(ಖಾಸೀಮನ ಹೆಂಡತಿ ಫಾತಿಮಾ ಹಾಸಿಗೇ ಮೇಲೆ ಬಿದ್ದುಕೊಂಡು ಒದರಾಡ್ತಿದ್ದಾಳೆ. ಮರ್ಜೀನಾ ಮನೆಗೆಲಸ ಮಾಡುತ್ತಿದ್ದಾಳೆ.)

ಫಾತಿಮಾ : ಏ ಮುರಗೀ……………. ಬಿಸಿ ನೀರು ಕೂಡೇ.

ಮರ್ಜೀನಾ : ನನ್ನ ಹೆಸರು ಮುರಗೀ ಅಲ್ಲಾ, ಮರ್ಜೀನಾ ಅಂತ.

ಫಾತಿಮಾ : ಮುರಗೀನೊ, ಮರ್ಜೀನಾನೊ………. ನನ್ನ ಗುಲಾಮಳು ನೀನು.

ಮರ್ಜೀನಾ : ನಾ ಮರೆತಿಲ್ಲ.

ಫಾತಿಮಾ : ಮರೀದಿದ್ರೆ ಯಾಕೆ ಬಾಯಿ ಮುಚ್ಚತಾ ಇಲ್ಲ?

ಮರ್ಜೀನಾ : ಯಾಕೆ ಮುಚ್ಚಬೇಕು?

ಫಾತಿಮಾ : ನಾನು ಈ ಮನೆ ಯಜಮಾನಿ.

ಮರ್ಜೀನಾ : ಹೌದು.

ಫಾತಿಮಾ : ನಿನ್ನ ಬಯ್ಯೋದಕ್ಕೆ ನನಗೆ ಅಧಿಕಾರ ಇದೆ.

ಮರ್ಜೀನಾ : ಹೌದು.

ಫಾತಿಮಾ : ಮತ್ತೆ ಯಾಕೆ ಬಾಯಿ ಹಾಕತೀಯೆ?

ಮರ್ಜೀನಾ : ನೀವು ಬಯ್ಯುತ್ತೀರಿ, ಅದಕ್ಕೆ.

ಫಾತಿಮಾ : ನೀ ಹೀಗೆ ಅಡ್ಡಬಾಯಿ ಹಾಕಿದರೆ ಹ್ಯಾಗೆ ಬಯ್ಯೋದು? ಮನೇ ಯಜಮಾನಿ, ಯಾವಾಗಲೂ ಹಾಸಿಗೆ ಮೇಲೇ ಬಿದ್ದಿರತೀನಿ, ಒಂದು ಬೈಗುಳಾನಾದರೂ ಬಯದು ಸಂತೋಷ ಪಡೋಣ ಅಂದರೆ…………….

ಮರ್ಜೀನಾ : ಬೈದು ಬೈದು ನೀವು ಸಂತೋಷ ಪಡರಿ. ಅತ್ತು ಅತ್ತು ನಾ ಸಂತೋಷ
ಪಡತೀನಿ.

ಫಾತಿಮಾ : ಅಳೋದಕ್ಕೆ ನಿನಗೇನೇ ಆದದ್ದು?

ಮರ್ಜೀನಾ : ಬೈಯೋದಕ್ಕೆ ನಿಮಗೇನಾಗಿದೆ?

ಫಾತಿಮಾ : ರೋಗ! ರೋಗ ಬಂದಿದೆಯೇ, ರೋಗಿಷ್ಟರನ್ನ ಹ್ಯಾಗೆ ನೋಡಿಕೋಬೇಕಂತ
ಗೊತ್ತಿಲ್ಲವೆ ಗುಲಾಮಳೆ?

ಮರ್ಜೀನಾ : ಗೊತ್ತು. ಆದರೆ ನಿಮಗೆ ರೋಗ ಬಂದಿಲ್ಲ; ಅಷ್ಟೆ.

ಫಾತಿಮಾ : ಹಾಳಾದವಳೆ, ಒಬ್ಬ ಗುಲಾಮಳು ಬೇಕೆಂದರೆ ನಿನ್ನಂಥವಳನ್ನ ತಂದು ಇಟ್ಟಾನಲ್ಲಾ, ಬರಲಿ. ನಿನ್ನ ಕೆಲಸದಿಂದ ಬಿಡಿಸಿ ಓಡಿಸಿ ಬಿಡತೀನಿ.

ಮರ್ಜೀನಾ : ಆಮೇಲೆ ಬಯ್ಯೋದಕ್ಕೆ ನಿಮಗ್ಯಾರೂ ಇರೋದಿಲ್ಲ, ಅಷ್ಟೆ.

ಫಾತಿಮಾ : ನನ್ನ ನಾನೇ ಬಯ್ದುಕೊಳ್ಳತೀನಿ. ಆದರೂ ನಿನ್ನ ಹೊರಗೆ ಹಾಕತೀನಿ.

ಮರ್ಜೀನಾ : ಆಮೆಲೆ ನಿಮ್ಮ ಯಜಮಾನರು ಹೊಡೀತಿದ್ದರೆ ಬಿಡಿಸಿಕೊಳ್ಲಿಕ್ಕೆ ಯಾರೂ ಇರೋದಿಲ್ಲಾ, ಅಷ್ಟೆ.

ಫಾತಿಮಾ : ಹಾಳಾದವಳೇ, ಔಷಧಿ ಕುಡಿಯೋ ಹೊತ್ತಾಯ್ತು; ಈಗೇನು ಬಿಸಿ ನೀರು ಕೊಡ್ತೀಯಾ? ಇಲ್ಲಾ ನಿನ್ನನ್ನು ಒದ್ದು ಒದ್ದು ಒದ್ದು…………

ಮರ್ಜೀನಾ : ಅಯ್‌……………

ಫಾತಿಮಾ : ಬಿಸಮಿಲ್ಲಾ ಮಾಡಿ…….

ಮರ್ಜೀನಾ : ಹೊಯ್‌……………..

ಫಾತಿಮಾ : ಚರ್ಮಾ ಸುಲಿದು…………

ಮರ್ಜೀನಾ : ಹೊಯ್‌

ಫಾತಿಮಾ : ಮಸಾಲಿ ಹಾಕಿ ಪಲ್ಯಾ ಮಾಡಿ……..

ಮರ್ಜೀನಾ : ಹೊಯ್‌ ಹೊಯ್‌……………

ಫಾತಿಮಾ : ನಾಯಿಗಿ ಹಾಕಲೊ?

ಮರ್ಜೀನಾ : ಅಲ್ಲೇ ಬಿಸಿನೀರಿದೆ. ಮಾತ್ರೆ ತಗೊಳ್ಳಿ. ನಾಳೆ ಪಲ್ಯ ಮಾಡಿ ನಾಯಿಗಿ ಹಾಕೀರಂತೆ.

ಫಾತಿಮಾ : ಮೊದಲೇ ಯಾಕ್ಹೇಳಲಿಲ್ಲವೆ ಗಯ್ಯಾಳಿ? (ಬಾಗಿಲು ಬಡಿದ ಸದ್ದು) ಯಾರು ಬಂದರು, ನೋಡೇ.

(ಮರ್ಜೀನಾ ಹೋಗಿ ಬಾಗಿಲು ತೆಗೆಯುವಳು. ಬೇಗಂ ಬಾಗಿಲಲ್ಲೇ ನಿಲ್ಲುವಳು.)

ಬೇಗಂ : ಫಾತಿಮಾ ಬಹೆನ್‌…………..

ಮರ್ಜೀನಾ : ಬೇರೆಯವರು ಸಂತೋಷವಾಗಿದ್ದರೆ ನಮ್ಮ ಯಜಮಾನಿಗೆ ಆಗಿ ಬರೋದಿಲ್ಲ. ದಯವಿಟ್ಟು ನಗಬೇಡಿ, ಹಾ……………

ಫಾತಿಮಾ : ಏನೇ ನಿನ್ನ ತಲೆ ಹರಟೆ? ಯಾರದು?

ಮರ್ಜೀನಾ : ಬೇಗಂ ಬಹೆನ್‌

ಫಾತಿಮಾ : ಏನಂತೆ? ಹಿಟ್ಟು ಕಡ ಕೇಳೋದಕ್ಕೆ ತಾನೇ ಬಂದಿರೋದು? ಇಲ್ಲಾ ಅಂತ ಹೇಳು.

ಬೇಗಂ : ಹಿಟ್ಟಲ್ಲ ಬಹೆನ್‌.

ಫಾತಿಮಾ : ಇನ್ನೇನು ಉಪ್ಪೋ ಕಾರವೋ-ಇಲ್ಲಂತ ಹೇಳು.

ಬೇಗಂ : ಪಾವು ಬೇಕಿತ್ತು.

ಫಾತಿಮಾ : ಪಾವು? ಒಳಗಡೆ ಕರೆ, (ಬೇಗಂ, ಮರ್ಜೀನಾ ಒಳಬರುವರು.) ಯಾಕಮ್ಮಾ, ಏನಳೀಲಿಕ್ಕೊ?

ಬೇಗಂ : ಇನ್ನೇನಿಲ್ಲ, ರಾಗಿ ಅಳೀಬೇಕಿತ್ತು.

ಫಾತಿಮಾ : ಏನು! ಅಳೆಯೋವಷ್ಟು ರಾಗಿ ಸಿಕ್ಕಿತಾ ಈ ಹೊತ್ತು? ಮಾ ಶಾ ಅಲ್ಲಾ! ಸೌದೆ ಅಷ್ಟೊಂದು ತುಟ್ಟೀ ಆಯ್ತಾ? ಆಯ್ತು ಹೊರಗಿರು, ಕೊಡುತಾಳೆ, ಏ ಮುರಗೀ ಪಾವು ತಾರೇ.

(ಬೇಗಂ ಹೊರಗೂ ಮರ್ಜೀನಾ ಪಾವು ತರಲಿಕ್ಕೆ ಒಳಗೂ ಹೋಗುತ್ತಾರೆ. ಫಾತಿಮಾ ಆಶ್ಚರ್ಯದಲ್ಲಿ ಕೂತಿರುವಾಗ ಮರ್ಜೀನಾ ಪಾವು ತರುತ್ತಾಳೆ.)

ಫಾತಿಮಾ : ಏ ಮುರಗೀ, ಅವಳ ಮುಖ ನೋಡಿದೆಯಾ?

ಮರ್ಜೀನಾ : ನೋಡಿದೆ.

ಫಾತಿಮಾ : ಒಳಗೊಳಗೇ ಪಕಪಕ ನಗತಿದ್ದಳಲ್ಲವಾ?

ಮರ್ಜೀನಾ : ನಗಬೇಡಿ ಅಂತ ಹೇಳಿದೆ. ಆದರೂ ನಗುತ್ತಿದ್ದರು, ನೋಡಿ.

ಫಾತಿಮಾ : ಪಾವು ತಾರೇ ಇಲ್ಲಿ.

(ಕಸಿದುಕೊಂಡು ಒಳಗೋಡುವಳು. ಮರ್ಜಿನಾ ಏನೂ ತಿಳಿಯದೆ ಮತ್ತೆ ಕೆಲಸಕ್ಕೆ ತೊಡಗುವಳು. ಫಾತಿಮಾ ಒಳಗಿನಿಂದ ಬಂದು ಪಾವನ್ನು ಅವಳ ಕೈಗೆ ಕೊಟ್ಟು) ಹೋಗಿ ಕೊಟ್ಟುಬಾ. ಬೇಗನೆ ಹಿಂದಿರುಗಿ ಕೊಡೋದಕ್ಕೆ ಹೇಳು. (ಮರ್ಜೀನಾ ಹೋಗಿ ಹೊರಗೆ ನಿಂತ ಬೇಗಂಳಿಗೆ ಪಾವು ಕೊಟ್ಟು ಬರುವಳು.)

ಫಾತಿಮಾ : ಒಪ್ಪತ್ತು ಗಂಜಿಗೂ ದಿಕ್ಕಿಲ್ಲದವರಿಗೆ ಅಳೆಯೋವಷ್ಟು ರಾಗಿ ಸಿಕ್ಕೋದುಂಟೆ? ಇದರಲ್ಲೇನೋ ಗುಟ್ಟಿದೆ ಕಣೇ ಮುರಗೀ……… (ಹೋಗಿ ಅವಳೆದುರು ನಿಂತು.) ನಾ ಏನು ಮಾಡಿದೆ ಗೊತ್ತಾ?

ಮರ್ಜೀನಾ : ಗೊತ್ತಿಲ್ಲ.

ಫಾತಿಮಾ : ಗೊತ್ತಿಲ್ಲದಿದ್ದರ ಕೇಳೇ, ಏನ ಮಾಡಿದಿರಿ ಯಜಮಾನೀ? ಅಂತ.

ಮರ್ಜೀನಾ : ಏನ್‌ಮಾಡಿದಿರಿ ಯಜಮಾನೀ?

ಫಾತಿಮಾ : ಪಾವಿನ ತಳಕ್ಕೆ ಮೇಣ, ಮೇಣ ಹಚ್ಚಿ ಕೊಟ್ಟಿದೀನಿ! ಅದೇನು ಅಳೀತಾರೋ ಗೊತ್ತಾಗಲೀ-ಅಂತ. ಹ್ಯಾಗಿದೆ ನನ್ನ ಉಪಾಯ? ಹೆಹ್ಹೆ!

ಮರ್ಜೀನಾ : ನಿಮ್ಮ ಮುಖದ ಹಾಗೇ ಇದೆ!

ಫಾತಿಮಾ : ಥೂ ಹಾಳಾದವಳೇ, ಬಿಸಿನೀರ್ಯಾಕೆ ತರಲಿಲ್ಲವೆ? ಅಯ್ಯೋ………….. (ನರಳುತ್ತ ಮತ್ತೆ ಮೊದಲಿನಂತೆ ಹಾಸಿಗೆಯಲ್ಲಿ ಮಲಗುವಳು.)