“ಮಾನವ ಒಂದು ಹಂತದಲ್ಲಿ, ಅಲೆಮಾರಿಯಾಗಿದ್ದವನು ಅರೆ ಅಲೆಮಾರಿಯಾಗಿ, ನಂತರ ಒತ್ತಟ್ಟಿಗೆ ನೆಲೆಗೊಂಡು, ಸುಖ ಸೌಕರ್ಯಗಳನ್ನೊಳಗೊಂಡು ಜೀವಿಸತೊಡಗಿದ್ದಾನೆ. ಪ್ರತಿ ಹಂತದ ಸಂದರ್ಭ ಸನ್ನಿವೇಶಗಳೆಲ್ಲವೂ ಅವನಿಂದ ರೂಪುಗೊಳ್ಳುತ್ತಾ ಬಂದ ಕಲೆ-ಕುಶಲಕಲೆಗಳ ಮೇಲೆ ದಟ್ಟವಾದ ಪರಿಣಾಮ-ಪ್ರಭಾವ ಬೀರಿವೆ. ಕರಕುಶಲ ಕಲೆಗಳು ಕೂಡ ಮಾನವನ ಈ ಬೆಳವಣಿಗೆಯೊಂದಿಗೆ ವಿಕಾಸಗೊಳ್ಳುತ್ತ ಬಂದಿವೆ”.

[1] ಈ ಮಾತು ಕರಕುಶಲ ಕಲೆಗಳು ಬೆಳೆದು ಬಂದ ರೀತಿಯನ್ನು ಹೇಳುತ್ತವೆ. ಮಾನವ ಅಲೆಮಾರಿ ಸ್ಥಿತಿಯಲ್ಲಿಯೇ ಕಾಣಿಸಿಕೊಂಡ ಕರಕುಶಲ ಕಲೆಗಳು ಇಂದಿಗೂ ಬೆಳೆಯುತ್ತಲೇ ಇವೆ. ಮಾನವ ಒಂದೆಡೆ ನೆಲೆ ನಿಂತು ಜೀವನ ಸಾಗಿಸಲು ಆರಂಭಿಸಿದರೂ ಅಲೆಮಾರಿ ಮಾನವ ಸಮುದಾಯಗಳು ಇಂದಿಗೂ ಇವೆ.

ಕರ್ನಾಟಕಕ್ಕೆ ಸೀಮಿತಗೊಳಿಸಿ ಹೇಳುವುದಾದರೆ ಸುಡುಗಾಡು ಸಿದ್ಧರು, ಕರಕರ ಮುಂಡೆಯವರು, ದುರುಗ ಮುರುಗಿಯವರು, ಪೋತರಾಜರು, ಬುಡಬುಡುಕೆಯವರು, ಕಿನ್ನರಿ ಜೋಗಿಗಳು, ಕಿಳ್ಳೇಕ್ಯಾತರು, ಹಾವಾಡಿಗ, ಗೊರವ, ಕೊರವ, ಮುಂತಾದ ಅಲೆಮಾರಿ ಪಂಗಡಗಳು ಕಂಡುಬರುತ್ತವೆ.

ಯಾವುದೇ ಅಲೆಮಾರಿ ಪಂಗಡವನ್ನು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ನಿಯತವಾಗಿ ಸ್ಥಳ ಬದಲಾಯಿಸುವ ಕಾರಣದಿಂದ ಅಲೆಮಾರಿಗಳು ಎಲ್ಲ ಪ್ರದೇಶಗಳಲ್ಲೂ ಕಂಡುಬರುವುದು. ಇಂಥ ಅಲೆಮಾರಿಗಳು ಬದುಕಿನುದ್ದಕ್ಕೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯುವುದರಿಂದ ಅವರ ಅನುಭವದ ವ್ಯಾಪ್ತಿಯೂ ಹಿರಿದು. ಕರಕುಶಲ ಕಲೆಯು ಹೆಸರೇ ಹೇಳುವಂತೆ ಕರದಿಂದ ಮಾಡಿದ ಕೌಶಲ್ಯವನ್ನು ತೋರಿಸುವಂಥದ್ದಾಗಿದೆ. ಇದು ಸೌಂದರ್ಯ ಪ್ರಜ್ಞೆ, ಸಾಮಗ್ರಿಗಳ ಉಪಲಬ್ಧಿ, ಮುಂತಾದ ಪೂರಕ ಅಂಶಗಳನ್ನು ಅವಲಂಬಿಸಿದೆ. “ಕರಕುಶಲ ಕಲೆ ಎಂಬುದನ್ನು ಶಿಲ್ಪ ಹಾಗೂ ಚಿತ್ರಗಳಿಗೆ ಸೀಮಿತಗೊಳಿಸಿಕೊಳ್ಳಬಹುದು. ಶಿಲ್ಪವೆಂದರೆ ಮೂರು ಆಯಾಮವುಳ್ಳ ಯಾವುದೇ ವಸ್ತುವಾಗಬಹುದು. …..ಮೊಳೆ. – ಸುತ್ತಿಗೆಯಿಂದ ಹಿಡಿದು ಸಂಕ – ಸೇತುವೆಯವರೆಗೆ ಯಾವುದೇ ವಸ್ತುವಾಗಬಹುದು. ಯಾವುದೇ ವಸ್ತುವಿನಲ್ಲಿ ಸೌಂದರ್ಯವನ್ನು ಹೊರಹೊಮ್ಮಿಸಿದರೆ ಅದು ಕರಕುಶಲ ಕಲೆಯಾಗಬಲ್ಲದು.”[2]

ಕರಕುಶಲ ಕಲೆಯನ್ನು ಐದು ಬಗೆಯಲ್ಲಿ ವಿಂಗಡಿಸಲಾಗಿದೆ. ಉಡುಗೆ-ತೊಡುಗೆಗಳಿಗೆ ಸಂಬಂಧಿಸಿದ ಕರಕುಶಲ ಕಲೆಗಳು – ‘ಅಲಂಕರಣ ಸಂಬಂಧಿ ಕರಕುಶಲ ಕಲೆಗಳು’, ದೇವಾಲಯಗಳ ನಿರ್ಮಾಣ, ಕೆತ್ತನೆ, ಪೂಜಾ ಸಾಮಗ್ರಿ, ಮುಂತಾದವು ‘ಆರಾಧನಾ ಸಂಬಂಧಿ ಕರಕುಶಲ ಕಲೆಗಳು. ಪೀಠೋಪಕರಣ, ಅಡುಗೆ ಮನೆಯ ಪರಿಕರಗಳು, ಪೆಟ್ಟಿಗೆ, ಕೈ ಚೀಲ ಮುಂತಾದವು ‘ಗೃಹೋಪಯೋಗಿ ಕರಕುಶಲ ಕಲೆಗಳು’. ರಂಗಭೂಮಿ, ವಾದ್ಯ ಪರಿಕರ, ಬೊಂಬೆ ಮೊದಲಾದವು ‘ಮನರಂಜನಾ ಸಂಬಂಧಿ ಕರಕುಶಲ ಕಲೆಗಳು. ಕೊನೆಯದಾಗಿ ಧಾನ್ಯ ಸಂಗ್ರಹಣ ಕಣಜ, ಕಮ್ಮಾರಿಕೆಯಂಥ ವೃತ್ತಿಗಳು, ಅಳತೆ ಮಾಪನ ಮುಂತಾದವು’ ವ್ಯವಸಾಯ ಸಂಬಂಧಿ ಕರಕುಶಲ ಕಲೆಗಳಾಗಿವೆ.

ಅಲೆಮಾರಿ ಸಮುದಾಯಗಳಲ್ಲಿ ಮುಖ್ಯವಾಗಿ ಅಲಂಕರಣ ಸಂಬಂಧಿ ಹಾಗೂ ಮನರಂಜನಾ ಸಂಬಂಧಿ ಕರಕುಶಲ ಕಲೆಗಳನ್ನು ಮುಖ್ಯವಾಗಿ ಕಾಣಬಹುದು.

ಅಲೆಮಾರಿಗಳಾದ ಡೊಂಬರಲ್ಲಿ ಗುಲಗಂಜಿ ಮಣಿಗಳ ಹಾರ ನಾಗರಾಕೃತಿಯ ತೋಳಬಂದಿ, ಉಕ್ಕಿನ ಕಡಗ, ಕಾಯಕ, ಮುಂತಾದವನ್ನು ಧರಿಸುತ್ತಾರೆ. ಇವುಗಳ ಕಲಾತ್ಮಕತೆ ವಿಶಿಷ್ಟವಾದುದು ಚೆಂಚರು ಬುಗಡ್ಯ, ನಕ್ಷತ್ರ ಮೂಗುತಿ, ಇಂಟೀ (ಉಂಗುರ), ಕಾಂಬೂಲ್ಯ ಬೆಂಡಲ್ಯಾ ಮುಂತಾದವನ್ನು ಧರಿಸುತ್ತಾರೆ. ಅಲೆಮಾರಿಗಳಾದ ಹಕ್ಕಿಪಿಕ್ಕಿಗಳು ಬವಾಳಿ ಬೀಜವನ್ನು ಬೇಯಿಸಿ, ನಡುವೆ ತೂತು ಮಾಡಿ ತಾಮ್ರದ ತಂತಿ ಸೇರಿಸಿ ಸರ ಮಾಡುವರು. ಗೊಂದಲಿಗರು ಕಿವಿಹೂ,ಬುಗಡಿ, ನತ್ತು ಮುಂತಾದವನ್ನು ಧರಿಸುತ್ತಾರೆ. ಇದೇ ರೀತಿ ಒಂದೊಂದು ಬುಡಕಟ್ಟು, ಅಲೆಮಾರಿಗಳ ಕರಕುಶಲ ಸಾಮಗ್ರಿಗಳನ್ನು ಪಟ್ಟಿ ಮಾಡಬಹುದು. ಅಲೆಮಾರಿಗಳಾದ ಕಿಳ್ಳೇಕ್ಯಾತರು ತೊಗಲು ಗೊಂಬೆಗಳ ತಯಾರಿಕೆಯಲ್ಲಿ ಸಿದ್ಧಹಸ್ತರು. ತೊಗಲು ಗೊಂಬೆಯಾಟದಲ್ಲಿ ಮೃದಂಗ, ಮುಖವೀಣೆ, ತಾಳ, ಬುರಿ, ಗಂಗಾಳ ವಾಧ್ಯ ಮುಖ್ಯವಾದವು. ಇವುಗಳನ್ನು ಅವರು ತಯಾರಿಸಿಕೊಳ್ಳುತ್ತಾರೆ. ಗೊಂಬೆಗಳಿಗೆ ಬೇಕಾದ ಹಸಿತೊಗಲನ್ನು ಕೆಲವು ಗಿಡಮೂಲಿಕೆಗಳ ಬೇರುಗಳೊಂದಿಗೆ ನೆನೆಸಿ, ಹದಗೊಳಿಸಿ, ಚರ್ಮದ ಮೇಲಿನ ಕೂದಲನ್ನು ಹೆರೆದು ಪಾರದರ್ಶಕವಾಗಿ ಮಾಡುತ್ತಾರೆ. ಚಿತ್ರದ ಆಕಾರಕ್ಕೆ ಚರ್ಮವನ್ನು ಕತ್ತರಿಸಿ, ಅದರ ಮೇಲೆ ಮೊಳೆಯಿಂದ ಚಿತ್ರದ ಆಕೃತಿಯನ್ನು ರಚಿಸುತ್ತಾರೆ. ಆಭರಣ ಬಿಡಿಸುವ ಕಡೆ ಚೂಪು ಮೊಳೆಯಿಂದ ರಂಧ್ರ ಮಾಡುತ್ತಾರೆ. ಕೆಂಪು, ಹಳದಿ, ಕಪ್ಪು, ಹಸಿರು ಬಣ್ಣಗಳನ್ನು ಉಳಿದೆಡೆ ಬಳಿಯುತ್ತಾರೆ. ಅನವಶ್ಯಕ ಭಾಗಗಳನ್ನು ಕತ್ತರಸುವರು. ಈಚಲು ಹಾಗೂ ಬಿದಿರು ಕಡ್ಡಿಗಳನ್ನು ಗೊಂಬೆಗಳ ಮಧ್ಯೆ ಸೇರಿಸುತ್ತಾರೆ. ಬೊಂಬೆಗಳು ಎರಡರಿಂದ ಆರು ಅಡಿಗಳವರೆಗೂ ಇರಬಹುದು. ತಾವು ರೂಪಿಸಿಕೊಂಡ ಇಂಥ ಗೊಂಬೆಗಳಿಂದ ಅವರು ಪ್ರದರ್ಶನ ನೀಡುತ್ತಾರೆ.

ಕಿಳ್ಳೇಕ್ಯಾತರಂತೆ ಎಲ್ಲ ಅಲೆಮಾರಿಗಳಿಗೂ ನಿಸರ್ಗದ ಮಡಿಲಲ್ಲಿರುವ ಮಣ್ಣು, ಕಲ್ಲು, ಮರದ ಎಲೆ, ತೊಗಟೆ ಬೇರುಗಳು, ಪ್ರಾಣಿಜನ್ಯ ವಸ್ತುಗಳೇ ಅವರ ಕರಕೌಶಲ್ಯದ ಮೂಲ ಸಾಮಗ್ರಿಗಳಾಗಿವೆ.

ಪ್ರಸ್ತುತ ಸಮಾಜದಲ್ಲಿ ಬದಲಾದ ರಾಜಕೀಯ ಮತ್ತು ಆರ್ಥಿಕ ಕಾರಣಗಳು ಹಾಗೂ ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆಗಳಿಂದ ಪರಿಸರದ ಮೇಲೆ ಪ್ರಭಾವ ಉಂಟಾಗಿರುವಂತೆಯೇ, ಸಮಾಜದ ಮೇಲೂ ಅಗಾಧ ಪರಿಣಾಮಗಳು ಉಂಟಾಗಿವೆ. ಆದುದರಿಂದ ಅಲೆಮಾರಿ ಸಮುದಾಯಗಳು ಅಪರೂಪವಾಗುತ್ತಿರುವಂತೆ, ನೈಸರ್ಗಿಕವಾದ ಮೂಲಗಳಿಂದ ಅವರು ತಯಾರಿಸುತ್ತಿದ್ದ ಅವರ ಕಲಾನೈಪುಣ್ಯವೂ ಮಾಯವಾಗುತ್ತಿದೆ. ಆದರೆ ಅಲೆಮಾರಿ ಸಮುದಾಯಗಳ ಕರಕೌಶಲ್ಯ ಸಾಮಗ್ರಿಗಳ ಮಾದರಿಗಳು ಇಂದಿನ ಜಾಗತೀಕರಣ ಸಂದರ್ಭದಲ್ಲಿ ಲಾಭಕೋರರಿಗೆ ಹಣಗಳಿಸಿಕೊಡುತ್ತಿವೆ. ಒಂದೊಂದು ಕರಕುಶಲ ಕಲೆಯ ಮೂಲವಾದ ಆಯಾ ಅಲೆಮಾರಿ ಹಾಗೂ ಬುಡಕಟ್ಟನ್ನು ಈ ಸಂದರ್ಭದಲ್ಲಿ ಮರೆಯಲಾಗುತ್ತಿದೆ. ಲಂಬಾಣಿ ಸಮುದಾಯದವರ ಆಭರಣ ವಿನ್ಯಾಸಗಳು, ಬಟ್ಟೆ ವಿನ್ಯಾಸಗಳು ಎಲ್ಲ ಸೌಂದರ್ಯ ಸ್ಪರ್ಧೆ ಹಾಗೂ ಸಿನಿಮಾ ಉಡುಪುಗಳಿಗೆ ಮೂಲವಾಗುತ್ತಿರುವುದನ್ನು ಈ ದೃಷ್ಟಿಯಲ್ಲಿ ಗಮನಿಸಬೇಕು. ಅಲೆಮಾರಿಗಳ ಕರಕುಶಲ ಕಲೆ ನಾಶವಾಗದಂತೆ, ದುರುಪಯೋಗವಾಗದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪುಗೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ.

* * *

 


[1] ಕರಕುಶಲ ಕಲೆಗಳು, ಪು. ೩., ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ-೫೮೩ ೨೭೬.

[2] ಕರಕುಶಲ ಕಲೆಗಳು, ಪು. ೨೧., ಕನ್ನಡ ವಿಶ್ವವಿದ್ಯಾಲಯ,ಹಂಪಿ, ವಿದ್ಯಾರಣ್ಯ-೫೮೩ ೨೭೬.