ಭಾಷೆಯ ರಚನೆಯನ್ನು ಅರಿಯಲು ಹೊರಟ ಯಾರಿಗಾದರೂ ನಾವಾಡುವ ಮಾತಿಗೆ ಶಬ್ದ ರಚನೆಯೊಂದು ಇರುವಂತೆ ಅರ್ಥ ರಚನೆಯೂ ಇರುವುದು ಗೊತ್ತಾಗುವ ವಿಷಯ. ಇವೆರಡೂ ಸ್ತರಗಳನ್ನು ಹೊರತುಪಡಿಸಿ ಭಾಷಿಕ ರಚನೆಗಳನ್ನು ರೂಪಿಸುವುದು ಅಸಾಧ್ಯ. ಮಾತಿಗೆ ಅರ್ಥ ಲಭಿಸುವುದು ಹೇಗೆ? ಅರ್ಥವೆಂಬುದು ಮಾತಿನಲ್ಲಿ ಪ್ರತೀತಿಯಾಗುವ ಕ್ರಮ ಯಾವುದು? ಶಬ್ದ ಮತ್ತು ಅರ್ಥಗಳ ಸಂಬಂಧದ ಸ್ವರೂಪವೇನು? ಇತ್ಯಾದಿ ಪ್ರಶ್ನೆಗಳನ್ನು ಅಧ್ಯಯನ ಮಾಡಲು ಈಗ ಅರ್ಥರಚನಾಶಾಸ್ತ್ರವೆಂಬ ಪ್ರತ್ಯೇಕ ಜ್ಞಾನಶಾಖೆ ರೂಪುಗೊಂಡಿದೆ. ಈ ಜ್ಞಾನಶಾಖೆಯ ಬೇರುಗಳು ಮಾತ್ರ ಪ್ರಾಚೀನ ಕಾಲದಲ್ಲಿವೆ. ಸಂಸ್ಕೃತ ಭಾಷೆಯ ಮೂಲಕ ಈ ನಿಟ್ಟಿನಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದವರಲ್ಲಿ ಮೀಮಾಂಸಕರು, ತಾರ್ಕಿಕರು, ನೈಯಾಯಿಕರು ಮುಖ್ಯರಾಗುತ್ತಾರೆ. ಸತ್ಯದ ಸ್ವರೂಪವನ್ನು ವಿವರಿಸಲು ತೊಡಗಿದ ಎಲ್ಲ ತತ್ವಜ್ಞಾನಿಗಳೂ ಪ್ರಾಸಂಗಿಕವಾಗಿ ಅರ್ಥ ರಚನೆಯ ಲಕ್ಷಣಗಳನ್ನು ಕಾಣಲು ಯತ್ನಿಸಿದ್ದಾರೆ. ಗ್ರೀಕ್ ಚಿಂತಕರಲ್ಲಿ ಈ ಬಗೆಯ ಚಿಂತನೆಗಳು ಪ್ಲೇಟೋ, ಅರಿಸ್ಟಾಟಲ್ ಮುಂತಾದವರಲ್ಲೇ ಮೊದಲಾಗಿವೆ.

ಇಂದಿನ ಅರ್ಥ ರಚನಾಶಾಸ್ತ್ರ ಪ್ರಾಚೀನರು ಎತ್ತಿದ ಪ್ರಶ್ನೆಗಳನ್ನು ಉತ್ತರಿಸುವ ಜತೆಗೆ ಕೆಲವು ಹೊಸ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತವೆ. ತಾರ್ಕಿಕರು ಮುಖ್ಯವಾಗಿ ವಾಕ್ಯಾರ್ಥದ, ತಾತ್ಪರ್ಯಾರ್ಥದ ಸ್ವರೂಪವನ್ನು ವಿವೇಚಿಸಿದರು. ವಾಕ್ಯದ ಘಟಕಗಳಲ್ಲಿ ಅರ್ಥ ಹರಡುವುದೇ? ಹಾಗೆ ಅರ್ಥ ವಾಕ್ಯದಲ್ಲಿ ಹಂಚಿಹೋಗಿದ್ದರೆ ವಾಕ್ಯಾರ್ಥ ಪ್ರತೀತಿಯಾಗುವುದು ಹೇಗೆ? ಶಬ್ದ ಮತ್ತು ಅರ್ಥಗಳ ಸಂಬಂಧ ಘಟಕ ಮತ್ತು ರಚನೆಗಳಲ್ಲಿ ಒಂದೇ ರೀತಿಯಲ್ಲಿ ಇರುವುದೋ ಅಥವಾ ಬೇರೆ ಬೇರೆ ರೀತಿಯಲ್ಲಿಯೋ? ಸಂಪ್ರತ್ಯಯಗಳ ನಿರ್ಮಿತಿಯು ಪ್ರತಿ ಭಾಷೆಗೂ ವಿಶಿಷ್ಟವಾಗಿರುವುದೋ? ಅಥವಾ ಎಲ್ಲ ಭಾಷೆಗಳಿಗೂ ಸಮಾನವಾದ ಅರ್ಥರಚನಾ ಪ್ರಕ್ರಿಯೆಗಳಿವೆಯೋ? ಇವೇ ಮುಂತಾದ ಪ್ರಶ್ನೆಗಳು ಇಂದು ಮುಖ್ಯವಾಗಿವೆ.

ದಿನನಿತ್ಯದ ಮಾತುಕತೆಗಳಲ್ಲಿ ಸುರಳೀತ ಸಂವಹನ ನಡೆಯುತ್ತಿದ್ದರೆ ಅರ್ಥವನ್ನು ಕುರಿತು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮಾತಿನ ನಡುವೆ ಭಾಗೀದಾರರೊಬ್ಬರು ‘ಏನಂದಿರಿ? ಕೇಳಿಸಲಿಲ್ಲ’ ಅಂತಲೋ ಅಥವಾ ‘ನೀವು ಹೇಳಿದ್ದೇನು? ಗೊತ್ತಾಗುತ್ತಿಲ್ಲ’ ಅಂತಲೋ ಹೇಳಿದರೆ ಆಗ ಸಂವಹನ ಮುರಿದು ಬೀಳುವುದರಲ್ಲಿದೆಯೆಂಬ ಸೂಚನೆ ದೊರಕುತ್ತದೆ. ಮೊದಲ ಪ್ರಶ್ನೆ ಶಬ್ದದ ಸ್ತರಕ್ಕೆ ಸೇರಿದೆ. ಮಾತಾಡಿದವರ ಮಾತನ್ನು ಶ್ರವಣಾಂಗಗಳು ಸರಿಯಾಗಿ ಗ್ರಹಿಸಲು ಸಾಧ್ಯವಾಗದೇ ಇದ್ದಾಗ ಈ ಫ್ರಶ್ನೆ ಮೂಡುತ್ತದೆ. ಕೆಲವೊಮ್ಮೆ ಕೇಳಿದ ಮಾತಿನ ಅರ್ಥ ಅಸ್ಪಷ್ಟವಾದಾಗಲೂ ಈ ಫ್ರಶ್ನೆ ಮೂಲಕ ಸ್ಪಷ್ಟೀಕರಣವನ್ನು ಪಡೆಯುವುದು ಸಾಧ್ಯ. ಎರಡನೇ ಫ್ರಶ್ನೆಯಂತೂ ಅರ್ಥಕ್ಕೇ ಸಂಬಂಧಿಸಿದೆ. ಹೀಗೇ ಮಾತುಕತೆಯ ನಡುವೆ ‘ಅಂದರೆ’, ‘ನಾನು ಹೇಳಿದ್ದು’, ‘’ಹಾಗಲ್ಲ ….. ಹೀಗೆ’ ಎಂಬ ಪೂರಕಗಳ ಮೂಲಕ ಅರ್ಥ ಪ್ರತೀತಿಗೆ ನೆರವಾಗುವ ವಿವರಣೆಯನ್ನು ನೀಡುವುದನ್ನೂ ನಾವು ಗಮನಿಸಬಹುದು. ಎಷ್ಟೋ ವೇಳೆ ನಾವು ಒಮ್ಮೆ ಮಾತಾಡಿದ ವಿಷಯವನ್ನೇ ಬೇರೊಂದು ಬಾರಿ ಮಾತಾಡಬೇಕಾಗಿ ಬಂದರೆ ವೊದಲು ಬಳಸಿದ ಹಲವು ಪದಗಳಿಗೆ ಬದಲಾಗಿ ಬೇರೆ, ಆದರೆ ಅದೇ ಅರ್ಥವುಳ್ಳ ಪದಗಳನ್ನು ಬಳಸುತ್ತೇವೆ. ಯಾರಾದರೂ ನಮ್ಮ ಮಾತಿನಲ್ಲಿ ಬಳಕೆಯಾದ ಪದಗಳನ್ನು ವಿವರಿಸಲು ಕೇಳಿದರೆ ಅರ್ಥ ಹೇಳುತ್ತೇವೆ. ಈ ಎಲ್ಲ ವಿವರ ಗಳಿಂದ ನಮ್ಮ ಭಾಷೆಗೊಂದು ಅರ್ಥರಚನೆ ಇರುವುದು ಮತ್ತು ಆ ಅರ್ಥ ರಚನೆಯು ನಮ್ಮ ತಿಳುವಳಿಕೆಯ ಭಾಗವಾಗಿರುವುದು ಗೊತ್ತಾಗುತ್ತದೆ.

ಪ್ರತಿಯೊಂದು ಪದಕ್ಕೂ ಒಂದು ಅರ್ಥವಿರುತ್ತದೆಂದು ನಾವು ತಿಳಿದಿರುತ್ತೇವೆ. ಲೋಕದಲ್ಲಿ ಇರುವ ಅಥವಾ ಇದೆಯೆಂದು ನಾವು ಕಲ್ಪಿಸುವ ವಸ್ತು, ಸಂಗತಿ ಗಳನ್ನು ಪದಗಳು ಪ್ರತಿನಿಧಿಸುತ್ತವೆಯೆಂಬ ಈ ತಿಳುವಳಿಕೆ ಎಲ್ಲ ಸಂಸ್ಕೃತಿಗಳಲ್ಲೂ ಬಹುಕಾಲದಿಂದ ರೂಢಿಗೊಂಡಿದೆ. ನಮ್ಮ ಭಾಷೆಯಲ್ಲಿರುವ ನಾಮರೂಪಗಳು ಈ ತಿಳುವಳಿಕೆಗೆ ಆಧಾರ. ವ್ಯಕ್ತಿಗಳಿಗೆ ಹೆಸರುಗಳಿವೆ. ಮರಗಿಡಗಳಿಗೆ, ಪ್ರಾಣಿ ಗಳಿಗೆ, ಊರುಗಳಿಗೆ ಹೆಸರುಗಳಿರುತ್ತವೆ. ಈ ಎಲ್ಲ ಪದಗಳು ತಮ್ಮನ್ನಲ್ಲದೆ ಬೇರೆ ಏನನ್ನೋ ಪ್ರತಿನಿಧಿಸುತ್ತವೆ. ‘ಕೆಂಪು’ ಎಂದರೆ ಕ್, ಇ, ಮ್, ಪ್, ಉ ಈ ಧ್ವನಿಗಳ ಅನುಕ್ರಮಣಿಯಿಂದ ರೂಪುಗೊಂಡ ಪದ ಮಾತ್ರವಲ್ಲ. ಅದು ನಮ್ಮ ಕಣ್ಣು ಗುರುತಿಸಬಲ್ಲ ಬಣ್ಣವೊಂದನ್ನು ಸೂಚಿಸುತ್ತದೆ. ಈ ಸೂಚನೆಯೇ ಆ ಪದದ ಅರ್ಥ.

ಆದರೆ ನಾವು ಬಳಸುವ ನೂರಾರು ಪದಗಳು ಏನು ಸೂಚಿಸುತ್ತವೆಯೆಂದು ತಿಳಿಯುವುದು, ಸ್ಪಷ್ಟಪಡಿಸುವುದು ಕಷ್ಟ. ಕ್ರಿಯಾಪದಗಳು ಏನನ್ನು ಸೂಚಿಸು ತ್ತವೆ? ಚಿಕ್ಕ, ಕುಳ್ಳ, ಅಗಲ ಮುಂತಾದ ಪದಗಳಿಗೇನು ಅರ್ಥ? ನೋವು, ಚಳಿ, ಮುಖ ಎಂಬ ಪದಗಳು ಯಾವುವು? ಅದರಿಂದ ಪದಗಳು ಯಾವುದೋ ಒಂದು ಗುರುತಿಸಬಲ್ಲ ವಸ್ತುವನ್ನು ಪ್ರತಿನಿಧಿಸುತ್ತದೆಯೆಂಬ ಮಾತು, ಭಾಷೆ ಯಲ್ಲಿರುವ ಕೆಲವು ಪದಗಳ ವಿಷಯದಲ್ಲಿ ನಿಜ. ಹಲವು ಪದಗಳ ಅರ್ಥವನ್ನು ಈ ಸೂತ್ರದಿಂದ ವಿವರಿಸಲು ಬರುವುದಿಲ್ಲ.

ಇನ್ನೊಂದು ಚಿಂತನೆಯಂತೆ ಪದ ಮತ್ತು ವಸ್ತು ಜಗತ್ತಿಗೆ ನೇರವಾದ ಸಂಬಂಧವಿರುವುದಿಲ್ಲ. ನಡುವೆ ಮತ್ತೊಂದು ಹಂತವನ್ನು ಕಲ್ಪಿಸಿಕೊಳ್ಳುವ ಅವಶ್ಯಕತೆಯಿದೆ. ನಾವು ನಿತ್ಯ ಜೀವನದಲ್ಲಿ ಹಲವಾರು ಮರಗಳನ್ನು ನೋಡಿರುತ್ತೇವೆ. ಈ ಎಲ್ಲ ಮರಗಳಿಗೂ ಸಮಾನವಾದ ಲಕ್ಷಣಗಳಿರುವ ‘ಮರ’ದ ಚಿತ್ರವೊಂದನ್ನು ಮನಸ್ಸು ರೂಪಿಸಿಕೊಂಡಿರುತ್ತದೆ. ಈ ಚಿತ್ರ ಈವರೆಗೆ ನಾವು ನೋಡಿರುವ, ಮುಂದೆ ನಾವು ನೋಡಬಹುದಾದ ಮರಗಳೆಲ್ಲದರ ಪ್ರತಿನಿಧಿ. ಪ್ರತಿ ಮರದ ವಿಶಿಷ್ಟ ಸಂಗತಿಗಳು ಈ ಚಿತ್ರದಲ್ಲಿ ಇರುವುದಿಲ್ಲ. ಮುಂದೆ ನಾವು ‘ಮರ’ ಎಂಬ ಪದವನ್ನು ಕೇಳಿದಾಗ ಈ ಚಿತ್ರವೇ ಅದರ ಅರ್ಥವಾಗಿ ಪ್ರತೀತವಾಗುತ್ತದೆ ಅಥವಾ ಲೋಕದಲ್ಲಿ ಯಾವುದೇ ಮರವನ್ನು ಕಂಡಾಗ ಮನಸ್ಸಿನಲ್ಲಿರುವ ಈ ಬಿಂಬದ ಮೂಲಕವೇ ‘ಮರ’ ಪದವನ್ನು ನಾವು ನೆನಪಿಸಿಕೊಳ್ಳುತ್ತೇವೆ. ಇದನ್ನೊಂದು ಅರ್ಥ ಪ್ರತೀತಿ ತ್ರಿಕೋನವೆನ್ನುವರು.

ಈ ಚಿಂತನೆ ಕೊಂಚಮಟ್ಟಿಗೆ ಉಪಯುಕ್ತ. ನಮ್ಮ ಒಂದೊಂದು ಅನುಭವವೂ ಮನಸ್ಸಿನಲ್ಲಿ ಪ್ರತ್ಯೇಕ ಅನುಭವವಾಗಿ ಉಳಿಯುವುದಿಲ್ಲ. ಅವುಗಳ ನಡುವೆ ಸೂಕ್ತ ಸಂಯೋಜನೆ ನಡೆದು ಅನುಪಯುಕ್ತವಾದ ಎಷ್ಟೋ ಸಂಗತಿಗಳು ಇಲ್ಲವಾಗುತ್ತವೆ. ಅಥವಾ ಮುಂಚೂಣಿಯಲ್ಲಿ ಇರುವುದಿಲ್ಲ. ಮೇಲಿನ ಉದಾಹರಣೆಯನ್ನೇ ಗಮನಿಸಿದರೆ ಮರ ಪದ ನಮಲ್ಲಿ ನಾವು ಕಂಡ ಬಗೆ ಬಗೆಯ ಮರಗಳ ಒಂದೊಂದೂ ಬಿಂಬವನ್ನು ಉದ್ದೀಪನಗೊಳಿಸಿದರೆ ಗೊಂದಲವುಂಟಾಗುತ್ತದೆ. ಆದರೆ ಅದರ ಬದಲು ‘ಮರ’ ಎಂಬ ಸಾಮಾನ್ಯ ಬಿಂಬವಷ್ಟೇ ಉದ್ದೀಪನಗೊಳ್ಳುತ್ತದೆಯಾಗಿ ಈ ಗೊಂದಲ ಇಲ್ಲವಾಗುತ್ತದೆ.

ಈ ಸಿದ್ಧಾಂತವನ್ನು ಒಪ್ಪಲು ಕೆಲವು ತೊಡಕುಗಳಿವೆ. ಎಷ್ಟೋ ನಾಮಪದಗಳು ಮನೋಬಿಂಬಗಳಾಗಿ ರೂಪು ಪಡೆಯುವುದು ಅಸಾಧ್ಯ. ಉದಾ.ಗೆ ‘ನೋವು’ ಎಂಬ ಪದವನ್ನೇ ಗಮನಿಸೋಣ. ಈ ಪದದಿಂದ ಯಾವ ಮನೋಬಿಂಬ ಮನಸ್ಸಿನಲ್ಲಿ ಮೂಡುತ್ತದೆ? ನೋವಿನ ಅನುಭವಗಳು ಅನೇಕ. ಸಂದರ್ಭಗಳೂ ಅನೇಕ. ಕೆಲವಂತೂ ಅಮೂರ್ತ. ಅಂದರೆ ಅಂಥ ನೋವಿನ ಅನುಭವಗಳು ಯಾವುದೇ ಅಂಗಾಂಗಕ್ಕೆ ಸಂಬಂಧಿಸಿರುವುದಿಲ್ಲ. ಆದ್ದರಿಂದ ‘ನೋವು’ ಪದದ ಅರ್ಥವನ್ನು ಒಂದು ಮನೋಬಿಂಬದ ಮೂಲಕ ವಿವರಿಸುವುದು ಆಗದ ಮಾತು. ಇದಲ್ಲದೆ ಇನ್ನೂ ಒಂದು ತೊಡಕಿದೆ. ಒಂದು ಪದಕ್ಕೆ ಒಂದು ಮನೋಬಿಂಬ ಎನ್ನುವುದನ್ನು ಒಪ್ಪಿದರೂ ಆ ಪದವನ್ನು ಕೇಳಿದಾಗ ಅದೇ ಮನೋಬಿಂಬ ನಮ್ಮಲ್ಲಿ ಉದ್ದೀಪನವಾಗುತ್ತದೆಯೆಂದು ಎಲ್ಲ ಸಂದರ್ಭಗಳಲ್ಲೂ ಹೇಳಲು ಬರುವುದಿಲ್ಲ. ಹಲವು, ಸಾಹಚರ್ಯವುಳ್ಳ ಬಿಂಬಗಳು ಒಟ್ಟಾಗಿ ಮೂಡಬಹುದು. ಇಲ್ಲವೇ ಸಾಮಾನ್ಯ ಬಿಂಬದ ಜಾಗದಲ್ಲಿ ಯಾವುದೋ ವಿಶಿಷ್ಟ ಅನುಭವದ ಬಿಂಬ ಮೂಡುವುದೂ ಸಾಧ್ಯ. ಮನೆ ಪದ ಕೇಳಿದಾಗ, ಜನ, ಬೀದಿ, ಮುಂತಾದ ಬಿಂಬಗಳೂ ಜತೆಯಾಗಿ ಮೂಡುವಂತೆ, ಯಾವುದೋ ನಮಗೆ ಅತಿ ಪರಿಚಿತ ಇಲ್ಲವೇ ಪ್ರೀತಿಯ ಮನೆಯ ಚಿತ್ರವೇ ಮೂಡುವ ಅವಕಾಶಗಳಿವೆ. ಹಾಗಿದ್ದರೆ ‘ಮನೆ’ ಪದದ ಅರ್ಥವೇನು?

ಇನ್ನೂ ಒಂದು ರೀತಿಯಲ್ಲಿ ಅರ್ಥವನ್ನು ವಿವರಿಸಲು ಯತ್ನ ನಡೆದಿವೆ. ನಿತ್ಯ ಜೀವನದಲ್ಲಿ ಭಾಷೆಯ ಬಳಕೆಯಾದಾಗ ಅದು ಯಾವ ವರ್ತನೆಗೆ ಕಾರಣವಾಗುತ್ತದೋ ಆ ವರ್ತನೆಯನ್ನು ಗಮನಿಸಿ ಅರ್ಥವನ್ನು ತಿಳಿಯುವುದು ಸಾಧ್ಯ. ನಾವು ಮಾತಾಡಲು ನಮ್ಮ ಪರಿಸರದಲ್ಲಿ ಒಂದು ಉದ್ದೀಪಕವಿರಬೇಕು.  ಆ ಉದ್ದೀಪಕಕ್ಕೆ ನಮ್ಮ ಮಾತು ಪ್ರತಿಕ್ರಿಯೆಯಾಗಿರುತ್ತದೆ. ಆ ಭಾಷಾ ಪ್ರತಿಕ್ರಿಯೆಯು ಕೇಳಿಸಿಕೊಂಡವರಿಗೆ ಉದ್ದೀಪಿಕವಾಗಿ ಕೆಲಸ ಮಾಡುತ್ತದೆ. ಕೇಳಿಸಿಕೊಂಡವರು ಆ ಭಾಷಾ ಉದ್ದೀಪನಕ್ಕೆ ಸೂಕ್ತವಾದ ವರ್ತನೆಯನ್ನು ತೋರಿಸುತ್ತಾರೆ. ಸರಳವಾದ ಒಂದು ಪ್ರಸಂಗವನ್ನು ನೋಡೋಣ. A ಮತ್ತು B ಎಂಬ ಇಬ್ಬರು ವ್ಯಕ್ತಿಗಳಿದ್ದಾರೆ. A ತಾನಿರುವ ಕೊಠಡಿಯ ಮುಚ್ಚಿದ ಬಾಗಿಲನ್ನು ತೆರೆಯಬೇಕಾಗಿದೆ. ಇದು ಆ ವ್ಯಕ್ತಿಯ ಉದ್ದೀಪಕ ಸನ್ನಿವೇಶ. A ತಾನಿರುವಲ್ಲೇ ಇದ್ದು B ಗೆ ‘ಬಾಗಿಲು ತೆಗೆ’ ಎನ್ನುತ್ತಾರೆಂದುಕೊಳ್ಳಿ. ಇದು A ಯ ಭಾಷಿಕ ಪ್ರತಿಕ್ರಿಯೆ. ಈ ವಾಕ್ಯವೇ B ಗೆ ಉದ್ದೀಪಕ. B ಹೋಗಿ ಬಾಗಿಲು ತೆರೆಯುತ್ತಾರೆ. ಇದು ವರ್ತನೆ. ‘ಬಾಗಿಲು ತೆಗೆ’ ಎಂಬ ವಾಕ್ಯದ ಅರ್ಥ ಆ ವಾಕ್ಯವನ್ನು ಹೇಳಲು ಇದ್ದ ಸನ್ನಿವೇಶ ಮತ್ತು ಆ ವಾಕ್ಯದಿಂದ ಉಂಟಾಗುವ ಪರಿಣಾಮ ಇವೆಲ್ಲದರ ಮೊತ್ತವೇ ಆಗಿರುತ್ತದೆ.

ಭಾಷೆಯ ಸ್ವರೂಪವನ್ನು ತಿಳಿಯಲು ಭಾಷೆಯ ಬಳಕೆಯ ಸಂದರ್ಭಗಳನ್ನೇ ಅವಲಂಬಿಸಬೇಕೆಂಬ ಚಿಂತನೆಗೆ ಅನುಗಣವಾಗಿ ಮೇಲಿನ ವಿವರಣೆ ರೂಪು ಗೊಂಡಿದೆ. ಆದರೆ ಹೀಗೆ ಅರ್ಥದ ಸ್ವರೂಪವನ್ನು ಗುರುತಿಸುವುದು ಕಷ್ಟ. ಏಕೆಂದರೆ ಒಂದು ಭಾಷಿಕ ರೂಪಕ್ಕೆ ಸಿಗುವ ವರ್ತನಾತ್ಮಕ ಪ್ರತಿಕ್ರಿಯೆಯು ಆಯಾ ಸಂದರ್ಭಕ್ಕೆ ಬದ್ಧವಾಗಿರುತ್ತದೆಯೆಂದು ವಾದಿಸಲು ಬರುವುದಿಲ್ಲ. ನಾವು ವಿಶ್ಲೇಷಿಸುತ್ತಿರುವ ಸಂದರ್ಭದ ಯಾವ ಯಾವ ಅಂಶಗಳು ಭಾಷೆಯ ವಾಕ್ಯದ ಅರ್ಥವನ್ನು ನಿರ್ಧರಿಸುತ್ತವೆ ಎಂಬುದೂ ಖಚಿತವಲ್ಲ. A, ದಯವಿಟ್ಟು ಬಾಗಿಲು ತೆರೆಯುತ್ತೀರಾ ಎಂದು ಹೇಳಿದಾಗ ಅಥವಾ ಯಾರೋ ಹೊರಗಿನಿಂದ ಬಾಗಿಲು ತಟ್ಟಿದಾಗ ಕೂಡ B ಬಾಗಿಲು ತೆರೆಯಬಹುದು. ಅಂದರೆ ಇದೇ ವಾಕ್ಯಕ್ಕೆ ಇದೇ ಪ್ರತಿಕ್ರಿಯೆ ಎನ್ನುವುದು ಇಲ್ಲ. ಇಷ್ಟೆಲ್ಲ ಆಗಿಯೂ A ಹೇಳಿದ ಮಾತಿಗೆ, ಬೇರೆ ಯಾವುದೋ ಕಾರಣದಿಂದ B ಯಾವ ಬಗೆಯಲ್ಲೂ ಪ್ರತಿಕ್ರಿಯೆ ನೀಡದಿದ್ದರೆ ಆಗ ಏನು ಮಾಡುವುದು? ಒಟ್ಟಾರೆ ತಿಳಿಯುವುದಿಷ್ಟು: ಅರ್ಥವೇನೆಂದರೇನೆಂದು ತಿಳಿಯಲು ಭಾಷೆಯ ಬಳಕೆಯ ಸಂದರ್ಭಗಳ ಪರಿಶೀಲನೆ ಮುಖ್ಯ ಸರಿ. ಆದರೆ ಈ ವಿಧಾನಕ್ಕೆ ಅದರದ್ದೇ ಆದ ಮಿತಿಗಳಿವೆ.

ಪದಕ್ಕೆ ಒಂದು ಅರ್ಥವಿದೆಯೆಂದು ತಿಳಿಯೋಣ. ಆ ಅರ್ಥ ಆ ಪದಕ್ಕೆ ಹೇಗೆ ಬಂತು? ‘ಅನ್ನ’ ಎಂಬ ಪದಕ್ಕೂ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಆ ಪದದಲ್ಲಿರುವ ಧ್ವನಿಗಳಿಗೂ ‘ಅನ್ನ’ ಎಂಬ ವಸ್ತುವಿಗೂ ಏನಾದರೂ ಸಂಬಂಧವಿದೆಯೇ? ಇದು ಹಳೆಯ ಪ್ರಶ್ನೆ. ಪದ ಮತ್ತು ಅರ್ಥಗಳ ಸಂಬಂಧ  ಸಹಜ ಎನ್ನುವವರಿದ್ದಾರೆ. ಅಂದರೆ ಪದವನ್ನು ಬಿಟ್ಟು ಅರ್ಥಕ್ಕೂ ಅರ್ಥವನ್ನು ಬಿಟ್ಟು ಪದಕ್ಕೂ ಯಾವ ಅಸ್ತಿತ್ವವೂ ಇಲ್ಲ. ಅವೆರಡೂ ಒಂದರೊಡನೊಂದು ರೂಪುಗೊಂಡಿವೆ. ಹಾಗಾಗಿ ಅವುಗಳ ನಡುವಣ ಸಂಬಂಧ ಸಹಜ. ಈ ಸಹಜ ಸಂಬಂಧವಾದವನ್ನು ಒಪ್ಪದವರು ಇದ್ದಾರೆ. ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಅರ್ಥವನ್ನು ಸೂಚಿಸಲು ಬೇರೆ ಬೇರೆ ಪದಗಳಿರುವುದು ನಮಗೆ ತಿಳಿದಿದೆ. ಒಂದೇ ಭಾಷೆಯಲ್ಲಿ ಒಂದು ಅರ್ಥವನ್ನು ಸೂಚಿಸಲು ಒಂದಕ್ಕಿಂತ ಹೆಚ್ಚು ಪದಗಳಿರುವುದೂ ಸಾಧ್ಯ. ನಾಯಿ, ಡಾಗ್, ಕುತ್ತ, ಕುಕ್ಕ, ಹುಂಡ್ ಪದಗಳು ಬೇರೆ ಬೇರೆ ಭಾಷೆಗೆ ಸೇರಿವೆ. ಅರ್ಥ ಮಾತ್ರ ಒಂದೇ ಆಗಿದೆ. ಆದ್ದರಿಂದ ಸಹಜ ಸಂಬಂಧವಾದವನ್ನು ಒಪ್ಪಲು ಸಾಧ್ಯವಿಲ್ಲ. ಪರ್ಯಾಯವಾಗಿ ಪದ ಮತ್ತು ಅರ್ಥಗಳ ನಡುವೆ ಇರುವ ಸಂಬಂಧ ಕೇವಲ ಔಪಚಾರಿಕವಾದದ್ದೆಂದು ತಿಳಿಯುವುದು ಸಾಧ್ಯ. ಅದೊಂದು ಆಕಸ್ಮಿಕ. ಆದರೆ ಭಾಷೆಯನ್ನಾಡುವರು ಅವುಗಳ ನಡುವೆ ಇರುವ ಸಂಬಂಧವನ್ನು ತಾವಾಗಿ ಮುರಿಯಲಾರರು. ಒಪ್ಪಿ ಬಳಸುವುದು ಅವರಿಗಿರುವ ದಾರಿ. ಪದಗಳು ಮತ್ತು ಅವುಗಳ ಅರ್ಥಗಳ ನಡುವೆ ಸಹಜ ಸಂಬಂಧವಿರುವುದಾದರೆ ಒಂದು ಪದದ ಅರ್ಥ ಎಲ್ಲ ಕಾಲದಲ್ಲೂ ಒಂದೇ ಆಗಿರುತ್ತಿತ್ತು. ಆದರೆ ನಮಗೆ ತಿಳಿದಿರುವಂತೆ ಭಾಷೆಯಲ್ಲಿ ಅರ್ಥ ವ್ಯತ್ಯಾಸಗಳು ನಡೆಯುತ್ತವೆ. ಇದರಿಂದಲೂ ಔಪಚಾರಿಕ ಸಂಬಂಧವಾದವೇ ಸರಿಯೆಂದು ತಿಳಿಯುತ್ತದೆ.

 

ಅರ್ಥವೆಂಬುದು ಪದವನ್ನು ಹೊರತುಪಡಿಸಿ ಪ್ರತ್ಯೇಕವಾಗಿ ಇರುವುದಿಲ್ಲ. ಲೋಕವೊಂದಿದೆ. ಅದನ್ನು ಭಾಷೆ ಪ್ರತಿನಿಧಿಸುತ್ತದೆ. ಹೀಗೆಂದು ಒಪ್ಪಿದರೆ ಸಮಸ್ಯೆಗಳು ಮೊದಲಾಗುತ್ತವೆ. ಲೋಕವನ್ನೇ ಅರ್ಥವೆಂದು ತಿಳಿಯ ತೊಡಗುತ್ತೇವೆ. ಒಂದು ಹಂತದವರೆಗೆ ಈ ಮಾತು ಸರಿ. ‘ಸೂರ್ಯ’ ಪದದ ಅರ್ಥವಾಗಿ ಲೋಕದಲ್ಲಿ ಒಂದು ನಿಜವಸ್ತುವಿದೆ. ಆ ವಸ್ತುವನ್ನೇ ಸೂರ್ಯ ಪದ ಸೂಚಿಸುತ್ತದೆಯೆನ್ನುವುದೇನೋ ಸರಿ. ಆದರೆ ಈ ಸಂಬಂಧ ಮಿತವ್ಯಾಪ್ತಿ ಯುಳ್ಳದ್ದು. ಬಹುಪಾಲು ಸಂದರ್ಭಗಳಲ್ಲಿ ಪದಗಳು ಸೂಚಿಸುವ ಅರ್ಥಕ್ಕೆ ಲೋಕದಲ್ಲಿ ಯಾವ ಸಂವಾದಿ ವಸ್ತುವೂ ಇರುವುದಿಲ್ಲ. ಮತ್ತೆ  ಕೆಲವೊಮ್ಮೆ ಆ ಪದದ ಅರ್ಥಕ್ಕೆ ಒಂದು ನಿದರ್ಶನ ಮಾತ್ರ ನಮಗೆ ಲೋಕದಲ್ಲಿ ಕಾಣಸಿಗುತ್ತವೆ. ‘ಮರ’ ಎಂದಾಗ ಲೋಕದಲ್ಲಿರುವ ತೆಂಗಿನಮರ, ಮಾವಿನಮರ, ಅಡಿಕೆಯ ಮರ, ಅರಳಿಯ ಮರ, ಆಲದಮರ, ಹೀಗೆ ಯಾವುದಾದರೊಂದನ್ನು ತೋರಿಸುವುದು ಸಾಧ್ಯ. ಆದರೆ  ಅದು ಒಂದು ಬಗೆಯ ಮರವನ್ನು ತೋರಿಸಿದಂತಾಯ್ತು. ‘ಮರ’ ಎನ್ನುವುದೆಲ್ಲಿದೆ? ನಮ್ಮ ಅನುಭವಕ್ಕೆ ಬರುವ ಲೋಕದಲ್ಲಿ ಅದಕ್ಕೆ ಸಂವಾದಿಯಾಗಿ ಏನನ್ನೂ ತೋರಿಸುವುದಿಲ್ಲ.

ಪದಗಳಿಗೆ ಅರ್ಥವಿರುವಂತೆ ವಾಕ್ಯಗಳಿಗೂ ಅರ್ಥವಿರುತ್ತದೆ. ಪದಗಳ ಅರ್ಥವೆಂದರೆ ಪದದಿಂದ ಬೇರೆಯಾದ ಸ್ವತಂತ್ರ ಅಸ್ತಿತ್ವವಿರುವ ಸಂಗತಿಯೆಂದು ತಿಳಿಯುವುದು ಸರಿಯಲ್ಲವೆಂದು ಗಮನಿಸಿದ್ದೇವೆ. ಇಂಥ ಪದಗಳಿಂದ ರೂಪು ಗೊಂಡ ವಾಕ್ಯದ ಅರ್ಥಕ್ಕೂ ಪ್ರತ್ಯೇಕ ಅಸ್ತಿತ್ವವನ್ನು ಕಲ್ಪಿಸುವುದಾಗದು. ‘ಅದು ಕಲ್ಲು’ ಎಂಬ ವಾಕ್ಯದ ಅರ್ಥವನ್ನಾಗಿ ಲೋಕದಲ್ಲಿ ನಮ್ಮಿಂದ ದೂರ ಇರುವ ಕಲ್ಲನ್ನು ತೋರಿಸಬಹುದು. ಆದರೆ ‘ಅದು ಕಲ್ಲು ಅಲ್ಲ’ ಎನ್ನುವ ವಾಕ್ಯಕ್ಕೇನು ಮಾಡುವುದು? ಹೀಗೆಯೇ ‘ಅಲ್ಲಿ ಕಲ್ಲು ಇಲ್ಲ’ ಎನ್ನುವ ವಾಕ್ಯಕ್ಕೆ ಅರ್ಥವಿದೆಯಾದರೆ ಅದಕ್ಕೆ ಲೋಕದಲ್ಲಿ ಯಾವ ಸೂಚನೆ ಇರಲು ಸಾಧ್ಯ?

ಈ ಮೇಲಿನ ಸಮಸ್ಯೆಗಳನ್ನು ಮನಗಂಡು ಪದಗಳಿಗೆ ಇರುವ ಅರ್ಥವನ್ನು ಲೋಕದಲ್ಲಿ ಹುಡುಕುವ ವಿಧಾನವನ್ನು ಕೈಬಿಟ್ಟಿದ್ದಾರೆ. ಅಥವಾ ಅಂಥ ಪ್ರಯತ್ನಗಳಿಗೆ ಇರುವ ಮಿತಿಯೀಗ ಗೊತ್ತಾಗಿದೆ. ಪದಗಳು ಇತರ ಪದ ಗಳೊಡನೆ ಭಾಷೆಯಲ್ಲಿ ಬಳಕೆಯಾದಾಗ ಆ ಪದಗಳ ಅರ್ಥಭಾವ ನಮಗೆ ಗೊತ್ತಾಗುತ್ತದೆ. ಈ ಅರ್ಥಭಾವವಷ್ಟೇ ನಮ್ಮ ಭಾಷಾ ವ್ಯವಹಾರಕ್ಕೆ ಅವಶ್ಯ. ಪದಗಳ ಅರ್ಥಭಾವವೆಂಬುದು ಒಂದು ಸ್ವಯಂ ಪೂರ್ಣ ಲೋಕ. ಅದಕ್ಕೂ ನಿಜವಾದ ಲೋಕಕ್ಕೂ ಹೊಂದಾಣಿಕೆ ಇರಲೇಬೇಕೆಂದು ವಾದಿಸುವುದಾಗದು. ಒಂದೆರಡು ನಿದರ್ಶನಗಳನ್ನು ನೋಡೋಣ. ಕನ್ನಡದಲ್ಲಿ ‘ಅಕ್ಕ’, ‘ತಂಗಿ’ ಎಂಬ ಎರಡು ಪದಗಳಿವೆ. ಇವೆರಡೂ  ರಕ್ತಸಂಬಂಧವನ್ನು ಹೊಂದಿದ ಬೇರೆ ಬೇರೆ ವ್ಯಕ್ತಿಗಳನ್ನು ಸೂಚಿಸುತ್ತವೆ. ಆದರೆ ಇಂಗ್ಲಿಶಿನಲ್ಲಿ ಸಿಸ್ಟರ್ ಎಂಬ ಪದವೊಂದೇ ಈ ಎರಡೂ ಸಂಬಂಧಗಳನ್ನು ಸೂಚಿಸುತ್ತದೆ. ಅಂದರೆ ಲೋಕದಲ್ಲಿ ನನಗಿಂತ ಹಿರಿಯರಾದ ಮತ್ತು ನನಗಿಂತ ಕಿರಿಯರಾದ ಒಡಹುಟ್ಟಿದವರು ಇರುವುದು ಸಹಜ. ಒಂದು ಭಾಷೆಯ ಪದಗಳ ಅರ್ಥಭಾವ ಇವೆರಡನ್ನೂ ಬೇರೆ ಬೇರೆಯಾಗಿ ಇರಿಸಿದರೆ ಮತ್ತೊಂದು ಭಾಷೆಯ ಪದ ಒಟ್ಟಾಗಿಸಿಕೊಳ್ಳುತ್ತದೆ. ಇನ್ನೊಂದು ನಿದರ್ಶನ.

1. ಇಂಗ್ಲಿಶ್ ಭಾಷೆಯಲ್ಲಿ ಇರುವ ನಾಲ್ಕು ಬೇರೆ ಬೇರೆ ಸಂಬಂಧವಾಚಿಗಳು ಫಾದರ್, ಮದರ್, ಆಂಟ್ ಮತ್ತು ಅಂಕಲ್

2. ಆಸ್ಟ್ರೇಲಿಯಾದ ಪಿತ್ಯಾಂತ್ಯತ್ರರ ಭಾಷೆಯಲ್ಲಿರುವ ನಾಲ್ಕು ಸಂಬಂಧವಾಚಿ ಪದಗಳು ಮಾಮ, ನ್ಗುನಿತ್ಯು, ಕಮರು, ಕುರ್ನ್ತಿಲಿ.

ಈ ಪದಗಳಿಗೆ ಕಾರಣವಾಗುವ ಲೋಕದಲ್ಲಿ ಆರು ಭಿನ್ನ ವ್ಯಕ್ತಿಗಳಿದ್ದಾರೆ. ಇಂಗ್ಲಿಶ್ ಪದಗಳಲ್ಲಿ ತಂದೆ ಮತ್ತು ತಾಯಿಯರ ಸೋದರಿಯರಿಗೆ ಒಂದೆ ಪದವಿದೆ. ಹಾಗೇ ಅವರ ಸೋದರರಿಗೂ ಒಂದೇ ಪದವಿದೆ. ತಂದೆ ತಾಯಿಯರಿಗೆ ಪ್ರತ್ಯೇಕ ಪದಗಳಿವೆ. ಆದರೆ ಪಿತ್ಯಾಂತ್ಯತ್ರದಲ್ಲಿ ತಂದೆ ಮತ್ತು ತಂದೆಯ ಸೋದರನಿಗೆ ಒಂದೇ ಪದ. ಹಾಗೆ ತಾಯಿ ಮತ್ತು ತಾಯಿಯ ಸೋದರಿಗೂ ಒಂದೇ ಪದ. ತಂದೆಯ ಸೋದರಿ ಮತ್ತು ತಾಯಿಯ ಸೋದರ ಇವರಿಬ್ಬರಿಗೆ ಬೇರೆ ಪದಗಳಿವೆ. ಈ ನಿದರ್ಶನಗಳಿಂದ ತಿಳಿಯುವುದಿಷ್ಟು: ಲೋಕದ ವಿವರಗಳನ್ನು ಭಾಷೆಯ ಪದಗಳು ಯಥಾವತ್ತಾಗಿ ಸೂಚಿಸುವುದಿಲ್ಲ. ತಮ್ಮ ಅರ್ಥಭಾವದಲ್ಲಿ ಹೊಂದಿಸಿಕೊಂಡಿರುತ್ತವೆ. ಆದ್ದರಿಂದ ನಮಗೆ ಪದದ ಅರ್ಥಭಾವವೇ ಮುಖ್ಯ. ಲೋಕ ಸತ್ಯವಲ್ಲ. ಲೋಕಸತ್ಯದ ವಿವರಣೆಗೆ ಬೇರೆ ಬೇರೆ ಜ್ಞಾನಶಾಖೆಗಳು ತಂತಮ್ಮ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಸಸ್ಯ ಶಾಸ್ತ್ರದ ಗುರಿ ಸಸ್ಯಲೋಕದ ಪ್ರತಿ ವಿವರಗಳನ್ನೂ, ಅಧ್ಯಯನ ಮಾಡುವುದು. ಅದಕ್ಕಾಗಿ ವಿಶಿಷ್ಟವಾದ ಪ್ರತಿಯೊಂದನ್ನು ಅಲ್ಲಿ ಬೇರೆಯಾಗಿ ಇರಿಸಿ ನೋಡು ವರು. ನಾವು ಮಾತಿನಲ್ಲಿ ‘ಬಳ್ಳಿ’ ಎನ್ನುತ್ತೇವೆ. ಲೋಕದಲ್ಲಿರುವ ನೂರಾರು ಬಗೆಯ ಬಳ್ಳಿಗಳೆಲ್ಲಾ ನಮಗೆ ಕೇವಲ ‘ಬಳ್ಳಿ’. ಸಸ್ಯಶಾಸ್ತ್ರಜ್ಞರಿಗೆ ಎಲ್ಲವೂ ಬೇರೆ ಬೇರೆ. ನದಿ, ಹೊಳೆ, ತೊರೆ, ಹಳ್ಳ ಎಂಬ ಪದಗಳನ್ನೇ ನೋಡಿ. ಹರಿಯುವುದು ಯಾವುದು ತೊರೆ? ಯಾವುದು ಹಳ್ಳ? ವ್ಯಾವಹಾರಿಕವಾಗಿ ನಮಗೆ ಈ ಪದಗಳನ್ನು ಬಳಸಲು ಅಡ್ಡಿಯಿಲ್ಲ. ಏಕೆಂದರೆ ಈ ಪದಗಳು ಲೋಕದ ವಾಸ್ತವವನ್ನು ಸೂಚಿಸುತ್ತಿಲ್ಲ. ತಮ್ಮದೇ ಅರ್ಥಭಾವವನ್ನು ಹೊಂದಿವೆ. ಆ ಅರ್ಥಭಾವ ಭಾಷೆಯನ್ನು ಬಳಸುವವರಿಗೆ ತಿಳಿದಿದೆ.

ಒಂದು ಪದದ ಅರ್ಥವನ್ನು ಗುರುತಿಸುವುದು ಹೇಗೆ? ಭಾಷೆಯನ್ನಾಡು ವವರು ತಾವು ಬಳಸುವ ಪದಗಳ ಅರ್ಥವನ್ನು ಹೇಳಲು ಸಿದ್ಧರಾಗಿರುತ್ತಾರೆ. ಆದರೆ ಅವರ ವಿವರಣೆಗಳು ಪೂರ್ಣವಾಗಿರುವುದಿಲ್ಲ. ‘ತಲೆ’ ಎಂದರೇನು?  ಈ ಪ್ರಶ್ನೆಗೆ  ಉತ್ತರವಾಗಿ ‘ದೇಹದ ಒಂದು ಭಾಗ’ ಎಂದೋ ಅಥವಾ ದೇಹದ ಆ ಭಾಗವನ್ನೇ ಬೆರಳಿನಿಂದ ತೋರಿಸುತ್ತ ‘ಇದು’ ಎಂದೋ ಉತ್ತರಿಸುವರು. ಆದರೆ ‘ತಲೆ’ ಪದದ ಅರ್ಥ ಅದಷ್ಟೇ ಅಲ್ಲ. ಕನ್ನಡ ಕಿಂಚಿತ್ತೂ ತಿಳಿಯದ ವ್ಯಕ್ತಿಯೊಬ್ಬರು ಈ ಉತ್ತರದಿಂದ ತಲೆಯೆಂದರೆ ಮನುಷ್ಯರ ದೇಹದ ಒಂದು ಭಾಗ ಎಂದೇ ತಿಳಿಯಬಹುದು. ಆಗ ಪದದ ಸಾಮಾನ್ಯ ಅರ್ಥ ಮತ್ತು ವಿಶಿಷ್ಟ ಅರ್ಥಗಳ ನಡುವೆ ಹೀಗೆ ಗೋಜಲಾಗುವುದು. ಇನ್ನು ‘ತಲೆ ಸರಿಯಿಲ್ಲ’, ‘ತಲೆಯಾಳು’, ‘ತಲೆ ಬೋಳಿಸು’ ಮುಂತಾದ ಉಕ್ತಿಗಳಲ್ಲಿರುವ ‘ತಲೆ’ಯ ಅರ್ಥವನ್ನು ಮೇಲಿನ ವಿವರಣೆಗೆ ಹೊಂದಿಸುವುದು ಕಷ್ಯ್ಟ.

ಪದಗಳು ಬೇರೆ ಬೇರೆಯಾಗಿದ್ದರೂ ಆ ಒಂದು ಭಾಷೆಯ ಪದಗಳ ನಡುವೆ ಅರ್ಥಭಾವದ ಸಂಬಂಧ ಇರುತ್ತದೆ. ಕೆಲವು ಪದಗಳ ನಡುವೆ ನಿಕಟವಾದ ಸಂಬಂಧವಿದ್ದರೆ ಮತ್ತೆ ಕೆಲವು ಪದಗಳು ಸಂಪೂರ್ಣವಾಗಿ ದೂರದಲ್ಲಿರುತ್ತವೆ. ಸಾಮಾನ್ಯವಾಗಿ ಬುದ್ದಿ ಪ್ರಖರತೆಯನ್ನು (IQ) ಅಳೆಯುವ ಪರೀಕ್ಷೆಗಳಲ್ಲಿ ಒಂದು ಹೀಗಿರುತ್ತದೆ. ಕೆಲವು ಪದಗಳನ್ನು ಕೊಟ್ಟಿದ್ದು ಅವುಗಳಲ್ಲಿ ಒಂದು ಆ ಪದಗಳ ಗುಂಪಿಗೆ ಸೇರುವುದಿಲ್ಲವೆಂದೂ ಆ ಪದವನ್ನು ಗುರುತಿಸಬೇಕೆಂದು ಸೂಚಿಸಿರುತ್ತಾರೆ. ಉದಾ:ೊಮಾವು, ಬೇವು, ಕಿತ್ತಳೆ, ಬಾಳೆ, ಸಪೋಟ. ಈ ಗುಂಪಿನಲ್ಲಿ ‘ಬೇವು’ ಪದವನ್ನು ಹೊರ ತೆಗೆಯುವುದು ಸುಲಭ. ಉಳಿದ ಪದಗಳೆಲ್ಲ ತಿನ್ನುವ ಹಣ್ಣುಗಳನ್ನು ಸೂಚಿಸಿದರೆ ಬೇವು ಹಾಗಲ್ಲ. ಅಂದರೆ ಅದು ಉಳಿದ ಪದಗಳಿಂದ ಅರ್ಥದ ದೃಷ್ಟಿಯಿಂದ ದೂರ. ಉಳಿದವು ಸಮೀಪ. ಇದೊಂದು ಸರಳ ನಿದರ್ಶನ. ಬೇರೊಂದು ರೀತಿಯಿಂದ ಅಥವಾ ಬೇರೆ ಪದಗಳೊಡನೆ ನೋಡಿದಾಗ ‘ಮಾವು’ ‘ಬೇವು’ಗಳು ಸಮೀಪವೂ ಆಗಿರಲು ಸಾಧ್ಯ. ಉದಾ:ಗೆ ಈ ಮುಂದಿನ ಪದಗಳ ಗುಂಪನ್ನು ನೋಡಿ. ಮಾವು, ರಾಗಿ, ಬೇವು, ಆಲ, ಅರಳಿ. ಈ ಗುಂಪಿನಲ್ಲಿ  ಸಹಜವಾಗಿಯೇ ರಾಗಿ ಹೊರಗೆ ನಿಂತು ಮಾವು, ಬೇವು ಸಮೀಪವಾಗುತ್ತವೆ. ಇದರಿಂದ ಸ್ಪಷ್ಟವಾಗುವುದಿಷ್ಟು. ಪದಗಳ ಅರ್ಥವೆಂಬುದು ನಿಖರವಾದ ಸಂಗತಿಯಲ್ಲ. ಪದವೊಂದು ಭಾಷೆಯಲ್ಲಿರುವ ಇತರ  ಪದಗಳ ಅರ್ಥದೊಡನೆ ಸಂದರ್ಭಾನುಸಾರ ತನ್ನ ಅರ್ಥವನ್ನು ನಿರ್ಧರಿಸಿಕೊಳ್ಳುತ್ತದೆ. ಅರ್ಥ ಒಂದು ಲಕ್ಷಣ ಸಮುಚ್ಚಯ. ಪದವನ್ನು ಮಾತಿನಲ್ಲಿ ನಾವು ಬಳಸಿದಾಗ ಈ ಲಕ್ಷಣ ಸಮುಚ್ಚಯದ ಎಲ್ಲ ಲಕ್ಷಣಗಳನ್ನೂ ಬಳಸಿಕೊಳ್ಳುವುದಿಲ್ಲ. ಮೇಲೆ ಹೇಳಿದ ನಿದರ್ಶನಗಳನ್ನೇ ಗಮನಿಸಿದರೆ ಮೊದಲ ಗುಂಪಿನಲ್ಲಿ ‘ಮಾವು’ ಪದಕ್ಕೆ ಇರುವ ಹಣ್ಣು ಎಂಬ ಲಕ್ಷಣವೇ ಮುಖ್ಯವಾಗಿತ್ತು. ಎರಡನೇ ಗುಂಪಿನಲ್ಲಿ ಈ ಲಕ್ಷಣ ಮುಖ್ಯ ವಾಗುವುದಿಲ್ಲ. ಬದಲಾಗಿ ಮರ ಎಂಬ ಲಕ್ಷಣ ಮುಖ್ಯವಾಗುತ್ತದೆ.

ಪದಗಳ ಅರ್ಥದಲ್ಲಿ ಇರುವ ಲಕ್ಷಣಗಳು ಯಾವುವೆಂದು ತಿಳಿಯಲು ಮತ್ತು ಆ ಲಕ್ಷಣಗಳಲ್ಲಿ ಯಾವುದು ಪ್ರಮುಖವೆಂದು ಗೊತ್ತು ಮಾಡಲು ಪ್ರಯೋಗಗಳನ್ನು ನಡೆಸಿದ್ದಾರೆ. ಇಂಥ ಪ್ರಯೋಗಗಳಲ್ಲಿ ಪದಪಟ್ಟಿ ಮತ್ತು ಲಕ್ಷಣಗಳ ಪಟ್ಟಿಯನ್ನು ಸಂಯೋಜಿಸಲು ಮತ್ತು ಆ ಲಕ್ಷಣಗಳಲ್ಲಿ ಪ್ರಾಮುಖ್ಯವನ್ನು ಆದ್ಯಾತಾನುಸಾರ ಗುರುತಿಸಲು ಭಾಷೆಯನ್ನಾಡುವವರನ್ನು ಕೋರುತ್ತಾರೆ. ಅನಂತರ ಫಲಿತಾಂಶಗಳನ್ನು ಸಂಯೋಜಿಸುತ್ತಾರೆ. ಇಂಥ ಇನ್ನೂ ಬಗೆಬಗೆಯ ಪ್ರಯೋಗಗಳು ಸಾಧ್ಯ.

ಭಾಷೆಯಲ್ಲಿ ಪದಗಳಿಗೆ ಅರ್ಥವಿರುವಂತೆ, ಆ ಪದಗಳನ್ನು ಬಳಸುವುದರಲ್ಲಿ ಆ ಪದಗಳ ಬಗೆಗೆ ಕೆಲವು ಅಭಿಪ್ರಾಯಗಳೂ ಇರುತ್ತವೆ. ಇಂಥ ಅಭಿಪ್ರಾಯ ಗಳು ಸಾಮುದಾಯಿಕ ನೆಲೆಯಲ್ಲಿದ್ದು ಒಂದು ಅತಿರೇಕಕ್ಕೆ ಹೋದಾಗ ಆ ಪದಗಳ ಸಾರ್ವಜನಿಕ ಬಳಕೆಯೇ ನಿಷಿದ್ಧವಾಗುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಇನ್ನಿತರ ಪದಗಳನ್ನು ಕುರಿತು ಬಳಕೆದಾರರು ಹೊಂದಿರುವ ಅಭಿಪ್ರಾಯಗಳನ್ನು ಗುರುತಿಸಲು ಭಾಷಾಶಾಸ್ತ್ರಜ್ಞರು ಪ್ರಯೋಗಗಳನ್ನು ಮಾಡಿದ್ದಾರೆ. ಮೊದಲು ಕೆಲವು ಪದಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ಕೆಲವು ಗುಣಗಳನ್ನು ಪಟ್ಟಿ ಮಾಡುತ್ತಾರೆ. ಈ ಗುಣಗಳಲ್ಲಿ ಒರಟುತನ, ಶಕ್ತತೆ, ಕ್ರಿಯಾಶೀಲತೆ, ಗಾತ್ರ, ಆಕಾರ, ನವೀನತೆ, ಹೀಗೆ ಹಲವು ಇರುತ್ತವೆ. ಪ್ರತಿ ಪದದ ಸಂದರ್ಭಕ್ಕೂ ಈ ಗುಣಗಳು ಉಪಯುಕ್ತವೋ ಅಲ್ಲವೋ ಎಂಬುದು ಮುಖ್ಯವಲ್ಲ. ಅನಂತರ ಈ ಗುಣಗಳು ಆ ಪದದಲ್ಲಿ ಇವೆಯೋ ಇಲ್ಲವೋ ಎಂಬುದನ್ನು ಗುರುತಿಸಲು ಒಂದು ಆದ್ಯತಾ ಪಟ್ಟಿಯನ್ನು ರೂಪಿಸುತ್ತಾರೆ. ಉದಾಹರಣೆಗೆ, ಕ್ರಿಯಾಶೀಲ ಎಂಬ ಗುಣವನ್ನು ತೆಗೆದುಕೊಳ್ಳೋಣ. ಈ ಗುಣದ ಆದ್ಯತಾಪಟ್ಟಿ ಹೀಗಿರುತ್ತದೆ.

ಈ ರೇಖೆಯ ಮೇಲಿರುವ ಗುರುತುಗಳು (ಏಳು ಅವಧಿಗಳು) ಸಮಾನ ದೂರದಲ್ಲಿರುತ್ತವೆ. ಒಂದು ಪದದ ಗುಣಗಳನ್ನು ಗುರುತಿಸುವಾಗ ಅದು ಅತ್ಯಂತ ಕ್ರಿಯಾಶೀಲವೆಂದು ಭಾವಿಸಿದರೆ ಆಗ ‘ಕ್ರಿಯಾಶೀಲ’ ತುದಿಯ ಅವಧಿಯನ್ನು, ಅದು ಅತ್ಯಂತ ಜಡ ಎಂದು ಭಾವಿಸಿದರೆ ‘ಜಡ’ ತುದಿಯ ಅವಧಿಯನ್ನು ಆಯ್ಕೆ ಮಾಡುತ್ತಾರೆ. ಕ್ರಿಯಾಶೀಲ ಮತ್ತು ಜಡತೆಗಳ ನಡುವೆ ಇರುವ ತರತಮ ಸ್ಥಿತಿಯನ್ನು ಗುರುತಿಸಲು ನಡುವೆ ಇರುವ ಐದು ಅವಧಿಗಳು ನೆರವಿಗೆ ಬರುತ್ತವೆ. ‘ಗಾಳಿ’ ಎನ್ನುವ ಪದದ ಗುಣವನ್ನು ಗುರುತಿಸುವಾಗ ಕ್ರಿಯಾಶೀಲ ತುದಿಯನ್ನು ‘ಕಲ್ಲು’ ಎನ್ನುವ ಪದದ ಗುಣವನ್ನು ಗುರುತಿಸುವಾಗ ಜಡ ತುದಿಯನ್ನು ಆಯ್ಕೆ ಮಾಡುವುದು ಸಹಜವೆನ್ನೋಣ. ‘ಆನೆ’, ‘ಬೆಕ್ಕು’ ಮುಂತಾದ ಪದಗಳು ಎದುರಾದಾಗ ಭಾಷಿಕರು ಈ ಎರಡು ಅತಿಗಳ ನಡುವೆ ಇರುವ ಅವಧಿಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡುವರು. ಇದೊಂದು ಕಲ್ಪಿತ ಉದಾಹರಣೆ. ನಿಜವಾದ ಪ್ರಯೋಗಗಳು ಇನ್ನೂ ಸಂಕೀರ್ಣವಾಗಿರುತ್ತವೆ. ಈ ಸಂಕೀರ್ಣತೆ ಪ್ರಯೋಗದ ರಚನೆಗೆ ಸಂಬಂಧಿಸಿದ್ದು. ಭಾಷೆಯನ್ನಾಡುವವರು ಪ್ರಯೋಗದಲ್ಲಿ ಯಾವ ಇಕ್ಕಟ್ಟನ್ನೂ ಅನುಭವಿಸುವುದಿಲ್ಲ. ತಮ್ಮ ಮನಸ್ಸಿಗೆ ಬಂದ ಆಯ್ಕೆಗಳನ್ನು ಗುರುತು ಮಾಡಿದರಾಯ್ತು. ಮೇಲುನೋಟಕ್ಕೆ ಈ ಪ್ರಯೋಗದಿಂದ ಎರ‌್ರಾಬಿರ‌್ರಿ ಫಲಿತಾಂಶಗಳು ಬರುವಂತೆ ತೋರುತ್ತದೆ. ಆದರೆ ನಡೆದಿರುವ ಪ್ರಯೋಗಗಳಿಂದ ಭಾಷಿಕರು ತಮಗೇ ತಿಳಿಯದಂತೆ ಪದಗಳ ಗುಣಗಳನ್ನು ಕುರಿತಂತೆ ಸಮಾನ ಅಭಿಪ್ರಾಯಗಳನ್ನು ಹೊಂದಿರುವುದು ತಿಳಿದುಬಂದಿದೆ.

ಈ ಪ್ರಯೋಗದ ಮುಂದುವರೆದ ಹಂತವೊಂದಿದೆ. ಒಂದು ಭಾಷೆಯನ್ನಾಡುವವರು ಪದವೊಂದರ ಗುಣಗಳನ್ನು ಕುರಿತು ಹೊಂದಿರುವ ಅಭಿಪ್ರಾಯಗಳು ಇನ್ನೊಂದು ಭಾಷೆಯವರಿಗೆ ಸಲ್ಲುವುದಿಲ್ಲ. ಅವರ ಅಭಿಪ್ರಾಯಗಳೇ ಬೇರೆ ಇರುತ್ತವೆ. ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ದೊರೆತ ಫಲಿತಾಂಶಗಳನ್ನು ಹೋಲಿಸುವ ಯತ್ನಗಳೂ ನಡೆದಿವೆ. ಈ ಕೆಳಗಿನ ಚಿತ್ರವನ್ನು ನೋಡಿರಿ. ಇದು ಹೋಪಿ. ಝನಿ ಮತ್ತು ನವಾಹೋ ಭಾಷೆಗಳಿಂದ ದೊರೆತ ಮಾಹಿತಿಯನ್ನು ಆಧರಿಸಿದೆ. ಈ ಮೂರೂ ಉತ್ತರ ಅಮೆರಿಕಾದ ಮೂರು ಬೇರೆ ಬೇರೆ ಬುಡಕಟ್ಟು ಜನಾಂಗಗಳ ಭಾಷೆಗಳು.

ಗಂಡಸು

‘ಗಂಡಸು’ ಪದವನ್ನು ಆಯ್ಕೆ ಮಾಡಿದ್ದಾರೆ. ಮೂರು ಗುಣಗಳನ್ನು ಸೂಚಿಸಿದ್ದಾರೆ. ಗಂಡಸು ಒಳ್ಳೆಯವನೋ ಕೆಟ್ಟವನೋ, ಬಲಶಾಲಿಯೋ ದುರ್ಬಲನೋ, ಪಟುತ್ವವುಳ್ಳವನೋ ನಿಧಾನಿಯೋ ಎಂಬುವುದೇ ಆಯ್ಕೆಯ ವಿಷಯಗಳು. ಫಲಿತಾಂಶಗಳನ್ನು ಗೆರೆಗಳ ಮೇಲೆ ಬಾಣದ ಗುರುತಿನಿಂದ ತೋರಿಸಿದೆ. ಮೂರೂ ಭಾಷೆಯ ಜನರು ಆ ಪದದ ಗುಣದ ಬಗ್ಗೆ ಹೊಂದಿರುವ ಅಭಿಪ್ರಾಯ ಬೇರೆ ಬೇರೆಯಾಗಿರುವುದು ಸ್ಪಷ್ಟ. ಆದರೂ ಹೋಪಿ ಮತ್ತು ಝನಿ ಭಾಷೆಯವರು ಪರಸ್ಪರ ಹತ್ತಿರವಿದ್ದಾರೆ. ನವಾಹೋ ಜನ ಇವರಿಬ್ಬರಿಂದ ಕೊಂಚ ದೂರವಿದ್ದಾರೆ. ಹೀಗೆ ಪದದ ಅರ್ಥವನ್ನು ಕುರಿತು ಭಾಷಿಕರು ಹೊಂದಿರುವ ಅಭಿಪ್ರಾಯಗಳನ್ನು ತಿಳಿಯಲು ಹಲವು ಬಗೆಯ ಮತ್ತು ಹಲವು ನಿಟ್ಟಿನ ಪ್ರಯೋಗಗಳು ನಡೆದಿವೆ.

ಪದಗಳಲ್ಲಿ ಯಾವ ಗುಣಗಳವು ಯಾವ ಪ್ರಮಾಣದಲ್ಲಿವೆಯೆಂಬುದನ್ನು ಭಾಷಿಕರು ಗುರುತಿಸುವ ಪ್ರಯೋಗಗಳಿಗೆ ಮಿತಿಗಳಿವೆ. ಮುಖ್ಯವಾಗಿ ಈ ಪ್ರಯೋಗಗಳು ಪದದ ಅರ್ಥವೇನೆಂಬುದನ್ನು ಗುರುತಿಸಲು ನೆರವಾಗುವುದಿಲ್ಲ. ಪದಕ್ಕೆ ಅರ್ಥವಿರುವುದನ್ನು ಮೊದಲು ಒಪ್ಪುವುದು; ಅನಂತರ ಆ ಅರ್ಥವನ್ನು ಕುರಿತು ಭಾಷಿಕರು ಯಾವ ದೃಷ್ಟಿಕೋನವನ್ನು ಹೊಂದಿದ್ದಾರೆಂದು ತಿಳಿಯಲು ಈ ಪ್ರಯೋಗಗಳು ನೆರವಾಗುತ್ತವೆ. ಪದಗಳ ಬಳಕೆ, ಆಯ್ಕೆ, ಇತರ ಪದಗಳೊಡನೆ ಸಂಯೋಜನೆ ಇವೇ ಮುಂತಾದ ಸಂಗತಿಗಳನ್ನು ಅಧ್ಯಯನ ಮಾಡುವವರಿಗೆ ಇಂಥ ಪ್ರಯೋಗಗಳು ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತದೆ.

ಪದಗಳಲ್ಲಿ ಧ್ವನಿಗಳಿರುತ್ತವೆ. ಆ ಧ್ವನಿಗಳು ಗೊತ್ತಾದ ಕ್ರಮದಲ್ಲಿ ಅಳವಟ್ಟಿರುತ್ತವೆ. ಈ ಪದಕ್ಕೆ ಅರ್ಥವೂ ಇರುತ್ತದೆ. ಬಹು ಹಿಂದಿನಿಂದಲೂ ಕಾಡುತ್ತಿರುವ ಪ್ರಶ್ನೆಯೊಂದಿದೆ. ಪದದ ಅರ್ಥವೆಂಬುದು ಪದದಲ್ಲಿ ಎಲ್ಲಿ ಅಡಗಿದೆ? ಪದದ ಧ್ವನಿಗಳಿಗೂ ಪದದ ಅರ್ಥಕ್ಕೆ ಇರುವ ಸಂಬಂಧ ಔಪಚಾರಿಕ. ಇದನ್ನು ತಿಳಿದ ಮೇಲೂ ನಮ್ಮ ಪ್ರಶ್ನೆ ಹಾಗೇ ಉಳಿಯುತ್ತದೆ. ಸಂಬಂಧವೇನೇ ಇರಲಿ. ಒಂದು ಪದದ ಅರ್ಥ ನಮಗೆ ಗೊತ್ತಾಗುವುದು ಯಾವಾಗ? ಆ ಪದದ ಧ್ವನಿಗಳನ್ನು ಒಂದೊಂದಾಗಿ ಉಚ್ಚರಿಸುತ್ತ ಹೋದಂತೆ ಅರ್ಥವೂ ಹಂತಹಂತವಾಗಿ ಗೋಚರವಾಗುವುದೇ? ಅಥವಾ ಎಲ್ಲ ಧ್ವನಿಗಳನ್ನೂ ಉಚ್ಚರಿಸಿಯಾದ ಮೇಲೆ ಒಟ್ಟಾಗಿ ಅರ್ಥ ನಮಗೆ ತಿಳಿಯುವುದೇ? ಭಾರತೀಯ ಚಿಂತನೆಗಳಲ್ಲಿ ಸ್ಫೋಟವಾದವೆಂದೊಂದಿದೆ. ಅದರಂತೆ ಧ್ವನಿಗಳಲ್ಲಿ ಕೊನೆಯದನ್ನು ಉಚ್ಚರಿಸಿದ ಕೂಡಲೇ ನಮ್ಮ ಮನಸ್ಸಿನಲ್ಲಿರುವ ಅರ್ಥ ಸ್ಫೋಟವಾಗುತ್ತದೆ. ಧ್ವನಿಗಳು ಮತ್ತು ಅವುಗಳ ಕ್ರಮಬದ್ಧ ಉಚ್ಚಾರಣೆ ಈ ಅರ್ಥ ಸ್ಫೋಟಿಸಲು ಪ್ರಚೋದಕ. ಸ್ಫೋಟವಾದವು ಅರ್ಥ ನಮಗೆ ತಿಳಿಯುವ ಕ್ರಮವನ್ನು ವಿವರಿಸುತ್ತ ಮುಖ್ಯವಾದ ಒಳನೋಟಗಳನ್ನು ಒದಗಿಸಿದೆ.

ಒಂದು ಸಮಸ್ಯೆ ಹಾಗೇ ಉಳಿಯುತ್ತದೆ. ಪದವೆಂದಾಗ ನಾವು ಏನನ್ನು ಗಮನದಲ್ಲಿ ಇರಿಸಿಕೊಳ್ಳುತ್ತೇವೆ. ಮರ, ಮರದ, ಮರದಿಂದ, ಮರದಲ್ಲಿ, ಮರವನ್ನು, ಮರಗಳು, ಮರಗಟ್ಟು ಇವೆಲ್ಲವೂ ಪದಗಳೇ. ಇವೆಲ್ಲದರಲ್ಲೂ ಮರ ಎಂಬ ಭಾಗ ಸಮಾನವಾಗಿದೆ. ಅಲ್ಲದೆ ಅದಕ್ಕೆ ಪ್ರತ್ಯೇಕ ಅರ್ಥವೂ ಇದೆ. ಮರದ ಮತ್ತು ಮರದಿಂದ ಎಂಬ ಪದಗಳ ನಡುವೆ ರಚನೆಯಲ್ಲಿ ಮಾತ್ರವಲ್ಲ ಅರ್ಥದಲ್ಲೂ ವ್ಯತ್ಯಾಸವಿದೆ. ಈ ವ್ಯತ್ಯಾಸಕ್ಕೆ ಕಾರಣವಾಗುವ ಧ್ವನಿಗಳು ಆಯಾ ಪದದ ಭಾಗಗಳಾಗಿವೆ. ಆ ಭಾಗಗಳಿಗೆ ಸ್ವತಂತ್ರವಾದ ಅರ್ಥವಿಲ್ಲ. ಪದದ ಅರ್ಥವನ್ನು ಗುರುತಿಸುವಾಗ ಹೀಗೆ ಸ್ವತಂತ್ರವಾದ  ಭಾಗವೊಂದು, ಅಧೀನ ಅಥವಾ ಆಶ್ರಿತವಾದ ಭಾಗವೊಂದು ಒಟ್ಟಾಗಿ ನೆರವಾಗುತ್ತವೆ. ಆದ್ದರಿಂದ ಪದದ ಅರ್ಥವನ್ನೂ ಘಟಕಗಳನ್ನಾಗಿ ಒಡೆಯಬಹುದೆಂದಾಯಿತು. ಈ ಅಂಶವನ್ನು ಗಮನಿಸಿಯೇ ಪದಕ್ಕಿಂತ ಚಿಕ್ಕದಾದ ಆದರೆ ಅರ್ಥದ ದೃಷ್ಟಿಯಿಂದ ಸ್ವಯಂಪೂರ್ಣವಾದ ಪದಭಾಗವೊಂದನ್ನು ಗುರುತಿಸುತ್ತಾರೆ. ಮೇಲೆ ಹೇಳಿದ ಉದಾಹರಣೆಯಲ್ಲಿ ಮರ ಅಂಥದೊಂದು ಭಾಗ. ಈ ಭಾಗವನ್ನು ಪ್ರಕೃತಿಯೆಂದು ಕೆಲವರು, ಕಾಂಡವೆಂದು ಮತ್ತೆ ಕೆಲವರೂ ಕರೆಯು ತ್ತಾರೆ. ಇನ್ನೂ ಕೆಲವೊಮ್ಮೆ ಅರ್ಥವೆಂಬುದು ಪ್ರತೀತಿಯಾಗಲು ಪದಕ್ಕಿಂತ ದೊಡ್ಡ ಘಟನೆಯೇ ಬೇಕಾಗುತ್ತದೆ. ಒಂದಕ್ಕಿಂತ ಹೆಚ್ಚು ಪದಗಳು ಸೇರಿದ ರಚನೆಯೊಂದನ್ನು ಗಮನಿಸೋಣ. ಉದಾ: ‘ನೆಗೆದುಬೀಳು’, ಈ ರಚನೆಯ ಅರ್ಥ ‘ಸಾಯು’. ಆದರೆ ‘ನೆಗೆದು’ ಮತ್ತು ‘ಬೀಳು’ ಎಂಬ ಪದಗಳ ಅರ್ಥಕ್ಕೂ ಇಡಿಯಾಗಿ ದೊರಕಿದ ‘ಸಾಯು’ ಎಂಬ ಅರ್ಥಕ್ಕೂ ನೇರವಾಗಿ ಏನೂ ಸಂಬಂಧವಿಲ್ಲ. ಅಂದರೆ ಅರ್ಥದ ದೃಷ್ಟಿಯಿಂದ ‘ನೆಗೆದುಬೀಳು’ ಎಂಬ ರಚನೆಯನ್ನು ಚಿಕ್ಕ ಘಟಕಗಳನ್ನಾಗಿ ಒಡೆಯುವುದು ಸಾಧ್ಯವಿಲ್ಲ.

ಭಾಷೆಯಲ್ಲಿ ಹಲವಾರು ಸಾವಿರ ಪದಗಳಿರುತ್ತವೆ. ಒಂದೊಂದು ಸ್ವತಂತ್ರ ಘಟಕವೇ ಸರಿ. ಅರ್ಥದ ದೃಷ್ಟಿಯಿಂದ ಒಂದೊಂದೂ ಬೇರೆ ಎನ್ನಿಸಲು ಕಾರಣವಾಗುವ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಆದರೂ ಕೆಲವು ಸಮಾನ ಲಕ್ಷಣಗಳನ್ನು ಇನ್ನಿತರ ಪದಗಳೊಡನೆ ಹೊಂದಿರುತ್ತವೆ. ಈಗಾಗಲೇ ಕೊಟ್ಟ ಉದಾಹರಣೆಯಲ್ಲಿ ಹೇಳಿದಂತೆ ಮಾವು ಮತ್ತು ಬೇವು ಪದಗಳು ಬೇರೆ ಬೇರೆ ಅರ್ಥಗಳನ್ನು ಹೊಂದಿವೆ. ‘ಮರ’ ಎಂಬ ಲಕ್ಷಣವನ್ನು ಲೆಕ್ಕಕ್ಕೆ ಹಿಡಿದರೆ ಅವೆರಡರಲ್ಲೂ ಸಮಾನತೆಯೂ ಇದೆ. ಈ ಅಂಶವನ್ನು ಆಧರಿಸಿ ಭಾಷೆಯ ಪದಗಳನ್ನು ಒಳಗುಂಪುಗಳನ್ನಾಗಿ ವರ್ಗೀಕರಿಸುವ ಪ್ರಯತ್ನಗಳು ಹಿಂದಿನಿಂದಲೂ ನಡೆದು ಬಂದಿದೆ.

ವೈಯಾಕರಣರು ತಮ್ಮದೇ ಆದ ರೀತಿಯಲ್ಲಿ ಪದಗಳನ್ನು ವರ್ಗೀಕರಿಸಿ ಕೊಂಡಿದ್ದಾರೆ. ನಾಮಪದ, ಕ್ರಿಯಾಪದ, ವಿಶೇಷಣ, ಅವ್ಯಯ ಹೀಗೆ ಹಲವು ಪದವರ್ಗಗಳಿವೆ. ಇವು ಅರ್ಥಾನುಸಾರಿಯಾಗಿ ರೂಪುಗೊಂಡ ವರ್ಗಗಳಲ್ಲ. ವ್ಯಾಕರಣದ ದೃಷ್ಟಿಯಿಂದ ಈ ಪದಗಳು ಮಾಡುವ ಕೆಲಸವನ್ನು ಆಧರಿಸಿ ಇಂಥ ವರ್ಗಗಳನ್ನು ರಚಿಸಲಾಗಿದೆ. ಆದರೆ ಅರ್ಥವನ್ನು ಈ ವರ್ಗಗಳು ಯಾವಾಗಲೂ ನಿರ್ಲಕ್ಷಿಸುತ್ತವೆ ಎನ್ನುವಂತಿಲ್ಲ. ನಾಮಪದಗಳಲ್ಲಿ ಹಲವು ಉಪವರ್ಗಗಳು ಇರುತ್ತವೆ. ಕನ್ನಡದಲ್ಲಿ ಮಾನವ ಮತ್ತು ಮಾನವೇತರವೆಂಬ ಎರಡು ಉಪ ವರ್ಗಗಳನ್ನು ಕಲ್ಪಿಸುವುದು ಅವಶ್ಯ. ಏಕೆಂದರೆ ಬಹುವಚನ ಪ್ರತ್ಯಯಗಳಾದ ‘ಗಳು’ ಮತ್ತು ‘ರು’ ಯಾವ ನಾಮಪದಗಳಿಗೆ ಸೇರಬೇಕೆಂದು ನಿರ್ಣಯಿಸಲು ಈ ವರ್ಗೀಕರಣ ಅವಶ್ಯ. ಮಾನವ ಉಪವರ್ಗದ ನಾಮಪದಗಳಿಗೆ ಸಾಮಾನ್ಯವಾಗಿ – ರು ಪ್ರತ್ಯವು (ಉದಾ: ಹುಡುಗರು, ಜನರು, ಹೆಂಗಸರು) – ಕೆಲವೊಮ್ಮೆ – ಗಳು ಪ್ರತ್ಯವು (ಉದಾ: ಮಂತ್ರಿಗಳು, ಗುರುಗಳು) ಮಾನವೇತರ ನಾಮಪದಗಳಿಗೆ – ಗಳು ಪ್ರತ್ಯಯವು ಮಾತ್ರ (ಉದಾ: ಗಿಡಗಳು, ಪುಸ್ತಕಗಳು) ಹತ್ತಬಲ್ಲವು. ನಿಯಮವೇನೇ ಇರಲಿ. ಈ ಉಪವರ್ಗಗಳನ್ನು ರೂಪಿಸುವಾಗ ಆಯಾ ನಾಮಪದಗಳ ಅರ್ಥದ ಕೆಲವು ಲಕ್ಷಣಗಳನ್ನು ಪರಿಗಣಿಸಿರುವುದು ನಿಜವಷ್ಟೆ.

ಅರ್ಥವನ್ನು ಮಾತ್ರ ಗಮನಿಸಿ ಪದಗಳನ್ನು ವರ್ಗೀಕರಿಸುವುದು ಕೂಡ ಬಳಕೆಯಲ್ಲಿದೆ. ಸಾಮಾನ್ಯ ವರ್ಗೀಕರಣ ಕ್ರಮಗಳಲ್ಲಿ ಹಲವು ನಮಗೆಲ್ಲ ಪರಿಚಿತವೇ ಆಗಿವೆ. ಉದಾಹರಣೆಗೆ ದೇಹದ ಅಂಗಾಂಗಗಳು, ಗೃಹೋಪ ಯೋಗಿ ವಸ್ತುಗಳು, ಬಳೆಗಳು, ನಿರ್ದಿಷ್ಟ ವೃತ್ತಿಯ ಉಪಕರಣಗಳು, ಸಂಬಂಧವಾಚಿಗಳು ಇತ್ಯಾದಿ. ಆದರೆ ಇಂಥ ವರ್ಗೀಕರಣಗಳಿಗೆ ಕೊನೆ ಯೆಂಬುದಿಲ್ಲ. ಒಂದೇ ಪದ ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ವರ್ಗಗಳಲ್ಲೂ  ಕಾಣಿಸಿಕೊಳ್ಳುತ್ತವೆ. ಭಾಷೆಯ ಮುಖ್ಯವಾಗಿ ಇಂಗ್ಲಿಷ್ ಭಾಷೆಯ ಪದಗಳನ್ನು ಸಮಗ್ರವಾಗಿ ವರ್ಗೀಕರಿಸುವ ಯತ್ನವೊಂದನ್ನು ಪೀಟರ್ ಮಾರ್ಕ್ ರೊಜೆಟ್ (1779-1869) ಎಂಬಾತ ಮಾಡಿದನು. ಆತ ಇಡೀ ಪದಕೋಶ ವನ್ನು ಆರು ಮುಖ್ಯ ವರ್ಗಗಳಲ್ಲಿ ವಿಭಜಿಸಿದ್ದಾನೆ. ಅಮೂರ್ತ ಸಂಬಂಧಗಳು, ಸ್ಥಳ, ವಸ್ತು, ಬುದ್ದಿಮತ್ತೆ, ಸ್ವೋಪಜ್ಞತೆ ಮತ್ತು ಹಾರ್ದತೆ ಇವೇ ಆರು ವರ್ಗಗಳು. ಇವುಗಳನ್ನು ಮತ್ತೆ ಹಲವು ಉಪವರ್ಗಗಳನ್ನಾಗಿ ಒಡೆದು ಒಟ್ಟು 1,000 ಪದವರ್ಗಗಳನ್ನು ರೊಜೆಟ್ ರೂಪಿಸಿದನು.

ಮೊದಲು ಹೀಗೆ ಅರ್ಥ ವಲಯಗಳನ್ನು ರೂಪಿಸಿ ಅನಂತರ ಪ್ರತಿ ವರ್ಗದೊಳಗೆ ಸೇರುವ ಪದಗಳನ್ನು ಗುರುತಿಸುವ ಮೂಲಕ ಒಂದು ಕೋಶ ವನ್ನು ರೊಜೆಟ್ ರಚಿಸಿದ. ಥೆಸಾರಸ್ ಎಂದು ಅಂಥ ಕೋಶಗಳನ್ನು ಕರೆಯುತ್ತಾರೆ. ರೊಜೆಟ್‌ನ ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಿ ಬೇರೆ ಬೇರೆ ರೀತಿಯ ಥೆಸಾರಸ್‌ಗಳನ್ನು ಇಂಗ್ಲಿಶಿನಲ್ಲಿ ರಚಿಸಲಾಗಿದೆ. ಇಂಗ್ಲಿಶ್‌ಗೆ ಅನ್ವಯಿಸುವ ವರ್ಗ ಉಪವರ್ಗ ವಿಭಜನೆ ಅನ್ಯಭಾಷೆಗಳಿಗೆ ಯಥಾವತ್ತಾಗಿ ಅನ್ವಯವಾಗದೆಯೂ ಇರಬಹುದು. ಆದ್ದರಿಂದ ಪ್ರತಿ ಭಾಷೆಯಲ್ಲೂ ಇಂಥ ವರ್ಗೀಕರಣ ಕೊಂಚಮಟ್ಟಿಗೆ ಸ್ವತಂತ್ರವಾಗಿಯೂ ನಡೆಯಬೇಕು.

ಥೆಸಾರಸ್‌ಗಳು ಭಾಷೆಯನ್ನು ಬಳಸುವ ಹಲವು ವಲಯಗಳಲ್ಲಿ ಉಪಯೋಗಕ್ಕೆ ಬರುತ್ತವೆ. ಆದರೆ ಅರ್ಥದ ಸ್ವರೂಪವನ್ನು ಹುಡುಕುವವರಿಗೆ ಅಷ್ಟು ಪ್ರಯೋಜನಕ್ಕೆ ಬಾರವು. ಏಕೆಂದರೆ ಅಲ್ಲಿ ಒಂದು ಪದದ ಅರ್ಥ ವೇನೆಂಬುದು ಇರುವುದಿಲ್ಲ. ಇತರ ಪದಗಳೊಡನೆ ಇರುವ ಅರ್ಥ ಸಾಮ್ಯಗಳು ಮಾತ್ರ ಕಾಣಸಿಗುತ್ತವೆ. ಅರ್ಥ ಸಾಮ್ಯದ ಆಧಾರದ ಮೇಲೆ ರೂಪುಗೊಂಡ ಅರ್ಥ ವಲಯಗಳು ಬೇರೊಂದು ರೀತಿಯಲ್ಲಿ ಉಪಯುಕ್ತವಾಗ ಬಲ್ಲವು. ಸಾಂಪ್ರದಾಯಿಕವಾದ ನಿಘಂಟುಗಳಲ್ಲಿ ಪದಗಳನ್ನು, ಅಥವಾ ನಮೂದುಗಳನ್ನು ಆಕಾರಾದಿಯಾಗಿ ಜೋಡಿಸಿರುತ್ತಾರಷ್ಟೆ. ಈ ನಿಘಂಟು ಗಳನ್ನು ನೋಡಿದರೆ ನಮ್ಮ ಮೆದುಳಿನಲ್ಲಿರುವ ಪದಕೋಶವೂ ಹೀಗೇ. ಆಕಾರಾದಿಯಾಗಿ ಜೋಡಣೆಯಾಗಿರುವುದೆಂದು ನಂಬುವಂತಾಗುತ್ತದೆ. ಮೆದುಳಿನ ಈ ಪದಕೋಶ ಹೇಗೆ ವ್ಯವಸ್ಥೆಯಾಗಿರುವುದೆಂದು ಇನ್ನೂ ಖಚಿತವಾಗಿ ಹೇಳಲು ಬರುವುದಿಲ್ಲ ವಾದರೂ ಆಕಾರಾದಿಯಾಗಂತೂ ಜೋಡಣೆ ಯಾಗಿರುವುದಿಲ್ಲ. ಪದಗಳ ಅರ್ಥಭಾವ ಮತ್ತು ಅರ್ಥವಲಯಗಳಿಗೆ ಅನುಗುಣವಾಗಿ ಈ ಪದಗಳು ಮೆದುಳಿನಲ್ಲಿ ಅಳವಡಿಕೆಯಾಗಿರುವ ಸಾಧ್ಯತೆಗಳು ಹೆಚ್ಚು. ಪದಗಳನ್ನು ನಾವು ಬಳಸಬೇಕಾಗಿ ಬಂದಾಗ ನೆನಪಿನಿಂದ ಪದಗಳನ್ನು ಹೇಗೆ ಹೆಕ್ಕಿಕೊಳ್ಳುತ್ತೇವೆ ಎಂಬುದು ಕುತೂಹಲದ ಪ್ರಶ್ನೆ. ಇಂಥಲ್ಲಿ ಮೆದುಳಿನ ಪದಕೋಶದ ರಚನೆಯ ನಿಯಮಗಳ ಸುಳಿವು ನಮಗೆ ದೊರಕುತ್ತದೆ.

ಸಾಮಾನ್ಯವಾಗಿ ಬಳಕೆಯಲ್ಲಿ ಪದಗಳ ಆಯ್ಕೆಯನ್ನು ನಿರ್ಧರಿಸುವ ಸಂಬಂಧಗಳು ಎರಡು. 1. ವಾಕ್ಯಾತ್ಮಕ ಸಂಬಂಧ. 2. ರೂಪಾವಳಿ ಸಂಬಂಧ. ‘ನಾನು ದಿನಾಲು ಬೆಳಿಗ್ಗೆ – ಓದುತ್ತೇನೆ.’ ಈ ವಾಕ್ಯದಲ್ಲಿ ತೆರವಾಗಿರುವ ಜಾಗದಲ್ಲಿ ಯಾವಪದ ಬರಬಹುದು. ಯಾವುದಾದರೂ ಸರಿ ಎನ್ನುವಂತಿಲ್ಲ. ಪೇಪರ್, ಪುಸ್ತಕ, ಕಾಗದ ಇತ್ಯಾದಿ ಪದಗಳು ಮಾತ್ರ ಬರಬಲ್ಲವು. ಅಥವಾ ನಿಂತು, ಕುಳಿತು, ಮಲಗಿ, ಓಡುತ್ತ, ನಡೆಯುತ್ತ ಎಂಬಂಥ ಅಪೂರ್ಣ ಕ್ರಿಯಾಪದಗಳು ಬರುವುದೂ ಸಾಧ್ಯ. ಹೀಗೆ ವಾಕ್ಯದ ಪದಗಳ ನಡುವೆ ರಚನೆಯಾಗುವ ಅರ್ಥ ಭಾವದ ಸಂಬಂಧವನ್ನು ವಾಕ್ಯಾತ್ಮಕ ಸಂಬಂಧವೆನ್ನುವರು. ‘ರೈಲು ಬೆಳಿಗ್ಗೆ ಬರಬೇಕಿತ್ತು. ಆದರೆ ರಾತ್ರಿ ಬಂತು.’ ಎಂಬ ಎರಡು ವಾಕ್ಯಗಳಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಎಂಬ ಪದಗಳ ನಡುವೆ ಇರುವ ಸಂಬಂಧವನ್ನು ರೂಪಾವಳಿಯ ಸಂಬಂಧವೆನ್ನುವರು. ಒಂದು ರೂಪಾವಳಿಯಲ್ಲಿ ಹಲವಾರು ಪದಗಳಿರುತ್ತವೆ. ಅವುಗಳಲ್ಲಿ ಒಂದರ ಬದಲಾಗಿ ಇನ್ನೊಂದನ್ನು ಬಳಸುವುದು ಸಾಧ್ಯ. ರೂಪಾವಳಿ ಸಂಬಂಧದಲ್ಲಿ ಕೆಲವು ಪ್ರಭೇದಗಳಿವೆ.

1. ಸಮಾನಾರ್ಥಕ : ಭಾಷೆಯಲ್ಲಿ ಸಮಾನಾರ್ಥಕ ಪದಗಳನ್ನು ಗುರುತಿಸುವುದು ಬಹು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಸಂಸ್ಕೃತದ ಅಮರಕೋಶ ಇದಕ್ಕೊಂದು ಉದಾಹರಣೆ. ಸೂರ್ಯ ಭಾನು, ಆದಿತ್ಯ, ತರಣಿ, ರವಿ, ಮಾರ್ತಾಂಡ ಮುಂತಾದವು ಒಂದೇ ಅರ್ಥವನ್ನು ಹೊಂದಿವೆ. ಹಾಗಾಗಿ ಅವುಗಳಲ್ಲಿ ಒಂದರ ಜಾಗದಲ್ಲಿ ಇನ್ನೊಂದು ಬರುವುದು ಸಹಜ. ಈ ಪದಗಳು ರೂಪಾವಳಿ ಸಂಬಂಧವನ್ನು ಹೊಂದಿವೆ.

2. ವಿರುದ್ಧಾರ್ಥಕ : ಇವು  ಸಾಮಾನ್ಯವಾಗಿ ಜೋಡಿ ಪದಗಳು. ಒಂದರ ಅರ್ಥ ಭಾವವನ್ನು ನಿರಾಕರಿಸುವ ಇನ್ನೊಂದು ಪದವನ್ನು ಗುರುತಿಸಿ ಅವೆರಡೂ ವಿರುದ್ಧಾರ್ಥಕಗಳು ಎನ್ನುತ್ತಾರೆ. ಇವುಗಳಲ್ಲಿ ಪರಿಮಾಣದ ಅಥವಾ ಗುಣ ನೆಲೆಯಲ್ಲಿ ವಿರೋಧವನ್ನು ಸೂಚಿಸುವ ಬಗೆಗಳಿವೆ. ಉದಾ: ದೊಡ್ಡ/ಚಿಕ್ಕ, ಉದ್ದ/ಅಗಲ, ಎತ್ತರ/ಕುಳ್ಳ. ಹಾಗಿಲ್ಲದೆ ಕೇವಲ ಸ್ಥಿತಿಸೂಚಕ ನೆಲೆಯ ವಿರೋಧವನ್ನುಳ್ಳ ಬಗೆಗಳಿವೆ. ಗಂಡು/ಹೆಣ್ಣು, ಸ್ವತಂತ್ರ/ಬಂಧಿ ಮತ್ತೆ ಕೆಲವು ಜೋಡಿಗಳು ಕ್ರಿಯಾ ಪರ್ಯಾಯಗಳನ್ನು ಸೂಚಿಸುತ್ತವೆ. ಉದಾ: ಏಳು/ಕೂರು, ಕೊಳ್ಳು/ಮಾರು, ಶೋಷಕ/ಶೋಷಿತ, ಪಾಲಕ/ಪೋಷಿತ ಇತ್ಯಾದಿ.

ಹೀಗೆ ಇನ್ನೂ ಬೇರೆ ಬೇರೆ ಬಗೆಯ ರೂಪಾವಳಿಗಳನ್ನು ಭಾಷೆಯಲ್ಲಿ ಗುರುತಿಸಲು ಅವಕಾಶಗಳಿವೆ. ಮೆದುಳಿನಲ್ಲಿರುವ ನೆನಪಿನ ಪದಕೋಶದಲ್ಲಿ ನಮೂದುಗಳು ಆಯಾ ಪದಗಳ ಅರ್ಥ ವಲಯದೊಡನೆ ಸಂಬಂಧವನ್ನು ಹೊಂದಿರುತ್ತವೆಂದು ಈ ಮೇಲಿನ ವಿವರಣೆಯಿಂದ ಗೊತ್ತಾಗುತ್ತದೆ.

ವಾಕ್ಯರ್ಥದ್ದು ಇನ್ನೊಂದು ಲೋಕ. ವಾಕ್ಯದಲ್ಲಿ ಪದಗಳಿರುತ್ತವೆ. ಪದಗಳಿಗೆ ಇರುವ ಅರ್ಥಕ್ಕೂ ವಾಕ್ಯದ ಇಡಿಯಾದ ಅರ್ಥಕ್ಕೆ ಇರುವ ಸಂಬಂಧ ಎಂಥದು, ಪದಗಳ ಅರ್ಥಗಳನ್ನು ಒಟ್ಟಾಗಿ ಜೋಡಿಸಿದಾಗ ವಾಕ್ಯದ ಅರ್ಥ ಉತ್ಪತ್ತಿಯಾಗುವುದಿಲ್ಲ. ಆ ವಾಕ್ಯದಲ್ಲಿರುವ ಪದಗಳ ಅರ್ಥ ಭಾವಗಳ ಸಂಯೋಜನೆಯಿಂದ ವಾಕ್ಯಾರ್ಥ ರೂಪಗೊಳ್ಳುತ್ತದೆ. ಇದನ್ನು ತಾತ್ಪಯಾರ್ಥವೆಂತಲೂ ಹೇಳುತ್ತಾರೆ. ವಾಕ್ಯದ ತಾತ್ಪಯಾರ್ಥದಲ್ಲಿ ಈ ವಾಕ್ಯಕ್ಕೆ ಸಂಬಂಧಿಸಿದಂತೆ ಯಾವ ಅಂಶ ಮುಖ್ಯವೆಂದು ಸರಿಯಾಗಿ ಪರಿಗಣಿಸದಿದ್ದರೆ ತಾತ್ಪಯಾರ್ಥ ಮೂಡುವುದೇ ಇಲ್ಲ. ಸರಳವಾದ ಈ ವಾಕ್ಯವನ್ನು ನೋಡಿ: ಮಗುವಿನ ತೊದಲು ಮಾತು ಕೇಳಿ ಬಿದ್ದುಬಿದ್ದು ನಕ್ಕರು. ಇಲ್ಲಿ ಬಿದ್ದುಬಿದ್ದು ಎಂಬ ರಚನೆಯ ಅರ್ಥವನ್ನು ‘ತುಂಬಾ’ ಎಂದಷ್ಟೇ ಗ್ರಹಿಸದೆ ಹೋದರೆ ಈ ವಾಕ್ಯದ ಸರಿಯಾದ ಅರ್ಥ ಮೂಡುವುದೇ ಇಲ್ಲ. ಎಷ್ಟೋ ವೇಳೆ ವಾಕ್ಯದ ಪದಗಳ ತೋರಿಕೆಯ ಅರ್ಥಕ್ಕೂ ತಾತ್ಪಯಾರ್ಥಕ್ಕೂ ಪರಸ್ಪರ ವಿರೋಧವೇ ಇರುವುದು ಸಾಧ್ಯ. ‘ನೀನೇ ಮಹಾ ಬುದ್ದಿವಂತ’ ಎಂಬ ವಾಕ್ಯದ ತಾತ್ಪಯಾರ್ಥ ‘ನೀನು ದಡ್ಡ’, ಎಂದೂ ಇರಬಹುದಷ್ಟೆ. ಹೀಗೆ ವಾಕ್ಯಾರ್ಥ ನಿರ್ಣಯ ಕ್ಲಿಷ್ಟವಾದ ಸಂಗತಿ. ಆದರೆ ವ್ಯವಹಾರದಲ್ಲಿ ಭಾಷಿಕರು ಈ ಕ್ಲಿಷ್ಟತೆಯನ್ನು ನಿವಾರಿಸಿಕೊಳ್ಳುತ್ತಾರೆ. ಅದಕ್ಕೆ ನೆರವಾಗುವ ಹಲವಾರು ಸಂಗತಿಗಳಿವೆ. ಸಾಮಾಜಿಕ ಸಂದರ್ಭ ಅಂಥದೊಂದು ಸಂಗತಿ. ವಾಕ್ಯವನ್ನು ಯಾವ ಸಾಮಾಜಿಕ ಸಂದರ್ಭದಲ್ಲಿ ಬಳಸಲಾಗಿದೆ ಎಂಬುದನ್ನು ಅವಲಂಬಿಸಿ ಆ ವಾಕ್ಯದ ತಾತ್ಪಯಾರ್ಥ ನಿಗದಿಗೊಳ್ಳುತ್ತದೆ. ಇದು ಪ್ರತ್ಯೇಕ ವಿಶ್ಲೇಷಣೆಗೆ ಅನುವು ಮಾಡಿಕೊಡುವ ವಿಷಯವಾಗಿದೆ.