ಮೇಳ : ಇಸ್ಲಾಂಪುರವೆಂಬ ಮುಸ್ಲೀಮರೂರು
ಅಲ್ಲಾನ ಭಕ್ತರು ಅಲ್ಲಿಯ ಜನರು
ಎದ್ದರೆ ಬಿದ್ದರೆ ಅಲ್ಲಾ ಎನ್ನುವರು
ಎದ್ದಾಗ ಶ್ರೀಮಂತರಾದರು ಕೆಲರು

ಊರಿನಲ್ಲೊಬ್ಬ ಅಲ್ಲೀಬಾಬಾ
ಅಂತಿದ್ದ ಅಲ್ಲಾಗೆ ತೋಬಾ ತೋಬಾ
ಆತನ ಕಂಡರೆ ಅಲ್ಲಾನಿಗಿಷ್ಟ
ಹಾಗಂತ ಕೊಟ್ಟಿದ್ದ ಬಡತನ ಕಷ್ಟ.

ಬಡತನ ತೊಲಗಿಸೊ ದೇವರೆ ಅಲ್ಲಾ
ಅಲ್ಲಾನೆ ಖುದ್ದಾಗಿ ಅಂತಿದ್ದ ಇಲ್ಲಾ
ಪ್ರಾರ್ಥಿಸಿಕೊಂಡನು ದೌಲತ್ತು ಬೇಡಿ
ಅಲ್ಲಾ ಕೊಟ್ಟನು ಮಗನ, ಅವನೊಬ್ಬ ಖೋಡಿ.

ದಿನ ದಿನ ಅಲೀಬಾಬಾ ಕಾಡಿಗೆ ಹೋಗಿ
ಒಣಸೌದೆ ಕಲೆಹಾಕಿ ಹೊರೆಗಳ ಕಟ್ಟಿ
ಅಬ್ಬಾ ಎನ್ನುತ ಕತ್ತೆ ಡುಬ್ಬಿಗೆ ಹೇರಿ
ಉಬ್ಬಿ ಮಾರುತಲಿದ್ದ ಊರೂರು ಕೇರಿ.

ಕತ್ತೆಗಳೆಂದರೆ ಕತ್ತೆಗಳಣ್ಣ
ಸಂಗೀತವೆಂದರೆ ಅವುಗಳಿಗೆ ಪ್ರಾಣ

ಅವುಗಳ ಸಂಗೀತ ಸಭೆಗಳ ಮುಂದೆ
ನಾವೇನು ಹಾಡೇವು ಕುರಿಗಳ ಮುಂದೆ.

(ಹಾಡು ಸಾಗಿದ್ದಂತೆ ಅಲೀಬಾಬಾ ಕತ್ತೆಗಳ ಸಮೇತ ಬರುತ್ತಾನೆ. ದಟ್ಟಕಾಡು. ಅಲ್ಲೇ ದೊಡ್ಡ ಬಂಡೆಯಿದೆ. ಅಲೀಬಾಬಾ ಸೌದೆ ಸಂಗ್ರಹಿಸುತ್ತಾನೆ. ಕತ್ತೆಗಳು ಸಂಗೀತಗಾರರ ಠೀವಿಯಲ್ಲಿ ಹಾಡಿಕೊಳ್ಳುತ್ತ ಪರಸ್ಪರ ಸ್ಪರ್ಧಿಸುತ್ತ ಬರುತ್ತವೆ. ಮೇಳದ ಹಾಡು ಮುಗಿದಾಗ ಅವುಗಳ ಸ್ಪರ್ಧೆ ಇನ್ನೂ ಜೋರಾಗುತ್ತದೆ. ಅಲೀಬಾಬಾ ಗದರುತ್ತಾನೆ. ಸುಮ್ಮನಾಗುತ್ತವೆ.)

ಅಲೀಬಾಬಾ : ನನ್ನ ಹೆಸರು ಅಲೀಬಾಬಾ ಅಂತ. ಅಲ್ಲಾನ ಹೆಸರು ಹೇಳಿ ಎಷ್ಟೋ ಜನ ಶ್ರೀಮಂತರಾದರು. ಆದರೆ ಅಲ್ಲಾನ ದೃಷ್ಟಿ ನನ್ನ ಮೇಲೆ ಬೀಳಲೇ ಇಲ್ಲ. ಮನೇ ಮುಂದೆ ಭಿಕ್ಷುಕರು ಬರ್ತಾರೆ: “ಅವರಿಗೆ ಭಿಕ್ಷೆ ನೀಡುವಷ್ಟಾದರೂ
ಶ್ರೀಮಂತಿಕೆ ಕೊಡೋ ದೇವರೇ” ಅಂದೆ. “ಮಗನೇ ನೀನು ಪ್ರಾಮಾಣಿಕ. ಆದ್ದರಿಂದ ಬಡವನಾಗೇ ಇರು” ಅಂತಾನೆ! ಅಲ್ಲಾನ ಮನಸ್ಸಿನಲ್ಲಿ ನಾ ಹೀಗೇ ಸೌದೆ ಮಾರತಾನೇ ಸಾಯಬೇಕಂತ ಇದೆಯೋ ಏನೋ! ಅಲ್ಲಾ, ಎರಡು ಸಂಗೀತ ಘರಾಣಾದ ಕತ್ತೆಗಳು ಕೂಡಿ ಇರಬೇಕಾದರೆ ಶ್ರೀಮಂತಿಕೆ ಪ್ರಾಮಾಣಿಕತೆ ಎರಡೂ ಒಂದೇ ಕಡೆ ಯಾಕಿರಬಾರದು? ಇದಕ್ಕೆ ಮಾತ್ರ ಅಲ್ಲಾ ಉತ್ತರಾ ಕೊಡೋದೇ ಇಲ್ಲ.

ಹೋಗಲಿ ಆ ನನ್ನ ಮಗ ಸಲೀಮ, ಅವನಾದರೂ ದುಡಿದರೆ ಸ್ವಲ್ಪ ಅನುಕೂಲ ಆಗಬಹುದು. ಆದರೆ ಅವನೋ ಸೋಮಾರಿ. “ದೊಡ್ಡವನಾಗಿದ್ದೀಯಾ, ಉದ್ಯೋಗ ಮಾಡೋ ಬೇಕೂಫಾ” ಅಂದರೆ “ಮೊಹಬ್ಬತ್‌ ಮಾಡತೇನೆ ಬಾಬಾ” ಅಂತಾನೆ! ಈ ಥರ ಬಾಯ್ಬಿಟ್ಟು ಹೇಳಿ ಯಾರಾದರೂ ಪ್ಯಾರ್ ಮಾಡತಾರಾ? ನನ್ನ ಕತ್ತೆಯಂಥಾ ಕತ್ತೆಗಳಿಗೆ ಎಂಥಾ ಮರ್ಯಾದೆ ಇದೆ ಅಂತೀರಿ? ಎರಡೂ ಕಣ್ಣಲ್ಲೇ ಮಾತಾಡಿಕೊಂಡು ಹಾಳುಗೋಡೆ ಹತ್ತಿರ ಹೋಗಿ, ಯಾರಿಲ್ಲ ಅಂತ ಖಾತ್ರಿ ಆದ ಮೇಲೆ ಮೋತಿಗೆ ಮೋತಿ ತಿಕ್ಕುತ್ತವೆ. ಆಗೇನಾದರೂ ನನ್ನ ಕಾಲ ಸಪ್ಪಳ ಕೇಳಿಸಿದರೆ ಸಾಕು, ತಕ್ಷಣ ದೂರ ಸರಿಯುತ್ತವೆ! ಇದಪ್ಪಾ ಮೈರ್ಯಾದೆ ಅಂದರೆ! ಈ ನನ್ನ ಮಗ ನನ್ನ ಮುಂದೇ ಪ್ಯಾರ ಮಾಡತೀನಂತ ಹೇಳೋದೆ? ಅದ್ಯಾರೋ ಮರ್ಜೀನಾ ಅಂತೆ. ಹುಡುಗಿ ಒಳ್ಳೇದೇ. ಪ್ಯಾರ್ ಮಾಡೋದೂ ಒಳ್ಳೇದೇ; ಆರೋಗ್ಯದ ಲಕ್ಷಣ. ಆದರೆ ಮದುವೆ ಆದ ಮೇಲೆ ಬರೇ ಪ್ಯಾರ್ ಪ್ಯಾರಂದರೆ ಹೊಟ್ಟೆ ತುಂಬುತ್ತಾ? ಈಗಿನ ಹುಡುಗರಿಗೆ ಇದು ತಿಳಿಯೋದೇ ಇಲ್ಲ. ಅವರಿಗೆ ಸದ್ಭುದ್ಧಿಕೊಡೋ ಬುದ್ಧಿ ಅಲ್ಲಾಗೂ ಇಲ್ಲ.

(ಅಷ್ಟರಲ್ಲಿ ಹೆಣ್ಣು ಕತ್ತೆ ಭೈರವಿ ಸಣ್ಣಾಗಿ ಹಾಡತೊಡಗುತ್ತದೆ.)

ಅಮ್ಮ ಭೈರವಿ ನಿಲ್ಲಸ್ತೀಯಮ್ಮಾ?

(ಅದು ನಿಲ್ಲಿಸಿ ರಾಕೆನ್ನರೋಲು ಹಾಡತೊಡಗುತ್ತದೆ)

ನಿಲ್ಲಿಸೋ ಏ ಮುಠ್ಠಾಳ. ಭೈರವಿಗೆ ನಿಲ್ಲಿಸು ಅಂದರೆ ನೀನು ಹಾಡು ಅಂತಲೋ ಅದರರ್ಥ?

(ಅದೂ ನಿಲ್ಲಿಸಿ ಮರಿಕತ್ತೆ ಸುರು ಮಾಡುತ್ತದೆ.)

ತಗೊಳ್ಳಪಾ, ಏ ಚಿಲ್ಲರೆ ನಿಲ್ಲಸೊ.

(ನಿಲ್ಲಿಸುತ್ತದೆ.)

ಪಾಪ ಇವುಗಳ ಸಂಗೀತ ಯಾರು ಕೇಳಬೇಕು? ಇಲ್ಲಾ ನಾನು ಕೆಳಬೇಕು. ಇಲ್ಲಾ ಅಲ್ಲಾ ಕೇಳಬೇಕು. ನನಗೋ ಕೈತುಂಬ ಕೆಲಸ. ಅಲ್ಲಾಗೋ ಕಣ್ತುಂಬ ನಿದ್ದೆ. ಒಂದಿನ ಬಿಡುವು ಮಾಡಿಕೊಂಡು ಕೇಳಬೇಕು. ಏನೇನು ಹೊಸ ಹಾಡು ಕಲಿತಿವೆಯೊ!

(ಮೂರೂ ಸೇರಿ ಒದರಲಾರಂಭಿಸುತ್ತವೆ.)

ಏ ಏ ನಿಲ್ಲಸ್ರೋ ಏ ಕತ್ತೆಗಳ್ರಾ,-

(ನಿಲ್ಲಿಸುವುದಿಲ್ಲ.)

ಯಾಕಿವತ್ತು ಹೀಗೆ?

(ಕುದುರೆ ಗೊರಸಿನ ಸಪ್ಪಳ ಕೇಳಿಸುತ್ತದೆ.)

ಅರೆ! ಯಾರೋ ಬರ್ತಿರೋ ಹಾಗಿದೆ! ಕುದುರೆ ಕಾಲಿನ ಸಪ್ಪಳ!

(ಗಾಬರಿಯಾಗುತ್ತಾನೆ. ಭೈರವಿ, ರಾಕೆನ್ನರೋಲು, ಮರಿಕತ್ತೇಎಂದು ಹೆಸರುಗೊಂಡು ಕತ್ತೆಗಳನ್ನು ಕರೆದು ಮರದ ಪೊದೆಯಲ್ಲಿ ಅಡಗುತ್ತಾನೆ. ಕುದುರೆಗಳ ಕಾಲ ಸಪ್ಪಳ ಜಾಸ್ತಿಯಾಗುತ್ತದೆ. ಸ್ವಲ್ಪ ಹೊತ್ತಾದ ಬಳಿಕ ಪೂರ್ವರಂಗದಲ್ಲಿ ಬಂದಿದ್ದ ಕಳ್ಳರಸ ಹಾಗೂ ಅವನ ೪೦ ಜನ ಕಳ್ಳರು ತುಂಬಿದ ಚೀಲ ಹೊತ್ತುಕೊಂಡು ಬರುವರು. ಅವರಲ್ಲಿ ಗಣೇಶನೂ ಇದ್ದಾನೆ. ಎಲ್ಲರೂ ಬಂದದ್ದು ಖಾತ್ರಿಯಾದ ಮೇಲೆ ಕಳ್ಳರಸ ಅಲ್ಲಿದ್ದ ದೊಡ್ಡ ಬಂಡೆಯ ಮುಂದೆ ನಿಂತು ಜೋರಾಗಿ.)

ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸಮಿ

(ಎನ್ನುತ್ತಾನೆ. ಬಂಡೆ ಭಯಂಕರ ಸಪ್ಪಳ ಮಾಡುತ್ತಾ ತೆರೆದುಕೊಳ್ಳುತ್ತದೆ. ಹಸನ್ ಉಳಿದವರಿಗೆಲ್ಲ ಒಳನುಗ್ಗಲು ಸನ್ನೆ ಮಾಡುತ್ತಾನೆ. ಕೊನೆಯಲ್ಲಿ ಎಲ್ಲರೂ ಒಳ ಹೋದ ಮೇಲೆ ಸುತ್ತ ಯಾರೂ ಇಲ್ಲದ್ದನ್ನು ನೋಡಿ. ತಾನೂ ಒಳಹೋಗಿ)

ಬಂದ್ಹೋ ಜಾ ಸೇಸಮಿ

(ಎನ್ನುತ್ತಾನೆ. ಬಂಡೆ ಮುಚ್ಚಿಕೊಳ್ಳುತ್ತದೆ. ಅಲೀಬಾಬಾ ಕಂಠಪಾಠ ಮಾಡುವಂತೆಖುದಾ ಕಾ ಕಸಂ ಹಸನ್ಕಾ ಹುಕುಂ………………… ಎನ್ನುತ್ತಾ ಅದನ್ನೇ ವಟಗುಟ್ಟುತ್ತಾನೆ. ಅಷ್ಟರಲ್ಲಿ ಮರಿಕತ್ತೆ ಕಿರಚಬೇಕೆಂಬಷ್ಟರಲ್ಲಿ ಅಲೀಬಾಬಾ ಅದರ ಬಾಯಿ ಮುಚ್ಚುತ್ತಾನೆ. ತುಸು ಹೊತ್ತಾದ ಮೇಲೆ ಬಂಡೆ ಮತ್ತೆ ತೆರೆಯುತ್ತದೆ. ಒಳಗಡೆಯಿಂದ ಕಳ್ಳರಸ ಹಸನ್ಬರುತ್ತಾನೆ. ಕಳ್ಳರು ಅವನನ್ನು ಅನುಸರಿಸುತ್ತಾರೆ. ಹಸನ್ಮತ್ತೆ)

ಬಂದ್ಹೋ ಜಾ ಸೇಸಮಿ

(ಎನ್ನುತ್ತಾನೆ. ಬಂಡೆ ಮುಚ್ಚಿಕೊಳ್ಳುತ್ತದೆ. ಹಸನ್ ಸಂತೋಷದಿಂದ ಗಹಗಹಿಸಿ ನಗುತ್ತ ಹೊರಡುತ್ತಾನೆ. ಉಳಿದವರು-)

ಒಳ್ಳೆ ಸಮಯ ಒಳ್ಳೆ ಸಮಯ
ಒಳ್ಳೆ ಸಮಯವು!
ಕಳ್ಳತನವ ಮಾಡಲಿಕ್ಕೆ
ಒಳ್ಳೆ ಸಮಯವು||

(ಎಂದು ಹಾಡುತ್ತ ಮರೆಯಾಗುತ್ತಾರೆ. ಕುದುರೆಗಳ ಸಪ್ಪಳ ಮಾಯವಾಗುತ್ತದೆ. ಅಲೀಬಾಬಾ ಮೆಲ್ಲಗೆ ಹೊರಬರುತ್ತಾನೆ).

ಅಲೀಬಾಬಾ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||

(ಮೇಳ ಇದನ್ನು ರಿಪೀಟ್ಮಾಡುತ್ತದೆ.)

ದಡಿಯರು ಇವರ್ಯಾರೊ ಏನೆಂಥ ಮಂದಿ
ಒಬ್ಬೊಬ್ಬ ಒಂದೊಂದು ಕೊಬ್ಬೀದ ಹಂದಿ
ಕಳ್ಳರು ಬಂದರು ಸುಳ್ಳರು ಬಂದರು
ಕದ್ದುಕೊಂಬಂದರು ಏನೇನೊ ತಂದರು||

ಕತ್ತೆಯೇನಾದರು ಅಂದಿದ್ದರೆ ಕಿಮಕ್
ನನ್ನ ಜೀವಾ ಅಲ್ಲೆ ಕಚಕ್ಕಚಕ್!
ನನ್ನನ್ನ ಕತ್ತೇನ್ನ ಬಿಸಮಿಲ್ಲಾ ಮಾಡಿ
ಪಾಪ ಮರಿ ಕತ್ತೇನ್ನ ಚಟ್ನೀಯ ಮಾಡಿ||

ತಿಂತಿದ್ದರಲ್ಲಾ ದೊಡ್ಡವನೊ ದೇವಾ
ಉಳಿಸಿದೆಯಲ್ಲಾ ನಾಲ್ವರ ಜೀವಾ||

ಮೇಳ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||

ಅಲೀಬಾಬಾ : ತಲಿನೋಡು ಕಸಬರಿಗೆ ಹುಲ್ಲೀನ ಹುಬ್ಬು
ಕಾಗೆ ಕೂತಂಗಿತ್ತು ಮೂಗಿನುಬ್ಬು
ಹಲ್ಲೆಂಬೊ ಗರಗಸ ಮತ್ತೆರಡು ಕೋರೆ
ಕಣ್ಣೊಳಗೊಂದೊಂದು ಹದನಾದ ಚೂರಿ||

ಹೊತ್ತು ತಂದದ್ದನ್ನ ಎತ್ತಿ ಇಟ್ಟರು ಒಳಗೆ
ಏನು ಇದ್ದಿರಬಹುದು ಗವಿಯ ಒಳಗೆ?
ಅಲ್ಲಾನ ಹೆಸರಿನಲ್ಲಿ ಒಳಗೆ ಹೋದರೆ ಹೇಗೆ
ಭಯ ಬರುವುದೇನೋ ನಿಜ ಕಳ್ಳರ ನೆನೆದರೆ

(ಸುತ್ತ ಯಾರೂ ಇಲ್ಲದನ್ನು ಖಾತ್ರಿ ಮಾಡಿಕೊಂಡು)

ಹ್ಯಾಗು ಚೋರರು ಬೇಗ ಹಿಂದಿರುಗಲಾರರು
ಮೇಲೆ ಅಲ್ಲಾ ಉಂಟು ಕೆಳಗೆ ಕತ್ತೆಗಳುಂಟು

(ಬಂಡೆಯ ಬಳಿಗೆ ಅನುಮಾನಿಸುತ್ತಾ ಹೋಗಿ, ನಿರ್ಧರಿಸಿ)

ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸಮಿ

ಮೇಳ : ಖುಲ್ಜಾ ಸೇಸಮಿ

(ಬಂಡೆ ತೆರೆಯುತ್ತದೆ. ಬಯದಲ್ಲೇ ಒಳಗೆ ಹೋಗುತ್ತಾನೆ. ಕತ್ತೆಗಳೂ ಬೆನ್ನುಹತ್ತಿ ಹೋಗುತ್ತವೆ. ಈಗ ದೃಶ್ಯ ಬದಲಾಗುತ್ತದೆ. ದೊಡ್ಡ ಗವಿ. ಅಲ್ಲಲ್ಲಿ ಕಳ್ಳರು ಕದ್ದಿಟ್ಟ ಶ್ರೀಮಂತಿಕೆ ಯದ್ವಾತದ್ವಾ ಹರಡಿಕೊಂಡು ಬಿದ್ದಿದೆ.)

ಅಲೀಬಾಬಾ : ಹಾಯಲ್ಲಾ ಚಿನ್ನ! ಹೇರಳ ರನ್ನ!
ಅಸಲಿ ಆಭರಣ ಹಿಗ್ಗ್ಯಾವು ಕಣ್ಣ
ಹೊಳೇಯುವ ಮುತ್ತ ರಾಶಿ ದೌಲತ್ತ
ಕತ್ತೀನ ಹಾರ ರತ್ನs ಹಾರ||

ಮೇಳ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||

ಅಲೀಬಾಬಾ : ನೂರಾರು ಮೂಟೆಯ ನಾಣ್ಯ ಬಂಗಾರ
ಲೆಕ್ಕವಿಲ್ಲದ ಬೆಳ್ಳಿ ಎತ್ತರ ಭಾರ||

ಏನ ನೋಡಲಿ ಕಣ್ಣು ಸಾಲsವು ಮತ್ತೆ
ಎಷ್ಟಂತ ಒಯ್ಯಲಿ ಬರಿ ಮೂರೆ ಕತ್ತೆ||

ಕುಸಿದು ಬಿತ್ತೊ ನಿನ್ನ ಹೆಚ್ಚಿನ ಕರುಣಾ
ಹಾ ಖುದಾ ಧನ್ಯನು ಧನ್ಯನೋ ನಾನಾ||

ಮೇಳ : ಹಾಯಲ್ಲಾ ನಿನ್ನಂಥೋರಿನ್ನೊಬ್ಬರಿಲ್ಲಾ
ಅಲ್ಲಾ ಹೊ ಅಕಬರ ನೀ ಹೌದು ಮೌಲಾ||

ಅಲೀಬಾಬಾ : ಬಾರಮ್ಮಾ ಭೈರವಿ, ಬಾರೊ ರಾಕಣ್ಣಾ
ಬಾ ನನ್ನ ಮರಿಕತ್ತೆ ಬಾ ನನ್ನ ಚಿನ್ನ

ಬೆಳ್ಳಿ ಬೇಡ, ಚಿಲ್ಲರೇನೂ ಬೇಡ, ಭಾರವಾಗುತ್ತದೆ. ಆಭರಣ ಬೇಡ, ಯಾರ್ಯಾರ್ದಿದೆಯೊ! ಆದರೂ ಒಂದೆರಡಿರಲಿ, ಬೇಗಮ್‌ಗೆ, ಭೈರವಿಗೆ. ಈ ಹಾರ ಮಾತ್ರ ಮರಿಕತ್ತೆಗೆ, ಸಾಕು. ಉಳಿದದ್ದೆಲ್ಲ ಚಿನ್ನದ ನಾಣ್ಯದ ಮೂಟೆ!

(ಕತ್ತೆಗಳ ಮೇಲೆ ಅವಸರದಿಂದ ಬಂಗಾರದ ನಾಣ್ಯದ ಮೂಟೆ ಹೇರುವನು)

ಭೈರವಿಗೆ ಎರಡು ಮೂಟೆ, ರಾಕಣ್ಣಂಗೆರಡು, ಮರಿಗೊಂದು, ನನಗೊಂದು ಸಾಕು. ಅತಿಯಾಸೆ ಗತಿಗೇಡು. ಬನ್ನಿ ಬನ್ನಿ………………

(ನಾಣ್ಯದಮೂಟೆಯ ಮೇಲೆ ಸೌದೆ ಹೇರಿ
ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸಮಿ
ಎಂದು ಕೂಗುತ್ತಾನೆ. ಬಂಡೆ ತೆರೆದೊಡನೆ ಹೊರಡುತ್ತಾನೆ.)