(ಓಡುತ್ತ ಬಂದ ಮೇಳ ರಂಗವನ್ನು ವ್ಯಾಪಿಸಿ ಕುಣಿಯುತ್ತ ಹಾಡತೊಡಗುತ್ತಾರೆ. ಕಳ್ಳ ಬರುತ್ತಾನೆ.)

ಮೇಳ : ಬೆಚ್ಚಗಿನ ಪ್ರೇಮಕ್ಕೆ ಹೂವು ಬಿಟ್ಟಾವು ಗಿಡಕೆ
ಪ್ರೀತಿಯ ಹಾಡಲಿಕ್ಕೆ ಬಾಯಿರದವರ್ಯಾರೋ
ಬಾಯಿ| ಮುಚ್ಚುವ ಕವಿ ಯಾರೊ||

ಕಳ್ಳ : ಯೇ ಯೇ, ನಿಲ್ಲಸ್ರೋ ಹಾಡನ್ನ………………

ಮೇಳ : ಹಾಡು ಕತೆಗಳ ಒಳಗೆ ಹರಿದಾವು ಪ್ರೇಮದ ನಡಿಗೆ
ಪ್ರೇಮಿಗಳ ಹರಸಿದರೆ ಗೌರವ ದೇವರಿಗೆ
ಬೀಸೋ ತಂಗಾಳಿಗೆ ಗೊತ್ತು ಪ್ರೇಮದ ಮಹಿಮೆ||

ಕಳ್ಳ : ಯೋ ಯೋ ನಿಲ್ಲಸ್ರಯ್ಯಾ ಅಂದರೆ………….

ಮೇಳ : ಪ್ರೇಮಿಯ ಕಣ್ಣಿಗೆ ಮಿಂಚುಗಳಂಜ್ಯಾವೆ
ಪ್ರೇಮಿಯ ಮಾತಿಗೆ ಸಿಡಿಲು ನಡುಗ್ಯಾವೆ
ಗುಡ್ಡ ಬೆಟ್ಟಗಳೆಲ್ಲ ದಾರಿ ಬಿಟ್ಟಾವೇ ಜೀಯಾ|
ಸೈ ಸೈ ಎಂದಾವೇ||

ಕಳ್ಳ : ಈ ನನ್ನ ಮಕ್ಕಳು ಅದೇನಪ್ಪಾ ಹರಿಕಥೆ ಸುರು ಮಾಡಿದರು!
ತಾಳಿ ಮಾಡತೇನೆ………………….

(ಹಡಪದಿಂದ ವಿಚಿತ್ರ ಸಪ್ಪಳ ಮಾಡಿ ಚೂರಿ ಹಿರಿದು ನಿಲ್ಲುತ್ತಾನೆ. ಕುಣಿಯುತ್ತಿದ್ದ ಮೇಳ ಬೆದರಿ ಹಿಂಜರಿಯುತ್ತಾರೆ. ತನ್ನ ಕಾರ್ಯಕ್ಕೆ ತಾನೇ ಖುಷಿಪಟ್ಟು ಕಳ್ಳ ನಗುತ್ತಾನೆ.)
ಸುಮ್ಮನೇ ನನ್ನ ತಂಟೆಗೆ ಬರಬೇಡಿ. ಹೋಗಿ……………..

(ಮೇಳ ಹಿಂದೆ ಸರಿಯುತ್ತಾರೆ. ಈತ ಮತ್ತೆ ಹಡಪದಲ್ಲಿ ಚೂರಿ ಇಟ್ಟು ಸ್ವಗತದಲ್ಲಿ ತನ್ಮಯನಾಗುತ್ತಾನೆ.)

ಕಳ್ಳ : ಅಲ್ಲಾ ನಾವೇ ಕಳ್ಳರು ಅಂದರೆ ನಮ್ಮಲ್ಲೇ ಕಳ್ಳತನ ಮಾಡೋದೆ? ಅಂದರೆ
ಕದಿಯುವಂಥವ ಭಾರೀ ಕಳ್ಳನೇ ಇರಬೇಕು. ನನಗೇನಾದರೂ ಆ ಕಳ್ಳ ನನ
ಮಗನ ಸುಳಿವು ಸಿಕ್ಕಿದರೆ ನಾನೇ ಇನ್ಸ್‌ಪೆಕ್ಟರ್ ಜನರಲ್ ಆಫ್ ಕಳ್ಳಾಸ್!

(ಅಷ್ಟರಲ್ಲಿ ಮೇಳದ ಒಬ್ಬ ಅವನ ಹಡಪ ಕದಿಯುವನು. ಕಳ್ಳ ಅವನ ಬೆನ್ನು ಹತ್ತುವನು.)

ಕಳ್ಳ : ಅಯ್ಯಯ್ಯೋ ಬೇಡ ಬೇಡ, ಕೊಡಪಾ……………..

ಮೆಳದ ನಾಯಕ : ಏನಯ್ಯಾ; ನಮ್ಮ ಪಾಡಿಗೆ ನಾವು ಹಾಡಿಕೊಂಡಿದ್ದರೆ ನಿಂದೇನಯ್ಯಾ ಗಂಟು ಹೋಯ್ತು? ಈ ರಂಗಭೂಮಿ ನಿಂದಾ? ಈ ವಾದ್ಯಗಳು ನಿಂದಾ? ನಾವು ಹಾಡಿಕೊಂಡಿರ್ಲಿಕ್ಕೆ ದುಡ್ಡು ಕೊಟ್ಟಿದ್ದೆಯಾ?

ಕಳ್ಳ : ಇಲ್ಲ.

ಮೇಳದ ನಾಯಕ : ಮತ್ತೆ ನಮಗ್ಯಾಕೆ ಅಡ್ಡಿ ಮಾಡಿದೆ? ಯಾಕೆ ಹೆದರಿಸಿದೆ?

ಕಳ್ಳ : ಇನ್ನು ಮಾಡೋದಿಲ್ಲ; ಹಡಪ ಕೊಡಿ.

ಮೇಳದ ನಾಯಕ : ತಪ್ಪಾಯ್ತೂಂತ ಹೇಳ್ತೀಯಾ?

ಕಳ್ಳ : ತಪ್ಪಾಯ್ತು, ಹಡಪ ಕೊಡಿ.

ಮೇಳದ ನಾಯಕ : ಕಿವಿ ಹಿಡಿದುಕೊಳ್ತೀಯಾ?

ಕಳ್ಳ : ಹಿಡಕೊಂಡೆ, ಹಡಪ ಕೊಡಿ,

ಮೇಳದ ನಾಯಕ : ಎದ್ದುಕೂತು ಮಾಡ್ತೀಯಾ?

ಕಳ್ಳ : (ಎದ್ದುಕೂತು) ಮಾಡಿದೆ ಹಡಪ ಕೊಡು.

ಮೇಳದ ನಾಯಕ : ತಪ್ಪಿಗೆ ಹತ್ತು ನಾಣ್ಯ ದಂಡ ಕೊಡ್ತೀಯಾ? ಇಲ್ಲಾ ಕೆನ್ನೆಗೆ ಹತ್ತೇಟು ಹೊಡಕೊಳ್ತೀಯ?

ಕಳ್ಳ : ಹತ್ತೇಟು ಹೊಡಕೊಳ್ತೀನಿ. (ಹೊಡೆದುಕೊಳ್ಳುತ್ತ) ಒಂದು ಎರಡು

ಮೇಳದ ಇನ್ನೊಬ್ಬ : ಜೋರಾಗಿ.

ಕಳ್ಳ : ಮೂರು ನಾಲ್ಕು ಐದು ಆರು.

ಮೇಳದ ಒಬ್ಬ : ಇನ್ನೂ ಜೋರಾಗಿ.

ಕಳ್ಳ : ಏಳು ಎಂಟು ಒಂಬತ್ತು ಹತ್ತು……ಹೊಡಕೊಂಡೆ. ಹಡಪ ಕೊಡಿ.

ಮೇಲದ ನಾಯಕ : ಕೊಡಲಾ?

ಕಳ್ಳ : ಕೊಡಿ ಸ್ವಾಮಿ.

ಮೇಳದ ನಾಯಕ : ಕೊಡಲಾ?

ಕಳ್ಳ : ಕೊಡಿ ಸ್ವಾಮಿ

ಮೇಳದ ನಾಯಕ : ಕೊಡೋದಿಲ್ಲ ಹೋಗಯ್ಯಾ

ಕಳ್ಳ : ಅಯ್ಯಾ, ಅಯ್ಯಾ ಹತ್ತು ನಾಣ್ಯ ಕೊಡತೀನಿ, ಕೊಡಿ, ಇಗಾ ತಗೊಳ್ಳಿ.

(ಕೊಡುವನು, ಮೇಳದ ನಾಯಕ ಹಡಪ ಕೊಡಹೋಗಿ ಇನ್ನೊಬ್ಬನಿಗೆ ಎಸೆಯುವನು. ಅವನು ಇನ್ನೊಬ್ಬನಿಗೆ. ಕಳ್ಳಅಯ್ಯಯ್ಯೋ ಕೊಡಿ ಸ್ವಾಮಿಎನ್ನುತ್ತ ಓಡೋಡಿ ಹಡಪವನ್ನೇ ಅನುಸರಿಸುತ್ತಾರೆ. ಹಡಪದೊಳಗಿನ ಸಾಮಾನು ಕೆಳಗೆ ಬೀಳುತ್ತವೆ. ಅಷ್ಟರಲ್ಲಿ ಹಕೀಂ ಮುಸ್ತಫಾ ಬಾಬಾ ಬರುತ್ತಾನೆ.)

ಹಕೀಂ : ಏ ಏ, ಮೇಳದವರಾ, ಬಿಡ್ರೋ ಬಿಡ್ರೋ ಪಾಪ……………

ಮೇಳದ ಒಬ್ಬ : ಆಗೋದಿಲ್ಲರಿ.

ಹಕೀಂ : ಅಯ್ಯೋ, ನನ್ನ ಮುಖ ನೋಡಿ ಬಿಡ್ರೊ.

ಮೇಳದ ನಾಯಕ : ಎಲ್ಲರೂ ಇವನ ಮುಖ ನೋಡಿದಿರೇನ್ರೋ?

ಎಲ್ಲರೂ : ನೋಡಿದಿವಿ.

ಮೇಳದ ನಾಯಕ : ಅಯ್ಯಾ ಹಕೀಮರೇ, ನಿಮ್ಮ ಮುಖ ನೋಡಿ ಇವನನ್ನ ಬಿಡತೀವಿ.
ಇನ್ನೊಮ್ಮೆ ನಮ್ಮ ತಂಟೆಗೆ ಬರಬೇಡಾ ಅಂತ ಬುದ್ಧೀ ಹೇಳಿ. ನಡೀರೊ……..

(ಮೇಳದವರು ಸ್ವಸ್ಥಾನಕ್ಕೆ ಹೋಗುವರು, ಚೆಲ್ಲಾಪಿಲ್ಲಿಯಾದ, ಹಡಪದೊಳಗಿನ ವಸ್ತುಗಳನ್ನೆಲ್ಲ ಕಳ್ಳ ಕಲೆಹಾಕತೊಡಗುತ್ತಾನೆ. ಹಕೀಮನೂ ಅವನಿಗೆ ನೆರವಾಗುತ್ತಾನೆ. ಹಕೀಮನಿಗೆ ಮೆಟ್ಟು ಸಿಗುತ್ತದೆ. ಅದನ್ನೇ ನೊಡುತ್ತ ನಿಂತುಬಿಡುತ್ತಾನೆ. ಕಳ್ಳ ಇದನ್ನು ಗಮನಿಸಿ ಕೂಡಲೇ ಓಡಿಬಂದು ಅದನ್ನು ಕಸಿಯಲೆತ್ನಿಸುತ್ತಾನೆ. ಹಕೀಂ ಕೊಡುವುದಿಲ್ಲ.)

ಹಕೀಂ : ಅಯ್ಯಾ ಇದು ಯಾರದು?

ಕಳ್ಳ : ನಂದು.

ಹಕೀಂ : ಇನ್ನೊಂದೆಲ್ಲಿ?

ಕಳ್ಳ : ಇದೊಂದೇ ಇರೋದು.

ಹಕೀಂ : ಇಲ್ಲಿ ಬಾ. (ನಾಡಿ ಹಿಡಿದು) ಜೀವಂತವಾಗಿದ್ದೀಯಲ್ಲಾ! ಅಯ್ಯಾ ಈಗ
ಎರಡು ದಿನಗಳ ಹಿಂದೆ ನೀನೇನಾದರೂ ಸತ್ತುಹೋಗಿದ್ದೆಯಾ?

ಕಳ್ಳ : ನನಗೆ ಆಗೀಗ ಸಾಯೋ ಅರ್ಭಯಾಸ ಇಲ್ಲವಲ್ಲ.

ಹಕೀಂ : ಹಾಗಿದ್ದರೆ ಈ ಮೆಟ್ಟು ನಾನು ನೋಡಿದ್ದೀನಲ್ಲ!

(ಕಳ್ಳ ತಕ್ಷಣ ಹಕೀಮನ ಕಾಲು ಹಿಡಿದು)

ಕಳ್ಳ : ಸ್ವಾಮೀ, ಸ್ವಾಮೀ ನಿಮ್ಮನ್ನೇ ಹುಡಿಕ್ಕೊಂಡು ನಾನು ಬಂದದ್ದು.

ಹಕೀಂ : ನನ್ನನ್ನ?

ಕಳ್ಳ : ಹೌದು. ದಯವಿಟ್ಟು ಆ ಮೆಟ್ಟು ನೋಡಿದ್ದೀರಲ್ಲ, ಎಲ್ಲಿ ನೋಡಿದಿರಿ, ಯಾವಾಗ ನೋಡಿದಿರಿ, ಯಾಕೆ ನೋಡಿದಿರಿ,-ಎಲ್ಲಾ ಹೇಳಿಕೊಟ್ಟರೆ ಹತ್ತು ಚಿನ್ನದ ನಾಣ್ಯ ಕೊಡತೀನಿ.

ಹಕೀಂ : ಹತ್ತು! ಮೊದಲು ಕೊಡು, ಹೇಳ್ತೀನಿ. (ಕೊಡುವನು.)

ಕಳ್ಳ : ಹೇಳಿ.

ಹಕೀಂ : ಅದನ್ನ ಒಂದು ಮನೆಯಲ್ಲಿ ನೋಡಿದೆ.

ಕಳ್ಳ : ಯಾವ ಮನೆ?

ಹಕೀಂ : ಇನ್ನೂ ಹತ್ತು ಕೊಡು, ಹೇಳ್ತೀನಿ; (ಕೊಡುವನು.)

ಕಳ್ಳ : ಬೇಗ ಹೇಳಿ.

ಹಕೀಂ : ಆದರೆ ಆ ಮನೆ ನನಗೆ ಗೊತ್ತಿಲ್ಲವಲ್ಲ. (ಕಳ್ಳ ರೇಗಿ ಚೂರಿ ತೆಗೆಯುತ್ತ)

ಕಳ್ಳ : ನಾ ಯಾರು ಗೊತ್ತೇನ್ರಿ? ಕಳ್ಳ! ನಾ ಬಂದಿರೋದು ಕಳ್ಳನ್ನ ಪತ್ತೇ ಹಚ್ಚಲಿಕ್ಕೆ. ಹುಷಾರಾಗಿ ಮಾತಾಡಿ.

ಹಕೀಂ : ಹಾ ನೆನಪಾಯ್ತು. ಒಂದು ಕೆಲಸ ಮಾಡು. ನನ್ನ ಕಣ್ಣು ಕಟ್ಟು. ರಸ್ತೆಯಲ್ಲಿ ಕೈಹಿಡಿದುಕೊಂಡು ಹೀಗೆ ನಡೆ. ನಾ ಎಡ ಅಂದರೆ ಎಡಕ್ಕೆ. ಬಲ ಅಂದರೆ ಬಲಕ್ಕೆ ತಿರುಗು. ನಾ ಎಲ್ಲಿ ಅಲ್ಲಾ ಅಂತ ಎಡವಿ ಬೀಳ್ತೀನೋ ಅಲ್ಲೇ ಅವರ ಮನೆ.

ಕಳ್ಳ : ಅದ್ಸರಿ, ಕಣ್ಣುಕಟ್ಟಲೇ ಬೇಕಾ?

ಹಕೀಂ : ಹೌದಪ್ಪಾ, ಆ ದಿನ ಹುಡುಗಿ ಮನೇ ಗುರ್ತು ಸಿಗದಿರಲೀ ಅಂತ ಕಣ್ಣು ಕಟ್ಟಿಕೊಂಡೇ ಕರೆದುಕೊಂಡು ಹೋದ್ಲು. (ಮಾತು ಮುಂದುವರಿದಂತೆ ಕಳ್ಳನ ಮುಖ ಫಳಫಳ ಹೊಳೆಯತೊಡಗುತ್ತದೆ.) ಒಳಗಡೆ ಹೋದಮೇಲೆ ಕಣ್ಣು ಬಿಚ್ಚಿದರು. ಆತ ಬದುಕೋ ಆಸೆ ಇರಲಿಲ್ಲ. ಮೈತುಂಬ ಚೂರಿ ಗಾಯಗಳಾಗಿತ್ತು. ಮಾಡೋ ವೈದ್ಯ ಮಾಡಿದೆ. ಆಗಲೇ ಇದರ ಜೊತೆ ಮೆಟ್ಟು ನಾನಲ್ಲಿ ನೋಡಿದ್ದು, ಒಂದೇ ಇದೆಯಲ್ಲಾ ಅಂತ ಅನ್ನಿಸ್ತು, ಆತ ಬದುಕಲಿಲ್ಲ. ಯಾರ ಮುಂದೂ ಹೇಳಬೇಡ ಅಂತ್ಹೇಳಿ, ಮತ್ತೆ ಕಣ್ಣು ಕಟ್ಟಿ ವಾಪಸ್ಸು ತಂದು ಬಿಟ್ಟರು.

ಕಳ್ಳ : ನಿಜಾನಾ ಸ್ವಾಮಿ? ಕಣ್ಣು ಕಟ್ಟಿದರೆ ಮನೆ ಗುರ್ತು ಖಂಡಿತ ಸಿಗುತ್ತಲ್ಲಾ?

ಹಕೀಂ : ನೀ ಕಟ್ಟಿ ನೋಡು, ಹೇಳ್ತೀನಿ. ಆದರೆ ನೀ ಮೊದಲೇ ಕಳ್ಳ. ಕಣ್ಣು ಬೇರೆ ಕಟ್ಟಿರ್ತೀಯ. ನನ್ನ ಜೇಬಿಗೆ ಕೈ ಬಿಡಬೇಡ.

ಕಳ್ಳ : ಅಯ್ಯೋ ಉಂಟೇ ಸ್ವಾಮಿ? ಬನ್ನಿ ಬನ್ನಿ…………

(ಹಕೀಮನ ಕಣ್ಣು ಕಟ್ಟುವನು. ಹೊರಡುವರು)

ಹಕೀಂ : ಅದಾಯ್ತಲ್ಲಾ, ಏನಾದರೂ ಮಾತಾಡ್ತಿರಪ್ಪ. ಅವಳೂ ಆ ಮನೇತನಕಾ ಮಾತಾಡ್ತಾನೇ ಇದ್ಲು. ಏನ್ಸಮಾಚಾರ?

ಕಳ್ಳ : ನಾವೂ ಸಜ್ಜನರೇ ಸ್ವಾಮಿ. ಆಗೀಗ ಕಳ್ಳತನ ಮಾಡ್ತೀವಷ್ಟೇ. ಆದರೆ ಯಾವನೋ ನಮಗಿಂತ ಭಾರೀ ಸಜ್ಜನ, ಅಂದರೆ ಕಳ್ಳ ನಾವು ಮಾಲು ಇಡೋ ಜಾಗ ಪತ್ತೆ ಮಾಡಿಕೊಂಡು ಕದೀಲಿಕ್ಕೆ ಸುರು ಮಾಡಿದಾನೆ. ಮೊನ್ನೆ ಸಿಕ್ಕುಬಿದ್ದ.

ಹಕೀಂ : ಎಡಕ್ಕೆ.

(ಎಡಕ್ಕೆ ತಿರುಗುವರು.)

ಕಳ್ಳ : ಮೊನ್ನೆ ಸಿಕ್ಕುಬಿದ್ದ. ಹಣ್ಣುಗಾಯಿ ನೀರುಗಾಯಿ ಮಾಡಿದಿವಿ; ಅಲ್ಲೇ ಚೆಲ್ಲಿ ಹೋದಿವಿ. ಬಂದು ನೋಡಿದರೆ ಆಸಾಮಿ ನಾಪತ್ತೆ! ಇದಕ್ಕೇನಂತಿರಾ?

ಹಕೀಂ : ಬಲಕ್ಕೆ. (ಬಲಕ್ಕೆ ತಿರುಗುವರು.)

ಕಳ್ಳ : ನಮಗೊಬ್ಬ ಯಜಮಾನ, ಬಾಸ್ ಇಲ್ಲವೆ? ಹಾಗೇ ಅವನಿಗೂ ಒಬ್ಬ ಬಾಸ್ ಇರಬೇಕು. ನೋಡಿ, ಅವ ಬಂದು……………..

ಹಕೀಂ : ಎಡಕ್ಕೆ. (ಎಡಕ್ಕೆ ತಿರುಗುವರು.)

ಕಳ್ಳ : ಅವ ಬಂದು ಇವನ್ನು ಎತ್ತಿಕೊಂಡು ಹೋದ. ಅವಸರದಲ್ಲಿ ಒಂದು ಮೆಟ್ಟು ಬಿಟ್ಟು ಹಾಗೇ ಹೋಗಿದಾನೆ. ಕಳ್ಳನ ಪತ್ತೇ ಮಾಡಲಿಕ್ಕೆ ನಮಗಿರೋದು ಈ ಮೆಟ್ಟೊಂದೇ ಗತಿ. ನೀವು ಸಿಕ್ಕಿರಲ್ಲ ಸಧ್ಯ,-

ಹಕೀಂ : ಬಲಕ್ಕೆ, (ಬಲಕ್ಕೆ ತಿರುಗುವರು.)

ಕಳ್ಳ : ನನಗೇನಾದರೂ ಆ ಕಳ್ಳನ ಪತ್ತೆ ಆದರೆ ನನ್ನ ಡಿಗ್ರಿ ಏನ್ಯೇಳ್ತೀರಾ? ಐಜೀಕೆ!

ಹಕೀಂ : ಈಗ ನೀನೇನು?

ಕಳ್ಳ : ಬರೀ ಒಬ್ಬ ಪ್ಯಾದೇ ಅಷ್ಟೆ.

ಹಕೀಂ : ಹಾಯಲ್ಲಾ! (ಎನ್ನುತ್ತ ಎಡವಿ ಬೀಳುವನು.) ಕಣ್ಣು ಬಿಚ್ಚು. ಕಣ್ಣು ಬಿಚ್ಚು. (ಕಣ್ಣು ಬಿಚ್ಚುತ್ತಾನೆ.) ಇಲ್ಲಿಂದ ಮೂರೇ ಹೆಜ್ಜೆ. ಇದೇ ಮನೆ.

ಕಳ್ಳ : ನಿಜವಾಗ್ಲೂ?

ಹಕೀಂ : ಸಂಶಯವೇ ಇಲ್ಲ.

ಕಳ್ಳ : ಹಾಗಿದ್ದರೆ ಇರಿ. ಈ ಮನೆಗೆ ಗುರ್ತು ಮಾಡಿರತೇನೆ.

(ಕಳ್ಳ ಮನೆಗೆ ಗುರ್ತು ಮಾಡಿ ಬರುವನು. ಅಷ್ಟರಲ್ಲಿ ಹೊರಗಿನಿಂದ ಬಂದು ಮರ್ಜೀನಾ ಅಡಗಿಕೊಂಡು ಇವರನ್ನೇ ಗಮನಿಸುತ್ತಿದ್ದಾಳೆ.)

ಕಳ್ಳ : ಸ್ವಾಮೀ, ನನಗೆ ಬಡ್ತಿ ಗ್ಯಾರಂಟಿ. ತಮ್ಮ ಉಪಕಾರ ಜಾಸ್ತೀ ಆಯ್ತು. ನಿಮ್ಮ ಹೆಸರ್ಹೇಳಿ ನನ್ನ ರುಮಾಲಿಗೆ ಈಜೀಕೆ-ತುರಾಯಿ ಹಾಕ್ಕೊಳ್ತೀನಿ. ನಿಮ್ಮ ಹೆಸರೇ ನಂದಿರಿ?

ಹಕೀಂ : ಮುಸ್ತಫಾ ಬಾಬಾ.

ಕಳ್ಳ : ಸರಿ ಬಿಡಿ. ಐಜೀಕೆಎಂ ಅಂತ ಹೆಸರಿಟ್ಕೋತೀನಿ. ಇದೊ ಇನ್ನೂ ಹತ್ತು ನಾಣ್ಯ ಇಟ್ಕೊಳ್ಳಿ. ತಾವಿನ್ನು ಹೊರಡಬಹುದು. ನಾ ಬರ್ತೀನಿ.

ಹಕೀಂ : ನಾ ಇನ್ನ ಮೇಲೆ ವೈದ್ಯವೃತ್ತಿ ಬಿಟ್ಟು ಮನೇ ತೋರಿಸೋ ಕಸಬು ಮಾಡೋದೇ ಒಳ್ಳೇದು ಅಂತ ಕಾಣಸ್ತದೆ! (ಹೋಗುವರು. ಮರ್ಜೀನಾ ಬರುವಳು.)

ಮರ್ಜೀನಾ : ಅದ್ಯಾಕೆ ನಮ್ಮ ಮನೆಗೆ ಈ ಥರ ಗುರ್ತು ಮಾಡಿದರಲ್ಲ! ಹಕೀಂ ಮುಸ್ತಫಾ ಬಾಬಾನೇ ಮನೆ ತೋರಿಸಿ ಹೋದ. ಇದು ಆ ಕಳ್ಳರ ಸಂಚೀ ಸರಿ.

(ಸಲೀಂ ಬರುವನು.)

ಸಲೀಂ : ಪ್ಯಾರೇ, ಮರ್ಜೀನಾ!

ಮರ್ಜೀನಾ : ಸಲೀಂ, ಕಳ್ಳರಿಗೆ ನಮ್ಮ ಮನೇ ಗುರ್ತು ಸಿಕ್ಕಿರೋ ಹಾಗಿದೆ, ಅಕಾ ನೋಡು ಹ್ಯಾಗೆ ಗುರ್ತು ಮಾಡಿ ಹೋಗಿದಾರೆ! ಇದೇ ಥರ ನಾವೂ ಎಲ್ಲಾ ಮನೆಗಳಿಗೂ ಗುರ್ತು ಮಾಡಬೇಕು. ನಾನು ಈ ಸಾಲಿನ ಮನೆಗಳಿಗೆ ಗುರ್ತು ಮಾಡತೇನೆ.
ನೀನು ಆ ಸಾಲಿಗೆ ಹೊರಡು. (ಮರ್ಜೀನಾ ಹೊರಡುವಳು. ಸಲೀಂ ಅವಳು ಹೇಳಿದ ಹಾಗೇ ಮನೇ ಬಾಗಿಲ ಮೇಲೆ ಗುರ್ತು ಮಾಡುತ್ತ ಹೊರಡುತ್ತಾನೆ. ಹಾಗೆ ಗುರತು ಮಾಡುವಾಗೆಲ್ಲಪ್ಯಾರೇ ಮರ್ಜೀನಾಎಂದು ಜಪಿಸುತ್ತಾನೆ. ಒಂದು ಮನೇ ಮುಂದೆ ಒಬ್ಬ ಭಾರೀ ಹೆಂಗಸು ಬುರ್ಖಾದಲ್ಲಿ ನಿಂತಿದ್ದಾಳೆ. ಬಾಗಿಲೆಂದು ಭಾವಿಸಿ ಅವಳ ಹಣೇ ಮೇಲೆ ಗುರುತು ಕೊರೆಯುತ್ತಾನೆ. ತಕ್ಷಣ ಅವಳು ಬುರ್ಖಾ ತೆಗೆಯುತ್ತಾಳೆ. ತಾನು ಮಾಡಿದ ತಪ್ಪು ಅರಿವಾಗಿ ಸಲೀಂ ತಬ್ಬಿಬ್ಬಾಗುತ್ತಾನೆ.)

ಸಲೀಂ : ಕ್ಷಮಿಸಬೇಕು ಪ್ರೇಮಿಗಳಿಗೆ ಕಣ್ಣು ಕಾಣೋದಿಲ್ಲ ಅಂತ ಹೇಳ್ತಾರೆ………ನಾನೂ ಅಷ್ಟೊ ಇಷ್ಟೊ ಸುರು ಮಾಡಿದೀನಿ. ಅದಕ್ಕೇ……..

( ಹೆಂಗಸು ಇನ್ನೂ ಹಾಗೇ ನಿಂತಿದ್ದಾಳೆ. ಹೆದರಿ ಮರ್ಜೀನಾ ಎನ್ನುತ್ತ ಓಡಿ ಹೋಗುತ್ತಾನೆ.)