ಈ ಗೋಷ್ಠಿಗಳು ಒಂದೇ ಬಗೆಯಲ್ಲಿ ನಡೆಯುತ್ತವೆ, ಇಲ್ಲಿ ಪ್ರದರ್ಶನಗಳಿದ್ದರೆ ಅದು ಸರಿ ಎನ್ನುವಂತಹ ಮಾತಿದೆ. ಹೀಗಾಗಿ ಮಾತು ಸಾಕು ಕಲೆ ಬೇಕು ಎನ್ನುವಂತಹದ್ದು ಅದು ಸಹಜವೇ. ಅಲೆಮಾರಿಗಳ ಸಮಸ್ಯೆಗಳಿಗೆ ಕಾರಣಗಳಿವೆ. ಇದು ಬಹಳ ಗಂಭೀರವಾದಂತಹ ಚರ್ಚೆಯ ವಿಷಯ. ಇವತ್ತು ಜಾಗತೀಕರಣದ ಸಂದರ್ಭದಲ್ಲಿ ಅನೇಕ ಸವಾಲುಗಳು ನಮ್ಮೆದುರಿಗೆ ಇವೆ. ಹೀಗಾಗಿ ಇವತ್ತು ಈ ಬುಡಕಟ್ಟಿನ ಅಲೆಮಾರಿಗಳ ಸಮಸ್ಯೆಗಳು ಹೆಚ್ಚು ಗಂಭೀರವಾಗಿರತಕ್ಕಂತವುಳು. ಆ ಒಂದು ನೆಲೆಯಿಂದ ಇದು ಬಹಳ ಗಂಭೀರವಾಗಿರುವಂತಹ ಒಂದು ಆಲೋಚನೆ, ಬಹಳ ಸಮಕಾಲೀನ ಮತ್ತು ಸಕಾಲಿಕ. ಇವತ್ತು ಬುಡಕಟ್ಟಿಗೆ ಅನೇಕ ಬಗೆಯ ಸಮಸ್ಯೆಗಳಿವೆ. ಗುಲ್ಬರ್ಗಾದಲ್ಲಿ ನನ್ನ ಸಂಬಂಧಿಗರೊಬ್ಬರು ಡಿ.ಡಿ.ಪಿ.ಐ. ಆಫೀಸಿನಲ್ಲಿ ಒಂದು ‘ವೆರಿಫಿಕೇಶನ್’ ಮಾಡಿಸಬೇಕಾಗಿತ್ತು. ಆದರೆ ಊರಿಗೆ ಪತ್ರ ಯಾವಾಗ ಹೋಗಿವೆ ಅಂದರೆ ಎಲ್ಲೆಲ್ಲೊ ಹೋಗಿ ಆ ಪತ್ರ ೨೪ನೇ ತಾರೀಖಿಗೆ ಸಾಯಂಕಾಲ ಬಂದಿದೆ, ೨೫ನೇ ತಾರೀಖಿಗೆ ಅವರು ಆಫೀಸಿಗೆ ಹೋಗಿ ‘ವೆರಿಫಿಕೇಶನ್’ ಮಾಡಿಸಬೇಕು. ಅಂದರೆ ಬುಡಕಟ್ಟಿಗೆ ಇವತ್ತಿಗೂ ಕೂಡಾ ನೆಲೆ ಇಲ್ಲ ಅನ್ನುವಂತಹದ್ದು. ಅಂದರೆ ಯಾವುದೇ ಬಗೆಯ ಸವಲತ್ತುಗಳಿಲ್ಲ. ನಂತರ ಅವರ ಜೊತೆ ನಾನು ಹೋಗಬೇಕಾಯಿತು. ಅಲ್ಲಿ ನನಗೆ ಹನ್ನೆರಡು ಗಂಟೆವರೆಗೆ ಆ ಸಮಸ್ಯೆಯನ್ನು ಎದುರಿಸಬೇಕಾಯಿತು. ಈ ನಾಗರಿಕ ಸಂಸ್ಕೃತಿಯಿಂದ ದೂರವಿರತಕ್ಕಂತಹ, ನಮ್ಮ ನಾಗರೀಕ ಸಂಸ್ಕೃತಿಯ ಅನೇಕ ಸೌಲಭ್ಯಗಳಿಂದ ವಂಚಿತರಾಗುವಂತಹ ಬುಡಕಟ್ಟುಗಳು ಇವತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಒಬ್ಬ ಸ್ನೇಹಿತರು ಹೇಳಿದರು ಇವತ್ತು ನಮಗೆ ಶಿಕ್ಷಣ ಇಲ್ಲವೆಂದು. ಶಿಕ್ಷಣ ಇಲ್ಲ ಅಂದ್ರೆ ಸಂಘಟನೆ ಇಲ್ಲ. ಸಂಘಟನೆ ಇಲ್ಲ ಅಂದ್ರೆ ಹೋರಾಟ ಇಲ್ಲ ಅಂದ್ರೆ ಸೌಲಭ್ಯಗಳಿಲ್ಲ ಅನ್ನೋದನ್ನು ನಾವು ಕಾಣುತ್ತೇವೆ. ಶಿಕ್ಷಣ ಇಲ್ಲ ಅದಕ್ಕಾಗಿನೇ ಈ ಬುಡಕಟ್ಟುಗಳು ಮತ್ತಷ್ಟು ಆಥಿರ್ಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯುತ್ತಿವೆ. ಅದಕ್ಕೆ ಒಬ್ಬರು ಹೇಳ್ತಾ ಇದ್ದರು. ಬಾಂಬೆಯಲ್ಲಿ ಅವರು ಕೆಲಸ ಮಾಡ್ತಾ ಇದ್ದಾರೆ. ಅವರು ಊರಿಗೆ ಬರಬೇಕಾಗಿದೆ. ಉತ್ಸವ ಸಭೆ ಸಮಾರಂಭ ಇದ್ದಾಗ ಮಾತ್ರ ಆ ಬುಡಕಟ್ಟಿನ ಜನ ಸೇರ್ತಾ ಇದ್ದಾರೆ. ಹೀಗಾಗಿ ಮಂಗಳವಾರ ದಿವಸ ಆಳಂದ ತಾಲೂಕಿ೯ನಲ್ಲಿರುವ ತಾಂಡಾದಲ್ಲಿ ಒಂದು ಹಬ್ಬವಿದೆ. ಆ ಹಬ್ಬಕ್ಕೆ ಬರಬೇಕಾಗಿದೆ. ಬಾಂಬೆನಲ್ಲಿ ಒಂದು ಎಕ್ಸಿಡೆಂಟಾಗಿದೆ. ಪೋನ ಮುಖಾಂತರ ನನಗೆ ಸಾಯಂಕಾಲ ಬರಾಕಾಗೋದಿಲ್ಲ, ಮುಂಜಾನ್ ಬರ್ತಾ ಇದ್ದೇನೆ, ನಾನು ಬರಲಿಲ್ಲ ಅಂತ, ನೀವು ಹಾದಿ ನೋಡಬಾರದು ಎಂದು, ಆತ ಪೋನ್ ಮಾಡಿದನಂತೆ – “ಹೀಗೆ ನಾವು ರಸ್ತೆಯಲ್ಲಿ ಹೋಗುವಂತಹ ಸಂದರ್ಭದಲ್ಲಿ ಆಟೋ ಬಂದು ನಮ್ಮನ್ನ ಹಾಯ್ತು, ಅದಕ್ಕೆ ನಾವು ದವಾಖಾನೆಗೆ ಹೋದ್ವಿ, ಅಲ್ಲಿ ಪೋಸ್ಟಮಾರ್ಟಂ ಮಾಡ್ತಾ ಇದ್ದಾರೆ, ಆ ಮೇಲೆ ನಾನು ಮುಂಜಾನೆ ಬರ್ತಾ ಇದ್ದೇವೆ.” ಅದಕ್ಕೆ ಇವರು ಏನ್ ತಿಳಿಕೊಂಡರು ಅಂದರೆ ಪೋಸ್ಟಮಾರ್ಟಂ ಮಾಡ್ತಾ ಇದ್ದಾರೆ ಅಂದ್ರ ಸತ್ತು ಹೋಗಿರಬಹುದು, ಅದಕ್ಕೆ ಮುಂಜಾನೆ ಬರ್ತಾ ಇದ್ದಾರೆ ಅಂದರೆ ಹೆಣಾತಗೊಂಡು ಬರ್ತಾ ಇದ್ದಾರೆ! ಬುಡಕಟ್ಟಿನಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮ ಇದಾವೆ. ಸತ್ತರೆ ಮೂರನೇ ದಿವಸ ದಿನಾ ಮಾಡತಕ್ಕಂತಹದ್ದಿವೆ. ಆ ಬುಡಕಟ್ಟಿನ ಜನರಲ್ಲಿ ಅದು ರವಿವಾರ ಸತ್ತರೆ ರವಿವಾರವೇ ಆಗಲೇಬೇಕಾದಂತಹದ್ದು. ಅದಕ್ಕೆ ಅವರಿಗೆ ಏನಾಯ್ತು ಅಂದ್ರೆ ನಾಳೆ ಹೆಣ ಬರ್ತಾ ಇದೆ ಅಂದ್ರೆ ನಾಳಿಗೆನೇ ದಿನಾ ಮಾಡಬೇಕಾಗುತ್ತದೆ, ಅದಕ್ಕೆ ವ್ಯವಸ್ಥೆ ಮಾಡಬೇಕು ಅಂತ ತಿಳಕೊಂಡು ಎಲ್ಲ ತಾಂಡಾಗಳಿಗೆ ಅಲ್ಲಿರತಕ್ಕಂತಹ ತಮ್ಮ ಬೀಗರಿಗೆಲ್ಲಾ ನಾಳೆ ಮುಂಜಾನೆ ಬರಬೇಕು. ಹೆಣ ಬರ್ತಾ ಇದೆ ಅಂದ್ರು. ಅವರ ಜೊತೇಲಿ ದಿನಾ ಅವತ್ತೆ ಮಾಡಬೇಕು ಅಂತ್ಹೇಳಿ ತಿಳಿಕೊಂಡು ಅದರ ವ್ಯವಸ್ಥೆ ಕುಡಾ ಮಾಡಿದರು. ಅದಕ್ಕೆ ಮುಂಜಾನೆ ಅವರೆಲ್ಲಾ ಸೇರಿದರು. ಅವರು ಯಾರ ಸತ್ತಿದ್ರು ಅಂತಾ ಹೇಳಲಿಲ್ಲಾ ಬಂದ ಬಿಟ್ಟರು! ಅಂದ್ರ ಇಲ್ಲಿ ಏನಾಯ್ತು ಅಂತಿಂದ್ರೀ Post-Martem ಅಂತಾ ಯಾವುದಕ್ಕೆ ಅಂತಾರೆ ಅನ್ನೋದು ಗೊತ್ತಿಲ್ಲ. ಅಂದ್ರ ಅವರು ಆಸ್ಪತ್ರೆಯಲ್ಲಿ ಆ ಬ್ಯಾಂಡೇಜ್ ಹಾಕೋದಿರ್ತಾ ಇವೆ. ಆ ಬ್ಯಾಂಡೇಜ್ ಹಾಕೋದನ್ನ ಇಂಗ್ಲಿಷ್‌ನಲ್ಲಿ ಇವರು ಏನ್ ಹೇಳಿದ್ರು ಅಂದ್ರ ಪೋಸ್ಟ್‌ಮಾರ್ಟಮ್ ಮಾಡ್ತಾ ಇದ್ದಾರೆ. ಅಂದ್ರೆ ಶಿಕ್ಷಣ ಇಲ್ದೆ ಇರೋದ್ರಿಂದ ಈ ಜನರಿಗೆ ಆಗುವಂತಹ ತೊಂದರೆಗಳು ಇವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿಯುವುದಕ್ಕೆ ಬಹಳ ಪ್ರಬಲವಾದ ಕಾರನ ಆಗಿದೆ ಎನ್ನುವಂತಹದ್ದನ್ನು ನಾವು ಕಾಣ್ತಾ ಇದ್ದೇವಿ. ಹೀಗಾಗಿ ಬುಡಕಟ್ಟಿನ ಜನ ಇವತ್ತು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆ ಸಮಸ್ಯೆಗಳು ಬಹಳ ಗಂಭೀರವಾಗಿರತಕ್ಕಂತವು. ಅಷ್ಟೇ ಗಂಭೀರವಾಗಿ ಆಲೊಚನೆ ಮಾಡಬೇಕಿದೆ.

ಇವತ್ತು ಅಧ್ಯಯನದ ಸಮೀಕ್ಷೆ ಅನ್ನುವಂತಹ ವಿಷಯವಿದೆ. ಅದನ್ನ ಕುರಿತು ಕೆಲವು ಮಾತುಗಳನ್ನು ಮಾತ್ರ ಹೇಳಲಿಕ್ಕೆ ಇಷ್ಟಪಡುತ್ತೇನೆ. ಆದರೆ ನಾವು ಇಲ್ಲಿ ಅಧ್ಯಯನ ಯಾವ ರೀತಿ ಮಾಡ್ತಾ ಇದ್ದೇವಿ. ಹೇಗೆ ಅಧ್ಯಯನ ಆಗುತ್ತಿವೆ. ಅದರ ಸಮಸ್ಯೆಗಳೇನು ಸವಾಲುಗಳೇನು? ಇದು ಬಹಳ ಮುಖ್ಯವಾದಂತಹ ಚರ್ಚೆಯ ವಿಷಯಗಳು. ಅಧ್ಯಯನ ಮಾಡುವಾಗ ಅವರು ನಮ್ಮನ್ನಾ ಫೀಲ್ಡ್ ವರ್ಕ್‌‌ನ ಸಂದರ್ಭದಲ್ಲಿ ಹೋದಂತಹ ಮೊದಲನೆಯದಾಗಿ ಕೇತಕ್ಕಂತಹದ್ದೇನು ಅಂದ್ರೆ, ನಮಗೆ ಯಾವ ಸೌಲಭ್ಯಗಳನ್ನು ನೀವು ಕೊಡ್ತಾ ಇದ್ದೀರಿ? ನಾವು ಯಾವುದೇ ವಿಷಯ ಕೇಳಿದ್ರೂ ಕೂಡಾ ಆ ಕಡೆ ಅವರು ಹೆಚ್ಚು ಲಕ್ಷ್ಯ ವಹಿಸುವುದಿಲ್ಲ. ಅಂದರೆ ಸರಕಾರದಿಂದ ನಮಗೆ ಏನ್ ಸೌಲಭ್ಯ ಕೊಡಿಸುತ್ತಿದ್ದೀರಿ ಎನ್ನುತ್ತಾರೆ. ಅಂದ್ರೆ ಸೌಲಭ್ಯಗಳಿಂದ ವಂಚಿತವಾದ ಜನ ಸೌಲಭ್ಯಗಳನ್ನು ಮೊದಲು ಕೇಳ್ತಾ ಇದ್ದಾರೆ. ಆದರೆ ಆ ಸೌಲಭ್ಯಗಳನ್ನು ನಾವೇ ಕೊಡ್ತಾ ಇದ್ದೇವೊ, ಸರ್ಕಾರ ಕೊಡ್ತಾ ಇದೆಯೋ ಸಮಾಜ ಕೊಡತ್ತದೊ, ಸಮಾಜ ಅವರನ್ನೆ ಉಪಯೋಗಿಸಿಕೊಳ್ಳುತ್ತಾ ಇದೆ ಹೊರತು ಸಮಾಜ ಅವರನ್ನು ಗೌರವದಿಂದ ಕಾಣುತ್ತಾ ಇಲ್ಲ. ಮಾನವೀಯತೆಯಿಂದ ಕಾಣ್ತಾ ಇಲ್ಲ. ಸರಕಾರವೂ ಕೂಡಾ ಅವರನ್ನು ಗೌರವಿಸುತ್ತಿಲ್ಲ. ಅವರಿಗೆ ಕೊಡಬೇಕಾದಂತಹ ಸೌಲಭ್ಯಗಳನ್ನು ಕೊಡ್ತಾ ಇಲ್ಲ ಅನ್ನುವಂತಹದ್ದನ್ನು ಇವತ್ತು ನಾವೆಲ್ಲ ಆಲೋಚನೆ ಮಾಡಬೇಕಾದಂತಹ ಸಂಗತಿಯಾಗಿದೆ. ಅಧ್ಯಯನ ಸಮೀಕ್ಷೆ ಮಾಡ್ತಾ ಇದ್ದೀವಿ. ಅಧ್ಯಯನ ಮಾಡ್ತಾ ಇದ್ದೀವಿ. ಆದರೆ ಅದರಿಂದ ಏನು ಪ್ರಯೋಜನ ಆಗುತ್ತಿದೆ. ನಮ್ಮ ಅಧ್ಯಯನಗಳು ಎಷ್ಟರಮಟ್ಟಿಗೆ ಸರ್ಕಾರ ಅವರಿಗೆ ಸೌಲಭ್ಯಗಳನ್ನು ಒದಗಿಸಿ ಕೊಡ್ತಾ ಇವೆ. ನಮ್ಮ ಅಧ್ಯಯನಗಳು ಅವರಿಗೆ ಪೂರಕವಾಗಿ ಬರಬೇಕೆ ಹೊರತು, ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡಲಿಕ್ಕೆ ಅವು ಸಹಾಯಕವಾಗಬೇಕೆ ಹೊರತು ಬರೇ ಅಧ್ಯಯನಕ್ಕಾಗಿ ಅಧ್ಯಯನ ಆಗಬಾರದು. ಕೇವಲ ನಮ್ಮ ಸ್ವಾರ್ಥಕ್ಕಾಗಿ, ಅನುಕೂಲತೆಗಾಗಿ ಮಾತ್ರ ಅಧ್ಯಯನ ಆಗುವಂತಹ ವಿಧಾನಗಳು ಇವತ್ತು ನಡೀತಾ ಇವೆ ಅನ್ನುವಂತಹದ್ದನ್ನು ನಾವು ನೋಡ್ತಾ ಇದ್ದೇವೆ. ಪ್ರಾಪಂಚಿಕ ಹಿನ್ನೆಲೆಯಲ್ಲಿ ಕೂಡಾ ಇದೇ ಬಗೆಯಾದಂತಹ ಅಧ್ಯಯನಗಳು ನಡೆದುಕೊಂಡು ಬಂದಿವೆ ಅನ್ನುವಂತಹದ್ದು ಕೂಡಾ ನಾವೆಲ್ಲ ನೋಡಬೇಕಾದಂತಹ ಸಂಗತಿ. ಇಡೀ ಭಾರತ ದೇಶವನ್ನೇ ನಾವು ಗಮನಿಸಿದಾಗ ನಮ್ಮ ದೇಶದಲ್ಲಿ ಇರತಕ್ಕಂತಹ ಬುಡಕಟ್ಟುಗಳ ಸಮೀಕ್ಷೆ ಮಾಡಿದಾಗ ಸುಮಾರು ೧೯೫೧ರ ಜನಗಣತಿಯನ್ನೇ ಇಟ್ಟುಕೊಂಡು ನೋಡಿದಾಗ ನಮ್ಮ ದೇಶದಲ್ಲಿ ೫೭೧ ಬುಡಕಟ್ಟುಗಳಿವೆ. ಆದರೆ ಈ ಬುಡಕಟ್ಟುಗಳು ಜಾತಿಗಳಾಗತಕ್ಕಂತಹದ್ದು, ಬುಡಕಟ್ಟುಗಳು ಅಲೆಮಾರಿಗಳಾಗತಕ್ಕಂತಹದ್ದು, ಅರೆ ಅಲೆಮಾರಿಗಳಾಗತಕ್ಕಂತಹದ್ದು. ಹೀಗಾಗಿ ಇವತ್ತು ಕರ್ನಾಟಕದಲ್ಲಿ ಅಲೆಮಾರಿ ಗಳೆಷ್ಟಿದ್ದಾರೆ. ಅರೆ ಅಲೆಮಾರಿಗಳೆಷ್ಟಿದ್ದಾರೆ. ಇದನ್ನ ಕೂಡಾ ನಿರ್ದಿಷ್ಟವಾಗಿ ಹೇಳದಂತಹ ಸ್ಥಿತಿ ನಮ್ಮ ಕಣ್ಣೆದುರಿಗಿದೆ. ಅಂದರೆ ಸರಕಾರ ಇವರ ಬಗ್ಗೆ ಎಷ್ಟು ಕಾಳಜಿ ವಹಿಸಿದೆ ಎನ್ನುವಂತಹದ್ದನ್ನು ನಾವು ಕಾಣ್ತಾ ಇದ್ದೇವಿ. ೫೭೧ ಬುಡಕಟ್ಟುಗಳಿದ್ದು ೮.೯% ಬುಡಕಟ್ಟಿನ ಜನಾ ಈ ದೇಶದಲ್ಲಿ ಇದ್ದಾರೆ ಎನ್ನುವುದನ್ನು ಕಾಣ್ತಾ ಇದ್ದೇವೆ. ಅಂದರೆ ಇವತ್ತು ನಾವು ನೋಡಿದ್ರೆ ಸುಮಾರು ೫೦೦ ಕ್ಕೂ ಹೆಚ್ಚು ಬುಡಕಟ್ಟುಗಳಿದ್ದಾರೆ, ಈ ದೇಶದ ಜನಸಂಖ್ಯೆಯ ಪ್ರತಿಶತ ೧೦ ಜನಸಂಖ್ಯೆಯ ಬುಡಕಟ್ಟು ಜನರಿದ್ದಾರೆ. ಅಂದರೆ ಅಷ್ಟು ಜನರನ್ನು- ೧೦ ಕೋಟಿಗೂ ಮಿಕ್ಕು ಇರತಕ್ಕಂತಹ ಜನಸಂಖ್ಯೆಯನ್ನು ದೇಶ ಇವತ್ತು ಯಾವ ರೀತಿ ಕಾಣ್ತಾ ಇವೆ, ಯಾವ ಸೌಲಭ್ಯಗಳನ್ನು ಕೊಡ್ತಾ ಇವೆ ಅನ್ನೋದರ ಕಡೆಗೆ ನಾವು ಇವತ್ತು ಹೆಚ್ಚು ಆಲೋಚನೆ ಮಾಡಬೇಕಿದೆ. ಅದಕ್ಕೆ ಮೊನ್ನೆ ಮೊನ್ನೆ ಒಂದು ಘಟನೆಯಾಗಿರುವುದು ನಿಮಗೆಲ್ಲ ಗೊತ್ತಿರಬಹುದು. ಇದೇ ಗುಲ್ಬರ್ಗಾದ ಕೊಂಚಾವರಂ ಪ್ರದೇಶದಲ್ಲಿ ಬಂಜಾರಾ ಮಹಿಳೆಯರೆಲ್ಲಾ ತಮ್ಮ ಹೆಣ್ಣು ಕೂಸುಗಳನ್ನು ಮಾರಿದರು ಎನ್ನುವಂತಹದ್ದು. ಅದಕ್ಕಾಗಿ ನಮ್ಮ ಸರಕಾರವಾಗಲಿ ಸಮಾಜವಾಗಲಿ ಅಥವಾ ಅಂಥ ಪದ್ಧತಿ ಇರಲಿಕ್ಕೆ ಸಾಧ್ಯವೇ ಅನ್ನುವಂತಹದ್ದನ್ನು ಆಲೋಚನೆ ಮಾಡಲಿಕ್ಕೆ ಹೋಗಲಿಲ್ಲ. ಸರಕಾರವೂ ಕೂಡಾ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅನ್ನುವಂತಹದ್ದನ್ನು ನಾವು ಕಾಣ್ತಾ ಇದ್ದೇವಿ. ಇದು ನಮ್ಮ ಎದುರಿಗಿರತಕ್ಕಂತಹ ಬುಡಕಟ್ಟಿನ ಸಮಸ್ಯೆಗಳಲ್ಲೊಂದು ಇದ್ದೇವಿ. ಹೀಗಾಗಿ ಇವತ್ತು ಅಧ್ಯಯನಗಳು ಯಾವ ನೆಲೆಯಲ್ಲಿ ಇಡೀತಾ ಇದ್ದಾವೆ. ಅವರ ಸ್ಥೂಲವಾದ ಸಮೀಕ್ಷೆಯನ್ನು ಎದುರಿಗೆ ಇಟ್ಟುಕೊಂಡರೆ ನಾವು ನಮ್ಮ ದೇಶದಲ್ಲಿ ಈ ಬುಡಕಟ್ಟುಗಳನ್ನು ಕುರಿತ ಪ್ರಾರಂಭವಾಗಿರತಕ್ಕಂತಹ ಅಧ್ಯಯನ ಕೂಡಾ ಸುಮಾರು ಒಂದು ನೂರು ವರ್ಷಗಳ ನಂತರ ಅನ್ನುವುದನ್ನು ನಾವು ಕಾಣ್ತಾ ಇದ್ದೇವೆ. ಇಡೀ ಪ್ರಪಂಚದ ಬುಡಕಟ್ಟುಗಳ ಅಧ್ಯಯನವನ್ನು ನೋಡಿದಾಗ ಸುಮಾರು ೧೬ನೇ ಶತಮಾನದಲ್ಲಿ ನಮ್ಮ ಪ್ರಪಂಚದ ದೇಶದಲ್ಲಿರುವ ಬುಡಕಟ್ಟುಗಳನ್ನು ಕುರಿತಾದ ಅಧ್ಯಯನ ಪ್ರಾರಂಭವಾಯಿತು. ನಮ್ಮ ದೇಶದಲ್ಲಿ ಪ್ರಾರಂಭವಾಗಿರತಕ್ಕಂತಹದ್ದು ಅದು ೧೮ನೇ ಶತಮಾನದ ಕೊನೆಗೆ ಅದು ಕೂಡಾ ವಸಾಹತುಶಾಹಿ ಹಿನ್ನೆಲೆಯಲ್ಲಿ ನಮ್ಮ ನಮ್ಮ ದೇಶದಲ್ಲಿ ಬುಡಕಟ್ಟುಗಳನ್ನು ಕುರಿತಾದ ಅಧ್ಯಯನ ಪ್ರಾರಂಭವಾಯಿತು ನಮ್ಮ ಜಾನಪದ ಅಧ್ಯಯನವು ಕೂಡಾ ೧೮ನೇ ಶತಮಾನದ ಕೊನೆಯಲ್ಲಿ ಪ್ರಾರಂಭವಾಯಿತು. ಆ ಹಿನ್ನೆಲೆಯಲ್ಲಿ ಜಾನಪದದ ಜೊತೆ ಜೊತೆಯಲ್ಲಿಯೇ ಬುಡಕಟ್ಟುಗಳು ಕೂಡಾ ಬರ್ತಾ ಇರೋದ್ರಿಂದ ಬುಡಕಟ್ಟುಗಳ ಅಧ್ಯಯನ ಕೂಡಾ ೧೮ನೇ ಶತಮಾನದ ಕೊನೆಯಲ್ಲಿ ಬಂತು. ಈ ಹಿನ್ನೆಲೆಯಲ್ಲಿ ೧೮ನೇ ಶತಮಾನದಲ್ಲಿ ಪ್ರಾರಂಭವಾದ ಅಧ್ಯಯನ ಇವತ್ತು ಯಾವ್ಯಾವ ನೆಲೆಗಳ ಮೂಲಕ ಆಗ್ತಾಯಿದೆ, ಆಗಿದೆ ಎನ್ನುವಂತಹದ್ದರ ಒಂದು ಸ್ಥೂಲ ನೋಟವನ್ನು ತಮ್ಮೆದುರಿಗೆ ಇಡಲಿಕ್ಕೆ ಪ್ರಯತ್ನ ಮಾಡ್ತಾ ಇದ್ದೇನೆ. ಇಲ್ಲಿ ಬುಡಕಟ್ಟು ಅಂದ್ರೆ ಏನು? ಎನ್ನುವಂತಹದ್ದರ ಚರ್ಚೆ, ಅಲೆಮಾರಿ, ಅರೆ ಅಲೆಮಾರಿ ಎಷ್ಟಿವೆ ಎನ್ನುವಂತಹದ್ದರ ಚರ್ಚೆ ಕೂಡಾ ನಮ್ಮೆದುರು ಸಾಕಷ್ಟಿದೆ. ಕರ್ನಾಟಕದ ಬುಡಕಟ್ಟುಗಳನ್ನು ಬುಡಕಟ್ಟಿನ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಹೀಗಾಗಿ ಪರಿಶಿಷ್ಟ ಬುಡಕಟ್ಟುಗಳು ಆಮೇಲೆ ಬರಿ ಬುಡಕಟ್ಟುಗಳಾಗಿರತಕ್ಕಂತವು ಅಲೆಮಾರಿ ಬುಡಕಟ್ಟುಗಳಾಗಿರುವ, ಅರೆ ಅಲೆಮಾರಿ ಬುಡಕಟ್ಟುಗಳಾಗಿರತಕ್ಕಂತಹ ಜನ ನಮ್ಮ ರಾಜ್ಯದಲ್ಲಿ ಇದ್ದು ಸುಮಾರು ಅರವತ್ತೊಂಬತ್ತು ಬುಡಕಟ್ಟಿನ ನೆಲೆಗಳು ಈ ದೇಶದಲ್ಲಿ ರಾಜ್ಯದಲ್ಲಿ ಇವೆ. ಇದರ ಚರ್ಚೆ ಕೂಡಾ ಸಾಕಷ್ಟು ರೀತಿಯಲ್ಲಿ ಆಗಬೇಕಾಗಿವೆ. ಅದರ ಜೊತೆಯಲ್ಲಿ ಸೇರಿರುವಂತಹ ಬುಡಕಟ್ಟುಗಳಿಗೆ ಸೌಲಭ್ಯಗಳು ಕೂಡಾ ಇಲ್ಲ ಅನ್ನುವಂತಹದ್ದು ಕೂಡಾ ನಮ್ಮೆದುರಿಗಿರುವ ಪ್ರಶ್ನೆ. ಈ ಬುಡಕಟ್ಟಿನ ಅಧ್ಯಯನ ಯಾವಾಗ ಪ್ರಾರಂಭವಾಯಿತು ಎನ್ನೋದನ್ನು ನಾವು ನೋಡಿದೆವು ಇದ್ವಿ. ಹೀಗಾಗಿ ಇಲ್ಲಿ ನಮ್ಮಲ್ಲಿ ಬರತಕ್ಕಂತಹ ವಿದೇಶಿ ವಿದ್ವಾಂಸರು, ಆನಂತರ ಧರ್ಮ ಪ್ರಚಾರಕ್ಕಾಗಿ ಬಂದಂತಹ ಪಾದ್ರಿಗಳು, ಈ ದೇಶದಲ್ಲಿ ಜಾನಪದ ಅಧ್ಯಯನ, ಈ ದೇಶದ ಸಂಸ್ಕೃತಿಯ ಬುಡಕಟ್ಟುಗಳ ಸಂಸ್ಕೃತಿಯ ಅಧ್ಯಯನ ಮಾಡಲಿಕ್ಕೆ ಅವರು ಮುಂದಾದರು. ಅದಕ್ಕೆ ವಸಾಹತುಶಾಹಿಯ ರಾಜಕೀಯ ಹಿನ್ನೆಲೆಯಿದೆ. ಅದಕ್ಕೆ ಒಂದು ಕಡೆ ಮಾತು ಬರ್ತಾ ಇದೆ. ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ವೈವಿಧ್ಯಮಯವಾದಂತಹ ಸಂಸ್ಕೃತಿ ಇರತಕ್ಕಂತಹ ದೇಶ ಅಂತಂದರೆ ಭಾರತ ದೇಶ. ಅದಕ್ಕಾಗಿ ಇದು ಸಂಸ್ಕೃತಿಯ ತೊಟ್ಟಿಲು ಅಂತಾ ಹೇಳ್ತಾ ಇದ್ದಾರೆ. ಕ್ರೆಡಲ್ ಆಫ್ ಕಲ್ಚರ್ ಅಷ್ಟೆ ಅಲ್ಲ. ಇಟ್ ಈಸ್ ಕ್ರೆಡಲ್ ಆಫ್ ಟ್ರೈಬಲ್ ಕಲ್ಚರ್ ಅನ್ನುವಂತಹದ್ದು ಬಹಳ ಮಹತ್ವದ ವಿಷಯ. ಅದಕ್ಕಾಗಿ ಇಲ್ಲಿ ಬಂದಿರುವಂತಹ ವಿದೇಶಿ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳು. ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡಲಿಕ್ಕೆ ಬಂದಿರತಕ್ಕಂತಹ ಕ್ರೈಸ್ತ ಧರ್ಮದ ಪಾದ್ರಿಗಳು ಈ ದೇಶದ ಸಂಸ್ಕೃತಿಯನ್ನು, ಈ ದೇಶದ ವೈವಿಧ್ಯಮಯವಾಗಿರುವಂತಹ ಸಂಸ್ಕೃತಿಯನ್ನು ಈ ದೇಶದಲ್ಲಿರತಕ್ಕಂತಹ ಬಹಳ ವಿಚಿತ್ರವಾದಂತಹ ನಡಾವಳಿಗಳನ್ನು ನೋಡಿಕೊಂಡು ಇವುಗಳನ್ನು ಅಧ್ಯಯನ ಮಾಡಲಿಕ್ಕೆ ಮುಂದಾದರು. ಹೀಗಾಗಿ ಅಧ್ಯಯನದ ನೆಲೆಗಳಲ್ಲಿ ಎರಡು ಪ್ರಮುಖವಾಗಿರತಕ್ಕಂತಹ ಅಂಶಗಳನ್ನು ನಾವು ಕಾಣುತ್ತೇವೆ. ಒಂದು ವಸಾಹತುಶಾಹಿಯ ಹಿನ್ನೆಲೆ ಇರುವಂತಹದ್ದು ಅಂದರೆ ಆಳತಕ್ಕಂತಹ ತೊಡಕು ತೊಂದರೆಗಳೇನು? ಆನಂತರ ಅವರಲ್ಲಿರತಕ್ಕಂತಹ ಸಮಸ್ಯೆಗಳೇನು? ಸವಾಲುಗಳೇನು? ಅವರು ನಮಗೆ ಯಾವ ರೀತಿ ನೋಡ್ತಾ ಇದ್ದಾರೆ? ಆಮೇಲೆ ಅವರಲ್ಲಿರತಕ್ಕಂತಹ ಕೊರತೆಗಳೇನು? ಅದನ್ನು ಹೇಗೆ ಸರಿಪಡಿಸಲಿಕ್ಕೆ ಸಾಧ್ಯವಿದೆ. ಈ ಬಗೆಯಲ್ಲಿ ಆಲೋಚನೆ ಮಾಡಿದ್ದರ ಫಲವಾಗಿ ಆ ಈಸ್ಟ್ ಇಂಡಿಯಾ ಕಂಪನಿಯಾ ಕಂಪನಿಯ ಅಧಿಕಾರಿಗಳು ವೆಲ್ಲೆಸ್ಲಿ ಆಗಿರಬಹುದು, ಮತ್ತೊಬ್ಬರು ಆಗಿರಬಹುದು. ಈ ದೇಶದಲ್ಲಿರತಕ್ಕಂತಹ ಈ ಜನ ಸಮುದಾಯವನ್ನು ಅಧ್ಯಯನ ಮಾಡಲಿಕ್ಕೆ ಕೆಲವರನ್ನು ನೇಮಿಸಿದರು. ಚಾರ್ಲ್ಸ್ ಚೋರ್ ಎನ್ನುವಂತಹರಾಗಿರಬಹುದು. ಚಾಲ್ಸ್‌ಜೇಮ್ಸ್ ಎನ್ನುವಂತಹವಾಗಿರಬಹುದು, ಈ.ಪಿ. ರೈಸ್ ಅನ್ನುವಂತಹ ಆಗಿರಬಹುದು. ಎಲ್.ಮೆಕೆಂಜಿಯವರಾಗಿರಬಹುದು. ಹೀಗೆ ಬೇರೆ ಬೇರೆ ಜನ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಅಧಿಕಾರಿಯಾಗಿ, ಸೇನಾಧಿಕಾರಿಯಾಗಿ, ವೈದ್ಯ ಆಗಿರಬಹುದು. ಹೀಗೆ ಬೇರೆ ಬೇರೆ ಕೆಲಸದ್ಲಿ ಉದ್ಯೋಗಿ ಆಗಿರತಕ್ಕಂತಹ ಜನ ಅವರನ್ನು ಬ್ರಿಟಿಷ್ ಅಧಿಕಾರಿಗಳು ಈ ದೇಶದ ಬುಡಕಟ್ಟು ಸಂಸ್ಕೃತಿಯನ್ನು, ಗ್ರಾಮೀಣ ಸಂಸ್ಕೃತಿಯನ್ನು ದಾಖಲೆ ಮಾಡುವಂತಹ ಕೆಲಸಕ್ಕೆ ನೇಮಿಸಿತು. ಆ ಸಂದರ್ಭದಲ್ಲಿ ಈ ನಮ್ಮ ದೇಶದಲ್ಲಿರತಕ್ಕಂತಹ ಅದರಲ್ಲಿ ಪ್ರವಾಸಿ ಕಂಡ ಇಂಡಿಯಾ ಅನ್ನುವಂತಹದ್ದು. ಆ ಒಂದು ಹಿನ್ನೆಲೆಯಲ್ಲಿ ಈ ದೇಶದಲ್ಲಿರತಕ್ಕಂತಹ ಸಮುದಾಯಗಳ ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡಲಿಕ್ಕೆ ‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ’ ಪ್ರಾರಂಭಿಸಿತು. ಹೀಗಾಗಿ ಈ ನೆಲೆಯಲ್ಲಿ ನಮ್ಮ ಅಧ್ಯಯನ ಪ್ರಾರಂಭ ಆಗ್ತಾ ಇದೆ. ಜಾರ್ಜ್‌ಗೋವರ ಅವರು ಒಂದು ಕಡೆ ಒಂದು ಮಾತು ಹೇಳ್ತಾ ಇದ್ದಾರೆ. ಅವರು ತಮ್ಮ ಈ ಮದ್ರಾಸ್ ಪ್ರಾಂತದ ಮೂಲಕ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಟಿಪ್ಪುಸುಲ್ತಾನನ ಘಟನಾ ನಂತರ ಅಲ್ಲಿ ಬರಲಿರತಕ್ಕಂತಹ ವೆಲ್ಲೆಸ್ಲಿ ಇಲ್ಲ. ಈ ಪ್ರದೇಶದಲ್ಲಿರತಕ್ಕಂತಹ ಜನ ಸಮುದಾಯಗಳನ್ನು ಅಧ್ಯಯನ ಮಾಡು ಅಥವಾ ಅದರ ದಾಖಲೆ ಮಾಡು ಅಂತಾ ಹೇಳಿದಾಗೆ ಒಂದು ಮಾತು ಹೇಳ್ತಾ ಇದ್ದಾರೆ. ಇಲ್ಲಿ ದಾಸರನ್ನು ಕುರಿತು ಒಂದು ಉಲ್ಲೇಖ ಮಾಡ್ತಾ ಇದ್ದಾರೆ. ಆ ದಾಸರೆಂದರೆ ಯಾವ ದಾಸರು ಏನು ಎನ್ನುವುದನ್ನು ಕುರಿತು ಚರ್ಚೆ ಕೂಡಾ ಆಯ್ತು. ದಾಸರು ಎನ್ನುವಂತಹವರು ಯಾವುದೇ ಆಧಾರ ಇಲ್ಲದೆ ಹಾಡ್ತಾ ಇದ್ದಾರೆ. ಅವರ ವೃತ್ತಿ ಭಿಕ್ಷಾಟನೆ ಆಗಿದೆ. ಅವರನ್ನು ಬಹಳ ಗೌರವದಿಂದ ಸಮಾಜ ಕಾಣ್ತಾ ಇದೆ. ಅವರ ಹಾಡುಗಳನ್ನು, ಅವರ ಸಾಹಿತ್ಯವನ್ನು ಕೇಳ್ತಾ ಇವೆ ಎನ್ನುವಂತಹದ್ದನ್ನು ಅಲ್ಲಿ ದಾಖಲೆ ಮಾಡಿದ್ದನ್ನು ನಾವು ಕಾಣ್ತಾ ಇದ್ದೇವೆ. ಹಾಗಾದರೆ ಅಲ್ಲಿ ಬರತಕ್ಕಂತಹ ದಾಸರು ಯಾರು? ಅವರು ಬುಡಕಟ್ಟಿನ ದಾಸರೇ? ಅಥವಾ ದೊಂಬಿ ದಾಸರೆ ಅಥವಾ ಗ್ರಾಮೀಣ ದಾಸರೇ ಎನ್ನುವಂತಹ ಚರ್ಚೆ ಕೂಡಾ ನಮ್ಮೆದುರು ಇದೆ. ಅದೇನೇ ಇರಲಿ ಒಟ್ಟಾರೆ ಆ ಸಂದರ್ಭದಲ್ಲಿ ಆಗಿರತಕ್ಕಂತಹ ಅಧ್ಯಯನ ಏನಿದೆ ಅದು ಗ್ರಾಮೀಣ ಜಾನಪದ, ಬುಡಕಟ್ಟುಗಳ ಅಧ್ಯಯನವಾಗಿರೋದರಿಂದ ಬುಡಕಟ್ಟುಗಳ ಅಧ್ಯಯನ ಕೂಡಾ ಅಲ್ಲಿ ಬಂದಿದೆ. ಈ ಹಿನ್ನೆಲೆಯಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಾಗಲಿ ಅದರ ಜೊತೆಗೆ ಕ್ರೈಸ್ತ ಧರ್ಮ ಪ್ರಚಾರಕ್ಕೆ ಬಂದಿರುವಂತಹ ಪಾದ್ರಿಗಳಾಗಲಿ, ಈ ದೇಶದ ಬುಡಕಟ್ಟುಗಳ ಅಧ್ಯಯನವನ್ನು ಪ್ರಾರಂಭ ಮಾಡಿದರು ಎನ್ನುವುದನ್ನು ನಾವು ನೋಡ್ತಾ ಇದ್ದೇವೆ. ಆದರೂ ಅಲ್ಲಿ ಮಾಡಿರತಕ್ಕಂತಹ ಅಧ್ಯಯನ ಹೇಗಿದೆ ಎಂದರೆ ಅವೆಲ್ಲ ಕೇವಲ ಮೆಟೀರಿಯಲಿಸ್ಟಿಕ್ ಆಗಿರತಕ್ಕಂತಹ, ಅದನ್ನೆ ಕೆಲವು ವಸ್ತುವನ್ನಾಗಿ ನೋಡತಕ್ಕಂತಹ ಹಿನ್ನೆಲೆಯ ಅಧ್ಯಯನ ಮಾತ್ರ ಇದೆ ಅನ್ನುವುದನ್ನ ನಾವು ನೋಡ್ತಾ ಇದ್ದೇವಿ. ಆದರೆ ಫೀಲ್ಡ್ ಅನ್ನುವಂತಹದ್ದು ಅಲ್ಲಿರತಕ್ಕಂತಹ ಮೆಟೀರಿಯಲ್ ತೆಗೆದುಕೊಳ್ಳುವಂತಹದ್ದಿವೆ ಹೊರತು ಅದನ್ನು ಮಾನವಿ ನೆಲೆಯಿಂದ ಸೈದ್ಧಾಂತಿಕ ನೆಲೆಯಿಂದ ಅಧ್ಯಯನ ಮಾಡತಕ್ಕಂತಹದ್ದು ಆಗಲಿಲ್ಲ. ಅಂದರೆ ಅಲ್ಲಿರತಕ್ಕಂತಹ ವಸ್ತುವನ್ನು ಹಿಡಿದುಕೊಳ್ಳುವುದು. ಆಮೇಲೆ ಆಗಲೇ ಒಬ್ಬ ಸ್ನೇಹಿತರು ಹೇಳಿದರು ಅವರಿಗೆ ಭಾಷೆ ಬರೋದಿಲ್ಲ ಅಂತಾ. ಬುಡಕಟ್ಟುಗಳನ್ನು ಅಧ್ಯಯನ ಮಾಡೋದು ಅಷ್ಟು ಸುಲಭ ಅಲ್ಲ. ಯಾಕಂದ್ರ ಅವರು ತಮ್ಮನ್ನು ಸಂಪೂರ್ಣವಾಗಿ ಬಿಚ್ಚಿಕೊಳ್ಳೋದಿಲ್ಲ. ಹೀಗಾಗಿ ಅವರ ಅಧ್ಯಯನ ಮಾಡತಕ್ಕಂತಹದ್ದು. ಅವರ ಸಂಸ್ಕೃತಿಯನ್ನು ಅರಿತುಕೊಳ್ಳಲು, ಅವರ ದಾಖಲೆ ಮಾಡಲು ಕೂಡಾ ಕಷ್ಟ ಆಗಿದೆ. ಅದಕ್ಕಾಗಿ ಈ ನಮ್ಮ ಎಚ್.ಬಿ.ನಂಜುಂಡಯ್ಯನವರು ಮಾಡಿರತಕ್ಕಂತಹ ಮೈಸೂರು ಪ್ರಾಂತ್ಯದ ಬುಡಕಟ್ಟಿನ ಅಧ್ಯಯನಗಳಾಗಲಿ ಬೇರೆ ಬೇರೆ ಅಧ್ಯಯನಗಳನ್ನು ನೋಡಿದಾಗ ಬಹಳ ಕತೂಹಲಕರವಾಗಿರುವ ಸಂಗತಿಗಳು ಅಲ್ಲಿ ಬಂದಿದ್ದ್ನು ನಾವು ನೋಡ್ತೀವಿ. ಅಂದರೆ ಎಷ್ಟರಮಟ್ಟಿಗೆ ಅವರು ಸರಿಯಾದ ರೀತಿಯಲ್ಲಿ ಅವರು ಸಂಗ್ರಹ ಮಾಡಿದ್ದಾರೆ ಅನ್ನುವಂತಹದ್ದು. ನಾನು Mysore Tribs and Caste ಓದುವಾಗ ಒಂದು ಮಾತು ಬಂತು. ಲಂಬಾಣಿಗಳ ಆರಾಧ್ಯದೇವ ಸೇವಾ ಭಾಯಿ ಅಂದರೆ ಸೇವಾಬಾಯಿ ಅಲ್ಲ. ಸೇವಾ ಭಾಯಾ ಅನ್ನುವಂತವನಿದ್ದಾನೆ. ಪುಲ್ಲಿಂಗ ಹೋಗಿ ಸ್ತ್ರೀ ಲಿಂಗ ಮಾಡ್ತಾ ಇದ್ದಾರೆ. ಅಂದರೆ ಯಾವ ನೆಲೆಯಲ್ಲಿ ಈ ಅಧ್ಯಯನಗಳಾದವು. ಅಂದರೆ ಯಾರದೋ ಮುಖಾಂತರ ವಿಷಯವನ್ನು ಸಂಗ್ರಹ ಮಾಡತಕ್ಕಂತಹದ್ದಾಗಿಯೇ ಹೊರತು ಸರಿಯಾದಂತಹ ರೀತಿಯಲ್ಲಿ ವಸ್ತುವನ್ನು ಸಂಗ್ರಹ ಮಾಡಲಿಕ್ಕೆ ಅವರಿಂದ ಆಗಿಲ್ಲ ಅನ್ನೋದನ್ನು ನೋಡ್ತಾ ಇದ್ದೇವೆ. ಈ ನೆಲೆಯಿಂದ, ವಸಾಹತು ನೆಲೆಯಿಂದ ರಾಜಕೀಯ ಅನುಕೂಲಕ್ಕಾಗಿ ಮಾತ್ರ ಆಗಿರತಕ್ಕಂತಹ ಅಧ್ಯಯನ ಪ್ರಾರಂಭದ ಸಂದರ್ಭದಲ್ಲಿ ಆದ ಅಧ್ಯಯನ ಎನ್ನುವುದನ್ನು ನಾವು ಕಾಣ್ತಾ ಇದ್ದೇವೆ. ಆದರೆ ಕೆಲವು ಜನ ಮಾತ್ರ ಒಳ್ಳೆಯ ರೀತಿಯಲ್ಲಿ ಬ್ರಿಟೀಷ್ ಅಧಿಕಾರಿಗಳಾಗಲಿ, ಪಾದ್ರಿಗಳಾಗಲಿ ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿರುವುದನ್ನು ಮರೆಯುವಂತಿಲ್ಲ. ವರಲ್ಲಿ ನಿಮಗೆಲ್ಲಾ ಗೊತ್ತಿರುವ ಹಾಗೆ ವೆರಿಯರ್ ಎಲ್ವಿನ್ ಎನ್ನುವಂತಹವರ ಮಾತು ನೀವೆಲ್ಲ ಕೇಳಿರಬಹುದು. ವೆರಿಯರ್ ಎಲ್ವಿನ್ ಕೂಡಾ ಇಂಗ್ಲೆಂಡ್‌ನಿಂದ ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಪಾದ್ರಿಯಾಗಿ ಭಾರತ ದೇಶಕ್ಕೆ ಬರ್ತಾ ಇದ್ದಾರೆ. ಹಾಗೆ ಬಂದ ವೆರಿಯರ್ ಎಲ್ವಿನ್ ನಮ್ಮ ಭಾರತ ದೇಶದ ಈಶಾನ್ಯ ವಲಯದಲ್ಲಿರತಕ್ಕಂತಹ ಬುಡಕಟ್ಟುಗಳ ಜನರನ್ನು ನೋಡ್ತಾ ಇದ್ದಾರೆ. ಅದರ ಜೊತೆಯಲ್ಲಿ ಮಧ್ಯ ಪ್ರವೇಶದಲ್ಲಿರತಕ್ಕಂತಹ ಬುಡಕಟ್ಟು ಜನರಲ್ಲಿ ಹೋಗ್ತಾ ಇದ್ದಾರೆ. ಅವರ ಸಂಸ್ಕೃತಿ ನೋಡಿ ಆತ ಸಂಪೂರ್ಣ ಬೆರಗಾಗುತ್ತಿದ್ದಾನೆ. ಆತ ಭಾರತೀಯ ಪ್ರಜೆ ಆಗ್ತಾ ಇದ್ದಾನೆ. ಅದರ ಜೊತೆಯಲ್ಲಿ ಗಾಂಧೀ ಅನುಯಾಯಿ ಆಗ್ತಾ ಇದಾನೆ. ಹಾಗೆ ಇದ್ದುಕೊಂಡು ಸಂಪೂರ್ಣವಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾ ಇದ್ದಾನೆ. ಅಂದರೆ ಮಾನವೀಯ ನೆಲೆಯಿಂದ ಅಧ್ಯಯನ ಮಾಡುವಂತಹದ್ದನ್ನು ಇಲ್ಲಿ ವೆರಿಯರ್ ಎಲ್ವಿನ್‌ರ ಮುಖಾಂತರ ನಾವು ಮಾತ್ರ ಕಾಣಲು ಸಾಧ್ಯವಿದೆ. ಉಳಿದ ಅಧಿಕಾರಿಗಳಾಗಲಿ, ಪಾದ್ರಿಗಳಾಗಲಿ ಅವರೆಲ್ಲ ಬರಿ ದಾಖಲೆ ಮಾಡತ್ತಕ್ಕಂತಹ ಆ ಬುಡಕಟ್ಟುಗಳನ್ನು ಮೆಟೀರಿಯಲ್ ಆಗಿ ನೋಡತಕ್ಕಂತಹ ಇವುಗಳನ್ನು ಮಾತ್ರ ಅಧ್ಯಯನ ಮಾಡಿದ್ದನ್ನ ನಾವು ಕಾಣ್ತಾ ಇದ್ದೇವೆ. ಅದಕ್ಕೆ ಇಡೀ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಂಡಂತಹ ವೆರಿಯರ್ ಎಲ್ವಿನ್ ಆತನ ಚರಿತ್ರೆಯಲ್ಲಿ ಒಂದು ಮಾತು ಬರ್ತಾ ಇದೆ. ಇಡೀ ಮಾನವನನ್ನು ಕುರಿತು ವೈಜ್ಞಾನಿಕ ಮಾನವಶಾಸ್ತ್ರ ಕುರಿತು ಬಹಳ ದೊಡ್ಡ ಶಾಸ್ತ್ರ. ಆದರೆ ಅಭ್ಯಾಸಕ್ಕೆ ನಾನಾ ತರದ ಜನಗಳು ಬೇಕು. ಇದರ ಜೊತೆಗೆ ಮನುಷ್ಯ ಸ್ವಭಾವವನ್ನು ಅರಿತವರು ಬೇಕು. ಆಧರೆ ಇಂಥವರ ಬಗ್ಗೆ ಮಾನವಶಾಸ್ತ್ರಜ್ಞರು ತಾತ್ಸಾರ ಭಾವನೆಯನ್ನು ತೋರುತ್ತಿರುವುದು ದುರದೃಷ್ಟಕರವೇ ಸರಿ. ಮಾನವರನ್ನು ಅಭ್ಯಾಸ ಮಾಡುವಾಗ ಅವರನ್ನು ಕೇವಲ ಪ್ರಯೋಗ ಶಾಲೆಯ ವಸ್ತುಗಳನ್ನಾಗಿ ಪರಿಗಣಿಸುವ ಬದಲು ಮನುಷ್ಯರೆಂದು ಭಾವಿಸಿ ಅವರ ಕಷ್ಟಸುಖಗಳಲ್ಲಿ ಭಾಗಿ ಆಗುವುದು ತಪ್ಪಲ್ಲ. ಮಾನವಶಾಸ್ತ್ರದ ತಿರುಳು ಹಾಗೂ ಕಲಿಯುವ ಪ್ರೇಮ ಅದಲ್ಲದೆ ಯಾವುದೂ ರುಚಿಯಿಲ್ಲ. ಯಾವುದೂ ಸತ್ಯವಲ್ಲ. ನನಗೆ ಮಾನವಶಾಸ್ತ್ರವೆಂದರೆ ಹೊರಗಡೆಯ ಕೆಲಸ ಮಾತ್ರವಲ್ಲ. ನನ್ನ ಬಾಳುವೆ ಅದೇ ಆಗಿತ್ತು ಅನ್ನುವಂತಹ ಮಾತನ್ನು ಹೇಳುವ ಮೂಲಕ ಸಂಪೂರ್ಣವಾಗಿ ತಾನು ಆ ಬುಡಕಟ್ಟಿಗೆ ಅರ್ಪಿಸಿಕೊಳ್ಳುತ್ತಿದ್ದಾರೆ. ಬುಡಕಟ್ಟಿನ ಮಹಿಳೆಯನ್ನು ಮದುವೆಯಾಗ್ತಾಯಿದ್ದಾರೆ. ಇದು ನಿಜವಾದಂತಹ ಅಧ್ಯಯನ ಅನ್ನುವಂತಹದ್ದನ್ನು ಕಾಣುತ್ತಾ ಇದ್ದೇವೆ. ಸಂಪೂರ್ಣವಾಗಿ ಬುಡಕಟ್ಟಿನ ಜೊತೆ ಇದ್ದು ಬುಡಕಟ್ಟಿನವನೇ ಆದಾಗ ಮಾತ್ರ ಆ ಬುಡಕಟ್ಟುಗಳನ್ನು ಮಾನವೀಯ ನೆಲೆಯಿಂದ ನೋಡಲಿಕ್ಕೆ ಸಾಧ್ಯವಾಗುತ್ತಾ ಇವೆ. ಆ ಬುಡಕಟ್ಟುಗಳನ್ನು ಸರಿಯಾದಂತಹ ರೀತಿಯಲ್ಲಿ ಅಧ್ಯಯನ ಮಾಡ್ಲಿಕ್ಕೆ ಸಾಧ್ಯವಾಗುತ್ತಾ ಇದೆ. ಅಂತಾ ಒಂದು ಅಧ್ಯಯನ ಮಾತ್ರ ಉಪಯೋಗವಾಗುವಂತಹ ಅಧ್ಯಯನ ಆಗಲಿಕ್ಕೆ ಸಾಧ್ಯ. ಈ ಒಂದು ನೆಲೆಯಿಂದ ವೆರಿಯರ್ ಎಲ್ವಿನ್ ಅವರು ಈ ದೇಶದಲ್ಲಿ ಬುಡಕಟ್ಟುಗಳನ್ನು ಕುರಿತು ಅಧ್ಯಯನ ಮಾಡಿರುವುದನ್ನು ಕಾಣ್ತಾ ಇದ್ದೇವೆ. ಕೊನೆಗೆ ಒಂದು ಮಾತು ಹೇಳ್ತಾ ಇದ್ದಾರೆ. ಈ ಬಾಳಿನಲ್ಲಿ ಮಾಡಬೇಕಾದನ್ನು ಮಾಡಲೇ ಬೇಕು. ಸ್ವರ್ಗವನ್ನು ಮುಟ್ಟದಿರಬಹುದು. ಆದರೆ ಭೂಮಿಯ ಮೇಲೆ ಮಾಡಬೇಕಾದ್ದು ಬಹಳಷ್ಟಿದೆ ಎಂದು. ಅಂದರೆ ಜನರಿಗಾಗಿ ನಮ್ಮ ಅಧ್ಯಯನ ಪ್ರಯೋಜನ ಆದಾಗ ಮಾತ್ರ ಅಂಥಾ ಅಧ್ಯಯನ ಉಪಯೋಗವಿದೆ ಅನ್ನೋದನ್ನು ವೆರಿಯರ್ ಎಲ್ವಿನ್ ಹೇಳಿದರು. ಈ ನೆಲೆಯಿಂದಲೂ ಕೂಡಾ ಆ ಬ್ರಿಟಿಷ್ ಪಾದ್ರಿಗಳು ಅಧ್ಯಯನ ಮಾಡಿದರು. ಆ ಮಧ್ಯಪ್ರದೇಶದಲ್ಲಿರತಕ್ಕಂತಹ ಅವರ ಜೊತೆಯಲ್ಲಿ ಈಶಾನ್ಯ ಭಾಗದಲ್ಲಿರತಕ್ಕಂತಹ ಅನೇಕ ಬುಡಕಟ್ಟುಗಳನ್ನು ಕುರಿತು ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಂಡು ಅವನ್ನು ವೆರಿಯರ್ ಎಲ್ವಿನ್ ಅವರು ಅಧ್ಯಯನ ಮಾಡಿದ್ದನ್ನು ಕೂಡಾ ನಾವು ಗಮನಿಸಬೇಕಾದಂತಹ ಸಂಗತಿ. ಹೀಗಾಗಿ ಒಂದು ದೇಶದ ಸಂಸ್ಕೃತಿಯನ್ನು ಅಧ್ಯಯನ ಮಾಡ್ತಾಕ್ಕಂತಹದ್ದು ಅದು ರಾಜಕೀಯ ಅನುಕೂಲಕ್ಕಾಗಿ ಅನ್ನುವಂತಹ ಒಂದು ನೆಲೆಯಿಂದ ಬ್ರಿಟಿಷರು ಈ ದೇಶದಲ್ಲಿ ಬುಡಕಟ್ಟುಗಳನ್ನು ಕುರಿತು ಅಧ್ಯಯನಕ್ಕೆ ತೊಡಗಿಸುತ್ತಿದ್ದಾರೆ. ಅದರ ಜೊತೆಯಲ್ಲಿ ಕ್ರೈಸ್ತ, ಮಿಷನರಿಗಳು ಕೂಡಾ ಧರ್ಮ ಪ್ರಚಾರ ಮಾಡುವಂತಹ ನೆಲೆಯಿಂದಾಗಿ ಈ ದೇಶದ ಬುಡಕಟ್ಟುಗಳನ್ನು ಕುರಿತು ಅಧ್ಯಯನ ಮಾಡ್ತಾ ಇದ್ದಾರೆ. ಯಾಕಂದ್ರೆ, ಆ ಜನರ ಸಂಸ್ಕೃತಿ ಗೊತ್ತಾಗಲಿಲ್ಲ. ಆ ಜನರ ಭಾಷೆ ಗೊತ್ತಾಗ್ಲಿಲ್ಲಾ. ಆ ಜನರ ಜೊತೆ ನಾವು ಸ್ಪಂದಿಸಲಿಲ್ಲ ಅಂದರೆ, ಅವರು ಧರ್ಮಾಂತರ ಆಗಲಿಕ್ಕೆ ಸಾಧ್ಯವಿಲ್ಲ. ಅದಕ್ಕಾಗಿನೇ ಬ್ರಿಟಿಷ್ ಪಾದ್ರಿಗಳು, ಕ್ರೈಸ್ತ ಮಿಷನರಿಗಳು ಕೂಡಾ ಆ ಒಂದು ಉದ್ದೇಶದಿಂದಾಗಿ ನಮ್ಮ ದೇಶದ ಬುಡಕಟ್ಟುಗಳನ್ನು ಕುರಿತು ಅಧ್ಯಯನಕ್ಕೆ ತೊಡಗಿರುವುದನ್ನು ನಾವು ಕಾಣ್ತಾ ಇದ್ದೇವೆ. ಅದೇನೇ ಇರಲಿ, ಯಾವುದೋ ಒಂದು ನೆಲೆಯಿಂದ ಪ್ರಾರಂಭವಾಗಲಿ. ಆದರೆ ಆ ಬುಡಕಟ್ಟಿನ ಅಧ್ಯಯನ ಬ್ರಿಟಿಷ್ ಅಧಿಕಾರಿಗಳ ಮೂಲಕ, ಪಾದ್ರಗಳ ಅಧ್ಯಯನಕ್ಕೆ ಒಂದು ಪ್ರೇರಣೆಯನ್ನು ಪ್ರೋತ್ಸಾಹವನ್ನು ಕೂಡಾ ಕೊಡ್ತಾ ಇದೆ ಅನ್ನುವಂತಹದ್ದನ್ನು ಕಾಣ್ತಾ ಇದ್ದೇವೆ. ಹೀಗಾಗಿ ಕರ್ನಾಟಕದ ಬುಡಕಟ್ಟುಗಳ ಅಧ್ಯಯನ ಯಾವ ನೆಲೆಯಿಂದ ಪ್ರಾರಂಭವಾಯಿತು ಅನ್ನೋದನ್ನು ಕೆಲವೇ ಮಾತುಗಳಲ್ಲಿ ಹೇಳಲಿಕ್ಕೆ ಇಷ್ಟಪಡುತ್ತಿದ್ದೇವೆ.

ಇಲ್ಲಿ ಕರ್ನಾಟಕದಲ್ಲಿ ಮೊದಲಿಗೆ ೧೯೦೩ರಲ್ಲಿ ಕರ್ನಾಟಕದ ಬುಡಕಟ್ಟುಗಳನ್ನು ಕುರಿತಾದಂತಹ ಅಧ್ಯಯನ ಪ್ರಾರಂಭವಾಗ್ತ ಇದೆ. ಎಚ್.ವಿ. ನಂಜುಂಡಯ್ಯ ಅವರು ಈ ಮೈಸೂರಿನಲ್ಲಿರತಕ್ಕಂತಹ ಬುಡಕಟ್ಟುಗಳನ್ನು ಕುರಿತು ಅಧ್ಯಯನ ಮಾಡಿದರು. ಅನಂತರದಲ್ಲಿ ಅನಂತ ಕೃಷ್ಣಯ್ಯ ಅವರು ಅದನ್ನು ಮುಂದುವರೆಸಿಕೊಂಡು ಹೋದಂತಹದ್ದನ್ನು ಅವರ ಜೊತೆಯಲ್ಲಿ ಎಡ್ಗರ್ ಥರ್‌ಸ್ಟನ್ ಎನ್ನುವವರು ಕೂಡಾ ಇಲ್ಲಿಯ ಬುಡಕಟ್ಟುಗಳನ್ನು ಕುರಿತು ಅಧ್ಯಯನ ಮಾಡಿರುವುದನ್ನು ನಾವು ಕಾಣ್ತಾ ಇದ್ದೇವೆ. ಹೀಗಾಗಿ ಇಲ್ಲಿ ಬುಡಕಟ್ಟುಗಳನ್ನು ಕುರಿತಾದ ಅಧ್ಯಯನ ಬ್ರಿಟೀಷ್ ಅಧಿಕಾರಿಗಳ ಮೂಲಕ ಪಾದ್ರಿಗಳ ಮೂಲಕ ಆದ ನಂತರ ಮೈಸೂರು ಅರಸರು ಈ ಎಚ್.ವಿ. ನಂಜುಂಡಯ್ಯನವರಿಗೆ ಮೈಸೂರಿನಲ್ಲಿರುವಂತಹ ಬುಡಕಟ್ಟುಗಳನ್ನು ಕುರಿತು ಅಧ್ಯಯನ ಮಾಡ್ಲಿಕ್ಕೆ ತೊಡಗಿಸುವುದರ ಮೂಲಕ ಅಲ್ಲಿರತಕ್ಕಂತಹ ಬುಡಕಟ್ಟುಗಳ ಒಂದು ಸಮಸ್ಯೆಗಳನ್ನು ಅರಿತುಕೊಳ್ಳಲಿಕ್ಕೆ ಅವರು ಪ್ರಯತ್ನ ಮಾಡುವುದರ ಮೂಲಕ ಆ ಬುಡಕಟ್ಟುಗಳಿಗೆ ಇರತಕ್ಕಂತಹ ಸಮಸ್ಯೆಗಳಿಗೆ ಸ್ಪಂದಿಸುವಂತಹ, ಸಹಾಯ ನೀಡತಕ್ಕಂತಹ ಹಿನ್ನೆಲೆಯಲ್ಲಿ ಆ ಅಧ್ಯಯನ ಕರ್ನಾಟಕದಲ್ಲಿ ಪ್ರಾರಂಭವಾಯಿತು. ಹಾಗಾಗಿ ಕರ್ನಾಟಕದಲ್ಲಿ ಆ ನಂತರದಲ್ಲಿ ಆಗಿರತಕ್ಕಂತಹ ಅಧ್ಯಯನ ಇಲ್ಲ. ಆದರೆ ನಮ್ಮ ಭಾರತ ದೇಶದ ಯಾವ ರಾಜ್ಯಕ್ಕಿಂತಲೂ ಹೆಚ್ಚಿನ ಅಧ್ಯಯನ ಕರ್ನಾಟಕದಲ್ಲಿ ನಡಿದಿದೆ ಎನ್ನುವುದನ್ನು ನಾವೆಲ್ಲ ಒಪ್ಪಿಕೊಳ್ಳಬೇಕಾದ ವಿಷಯವೇ. ಆದರೆ ಬುಡಕಟ್ಟುಗಳನ್ನು ಕುರಿತಾದ ಅಧ್ಯಯನ ಹೆಚ್ಚಿಗೆ ಆಗಲಿಲ್ಲ. ಇವತ್ತು ಈಶಾನ್ಯ ವಲಯದಲ್ಲಿರತಕ್ಕಂತಹ ಮಧ್ಯಪ್ರದೇಶದ ಬೇರೆ ಬೇರೆ ಭಾಗದಲ್ಲಿರತಕ್ಕಂತಹ ಬುಡಕಟ್ಟುಗಳನ್ನು ಕುರಿತಾದಂತಹ ಅಧ್ಯಯನದ ನಂತರ ನಮ್ಮ ಕರ್ನಾಟಕದಲ್ಲಿ ಬುಡಕಟ್ಟುಗಳನ್ನು ಕುರಿತಾದಂತಹ ವಿಶಿಷ್ಟವಾದ ಅಧ್ಯಯನ ಪ್ರಾರಂಭವಾಯಿತು ಅನ್ನೋದನ್ನು ನಾವು ನೋಡ್ತಾ ಇದ್ದೇವೆ. ಇವತ್ತು ಅಲೆಮಾರಿ ಬುಡಕಟ್ಟುಗಳ ಅಧ್ಯಯನ ಸಮೀಕ್ಷೆ ಅಥವಾ ಇಡೀ ಬುಡಕಟ್ಟುಗಳ ಸಮೀಕ್ಷೆ ಮಾಡಬೇಕೆನ್ನುವುದು ನನಗಿರತಕ್ಕಂತಹ ಸಮಸ್ಯೆ. ಅಲೆಮಾರಿ ಬುಡಕಟ್ಟುಗಳು ಬಹಳ ಕಡಿಮೆ ಇವೆ. ಪರಿಶಿಷ್ಟ ಬುಡಕಟ್ಟುಗಳೇ ಹೆಚ್ಚಿವೆ. ಅಲೆಮಾರಿ ಬುಡಕಟ್ಟುಗಳು ಎಂದಾಗ ಯಾವನ್ನ ಅಲೆಮಾರಿ, ಸಂಪೂರ್ಣ ಅಲೆಮಾರಿ, ಯಾವುನ್ನ ಅರೆ ಅಲೆಮಾರಿ ಎನ್ನಬೇಕು ಅನ್ನುವ ಚರ್ಚೆ ಕೂಡಾ ಇರತಕ್ಕಂತಹದ್ದು. ಹೀಗಾಗಿ ಭಾಸ್ಕರ್ ಅವರು ಒಂದು ಮಾತನ್ನು ಹೇಳ್ತಾ ಇಲ್ಲಿ ಉತ್ತರ ಕರ್ನಾಟಕದಲ್ಲಿರತಕ್ಕಂತಹ ಅಲೆಮಾರಿಗಳಾವುವು ಅನ್ನುವಂತಹದ್ದನ್ನು ಕೂಡಾ ಒಂದು ಕಡೆ ಹೇಳಿದರು. ಅಲೆಮಾರಿಗಳು ಆಹಾರಕ್ಕಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗ್ತಾ ಇರೋದನ್ನು ಅಲೆಮಾರಿಗಳು ಅಂತಾ ಕರೀತಾ ಇದ್ದೇವೆ. ಇನ್ನೂ ಕೆಲವರು ಆಹಾರಕ್ಕಾಗಿ ಹೋಗಿ ಮತ್ತೆ ತಮ್ಮ ವಾಸಸ್ಥಾನಕ್ಕೆ ಒಂದೇ ಪ್ರದೇಶಕ್ಕೆ ಬರತಕ್ಕಂತವರನ್ನು ಅರೆ ಅಲೆಮಾರಿಗಳು ಅಂತ್ಹೇಳಿ ಕರಿತಾ ಇದ್ದೇವೆ. ಈ ಅಲೆಮಾರಿಗಳು ಅರೆ ಅಲೆಮಾರಿಗಳಾಗ್ತಾ ಇದ್ದಾರೆ. ಅ ಮೇಲೆ ಅಲೆಮಾರಿಗಳು ಹೋಗಿ ಒಂದು ಕಡೆ ನೆಲೆಯಾಗಿ ಕೂಡಾ ನಿಲ್ಲುತ್ತಾ ಇದ್ದಾರೆ. ಹೀಗಾಗಿ ಇದನ್ನು ದಾಖಲೆ ಮಾಡುವಂತಹದ್ದು ಕೂಡಾ ಕಷ್ಟಕರ ಆಗಿರತಕ್ಕಂತಹದ್ದು. ಕರ್ನಾಟಕದ ಅಲೆಮಾರಿಗಳನ್ನು ನಾವು ನೋಡುವಾಗ ಕೀಳ್ಯೆಕ್ಯಾತರು, ಹಕ್ಕಿಪಿಕ್ಕಿಯರು, ಪಾದ್ರಿಯರು, ಬುಡುಬುಡುಕಿಯರು, ದೊಂಬಿದಾಸರು, ಕಿನ್ನರಿ ಜೋಗಿಗಳು, ಕೊರವಂಜಿಯರು, ಚೊಂಚಿ ಚೊಂಚವಾರರು, ಅಡವಿ ಚೊಂಚರು, ರಾಜಗೊಂಡರು ಈ ರೀತಿಯ ಉಲ್ಲೇಖಗಳಿವೆ. ಆದರೆ ಒಂದೇ ಸಮುದಾಯಕ್ಕೆ ಬೇರೆ ಬೇರೆ ಹೆಸರಿನಿಂದ ಕರೆದದ್ದನ್ನು ಕೂಡಾ ನಾವು ಕಾಣ್ತಾ ಇದ್ದೇವೆ. ಇದು ಬಹಳ ಕಷ್ಟಕರವಾಗಿರುವಂತಹದ್ದು. ಪಾರ್ದಿ, ಪಾನ್ಸ ಪಾರ್ದಿ ಅಂದರೆ ವಿದ್ವಾಂಸರು ಕೂಡಾ ನಾನು ಆಗಲೇ ಹೇಳಿದ ಹಾಗೆ ಇದನ್ನು ಅಧ್ಯಯನ ಮಾಡೋದು ಬಹಳ ಕಷ್ಟಕರ. ನಾನು ಕೆಲವು ಉಲ್ಲೇಖಗಳನ್ನು ನೋಡಿದೆ. ಆ ಲೀಸ್ಟ್‌ನಲ್ಲಿ ಕೊಡ್ತಾ ಇದ್ದಾರೆ. ಒಂದು ಕಡೆ ಇಪ್ಪತ್ತೊಂದು ಬುಡಕಟ್ಟುಗಳಿವೆ. ಇನ್ನೊಂದು ಕಡೆ ಇಪ್ಪತ್ತೇಳು ಬುಡಕಟ್ಟುಗಳಿವೆ ಎನ್ನುವುದನ್ನು ಬರ್ತಾ ಇದೆ ಹೊರತು ಹೆಚ್ಚಿನ ಬುಡಕಟ್ಟುಗಳ ಉಲ್ಲೆಖ ಬರೋದಿಲ್ಲ. ಪಾರ್ದಿ ಮತ್ತು ಪಾನ್ಸ್ ಪಾರ್ದಿ ಅನ್ನುವಂತವರು ಕೂಡಾ ಒಬ್ಬರೇ. ಹಕ್ಕಿಪಿಕ್ಕಿಯ ಹೆಸರಿನಿಂದಲೂ ಕೂಡಾ ಅವರನ್ನು ಕರೆಯುವುದನ್ನು ನಾವು ಕಾಣ್ತಾ ಇದ್ದೇವೆ. ಅಂದರೆ ಇಲ್ಲಿ ಉಲ್ಲೇಖದಲ್ಲಿ ಮೂರು ಬಂದು ಬಿಟ್ಟಿವೆ. ಅಂದ್ರೆ ಈ ಮೂರು ಸಮುದಾಯಗಳು ಬೇರೇನು? ಹಾಗಾಗಿ ಈ ಬುಡಕಟ್ಟುಗಳ ಅಧ್ಯಯನ ಬಹಳ ಸವಾಲನ್ನು ಒಡ್ಡುತಕ್ಕಂತಹದ್ದು. ಅದಕ್ಕಾಗಿ ಅದು ಬಹಳ ಅಚ್ಚುಕಟ್ಟಾದ ಹಿನ್ನೆಲೆಯಲ್ಲಿ, ಯೋಜನೆಯ ಹಿನ್ನೆಲೆಯಲ್ಲಿ ಆಗಬೇಕಾದಂತಹ ಅಧ್ಯಯನ. ಹೀಗೆ ನಮ್ಮಲ್ಲಿ ಪ್ರಮುಖವಾಗಿ ಕಂಡು ಬರುವಂತಹ ಹತ್ತಾರು ಅಲೆಮಾರಿಗಳನ್ನು ಮಾತ್ರ ನಾವು ಇವತ್ತು ಕರ್ನಾಟಕದಲ್ಲಿ ಕಾಣ್ತಾ ಇದ್ದೇವೆ. ದಕ್ಷಿಣ ಕರ್ನಾಟಕದ ಕಡೆ ಹೋದಾಗಿನಿಂದ ಬೇರೆ ಬೇರೆ ಇವತ್ತು ಸಿದ್ಧಿಯಾಗಿರಲಿ ಬೇರೆ ಬೇರೆ ಅವರಲ್ಲಿ ಅಲೆಮಾರಿಗಳು ಅರೆ ಅಲೆಮಾರಿಗಳು ಎನ್ನುವಂತಹ ಚರ್ಚೆ ಹಾಲಕ್ಕಿಗಳು ಕೂಡಾ ಅವರು ಕೂಡಾ ಅಲೆಮಾರಿಗಳೇ, ಅವರು ಕೂಡಾ ಬುಡಕಟ್ಟು ಎನ್ನುವಂತಹದ್ದನ್ನು ನಾವು ನೋಡ್ತಾ ಇದ್ದೇವೆ. ಈ ಹಿನ್ನೆಲೆಯಲ್ಲಿ ಇವತ್ತು ಅನೇಕ ಸಮಸ್ಯೆಗಳು ನಮ್ಮ ಮುಂದೆ ಇರತಕ್ಕಂತಹವು. ಈ ಬುಡಕಟ್ಟುಗಳನ್ನು ಅಲೆಮಾರಿಗಳನ್ನು ಕುರಿತಾದಂತಹ ಅಧ್ಯಯನ ಬಹಳ ವಿಶಿಷ್ಟವಾದಂತಹ ರೀತಿಯಲ್ಲಿ ಆಯ್ತು ಅನ್ನುವುದನ್ನು ನಾವು ಕಾಣ್ತಾ ಇದ್ದೇವೆ. ಅದು ಕೂಡಾ ೬ನೇ ದಶಕದ ನಂತರದಲ್ಲಿ ಯಾವಾಗ ಅಧ್ಯಯನ ಆಗ್ತಾ ಇವೆ. ಯಾಕೆ ಪ್ರಾರಂಭದಲ್ಲಿ ಆಗಲಿಲ್ಲ ಅಂದ್ರೆ ಆಗಲೇ ಭಾಸ್ಕರ ಅವರು ಹೇಳಿದ್ರು ಇವರೆಲ್ಲ ಊರು ಬಿಟ್ಟು ದೂರ ಇರ್ತಾರೆ. ನಮ್ಮ ಸಮಾಜ ಊರಿನಲ್ಲಿದ್ದವರಿಗೆ ಮನುಷ್ಯರೆಂದು ತಿಳಿದುಕೊಳ್ಳೋದಿಲ್ಲ. ಅವರನ್ನೇ ಪ್ರಾಣಿಗಳ ಹಾಗೆ ಕಾಣ್ತಾರೆ. ಇನ್ನೂ ಊರು ಬಿಟ್ಟು ದೂರ ಇರತಕ್ಕಂತಹವರ ಅಧ್ಯಯನ ಏನು ಮಾಡ್ತಾರೆ? ಅವರನ್ನು ಯಾವ ರೀತಿಯಲ್ಲಿ ಕಾಣ್ತಾ? ಈ ಊರಿನಲ್ಲಿ ಇರುತಕ್ಕಂತಹ ಜನರನ್ನೇ ಕೀಳು ಅಂತಾ ಕಾಣತಕ್ಕಂತಹ ನಮ್ಮ ಅಸ್ಪೃಶ್ಯರು ಅಂತಾ ಕಾಣತಕ್ಕಂತಹವರು ಇವತ್ತು ಬುಡಕಟ್ಟಿನ ಜನರು ಯಾವುದೋ ಗವಿಯಲ್ಲಿ ವಾಸವಾಗ ತಕ್ಕಂತಹ, ಯಾವುದೋ ಒಂದು ನೀರಿನ ಪ್ರದೇಶದಲ್ಲಿರತಕ್ಕಂತಹ, ಒಂದು ಕಾಡಿನಲ್ಲಿರತಕ್ಕಂತಹ ಜನರನ್ನು ಇವರು ಮನುಷ್ಯರು ಅಂತ್ಹೇಳಿ ತಿಳಿದುಕೊಳ್ಳಲೇ ಇಲ್ಲ. ಇನ್ನು ಅಧ್ಯಯನದಲ್ಲಿ ಎಲ್ಲೋ ದೂರದ ವಿಷಯ. ಹಾಗಾಗಿ ಯಾವಾಗ ಪ್ರಾರಂಭವಾಯಿತು ಅಂತಂದ್ರ, ಯಾವಾಗ ಶೈಕ್ಷಣಿಕವಾದಂತಹ ಮಹತ್ವ ಜಾನಪದಕ್ಕೆ ಸಿಕ್ಕಿತೋ ಆವಾಗನಿಂದ ನಮ್ಮ ಜಾನಪದದ ಬುಡಕಟ್ಟುಗಳ ಅಧ್ಯಯನ ಬಹಳ ತೀವ್ರತರವಾಗಿ ಮತ್ತು ವಿಶಿಷ್ಟವಾಗಿ ಆಯ್ತು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಒಂದು ಪತ್ರಿಕೆಯಾಗಿ ಬಿ.ಎ. ದಲ್ಲಿ ಬಂದಾಗ ಅವರ ಜೊತೆಯಲ್ಲಿ ಒಂದು ಪ್ರತ್ಯೇಕವಾದ ವಿಭಾಗ ಆದಾಗ, ಅವರ ಜೊತೆಯಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಭಾಗ ಆದಾಗ ಮತ್ತು ವಸ್ತು ಸಂಗ್ರಹವಾದಾಗ ಮಾತ್ರ ಜಾನಪದದ ಜೊತೆಗೆ ಬುಡಕಟ್ಟು ಅಧ್ಯಯನವಾಗಲಿ, ಸಂಗ್ರಹವಾಗಲಿ ಅವೆಲ್ಲಾ ಪ್ರಾರಂಭವಾಯಿತು ಅನ್ನುವುದು ಬಹಳ ಮಹತ್ವವಾಗಿರತಕ್ಕಂತ ಸಂಗತಿ. ಆನಂತರದಲ್ಲಿ ಯಾವಾಗ ಈ ಅಲೆಮಾರಿನ ಜನರಿಗೆ ಬುಡಕಟ್ಟಿನ ಅಲೆಮಾರಿನ ಜನರಿಗೆ ಅಕ್ಷರ ಜ್ಞಾನ ಬಂತೋ ಆ ಸಂದರ್ಭದಿಂದ ೭೦ರ ದಶಕದಿಂದ ಮಾತ್ರ ಈ ಬುಡಕಟ್ಟಿನ ಅಧ್ಯಯನ. ಈ ಬುಡಕಟ್ಟಿನ ಜನರೇ ವಿಶಿಷ್ಟವಾದ ರೀತಿಯಲ್ಲಿ ಮಾಡಲಿಕ್ಕೆ ತೊಡಗಿದರು ಎನ್ನುವಂತಹದ್ದನ್ನು ನಾವು ಕಾಣ್ತಾ ಇದ್ದೇವೆ. ತೀ.ನಂ. ಶಂಕರನಾರಾಯಣ ಕಾಡುಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು ಎಂದು ಸಂಶೋಧನಾ ಪ್ರಬಂಧ ಬರೆದರು. ಆನಂತರದಲ್ಲಿ ಬುಡಕಟ್ಟುಗಳ ಅಧ್ಯಯನ ತೀವ್ರತರವಾಗಿ ನಮ್ಮ ಕರ್ನಾಟಕದಲ್ಲಿ ಪ್ರಾರಂಭವಾಯಿತು. ನಂತರದಲ್ಲಿ ಡಾ. ಪಿ.ಕೆ. ಖಂಡೋಬ ಅವರು ಲಂಬಾಣಿಗಳನ್ನು ಕುರಿತು ಅಧ್ಯಯನ ಮಾಡಿದರು. ಆನಂತರದಲ್ಲಿ ಬೇರೆ ಬೇರೆ ನೆಲೆಯಿಂದ ಬೇರೆ ಬೇರೆ ಬುಡಕಟ್ಟುಗಳ ಅಧ್ಯಯನ ನಮ್ಮ ಕರ್ನಾಟಕದಲ್ಲಿ ಬಹಳ ವಿಶಿಷ್ಟವಾಗಿ ಆಯ್ತು ಅನ್ನೋದನ್ನು ನಾವು ಕಾಣ್ತಾ ಇದ್ದೇವೆ – ಸಿದ್ಧಿಗಳನ್ನು ಕುರಿತಾಗಲಿ ಹೆಳವರನ್ನ ಕುರಿತಾಗಲಿ, ಹೀಗೆ ಬೇರೆ ಬೇರೆ ಬುಡಕಟ್ಟಿನ ಅಲೆಮಾರಿಗಳನ್ನು ಕುರಿತಾದಂತಹ ಅಧ್ಯಯನ ಡಾ. ಪವ್ವಾರ ಅನ್ನುವಂತರಾಗಲಿ, ಜನುರುಲ್ಲಾ ಶರೀಪ್ ಅನ್ನುವಂತವರಾಗಲಿ ಹೀಗೆ ಬೇರೆ ಬೇರೆ ಜನ ಬುಡಕಟ್ಟಿನ ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡಲಿಕ್ಕೆ ಪ್ರಾರಂಭ ಮಾಡಿದರು. ಆನಂತರ ೯೦ರ ನಂತರದಲ್ಲಿ ಆ ಬುಡಕಟ್ಟಿನ ಬೇರೆ ಬೇರೆ ಕ್ಷೇತ್ರಗಳನ್ನು ಕುರಿತು ಅಧ್ಯಯನ ಮಾಡಲಿಕ್ಕೆ ಜನ ಮುಂದಾಗಿರತಕ್ಕಂತಹದ್ದು. ಅಂದರೆ ಬರೇ ಸಂಸ್ಕೃತಿಯನ್ನು ದಾಖಲೆ ಮಾಡತಕ್ಕಂತಹ ಅಧ್ಯಯನ ಮಾಡತಕ್ಕಂತಹ ಅಧ್ಯಯನ ನಡೀತಾ ಇತ್ತಲ್ಲಾ ಆ ಬುಡಕಟ್ಟಿನ ಜನರಿಗೂ ಬೇರೆ ಬೇರೆ ಆಯಾಮಗಳಿವೆ. ಬೇರೆ ಬೇರೆ ಅವರ ಬದುಕಿನ ನೆಲೆಗಳಿವೆ. ಅವರ ಸಂಸ್ಕೃತಿಯ ಬೇರೆ ಬೇರೆ ಮುಖಗಳಿವೆ ಎನ್ನುವಂತಹದ್ದನ್ನು ೯೦ರ ನಂತರ ಅರಿತುಕೊಂಡಂತಹ ಜನ ಅವರ ಸಾಹಿತ್ಯವನ್ನು ಸಾಹಿತ್ಯದ ಬೇರೆ ಬೇರೆ ವಲಯಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದ ಅಧ್ಯಯನ ಮಾಡತಕ್ಕಂತಹ ವಿಧಾನವನ್ನು ರೂಢಿಸಿಕೊಂಡರು ಎನ್ನುವಂತಹದ್ದನ್ನು ಕಾಣ್ತಾ ಇದ್ದೇವೆ. ಯಾಕೆ ಅಧ್ಯಯನ ಹೆಚ್ಚಾಗಲಿಲ್ಲಾ ಅಂದ್ರೆ ಬೇರೆ ಜನ ಅವರನ್ನು ದೂರದಿಂದ ನೋಡತಕ್ಕಂತಹದ್ದು.

ನಾನು ಡಾ. ಪಿ.ಕೆ. ಖಂಡೋಬಾ ಅವರ ಮಾರ್ಗದರ್ಶನದಲ್ಲಿ ಲಂಬಾಣಿಗಳ ಜನಪದ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡ್ತಾ ಇದ್ದೆ. ಆವಾಗ ಒಬ್ಬ ಹಿರಿಯ ಸಂಶೋಧಕರು ಕೇಳಿದರು. ಅಂದರೆ ಲಂಬಾಣಿಗಳಲ್ಲಿ ಅಷ್ಟು ಸಾಹಿತ್ಯ ಇದೇನೇ? ಅಂತಾ. ಅದಕ್ಕೆ ನಾನು ಹೇಳಿದೆ ಲಂಬಾಣಿಗಳಲ್ಲಿ ಸಾಕಷ್ಟು ಸಾಹಿತ್ಯ ಇವೆ. ನಾನು ಇಡಿಯಾಗಿ ಅವರ ಜಾನಪದ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡ್ತಾ ಇದ್ದೇನೆ. ಆದರೆ ಅವರ ಜನಪದ ಸಾಹಿತ್ಯದ ಒಂದೊಂದು ಭಾಗವನ್ನು ಕುರಿತು, ಒಂದೊಂದು ಮುಖಗಳನ್ನೇ ಕುರಿತು ಅಧ್ಯಯನ ಮಾಡುವಷ್ಟು ಸಾಹಿತ್ಯ ಇವೆ. ಅವರ ಹಾಡುಗಳನ್ನು ಕುರಿತು, ಕಥನಗೀತೆಗಳನ್ನು ಕುರಿತು, ಗಾದೆಗಳನ್ನು ಕುರಿತು, ಒಗಟುಗಳನ್ನು ಕುರಿತು ಸಾಕಷ್ಟು ಸಾಹಿತ್ಯ ಇದೆ. ಒಂದೊಂದೆ ಭಾಗಗಳನ್ನು ಕುರಿತು ಅಧ್ಯಯನ ಮಾಡುವಷ್ಟು ಸಾಹಿತ್ಯ ಇವೆ.ಆದರೆ ನಾನು ಇಡಿಯಾಗಿ ಅಧ್ಯಯನ ಮಾಡ್ತಾ ಇದ್ದೇನೆ. ನನಗೇನು ತೊಂದರೆ ಆಗೋದಿಲ್ಲ ಅಂತಾ ನಾನ ಹೇಳಿದೆ. ಅಂದರೆ ಹಿರಿಯ ಸಂಶೋದಕರು ಅಂದ್ರ ಬುಡಕಟ್ಟುಗಳನ್ನು ಸಂಶೋಧಕ ರೀತಿಯಲ್ಲಿ ದೂರದಿಂದ ನೋಡತಕ್ಕಂತಹದ್ದು. ಅಂದರೆ ಅವರನ್ನು ಸಂಪೂರ್ಣವಾಗಿ ತಿಳಿಕೊಂಡಿಲ್ಲ, ಅರಿತುಕೊಂಡಿಲ್ಲ, ಅರಿತುಕೊಳ್ಳಲಿಕ್ಕೆ ಕೂಡಾ ಹೋಗಿಲ್ಲ ಅನ್ನುವಂತಹದ್ದನ್ನು ಇದು ತೋರಿಸಿ ಕೊಡುತ್ತಾ ಇವೆ. ಆ ನೆಲೆಯಿಂದ ಯಾವಾಗ ಬುಡಕಟ್ಟು ಜನರಿಗೆ ಅಕ್ಷರ ಜ್ಞಾನ ಬಂತೋ ಆವಾಗ ಮಾತ್ರ ಬುಡಕಟ್ಟುಗಳ ಅಧ್ಯಯನ ತೀವ್ರವಾಗಿ ಈ ನಾಡಿನಲ್ಲಿ ಪ್ರಾರಂಭವಾಯಿತು ಅನ್ನೋದನ್ನು ಕಾಣ್ತಾ ಇದ್ದೇವೆ. ಅದರ ಜೊತೆಯಲ್ಲಿ ಅವರ ಸಾಹಿತ್ಯ. ಹೀಗೆ ಬೇರೆ ಬೇರೆ ನೆಲೆಯಲ್ಲಿ ಅಧ್ಯಯನ ನಡೀತಿರುವುದನ್ನು ನಾವು ನೋಡ್ತಾ ಇದ್ದೇವೆ. ಕನ್ನಡ ವಿಶ್ವವಿದ್ಯಾಲಯ ನಮ್ಮ ಕರ್ನಾಟಕದಲ್ಲಿ ಬಂದ ಮೇಲೆ ಅದರಲ್ಲೂ ಕೂಡಾ ಇತ್ತೀಚಿನ ೪-೫ ವರ್ಷಗಳಲ್ಲಿ ಮಾತ್ರ ಬುಡಕಟ್ಟುಗಳಿಗೆ ಒಂದು ವಿಶೇಷವಾದ ಆದ್ಯತೆಯನ್ನು ಕೊಡ್ತಾ ಇದೆ. ಈ ಬುಡಕಟ್ಟುಗಳ ಅಧ್ಯಯನಕ್ಕೆ ಸ್ಪಂದಿಸುತ್ತಿವೆ. ಅದನ್ನು ತೀವ್ರಗೊಳಿಸ್ತಾ ಇವೆ ಅನ್ನುವಂತಹದ್ದನ್ನು ಕಾಣ್ತಾ ಇದ್ದೇವೆ. ಹೋದ ವರುಷವೇ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟುಗಳ ಕಾರ್ಯಾಗಾರ ನಡೀತು ಅನ್ನುವುದು ಬಹಳ ಸಂತೋಷಕರವಾದ ಸಂಗತಿ. ಅಂತಹ ಕಾರ್ಯಾಗಾರಗಳಾದಾಗ ಇನ್ನೂ ಹೆಚ್ಚೆಚ್ಚು ಬುಡಕಟ್ಟುಗಳು ಬಿಚ್ಚಿಕೊಳ್ಳುತ್ತವೆ. ಅವುಗಳ ಅಧ್ಯಯನ ತೀವ್ರ ಆಗುತ್ತಾ ಇದೆ ಅನ್ನುವಂತಹದ್ದನ್ನು ನೋಡಲಿಕ್ಕೆ ಸಾಧ್ಯವಾಗ್ತಾ ಇದೆ. ಅದರ ಜೊತೆಯಲ್ಲಿ ಮೊಟ್ಟಮೊದಲಿಗೆ ಕನ್ನಡ ವಿಶ್ವವಿದ್ಯಾಲಯ ಬುಡಕಟ್ಟು ಮಹಾಕಾವ್ಯಗಳನ್ನು ಸಂಪಾದನೆ ಮಾಡುವಂತಹ ಮಹತ್ವದ ಕೆಲಸವನ್ನು ಮಾಡ್ತಾ ಅನ್ನುವಂತಹದ್ದನ್ನು ನಾವೆಲ್ಲ ಮೆಚ್ಚಿಕೊಳ್ಳಬೇಕಾದಂತಹ ಸಂಗತಿ. ಹೀಗಾಗಿ ಜುಂಜಪ್ಪನನ್ನು ಕುರಿತು, ಮಲೆಯ ಮಹದೇಶ್ವರನನ್ನು ಕುರಿತು, ಇಂತಹ ಮಹತ್ವದ ಬುಡಕಟ್ಟುಗಳ ಮಹಾಕಾವ್ಯಗಳನ್ನು ಕುರಿತು ಅವರು ಸಂಪಾದನೆ ಮಾಡಿರುವಂತಹದ್ದು ಬಹಳ ಮಹತ್ವದ್ದಾಗಿರತಕ್ಕಂತಹ ಸಂಗತಿ. ಇದೇ ನೆಲೆಯಿಂದ ಅವರ ಮೌಖಿಕವಾದ ಸಾಹಿತ್ಯ ಇವತ್ತು ದೂರವಾಗ್ತಾ ಇರೋದರಿಂದ ಅದನ್ನು ತೀವ್ರತರವಾಗಿ ಕನ್ನಡ ವಿಶ್ವವಿದ್ಯಾಲಯವಾಗಲಿ, ಅಕಾಡೆಮಿಯಾಗಲಿ, ಹೀಗೆ ನಮ್ಮಲ್ಲಿರತಕ್ಕಂತಹ ಬೇರೆ ಬೇರೆ ಸಂಸ್ಥೆಗಳಾಗಲಿ ಆ ಒಂದು ಮೌಖಿಕ ರೂಪದಲ್ಲಿರತಕ್ಕಂತಹ ಸಾಹಿತ್ಯವನ್ನು ಸಂಗ್ರಹ ಮಾಡಿದಲ್ಲಿ ನಿಜಕ್ಕೂ ಕೂಡಾ ಅದನ್ನು ಆನಂತರದಲ್ಲಿ ಅಧ್ಯಯನ ಮಾಡಲಿಕ್ಕೆ ಸಾಧ್ಯ ಆಗ್ತಾ ಇದೆ. ಆ ನೆಲೆಯಿಂದ ಇವತ್ತು ಕನ್ನಡದ ವಿಶ್ವವಿದ್ಯಾಲಯ ಬಹಳ ಮಹತ್ವವಾಗಿರತಕ್ಕಂತಹ ಯೋಜನೆಗಳನ್ನು ಹಾಕಿಕೊಂಡು ಬುಡಕಟ್ಟುಗಳ ಅಧ್ಯಯನ ಇವತ್ತು ಮಾಡ್ತಾಕ್ಕಂತಹದ್ದು ಬೇರೆ ರಾಷ್ಟ್ರಗಳ ವಿಶ್ವವಿದ್ಯಾಲಯಗಳಿಗೆ ಅದು ಮಾದರಿಯಾಗಿರತಕ್ಕಂತಹದ್ದು. ಈ ನೆಲೆಯಿಂದ ಇವತ್ತು ನಮ್ಮ ಕರ್ನಾಟಕ ಸಾಹಿತ್ಯ ಅಕಾಡೆಮಿ ಜಾನಪದ ಅಕಾಡೆಮಿ ಮಾಡದೇ ಇರತಕ್ಕಂತಹ ಮಹತ್ವದ ಕೆಲಸ ಮಾಡಿತು. ನಮ್ಮ ನಾಡಿನಲ್ಲಿರತಕ್ಕಂತಹ ಉಪ ಸಂಸ್ಕೃತಿ ಅಂತ್ಹೇಳಿ ಅದನ್ನು ಕರೆದರು. ಆನಂತರ ಚೀಟಿ ಕೂಡಾ ಆಯಿತು. ಅದರಲ್ಲಿ ಕೂಡಾ ಅನೇಕ ಬುಡಕಟ್ಟುಗಳು ಸೇರಿವೆ. ಅದರಲ್ಲಿ ಸುಮಾರು ೨೦-೨೫ ಬುಡಕಟ್ಟುಗಳನ್ನು ಕುರಿತಾದಂತಹ ಒಂದು ಮಾಹಿತಿ ಸಂಗ್ರಹ ಮಾಡತಕ್ಕಂತಹ ಅವರ ಸಂಸ್ಕೃತಿಯನ್ನು ದಾಖಲೆ ಮಾಡತಕ್ಕಂತಹ ಕೆಲಸವನ್ನು ನಮ್ಮ ಕರ್ನಾಟಕ ಸಾಹಿತ್ಯ ಅಕಾಡೆಮಿ ಕೂಡಾ ಡಾ. ಬರಗೂರು ರಾಮಚಂದ್ರಪ್ಪನವರು ಅಧ್ಯಕ್ಷರಾಗಿರುವಂತಹ ಸಂದರ್ಭದಲ್ಲಿ ಮಾಡಿರುವುದು ಕೂಡಾ ಬಹಳ ಮಹತ್ವದ್ದಾಗಿರತಕ್ಕಂತಹ ಕೆಲಸ. ಹೀಗಾಗಿ ನಮ್ಮ ನಾಡಿನಲ್ಲಿರುವ ಬುಡಕಟ್ಟುಗಳನ್ನು ಕುರಿತಾದ ಅಧ್ಯಯನ ಇವತ್ತು ಅಕಾಡೆಮಿಯೇ ಆಗಲಿ, ವಿಶ್ವವಿದ್ಯಾಲಯವಾಗಲಿ, ಬಹಳ ತೀವ್ರವಾಗಿ ಗಂಭೀರವಾಗಿ ಅದನ್ನು ಪರಿಗಣಿಸಿಕೊಂಡು ಅರ್ಥಪೂರ್ಣವಾಗಿ ಮಾಡ್ತಾ ಇರತಕ್ಕಂತಹದ್ದನ್ನು ನಾವು ನೋಡ್ತಾ ಇದ್ದೇವಿ. ಕೇವಲ ಬುಡಕಟ್ಟಿನ ಅಧ್ಯಯನ ಬುಡಕಟ್ಟನವರೇ ಮಾಡಬೇಕಾದಂತಹದ್ದು ಇಲ್ಲ. ಅದಕ್ಕಾಗಿ ಇಲ್ಲಿ ವೆರಿಯರ್ ಎಲ್ವಿನ್ ಹೇಳಿದ ಹಾಗೆ ಅದು ನಮ್ಮೆಲ್ಲರಿಗೂ ನಮ್ಮದಾಗಿರಿಸತಕ್ಕದ್ದು. ಕೇವಲ ಅಧ್ಯಯನ ಆಗತಕ್ಕಂತಹದ್ದಲ್ಲ. ಅವನ್ನು ಸರಕಾರ ನಮ್ಮ ಅಧ್ಯಯನ ನೆಲೆಯಿಂದ ನಾವೇನನ್ನ ಕಂಡುಕೊಳ್ತಾ ಇರ್ತೀವಿ, ಅದನ್ನು ಸರಕಾರದ ಕಿವಿಗೆ ಮುಟ್ಟಿಸತಕ್ಕಂತಹದ್ದು ಸರಕಾರ ಅವನ್ನ ಗಂಭೀರವಾಗಿ ಪರಿಗಣಿಸಿ ಬುಡಕಟ್ಟುಗಳಿಗೆ ನ್ಯಾಯವಾಗಿ ಯಾವುದು ಸಿಗಬೇಕು ಅಂತಹ ಸವಲತ್ತುಗಳನ್ನು ಕೊಡಲಿಕ್ಕೆ ಮುಂದಾದಾಗ ನಿಜಕ್ಕೂ ಕೂಡಾ ನಮ್ಮ ಅಧ್ಯಯನಗಳನ್ನು ಫಲಪ್ರದವಾಗಲಿಕ್ಕೆ ಸಾಧ್ಯವಿದೆ. ಈ ಒಂದು ನೆಲಯಿಂದ ಬುಡಕಟ್ಟಿನ ಜನ, ಅಲೆಮಾರಿ ಜನ ಅವರು ಕೂಡಾ ಮನುಷ್ಯರೇ, ಅವರಿಗೂ ಕೂಡಾ ಬದುಕಿದೆ. ಅವರಿಗೂ ಕೂಡಾ ತಮ್ಮದೇ ಆದ ಬದುಕಿನ ವಿಧಾನವಿದೆ. ಸಂಸ್ಕೃತಿಯನ್ನುವಂತಹದ್ದನ್ನು ಬೇರೆ ಗ್ರಾಮೀಣ ಜನ, ನಗರ ಜನ ನಾವೆಲ್ಲ ಅರಿತುಕೊಳ್ಳ ಬೇಕಾಗಿರತಕ್ಕಂಹದ್ದು ಬಹಳ ಮಹತ್ವದ್ದಾಗಿರುವ ಸಂಗತಿ. ಆ ನೆಲೆಯಿಂದ ಮಾತ್ರ ನಾವೆಲ್ಲರೂ ಸೇರಿಕೊಂಡು ಆ ಬುಡಕಟ್ಟಿನ ಅಲೆಮಾರಿಗಳನ್ನು ಕುರಿತು, ಬುಡಕಟ್ಟಿನವರನ್ನು ಕುರಿತು ಅಧ್ಯಯನ ಮಾಡಿದಾಗ ಅದು ಸರಕಾರದ ಗಮನಕ್ಕೆ ಬಂದಾಗ ಸರಕಾರ ಅದಕ್ಕೆ ಪ್ರತಿಕ್ರಿಯೆ ಸೂಚಿಸಿದಾಗ, ಆ ನಮ್ಮ ಅಧ್ಯಯನಗಳು ಫಲಪ್ರದವಾಗ್ತಾವೆ ಅಂತಾ ಒಂದು ನೆಲೆಯಿಂದ ನಾವೆಲ್ಲ ಇವತ್ತು ಬುಡಕಟ್ಟುಗಳ ಅಧ್ಯಯನಕ್ಕೆ ತೊಡಗಬೇಕಾದ ಅವಶ್ಯಕತೆ ಇದೆ ಅಂತಾ ನಾನು ಭಾವಿಸಿಕೊಳ್ಳುತ್ತಾ ಇವತ್ತು ಅಲೆಮಾರಿ ಬುಡಕಟ್ಟುಗಳನ್ನು ಕುರಿತು ಇಲ್ಲಿ ಕೆಲವು ಮೂಲಗಳನ್ನು ಹೇಳಲಿಕ್ಕೆ ಅವನ್ನೆಲ್ಲಾ ಇಲ್ಲಿ ಬರೆದುಕೊಂಡು ಬಂದಿದ್ದೇನೆ. ಸಮಯದ ಅಭಾವವಿರುವುದರಿಂದ ನಾನು ಅದನ್ನ ಇಡಿಯಾಗಿ ಹೇಳಲಿಕ್ಕೆ ಹೋಗದೆ ಕರ್ನಾಟಕದ ಬುಡಕಟ್ಟುಗಳ ಅಧ್ಯಯನ ಒಂದು ಸ್ಥೂಲವಾಗಿರತಕ್ಕಂತಹ ಚಿತ್ರವನ್ನು ನಿಮ್ಮೆದುರಿಗೆ ಇಡುತ್ತಿದ್ದೇನೆ.

ಲಿಪ್ಯಂತರ : ಸುಮಂಗಲ ಬಿ.ಅತ್ತಿಗೇರಿ

* * *