(ಬಂಡೆಯ ಮುಂಭಾಗದಲ್ಲಿ ಹಸನ್ ಖಾಸೀಮನ ಒಂದು ಮೆಟ್ಟು ಹಿಡಿದು ಆಕಡೆ ಈಕಡೆ ಅಡ್ಡಾಡುತ್ತಿದ್ದಾನೆ. ಹಿಂದೆ ಐಜೀಕೆ ಅಡ್ಡಾಡುತ್ತಿದ್ದಾನೆ. ಕಳ್ಳರೆಲ್ಲ ಸುಮ್ಮನೆ ನಿಂತಿದ್ದಾರೆ.)

ಹಸನ್ : ಛಪ್ಪನ್ನೈವತ್ತಾರು ದೇಶದಲ್ಲಿ ನನ್ನನ್ನು ಎದುರು ಹಾಕಿಕೊಳ್ಳೋ ಧೈರ್ಯ ಯಾವನಲ್ಲೂ ಇರಲಿಲ್ಲ; ಈಗ ಇದ್ದಕಿದ್ದ ಹಾಗೆ ನಾನು ಕದ್ದದ್ದನ್ನೇ ಯಾರೋ ಕದೀತಿದಾರಲ್ಲ! ಕಳ್ಳ ಸಿಕ್ಕಿಬಿದ್ದ ಅಂತ ಅವನ್ನ ಅರೆಜೀವಾ ಮಾಡಿ ವಿಷಯ ತಿಳಿದುಕೊಳ್ಳೋಣ ಅಂದರೆ ಅವನೂ ನಾಪತ್ತೆ! ಹೊಸದಾಗಿ ಕಳ್ಳತನ ಮಾಡೋದಿರಲಿ, ಅದ್ದದ್ದನ್ನು ಕಾಪಾಡಿಕೊಳ್ಳೋದೇ ಸಾಕಾಗಿದೆ.

ಐಜೀಕೆ : ಇದರ ಹಿಂದೆ ಯಾವುದೋ ಬಹು ದೊಡ್ಡ ಕಳ್ಳರ ಜಾಲ ಇದ್ದ ಹಾಗಿದೆ. ಬಾಸ್.

ಕಳ್ಳ ೪ : ಜಾಲ ಇದ್ದಿದ್ದರೆ ಈ ಥರ ಒಬ್ಬನೇ ಬರತಿದ್ದ ಅಂತೀಯಾ?

ಕಳ್ಳ ೩ : ಪೋಲೀಸರೇ ಇರಬಹುದೊ? ಯಾಕೆಂದರೆ ಕಳ್ಳರ ಮಾಲು ಕದಿಯೋದು ಅವರಿಗೇ ಸಾಧ್ಯ!

ಹಸನ್ : ಪೋಲೀಸರಾಗಿದ್ದರೆ ಅಷ್ಟು ಐಶ್ವರ್ಯ ಒಟ್ಟಿಗೇ ಹೊತ್ತುಕೊಂಡು ಹೋಗತಿದ್ದರ?

ಕಳ್ಳ ೪ : ನಮ್ಮ ಕೈಗೆ ಸಿಕ್ಕು ಪಾರಾದವನು ಪೋಲೀಸಂತೂ ಅಲ್ಲ.

ಕಳ್ಳ ೫ : ಅಷ್ಟಿಷ್ಟೇ ಸಾಗಸ್ತಾ ಇರೋದನ್ನ ನೋಡಿದರೆ ಇದ್ಯಾವುದೊ ಸಣ್ಣ ಕಳ್ಳರ ಗುಂಪಿರಬೇಕು ಬಾಸ್.

ಕಳ್ಳ ೪ : ನಮ್ಮಿಂದ ಏಟು ತಿಂದವನು ಯಾವನೋ ಮರಿ ಕಳ್ಳನೇ ಇರಬೇಕು. ಮಂತ್ರ ಮರೆತು ನಮ್ಮ ಕೈಗೆ ಸಿಕ್ಕುಬಿದ್ದ. ಅನುಭವ ಸಾಲದು ನೋಡಿ! ಇವನ ಗುರು ಕಳ್ಳ ಒಬ್ಬ ಇದಾನೆ. ಆತನೇ ಅವನಿಗೆ ಮಂತ್ರ ಕಲಿಸಿ ಕಳಿಸಿದ್ದು. ಅವನ ಪತ್ತೆ
ಆಗಬೇಕು.

ಹಸನ್ : ಹಾಗಂತೀಯಾ?

ಐಜೀಕೆ : ಅವನ ಮಾತನ್ನ ನಂಬ್ತೀರಲ್ಲಾ ಬಾಸ್.

ಕಳ್ಳ ೪ : ಮೂವತ್ತು ವರ್ಷ ಸರ್ವೀಸಾಯ್ತು ಸಾರ್.

ಐಜೀಕೆ : ಕತ್ತೆಗೂ ವಯಸ್ಸಾಗುತ್ತಯ್ಯಾ, ಹಾಗಾದರೆ…………

ಹಸನ್ : ಐಜೀಕೆ.

ಐಜೀಕೆ : ಎಸ್ ಬಾಸ್.

ಹಸನ್ : ಎಲ್ಲಿಗೆ ಬಂತು ನಿನ್ನ ಪತ್ತೇದಾರಿ ಕೆಲಸ?

ಐಜೀಕೆ : ತುಂಬ ಪ್ರಯತ್ನ ಮಾಡ್ತಾ ಇದೀನಿ. ಕಳ್ಳರ ಸುಳಿವೇ ಸಿಗ್ತಾ ಇಲ್ಲ ಬಾಸ್.

ಹಸನ್ : ನಿನ್ನಿಂದ ಆಗೋದಿಲ್ಲ ಅನ್ನು.

ಐಜೀಕೆ : ಯಾರಿದ್ದರೂ ಇಷ್ಟೇ ಬಾಸ್.

ಹಸನ್ : ನಾಲಾಯಖ್! ಇವತ್ತಿನಿಂದ ನಿನ್ನನ್ನ ಐಜೀಕೆ ಪೋಸ್ಟಿನಿಂದ ಡಿಸ್‌ಮಿಸ್ ಮಾಡಿದೀನಿ. (ಹೋಗಿ ಅವನ ಬಿರುದು ಬಾವಲಿಗಳನ್ನು ಕಸಿಯುವನು.) ಯಾರು ಕಳ್ಳನ್ನ ಪತ್ತೆ ಮಾಡತಾರೋ ಅವರೇ ಐಜೀಕೆ! ಯಾರು ಮುಂದೆ ಬರ್ತೀರಿ?

ಕಳ್ಳ : ನನ್ನನ್ನ ಐಜೀಕೆ ಮಾಡಿ ಬಾಸ್, ಬೇಜಾನ್ ಸರ್ವೀಸಾಗಿದೆ.

ಹಸನ್ : ಐಜೀಕೆ ಅಂದರೆ ಗೊತ್ತೇನಯ್ಯಾ?

ಕಳ್ಳ ೪ : ಗೊತ್ತು ಬಾಸ್. ಇನ್ಸಪೆಕ್ಟರ್ ಜನರಲ್ ಆಫ್ ಕಳ್ಳಾಸ್,

ಹಸನ್ : ಹಾಗಿದ್ದರೆ ಮೊದಲು ಕಳ್ಳನ ಪತ್ತೆ ಮಾಡಿಕೊಂಬಾ. ಆಮೇಲೆ ನೋಡೋಣ.

ಕಳ್ಳ : ಆಯ್ತು ಮೆಟ್ಟು ಕೊಡಿ.

(ಹಸನ್ ಕಳ್ಳ ನಿಗೆ ಖಾಸೀಮನ ಮೆಟ್ಟು ಕೊಡುವನು. ಅವನದನ್ನು ಕಣ್ಣಿಗೆ ಒತ್ತಿಕೊಂಡು ಹೊರಡುವನು.)