ಸಾವಿರದ ಒಂಬೈನೂರ ಇಪ್ಪತ್ತನಾಲ್ಕನೆಯ ಇಸವಿ. ಸ್ಥಳ ಲಖನೌ. ಭಾರತದ ಸಂಗೀತ ವಾಚಸ್ಪತಿಯೊಬ್ಬರು ಆಗ ಲಖನೌ ಸಂಗೀತ ಸಮ್ಮೇಳನಕ್ಕೆ ಆಮಂತ್ರಿತರಾಗಿ ದ್ದರು. ಆದರೆ ಈ ಮಹರ್ಷಿಯಂಥ ಸಂಗೀತ ತಪಸ್ವಿ ಗಳು ಸಮ್ಮೇಳನದಲ್ಲಿ ಭಾಗವಹಿಸಲು ತಮ್ಮದೊಂದು ಷರತ್ತನ್ನು ಹಾಕಿದರು. ಅವರು ಪುಟ್ಟ ಬಾಲಕರನ್ನು ಕಲೆಹಾಕಿ ಅವರನ್ನು ಸಂಗೀತದ ಗರಡಿಯಲ್ಲಿ ಪಳಗಿಸಿ ಆ ಪುಟ್ಟ ಹುಡುಗರದೇ ಒಂದು ವಾದ್ಯವೃಂದವನ್ನು ಸಂಘಟಿಸಿದ್ದರು. ಈ ವಾದ್ಯವೃಂದಕ್ಕೆ ಸಮ್ಮೇಳನದ ಕಾರ್ಯಕ್ರಮದಲ್ಲಿ ಅವಕಾಶ ಕೊಟ್ಟರೆ ಮಾತ್ರ ಭಾಗವಹಿ ಸುವುದು ಎಂಬುದೇ ಅವರ ಷರತ್ತು. ವ್ಯವಸ್ಥಾಪಕರು ಒಪ್ಪಲಿಲ್ಲ. ಆದ್ದರಿಂದ ಈ ವಿದ್ವಾಂಸರು ‘ಬರುವುದಿಲ್ಲ’ ಎಂದುಬಿಟ್ಟರು. ಗತ್ಯಂತರವಿಲ್ಲದೆ ಆ ಪುಟ್ಟಬಾಲಕರ ವಾದ್ಯವೃಂದಕ್ಕೆ ಹತ್ತು ನಿಮಿಷ ಮಾತ್ರ ಅವಕಾಶ ನೀಡಲಾಯಿತು.

ಆದರೆ ಈ ಪುಟಾಣಿ ಕಲಾವಿದರು ‘ಯಮನ್’ ರಾಗದಲ್ಲಿ ತಮ್ಮ ವಾದ್ಯಗಳ ಮೇಲೆ ಆಘಾತ ಮಾಡಿದ್ದೇ ತಡ ಪಂಡಿತರಿಂದ ಕೂಡಿದ ಶ್ರೋತೃವೃಂದ ಬೆಕ್ಕಸ

ಬೆರಗಾಯಿತು. ಒಂದು ರಾಗದ ನಂತರ ಮತ್ತೊಂದು ರಾಗವನ್ನು ಈ ಹತ್ತು-ಹನ್ನೆರಡರ ಪುಟ್ಟ ಕಲಾವಿದರು ಬಾರಿಸುತ್ತಾ ಸಾಗಿದರು. ಹತ್ತು ನಿಮಿಷದ ಗಡುವು ವ್ಯವಸ್ಥಾಪಕರಿಗೇ ಮರೆತುಹೋಯಿತು. ‘ಒನ್ಸ್ ಮೋರ್, ಒನ್ಸ್ ಮೋರ್’ ಎಂಬ ಹರ್ಷೋದ್ಗಾರಗಳು ಒಂದಾದಮೇಲೊಂದರಂತೆ ಭೋರ್ಗರೆದವು. ಮೂರು ಗಂಟೆಗಳ ಕಾಲ ಸತತವಾಗಿ ಮಕ್ಕಳ ಕಛೇರಿ ಸಾಗಿತು.

ಈ ಪುಟಾಣಿಗಳನ್ನು ಕಲಾಪಟುಗಳನ್ನಾಗಿ ಪರಿ ವರ್ತಿಸಿದ್ದ ಆ ಮಹಾನ್‌ವ್ಯಕ್ತಿ ಉಸ್ತಾದ್ ಅಲಾಉದ್ದೀನ್ ಖಾನ್.

ದೇವಾಲಯವೇ ಶಾಲೆ

ಉಸ್ತಾದ್ ಅಲಾಉದ್ದೀನ್ ಖಾನ್ ಅವರು ಜನಿ ಸಿದ್ದು ೧೮೮೧ ರಲ್ಲಿ. ಅವರ ಜನ್ಮಸ್ಥಳ ಆಗಿನ ತ್ರಿಪುರ ಸಂಸ್ಥಾನದ ಶಿವಪುರ ಗ್ರಾಮ. ಹಿಂದುಗಳಾಗಿದ್ದ ಅವರ ಪೂರ್ವಜರು ಬಹಳ ಹಿಂದೆ ಮುಸಲ್ಮಾನರಾಗಿ ಪರಿವರ್ತಿತರಾಗಿದ್ದರು.

ಉಸ್ತಾದ್ ಅಲಾಉದ್ದೀನ್ ಖಾನರ ತಂದೆ ಸಾಧೂ ಖಾನ್ ಉತ್ತಮ ಸಿತಾರ್ ವಾದಕರಾಗಿದ್ದರು. ತಾನ್ ಸೇನರ ವಂಶಜರಾದ ಉಸ್ತಾದ್ ಕಾಸಿಂ ಅಲೀ ಖಾನರಲ್ಲಿ ಅವರು ಅಭ್ಯಾಸ ಮಾಡುತ್ತಿದ್ದರು. ಮಗ ಅಲಾಉದ್ದೀನ್ ಖಾನರ ಬಾಲ್ಯದ ಹೆಸರು ಆಲಂ. ಆಲಂ ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಾಯಿಯ ತೊಡೆಯ ಮೇಲೆ ಮಲಗಿ, ತಂದೆಯ ಸಿತಾರ್ ವಾದನವನ್ನು ಆಲಿಸುತ್ತಾ, ತಾಳ ಹಾಕುತ್ತಿದ್ದನು. ನಾಲ್ಕು ವರ್ಷದವ ನಾಗುವ ವೇಳೆಗೆ ಅಣ್ಣನ ತಬಲಾ ಅಭ್ಯಾಸದ ‘ಬೋಲ್’ ಗಳನ್ನೆಲ್ಲಾ ಕಂಠಪಾಠ ಮಾಡಿದ್ದನು.

ಐದು ವರ್ಷಗಳಾದಾಗ ಆಲಂನನ್ನು ಶಾಲೆಗೆ ಹಾಕಿದರು. ಆದರೆ ಶಾಲೆ ಅವನಿಗೆ ಬೇಕಿರಲಿಲ್ಲ. ಶಾಲೆಗೆ ಹೋಗುವ ದಾರಿಯಲ್ಲೇ ಶಿವಾಲಯವೊಂದಿತ್ತು. ಶಾಲೆಗೆ ಹೋಗುವುದರ ಬದಲು ಆಲಂ ಆ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಡೆಯುತ್ತಿದ್ದ ಶಿವಕೀರ್ತನೆ ಸಿತಾರ್ ವಾದನಗಳ ಸಂಗೀತಗಳನ್ನೇ ಕೇಳುತ್ತಾ ತನ್ಮಯನಾಗಿ ಕುಳಿತು ಬಿಡುತ್ತಿದ್ದ.

ದಿನಗಳು ಕಳೆದಂತೆ ಅವನಿಗೆ ಸಂಗೀತ ಕಲಿಯುವ ಇಚ್ಛೆಯೂ ಪ್ರಬಲವಾಗುತ್ತಾ ಹೋಯಿತು.

ಶಿವಪುರದ ಪಶ್ಚಿಮಕ್ಕೆ ಢಾಕಾ ಮತ್ತು ಕಲ್ಕತ್ತಾ ನಗರಗಳಿವೆ. ಆ ಸ್ಥಳಗಳಲ್ಲಿ ಬಹುದೊಡ್ಡ ಸಂಗೀತ ವಿದ್ವಾಂಸರು ಅನೇಕರು ಇದ್ದಾರೆ ಎಂದು ತಂದೆ ಆಗಾಗ ಹೇಳುವುದನ್ನು ಆಲಂ ಕೇಳಿದ್ದ. ಸಂಗೀತ ಕಲಿಯುವ ಇಚ್ಛೆ ತಡೆಯಲಾರದಷ್ಟು ಬಲಿಯಿತು. ಆಲಂ ಎಲ್ಲರನ್ನೂ ಬಿಟ್ಟು ಪಶ್ಚಿಮಕ್ಕೆ ಹೋಗಲು ದೃಢ ನಿರ್ಧಾರ ಮಾಡಿದ.

ಹುಡುಗ ಮನೆ ಬಿಟ್ಟ

ಈ ವೇಳೆಗೆ ಶಾಲೆಯಿಂದ ಆಲಂ ಬಗ್ಗೆ ದೂರು ಬಂದಿತ್ತು. ಅವನ ತಾಯಿತಂದೆಯರು ಬುದ್ಧಿಮಾತನ್ನು ಹೇಳಿದರು. ತಾಯಿ ಕೈಕಾಲುಗಳನ್ನು ಕಟ್ಟಿ, ಗೂಟಕ್ಕೆ ಕಟ್ಟಿ ಹಾಕಿದರು ; ಮೂರು ದವಸ ಊಟ ಹಾಕಲಿಲ್ಲ. ಆದರೆ ಶಿಕ್ಷೆ ಅವನ ಮೇಲೆ ಯಾವ ಪರಿಣಾಮವನ್ನೂ ಮಾಡಲಿಲ್ಲ. ಒಂದು ರಾತ್ರಿ ಎಲ್ಲರೂ ಮಲಗಿದ್ದಾಗ ತಾಯಿಯ ಡಬ್ಬಿಯಿಂದ ಸಿಕ್ಕಿದಷ್ಟು ಹಣವನ್ನು ಕೈಗೆತ್ತಿ ಕೊಂಡ. ನಿದ್ರಿಸುತ್ತಿದ್ದ ತಾಯಿಗೆ ಹಾಗೆ ನಮಸ್ಕಾರ ಮಾಡಿದ. ಪಶ್ಚಿಮಕ್ಕೆ ಹೊರಟ. ಆಗ ಅವನಿಗೆ ಎಂಟು ವರ್ಷ.

ಶಿವಪುರದ ಪಶ್ಚಿಮಕ್ಕೆ ಮಾಣಿಕ್‌ಗಂಚ್ ಎಂಬ ಊರು. ಆಲಂ ಅಲ್ಲಿಗೆ ನಡೆದೇ ಬಂದ. ಮಾಣಿಕ್ ಗಂಜ್‌ನಿಂದ ಹಡಗಿನಲ್ಲಿ ನಾರಾಯಣಗಂಜ್‌ಗೆ ; ಅಲ್ಲಿಂದ ರೈಲಿನಲ್ಲಿ ಕಲ್ಕತ್ತೆಯ ಸಿಯಾಲ್ದಹ್‌ಗೆ. ಟಿಕೆಟ್ಟನ್ನು ಕೊಳ್ಳ ಬೇಕೆಂದು ಆಲಂನಿಗೆ ಗೊತ್ತೇ ಇರಲಿಲ್ಲ. ಹಡಗು ಹಾಗೂ ರೈಲುಗಳಲ್ಲಿ ಟಿಕೆಟ್ಟಿಲ್ಲದೆಯೇ ಪ್ರಯಾಣ ಮಾಡಿದ.

ಕಲ್ಕತ್ತೆಯಲ್ಲಿಳಿದ ಆಲಂ ನೇರವಾಗಿ ಗಂಗಾತೀರಕ್ಕೆ ನಡೆದ. ಆ ಸಮಯಕ್ಕೆ ಹೊತ್ತು ಮುಳುಗಿತ್ತು. ಕೈಯಲ್ಲೊಂದು ಗಂಟು, ಕಿಸೆಯಲ್ಲಿ ಎಂಟು ರೂಪಾಯಿ ಗಳು_ಇವೇ ಆಲಂನ ಆಸ್ತಿ. ಪೂರಿವಾಲಾ ಒಬ್ಬನಿಂದ ಮನಃಪೂರ್ತಿ ಪೂರಿ ತಿಂದ. ಬೇಕಾದಷ್ಟು ಗಂಗಾಜಲ ವನ್ನು ಕುಡಿದ. ಗಂಟನ್ನು ತಲೆಗಿಟ್ಟುಕೊಂಡು ಗಂಗಾ ತಟದಲ್ಲೇ ಆ ರಾತ್ರಿ ಹಾಯಾಗಿ ನಿದ್ರಿಸಿದ.

ಆಶ್ರಯ

ಮುಂಜಾನೆ ಎದ್ದಾಗ ಗಂಟು ಎಂಟು ರೂಪಾಯಿ ಗಳೊಂದಿಗೆ ನಾಪತ್ತೆ. ಕಳ್ಳರು ಕದ್ದೊಯ್ದಿದ್ದರು. ಆಲಂ ಅಳುತ್ತಲೇ ಗಂಗೆಯ ತೀರದುದ್ದಕ್ಕೂ ಸಾಗುತ್ತ ನೀಮ್‌ತಲ್ಲಾ ಘಾಟ್ ಎಂಬಲ್ಲಿಗೆ ಬಂದ. ಆ ಸ್ಮಶಾನದಲ್ಲಿ ಹಲವಾರು ಸಾಧುಗಳಿದ್ದರು. ಸಾಧುವೊಬ್ಬ ಅವನನ್ನು ವಿಚಾರಿಸಿದ, ಎಲ್ಲವನ್ನೂ ತಿಳಿದುಕೊಂಡ. ಅವನ ಆದೇಶದಂತೆ ಆಲಂ ಗಂಗಾಸ್ನಾನ ಮಾಡಿದ. ಆ ಸಾಧು ಒಂದು ಚಿಟಿಕೆ ಭಸ್ಮ ಕೊಟ್ಟು, ಐದು ಬೊಗಸೆ ಗಂಗಾಜಲ ಕುಡಿಯಲು ಹೇಳಿದ. ಹೇಳಿದಂತೆ ಮಾಡಿದ ಆಲಂನಿಗೆ ಆ ಸಾಧು, “ಇನ್ನು ನೇರವಾಗಿ ಇದೇ ರಸ್ತೆಯಲ್ಲಿ ಹೋಗು, ದೇವರು ಒಳ್ಳೆಯದು ಮಾಡುತ್ತಾನೆ” ಎಂದು ಹೇಳಿದ.

ನೇರವಾಗಿ ನಡೆದು ಬಂದಾಗ ಅವನಿಗೆ ಅಲ್ಲಿ ಬ್ರಾಹ್ಮಣರೊಬ್ಬರು ಅನ್ನ ಸಂತರ್ಪಣೆ ಮಡುತ್ತಿದ್ದುದು ಕಂಡಿತು. ಆ ಬ್ರಾಹ್ಮಣರು ಅವನನ್ನು ಕಂಡರು ; ಅನಾಥ ಬಾಲಕನೆಂದು ತಿಳಿದು ಹೊಟ್ಟೆ ತುಂಬ ಊಟ ಹಾಕಿದರು. ಆದರೆ ಆಲಂ ತಾನು ಅನಾಥನಲ್ಲವೆಂದು ತಿಳಿಸಿದ ; ತನ್ನ ಕಥೆಯನ್ನೆಲ್ಲಾ ಹೇಳಿದ ; ಸಂಗೀತ ಕಲಿಯುವ ತನ್ನ ಪ್ರಬಲ ಆಕಾಂಕ್ಷೆಯನ್ನು ತಿಳಿಸಿದ.

ಆ ಹಿರಿಯರು ವಿಶಾಲ ಹೃದಯಿಗಳು. ತಮ್ಮ ಮಿತ್ರರಾದ ವೈದ್ಯರೊಬ್ಬರ ಚಿಕಿತ್ಸಾಲಯದ ಪಡಸಾಲೆ ಯಲ್ಲಿ ಆಲಂನಿಗೆ ಮಲಗಲು ಅವರೇ ಸ್ಥಳ ಕೊಡಿಸಿದರು.

‘ಗುರುವನ್ನು ತೋರಿಸಿ’

ಚಿಕಿತ್ಸಾಲಯಕ್ಕೆ ಬಂದವರನ್ನು ಆಲಂ ಸಂಗೀತದ ಗುರುಗಳೊಬ್ಬರನ್ನು ತೋರಿಸಿ ಎಂದು ಪ್ರಾರ್ಥಿಸುತ್ತಿದ್ದ. ಒಬ್ಬ ಹುಡುಗ ಆಲಂನಿಗೆ ಬಹುಬೇಗ ಮಿತ್ರನಾದ.

“ಸಂಗೀತ ಹೇಳಿಕೊಡುವ ಗುರುಗಳನ್ನು ಕೊಡಿಸು ತ್ತೀಯಾ ?” ಎಂದು ಆಲಂ ಅವನನ್ನು ಅಂಗಲಾಚಿದ.

“ಆಗಲಿ, ಆದರೆ ಮೊದಲು ನೀನು ನಮ್ಮ ತಂದೆಯ ವರನ್ನು ಭೇಟಿ ಮಾಡು. ನಮ್ಮ ತಂದೆಯವರೂ ಒಳ್ಳೆಯ ಗುರುಗಳಿಂದ ಸಂಗೀತವನ್ನು ಕಲಿಯುತ್ತಿದ್ದಾರೆ” ಎಂದ ಮಿತ್ರ.

ಹೊಸ ಮಿತ್ರನ ಮನೆಯಲ್ಲಿ ಅವನ ತಾಯಿ ಆಲಂ ಎಷ್ಟು ಬೇಡವೆಂದರೂ ಕೇಳದೆ ಹೊಟ್ಟೆತುಂಬಾ ತಿಂಡಿ ಕೊಟ್ಟರು. ಅನಂತರ ಅವನಿಂದ ಹಾಡಿಸಿದರು. ಶಿವ ಪುರದ ದೇವಸ್ಥಾನದಲ್ಲಿ ಕಲಿತಿದ್ದ ಕೀರ್ತನೆಗಳು, ಭಜನೆ ಗಳು-ಎಲ್ಲವನ್ನೂ ಆಲಂ ಸುಶ್ರಾವ್ಯವಾಗಿ ಹಾಡಿದ. ಅವನು ಹಾಡಿದ ‘ಶಿವಶಂಕರ ಹರಹರ ಬಂ ಬಂ ಭೋಲಾನಾಥ’ ಎಂಬ ಭಜನೆಯನ್ನು ಆ ಮಿತ್ರನ ತಾಯಿ ಬಹುವಾಗಿ ಮೆಚ್ಚಿಕೊಂಡರು. ಆ ಮಿತ್ರನ ತಂದೆಯವರೂ ಅವನ ಗಾಯನವನ್ನು ತುಂಬಾ ಮೆಚ್ಚಿಕೊಂಡರು ; ಅವನನ್ನು ತಮ್ಮ ಗುರುಗಳ ಬಳಿಗೇ ಕರೆದುಕೊಂಡು ಹೋದರು. ಆ ಗುರುಗಳು ಆಲಂನ ಕಂಠವನ್ನು ಕೇಳಿ, ‘ಇವನು ನನ್ನ ಶಿಷ್ಯನಾಗುವುದು ಬೇಡ. ನನ್ನ ಗುರುಗಳಿಗೇ ಶಿಷ್ಯನಾಗಲಿ’ ಎಂದು ಹೇಳಿ ಅವನನ್ನು ತಮ್ಮ ಗುರುಗಳ ಬಳಿಗೇ ಕರೆದುಕೊಂಡು ಹೋದರು.

ಗುರು ದೊರೆತರು

ಆ ದೊಡ್ಡ ಗುರುಗಳ ಹೆಸರು ಪಂಡಿತ ಗೋಪಾಲ ಚಂದ್ರ ಭಟ್ಟಾಚಾರ್ಯ, ಅಥವಾ ನೂಲೋ ಗೋಪಾಲ್.

ಈ ಗುರುಗಳು ಆಲಂನನ್ನು ಅಪಾದಮಸ್ತಕ ನೋಡಿದರು. “ಹನ್ನೆರಡು ವರ್ಷ ಕೇವಲ ಸ್ವರಾಲಂಕಾರ (ಸರಳೆ ವರಸೆ)ಗಳ ಅಭ್ಯಾಸ ಮಾಡಬೇಕು. ಅನಂತರವೇ ಸಂಗೀತ ಕಲಿಸುತ್ತೇನೆ. ತಯಾರಿದ್ದೀಯೋ ?” ಎಂದು ಕೇಳಿದರು. ‘ಆಗಲಿ’ ಎಂದ ಆಲಂ. ಅಷ್ಟೇ ಅಲ್ಲ, “ಇಡೀ ಜೀವನ ಪೂರ್ತಿ ಈ ಶಿಕ್ಷಣವನ್ನೇ ಪಡೆಯುತ್ತೇನೆ” ಎಂದ. ಗುರುಗಳ ಅವನ ಸ್ಥೈರ್ಯವನ್ನು ಮೆಚ್ಚಿದರು. ಶಿಷ್ಯನನ್ನಾಗಿ ಅಂಗೀಕರಿಸಿದರು.

ಬಲಗೈ ತಂಬೂರಿ. ಎಡಗೈಯಲ್ಲಿ ಢಕ್ಕಾ (ತಬಲಾ ದ ಎಡಭಾಗ). ಒಂದು ಕೈಯಲ್ಲಿ ತಾಳ ಹಾಕುವುದು. ಮತ್ತೊಂದು ಕೈಯಲ್ಲಿ ತಾಳದ ಲೆಕ್ಕ ಮಾಡುವುದು. ಮಧ್ಯರಾತ್ರಿಯ ನಂತರದ ಎರಡು ಗಂಟೆಯಿಂದ ಬೆಳಗಿನ ಝಾವ ಐದು ಗಂಟೆಯವರೆಗೆ ಸಂಗೀತ ಪಾಠ. ಮಿಕ್ಕ ವೇಳೆಯಲ್ಲಿ ರಿಯಾಜ್ (ಸಾಧನೆ). ಇದು ಗುರುಗಳು ಆಲಂನಿಗೆ ಹಾಕಿದ ನಿತ್ಯಕ್ರಮ. ಆಲಂ ಒಂದೇ ಹೊತ್ತು ಛತ್ರದಲ್ಲಿ ಊಟ ಮಾಡುತ್ತಿದ್ದ. ರಾತ್ರಿ ನೀರು ಕುಡಿಯು ತ್ತಿದ್ದ. ಈ ಕ್ರಮದಲ್ಲಿ ಮೂರು ವರ್ಷಗಳು ಕಳೆದವು. ಆ ವೇಳೆಗೆ ಹೇಳಿಕೊಟ್ಟದ್ದನ್ನು ಒಂದೇ ಪಟ್ಟಿಗೆ ಕಲಿಯುವ ಸಿದ್ಧಹಸ್ತನಾಗಿದ್ದ ಆಲಂ. ಲಯ ಮತ್ತು ಸ್ವರಜ್ಞಾನಗಳಲ್ಲಿ ಪಕ್ವವಾಗಿಬಿಟ್ಟಿದ್ದ. ಘನ ವಿದ್ವಾಂಸರೂ ಕಠಿಣ ಶಿಸ್ತು ಗಾರರೂ ಆದ ಗುರುಗಳು ಆಲಂನ ಬಗ್ಗೆ ಪ್ರಸನ್ನ ರಾಗಿದ್ದರು.

ಒಮ್ಮೆ ಆಲಂನ ಊಟದ ಬಗ್ಗೆ ವಿಚಾರಿಸಿದರು. ಮೂರು ವರ್ಷಗಳಿಂದ ಅವನ ಒಪ್ಪತ್ತು ಊಟದ ಸ್ಥಿತಿಯನ್ನು ತಿಳಿದು ಬೇಸರಗೊಂಡರು ; ಊಟಕ್ಕೆ ಏರ್ಪಾಡು ಮಾಡಿಸಿದರು.

ಇಡೀ ಜೀವನ ಪೂರ್ತಿ ಈ ಶಿಕ್ಷಣವನ್ನೇ ಪಡೆಯುತ್ತೇನೆ

ಮತ್ತೆ ನಾಲ್ಕು ವರ್ಷಗಳು ಸಂದವು. ಗುರುಗಳು ಸಾವಿರಾರು ‘ಪಲ್ವಾ’(ಸಂಗೀತದ ಸ್ವರಾಭ್ಯಾಸ)ಗಳನ್ನು ಹೇಳಿಕೊಟ್ಟರು. ಏತನ್ಮಧ್ಯೆ ತಬಲಾ ಮತ್ತು ಮೃದಂಗಗಳ ಶಿಕ್ಷಣವನ್ನೂ ಕೊಡಿಸಿದರು.

ಆ ಗುರು ಇನ್ನಿಲ್ಲ

ಹೀಗೆ ಏಳುವರ್ಷಗಳವರೆಗೆ ನೂಲೋ ಗೋಪಾಲಜಿ ಅವರ ಬಳಿ ಸ್ವರಾಭ್ಯಾಸ ನಡೆಯಿತು. ಆಗ ಅಲಾ ಉದ್ದೀನ್ ಖಾನರಿಗೆ ಸುಮಾರು ಹದಿನೇಳು ವರ್ಷ ವಯಸ್ಸು. ಆ ಸಮಯಕ್ಕೆ ಅವರನ್ನು ವಾಪಸ್ಸು ಕರೆದು ಕೊಂಡು ಹೋಗಲು ಅವರ ಅಣ್ಣ ಕಲ್ಕತ್ತೆಗೆ ಬಂದರು. ಆದರೆ ಗುರುಗಳು ಒಪ್ಪಲಿಲ್ಲ. ಅವರ ಅಣ್ಣ ಬಹುವಾಗಿ ಪ್ರಾರ್ಥನೆ ಮಾಡಿ, ಒಂದು ತಿಂಗಳ ಮಟ್ಟಿಗೆ ಎಂದು ತಮ್ಮನನ್ನು ಕರೆದುಕೊಂಡು ಹೋದರು.

ಅಲಾಉದ್ದೀನರ ಕುಟುಂಬದವರ ಯೋಜನೆಯೇ ಬೇರೆಯಾಗಿತ್ತು. ಎಂಟು ವರ್ಷದ ಬಾಲಕಿಯೊಡನೆ ಅಲಾಉದ್ದೀನರ ಲಗ್ನವನ್ನು ನಿಶ್ಚಯಿಸಿದ್ದ ಅವರ ಕುಟುಂಬದವರು ಲಗ್ನವಾದನಂತರ ಅಲಾಉದ್ದೀನ್ ಓಡಿ ಹೋಗಲಾರರು ಎಂದು ನಂಬಿದ್ದರು. ರಜೆ ಮುಗಿಯುವ ವೇಳೆಗೆ ಉಪಾಯದಿಂದ ಅಲಾಉದ್ದೀನರನ್ನು ಒಪ್ಪಿಸಿ ಅವರಿಗೆ ಮದುವೆ ಮಾಡಿಬಿಟ್ಟರು. ರೋಚ್ಚಿಗೆದ್ದ ಅಲಾ ಉದ್ದೀನರು ವಿವಾಹದನಂತರ ಮತ್ತೆ ತಮ್ಮ ದಾರಿಯನ್ನು ತಾವು ಹಿಡಿದರು ; ನವವಧುವಿನ ಆಭರಣಗಳನ್ನು ಆಕೆಯು ನಿದ್ರೆಯಲ್ಲಿದ್ದಾಗ ಕಳಚಿಕೊಂಡು ಹೊರಟು ಹೋದರು.

ಆದರೆ ಕಲ್ಕತ್ತೆಗೆ ಮರಳುವ ವೇಳೆಗೆ ಅವರಿಗೆ ಭಾರಿ ಅಘಾತವೇ ಕಾದಿತ್ತು. ಅವರ ಗುರುಗಳು ಸತ್ತು ಹೋಗಿದ್ದರು.

ಸಂಗೀತ ಶಿಕ್ಷಣ ಮುಂದುವರಿಯಿತು

ಅನಂತರ ಸ್ವಾಮಿ ವಿವೇಕಾನಂದರ ಸಂಬಂಧಿಯೊಬ್ಬ ರಾದ ಹಾಬೂ ದತ್ತ ಎಂಬವರು ಅಲಾಉದ್ದೀನರನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು. ಹಾಬೂ ದತ್ತರು ಅನೇಕ ವಾದ್ಯಗಳಲ್ಲಿ ನಿಪುಣರಾಗಿದ್ದರು. ಅಲಾಉದ್ದೀನರು ಹೆಂಡತಿಯ ಆಭರಣಗಳನ್ನು ಮಾರಿ, ಒಂದು ವಯೊಲಿನ್ ಕೊಂಡರು. ಮುಂದೆ ಏಳು ವರ್ಷಗಳವರೆಗೆ ತಮ್ಮ ಈ ಎರಡನೆಯ ಗುರುಗಳ ಬಳಿ ಸತತ ಅಭ್ಯಾಸ ಮಾಡಿದರು. ವಯೊಲಿನ್ ಮತ್ತು ಕ್ಲಾರಿಯೋನೆಟ್ ವಾದ್ಯಗಳಲ್ಲಿ ಅಲಾಉದ್ದೀನರಿಗೆ ಬಹಳ ಸಾಮರ್ಥ್ಯ ಬಂದಿತು. ಇದಲ್ಲದೆ, ಹಾಬೂ ದತ್ತರಿಂದ ಅಲಾ ಉದ್ದೀನರು ಪಾಶ್ಚಾತ್ಯ ಬ್ಯಾಂಡ್ ಸಂಗೀತ, ಶಹನಾಯಿ ಗಳನ್ನು ಕಲಿತಿದ್ದಲ್ಲದೆ, ಅಪಾರವಾದ ಸಂಗೀತ ಶಾಸ್ತ್ರ ಜ್ಞಾನವನ್ನೂ ಪಡೆದರು.

ಹಾಬೂ ದತ್ತರು ಅಲಾಉದ್ದೀನರ ಅಭಾವ ಸ್ಥಿತಿ ಯನ್ನು ಕಂಡಿದ್ದರು. ಕಲ್ಕತ್ತಾ ನಗರದಲ್ಲೇ ಇದ್ದ ‘ಮಿನರ್ವಾ ಥಿಯೇಟರ್ಸ್’ನಲ್ಲಿ ತಿಂಗಳಿಗೆ ಹತ್ತು ರೂಪಾಯಿಗಳ ಸಂಬಳದಂತೆ ನೌಕರಿ ಕೊಡಿಸಿದರು. ಥಿಯೇಟರಿನ ಅನೇಕ ವಾದ್ಯಗಳನ್ನು ನುಡಿಸುವುದು, ಕಾರ್ಯಕ್ರಮಗಳಿಗೆ ಅನೇಕ ರಚನೆಗಳನ್ನು ತಯಾರಿಸಿ ಕೊಡುವುದು ಮುಂತಾದ ಕೆಲಸಗಳನ್ನು ಮೂರುವರ್ಷ ಅಲಾಉದ್ದೀನರು ಮಾಡಿದರು.

ಈ ವೇಳೆಯಲ್ಲಿ ಅಲಾಉದ್ದೀನರಿಗೆ ಪಾಶ್ಚಾತ್ಯ ಸಂಗೀತವನ್ನೂ ಚೆನ್ನಾಗಿ ಕಲಿಯುವ ಅವಕಾಶ ಒದಗಿತು. ಕಲ್ಕತ್ತೆಯ ಈಡನ್ ಗಾರ್ಡನ್‌ನಲ್ಲಿ ಒಂದು ಇಂಗ್ಲಿಷ್ ಬ್ಯಾಂಡ್ ನಡೆಯುತ್ತಿತ್ತು. ರಾಬರ್ಟ್ ಲೋಬೋ ಎಂಬವರು ಅದರ ಸಂಚಾಲಕರಾಗಿದ್ದರು. ಸಹೃದಯಿ ಯಾದ ಅವರ ಧರ್ಮಪತ್ನಿಯವರನ್ನು ತಮ್ಮ ವಯೊಲಿನ್ ವಾದನದಿಂದ ಅಲಾಉದ್ದೀನರು ಮೆಚ್ಚಿಸಿದ್ದರು. ಆಕೆ ವಯೊಲಿನ್‌ನಲ್ಲಿ ಪಾಶ್ಚಾತ್ಯ ಸಂಗೀತವನ್ನು ನುಡಿಸಲು ಅಲಾಉದ್ದೀನರಿಗೆ ಕಲಿಸಿದರು. ಲೋಬೋ ಪಾಶ್ಚಾತ್ಯ ಸ್ವರ ಪದ್ಧತಿಯನ್ನು ಕಲಿಸಿದರು. ಮಿಕ್ಕ ವೇಳೆಯಲ್ಲಿ ಅಲಾಉದ್ದೀನರು ಅಲ್ಲಿನ ಶಹನಾಯೀ ವಿದ್ವಾಂಸರೊಬ್ಬ ರಿಂದ ಶಹನಾಯೀ ವಾದನ ಮತ್ತು ಟಿಕಾರಾ ವಾದ್ಯ ಗಳನ್ನು ಕಲಿತರು.

ಸಂಗೀತ ಸಾಧನೆಗಾಗಿಯೇ ಜೀವನ ಮುಡಿಪಾಗಿ ಡಲು ಅಲಾಉದ್ದೀನರು ಥಿಯೇಟರಿನ ಕೆಲಸವನ್ನು ಬಿಟ್ಟರು.

‘ತಾವೇ ನನಗೆ ಗುರು’

ಆಗ ದಸರೆಯ ವೇಳೆ. ಕಲ್ಕತ್ತೆಯ ಬಳಿ ಮುಕ್ತಾ ಗಾಛಾ ಎಂಬ ಸ್ಥಳವಿದೆ. ಅಲ್ಲಿನ ಜಮೀನ್ದಾರರಾದ ಜಗತ್ ಕಿಶೋರ ಆಚಾರ್ಯರು ದುರ್ಗಾಷ್ಟಮಿಯನ್ನು ವೈಭವದಿಂದ ಆಚರಿಸುತ್ತಿದ್ದರು. ಈ ಬಗ್ಗೆ ಕೇಳಿದ್ದ ಅಲಾ ಉದ್ದೀನರು ನೇರವಾಗಿ ಮುಕ್ತಾಗಾಛಾ ದರ್ಬಾರಿಗೆ ಬಂದು ತಲುಪಿದರು. ದುರ್ಗಾಷ್ಟಮಿಯಂದು ಮುಂಜಾನೆ ಎಂಟು ಗಂಟೆಗೆ ವಿದ್ವಜ್ಜನ ಸಭೆ ದರ್ಬಾರಿನಲ್ಲಿ ಸೇರಿತ್ತು. ಅಂದು ಮುಂಜಾನೆ ಉಸ್ತಾದ್ ಅಹಮದ್ ಅಲೀ ಖಾನ್ ಎಂಬವರ ಅದ್ಭುತವಾದ ಸರೋದ್ ವಾದನವು ನಡೆಯಿತು. ಖಾನ್ ಸಾಹೇಬರು ಬಾರಿಸಿದ ‘ದರ್ಬಾರಿ ತೋಡಿ’ ಎಂಬ ರಾಗವು ಅಲಾಉದ್ದೀನರ ಹೃದಯ ವನ್ನೇ ಭೇದಿಸಿತು. ವಾದನ ಮುಗಿದದ್ದೇ ತಡ ಅಲಾ ಉದ್ದೀನರು ಖಾನ್ ಸಾಹೇಬರ ಬಳಿಗೆ ಓಡಿ, ಅವರ ಚರಣಗಳನ್ನು ಹಿಡಿದುಕೊಂಡು ಅಳಲಾರಂಭಿಸಿದರು.

“ತಾವೇ ನನಗೆ ಈಗ ಗುರುಗಳು. ತಾಯಿ ಸರಸ್ವತಿ ನನಗೆ ಇಂದು ಗುರುದರ್ಶನವನ್ನು ಮಾಡಿಸಿದ್ದಾಳೆ. ದಯವಿಟ್ಟು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ. ನಾನು ತಮ್ಮ  ಮನೆಯ ಅಡಿಗೆ ಕೆಲಸ, ಗುಡಿಸುವ ಕೆಲಸ ಮುಂತಾದ ಚಾಕರಿಗಳನ್ನೆಲ್ಲಾ ಮಾಡುತ್ತೇನೆ” ಎಂದು ಅಳುತ್ತಲೇ ಬಿನ್ನವಿಸಿಕೊಂಡರು. ಇಡೀ ವಿದ್ವಜ್ಜನ ಸಭೆ ಅವರ ಬೇಡಿಕೆಯನ್ನು ಅನುಮೋದಿಸಿತು. ಆಚಾರ್ಯರೂ, “ಹೌದು, ಈತನನ್ನು ತಮ್ಮ ಶಿಷ್ಯನನ್ನಾಗಿ ಮಾಡಿಕೊಳ್ಳಿ” ಎಂದು ಖಾನ್ ಸಾಹೇಬರಿಗೆ ಹೇಳಿದರು. ಪರಿಣಾಮ ವಾಗಿ ಖಾನ್ ಸಾಹೇಬರು ಕೂಡಲೆ ಅಲಾಉದ್ದೀನರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳಲು ಒಪ್ಪಿ ಆಶೀರ್ವದಿಸಿದರು. ಆಚಾರ್ಯರು ಒಂದು ಸರೋದ್ ವಾದ್ಯವನ್ನು ಅಲಾ ಉದ್ದೀನರಿಗೆ ಆ ಸ್ಥಳದಲ್ಲೇ ಉಡುಗೊರೆಯಾಗಿ ಕೊಟ್ಟರು.

ಕೇಳಿಯೇ ಕಲಿತದ್ದು

ಅಲಾಉದ್ದೀನರಿಗೆ ಗುರುಗಳೊಡನೆ ಕಾರ್ಯಕ್ರಮ ದಲ್ಲಿ ತಬಲಾ ಬಾರಿಸುವುದು, ಮನೆ ಕೆಲಸ, ಅಡಿಗೆ ಮಾಡುವುದು ಹಾಗೂ ಗುರುಗಳ ಹಣದ ವ್ಯವಹಾರ ನೋಡಿಕೊಳ್ಳುವುದು – ಇವುಗಳಲ್ಲೇ ಹೆಚ್ಚು ವೇಳೆ ವ್ಯಯ ವಾಗುತ್ತಿತ್ತು. ಅವರು ಉತ್ತಮವಾಗಿ ವಯೊಲಿನ್ ನುಡಿಸುತ್ತಿದ್ದುದರಿಂದ ಅಲ್ಲಲ್ಲಿ ಅಷ್ಟಿಷ್ಟು ಹಣವನ್ನು ಸಂಪಾದಿಸುತ್ತಿದ್ದರೂ ಆ ಹಣವನ್ನೂ ಗುರುಗಳ ಡಬ್ಬಿಗೇ ಹಾಕುತ್ತಿದ್ದರು.

ಗುರುಗಳು ಸರೋದ್ ವಾದನ ಪದ್ಧತಿಯನ್ನು ಹೇಳಿಕೊಟ್ಟರೂ ಹೆಚ್ಚಿನ ವಿದ್ಯೆಯನ್ನು ಹೇಳಿಕೊಡಲಿಲ್ಲ. ಒಂದೆಡೆ ಗುರುಗಳ ವಾದನವನ್ನು ಕೇಳಿಕೇಳಿ ಅಲಾ ಉದ್ದೀನರ ಅಸಾಮಾನ್ಯ ವಾದನಪ್ರತಿಭೆ ಜಾಗೃತವಾಗಿತ್ತು.   ಮತ್ತೊಂದೆಡೆ ಕೇಳಿದುದನ್ನು ನುಡಿಸಲೇಬೇಕೆಂಬ ತಡೆಯಲಾರದ ಆಸೆಯೂ ಅವರನ್ನು ಕಾಡುತ್ತಿತ್ತು. ಕೊನೆಗೆ ಗತ್ಯಂತರವಿಲ್ಲದೆ ಕೇಳಿಕೇಳಿಯೇ ಬಾರಿಸಲು ಕಲಿತು ಸರೋದ್ ವಾದನದಲ್ಲಿ ಚೆನ್ನಾಗಿ ಪಳಗಿಯೇ ಬಿಟ್ಟರು. ಉಸ್ತಾದರು ಹೇಳಿಕೊಡದಿದ್ದರೂ ಅವರ ವಾದನಕ್ಕೂ ಅಲಾಉದ್ದೀನರ ವಾದನಕ್ಕೂ ವ್ಯತ್ಯಾಸವೇ ಇರುತ್ತಿರಲಿಲ್ಲ.

ಹೇಳಿಕೊಡದುದನ್ನು ಬಾರಿಸಬಾರದೆಂದು ಗುರುಗಳು ಅಲಾಉದ್ದೀನರಿಗೆ ಕಟ್ಟಪ್ಪಣೆ ಮಾಡಿದ್ದರು. ಒಮ್ಮೆ ಗುರುಗಳು ಮನೆಗೆ ಮರಳಿದಾಗ ಅಲಾಉದ್ದೀನರು ಕೊಠಡಿಯೊಳಗೆ ಬಾಗಿಲು ಹಾಕಿಕೊಂಡು ‘ದರ್ಬಾರಿ ತೋಡಿ’ ರಾಗವನ್ನು ಗುರುಗಳಂತೆಯೇ ಬಾರಿಸುತ್ತಿದ್ದರು. ಗುರುಗಳು ಅದನ್ನು ಕೇಳಿ ಕೋಪದಿಂದ ಕೆಂಡವಾದರು. ಕೊಠಡಿಯ ಬಾಗಿಲನ್ನು ಬಲವಾಗಿ ಬಡಿದು ತೆಗೆಸಿ, “ನೀನು ನನ್ನ ವಿದ್ಯೆಯನ್ನೆಲ್ಲಾ ದರೋಡೆ ಮಾಡುತ್ತಿದ್ದೀಯೆ” ಎಂದು ಕೂಗಿದರು. ಅಲಾಉದ್ದೀನರು ಮರು ಮಾತಾಡಲಿಲ್ಲ. ಕೇವಲ ಕ್ಷಮೆ ಬೇಡಿದರು.

ಪ್ರಾಮಾಣಿಕತೆ

ಕೆಲವೇ ದಿನಗಳನಂತರ ಉಸ್ತಾದ್ ಅಹಮದ್ ಅಲೀ ಖಾನರು ತಮ್ಮ ಸ್ವಸ್ಥಳವಾದ ರಾಮಪುರಕ್ಕೆ ತಮ್ಮ ಶಿಷ್ಯನನ್ನು ಕರೆದುಕೊಂಡು ಹೋಗಿ ತಮ್ಮ ತಂದೆಯವರಿಗೆ ಅಲಾಉದ್ದೀನರನ್ನು ಒಪ್ಪಿಸಿಬಿಟ್ಟರು. ಅವರ ತಂದೆ ಯವರೂ ಉಸ್ತಾದರಾಗಿದ್ದು ರಾಮಪುರದ ರಾಜ ದರ್ಬಾರಿನಲ್ಲಿ ಸಂಗೀತಗಾರರಾಗಿದ್ದರು. ರಾಮಪುರಕ್ಕೆ ಗುರುಗಳ ತಂದೆಯವರ ಮನೆಗೆ ಬಂದೊಡನೆಯೇ ಅಲಾಉದ್ದೀನರು ತಾವು ಆವರೆಗೆ ಶೇಖರಿಸಿಟ್ಟಿದ್ದ ಹಣವನ್ನೆಲ್ಲಾ ಪ್ರಾಮಾಣಿಕವಾಗಿ ಅವರ ತಂದೆಯವರಿಗೆ ಒಪ್ಪಿಸಿಬಿಟ್ಟರು. ಅಲಾಉದ್ದೀನರು ಒಪ್ಪಿಸಿದ ಹಣದ ಪೆಟ್ಟಿಗೆಯಲ್ಲಿ ಒಟ್ಟು ಹತ್ತು ಸಾವಿರ ರೂಪಾಯಿಗಳಿದ್ದವು. ಉಸ್ತಾದ್ ಅಹಮದ್ ಅಲೀ ಖಾನ್ ಮತ್ತು ಅವರ ತಂದೆತಾಯಿಗಳಿಗೂ ಮಹದಾಶ್ಚರ್ಯವಾಯಿತು.

“ನಿನ್ನಲ್ಲಿ ಇಷ್ಟು ಹಣ ಹೇಗೆ ಸೇರಿತು ?” ಎಂದು ಅವರು ಅಲಾಉದ್ದೀನರನ್ನು ಕೇಳಿದರು. ಅಲಾ ಉದ್ದೀನರು, “ಗುರುಗಳೇ, ತಾವು ಈವರೆಗೆ ಮನೆ ಖರ್ಚಿಗೆಂದು ಕೊಟ್ಟಿದ್ದ ಹಣವನ್ನೆಲ್ಲಾ ಕೂಡಿಸಿದ್ದೇನೆ. ಈ ಹಣಕ್ಕೆ ನಾನು ಸಂಪಾದನೆ ಮಾಡಿದ್ದ ಅಷ್ಟಿಷ್ಟು ಹಣವನ್ನೂ ಸೇರಿಸಿದ್ದೇನೆ. ತಮ್ಮ ತಂದೆಯವರ ಊರಿಗೆ ಬರುವಾಗ ದಾರಿಯಲ್ಲಿ ಪಟನಾದ ನವಾಬರು ನನ್ನ ವಯೊಲಿನ್ ವಾದನವನ್ನು ಮೆಚ್ಚಿ ನನಗೆ ನೀಡಿದ್ದ ಒಂದು ಸಾವಿರ ರೂಪಾಯಿಗಳನ್ನೂ ಸೇರಿಸಿದ್ದೇನೆ.” ಎಂದರು.

‘ತಾವು ಒಂದೇ ಗಂಟೆಯಲ್ಲಿ ದೇವರನ್ನು ತಲಪಿದಿರಿ.’

ಅಹಮದ್ ಅಲೀ ಖಾನರು ಇದನ್ನು ಕೇಳಿ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಅಲಾಉದ್ದೀನರಿಗೆ, “ನನ್ನ ಇತರ ಶಿಷ್ಯರು ಕೊಟ್ಟ ಹಣವೆಲ್ಲಾ ಊಟ ಉಪಚಾರಗಳಿಗೇ ಖರ್ಚಾಯಿತೆಂದು ಹೇಳಿ ಹಣದ ಹೆಚ್ಚು ಭಾಗವನ್ನು ಲಪಟಾಯಿಸುತ್ತಿದ್ದರು. ನೀನು ಖರ್ಚಿಗೆಂದೇ ಕೊಟ್ಟ ಹಣದಲ್ಲಿ ಹೆಚ್ಚಿನ ಭಾಗವನ್ನು ಉಳಿಸಿದ್ದೇ ಅಲ್ಲದೆ ಅದೆಲ್ಲವನ್ನೂ ಮತ್ತೆ ನಮಗೇ ಕೊಟ್ಟಿದ್ದೀಯೆ. ಭಲೇ” ಎಂದರು. ಮನೆಯವರೆಲ್ಲ ಅಲಾಉದ್ದೀನರ ಗುಣವನ್ನು ಕೊಂಡಾಡಿದರು.

ಮತ್ತೆ ಗುರುವಿನ ಅನ್ವೇಷಣೆ

ಇಷ್ಟಾದರೂ ಅವರ ಗುರುಗಳ ತಂದೆಯವರು ಬಹಳ ಕಡಿಮೆ ಪಾಠವನ್ನು ಹೇಳಿಕೊಟ್ಟರು. ಪಟನಾದ ನವಾಬರು ಅಲಾಉದ್ದೀನರ ವಯೊಲಿನ್ ವಾದನವನ್ನು ಕೇಳಿ, ‘ಇಂತಹ ವಯೊಲಿನ್ ವಾದನವನ್ನು ನಾನು ಕೇಳಿಯೇ ಇರಲಿಲ್ಲ’ ಎಂದಿದ್ದರು. ಆದ್ದರಿಂದ ಸ್ಪರ್ಧೆಯ ಭಯದಿಂದಾಗಿ ರಾಮಪುರದಲ್ಲಿ ಗುರುಗಳ ತಂದೆಯವರೂ ಇದ್ದಕ್ಕಿದ್ದಂತೆ ಪಾಠವನ್ನು ನಿಲ್ಲಿಸಿಬಿಟ್ಟರು. “ನಾನು ಹೇಳಿಕೊಟ್ಟದ್ದು ಮುಗಿಯಿತು. ಬೇರೆಲ್ಲಾದರೂ ಹೇಳಿಸಿಕೋ” ಎಂದುಬಿಟ್ಟರು. ಇದರಿಂದ ಅವರ ಮನೆಯಲ್ಲಿ ಸಿಕ್ಕುತ್ತಿದ್ದ ಊಟವೂ ತಪ್ಪಿಹೋಯಿತು.

ಅಲಾಉದ್ದೀನರು ಅಲ್ಲಿಇಲ್ಲಿ ಊಟ ಮಾಡುತ್ತಾ ಹೊಸ ಗುರುಗಳನ್ನು ಹುಡುಕಲಾರಂಭಿಸಿದರು ಆದರೆ ಯಾರೂ ಉಚಿತವಾಗಿ ಪಾಠ ಹೇಳಿಕೊಡಲು ಸಿದ್ಧರಿರ ಲಿಲ್ಲ. ತಿಂಗಳಿಗೆ ನೂರು ರೂಪಾಯಿಗಳ ಸಂಭಾವನೆ ನೀಡಿದರೆ ಮಾತ್ರ ಪಾಠ ಹೇಳಿಕೊಡುತ್ತೇವೆ ಎಂದರು. ಅಲಾಉದ್ದೀನರ ಬಳಿ ಹಣವೆಲ್ಲಿ ? ಆದರೆ ಹಣ ತೆಗೆದು ಕೊಂಡು ಅವರು ಹೇಳಿಕೊಡುತ್ತಿದ್ದ ವಿದ್ಯೆಯೂ ಅಷ್ಟರಲ್ಲೇ ಇತ್ತು. ಶಿಕ್ಷಣವೂ ಇಲ್ಲ. ಹೊತ್ತಿಗೆ ಸರಿಯಾಗಿ ಊಟವೂ ಇಲ್ಲ. ಮೂರು ತಿಂಗಳುಗಳು ಹೀಗೆಯೇ ಕಳೆದವು.

ಆತ್ಮಹತ್ಯೆಯ ಪ್ರಯತ್ನ

ಅಲಾಉದ್ದೀನರಿಗೆ ಜೀವನದಲ್ಲಿ ದಿನೇದಿನೇ ನಿರಾಶೆ ಹೆಚ್ಚಾಗುತ್ತಿತ್ತು. ಕೊನೆಗೊಂದು ದಿನ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು. ಎಲ್ಲಿಯೋ ಎರಡು ತೊಲ ಅಫೀಮನ್ನು ಪಡೆದು ಕೊನೆಯ ಪ್ರಾರ್ಥನೆಗೆಂದು ಮಸೀದಿಗೆ ಹೋದರು. ಆದರೆ ಮಸೀದಿಯ ಮೌಲ್ವಿ ಅಲಾಉದ್ದೀನರ ಮುಖದ ಚಹರೆಯಲ್ಲೇ ಅವರ ದುಃಖ ವನ್ನು ಗುರುತಿಸಿದರು. ಅವರಿಂದ ಮೌಲ್ವಿಗಳು ಎಲ್ಲವನ್ನೂ ಕೇಳಿ ತಿಳಿದುಕೊಂಡರು. ಅಲಾಉದ್ದೀನರಿಗೆ ಧೈರ್ಯ ಹೇಳಿದರು. ರಾಮಪುರದ ನವಾಬರಿಗೆ ಅಲಾಉದ್ದೀನರ ಪರವಾಗಿ ಮೌಲ್ವಿ ಸಾಹೇಬರು ಒಂದು ಅರ್ಜಿ ಬರೆದು ಕೊಟ್ಟರು. ಅರ್ಜಿ ಹೀಗಿತ್ತು : ‘ನವಾಬ ಬಹದೂರರಲ್ಲಿ ನನ್ನ ಸವಿನಯ ವಿನಂತಿಗಳು. ನಾನು ತಿಂಗಳುಗಟ್ಟಲೆ ಯಿಂದ ಉಸ್ತಾದ್ ವಜೀರ ಖಾನರ ಶಿಷ್ಯನಾಗಲು ಪ್ರಯತ್ನಿಸುತ್ತಿದ್ದೇನೆ, ಸಾಧ್ಯವಾಗುತ್ತಿಲ್ಲ. ತಾವು ಖಾನ್ ಸಾಹೇಬರಿಗೆ ನನ್ನನ್ನು ಶಿಷ್ಯನನ್ನಾಗಿ ತೆಗೆದುಕೊಳ್ಳುವ ವ್ಯವಸ್ಥೆ ಮಾಡದಿದ್ದರೆ ನಾನು ಅಫೀಮು ತಿಂದು ಸಾಯುತ್ತೇನೆ. ಆಫೀಮು ನನ್ನ ಜೇಬಿನಲ್ಲಿದೆ.’

ನವಾಬ್ ಹಮೀದ್ ಅಲೀ ಖಾನರನ್ನು ಕಾಣಲು ಅಲಾಉದ್ದೀನರು ಮತ್ತೂ ಸ್ವಲ್ಪ ಕಾಲ ಕಾಯ ಬೇಕಾಯಿತು. ಒಮ್ಮೆ ಉಸ್ತಾದ್ ವಜೀರ್ ಖಾನರು ಬರೆದ ನಾಟಕವನ್ನು ನೋಡಲು ನವಾಬರು ಮೋಟಾರಿನಲ್ಲಿ ಥಿಯೇಟರಿಗೆ ಹೊರಟಿದ್ದರು. ಅಲಾಉದ್ದೀನರು ಆ ಮೋಟಾರನ್ನು ದಾರಿಯಲ್ಲಿ ಅಡ್ಡಗಟ್ಟಿದರು. ಪೋಲೀಸನು ನವಾಬರ ಸಮ್ಮುಖದಲ್ಲಿ ಅವರನ್ನು ಹಾಜರುಪಡಿಸಿದನು. ಅಲಾಉದ್ದೀನರು ಅಲ್ಲೇ ತಮ್ಮ ಅರ್ಜಿಯನ್ನು ನವಾಬರಿಗೆ ಸಲ್ಲಿಸಿದರು. ಅವರು ಅರ್ಜಿಯನ್ನು ನೋಡಿ ಮುಗುಳ್ನಕ್ಕರು.

ನಾಟಕದ ಕಾರ್ಯಕ್ರಮ ರದ್ದಾಯಿತು. ನವಾಬರು ತಮ್ಮ ಮಹಲಿಗೆ ಹಿಂದಿರುಗಿ ಅಲಾಉದ್ದೀನರಿಗೆ ಹೇಳಿ ಕಳುಹಿಸಿದರು. ಅವರ ಕಥೆಯನ್ನೆಲ್ಲ ಕೇಳಿ ತಿಳಿದರು.

“ನಿನ್ನ ಬಳಿ ಈಗ ಯಾವಯಾವ ವಾದ್ಯಗಳಿವೆ?” ನವಾಬರು ಕೇಳಿದರು.

“ವಯೊಲಿನ್ ಮತ್ತು ಸರೋದ್.”

“ಅವುಗಳನ್ನು ತೆಗೆದುಕೊಂಡು ಬಾ, ಹೋಗು.”

ನವಾಬರ ಮೋಟಾರು ಅಲಾಉದ್ದೀನರ ಜೋಪ ಡಿಗೇ ಬಂತು. ನವಾಬರ ಸಮ್ಮುಖದಲ್ಲಿ ಅಲಾಉದ್ದೀನರ ಗಾಯನ ವಾದನಗಳೆರಡೂ ನಡೆದವು. ನವಾಬರು ಉಸ್ತಾದ್ ವಜೀರ್ ಖಾನರ ಪ್ರಧಾನ ಶಿಷ್ಯರು. ಸ್ವತಃ ಒಳ್ಳೆಯ ಸಂಗೀತಗಾರರು. ಅಲಾಉದ್ದೀನರ ಸಂಗೀತಾ ಭ್ಯಾಸವನ್ನು ನವಾಬರು ಸಂಪೂರ್ಣ ಶಾಸ್ತ್ರಸಮ್ಮತವೆಂದು ಒಪ್ಪಿಕೊಂಡರು.

ವಜೀರ್ ಖಾನರು ಬಂದನಂತರ ನವಾಬರು ಈ ಅಸಾಮಾನ್ಯ ಪ್ರತಿಭಾಶಾಲಿ ವಿದ್ಯಾರ್ಥಿಯ ವಿಚಾರವನ್ನು ಅವರಿಗೆ ಇದ್ದುದಿದ್ದಂತೆ ನಿವೇದಿಸಿದರು. “ವಿದ್ಯೆ ಸರಿಯಾಗಿ ಕಲಿತಿದ್ದಾನೆ. ತಾವು ಇವನನ್ನು ಶಿಷ್ಯರನ್ನಾಗಿ ಸ್ವೀಕರಿಸಿ” ಎಂದು ಶಿಫಾರಸು ಮಾಡಿದರು. ವಜೀರ್ ಖಾನರು ಒಪ್ಪಿದರು. ಅವರು ಶಿಷ್ಯರಾಗುವಾಗ ಅಲಾಉದ್ದೀನರು ಪ್ರಮಾಣ ಮಾಡಬೇಕಾಗಿತ್ತು. ಅಲಾಉದ್ದೀನರ ಶಿಷ್ಯತ್ವ-ಪ್ರತಿಜ್ಞೆ ಹೀಗಿತ್ತು :

‘ಯೋಗ್ಯನಲ್ಲದವನಿಗೆ ನನ್ನ ವಿದ್ಯೆ ದಾನ ಮಾಡು ವುದಿಲ್ಲ. ಕೆಟ್ಟವರ ಸಹವಾಸಕ್ಕೆ ಬೀಳುವುದಿಲ್ಲ. ವಿದ್ಯೆಯನ್ನು  ಮಾರಿ ಜೀವನ ಮಾಡುವುದಿಲ್ಲ. ಹೆಂಡತಿಗೆ ಪಾಠ ಹೇಳಿ ಕೊಡುವುದಿಲ್ಲ.’

ಅಲಾಉದ್ದೀನ್ ಖಾನರನ್ನು ಉಸ್ತಾದರು ತಮ್ಮ ಶಾಗಿರ್ದ್(ಅಚ್ಚುಮೆಚ್ಚಿನ ಪ್ರಮುಖ ಶಿಷ್ಯ)ರನ್ನಾಗಿ ಮಾಡಿಕೊಂಡವು.

ಶಿಷ್ಯನನ್ನು ಮರೆತ ಗುರು

ಇದರನಂತರ ತಮ್ಮ ಹೊಸ ಶಿಷ್ಯರನ್ನು ವಜೀರ್ ಖಾನರು ಮರೆತೇ ಬಿಟ್ಟಿದ್ದರು. ಮುಂದೆ ಎರಡೂವರೆ ವರ್ಷಗಳವರೆಗೆ ಅಲಾಉದ್ದೀನರು ಗುರುಸೇವೆಯಲ್ಲೇ ಕಾಲ ಕಳೆದರು. ರಾತ್ರಿ ಹೊತ್ತು ಅಭ್ಯಾಸ ಮಾಡುತ್ತಿದ್ದರು. ರಾಮಪುರದ ಥಿಯೇಟರಿನಲ್ಲಿ ನವಾಬರ ದೊಡ್ಡ ವಾದ್ಯಮೇಳವಿತ್ತು. ಈ ವಾದ್ಯಮೇಳದ ಅನೇಕ ವಿದ್ವಾಂಸರಿಂದ ಸಂಗೀತದ ವಿವಿಧಾಂಗಗಳಲ್ಲಿ ಅಲಾ ಉದ್ದೀನ್ ಖಾನರು ಶಿಕ್ಷಣವನ್ನು ಪಡೆದರು. ವಾದ್ಯ ಮೇಳಕ್ಕೆ ಅವರು ಅನೇಕ ರಚನೆಗಳನ್ನೂ ರಚಿಸಿ ಕೊಡುತ್ತಿದ್ದರು. ಈ ರಚನೆಗಳು ಎಲ್ಲ ವಿದ್ವಾಂಸರ ಪ್ರಶಂಸೆಗೂ ಪಾತ್ರವಾಗುತ್ತಿದ್ದವು. ಅಲ್ಲದೆ, ರಾಮಪುರದ ವಿದ್ವಾಂಸರೆಲ್ಲರೂ ಅಲಾಉದ್ದೀನರ ಮನೆಯಲ್ಲಿ ಪ್ರತಿದಿನ ಸಂಜೆ ವೇಳೆಗೆ ಸೇರುತ್ತಿದ್ದರು. ಆಗಲೂ ವಿದ್ವಾಂಸರಿಂದ ಅಲಾಉದ್ದೀನ್ ಖಾನ್ ಪಾಠ ಹೇಳಿಸಿಕೊಳ್ಳುತ್ತಿದ್ದರು.

ಈ ಮಧ್ಯೆ ಅಲಾಉದ್ದೀನರ ಪತ್ನಿ ಆತ್ಮಹತ್ಯೆಯ ಪ್ರಯತ್ನ ಮಾಡಿದರು. ಈ ಬಗ್ಗೆ ಅವರ ಗುರುಗಳಾದ ವಜೀರ್ ಖಾನರಿಗೆ ತಂತಿ ವರ್ತಮಾನ ಬಂದಿತು. ಆಗ ಇದಕ್ಕಿದ್ದಂತೆ ವಜೀರ್ ಖಾನರಿಗೆ ಅಲಾಉದ್ದೀನರ ಜ್ಞಾಪಕ ಬಂದಿತು.

ಎರಡೂವರೆ ವರ್ಷಗಳು ವ್ಯರ್ಥವಾದುವಲ್ಲಾ ಎಂದು ಉಸ್ತಾದ್ ವಜೀರ್ ಖಾನರು ಬಹಳ ದುಃಖ ಪಟ್ಟರು. ಅಲಾಉದ್ದೀನ್ ಖಾನರಿಗೆ, “ನಿನಗೆ ಬಹಳ ಅನ್ಯಾಯವಾಯಿತು. ನೀನು ಎಂದು ಮಹಾನ್ ಕಲಾ ವಿದನಾಗುವಿಯೋ ಅಂದೇ ನಿನಗಾಗಿರುವ ಅನ್ಯಾಯವನ್ನು ಸರಿಪಡಿಸಿದಂತಾಗುವುದು. ನಿನಗೆ ನಮ್ಮ ಪರಂಪರೆಯ ವಿದ್ಯೆಯೆಲ್ಲವನ್ನೂ ಧಾರೆಯೆರೆಯುತ್ತೇನೆ. ವೀಣೆಯನ್ನು ಕಲಿಯುವೆಯಾದರೆ ಅದನ್ನೂ ಕಲಿಸುತ್ತೇನೆ” ಎಂದರು. “ನಾನು ವೀಣೆಯನ್ನು ಕಲಿಯುವುದಿಲ್ಲ. ಸರೋದನ್ನೇ ಕಲಿಯುತ್ತೇನೆ. ತಮಗೆ ತೃಪ್ತಿಯಾಗುವಂತೆ ನಾನು ಸರೋದನ್ನು ಕಲಿತ ಮೇಲೆ ರಬಾಬ್ ಹಾಗೂ ಸುರ ಶೃಂಗಾರ ವಾದ್ಯಗಳನ್ನು ದಯವಿಟ್ಟು ಕಲಿಸಿರಿ” ಎಂದರು.

ಮುಂದೆ ಅಖಂಡವಾಗಿ ಹದಿನೆಂಟು ವರ್ಷಗಳ ವರೆಗೆ ಉಸ್ತಾದ್ ವಜೀರ್ ಖಾನರು ಅಲಾಉದ್ದೀನರಿಗೆ ಪಾಠ ಹೇಳಿದರು. ವೀಣೆಯನ್ನುಳಿದು ತಮ್ಮ ವಿದ್ಯೆಯನ್ನೆಲ್ಲಾ ಅವರಿಗೆ ಧಾರೆಯೆರೆದರು. ತಮ್ಮ ಮಕ್ಕಳಿಂದಲೂ ಶಿಕ್ಷಣವನ್ನು ಕೊಡಿಸಿದರು. ಈ ಅಖಂಡ ಸಂಗೀತ ಸಾಧನೆಯ ಅನಂತರ ಗುರುಗಳು,

“ದೇಶದ ವಿದ್ವಾಂಸರಿಗಳಿಗೆಲ್ಲಾ ನಿನ್ನ ವಿದ್ಯೆ ತೋರಿಸು. ಅವರಲ್ಲಿ ಹೆಚ್ಚಿನ ವಿದ್ವತ್ತಿದ್ದರೆ ಅವರಿಂದ ಅದನ್ನು ಕಲಿ” ಎಂದರು.

ದೇಶ ಸಂಚಾರ

ಗುರುಗಳ ಆದೇಶದಂತೆ ಅಲಾಉದ್ದೀನ್ ಖಾನರು ಮೊದಲು ಕಲ್ಕತ್ತೆಗೆ ಬಂದರು. ಆ ಮಹಾ ನಗರದಲ್ಲಿ ಮೊದಲು ಯಾರೂ ಅವರನ್ನು ಮಾತನಾಡಿಸಲಿಲ್ಲ. ಆದರೆ ನಾಲ್ಕು ಗಂಟೆಗಳ ಅವರ ಪ್ರಚಂಡ, ಮೈನವಿರೇಳಿಸುವ ಸರೋದ್ ವಾದನದಿಂದ ವಿದ್ವತ್‌ಸಭೆ ದಂಗಾಗಿ ಹೋಯಿತು. ವಿದ್ವಾಂಸರು ಹೊಗಳಿದರು.

ಮುಂದೆ ಕಲ್ಕತ್ತೆಯ ಬಳಿ ಭವಾನಿಪುರಕ್ಕೆ ಬರಲು ಆಮಂತ್ರಣ ಬಂದಿತು. ಆ ಸ್ಥಳದಲ್ಲಿ ಪ್ರಸಿದ್ಧರಾದ ಮಹಾನ್ ವಿದ್ವಾಂಸರಿದ್ದರು. ಅಲಾಉದ್ದೀನರತ್ತ ಯಾರೂ ತಿರುಗಿಯೂ ನೋಡಲಿಲ್ಲ. ಆದರೆ ಅಲಾಉದ್ದೀನ್ ಖಾನರು ವೇದಿಕೆಯ ಮೇಲೆ ಬಂದು ಸರೋದ್ ವಾದನವನ್ನು ನುಡಿಸಲು ಆರಂಭಿಸಿದ್ದೇ ತಡ ಜನರೆಲ್ಲಾ ಸ್ತಬ್ಧರಾದರು. ಅರ್ಧ ಗಂಟೆಯಷ್ಟು ಕಾಲ ವಾದನ ನಡೆದಿತ್ತು. ಇಡೀ ಶ್ರೋತೃವೃಂದ ಸಂತೋಷದಿಂದ ಮೈಮರೆಯಿತು.

ಮೂರು ಗಂಟೆಗಳವರೆಗೆ ತಬಲಾ ‘ಸಾಥಿ’ ಇಲ್ಲದೆ ಅವರ ವಾದನ ನಡೆಯಿತು. ಅನಂತರ ‘ಮಹಾನ್ ವಿದ್ವಾಂಸ’ ಎಂಬ ಹೆಸರು ಪಡೆದಿದ್ದ ದರ್ಶನಸಿಂಹರು ಸಾಥಿಗಾಗಿ ಕುಳಿತರು. ಆದರೆ ಅಲಾ ಉದ್ದೀನ್ ಖಾನರೊಡನೆ ಅವರಿಗೆ ಸಾರಥಿ ಮಾಡಲಾಗ ಲಿಲ್ಲ ; ಅರ್ಧ ಗಂಟೆಗೆ ಅವರು ಸುಸ್ತಾದರು. ಒಬ್ಬರ ನಂತರ ಮತ್ತೊಬ್ಬರಂತೆ ಇನ್ನೂ ಅನೇಕ ತಬಲಾವಾದಕರು ಅವರೊಡನೆ ಸಾಥಿ ಮಾಡಲು ಕುಳಿತರು. ಯಾರಿಗೂ ಹೆಚ್ಚು ಸಾಧ್ಯವಾಗದೆ ಎಲ್ಲರ ಸ್ಥಿತಿಯೂ ದರ್ಶನ ಸಿಂಹರಂತೆಯೇ ಆಯಿತು. ಮತ್ತೂ ನಾಲ್ಕು ಗಂಟೆಗಳ ಕಾಲ ಕಛೇರಿ ನಡೆಯಿತು. ಕಚೇರಿ ಮುಗಿದನಂತರ ರಸಿಕ ಶ್ರೋತೃವೃಂದ ಒಕ್ಕೊರಲಿನಿಂದ ಅಲಾಉದ್ದೀನ್ ಖಾನರ ಜಯಘೋಷ ಮಾಡಿತು. ಹೊರಲಾರದಷ್ಟು ಹೂವಿನ ಹಾರಗಳು ಅವರ ಕೊರಳಿಗೆ ಬಿದ್ದವು.

ಮಹಾರಾಜರೇ ಶಿಷ್ಯ

ಇದೇ ಸಮಯದಲ್ಲಿ ಮೈಹರ್ ಸಂಸ್ಥಾನದ (ಈಗಿನ ಮಧ್ಯಪ್ರದೇಶದಲ್ಲಿದೆ) ಮಹಾರಾಜರ ಆಪ್ತರೊಬ್ಬರು ಭವಾನಿಪುರದಲ್ಲಿ ಅಲಾಉದ್ದೀನರ ಕಚೇರಿ ಕೇಳಿದರು. ಕೇಳಿದ್ದೇ ತಡ ತಮ್ಮ ಮಹಾರಾಜರಿಗೆ ತಂತಿಯನ್ನು ಕಳಿಸಿದರು:

‘ಇವರನ್ನು ಬಿಡಲಾಗದು.’

ತಂತಿ ಮಹಾರಾಜರಿಗೆ ಒಮ್ಮೆಲೆ ಅರ್ಥವಾಯಿತು. ಎಲ್ಲ ವಾದ್ಯಗಳನ್ನೂ ಬಾರಿಸಬಲ್ಲ ಹಾಗೂ ಗಾಯನ ವನ್ನೂ ಮಾಡಬಲ್ಲ ದಿಗ್ಗಜರೊಬ್ಬರಿಂದಲೇ ಸಂಗೀತವನ್ನು ಕಲಿಯಬೇಕೆಂಬ ಮಹಾತ್ವಾಕಾಂಕ್ಷೆ ಮಹಾರಾಜರಲ್ಲಿ ಪ್ರಬಲವಾಗಿತ್ತು. ತಂತಿಯನ್ನು ಕೊಟ್ಟ ಮಹಾರಾಜರ ಆಪ್ತರೊಬ್ಬರು ಅಲಾಉದ್ದಿನ್ ಖಾನರನ್ನು ಮಹಾರಾಜರ ಬಳಿಗೆ ಕರೆದುಕೊಂಡು ಬಂದೇಬಿಟ್ಟರು. ಬಹಳವಾಗಿ ಆದರಿಸಿದ ಮಹಾರಾಜರ ಸಮ್ಮುಖದಲ್ಲಿ ಸಿತಾರ್, ಸರೋದ್, ವಯೊಲಿನ್, ಶಹನಾಯೀ, ಎಸ್ರಾಜ್, ಮೃದಂಗ, ತಬಲಾ, ಪಖಾವಜ್ ಮುಂತಾದ ಐವತ್ತು ವಿವಿಧ ವಾದ್ಯಗಳನ್ನು ಅಲಾಉದ್ದೀನ್ ಖಾನರು ನುಡಿಸಿದರು. ಮಹಾರಾಜರು ಅವರ ಗಾಯನವನ್ನೂ ಕೇಳಿದರು. ಕೂಡಲೆ, “ತಾವೇ ನನ್ನ ಗುರುಗಳಾಗಬೇಕು” ಎಂದು ಮಹಾರಾಜರು ಪಟ್ಟು ಹಿಡಿದರು. ಅಲಾಉದ್ದೀನ್ ಖಾನರು, “ನಾನು ಇನ್ನೂ ಕೇವಲ ಶಿಷ್ಯ. ನಾನು ನನ್ನ ಗುರುಗಳಿಂದ ದೇಶಸಂಚಾರಕ್ಕೆ ಮಾತ್ರ ಆದೇಶವನ್ನು ಪಡೆದಿದ್ದೇನೆ. ಯಾರಿಗೂ ನಾನು ಗುರುವಾಗಲು ಸಾಧ್ಯವಿಲ್ಲ” ಎಂದರು. ಮಹಾರಾಜರಿಗೆ ಅವರು ಗುರುವಾಗಲು ಸಾಧ್ಯವಿಲ್ಲ” ಎಂದರು. ಮಹಾರಾಜರಿಗೆ ಅವರು ಗುರುವಾಗಲು ಉಸ್ತಾದ್ ವಜೀರ್ ಖಾನರ ಅಪ್ಪಣೆ ತರಲು ಮಹಾರಾಜರ ದಿವಾನರೇ ಸ್ವತಃ ರಾಮಪುರಕ್ಕೆ ಧಾವಿಸಿದರು. ವಜೀರ್ ಸಂತಸದಿಂದ ಅಪ್ಪಣೆ ನೀಡಿದರು. ಅನಂತರ ಅಲಾಉದ್ದೀನ್ ಖಾನರು ಕಠಿಣ ಶಿಸ್ತು ಹಾಗೂ ಸನ್ನಡತೆಗಳ ಕರಾರನ್ನು ಮಹಾ ರಾಜರ ಮುಂದೆ ಮಂಡಿಸಿದರು. ಎಲ್ಲದಕ್ಕೂ ತಲೆಬಾಗಿದ ಮಹಾರಾಜರು ಉಸ್ತಾದ್ ಅಲಾಉದ್ದೀನ್ ಖಾನರ ಪ್ರಪ್ರಥಮ ಶಿಷ್ಯರಾದರು.

ಅಂದು ಮೈಹರ್‌ಗೆ ಆಗಮಿಸಿದ್ದ ಬಾಬಾ ಉಸ್ತಾದ್ ಅಲಾಉದ್ದೀನ್ ಖಾನರು (ಪರಿಚಿತರು ‘ಬಾಬಾ’ ಎಂದೇ ಕರೆಯುತ್ತಿದ್ದರು) ತಮ್ಮ ಕೊನೆಯುಸಿರಿನ ತನಕ ಅಲ್ಲಿಯೇ ಉಳಿದರು. ಈ ವೇಳೆಯಲ್ಲಿ ಮಹಾರಾಜರಿಗೆ ೩೦ ವರ್ಷಗಳವರೆಗೆ ಕಂಠ ಹಾಗೂ ವಾದ್ಯ ಸಂಗೀತವನ್ನು ಕಲಿಸಿದರು.

‘ಮೈಹರ್ ಬ್ಯಾಂಡ್’

ಮೈಹರ್‌ಗೆ ಬಂದ ಸ್ವಲ್ಪ ಕಾಲದಲ್ಲೇ ಬಾಬಾ ಅವರು ಪುಟ್ಟ ಮಕ್ಕಳ ವಾದ್ಯವೃಂದವನ್ನು ನಿರ್ಮಾಣ ಮಾಡುವ ಸಂದರ್ಭ ಒದಗಿತು. ಪ್ರಥಮ ಮಹಾ ಯುದ್ಧದ (೧೯೧೪-೧೮) ಅನಂತರ ದೇಶದಾದ್ಯಂತ ಮೈಹರ್‌ನ ಅನೇಕ ಮಕ್ಕಳು ಅನಾಥರಾದರು. ಆ ಮಕ್ಕಳ ಹಸಿವಿನ ಹಾಹಾಕಾರವನ್ನು, ಎಳೆಯ ಕಂದಗಳ ಪ್ರಜ್ಞಾಹೀನ ಸ್ಥಿತಿಯನ್ನು ಸಹಿಸಲಾರದೆ ಮಹಾರಾಜರಿಗೆ ಎಲ್ಲವನ್ನೂ ಹೇಳಿದರು. ಮಹಾರಾಜರು ಎಲ್ಲ ಮಕ್ಕಳನ್ನೂ ಒಂದು ಬಂಗಲೆಯಲ್ಲಿಟ್ಟು, ಊಟ – ಉಪಚಾರಗಳ ವ್ಯವಸ್ಥೆ ಮಾಡಿದರು. ಈ ವೇಳೆಗೆ ಬಾಬಾ ಅವರ ಹೆಂಡತಿಯೂ ಮೈಹರ್‌ಗೆ ಬಂದಿದ್ದರು. ಇಬ್ಬರೂ ಈ ಅನಾಥ ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿದರು. ಸ್ವಲ್ಪ ಕಾಲದಲ್ಲಿ ಈ ಅನಾಥ ಮಕ್ಕಳ ವೃಂದ ಬಾಬಾ ಅವರ ಶಿಸ್ತಿನ ಗರಡಿಯಲ್ಲಿ ಪಳಗಿ ಅದ್ಭುತ ವಾದ್ಯವೃಂದವಾಗಿ ಮಾರ್ಪಟ್ಟಿತು. ಈ ಪುಟ್ಟ ವಾದ್ಯ ವೃಂದವೇ ‘ಮೈಹರ್ ಬ್ಯಾಂಡ್’ ಎಂದು ಪ್ರಖ್ಯಾತವಾಗಿ ಮೊದಲೇ ಹೇಳಿದ ಲಖನೌ ಸಂಗೀತ ಸಮ್ಮೇಳನದಲ್ಲಿ ಜಯಭೇರಿ ಬಾರಿಸಿತು.

ಮತ್ತೆ ಗುರುವಿನ ಬಳಿಗೆ

ಬಾಬಾ ಅವರು ಮೈಹರ್‌ಗೆ ಬಂದು ಒಂದು ವರ್ಷ ವಾಗಿತ್ತು. ಒಂದು ದಿನ ಬಾಬಾ ಪೇಟೆಗೆ ಹೋಗಿದ್ದರು. ತಮ್ಮ ಗುರುಗಳಾದ ಉಸ್ತಾದ್ ವಜೀರ್ ಖಾನರ ಹಿರಿಯ ಮಗ ಕಾಲವಾದ ಸುದ್ದಿ ಅವರಿಗೆ ಅಲ್ಲೇ ತಲಪಿತು. ಸಿಡಿಲು ಬಡಿದಂತಾಗಿ, ಬಾಬಾ ಪೇಟೆಯಿಂದಲೇ ರಾಮ ಪುರಕ್ಕೆ ಹೊರಟುಹೋದರು. ಅಲಾಉದ್ದೀನರನ್ನು ಕಂಡವರೇ ವಜೀರ್ ಖಾನರು ಬಾಚಿ ತಬ್ಬಿಕೊಂಡರು. ಅವರಲ್ಲಿ ಮತ್ತೆ ಶಿಕ್ಷಣ ಆರಂಭವಾಯಿತು. ಉಸ್ತಾದ್ ವಜೀರ್ ಖಾನರು ವೀಣೆಯನ್ನು ಅಲಾಉದ್ದೀನ್ ಖಾನರಿಗೆ ಕಲಿಸಿದರು. ಹಲವು ವರ್ಷಗಳವರೆಗೆ ಪೂರ್ಣವಾಗಿ ಅಲಾಉದ್ದೀನ್ ಖಾನರಿಗೆ ತಮ್ಮ ವಿದ್ಯೆಯೆಲ್ಲವನ್ನೂ ನೀಡಿದರು. ಉಸ್ತಾದ್ ವಜೀರ್ ಖಾನರು ದೈವಾಧೀನರಾದ ಅನಂತರ ಬಾಬಾ ಮತ್ತೆ ಮೈಹರ್‌ಗೆ ಮರಳಿದರು. ಅವರೆಗೂ ಮಹಾರಾಜರು ಬಾಬಾ ಅವರಿಗೆ ಪೂರ್ಣ ವೇತನವನ್ನು ಕೊಡುತ್ತಿದ್ದರು.

ವಿದೇಶಗಳಲ್ಲಿ

೧೯೩೫ ರಲ್ಲಿ ಸುಪ್ರಸಿದ್ಧ ಭಾರತೀಯ ನರ್ತಕರಾದ  ಉದಯಶಂಕರರು ತಮ್ಮ ನೃತ್ಯದಳದ ಸಂಗೀತ ನಿರ್ದೇಶಕ ರಾಗಿ ಬಾಬಾ ಅವರನ್ನು ವಿದೇಶ ಪ್ರವಾಸಕ್ಕೆ ಕರೆ ದೊಯ್ದರು. ವಿಯನ್ನಾ, ಪ್ಯಾರಿಸ್, ಪ್ರಾಗ್, ಬುಡಾಪೆಸ್ಟ್ ಮುಂತಾದ ಐರೋಪ್ಯ ನಗರಗಳಲ್ಲಿ ಅವರ ಅದ್ಭುತ ಕಛೇರಿಗಳು ತುಂಬಾ ಯಶಸ್ವಿಯಾದವು.

ಪಾಶ್ಚಾತ್ಯರು ಭಾರತೀಯ ಸಂಗೀತದ ಮರ್ಮವನ್ನು ತಿಳಿದುಕೊಳ್ಳಲು ಬಹಳ ಉತ್ಸುಕತೆ ತೋರಿಸುತ್ತಿದ್ದರು. ಋಷಿ ಮುನಿಗಳಿಂದ ನಿರ್ಮಿತವಾದ ಈ ಸಂಗೀತವನ್ನು ಕೇಳಿ ಎಲ್ಲರೂ ರೋಮಾಂಚಿತರಾದರು. ಬಾಬಾ ಭೈರವಿ ರಾಗ ಬಾರಿಸುವುದನ್ನು ಕೇಳಿ ಹಲವರು ‘ನಮಗೆ ಚರ್ಚಿ ನಲ್ಲಿದ್ದಂತೆ ಭಾಸವಾಗುತ್ತಿದೆ’ ಎಂದರು. ಭಾರತೀಯ ಸಂಗೀತದ ವೈಜ್ಞಾನಿಕ ಶಾಸ್ತ್ರವನ್ನು ಕಂಡು ಅವರು ಚಕಿತರಾದರು.

ಈ ವಿದೇಶ ಪ್ರವಾಸದಲ್ಲೇ ಬಾಬಾ ಅವರನ್ನು ಉದಯಶಂಕರರ ತಮ್ಮ ರವಿಶಂಕರರು ಭೇಟಿ ಮಾಡಿ ದುದು. ರವಿಶಂಕರರು ಒಂದಾದಮೇಲೊಂದರಂತೆ ಅನೇಕ ವಾದ್ಯಗಳನ್ನು ನುಡಿಸಿನುಡಿಸಿ ಇಟ್ಟು ಬಿಡುತ್ತಿದ್ದರು. ಆಗ ಬಾಬಾ ಆ ಒಂಬತ್ತು ವಯಸ್ಸಿನ ಬಾಲಕನನ್ನು ನೋಡಿ ಹೀಗೆ ಉಪದೇಶಿಸಿದರು :

“ಒಂದು ಸಾಧಿಸಿದರೆ ಎಲ್ಲವೂ ಸಾಧನೆಯಾಗುತ್ತದೆ; ಎಲ್ಲವನ್ನೂ ಸಾಧಿಸಹೊರಟರೆ ಒಂದೂ ಕೈಗೂಡುವುದಿಲ್ಲ.” ಈ ಮಾತೇ ಅವರ ಇಡೀ ಜೀವನದ ಸಾಧನೆಯ ಮೂಲಮಂತ್ರವಾಗಿತ್ತು. ಬಾಬಾ ಅವರು ಹತ್ತಾರು ವಾದ್ಯಗಳಲ್ಲಿ ಪರಿಣತರಾಗಿದ್ದುದೇನೋ ನಿಜ. ಆದರೆ ಅವರು ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಇಡೀ ಜೀವಮಾನ ಸಾಧನೆ ಮಾಡಿದರು. ಭಗವಂತನ ಸಾಕ್ಷಾತ್ಕಾರ ಪಡೆಯಲು ಅವರು ಸಂಗೀತವನ್ನು ಒಂದು ಸಾಧನವನ್ನಾಗಿ ಉಪ ಯೋಗಿಸಿದರು.

ಅನಾಥ ಮಕ್ಕಳ ವಾದ್ಯವೃಂದವನ್ನೇ ಸೃಷ್ಟಿಸಿದರು ಅಲಾಉದ್ದೀನ್ ಖಾನರು

ನಟರಾಜನ ಸನ್ನಿಧಿಯಲ್ಲಿ

ಕಾಶಿಯ ಬಳಿ ಆಲ್ಮೋರಾದಲ್ಲಿ ಉದಯಶಂಕರರು ‘ಉದಯಶಂಕರ ಇಂಡಿಯಾ ಕಲ್ಚರಲ್ ಸೆಂಟರ್’ ಎಂಬ ಸಂಸ್ಥೆಯನ್ನಾರಂಭಿಸಿದರು. ಬಾಬಾ ಅವರು ಅದರ ಪ್ರಮುಖರಾಗಲು ಒಪ್ಪಿದರು. ಆ ಸಂಸ್ಥೆಯ ಸಂಗೀತ ವಿಭಾಗ ಪ್ರಾರಂಭಿಸುವ ಮೊದಲು ಅಲ್ಲಿ ಸರಸ್ವತಿಯ ಮೂರ್ತಿಯೊಂದನ್ನು ಪ್ರತಿಷ್ಠಾಪನೆ ಮಾಡಿಸಿದರು.

ಈ ಸಂಸ್ಥೆಯಲ್ಲಿ ಕಥಕ್ಕಳಿ ನೃತ್ಯದ ಪ್ರಮುಖರಾಗಿ ತಿರುವಾಂಕೂರಿನ ಶಂಕರನ್ ನಂಬೂದಿರಿಯವರು ಇದ್ದರು. ನಂಬೂದಿರಿಯವರು ಬಾಬಾ ಅವರನ್ನು ಕಂಡು, “ನಟರಾಜ ನನ್ನ ಸ್ವಪ್ನದಲ್ಲಿ ಕಾಣಿಸಿಕೊಂಡಿದ್ದಾನೆ ; ತಮ್ಮ ಸಂಗೀತವನ್ನು ಕೇಳಲು ಆತ ಬಯಸಿದ್ದಾನೆ” ಎಂದರು. ಬಾಬಾ ಪುಳಕಿತರಾದರು. ಅಂದು ಮಧ್ಯಾಹ್ನ ದೇವಾಲಯಕ್ಕೆ ತಮ್ಮ ಸರೋದ್ ವಾದ್ಯವನ್ನು ತೆಗೆದುಕೊಂಡು ಬಂದರು. ಆದರೆ ದೇವಾಲಯದ ಒಳಗೆ ಕಾಲಿಡಲು ಹಿಂಜರಿದು, ಹೊರಗೆ ನಿಂತುಬಿಟ್ಟರು. ಆಗ ನಂಬೂದಿರಿಯವರು ಬಾಬಾ ಅವರನ್ನು ಕಂಡು, “ಆ ಭಗವಂತನೇ ತಮ್ಮ ಬರವಿಗಾಗಿ ಕಾದಿದ್ದಾನೆ. ಜಾತಿಯೇನು, ಕುಲವೇನು ಬನ್ನಿ” ಎಂದು ಬಾಬಾ ಅವರನ್ನು ಒಳಗೆ ಎಳೆದುಕೊಂಡು ನಡೆದೇಬಿಟ್ಟರು. ಒಂದು ಗಂಟೆಯ ಕಾಲ ಬಾಬಾ ಅವರ ಅದ್ಭುತ ವಾದನದಿಂದ ವಾತಾವರಣವೆಲ್ಲಾ ಭಕ್ತಪೂರ್ಣ ವಾಗಿಹೋಯಿತು. ನಂಬೂದಿರಿಯವರು ಬಾಬಾ ಅವರನ್ನು ಆಲಿಂಗಿಸಿಕೊಂಡರು.

“ಪ್ರತಿದಿನವೂ ಪೂಜೆ ಮಾಡುತ್ತೇನೆ. ಆದರೆ ಭಗವಂತ ನನ್ನಿಂದ ಇನ್ನೂ ಕೋಟಿ ಯೋಜನ ದೂರದಲ್ಲಿದ್ದಾನೆ. ತಾವು ಒಂದೇ ಗಂಟೆಯಲ್ಲಿ ಅವನನ್ನು ತಲಪಿದಿರಿ. ತಮ್ಮಂಥಾ ಭಾಗ್ಯಶಾಲಿ ಮತ್ತಾರಾದರೂ ಉಂಟೇ ?” ಎಂದು ನಂಬೂದಿರಿಯವರು ಬಾಬಾ ಅವರನ್ನು ಕುರಿತು ನುಡಿದಾಗ ಅವರ ಕಣ್ಣುಗಳಿಂದ ಅಶ್ರು ಧಾರೆ ಹರಿಯುತ್ತಿತ್ತು. ಇದೇ ಅಭಿಪ್ರಾಯವನ್ನು ಬಾಬಾ  ಅವರ ಬಗ್ಗೆ ಸ್ವರ್ಗೀಯ ರವೀಂದ್ರನಾಥ ಠಾಕೂರರೂ ನುಡಿದ್ದಾರೆ.

ಈ ಮಹಾನ್ ಸ್ವರ ಸಾಧಕನ ಸಾಧನೆ ೧೯೬೧ ರ ವರೆಗೂ ಅವಿರತವಾಗಿ ಸಾಗಿತು. ಆ ವರ್ಷ ಅವರಿಗೆ ಲಕ್ವಾ ಬಡಿಯಿತು. ಆ ನೋವಿನಲ್ಲೇ ಮತ್ತೂ ಹನ್ನೊಂದು ವರ್ಷಗಳನ್ನು ಬಾಬಾ ಕಳೆದರು. ೧೯೭೨ ರ ಸೆಪ್ಟೆಂಬರ್ ೬ ರಂದು ಭಾರತದ ಈ ಅಮೂಲ್ಯ ರತ್ನ ಚಿರಂತನ ದಲ್ಲಿ ಲೀನವಾಗಿ ಹೋಯಿತು. ಆಗ ಅವರಿಗೆ ೯೧ ವರ್ಷ.

ಬಾಬಾ ಸುಮಾರು ೭೦೦ ಜನ ಶಿಷ್ಯರನ್ನು ತಯಾರು ಮಾಡಿದರೆಂದು ಹೇಳಲಾಗಿದೆ. ಇವರಲ್ಲಿ ಪ್ರಮುಖರು ಇಂದಿನ ಜಗತ್ ಪ್ರಸಿದ್ಧ ಸಿತಾರ್ ವಾದಕರಾದ ಪಂಡಿತ ರವಿಶಂಕರರು. ರವಿಶಂಕರರಿಗೆ ತಮ್ಮ ವಿದ್ಯೆಯನ್ನಷ್ಟೇ ಅಲ್ಲದೆ ತಮ್ಮ ಮಗಳನ್ನೂ ಬಾಬಾ ಧಾರೆಯೆರೆದರು. ಬಾಬಾ ಅವರ ಪುತ್ರ ಹಾಗೂ ಶಿಷ್ಯ ಉಸ್ತಾದ್ ಅಲೀಅಕ್ಬರ್ ಖಾನರೂ ರವಿಶಂಕರರಷ್ಟೇ ಸುಪ್ರಸಿದ್ಧರು. ಅಮರ ಬಾಂಸುರಿ ವಾದಕ ಪನ್ನಾಲಾಲ್ ಘೋಷ್ ಅವರೂ ಸ್ವರ್ಗೀಯ ತಿಮಿರ್ ಬರನ್, ನಿಖಿಲ್ ಬ್ಯಾನರ್ಜಿ, ಜ್ಯೋತಿನ್ ಭಟ್ಟಾಚಾರ್ಯ, ಪ್ರಸಿದ್ಧ ಸರೋದ್ ವಾದಕಿ ಶರಣ್ ರಾಣಿ ಮೊದಲಾದವರೆಲ್ಲ ಬಾಬಾರವರ ಶಿಷ್ಯವೃಂದದವರು.

ನಾಡಿನ ಕೃತಜ್ಞತೆ

ಬಾಬಾ ಅವರಿಗೆ ಅನೇಕ ಬಿರುದುಗಳು ದೊರೆತಿ ದ್ದವು. ‘ಭಾರತದ ಗೌರವ’, ‘ಆಫ್‌ತಾಬೆ_ಹಿಂದ್’, ‘ಸಂಗೀತಾಚಾರ್ಯ’, ‘ದೇಶಿಕೋತ್ತಮ’, ‘ಸಂಗೀತ ನಾಯಕ’ ಮೊದಲಾದ ಬಿರುದುಗಳನ್ನು ಅವರಿಗೆ ಅನೇಕ ಸಂಸ್ಥೆಗಳು ಕೊಟ್ಟು ಗೌರವಿಸಿದ್ದವು. ೧೯೫೨ ರಲ್ಲಿ ಭಾರತೀಯ ಸಂಗೀತ ನಾಟಕ ಅಕಾಡೆಮಿ ಅವರನ್ನು ಪುರಸ್ಕರಿಸಿತು ; ಮತ್ತೆರಡು ವರ್ಷಗಳನಂತರ ‘ಫೆಲೋ ಷಿಪ್’ ನೀಡಿತು. ಭಾರತ ಸರ್ಕಾರ ೧೯೫೮ ರಲ್ಲಿ ‘ಪದ್ಮಭೂಷಣ’ ಹಾಗೂ ೧೯೭೧ ರಲ್ಲಿ ‘ಪದ್ಮ ವಿಭೂಷಣ’ ಪ್ರಶಸ್ತಿಗಳನ್ನು ನೀಡಿತು.

ವಿಶಾಲ ಹೃದಯ

ಬಾಬಾ ಅತ್ಯಂತ ಧರ್ಮ ಸಹಿಸ್ಣುಗಳಾಗಿದ್ದರು. ಅಷ್ಟೇ ಅಲ್ಲ, ಸರಸ್ವತಿಯ ಭಕ್ತರೂ ಆಗಿದ್ದರು. ಸಂಗೀತದ ಸಪ್ತಸ್ವರಗಳಲ್ಲೇ ಅವರು ಸರಸ್ವತಿಯನ್ನು ಕಾಣುತ್ತಿದ್ದರು. ಮೈಹರ್‌ನ ಶಾರದಾ ಮಂದಿರಕ್ಕೆ ತಮ್ಮ ದೇಹದಲ್ಲಿ ಶಕ್ತಿ ಇರುವಷ್ಟು ದಿನವೂ ಹೋಗಿ ಬರುತ್ತಿದ್ದರು. ತಮ್ಮ ಹೆಣ್ಣು ಮಕ್ಕಳಿಗೆ ಸರೋಜಿನಿ, ಅನ್ನಪೂರ್ಣಾ ಎಂಬ ಹಿಂದು ಹೆಸರುಗಳನ್ನೇ ಇಟ್ಟಿದ್ದರು. ಅವರ ಮೊಮ್ಮಕ್ಕಳ ಹೆಸರು ಗಳೂ ಹಿಂದು ಧರ್ಮದ ಧ್ಯಾನೇಶ್, ಪ್ರಾಣೇಶ್, ಅಮರೇಶ್, ಆಶೀಷ್ ಎಂಬವೇ. ತಮ್ಮ ಶಿಷ್ಯರಾಗಿದ್ದ ರವಿಶಂಕರರಿಗೆ ಬಾಬಾ ಗಾಯತ್ರೀ ಜಪವನ್ನು ನಿತ್ಯವೂ ಮಾಡಬೇಕೆಂದು ಕಟ್ಟಾಜ್ಞೆ ಮಾಡಿದ್ದರು. ಯಾರಿಗಾದರೂ ಶುಭ ಸಂದೇಶವನ್ನು ಕಳಿಸಬೇಕಾದಾಗ ‘ತಮಗೆ ಈಶ್ವರನು ಕೃಪೆ ಮಾಡಲಿ’ ಎಂದೇ ಬಾಬಾ ಹೇಳುತ್ತಿದ್ದರು.

ಬಾಬಾ ಅವರ ಸಂಗೀತ ಸಾಧನೆ ಎಷ್ಟು ಆಳವಾಗಿ ತ್ತೆಂದರೆ ನಾಗರಹಾವುಗಳೂ ಅವರಿಗೆ ತೊಂದರೆ ಮಾಡು ತ್ತಿರಲಿಲ್ಲ. ‘ಶಂಕರ್’ ಮತ್ತು ‘ಅಬ್ದುಲ್’ ಎಂಬ ನಾಗರ ಹಾವುಗಳು ಅವರು ಸಾಧನೆ ಮಾಡುತ್ತಿದ್ದಾಗಲೆಲ್ಲಾ ಎದುರಿಗಿರುತ್ತಿದ್ದವು. ವಾದನ ಮುಗಿದನಂತರ ಬಾಬಾ  ಟಾರ್ಚ್ ಬೆಳಕನ್ನು ಬಿಟ್ಟು ‘ಇನ್ನು ಹೊರಡಿ’ ಎಂದು  ಆ ನಾಗರಹಾವುಗಳಿಗೆ ಆಜ್ಞೆ ಮಾಡುತ್ತಿದ್ದರು. ವಿಧೇಯ ಮಕ್ಕಳಂತೆ ಅವೆರಡೂ ಆಜ್ಞೆಯನ್ನು ಪಾಲಿಸುತ್ತಾ ಬೆಳಕು ಬಿದ್ದೆಡೆಗೆ ಹೊರಟು ಹೋಗುತ್ತಿದ್ದವು. ಈ ಎರಡು ನಾಗರಹಾವುಗಳನ್ನು ಬಾಬಾ ಅವರು ತಮ್ಮ ಕುಟುಂಬ ದೊಡನೆಯೇ ಸಾಕಿದ್ದರು.

ವ್ಯಕ್ತಿತ್ವ

ಬಾಬಾ ಅವರು ಶೀಘ್ರ ಕೋಪಿಗಳು. ಭಾವಜೀವಿ ಯಾಗಿದ್ದ ಅವರನ್ನು ವಿನಾಕಾರಣ ಕೆಣಕಿ ಏಟು ತಿಂದವರು ಸಾಕಷ್ಟು ಮಂದಿ. ಬಾಬಾ ಅವರು ರಾಮ ಪುರದಲ್ಲಿ ಉಸ್ತಾದ್ ವಜೀರ್ ಖಾನರ ಶಿಷ್ಯರಾಗಿದ್ದಾಗ ಮತ್ಸರದಿಂದ ಇತರರು, “ಬಂಗಾಲೀ, ಬಂಗಾಲೀ, ಏನು ಬಾರಿಸುತ್ತೀಯೆ !” ಎಂದು ಕೆಣಕಿದ್ದರು. “ಅಯೋಗ್ಯರೇ, ಬಲಗೈಯಿಂದಲ್ಲ, ಎಡಗೈಯಿಂದಲೇ ಸರೋದನ್ನು ಬಾರಿ ಸುತ್ತೇನೆ !” ಎಂದು ಬಾಬಾ ಅಬ್ಬರಿಸಿದ್ದರು. ಅಂದಿನಿಂದ ಬಾಬಾ ಕೊನೆಯವರೆಗೂ ಸರೋದನ್ನು ಎಡಗೈಯಲ್ಲೇ ಬಾರಿಸುತ್ತಿದ್ದರು.

ಬಾಬಾ ಪರಮ ಸಾಧಕರಾಗಿದ್ದರು ‘ಒಂದು ವಾದ್ಯ ವನ್ನು ಕಲಿತು ಸಾಕ್ಷಾತ್ಕಾರ ಮಾಡಿಕೊಳ್ಳಲು ಒಂದು ಇಡೀ ಜನ್ಮವೇ ಸಾಲದು. ಆದ್ದರಿಂದ ಜೀವಮಾನ ಪೂರ್ತಿ ಸಾಧನೆ ಮಾಡಿರಿ. ಎಂದೆಂದಿಗೂ ಶಿಷ್ಯರಾಗಿಯೇ ಉಳಿಯಿರಿ’ ಎಂಬುದೇ ತಮ್ಮೆಲ್ಲ ಶಿಷ್ಯರಿಗೂ ಅವರು ನೀಡಿದ ಆದೇಶವಾಗಿತ್ತು. ತಮ್ಮ ಬಗ್ಗೆಯೇ ಅವರು, ‘ನನಗೆ ಇಷ್ಟು ವಯಸ್ಸಾಯಿತು. ಎಳ್ಳು ಕಾಳಿನಷ್ಟೂ ಸಂಗೀತ ಬರುವುದಿಲ್ಲ. ಇಷ್ಟೇ ಜೀವನ ಮತ್ತೆ ಸಿಕ್ಕರೆ ಅಲ್ಪಸ್ವಲ್ಪ ವಾದರೂ ಕಲಿತುಕೊಳ್ಳುತ್ತೇನೆ’ ಎಂದು ಸದಾ ನುಡಿಯು ತ್ತಿದ್ದರು. ಅಷ್ಟೇ ಅಲ್ಲ, ‘ನನ್ನ ಇಡೀ ಜೀವಮಾನದಲ್ಲಿ ಒಂದೆರಡು ಬಾರಿ ಮಾತ್ರ ಶುದ್ಧ ಸ್ವರಗಳನ್ನು ನಾನು ನುಡಿಸಿರಬಹುದು’ ಎನ್ನುತ್ತಿದ್ದರು.

ಇಂಥಾ ಮಹಾ ದಿಗ್ಗಜನೊಬ್ಬನನ್ನು ಪಡೆದಿದ್ದ ಭಾರತೀಯ ಸಂಗೀತ ಧನ್ಯ. ಇಂಥಾ ಮಹಾ ಮೇಧಾವಿ, ಪರಮ ಸಾಧಕ, ಅಸೀಮ ಭಗವದ್ಭಕ್ತ ಹಾಗೂ ಭಾರತೀಯ ಸಂಸ್ಕೃತಿಯ ಅದ್ವಿತೀಯ ರಾಯಭಾರಿ ಯನ್ನು ಪಡೆದಿದ್ದ ಭಾರತ ಧನ್ಯ.