿಭಾಯಿಸುವಲ್ಲಿ ಕಂಪೆನಿಗಳು ಯಶಸ್ವಿಯಾಗುತ್ತಿವೆ. ಇದರಿಂದ ‘ವಿಶ್ವಾಸ’ ಪ್ರಾಪ್ತವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಜಗತ್ತಿನ ಜನಸಂಖ್ಯೆಯ ಶೇ. ೧೫ ಪಾಲು ಹೊಂದಿರುವ ಭಾರತದಲ್ಲಿ ವ್ಯಾಪಾರಕ್ಕೆ ವಿಪುಲ ಅವಕಾಶಗಳಿವೆ ಎಂಬುದು ವಿದೇಶಿ ಮೂಲಗಳಿಗೆ ಮನದಟ್ಟಾಗಿದೆ. ಕೆಲವೇ ವರ್ಷಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಇದು ವಿಶ್ಲೇಷಕರೊಬ್ಬರ ಅಭಿಪ್ರಾಯ.

ಇಂಥ ಕಾರಣಗಳು ಏನೇ ಇದ್ದರೂ ಭಾರತ ಸುರಕ್ಷಿತ ಎಂಬುವಷ್ಟು ಭಾವನೆ ಇರಲಿಕ್ಕೆ ಸಾಕು. ಏಕೆಂದರೆ ಸಿಂಗಪುರ ಸರ್ಕಾರವು ಎಫ್‌.ಐ.ಐ. ರೂಪದಲ್ಲಿ ತನ್ನಲ್ಲಿರುವ ನೌಕರರ ಭವಿಷ್ಯ ನಿಧಿ ಹಣವನ್ನು ಭಾರತದ ಷೇರುಗಳಲ್ಲಿ ತೊಡಗಿಸುತ್ತಿದೆ. ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಗಳ ಅಧಿಕೃತ ಸ್ವರೂಪದ ಹಣ ಸಹ ಇದೇ ರೀತಿ ಹರಿದುಬರುತ್ತಿದೆ.

ಎಬಿಎನ್ ಆಮ್ರೊ ಎಎಂಸಿ ಬ್ಯಾಂಕು, ಎಚ್‌. ಎಸ್‌. ಬಿ. ಸಿ. ಬ್ಯಾಂಕು ಮುಂತಾದ ವಿದೇಶಿ ಮೂಲದ ಹಣಕಾಸು ಸಮಸ್ಥೆಗಳು ಸಂಪನ್ಮೂಲವನ್ನು ತೊಡಗಿಸುತ್ತಿವೆ.

ಭಾರತದ ಷೇರುಗಳನ್ನು ಕೊಳ್ಳಲು ಬಯಸಿದಾಗ ಭಾರತದೊಳಗಿನ ಮುಚ್ಯುವಲ್‌ ಫಂಡ್‌ಗಳು ಮತ್ತು ಇತರ ಹೂಡಿಕೆದಾರರ ಬಳಿ ಇರುವ ಗಟ್ಟಿ ಕಂಪೆನಿಗಳ ಷೇರುಗಳು ಸುಲಭವಾಗಿ ಲಭ್ಯವಾಗುತ್ತಿವೆ. ಭಾರತದ ಸರ್ಕಾರಿ ವಲಯ ಕಂಪೆನಿಗಳ ಷೇರು ವಿಕ್ರಯ ನೀತಿ ಸಹ ಅನುಕೂಲಕರ ಪರಿಸ್ಥಿತಿ ಒದಗಿಸಿವೆ. ಉದಾಹರಣೆಗೆ ೨೦೦೪ರ ಮಾರ್ಚ್‌ ೩೧ರ ಹೊತ್ತಿಗೆ ಷೇರು ವಿಕ್ರಯದ ಮೂಲಕ ಭಾರತ ಸರ್ಕಾರವು ೧೩೨೦೦ ಕೋಟಿ ರೂಪಾಯಿ ಸಂಗ್ರಹಿಸಲು ಭಾರತ ಸರ್ಕಾರ ಗುರಿ ಇಟ್ಟುಕೊಂಡಿತ್ತು. ಆ ಮೊತ್ತದ ಒಂದು ಸಣ್ಣ ಭಾಗದಷ್ಟು ಸಂಪನ್ಮೂಲ ಸಂಗ್ರಹಿಸಲೂ ಅರುಣ್‌ ಶೌರಿ ಅವರ ಇಲಾಖೆಗೆ ಸಾಧ್ಯವಾಗಲಿಲ್ಲ.

ಷೇರು ಪೇಟೆಯ ತೇಜಿ ವಿದ್ಯಮಾನ ನಡೆದಿರುವಾಗಲೇ ಸುಪ್ರಿಂಕೋರ್ಟ್‌ ಎರಡು ಸರ್ಕಾರಿ ತೈಲ ಕಂಪೆನಿ ಷೇರು ವಿಲೇವಾರಿ ಪ್ರಕ್ರಿಯೆಗೆ ತಡೆ ಒಡ್ಡಿತು. ಸರ್ಕಾರಿ ವಲಯದ ಈ ಬೃಹತ್‌ ಕಂಪೆನಿಗಳ ಖಾಸಗೀಕರಣ ಕುರಿತಂತೆ ಸಂಸತ್ತಿನ ಅಂಗೀಕಾರ ಪಡೆದಿಲ್ಲ ಎಂಬ ತಾಂತ್ರಿಕ ಕಾರಣವಷ್ಟೇ ಸುಪ್ರೀಂಕೋರ್ಟ್‌ ತಡೆ ತಂದಿತು. ತಕ್ಷಣಕ್ಕೆ ಅಂಥ ಅಂಗೀಕಾರ ಪಡೆಯಲು ಸಮಂಜಸ ರಾಜಕೀಯ ಪರಿಸ್ಥಿತಿ ಇಲ್ಲ ಎಂದು ಭಾವಿಸಿದರೂ, ಅಂಥ ಅಂಗೀಕಾರ ಪಡೆಯಲು ತಡವಾಗುತ್ತದೆ ಎಂದಾದರೂ ಚಿಂತೆಯಿಲ್ಲ. ಕಾಯಬಹುದು. ಅಂಥ ಕಡೆ ಸುದ್ದಿ ಹೊರಬಿದ್ದಾಗಲು ಷೇರುಪೇಟೆಯಲ್ಲಿ ದೀರ್ಘಕಾಲೀನ ತಲ್ಲಣ ಮೂಡಲಿಲ್ಲ. ವಿದೇಶಿ ಮೂಲ ಬಂಡವಾಳ ಬರುವುದು ಮುಂದುವರೆಯಲು ಅಡ್ಡಿಯಾಗಲಿಲ್ಲ.

ವಿದೇಶಿ ಹೂಡಿಕೆದಾರರು ಭಾರತದಲ್ಲಿ ಷೇರುಗಳು ಅಗ್ಗವಾಗಿವೆ ಎಂದೇ ಭಾವಿಸುತ್ತಾರೆ. ಭಾರತೀಯ ಕಂಪೆನಿಗಳ ದಾರ್ಢ್ಯತೆ, ವ್ಯವಹಾರ ವೈಖರಿ ಇವನ್ನು ನೋಡಿದರೆ ಚೀನಾದಂಥ ರಾಷ್ಟ್ರದಲ್ಲಿ ತೊಡಗಿಸುವುದಕ್ಕಿಂತ ಇಲ್ಲಿಗೆ ಬರುವುದೇ ವಾಸಿ ಎನಿಸುತ್ತದೆ.

ವಿದೇಶಿ ಬಂಡವಾಳಕ್ಕೆ ಹಾತೊರೆಯುತ್ತಿರುವಾಗ ನಡೆದ ಈ ವಿದ್ಯಮಾನ ನಿಜವಾಗಿ ಅಪಾಯಮಾನಕಾರಿ. ಆದರೆ ಭಾರತದ ಷೇರುಪೇಟೆಗಳ ಗುಣಲಕ್ಷಣಗಳನ್ನು ಬಲ್ಲವರು ಆತಂಕವನ್ನೇ ವ್ಯಕ್ತಪಡಿಸುತ್ತಿದ್ದಾರೆ. ಬಂಡವಾಳ ಪೂರವು ಭಾರತದ ಷೇರುಗಳ ಬೆಲೆಗಳನ್ನು ವಿಪರೀತವಾಗಿ ಏರಿಸುತ್ತಿವೆ. ಎಷ್ಟೋ ಷೇರುಗಳ ಅಂತಃಸತ್ವ ನೋಡಿದರೆ ಅವು ಅಷ್ಟು ಬೆಲೆ ಬಾಳುವುದಿಲ್ಲ. ಇಂಥ ಖರೀದಿಯು ಒಟ್ಟಾರೆ ಸಮತೋಲನವನ್ನು ಕೆಡಿಸುತ್ತದೆ ಎಂಬುದು ವಿಶ್ಲೇಷಕರ ಭಾವನೆ.

ಅದಕ್ಕಿಂತ ಹೆಚ್ಚಾಗಿ ಹಿಂದಿನ ಷೇರು ಹಗರಣಗಳಿಂದಾಗಿ ಭಾರತದೊಳಗಿನ ಸಣ್ಣ ಹೂಡಿಕೆದಾರರು ಈ ಹಿಂದೆ ತತ್ತರಿಸಿದ್ದಾರೆ. ಪೆಟ್ಟು ತಿಂದಿದ್ದಾರೆ. ಹರ್ಷದ್‌ ಮೆಹ್ತಾ ಪ್ರಕರಣದಲ್ಲಿ ಆತ ಬ್ಯಾಂಕುಗಳ ದುರ್ಬಳಕೆ ಮಾಡಿ, ಜನರು ತಮ್ಮ ಹಣ ತೊಡಗಿಸಿ ಅಂತಿಮವಾಗಿ ನಷ್ಟಕ್ಕೆ ಒಳಗಾಗುವಂತೆ ಮಾಡಿದ. ಸುಮಾರು ಹತ್ತು ವರ್ಷದ ನಂತರ ನಡೆದ ಕೇತನ್‌ ಪಾರೀಖ್‌ ಹಗರಣದಲ್ಲಿ ಆತ ಸಹಕಾರ ಬ್ಯಾಂಕ್‌ಗಳ ಮೂಲಕ ಹಣ ಸೆಳೆದು ಸಾಮಾನ್ಯ ಜನ ಭಂಗಪಡುವಂತೆ ಮಾಡಿದ. ಈ ಎರಡೂ ಪ್ರಕರಣಗಳಲ್ಲಿ ಸೂಚ್ಯಂಕ ಆಕಾಶಕ್ಕೆ ಹೋಗಿತ್ತು.

ಹರ್ಷದ್ ಮೆಹ್ತಾ ಕಾಲದಲ್ಲಿ ಅದು ೪೦೦೦ ಕ್ಕೆ ಹೋಗಿತ್ತು. ಈಗ ಅದು ೪೫೦೦ ಗೆರೆಯನ್ನು ಎಂದು ದಾಟುವುದೋ ಎಂಬ ನಿರೀಕ್ಷೆ ಇದೆ.

ಇದೇ ಷೇರುಪೇಟೆ ಎಂದು ಬೇಕಾದರೂ ಕುಸಿಯಬಹುದು ಎಂಬ ಭಾವನೆ ಹಳೇ ವಿಚಾರಧಾರೆ ಹೊಂದಿರುವವರಲ್ಲಿ ಇದ್ದೇ ಇದೆ. ದಿಢೀರನೆ ನಡೆಯುವ ಬೆಳವಣಿಗೆಗಳು ದಿಗಿಲು ಹುಟ್ಟಿಸುವುದು ಸಹಜ. ಆದ್ದರಿಂದ ಸದ್ಯದ ಬೆಳವಣಿಗೆಯ ವ್ಯವಹಾರದಲ್ಲಿ ಸಣ್ಣ ಹೂಡಿಕೆದಾರರು ಅತ್ಯಾಸ್ಥೆಯಿಂದ ಪಾಲ್ಗೊಳ್ಳುತ್ತಿಲ್ಲ. ದೇಶದ ಒಟ್ಟಾರೆ ಸ್ಥಿತಿಯಿಂದ ಅವರಿಗೆ ನಿರಾಶೆ ಆಗಬಾರದು. ಠೇವಣಿಗಳು ಬಡ್ಡಿಯನ್ನು ಹೆಚ್ಚಾಗಿ ತರುತ್ತಿಲ್ಲವೆಂಬ ಕಾರಣಕ್ಕೆ ಅನ್ಯ ಹೂಡಿಕೆ ಮಾರ್ಗಗಳನ್ನು ಹುಡುಕುತ್ತಾ ಕಂಗಾಲಾಗಿರುವ ಸಣ್ಣ ಹೂಡಿಕೆದಾರರಿಗೆ ಷೇರುಪೇಟೆ ಈ ಬಾರಿ ನಿರಾಶೆ ಮಾಡಬಾರದು. ೨೪.೦೯. ೨೦೦೩