ಬೀದರಲ್ಲಿ ನಡೆಯುತ್ತಿರುವ ಈ ದೇಸಿ ಸಮ್ಮೇಳನದ ವೇದಿಕೆಯಲ್ಲಿರುವಂತಹ ಎಲ್ಲಾ ಗಣ್ಯರೇ, ಬೀದರ ನಗರದ ನಾಗರೀಕ ಬಂಧುಗಳೇ ದಲಿತ ಮತ್ತು ಅಲೆಆರಿ ಸಂಸ್ಕರತಿಯಲ್ಲಿ ಅಭಿಮಾನ ಪ್ರೀತಿ ವಿಶ್ವಾಸಗಳನ್ನಿಟ್ಟಿರತಕ್ಕಂತಹ ನನ್ನ ಮಿತ್ರರೇ, ವಿದ್ಯಾರ್ತಿ, ವಿದ್ಯಾರ್ಥಿನಿಯರೇ, ಸುದ್ಧಿ ಮಾಧ್ಯಮದ ಗೆಳೆಯರೇ, ಬೆಳಿಗ್ಗೆ ೧೧.೦೦ ಗಂಟೆಯಿಂದ ಈಗಿನ ೧ ೧/೨ ಗಂಟೆಯವರೆಗೆ ಸು. ೨ ೧/೨ ಗಂಟೆ ಕಾಲ ಅಲೆಮಾರಿಗಳು ಮತ್ತು ಸಮಕಾಲೀನ ಸಮಾಜವನ್ನು ಕುರಿತಾದಂತಹ ವಿವಿಧ ಮುಖಗಳ ಪರಿಚಯದ ಭಾಷಣಗಳನ್ನು ನೀವು ಕೇಳಿದ್ದೀರಿ. ಅದರಲ್ಲೂ ಕರ್ನಾಟಕದ ಜಾನಪದ ಕ್ಷೇತ್ರದ ಇಬ್ಬರು ಬಹುದೊಡ್ಡ ವಿದ್ವಾಂಸರಾದಂತಹ ಪ್ರೊ. ವಿವೇಕ ರೈ ಮತ್ತು ಪ್ರೊ. ರಾಮಚಂದ್ರೇಗೌಡರು ಅತ್ಯಂತ ವಿಶಿಷ್ಟವಾದ ದೃಷ್ಟಿಕೋನಗಳಿಂದ ಅಲೆಮಾರಿಯ ಜೀವನ ಸಮುದಾಯವನ್ನು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹಾಗೂ ಅದಕ್ಕೆ ನಮ್ಮ ನಾಗರಿಕ ಪರಿವಾರ ಮತ್ತು ಸರ್ಕಾರ, ಸಮಾಜ ಪ್ರತಿಕ್ರಿಯಿಸಬೇಕಾದಂತಹ ವಿಶಿಷ್ಟ ರೀತಿಗಳನ್ನು ಕುರಿತು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ. ಕೇವಲ ಅಲೆಮಾರಿಗಳ ಕುರಿತಾದಂತಹ ದಾಖಲೆಗಳನ್ನು ಸಂಗ್ರಹಿಸಿ ಪುಸ್ತಕಗಳನ್ನು ಪ್ರಕಟಮಾಡಿ ಅವರ ಎದುರಿಗೆ ಇಟ್ಟರೆ ಅಲೆಮಾರಿ ಜನಾಂಗಗಳ ಸಮಸ್ಯೆ ಬಗೆಹರಿಯುವುದಿಲ್ಲ ಅನ್ನುವಂಥ ಮಾತು ಕೂಡ ಅವರ ಒಳ ದನಿಯಲ್ಲಿ ಇದೆ ಅಂತಾ ನಾನು ಅಂದುಕೊಂಡಿದ್ದೇನೆ. ಒಂದು ಕಡೆ ಈ ಕರ್ನಾಟಕದ ತುಂಬಾ ಹಬ್ಬಿಕೊಂಡಿರಕತ್ಕಂತಹ, ಅಂತೆಯೇ ಇಡೀ ಭಾರತದ ತುಂಬಾ ಹಬ್ಬಿಕೊಂಡಿರ ತಕ್ಕಂತಹ ಹೆಚ್ಚಾಗಿ ಅಲೆಮಾರಿಗಳ ಜೀವನ ಕ್ರಮಗಳು ಹೆಚ್ಚು ಕಡಿಮೆ ಒಂದೇ ಆಗಿರತಕ್ಕಂತದ್ದು ಕಂಡು ಬರುತ್ತದೆ. ಇಡೀ ಭಾರತದ ಬುಡಕಟ್ಟುಗಳನ್ನು ಅಥವಾ ಅಲೆಮಾರಿಗಳನ್ನು ನಾವು ಅಧ್ಯಯನ ಮಾಡಿದರೆ ಹಲವಾರು ಲಕ್ಷಣಗಳು ಪ್ರಧಾನವಾಗಿ ಎಲ್ಲಾ ಅಲೆಮಾರಿ ಜನಾಂಗಗಳಲ್ಲಿ ಕಂಡು ಬರುವಂತದ್ದು. ಹಾಗೇನೇ ಅವರ ಜೀವನಕ್ರಮವಾಗಲಿ, ಅವರು ಎದುರಿಸುತ್ತಿರತಕ್ಕಂತಹ ಸಮಸ್ಯೆಗಳಾಗಲೀ ಮುಂದುವರೆದ ಮತ್ತು ಹಿಂದುಳಿದ ಜನಾಂಗಗಳ ನಡುವೆ ಅವರು ತಮ್ಮ ಜೀವನಕ್ಕೆ ತೊಡಕು ಹಾಕಿರತಕ್ಕಂತಹ ಸಂಗತಿಗಳಾಗಲಿ ಇವೆಲ್ಲವೂ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ಇವೆ ಅಂತ ಕಾಣಿಸುತ್ತದೆ. ವಿಶಿಷ್ಟ ಅಂಶಗಳಲ್ಲಿ ಭಿನ್ನ ಭಿನ್ನವಾಗಿದ್ದರೂ ಕೂಡ ಭಾರತದ ಈ ಅಲೆಮಾರಿ ಜನಾಂಗಗಳು ಅನುಭವಿಸುತ್ತಿರುವ ನೋವುಗಳು ಮತ್ತು ಅವರ ಜೀವನದಲ್ಲಿ ಅನುಭವಿಸತಕ್ಕಂತಹ ಕಷ್ಟ ಕಾರ್ಪಣ್ಯಗಳು ಬಂದರೂ ಕೂಡ ಮುಂದಕ್ಕೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿ ಇರತಕ್ಕಂತಹ ಸಾಮಾಜಿಕ ಗೊಂದಲಗಳ ಜೊತೆಗೆ ಅವರಲ್ಲೇ ಇರತಕ್ಕಂತಹ ಕೆಲವು ಮೂಢ ನಂಬಿಕೆಗಳು ಮತ್ತು ಕೆಲವು ಅಸಹಾಯಕತೆಗಳು ಈ ನಮ್ಮ ಅಲೆಮಾರಿ ಜನಾಂಗಕ್ಕೆ ಮಾರಕವಾಗಿ ಪರಿಣಸಿದೆ ಅಂತ ನನಗೆ ಅನಿಸುತ್ತದೆ. ಈಗಾಗಲೇ ಪ್ರೊ. ವಿವೇಕ ರೈ ಅವರು ಹೇಳಿದಂತೆ ಅವರನ್ನು ಒಂದೇ ಪ್ರಾಂತಕ್ಕೆ, ಒಂದೇ ಜಿಲ್ಲೆಗೆ ಸೀಮಿತಗೊಳಿಸಿ ಹೇಳಲಿಕ್ಕೆ ಸಾಧ್ಯವಿಲ್ಲ. ಅವರ ಹೆಸರೇ ಅಲೆಮಾರಿಗಳಾಗಿರತಕ್ಕಂತಹ ಕಾರಣದಿಂದಾಗಿ ಹಳ್ಳಿಯಿಂದ ಹಳ್ಳಿಗೆ, ರಾಜ್ಯದಿಂದ ರಾಜ್ಯಕ್ಕೆ ಅವರು ಸದಾ ಪ್ರಯಾಣ ಮಾಡುತ್ತಿರುವುದರಿಂದಾಗಿ ಒಂದು ರೀತಿಯಲ್ಲಿ ಮಿಶ್ರ ಭಾಷೆಯನ್ನು, ಮತ್ತೊಂದು ರೀತಿಯಲ್ಲಿ ಮಿಶ್ರ ಸಂಸ್ಕೃತಿಯನ್ನು ಮಗದೊಂದು ರೀತಿಯಲ್ಲಿ ಮಿಶ್ರ ಆಲೋಚನೆಗಳನ್ನು ಅವರು ಪಡೆದುಕೊಂಡಿರುತ್ತಾರೆ. ಹೀಗಾಗಿ ಒಂದು ಪ್ರಾಂತದಲ್ಲಿ ನೆಲೆ ನಿಂತಾಗ ಅಲೆಮಾರಿಗಳು ಆ ಪ್ರಾಂತದ ಕೆಲ ಮುಖ್ಯವಾದ ಜೀವನ ಸಂಗತಿಗಳನ್ನು ಆರಿಸಿಕೊಂಡು ಅವುಗಳನ್ನು ಅಳವಡಿಸಿಕೊಳ್ಳಲಿಕ್ಕೆ ಪ್ರಯತ್ನ ಪಡುತ್ತಾರೆ. ಆದರೆ ಅವರ ವೃತ್ತಿ ಮತ್ತು ಪ್ರವೃತ್ತಿ ಎರಡೂ ಕೂಡ ಅಲೆಮಾರಿತನ ದಿಂದ ಕೂಡಿರುವುದರಿಂದಾಗಿ ಎಷ್ಟೋ ಸಾರಿ, ರಾಮಚಂದ್ರೇಗೌಡರು ಹೇಳುವಂತೆ ನೆಲ ಮತ್ತು ನೆಲೆಗಳನ್ನು ಕಂಡುಕೊಳ್ಳುವಂತಹ ಸಾಹಸದಲ್ಲಿ, ಪ್ರಯತ್ನದಲ್ಲಿ ಬಹಳಷ್ಟು ಜನ ವಿಫಲರಾಗಿದ್ದಾರೆ ಅಂತಾ ಅನಿಸುತ್ತದೆ. ಇದಕ್ಕೆ ಎರಡು ಕಾರಣಗಳಿವೆ. ಸ್ವತಃ ಅವರಲ್ಲೇ ಇರತಕ್ಕಂತಹ ನಿಂತಲ್ಲಿ ನಿಲ್ಲಲಾಗದಂತಹ ಒಂದು ಚಲನಶೀಲ ಪ್ರವೃತ್ತಿಯಾದರೆ, ಎರಡನೆಯದು ಅಲೆಮಾರಿಗಳ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ಸರ್ಕಾರಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹಮ್ಮಿಕೊಂಡಿರತಕ್ಕಂತಹ ಯೋಜನೆಗಳು ಅವರ ಆಲೋಚನಾ ಕ್ರಮವನ್ನು, ಪರಂಪರೆಯನ್ನು ಅಭ್ಯಾಸ ಮಾಡುವ ಮೂಲಕವಾಗಿ ಅವರನ್ನು ಆಧುನಿಕ ಜೀವನಕ್ಕೆ ಎಳೆದು ತರುವುದಕ್ಕೆ ಸಾಧ್ಯವಾಗದೆ ಇರತಕ್ಕಂತಹ ಒಂದು ರೀತಿಯ ಅನ್ವಯ ಕ್ರಮ ಕೂಡ ಕಾರಣ ಆಗಿದೆ. ಎಷ್ಟೋ ಸಾರಿ ಸಮಾಜವಾದಿಗಳ ಸೋಗನ್ನು ಹಾಕುತ್ತ ಅಥವಾ ಸಾಮಾಜೋದ್ಧಾರಕರ ಸೋಗನ್ನು ಹಾಕುತ್ತಾ ಸರ್ಕಾರ ಮತ್ತು ಅಲೆಮಾರಿಗಳ ನಡುವೆ ಮಧ್ಯವರ್ತಿಗಳಾಗಿ ವರ್ತಿಸತ್ತಕ್ಕಂತಹ ಸ್ವಯಂ ಸೇವಾ ಸಂಸ್ಥೆಗಳು, ಅದೇ ರೀತಿ ನಮ್ಮ ವಿದ್ಯಾವಂತ ಜನಾಂಗಗಳು ಕೂಡ ಅವರನ್ನು ದಾರಿ ತಪ್ಪಿಸತಕ್ಕಂತಹ ದಾರುಣವಾದ ಪರಿಸ್ಥಿತಿಯಲ್ಲಿ ನಾವು ಇದ್ದೇವೆ. ಸರ್ಕಾರ ತನ್ನ ಮಿತ ಸೌಲಭ್ಯದ ದೃಷ್ಟಿಯಿಂದಲೋ ಅಥವಾ ಬೇರೆ ಬೇರೆ ಕಾರಣಗಳಿಂದಲೋ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ನೀಡತಕ್ಕಂತಹ ಆರ್ಥಿಕ ಸಹಾಯ ನೇರವಾಗಿ ಅಲೆಮಾರಿಗಳಿಗೆ ಮುಟ್ಟದೇ ಇರತಕ್ಕಂತದ್ದು ದೊಡ್ಡ ವಿಷಾದನೀಯವಾದ ಸಂಗತಿಯಾಗಿದೆ. ಸರ್ಕಾರ ಕೊಡತಕ್ಕಂತಹ ಸಮಾಜ ಕೊಡತಕ್ಕಂತಹ ಸೌಲಭ್ಯಗಳನ್ನು ಸರಿಯಾದ ಕ್ರಮದಲ್ಲಿ ಮೂಲ ಜ್ಞಾನವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಯಾವ ರೀತಿ ಉಪಯೋಗಿಸಿ ಕೊಳ್ಳಬೇಕು, ಅದರಿಂದ ಏನೇನು ಅನುಕೂಲವಾಗುತ್ತದೆ ಅನ್ನುವ ಮೂಲ ಜ್ಞಾನವನ್ನು ಅಲೆಮಾರಿಗಳಿಗೆ ಉಂಟು ಮಾಡತಕ್ಕಂತಹ ಪ್ರಧಾನವಾದ, ಗಂಭೀರವಾದಂತಹ ಪ್ರಯತ್ನಗಳು ನಡೆಯುತ್ತಿರುವಂತಹದು ಬಹಳ ಕಡಿಮೆ. ಕರ್ನಾಟಕದ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಅಲೆಮಾರಿಗಳ ಮಕ್ಕಳಿಗೆ ವಿದ್ಯಾಭ್ಯಾಸ ಕೊಡತಕ್ಕಂತದ್ದು, ಅವರ ವೃತ್ತಿಗಳನ್ನು ಕಲಿಸ ತಕ್ಕಂತದ್ದು ಮತ್ತು ಜಗತ್ತಿನ ಜ್ಞಾನವನ್ನು ಅತ್ಯಂತ ಸರಳವಾಗಿ ಅವರದೇ ಭಾಷೆಯಲ್ಲಿ ಅಥವಾ ಬೇರೆ ಬೇರೆ ಭಾಷೆಗಳಲ್ಲಿ ಹಂಚತಕ್ಕಂತದ್ದು ಇಂಥಾ ಕೆಲಸ ಮಾಡುತ್ತಿವೆಯಾದರೂ ಕೂಡ ಅಲ್ಲಿ ಕೂಡ ಸಂಪೂರ್ಣ ಸಫಲತೆ ಸಾಧ್ಯವಾಗಿಲ್ಲ. ಬಿಳಿಗಿರಿ ರಂಗನ ಬೆಟ್ಟದಲ್ಲಿರುವ ಸೋಲಿಗರಾಗಿರಬಹುದು, ಇನ್ನು ಬೇರೆ ಬೇರೆ ಕಡೆ ಇರುವ ಅಲೆಮಾರಿಗಳಾಗಿರಬಹುದು. ಎಲ್ಲಿ ಕೂಡ ಸಂಪೂರ್ಣವಾಗಿರತಕ್ಕಂತಹ ಅಥವಾ ಸಂಪೂರ್ಣತೆಯ ಕಡೆಗೆ ಸಾಗತಕ್ಕಂತಹ ತೃಪ್ತಿಕರವಾದ ದಾರಿಯೇ ನಿರ್ಮಾಣವಾಗಿಲ್ಲ ಎಂದು ಅನಿಸುತ್ತದೆ. ಜೊತೆಗೆ ಆರಂಭದಲ್ಲಿ ಸಮಾಜ ಸೇವಾಕಾಂಕ್ಷಿಗಳಾಗಿ ಸರ್ಕಾರ ಮತ್ತು ಈ ಸಮಾಜದ ಮಧ್ಯೆ ಮಧ್ಯವರ್ತಿಗಳಾಗಿ ನಿಜವಾದಂತಹ ಸದುದ್ದೇಶದಲ್ಲಿಯೇ ಆರಂಭ ಮಾಡತಕ್ಕಂತವರು ಬರುತ್ತ ಬರುತ್ತ ಅಲ್ಲಿ ಕಂಡು ಬರುವ ಸೌಲಭ್ಯಗಳು, ಅಲ್ಲಿ ಹಣಕಾಸಿನ ಪರಿಸ್ಥಿತಿ ಇವುಗಳನ್ನೆಲ್ಲ ದುರುಪಯೋಗ ಮಾಡಿಕೊಂಡು ಸ್ವಂತ ಏಳಿಗೆಗಾಗಿ ಬಳಸಿಕೊಳ್ಳುತ್ತಿರುವಂತಹ, ಯಾರು ಬುದ್ಧಿವಂತಿಕೆಯಲ್ಲಿ ಕಡಿಮೆ ಇಲ್ಲ ಎನ್ನುವುದು ನಮಗೀಗಾಗಲೇ ಚರಿತ್ರೆ ಸಿದ್ಧ ಮಾಡಿ ತೋರಿಸಿಕೊಟ್ಟಿದೆ. ಹೀಗಾಗಿ ನಾವು ಉಪಕರಣಗಳನ್ನು ಬಳಸುವಾಗ, ಮಾಧ್ಯಮಗಳನ್ನು ಉಪಯೋಗಿಸುವಂತಹ ಸಂದರ್ಭದಲ್ಲಿ ಮತ್ತು ಉದ್ಧಾರ ಕಾರ್ಯಕ್ಕೋಸ್ಕರವಾಗಿ ಅಥವಾ ದಳ್ಳಾಳಿಕೆಯ ಕಾರ್ಯದಲ್ಲಿ ನಾವು ಜನರನ್ನು ಉಪಯೋಗಿಸಿಕೊಳ್ಳುವಾಗ ಮೊದಲು ಅವರ ಮಾನಸಿಕ ಪರಿಸ್ಥಿತಿಯನ್ನು, ಅವರ ವೈಚಾರಿಕ ಪರಿಸ್ಥಿತಿಯನ್ನು ಅವರ ಆದರ್ಶಗಳನ್ನು ಮೊದಲು ತಿದ್ದಿ ನೋಡಿ ಆನಂತರ ಅವರನ್ನು ಈ ಸಮಾಜದ ಸುಧಾರಣಾ ಕಾರ್ಯಗಳಲ್ಲಿ ಪ್ರಯೋಗ ಮಾಡಿಕೊಳ್ಳಬೇಕಾಗಿ ಬರುತ್ತದೆ, ಬಳಸಿಕೊಳ್ಳಬೇಕಾಗಿ ಬರುತ್ತದೆ. ಹೀಗಾಗಿ ಈ ಅಲೆಮಾರಿ ಜನಾಂಗಗಳು ೫೦ ವರ್ಷದಿಂದ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿದ್ದರೂ ಕೂಡ ಅರ್ಥಾಂಕಿತವಾಗಿ ಅದು ಉಳಿದು ಆ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಅವರಿಗೆ ಫಲವನ್ನು ಕೊಡುತ್ತಾ ಇಲ್ಲ ಅಂತ ಕಾಣಿಸುತ್ತದೆ. ಜೊತೆ ಜೊತೆಗೆ ಆಧುನಿಕ ಕಾಲದಲ್ಲಿ ಮತ್ತಷ್ಟು ಹೊಸ ಸಮಸ್ಯೆಗಳು ಅಲೆಮಾರಿಗಳನ್ನು ಕಾಡುತ್ತಾ ಹೋಗುತ್ತೆ. ವಿದ್ಯಾವಂತರಾಗಬೇಕು ಅಂತ ಸರ್ಕಾರ ಹೇಳುತ್ತೆ, ವಿದ್ಯಾವಂತರಾದರೆ ಏನು ಪ್ರಯೋಜನವಾಗುತ್ತೆ? ಅನ್ನುವ ಪ್ರಶ್ನೆ ಕೂಡ ಅವರನ್ನು ಕಾಡುತ್ತಿರುತ್ತದೆ. ಹಾಗೇ ನಮ್ಮನ್ನು ಮತ್ತೊಂದು ರೀತಿಯಲ್ಲಿ ಸುಲಿಗೆಯ ಮಾಧ್ಯಮವಾಗಿ ಬಳಸಿಕೊಳ್ಳತಕ್ಕಂತಹ ಜನಕ್ಕೆ ನಾವು ಆಯುಧಗಳಾಗಬೇಕೇ ಅನ್ನುವ ಪ್ರಶ್ನೆಯು ಅವರನ್ನು ಕಾಡುತ್ತಾ ಹೋಗುತ್ತದೆ. ಹೀಗಾಗಿ ಅವರ ನಿಜವಾಗಿರತಕ್ಕಂತಹ ಜ್ಞಾನವನ್ನು, ವೈಚಾರಿಕತೆಯನ್ನು ಅವರಲ್ಲಿ ಬೆಳೆಸುವ ಮೂಲಕವಾಗಿ ಒಂದೊಂದು ಭಾಗದ ಜನರಿಗೆ ಅಲೆಮಾರಿ ಜನಾಂಗಗಳಿರತಕ್ಕಂತಹ ಬೇರೆ ಬೇರೆ ಪಂಗಡಗಳಿಗೆ ಅವರ ಅನೂಚಾನವಾಗಿ ಬಂದಿರುವಂತಹ ಕಲೆಗಳು ಮುಂತಾದವುಗಳಲ್ಲಿ ಸುಧಾರಣ ರೀತಿಯ ಒಂದು ಪರಿಕ್ರಮವನ್ನು, ತಾಂತ್ರಿಕತೆಯನ್ನು ಇಟ್ಟುಕೊಂಡು ಅದು ಕೇವಲ ಸುಲಿಗೆಗೆ ಸಾಧ್ಯವಾಗದೆ, ಅದು ಕಸುಬಿನ ಅಥವಾ ಜೀವನದ ಬದುಕಿನ ಅನಿವಾರ್ಯ ಅಂಗವಾಗಿ ಮಾರ್ಪಾಡುವ ಹಾಗೆ ಮಾಡಿದರೆ ಪ್ರಾಚೀನವಾಗಿರುವಂತಹ ಅಲೆಮಾರಿಗಳ ಕಲೆಯೂ ಕೂಡ ಹೆಚ್ಚುಮಟ್ಟಿಗೆ ಉದ್ಧಾರವಾಗುತ್ತವೆ. ಅವರ ವೃತ್ತಿಯೂ ಕೂಡ ಆಧುನಿಕತೆಯ ಅಂಶವನ್ನು ಪಡೆದುಕೊಂಡು ಹೆಚ್ಚು ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಸಾಮಾಜಿಕವಾಗಿರತಕ್ಕಂತಹ ಸ್ಥಾನಮಾನಗಳು ಸಾಧ್ಯವಾದಷ್ಟು ಮಟ್ಟಿಗೆ ರಾಜಕೀಯವಾಗಿರತಕ್ಕಂತಹ ಅವಕಾಶಗಳು ದೊರಕಬೇಕಾಗಿ ಬರುತ್ತದೆ. ಬೇರೆ ಜನಾಂಗಗಳಿಗೆ ನಾವು ಏನು ಒದಗಿಸುತ್ತೀವಿ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕತೆಯ ಸೌಲಭ್ಯಗಳನ್ನು ಒದಗಿಸಿ ಆರ್ಥಿಕತೆಯ ಸೌಲಭ್ಯಗಳು ಸಂಪೂರ್ಣವಾಗಿ ಸದ್ವಿನಿಯೋಗವಾಗುವಂತೆ ನಾವು ಮಾಡಬೇಕಾಗಿ ಬರುತ್ತದೆ. ಹೀಗಾಗಿ ಅಲೆಮಾರಿಗಳಲ್ಲಿ ಆತ್ಮಸ್ಥೈರ್ಯವನ್ನು ಮತ್ತು ನಂಬಿಕೆಯನ್ನು ಮತ್ತು ಬೌದ್ಧಿಕತೆಯನ್ನು ಮೂಡಿಸುವ ಮೂಲಕವಾಗಿ ಬೇರೆ ಬೇರೆ ದೃಷ್ಟಿಕೋನಗಳಿಂದ ತಿಳುವಳಿಕೆ ಕೊಡುವಂತಹ ತರಬೇತಿ ಶಾಲೆಗಳನ್ನು ಕೂಡ ನಾವು ಮಾಡಬೇಕಾದ ಅಗತ್ಯ ಇದೆ ಅಂತ ಅನಿಸುತ್ತದೆ. ಬೇರೆ ಬೇರೆ ದೃಷ್ಟಿಕೋನಗಳಿಂದ ಸಮಾಜದ ಒಳಗಡೆ ಅವರು ಒಂದಾಗುವ ಹಾಗೆ, ಹಾಗೇನೆ ಹೆಚ್ಚು ಈ ಸಮಾಜಕ್ಕೆ ಒಳಿತನ್ನು ಮಾಡುವ ಹಾಗೆ ಈಗಾಗಲೇ ಪ್ರೊ. ರಾಮಚಂದ್ರೇಗೌಡರು ಮತ್ತು ಪ್ರೊ. ಬಿ.ಎ. ವಿವೇಕ ರೈ ಅವರು ಹೇಳಿದರು. ಒಂದು ಕಾಲದಲ್ಲಿ ಅವರು ಕಳ್ಳತನ ಮಾಡುತಕ್ಕಂತಹವರು, ದರೋಡೆ ಮಾಡತಕ್ಕಂತವರು ಸಮಾಜದ ಉಗಾತಕ ಶಕ್ತಿಗಳು ಅನ್ನುವಂತಹ ಅನಿಸಿಕೆ ಪ್ರಬಲವಾಗಿತ್ತು. ಆದರೆ ಅವರು ಯಾಕೆ ಹಾಗಾದರು ಅಂತ ಮನಃಶಾಸ್ತ್ರಕ್ಕೆ ಪ್ರವೇಶ ಮಾಡಲಿಲ್ಲ. ಸಮಾಜಶಾಸ್ತ್ರಕ್ಕೆ ಪ್ರವೇಶ ಮಾಡಲಿಲ್ಲ. ಅವರ ಸಮಸ್ಯೆಗಳೇನು ಅನ್ನುವುದನ್ನು ನಾವು ಆಧುನಿಕತೆಯ ಬೆಳಕಿನಲ್ಲಿ ತಿದ್ದಿ ನೋಡಲಿಕ್ಕೆ ಪ್ರಯತ್ನ ಮಾಡದೇ ಇರುವುದರಿಂದಾಗಿ ಅದೇ ರೀತಿ ಮುಂದುವರಿಯುತ್ತೆ ಅನಿಸುತ್ತದೆ. ಹೀಗಾಗಿ ಸರ್ಕಾರ ಎಲ್ಲಾ ಕಡೆಗಳಿಂದ ಕಾರ್ಯಕ್ರಮಗಳು ಆರಂಭವಾದರೆ ಕೆಲವಾರು ವರ್ಷಗಳೆಲ್ಲಾದರೂ ಅವರ ಬದುಕು ಸುಧಾರಿಸಲು ಸಾಧ್ಯವಾಗುತ್ತೆ. ಜೊತೆಗೆ ಅವರ ಅನನ್ಯತೆಯೂ ಕೂಡ ಕಾಯ್ದುಕೊಳ್ಳಲಿಕ್ಕೆ ಸಾಧ್ಯವಾಗುತ್ತೆ ಅನಿಸುತ್ತದೆ. ಈ ಮೂರು ದಿನಗಳಲ್ಲಿ ನಡೆಯುತ್ತಿರತಕ್ಕಂತಹ ಬಗೆ ಬಗೆಯ ವಾದ ವಿವಾದಗಳು ಪ್ರಬಂಧ ಮಂಡನೆಗಳು ಅಲೆಮಾರಿಗಳ ಜೀವನ ಕ್ರಮವನ್ನು ಅತ್ಯಂತ ಹಾರ್ದಿಕವಾಗಿ ನಾವು ನೋಡುವುದಕ್ಕೆ ಮತ್ತು ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಲಿಕ್ಕೆ ಸಾಧ್ಯವಾದರೆ ಅದರಿಂದ ಕೆಲ ವಿಶಿಷ್ಟ ದಾರಿಗಳಾದರೂ ಹೊಳೆದು ಆ ದಾರಿಗಳಿಂದ ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು ನಾವು ಮಾಡಬೇಕು ಅಂತ ಅನಿಸುತ್ತದೆ. ಹೀಗಾಗಿ ಇಲ್ಲಿ ಬಂದಿರುವ ವಿದ್ವಾಂಸರು ಈ ಕ್ಷೇತ್ರದಲ್ಲಿ ಸಾಕಷ್ಟು ಕ್ಷೇತ್ರಕಾರ್ಯವನ್ನು ಮಾಡಿ, ಚಿಂತನೆಯನ್ನು ಬರಹಗಳನ್ನು ಪ್ರಕಟಿಸುವವರಾಗಿದ್ದಾರೆ. ಈ ಉದ್ಘಾಟನಾ ಸಮಾರಂಭದ ಈ ಎರಡು ಮುಖ್ಯ ಭಾಷಣಗಳು ಆ ದಿಸೆಯ ನಮ್ಮ ಚರ್ಚಕರನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ, ಅಂತ ನನಗೆ ಅನಿಸುತ್ತದೆ. ಈ ಮೂರು ದಿನದ ಸಮ್ಮೇಳನ ಅನ್ನುವಂತದ್ದು ಅಲೆಮಾರಿಗಳ ಬದುಕಿನ ಬಗ್ಗೆ ಒಂದು ನಿರ್ದಿಷ್ಟವಾಗಿರುವ ವ್ಯಾಖ್ಯಾನವನ್ನು ಮತ್ತು ಸಾಧ್ಯತೆಗಳನ್ನು ತೋರಿಸುವುದು, ಸಾಧ್ಯವಾದರೆ ಸಮ್ಮೇಳನ ನಡೆಸಿದುದು ಸಾರ್ಥಕ ಅಂತ ನನಗೆ ಅನಿಸುತ್ತದೆ. ಈ ಸಮ್ಮೇಳನಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ್ದಕ್ಕಾಗಿ ಎಲ್ಲರನ್ನು ವಿಶ್ವವಿದ್ಯಾಲಯದ ಪರವಾಗಿ ನಾನು ಅಭಿನಂದಿಸುತ್ತೇನೆ. ವಿಶೇಷವಾಗಿ ಚನ್ನಬಸಪ್ಪ ಹಾಲಳ್ಳಿಯವರು, ನಮ್ಮ ಜಿಲ್ಲಾಧಿಕಾರಿಗಳಾದ ಶಾಮಣ್ಣ, ಜಿಲ್ಲಾ ಪರಿಷತ್ತಿನ ಜಿಲ್ಲಾ ಪಂಚಾಯ್ತಿನ ಪದಾಧಿಕಾರಿಗಳು ಹಾಗೂ ಇಲ್ಲಿರುವಂತಹ ಎಲ್ಲಾ ಶಿಕ್ಷಣ ಪ್ರಿಯ ಸಂಸ್ಕೃತಿ ಪ್ರಿಯ ಬಂಧುಗಳು ಇದಕ್ಕೆ ಸಹಾಯ ಮಾಡಿದ್ದಾರೆ. ನಮ್ಮ ಮಾಧ್ಯಮದ ಮಿತ್ರರು ಇದಕ್ಕೆ ಹೆಚ್ಚು ಪ್ರಚಾರ ಮಾಡಿದ್ದಾರೆ. ಹೆಚ್ಚು ಜನ ಸೇರಲಿಕ್ಕೆ, ಚಿಂತನೆಗಳನ್ನು ಹಂಚಿಕೊಳ್ಳಲಿಕ್ಕೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಇಂತಹ ಪ್ರೋತ್ಸಾಹ ಪ್ರಚೋದನೆ ದೊರೆಯುವುದಾದಲ್ಲಿ ಬೇಕಾದ ಹೊಸ ವಿಷಯಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯವು ಇಂತಹ ಸಮ್ಮೇಳನಗಳನ್ನು, ಚರ್ಚೆಗಳನ್ನು ನಡೆಸಲಿಕ್ಕೆ ಸಿದ್ಧವಾಗಿದೆ ಅನ್ನುವಂತ ಮಾತನ್ನು ಹೇಳುತ್ತಾ ಮತ್ತಷ್ಟು ಮತ್ತಷ್ಟು ಸಮ್ಮೇಳನ ಯಶಸ್ವಿಯಾಗಲಿ ಮೂರು ದಿನಗಳ ನಂತರ ಒಂದು ವಿಶಿಷ್ಟವಾದ ವಿಚಾರ ಘಟ್ಟಕ್ಕೆ ಒಂದು ಬಂದು ನಿಲ್ಲುವಂತಾಗಲಿ ಎಂದು ಹಾರೈಸಿ ನಾನು ನಿರ್ಗಮಿಸುತ್ತೇನೆ. ನಮಸ್ಕಾರ.

ಲಿಪ್ಯಂತರ : ಸುನಂದ ಮೂಲಿಮನಿ

* * *