. ಅರ್ಥಾಂತರನ್ಯಾಸ

ದೊರೆಕೊಳೆ ಪೇೞ್ದರ್ಥಮನಾದರದಿಂ ಸಾಧಿಸಲೆ ವೇಡಿ ಪೆಱತೊಂದರ್ಥಾಂ- |

ತರಮಂ ಪೇೞ್ವುದದರ್ಥಾಂತರ-ವಿನ್ಯಾಸಾಖ್ಯ[1]ಮದಱವೀ ಭೇದಂಗಳ್ ||೨೮||

೨೫. ‘ಮುಖವೆಂಬ ತಾವರೆಹೂವಿನ ನಗೆಯೆಂಬ ವಿಕಾಸಕಾಂತಿಯಲ್ಲಿ ಕಣ್ಣುಗಳೆಂಬ ದುಂಬಿಗಳೂ ಸಂತಸದಿಂದ ಸುಳಿಯುತ್ತಿವೆ’ ಎಂಬಲ್ಲಿ ‘ಯುಕ್ತ’ ರೂಪಕ. *ಇಲ್ಲಿರುವ ಮೂರು ರೂಪಕಗಳಲ್ಲಿಯೂ-ಮುಖ-ತಾವರೆ-, ನಗೆ-ವಿಕಾಸ, ಕಣ್ಣು-ದುಂಬಿ-ಒಂದಕ್ಕೊಂದು ಸಮುಚಿತವಾದ ಯೋಗ ಅಥವಾ ಸಂಯೋಗವಿರುವುದರಿಂದ ಇದು ಯುಕ್ತರೂಪಕ. ಮುಖ-ನಗೆ-ಕಣ್ಣುಗಳೂ ತಾವರೆ-ವಿಕಾಸ-ದುಂಬಿಗಳೂ ಕೂಡ ಸ್ವಭಾವತಃ ಸಂಯುಕ್ತವಾಗಿಯೇ ಇರುವುದು ಯುಕ್ತರೂಪಕದ ವೈಶಿಷ್ಟ್ಯ.*

೨೬. ‘ಬೆಳದಿಂಗಳು ನಗೆಯೆಂಬ ವ್ಯಾಜದಿಂದಲೂ, ಚಂದ್ರನು ಮುಖವೆಂಬ ತೋರಿಕೆಯಿಂದಲೂ, ಕಳಂಕವು ನೇತ್ರದ್ವಯದ ಹುಸಿರೂಪದಿಂದಲೂ ಸೊಗಯಿಸಿ ತೋರುತ್ತಿದೆ’ ಎಂದಾಗ *ವ್ಯಾಜದ ಮೂಲಕ ಒಂದು ಇನ್ನೊಂದೆಂದು ಆರೋಪಿಸಿರುವ ಪ್ರಯುಕ್ತ* ಇದು ‘ವ್ಯಾಜ’ ರೂಪಕ.

೨೭. ಹೀಗೆ ಶ್ರೇಷ್ಠವಾದ ರೂಪಕಾಲಂಕಾರದ ಭೇದಗಳನ್ನು ಸಂಕ್ಷೇಪವಾಗಿ ಹೇಳಿದ್ದೇನೆ. ಉಳಿದವನ್ನು (ಮಹಾಕವಿಗಳ) ಲಕ್ಷ್ಯಗಳಲ್ಲಿಯೇ ನೋಡಿ ಅರಿತುಕೊಳ್ಳಬೇಕು. ಮುಂದೆ ‘ಅರ್ಥಾಂತರನ್ಯಾಸ’ಕ್ಕೆ ಲಕ್ಷ್ಯ ಲಕ್ಷಣಗಳನ್ನು ತೋರಿಸುತ್ತೇನೆ-

೨೮. ವರ್ಣಿಸಿದ ಒಂದು ಅರ್ಥವನ್ನು ಸಾಧಿಸಲೆಂದು ಎಂದರೆ ಸಮರ್ಥಿಸಲೆಂದು ಮತ್ತೊಂದು ಅರ್ಥವನ್ನು ಪ್ರತಿಪಾದಿಸುವುದೇ ‘ಅರ್ಥಾಂತರನ್ಯಾಸ’. ಅದರ ಬಗೆಗಳಿವು-

ಸಕಲ-ವ್ಯಾಪಿ ವಿಶೇಷ-ಪ್ರಕಾಶಕಮ[2]ಯುಕ್ತ-ಕಾರಿ ಯುಕ್ತಾಯುಕ್ತಂ |

ಪ್ರಕಟ-ಶ್ಲೇಷ ವಿರುದ್ಧಾತ್ಮಕಂ ವಿರುದ್ಧಂ ವಿಪರ್ಯಯಂ ಯುಕ್ತಾರ್ಥಂ ||೨೯||

i) ಸಕಲವ್ಯಾಪಿ

ಸತತೋದಯನಪ್ರತಿಹತ-ಗತಿ ತೀವ್ರಂ ತದ್ದಿನಾಧಿನಾಥನುಮಸ್ತಂ- |

ಗತನಾದನಂತೆ ನಿಯತ-ಪ್ರತೀತಿಯಂ ಕ[3]ಳೆಯಲಕ್ಕುಮೇ ವ್ಯಾಪಕಮಂ ||೩೦||

೨೯. ‘ಸಕಲವ್ಯಾಪಿ’, ‘ವಿಶೇಷಪ್ರಕಾಶಕ’, ‘ಅಯುಕ್ತಕಾರಿ’, ‘ಯುಕ್ತಾಯುಕ್ತ’, ‘ಪ್ರಕಟಶ್ಲೇಷ’, ‘ವಿರುದ್ಧಾತ್ಮಕ ಅಥವಾ ವಿರುದ್ಧ’, ‘ವಿಪರ್ಯಯ’ ಮತ್ತು ‘ಯುಕ್ತಾರ್ಥ’-ಎಂಬವು.

೩೦. *ಸಕಲವ್ಯಾಪಿ ಅರ್ಥಾಂತರನ್ಯಾಸಕ್ಕೆ ಉದಾಹರಣೆ-* ‘ನಿರಂತರ ಉದಯಶೀಲನೂ ಅಪ್ರತಿಹತಗಮನನೂ ತೀವ್ರನೂ ಆದ ದಿವಸೇಶ್ವರನು (=ಸೂರ‍್ಯನು) ಕೂಡ ಅಸ್ತಂಗತನಾದನು; ಎಂದಮೇಲೆ ಸರ್ವನಿಯಾಮಕವಾದ ವಿಧಿನಿಯಮವನ್ನು (ಯಾರಿಗೆ ತಾನೆ) ತಪ್ಪಿಸಿಕೊಳ್ಳಲು ಬರುತ್ತದೆ?’ *ಇಲ್ಲಿ ‘ನಿಯತ’ ಎಂಬುದು ‘ನಿಯತಿ’ ಎಂಬ ದಂಡಿಯ ಮೂಲಕ್ಕೆ ಅಪಪಾಠವಿರಬೇಕೆನಿಸುತ್ತದೆ; ‘ನಿಯತ’ ಎಂದಿದ್ದರೂ ‘ನಿಯತಿ=ವಿಧಿ’ಯೆಂದೇ ಅರ್ಥಮಾಡಬೇಕು. ಮೊದಲನೆಯದು ವಿಶೇಷವಾಕ್ಯ; ಎರಡನೆಯದು ಆದರಿಂದ ಸಮರ್ಥಿತವಾಗಿರುವ ಸಾಮಾನ್ಯವಾಕ್ಯ. ಒಂದರ ಮೇಲಿಂದ ಎಲ್ಲಕ್ಕೂ ಅನ್ವಯಿಸುವ ಸಾಮಾನ್ಯ ವಿಚಾರವನ್ನು ಪ್ರಸ್ತುತಪಡಿಸಿರುವುದರಿಂದ ಇದು ‘ಸಕಲವ್ಯಾಪಿ’ಯಾಗಿದೆ.*

ii) ವಿಶೇಷಪ್ರಕಾಶಕ

ಸರಸಿಜ-ಬಾಂಧವನಸ್ತಾಂತರ-ಗತನಾಗಿರೆ ಸರೋಜಿನೀ-ವನಮಾದಂ |

ಕೊರಗುತ್ತೆ ಮುಗಿಗುಮೀಶ್ವರ-ವಿರಹದೆ ಶೋಕಾಕುಲಂ ವಿಶೇಷಾಪ್ತ-ಜನಂ ||೩೧||

iii) ಅಯುಕ್ತಕಾರಿ

ಮಲಯಾನಿಲನುಂ ಮಲಯಜ-ಜಲಮುಂ ಶಶಿಕಿರಣಮುಂವಿ[4]ಯೋಗಿಗಳೆರ್ದೆಯೊಳ್ |

ನೆಲಸಿರ್ದುವೞಲೆ ಪಾಪದ ಫಲಮಾದು*ದಯುಕ್ತ-ಕಾರಿ-ಕಾಮುಕ-ಜನದಾ ||೩೨||

೩೧.‘ಕಮಲಬಾಂಧವನು (=ಸೂರ್ಯನು) ಅಸ್ತಂಗತನಾದೊಡನೆ ಕಮಲ ವನವು ಕೊರಗುತ್ತ ಮೊಗ್ಗಾಗುವುದು. ಒಡೆಯನ ವಿರಹದಿಂದ ತುಂಬಾ ಅಪ್ತಜನರು ಶೋಕಾಕುಲರಾಗುವುದು ಸಹಜವೇ. ಇದೆ. *ಇಲ್ಲಿ ಸಮರ್ಥಕವಾದ ಪೂರ್ವವಾಕ್ಯವು ವಿಶೇಷ ವಾಕ್ಯವಾಗಿರುವುಂತೆ ಸಮರ್ಥಿತವಾಗಿರುವ ಊತ್ತರವಾಕ್ಯ ಕೂಡ ವಿಶೇಷ ವಾಕ್ಯವೇ ಆಗಿದೆ. ಆದ್ದರಿಂದ ಇದು ‘ವಿಶೇಷ-ಪ್ರಕಾಶಕ’ವಾದ ಅರ್ಥಾಂತರನ್ಯಾಸ. ಆಪ್ತಜನ ಪ್ರಭುವಿರಹದಿಂದ ಶೋಕಾಕುಲವಾಗುವ ವಿಷಯ ಅಪ್ತಜನ ಸ್ವಭಾವಕ್ಕಷ್ಟೇ ಸೀಮಿತವಾಗಿದ್ದು, ಹಿಂದಿನ ಲಕ್ಷ್ಯದಲ್ಲಿಯ ವಿಧಿನಿಯಮದ ಅಲಂಘ್ಯತೆಯಂತೆ ವಿಶ್ವವ್ಯಾಪಿಯಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ*.

*‘ಅಯುಕ್ತಕಾರಿ’ ಪ್ರಭೇದಕ್ಕೆ ಉದಾಹರಣೆ-* ‘ಮಲಯಮಾರುತ. ಶ್ರೀಗಂಧರಸ, ಚಂದ್ರನ ಶೀತಕಿರಣ-ಎಲ್ಲವೂ ವಿಯೋಗಿಗಳೆದೆಯಲ್ಲಿ ತಾಪವರ್ಧಕಗಳೇ ಆದವು. ಕಾಮುಕ ಜನದ ಪಾಪದ ಫಲವೇ ಸಂತಾಪವಾಯಿತು’ ಎಂಬುದು ಅಯುಕ್ತ ಕಾರಿ’. *ಪಾಪದ ಫಲವೆಂದೂ ಒಳ್ಳೆಯದಾಗಲಾರದು ಎಂಬ ಕವಿಯ ನೀತಿವಾಕ್ಯವಿರುವುದರಿಂದ ಇದು ‘ಆಯುಕ್ತಕಾರಿ’ ಅರ್ಥಾಂತರನ್ಯಾಸ. ಇದರ ಮೂಲವಾದ ದಂಡಿಯ ವಾಕ್ಯ-

ಮಧುಪಾನಕಲಾತ್ ಕಂಠಾನ್ನಿರ್ಗತೋಪ್ಯಲಿನಾಂ ಧ್ವನಿಃ |

ಕಟುರ್ಭವತಿ ಕರ್ಣಸ್ಯ ಕಾಮಿನಾಂ ಪಾಪಮೀದೃಶಮ್ || (MM-೧೭೬)

ಮಧುಪಾನಮಾಡಿ ಮಧುರವಾಗಿರುವ ದುಂಬಿಗಳ ಕಂಠದಿಂದ ಹೊರಟ ಧ್ವನಿ ಕೂಡಿ ಕಿವಿಗೆ ಕರ್ಕಶವಾಗುತ್ತದೆ, ಕಾಮಿಗಳ ಪಾಪದ ಪರಿಣಾಮವೇ ಹೀಗೆ ! ಇದರ ತರುಣ ವಾಚಸ್ಪತಿ ವ್ಯಾಖ್ಯೆಯಲ್ಲಿ “ಪಾಪಂ ಅಯುಕ್ತಂ ಕರೋ ತಿ ಹಿ” ಎಂದೂ, ಹೃದಯಂಗಮಾವ್ಯಾಖ್ಯೆಯಲ್ಲಿ “ಪಾಪೋಪಹತಾನಾಂ ಸರ್ವಮಪಿ ವಿಪರ್ಯಸ್ಯತೇ ಇತಿಅರ್ಥಾಂತರಸ್ಯ ಪ್ರದರ್ಶಿತತ್ವಾತ್ ಅಯುಕ್ತಕಾರಿಣಃ ಉದಾಹರಣಮಿದಮ್” ಎಂದೂ ಸುಸ್ಪಷ್ಟವಾಗಿ ಬರೆಯಲಾಗಿದೆ. ಹೀಗಿದ್ದರೂ ಹಿಮದಿನ ಸಂಪಾದಕರೆಲ್ಲ ಇದನ್ನು ‘ಯುಕ್ತಕಾರಿ’ ಎಂದು ಭ್ರಮಿಸಿ ವಿಪರೀತಾರ್ಥಕಲ್ಪನೆ ಮಾಡಿರುವುದು ವಿಸ್ಮಯಾವಹವಾಗಿದೆ.*

iv) ಯುಕ್ತಾಯುಕ್ತ

ಹರಿಣ-ಧರಂ ಸೊಗಯಿಸಿದಂತಿರೆ ಕುಸುಮಿತ-ಚೂ[5]ತ-ವಿತತಿ ಸೊಗಯಿಸಿತೆನಸುಂ |

ಸುರಭಿ-ಸುಮನಸ್ವಿ ದೋಷಾ-ಕರ-ವಿಲಸಿತಮಪ್ಪೊಡಿಂತು ಯುಕ್ತಾಯುಕ್ತಂ ||೩೩||

v) ಶ್ಲೇಷಸಹಿತ

ದಿನ-ನಾಯಕನಪರ-ದಿಗಂಗನೆಯೊಳ್ ನೆರೆದುದಿತ-ರಾಗನಾದಂ ಪೀನಂ |

ಜನಿಯಿಸುಗುಮಧಿಕ-ರಾಗಮನೆನಸುಮಪಕ್ರಮದೆ ವಾರುಣೀ-ಸಂಶ್ಲೇಷಂ ||೩೪||

೩೩. *‘ಯುಕ್ತಾಯುಕ್ತ’ವೆಂಬ ಪ್ರಭೇದದ ಉದಾಹರಣೆ-* ಶಶಿಧರನು ಸುಖಪಡಿಸುವ ಹಾಗೆಯೇ (ವಸಂತಕಾಲದಲ್ಲಿ) ಕುಸುಮಿತವಾದ ಮಾವಿನ ವನವೂ ಸುಖಪಡಿಸುತ್ತಿದೆಯಲ್ಲ. ವಸಂತನಾದರೋ ಮಹಾಪುರುಷ, (ಸುಖವೀಯುವುದು ಯೋಗ್ಯ;) (ಕಲಂಕಾದಿ) ದೋಷಗಳಿಗೆಲ್ಲ ಆಕರನಾದ (ಮತ್ತು ‘ದೋಷಾ’ ಎಂದರೆ ರಾತ್ರಿಯನ್ನುಂಟುಮಾಡುವುದರಿಂದಲೂ ‘ದೋಷಾ+ಕರ’) ಚಂದ್ರನೂ ಸುಖಕಾರಿಯಾಗುವುದುಂಟೆ?’ ಎನ್ನುವಾಗ ಎರಡರಲ್ಲಿ ಒಂದರ (=ವಸಂತನ) ಕಾರ್ಯ ಯುಕ್ತವೆಂದೂ ಇನ್ನೊಂದರ (=ಚಂದ್ರನ) ಕಾರ್ಯ ಅಯುಕ್ತವೆಂದೂ ಚಮತ್ಕಾರವಾಗಿ ಹೇಳಿರುವುದರಿಂದ “ಯುಕ್ತಾಯುಕ್ತ”. ನಾವಿಲ್ಲಿ ವಿವರಿಸಿದಂತೆ ಲಕ್ಷ್ಯ-ಲಕ್ಷಣಸಮಯದಲ್ಲಿ ಯಾವ ಕ್ಲೇಶವೂ ಇಲ್ಲ. ಮೂಲದ ದಂಡಿಯಲ್ಲಿ ತರುಣವಾಚಸ್ಪತಿ ಹೇಳುವಂತೆ ಪರಪೀಡನದ ಯುಕ್ತಾಯುಕ್ತತೆ ಬಂದಿದ್ದರೆ, ಇಲ್ಲಿ ಪರಪ್ರೀಣನದ ಯುಕ್ತಾಯುಕ್ತಬಂದಿದೆ, ಅಷ್ಟೇ ವ್ಯತ್ಯಾಸ. ಹೋಲಿಸಿ-“ಮಲಿನಸ್ಯ ಜಿಯುಜ್ಯತೇ ಪರಪೀಡನಂ, ನ ಸೌಮ್ಯಸ್ಯ (ವಸಂತಸ್ಯ) ಇತಿ ಯುಕ್ತಾಯುಕ್ತತ್ವಮ್” (II -೧೭೮).

೩೪. *‘ಪ್ರಕಟಶ್ಲೇಷ’ವೆಂಬ ಇದರ ಪ್ರಭೇದಕ್ಕೆ ಲಕ್ಷ್ಯ-* ದಿನನಾಥನು (=ಸೂರ್ಯನು) ಕೂಡ ಪಶ್ಚಿಮ ದಿಗಂಗನೆಯಲ್ಲಿ ನೆರೆದು ತುಂಬಾ ರಾಗಪೂರ್ಣನಾದನು. (ಎಂದಮೇಲೆ ಯಾರಿಗೇ ಆಗಲಿ) (ನೀತಿ) ಮಾರ್ಗ ತಪ್ಪಿದ ವಾರುಣೀ-ಸಂಶ್ಲೇಷವು ರಾಗಾತಿಶಯವನ್ನು ಉಂಟುಮಾಡಿಯೇ ಮಾಡುವುದು. *ಇಲ್ಲಿ ರಾಗ=ಅನುರಾಗ, ಸಂಧ್ಯಾರಾಗದ ರಕ್ತವರ್ಣ; ಮತ್ತು ವಾರುಣೀಸಂಶ್ಲೇಷ=ವರುಣದಿಕ್ಕಿನ ಎಂದರೆ ಪಶ್ಚಿಮದಿಕ್ಕಿನ ಸಂಗಮ ಮತ್ತು ವಾರುಣೀ ಅಥವಾ ಮದ್ಯದ ಸೇವನೆ. ಹೀಗೆ ಶ್ಲೇಷೆಯಿಂದ ಎರಡರ್ಥಗಳಿದ್ದು ಇಲ್ಲಿ ಸಮರ್ಥಿತವಾದ ಸಾಮಾನ್ಯವಾಕ್ಯ ‘ಮದ್ಯಪಾನದಿಂದ ರಾಗಾಧಿಕ್ಯ ಯಾರಿಗೂ ತಪ್ಪಿದ್ದಲ್ಲ’ ಎಂಬುದೇ ಶ್ಲೇಷೇಯಿಂದ ಕವಿತಾತ್ಪರ್ಯವಾಗಿದೆ. ಆದ್ದರಿಂದ ಇದು ಪ್ರಕಟಿತಶ್ಲೇಷ. ಶ್ಲೇಷೆಯಿಲ್ಲದೆ ಹೋಗಿದ್ದರೆ ಈ ವಾಕ್ಯಾರ್ಥ ಸಮರ್ಥತವೇ ಆಗುತ್ತಿರಲಿಲ್ಲ. ಪ್ರೊ. ಎಂ. ವಿ. ಸೀತಾರಾಮಯ್ಯನವರ ಟಿಪ್ಪಣಿಯಲ್ಲಿ-‘ವಾರುಣೀ=ಮದ್ಯ’ ಎಂಬ ಶ್ಲಿಷ್ಟಾರ್ಥದ ಪ್ರಸಕ್ತಿಯೇ ಇಲ್ಲದ್ದರಿಂದ ಕವಿತಾತ್ಪರ್ಯ ಸರಿಯಾಗಿ ಮೂಡಿಬಂದಿಲ್ಲ. “ಸುರಾ ಪ್ರತ್ಯಕ್ ಚ ವಾರುಣೀ” ಎಂದು ಅಮರಕೋಶ ಸ್ಪಷ್ಟವಾಗಿ ‘ವಾರುಣೀ’ ಶಬ್ದಕ್ಕೆ ಸುರೆ ಮತ್ತು ಪಶ್ಕಿಮದಿಕ್ಕು ಎಂಬ ಎರಡರ್ಥಗಳನ್ನೂ ಬರೆದಿದೆ.*

vi) ವಿರುದ್ಧಾತ್ಮಕ

ಸರಿದಧಿಪತಿಯಂ-ದೋಷಾ-ಕರನಂತರ್ಮಲಿನನಾಗಿಯುಂ ಪೆ[6]ರ್ಚಿಸುಗುಂ |

ಪರಿಣತ-ಕಲಾ-ಕಲಾಪಂ-ಪ[7]ರಿವರ್ಧಕನಕ್ಕುಮತಿವಿರುದ್ಧಾತ್ಮಕನುಂ ||೩೫||

vii) ವಿಪರ್ಯಯ ಅಥವಾ ವಿಪರೀತ

ಪರಿತಾಪಮನೆನಗೆ ನಿಶಾಕರನಾಗಿಸುಗುಂ ವಸಂತ-ಸಮಯಾನುಗತಂ |

ಸುರಭಿ-ಸಮಯೋದಿತಂ ಹಿಮಕರನೞಲಂ ಪಡೆವನೆಂಬುದಿದು ವಿಪರೀತಂ ||೩೬||

೩೫. *ವಿರುದ್ಧಾತ್ಮಕ’ ಅಥವಾ ‘ವಿರುದ್ಧ’ವೆಂಬ ಅರ್ಥಾಂತರನ್ಯಾಸಪ್ರಕಾರಕ್ಕೆ ಉದಾಹರಣೆ-* ‘ಅಂತಃಕಳಂಕನಾಗಿದ್ದರೂ ದೋಷಾಕರನೆನಿಸಿದರೂ ಚಂದ್ರನು ಸಮುದ್ರವನ್ನು ಉಕ್ಕಿಸುವನು. ಸಕಲಕಲಾಪರಿಪೂರ್ಣನಾದವನು ತಾನು ವಿರುದ್ಧವಾದ ಎಷ್ಟೇ ದೋಷಗಳಿಗಾಸ್ಪದನಾಗಿದ್ದರೂ ಇತರರಿಗೆ ಉತ್ಕರ್ಷವನ್ನೇ ಮಾಡಿಯಾನು’ ಎಂಬಲ್ಲಿ ‘ವಿರುದ್ಧಾತ್ಮಕ’ವಾದ ಅರ್ಥಾಂತರನ್ಯಾಸವಿದೆ. *ಇಲ್ಲಿ ಮೊದಲನೆಯದು ಸಮರ್ಥಕವಾದ ಚಂದ್ರಪರವಾಕ್ಯ; ಎರಡನೆಯದು ಸಮರ್ಥಿತವಾಗಿರುವ ಸತ್ಪುರುಷಪರ ವಾಕ್ಯವೆಂಬುದನ್ನು ಸರಿಯಾಗಿ-ಗ್ರಹಿಸಬೇಕು. ತನ್ನಲ್ಲಿ ದೋಷವಿದ್ದರೂ ರಹಿತವನ್ನೇ ಮಾಡುವ ಗುಣವನ್ನು ‘ವಿರುದ್ಧಾತ್ಮಕ’ವೆಂದಿರುವುದು ಅನ್ವಥವಾಗಿದೆ,*

೩೬. ‘ವಸಂತನೊಡನೆ ಸಮಾಗಮಗೊಂಡ ನಿಶಾಕರನು ನನಗೆ ಸಂತಾಪವನ್ನುಂಟುಮಾಡುತ್ತಿರುವನು. ಸುರಭಿಸಮಯದಲ್ಲಿ ಉದಯಗೊಂಡ ಹಿಮಕರನು ತಾನೂ ಸಂತಾಪಗೊಳ್ಳುವನೆಂಬುದು ತುಂಬಾ ಅನನುಗುಣವೇ ಸರಿ !’ *ಇಲ್ಲಿಯೂ ಉದಾಹರಣೆಯಲ್ಲಿ ಸಮರ್ಥಕವಾಕ್ಯ, ಸಮರ್ಥಿತವಾಕ್ಯಗಳು ಎರಡೂ ಬೇರೆ ಬೇರೆಯಾಗಿವೆಯೆಂಬುದನ್ನು ಮೊದಲು ಮನಗಾಣಬೇಕು. ಹಿಮಶೀತಲಕಿರಣನಾದ ಚಂದ್ರನು ನನ್ನಲ್ಲಿ ಕಾಮತಾಪವೆಂಬ ಅನಿರೀಕ್ಷಿತ ವಿಪರೀತ ಪರಿಣಾಮಮಾಡಿರುವುದು ವಿಚಿತ್ರವೆಂಬ ವಾಕ್ಯದ ಸಮರ್ಥನೆಗೆ ಅವನು ಕೂಡ ಸುರಭಿಯಾದ ವಸಂತನ ಸಮಾಗಮದಿಂದ ಹರ್ಷಾನ್ವಿತನಾಗುವ ಬದಲು ತದ್ವಿಪರೀತವಾಗಿ ಸಂತಪ್ತನಾಗಿರುವನೇಕೆಂಬ ಕಲ್ಪನೆ ಬಂದಿದೆ. ಶಶಿಯಲ್ಲಿ ತಾಪೋದಯವಾಗದೆ ಶಶಿಕಿರಣದಲ್ಲಿ ತಾಪಕಾರಿತ್ವ ಸಮರ್ಥಿತವಾಗದೆಂದು ತಾತ್ಪರ್ಯ. ಹೀಗೆ ಅಸ್ವಾಭಾವಿಕ ಅಥವಾ ವಿಪರೀತ ಅಥವಾ ವಿಪರ್ಯಯಗುಣದ ಕಲ್ಪನೆ ಈ ಅರ್ಥಾಂತರನ್ಯಾಸದಲ್ಲಿದೆ.*

vii) ಯುಕ್ತಾರ್ಥ

ಉರುಪಿತ್ತಶೋಕ-ಪಲ್ಲವ-ವಿರಚಿತ-ಶಯನೀಯಮೆನ್ನಂ ಮೆಯ್ಯಂ ಪೀನಂ |

ಸ್ಪುರದನಲ-ಪ್ರತಿನಿಧಿ ತ[8]ತ್ಸರೂಪ-ಗುಣಮಕ್ಕುಮೆಂಬುದೆಂದುಂ ಯುಕ್ತಂ ||೩೭||

ಸಂ[9]ತತವಿಂತೆಸೆವಪ್ಪರ್ಥಾಂತರ-ವಿನ್ಯಾಸಭೇದಮಂ ಬಗೆಗೆ ಬುಧರ್ |

ಮುಂತಣ ಲಕ್ಷಣ-ಲಕ್ಷ್ಯ-ಯುಗಾಂತರ್ಗತ-ಭೇದಮಕ್ಕುಮಾ ವ್ಯತಿರೇಕಂ ||೩೮||


[1] ಮದಱದೀ ‘ಪಾ’, ಮ, ಸೀ’.

[2] ಪ್ರಕಾಶಕಂ+ಯುಕ್ತಕಾರಿ ‘ಪಾ, ಮ, ಸೀ’, ಇವರೆಲ್ಲ ದಂಡಿಯ MM-೧೭೬ ಮತ್ತು ೧೭೦ರ ಬೆಳಕಿನಲ್ಲಿ ನೋಡಹೋಗಿಲ್ಲ. ಇಲ್ಲಿಯೇ ಕಡೆಗೆ ‘ಯುಕ್ತಾರ್ಥಂ’ ಎಂಬ ಪ್ರಭೇದವನ್ನು ಹೇಳುತ್ತಿರುವಾಗ ಇನ್ನೊಂದು ‘ಯುಕ್ತಕಾರಿ’ಗೆ ಸ್ಥಾನವಲ್ಲಿದೆಯೆಂದು ವಿಚಾರಿಸಬೇಕು. ದಂಡಿಯ ಲಕ್ಷಣದಲ್ಲಿ ಸ್ಪಷ್ಟವಾಗಿ ‘ಆಯುಕ್ತಕಾರೀ’ ಎಂದೇ ಒಂದು ಪ್ರಭೇದವಿದೆ. ಅದನ್ನು ಗಮನಿಸಿ ಇಲ್ಲಿ ಪಾಠಪರಿಷ್ಕೃತ. ದಂಡಿಯ ಇದರ ಲಕ್ಷ್ಯವನ್ನು ‘ಹೃದಯಂಗಮಾ’ ಟೀಕೆಯಲ್ಲಿ ಸಹ ‘ಆಯುಕ್ತಕಾರೀ’ ಎಂದೇ ಕರೆದಿದೆ. ಇಲ್ಲಿಯ ೩೨ನೆಯ ಪದ್ಯ ದಂಡಿಯ MM-೧೭೬ರ ಅನುವಾದ ಮಾತ್ರ.

[3] ಕಳಿಯಲಕ್ಕುಮೇ ‘ಬ’.

[4] ವಿಯೋಗಿಗಳೆಡೆ ‘ಬ’. * ವು ಯುಕ್ತಕಾರಿ ‘ಪಾ, ಮ, ಸೀ’. ಇಲ್ಲೆಲ್ಲ ೨೯ನೆಯ ಪದ್ಯದಲ್ಲಾದ ಅಪಪಾಠವೇ ಮುಂದುವರಿದಿದೆ; ‘ಅಬಲ್’ ಎಂಬ ಏಕವಚನದ ಕರ್ತೃಪದಕ್ಕೆ ‘ಆದುವು’ ಎಂಬ ಬಹುವಚನದ ಕ್ರಿಯೆ ಕೂಡ ಅಸಾಧು ಪಾಠಕ್ಕೆ ನಿರ್ದೇಶಕ. ಇಲ್ಲಿ ಪಾಠ ಪರಿಷ್ಕೃತ.

[5] ಭೂತ ‘ಬ’.

[6] ವೆರ್ಚಿ ‘ಬ’.

[7] ಪರಿವರ್ಧಕನಕ್ಕು ‘ಮ’, ಪರಿವರ್ಧಕಮಕ್ಕು ‘ಸೀ’, ಪರಿವರ್ಧಕನಕ್ಕು ‘ಸೀ’ ಮೈಸೂರು ಆವೃತ್ತಿ.

[8] ತತ್ಸ್ವರೂಪ ‘ಪಾ, ಮ, ಸೀ; ಇಲ್ಲಿ ‘ಬ’ ಪಾಠ ಸ್ವೀಕೃತ.

[9] ಸಂತಸ ‘ಬ’.