(ಅಲೀಬಾಬಾ ಠೀವಿಯಿಂದ ಕೂತು ಕತ್ತೆಗಳ ಸಂಗೀತ ಕೇಳುವುದರಲ್ಲಿ ನಿರತನಾಗಿದ್ದಾನೆ. ಪಕ್ಕದಲ್ಲಿ ಅವನ ಬೇಗಂ ಕೂತಿದ್ದಾಳೆ. ದೂರದಲ್ಲಿ ಎರಡೂ ಕತ್ತೆಗಳು ಸಂಗೀತಗಾರರಂತೆ ಶಾಲು ಹೊದ್ದುಕೊಂಡು ಸನ್ಮಾನಿತರಾಗಿ ನಿಂತಿವೆ. ಮರಿಕತ್ತೆ ಭಾರೀ ವಿದ್ವಾಂಸರಂತೆ ಹಾಡತೊಡಗಿದೆ. ಮಧ್ಯೆಮಧ್ಯೆ ಅಲೀಬಾಬಾ ಭೇಶ್ ಭೇಶ್ ಎಂದು ತನ್ನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾನೆ. ಅದರ ಹಾಡು ಮುಗಿಯುತ್ತಲೂ ಅಲೀಬಾಬಾ ಅದಕ್ಕೂ ಶಾಲು ಹೊದೆಸಿ ಸನ್ಮಾನ ಮಾಡುತ್ತಾನೆ.)

ಅಲೀಬಾಬಾ : ಭೇಶ್ ಭೇಶ್! ಚೆನ್ನಾಗಿ ಕಲಿ ಮರಿ, ನಿನ್ನ ತಂದೆ ಇದಾನಲ್ಲ, ಅವನ ಅನುಕರಣೆ ಮಾಡಬೇಡ. ಒಳ್ಳೇ ಪ್ರತಿಭೆಯನ್ನ ಹಾಳುಮಾಡಿಕೊಂಡ. ನೋಡಿದಾಗೆಲ್ಲಾ ಯಾವುದಾದರೊಂದು ಹೆಣ್ಣು ಕತ್ತೇ ಬೆನ್ನು ಹತ್ತಿದರೆ ಏನಾಗಬೇಡ? ಸಂಗೀತ ಅಂದರೆ ಒಂದು ತಪಸ್ಸು. ಮನಸ್ಸನ್ನ ಏಕಾಗ್ರಗೊಳಿಸಿ ಸಂಗೀತದ ಅಭ್ಯಾಸ ಮಾಡಬೇಕು. ಎದುರಿನಲ್ಲಿ ಹೆಣ್ಣುಕತ್ತೆ ಕುಣಿದರೂ ಆ ಕಡೆ ನೋಡಬಾರದು, ತಪಸ್ಸೆಂದರೆ ಅದು. ನೀನೂ ಆ ಥರ ಮಾಡಿ ಈ ನಾಡಿನ ದೊಡ್ಡ ಸಂಗೀತಗಾರನಾಗಬೇಕು-ತಿಳೀತಾ?
(ಮರಿಕತ್ತೆ ಕತ್ತು ಹಾಕುತ್ತಿದೆ, ಅಷ್ಟರಲ್ಲಿ ಖಾಸೀಂ ಬರುತ್ತಾನೆ.)

ಖಾಸೀಂ : ಆದಾವಂದ್ ಅಲೀಬಾಬಾ,

ಅಲೀಬಾಬಾ : ಅರೆ! ಭಾಯೀ ಸಾಹೇಬ್! ಅದಾವಂದ್. ಬಾ ಬಾ.

(ಬೇಗಂ ಒಳಗೆ ಹೋಗುವಳು. ಪ್ರಾರಂಭದಲ್ಲಿದ್ದ ಬಡ ಮನೆಯ ಆಕಾರ ಬದಲಾಗಿದೆ. ಶ್ರೀಮಂತಿಕೆ ಒಡೆದು ಕಾಣುತ್ತಿದೆ. ಖಾಸೀಂ ನೋಡಿ ಆವಾಕ್ಕಾಗುತ್ತಾನೆ.)

ಖಾಸೀಂ : ಏನು, ಸೌದೆ ತರಲಿಕ್ಕೆ ಹೋಗಿಲ್ಲವೊ?

ಅಲೀಬಾಬಾ : ಈ ದಿನ ಹೋಗಲಿಲ್ಲ.

ಖಾಸೀಂ : ದರ್ಬಾರ್ ಕೂಡಿರೋ ಹಾಗಿದೆ!

ಅಲೀಬಾಬಾ : ನಿನ್ನ ದರ್ಬಾರಿನ ಮುಂದೆ ನಂದೇನಪ್ಪಾ?

ಖಾಸೀಂ : ಓಹೋ! ಈ ಆಸನಗಳು! ಈ ಅಲಂಕಾರಗಳು! ಸೌದೆ ಮಾರೋನ ಸೌಭಾಗ್ಯವೇ! ಈಗ ಒಂದು ಹೊರೆ ಸೌದೆ ಬೆಲೆ ಒಂದು ಸಾವಿರ ಹೊನ್ನಾಗಿದೆ ಯಂತೆ ಹೌದಾ ಅಲೀಬಾಬಾ?

ಅಲೀಬಾಬಾ : ನಿನ್ನ ವ್ಯಂಗ್ಯ ನನಗೂ ಅರ್ಥವಾಗುತ್ತಪ್ಪ. ಏನೀಗ? ಸೌದೆ ಮಾರುವವರು ಶ್ರೀಮಂತರಾಗಬಾರದೋ?

ಖಾಸೀಂ : ಒಪ್ಪಿಕೊಂಡೆಯಲ್ಲ, ನೀನೂ ಶ್ರೀಮಂತ ಅಂತ. ಈಗ್ಹೇಳು: ಒಂದೇ ದಿನದಲ್ಲಿ ನಿನಗೆ ಈ ಶ್ರೀಮಂತಿಕೆ ಹ್ಯಾಗೆ ಬಂತು?

ಅಲೀಬಾಬಾ : ದುಡಿದೆ, ಬಂತು.

ಖಾಸೀಂ : ಒಪ್ಪತಿದ್ದೆ-ನೀ ಕತೆ ಹೇಳಿದರೆ, ಹೂ ಅನ್ನೋದಕ್ಕೆ ನಾನು ಮಗು ಆಗಿದ್ದರೆ. ಎರಡೂ ಅಲ್ಲವಲ್ಲ. ಅಷ್ಟೇ ಅಲ್ಲ, ಎಂಟೋ ಹತ್ತೋ ನಾಣ್ಯ ಗಳಿಸಿದ್ದರೆ ಅದನ್ನೂ ಒಪ್ಕೋತಿದ್ದೆ. ಹಾಗೂ ಅಲ್ಲ. ನಿನಗ್ಗೊತ್ತಿದೆ: ಒಂದು ಸ್ಥಳದಲ್ಲಿ ಎಷ್ಟು ಚಿನ್ನ ಇದೆ ಅನ್ನೋದನ್ನ ನಾನು ವಾಸನೆಯಿಂದಲೇ ಕಂಡು ಹಿಡಿಯಬಲ್ಲೆ.ಈಗ ನನ್ನ ಮುಗು ಏನ್ಹೇಳ್ತಾ ಇದೆ ಗೊತ್ತೊ? ಈ ಮನೆಯಲ್ಲಿ ಖಂಡಿತ ಮೂಟೆಗಟ್ಟಲೆ ಚಿನ್ನದ ನಾಣ್ಯಗಳಿವೆ ಅಂತ. ಏನಂತಿ?

ಅಲೀಬಾಬಾ : ನಿನಗೆ ನೆಗಡಿ ಆಗಿಲ್ಲ ತಾನೆ?

ಖಾಸೀಂ : ಇಲ್ಲ.

ಅಲೀಬಾಬಾ : ನಿನ್ನ ಮೂಗು ಮುಖದಲ್ಲೇ ಇದೆ ತಾನೆ?

ಖಾಸೀಂ : ಹೌದು, ನೋಡಿಕೊ.

ಅಲೀಬಾಬಾ : ಹಾಗಿದ್ದರೆ ನಿನ್ನ ಮೂಗು ಸರಿಯಾಗೇ ಹೇಳಿದೆ.

ಖಾಸೀಂ : ಅದು, ಅದು, ಈಗ್ಹೇಳು: ಹ್ಯಾಗ್ಬಂತು ಮೂಟೆಗಟ್ಟಲೆ ಚಿನ್ನ? ಯಾರು
ಕೊಟ್ಟರು?

ಅಲೀಬಾಬಾ : ಅಲ್ಲಾ ಕೊಟ್ಟ.

ಖಾಸೀಂ : (ಗಹಗಹಿಸಿ ನಗುವನು.) ಅಲ್ಲಾ ಕೊಡೋ ಹಾಗಿದ್ದರೆ ಮುಂಚೆ ನನಗೇ ಕೊಡತಿದ್ದ. ಇನ್ಯಾರೋ ಮನುಷ್ಯರು ಕೊಟ್ಟದ್ದು: ಇಲ್ಲಾ ನೀ ಕದ್ದುಕೊಂಡು ಬಂದದ್ದು.

ನಿಜ ಹೇಳು.

ಅಲೀಬಾಬಾ : ನಿನಗ್ಗೊತ್ತು. ನಾ ಕಳ್ಳ ಅಲ್ಲ.

ಖಾಸೀಂ : ಬಡವ ಹೌದೋ? ಬಡತನ ಏನೇನೋ-ಕಲಿಸ್ತದೆ, ಕಳ್ಳತನ ಕಲಿಸೋದಿಲ್ಲವೊ? ನಿಜ ಹೇಳು, ಹ್ಯಾಗ್ಬಂತು? ಎಲ್ಲಿಂದ ಬಂತು! ಹೇಳದಿದ್ದರೆ ಇಕಾ ನಾ ಹೊರಟೆ.

ಅಲೀಬಾಬಾ : ಎಲ್ಲಿಗೆ?

ಖಾಸೀಂ : ರಾಜನ ಹತ್ತಿರ!

ಅಲೀಬಾಬಾ : ರಾಜನ ಹತ್ತಿರ!

ಖಾಸೀಂ : ಹೂ! ನೀನು ಅಲ್ಲಾನ ಭಕ್ತ; ಅಲ್ಲಾನ ಹತ್ತಿರ ಹೋಗ್ತಿದ್ದೆ. ನಾನು ಪಾಪಿ. ಅಲ್ಲಾನ ಪ್ರತಿನಿಧಿ ರಾಜನ ಹತ್ತಿರ ಹೋಗಿ ಕೇಳ್ತೀನಿ: ಬಡ ಅಲೀಬಾಬಾನನ್ನ ಅಲ್ಲಾ ಹ್ಯಾಗೆ ಶ್ರೀಮಂತ ಮಾಡಿದ? ಅದೂ ನನ್ನ ಬಿಟ್ಟು?

ಅಲೀಬಾಬಾ : ಭಾಯೀ ಸಾಹೇಬ, ಹಾಗೆಲ್ಲಾ ಮಾಡಿದರೆ ಹೇಗೆ? ಬಾ ಬಾ ಕೂತುಕೋ ಬಾ.

ಖಾಸೀಂ : ಕೂತುಕೊಳ್ಳೋದು ಇಲ್ಲ. ನಿಂತುಕೊಳ್ಳೋದೂ ಇಲ್ಲ, ಹೇಳಿದರೆ ಸರಿ; ಇಲ್ಲದಿದ್ದರೆ ರಾಜನ ಹತ್ತಿರ ದೂರು ಒಯ್ತೀನಿ.

ಅಲೀಬಾಬಾ : ಹೇಳ್ತೀನಿ ಬಾ.

ಖಾಸೀಂ : ಹೇಳು, ಹಾಗಾದರೆ.

ಅಲೀಬಾಬಾ : ಹೇಳತೀನಿ, ನೀ ಯಾರ ಮುಂದೂ ಹೇಳೋದಿಲ್ಲಾಂತ ಅಲ್ಲಾನ ಆಣೆ ಮಾಡಿದರೆ.

ಖಾಸೀಂ : ಅಲ್ಲಾನಾಣೆ.

ಅಲೀಬಾಬಾ : ನೋಡು: ಊರ ಹೊರಗೆ, ಕಾಡಿನಲ್ಲಿ, ನದೀ ಹತ್ತಿರ ದೊಡ್ಡ ಬಂಡೆ ಇದೆ; ಗೊತ್ತಲ್ಲ?

ಖಾಸೀಂ : ಗೊತ್ತು.

ಅಲೀಬಾಬಾ : ಆ ಬಂಡೇ ಹತ್ತಿರ ಹೋಗು. ಆಸು ಪಾಸು ಯಾರೂ ಇಲ್ಲಾಂತ ಖಾತ್ರಿ ಮಾಡಿಕೊ. ಬಂಡೇ ಮುಂದೆ ನಿಂತು,

ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸೆಮಿ-ಅಂತ ಒದರಿ ಹೇಳು, ಬಂಡೆ ಬಾಗಿಲು ತೆರೀತದೆ.
ಒಳಗಡೆ ಹೋದರೆ ಚಿನ್ನ ಬೆಳ್ಳಿ ಇದೆ, ರಾಶಿಗಟ್ಟಳೆ! ತಗೊಂಬಾ.

ಖಾಸೀಂ : ನೀ ಹೇಳಿದ್ದು ಅಲ್ಲಾನ ಸಾಕ್ಷಿಯಾಗಿ ನಿಜ ತಾನೆ?

ಅಲೀಬಾಬಾ : ನಿಜ.

ಖಾಸೀಂ : ಸುಳ್ಳು ಹೇಳಿದರೆ, ಗೊತ್ತಲ್ಲ?…………….ಜೇಲಿಗೆ!

ಅಲೀಬಾಬಾ : ಆ ಯೋಚನೆಯಿಲ್ಲ. ಆದರೆ ದಯಮಾಡಿ ನೆನಪಿಟ್ಟುಕೊ: ಒಳಗಡೆ ಹೋದ ತಕ್ಷಣ ಬಂಡೇ ಬಾಗಿಲಾ ಮುಚ್ಚು. ಮುಚ್ಚ ಬೇಕಾದರೆ.-“ಬಂದ್ಹೋ ಜಾ ಸೇಸೆಮಿಅಂತ ಹೇಳಬೇಕು. ಮತ್ತೆ ಹೊರಗಡೆ ಬರಬೇಕಾದರೆ,-

ಖಾಸೀಂ : ಗೊತ್ತಾಯ್ತು. ಬಂಡೇ ಬಾಗಿಲಾ ತೆರೀಬೇಕಾದರೆ,……………

ಅಲೀಬಾಬಾ : ಖುದಾ ಕಾ ಕಸಂ
ಹಸನ್ಕಾ ಹುಕುಂ
ಖುಲ್ಜಾ ಸೇಸೆಮಿ

ಖಾಸೀಂ : ಮುಚ್ಚಬೇಕಾದರೆ……..

ಅಲೀಬಾಬಾ : ಬಂದ್ ಹೋ ಜಾ ಸೇಸೆಮಿ

ಖಾಸೀಂ : ಖುದಾಕಾ ಕಸಂ, ಹಸನ್‌ ಕಾ ಹುಕುಂ, ಖುಲ್‌ ಜಾ ಸೇಸೆಮಿ, ಬಂದ್ ಹೋ ಜಾ ಸೇಸೆಮಿ…………ಅಂದಹಾಗೆ ನೀನೆಷ್ಟು ಕತ್ತೆ ಒಯ್ದಿದ್ದೆ?

ಅಲೀಬಾಬಾ : ಮೂರು.

ಖಾಸೀಂ : ನೀ ಮೂರು ಕತ್ತೆ ಒಯ್ದಿದ್ದರೆ ನಾನು ಬಾರಾ ಕುದುರೆ ಒಯ್ತೀನಿ. ಒಂದೇ ದಿನದಲ್ಲಿ ನಿನ್ನ ಆರು ಪಟ್ಟು ಶ್ರೀಮಂತನಾಗ್ತೀನಿ!

ಅಲೀಬಾಬಾ : ಉತ್ಸಾಹದಲ್ಲಿ ಮೈಮರೀಬೇಡಣ್ಣಾ. ಅದು ಅಪಾಯದ ಜಾಗ. ಕಳ್ಳರು ಕೂಡಿಟ್ಟ ಐಶ್ವರ್ಯ ಅದು! ನೋಡಿಕೊಂಡು ಹೋಗು. ಅತಿಯಾಸೆ ಗತಿಗೇಡು ಅಂತಾರೆ. ಏನಂತೆ, ಒಂದು ಸಲ ನೋಡಿ ಬಂದ ಮೇಲೆ ಬೇಕಾದ ಹಾಗೆ ಮತ್ತೆ ತರಬಹುದು.
ಹುಷಾರಾಗಿ ಬಾ. ಅಲ್ಲಾ ನಿನ್ನ ಕಾಪಾಡಲಿ.

ಖಾಸೀಂ : ಖುದಾ ಕಾ ಕಸಂ, ಹಸನ್‌ಕಾ ಹುಕುಂ, ಖುಲ್‌ಜಾ ಸೇಸೆಮಿ……..
(ಎನ್ನುತ್ತ ಹೋಗುವನು.)