ಪಿಟೀಲು ವಾದ್ಯದ ಕಲಾವಿದರಾಗಿ ತನಿವಾದನ ಕಚೇರಿ, ಪಕ್ಕವಾದ್ಯ ಸಹಕಾರ ಮತ್ತು ಮುಖ್ಯವಾಗಿ ನೃತ್ಯ ಕಾರ್ಯಕ್ರಮಗಳಲ್ಲಿ ವಾದ್ಯ ಸಹಕಾರದ ಮೂಲಕ ಕಳೆದ ನಾಲ್ಕು ದಶಕಗಳಿಂದಲೂ ಅಲಸೂರು ಎಸ್. ಚಂದ್ರಶೇಖರ್‌ರವರು ಸೇವೆ ಸಲ್ಲಿಸುತ್ತಿದ್ದಾರೆ.

೧೯೩೮ರಲ್ಲಿ ದಿ. ವೇದಬ್ರಹ್ಮ ಶ್ರೀ ಅಲಸೂರು ಸುಬ್ಬಾಭಟ್ಟರು ಮತ್ತು ಶ್ರೀಮತಿ ಶೇಷಮ್ಮನವರ ಪುತ್ರನಾಗಿ ಜನಿಸಿದ ಚಂದ್ರಶೇಖರ್ ಅವರಿಗೆ ನಾಮಾಂಕಿತ ಪಿಟೀಲು ಕಲಾವಿದರಾದ ದಿ. ಅನೂರು ಎಸ್.ರಾಮಕೃಷ್ಣರವರಿಂದ ಪಿಟೀಲು ವಾದ್ಯದಲ್ಲಿ ಶಿಕ್ಷಣ ದೊರೆಯಿತು.

ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅನೇಕ ಕಾರ್ಯಕ್ರಮಗಳಿಗೆ ಪಕ್ಕವಾದ್ಯ ನುಡಿಸಿ ಖ್ಯಾತರಾದ ಇವರು ದಕ್ಷಿಣ ಭಾರತದ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಕಚೇರಿ ನೀಡಿದ್ದಾರೆ. ಖ್ಯಾತನಾಮರಾದ ಡಾ|| ಎಸ್.ರಮಣಿ ಶ್ರಿ ಕದ್ರಿ ಗೋಪಾಲನಾಥ್ ಮತ್ತು ಡಾ|| ಬಾಲಚಂದರ್ ಮುಂತಾದವರ ಕಚೇರಿಗಳಿಗೆ ಪಕ್ಕವಾದ್ಯ ನುಡಿಸಿದ್ದಾರೆ. ವಿವಿಧ ನೃತ್ಯ ಕಾರ್ಯಕ್ರಮಗಳಿಗೆ ಪಕ್ಕವಾದ್ಯ ನುಡಿಸಿ ಖ್ಯಾತರಾದ ಇವರು ದಕ್ಷಿಣ ಭಾರತದ ಪ್ರತಿಷ್ಠಿತ ಸಂಗೀತ ಸಮ್ಮೇಳನಗಳಲ್ಲಿ ಕಚೇರಿ ನೀಡಿದ್ದಾರೆ.

೧೯೮೦,೧೯೮೨ ಹಾಗೂ ೧೯೫೮ರಲ್ಲಿ ಹೀಗೆ ಮೂರು ಬಾರಿ ’ರಮಣಾಂಜಲಿ’ ತಂಡದವರೊಂದಿಗೆ ವಿದೇಶ ಪ್ರವಾಸಗೈದು, ಅವರ ಅನೇಕ ಕಾರ್ಯಕ್ರಮಗಳ ಯಶಸ್ಸಿಗೆ ದುಡಿದಿರುತ್ತಾರೆ.

೧೯೯೬ರಲ್ಲಿ ನಡೆದ ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದಲ್ಲಿ ’ವರ್ಷದ ಕಲಾವಿದ’ರಾಗಿ ಆಯ್ಕೆಗೊಂಡಿರುವ ಶ್ರೀಯುತರಿಗೆ ರಾಜ್ಯ ಸಂಗೀತ-ನೃತ್ಯ ಅಕಾಡೆಮಿಯು ತನ್ನ ೧೯೭೭-೯೮ನೇ ಸಾಲಿನ ಪ್ರಶಸ್ತಿಯನ್ನಿತ್ತು ಗೌರವಿಸಿದೆ.