ಬಸವಣ್ಣನವರ ಜಿಲ್ಲೆಯಾದಂತಹ ಬೀದರಿನಲ್ಲಿ ನಡೆಯುತ್ತಿರುವಂತಹ ಈ ದೇಸಿ ಸಮ್ಮೇಳನದ ಸರ್ವಾಧ್ಯಕ್ಷರು ಹಾಗೂ ನನ್ನ ಹಿರಿಯ ಮಿತ್ರರಾದಂತಹ ಡಾ. ಬಿ.ಎ. ವಿವೇಕ ರೈ ಅವರೇ, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ಈ ದೇಸಿ ಸಮ್ಮೇಳನದ ರೂಪಕರ್ತರಾದ ಡಾ. ಎಚ್.ಜೆ. ಲಕ್ಕಪ್ಪಗೌಡರವರೇ, ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿದಂತಹ ಮಿತ್ರ ಚೆನ್ನಣ್ಣವಾಲೀಕಾರ ಅವರೇ, ಪ್ರೊ. ಸಿದ್ರಾಮಪ್ಪ ಮಾಸ್ತಿಮಾಡೆ ಅವರೇ, ವಿದ್ವಾಂಸ ಮಿತ್ರರೇ ಹಾಗೂ ಕನ್ನಡ ಬಂಧುಗಳೇ. ಈ ವಿಚಾರ ಸಂಕಿರಣದ ಅಧ್ಯಕ್ಷತೆಯನ್ನು ವಹಿಸಬೇಕಾದಂತಹ ಅನಿರೀಕ್ಷಿತವಾದಂತಹ ಸಂದರ್ಭ ಬಂತು. ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಡಾ. ಎಂ.ಜಿ. ಬಿರಾದರ ಅವರು ವಹಿಸಬೇಕಾದ ಈ ಕೆಲಸವನ್ನು ನಾನು ವಹಿಸಿದ್ದೇನೆ.

ನಾನು ಈ ಸಮ್ಮೇಳನದಲ್ಲಿ ಭಾಗವಹಿಸಿ, ನಮ್ಮ ಅಲೆಮಾರಿಗಳ ಕುರಿತಂತೆ ಅಧ್ಯಯನ ಮಾಡಿದಂತಹ, ಕ್ಷೇತ್ರಕಾರ್ಯ ಮಾಡಿದಂತಹ ವಿಚಾರ ಸಂಕಿರಣಗಳನ್ನು ಕೇಳಲಿಕ್ಕೆ ಬಂದಂತಹ ನನಗೆ ಕುಲಪತಿಗಳಾದ ಡಾ. ಎಚ್.ಜೆ.ಲಕ್ಕಪ್ಪಗೌಡ ಅವರು ಈ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿಕ್ಕೆ ಹೇಳಿದ್ದಾರೆ. ಅದೊಂದು ದೊಡ್ಡ ಭಾಗ್ಯ ಅಂತ ನಾನು ಭಾವಿಸುತ್ತೇನೆ. ಮದುವೆಯನ್ನು ನೋಡಲಿಕ್ಕೆ ಬಂದವರಿಗೆ ಗ್ಯಾಸ್ ಲೈಟ್‌ನ್ನು ಹೊರಿಸುತ್ತಾರೆ ಅಂತ ಒಂದು ಮಾತಿದೆ. ಆ ಗ್ಯಾಸ್ ಲೈಟನ್ನು ನಾನು ಬಹಳ ಸಂತೋಷದಿಂದ ಹೊತ್ತು ಕೊಳ್ಳುತ್ತೇನೆ ಅಂತ ಅಂದುಕೊಳ್ಳುತ್ತೇನೆ. ಇವತ್ತು ನಾಳೆ, ನಾಡಿದ್ದು ನಡೆಯುವ ಈ ಸಮ್ಮೇಳನ ನಿಜಕ್ಕೂ ಬಹಳ ವಿಶಿಷ್ಟವಾದ ಸಮ್ಮೇಳನ. ಕರ್ನಾಟಕದಲ್ಲಿ ಜಾನಪದವನ್ನು ಕುರಿತು ಹಾಗೆ ಬಹಳ ವಿಶೇಷವಾದ ಅಧ್ಯಯನ ನಡೆದಿದೆ. ಬೇರೆ ಯಾವ ರಾಜ್ಯಗಳಲ್ಲೂ ಇಷ್ಟರಮಟ್ಟಿಗೆ ಅಧ್ಯಯನ ನಡೆದಿಲ್ಲ. ಆದರೆ ಅದೇಕೋ ಏನೋ ಇಷ್ಟು ವರ್ಷಗಳವರೆಗೆ ಅಲೆಮಾರಿಗಳನ್ನು ಒಂದು ದೇಸಿ ಸಮ್ಮೇಳನದಲ್ಲಿ ಸಂಪೂರ್ಣವಾಗಿ ಅಧ್ಯಯನ ಮಾಡಿದಂತಹ ಸಮ್ಮೇಳನ ನಡೆದಿರಲಿಲ್ಲ. ಅಲ್ಲೋ ಇಲ್ಲೋ ಕೆಲ ಲೇಖನಗಳು, ಕೆಲ ಸಂಶೋಧನಾ ಪ್ರಬಂಧಗಳು ಪ್ರಕಟ ಆಗಿವೆ. ಆದರೆ ಅಲೆಮಾರಿಗಳನ್ನು ಕುರಿತಾಗಿ ಇಡಿಯಾಗಿ ಒಂದು ಸಮ್ಮೇಳನ ನಡೀತಾ ಇರೋದು ಬಹಳ ಸ್ತುತ್ಯಾರ್ಹವಾದಂತಹ ಮತ್ತು ಅಭಿನಂದನಾರ್ಹವಾದಂತಹ ಕೆಲಸ ಎಂದು ನಾನು ಭಾವಿಸ್ತಾ, ಈ ಕೆಲಸವನ್ನು ಮಾಡುತ್ತಾ ಇರುವಂತಹ ಹಂಪಿಯ ಕನ್ನಡ ವಿಶ್ವವಿದ್ಯಾಲಯವನ್ನು ಮತ್ತು ಇಲ್ಲಿಯ ಜಿಲ್ಲಾಡಳಿತವನ್ನು ಮತ್ತು ಕರ್ನಾಟಕ ಕಾಲೇಜಿನ ಎಲ್ಲಾ ಸಿಬ್ಬಂದಿವರ್ಗವನ್ನು ಅಲೆಮಾರಿಗಳ ಪರವಾಗಿ ಮತ್ತು ಜಾನಪದ ವಿದ್ವಾಂಸರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, ಮಿತ್ರ ಚೆನ್ನಣ್ಣವಾಲೀಕಾರ ಅವರು ನಮ್ಮ ಯುರೋಪ ರಾಷ್ಟ್ರಗಳಲ್ಲಿರುವಂತಹ ಅನೇಕ ಅಲೆಮಾರಿ ಜನಾಂಗಗಳನ್ನು ಕುರಿತು ಮಾತನಾಡಿದರು. ಕರ್ನಾಟಕದಲ್ಲಿ ಬೇಕಾದಷ್ಟು ಅಲೆಮಾರಿ ಜನಾಂಗಗಳು ನಮ್ಮ ಸುತ್ತಾ ಇವೆ. ನಾವು ಅವುಗಳನ್ನು ಗಮನಿಸಿದರೆ ನಮಗೆ ಆಶ್ಚರ್ಯ ಆಗುವಷ್ಟು ಅಂಶಗಳು ನಮ್ಮ ಕಣ್ಣ ಮುಂದೆ ಕಾಣ್ತಾ ಹೋಗ್ತಾವೆ. ಅವರ ನಂಬಿಕೆಗಳು, ಅವರ ಆಚಾರಗಳು, ಅವರ ದೈವ ನಂಬಿಕೆಗಳು, ಅವರ ಕಲೆಗಳು, ಅವರ ಭಾಷೆ ಇವೆಲ್ಲವೂ ನಮ್ಮಲ್ಲಿ ಬೆರಗನ್ನುಟ್ಟಿಸುವ ಅಂಶಗಳು ಅಂತ ನನಗೆ ಈಗಲೂ ಅನಿಸುತ್ತದೆ. ನಮ್ಮಲ್ಲಿ ಬರುವಂತಹ ಈ ಹೆಳವರಾಗಲಿ, ಹಕ್ಕಿಪಿಕ್ಕಿಗಳಾಗಲಿ, ಕಣ್ಣಕಟ್ಟೋರಾಗಲಿ, ಮೋಡಿ ಮಾಡೋರಾಗಲಿ, ಮೊಂಡರಾಗಲಿ, ಇವರೆಲ್ಲ ನಮ್ಮ ಕಣ್ಣಿಗೆ ಇಂದು ಕಾಣಿಸುತ್ತಿಲ್ಲ. ಆದರೆ ಅವರು ಇದ್ದಾರೆ. ಹಿಂದೆ ನಮ್ಮ ಊರುಗಳಿಗೆ, ಹಳ್ಳಿಗಳಿಗೆ, ಗ್ರಾಮೀಣ ಪ್ರದೇಶಗಳಿಗೆಲ್ಲಾ ಅವರು ಆಗಾಗ ಬಂದು ತಮ್ಮ ಕಲೆಯನ್ನು ಪ್ರದರ್ಶಿಸಿ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಾ ಇದ್ರು ಅನ್ನೋದು ನಮಗೆ ಇವತ್ತು ವ್ಯಕ್ತವಾಗುತ್ತದೆ. ನಮ್ಮ ಇವತ್ತಿನ ಚರಿತ್ರೆಯನ್ನು ಗಮನಿಸಿದರೆ ಎಷ್ಟೋ ಜನ ಈ ಅಲೆಮಾರಿ ಜನಾಂಗದವರು ಒಂದು ರೀತಿಯ ಗೂಢಾಚಾರಿಯ ಕೆಲಸವನ್ನು ಮಾಡುತ್ತಾ ಇದ್ರು ಎನ್ನುವ ವಿಷಯ ಗೊತ್ತಾಗುತ್ತಾ ಹೋಗುತ್ತದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗುವಂತದ್ದು. ತಮ್ಮ ಕಲೆಗಳನ್ನು ಪ್ರದರ್ಶನ ಮಾಡುವಂತದ್ದು ಆ ರಾಜ್ಯದಲ್ಲಿ ತಮಗೆ ತಮ್ಮ ರಾಜ್ಯಕ್ಕೆ ಬೇಕಾಗುವಂತಹ ವಿಷಯವನ್ನು ಸಂಗ್ರಹ ಮಾಡಿಕೊಂಡು ಅವರು ವಾಪಾಸು ಬರ್ತಾ ಇದ್ರು ಅನ್ನುವಂತಹದ್ದು ನಮಗೆ ಈಗಲೂ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಈ ದುರುಗ ಮುರುಗಿಯವರನ್ನು ಕುರಿತು ಕೆಲವು ಜನ ಹೇಳ್ತಾ ಹೋಗ್ತಾರೆ. ಹಾಗೆ ಯಾವುದಾದರೂ ಪ್ರದೇಶದಲ್ಲಿ ಓಡಾಡ್ತಕ್ಕಂತಹ ಈ ಜನ ಬಹಳ ಸಂಸ್ಕೃತಿ ಸಂಪನ್ನರಾದ ಜನ ಅನಿಸುತ್ತದೆ. ನಾವು ಒಂದು ಕಡೆಗೆ ನೆಲೆ ನಿಂತು ಒಂದಿಷ್ಟು ಆಚರಣೆಗಳನ್ನು, ನಂಬಿಕೆಗಳನ್ನು, ರೂಢಿಸಿಕೊಂಡಿದ್ದಾರೆ. ಬಹಳಷ್ಟು ಪ್ರದೇಶಗಳಲ್ಲಿ ಓಡಾಡುವಂತಹ ಜನ ಬಹಳ ವೈವಿಧ್ಯಮಯವಾದ ಸಂಸ್ಕೃತಿಯನ್ನು ರೂಢಿಸಿಕೊಂಡಿರುತ್ತಾರೆ ಅನ್ನುವಂತಹದ್ದೇ ನನ್ನ ತಿಳುವಳಿಕೆ. ಹೀಗೆ ರೂಢಿಸಿಕೊಂಡಂಥ ಅಲೆಮಾರಿ ಜನಾಂಗವನ್ನು ಅಧ್ಯಯನ ಮಾಡುವಂತದ್ದು ನಮ್ಮ ವಿದ್ವಾಂಸರಿಗೆ ಒಂದು ಸವಾಲೇ ಸರಿ. ಕ್ಷೇತ್ರಕಾರ್ಯ ಮಾಡಲಿಕ್ಕೆ ಹೋದರೆ ನಮಗೆ ಇವರ್ಯಾರು ಸಿಗೋದೇ ಇಲ್ಲ. ಯಾಕೆ ಅಂದರೆ ಇವರು ಒಂದು ಊರಿಂದ ಮತ್ತೊಂದು ಊರಿಗೆ ಹೋಗ್ತಾನೆ ಇರ್ತಾರೆ. ಅವರ ಭಾಷೆಯನ್ನು ನಾವು ಅರ್ಥ ಮಾಡಿಕೊಳ್ಳುವಂತಹದ್ದು, ಅವರಿಗೆ ಬರುವ ಕನ್ನಡದಲ್ಲಿ ಅವರಿಗಿರುವಂತಹ ವಿಧಿಗಳನ್ನು ಆಚರಣೆಗಳನ್ನು, ಕಲೆಗಳನ್ನು, ಭಾಷೆ, ಅವರ ಮೌಖಿಕ ಪರಂಪರೆಯನ್ನು ಸಂಗ್ರಹಿಸುವುದು ಬಹಳ ಕಷ್ಟಕರವಾದ ಕೆಲಸ. ನಮ್ಮ ಈ ಮೂರು ದಿವಸದ ಈ ಸಮ್ಮೇಳನದಲ್ಲಿ ಸುಮಾರು ಇಪ್ಪತ್ತೈದರಿಂದ ಮೂವತ್ತು ಜನ ವಿದ್ವಾಂಸರು ಈ ಕೆಲಸವನ್ನು ಮಾಡಿದ್ದಾರೆ. ಈ ಸಮ್ಮೇಳನಕ್ಕೆ ಇಟ್ಟಿರುವಂತಹ ಶೀರ್ಷಿಕೆಯು ಅಷ್ಟೇ ಚೆನ್ನಾಗಿದೆ. ‘ಸಮಕಾಲೀನ ಸಮಾಜ ಹಾಗೂ ಅಲೆಮಾರಿಗಳು, ಇವತ್ತು ಅಲೆಮಾರಿಗಳಿಗೆ ನಮ್ಮ ಸರ್ಕಾರದ ನಿಯಮಗಳ ಪ್ರಕಾರ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಕಟ್ಟಿಸಿ ಕೊಡುವಂತದ್ದು, ಅವರ ಒಂದು ಕೆಲಸಗಳಲ್ಲಿ ನೆಲೆ ನಿಲ್ಲುವಂತೆ ನೋಡಿಕೊಳ್ಳುವಂತದ್ದು, ಅವರ ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಅವರನ್ನು ಸುಸಂಸ್ಕೃತರನ್ನಾಗಿ ಮಾಡುವಂತದ್ದು, ಇವೆಲ್ಲ ನಮ್ಮ ಮುಖ್ಯ ಉದ್ದೇಶಗಳಾಗಿವೆ. ಈ ಉದ್ದೇಶಗಳನ್ನು ಸರಿ ಮಾಡಿಕೊಳ್ಳಬೇಕು ಅನ್ನೋದಾದರೆ, ಅವರನ್ನ ಅಧ್ಯಯನ ಮಾಡ್ತಾ ಅವರನ್ನು ಒಂದು ಕಡೆ ನೆಲೆನಿಲ್ಲಿಸುವಂತಹ ಕೆಲಸಗಳನ್ನು ವಿಶ್ವವಿದ್ಯಾಲಯಗಳು, ಸಂಘ ಸಂಸ್ಥೆ ಮಾಡಬೇಕಾಗಿದೆ. ಇದು ಹಿಂದಿಗಿಂತಲೂ ಬಹಳ ಇವತ್ತು ಅಗತ್ಯವಾಗಿದೆ ಅಂತ ಅಂದುಕೊಂಡಿದ್ದೇನೆ.

ನಮ್ಮ ಸಮ್ಮೇಳನದ ಈ ಕೊನೆಯ ದಿವಸ ಲಕ್ಷ್ಮಣ ಗಾಯಕ್ವಾಡ ಅವರು ಆಗಮಿಸುತ್ತಿದ್ದಾರೆ. ಲಕ್ಷ್ಮಣ ಗಾಯಕ್ವಾಡರ ‘ಉಚಲ್ಯ’ ಕೃತಿ ನಮ್ಮ ಕನ್ನಡ ನಾಡಿನಲ್ಲಿ ಅನುವಾದ ಆದ ತಕ್ಷಣವೇ ಬಹಳ ಜನ ಓದುಗರಿಗೆ ರೋಮಾಂಚನವಾಯಿತು. ಒಂದು ಅಲೆಮಾರಿ ಜನಾಂಗದ ಕಳ್ಳತನ ಮಾಡುವಂತದ್ದೇ ಒಂದು ಮುಖ್ಯವಾದ ಕಸುಬು ಅಂತ ಹೇಳಿ ಬೇರೆ ಸಮಾಜ ಪರಿಗಣಿಸಿರುವಂತ ವ್ಯಕ್ತಿಗಳು ಅವರ ಬದುಕನ್ನು ಎಷ್ಟು ಹೀನಾಯ ಮಾನವಾಗಿ ಇಟ್ಟುಕೊಂಡಿದ್ದಾರೆ ಹೀಗೆ ಅದನ್ನ ಗೆದ್ದು ನಿಲ್ಲೋದಕ್ಕೆ ಪ್ರಯತ್ನ ಪಡುತ್ತಾರೆ ಅನ್ನುವಂತದ್ದನ್ನು ಆ ‘ಉಚಲ್ಯ’ ಕೃತಿಯಲ್ಲಿ ಗಾಯಕ್ವಾಡ ಅವರು ಬಹಳ ಚೆನ್ನಾಗಿ ವಿವರಿಸ್ತಾ ಹೋಗ್ತಾರೆ. ಅಂತವರು ಈ ಸಂದರ್ಭದಲ್ಲಿ ಬರುವಂತದ್ದು ತಮ್ಮ ಮಾತುಗಳನ್ನು ಆಡುವಂತದ್ದು ನಮ್ಮ ನಿಜವಾದ ಜ್ಞಾನ ಹೆಚ್ಚಿಸುವುದಕ್ಕೆ ಅನುಕೂಲವಾಗುತ್ತದೆ ಅಂತ ನಾನು ಭಾವಿಸುತ್ತೇನೆ.

ಚೆನ್ನಣ್ಣನವರು ಒಂದು ಮಾತನ್ನು ಹೇಳಿದರು. ಈ ಜಿಲ್ಲೆ ಪ್ರಾದೇಶಿಕ ಬ್ರಾಜಿಷ್ಣು ಇದ್ದ ಜಿಲ್ಲೆ ಅಂತ ಹೇಳಿ. ಅಂದರೆ ‘ವಡ್ಡಾರಾಧನೆ’ ಬರೆದಂತ ಲೇಖಕ ಇದ್ದಂತಹ ಜಿಲ್ಲೆ ಅಂತ ಹೇಳಿದರು. ಆಗ ನನಗೆ ನೆನಪು ಬಂದದ್ದು ಏನು ಅಂದ್ರೆ ಬ್ರಾಜಿಷ್ಣು ಅಂದ್ರೆ ‘ವಡ್ಡಾರಾಧನೆ’ಯ ಶಿವಕೋಟ್ಯಾಚಾರ್ಯ ಅಥವಾ ಬ್ರಾಜಿಷ್ಣು ಅವನು ಒಂದು ಮಾತನ್ನ ಹೇಳ್ತಾನೆ. ಜೈನ ಧರ್ಮದ ಸಂತರುಗಳೆಲ್ಲ ಒಂದು ಕಡೆಗೆ ನೆಲೆ ನಿಲ್ಲದೆ ಒಂದು ರಾತ್ರಿ ಊರಿನಲ್ಲಿ ನಗರದಲ್ಲಿ ಐದು ರಾತ್ರಿ, ಕಾಡುಗಳಲ್ಲಿ ಹತ್ತು ರಾತ್ರಿ ವಾಸ ಮಾಡಬೇಕು ಅಂತ ಹೇಳ್ತಾವೆ. ಗ್ರಾಮ್ಯ ಏಕರಾತ್ರೆ, ನಗರೇ ಪಂಚರಾತಂ, ಅಟವ್ಯಾಂ ದಶರಾತಂ ಅಂತ ಹೇಳಿ. ಈ ಸಂತರುಗಳು ಹೀಗೆ ದೇಶ ದೇಶವನ್ನು ಸುತ್ತಿಕೊಳ್ತಾ ಹೋಗಿ ತಮ್ಮ ಜ್ಞಾನವನ್ನು ಬಹಳ ಸಾಮಾನ್ಯ ಜನಕ್ಕೆ ನೀಡುವ ಹಾಗೇನೆ ನಮ್ಮ ಅಲೆಮಾರಿಗಳು ಸಹ ಅಂತ ನನ್ನ ಭಾವನೆ. ಅಲೆಮಾರಿಗಳು ಸಹ ಎಲ್ಲಿಯೂ ನಿಲ್ಲದೆ ಹಳ್ಳಿಗಳಲ್ಲಿ ಒಂದು ದಿವಸ, ಪಟ್ಟಣದಲ್ಲಿ ಐದು ದಿವಸ ಅಥವಾ ಅಡವಿಗಳಲ್ಲಿ ಹತ್ತು ದಿವಸ ಇದ್ದು ಹೋಗುವಂತಹ ಈ ಅಲೆಮಾರಿಗಳು ಒಂದು ರೀತಿಯಲ್ಲಿ ಸಂತರೇ ಅವರು. ಅವರಿಗೆ ನಮ್ಮ ನೆಲೆನಿಂತ ಸಮಾಜದ ಭ್ರಷ್ಟತೆಯಾಗಲಿ, ಮೋಸವಾಗಲಿ, ಸ್ವಾರ್ಥವಾಗಲಿ ಅವರಿಗೆ ಖಂಡಿತ ಗೊತ್ತಿಲ್ಲ. ನಾವು ಕೊರಚರನ್ನೊ, ಕೊರಮರನ್ನೊ ಇವರು ಕಳ್ಳತನ ಮಾಡುವ ಜಾತಿಯವರು, ಜನಾಂಗದವರು ಅಂತ ಹೇಳಿದರೆ ಅವರು ಆರ್ಥಿಕವಾಗಿ ಸದೃಢರಾಗಿ ಇಲ್ಲದಿರೋದಕ್ಕೋಸ್ಕರ ಅವರು ಕಳ್ಳತನ ಮಾಡ್ತಾರೆ ಅಷ್ಟೇ ಹೊರತು ಅವರು ಸಮಾಜದಲ್ಲಿ ಭದ್ರತೆಯನ್ನು ಕೊಟ್ಟರೆ ಆರ್ಥಿಕವಾದ ಸದೃಢತೆಯನ್ನು ಕೊಟ್ಟರೆ, ಶಿಕ್ಷಣವನ್ನು ಕೊಟ್ಟರೆ, ಅವರಿಗೆ ಉದ್ಯೋಗವನ್ನು ಕೊಟ್ಟರೆ, ಅವರೆಲ್ಲ ಹಾಗೆ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಇಂಥ ಒಂದು ವೈವಿಧ್ಯಮಯವಾದ ಸಂಸ್ಕೃತಿಯನ್ನು ಅಭ್ಯಾಸ ಮಾಡೋದಕ್ಕೆ ಕ್ಷೇತ್ರ ಕಾರ್ಯಕರ್ತರಿಗೆ ಸವಾಲಾಗುವಂತಹ ಈ ಅಲೆಮಾರಿ ಜನಾಂಗವನ್ನು ಕುರಿತು ಅಧ್ಯಯನ ನಡೆಸುವಂತ ಈ ವಿಚಾರ ಸಂಕಿರಣಗಳು ಮತ್ತು ಈ ದೇಸಿ ಸಮ್ಮೇಳನ ಬಹಳ ಯಶಸ್ವಿಯಾಗಿ ಜರುಗಲಿ. ಬೀದರಿನ ಜನ ಬಹಳ ದೊಡ್ಡ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಈ ವಿಚಾರಸಂಕಿರಣಗಳು ಯಶಸ್ವಿಯಾಗಿ ನಡೆಯಲಿ ಅಂತ ಹೇಳಿ ಹೃತ್ಪೂರ್ವಕವಾದಂತಹ ಶುಭಾಶಯಗಳನ್ನು ಅರ್ಪಿಸಿ ನನ್ನ ಮಾತನ್ನು ಮುಗಿಸುತ್ತೇನೆ. ನಮಸ್ಕಾರ.

* * *