(ಖಾಲಿ ರಂಗದ ಮೇಲೆ ಒಬ್ಬ ಹುಡುಗ ಉಡಿ ತುಂಬ ಲಾಡು, ಎಡಗೈಯಲ್ಲಿ ಗಣೇಶನ ಮುಖವಾಡ ಹಿಡಿದುಕೊಂಡು ಅತ್ತಿತ್ತ ನೋಡುತ್ತ ಓಡಿ ಬರುವನು. ಗಣೇಶನಿಗೆ ಇಟ್ಟಿದ್ದ ಆಸನದ ಮೇಲೆ ಮುಖವಾಡ ಇಟ್ಟು ಒಂದೊಂದೇ ಲಾಡು ತಿನ್ನತೊಡಗುತ್ತಾನೆ.)

ಹುಡುಗ : ಅಬ್ಬಾ! ಏನು ರುಚಿಯಾಗಿದೆಯಂತ! ಈ ಮೇಷ್ಟ್ರಿಗೆ ಬುದ್ಧೀನೇ ಇಲ್ಲ. ಗಣೇಶನಾಗಬೇಕಾದ್ರೆ ದೊಡ್ಡ ಹೊಟ್ಟೆ ಬೇಡವಾ? ಹೊಟ್ಟೆ ದೊಡ್ಡದಾಗಬೇಕಾದ್ರೆ ಒಂದೆರಡು ಕೇಜಿ ಲಾಡು ಮೊದಲೇ ತಿನ್ನಿಸಿರಬಾರದಾ? ಹೊಟ್ಟೆಹಸಿದು ಚಡ್ಡಿ ಕೆಳಗಿಳೀತಾ ಇದೆ, ಗಣೇಶನಾಗಬೇಕಂತೆ! ಮೇಳದವರು ನನ್ನ ಎದುರಿಗೆ ಲಾಡು ಇಡ್ತಾರಂತೆ, ನಾನು ಸುಮ್ಮನೇ ಆಶೀರ್ವಾದ ಮಾಡಬೇಕಂತೆ. ನಾಟಕ ಮುಗಿದ ಮೇಲೆ ಎಲ್ಲರೂ ಹಂಚಿ ತಿನ್ನೋಣ ಅಂತ ಹೇಳ್ತಾರೆ. ಅಲ್ಲಾ, ನನಗೆ ನೈವೇದ್ಯ ಇಟ್ಟದ್ದನ್ನು ಎಲ್ಲರೂ ಯಾಕೆ ತಿನ್ನಬೇಕು? ಇದೇನಪ್ಪ, ಯಾರೋ ಬರ್ತಿರೋ ಹಾಗಿದೆ!

(ಲಬಕ್ಕನೆ ಲಾಡುಗಳನ್ನೆಲ್ಲ ಅಂಗಿಯೊಳಗಿನಿಂದ ಹೊಟ್ಟೆಗೆ ಸೇರಿಸಿ ಇನ್ಶರ್ಟ್ಮಾಡಿಕೊಂಡು ಹೊಟ್ಟೆ ಉಬ್ಬಿಸಿಕೊಳ್ಳುತ್ತಾನೆ. ಅವಸರದಿಂದ ಮುಖವಾಡ ಧರಿಸಿ ಗಣೇಶನ ಭಂಗಿಯಲ್ಲಿ ಕೂರುತ್ತಾನೆ. ಆದರೆ ಉಬ್ಬಿದ ಹೊಟ್ಟೆಯಿಂದಾಗಿ ಕೂರಲಾಗುವುದಿಲ್ಲ. ಮಲಗುತ್ತಾನೆ. ಮೇಳದವರು ಹಾಡುತ್ತ ಕುಣಿಯುತ್ತ ಬರುತ್ತಾರೆ.)

ಮೇಳ : ಶ್ರೀ ಗಜವದನಾ
ಗಿರಿಜಾನಂದನ
ಸ್ವೀಕರಿಸಯ್ಯ ಸಾವಿರ ನಮನ||
ಗೊನೆ ಮುರಿದ ಬಾಳೇಹಣ್ಣು
ಥರಾವರಿ ಹೂವಾ ಹಣ್ಣು
ಸ್ವೀಕರಿಸಯ್ಯಾ ಸಾವಿರ ನಮನ||

ಭದ್ರಾಕೃತಿಯವನೆ
ಜೋಕಿಲಿ ಕೂತವನೆ
ಜೋಕೆ ತಪ್ಪದ ಮಾತು ದಯಪಾಲಿಸಣ್ಣಾ||

ಕಲಿಸಿದ ಗುರುವರ್ಯ
ಭೂಸನೂರ ಮಠದಯ್ಯ
ಸಾವಳಗಿ ಶಿವಲಿಂಗ
ಘೋಡಗೇರಿ ಗಜಲಿಂಗ||

ಇಂತಿಂಥಾ ಸಂತರ ಮಾತಾಗಿ ಬಂದವನೆ
ತಪ್ಪೀದ ಪದ ಒಪ್ಪಿ ಅಪ್ಪಿಕೊಂಬಂಥವನೆ||

ಮತಿವಂತ ಮಂದೀಯ ವಿದ್ಯೆಗೆ ಅಧಿಕಾರಿ
ಹಂಕಾರ ಪಡುವಂಥ ಹುಂಬರ ಕಡುವೈರಿ
ಸ್ವೀಕರಿಸಯ್ಯಾ ಸಾವಿರ ನಮನ||

ಸೂತ್ರಧಾರ : ಬಾಲಕ ಬಾಲಕಿಯರೇ, ಮತ್ತು ಪಾಲಕರೇ, ನಾವು ಓದೋ ಮಕ್ಕಳು, ನಾಟಕಾ ಆಡತೀವಿ. ನಾಟಕದ ಹೆಸರು ‘ಅಲೀಬಾಬ ಮತ್ತು ನಲವತ್ತು ಕಳ್ಳರು’ ಅಂತ. ನಾಟಕದ ಪ್ರಾರಂಭದಲ್ಲಿ ಗಣೇಶನ ಪೂಜೆ ಮಾಡಬೇಕು. ಇದೇನಪ್ಪಾ, ಅಲ್ಲಾನೂರಲ್ಲಿ ಕಲ್ಲಯ್ಯಂದೇನು? ಅಂದಂತೆ ಮುಸ್ಲೀಮರ ಕಥೇಲಿ ಗಣೇಶನ ಪೂಜೆ ಯಾಕೆ ಅಂತ ಗಲಾಟೆ ಮಾಡಬೇಡಿ. ನಿಮ್ಮ ಗಲಾಟೆ ಎಂಬ ವಿಘ್ನ ದೂರ ಮಾಡೋದಕ್ಕೇ ನಾವು ಗಣೇಶನ ಪೂಜೆ ಮಾಡ್ತಾ ಇರೋದು. ಇದು ಹೇಳಿ ಕೇಳಿ ಕಳ್ಳರ ಕಥೆ. ನಮ್ಮ ಗಣೇಶ ಶಿಷ್ಟಪಾಲಕ, ದುಷ್ಟ ಶಿಕ್ಷಕ. ಅಂದರೆ ಶಿಷ್ಟರಿಗೆ ಪಾಲಕ ಅಂದರೆ ಪೇರೆಂಟನೋಪಾದಿಯಲ್ಲೂ ದುಷ್ಟರಿಗೆ ಶಿಕ್ಷಕ ಅಂದರೆ ಟೀಚರೋಪಾದಿಯಲ್ಲೂ ಇರತಕ್ಕಂಥವನು. ಅದಕ್ಕೇ ಪ್ರಾರಂಭದಲ್ಲಿ ಅವನ ಪೂಜೆ ಮಾಡಿ ನಾಟಕ ಸುರು ಮಾಡ್ತೀವಿ.

(ಮೇಳದಲ್ಲಿಯ ಒಬ್ಬನಿಗೆ)

ಓ ಮಗು ಹೋಗಿ ನೈವೇದ್ಯ ತಗೊಂಬಾ, ಗಣೆಶನ ಅನುಗ್ರಹ ಕೇಳೋಣ.

( ಹುಡುಗ ಹೋಗುವನು, ಮಲಗಿರುವ ಗಣೇಶನನ್ನು ಗಮನಿಸಿ.)

ಇದೇನಪ್ಪಾ, ನಮ್ಮ ನಾಟಕದ ಕಂಟಕ ಹರನಾದ ಬೆನಕೇಶ್ವರನು ಮಲಗೇ ಬಿಟ್ಟಿದ್ದಾನೆ! ಇವನನ್ನ ಎಬ್ಬಿಸೋದು ಹ್ಯಾಗೆ? ಹಾ! ತಿಳಿಯಿತು. ನಮ್ಮ ನಾಟಕದ ನಾಯಕಿ ನಟಿಯ ನೃತ್ಯ ತೋರಿಸ್ತೇನೆ.

(ಅಷ್ಟರಲ್ಲಿ ಮೇಳದ ಹುಡುಗ ಎರಡೇ ಲಾಡುಗಳಿರುವ ತಟ್ಟೆ ತರುವನು.)

ಸೂತ್ರಧಾರ : ಯಾಕಯ್ಯಾ ಎರಡೇ ಲಾಡು ತಂದಿದೀಯಾ? ಬಾಕೀದೆಲ್ಲಾ ಎಲ್ಲಿ?

ಹುಡುಗ : ತಟ್ಟೇಲಿ ಎರಡೇ ಇತ್ತು.

ಸೂತ್ರಧಾರ : ತಟ್ಟೇ ತುಂಬಾ ಇತ್ತಲ್ಲೊ. ನೀ ತಿನ್ನಲಿಲ್ಲ ತಾನೆ?

ಹುಡುಗ : ಗಣೇಶನಾಣೆಗೂ ಇಲ್ಲ.

ಸೂತ್ರಧಾರ : ಕಳ್ಳರೇನಾದರೂ ಬಂದಿದ್ದರಾ?

ಹುಡುಗ : ಅವರು ಆ ಕಡೆ ಮೇಕಪ್‌ ಮಾಡ್ಕೊತಿದಾರೆ.

ಸೂತ್ರಧಾರ : ನಾಟಕದ ಪ್ರಾರಂಭದಲ್ಲೇ ಕಂಟಕ ಸುರುವಾಯ್ತಲ್ಲಪ್ಪಾ!

ಹುಡುಗ : ಲಾಡು ಎರಡೇ ಇದೆ. ನಾಟಕಾ ಮಾಡೋದು? ಬ್ಯಾಡವಾ?

ಸೂತ್ರಧಾರ : ಯಾಕೆ?

ಹುಡುಗ : ನಾಟಕ ಮುಗಿದ ಮೇಲೆ ಹಂಚಿಕೊಂಡು ತಿನ್ನೋದಕ್ಕೆ ಲಾಡೂನೇ ಇಲ್ಲ!

ಸೂತ್ರಧಾರ : ಥೂ ಹೊಟ್ಟೆಬಾಕ,

(ಗಣೇಶನಿಗೆ ಕೈಮುಗಿದು)

ಪ್ರಭೋ ಬೆನಕೇಶ್ವರಾ, ಇಷ್ಟರಿಂದಲೇ ಈದಿನ ತೃಪ್ತನಾಗಿ ನಮ್ಮ ನಾಟಕದ ಕಂಟಕಗಳನ್ನು ಪರಿಹರಿಸಿ ಈ ಅಜ್ಞಾನಿ ಬಾಲಕರನ್ನ ಅನುಗ್ರಹಿಸುವಂಥವನಾಗು. (ಎಲ್ಲರೂ ಎರಡು ಸಾಲಾಗಿ ಕೈಮುಗಿಯುತ್ತಿರುವಾಗ ಹಿಂದಿನಿಂದ ಒಬ್ಬ ಹುಡುಗಿಕಳ್ಳ ಕಳ್ಳ ಎಂದು ಹೆದರಿ ಓಡಿ ಬಂದು ಮೇಳದಲ್ಲಿ ನಿಂತು ಕೈಮುಗಿಯುತ್ತಾಳೆ. ಸೂತ್ರಧಾರ ಅವಳನ್ನು ಗಮನಿಸಿ.)

ಸೂತ್ರಧಾರ : ಯಾರಮ್ಮ ನೀನು?

ಒಬ್ಬ : ಓಹೋ ಲಾಡು ಕದ್ದವಳು ಇವಳೇ ಇರಬೇಕು.

ಹುಡುಗಿ : ನಾನಲ್ಲ, ಒಬ್ಬ ಕಳ್ಳ ನನ್ನ ಹಿಡೀಬೇಕಂತ ಬೆನ್ನು ಹತ್ತಿ ಬರ್ತಿದಾನೆ. ದಯವಿಟ್ಟು ಕಾಪಾಡಿ.

ಸೂತ್ರಧಾರ : ಏನಮ್ಮಾ ಸಮಾಚಾರ? ನೀನೆಲ್ಲಿ? ಕಳ್ಳ ಎಲ್ಲಿ? ಸಮಾಧಾನದಿಂದ ಸವಿಸ್ತಾರವಾಗಿ ಕಥನ ಮಾಡಿ ಹೇಳು. ಯಾರು ನೀನು? ನಿನ್ನ ಹೆಸರೇನು?

ಹುಡುಗಿ : ನನ್ನ ಹೆಸರು ಮರ್ಜೀನಾ, ಮುಲ್ಲಾಪುರದ ಮಂತ್ರೀಮಗಳು. ಇಂದಿಗೆ ಆರು ತಿಂಗಳ ಹಿಂದೆ ನಾನು ನಮ್ಮ ತಂದೇ ಜೊತೆ ಪ್ರವಾಸ ಹೊರಟಿದ್ದೆ. ದಾರೀಲಿ ಈ ಕಳ್ಳ ನಮ್ಮನ್ನ ನಿಲ್ಲಿಸಿ ನಮ್ಮ ತಂದೇನ ಕೊಂದ್ಹಾಕಿಬಿಟ್ಟ-ನಾನು ತಪ್ಪಿಸಿಕೊಂಡು ಓಡಿ ಬಂದೆ.

ಸೂತ್ರಧಾರ : ಇಂದಿಗೆ ಆರು ತಿಂಗಳಿಂದ ಹೀಗೇ ಓಡ್ತಾ ಇದ್ದೀಯಮ್ಮಾ?

ಮರ್ಜೀನಾ : ಇಲ್ಲ. ಆಗಲೇ ಓಡಿ ಬಂದು ಈ ಊರಿನಲ್ಲಿ ಒಬ್ಬರ ಮನೇಲಿ ಕೆಲಸಕ್ಕಿದೀನಿ. ಈ ಹೊತ್ತು ನಮ್ಮ ಯಜಮಾನರ ಕುದುರೆ ತಪ್ಪಿಸಿಕೊಂಡು ಹೋಗಿತ್ತು. ನೋಡಿ ಬರೋಣ ಅಂತ ಹೋದರೆ ಆ ಕಳ್ಳ ನನ್ನನೋಡಿ ಬೆನ್ಹತ್ತಿ ಬಂದ. ದೇವಸ್ಥಾನ ಕಂಡಿತು. ಓಡಿ ಬಂದೆ. ಅಕೋ ಬರ್ತಿದಾನೆ, ದಯವಿಟ್ಟು ರಕ್ಷಣೆ ಕೊಡಿ, ಇವರೆ.

ಸೂತ್ರಧಾರ : ಹಾಗಿದ್ದರೆ ಒಂದು ಕೆಲಸ ಮಾಡು: ಆ ಕಳ್ಳ ಬರಲಿ. ನೀನು ನಿನ್ನ ಪಾಡಿಗೆ ಶೃಂಗಾರ ಪೂರ್ಣವಾಗಿ ಹಾವ ಭಾವ ವಿಲಾಸ ವಿಭ್ರಮಗಳಿಂದ ನಮ್ಮ ಪ್ರೇಕ್ಷಕರ ನಯನಗಳಿಗೆ ಮನೋಹರವಾಗಿರುವಂತೆ ನೃತ್ಯ ಮಾಡು. ಇತ್ತ
ಕಳ್ಳನ ಕಣ್ಣಲ್ಲಿ ಮಣ್ಣೆರಚಿದ ಹಾಗೂ ಆಯ್ತು. ನಿನ್ನ ರಕ್ಷಣೆಯೂ ಆಯ್ತು. ಇತ್ತ ಮಲಗಿದ ನಮ್ಮ ದೇವರನ್ನ ಎಬ್ಬಿಸಿದ ಹಾಗೂ ಆಯ್ತು, ಏನಂತಿ?

(ಅಷ್ಟರಲ್ಲಿ ದೂರದಿಂದ ಕುದುರೆ ಸಪ್ಪಳ ಕೇಳಿಸುತ್ತದೆ.)

ಮರ್ಜೀನಾ : ಆಗಲಿ,
ನಾsss
ಮರ್ಜೀನಾ||

(ಹಾಡು ಸುರುವಾಗುತ್ತಿದ್ದಂತೇ ಕಳ್ಳ ಗಹಗಹಿಸಿ ನಗುತ್ತ ಬರುತ್ತಾನೆ. ಮರ್ಜೀನಾ ತಕ್ಷಣ ತಲೆಯ ಪರದೆ ಇಳಿಬಿಟ್ಟು ಅರ್ಧಮುಖ ಮುಚ್ಚಿಕೊಳ್ಳುತ್ತಾಳೆ. ಕಳ್ಳ ಮರ್ಜೀನಾಳನ್ನೇ ಹುಡುಕುತ್ತಿದ್ದಾನೆ. ಮೇಳದ ಹುಡುಗರು ಹೆದರಿ ಹಿಂದೆ ಸರಿಯುತ್ತವೆ.)

ಸೂತ್ರಧಾರ : ಭೋ ಸ್ವಾಮೀ, ಹೊನ್ನಿನ ಚೂರಿ ಧಾರಣ ಮಾಡಿ, ಉನ್ನತನಂತೆ ಕಾಣುವ ಧೀರ ವೀರ ಗಂಭೀರನೇ, ನಿನ್ನ ಮಾತು ನಾಮಾಂಕಿತವೇನು?

ಕಳ್ಳ : ಎಲವೋ ಸೂತ್ರಧಾರ, ಛಪ್ಪನ್ನೈವತ್ತಾರು ದೇಶದ ರಾಜರನ್ನ ಗಪ್ಪನೆ ಮಣ್ಣು ಮುಕ್ಕಿಸಿ, ಅವರ ಅಷ್ಟೈಶ್ವರ್ಯವನ್ನ ಒಪ್ಪಾಗಿ ಚಪ್ಪರಿಸುವ ಕಳ್ಳರ ಕಳ್ಳ, ಸುಳ್ಳರ ಸುಳ್ಳ, ಶ್ರೀಮನ್ಮಹಾ ಚೋರೇಂದ್ರ ಯಾರೆಂದು ಬಲ್ಲೆ?

ಸೂತ್ರಧಾರ : ಚಾಲೀಸ್ ಚೋರೋಂಕಾ ರಾಜಾ, ಹಸನ್‌!

ಹಸನ್‌ : ಅವನೇ ನಾನೆಂದು ಭಾವಿಸೈ ಸೂತ್ರಧಾರಾ ಜೋಕೆ ನಿನ್ನ ಉಡುದಾರ!

ಸೂತ್ರಧಾರ : ಸ್ವಾಮೀ, ತಮ್ಮ ದರ್ಶನದಿಂದ ಈ ಹತಭಾಗ್ಯನು ಮೆತ್ತಗಾದನು. ತಾವು ಈ ಸಭಾಮಂದಿರಕ್ಕೆ ಬಂದ ಕಾರಣವೇನು?

ಹಸನ್‌ : ಸೂತ್ರಧಾರ, ಈ ಹುಡುಗಿ ಯಾರು?

ಸೂತ್ರಧಾರ : ಛೇ ಛೇ! ಇವಳು ನಮ್ಮ ಮೇಳದವಳು; ದೇವರಿಗೆ ನಾಟ್ಯಸೇವೆ ಸಲ್ಲಿಸ್ತಿದ್ದಾಳೆ.

ಹಸನ್‌ : ನಿಜ ತಾನೆ?

ಸೂತ್ರಧಾರ : ಸುಳ್ಯಾಕ ಹೇಳ್ಲಿ ಸ್ವಾಮಿ?

ಹಸನ್‌ : ನಾನು ಹುಡುಕೋ ಹುಡುಗಿ ಸಾಮಾನ್ಯ ಹುಡುಗಿ ಅನ್ನಬೇಡ. ಈಗ ಆರು ತಿಂಗಳ ಹಿಂದೆ ಮುಲ್ಲಾಪುರದ ಮಂತ್ರಿ, ಮಗಳ ಜೊತೆ, ಪ್ರವಾಸ ಹೊರಟಿದ್ದ. ದಾರೀಲಿ ನಾವು ಅವನ ಐಶ್ವರ್ಯ ದೋಚಿ ಅವನನ್ನ ಕೊಂದಿವಿ. ಆದರೆ ಅವನ ಮಗಳು ತಪ್ಪಿಸಿಕೊಂಡು ಓಡಿ ಬಿಟ್ಲು. ದಿನಾ ಸಾವಿರಾರು ಕಳ್ಳತನ, ಮೋಸ, ದಗಲ್ಬಾಜಿ ಮಾಡಿದೀನಿ. ಸುತ್ತ ಛಪ್ಪನ್ನೈವತ್ತಾರು ದೇಶದಲ್ಲಿ ನನ್ನನ್ನ ಗುರುತು ಹಿಡಿಯೋ ಒಂದು ನರಪಿಳ್ಳೆಯೂ ಇಲ್ಲ. ಆದರೆ ಆ ಹುಡುಗಿ, ಬೆರಿಕೀದು, ನಾನು ಯಾವ ವೇಷದಲ್ಲಿದ್ದರೂ ಗುರುತು ಹಿಡೀಬಲ್ಲಳು. ಅವಳನ್ನ ಈ ದಿನ ನೋಡಿದೆ. ಮುಗಿಸಿ ಬಿಡೋಣ ಅಂತ ಬಂದಿದ್ದೇನಯ್ಯಾ ಸೂತ್ರಧಾರ ತಿಳೀತಿಲ್ಲೋ ಮಜಕೂರಾ?

ಸೂತ್ರಧಾರ : ತಿಳೀತು ಸ್ವಾಮೀ, ಒಳ್ಳೇ ಕೆಲಸಕ್ಕೇ ಬಂದಿದ್ದೀರಿ. ಆದರೆ ಅವಳು ಇಲ್ಲಿಲ್ಲವಲ್ಲ.

ಹಸನ್‌ : ಅಡ್ಡೀಯಿಲ್ಲ. ಸೂತ್ರಧಾರ ನನಗೊಬ್ಬ ಕಳ್ಳಬೇಕು.

( ಮಾತು ಕೇಳಿಸಿಕೊಂಡು ಗಣೇಶ ಎದ್ದು ಮತ್ತೆ ಮಲಗುವನು.)

ಸೂತ್ರಧಾರ : ಕಳ್ಳರಿಗೇನು ಕೊರತೆ?

ಒಬ್ಬ ಹುಡುಗ : ಆಗಲೇ ನಮ್ಮಲ್ಲಿ ಯಾರೋ ಲಾಡು ಕದ್ದಿದಾರೆ…….

ಹಸನ್‌ : ಸೂತ್ರಧಾರ, ನನ್ನ ಬಿರುದೇನು ಹೇಳು ನೋಡೋಣ.

ಸೂತ್ರಧಾರ : ಚಾಲೀಸ್ ಚೋರೊಂಕಾ ರಾಜಾ

ಹಸನ್‌ : ಆದರೆ ನನ್ನಲ್ಲಿರೋದು ಈಗ ಮೂವತ್ತೊಂಬತ್ತೇ ಜನ ಕಳ್ಳರು. ಆ ಬಿರುದು ಉಳೀಬೇಕಾದರೆ ಇನ್ನೊಬ್ಬ ಕಳ್ಳ ಬೇಕಲ್ಲ.

ಸೂತ್ರಧಾರ : ಆದರೆ ಇದು ದೇವಸ್ಥಾನ. ಇಲ್ಲೆಲ್ಲಿ ಕಳ್ಳರು?

ಹಸನ್‌ : ಎಲೈ ಸೂತ್ರಧಾರ, ಕಳ್ಳರಿಗೂ ಸುಳ್ಳರಿಗೂ ಸುರಕ್ಷಿತ ಸ್ಥಳ ದೇವಸ್ಥಾನ ಅಂತ ಗೊತ್ತಿಲ್ಲವೊ? ನಿಮ್ಮಲ್ಲಿ ಯಾರೋ ಲಾಡು ಕದ್ದಿದ್ದಾರೆ ಅಂದೆ. ಯಾರವನು?

ಸೂತ್ರಧಾರ : ಅವನಿನ್ನೂ ಪತ್ತೆ ಆಗಿಲ್ಲ ಸ್ವಾಮಿ.

ಹಸನ್‌ : ನಾ ಹೇಳಲೊ ಕಳ್ಳ ಯಾರಂತ?

(ಎಲ್ಲರನ್ನೂ ಪರೀಕ್ಷಿಸಿ ನೋಡುತ್ತ ಹಸನ್ ಗಣೇಶನ ಹತ್ತಿರ ಹೋಗಿ ನಿಲ್ಲುವನು. ಗಣೇಶ ಎರಡೂ ಕೈಯಿಂದ ಹೊಟ್ಟೆ  ಹಿಡಿದುಕೊಂಡಿದ್ದಾನೆ. ಕಳ್ಳ ಅವನನ್ನು ಅಮಾತ ಎತ್ತಿಕೊಂಡು ಹೊರಡುವನು. ಗಣೇಶ ಅಯ್ಯಯ್ಯೋ ಎಂದು ಅಳುತ್ತಿರುವನು.)

ಸೂತ್ರಧಾರ : ಸ್ವಾಮೀ ಚೋರೋಂಕಾ ರಾಜರೆ, ಇವನು ನಮ್ಮ ದೇವರು ಗಣೇಶ ಸ್ವಾಮಿ. (ಕಳ್ಳರಸ ಅವನನ್ನಿಳಿಸಿ.)

ಹಸನ್‌ : ಏ ನಿಜ ಹೇಳೊ. ಲಾಡು ಕದ್ದವನು ನೀನೇ ತಾನೆ?

ಗಣೇಶ : ನಾನಲ್ಲ.

ಹಸನ್‌ : ಸುಳ್ಳು ಹೇಳ್ತೀಯಾ? ಹೊಟ್ಟೆ ಮೇಲಿನ ಕೈ ತಗಿ. ತಗಿ ಮೊದಲು. (ಗಣೇಶ ಹೊಟ್ಟೆ ಮೇಲಿನ ಕೈ ತೆಗೆಯುವನು. ಲಾಡು ಬೀಳುತ್ತವೆ.) ನೋಡಿದಿಯಾ ಸೂತ್ರಧಾರ?

ಗಣೇಶ : ಅಲ್ಲಲ್ಲ, ಗಣೇಶನಿಗೆ ದೊಡ್ಡ ಹೊಟ್ಟೆ ಇರಬೇಕಂತ ಅವನ್ನ ಇಲ್ಲಿಟ್ಟುಕೊಂಡಿದ್ದೆ.

ಹಸನ್‌ :  ಆಹಾ! ಇವನು ಕಳ್ಳನೂ ಹೌದು. ಸುಳ್ಳನೂ ಹೌದು. ನನಗೆ ಇವನೇ ಸರಿ. ಹಹ್ಹಹ್ಹಾ! ನಾನೀಗ ಚಾಲೀಸ್‌ಚೋರೋಂಕಾ ರಾಜಾ ಆದೆ!

(ಎನ್ನುತ್ತಾ ಗಣೇಶನನ್ನು ಹೊತ್ತುಕೊಂಡು ಹೊರಡುವನು. ಗಣೇಶ ಅಯ್ಯಯ್ಯೋ ಎಂದು ಅಳುತ್ತಿದ್ದಾನೆ. ಮೇಳದವರು ಅವಾಕ್ಕಾಗಿ ನಿಂತಿದ್ದಾರೆ. ಏನು ಮಾಡಬೇಕೆಂದು ತಿಳಿಯದೆ ಸೂತ್ರಧಾರ ಒದ್ದಾಡುತ್ತಿರುವ ಗಣೇಶನಿಗೆ ಕೈಮುಗಿಯುತ್ತಾನೆ.)