(ಕ್ರಿ. ಶ. ೧೮೮೧-೧೯೫೫) (ರೋಗ ನಿವಾರಕ ಪೆನಿಸಿಲಿನ್)

ಅಲೆಕ್ಸಾಂಡರ್ ಫ್ಲೆಮಿಂಗ್ ಆಗಸ್ಟ್ ೬, ೧೮೮೧ರಂದು ಸ್ಕಾಟ್ಲೆಂಡಿನ ಐರ್ಷೈರ್ ನಲ್ಲಿ ಜನಿಸಿದರು. ಆತನ ತಂದೆ ಒಬ್ಬ ಬಡ ಬೇಸಾಯಗಾರ. ಆ ಬೇಸಾಯಗಾರನ ಎರಡನೆಯ ಹೆಂಡತಿಯ ಮಗ ಅಲೆಕ್ಸಾಂಡರ್ ಫ್ಲೆಮಿಂಗ್. ತನ್ನ ಐದನೆಯ ವಯಸ್ಸಿನಲ್ಲಿ ಶಾಲೆಗೆ ಸೇರಿದ. ಆತನಿಗೆ ಇನ್ನೂ ಏಳು ವರ್ಷ ಪೂರ್ತಿ ಆಗಿರಲಿಲ್ಲ, ಆತನ ತಂದೆ ನಿಧನರಾದರು. ೧೮೯೫ರಲ್ಲಿ ಅಲೆಕ್ ಲಂಡನಿನ ರೀಜೆಂಟ್ ರಸ್ತೆ ಪಾಲಿಟೆಕ್ನಿಕ್ ಗೆ ಹೋದರು. ೧೯೦೧ರಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸೇಂಟ್ ಮೇರಿ ಆಸ್ಪತ್ರೆಯ ಮೆಡಿಕಲ್ ಸ್ಕೂಲನ್ನು ಸೇರಿದರು. ತನ್ನ ಅಸಾಧಾರಣ ಪ್ರತಿಭೆಯಿಂದಾಗಿ ವಿಶ್ವವಿದ್ಯಾಲಯದ ಚಿನ್ನದ ಪದಕವನ್ನು ಗಳಿಸಿದರು.

ಈತ ಬರಿ ಪುಸ್ತಕದ ಹುಳು ಆಗಿರಲಿಲ್ಲ. ಜೀವನದ ನಾನಾ ರಂಗಗಳಲ್ಲಿ ಕಾರ್ಯ ಮಾಡಿದ್ದರು. ಇವರು ಹವ್ಯಾಸಗಳೂ ಉತ್ತಮವಾಗಿದ್ದವು. ಅಂತಲೇ ಇವರು ಒಳ್ಳೆಯ ಈಜುಗಾರ, ವಾಟರ್ ಪೋಲೊ ಆಟಗಾರ ಮತ್ತು ಹವ್ಯಾಸಿ ರಂಗಭೂಮಿ ನಟ ಆಗಿದ್ದರು. ಇವರು ಒಬ್ಬ ಯೋಧ ಕೂಡ ಆಗಿದ್ದರು. ೧೯೦೦ರಲ್ಲಿ ದಕ್ಷಿಣ ಆಫ್ರಿಕ ಯುದ್ಧ ನಡೆಯುತ್ತಿದ್ದಾಗ ಫ್ಲೆಮಿಂಗ್ ತಮ್ಮ ಅಣ್ಣನ ಸಮೇತ ಲಂಡನಿನ ಸ್ಕಾಟಷ್ ಯೋಧರ ಗುಂಪಿಗೆ ಸೇರಿಕೊಂಡಿದ್ದರು.

ಒಂದು ದಿನ ಫ್ಲೆಮಿಂಗ್ ಸ್ಟಫೈಲೊಕಾಕಸ್ ಎಂಬ ರೋಗಕಾರಕ ಸೂಕ್ಷ್ಮಜೀವಿಯನ್ನು ಕೃಷಿ ಮಾಡಿ ಸೂಕ್ಷ್ಮದರ್ಶಕದಲ್ಲಿ ವೀಕ್ಷಿಸುತ್ತಿದ್ದಾಗ ಸೋಜಿಗದ ಅಂಶವೊಂದನ್ನು ಗಮನಿಸಿದರು. ತಟ್ಟೆಯ ಮುಚ್ಚಳ ತೆಗೆಯುವುದು ಮುಚ್ಚುವುದು ಮಾಡುತ್ತಿದ್ದಾಗ ಅದರಲ್ಲಿ ಹೊಸ ಬೂಷ್ಟಿನ ಕಣ ತಟ್ಟೆಯಲ್ಲಿ ಕಾಣಿಸಿತು. ಅದು ಗಾಳಿಯಲ್ಲಿ ಹಾರಿ ಬಂದು ಬಿದ್ದಿರಬಹುದು. ಆದರೆ ಸೋಜಿಗದ ಸಂಗತಿಯೆಂದರೆ, ಬೂಷ್ಟು ವಿಸ್ತರಿಸುತ್ತಿರುವ ಆವರಣದಲ್ಲಿ ಸ್ಟೆಫೈಲೋಕಾಕಸ್ ಬ್ಯಾಕ್ಟೀರಿಯಾಗಳು ಮಾಯವಾಗಿದ್ದವು. ಆಕಸ್ಮಿಕವಾಗಿ ಕಂಡು ಬಂದಿದ್ದ ಬೂಷ್ಟಿನ ಜೀವಕಣಗಳು ಸ್ಟೆಫೈಲೋಕಾಕಸ್ ಮತ್ತು ಇತರ ಸೂಕ್ಷ್ಮಜೀವಿಗಳನ್ನು ನಾಶಪಡಿಸುವ ಶಕ್ತಿಯನ್ನು ಹೊಂದಿದ್ದುವೆಂಬುದು ಫ್ಲೆಮಿಂಗ್ ಗೆ ತಿಳಿಯಿತು. ಬೂಷ್ಟು, ಜಾಮ್, ತೆಂಗಿನಕಾಯಿ ತಿರುಳು ಮೊದಲಾದವುಗಳ ಮೇಲೆ ಕಾಣಿಸಿಕೊಳ್ಳುವ ಪೆನಿಸಿಲಿಯಮ್ ಜಾತಿಯದಾಗಿತ್ತು. ಆದುದರಿಂದ ಬೂಷ್ಟಿನಲ್ಲಿಯ ಬ್ಯಾಕ್ಟೀರಿಯಾ ನಾಶಕ ವಸ್ತುವನ್ನು ಪೆನಿಸಿಲಿನ್ ಎಂದು ಫ್ಲೆಮಿಂಗ್ ಕರೆದರು. ಇಂಥ ಜೈವಿಕ ವಸ್ತು ದೇಹದಲ್ಲಿನ ರಕ್ಷಾವ್ಯವಸ್ಥೆಯನ್ನು ನಾಶಪಡಿಸಿದೆ ರೋಗಕಾರಕ ಬ್ಯಾಕ್ಟೀರಿಯಗಳನ್ನು ಮಾತ್ರ ಸಾಯಿಸಬಲ್ಲುದು ಎಂಬುದನ್ನು ಅವರು ಕಂಡು ಹಿಡಿದರು. ನ್ಯುಮೋನಿಯಂ, ಡಿಫ್ತೀರಿಯ ಮತ್ತು ಪರಂಗಿ ರೋಗಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳನ್ನೂ ಪೆನಿಸಿಲಿನ್ ನಾಶ ಮಾಡುವುದು ಎಂದು ಅವರಿಗೆ ಖಚಿತವಾಯಿತು.

ಆದರೆ ಫ್ಲೆಮಿಂಗ್ ತಯಾರಿಸಿದ್ದ ಪೆನಿಸಿಲಿನ್ ಅಷ್ಟು ಫಲಕಾರಿಯಾಗಿರಲಿಲ್ಲ. ಏಕೆಂದರೆ ಅದು ಶುದ್ಧವಾಗಿರಲಿಲ್ಲ ಮತ್ತು ಅಸ್ಥಿರವಾಗಿತ್ತು. ಹೆಚ್ಚು ಪರಿಣಾಮಕಾರಿಯೂ, ಶುದ್ಧವೂ ಆದ ಪೆನಿಸಿಲಿನ್ ಅನ್ನು ಫೋರಿ ಮತ್ತು ಚೈನ್ ಎಂಬ ಬ್ರಿಟಿಷ್ ವಿಜ್ಞಾನಿಗಳು ಮೊಟ್ಟಮೊದಲು ಪಡೆದರು. ಅಂತಲೇ ೧೯೪೫ರಲ್ಲಿ ಈ ಮೂವರೂ ವಿಜ್ಞಾನಿಗಳಿಗೆ ಸಂಯುಕ್ತವಾಗಿ ನೊಬೆಲ್ ಪಾರಿತೋಷಕ ದೊರಕಿತು.

ಸ್ವಭಾವತಃ ಸರಳ, ಸೌಜನ್ಯಶೀಲ ವ್ಯಕ್ತಿಯಾಗಿದ್ದ ಫ್ಲೆಮಿಂಗ್ ವಿಶ್ವ ಶಾಂತಿ ಸಮಿತಿಯ ಸದಸ್ಯನಾಗಿ ಶಾಂತಿ ಸ್ಥಾಪಿಸುವುದಕ್ಕೋಸ್ಕರ ಶ್ರಮಿಸಿದರು.

ಅಲೆಕ್ಸಾಂಡರ್ ಫ್ಲೆಮಿಂಗ್ ಮಾರ್ಚ್ ೧೧, ೧೯೫೫ರಂದು ಹೃದಯಾಘಾತದಿಂದ ನಿಧನ ಹೊಂದಿದರು.