ನಾನು ಅರ್ಥಶಾಸ್ತ್ರದ ವಿದ್ಯಾರ್ಥಿಯಲ್ಲ. ಪತ್ರಿಕೆಗಳಲ್ಲಿ ಅರ್ಥಶಾಸ್ತ್ರದ ಲೇಖನಗಳಲ್ಲಿ ಒಂದೆರಡು ಬಾರಿ ಓದಿ ತಿಳಿಯಲು ಪ್ರಯತ್ನಿಸಿ, ಅಲ್ಲಿ ಬರುವ ಅಂಕಿಸಂಖ್ಯೆಗಳಿಂದ ಗಾಬರಿಗೊಂಡು ಓದುವುದನ್ನೇ ಬಿಟ್ಟು ಬಿಟ್ಟಿದ್ದೆ. ಅಲ್ಲದೆ ಚರ್ಚೆಗಳಲ್ಲಿ ಕೂಡ ಅರ್ಥಶಾಸ್ತ್ರದಗಳನ್ನರಿಯುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಆ ಬಗೆಗಿನ ಯಾವುದೇ ಲೇಖನಗಳನ್ನು ನಾನು ಓದುತ್ತಿರಲಿಲ್ಲ.

ಇಂತಿರಲಾಗಿ ಒಂದು ಸಲ ಪಾಕಿಸ್ತಾನಕ್ಕೆ ಭೇಟಿ ನೀಡಿದ ಕನ್ನಡದ ಪತ್ರಕರ್ತರೊಬ್ಬರು ಅಲ್ಲಿಯ ಅರ್ಥವ್ಯವಸ್ಥೆಯ ಬಗ್ಗೆ ಧಾರಾವಾಹಿಯಾಗಿ ಕೆಲವು ಲೇಖನಗಳನ್ನು ‘ಪ್ರಜಾವಾಣಿ’ಯಲ್ಲಿ ಪ್ರಕಟಿಸಿದ್ದರು. ಆ ಲೇಖನಮಾಲೆ ಪ್ರವಾಸ ಸಾಹಿತ್ಯವನ್ನು ದಟ್ಟವಾಗಿ ಹೋಲುತ್ತಿದ್ದುದರಿಂದ ಓದಿದೆ; ಆಶ್ಚರ್ಯವಾಯಿತು. ಯಾಕೆಂದರೆ, ಆ ಲೇಖನ ನನಗೆ ತಿಳಿಯಿತು. ಪಾಕಿಸ್ತಾನದ ಅರ್ಥವ್ಯವಸ್ಥೆಯ ಸ್ಥೂಲ ಪರಿಚಯ ನನಗಾಯಿತೆಂಬಷ್ಟು ತಿಳಿಯಿತು. ಇಡೀ ಧಾರಾವಾಹಿಯನ್ನು ಓದಿ ಪ್ರಭಾವಿತನಾಗಿ ಕೊನೆಗೆ ಪ್ರಜಾವಾಣಿಗೆ ದೂರವಾಣಿ ಮಾಡಿ ಬರೆದವರ ಬಗ್ಗೆ ಕೇಳಿದೆ. ಬರೆದವರು ಸಂಪಾದಕ ಶೈಲೇಶ್‌ಚಂದ್ರಗುಪ್ತ ಎಂದು ಓದತೊಡಗಿದೆ. ಬರಬರುತ್ತ ಅವರು ಬರೆದ ಲೇಖನಗಳ ಬಗ್ಗೆ ನನಗೆ ತಿಳಿದ, ತಿಳಿಯದ ವಿಷಯಗಳ ಬಗ್ಗೆ ದೂರವಾಣಿಯಲ್ಲೋ, ಭೇಟಿಯಾದಾಗಲೋ ಚರ್ಚೆ ಮಾಡತೊಡಗಿದೆ. ಹೀಗೆ ಸುರುವಾದ ನಮ್ಮ ಅರ್ಥ ಸಂವಾದ ಇಂದಿಗೂ ನಡೆಯುತ್ತಲೇ ಇದೆ. ಸದರಿ ಲೇಖನಗಳು ತುಂಬ ಜನಪ್ರಿಯವಾಗಿದ್ದವು. ಅವುಗಳನ್ನು ಇಷ್ಟಪಟ್ಟ ಅನೇಕರು ನನಗೆ ಸ್ನೇಹಿತರಾದರು. ಆ ಸ್ನೇಹವು ಇಂದಿಗೂ ಮುಂದುವರಿಯುತ್ತಿದೆ.

ಶ್ರೀ ಶೈಲೇಶ್‌ಚಂದ್ರಗುಪ್ತ ವೃತ್ತಿಪರ ಅರ್ಥಶಾಸ್ತ್ರಜ್ಞರಲ್ಲ. ಈ ವಿಷಯದಲ್ಲಿ ಪದವೀಧರರೂ ಅಲ್ಲ. ಮೂವತ್ತಕ್ಕೂ ಹೆಚ್ಚು ವರ್ಷ ಪ್ರಜಾವಾಣಿಯಲ್ಲಿ ಸೇವೆ ಸಲ್ಲಿಸಿ ಕನ್ನಡ ಪತ್ರಿಕೋದ್ಯಮದ ಅತ್ಯುನ್ನತ ಸ್ಥಾನಕ್ಕೇರಿದ ಕೆಲವೇ ಜನ ಪತ್ರಕರ್ತರಲ್ಲಿ ಅವರೊಬ್ಬರು. ವಿಶೇಷತಃ ನಾಡಿನ ಆರ್ಥಿಕ ವಿದ್ಯಮಾನಗಳ ಬಗೆಗೆ ಕನ್ನಡದಲ್ಲಿ ಸಮರ್ಥ ವಿಶ್ಲೇಷಣೆ ಮಾಡಬಲ್ಲ ಬೆರಳೆಣಿಕೆಯ ತಜ್ಞರಲ್ಲಿ ಅಗ್ಯಗಣ್ಯರು. ಪ್ರಪಂಚದ ಸಮಸ್ಯೆಗಳು ಹಾಗೂ ಬೆಳವಣಿಗೆಗಳ ಬಗ್ಗೆ ಅವರು ಬರೆದ ಸಂಪಾದಕೀಯಗಳು, ಲೇಖನಗಳು ಆರ್ಥಿಕ ವಿದ್ಯಮಾನಗಳ ಬಗೆಗೆ ಬರೆದ ‘ಕಾಸುಕಿಮ್ಮತ್ತು’, ‘ಸರಕು ಸಂಪತ್ತು’ ಹಾಗೂ ‘ಅರ್ಥನೋಟ’ ಅಂಕಣಗಳು ಅವರಿಗೊಂದು ಅಪರೂಪದ ಜನಪ್ರಿಯತೆಯನ್ನು, ಖ್ಯಾತಿಯನ್ನು ತಂದುಕೊಟ್ಟಿವೆ. ಪ್ರಪಂಚವನ್ನು ಸುತ್ತಿ, ವಿದೇಶಿ ಪತ್ರಿಕಾ ಕಚೇರಿಗಳಿಗೆ ಅಧಿಕೃತವಾಗಿ ಭೇಟಿ ನೀಡಿ ಅಪಾರವಾದ ಅನುಭವ ಪಡೆದವರು.

ಅರ್ಥಶಾಸ್ತ್ರವನ್ನು ಇವರಂತೆ ರೋಚಕವಾಗಿ ಹೇಳುವುದು ಸಾಧ್ಯವಿದೆಯೆಂದು ನನಗನ್ನಿಸಿರಲೇ ಇಲ್ಲ. ಇವರ ಬರೆಹದಲ್ಲೂ ಅಂಕಿಸಂಖ್ಯೆಗಳಿವೆ; ಬೇಸರ ಬರಿಸುವುದಿಲ್ಲ. ಒಣ ವಿಷಯವಾದರೂ ನೀರಸವೆನಿಸುವುದಿಲ್ಲ. ಕಾರ್ಯಕಾರಣ ಪರಿಣಾಮಗಳನ್ನು ಸರಳವಾಗಿ ವಿವರಿಸುತ್ತಾರೆ. ಜಾಗತೀಕರಣದ ಪರಿಣಾಮಗಳನ್ನಂತೂ ಶೈಲೇಶ್‌ಚಂದ್ರರಂತೆ ಮನಮುಟ್ಟುವಂತೆ ವಿವರಿಸಿದ ಲೇಖನಗಳನ್ನು ನಾನು ಇನ್ನೆಲ್ಲಿಯೂ ಕಾಣಲಿಲ್ಲ.

ಪ್ರಪಂಚದ ಅರ್ಥಶಾಸ್ತ್ರವೆಲ್ಲ ಒಂದೇ ರೀತಿ ಇರಬೇಕೆನ್ನುತ್ತದೆ ಜಾಗತೀಕರಣ. ಇಂಥ ಒತ್ತಡಕ್ಕೆ ಸಿಲುಕಿ, ಹೊಂದಾಣಿಕೆ ಮಾಡಿಕೊಳ್ಳಲು ಆಗದೆ ಭಾರತದಂಥ ದೇಶಗಳು ಪಡುವ ಸಂಕಟ, ಗೊಂದಲಗಳನ್ನು, ಅದರ ಸೂಕ್ಷ್ಮ ಒಳಸುಳಿಗಳನ್ನು ಅವರು ಬಿಚ್ಚುತ್ತ ಹೋದಂತೆ ನಮಗೇ ಗೊತ್ತಿಲ್ಲದೆ ನಾವು ತಬ್ಬಿಬ್ಬಾಗಿರುತ್ತೇವೆ.

ಶ್ರೀ ಶೈಲೇಶ್‌ಚಂದ್ರರ ಅರ್ಥನೋಟದಲ್ಲಿ ನಾನು ತುಂಬ ಮೆಚ್ಚಿಕೊಂಡ ಗುಣ ಎಂದರೆ ಅವರು ತೋರುವ ಸಾಂಸ್ಕೃತಿಕ ಕಾಳಜಿ. ಜನಜೀವನದ ಮೇಲೆ ಆರ್ಥಿಕ ವಿಚಾರಗಳು ಹೇಗೆ ಪರಿಣಾಮವನ್ನು ಬೀರುತ್ತವೆಂಬುದನ್ನು ಉದ್ದಕ್ಕೂ ಹೇಳುತ್ತಾರೆ. ಜನಸಮುದಾಯ ಬದಲಾವಣೆಗಳಿಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಹೇಳುತ್ತಲೇ ಜಾಗತೀಕರಣ ತರುತ್ತಿರುವ ಬದಲಾವಣೆಗಳು ಹ್ಯಾಗೆ ಆಘಾತಕಾರಿ ಎಂಬುದನ್ನೂ ಹೇಳುತ್ತಾ ಆಶಾಭಾವನೆಯನ್ನೂ ವ್ಯಕ್ತಪಡಿಸುತ್ತಾರೆ.

ನಾಡಿನ ನಮ್ಮ ಲೇಖಕರೇ ತಮ್ಮ ಕೃತಿಗಳಲ್ಲಿ ಜಾಗತೀಕರಣದ ಪರಿಣಾಮಗಳ ಬಗ್ಗೆ ಹೇಳಲು ಹಿಂಜರಿಯುತ್ತಾರೆ. ಬಹುಶಃ ವೇಗದ ಬದಲಾವಣೆಗಳಿಗೆ ಅವರು ಬೆರಗಾಗಿರಬಹುದು. ಬೆಳವಣಿಗೆಗಳ ಹಿನ್ನೆಲೆ ಮುನ್ನೆಲೆಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗದೆ ವಿರಕ್ತ ಧೋರಣೆ ತಳೆದಿರಲೂಬಹುದು. ಅಂಥ ಲೇಖಕರಿಗೂ ಈ ಕೃತಿ ಬೋಧಪ್ರದವಾಗಿದೆ.

ರಾಜಕೀಯ ನಿರ್ಧಾರಗಳ ಪ್ರಭಾವ, ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಆಗುವ ಪರಿಣಾಮ, ಕಂಪ್ಯೂಟರ್ ಬಳಕೆ, ಮಾಹಿತಿ ತಂತ್ರಜ್ಞಾನ, ಷೇರು ವ್ಯವಹಾರ, ಕೃಷಿರಂಗ ಹೀಗೆ ಒಂದೆರಡಲ್ಲ; ನೂರಾರು ಸಂಗತಿಗಳು ಈ ಗ್ರಂಥದಲ್ಲಿ ಸುಳಿಯುತ್ತವೆ. ಶೈಲೇಶ್‌ಚಂದ್ರರು ಉದ್ದಕ್ಕೂ ರೈತರ, ಕಾರ್ಮಿಕರ, ಸಾಮಾನ್ಯ ಬಳಕೆದಾರರ, ವಿದ್ಯಾರ್ಥಿಗಳ, ನಿರುದ್ಯೋಗಿಗಳ ಪರವಾದ ನಿಲುವನ್ನು ತಳೆಯುತ್ತಾರೆ. ಮಾಧ್ಯಮಗಳಲ್ಲಿ ಕೂಡಾ ಜನಪರ ಧೋರಣೆ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಹಿರಿಯ ಸಂಪಾದಕರಾದ ಇವರು ಹೊಸ ಪೀಳಿಕೆಯವರ ಪಾಲಿಗೆ ಆದರ್ಶಪ್ರಾಯರೆಂದೇ ನಂಬಿದ್ದೇನೆ.

ಕಳೆದ ಮೂರು ದಶಕಗಳಲ್ಲಿ ಸುದ್ಧಿ ಬರೆವಣಿಗೆ ವೇಳೆ ಲೆಕ್ಕವಿಲ್ಲದಷ್ಟು ಹೊಸ ಪದಗಳನ್ನು ಸೃಷ್ಟಿಸಿ ಕನ್ನಡದ ಶಬ್ದ ಭಂಡಾರಕ್ಕೆ ಕೊಟ್ಟಿದ್ದಾರೆಂದು ಕೇಳಿದ್ದೇನೆ. ಅರ್ಥನೋಟದಲ್ಲಿ ಕೂಡ ಅಭಿವ್ಯಕ್ತಿಗಾಗಿ ಲಭ್ಯ ಇದ್ದ ಪದಗಳ ಜೊತೆಗೆ ಕೊಳ್ಳುಬಾಕ ಸಂಸ್ಕೃತಿ, ಬಳಕೆಬಾಕ ಸಂಸ್ಕೃತಿ, ಬಳಕೆಮೌಲ್ಯ, ಹೊರಗುತ್ತಿಗೆ, ಸಂಪತ್‌ಸೃಷ್ಟಿ, ಸೂಕ್ಷ್ಮ ಸಂವೇದಿ ಸೂಚ್ಯಂಕ, ವಿಫುಲವಾಗಿ ಕಾಣಬಹುದು. ಆಧುನಿಕ ಅರ್ಥಶಾಸ್ತ್ರವನ್ನು ಕನ್ನಡಕ್ಕೆ ಒಗ್ಗಿಸಿದ ಅವರ ರೀತಿಗೆ ಬೆರಗಾಗುತ್ತೇವೆ. ಕನ್ನಡದಲ್ಲಿ ಪ್ರೌಢವಾದ ಶಾಸ್ತ್ರಭಾಷೆಯೊಂದು ನಿರ್ಮಾಣವಾಗುತ್ತಿರುವ ಸ್ಪಷ್ಟ ಲಕ್ಷಣಗಳು ಈ ಕೃತಿಯಲ್ಲಿವೆ. ಇಲ್ಲಿರುವ ಮಾಹಿತಿಯು ಒಂದು ಕಾಲಘಟ್ಟದ ಆಗು ಹೋಗುಗಳ ದಾಖಲೆ, ಚರಿತ್ರೆ. ಆದ್ದರಿಂದ ಇದೊಂದು ಆಕರ ಗ್ರಂಥ. ಅದಕ್ಕೇ ಈ ಕೃತಿಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಲೇಖಕರಿಂದ ಇಂಥ ಇನ್ನೂ ಅನೇಕ ಉತ್ತಮ ಕೃತಿಗಳು ಹೊರಬರಲೆಂದು ಹಾರೈಸುತ್ತೇನೆ.

ಇವರ ಬರೆಹಗಳ ಸಂಕಲನ ತರುವ ಮೂಲಕ ಕನ್ನಡ ವಿಶ್ವವಿದ್ಯಾಲಯವು ಜನೋಪಯೋಗಿ ಕಾರ್ಯವನ್ನೇ ಮಾಡಿದೆ. ಅಭಿನಂದನೆ.

ಚಂದ್ರಶೇಖರ ಬ. ಕಂಬಾರ
ಬೆಂಗಳೂರು
ದಿನಾಂಕ: ೩.೮.೨೦೦೫