ಆಹಾ ಕೆರೆಯ ತೆರೆಗಳೇ,
ಮುಗಿಲ ಬಣ್ಣ ಮುತ್ತು ಕೊಡುವ
ನುಣ್ಗದಪಿನ ಮರಿಗಳೇ
ಏನು ಓಟ ಎಂಥ ಆಟ
ಕುಲು ಕುಲು ಕುಲು ನಗೆಯಲಿ
ಏನೊ ಮಾತ ನುಡಿವಿರಲ್ಲ
ಸುಳಿಗಾಳಿಯ ಕಿವಿಯಲಿ !

ಸರಸಿ ಪಡೆದ ಮುಗುಳು ನಗೆಯ
ಸುಳಿದಾಡುವ ಮಕ್ಕಳೇ
ಕೆರೆಯ ಮನಸು ದಡಕೆ ನುಡಿವ
ತುಂಬೊಲವಿನ ನುಡಿಗಳೇ
ಬೆಳಗಿನಲ್ಲಿ ಬೈಗಿನಲ್ಲಿ
ಬಾನು ಬಣ್ಣ ಬಳಿಯೆ ಕುಣಿವ
ವಿವಿಧ ನೃತ್ಯಕಾರರೇ
ಆ ದಡದಿಂದೀ ದಡದೆಡೆ
ಉತ್ಸಾಹದಿ ನಡೆವಿರಿ
ಆದರಯ್ಯೊ ಕಲ್ಲು ದಡದ
ಎದೆಗೆ ಬರಿದೆ ಬಡಿವಿರಿ !

ಇಷ್ಟೆ ನಿಮ್ಮ ನಡೆಯ ಗುರಿ ?
ಅರಿಯಬಹುದೆ ನಿಮ್ಮ ಪರಿ !
ಆ ರಹಸ್ಯವೇನೆ ಇರಲಿ
ಧನ್ಯರಯ್ಯ ನೀವ್ಗಳು
ಬೆಳುದಿಂಗಳು ಬಂದು ಕುಣಿದು
ನಕ್ಷತ್ರವು ನೋಡಿ ತಣಿದು
ಬೀಸುಗಾಳಿ ಹಾಡಿ ನಲಿದು
ರಸವ ತುಂಬಿದಂಥ ಬಾಳು
ವಿಫಲವಹುದೆ ಕಡೆಯಲಿ !