ಜಾನಪದ ಅಧ್ಯಯನ ಒಂದು ಜಾಗತಿಕ ಶಿಸ್ತಾಗಿ ರೂಪುಗೊಂಡ ಮೇಲೆ ಅದರ ವ್ಯಾಪ್ತಿ, ಉದ್ದೇಶ, ಗಾಂಭೀರ್ಯ ಮತ್ತು ಆಶಯಗಳು ವಿಸ್ತಾರಗೊಂಡಿವೆ. ೧೮೪೬ರಿಂದಲೇ ಈ ಕಾರ್ಯ ಆರಂಭವಾದರೂ ೨೦ನೆಯ ಶತಮಾನದ ಉತ್ತರಾರ್ಧದಿಂದ ಜಾನಪದ ಅಧ್ಯಯನಕ್ಕೆ ಹೆಚ್ಚಿನ ಶಾಸ್ತ್ರೀಯತೆ ಲಭ್ಯವಾಗಿದೆ. ರಿಚರ್ಡ್ ಎಂ. ಡಾರ್ಸನ್, ಸ್ಟಿತ್ ಥಾಮನ್ಸನ್, ಅಲನ್ ಡಂಡೆಸ್‌ರಂಥ ವಿದ್ವಾಂಸರ ಸತತ ಪ್ರಯತ್ನಗಳಿಂದಾಗಿ ಈ ಅಧ್ಯಯನ ವಿಭಾಗಕ್ಕೆ ಹೊಸ ಚೇತನ ಉಂಟಾಗಿದೆ.

ಆಧುನಿಕ ಜಾನಪದ ಅಧ್ಯಯನದ ಅತ್ಯಂತ ಮುಖ್ಯ ಲಕ್ಷಣವೆಂದರೆ ಅಂತರ್‌ಶಿಸ್ತೀಯ ದೃಷ್ಟಿಕೋನ. ಇದು ಕೇವಲ ಜಾನಪದಕ್ಕೆ ಮಾತ್ರ ಸೀಮಿತ ಎಂದು ಹೇಳಬೇಕಾಗಿಲ್ಲ. ಸಂಬಂಧಿ ಶಿಸ್ತುಗಳೆಂದು ಪರಿಗಣಿಸಬಹುದಾದ ಮಾನವಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ಸಾಹಿತ್ಯ ಮುಂತಾದವುಗಳ ನೆರವನ್ನಲ್ಲದೆ ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಸೌಂದರ್ಯಶಾಸ್ತ್ರ, ಗೃಹವಿಜ್ಞಾನ ಮುಂತಾದವುಗಳ ನೆರವನ್ನೂ ಜಾನಪದ ವಿಜ್ಞಾನ ಪಡೆದುಕೊಂಡಿದೆ. ಇದರಿಂದ ದೇಶೀ ಚಿಂತನೆಯಂಥ ಇತ್ತೀಚಿನ ಸೈದ್ಧಾಂತಿಕ ಚರ್ಚೆಗಳಲ್ಲೂ ಜಾನಪದ ಅನಿವಾರ್ಯವಾದ ಪಾತ್ರವನ್ನು ನಿರ್ವಹಿಸುವಂತಾಗಿದೆ.

ಈ ಹಿನ್ನೆಲೆಯಿಂದ ಜನಾಂಗಿಕ ಅಧ್ಯಯನ, ಬುಡಕಟ್ಟುಗಳ ಅಧ್ಯಯನ, ಅಲೆಮಾರಿಗಳ ಅಧ್ಯಯನ ಮುಂತಾದವು ಜಾನಪದ ಅಧ್ಯಯನದಲ್ಲೂ ಪ್ರಸ್ತುತವಾಗಿವೆ. ಸಮಕಾಲೀನ ಸಮಾಜದಲ್ಲಿ ಅಲೆಮಾರಿಗಳನ್ನು ಕುರಿತಂತೆ ಮಾಡುವ ಅಧ್ಯಯನ ಸಮಾಜಶಾಸ್ತ್ರ ಹಾಗೂ ಮಾನವಶಾಶ್ತ್ರಗಳಿಗೆ ಎಷ್ಟು ಪ್ರಸ್ತುತವೋ ಜಾನಪದ ಅಧ್ಯಯನದ ವಿಷಯದಲ್ಲೂ ಅಷ್ಟೇ ಪ್ರಸ್ತುತವೆಂದು ಹೇಳಬಹುದು.

ಸಾಂಸ್ಕೃತಿಕ ಸಮುದಾಯಗಳ ಅಧ್ಯಯನವನ್ನು ಹಲವು ದೃಷ್ಟಿಕೋನಗಳಿಂದ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಈ ಸಮುದಾಯಗಳಲ್ಲಿ ಕಾಲಕಾಲಕ್ಕೆ ಆಧುನಿಕ ಪರಿಣಾಮಗಳಿಂದಾಗಿ ಉಂಟಾಗುವ ಸ್ಥಿತ್ಯಂತರಗಳನ್ನು ಗಮನಿಸಿ ಅಧ್ಯಯನ ಮಾಡಬೇಕಾಗುತ್ತದೆ. ಪ್ರಪಂಚದ ಭೌಗೋಳಿಕ ಪರಿಸರಗಳ ಹಿನ್ನೆಲೆಯಲ್ಲಿ ಮಾನವನ ಅಸ್ತಿತ್ವದ ವಿಕಾಸವನ್ನು ಗಮನದಲ್ಲಿಟ್ಟುಕೊಂಡು ಸ್ಥೂಲವಾಗಿ ವಿಂಗಡನೆ ಮಾಡಿದಾಗ ನಾಲ್ಕು ರೀತಿಯ ಸಾಂಸ್ಕೃತಿಕ ಸಮುದಾಯಗಳನ್ನು ಗುರುತಿಸಬಹುದು. ೧. ಕಾಡುಗಳಲ್ಲಿ ವಾಸ ಮಾಡುವ ಜನ (ಕಾಡು ಕುರುಬರು, ಕಾಡುಗೊಲ್ಲರು, ಅಡವಿ ಚೆಂಚರು, ಬುಷ್‌ಮನ್ ಮುಂತಾದವರು) ೨. ಬೆಟ್ಟಗಳಲ್ಲಿ ವಾಸ ಮಾಡುವ ಜನ (ಬೆಟ್ಟ ಕುರುಬರು, ಕೊಂಡ ಮಾತು, ತೊದವರು, ಕೋಯರು ಮುಂತಾದವರು) ೩. ಅಲೆಮಾರಿಗಳು (ಲಂಬಾಣಿಗಳು, ಕೋಲೆ ಬಸವರು, ಕಾಡುಸಿದ್ಧರು, ದಾಸರು, ಬುಡುಬುಡಿಕೆಯವರು ಮುಂತಾದವರು) ೪. ಹಳ್ಳಿಯಲ್ಲಿ ಮತ್ತು ಹಳ್ಳಿಯ ಸುತ್ತಮುತ್ತ ನೆಲೆಸಿರುವ ಗ್ರಾಮೀಣ ಸಮಾಜದವರು (ಇವರಲ್ಲಿ ರೈತರು, ಅಂಬಿಗರು, ಬೇರೆ ಬೇರೆ ವೃತ್ತಿಗಳಿಗೆ ಸೇರಿದವರು ಮತ್ತು ಕೂಲಿಗಾರರು ಸೇರಿರುತ್ತಾರೆ.) ಈ ನಾಲ್ಕು ತರಹದ ಸಮುದಾಯಗಳಲ್ಲದೆ ನಾಗರಿಕ ಸಮಾಜದವರೂ ಇದ್ದಾರೆ. ಅವರನ್ನು ಜನಪದ ಸಮಾಜದಿಂದ ಹೊರಗೆ ನೋಡುವುದು ವಾಡಿಕೆಯಾಗಿದೆ.

ಈ ಸ್ಥೂಲ ವಿಭಾಗ ಖಚಿತವಾದುದೆಂದಾಗಲಿ, ಸ್ಥಿತ್ಯಂತರಗಳಿಗೆ ಅವಕಾಶವಿಲ್ಲದ ಸ್ಥಿರ ಸಮುದಾಯಗಳ ವರ್ಗೀಕರಣವೆಂದಾಗಲಿ ಭಾವಿಸುವ ಅಗತ್ಯವಿಲ್ಲ. ಬೆಟ್ಟ, ಕಾಡು, ಕಣಿವೆಗಳನ್ನು ಬೇರೆ ಬೇರೆಯಾಗಿ ನೋಡುವುದು ಕಷ್ಟ. ಬೆಟ್ಟವಿಲ್ಲದ ಕಾಡು ಇರುವಂತೆ ಕಾಡು ದಟ್ಟವಾಗಿಲ್ಲದ ಬೆಟ್ಟವೂ ಇರಬಹುದು. ಆದರೆ ವಾಸಸ್ಥಳದ ಭೌಗೋಳಿಕ ಪರಿಸರ ಅಗತ್ಯವಾಗಿ ಅಲ್ಲಿವಾಸ ಮಾಡುವ ಜನ ಸಮುದಾಯದ ಮೇಲೆ ಪ್ರಭಾವ ಬೀರುತ್ತದೆ. ಬೆಟ್ಟದ ಬುಡಕಟ್ಟುಗಳು ಇಳಿದು ಬಂದ ಕಾಡಿನಲ್ಲಿರುವುದು, ಕಾಡಿನ ಜನ ಸಮುದಾಯಗಳು ಊರಿಗೆ ಬಂದು ನೆಲೆಸುವುದು ಸರ್ವೇಸಾಮಾನ್ಯ. ಈ ಎಲ್ಲ ಜನಸಮುದಾಯಗಳೂ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ನಾಗರೀಕತೆ ಕಡೆ ತಮ್ಮ ಬೆಳವಣಿಗೆಯನ್ನು ಮುಂದುವರಿಸಿವೆ ಎಂಬುದು ನಿಜ.

ಈ ಸಾಮಾಜಿಕ ಸ್ಥಿತ್ಯಂತರಗಳಲ್ಲಿ ಅಲೆಮಾರಿಗಳನ್ನು ಗುರುತಿಸುವ ಮತ್ತು ಅಧ್ಯಯನ ಮಾಡುವ ಕಾರ್ಯ ನಡೆಯುತ್ತಿದೆ. ಅಲೆಮಾರಿಗಳೆಂಬ ಹೆಸರಿನಲ್ಲಿ ಪ್ರಪಂಚದಾದ್ಯಂತ ಕಾಣುವ ಜನರಲ್ಲಿ ಅನೇಕರು ಈಗ ಸಾಧ್ಯವಾದಷ್ಟು ಸ್ಥಿರವಾಸದ ಸ್ಥಿತಿಯನ್ನು ಪಡೆಯಲು ಹವಣಿಸುತ್ತಿದ್ದಾರೆ. ಆದರೂ ಜಿಪ್ಸಿಗಳು, ಲಂಬಾಣಿಗರು, ಭಿಕ್ಷುಕ ಗಾಯಕ ಕಲಾವಿದರು ಇನ್ನೂ ಅಲೆಮಾರಿಗಳಾಗಿಯೇ ಉಳಿದಿರುವುದು ಖೇದದ ಸಂಗತಿ. ಇವರಲ್ಲಿ ಕೆಲವರು ಪೂರ್ಣ ಅಲೆಮಾರಿಗಳಾದರೆ, ಕೆಲವರು ಅರೆ ಅಲೆಮಾರಿಗಳಾಗಿದ್ದಾರೆ. ಕೋಲೆ ಬಸವ ಕಲೆಯಂಥ ಪ್ರದರ್ಶನ ಕಲೆಗಳಿಂದಲೇ ಜೀವನ ನಡೆಸುವ ಕೆಲವರು ಯಾವುದಾದರೊಂದು ಊರನ್ನು ತಮ್ಮ ಸ್ಥಿರ ವಾಸ ಮಾಡಿಕೊಂಡಿದ್ದರೂ ವರ್ಷದ ಹೆಚ್ಚಿನ ಭಾಗವನ್ನು ಅಲೆಮಾರಿಗಳಾಗಿಯೇ ಕಳೆಯುತ್ತಾರೆ. ಹೀಗೆ ವೃತ್ತಿಯಿಂದಲೇ ಅಲೆಮಾರಿಗಳಾಗಿರುವವರು ಕೆಲವರಾದರೆ ನೆಲೆಯೂರಲು ಅವಕಾಶವೇ ಇಲ್ಲದೆ ಅಲೆಯುವುದೇ ಜೀವನವಾಗಿರುವವರು ಕೆಲವರು.

ಒಟ್ಟು ಸಮಾಜದ ಸ್ಥಿತಿಗತಿಗಳ ದೃಷ್ಟಿಯಿಂದ ನೋಡಿದಾಗ ಅಲೆಮಾರಿಗಳದು ಬಹಳ ದಯನೀಯ ಸ್ಥಿತಿ ಎಂಬುದು ನಿಜ. ಜೀವನವೇ ಒಂದು ಪ್ರವಾಸವೆಂದು ತಿಳಿದು ಸದಾ ಕಾಲ ಅನ್ವೇಷಣೆಯಲ್ಲೇ ಇರಬೇಕಾದ ಸ್ಥಿತಿ ಇವರದು. ನೆಲೆ ನಿಂತವರಿಗೆ ಜೀವನದಲ್ಲಿ ಒಂದು ಯೋಚನೆ, ಒಂದು ಯೋಜನೆ ಇರಲು ಸಾಧ್ಯ. ಬದುಕೇ ಒಂದು ಪ್ರಶ್ನೆಯಾಗಿದ್ದರೆ ಪರಿಹಾರದ ಹುಡಕಾಟಕ್ಕೇ ಶಕ್ತಿ ಯುಕ್ತಿಗಳು ಮೀಸಲಾಗಿಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಈನಿಟ್ಟಿನಿಂದ ಎಲ್ಲ ಜನ ಸಮುದಾಯಗಳಿಗಿಂತ ಒತ್ತಡದ ಮಡಿಲಲ್ಲೇ ಕಾಲ ಕಳೆಯಬೇಕಾದವರು ಅಲೆಮಾರಿಗಳು.

ಸಮಕಾಲೀನ ಸಮಾಜ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಯಾವುದೇ ಜನರ ಗುಂಪಿಗೆ ಅಥವಾ ಜೀವನದ ಸ್ತರಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಇಲ್ಲದಿರುವ ಪರಿಸ್ಥಿತಿ ಇಲ್ಲ. ಒಂದೊಂದು ತರಹದ ಜನಸಮುದಾಯ ಒಂದೊಂದು ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗಿದೆ. ಗುಡ್ಡಿಗಾಡಿನ ಬುಡಕಟ್ಟುಗಳ ವಿಷಯದಲ್ಲಿ ನೈಸರ್ಗಿಕ ಸಮಸ್ಯೆಗಳ ಜತೆಗೆ, ನಾಗರಿಕತೆಯ ಮತ್ತು ವ್ಯಾಪಾರೀಕರಣ ಫಲವಾಗಿ ಉಂಟಾಗಿರುವ ಪರಿಸರ ಮಾಲಿನ್ಯ, ಅರಣ್ಯ ನಾಶ, ಕಾಡುಗಳ್ಳರ ಹಾವಳಿ ಮುಂತಾದವು ಪ್ರಭಾವ ಬೀರುತ್ತವೆ.

ಅಲೆಮಾರಿಗಳದು ನಿರಂತರ ಪಯಣವಾದುದರಿಂದ ಪಯಣದ ವಿರಾಮದ ಸಮಸ್ಯೆ ಮತ್ತು ಪಯಣದ ಸಮಸ್ಯೆ ಎಂಬ ಎರಡನ್ನೂ ಎದುರಿಸಬೇಕಾಗಿದೆ. ಪ್ರಸ್ತುತ ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಅಲೆಮಾರಿಗಳು ತಾತ್ಕಾಲಿಕವಾಗಿ ನೆಲೆಯೂರಲು ಕೂಡ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಹಿಂದಿನ ಕಾಲದಲ್ಲಿ ಊರಿನ ಬಳಿ ಇರುವಷ್ಟು ಖಾಲಿ ಜಾಗಗಳು ಈಗ ಸಿಗುವುದಿಲ್ಲ. ಸಿಕ್ಕದರೂ ಹೆಚ್ಚು ಕಾಲ ಉಳಿಯಲು ಸಾಧ್ಯವಿಲ್ಲ. ಇದರಿಂದ ಅಲೆಮಾರಿಗಳುತಾತ್ಕಾಲಿಕವಾಗಿ ತಂಗಲು ಕೂಡ ಜಾಗ ಇಲ್ಲದಂತಾಗಿದೆ. ಭಿಕ್ಷುಕಗಾಯಕರು ಹಿಂದೆ ಯಾವುದೋ ದೇವಸ್ಥಾನದಲ್ಲೋ ಮನೆಯ ಜಗುಲಿಯ ಮೇಲೋ ಮಲಗಿ ಬೆಳಗ್ಗೆ ಎದ್ದು ಮತ್ತೆ ತಮ್ಮ ಚಟುವಟಿಕೆಯಲ್ಲಿ ತೊಡಗಬಹುದಾಗಿತ್ತು. ಆದರೆ ಈಗ ಇಂಥ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಬಡವರ ಹಿತರಕ್ಷಣೆ ಸರ್ಕಾರದ ಹೊಣೆಗಾರಿಕೆಯಾಗಿರುತ್ತದೆ. ಆದರೆ ಅದು ಗಗನ ಕುಸುಮವೆಂಬುದು ಗೊತ್ತೇ ಇದೆ. ಹಿಂದಿನಕಾಲದಲ್ಲಿ ಬಡವರ ಬಗ್ಗೆ ಅನುಕಂಪವಾದರೂ ಇರುತ್ತಿತ್ತು. ಈಗ ನಾಗರಿಕತೆಯ ಫಲದಿಂದ ಅನುಕಂಪದ ಅರ್ಥವೇ ಬದಲಾಗಿದೆ. ಈ ಕಾರಣದಿಂದ ಅಲೆಮಾರಿ ಬಡವರ ಬದುಕು ದುರ್ಭರವಾಗಿದೆ.

ಪಯಣ ಮೂಲದ ಜೀವನದ ವಿಷಯದಲ್ಲೂ ಉಂಟಾಗಿರುವ ಬದಲಾವಣೆಗಳಿಂದ ಸಮಕಾಲೀನ ಸಮಾಜದಲ್ಲಿ ಅಲೆಮಾರಿಗಳಿಗೆ ಸಮಸ್ಯೆಗಳು ಇನ್ನೂ ಜಾಸ್ತಿಯಾಗಿವೆ. ಪ್ರಯಾಣ ಮತ್ತು ಕಲೆಗಾರಿಕೆ ಇವರ ವಿಷಯದಲ್ಲಿ ಜೊತೆ ಜೊತೆಯಲ್ಲೇ ಇರುತ್ತವೆ. ಸಾಮಾಜಿಕ ಬದಲಾವಣೆಗಳಿಂದಾಗಿ ಜನಪದ ಕಲೆಗಳ ವಿಷಯದಲ್ಲಿ ನಾಗರಿಕರಲ್ಲಿ ಬೆಳೆಯುತ್ತಿರುವ ಅನಾಸಕ್ತಿಕಲಾವಿದರ ಸಮಸ್ಯೆಗಳನ್ನು ಹೆಚ್ಚಿಸಿದೆ. ಹಿಂದಿನ ಕಾಲದಲ್ಲಿ ಭಿಕ್ಷುಕ ಅಲೆಮಾರಿಗಳಾಗಿ ಜೀವನ ನಡೆಸುತ್ತಿದ್ದ ಕಲಾವಿದರಿಗೆ ಈಗ ಸಮಸ್ಯೆಗಳೇ ಹೆಚ್ಚಾಗಿವೆ. ಕಲೆಯನ್ನು ಬಿಟ್ಟುಬೇರೆ ಜೀವನ ವಿಧಾನವನ್ನು ಅನುಸರಿಸುವ ಅವಕಾಶಗಳಿಲ್ಲ. ಕಲೆಯ ಹೆಸರಿನಲ್ಲಿ ಜೀವನ ನಡೆಸುವ ಅವಕಾಶಗಳೂ ಕಡಿಮೆಯಾಗುತ್ತಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಈಗಿನ ಅಲೆಮಾರಿಗಳ ಜೀವನ ನೇತಾಡುತ್ತಿದೆ.

ಸಮಕಾಲೀನ ಸಮಾಜ ಉಂಟು ಮಾಡಿರುವ ಹೊಸ ಸಮಸ್ಯೆಗಳ ನಡುವೆಯೂ ಅಲೆಮಾರಿಗಳು ತಮ್ಮ ಕಾಲ ಮೇಲೆ ತಾವೇ ನಿಂತು,ಕಲೆಗಳನ್ನೂ ಕಾಪಾಡುವ ಹೊಣೆಗಾರಿಕೆಯನ್ನು ಹೊತ್ತಿರುವುದು ಸೋಜಿಗದ ಸಂಗತಿ. ಕರಕುಶಲ ಕಲೆಗಳು, ಹಾಡುಗಾರಿಕೆ, ಕಥನ ಕಲೆ, ಪ್ರದರ್ಶನ ಕಲೆಗಳು ಮುಂತಾದ ಕ್ಷೇತ್ರಗಳಲ್ಲಿ ಅಲೆಮಾರಿಗಳು ತಮ್ಮ ಅನುಭವವನ್ನು ತಲೆ ತಲೆಮಾರುಗಳ ಸಾಂಸ್ಕೃತಿಕ ಸಂಪತ್ತನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಇದನ್ನು ಮುಂದುವರಿಸುವ ಜವಾಬ್ದಾರಿ ಸಮಾಜದ್ದು ಮತ್ತು ಸರ್ಕಾರದ್ದು, ಇದರ ಜೊತೆಗೆ ಅಲೆಮಾರಿಗಳ ಜೀವನಮಟ್ಟವನ್ನು ಹೆಚ್ಚಿಸುವ ಮತ್ತು ಭದ್ರತೆಯನ್ನು ಕಲ್ಪಿಸುವ ಹೊಣೆಗಾರಿಕೆಯು ವಹಿಸಬೇಕಾಗಿದೆ. ಸ್ಥಿರ ವಾಸವಿರುವ ಜನ ಸಮುದಾಯಗಳ ವಿಷಯದಲ್ಲಿ ನೆರವು ನೀಡುವುದು, ವಿದ್ಯಾ ಬೋಧನ ಒದಗಿಸುವುದು, ಆರ್ಥಿಕ ಸಹಾಯ ಇತ್ಯಾದಿ ಸುಲಭ. ಆದರೆ ಅಲೆಮಾರಿಗಳ ವಿಷಯದಲ್ಲಿ ಇದನ್ನೂ ಇನ್ನೂ ಸಮಗ್ರವಾಗಿಯೋಚಿಸಿ ಸುಧಾರಣಾ ಯೋಜನೆಗಳನ್ನೂ ರೂಪಿಸಬೇಕಾಗಿದೆ. ತಾವು ನಿರಂತರ ಪ್ರಯಾಣದ ಒತ್ತಡದಲ್ಲಿದ್ದರೂ ಜನಪದ ಜೀವನದ ಕಲಾತ್ಮಕತೆಯ ಪ್ರಸಾರದಲ್ಲಿ ತೊಡಗಿರುವ ಈ ಜನರ ಜೀವನಮಟ್ಟವನ್ನೂ ಸುಧಾರಿಸಲು ಸಮಾಜ ಮುಂದಾಗಬೇಕಾಗಿದೆ. ಸರ್ಕಾರ ಈ ಕಡೆ ಪ್ರಾಮಾಣಿಕವಾಗಿ ಗಮನಹರಿಸಬೇಕಾಗಿದೆ.

* * *