(ಕಾಡು. ಖಾಸೀಂ ಕುದುರೆ ಹೊಡೆದುಕೊಂಡು ಹಾಡುತ್ತ ಬರುತ್ತಾನೆ.)
ಖಾಸೀಂ : ಈ ನಾಡಲ್ಲೇ ನನ್ನೆದುರಲ್ಲೇ ನಿಲ್ಲುವರಿನ್ಯಾರೋ||
ಮೂರೂ ಕತ್ತೆ ಒಯ್ದು ತಂದ ಬೆಳ್ಳಿ ಬಂಗಾರ
ಬಾರಾ ಕುದುರೆ ಒಯ್ದು ತರುವೆ ನಾನೇ ಸಾವ್ಕಾರ||
ಸರಿಕರ ಹೊಟ್ಟೆಗೆ ಹೊಟ್ಟೇಕಿಚ್ಚಿನ ರಾಶಿ ಸುರಿಯುವೆನೊ
ನೋಡಿ ಬಡವರ ನಗಲು ಚಿನ್ನದ ಹಲ್ಲು ಮಾಡಿಸುವೆನೊ
ಹೇಂತೀ ಹೊಡೆಯೋ ಕೋಲಿಗೆ ಚಿನ್ನದ ಅಣಸ ಹಾಕಿಸುವೆನೊ
ಮತ್ತೂ ಒಬ್ಬಳ ಹಡೆಯೋ ಹುಡಿಗಿಯ ಮದುವೆ ಆಗುವೆನೋ||
ಈ ನಾಡೆಲ್ಲಾ ನನ್ನೆದುರಲ್ಲೇ ನಿಲ್ಲುವರಿನ್ಯಾರೋ|
ತಿರುಕರು ಕಳ್ಳರನೋಡಿಸಲಿಕ್ಕೆ ನಾಯೀಸಾಕುವೆನೋ||
(ಹಾಡು ಮುಗಿದಾಗ ಆವನ ಮೂಗು ಅರಳಿದೆ. ಮೂಸುತ್ತ ಹೊರಡುತ್ತಾನೆ.)
ಖಾಸೀಂ : ವಾಸನೆ ಬರ್ತಾ ಇದೆ!
(ಅಲ್ಲಿ ಇಲ್ಲೆಂದು ಹುಡುಕುತ್ತ ಆ ಬಂಡೆಯ ಬಳಿಯೇ ಬರುತ್ತಾನೆ. ಠೀವಿಯಿಂದ ನಿಂತು ಒಮ್ಮೆ ಕುದುರೆಗಳ ಕಡೆಗೆ ಸಡಗರದಿಂದ ನೋಡಿ)
ಖುದಾ ಕಾ ಕಸಂ
ಹಸನ್ ಕಾ ಹುಕುಂ
ಖುಲ್ ಜಾ ಸೇಸೆಮಿ
(ಬಾಗಿಲು ಭಯಂಕರ ಸಪ್ಪಳದೊಂದಿಗೆ ತೆರೆಯುತ್ತದೆ. ಹೆದರಿ ಹಿಂದೆ ಸರಿದ ಕುದುರೆಗಳನ್ನು ಸಾವರಿಸಿಕೊಂಡು ಒಳನುಗ್ಗಿ “ಬಂದ್ ಹೋ ಜಾ ಸೇಸೆಮಿ” ಎನ್ನುತ್ತಾನೆ. ಈಗ ದೃಶ್ಯ ಬದಲಾಗುತ್ತದೆ. ಗವಿಯ ಒಳಭಾಗದಲ್ಲಿ ಹೇರಳ ಚಿನ್ನ. ಆಭರಣಗಳ ರಾಶಿ ಬಿದ್ದಿದೆ. ಸಂತೋಷಾತಿಶಯದಲ್ಲಿ ಮೈಮರೆತು ಓಡಿ ಹೋಗಿ ಚಿನ್ನದ ಮೂಟೆಗಳನ್ನ ತಬ್ಬಿಕೊಳ್ಳುತ್ತಾನೆ.)
ಖಾಸೀಂ : ಹಾಯ್ ಹಾಯರೆ ಚಿನ್ನ ಬೇಖಬರಾದೆನೊ ನೋಡಿ ಇದನ್ನ!
ಇದನೆಲ್ಲ ಹೆಂಗಾರೆ ಸಾಗಿಸಲಣ್ಣ
ಸಾಲsವು ಈ ಕುದುರೆ ಸತ್ತೇನೋ ನಾನಾ||
ಮೇಳ : ಚಿನ್ನ! ಚಿನ್ನ! ಹಾಯ್ ಹಾಯರೆ ಚಿನ್ನ!
ಇದನೆಲ್ಲ ಹೆಂಗಾರೆ ಸಾಗಿಸಲಣ್ಣ||
ಖಾಸೀಂ : ಮತ್ತೊಮ್ಮೆ ಬರುವೆನು ಇನ್ನೊಮ್ಮೆ ನಾನಾ
ತರುವೆನು ನೂರಾರು ಕುದುರೆಗಳನ್ನ
ಮೇಳ : ಚಿನ್ನ! ಚಿನ್ನ! ಹಾಯ್ ಹಾಯರೆ ಚಿನ್ನ!
ಇದನೆಲ್ಲ ಹೆಂಗಾರೆ ಸಾಗಿಸಲಣ್ಣ||
(ಅವಸರದಿಂದ “ಇದನೆಲ್ಲ ಹೆಂಗಾರೆ ಸಾಗಿಸಲಣ್ಣ” ಎನ್ನುತ್ತ ಮೂಟೆಗಳನ್ನು ಕುದುರೆಯ ಮೇಲೆ ಹೇರುತ್ತಾನೆ. ಮೇಳದವರು ಆಗಾಗ ತಮ್ಮ ಹಾಡನ್ನು ರಿಪೀಟ್ ಮಾಡುತ್ತಿರುತ್ತಾರೆ, ಹೊರಡಬೇಕೆಂದು ಬರುತ್ತಾನೆ. ಓಡಿ ಹೋಗಿ ಇನ್ನೇನೋ ತಗೊಳ್ಳುತ್ತಾನೆ. ಹೀಗೆ ಅನೇಕ ಸಲ ಮಾಡಿ, ಇನ್ನೂ ತಗೊಳ್ಳುವುದು ಸಾಧ್ಯವಿಲ್ಲವೆಂದಾದ ಮೇಲೆ ಒಲ್ಲದ ಮನಸ್ಸಿನಿಂದ ಬಂಡೆಯ ಬಳಿಗೆ ಬಂದು.)
“ಹಸನ್ ಕಾ ಕಸಂ
ಖುದಾ ಕಾ ಹುಕುಂ
ಖುಲ್ ಜಾ………….ಮುಂದೇನದು?
ಹಾ! ಖುಲ್ ಜಾ ಮಫಸಮಿ“
(ಎನ್ನುತ್ತಾನೆ. ಮೇಳ ಪ್ರತಿಧ್ವನಿಯೆಂಬಂತೆ ಮೋಸಮಿ ಎನ್ನುವುದು ರಿಪೀಟ್ ಆಗುತ್ತದೆ. ಬಂಡೆ ತೆರೆಯುವುದಿಲ್ಲ.)
ಖಾಸೀಂ : ಛೇ ಛೇ ಮರವಾಯ್ತಲ್ಲಪಾ ಅದು. ಹಾ!
ಹಸನ್ ಕಾ ಕಸಂ
ಖುದಾ ಕಾ ಹುಕುಂ
ಕುಲ್ ಜಾ ಚಿನ್ನಿಮಿ
ಮೇಳ : ಚಿನ್ನಿಮಿ ಚಿನ್ನಿಮೀ ಚಿನ್ನಿಮೀ ಚಿನ್ನಿಮೀ……………
ಖಾಸೀಂ : ಖುಲ್ ಜಾ ಬಂಡೆಮೀ…………….
ಮೇಳ : ಬಂಡೆಮೀ ಬಂಡೆಮೀ ಬಂಡೆಮೀ……………
(ಪ್ರತಿ ಸಲ ಹೀಗೇ ಆಗುತ್ತದೆ. ಹೆದರುತ್ತಾನೆ, ನಿರಾಸೆ ಜಾಸ್ತಿಯಾಗುತ್ತಿದೆ. ಅಲ್ಲಾ ಎಂದು ಅಳುತ್ತಾನೆ. ಮತ್ತೆ ನೆನಪಾದಂತಾಗಿ ಓಡಿ ಹೋಗಿ ಖುಲ್ ಜಾ ಮಮ್ಮೀ ಎಂದು ಬೊಗಳುತ್ತಾನೆ. ಅವನು ಹೇಳಿದ್ದನ್ನೆಲ್ಲ ಮೇಳ ರಿಪೀಟ್ ಮಾಡುತ್ತದೆ. ಧ್ವನಿಯ ಭಯಂಕರತೆಯಿಂದ ಇನ್ನಷ್ಟು ಅಧೀರನಾಗುತ್ತಾನೆ. ಗೋಳಾಡುತ್ತಾನೆ.)
ಖಾಸೀಂ : ಯಾಕಾದರೂ ಮರೆತನೊ, ಅಲ್ಲಾ! ಇದ್ದುದರಲ್ಲೇ ಸಮಾಧಾನದಿಂದ ಇರಬೇಕಾ
ಗಿತ್ತು. ಅತಿಯಾಸೆ ಗತಿಗೆಡಿಸ್ತಲ್ಲೋ ದೇವರೇ……
(ಎಂದು ಅಳುತ್ತಾನೆ. ಮಧ್ಯೆ ನೆನಪಾಗಿ ಮತ್ತೆ ಬಂಡೆಯ ಬಳಿ ಓಡಿ ಹೋಗಿ “ಖುಲ್ ಜಾ ಮೂಟಮ್ಮೀ” ಎಂದು ಏನೇನೋ ಹೇಳಿ ಬರುತ್ತಾನೆ. ಕೊನೆಗೆ “ಅಲ್ಲಾ, ನನ್ನ ಪಾರು ಮಾಡಿದರೆ ಇದರಲ್ಲಿಯ ಐದು ನಾಣ್ಯಗಳನ್ನ ನಿನ್ನ ಹೆಸರಿನಲ್ಲಿ ಬಡವರಿಗೆ ದಾನ ಮಾಡುತ್ತೇನೆ” ಎನ್ನುತ್ತಾ ಬಾಗಿಲ ಬಳಿ ಬಂದು ಬಾಯಿ ತೆರೆಯಬೇಕೆನ್ನುವಷ್ಟರಲ್ಲಿ ಹೊರಗಡೆಯಿಂದ.)
ಖುದಾ ಕಾ ಕಸಂ
ಹಸನ್ ಕಾ ಹುಕುಂ
ಖುಲ್ ಜಾ ಸೇಸೆಮಿ
(ಎಂದು ಕೇಳಿಸಿ ಖುಶಿಯಾಗುತ್ತದೆ. ಬಂಡೆ ತೆರೆದುಕೊಳ್ಳುತ್ತದೆ. ಲಗುಬಗೆಯಿಂದ ಹೊರಡುವಷ್ಟರಲ್ಲಿ ಬಾಗಿಲಲ್ಲಿ ಚೋರೋಂಕಾ ರಾಜಾ ಹಸನ್ ನಿಂತಿದ್ದಾನೆ.)
ಖಾಸೀಂ : ಅರೆ! ಯಾರಪ್ಪಾ ನೀವು? ನೀವೂ ನನ್ನ ಹಾಗೆ ತಗೊಂಡು ಹೋಗಲಿಕ್ಕೆ
ಬಂದೀರಿ ತಾನೆ? ಹುಷಾರಪ್ಪಾ, ಆ ಬಂಡೆ ಮಂತ್ರ ಮರೆಯಬೇಡಿ…….
(ಹಸನ್ತನ್ನ ಜೊತೆಗಾರ ಕಳ್ಳರಿಗೆ ಸನ್ನೆ ಮಾಡುತ್ತಾನೆ. ಕಳ್ಳರು ಅವನನ್ನು ಮುತ್ತುತ್ತಾರೆ.)
Leave A Comment