ಮಾನವ ಸಂಬಂಧಿ ಲೋಕದೃಷ್ಟಿ

‘World View’ ಎಂಬ ಇಂಗ್ಲಿಷ್ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ಲೋಕದೃಷ್ಟಿ ಎಂದು ಬಳಸಲಾಗುತ್ತದೆ. ಇಂಗ್ಲಿಷಿನ ಪದವನ್ನು ಮಾನವಶಾಸ್ತ್ರದಲ್ಲಿ ಹಾಗೂ ಜಾನಪದಗಳಲ್ಲಿ ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಗ್ರಹಿಸಲಾಗಿದೆ. ಸ್ಯಾಂಡರ್ ಎರ್ಡೆಸ್ ಎಂಬ ವಿದ್ವಾಂಸ ಲೋಕದೃಷ್ಟಿಯನ್ನು `World Conception’ (ವಿಶ್ವ ಪರಿಕಲ್ಪನೆ) ಎಂದು ಬಳಸುತ್ತಾನೆ.

[1] ಆಲನ್ ಡಂಡಸ್ ‘World View’ (ಲೋಕದೃಷ್ಟಿ) ಎಂದು ಹೇಳುತ್ತಾನೆ.[2] ಕನ್ನಡದಲ್ಲಿ ವಿಶ್ವಪರಿಕಲ್ಪನೆ ಎಂದ ಪದಕ್ಕಿಂತ ವಿಶ್ವದೃಷ್ಟಿ ಎಂಬ ಪದ ಸೂಕ್ತವಾಗಿ ಹೊಂದುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಜನಪದರು ಲೋಕವನ್ನು ಗ್ರಹಿಸಿದ ರೀತಿ ‘ಲೋಕದೃಷ್ಟಿ’ ಎನಿಸಿಕೊಳ್ಳುತ್ತದೆ.

ಮಾನವಶಾಸ್ತ್ರಜ್ಞನಾದ ಮಲಿನೋಸ್ಕಿ ‘ಪ್ರತಿಯೊಂದು ಮಾನವ ಸಂಸ್ಕೃತಿಯೂ ತನ್ನ ಸದಸ್ಯರಿಗೆ ಲೋಕದ ಬಗೆಗೆ ಒಂದು ನಿರ್ದಿಷ್ಟವಾದ ದರ್ಶನವನ್ನು ನೀಡುತ್ತದೆ’ ಎನ್ನುತ್ತಾನೆ. (Malinowski Bronislaw 1929, The Sexgal Life of Savages in North Western Melanesia) ರಾಬರ್ಟ್‌ರೆಡ್‌ಫೀಲ್ಡ್ ಎಂಬ ವಿದ್ವಾಂಸ ‘ಲೋಕದ ಶೀಲ ಸ್ವಭಾವದ ಕುರಿತಾದ ಜನರ ನೋಟವೇ ಲೋಕದೃಷ್ಟಿ’ ಎನ್ನುತ್ತಾನೆ. (ಇದೇ ರೀತಿ ಕ್ಲುಕೋಮ್, ಮೈಕೆಲ್ ಕನಿಕ ಮುಂತಾದವರೂ ಲೋಕದೃಷ್ಟಿಯ ಬಗ್ಗೆ ಚರ್ಚಿಸಿದ್ದಾರೆ) ಲೋಕದೃಷ್ಟಿ ಎಂದರೆ ‘ಜನರು ಪ್ರಕರತಿಯ ಬಗೆಗೆ, ತಮ್ಮ ಸ್ವಂತದ ಬಗೆಗೆ ಮತ್ತು ಸಮಾಜದ ಬಗೆಗೆ ಪ್ರಕಟಿಸಿದ ನೈಜ ಮತ್ತು ಚಿತ್ರಗಳು’ ಎಂದು ಗರ್ಟ್ಸ್ ಎಂಬಾತ ಅಭಿಪ್ರಾಯ ಪಡುತ್ತಾನೆ.[3]

ರೆಡ್‌ಫೀಲ್ಡ್ ಮತ್ತು ಗರ್ಟ್ ಅವರ ಹೇಳಿಕೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ವಿಷಯವನ್ನು ಪ್ರತಿಪಾದಿಸಲು ಯತ್ನಿಸಲಾಗಿದೆ.

ಒಂದು ನಿರ್ದಿಷ್ಟ ಜನಸಮೂಹವು ಆಹಾರಕ್ಕಾಗಿ ಮತ್ತು ಜೀವನಕ್ಕಾಗಿ ಒಂದು ಸ್ಥಳದಲ್ಲಿ ನಿರಂತರವಾಗಿ ನೆಲೆಯೂರದೆ ನಿಯತವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವಿಕೆಯನ್ನು ‘ಅಲೆಮಾರಿತನ’ ಎನ್ನಲಾಗಿದೆ. ಅಲೆಮಾರಿಗಳಲ್ಲಿ ಸಾಮಾನ್ಯವಾಗಿ ಮೂರು ರೀತಿಗಳಿವೆ.

೧. ಬೇಟೆಗಾರರು ಮತ್ತು ಆಹಾರ ಸಂಗ್ರಾಹಕರು (Nomadic Hunters and Gatherers)

೨. ಪಶುಸಂಗೋಪನಾ ಅಲೆಮಾರಿಗಳು (Pastoral nomads) ಮತ್ತು

೩. ಕಲಾಯಿ ಕೆಲಸಗಾರರು ಅಥವಾ ವಣಿಕರು (Tinker Ortrader Nomads)

ಬೇಟೆಯಾಡುವ ಹಾಗೂ ಆಹಾರ ಸಂಗ್ರಹಿಸುವ ಅಲೆಮಾರಿಗಳು ಸಣ್ಣ ಸಣ್ಣ ಗುಂಪುಗಳಿದ್ದು, ನೀರು, ಪ್ರಾಣಿ, ಗಿಡಮರಗಳ ಬಳಿ ಕೆಲಕಾಲ ವಾಸ್ತವ್ಯವನ್ನು ಹೂಡುತ್ತಾರೆ.

ಪಶುಸಂಗೋಪನಾ ಅಲೆಮಾರಿಗಳು ತಮ್ಮ ಪಶುಗಳ ಆಹಾರ ಹಾಗೂ ಅವುಗಳ ಉತ್ಪನ್ನಗಳಿಗೆ ಅವಕಾಶ ಸಿಗುವೆಡೆ ಬೀಡುಬಿಡುತ್ತಾರೆ.

ನೆಲೆನಿಂತ ಸಮಾಜದೊಂದಿಗೆ ಸಂಪರ್ಕವನ್ನುಳಿಸಿಕೊಂಡು ತಮ್ಮ ಚಲನಶೀಲ ಜೀವನ ನಡೆಸುವವರು ಕಲಾಯಿ ಕೆಲಸಗಾರರು ಅಥವಾ ಅಲೆಮಾರಿ ವಣಿಕರು. ಸಣ್ಣಪುಟ್ಟ ಸಾಮಗ್ರಿಗಳ ರಿಪೇರಿ, ತಯಾರಿ ಹಾಗೂ ಮಾರಾಟಗಳಲ್ಲಿಯೂ ಇವರು ನಿರತರಾಗುತ್ತಾರೆ. (Enlyclopaedia Britanica)

ಮಾನವ ಮೂಲತಃ ಆಹಾರಕ್ಕಾಗಿ ಅಲೆದಾಡುವ ಪ್ರವೃತ್ತಿಯನ್ನು ಹೊಂದಿದ್ದಾನೆ. ಒಂದೆಡೆ ನೆಲೆನಿಂತು ನಿರ್ದಿಷ್ಟ ಸ್ಥಳದಲ್ಲಿ ಕೃಷಿಯ ಮೂಲಕ, ಪಶುಸಂಗೋಪನೆಯ ಮೂಲಕ ಆಹಾರವನ್ನು ಮತ್ತು ಬದುಕನ್ನು ಕಂಡುಕೊಳ್ಳುವ ಮುಂಚೆ ರೂಢಿಯಲ್ಲಿದ್ದ ‘ಸ್ಥಳಾಂತರ ಬೇಸಾಯ ಪದ್ಧತಿ’ (Shift Cultivation) ಕೂಡ ಮಾನವನ ಅಲೆಮಾರಿ ಗುಣವನ್ನೇ ಹೇಳುತ್ತದೆ. ಸಾಮಾಜಿಕ ಒತ್ತಡದ ಪರಿಣಾಮವಾಗಿ, ಸಂಪತ್ತಿನ ಸಂಗ್ರಹಣೆಯ ಚಪಲದಿಂದಾಗಿ ಉಂಟಾದ ‘ಭೂ ಒಡೆತನ ಪ್ರಜ್ಞೆ’ ಮಾನವನನ್ನು ಒಂದೆಡೆ ನೆಲೆ ನಿಲ್ಲುವಂತೆ ಪ್ರಾಯಃ ಮಾಡಿದೆ. ಇವುಗಳ ಪರಿವೆಯೇ ಇಲ್ಲದ ಮೂಲ ಸ್ವಭಾವವನ್ನು ಇಂದಿಗೂ ಉಳಿಸಿಕೊಂಡ ಜನ ಸಮುದಾಯಗಳನ್ನು ಅಲ್ಲಲ್ಲಿ ಕಾಣಬಹುದು. ಇಪ್ಪತ್ತನೆಯ ಶತಮಾನದ ಆರ್ಥಿಕ ಮತ್ತು ರಾಜಕೀಯ ಕಾರಣಗಳಿಂದ ಅಲೆಮಾರಿ ಸಮುದಾಯಗಳ ಪ್ರಮಾಣ ಗಮನಾರ್ಹವಾಗಿ ಕುಸಿದಿದೆ. ಬದಲಾದ ಸಾಮಾಜಿಕ ಮತ್ತು ಶೈಕ್ಷಣಿಕ ಸಂಗತಿಗಳು ಕೂಡ ಈ ಬೆಳವಣಿಗೆಗೆ ಕಾರಣವಾಗಿವೆ. ಅಲೆಮಾರಿತನದ ಒಳಿತು ಕೆಡುಕುಗಳು ಏನೇ ಇದ್ದರೂ ಪ್ರಸ್ತುತ ವಿರಳವಾಗಿ ಕಂಡು ಬರುವ ಅಲೆಮಾರಿಗಳ ಮಾನವ ಸಂಬಂಧಿ ಲೋಕೃಷ್ಟಿಯನ್ನು ಒಂದು ಸಮುದಾಯದ ಸ್ಥೂಲ ಪರಿಶೀಲನೆಯ ಮೂಲಕ ದಾಖಲಿಸಲು ಇಲ್ಲಿ ಯತ್ನಿಸಿದೆ.

ಪ್ರಸ್ತುತ ವಿಷಯದ ವ್ಯಾಪ್ತಿ ಮತ್ತು ಹರಹು ತುಂಬ ವಿಶಾಲವಾದುದು. ಗಂಭೀರ ಸಂಶೋಧನೆಗೆ ವಸ್ತುವಾಗಬಹುದಾದುದು. ಆದರೆ ಒಂದು ವಿವರಣೆಯ ಮೂಲಕ ಈ ಬಗ್ಗೆ ಕ್ಷ-ಕಿರಣ ಬೀರುವ ಪ್ರಯತ್ನವನ್ನು ಮಾಡಬಹುದಾಗಿದೆ.

ಮೂಲತಃ ಅಗತ್ಯಕ್ಕಿಂತ ಹೆಚ್ಚು ಆಹಾರವನ್ನಾಗಲೀ, ಇತರೆ ಪದಾರ್ಥಗಳನ್ನಾಗಲೀ ಸಂಗ್ರಹಿಸಿದ ಅಲೆಮಾರಿಗಳ ಜೀವನ ಕ್ರಮ ಮತ್ತು ಶೈಲಿಗಳೇ ಉದಾರವಾದವು. ಇವು ಕ್ಲಿಷ್ಟಕರವೆನಿಸುವ ಲೋಕದೃಷ್ಟಿಗಳಾಗಿವೆ. ಇದನ್ನು ಆದರ್ಶದಲ್ಲಿಡದೆ ಆಚರಣೆಯಲ್ಲಿ ಬಳಸಿಕೊಂಡಿರುವ ಅಲೆಮಾರಿಗಳು, ನೆಲೆನಿಂತು ಸಂಗ್ರಹ ಕಾರ್ಯದಲ್ಲಿ ತೊಡಗಿ, ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ಸಮಾಜಕ್ಕೆ ಒಂದು ಬಗೆಯಲ್ಲಿ ಮಾದರಿಗಳು. ಮಾನವ ಕುಲಕ್ಕೆ ಆದರ್ಶ ಮಾದರಿಯನ್ನೊದಗಿಸುವ ಅಲೆಮಾರಿ ಪರಿಕಲ್ಪನೆ ಹಾಗೂ ಅದರ ಕಾರ್ಯ ಸ್ವರೂಪ ವಚನಕಾರರಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ‘ಅಲೆಮಾರಿ’ ಎಂಬುದು ಚಲನಶೀಲತೆಯನ್ನು ಪ್ರತಿನಿಧಿಸುವ ಪದ. ‘ಜಂಗಮ’ ಎಂಬುದು ಕೂಡ ಇದೇ ಅರ್ಥದ್ದು. ‘ಸ್ಥಾವರ’ ಜಡ್ಡುಗಟ್ಟಿದ ಪರಿಕಲ್ಪನೆ. ನೆಲೆನಿಂತು ಜಡ್ಡುಗಟ್ಟಿದ ಸಮಾಜಕ್ಕೆ ಚಲನಶೀಲ ಅಲೆಮಾರಿ ಸಮಾಜದ ಪರಿಕಲ್ಪನೆ ಚಾಲನಶಕ್ತಿಯನ್ನು ನೀಡಬಲ್ಲದು. ವಚನಕಾರ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ಆದರ್ಶ ಅಲೆಮಾರಿ ಮಾದರಿಗಳು. ಆಯ್ದಕ್ಕಿ ಮಾರಯ್ಯ ಎಂದಿಗಿಂತ ಹೆಚ್ಚು ಮೊತ್ತದ ಅಕ್ಕಿಯನ್ನು ಆಯ್ದು ತಂದಾಗ ಆತನ ಹೆಂಡತಿ ಲಕ್ಕಮ್ಮ’ ಎಂದಿನಂದವೆ ಸಾಕು, ಮತ್ತೆ ಕೊಂಡುಹೋಗಿ ಅಲ್ಲಿಯೆ ಸುರಿ… ಈ ಸಕ್ಕಿಯ ಆಸೆ ನಿಮಗೇಕೆ? ಈಶ್ವರನೊಪ್ಪ’[4] ಎನ್ನುತ್ತಾಳೆ. ಅಂದಂದಿನ ಆಹಾರ-ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳುವುದು ಒಂದು ವಿಶಾಲ ವ್ಯಾಪ್ತಿಯ ಲೋಕದೃಷ್ಟಿ. ಬುದ್ಧನ ಅಪರಿಗ್ರಹ, ಗಾಂಧೀಜಿಯವರು ಹೇಳುವ ಅಗತ್ಯಕ್ಕಿಂತ ಹೆಚ್ಚಿನ ಸಂಗ್ರಹ ಕಳ್ಳತನ ಎಂಬ ಮಾತುಗಳು ಇಲ್ಲಿ ಗಮನಾರ್ಹ.

ಅಲೆಮಾರಿಗಳ ಬದುಕಿನ ಮೂಲ ಸ್ವರೂಪದಲ್ಲೇ ಈ ಬಗೆಯ ಲೋಕದೃಷ್ಟಿ ಇದ್ದರೆ, ಅವರ ಬದುಕಿನ ಕ್ರಮ, ಪರಿಸರ ಸಂಬಂಧಿಯಾದ ದೃಷ್ಟಿಯಲ್ಲೂ ಮಾನವಕುಲಕ್ಕೆ ಆದರ್ಶಪ್ರಾಯವಾದ ನೋಟಗಳಿವೆ. ಅಲೆಮಾರಿ ಸಮುದಾಯವಾದ ಬುಡಬುಡಕೆಯವರ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಗಮನಿಸಬಹುದು.

ಬುಡಬುಡಿಕೆಯವರು ಮರಾಠ ಮೂಲದ ಅಲೆಮಾರಿಗಳು. ಇವರ ಆರಾಧ್ಯ ದೈವ ಅಂಬಾ ಭವಾನಿ. ಹಾಲಕ್ಕಿಯ ನುಡಿಯುವ ಶಕುನದ ಮೂಲಕ ಭವಿಷ್ಯವನ್ನು ಹೇಳುತ್ತ ಆಹಾರ-ಬಟ್ಟೆಬರೆಗಳನ್ನು ಜನರಿಂದ ಪಡೆಯುವ ಒಂದು ಅಲೆಮಾರಿ ಸಮುದಾಯಿದೆಂದು ಥರ್ಸ್ಟನ್ ಹೇಳುತ್ತಾನೆ.[5] ಬುಡಬುಡಕೆಯವರು ತಮ್ಮ ಮೂಲದ ಬಗ್ಗೆ ಪುರಾಣವನ್ನು ಹೇಳುತ್ತಾರೆ. ತಮ್ಮ ಆರಾಧ್ಯ ದೈವವನ್ನು ಬುಡಬುಡಕೆಯವರು ಪ್ರಾರ್ಥಿಸಿದಾಗ ಕರುಣೆ ‘ತೋರಿದ ಆಕೆ ಶಿವನ ಢಕ್ಕೆಯನ್ನು ನೀಡಿ ಇದನ್ನು ಬಿಟ್ಟು ನಿನಗೆ ಬೇರೆ ದಾರಿಯಿಲ್ಲ. ಇದರ ಮೂಲಕ ಆಹಾರದ ಮಾರ್ಗವನ್ನು ಹುಡುಕು ನಿನಗೆ ಒಳ್ಳೆಯದಾಗುತ್ತದೆ’ ಅಂದಳು. ಅಂದಿನಿಂದ ಇದನ್ನಾಧರಿಸಿ ಅವರು ಬದುಕು ಸಾಗಿಸುತ್ತಿದ್ದಾರೆ.

ಬುಡಬುಡಿಕೆಯವರ ದೈನಂದಿನ ಜೀವನ ಬೆಳಗಿನ ಜಾವ ಆರಂಭವಾಗುತ್ತದೆ. ತಾವು ಉಳಿದುಕೊಂಡಿರುವ ಪ್ರದೇಶದ ಮನೆಗಳಿಗೆ ಹೋಗಿ ಢಕ್ಕೆ (ಬುಡಬುಡಕೆ) ನುಡಿಸುತ್ತ, ಮನೆಗಳ ಮುಂದೆ ನಿಂತು, “ಈ ಮನೆಗೆ ಲಕ್ಷ್ಮಿ ಬರುತ್ತಾಳೆ, ಮನೆ ಜನರನ್ನು ಹರಸುತ್ತಾಳೆ”, “ಈ ಮನೆಯಲ್ಲಿ ಸದ್ಯದಲ್ಲಿ ಕೆಡುಕು ಉಂಟಾಗುತ್ತದೆ. ತಾಯಿ ಅಂಬಾ ಭವಾನಿಯ ಕೃಪೆಯಿಂದ ನಿಮಗೆ ಒಳಿತಾಗುತ್ತದೆ” ಮುಂತಾದ ನುಡಿಗಳನ್ನಾಡಿ, ಆಹಾರ ಬಟ್ಟೆಗಳನ್ನು ಪಡೆಯುತ್ತಾರೆ.

ಹಾಲಕ್ಕಿಯ ಭಾಷೆಯನ್ನು ತಿಳಿದಿರುವುದಾಗಿ ಅವರು ಹೇಳುತ್ತಾರೆ. ಮೈಸೂರಿನ ಕ್ಯಾತಮಾರನಹಳ್ಳಿ, ಪಡುವಾರಹಳ್ಳಿ ಸುತ್ತಮುತ್ತ ಆಗಾಗ ಕಾಣಿಸಿಕೊಳ್ಳುವ ಬುಡಬುಡಕೆಯವರಲ್ಲಿ ಕೆಲವರು ಒಂದೆಡೆ ನೆಲೆಯೂ ಆಗಿದ್ದಾರೆ. ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಬುಡಬುಡಕೆ ಕೇರಿಯೂ ಇದೆ. ಇಲ್ಲಿನ ನೂರಾರು ಮನೆಗಳಲ್ಲಿರುವ ಬುಡಬುಡಕೆಯವರು ತಾವು ಗೊಂದಲಿ ಮರಾಠಿಗರು ಎನ್ನುತ್ತಾರೆ. ಬುಡಬುಡಕೆಯನ್ನು ಕೆಲವರು ಪೂಜೆಗೆ ಇಟ್ಟಿದ್ದಾರೆ. ಕೆಲವರು ತಮ್ಮ ಪೂರ್ವಜರು ಇದರಿಂದ ಜೀವನ ಸಾಗಿಸುತ್ತಿದ್ದರು ಎನ್ನುತ್ತಾರೆ. ಈಗ ಇವರ ವೃತ್ತಿ ಬದಲಾಗಿದೆ. ಬೇರೆ ಬೇರೆ ಕಸುಬುಗಳಲ್ಲಿ ಅವರಿದ್ದಾರೆ.

ಅಲೆಮಾರಿ ಬದುಕಿನ ಕ್ರಮದಲ್ಲೇ ಇರುವ ಕೆಲವರಲ್ಲಿ ಗಂಡು ಆಹಾರ-ಬಟ್ಟೆ ಸಂಗ್ರಹಣೆಗೆ ಹೊರ ಹೋದಾಗ, ಪುಳ್ಳೆ, ಸೌದೆ, ಹಳೇ ಕಾಗದ ಮುಂತಾದವರನ್ನು ಸಂಗ್ರಹಿಸಿದ ಮನೆಯ ಹೆಣ್ಣು ಅಡುಗೆ ತಯಾರಿಗೆ ಮುಂದಾಗುತ್ತಾಳೆ. ಅನ್ನ ಅಥವಾ ರಾಗಿಮುದ್ದೆ, ಸಾರು, ಅವರ ಸಾಮಾನ್ಯ ಆಹಾರ ಪದ್ಧತಿ.

ಬುಡಬುಡಿಕೆ ನುಡಿಸುತ್ತ ಭವಿಷ್ಯ ಹೇಳಿ ಆಹಾರಾದಿಗಳನ್ನು ಸಂಗ್ರಹಿಸುವಂತೆ ಪಾತ್ರೆ ಪಗಡೆಗಳನ್ನು ಮಾರುವ ಬುಡಬುಡಕೆಯವರೂ ಇದ್ದಾರೆ. ಬುಡಬುಡಿಕೆ ಮಹಿಳೆಯರ ಪ್ರಕಾರ ಅವರ ದೈನಂದಿನ ಜೀವನಕ್ಕೆ ಇದು ಸಾಕು.ಆದರೆ ಬುಡಬುಡಿಕಿ ಪುರುಷರು ಕುಡಿತದ ಚಟದಿಂದ ಜೀವನವನ್ನು ಕಷ್ಟಕರಗೊಳಿಸಿದ್ದಾರೆ. ಕೆಲವು ಸಂಗತಿಗಳಲ್ಲಿ ಮಹಿಳೆಯರೂ ಕುಡಿತದ ಚಟಕ್ಕೆ ಬಲಿಯಾಗಿ ತಮ್ಮ ಬದುಕನ್ನು ದುರ್ಭರಗೊಳಿಸಿ ಕೊಂಡಿದ್ದಾರೆ.

ಮರಾಠಿ ಮೂಲದ ಗೊಂದಲಿ ಮರಾಠ ಬುಡಬುಡಿಕಿಯವರಲ್ಲಿ ‘ಗೊಂದಲಿ’ (ಒಂದು ಬಗೆಯ ಪಂಜಿನ ನೃತ್ಯ) ನೃತ್ಯವಿದೆಯೆಂದು ಅಯ್ಯರ್ ಹೇಳಿದ್ದಾರೆ.[6] ಬೆಂಗಳೂರಿನ ಕರಗ ಧರ್ಮರಾಜ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ತರುವಾಯ ಹದಿನೈದು ದಿನಗಳ ಉತ್ಸವವನ್ನು ನಡೆಸಿ ಅಂಬಾ ಭವಾನಿಯನ್ನು ಅವರು ಆರಾಧಿಸುತ್ತಾರೆ. ಬುಡಬುಡಿಕೆ, ಹಾಲಕ್ಕಿಗಳನ್ನು ಪವಿತ್ರವೆಂದು ತಿಳಿಯುತ್ತಾರೆ.

ಬುಡಬುಡಿಕಿಯ ಮೂಲಕ ಕಲೆಯನ್ನು, ಹಾಲಕ್ಕಿಯ ಮೂಲಕ ಪರಿಸರವನ್ನು ಅವರು ಉಳಿಸಿಕೊಂಡು ಬಂದಿದ್ದಾರೆ. ಇವೆರಡು ಪವಿತ್ರವಾದವೆಂದು ತಿಳಿದು ಅವುಗಳ ಉಳಿವಿಗೆ ಶ್ರದ್ಧಾಪೂರ್ವಕವಾಗಿ ದುಡಿಯುತ್ತಾರೆ. ಹಾಲಕ್ಕಿಗಳ ಸಂತತಿ ಉಳಿಯುವಲ್ಲಿ ಬುಡಬುಡಕೆಯವರ ಭಾವನೆ-ನಂಬಿಕೆಗಳು ಕೆಲಸ ಮಾಡಿವೆ.

ಕಲೆ ಮತ್ತು ಪರಿಸರದ ಒಂದು ಭಾಗ ತಮ್ಮ ಬದುಕಿಗೆ ಅನಿವಾಯ್ವೆಂದು ತಿಳಿದು ಆ ನಂಬಿಕೆಯಲ್ಲಿ ಜೀವನ ಸಾಗಿಸುವ ಬುಡಬುಡಕೆಯವರ ದೃಷ್ಟಿ ಇಡೀ ಮಾನವಕುಲದ ಹಿತವನ್ನು ರಕ್ಷಿಸುವಲ್ಲಿ ಕೊಡುಗೆಯನ್ನು ನೀಡಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

* * *

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

 


[1] Sandor Erdesz, 1983. The World Conception of Lajos Ami Story Teller. (in Sacred narratives, Alan Dundes (ed.). London University of California Press.

[2] Alan Dundes, 1979, Analytical Essays on Folklore. The Hague, Mountans Publishess.

[3] Geertz Clifford, 1957, Ethos, World View and the Analysis of Sacred Symbols (In Every man – His Way. Reading in Cultural Anthropology, Alan Dundas (ed.) Englewood Cliffs, Prentice Hall.

[4] ವಚನ ಧರ್ಮಸಾರ.ಎಂ.ಆರ್.ಶ್ರೀ., ೧೯೭೧, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಪು. ೨೦೦೩.

[5] Thurston, Edgar, 1909, Custes and Tribes of South India, 7 Vols, Vol-I, P.393.

[6] Mysore Censes Report, 1930, Vol-III. P.249.