(ಖಾಸೀಮನ ಮನೆ. ಚಿಂತೆ ಮಾಡುತ್ತ ಫಾತಿಮಾ ಕೂತಿದ್ದಾಳೆ. ಮರ್ಜೀನಾ ಅವಳನ್ನು ಸಂತೈಸುತ್ತಿದ್ದಾಳೆ. ಹಾಡಿನ ಅರ್ಥದಂತೇ ಮುಂದಿನ ಅಭಿನಯವಿರಬೇಕು.)
ಮೇಳ : ಕತ್ತಲಾದರು ಬರಲೇ ಇಲ್ಲ ಮನೆಗೆ ಖಾಸೀಮ
ಅತ್ತು ಕರೆಯುತ ಚಿಂತೆ–ಮಾಡಿದಳವನ ಬೇಗಮ್ಮ||
ಹೆಚ್ಚಿನಾಸೆಗೆ ಹುಚ್ಚಳಾದೆನು ದಾರಿ ಸಿಗದಲ್ಲಾ|
ಹೋದವ ತಿರುಗಿ ಬರನಲ್ಲಾ
ನಮ್ಮ ಭಾಗಕೆ ಕಣ್ಣು ಮುಚ್ಚಿದನಲ್ಲ ಹಾಯಲ್ಲಾ|
ಅವನೆದೆ ಒಣಗಿ ಹೋಯ್ತಲ್ಲಾ||
(ಅಲೀಬಾಬಾನ ಮನೆಗೆ ಹೊರಡುವಳು. ದೃಶ್ಯ ಬದಲಾವಣೆಗೆ ಅಗತ್ಯವಿದ್ದಷ್ಟು ಹೊತ್ತು ಮೇಳ ಆಯಾ ಸಾಲುಗಳನ್ನು ರಿಪೀಟ್ ಮಾಡುತ್ತದೆ.)
ಬಾಗಿ ನಡೆಯುವ ಹೊತ್ತು ಬಂದವು ಬಾರೆ ಮರ್ಜೀನಾ
ಪತಿಯ ತಮ್ಮನ ಮತವ ಕೇಳೋಣು ಹಿಡಿದು ಕಾಲನ್ನ||
(ಅಲೀಬಾಬಾ ಮನೆ. ಅಲೀಬಾಬಾ, ಸಲೀಂ ಕೂತಿದ್ದಾರೆ. ಫಾತಿಮಾ, ಮರ್ಜೀನಾಳನ್ನು ಅವಲಂಬಿಸಿ ಬರುತ್ತಾಳೆ.)
ಫಾತಿಮಾ : ನೀ ತಮ್ಮನಲ್ಲಾ ಖಾಸ ಅಲ್ಲಾ ಕಾಯೊ ನಮ್ಮನ್ನಾ
ಹೋದ ಪತಿ ಹಿಂದಿರುಗಿ ಬಾರನು ತೋರೊ ಕರುಣೆಯನಾ||
ಅಲೀಬಾಬಾ : ಅಲ್ಲಾನೇ ಕಾಪಾಡಬೇಕು. ಬೆಳಿಗ್ಗೆ ಹೋದವನು ಇನ್ನೂ ಬರಲಿಲ್ಲ, ಅಂದರೆ ಏನೋ ಅನಾಹುತವೇ ಆಗಿರಬೇಕು. ನಾನೇ ಅಲ್ಲಿಗೆ ಹೋಗಿ ಬರ್ತೀನಿ. ಅಲ್ಲಾ ಇದ್ದಾನೆ. ಮಾಡೋಣ ಮಾಡೋ ಪ್ರಯತ್ನ. ಮುಂದಿನದು ಅಲ್ಲಾನ
ಚಿತ್ತ, ಸಲೀಂ, ನೀ ಹೋಗಿ ನಿನ್ನ ದೊಡ್ಡಮ್ಮನ ಮನೆಯಲ್ಲಿರು.
ಸಲೀಂ : ನಾನೂ ನಿನ್ನ ಜೊತೆ ಬರ್ತೀನಪ್ಪಾ.
ಅಲೀಬಾಬಾ : ಅದು ಅಪಾಯದ ಸ್ಥಳ. ದಾಟಿ ಬರೋದು ನನಗೊಬ್ಬನಿಗೇ ಗೊತ್ತು. ನೀ ಹೋಗು.
ಮೇಳ : ಅಲ್ಲಾ ಎಂದನು ಅಲೀಬಾಬಾ ದೊಡ್ಡವನೊ ನೀನಾ
ದೊಡ್ಡದು ಭಕ್ತರಲ್ಲಿ ಕರುಣಾ
ನೀನೆ ಕೊಡುವವ ನೀನೇ ಕೊಂಬವ ಅಸಮ ಘನವಾನಾ||
ಹೊಂಟು ನಿಂತನು ಎಂಟು ಎದೆಯಲಿ
ಕತ್ತೆ ಹಿಂಬಾಲಾ
ಮುತ್ತಿಕೊಂಡಿತು ಕತ್ತಲಾತನ
ಚಿತ್ತದಲಿ ದಿಗಿಲಾ||
(ಬಂಡೆಯ ಬಳಿ ಬರುತ್ತಾನೆ)
ಬಂಡೆಯ ಬಳಿ ಬಂದಾನು ಕಳ್ಳರ ದಂಡು ಇರಲಿಲ್ಲ
ಖುಲ್ ಜಾ ಸೇಸೆಮಿಯೆಂದು ಮೆಲ್ಲಗೆ ಉಸುರಿದಾನಲ್ಲಾ
ಒಳಗೆ ಹೊಕ್ಕನು ನೋಡಿ ಚೀರಿದ ಅಲ್ಲಾ ಹಾಯಲ್ಲಾ||
ಅಲೀಬಾಬಾ : ಹಾಯಲ್ಲಾ………………
ಮೇಳ : ಹಾಯಲ್ಲಾsss
(ಒಳಗೆ ಖಾಸೀಮ ಅರೆಜೀವವಾಗಿ ನೇತಾಡುತ್ತಿದಾನೆ)
ಅಲೀಬಾಬಾ : ಏನಿದೇನಿದು ಕಾಣದಾಯಿತು ಆಸೆಗಿಂಥಾ ಶಿಕ್ಷೆಯೇ
ಅಣ್ಣನೀ ಪರಿ ಭಿನ್ನವಾದನು ಅರ್ಧಜೀವಾಗಿರುವನೇ
ಕೆಟ್ಟ ಆಸೆಯ ಕೈಗೆ ಕೊಟ್ಟನು ತನ್ನ ಬುದ್ಧಿಯನಣ್ಣನೊ
ಹೊಟ್ಟೆಕಿಚ್ಚಿಗೆ ಸುಟ್ಟು ಹೋದನು ಕೆಟ್ಟುಹೋದನು ಅಣ್ಣನೊ||
ಮೇಳ : ಅತ್ತು ಕರೆಯುವ ಹೊತ್ತು ಮೀರಿತು ಥಟ್ಟನೆದ್ದನು ಸೋದರ
ತುಂಡು ದೇಹದ ಗುಂಡು ಮಾಡುತ ಕತ್ತೆ ಡುಬ್ಬಿಗೆ ಹೇರಿದಾ||
ಮನೆಗೆ ಹೊರಟನು ವಿಧಿಯ ಶಪಿಸುತ ದಾರಿ ತುಂಬಾ ನೆತ್ತರು
ಕಣ್ಣ ನೀರನು ಸುರಿಸಿ ತೊಳೆದನು ದಾರಿ ಮೊದಲಂತಾಯಿತು||
(ಖಾಸೀಮನ ಮನೆಗೆ ಬಂದು ಬಾಗಿಲು ಬಡಿಯುವನು. ತೆರೆದ ತಕ್ಷಣ ಕತ್ತೆ ದೂಕಿಕೊಂಡು ಒಳನುಗ್ಗಿ ಬಾಗಿಲಿಕ್ಕಿಕೊಳ್ಳುವನು. ಮನೆಯ ಒಳಭಾಗ. ನೋಡಿ ಫಾತಿಮಳಿಗೆ ಆಘಾತವಾಗುತ್ತದೆ.)
ಫಾತಿಮಾ : ಘಾತವಾಯಿತು ಪತಿಯ ಜೀವಕ್ಕಾ
ಘಾತಿಸಿದ ಪಾಪಿಯ ಹೇಂತಿಯಾಗಲಿ ರಂಡಿ ಈ ಕ್ಷಣಕ
ವಿಧವೆಯಾಗಲಿ ವಿಧಿಯ ಹೆಂಡತಿ ನೋಡಿ ನಕ್ಕುದಕ
ನನ್ನ ಭಾಗ್ಯವು ಕಂದಿತಲ್ಲಾ ಎಂಥ ಕಾಲವು ಬಂದಿತಲ್ಲಾ
ಏನಿದೆಲ್ಲಾ ಹಾಯರೆ ಹಾಯಲ್ಲಾ! ಹಾಯಲ್ಲಾ||
ಅಲೀಬಾಬಾ : ಖಂಡಿತ ಇದು ಅಳುವ ಸಮಯವಲ್ಲ. ಹೊರಗೆ ಕಳ್ಳರು ಕಾಯುತ್ತಿರಬಹುದು. ಇದೇ ಮನೆ ಅಂತ ಗೊತ್ತಾದರೆ ಇದ್ದದ್ದೂ ಕಷ್ಟ. ಖಾಸೀಮನ ಜೀವ ಮುಖ್ಯ. ಈಗೊಬ್ಬ ಹಕೀಮ ಬೇಕು. ಸಲೀಂ,
ಸಲೀಂ : ಹಕೀಮನ ಮನೆ ಗೊತ್ತಿಲ್ಲವಲ್ಲ. ಕೇಳ್ತಾ ಹೋಗ್ತೀನಿ.
ಮರ್ಜೀನಾ : ಕೇಳಿಕೊಂಡು ಹೋದರೆ ಊರತುಂಬ ಸುದ್ಧಿಯಾಗಬಹುದು. ಅದು ಕಳ್ಳರಿಗೂ ತಲುಪಬಹುದು. ಹಕೀಮ್ ಮುಸ್ತಫಾನ ಮನೆ ನಾ ಬಲ್ಲೆ. ನಾನೇ ಹೋಗಿ ಕರೆದುಕೊಂಡು ಬರ್ತೀನಿ.
ಸಲೀಂ : ನಾನೂ ನಿನ್ನ ಜೊತೆ ಬರ್ತೀನಿ.
ಅಲೀಬಾಬಾ : ಬೇಡ. ಒಬ್ಬಳೇ ಹೋಗಲಿ. ಆದರೆ ಹುಷಾರ್. ಹೊರಗಡೆ ಯಾರಾದರೂ ಇದ್ದಿದ್ದಾರು. ನೋಡಿಕೊಂಡು ಹೋಗು. ಹಾಗೇ ಹಕೀಮನಿಗೂ ಇಂಥಾ ಮನೆಗೇ ಹೋಗಿದ್ದೆ ಅಂತ ತಿಳೀಬಾರದು. ಕೇಳಿದಷ್ಟು ದುಡ್ಡು ಕೊಡು. ಕಣ್ಣುಮುಚ್ಚಿ ಕರೆದುಕೊಂಡು ಬಾ. ಹಾಗೇ ನೀ ಯಾರಂತ್ಲೂ ಹೇಳಬೇಡ, ಹೋಗು.
ಮರ್ಜೀನಾ : ಸರಿ
(ಬುರ್ಖಾ ಹಾಕಿಕೊಂಡು ಹೊರಡುವಳು.)
Leave A Comment