(ರಂಗದ ಮೇಲೆ ದೂರದಿಂದೆಂಬಂತೆ ಚೋರೋಂಕಾ ರಾಜಾ ಹಸನ್ ಮತ್ತು ಕಳ್ಳ ಬರುತ್ತಾರೆ.)

ಹಸನ್ : ಮನೆ ಸರಿಯಾಗಿ ನೋಡಿದ್ದೀ ತಾನೆ?

ಕಳ್ಳ : ನೋಡಿದೀನಿ, ಮನೇ ಮೇಲೆ ಗುರ್ತು ಕೂಡ ಹಾಕಿದೀನಿ ಬಾಸ್! ನನ್ನ ಜಾಣತನ ನೋಡಿ ನೀವೇ ಭೇಶ್ ಮಗನೇ ತಗೋ ಬಡ್ತಿ ಅಂತೀರಾ.

ಹಸನ್‌: ನೀನು ಆ ಥರ ಗುರ್ತು ಮಾಡೋದನ್ನ ಯಾರೂ ನೋಡಿಲ್ಲ ತಾನೆ?

ಕಳ್ಳ : ಮೂವತ್ತು ವರ್ಷ ಕಳ್ಳತನ ಮಾಡಿದೀನಿ. ಅಷ್ಟೂ ತಿಳಿಯುವುದಿಲ್ಲವೆ ಹುಜೂರ್?

ಹಸನ್ : ಆ ಮನೆಯವರ ವಿಷಯ ಗೊತ್ತಾಯ್ತಾ?

ಕಳ್ಳ : ತಿಳಿದುಕೊಂಡೆ ಹುಜೂರ್. ಆತನ ಹೆಸರು ಖಾಸೀಂ ಅಂತ. ಆತನೂ ತಮ್ಮ ಹಾಗೇ ಚೋರೋಂಕಾ ರಾಜನೇ. ಮಂದಿಗೆ ತೋರ್ಸೋದಿಕ್ಕೆ ಒಂದು ಅಂಗಡಿ ಇಟ್ಕೊಂಡಿದ್ದ. ಹಗಲು ವ್ಯಾಪಾರ. ರಾತ್ರಿ ಕಳ್ಳತನ. ಸರಿ, ತಮ್ಮ ಕೈಗುಣ ಗೊತ್ತಿಲ್ಲವೆ? ಸಿಕ್ಕಿಬಿದ್ದ, ಸತ್ತ. ಮುಂದೆ ಅವನ ತಮ್ಮ ಅಲೀಬಾಬಾನಿಗೆ ಬಡ್ತಿ ಸಿಕ್ಕಿತಂತೆ. ಅವನೀಗ ಖಾಸೀಮನ ಮನೆಯಲ್ಲೇ ಇದ್ದಾನೆ. ಅವನ ಮಗ ಸಲೀಂ ಅಂಗಡಿ ನೋಡಿಕೊಳ್ತಾನೆ. ಇವನು ಆರಾಮಾಗಿ ಕತ್ತೆಗಳ ಸಂಗೀತ ಕೇಳಿಕೊಂಡು ಬಿದ್ದಿರ್ತಾನೆ. ನಾನೊಬ್ಬ ಜುಜುಬೀ ಕಳ್ಳ ಆಗಿದ್ದರೆ ಇಷ್ಟೆಲ್ಲಾ ವಿಷಯ ತಿಳೀತಿತ್ತಾ ಹುಜೂರ್? ಮೂವತ್ತು ವರ್ಷ ಸರ್ವೀಸು ಸುಳ್ಳಾ ಹುಜೂರ್? ಇನ್ನೇನು ರಿಟೈರಾಗೋ ವಯಸ್ಸು. ತಾವು ದೊಡ್ಡ ಮನಸ್ಸು ಮಾಡಿ ಬಡ್ತಿ ಕೊಟ್ಟರೆ…..

ಹಸನ್ : ನೀನು ಅವರ ಮನೆಗೆ ಸರಿಯಾಗಿ ಗುರ್ತು ಹಾಕಿದ್ದೀ ತಾನೆ?

ಕಳ್ಳ : ಓಹೋ! ನೋಡಿ ಎದುರಿಗಿದೆಯಲ್ಲ, ಅದೇ ಮನೆ.

ಹಸನ್ : ಪಕ್ಕದ ಮನೆಗೂ ಅದೇ ಗುರ್ತಿದೆಯಲ್ಲ?

ಕಳ್ಳ : ಅದೇ ಹುಜೂರ್! ಈ ಎರಡು ಮನೆಗಳಲ್ಲೇ ಖಾಸೀಮನ ಮನೆ ಒಂದು.

ಹಸನ್ : ಅಕಾ, ನೋಡು, ಇನ್ನೊಂದು ಮನೆಗೂ ಅದೇ ಥರ ಗುರ್ತಿದೆ!

ಕಳ್ಳ : ಛೇ ಛೇ, ಆ ರೀತಿ ಗುರ್ತಿರೋದು ಒಳ್ಳೇದು ಅಂತ ಅವರೂ ಗುರ್ತು ಮಾಡಿ ಕೊಂಡಿದಾರೆ. ಹುಜೂರ್, ಈ ಮೂರು ಮನೆಗಳಲ್ಲೆ ಯಾವುದೋ ಒಂದು ಮನೆ ಖಾಸೀಮನದು.

ಹಸನ್ : ಇಡೀ ರಸ್ತೆ ಮನೆಗಳಿಗೆಲ್ಲಾ ಆ ಗುರ್ತಿದೆ!

ಕಳ್ಳ : ಅಂತೂ ಈ ರಸ್ತೆಯಲ್ಲೇ ಆ ಮನೆಯಿದೆ.

ಹಸನ್ : ಹಲಾಲ್‌ಖೋರ್! ಈ ಊರಿನಲ್ಲೇ ಆ ಮನೆಯಿದೆ ಅಂತ ನನಗೂ ಗೊತ್ತು. ಎಲ್ಲಾ ಮನೆಗಳಿಗೂ ಆ ಗುರ್ತಿದೆ. ಈಗ ಖಾಸೀಮನ ಮನೆ ಗುರ್ತು ಹಿಡಿಯೋದು
ಹ್ಯಾಗೆ?

ಕಳ್ಳ : (ಹೆದರಿ) ಹುಜೂರ್, ನಾನು ಒಂದೇ ಮನೆಗೆ ಗುರ್ತು ಹಾಕಿದ್ದೆ. ಯಾರೋ ಕೇಡಿಗಳು ಎಲ್ಲಾ ಮನೆಗಳಿಗೂ ಹಾಗೇ ಗುರ್ತು ಮಾಡಿದಾರೆ!

ಹಸನ್ : ಆ ಕಳ್ಳ ನಮಗಿಂತ ಬೆರಿಕಿ ಅನ್ನೋದರಲ್ಲಿ ಸಂಶಯವೇ ಇಲ್ಲ. ಈಗ ಖಾಸೀಮನ ಮನೆ ಗುರ್ತು ಹಿಡೀಬೇಕಲ್ಲ. ಹಕೀಮನ ಹತ್ತಿರ ನಡೆ.

ಕಳ್ಳ : ನಾ ಹೇಳ್ತೀನಿ ಹುಜೂರ್,- ಈಗ ಖಾಸೀಮನ ಮನೆಲಿರೋನು ಅಲೀಬಾಬಾ. ಅಲೀಬಾಬಾನ ಹತ್ತಿರ ಮೂರು ಕತ್ತೆ ಇವೆ. ಆ ಗಂಡು ಕತ್ತೆಗೆ ಹೆಣ್ಣು ಕತ್ತೆಗಳ ಖಯಾಲಿ ಜಾಸ್ತಿ. ನಾನು ಹೆಣ್ಣು ಕತ್ತೆ ಥರ ಒದರ್ತೇನೆ. ಯಾವ ಮನೆಯಿಂದ ಗಂಡು ಕತ್ತೆ ಹೊರಗೋಡಿ ಬರುತ್ತೋ, ಅದೇ ಅವನ ಮನೆ.

(ಹಸನ್ ಕ್ರೂರವಾಗಿ ಇವನತ್ತ ನೋಡುವನು. ಕಳ್ಳ ಇನ್ನೊಂದು ಕಡೆ ತಿರುಗಿ ನಿಂತು ಹೆಣ್ಣು ಕತ್ತೇಥರ ಒದರುತ್ತಾನೆ. ದೂರದಿಂದ ಇನ್ನೊಂದು ಕತ್ತೆಯ ಉತ್ತರ ಬರುವುದು. ಹಸನನಿಗೆ ಖುಷಿಯಾಗಿ ಕಳ್ಳನ ಬಳಿ ಬರುವನು.)

ಹಸನ್ : ಏನಂತ ಹೇಳಿದೆ?

ಕಳ್ಳ : “ನಾನು ಸುಂದರಿಯಾದ ಯುವತಿ ಕತ್ತೆ. ಪ್ಯಾರ್ ಕರನಾ ಕೋಯೀ ಗದಾ ಹೈ?” ಅಂತ ಒದರಿದೆ. ಅದು “ಹಮ್‌ ಹೈ ಅಲೀಬಾಬಾ ಕಾ ಗದ್ದಾ” ಅಂತ ಒದರಿತು!

ಹಸನ್ : ಹಾಗಿದ್ದರೆ ಈಗಲೇ ಬಾ ಅಂತ ಒದರು.

(ಕಳ್ಳ ಮತ್ತೆ ಒದರುವನು. ಅಲೀಬಾಬಾನ ಕತ್ತೆ ರಾಕೆನ್ನರೋಲು ಹೊರಗೋಡಿ ಬರುವದು. ಜೊತೆಯಲ್ಲೇ ಅಲೀಬಾಬಾ ಕೋಲು ತಗೊಂಬಂದು ಬೈದು ಕತ್ತೆಯನ್ನು ಒಳಗೆ ಕರೆದೊಯ್ಯುವನು.)

ಹಸನ್ : ನಿಜ, ನಿಜ! ಇವನ ಚೇರಾಪಟ್ಟಿ ಅವನ ಹಾಗೇ ಇದೆ! ಇದೇ ಮನೆ. ನೋಡು, ನಾಲ್ವತ್ತೊಂದು ದೊಡ್ಡ ಹರಿವಿ ಕೊಂಡುಕೊ, ಒಂದರಲ್ಲಿ ಪೂರ್ತಿ ಎಣ್ಣೆ ಇರಲಿ. ಉಳಿದವುಗಳಲ್ಲಿ ಒಬ್ಬೊಬ್ಬ ಕಳ್ಳ ಒಂದೊಂದರಲ್ಲಿ ಕೂತು, ಒಂದೊಂದು ಹರಿವೀನ್ನ ಒಂದೊಂದು ಕುದುರೆ ಮೇಲೆ ಹೇರಿ ತಯಾರಾಗಿರಿ. ನಾ ಬಂದೆ.

ಕಳ್ಳ : ಹುಜೂರ್ ನನ್ನ ಬಡ್ತಿ?

ಹಸನ್ : ಹೋಗು ಇವತ್ತಿನಿಂದ ನೀನೇ ಐಜೀಕೆ.

(ಹೊರಡುವರು. ಕಳ್ಳ ಸೆಲ್ಯೂಟ್ ಹೊಡೆಯುವನು.)