(ಅಲೀಬಾಬಾ, ಆಯಿಲ್ ಶಾ ಹಸನ್ ಮತ್ತು ಸಲೀಂ ಊಟ ಮಾಡುತ್ತಿದ್ದಾರೆ.)

ಹಸನ್ : ಹಹಹ್ಹ ಕ್ಯಾ ಗದಾ ಆಪಕಾ! ಹಾಡುತ್ತವೆ! ಹಹ್ಹಹ್ಹಾ ಒಂದೊಂದು ಕತ್ತೆಗೆ ಒಂದೊಂದು ಘರಾನಾ!! ಅಬ್ಬ

ಸಲೀಂ : ಆಯಿಲ್ ಶಾ ನಿಮ್ಮ ಕುದುರೆ ಹಾಡುತ್ತವಾ!

ಹಸನ್ : ಕುದುರೆ ಹಾಡೋದೆ! ಹೆಹೆಹೆಹ್ಹೆಹ್ಹೆ………..ನೀವು ನನ್ನನ್ನ ಭಾಳ ನಗಸ್ತಾ ಇದ್ದೀರಿ, ಭಾಳಾ ನಗಸ್ತಾ ಇದ್ದೀರ………..ನೀವು ಏನೇ ಹೇಳಿ ನಿಮ್ಮಂಥ ರಸಿಕರನ್ನ ನಾ ನೋಡಲೇ ಇಲ್ಲ.

ಅಲೀಬಾಬಾ : ಆಯಿಲ್ ಶಾ, ಈಗ ನಿಮ್ಮನ್ನ ಖುಷಿಪಡಿಸಲಿಕ್ಕೆ ಒಂದು ಸಣ್ಣ ನೃತ್ಯ ಕಾರ್ಯಕ್ರಮ ಇಟ್ಕೋಂಡಿದೇವೆ. ಆಗಬಹುದಲ್ಲ!

ಹಸನ್ : ಕತ್ತೆಗಳ ನೃತ್ಯವಾ!

ಅಲೀಬಾಬಾ : ಛೇ ಛೇ. ನಮ್ಮ ಮನೆ ಹುಡುಗಿ ಮರ್ಜೀನಾ ಅಂತ. ಚೆನ್ನಾಗಿ ಕುಣಿತಾಳೆ. ಆಗಬಹುದಲ್ಲ!

ಹಸನ್ : ಓಹೊ! ಕತ್ತೇ ನೃತ್ಯ ಅಲ್ಲವಾದರೆ ಆಗಲಿ. ಯಾಕಂತೀನಿ, ಕತ್ತೆ ಹಾಡಬಹುದು. ಆದರೆ ಕುಣಿಯುವುದು ಸಾಧ್ಯವಿಲ್ಲಾ ಅಂತ ನನ್ನ ಅಭಿಪ್ರಾಯ. ಯಾಕೆಂದರೆ ನಾಲ್ಕು ಕಾಲು ನೋಡಿ! ಹೆ ಹೆ ಹೆ ನೀವೇನಂತೀರಿ!

ಅಲೀಬಾಬಾ : ನಿಜ, ನಿಜ. ಕತ್ತೆ ಹಾಡುತ್ತವೆ. ಮರ್ಜೀನಾ ಎರಡೇ ಕಾಲಿನಿಂದ ಕುಣೀತಾಳೆ. ಆಗಬಹುದಲ್ಲ!

ಹಸನ್ : ಓಹೊ.

(ಕತ್ತೆಗಳ ಮೇಳಸ್ವರದೊಂದಿಗೆ ಮರ್ಜೀನಾ ಹಾಡುತ್ತ ಹಾಡುತ್ತ ಕುಣಿಯುತ್ತ ಬರುತ್ತಾಳೆ.)

ಮರ್ಜೀನಾ : ನಾs ಮರ್ಜೀನಾ||
ಮಿರುಗುವ ಮಿಂಚಿನ
ಚೂರಿಯ ಅಂಚಿನ
ಹರಿತಾದ ಕಣ್ಣೀನ| ಬಾಲೆ ನಾ||
ಗುಟ್ಟು ಎದೆಯಾಗಿನ

ಸಂಚು ಮನದಾಗಿನ
ಗೂಢಗಳ ಇರಿವೇನ|
ಮರ್ಜೀನಾ||

(ಮರ್ಜೀನಾ ಹಾಡುತ್ತ ಕುಣಿಯುತ್ತ ಆಯಿಲ್ ಶಾನ ಬಳಿ ಬಂದು ಮಿಂಚಿನ ವೇಗದಲ್ಲಿ ಅವನ ಚೂರಿ ಕಿತ್ತುಕೊಂಡು ಇರಿಯುವಳು. ಅಲೀಬಾಬಾ, ಸಲೀಂ ಎದ್ದು Freeze ಆದ ಹಾಗೆ ನಿಲ್ಲುವರು. ಆಯಿಲ್ ಶಾ ಸಾಯುವನು.)

ಅಲೀಬಾಬಾ : ಮರ್ಜೀನಾ ಇದನ್ನೇನು ಮಾಡಿದೆ!

ಮರ್ಜೀನಾ : ಅವ ಚೋರೋಂಕಾ ರಾಜಾ! ಆಯಿಲ್ ಶಾ ಅಲ್ಲ, ಅಂತ ಎಷ್ಟು ಸಲ ಹೇಳೋದು! ನೀವು ಆತನ ಗವಿಯಿಂದ ಚಿನ್ನ ತಂದಿದ್ದಕ್ಕೇ ಸಿಟ್ಟಾಗಿ ನಿಮ್ಮನ್ನು ತೀರಿಸಬೇಕಂತ ಬಂದಿದ್ದ. ಬೇಕಾದರೆ ಹೋಗಿ ನೋಡಿ: ಹರವಿಗಳಲ್ಲಿರೋದು ಎಣ್ಣೆ ಅಲ್ಲ, ಚೋರರು.

ಸಲೀಂ : ಏನಂದೆ? (ಓಡುವನು)

ಅಲೀಬಾಬಾ : ಆತ ಆಯಿಲ್ ಶಾ, ಕಳ್ಳನಲ್ಲ. ನಮ್ಮ ಮೆಹಮಾನ್ ಆಗಿ ಬಂದಿದ್ದ.

ಮರ್ಜೀನಾ : ಎಲ್ಲಾ ಸುಳ್ಳು, ಹೋಗಿ ನೋಡಿ ಗೊತ್ತಾಗುತ್ತದೆ.

ಅಲೀಬಾಬಾ : ಆತ ಇರಾನ್ ಶಾನ ಸ್ನೇಹಿತ. ಕಳ್ಳ ಅಂತ ಹ್ಯಾಗ್ಹೇಳ್ತಿ?

ಮರ್ಜೀನಾ : ಹಿಂದೆ ನನ್ನ ತಂದೇನ ಕೊಂದಿದ್ದ. ಅವನನ್ನ ನಾನು ಚೆನ್ನಾಗಿ ಬಲ್ಲೆ. ಅವನಿಂದಲೇನನಗೆ ಇಂಥಾ ಸ್ಥಿತಿ ಬಂದದ್ದು. ನಿಮ್ಮನ್ನೂ ಮುಗಿಸಬೇಕಂತಿದ್ದ. ಗಣೇಶನ ದಯದಿಂದ ಎಲ್ಲಾರು ಪಾರಾದಿವಿ. (ಸಲೀಂ ಓಡಿಬಂದನು.)

ಸಲೀಂ : ಬಾಪರೇ ಬಾಪ್! ಎಂಥಾ ಮೋಸ! ಹರವಿಯಲ್ಲಿರೋದು ಎಣ್ಣೆ ಅಲ್ಲ ಬಾಬಾ, ಕಳ್ಳರು ಕಳ್ಳರು?

ಅಲೀಬಾಬಾ : ಹೌದೆ?

ಸಲೀಂ : ಹೌದು. ನಾ ನೋಡಿ ಬಂದೆ!

ಅಲೀಬಾಬಾ : ಛೇ ಛೇ! ಎಂಥಾ ಮೋಸ ಬೇಗಂ. ಬೇಗಂ ಹೊರಗಡೆ ಬಾ. (ಬೇಗಂ, ಫಾತಿಮಾ ಹೊರಗೆ ಬರುವರು.) ಮರ್ಜೀನಾ ಕಳ್ಳರಿಂದ ನಮ್ಮ ಜೀವಾ ಕಾಪಾಡಿದಳು. ನಮ್ಮ ಶ್ರೀಮಂತಿಕೆ ಬಚಾವ್ ಮಾಡಿದಳು. ಮರ್ಜೀನಾ ನಿನ್ನ ಉಪಕಾರ ನಮ್ಮ ಮೇಲೆ ಜಾಸ್ತಿ ಆಯ್ತು. ಹಾಗೇ ಇನ್ನೊಂದು ಉಪಕಾರ ಮಾಡು. ಈ ಅಯೋಗ್ಯನ್ನ ಮದುವೆ ಮಾಡಿಕೊಂಡು ನನ್ನ ಸೊಸೆ ಆಗಿಬಿಡು, ಸಾಕು.

ಮರ್ಜೀನಾ : ಅಲ್ಲಾನ ದಯೆ ದೊಡ್ಡದು. ಗಣೇಶನ ರೂಪದಿಂದ ಬಂದು ಕಾಪಾಡಿದ.

ಅಲೀಬಾಬಾ : ಗಣೇಶ? ಅವನ್ಯಾರು? ಎಲ್ಲಿದ್ದಾನೆ?

ಗಣೇಶ : ಇಕೋ ಇಲ್ಲಿದ್ದೇನೆ.

(ಎಲ್ಲರೂ ತಿರುಗಿ ನೋಡುವರು, ಗಣೇಶ ಮೇಳದೊಂದಿಗೆ ಬರುವನು)

ಮೇಳದ ನಾಯಕ : ಆಹಾ ಸ್ವಾಮಿ, ಮೇಳದಿಂದ ತಪ್ಪಿಸಿಕೊಂಡು ಹೋಗಿ, ಶಿಷ್ಯದ ರಕ್ಷಣೆ ಮಾಡಿ, ದುಷ್ಟರಿಗೆ ಶಿಕ್ಷೆ ಕೊಟ್ಟಂಥಾ ದೇವಾಧಿದೇವಾ, ನಿನ್ನ ಲೀಲೆ ಅಗಾಧ ವಾದುದು. ಈತನಕ ನಾಟಕ ನೋಡಿದ ಪ್ರೇಕ್ಷಕರಿಗೆ ಸಂದೇಶವೇನಾದರೂ ಇದ್ದರೆ ತಿಳಿಸುವಂಥನಾಗಬೇಕು.

ಗಣೇಶ : ಸೂತ್ರಧಾರ, ಕಳ್ಳರಿಗೆ ಶಿಕ್ಷೆ ಉಂಟೇ ಉಂಟು. ಆದರೆ ಲಾಡು ಚೋರರಿಗೆ ವಿನಾಯಿತಿ ಉಂಟೆಂದು ಸಾರುವಂಥವನಾಗೈ ಸೂತ್ರಧಾರ.

ಮೇಳದ ನಾಯಕ : ಅಪ್ಪಣಾ ಸ್ವಾಮೀ, ಇದೀಗ ಆಟದ ಆರಂಭದಲ್ಲಿ ತಾವು ನಮ್ಮ ಪೂಜೆ ಸ್ವೀಕರಿಸಲಿಲ್ಲ, ಅಂತ್ಯದಲ್ಲಾದರೂ ಸ್ವೀಕರಿಸಬೇಕೆಂದು ಪ್ರಾರ್ಥನೆ.

ಗಣೇಶ : ಲಾಡು ಉಂಟೋ?

ಮೇಳದ ನಾಯಕ : ಉಂಟು ಸ್ವಾಮೀ. ತಮ್ಮ ಉದರದಿಂದ ಉದುರಿದ್ದೇ ಇದೆ.

ಗಣೇಶ : ತಥಾಸ್ತು.

ಎಲ್ಲರೂ : ಶ್ರೀ ಗಜವದನಾ
ಗಿರಿಜಾ ನಂದನ
ಸ್ವೀಕರಿಸಯ್ಯಾ ಸಾವಿರ ನಮನಾ||