(ದೊಡ್ಡ ಮನೆ. ೪೧ ಎಣ್ಣೆಯ ಹರವಿಗಳಿವೆ.)

ಮೇಳ : ಬಿದ್ದಾ ಸಲೀಮ ಕಳ್ಳನ ಬಲೆಗೆ
ಬಂದಾವು ಸಂಶಯ ಮರ್ಜೀನಾಳೀಗೆ|
ಹಿಂದೆನ್ನ ತಂದೆಯ ಕೊಂದವನೀತನೆ
ಕೊಂದೇ ಕೊಲ್ಲುವನೀಗ ಯಜಮಾನರನ್ನೆ|

(ಆರಿದ ದೀಪ ಹಿಡಿದುಕೊಂಡು, ವಿಚಾರಮಗ್ನಳಾದ ಮರ್ಜೀನಾ ಪ್ರವೇಶಿಸುವಳು.)

ಹ್ಯಾಗೆ ಮಾಡೋದಿವರ ಜೀವ ಉಳಿಸೋಕೆ|
ಹಳೆಯ ಸೇಡುಗಳನ್ನ ತೊಳೆಯುವುದಕ್ಕೆ||

ಅಲ್ಲಾ ಎಂಬವನಿಗೆ ಏನೆಲ್ಲ ಹೆಸರು
ದುಷ್ಟರ ಶಿಕ್ಷಿಸುವ ಬೆನಕ ಎಂಬುವರು||

ಗಣಪತಿ ಬಂದಾ ಗುಟ್ಟು ತಿಳಿಸಿದಾ
ಶಿಷ್ಟರಿಗೆ ರಕ್ಷಣೆ ದಯಪಾಲಿಸಿದಾ||

ಮರ್ಜೀನಾ : ಇವನೆಂಥ ಮಳ್ಳ ಈ ಸಲೀಂ! ಬಂದವನು ಆಯಿಲ್ ಶಾ ಅಲ್ಲ, ಕಳ್ಳ, ಚೋರೋಂಕಾ ರಾಜಾ ಅಂದರೂ ನಂಬೋದೇ ಇಲ್ಲ. ಗವಿಯಿಂದ ಚಿನ್ನ ತಂದಿದೀರಲ್ಲ, ಪತ್ತೆ ಹತ್ತಿ ನಿಮ್ಮನ್ನ ಕೊಲ್ಲೋದಕ್ಕೆ ಬಂದಿದಾನೆ ಅಂದರೆ “ಪಾಪ ಎಣ್ಣೇ ವ್ಯಾಪಾರಿ ನೀನೇನೋ ಅಂತಿ” ಅಂತ ನನ್ನನ್ನೇ ಗದರತಾನೆ. ನನ್ನ ತಂದೇನ್ನ ಕೊಂದವನು, ಇವನ ಚೀರಾಪಟ್ಟಿ ನನಗ್ಗೊತ್ತಿಲ್ಲವೆ? ಹೋಗಲಿ, ಯಜಮಾನರಿಗೂ ತಿಳಿಯಬಾರದೆ? ಮನೆಗೆ ಬಂದ ಅತಿಥಿಗಳನ್ನ ಹಾಗೆಲ್ಲಾ ಸಂಶಯದಿಂದ ನೋಡಬಾರದು ಅಂತ ಹೇಳ್ತಾರೆ! ನೋಡೋಣ. ಎಣ್ಣೆ ಇಲ್ಲದೆ ಈ ದೀಪ ಬೇರೆ ಆರತಾ ಇದೆ. ಹ್ಯಾಗೂ ಆಯಿಲ್ ಶಾನ ಎಣ್ಣೆ ಹರವಿಯಿಂದಲೇ ಸ್ವಲ್ಪ ಎಣ್ಣೆ ತಕ್ಕೊಂಡಿರೋಣ.

(ಕತ್ತಲೆ. ಒಂದು, ಹರವಿ ಹತ್ತಿರ ಬರುತ್ತಾಳೆ. ಪಾತ್ರೆ ಅದ್ದುತ್ತಾಳೆ. ಅದರಲ್ಲಿ ಎಣ್ಣೆ ಇದೆ, ತಕ್ಕೊಂಡು ಹೊರಡಬೇಕೆನ್ನುವಷ್ಟರಲ್ಲಿ ಇನ್ನೊಂದು ಹರವಿಯೊಳಗಿನಿಂದ ಪೂರ್ವರಂಗದಲ್ಲಿ ಚೋರೋಂಕಾ ರಾಜಾ ಎತ್ತಿಕೊಂಡು ಹೋಗಿದ್ದ ಗಣೇಶ ಪಾತ್ರಧಾರಿ ಹುಡುಗ ಕಳ್ಳನ ವೇಷದಲ್ಲಿ ಏಳುತ್ತಾನೆ. ಆತ ಮರ್ಜೀನಾ ಎಂದು ಹೆಸರುಗೊಂಡು ಕರೆಯುತ್ತಲೂ ಮರ್ಜೀನಾ ಚಕಿತಳಾಗುತ್ತಾಳೆ.)

ಗಣೇಶ : ಮರ್ಜೀನಾ.

ಮರ್ಜೀನಾ : ಯಾರು ನೀನು?

ಗಣೇಶ : ಗುರುತು ಸಿಗಲಿಲ್ಲವೆ? ನಾನು ಗಣೇಶನಾಗಿದ್ದ ಹುಡುಗ. ಚೋರೋಂಕಾ ರಾಜಾ ಬಂದು ನನ್ನನ್ನ ಎತ್ತಿಕೊಂಡು ಹೋಗಿದ್ದನಲ್ಲ, ಅವನೇ ನಾನು.

ಮರ್ಜೀನಾ : ನಿನಗೇನು ಬೇಕು?

ಗಣೇಶ : ಎಂಥಾ ಹುಚ್ಚಿ ನೀನು? ಈಗ ನಿಮ್ಮೆಲ್ಲರ ಜೀವ ಅಪಾಯದಲ್ಲಿದೆ. ಚೋರೋಂಕಾ ರಾಜಾ ಹಸನ್ ತನ್ನ ಕಳ್ಳರನ್ನ ಕರಕೊಂಡು ನಿಮ್ಮನ್ನ ತೀರಿಸಲಿಕ್ಕೆ ಬಂದಿದ್ದಾನೆ. ಬೇಕಾದರೆ ನೋಡ್ತೀಯಾ? ಹೀಗೆ,-ಈ ಹರವಿ ಹತ್ತಿರ ಹೋಗು.

(ಹೋಗುವಳು. ಅವಳ ಕಾಲ ಸಪ್ಪಳ ಕೇಳಿ ಹರವಿಯೊಳಗಿಂದ ಒಬ್ಬ ಕಳ್ಳ ತಲೆ ಎತ್ತಿಎದ್ದು ಬರೋಣ ಬಾಸ್?” ಎಂದು ಪಿಸುನುಡಿಯುತ್ತಾನೆ. “ಈಗ ಬೇಡ. ಆಮೇಲೆ ಹೇಳ್ತೇನೆ ಹುಷಾರ್ಎಂದು ಮರ್ಜೀನಾ ನುಡಿದು ಹೆದರಿಕೊಂಡು ಮುಂದೆ ನಡೆಯುವಳು. ಇನ್ನೊಂದು ಹರವಿಯ ಬಳಿಯೂ ಹಾಗೇ ಆಗುತ್ತದೆ. ಹೀಗೇ ಅನೇಕ ಹರವಿ ಹತ್ತಿರ ನಡೆದು ಗಣೇಶನ ಬಳಿ ಓಡಿಬರುವಳು.)

ಗಣೇಶ : ಗೊತ್ತಾಯ್ತಾ? ಈ ಹರವಿಗಳಲ್ಲಿರೋದು ಕಳ್ಳರು.

ಮರ್ಜೀನಾ ; ನಮ್ಮನ್ನೀಗ ಅಲ್ಲಾನೇ ಕಾಪಾಡಬೇಕು.

ಗಣೇಶ : ಅದಕ್ಕೇ ಬಂದಿದೀನಲ್ಲಾ.

ಮರ್ಜೀನಾ : ಈಗ ಏನ್ಮಾಡೋದು?

ಗಣೇಶ : ಹೇಳ್ತೀನಿ ಬಾಯಿಲ್ಲಿ, ಇಕೋ ಈ ಹರವಿಯಲ್ಲಿ ಎಣ್ಣೆ ಇದೆ. ಆ ಎಣ್ಣೆನೆಲ್ಲಾ ಚೆನ್ನಾಗಿ ಕುದಿಯೋ ಹಾಗೆ ಕಾಸು. ನಾಕು ನಾಕು ಚೊಂಬು ಕಾದಣ್ಣೇನ ಪ್ರತಿಯೊಂದು ಹರವಿಯಲ್ಲಿ ಸುರಿ. ಆಗೇನಾದರೂ ಅವರು ಕಿರಚಬಹುದು. ನಾನು ಡ್ರಮ್ಮು ತಗೊಂಡು ಬಾರಿಸಿ ಯಾರಿಗೂ ಕೇಳಿಸದ ಹಾಗೆ ಮಾಡ್ತೀನಿ. ಈ ಕಳ್ಳ ನನ ಮಕ್ಕಳೆಲ್ಲಾ ಸತ್ಹೋಗತಾರೆ.

ಮರ್ಜೀನಾ : ಆಯಿಲ್ ಶಾ?-

ಗಣೇಶ : ಅವನೇ ಚೋರೋಂಕಾ ರಾಜಾ. ಊಟ ಮಾಡೋವಾಗ ನೃತ್ಯ ಮಾಡತೇನೆ ಅಂತ ಹೇಳು. ಪೂರ್ವರಂಗದಲ್ಲಿ ನನ್ನ ಮುಂದೆ ಮಾಡಿದೆಯಲ್ಲ, ಆ ಥರ ನೃತ್ಯ ಮಾಡ್ತಾ ಮಾಡ್ತಾ ಮೈ ಮರೆಸಿ ಆತನ ಹತ್ತಿರಾನೇ ಹೋಗು. ಅವನ ಹತ್ತಿರಾನೇ ಒಂದು ಚೂರಿ ಇದೆ. ಅದನ್ನ ಕಸಿದು ಅದರಿಂದಲೇ ಅವನ್ನ ಇರಿದುಬಿಡು. ಕಣ್ಣು ಮುಚ್ಚಿ ಕಣ್ಣು ತೆರೆಯೋದರೊಳಗೇ ಇದೆಲ್ಲಾ ಆಗಿರಬೇಕು. ಗೊತ್ತಾಯ್ತಾ?

ಮರ್ಜೀನಾ : ಇದೆಲ್ಲ ನನ್ನಿಂದ ಸಾಧ್ಯವಾ?

ಗಣೇಶ : ಬದುಕೋದಕ್ಕೆ ಇದೊಂದೇ ದಾರಿ. ಮೊದಲು ಇಲ್ಲಿಂದ ನನ್ನನ್ನೆತ್ತು. ಇಲ್ಲದಿದ್ದರೆ ನೀನು ನನ್ನ ಮೇಲೂ ಎಣ್ಣೇ ಸುರೀಬಹುದು.

(ಗಣೇಶನನ್ನು ಎತ್ತುವಳು).

ಮರ್ಜೀನಾ : ಮೊದಲು ಈ ಎಣ್ಣೇ ಹರಿವೆಯನ್ನ ನೀರೊಲೆತನಕ ಸಾಗಿಸೋಣ.

ಗಣೇಶ : ಇದನ್ನೊಯ್ದು ಒಲೇ ಮೇಲೆ ಇಟ್ಟು ನನ್ನ ಹೆಸರು ಹೇಳು, ತಕ್ಷಣ ಎಣ್ಣೆ ಕಾಯುತ್ತದೆ. ಹೂ ಹಿಡಿ…………..

(ಇಬ್ಬರೂ ಎಣ್ಣೆ ಹರವಿಯನ್ನ ತಗೊಂಡು ಹೊರಡುವಷ್ಟರಲ್ಲಿ ಸಲೀಂ ಮತ್ತು ಹಸನ್ ಅಲ್ಲಿಗೆ ಬರುತ್ತಾರೆ. ಹರವಿ ಅಲ್ಲೇ ನಿಲ್ಲುತ್ತದೆ. ಅವರು ಮಾತಿಗೆ ತೊಡಗುತ್ತಲೂ ಮಾಯವಾಗುತ್ತದೆ.)

ಹಸನ್ : ಹಹ್ಹಾ! ಗೋಡೌನು ಚೆನ್ನಾಗಿದೆ.

ಸಲೀಂ : ಯಾರಲ್ಲಿ?

ಹಸನ್ : ಯಾರಿಲ್ಲವಲ್ಲ.

ಸಲೀಂ : ಆ ಹರಿವೆ ನಡೆದಾಡಿದ ಹಾಗಾಯ್ತಲ್ಲ! ನೋಡಿ ಬರ್ತೀನಿ.

ಹಸನ್ : (ಅಷ್ಟರಲ್ಲಿ) ಛೇ ಛೇ, ಹರಿವೆ ನಡೆದಾಡೋದುಂಟೆ? ಇದ್ದಲ್ಲೇ ಇರಲಿ. ಗೋಡೌನು ತುಂಬಾ ಚೆನ್ನಾಗಿದೆ.

ಸಲೀಂ : ಯಾರಾದರೂ ಕಳ್ಳರಿದ್ದಾರೇನೋ ನೋಡೋಣ ಅಂತ.

ಹಸನ್ : ಛೇ ಛೇ ಕಳ್ಳರು. ಇಂಥಾ ಭದ್ರ ಗೋಡೌನಿಗೆ ನುಗ್ಗೋದುಂಟೆ! ಬನ್ನಿ ಬನ್ನಿ ಊಟ ಮಾಡೋಣ. ನಿಮ್ಮ ತಂದೆ ಕಾಯ್ತಿದಾರೆ ಪಾಪ. ಹೆಹೆ………. ಮಾಂಸದ ವಾಸನೆ ಬರ್ತಾ ಇದೆ. ಎಣ್ಣೇಲಿ ಕರೀತಾ ಇದಾರೇಂತ ಕಾಣಸತ್ತೆ. ಈ ವಾಸನೆಗೆ ನನ್ನ ಹಸಿವು ಜಾಸ್ತಿ ಆಯ್ತು. ಬನ್ನಿ. (ಹರವಿಗಳನ್ನು ಕುರಿತು) ನ್ನ ಪ್ರಿಯ ಹರಿವಿಗಳೇ ನಾವು ಊಟಕ್ಕೆ ಹೋಗಿರ್ತೀವಿ. ನಿಮಗೂ ಇಷ್ಟರಲ್ಲೇ ಕರಿದ ಮಾಂಸ ಇದೆ. ಅಲ್ಲೀತನಕ ಸುಮ್ಮನೆ ಕೂತಿರಿ. ಅಡ್ಡಾಡಬೇಡಿ. ಕರೆಯೋ ತನಕ ಕಾಯಬೇಕು, ಅಷ್ಟೆ. (ಸಲೀಮನಿಗೆ) ಜೋಕ್ ಹೊಡೆದೆ, ಹ್ಯಾಗಿದೆ ಹೆಹ್ಹೆಹ್ಹೆ………..ಬನ್ನಿ…….

(ಹೋಗುವರು. ಗಣೇಶ ದೊಡ್ಡದೊಂದು ಡ್ರಮ್ಮು ತರುವನು. ಮತ್ತೆ ಹೋಗಿ ಮೂರು ಕತ್ತೆಗಳನ್ನು ಎಳೆದು ತರುವನು. ಅಷ್ಟರಲ್ಲಿ ಮರ್ಜೀನಾ ಎಣ್ಣೆ ಪಾತ್ರೆ ಹಿಡಿದು ಬರುವಳು. ಕಾದೆಣ್ಣೆಯನ್ನು ಒಂದೊಂದೇ ಹರವಿಯಲ್ಲಿ ಸುರಿಯುತ್ತಿದ್ದಂತೆ ಗಣೇಶ ಜೋರಿನಿಂದ ಡ್ರಮ್ಮು ಬಾರಿಸುವನು. ಕತ್ತೆಗಳು ಕಿರುಚುವವು. ಹೀಗೇ ಪ್ರತಿಯೊಂದು ಹರವಿಗೂ ಸುರಿಯುತ್ತಾಳೆ.)