ಕನ್ನಡ ವಿಶ್ವವಿದ್ಯಾಲಯವು ೨೬, ೨೭ ಮತ್ತು ೨೮ ಸೆಪ್ಟೆಂಬರ್ ೨೦೦೩ರಂದು ಬೀದರ್‌ನಲ್ಲಿ ನಡೆಸುತ್ತಿರುವ ದೇಸಿ ಸಮ್ಮೇಳನ ಚಾರಿತ್ರಿಕ ಮಹತ್ವವನ್ನು ಹೊಂದಿದೆ. ಈ ಸಮ್ಮೇಳನದಲ್ಲಿ ಅಲೆಮಾರಿಗಳ ಜೀವನ ಕ್ರಮವನ್ನು ಆಧುನಿಕ ಅಭಿವೃದ್ಧಿ ಕ್ರಮದ ಜೊತೆಗೆ ಜೋಡಿಸಿ ಚರ್ಚಿಸಲಾಗುತ್ತಿದೆ. ಅಲೆಮಾರಿಗಳ ಸ್ಥಿತಿ ದೇಶಿ ಎಂದೂ ಆಧುನಿಕ ಬದುಕು ವಿದೇಶಿ ಎಂದೂ ಭಾವಿಸಿಕೊಂಡ ಚಿಂತನಕ್ರಮದ ಪ್ರಸ್ತುತತೆಯೂ ಇಲ್ಲಿ ಚರ್ಚೆಗೆ ಒಳಗಾಗಬೇಕಿದೆ. ನಾವು ಕಟ್ಟಿಕೊಂಡ ವೈರುಧ್ಯ ನೆಲೆಗಳ ಚಿಂತನೆ ನಮ್ಮನ್ನು ಯಾವ ಧ್ರುವಕ್ಕೆ ಎಳೆದೊಯ್ಯಬಹುದು ಎಂಬ ಆತಂಕ ನಮ್ಮೊಳಗೆ ಇರುವುದು ಅಗತ್ಯ.

ನಮ್ಮ ಈಗಿನ ಲೆಕ್ಕದ ಪ್ರಕಾರ ಕರ್ನಾಟಕದ ಅಲೆಮಾರಿ ಜನಾಂಗಗಳೆಂದರೆ, ಸುಡುಗಾಡು ಸಿದ್ಧರು, ಕವಲೆತ್ತಿನವರು, ವೇಷಗಾರರು, ಲಂಬಾಣಿಗಳು, ಬುಡಬುಡಿಕೆಯವರು, ಹಕ್ಕಿಪಿಕ್ಕಿಯವರು, ದುರುಗ ಮುರುಗಿಯರು, ಹಾವಾಡಿಗರು, ದೊಂಬಿದಾಸರು, ಕಿಳ್ಳೇಕ್ಯಾತರು, ಬುಡಗ ಜಂಗಾಲರು, ಕಿನ್ನರಿ ಜೋಗಿಗಗಳು, ಕೊರವರು, ಕುರುಮಾಮ, ದೊಂಬರು, ಡಕ್ಕಲಿಗರು, ರಾಜಗೊಂಡರು ಇತ್ಯಾದಿ ಇತ್ಯಾದಿ. ಬುಡಕಟ್ಟು ಜನರು, ಅಲೆಮಾರಿಗಳು ಮತ್ತು ಅಂಚಿನಲ್ಲಿರುವ ಜನರನ್ನು ಅಕಾಲಿಕರೆಂದೂ, ನಾವುಅ ಅಂದರೆ ಜಗತ್ತಿನ ಸೌಲಭ್ಯಗಳಿಗೆ ತೆರೆದುಕೊಂಡವರು ಸಕಾಲಿಕರೆಂದು ಪ್ರಜ್ಞಾಪೂರ್ವಕವಾಗಿ ಘೋಷಿಸಿಕೊಂಡಿದ್ದೇವೆ. ಈ ಸಂದರ್ಭ ನಮ್ಮನ್ನು ಎಷ್ಟು ಕುರುಡರನ್ನಾಗಿ ಮಾಡಿದೆ ಎಂದರೆ ನಮ್ಮ ಥರ ಅಲ್ಲದ್ದು ವಾಸ್ತವ ಬದುಕು ಅಲ್ಲ. ಅದು ಇದ್ದರೆ ಸಾಮಗ್ರಿಯಾಗಿರಬೇಕು ಇಲ್ಲವೆ ನಮ್ಮ ಉದ್ದಿಮೆ ಬದುಕಿಗೆ ಸಂಪನ್ಮೂಲವಾಗಿರಬೇಕು ಎಂದು ಗಾಢವಾದ ಮೂಢ ತಿಳಿವಳಿಕೆಗೆ ತಲುಪಿದ್ದೇವೆ. ಈ ಕೇಂದ್ರ ಚಿಂತನೆ ನಮ್ಮ ಹಳೆಯ ಪ್ರಭು, ಪುರೋಹಿತ ಮತ್ತು ಮಾಲೀಕ ಜೀವನ ಚಿಂತನೆಗೆ ಭಿನ್ನವಾದುದೇನೂ ಅಲ್ಲ. ಕೇಂದ್ರ ಬದಲಾಗಿದೆ ಅಷ್ಟೆ. ಸ್ಥಳೀಯ ಯಜಮಾನ ಕಳೆದುಹೋಗಿ ಅವನ ಸ್ಥಾನದಲ್ಲಿ ಆಧುನಿಕ ಜಾಗತಿಕ ಪ್ರಭು ಕೇಂದ್ರವನ್ನು ವಶಪಡಿಸಿಕೊಂಡಿದ್ದಾನೆ. ಈ ಪ್ರಭುವಿಗೆ ಹೊರಗೆ ನಿಲ್ಲುವವರೆಲ್ಲ ದೇಸೀ ಆಗ ಹೊರಟಿದ್ದಾರೆ. ಈ ದೇಸೀಗಳು ಮತ್ತುಅಲೆಮಾರಿ ಎಂಬ ದೇಸೀ ಬೇರೆ ಬೇರೆ ಎಂಬುದನ್ನು ನಾವು ಸ್ಪಷ್ಟವಾಗಿ ಗ್ರಹಿಸಿಕೊಳ್ಳಬೇಕು. ಆದ್ದರಿಂದ ಮೊದಲು

೧. ನಮ್ಮೊಳಗಿನ ದೇಸಿ ಗ್ರಹಿಕೆ ಮತ್ತು ಪರಿಕಲ್ಪನೆ ಎಂಥದು?

೨. ಆಧುನಿಕ ಅಭಿವೃದ್ಧಿ ಪರಿಕಲ್ಪನೆಯಲ್ಲಿ ಅಲೆಮಾರಿಗಳನ್ನು ಎಲ್ಲಿ ನಿಲ್ಲಿಸುತ್ತೇವೆ. ಎಂಬುದನ್ನು ಸ್ಪಷ್ಟ ಮಾಡಿಕೊಳ್ಳಬೇಕು.

ಈಗ

೧. ಪೂಜೆಯನ್ನು ಪುನರುಜ್ಜೀವಿಸುತ್ತಿರುವ ಪುರೋಹಿತ

೨. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತ

೩. ಖಾಸಗಿ ಒಡೆತನದಲ್ಲೂ ಮೀಸಲಾತಿ ಕೇಳುತ್ತಿರುವ ದಲಿತ

೪. ವಿ.ಆರ್.ಎಸ್. ಭಯದಲ್ಲಿ ಮುಂದಿನ ಭವಿಷ್ಯ ಹುಡುಕುತ್ತಿರುವ ನೌಕರ

೫. ದೇಸೀ ಕೈಗಾರಿಕೆಗಳ ಬಂಡವಾಳವನ್ನು ಹಿಂತೆಗೆದುಕೊಂಡು ಬಹುಜನರನ್ನು ಉದ್ಯಮಕ್ಕೆ ತೊಡಗಿಸುತ್ತೇನೆಂದು ತಾನು ಭದ್ರವಾಗುತ್ತಿರುವ ರಾಜಕಾರಣಿ.

ಇವರ ಈ ದೇಶೀಯತೆಯ ಮಧ್ಯೆ ಅಲೆಮಾರಿಗಳು ನಿಲ್ಲುವುದೆಲ್ಲಿ?

ಇದಕ್ಕೆಲ್ಲ, ನಮ್ಮದೊಂದು ಜಾನಪದ ದೃಷ್ಟಿ ಇದೆ ಎಂದು ಹೇಳುತ್ತೇವೆ. ಆದರೆ ನಮ್ಮ ಜಾನಪದ ದೃಷ್ಟಿಯೇ ಮಂಜಾಗಿದೆ. ನಮಗೆ ಎರಡು ಕಣ್ಣುಗಳಿವೆ. ಒಂದು, ಜಾನಪದ (ಪುರಾತನ-ಪರಂಪರೆಯ) ಸಾಮಗ್ರಿ. ಎರಡು, ಜಾನಪದ ನಮ್ಮ ‘ಜೀವನಶ್ರೀ’ ಎಂದು ನೋಡುವುದು.

ಈ ಎರಡೂ ಕೂಡ ದತ್ತ ಚಿಂತನೆಗಳೇ ಹೊರತು ಪ್ರಾಯೋಗಿಕ ವಾಸ್ತವತೆಗಳಲ್ಲ. ನಮ್ಮ ಜಾನಪದ ಚಿಂತನೆ ಸಂಗ್ರಹ (collect) ಮಾಡುವ, ಭೋಗಿಸುವ ಬಗ್ಗೆ ಹೇಳುತ್ತದೆಯೆ ಹೊರತು ಕೊಡುವ ಬಗ್ಗೆ ಏನಾದರೂ ಹೇಳುತ್ತದೆಯೆ? ಈ ದಾರಿಯಲ್ಲಿ ನಡೆದರೆ ನಾವು ಅಲೆಮಾರಿಗಳನ್ನು ಸಂಗ್ರಹಿಸಬಹುದು, ನಮ್ಮೊಟ್ಟಿಗೆ ಇಟ್ಟುಕೊಳ್ಳಲು ಆಗದು.

ನಮ್ಮ ಈ ಹೊತ್ತಿನ ಜಾನಪದ ದೃಷ್ಟಿ ಸ್ಥಳೀಯ ವಸಾಹತು ಮನೋಧರ್ಮ. ನಾವು ಅಮೇರಿಕಕ್ಕೆ ಜಾನಪದ ಸಾಮಗ್ರಿಗಳು, ನಮಗೆ ಅಲೆಮಾರಿಗಳು ಜಾನಪದ ಸಾಮಗ್ರಿಗಳು. ಅಂದರೆ ನಮ್ಮ ಹಿಂದಿನ ಪ್ರಭುತ್ವ ಬಳಸಿ ಬಿಸಾಡಿದ ಸಾಮಗ್ರಿಗಳೇ ಈ ನಮ್ಮ ಅಲೆಮಾರಿಗಳು. ನಮ್ಮ ದೇಸೀ ಕೇಂದ್ರದಲ್ಲಿ ಪ್ರಭು, ಪುರೋಹಿತ ಮತ್ತು ಮಾಲೀಕ ಎಂಬ ಮೂರು ನಿದೇರ್ಶಕ ಕೇಂದ್ರಗಳಿದ್ದವು. ಅವು ತಮ್ಮ ಅಸ್ತಿತ್ವ ಮತ್ತು ಮುಂದುವರಿಕೆಗಾಗಿ ಕೆಲವು ಕಡ್ಡಾಯ ಸೇವೆಗಳನ್ನು ಹುಟ್ಟು ಹಾಕಿಕೊಂಡವು, ಬಳಸಿಕೊಂಡವು, ಬೇಡವಾದಾಗ ಬಿಸಾಕಿದವು. ಈ ಹಿನ್ನೆಲೆಯಲ್ಲಿ ದೇಸೀಯ ಪ್ರಭುತ್ವ ಬಳಸಿಕೊಂಡು ಬಿಸಾಡಿದ ಜನವರ್ಗದವರೆ ಈ ಹೊತ್ತಿನಲೆಮಾರಿಗಳು ಎಂದು ನಾನು ಹೇಳುತ್ತೇನೆ.

ಈ ಅಲೆಮಾರಿಗಳು ಹೇಗೆ ಬಳಕೆಯಾದರು ಎಂಬುದನ್ನು ಗಮನಿಸಿ. ಇವರು ಸೇವಕರಾಗಿದ್ದರು. ಇವರ ಸೇವೆಗಳೆಂದರೆ

೧. ಬೇಹುಗಾರಿಕೆ ಸೇವೆ

೨. ಧಾರ್ಮಿಕ ಸೇವೆ

೩. ಆರ್ಥಿಕ ಸೇವೆ

೪. ಕಲಾ ಸೇವೆ.

೫. ವೃತ್ತಿ ಸೇವೆ

೬. ಜನ ಧರ್ಮ ಸೇವೆ

೭. ಭವಿಷ್ಯ ಸೇವೆ

೮. ಸೈನಿಕ ಸೇವೆ

ಬೇಹುಗಾರಿಕೆ ಸೇವೆಯ ಫಲಾನುಭವಿ ಪ್ರಭು. ಧಾರ್ಮಿಕ ಸೇವೆಯ ಫಲಾನುಭವಿ ಪುರೋಹಿತ. ಎಲ್ಲ ಯಜಮಾನರುಗಳೂ ಕಲಾಸೇವೆಯ ಫಲಾನುಭವಿಗಳು. ದೊಂಬಿದಾಸರು, ಹಗಲುವೇಷದವರು, ದೊಂಬರು ಮತ್ತು ಲಂಬಾಣಿ ಜನರ ಒಳಹೊಕ್ಕು ನೋಡಿ. ಇವರು ರಾಜರಿಗಾಗಿ ಒಂದಿಲ್ಲೊಂದು ಬಗೆಯ ಬೇಹುಗಾರಿಕೆ ಮಾಡುತ್ತಿದ್ದರು. ಈಗಲೂ ದೊಂಬಿದಾಸರಲ್ಲಿ ಬೇಹುಗಾರಿಕೆಯ ವಿಶೇಷ ಭಾಷೆ ಇದೆ. ಇವರೆಲ್ಲ ಆ ಕಾಲದಲ್ಲಿ ಈಗಿನ ನಮ್ಮ ಭಾರತದ ಬೇಹುಗಾರರು ಪಡೆಯುವ ಗೌರವ ಮತ್ತು ಸ್ಥಾನಮಾನವನ್ನು ಹೊಂದಿದ್ದರು. ಇವರಿಗೆ ಸಂಬಂಧಿಸಿದ ಪ್ರಭುಗಳು ಮತ್ತು ರಾಜ್ಯಗಳು ಪತನಗೊಂಡಂತೆ ಇವರು ಇದ್ದಲ್ಲಿಯೆ ಅನಾಥರಾದರು. ಬಹುಶಃ ಈಗ ಅಮೇರಿಕ ಪತನಗೊಂಡರೆ ಜಗತ್ತಿನಾದ್ಯಂತ ಅತಂತ್ರರಾಗಿ ಅಲೆಮಾರಿಗಳಾಗುತ್ತಾರೆ. ಇದನ್ನು ನಾವು ಅವಿಕಾಸ (devolution) ಎನ್ನುತ್ತೇವೆ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸಿದ್ದಿಯರನ್ನು ಬುಡಕಟ್ಟು ಜನ ಎನ್ನುತ್ತಾರೆ. ಹೈದರಾಬಾದ್ ನಿಜಾಮರ ಆಡಳಿತವಿದ್ದಾಗ ಈ ಜನ ಒಂದು ವಿಶೇಷ ಸೈನಿಕ ಬೆಟಾಲಿಯನ್ ಆಗಿತ್ತು.

ಜನಸಾಮಾನ್ಯರ ಮಧ್ಯೆ ನಡವಳಿಕೆಯ ರೂಪದಲ್ಲಿ ಇರುವ ಧರ್ಮ ಜನಪದ ಧರ್ಮ. ಮತಧರ್ಮ ಎಂಬುವು ಬಂಡವಾಳ ಸ್ವರೂಪದವು. ಈ ಧರ್ಮದ ಹೆಗ್ಗುರುಗಳು ತಮ್ಮ ಧರ್ಮ ಪ್ರಚಾರಕ್ಕಾಗಿ ಕೆಲವು ಜನರನ್ನು ನೇಮಿಸಿಕೊಂಡು ಹಳ್ಳಿಗಳ ಕಡೆಗೆ ವಲಸೆ ಕಳಿಸುತ್ತಿದ್ದರು. ಅವರು ಭಿಕ್ಷೆ ಮಾಡುತ್ತ, ಧರ್ಮ ಹೇಳುತ್ತ ಅಲೆಯುತ್ತಿದ್ದರು. ತಮ್ಮ ಭಿಕ್ಷೆಯ ಸ್ವಲ್ಪ ಭಾಗವನ್ನು ಮೂಲ ಮಠಕ್ಕೆ ಕೊಡುತ್ತಿದ್ದರು. ಅಂಥ ಅಲೆಮಾರಿಗಳು ಈಗಲೂ ನಮ್ಮಲ್ಲಿದ್ದಾರೆ. ಶ್ರೀಶೈಲ ಮಠಕ್ಕೆ ನಡೆದುಕೊಳ್ಳುವ ಕವಲೆತ್ತಿನವರು, ಬುಡಗ ಜಂಗಮರು, ಕುರುಮಾಮ ಅಲೆಮಾರಿಗಳು ಈ ವರ್ಗಕ್ಕೆ ಸೇರಿದವರು.

ಪ್ರಭುಗಳಿಗೆ ಆರ್ಥಿಕ ಸೇವೆ ಸಲ್ಲಿಸುತ್ತಾ ಬಂದ ಪ್ರಮುಖ ಅಲೆಮಾರಿ ಜನಾಂಗವೆಂದರೆ ಲಂಬಾಣಿಗಳು. ಇವರು ಹಿಂದೂ ಮತ್ತು ಮುಸ್ಲಿಂ ಪ್ರಭುಗಳ ಸೈನ್ಯಕ್ಕೆ ನಿಷ್ಠೆಯಿಂದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತ ಬಂದರು. ಸೈನಿಕ ಸೇವೆ ಹಾಗೂ ಮಾಹಿತಿ ಸಂಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ.

ಯಾವ ಬಗೆಯ ಪ್ರಭುವೇ ಆಗಲಿ ಆತನಿಗೆ ವಿಶೇಷ ಕಲಾರಂಜನೆ ಒಂದು ಅನಿವಾರ್ಯ ಅಪೇಕ್ಷೆಯಾಗಿರುತ್ತದೆ. ರಾಜನ ಆಸ್ಥಾನದಲ್ಲಿ ರಾಜನರ್ತಕಿಯರು, ಸಂಗೀತಗಾರರು, ಕವಿಗಳು ಮತ್ತು ವಿದೂಷಕರಿದ್ದುದನ್ನು ಕಾಣುತ್ತೇವೆ. ಅದೇ ರೀತಿ ಜನಪದ ಕಲಾರಂಜಕರೂ ಸೇವೆ ಸಲ್ಲಿಸಿದ್ದಾರೆ. ಹಗಲು ವೇಷದವರು, ಕಿನ್ನರಿಜೋಗಿಗಳು, ಕಿಳ್ಳೆಕ್ಯಾತರು ಮತ್ತು ದೊಂಬರು ಇಂಥ ಅಲೆಮಾರಿಗಳು.

ಮಾನವರ ವೃತ್ತಿ ವಿಕಾಸದಲ್ಲಿ ಬೇಟೆ ಮೊದಲ ವೃತ್ತಿ. ಇದರಲ್ಲಿ ಮೀನು ಬೇಟೆ, ಪ್ರಾಣಿ ಬೇಟೆ ಮತ್ತು ಪಕ್ಷಿ ಬೇಟೆ ಎಂದು ಮೂರು ಪ್ರಧಾನ ವೃತ್ತಿಗಳಿದ್ದವು. ಪ್ರಾಣಿ ಬೇಟೆಗಾರರಿಗೆ ವಿಕಾಸ ಹೊಂದುವ ಎರಡನೆ ಅವಕಾಶ ಸಿಕ್ಕಿತು. ಅವರು ಬೇಟೆಯಾಡುತ್ತಿದ್ದ ಪ್ರಾಣಿಗಳೆ ಅವರಿಗೆ ಹೊಸದಾದ ಪ್ರಾಣಿ ಸಾಕುವ ವೃತ್ತಿಯನ್ನು ಕಲಿಸಿದವು. ಈ ಪ್ರಾಣಿ ಸಾಕಣೆ ಅವರಿಗೆ ಬೇಸಾಯದಂತಹ ವೃತ್ತಿಯನ್ನು ಕಲಿಸಿ ಮೂರನೆಯ ಹಂತದ ವಿಕಾಸಕ್ಕೆ ದಾರಿ ಮಾಡಿಕೊಟ್ಟಿತು. ದನ ಮೇಯಿಸುವಾಗ ಮೋಟಾದ ಹುಲ್ಲು ಮತ್ತೆ ಬೆಳೆಯುವುದನ್ನು ಕಂಡ ಜ್ಞಾನನ್ನು ತಾವೂ ಸಸ್ಯಗಳದಿಂದ ಮತ್ತೆ ಬೆಳೆಯಬಹುದೆಂಬುದನ್ನು ಕಂಡುಕೊಂಡರು. ಮೀನು ಬೇಟೆಗಾರರಿಗೆ ಈ ಅವಕಾಶ ಸಿಗಲಿಲ್ಲ. ಅವರು ಒಂದು ಕಡೆ ನೆಲೆಸಿ ಮೀನುಗಾರರಾದರು. ಹಕ್ಕಿಪಿಕ್ಕಿಯವರಿಗೂ ವಿಕಾಸದ ಮಾರ್ಗದರ್ಶನ ಸಿಗಲಿಲ್ಲ. ಅವರು ಹಕ್ಕಿಗಳನ್ನು ಹುಡುಕಿ ಅಲೆದಾಡುವ ವೃತ್ತಿಯಲ್ಲೇ ಉಳಿಯಬೇಕಾಯಿತು. ಇವರನ್ನು ಈ ಕಾರಣಕ್ಕೆ ವೃತ್ತಿ ಅಲೆಮಾರಿಗಳು ಎಂದುಕರೆಯಬಹುದು.

ಜನಧರ್ಮ ಪ್ರಸಾರಕರಾದ ಅಲೆಮಾರಿ ಜನವರ್ಗವನ್ನು ಇಲ್ಲಿ ಗುರುತಿಸಬಹುದು. ದೇವರು ಮತ್ತು ಧರ್ಮಗಳಲ್ಲಿ ಮಾತೃ ಧರ್ಮ ಮೊದಲನೆಯದು. ಅದಕ್ಕೆ ಪ್ರತಿಯಾಗಿ ಹುಟ್ಟಿಕೊಂಡದ್ದು ಮಾರಿಧರ್ಮ. ಅಮ್ಮ ಗ್ರಾಮದೇವತೆ. ಅವಳು ಸಂರಕ್ಷಕ ದೇವತೆ. ಮಾರಿ ಕೆಡುಕು ಮಾಡುವ ದೇವತೆ. ಜನರನ್ನು ಹೆದರಿಸಿ ಸೇವೆ ಮಾಡಿಸಿಕೊಳ್ಳುವವಳು. ಅಮ್ಮ ಶಿಷ್ಟ ಶಕ್ತಿ (Good Spirit) ಮಾರಮ್ಮ ದುಷ್ಟಶಕ್ತಿ (Evil Spirit) ಅಮ್ಮನಿಗೆ ಪ್ರಚಾರ, ಪ್ರಸಾರ, ವಿಶೇಷ ಸೇವೆ ಬೇಕಿಲ್ಲ. ಮಾರಿಗೆ ಇದರ ಅಗತ್ಯವಿದೆ. ಮಾರಮ್ಮನ ಸಂಸ್ಕೃತಿಯನ್ನು ಹಿಡಿದು ಜನರನ್ನು ಬೆಚ್ಚಿಸಿ ಜೀವನ ಮಾಡ ಹೊರಟ ಅಲೆಮಾರಿಗಳೆಂದರೆ ದುರುಗ ಮುರುಗಿಯರು. ಬುಡಗ ಜಂಗಾಳರು ಕೂಡ ಮಾರಿ ಆರಾಧಕರು. ಅಲೆಮಾರಿಗಳಲ್ಲಿ ಹೆಚ್ಚಿನ ಜನ ಮಾರಿ ಸ್ವರೂಪದ ದೈವಾರಾಧಕರು. ಆದರೆ ದುರುಗ ಮುರುಗಿಯ ಮಾರಿಯನ್ನು ಮನೆ ಮುಂದೆ ತಂದು ಮಾತೃದೇವತೆಗೆ ವಿರುದ್ಧವಾದ ಧರ್ಮವನ್ನು ಪ್ರಸಾರ, ಪ್ರಚಾರ ಮಾಡಿದ ಕಾರಣವಾಗಿ ಅವರನ್ನು ಮೂಲ ಸಮಾಜದಿಂದ ಹೊರಗಿರಿಸಿದಂತೆ ಕಾಣುತ್ತಿದೆ. ಹಾವಾಡಿಗರು ಮೇಲು ನೋಟಕ್ಕೆ ಮನರಂಜಕರಂತೆ ಕಂಡರೂ ಅವರು ಕೂಡ ಭಯದ ದೇವತೆಯಾದ ಹಾವನ್ನು ಆಡಿಸುವ ಕೆಲಸದಲ್ಲಿ ತೊಡಗಿದ್ದರಿಂದ ಜನಪದರು ಅವರನ್ನು ತಮ್ಮೊಳಗಿಂದ ಹೊರಗೆ ಇರಿಸಿದ್ದಾರೆ.

ಬುಡಬುಡಿಕೆಯವರು, ಸುಡುಗಾಡು ಸಿದ್ಧರು ಮತ್ತು ಕುರುಮಾಮಗಳು ಭವಿಷ್ಯ ಹೇಳುವ ವರ್ಗಕ್ಕೆ ಸೇರಿದ ಅಲೆಮಾರಿಗಳಾಗಿದ್ದಾರೆ. ಮೊದಲೆರಡು ಗುಂಪಿನವರು ಶಕ್ತಿ ಪಂಥಕ್ಕೆ ಸೇರಿದವರು, ಪ್ರಕೃತಿ ಆರಾಧಕರು. ಸುಡುಗಾಡುಸಿದ್ಧರು ಶೈವಶಕ್ತಿ ಪಂಥಕ್ಕೂ, ಬುಡುಬುಡಕ್ಕೆಯವರು ಮಾಂತ್ರಿಕ ಶಕ್ತಿ ಪಂಥಕ್ಕೂ ಸೇರಿದ್ದಾರೆ. ಶಿಷ್ಟರ ದೃಷ್ಟಿಯಿಂದ ಇವರ ಕೆಲಸ ವಾಮಾಚಾರ. ಇದು ವೇದಾಚಾರಕ್ಕೆ ವಿರುದ್ಧವಾದುದರಿಂದ ಈ ವರ್ಗದವರ ಆರಾಧನೆ, ಪೂಜೆ ಮತ್ತು ನಡವಳಿಕೆಯನ್ನು ಭಯದಿಂದ ನೋಡಲಾಯಿತು. ಹೀಗೆ ಭಯ ಹುಟ್ಟಿಸುವ ಜನ ಎನ್ನುವ ಕಾರಣಕ್ಕೆ ಮುಖ್ಯ ಜೀವನ ವಿಧಾನದಿಂದ ಇವರನ್ನು ಹೊರಗಿಡಲಾಯಿತು. ಅನಿವಾರ್ಯ ಎಂಬಂತೆ ಇವರು ಅಲೆಮಾರಿಗಳಾದರು. ಹೀಗೆ, ಯಾವುದೇ ಸಮಾಜದಲ್ಲಿ ಅಲೆಮಾರಿಗಳಾಗುವುದಕ್ಕೆ ಇರುವ ಕಾರಣ ಸಾಂಸ್ಥಿಕ ನೆಲೆಯಿಂದ ಹೊರಗೆ ಬೀಳುವುದು. ನಮ್ಮಲ್ಲಿ ಇರುವ ಅಲೆಮಾರಿಗಳು ಕೂಡ ಒಂದಲ್ಲ ಮತ್ತೊಂದು ಕಾರಣಕ್ಕೆ ವ್ಯವಸ್ಥಿತ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ.

ಎಲ್ಲಿ ಸಂಸ್ಕೃತಿ ನೆಲೆ ನಿಲ್ಲುತ್ತದೊ ಆಗ ಅದು ಕೈಗಾರಿಕೆಯಾಗುತ್ತದೆ. ಸಾಕು ಪ್ರಾಣಿಗಳ ಸಂಸ್ಕೃತಿ ಮತ್ತು ಕೃಷಿ ಸಂಸ್ಕೃತಿಗಳು ಉದ್ಯಮಗಳೇ ಆದವು. ಜೊತೆಯಲ್ಲೆ ಒಂದು ನಿರ್ಧಿಷ್ಟ ಕೇಂದರ ಪರಿಕಲ್ಪನೆ ಹಾಗೂ ಒಡೆತನ ಶುರುವಾಯಿತು. ಗೋವುಗಳ ರಕ್ಷಕ ಗೊಲ್ಲಗೌಡ, ಕುರಿಗಳ ರಕ್ಷಕ ಗೊರವೇಗೌಡ, ಕೃಷಿ ರಕ್ಷಕ ಭೂಮಿಗೌಡ ಹುಟ್ಟಿಕೊಂಡರು. ಹಾಲಕ್ಕಿ ಜನ ಭೂಮಿ ಹಿಡಿದುದರಿಂದ ಹಾಲಕ್ಕಿ ಒಕ್ಕಲು ಗೌಡರಾಗಿ ನಿರ್ದೇಶಿತರಾದರು. ಅಂದರೆ ವೃತ್ತಿ ಎನ್ನುವುದು ಒಂದು ಕೇಂದ್ರದಲ್ಲಿ ಒಂದು ಉದ್ಯಮ ಆಯಿತು. ಅದರ ವಿಸ್ತರಣೆ ಅಭಿವೃದ್ಧಿ ಸಿದ್ಧಾಂತವಾಯಿತು. ಹೀಗೆ ಪ್ರಕೃತಿಯನ್ನು ಉದ್ಯಮ ಸಂಸ್ಕೃತಿಯನ್ನಾಗಿ ಪರಿವರ್ತಿಸಿಕೊಂಡವರು ವೃತ್ತಿಯವರಾಗಿ ಒಂದು ಕೇಂದ್ರದಲ್ಲಿ ನೆಲೆ ನಿಂತರು. ಆಗದವರು ಹೊರಗೆ ಬಿದ್ದು ಅಲೆಮಾರಿಗಳಾದರು.

ದೇಶಿ ಎನ್ನುವುದು ಕೂಡ ಒಂದು ಪ್ರಭುತ್ವ ಮತ್ತು ಅಭಿವೃದ್ಧಿ ಸಿದ್ಧಾಂತ. ನಮ್ಮ ದೇಶವನ್ನೇ ತೆಗೆದುಕೊಂಡರೆ ಸ್ವಾತಂತ್ಯ್ರ ಪೂರ್ವಕ್ಕೆ ದೇಶಿ ಎನ್ನುವುದು ಪ್ರಭು ಸಂಸ್ಕೃತಿಯ ಪರ್ಯಾಯ ಚಿಂತನೆಯಾಗಿತ್ತು. ಬ್ರಿಟಿಷರು ಭಾರತವನ್ನು ಆಳುತ್ತಿದ್ದಾಗ ದೇಸಿ ಎಂಬುದು ಭಾರತದ ಮೇಲುವರ್ಗದ ಒಂದು ಕೂಟವಾಗಿತ್ತು. ಗಾಂಧೀಜಿ, ಅದನ್ನು ಹಳ್ಳಿಗಳ ವಿಕೇಂದ್ರೀಕರಣದ ಮಟ್ಟಕ್ಕೆ ತಂದರು. ಕನ್ನಡ ಸಾಹಿತ್ಯ ಇತಿಹಾಸದಲ್ಲಿ ದೇಶಿ ಮತ್ತು ಮಾರ್ಗಗಳು ವಿಶೇಷವಾಗಿ ಭಾಷಾಭಿವ್ಯಕ್ತಿ ವಿಧಾನಕ್ಕೆ ಸಂಬಂಧಪಟ್ಟಂತೆ ಬಳಕೆಯಾಗಿದ್ದವು. ಒಮ್ಮೊಮ್ಮೆ ದೇಶಿ ಎಂಬುದು ರಾಜಭೋಗಕ್ಕೆ ಬೇರೆಯಾದ ನೈಸರ್ಗಿಕ ಬದುಕು ಎಂಬ ಅರ್ಥ ಬರುವಂತೆ ಬಳಕೆಯಾಯಿತು. ಬ್ರಿಟಿಷರ ವಿರುದ್ಧ ಭಾರತೀಯರು ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಿದ್ದ ಸಂದರ್ಭದಲ್ಲಿ ಇಡೀ ಭಾರತ ದೇಶ-ದೇಶೀಯತೆಯ ಪರಿಕಲ್ಪನೆಯನ್ನು ಹೊಂದಿತ್ತು. ಸ್ವಾತಂತ್ರ‍್ಯಾನಂತರ ಭಾರತದ ಆಡಳಿತ ವ್ಯವಸ್ಥೆ ಪಶ್ಚಿಮದ ಕಡೆಗೆ ಮುಖ ಮಾಡಿದ್ದರಿಂದ ಪರದೇಶೀಯತೆ ಹೆಚ್ಚಾಯಿತು. ಭಾರತ ನೇರ ವಸಾಹತುಶಾಹಿಯಿಂದ ಪರೋಕ್ಷ ವಸಾಹತುಶಾಹಿಗೆ ಒಳಗಾಯಿತು. ಬಡತನದ ಪ್ರಮಾಣ ಕಡಿಮೆಯಾಗಲಿಲ್ಲ. ಹೆಚ್ಚು ಜನರು ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಪಾಲುದಾರಿಕೆ ಎಂಬ ಹಕ್ಕು ಪ್ರತಿಪಾದನೆಯ ಮಾರ್ಗ ಹಿಡಿದು ದೇಶೀಯ ಅಭಿವೃದ್ಧಿ ಪರಿಕಲ್ಪನೆ ಹುಟ್ಟಿಕೊಂಡಿತು.

ಈಗ ದೇಶಿ ಸಿದ್ಧಾಂತದ ಬಗ್ಗೆ ಮಾತನಾಡುತ್ತಿರುವ ನಾವು ವಸಾಹತು ವಿಜ್ಞಾನ ಮಾದರಿಗಳಿಗೆ ವಿರುದ್ಧವಾಗಿ ಮಾತನಾಡುತ್ತಿದ್ದೇವೆ. ಅವು ಬೇಡ ಎಂದಲ್ಲ, ಅವು ಎಲ್ಲ ಜನರನ್ನೂ ಒಳಗೊಳ್ಳುವುದಿಲ್ಲ ಎಂಬ ಕಾರಣಕ್ಕೆ. ವಸಾಹತು ವಿಜ್ಞಾನ ಇತ್ತೀಚೆಗೆ ಬಂಡವಾಳ ಸಂಗ್ರಾಹಕರಿಗೆ ಮಾತ್ರ ನೆರವಾಗುತ್ತಿದೆ. ಕೊನೆಯ ಮನುಷ್ಯ ಮತ್ತೆ ಹಿಂದೆ ಸರಿದು ಮೊದಲ ಮನುಷ್ಯ ಆದ್ಯತೆಗೆ ಬರುತ್ತಿದ್ದಾನೆ. ಇದನ್ನು ಪ್ರಗತಿ ಎಂದು ಕರೆಯಲಾಗುವುದಿಲ್ಲ. ಇದು ಭಾಗಿಕ ಪ್ರಗತಿಯೆ ಹೊರತು ಇಂಟಿಗ್ರೇಟೆಡ್ ಪ್ರಗತಿ ಅಲ್ಲ. ಇಂಟಿಗ್ರೇಟೆಡ್ ಪ್ರಗತಿ ತತ್ವ ಇದ್ದರೆ ಅದು ದೇಶಿ ಸಿದ್ಧಾಂತ ಎಂಬ ನೆಲೆಗೆ ತಲುಪಿದ್ದೇವೆ. ಭಾರತದಲ್ಲಿ ಈ ಸಿದ್ಧಾಂತ ಅನುಷ್ಠಾನಗೊಳ್ಳುವಾಗ ಮೇಲು ಜಾತಿ ಮತತು ಮೇಲು ವರ್ಗದ ಅಭಿವೃದ್ಧಿ ಸಿದ್ಧಾಂತವಾಗಿ ಬಿಟ್ಟರೆ ಅಪಾಯ ಎಂಬ ನಂಬಿಕೆಯೂ ಇದೆ. ದೇಶೀ ಸಿದ್ಧಾಂತವನ್ನು ಈಗಾಗಲೇ ರಾಜಕೀಯ ಪಕ್ಷವೊಂದು ಬಂಡವಾಳ ಮಾಡಿಕೊಳ್ಳ ಹೊರಟಿದೆ. ದೇಶಿವಾದ ಹೊಸ ಜಾತಿ ಸಿದ್ಧಾಂತವಾಗಿಬಿಟ್ಟರೆ ಮತ್ತೂ ಅಪಾಯವಿದೆ.

ದೇಶಿ ಚಿಂತನೆ
ನಗರ
ಜಾತಿ
ಗ್ರಾಮ
ಅಕ್ಷರ     ಕೇಂದ್ರಗಳಲ್ಲಿ ನೆಲೆ ನಿಲ್ಲಬಾರದು.

ಈ ಪ್ರತಿಯೊಂದು ಕೇಂದ್ರವೂ ಭಾರತದ ಅಭಿವೃದ್ಧಿಯ ಸ್ತಬ್ಧ ಕೇಂದ್ರಗಳು. ಅಲ್ಲಿ ಭಾರತೀಯ ಸಾಂಪ್ರದಾಯಿಕ ಯಜಮಾನಿಕೆಯ ಕೇಂದ್ರಗಳಿವೆ ಎಂಬ ಧೋರಣೆ ವ್ಯಕ್ತವಾಗುತ್ತಿದೆ. ದೇಸೀಯತೆ ಎನ್ನುವುದು ‘ದೇಶಶಾಹಿ’ ಆಗಬಾರದು. ದೇಶೀ ಸಂಸ್ಕೃತಿ ಮತ್ತು ಅಭಿವೃದ್ಧಿ ಎನ್ನುವುದು ಪಟೇಲ ಶಾನುಭೋಗರ, ಬಹುಸಂಖ್ಯಾತರ, ಮತೀಯ ಯಜಮಾನರು, ರಾಜಕೀಯ ಪಕ್ಷದ ಅಥವಾ ಸ್ವದೇಶಿ ಕೈಗಾರಿಕೋದ್ಯಮಗಳ ಅಭಿವೃದ್ಧಿ ಸಿದ್ಧಾಂತ ಅಲ್ಲ. Be Indian, buy Indian ಎಂಬ ತತ್ವಬೋಧನೆ ಮಾಡಿ ಭಾರತೀಯ ಬಳಕೆದಾರರನ್ನು ಗರಿಷ್ಠ ಮಟ್ಟದಲ್ಲಿ ಶೋಷಿಸಿದ ದೇಶೀಯ ಕೈಗಾರಿಕೋದ್ಯಮ ನಮಗೆ ಕೆಲವು ನೆನಪನ್ನು ಉಳಿಸಿದೆ. ಸೂಜೆ ಚಿನ್ನದ್ದಾದ ಮಾತ್ರಕ್ಕೆ ಅದು ಹೂವೆ?

ಅಲೆಮಾರಿಗಳು ಮತ್ತು ಸಂಸ್ಕೃತಿ ಅರ್ಥಶಾಸ್ತ್ರ

‘ಚಲಿಸುವ ಕಲ್ಲಿಗೆ ತೂಕ ಇರುವುದಿಲ್ಲ’
(Rolling stone gather’s no mass)

೧. ನೆಲ ಇಲ್ಲದವರು

೨. ನೆಲೆ ಇಲ್ಲದವರು

ಅಸ್ತಿತ್ವದಲ್ಲಿ ಇರುವುದಿಲ್ಲ
ನೆಲ= ಪ್ರದೇಶ, ದೇಶ-ಇತ್ಯಾದಿ
ನೆಲೆ= ವಾಸ, ಸಂಸ್ಕೃತಿ-ಇತ್ಯಾದಿ

ಯಾರಿಗೆ ನಿರ್ದಿಷ್ಟ ನೆಲ, ನೆಲೆ ಇರುವುದಿಲ್ಲವೋ ಅವರಿಗೆ ಸಂಪತ್ತು, ಅಧಿಪತ್ಯ, ಪಾರುಪತ್ಯ, ಭದ್ರತೆ ಬೆಳವಣಿಗೆ ಸಿಗುವುದಿಲ್ಲ. ನೆಲ ಇಲ್ಲದ ಕಾರಣಕ್ಕೆ ದಲಿತರು ಮೀಸಲಾತಿ ಎಂಬ ನೆಲೆಯನ್ನು ಕೇಳುತ್ತಿದ್ದಾರೆ. ಅದು ತಮ್ಮ ಜೀವನ ಸಂಸ್ಕೃತಿ ಆಗಬೇಕು ಅನ್ನುತ್ತಿದ್ದಾರೆ. ದಲಿತರು ಅಲೆಮಾರಿಗಳ ರೀತಿಯಲ್ಲಿ ಅನಾಥರೂ ಅಲ್ಲ, ತಿರಸ್ಕೃತರೂ ಅಲ್ಲ, ಐಡೆಂಟಿಟಿ ಇಲ್ಲದವರೂ ಅಲ್ಲ; ದೂರ ಇಡಲ್ಪಟ್ಟವರು. ಇವರ ಸೇವೆ ಎಂದೂ ನಗಣ್ಯವಾಗಿರಲಿಲ್ಲ. ಉತ್ಪತ್ತಿಯಲ್ಲಿ ಇವರದು ಸಿಂಹಪಾಲು, ಒಡೆತನ ಕೊಡಲಿಲ್ಲ ಅಷ್ಟೆ.

ನೆಲ ಮತ್ತು ನೆಲೆ ಇಲ್ಲದವರು ಒಂದು ಸಮಾಜದ ಮುಖ್ಯ ಸ್ಥಾನದಲ್ಲಿ ಸ್ಥಾಪಿತವಾಗಲು ಸಾಧ್ಯವಾಗುವುದಿಲ್ಲ. ಅವರು ಮುಖ್ಯ ಉತ್ಪತ್ತಿಯಲ್ಲಿ ತೊಡಗಲು, ಪಾಲುದಾರರಾಗಲೂ ಆಗುವುದಿಲ್ಲ. ಅಲೆಮಾರಿ ಜನಾಂಗ ಎಂದೂ ಮುಖ್ಯ ಉತ್ಪತ್ತಿಯಲ್ಲಿ ತೊಡಗಿಲ್ಲ. ಬೇರೆಯವರ ಉತ್ಪತ್ತಿಯ ಉಳಿತಾಯಕ್ಕೆ ಕೈಚಾಚಿದ್ದಾರೆ. ಅವರ ಕೆಲಸ ಎಂದೂ ಪ್ರಧಾನ ಅಲ್ಲ ಪೂರಕ ಕ್ರಿಯೆಗಳಾಗಿವೆ. ಉದಾ: ವೇಷ ಹಾಕುವುದು, ಆಹಾರ ಸರಬರಾಜು ಮಾಡುವುದು. ಔಷಧ ಕೊಡುವುದು, ಶಾಸ್ತ್ರ-ಶಕುನ ಹೇಳುವುದು ಕಲಾ ಸೇವೆ ಮಾಡುವುದು, ಮಾಟ ಮಂತ್ರ ಮಾಡುವುದು. ಕಸೂತಿ ಹಾಕುವುದು, ಹಾಡುವುದು, ವಾದ್ಯ ನುಡಿಸುವುದು ಇತ್ಯಾದಿ.

ಅಲೆಮಾರಿಗಳು ತಮ್ಮ ಸಾಂಸ್ಕೃತಿಕ-ಆರ್ಥಿಕ ಅನನ್ಯತೆಯನ್ನು ತಾವೇ ನಿರಾಕರಿಸಿ ಕೊಳ್ಳುತ್ತಿರುವು ಅಂಶಗಳೂ ಇವೆ.

೧. ಬಹುತೇಕ ಹೊರರಾಜ್ಯಗಳಿಂದ ವಲಸೆ ಬಂದವರು ಹಾಗೂ ಅದನ್ನು ಹೋಗಲಾಡಿಸಿ ಕೊಳ್ಳದವರು.

೨. ಊರ ಹೊರಗೆ ವಸತಿ ಹೂಡುವವರು.

೩. ಬಂದ ರಾಜ್ಯದ ಭಾಷೆ, ಸಂಸ್ಕೃತಿ ಮತ್ತು ಆಡಳಿತವನ್ನು ಅವಲಂಬಿಸಿದವರು.

೪. ಧಾರ್ಮಿಕವಾಗಿ ಮೇಲು ಜಾತಿಯ ಪುರಾಣ ಮೂಲಕ್ಕೆ ಕೆಟ್ಟದಾಗಿ ಜೋಡಿಸಿಕೊಂಡವರು.

೫. ಭಿಕ್ಷೆಯನ್ನೆ ಉತ್ಪತ್ತಿ ಎಂದುಕೊಂಡವರು.

ಕೂಲಿ ಮಾಡಿ ಜೀವಿಸಲಿ ಭಿಕ್ಷೆಗೆ ಮಾತ್ರ ಹೋಗಬಾರದು. ಈ ದೇಶದ ಸಂಸ್ಕೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟರೆ ಬೇರೆಯವರಿಗೆ ಭಿಕ್ಷೆ ಗೌರವದ ಕೆಲಸ ಅಲ್ಲ ಎಂಬ ತತ್ವ ನೆಲೆ ನಿಂತಿದೆ. ಕೂಲಿ ಉತ್ಪತ್ತಿ ಮೂಲ. ಆದರೆ ಯಾಕೆ ಈ ಅಲೆಮಾರಿಗಳು ಕೂಲಿ ಮಾಡುವುದಿಲ್ಲ? ಹಿಂದೆ ಇವರು ಬೇರೆ ಬೇರೆ ಕಾರಣಕ್ಕೆ ಧಾರ್ಮಿಕವಾಗಿ ಸಾಂಸ್ಕೃತಿಕವಾಗಿ ಗೌರವಿಸಲ್ಪಟ್ಟವರು. ಈಗ ಆ ಇತಿಹಾಸ ಮುಗಿದು ಹೋಗಿದೆ.

ಆದ್ದರಿಂದಲೇ ಇವರಲ್ಲಿ ಸಂಪತ್ತು ನಿರ್ದೇಶಕ ಯಾವ ಆಶಯಗಳೂ ಇಲ್ಲ. ಇವರಲ್ಲಿ:

೧. ಜಾತಿ ಇಲ್ಲ

೨. ಮೊತ್ತದ ಧರ್ಮ,

೩. ಸಂಪತ್ತು (ಬೆಳ್ಳಿ ಚೂರು ಬಿಟ್ಟರೆ) ಇಲ್ಲ

೪. ಕೂಡಿಡುವ ಮನೋಧರ್ಮ ಇಲ್ಲ

೫. ಇವರ ಕೆಲಸ-ಉತ್ಪಾದಕತೆ ಅಲ್ಲ

೬. ಸ್ಥಿರ ಉದ್ಯೋಗ-ವೃತ್ತಿ ಇಲ್ಲ

೭. ಅಭದ್ರತೆ ಇದೆ (ಉದಾ: ಬಾಲ್ಯವಿವಾಹ)

೮. ಉದ್ಯಮಶೀಲತೆ ಇಲ್ಲ

೯. ಪಾನಭೋಗ ಇದೆ

೧೦. ಪೈಪೋಟಿ ಇಲ್ಲ

ಅಸ್ತಿತ್ವದ ಅಭಿವೃದ್ಧಿ ನೆಲೆಗಳು

“ಸಂಘೇಶಕ್ತಿ ಕತಾಯುಗೇ”
(ಕಲಿಯುಗದಲ್ಲಿ ಸಂಘಶಕ್ತಿಯೆ ಶಕ್ತಿ)
ಭಾರತದಂಥ ದೊಡ್ಡ ದೇಶದಲ್ಲಿ
ದೊಡ್ಡ ಕೇಂದ್ರ ಶಕ್ತಿಯಲ್ಲಿ
ಬಹುಸಂಖ್ಯೆಯ ದೇಶದಲ್ಲಿ
ಬಹುಮತದ ದೇಶದಲ್ಲಿ
ಬಹು ಸಂಸ್ಕೃತಿಯ ದೇಶದಲ್ಲಿ
ಉದ್ಯಮ ಉಮೇದು ಇಲ್ಲದಲ್ಲಿ

ಅಲೆಮಾರಿಗಳು

ನಗಣ್ಯರು
ಅನಾಥರು
ಅನುತ್ಪಾದಕರು
ಅಸಂಘಟಿತರು
ಅನ್ಯಭಾಷಿಕರು ಆಗಿ ದೂರ ಸರಿಯುವುದು ಸಹಜ

ಇವರು ಹಠ ಹಿಡಿದು

೧. ರಾಜ್ಯತ್ವ
೨. ಭಾಷಿಕತ್ವ ಮತ್ತು
೩. ಹಕ್ಕು ಪ್ರತಿಪಾದನೆ ಮಾಡಿಕೊಳ್ಳಬೇಕು.

ಎರಡು ಬಗೆಯ ಅಭಿವೃದ್ಧಿ ಯೋಜನೆಗೆ ಇವರು ಸಿದ್ಧರಾಗಬೇಕು

೧. ದೇಸೀ ನೆಲೆಯ ಅಭಿವೃದ್ಧಿ
೨. ಅಂತರ್‌ದೇಶೀ ಸಂಬಂಧಿ ಅಭಿವೃದ್ಧಿ

೧. ತಮ್ಮನ್ನು ಅಲೆಮಾರಿ ಎಂಬ ಐಡೆಂಟಿಟಿಯಲ್ಲಿ ಅಭಿವೃದ್ಧಿಗೆ ತೊಡಗುವುದು ಮತ್ತು ಆಗ್ರಹಿಸುವುದೇ ದೇಶಿ ವಿಧಾನ

೨. ತಮ್ಮ ಮೂಲವನ್ನು ಮೂಲಜ್ಞಾನವನ್ನು ನಿರಾಕರಿಸುವ ಮೂಲಕ ಆಧುನಿಕತೆಯೊಂದಿಗೆ ಬೆರೆತು ಹೋಗುವುದು ಅನ್ಯದೇಶೀಯತೆ.

ಈಗಿರುವ ಪರಿಸ್ಥಿತಿಯಲ್ಲಿ ಅಲೆಮಾರಿಗಳು ಅನ್ಯದೇಶೀಯರಾಗಲು ಸಾಧ್ಯವಿಲ್ಲ. ತಮ್ಮ ಸಮೀಪವೇ ಇರುವ ಜಾತಿ, ವರ್ಗ ಮತ್ತು ಶಕ್ತಿ ಕೇಂದ್ರಗಳೆಂಬ ‘ಸ್ಥಳೀಯ ವಿದೇಶೀಯತೆ’ ಯ ಜೊತೆಗೆ ಅವರು ಹೋರಾಡಿ ಗೆಲ್ಲಬೇಕು. ಅನಂತರ ಅವರ ಜೊತೆಗೆ ಸಾಧ್ಯವಾದ ಆಧುನಿಕ ಸೌಲಭ್ಯಗಳನ್ನು ಪಡೆಯಬೇಕು. ಇದಕ್ಕೆ ಆರಂಭಿಕವಾಗಿ ಎಲ್ಲ ಅಲೆಮಾರಿ ಮಕ್ಕಳು ಕಡ್ಡಾಯವಾಗಿ ಪ್ರೌಢಶಿಕ್ಷಣದವರೆಗೆ ಓದಬೇಕು ಆ ಮೂಲಕ ತಾವಿರುವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು.

ಅಲೆಮಾರಿಗಳು ಸಂಘಟಿತರಾಗಬೇಕು ಮತ್ತು ಆ ಸಂಘಟನೆಗೆ ಅಂತರ್‌ಸಂಬಂಧಿ ನಾಯಕತ್ವ ಬೇಕು. ಅದು ಸಮುದಾಯದ ಒಳಗಿಂದ ಬರಬಹುದು ಅಥವಾ ಶ್ರೀ ದೇವರಾಜ ಅರಸು ಥರ ರಾಜಕೀಯ ಕೇಂದ್ರದಿಂದಲೂ ಬರಬಹುದಾಗಿದೆ. ಮೂರು ವಿಧದಲ್ಲಿ ಅವರು ಸಂಘಟಿತರಾಗಬೇಕಾಗುತ್ತದೆ.

೧. ಸಮುದಾಯ ಸಂರಕ್ಷಣೆಯಾಗಿ
೨. ಮತದಾರರಾಗಿ
೩. ಪಾಲುದಾರರಾಗಿ

೧. ಸಮುದಾಯ ಸಂರಕ್ಷಣೆ ಎಂದರೆ ಸ್ವ ಉದ್ಯೋಗ ಸೃಷ್ಟಿ ಮಾಡಿಕೊಳ್ಳುವುದು. ಬೇಡುವುದು ಉದ್ಯೋಗ ಆಗಬಾರದು. ತಮ್ಮದೇ ತಂತ್ರಜ್ಞಾನ, ಕಲೆ, ಸಂಗೀತ, ವೈದ್ಯ, ಇವುಗಳನ್ನು ಸ್ಪರ್ಧಾತ್ಮಕ ಉದ್ಯೋಗಗಳನ್ನಾಗಿ ಬೆಳೆಸಿಕೊಳ್ಳುವುದು. ಅಂದರೆ ತಮ್ಮ ಪಾರಂಪರಿಕ ನೈಪುಣ್ಯವನ್ನು ಆಧುನೀಕರಿಸುವುದು. ಇದಕ್ಕೆ ಸರ್ಕಾರದ ನೇರ ನೆರವು ಬೇಕು. ಜನಪದ ಔಷಧ ಜ್ಞಾನ ಬಹುತೇಕ ಅಲೆಮಾರಿಗಳಲ್ಲಿ ಇದೆ. ಇದು ಕ್ಷುಲ್ಲಕ ಅಲ್ಲ. ಇದನ್ನು ಅಲೋಪತಿ ಮತ್ತು ಆಯುರ್ವೇದದ ಜೊತೆಗೆ ಪರ್ಯಾಯ ಎನ್ನುವಂತೆ ಬೆಳೆಸಬೇಕು. ಅಮೇರಿಕದಂಥ ದೇಶಗಳು ಅಲೋಪತಿ ಔಷಧಿ ಪದ್ಧತಿಯನ್ನು ಹುಡುಕುತ್ತಿವೆ. ಅಲೋಪತಿ ನಿಶಕ್ತವಾದರೆ ರೋಗಿಗಳ ಗತಿ ಏನು ಎಂಬ ಮುಂದಾಲೋಚನೆ ಅವರನ್ನು ಕಾಡುತ್ತಿದೆ. ಭಾರತೀಯರಾದ ನಮಗೂ ಇಂಥದೊಂದು ಪರ್ಯಾಯ ಔಷಧ ಪದ್ಧತಿಯ ಅಗತ್ಯವಿದೆ. ನಮ್ಮಲ್ಲಿ ಔಷಧಿಗಾಗಿ ಭಾರಿ ಮೊತ್ತವನ್ನು ಖರ್ಚು ಮಾಡಲು ಆಗದು ಲಕ್ಷಾಂತರ ಜನ ಇದರಿಂದ ಉಪಯೋಗ ಪಡೆಯುವಂತಾಗಬೇಕು. ಅಲೆಮಾರಿಗಳು, ಆದಿವಾಸಿಗಳು ಮತ್ತು ಗ್ರಾಮೀಣ ಔಷಧ ನಿಪುಣರು ಈ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕು. ಇವರೆ ಯಾಕೆ ಇಂಥ ಹೊಸ ಜವಾಬ್ದಾರಿ ಹೊರಬೇಕೆಂದರೆ, ಈ ವಿಷಯದಲ್ಲಿ ಅವರಿಗೆ ನೈಪುಣ್ಯತೆ ಇದೆ ಮತ್ತುಬೇರೆಯವರು ಇನ್ನೂ ಈ ಕ್ಷೇತ್ರವನ್ನು ಉದ್ಯಮ ಮಾಡಿಕೊಂಡಿಲ್ಲ.

ಅಲೆಮಾರಿಗಳಲ್ಲಿ ಅಪಾರ ಸಾಹಿತ್ಯ ಮತ್ತು ಸಂಗೀತ ಜ್ಞಾನವಿದೆ. ಇದು ಸಮುದಾಯ ಸಾಹಿತ್ಯ ಮತ್ತು ಸಂಗೀತ. ಜಡ್ಡುಗಟ್ಟುತ್ತಿರುವ ಹಾಗೂ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿರುವ ನಾಗರೀಕತೆಗೆ ಈ ಶ್ರವಣ ಬೇಕು. ಆದರೆ ಈ ಸಾಹಿತ್ಯ ಮತ್ತು ಹಾಡುಗಾರಿಕೆಯೊಳಗಿನ ವಸ್ತು ಸಮಕಾಲೀನವಾಗಿಲ್ಲ. ಹೊಸ ಕಥೆ-ವ್ಯಥೆ ಹೇಳುವ ವಸ್ತು ಸ್ವೀಕಾರದೊಂದಿಗೆ ಸಮುದಾಯ ಸಂಗೀತಗಾರರ ಪಾತ್ರವನ್ನು ವಹಿಸಿಕೊಳ್ಳಬಹುದಾಗಿದೆ. ತಮ್ಮದು ಕಳಪೆ ಎಂದು ನಾಚಿಕೊಂಡರೆ ಅವರ ಜೀವನವೇ ನಾಚಿ ಮುದುಡಿಕೊಳ್ಳುತ್ತದೆ.

ವಾದ್ಯ ವೈವಿಧ್ಯತೆಯೂ ಅಲೆಮಾರಿಗಳ ವಿಶೇಷ ಶೋಧನೆಯಾಗಿದೆ. ಈಗಿರುವ ವಾದ್ಯಗಳನ್ನು ಸಂಯುಕ್ತ ಗೊಳಿಸಿ. ಹೊಸ ವಾದ್ಯಮೇಳಗಳನ್ನು ಸಂಘಟಿಸಬಹುದು. ಕರ್ನಾಟಕದ ಒಟ್ಟು ಸಮೂಹವನ್ನು ಕ್ರಿಯೆಗೆ ತೊಡಗಿಸಬಲ್ಲ ನೃತ್ಯ ಮತ್ತು ಅಭಿನಯ ಚಾತುರ್ಯ ಅಲೆಮಾರಿಗಳಲ್ಲಿದೆ. ಆಹಾರ ಮತ್ತು ಆರೋಗ್ಯದ ದೃಷ್ಟಿಯಿಂದ ದಿನಕ್ಕೆ ಒಂದೇ ಸಾರಿ ಊಟ ಮಾಡುವ ಹಕ್ಕಿಪಿಕ್ಕಿ ಜನಾಂಗ ಮಾದರಿಯಾಗಿದ್ದಾರೆ. ಅವರು ದೃಢಕಾಯರು ಎಂದೂ ಹೇಳಲಾಗಿದೆ. ಅಲೆಮಾರಿಗಳಲ್ಲಿ ಇರಬಹುದಾದ ಇಂಥ ಆಹಾರ ಪದ್ಧತಿಗಳನ್ನು ಶೋಧಿಸಬೇಕಾಗಿದೆ.

ಸಂಬಂಧ ಪದ್ಧತಿ ಮತ್ತು ಒಕ್ಕೂ ನ್ಯಾಯ ಪದ್ಧತಿಗಳು ಅಲೆಮಾರಿ ಜನಾಂಗದ ಸ್ಥಿರ ಮೌಲ್ಯಗಳಾಗಿವೆ. ಕೆಲವು ಕಠಿಣ ಶಿಕ್ಷೆಗಳನ್ನು ಹೊರತುಪಡಿಸಿದರೆ ಸಮುದಾಯ ಪ್ರಜ್ಞೆಯನ್ನು ಪ್ರಚೋದಿಸುವ ನೀತಿ, ನಿಯಮಗಳು ಉತ್ತಮವಾಗಿವೆ. ಮದುವೆಗೆ ಮೊದಲು ಲೈಂಗಿಕ ಸಂಬಂಧವನ್ನು ಹೊಂದಬಾರದು ಎಂಬ ತತ್ವ ಒಂದೆರಡು ಅಲೆಮಾರಿಗಳಲ್ಲಿ ಇದೆ. ಇದನ್ನು ಈ ಹೊತ್ತಿನ ಉನ್ಮಾದಗೊಂಡ ಆಧುನಿಕ ಜಗತ್ತು ಒಪ್ಪದಿರಬಹುದು. ಸಹಜ ಸ್ಥಿತಿಯಲ್ಲಿ ಈ ನಿಯಮ ಅನಾಹುತಕಾರಿಯಲ್ಲ. ಇಂಥ ಉಪಯುಕ್ತ ನಿಯಮಗಳನ್ನು ಆಧುನಿಕರು ಪಡೆಯಬಹುದು ಹಾಗೂ ಅಲೆಮಾರಿಗಳು ತಮ್ಮದೊಂದು ಇಂಥ ಉತ್ತಮ ಕೊಡುಗೆ ಇದೆ ಎಂದು ಬೀಗಬಹುದು.

ಕುಲದೈವ ಆರಾಧನೆ ಈ ವರ್ಗದ ಜನರ ಮತ್ತೊಂದು ಕೊಡುಗೆ. ಇವರ ಪೂಜೆ ದುಬಾರಿ ಅಲ್ಲ, ದೈವ ದೊಡ್ಡ ಹೊರೆ ಅಲ್ಲ. ಧರ್ಮ ಒಂದು ನಿರ್ಬಂಧ ಅಲ್ಲ. ದೇವರ ಜೊತೆಗೆ ಕುಡಿಯುವ ಮತ್ತು ತಿನ್ನುವ ನಿಯಮ ಇವರನ್ನು ಎಲ್ಲ ಅಸ್ಪೃಶ್ಯತೆ ಮತ್ತು ಅರಾಜಕ ತತ್ವದಿಂದ ದೂರ ಇಟ್ಟಿದೆ. ಆದರೆ ಕುಡಿತವೆ ಮೌಲ್ಯ, ಮಾನ ಮತ್ತು ಅಂತಸ್ತು ಎಂಬ ತಿಳುವಳಿಕೆ ಅಪಾಯಕಾರಿಯಾದುದಾಗಿದೆ.

ಸಂಪತ್ತು ಸಂಗ್ರಹಿಸದ ಇವರ ಮನೋಧರ್ಮ ಈ ಹೊತ್ತಿನ ಆಧುನಿಕ ಭಯ ಭೀತರಿಗೆ ಅಪರಾಧವೊ, ಅವಿವೇಕವೊ ಅಥವಾ ದೂರದರ್ಶಿತ್ವದ ಕೊರತೆಯೊ ಆಗಿ ಕಾಣಬಹುದು. ಒಂದು ದೇಶಕ್ಕೆ ಇಲ್ಲದ ಭವಿಷ್ಯದ ಭಯ ಒಬ್ಬ ಭಕ್ತಿ ಅಥವಾ ಒಂದು ಸಮುದಾಯದಲ್ಲಿ ಕಾಣಿಸಿಕೊಂಡರೆ ಅದು ಸ್ವಾರ್ಥ ಹಾಗೂ ದೇಶದ್ರೋಹ ಇಂಥವರು ತಮ್ಮ ಕಾರಣಕ್ಕೆ ದೇಶವನ್ನು ಮಾರಿ ತಮ್ಮನ್ನು ಉಳಿಸಿಕೊಳ್ಳುವಂಥವರು. ಕೆಲವು ವ್ಯಕ್ತಿಗಳ ಸಂಪತ್ತಿನ ದಾಹವೇ ಹಲವು ವ್ಯಕ್ತಿಗಳ ಮತ್ತು ದೇಶದ ಬಡತನಕ್ಕೆ ಕಾರಣವಾಗುತ್ತದೆ. ಒಂದು ದುಡಿಯುವ ಘಟಕ (ವ್ಯಕ್ತಿ, ಯಂತ್ರ, ಸಮುದಾಯ ಇತ್ಯಾದಿ) ಮಾತ್ರ ಒಂದು ದೇಶದ ಸಂಪತ್ತು ಎಂಬ ನಿಲುವು ದೇಶವನ್ನು ಕ್ರಿಯಾತ್ಮಕವಾಗಿ ಸಂಪದ್ಭರಿತ ಮಾಡಬಲ್ಲದು.

೨. ಮತದಾರರಾಗುವುದು ಎಂದರೆ ಚುನಾವಣಾ ಜ್ಞಾನವನ್ನು ಪಡೆಯುವುದು. ಎಂದರೆ, ಪ್ರಜಾಪ್ರಭುತ್ವದ ಹಕ್ಕು ಮತ್ತು ಕರ್ತವ್ಯಗಳ ಅರಿವನ್ನು ಗಳಿಸುವುದು. ಲಕ್ಷಗಳ ಸಂಖ್ಯೆಯಲ್ಲಿ ಮತದಾರರಿರುವ ಒಂದು ಸಮೂಹ ಮತ ಬ್ಯಾಂಕ್ ಆಗಲಾರದು. ಅದು ಆಧುನಿಕ ಸೌಲಭ್ಯಗಳಿಗೆ ತೆರೆದುಕೊಂಡಿದ್ದರೆ ತನ್ನಲ್ಲಿ ಅಸಂಘಟಿತತೆಯನ್ನು ಒಳಗೊಂಡಿರುತ್ತದೆ. ಲಿಂಗಾಯಿತ, ಒಕ್ಕಲಿಗ ಮತ್ತು ಕುರುಬ ಜನಾಂಗದ ವಿದ್ಯಾವಂತರ ಗುಂಪುಗಳು ತಾವು ಪ್ರತ್ಯೇಕವಾಗಿ ಮಾತನಾಡಿಕೊಳ್ಳುವುದನ್ನು ಗಮನಿಸಿರಿ. ಲಿಂಗಾಯಿತ ಗುಂಪು ನಮ್ಮಲ್ಲಿ ಒಕ್ಕಲಿಗರಂತೆ ಒಗ್ಗಟ್ಟು ಇಲ್ಲ ಎನ್ನುತ್ತದೆ. ಒಕ್ಕಲಿಗರು ವೀರಶೈವರಂತೆ ನಮ್ಮಲ್ಲಿ ಒಗ್ಗಟ್ಟು ಇಲ್ಲ ಎನ್ನುತ್ತದೆ. ಹೀಗೆ ಕುರುಬರ ಗುಂಪೂ ಹೇಳುತ್ತದೆ. ಇವರ ಈ ಒಗ್ಗಟ್ಟಿನ ವಾದ ಅವಕಾಶವಾದವೆ ಹೊರತು ಅಭಿವೃದ್ದಿ ಉದ್ದೇಶಿತ ಅಲ್ಲ. ಆ ಒಗ್ಗಟ್ಟು ಆಕ್ರಮಣಶೀಲವಾಗಿರುತ್ತದೆ. ಅಲೆಮಾರಿಗಳು ಮತದಾರರಾಗುವುದೆಂದರೆ ತಮ್ಮ ಅಭಿವೃದ್ಧಿಗೆ ಮಾರ್ಗವನ್ನು ಕಂಡುಕೊಳ್ಳುವುದು ಎಂದಾಗುತ್ತದೆಯೆ ಹೊರತು ಆಕ್ರಮಣ ಅಥವಾ ಕೇಂದ್ರೀಯ ಶಕ್ತಿಯ ಅಪಹರಣ ಎಂದಾಗುವುದಿಲ್ಲ. ಅಲೆಮಾರಿಗಳು ತಮ್ಮ ಜನಗಳ ಒಳಗೆ ಕೆಲಸ ಮಾಡಿ ಇಂಥ ಒಂದು ಶಕ್ತಿ ಸಂಚಯನ ಮಾಡಿಕೊಳ್ಳಬೇಕು. ಆದರೆ ಬೇಡಿ ತಿನ್ನುವವರೂ ಮತ್ತು ಮಧ್ಯಪಾನಿ ವ್ಯಸನಿಗಳೂ ಆದ ಇವರು ಚುನಾವಣೆಯ ಒಂದು ದಿನಕ್ಕೆ ತಮ್ಮನ್ನು ಮಾರಿಕೊಂಡು ಮೂರನೆಯ ದಿನ ಬಿಸಾಕಲ್ಪಡುತ್ತಾರೆ ಎಂದು ಹೇಳಲಾಗುತ್ತಿದೆ.

೩. ಪಾಲುದಾರರಾಗುವುದೆಂದರೆ ದೇಶದ ಸಂಪತ್ತಿನ ಒಡೆತನದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವುದು ಎಂದಾಗುತ್ತದೆ. ಯಾರು ಯಾರು ಯಾವ ಥರದ ಆಸ್ತಿಯ ಒಡೆತನದಲ್ಲಿದ್ದಾರೆ. ಯಾವ ಆಸ್ತಿ ಚಲಿಸುವುದಾಗಿದೆ ಮತ್ತು ಯಾವುದು ಸ್ಥಿರ ಆಸ್ತಿ ಆಗಿದೆ ಎಂಬುದನ್ನು ತಿಳಿಯಬೇಕು. ತಾವು ಅಭಿವೃದ್ಧಿಯ ಕಡೆಗೆ ಹೊರಟರೆ ಸಮಕಾಲೀನವಾಗಿ ತಾವು ಯಾವ ಆಸ್ತಿಯ ಹಕ್ಕನ್ನು ಪ್ರತಿಪಾದಿಸಬೇಕು ಎಂದು ಸ್ಪಷ್ಟ ಮಾಡಿಕೊಳ್ಳಬೇಕು. ಅಪಾರ ಹೊರಬೇಕೆಂದು ಹೊರಟು ಅರ್ಕಿಲಸ್ ಥರ ಮತ್ತೆ ಇದ್ದ ಕಡೆಯೇ ಇರುವಂತಾಗಬಾರದು.

ಸಾಂಸ್ಕೃತಿಕವಾಗಿಯೂ ಆರ್ಥಿಕವಾಗಿಯೂ ಅಲೆಮಾರಿ ಜನಾಂಗ “ಓಡುವ ಕಲ್ಲಿಗೆ ತೂಕ ಇರುವುದಿಲ್ಲಿ” (Rolling Stone gatheri’s no mass) ಎಂಬಂತೆ ಇದ್ದಾರೆ. ಈಗ ಅವರಲ್ಲಿ ತಮ್ಮದೆಂಬ ಸಂಸ್ಕೃತಿಯೂ, ಆರ್ಥಿಕ ಶಕ್ತಿಯೂ ಇಲ್ಲ. ಸದ್ಯಕ್ಕೆ ಕಾಣುವಂತೆ ಅವರ ಕೈಗೆ ದುತ್ತನೆ ಸಿಕ್ಕಬಹುದಾದ ಯಾವ ಆಸ್ತಿ, ಸಂಪತ್ತು ಮತ್ತು ಅಧಿಕಾರ ಇಲ್ಲ. ಈ ಎಲ್ಲವೂ ಸ್ವಯಂ ಶ್ರಮ ಮತ್ತು ಹೋರಾಟದಿಂದ ಪಡೆಯಬಹುದಾದವುಗಳಾಗಿವೆ. ಇಂಥ ಸಂದರ್ಭದಲ್ಲಿ ಈ ಅಲೆಮಾರಿಗಳ:

೧. ಸಾಂಸ್ಕೃತಿಕ ನಿಲುವು
೨. ಆರ್ಥಿಕ ನಿಲುವು ಏನಾಗಿರಬೇಕು?

ನನಗೆ ಅನಿಸುವ ಹಾಗೆ ಮೊದಲು ಇವರು ಸಾಂಸ್ಕೃತಿಕವಾಗಿ ತಮ್ಮನ್ನು ಸ್ಪಷ್ಟಪಡಿಸಿ ಕೊಳ್ಳಬೇಕು. ಅದೆಂದರೆ ತಮ್ಮೊಳಗೆ ವ್ಯಕ್ತಿವ (Personality) ಬೆಳೆಸಿಕೊಳ್ಳಬೇಕು. ತಾವು ಹುಚ್ಚರಲ್ಲ, ನೀಚರಲ್ಲ, ಭಿಕಾರಿಗಳಲ್ಲ, ಭಿಕ್ಷುಕರಲ್ಲ, ಸೋಂಬೇರಿಗಳಲ್ಲ, ಕುಡುಕರಲ್ಲ ಮತ್ತು ಅಮುಖ್ಯರಲ್ಲ ಎನ್ನುವುದನ್ನು ತಮ್ಮ ನೆರೆಹೊರೆಗೆ ಸಾದರಪಡಿಸುವುದು. ಇಂಥ ಯುವಕರು ಅಲೆಮಾರಿ ಸಮುದಾಯದೊಳಗೆ ಬೆಳೆಯಬೇಕು. ಸುಲಭವಾಗಿ ಸಾಧ್ಯವಾಗುವ ರಾಜಕೀಯ ಪುಡಾರಿಗಿರಿಗೆ ಒಳಗಾಗಬಾರದು. ಅವರ ರಾಜಕೀಯ ನಿಲುವು ಸ್ಪಷ್ಟವಿರಬೇಕು. ಅವರ ಮತ ಮೌಲಿಕವಾದುದಾಗಬೇಕು. ಬಹುಸಂಖ್ಯಾತರಲ್ಲಿ ಕಾಣದ ತ್ಯಾಗ, ಹಟ ಮತ್ತು ಬದ್ಧತೆ ಎದ್ದು ಕಾಣಬೇಕು.

ಮಹಾಕವಿ ಚಿಂತಕ ಶ್ರೀ ಕುವೆಂಪು ಅವರಲ್ಲಿ ಒಂದು ಬೆಳಕು ಅವರಿಗಾಗಿ ಇದೆ. ಶಂಭೂಕ ಶೂದ್ರ, ಏಕಲವ್ಯ ಬೇಡ, ಮಂಥರೆ ಅನಾಥೆ, ಜಲಗಾರ ಒಬ್ಬ ದಲಿತ ಇವರೆಲ್ಲ ತಳವರ್ಗದ ಸಾಂಪ್ರದಾಯಿಕ ಸೆರೆಮನೆಯಲ್ಲಿದ್ದ ಜನಪದರು. ಇವರನ್ನು ಶ್ರೀ ಕುವೆಂಪು ತಮ್ಮ ಕಾರ್ಯಗಳಲ್ಲಿ ಏನು ಮಾಡಿದರು? ತಿರಸ್ಕೃತರ ಪಟ್ಟಿಯಲ್ಲಿದ್ದ ಅವರನ್ನು ಪುರಸ್ಕೃತರ ಪಟ್ಟಿಗೆ, ಸ್ಥಾನಕ್ಕೆ ತಂದು ನಿಲ್ಲಿಸಿದರು. ಈ ಪ್ರತಿಯೊಬ್ಬನೂ ಆಧುನಿಕ ತತ್ವಜ್ಞಾನಿಯಾದನು. ಬೇರೆಯವರು ಗುರುತಿಸುವ ಮತ್ತು ಗೌರವಿಸುವ ವ್ಯಕ್ತಿತ್ವವನ್ನು ಪಡೆದುಕೊಂಡರು.

ಇಲ್ಲಿ ಒಬ್ಬ ಅಲೆಮಾರಿಗೂ ಮತ್ತು ಒಬ್ಬ ಜಾನಪದ ವಿದ್ವಾಂಸನಿಗೂ ಸ್ಪಷ್ಟವಾದ ಮಾರ್ಗದರ್ಶನವಿದೆ. ಅಲೆಮಾರಿ ಒಂದು ಸಾಂಪ್ರದಾಯಿಕ ಜನಪದ. ಅದು ಹಿಂದುಳಿದೆ. ಆ ಹಿಂದುಳಿದಿರುವಿಕೆ ಯಾರಿಗೂ ಬಂಡವಾಳವಾಗಕೂಡದು. ಆದ್ದರಿಂದ ಅಲೆಮಾರಿ ವ್ಯಕ್ತಿತ್ವವನ್ನು ಪಡೆದುಕೊಳ್ಳಬೇಕು. ಎಂದರೆ, ಅವನಲ್ಲೂ ನಾಯಕತ್ವದ ಗುಣ ಬರಬೇಕು. ಆ ನಾಯಕತ್ವ ಪುರಾಣದ ನಾಯಕತ್ವದ ಥರ ಹೇಳಿಕೊಂಡು ಕೊಂಡಾಡುವುದು ಅಲ್ಲ. ಈಗ ಬದುಕುವ ಜನರ ಮಧ್ಯೆ ಮಾರ್ಗದರ್ಶಕವಾಗಬಲ್ಲ ನಾಯಕತ್ವ.

ಜಾನಪದ ವಿದ್ವಾಂಸನಿಗೆ ಶ್ರೀ ಕುವೆಂಪು ಅವರಿಂದ ಗಟ್ಟಿಯಾದ ಮಾರ್ಗದರ್ಶನವಿದೆ. ಜನಪದ ಸಾಹಿತ್ಯದ ಹಿರಿಮೆ ಮತ್ತು ಗರಿಮೆಯನ್ನು ಕುರಿತು ಬಿ.ಎಂ.ಶ್ರೀ, ಬೇಂದ್ರೆ ಮಾಸಿ, ಇವರು ಕೊಂಡಾಡುತ್ತಾರೆ. ಜನಪದ ಸಾಹಿತ್ಯವನ್ನು ಕೈ ನೀಡಿ ಕರೆಯುತ್ತಾರೆ. ಮೈ ಒಡ್ಡಿ ಧರಿಸಿಕೊಳ್ಳುತ್ತಾರೆ. ಅದ ಕುವೆಂಪು ಸೋಬಾನೆ ಹಾಡುತ್ತಾ ಕೂರಬೇಡಿ ಎನ್ನುತ್ತಾರೆ. ಎಂದರೆ ಕುವೆಂಪು ಜನಪದ ಸಾಹಿತ್ಯ ಮತ್ತು ಜಾನಪದದ ವಿರೋಧಿಗಳೆ? ಅಲ್ಲ. ಬಿ.ಎಂ.ಶ್ರೀ. ಮತ್ತು ಬೇಂದ್ರೆಯವರು ಜಾನಪದದ ವೈದಿಕ ಭಾಷೆ (Body Language) ಬಗ್ಗೆ ಮಾತನಾಡುತ್ತಿದ್ದರೆ ಕುವೆಂಪು ಜಾನಪದದ ವಸ್ತು ಭಾಷೆ (Content Language) ಬಗ್ಗೆ ಮಾತನಾಡುತ್ತಾರೆ. ಹೇಗೆ ಎಂದಿರ? ಅವರು ಶಂಬೂಕ, ಏಕಲವ್ಯ, ಮಂಥರೆ, ಜಲಗಾರಲ್ಲಿ ಸಾಂಸ್ಕೃತಿಕ ವ್ಯಕ್ತಿತ್ವನ್ನು ಏರಿಸಿ ಬೇರೆಯವರಿಗೆ ಹೇಗೆ ಸಮಾನ ಎಂದು ಹೇಳಿದರೂ ಆ ವ್ಯಕ್ತಿತ್ವಗಳು ಹುಟ್ಟಿ ಬೆಳೆದ ಜನಪದಗಳೂ ಸಮಕಾಲೀನ ವಸ್ತುವನ್ನು ಸ್ವೀಕರಿಸಿ, ಅಭಿವೃದ್ಧಿ ಹೊಂದಿ ಈ ಹೊತ್ತಿನ ಜನಪದಗಳಾಗಲಿ ಹಾಗೂ ಈ ಹೊತ್ತಿನ ಜಾನಪದವನ್ನು ಸೃಷ್ಟಿಸಲಿ ಎಂಬುದಾಗಿದೆ. ಸಾಮಗ್ರಿ ಆಧಾರಿತ ಜಾನಪದ ಚಿಂತಕನಿಗೂ ಸೃಜನಶೀಲ ಜಾನಪದ ವಿದ್ವಾಂಸನೂ ಹೇಗೆ ಭಿನ್ನ ಎಂಬುದಕ್ಕೆ ಸ್ಪಷ್ಟ ನಿರ್ದೇಶನ ಇಲ್ಲಿದೆ. ನಮ್ಮ ಜಡ ಜಾನಪದ ಚಿಂತಕರು ಪುರಾತನ ಜನರ ಪರದೇಶವೆಂಬ ಕ್ಷೇತ್ರದಿಂದ ಜಾನಪದ ಕ್ಷೇತ್ರಕಾರ್ಯವನ್ನು ಕುವೆಂಪು, ತೇಜಸ್ವಿ ದೇವನೂರು… ವರೆಗೆ ವಿಸ್ತರಿಸಿಕೊಳ್ಳದಿದ್ದರೆ ಅವರ ಸಾವು ಸಮೀಪದಲ್ಲೇ ಇದೆ ಎಂದು ತಿಳಿದುಕೊಳ್ಳಬೇಕು.

. ಆರ್ಥಿಕ ನಿಲುವು

ಹಾಗಿದ್ದಲ್ಲಿ ಅಲೆಮಾರಿಳ ಆರ್ಥಿಕ ನಿಲುವು ಯಾವುದಾಗಿರಬೇಕು? ಖಂಡಿತ ಈ ಬಗ್ಗೆ ನಿರ್ಣಾಯಕವಾದ ನಿಲುವೊಂದನ್ನು ನಾನು ಹೇಳಲಾರೆ. ನನಗಿರುವ ಕೆಲವು ಅನಿಸಿಕೆಗಳನ್ನಷ್ಟೆ ಹಂಚಿಕೊಳ್ಳಬಲ್ಲೆ. ನಮ್ಮ ಯಾವುದೇ ಆರ್ಥಿಕ ಚಟುವಟಿಕೆ ಉತ್ಪತ್ತಿ ಮತ್ತು ಉಳಿತಾಯವನ್ನು ಅವಲಂಬಿಸಿದೆ. ಅಲೆಮಾರಿಗಳಲ್ಲಿ ಉತ್ಪತ್ತಿ ಎಂಬುದು ಇಲ್ಲ. ಬೇರೆಯವರ ಉತ್ಪತ್ತಿಯನ್ನು ಭಿಷೆ ಬೇಡೆವ ಮೂಲಕ ಹಂಚಿಕೊಳ್ಳುತ್ತಾರೆ. ಕೆಲವು ಅಲೆಮಾರಿಗಳು ಭಿಕ್ಷೆ ಸಿಗದಿದ್ದಾಗ ಮೀನು ಬೇಟೆ ಮಾಡುತ್ತಾರೆ. ಶಾಸ್ತ್ರ-ಶಕುನ ಹೇಳಿ ಪಡೆಯುವ ಆದಾಯ ತುಂಬಾ ನಗಣ್ಯವಾದುದು. ಸಾಂಸ್ಕೃತಿಕವಾಗಿ ಮೇಲುಗಾರಿಕೆಯನ್ನು ಮರೆಯುವ ಪುರೋಹಿತರು ಶಾಸ್ತ್ರ ಶಕುನ ಹೇಳುವ ಮೂಲಕ ದಾನದ ಹೆಸರಿನಲ್ಲಿ ಭಿಕ್ಷೆ ಪಡೆಯುವ ಮೂಲಕ, ಪೂಜೆ ಪುನಸ್ಕಾರಗಳಿಗೆ ಕಾಣಿಕೆ ಪಡೆಯುವ ಮೂಲಕ ಒಳ್ಳೆಯ ಜೀವನವನ್ನೇ ಸಾಗಿಸುತ್ತ ಬರುತ್ತಿದ್ದಾರೆ. ಅಲೆಮಾರಿಗಳದು ಈ ರೀತಿ ಸಾಂಸ್ಕೃತಿಕವಾಗಿ ನಿರ್ವಚಿಸದ ಭಿಕ್ಷೆ ಮತ್ತು ಬೇಡಿಕೆಯಾಗಿದೆ. ಇವರು ನಡೆಸಿಕೊಡುವ ಆಚರಣೆಯನ್ನು ಜನ ಗಂಭೀರವಾಗಿ ತೆಗೆದುಕೊಂಡಿಲ್ಲ. ಬುಡುಬುಡಿಕೆ, ಕುರುಮಾಮ ಮತ್ತು ಕೊರವಂಜಿಗಳ ಶಾಸ್ತ್ರ ಎಂದರೆ ಬೀದಿ ಶಾಸ್ತ್ರ ಎಂದು ತಿಳಿದುಕೊಂಡಿದ್ದಾರೆ. ಒಳ್ಳೆಯ ವೇಷ ಮತ್ತು ಅಭಿನಯ ನೀಡಿದರೂ ವೇಷಗಾರರ ಬಗ್ಗೆ ಅಂಥ ಪವಾಡ ಇಲ್ಲ. ಅವರಿಗೆ ಕೊಡುವ ಸಂಭಾವನೆಯೂ ಕಡಿಮೆ.

ಅಲೆಮಾರಿಗಳಲ್ಲಿ ಈಗ ಕೆಲವು ಕೂಲಿಗಳಾಗಿ ಕೆಲಸ ಮಾಡತೊಡಗಿದ್ದಾರೆ. ದಕ್ಷಿಣ ಕರ್ನಾಟಕದ ಬುಡುಬುಡಿಕೆಯವರು ವ್ಯಾಪಾರದಲ್ಲಿ ಆಸಕ್ತರಾಗಿದ್ದಾರೆ. ಇನ್ನು ಕೆಲವು ಆದಿವಾಸಿಗಳು, ಕೃಷಿಯಲ್ಲಿ ತೊಡಗಿದ್ದಾರೆ. ಇನ್ನುಳಿದವರು ತಮ್ಮ ಆಸಕ್ತಿ ಮತ್ತು ನೈಪುಣ್ಯಕ್ಕೆ ಹೊಂದುವ ಬೇರೆ ಬೇರೆ ಕೆಲಸಗಳನ್ನು ಹಿಡಿಯುವುದು ಅಗತ್ಯವಿದೆ. ಬಹುತೇಕ ಅಲೆಮಾರಿಗಳಿಗೆ ಬೇಟೆ ಕೆಲೆ ಗೊತ್ತಿದೆ. ಪ್ರಾಣಿಗಳ ಜೀವನ ವಿವರಗಳು ಗೊತ್ತಿವೆ. ಆದ್ದರಿಂದ ನನ್ನಂಥವನಿಗೆ ಈ ಜನವರ್ಗ ಪ್ರಾಣಿ ಸಾಕಣೆಯನ್ನು ಉದ್ಯಮವನ್ನಾಗಿ ಮಾಡಿಕೊಳ್ಳಬಹುದು ಎನಿಸುತ್ತದೆ. ಮೀನು, ಕೋಳಿ ಮತ್ತು ಹಸುಗಳನ್ನು ಸಾಕುವುದು ಸದ್ಯಕ್ಕೆ ಅನುಕೂಲಕರ.

ಯಾವುದೇ ಉದ್ಯಮಕ್ಕೆ ಮೂಲ ಬಂಡವಾಳ ಮುಖ್ಯ. ಈ ಬಂಡವಾಳ ಸಮುದಾಯದ ಒಳಗಿನಿಂದ ಸೃಷ್ಟಿಯಾಗಬೇಕು. ಹಾಗೆಯೇ ಪೋಷಕ ಬಂಡವಾಳ ಸರ್ಕಾರ ಮತ್ತು ಸಹಕಾರ ಬ್ಯಾಂಕುಗಳಿಂದ ಬರಬೇಕಾಗುತ್ತದೆ. ಸುಮಾರು ತೊಂಬತ್ತು ಶತ ಅಲೆಮಾರಿಗಳು ಮದ್ಯಪಾನಕ್ಕಾಗಿ ೩೦ ರಿಂದ ೬೦ ಶತದವರೆಗೆ ಖರ್ಚು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈ ಖರ್ಚಿನಲ್ಲಿ ಅರ್ಧಭಾಗಕ್ಕಿಂತ ಹೆಚ್ಚು ಉಳಿತಾಯವಾಗಬೇಕಿದೆ. ಅಂತರ್ಗತವಾಗಿ ಸಂಘಟಿತವಾಗದಿದ್ದರೆ ಹೊರಗಿನ ಯಾವುದೇ ಸಹಕಾರ ನಿರರ್ಥಕವಾಗುತ್ತದೆ. ಅಲೆಮಾರಿಗಳು ಸ್ವತಃ ಒಂದು ಸಂಕಷ್ಟ ಸೂತ್ರಕ್ಕೆ ಒಳಪಡಬೇಕಾದ ಅಗತ್ಯವಿದೆ. ಒಂದು ಕಡೆ ನೆಲೆ ನಿಂತು ಉತ್ಪತ್ತಿಯಲ್ಲಿ ತೊಡಗುತ್ತೇವೆ ಎಂದಾಗ ಸಹಕಾರ ಸಾಧ್ಯವಾದ ಮಟ್ಟಿಗೆ ಸಿಗುತ್ತವೆ.

* * *