(ವೈದ್ಯಶಾಲೆ. ಹಕೀಂ ಮುಸ್ತಫಾ ಬಾಬಾ ಒಬ್ಬನೇ ತಂತಾನೆ ಮಾತಾಡಿ ಕೊಳ್ಳುತ್ತಿದ್ದಾನೆ.)

ಹಕೀಂ : ಅಲ್ಲಾ! ನೀನು ದೊಡ್ಡವನೋ ಅಲ್ಲಾ. ಅದರಲ್ಲೇನೂ ಸಂಶಯವಿಲ್ಲಾ. ನೀ ಯಾಕೆ ದೊಡ್ಡವನು ಅಂದರೆ, ನಾ ಹೇಳ್ತೀನಿ ಅದಕ್ಕೆ. ನನ್ನ ಮಾತಿನಲ್ಲಿ ಯಾರಿಗಾದರೂ ನಂಬಿಕೆ ಇಲ್ಲಾ ಅಂದರೆ, ಅಲ್ಲಾ, ಅವರಿಗೇನೋ ರೋಗ ಇದೆ ಅಂತ ಅರ್ಥ. ಅಂಥಯವರನ್ನ ನನ್ನ  ಹತ್ತಿರ ಕಳಿಸು. ಗುಣಪಡಿಸಿ ದಿನಕ್ಕೆ ಐದು ಬಾರಿ ನಮಾಜ ಮಾಡೋ ಹಾಗೆ ಮಾಡ್ತೀನಿ. ಆದರೆ ಅವರಲ್ಲ ಅಲ್ಲಾ, ನಿಜವಾದ ರೋಗಿ ನೀನು! ನೀನೇ ಆರೋಗ್ಯವಂತನಾಗಿದ್ದರೆ ನನಗೆ ಈ ರೀತಿ ಬಡತನ ಕೊಡತಿದ್ದ್ಯಾ? ದುಡ್ಡು ಕೊಡೋ ದೇವರೇ ಅಂದರೆ ದಯ ಕೊಡೋದೇ? ರೋಗಿಗಳು ಸಾಲಾಗಿ ಬರ್ತಾರೆ. ಔಷಧಿ ತಗೋತಾರೆ. ದುಡ್ಡೆಲ್ಲಿ ಅಂದರೆ ನಿನ್ನ ಹೆಸರು ಹೇಳತಾರೆ. ನಿನ್ನ ಹೆಸರಿನ ಉದ್ರಿ ಖಾತೆ ಬೆಳೆದೂ ಬೆಳೆದೂ ಇಷ್ಟುದ್ದಾಯ್ತು. ಒಂದು ದುಡ್ಡನ್ನಾದರೂ ತೀರಿಸಿದೆಯಾ? ಏನಪ್ಪಾ, ನಾ ಜಾಸ್ತಿ ಕೇಳಿದ್ನಾ? ಚಡ್ಡಿ ಹರಿದು ಹೋಗಿದೆ, ಒಂದು ಗಟ್ಟಿ ಚಡ್ಡಿ ಕೊಡೋ ದೇವರೇ ಅಂದೆ. ಕೊಟ್ಟೆಯಾ? ಅಲ್ಲಾ ನನಗೆ ಸಿಟ್ಟು ಬರ್ತಾ ಇದೆ. ಇವತ್ತಿನಿಂದಾ (ಮರ್ಜೀನಾ ಬರುವಳು.)

ಮರ್ಜೀನಾ : ಮುಸ್ತಫಾ ಬಾಬಾ, ಹಕೀಂ ಮುಸ್ತಫಾ ಬಾಬಾ…….

ಹಕೀಂ : ಯಾರದು?

ಮರ್ಜೀನಾ : ಬೇಗನೇ ಬನ್ನಿ ಹಕೀಮರೇ.

ಹಕೀಂ : ನಿನಗ್ಯಾರೋ ತಪ್ಪು ವಿಳಾಸ ಹೇಳಿದಾರಮ್ಮಾ. ಇಲ್ಲಿ ಯಾರೂ ಹಕೀಮರಿಲ್ಲವಲ್ಲ.

ಮರ್ಜೀನಾ : ಹಾಗ್ಹೇಳಬೇಡಿ, ನೀವೇ ಹಕೀಂ ಮುಸ್ತಫಾ ಬಾಬಾ. ನಮ್ಮ ಯಜಮಾನರು ಸಾಯ್ತಿದಾರೆ. ನೀವು ಬಂದರೆ ಜೀವ ಉಳಿಯುತ್ತೆ. ಅಲ್ಲಾನ ಹೆಸರಿನಲ್ಲಾದರೂ ಬನ್ನಿ.

ಹಕೀಂ : ಯಾರ ಹೆಸರಿನಲ್ಲಿ? ಅಲ್ಲಾನs? ನನಗೂ ಅವನಿಗೂ ಜಗಳ ಆಯ್ತು ತಾಯೀ.

ಮರ್ಜೀನಾ : ಬೇಗ ಬನ್ನಿ ಹಕೀಮರೇ,

ಹಕೀಂ : ದೊಡ್ಡ ಜಗಳ. ಹಿಂದೆ ಈ ಥರ ಅವನ ಜೊತೆ ಯಾರೂ ಜಗಳಾಡಿರಲಿಲ್ಲ.

ಮರ್ಜೀನಾ : ಹಕೀಮರೇ, ಒಂದು ಗಳಿಗೆ ತಡ ಆದರೂ ಅನಾಹುತವಾಗಬಹುದು.

ಹಕೀಂ : ಯಾಕಂತೀಯಾ? ಅಲ್ಲಿ ನೋಡು, ಅವನ ಉದ್ರೀ ಖಾತೆ ಹ್ಯಾಗೆ ಬೆಳೆದಿದೆ! ಎಲ್ಲರೂ ನಿನ್ನ ಹಾಗೇ ಅವನ ಹೆಸರು ಹೇಳಿಕೊಂಡೇ ಬರತಿದ್ದರು.

ಮರ್ಜೀನಾ : ಹಕೀಮರೇ, ಜೀವ ಮಿಂಚಿ ಹೋಗಬಹುದು.

ಹಕೀಂ : ಜಗಳಾಡಿದ್ದಕ್ಕೆ ನನಗೂ ದುಃಖ ಆಯ್ತು. ಏನು ಮಾಡ್ತೀ ಹೇಳು, ದೊಡ್ಡ ಮಂದಿ ಸಹವಾಸ.

ಮರ್ಜೀನಾ : ಇದು ಹರಟೆ ಹೊಡೆಯೋ ಸಮಯ ಅಲ್ಲ, ಹಕೀಮರೇ.

ಹಕೀಂ : ಒಪ್ಪಿದೆ. ನಾ ದೊಡ್ಡ ಸಜ್ಜನ ಅಲ್ಲ ಅಂತ. ಆದರೆ ಖಂಡಿತ ಸಣ್ಣ ಸಜ್ಜನ ಹೌದೋ? ಸಣ್ಣ ಸಜ್ಜನನಿಗೆ ಸಣ್ಣ ಅನ್ಯಾಯ ಆಗಲಿ, ಸಹಿಸ್ಕೋಬಹುದು. ಆದರೆ ದೊಡ್ಡ ಅನ್ಯಾಯ ಆದರೆ ಹ್ಯಾಗೆ? ಏನಂತಿ?

ಮರ್ಜೀನಾ : ನೀವು ಕೇಳಿದಷ್ಟು ಹಣ ಕೊಡ್ತೀನಿ.

ಹಕೀಂ : (ತಕ್ಷಣ ಎದ್ದು ಬಂದು.) ಏನಂದಿ?

ಮರ್ಜೀನಾ : ಬೇಕಾದರೆ ಚಿನ್ನದ ನಾಣ್ಯ ಕೊಡ್ತೀನಿ.

ಹಕೀಂ : ಈಗೇನಾದರೂ ಕೊಡ್ತೀರೊ?

ಮರ್ಜೀನಾ : ಓಹೊ, ತಗೊಳ್ಳಿ.

ಹಕೀಂ : ಅಯ್ಯಯ್ಯೊ ದೇವರೇ! ಮೊದಲೇ ಯಾಕ್ಹೇಳಲಿಲ್ಲ? ಎಂಥಾ ಹುಚ್ಚು ಹುಡುಗಿ ನೀನು? ಇಷ್ಟು ಸಮಯ ಹಾಳು ಮಾಡಿದೆ. ಕೊಡು, ಕೊಡು.

ಮರ್ಜೀನಾ : ನನ್ನ ಕರಾರು ಒಪ್ಪೋದಾದರೆ.

ಹಕೀಂ : ಮೊದಲು ಅದನ್ನ ಕೊಡು. ನೀ ಹೇಳಿದಕ್ಕೆಲ್ಲಾ ಒಪ್ಕೋತೀನಿ. (ಹಣ ಕೊಡುವಳು. ಪರೀಕ್ಷಿಸಿ ನೋಡಿ.) ಹಾಯಲ್ಲಾ! ಅಸಲಿ ಚಿನ್ನದ ನಾಣ್ಯ ತಾನೆ?

ಮರ್ಜೀನಾ : ಕಣ್ಣು ಮುಚ್ಚಿ ಕರೆದುಕೊಂಡು ಹೋಗ್ತೀನಿ. ಬರೋಹಾಗಿದ್ರೆ ಇನ್ನೆರಡು ಕೊಡ್ತೀನಿ. ಏನಂತೀರಿ?

ಹಕೀಂ : ಆ ಎರಡನ್ನೂ ಈಗಲೇ ಕೊಡೋದಾದರೆ ಕಣ್ಣು ಕಟ್ಟು

(ಕಣ್ಣು ಕಟ್ಟುವಳು. ಕೈಹಿಡಿದು ಕರೆದುಕೊಂಡು ಹೊರಡುವಳು.)

ಮೇಳ : ಕುರುಡು ವೈದ್ಯನ ಹಿಡಿದು ತಂದಳು ಜಾಣೆ ಮರ್ಜೀನಾ
ವೈದ್ಯ ತಡವರಿಸುತ್ತ, ನಾಣ್ಯವ ಚಿಂತಿಸುತ ಬಂದಾ||
ಎಂಥ ಚಿನ್ನದ ಭಾಗ್ಯವಂತರೊ ನನ್ನ ಕರೆದವರಾ| ಇವರಾ
ಕಣ್ಣ ಕಟ್ಟಿದರ್ಯಾಕೆ ಪರಿ ಗುಟ್ಟು ಬಿಡದವರಾ| ಇವರಾ
ಗುಟ್ಟ ಕಟ್ಟಿದ ಗಂಟ ಬಿಚ್ಚುವೆ ಬೆದಕುವೆನೊ ಮೂಲ| ಈಗಲೆ
ಕಲ್ಲು ತಾಗಿತು ಎಡವಿ ಬಿದ್ದನು ಚಿಂತೆ ಮಾಡುತ್ತ| ಹಾ
ಯಲ್ಲಾನ ನೆನೆಯುತ್ತ||

(ಹಾಡು ನಡೆದಾಗ ರಸ್ತೆಯಲ್ಲಿ ಬರುತ್ತಿರುತ್ತಾನೆ. ಹಾಡು ಮುಗಿದಾಗ ಎಡವಿ ಬೀಳುತ್ತಾನೆ. ಅಲ್ಲೇ ಮನೆ. ಒಳಕ್ಕೆ ಹೋಗುವರು.)