ಸ್ನೇಹಿತರೆ ಸಾಮಾನ್ಯವಾಗಿ ನಮ್ಮಲ್ಲೆಲ್ಲ ಊರಿನ ಜಾತ್ರೆ ಇದ್ದರೆ ಮೂರು ದಿನ ನಡೆಯುತ್ತದೆ. ಆಗ ದೇವರನ್ನು ಒಳಗೆ ಕುಳ್ಳಿರಿಸಿ, ಆಮೇಲೆ ದೇವರ ಹೆಸರಿನಲ್ಲಿ ದಿನಕ್ಕೆ ಒಬ್ಬರು ದೇವರನ್ನು ಅಲೆಮಾರಿಗಳ ಹಾಗೆ ತಿರುಗಾಡಿಸಿ ತರುತ್ತಾರೆ. ಎಷ್ಟೋ ಮಂದಿ ಒಳಗಿರುವ ದೇವರು ಇವನೇ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಒಳಗಿರುವ ದೇವರು ಬೇರೆ ಹೊರಗೆ ನಿಜವಾಗಿ ಉತ್ಸಾಹಕ್ಕೆ ಒಳಗಾಗುವ, ಭಕ್ತಿ ಆರಾಧನೆಗಳಿಗೆಲ್ಲ ಒಳಗಾಗುವ ದೇವರುಗಳೇ ಬೇರೆ. ಒಂದು ದಿನ ಆ ಅಲೆಮಾರಿ ದೇವರು ಬರದೆ ಹೋದರೆ ಏನಾಗಬಹುದು? ಇಂತಹ ಅಲೆಮಾರಿ ದೇವರು ಬರದೆ ಹೋದರೆ! ಬಹುಶಃ ಆತರ ಸಾಮಾನ್ಯವಾಗಿ ಹಾಗಾಗುವುದಿಲ್ಲ. ಆದರೆ ಇವತ್ತು ಏನಾಗಿದೆ ಎಂದರೆ ಅಲೆಮಾರಿಯಾದ ದೇವರು, ಉತ್ಸವ ಮೂರ್ತಿ ಬಾರದ ಕಾರಣ ಒಳಗಿರುವ ಗುಡಿಯವರನ್ನೇ ನೀವೇ ಸುತ್ತಿ ಬನ್ನಿ, ಸುತ್ತಿ ಬರುವ ಹಾಗೆ ಮಾಡಿದ್ದಾರೆ ಡಾ. ಅಂಬಳಿಕೆ ಹಿರಿಯಣ್ಣ. ಡಾ. ಅಂಬಳಿಕೆ ಹಿರಿಯಣ್ಣರವರು ಬರದ ಕಾರಣ ನಾನು ಉತ್ಸವ ಮೂರ್ತಿ ಆಗಬೇಕಾಯಿತು. ನಿಜವಾಗಿ ಈ ತರಹ ಆಗಬಾರದು. ಆದರೆ ನನ್ನ ಆತಂಕ ಮುಂದೆ ಆಗುವುದಿಲ್ಲಂತ ನಾನು ಅಂದುಕೊಂಡಿದ್ದೇನೆ. ಏಕೆಂದರೆ ನನ್ನ ಮುಂದೆ ಪ್ರೊ. ಖಂಡೋಬ, ಪ್ರೊ. ಹಿ.ಚಿ. ಬೋರಲಿಂಗಯ್ಯ, ಪ್ರೊ. ಎ.ವಿ.ನಾವಡ ಈ ಮೂರು ಮಂದಿ ಕಾಣುತ್ತಿರುವುದರಿಂದ ನಾನು ಸ್ವಲ್ಪ ಆತಂಕ ರಹಿತನಾಗಿದ್ದೇನೆ. ಏಕೆಂದರೆ ಮುಂದೆ ನನಗೆ ಈ ಕೆಲಸ ಬರುವುದಿಲ್ಲ. ಇದು ಕೊನೆಯ ಅವಕಾಶ.

ಆಮೇಲೆ ಇದೇ ತರದ್ದು ಇನ್ನೊಂದು ಕಷ್ಟ ಏನಂದ್ರೆ ಈ ಕ್ಷಣದವರೆಗೆ ಈ ವಿಷಯದ ಬಗ್ಗೆ ಇಪ್ಪತ್ತೈದು ಮಂದಿ ಮಾತನಾಡಿದ್ದಾರೆ. ಈ ಕ್ಷಣದಿಂದ ನಾಳೆ ಸಂಜೆಯವರೆಗೆ ಮೂವತ್ತೊಂಬತ್ತು ಮಂದಿಯ ಮೇಲೆ ಕನಿಕರ ತಾಳಿ, ಅನುಕಂಪ ತಾಳಿ ನಾನು ಮಾತನಾಡಬೇಕು. ಏಕೆಂದರೆ ನಾನು ಏನು ಮಾತನಾಡಿದರೂ ಅವರ ಕ್ಷೇತ್ರಕ್ಕೆ ಪ್ರವೇಶ ಮಾಡುತ್ತೇನೆ. ಇಡೀ ಮೂರು ದಿನದ ಈ ಸಮ್ಮೇಳನವೇ ಅಲೆಮಾರಿಗಳ ಬಗ್ಗೆ ಆದಕಾರಣ ನಾವು ನಮ್ಮ ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಅಲೆಮಾರಿಗಳಾದರೆ ಅಧ್ಯಕ್ಷರುಗಳೆಲ್ಲ ನಮ್ಮನ್ನು ಕಕ್ಕರಿಸಿ ನೋಡ್ತಾ ಇರುತ್ತಾರೆ. ಏಕೆಂದರೆ ಇವರು ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದರೆ ನಾವು ನಾಳೆ ಏನು ಇನ್ನೂ ಮೂವತ್ತೈದು ಮಂದಿ ಮಾತನಾಡಲಿಕ್ಕೆ ವಿಷಯ ಇದೆ. ನಾನು ಎಲ್ಲಾ ಮುಗಿಸಿ ಬಿಟ್ಟರೆ….. ಅದಕ್ಕಾಗಿ ನನಗೆ ಇದು ಬಹಳ ಕಷ್ಟದ ವಿಷಯ.

ಈ ಗೋಷ್ಠಿಗೆ ವಿಷಯ ಕೊಟ್ಟಿರುವುದು ‘ಸಾಂಸ್ಕೃತಿಕ ಲೋಕದೃಷ್ಟಿ’ ಅಂತ. ನಾಳೆ ದಿನ ಪ್ರೊ. ಹಿ.ಚಿ. ಬೋರಲಿಂಗಯ್ಯರವರ ಅಧ್ಯಕ್ಷತೆಯಿದ್ದು ಅಲ್ಲಿನ ವಿಷಯ ‘ದೇಶಿ ಜ್ಞಾನ ಪರಂಪರೆ’. ಇವು ಕೂಡ ಸ್ವಲ್ಪ ಒಂದು ಇನ್ನೊಂದರ ಜೊತೆ ಅಲೆಮಾರಿಗಳಾಗುವಂತಹ ಎರಡು ವಿಷಯಗಳು. ಒಟ್ಟು ಅಲೆಮಾರಿಗಳ ಸಾಮಾಜಿಕತೆಯ ಬಗ್ಗೆ ನಿನ್ನೆ ಒಂದು ಗೋಷ್ಠಿ ಆಯಿತು. ಆಮೇಲೆ ನಾಳೆ ಮತ್ತು ನಾಡಿದ್ದು ಎರಡು ಗೋಷ್ಠಿಗಳು ಇವೆ. ಅಲ್ಲಿ ಅವರು ಹೇಗೆ ಅಂತ ನೋಡಬೇಕು. ಆದಕಾರಣ ನಾವು ಅದನ್ನು ಮುಟ್ಟಲು ಆಗುವುದಿಲ್ಲ. ಅದನ್ನು ನಾವು ಮುಟ್ಟಿಬಿಟ್ಟರೆ ಅದು ಒಂದು ತರಹ ಅಪರಾಧ. ನಾವು criminal ಗಳಾಗುತ್ತೇವೆ. ಅದು ಮಾಡಬಾರದು. ಅವರೇ ಮಾತನಾಡಬೇಕು. ನಾಲ್ಕು ಮಂದಿ ಒಳ್ಳೆಯ ಚಿಂತಕರು ಮತ್ತು ಇಬ್ಬರು ಒಳ್ಳೆಯ ವಿದ್ವಾಂಸರುಗಳು ಇಲ್ಲಿ ಭಾಗವಹಿಸಿದ್ದಾರೆ. ಆದ್ದರಿಂದ ಇದಕ್ಕೆ ನಾನು ಅಧ್ಯಕ್ಷ. ಅಧ್ಯಕ್ಷ ಅನ್ನುವುದಕ್ಕೆ ಮೂಲತಃ ಅರ್ಥ ‘ನಮ್ಮ ಅಕ್ಷಿಯ ಮುಂದೆ ನಡೆಯುತ್ತಿರುವುದಕ್ಕೆಲ್ಲ ಸಾಕ್ಷಿಯಾಗಿರುವುದು’. ವಿದೇಶಿಗಳ ಯಾವುದೇ ಒಂದು ವಿಚಾರ ಗೋಷ್ಠಿಯಲ್ಲಿ ಅಧ್ಯಕ್ಷರಿಗೆ ಮಾತನಾಡಲಿಕ್ಕೆ ಅವಕಾಶ ಇಲ್ಲ. ನಮ್ಮಲ್ಲಿ ಮಾತ್ರ ಅಧ್ಯಕ್ಷರಿಗೆ ಒಂದು ಗಂಟೆ ಮಾತನಾಡಲಿಕ್ಕೆ ಅವಕಾಶ ಕೊಡುವುದು. ಯಾವುದೇ ನೀವು ಅಂತಾರಾಷ್ಟ್ರೀಯ ವಿಚಾರಗೋಷ್ಠಿಯೊಳಗೆ ಅಧ್ಯಕ್ಷರು ಅಲ್ಲಿ ಸುಮ್ಮನೆ ಕುಳಿತಿರುತ್ತಾರೆ. ಅವರು ಒಂದೇ ಒಂದು ಮಾತನಾಡಬಾರದು. ನಮ್ಮಲ್ಲಿ ಅಧ್ಯಕ್ಷರಾದವರು ಮಾತನಾಡಲೇಬೇಕಂತೆ. ಅವರ ಮೇಲೆ ನಾವು ಒತ್ತಡ ಹಾಕುತ್ತೇವೆ. ಆದರೆ ಅಕ್ಷಿಯ ಮುಂದೆ ನಡೆಯದಿರುವುದನ್ನು ಹೇಳುವುದಕ್ಕೆ ನಾನು ಐದು ನಿಮಿಷಗಳ ಕಾಲ ತೆಗೆದು ಕೊಳ್ಳುತ್ತೇನೆ. ಅದು ನಿಮ್ಮ ಮೇಲೆ ಅನುಕಂಪ ಮಾತ್ರ ಅಲ್ಲ, ನನ್ನ ಮೇಲೆ ಒಂದು ಕರುಣೆ ತೋರಿ ಮಾತನಾಡುತ್ತಾ ಇದ್ದೇನೆ.

‘ಲೋಕದೃಷ್ಟಿ’ ಮತ್ತು ‘ದೇಶಿ ಜ್ಞಾನ’ ಪರಂಪರೆಗಳು ಓವರ್‌ಲ್ಯಾಪ್ ಆಗುತ್ತವೆ ಅಂತ ನಾನು ಹೇಳಿದ್ದೇನೆ. ನಾಳೆ ದಿನ ಬೋರಲಿಂಗಯ್ಯರವರ ಗೋಷ್ಠಿಯಲ್ಲಿ ಇದನ್ನು ಕುರಿತು ಅನೇಕ ಮಂದಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ. ಏಕೆಂದರೆ ಒಂದು ಜ್ಞಾನ ಅನ್ನುವುದು ಒಂದು ಮಾಹಿತಿ ತಂತ್ರ ಅಲ್ಲ. ನಾವು ಮಾಹಿತಿ ತಂತ್ರಜ್ಞಾನದ ಬಗ್ಗೆ ಮಾತನಾಡುವಾಗ `Information’ ಮತ್ತು Knowledgeಗಳನ್ನು ಸಮನಾರ್ಥಕವಾಗಿ ಬಳಸುತ್ತಾ ಇಲ್ಲ. ಕ್ಷೇತ್ರಕಾರ್ಯದ ಬಗ್ಗೆ ನಿನ್ನೆಯಿಂದ ಅನೇಕ ಬಾರಿ ಟೀಕೆಗಳು ಬಂದವು. ವಿದ್ವಾಂಸರ ಬಗೆಗೆ ಇವರೆಲ್ಲ ಒಂದು ಸರಕುಗಳಾಗಿ ಈ ತರಹದ ವಿಷಯಗಳನ್ನು ಬಳಸಿಕೊಳ್ಳುತ್ತಾರೆ. ನಮ್ಮಲ್ಲಿ Informent ಎನ್ನುವ ಪದವನ್ನು ‘ವಕ್ತೃ’ ಅಥವಾ ‘ನಿರೂಪಕ’ ಎನ್ನುವ ಅರ್ಥದಲ್ಲಿ ಒಂದು ಕಾಲಕ್ಕೆ ಜಾನಪದದಲ್ಲಿ ಬಳಸುತ್ತಿದ್ದೆವು. ಆಮೇಲೆ Informentನ್ನು ಇಂಗ್ಲೀಷನಲ್ಲಿ, ಜಾನಪದದಲ್ಲಿ ಅದನ್ನು ತೆಗೆದು ಪಾರ್ಟನರ್ ಇನ್ ರಿಸರ್ಚ್ ಅಥವಾ ‘ಸಂಶೋಧನೆಯಲ್ಲಿ ಸಹಭಾಗಿ’ ಎನ್ನುವ ಪದವನ್ನು ನಮ್ಮ ಕಲಾವಿದರ ಬಗ್ಗೆ ಬಳಸುತ್ತಾ ಇದ್ದಾರೆ. ಆದರೆ ಪದಗಳನ್ನು ಬಳಸಿದ ಮಾತ್ರಕ್ಕೆ ನಮ್ಮ ಧೋರಣೆ ಬದಲಾವಣೆ ಆಗದೆ ಹೋದರೆ ಏನು ಪ್ರಯೋಜನ? ನೀವು ನಿಮ್ಮ ಭಾವನೆಯಲ್ಲಿ ಅವರನ್ನು ಗುರುವೆಂದು ಆ ಗುರುತ್ವವನ್ನು ತಾಳಿದರೆ ಮಾತ್ರ ಅದು ಸಾಧ್ಯ. ಆದ್ದರಿಂದ ಇಲ್ಲಿ ನಾನು ಜ್ಞಾನದ ಬಗ್ಗೆ ಮಾತನಾಡುತ್ತಾ ಇದ್ದೇನೆ. ಏಕೆಂದರೆ ಜ್ಞಾನ ಎನ್ನುವುದು ಒಂದು ಭಂಡಾರವಾಗಿರುತ್ತದೆ. ನಾವು ಅಲ್ಲಿಂದ ತಿಳುವಳಿಕೆ ಪಡೆಯುವುದು. ನಾವು ಅದನ್ನು ಮಾಡ್ತಾ ಇದ್ದೇವೆ. ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗ, ಜಾನಪದ ಅಧ್ಯಯನ ವಿಭಾಗಗಳಲ್ಲಿ ಮಹಾಕಾವ್ಯ ಪರಂಪರೆಯನ್ನು ಸಂಗ್ರಹ ಮಾಡುವಾಗಲೆಲ್ಲ ಕಲಾವಿದರ ಒಟ್ಟಿಗೆ ಅವರು ವಿಚಾರ ವಿನಿಮಯ ಮಾಡುತ್ತಾ ಇದ್ದಾರೆ. ಆಕಾರಣ ಒಂದು ಕಲೆಯನ್ನು ಕಟ್ಟುವ ತಂತ್ರಗಳನ್ನು ನಾವು ಇವತ್ತು ನಮ್ಮ ಗ್ರಂಥಗಳಿಂದ ಪಡೆಯುತ್ತಾ ಇಲ್ಲ. ನಾವು ಕಲಾವಿದರಿಂದ ಪಡೆಯುತ್ತಲಿದ್ದೇವೆ. ಅದೊಂದು ದೇಶಿಜ್ಞಾನ ಪರಂಪರೆ. ಅದನ್ನು ನಾನು ಹೇಳ್ತಾ ಇಲ್ಲ. ಇವತ್ತಿನ ನಮ್ಮ ಗೋಷ್ಠಿ, ಈ ಪ್ರಸ್ತುತದ ಗೋಷ್ಠಿ ಅದನ್ನೇ ಹೇಳುತ್ತಿದೆ.

ನಾವು ಜಗತ್ತನ್ನು ಕಾಣುವ ದೃಷ್ಟಿಗಿಂತ ಬೇರೆಯಾಗಿ ಕಾಣುವಂತಹ ದೃಷ್ಟಿಗಳು ನಮ್ಮ ದೇಶದಲ್ಲಿದ್ದವು ಮತ್ತು ನಾವು ಅದನ್ನು ಸುಮಾರು ನೂರೈವತ್ತು ವರ್ಷಗಳ ಹಿಂದೆ ಕಳೆದುಕೊಂಡೆವು. ಏಕೆಂದರೆ ಶಿಕ್ಷಣದ ಕಾರಣಕ್ಕಾಗಿ, ಶಿಕ್ಷಣ ನಮ್ಮಲ್ಲಿ ಅನೇಕ ಒಳಿತನ್ನು ಮಾಡಿದೆ. ಹಾಗೆ ನಮ್ಮ ಆಲೋಚನೆ ಮಾಡುವ ಕ್ರಮಗಳನ್ನು ಏಕರೂಪಗೊಳಿಸಿರುವಂತದ್ದು, ಇಸ್ತ್ರಿ ಮಾಡಿರುವ ಕೆಲಸ ಮಾಡಿರುವುದು ಒಂದು ದೊಡ್ಡ ಮಿತಿ. ನಾನು ಒಂದು ಶಿಕ್ಷಣ ಸಂಸ್ಥೆಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ಅಧ್ಯಾಪಕನಾಗಿದ್ದು ಹೇಳ್ತಾ ಇದ್ದೇನೆ. ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿ ನಾವು ಈ ತರದ ಒಂದೇ ಕಾಲಕ್ಕೆ ಅನೇಕ ರೀತಿಯಲ್ಲಿ ಒಂದು ವಿಷಯವನ್ನು ನಾವು ಪರಿಭಾವಿಸುವುದು, ನೋಡಬಹುದು, ಎನ್ನುವಂತಹ ಒಂದು ಪೂರ್ವ ತಿಳಿವಳಿಕೆಯನ್ನು ನಾವು ಕಳೆದುಕೊಂಡು ಬಿಟ್ಟಿದ್ದೇವೆ. ಹಾಗಾಗಿ ಎಷ್ಟೋ…. ಬಾರಿ ನಾವು ಅಧ್ಯಾಪಕರು ಹೇಳುವಂತದ್ದು ಸತ್ಯಸ್ಯ ಸತ್ಯ ಎನ್ನುವ ಆಗೆ, ಕೊನೆಯ ಮಾತು ಎನ್ನುವ ಹಾಗೆ ಹೇಳ್ತಾ ಇದ್ದೇವೆ. ಒಂದೇ ಕಾಲಕ್ಕೆ ಹತ್ತು ಮಂದಿ ಸತ್ಯಗಳನ್ನು ಹೇಳಬಹುದು ಅನ್ನುವುದನ್ನು ನಾವು ಒಪ್ಪಿಕೊಳ್ಳಲು ಸಿದ್ಧವಾಗಿಲ್ಲ.

ಭಾರತ ದೇಶದಲ್ಲಿ ರಾಮ ಎಲ್ಲಿದ್ದಾನೆ ಅಂತ ಹೇಳಿದರೆ ರಾಮ ಲಕ್ಷಾಂತರ ಕಡೆಗಳಲ್ಲಿ ಇದ್ದಾನೆ. ಅಯೋಧ್ಯೆಯಲ್ಲಿ, ಉತ್ತರ ಪ್ರದೇಶದಲ್ಲಿ ಮಾತ್ರ ಇಲ್ಲ. ಅದಕ್ಕೆ ಎ.ಕೆ. ರಾಮಾನುಜನ್ ಅವರು ಸಂಗ್ರಹ ಮಾಡಿರುವ ಜನಪದ ಕಥೆಯನ್ನು ನಾನು ಉದಾಹರಣೆಯಾಗಿ ಕೊಡುತ್ತೇನೆ. ಅದೊಂದು ಒಳ್ಳೆಯ ಉದಾಹರಣೆ:

ಆ ಕಥೆ ಹೇಗೆ ಬರುತ್ತದೆಂದರೆ ‘ಹನುಮಂತ’ ಉಂಗುರ ತೆಗೆದುಕೊಂಡು ರಾವಣನ ರಾಜ್ಯಕ್ಕೆ ಲಂಕೆಗೆ ಸೀತೆಯನ್ನು ಹುಡುಕುತ್ತಾ ಹೋಗುತ್ತಾನೆ. ಹಾರುತ್ತಾ ಹೋಗುತ್ತಾ ಇದ್ದಾಗ ರಾಮ ಕೊಟ್ಟಂತಹ ಉಂಗುರ ಅವನ ಕೈಯಿಂದ ಜಾರಿ ಬಿದ್ದು ಹೋಯಿತು. ಅಂದರೆ ಭೂಮಿಯ ಒಂದು ತೂತಿನ ಒಳಗೆ ಹೊಯ್ತು. ಚಿಕ್ಕ ಒಂದು ರಂಧ್ರದ ಒಳಗಡೆ ಹೊಯ್ತು. ಇವನಿಗೆ ಬಹಳ ಆತಂಕ. ಏಕೆಂದರೆ ಶ್ರೀ ರಾಮಚಂದ್ರ ಕೊಟ್ಟಂತಹ ಉಂಗುರ ಹೊರಟು ಹೊಯ್ತಲ್ಲ. ನಾಳೆ ಏನು ಮಾಡಬೇಕು ಲಂಕೆಗೆ ಬೇರೆ ಹೋಗಬೇಕು, ಸೀತೆಯನ್ನು ಮಾಡಬೇಕು. ಆಕೆಯನ್ನು ತರುವುದಕ್ಕೆಲ್ಲ ಕೆಲಸವನ್ನು ಮಾಡಬೇಕು. ಆದರೆ ಹನುಮಂತನಿಗೆ ‘ಅಣುಮಾ ವಿದ್ಯೆ’ ಗೊತ್ತಿದ್ದ ಕಾರಣ ಅವನು ಸ್ಥೂಲ ದೇಹ ಬಿಟ್ಟು ಸೂಕ್ಷ್ಮದೇಹಿಯಾಗಿ ಒಂದು ‘ಚಿಕಣಿಯ ಮಂಗ’ ಆದನಂತೆ. ‘ಚಿಕಣಿಯ ಮಂಗ’ ಅಂದ್ರೆ ನಿಮ್ಮ ಬೊರ್‌ವೆಲ್‌ನಷ್ಟು ಸಣ್ಣ ರಂಧ್ರದ ಒಳಗಡೆ ಹೋದ. ಒಳಗೆ ಹೋದಾಗ ಅಲ್ಲಿ ಒಬ್ಬ ರಾಜ ಇದ್ದ. ಆ ರಾಜನಲ್ಲಿಗೆ ಹೋದುದು ಏಕೆಂದರೆ ಅಲ್ಲಿ ಉಂಗುರ ಬಿದ್ದಿದೆ ಎನ್ನುವುದು ಅವನ ಕಲ್ಪನೆ. ಆ ರಾಜನಿಗೆ ಮಂಗದ ಮಾಂಸ ತಿನ್ನುವುದರಲ್ಲಿ ಬಹಳ ಆಸಕ್ತಿ. ಅನೇಕರಿಗೆ ಅನೇಕ ರೀತಿಯ ಆಸೆ ಇರುತ್ತವೆ. ಈಗ ಮಾಂಸದ ಬಗೆಗೆ ಚರ್ಚೆಗಳಾದವು – “ಈ ಚಿಕ್ಕಮಂಗವನ್ನು ತಿನ್ನುತ್ತೇನೆ. ಏಕೆಂದರೆ ನನಗೆ ಮಂಗದ ಮಾಂಸ ಬಹಳ ಇಷ್ಟ”. ಆಗ ಹನುಮಂತ ಹೇಳಿದ ‘ನೀನು ನನ್ನನ್ನು ತಿನ್ನಬೇಡ ನಾನು ಹೋಗುತ್ತಾ ಇರುವುದು ಸ್ವಾಮಿ ಕಾರ್ಯಕ್ಕಾಗಿ, ಶ್ರೀ ರಾಮನ ಕೆಲಸಕ್ಕಾಗಿ, ಸೀತೆಯನ್ನು ಹುಡುಕುವುದಕ್ಕಾಗಿ. ಶ್ರೀ ರಾಮ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಆದ್ದರಿಂದ ನೀನು ನನ್ನನ್ನು ತಿಂದು ಬಿಟ್ಟರೆ ಎಲ್ಲಾ ಕಾರ್ಯ ವಿಫಲವಾಗುತ್ತದೆ’. ಎಹೊ…. ‘ಇಲ್ಲಾ ಇಲ್ಲಾ ನಾನು ತಿಂದೆ ತಿನ್ನುತ್ತೇನೆ’. ಕೊನೆಗೆ ಹನುಮಂತ ರಾಜನತ್ತ ಹೇಳಿದನಂತೆ ‘ನನಗೆ ಒಂದು ವಕಾಶ ಕೊಡು, ನಾನು ಲಂಕೆಗೆ ಹೋಗಿ ಸೀತೆಯನ್ನು ಹುಡುಕಿ ಉಂಗುರವನ್ನು ಕೊಟ್ಟು ಬಂದಾಗ ಮತ್ತೆ ನಿನ್ನ ರಂಧ್ರದೊಳಗೆ ಬರುತ್ತೇನೆ. ಆಗ ನನ್ನನ್ನು ತಿನ್ನು’, ಇವನಿಗೆ ಏನೂ ಒಂದು ಕನಿಕರ ಬಂತು. ಆಯ್ತು ಅಂತ ಒಪ್ಪಿಕೊಂಡ. ಸರಿ ಈಗ ಇಲ್ಲಿಗೆ ಯಾಕೆ ಬಂದಿದ್ದು? ನನಗೆ ಒಂದು ಅಭಿಜ್ಞಾನ, ಒಂದು ಗುರುತು, ಒಂದು Identity ಅಂತ ಅನನ್ಯತೆ ಅಂತ ಹೇಳ್ತಾರಲ್ಲ. ಆ ಉಂಗುರ ಕಳೆದು ಹೋಗಿದೆ. ಏನೂ…. ಆ ಉಂಗುರ ನಿಂದು ಅನ್ನುವುದಕ್ಕೆ ಏನು ಗುರುತು? ಅಲ್ಲಿ ಶ್ರೀರಾಮ ಅಂತ ಬರಿದಿದೆ. ಒಳಗೆ ಹೋದ ಅರಸ ಒಂದು ದೊಡ್ಡ ಹರಿವಾಣ ತಟ್ಟೆಯಲ್ಲಿ ನೂರು ಉಂಗುರ ಇತ್ತಂತೆ, ನೂರರಲ್ಲಿ ಶ್ರೀರಾಮ ಅಂತ ಬರೆದಿದೆ ಅಂದ್ರೆ ಈ ಹನುಮಂತ ಹೋಗುವ ಬದಲು ತೊಂಬತ್ತೊಂಬತ್ತು ಹನುಮಂತರು ಹೋಗಿದ್ದಾರೆ. ತೊಂಬತ್ತೊಂಬತ್ತು ಮಂದಿ ಉಂಗುರವನ್ನು ಕಳೆದುಕೊಂಡಿದ್ದಾರೆ. ಇದನ್ನು ಯಾಕೆ ಎ.ಕೆ. ರಾಮಾನುಜನ್‌ರವರು ಕೊಡುತ್ತಾರೆಂದರೆ ಇದು ನಮ್ಮ ಒಟ್ಟು ದೇಶದಲ್ಲಿ ಇರುವಂತಹ ದೇಶಿ ಪರಂಪರೆಯ ಸಂಸ್ಕೃತಿ. ಅದನ್ನು ಕಳೆದುಕೊಂಡು ನಾವು ಒಂದು ಕಡೆ ಇದ್ದೇವೆ ಅಂತ ಹೇಳುವಂತದ್ದು. ಒಂದು ರೀತಿಯಲ್ಲಿ ಏಕರೂಪದ ಚಿಂತನೆಗೆ ಅನ್ನುವುದಕ್ಕೆ ಇದೊಂದು ಉದಾಹರಣೆ. ನಾನು ಹೇಳುತ್ತಾ ಇರುವುದು ಒಂದು ಆಲೋಚನ ಕ್ರಮ. ಈ ದೃಷ್ಟಿಯಿಂದ ಒಂದು ಅಲೋಚನ ಕ್ರಮ ಎನ್ನುವಂತದ್ದು ಈ ಬುಡಕಟ್ಟುಗಳಲ್ಲಾಗಲಿ, ಜನಪದರಲ್ಲಾಗಲಿ ಅಥವಾ ಅಲೆಮಾರಿಗಳಲ್ಲಾಗಲಿ ಅವು ಬೇರೆಬೇರೆ ತರಹ ಇದ್ದವು ಅನ್ನುವುದನ್ನು ನಾವು ಕಳೆದುಕೊಂಡಿದ್ದೇವೆ. ಅದಕ್ಕೆ ನಾನು ಅದರ ಬಗ್ಗೆ ಮುಂದೆ ವಿದ್ವಾಂಸರು ಮಾತನಾಡಬಲ್ಲರು ಅಂತ ಹೇಳುತ್ತಾ ಇಲ್ಲ. ಆದರೆ ಕಾಲದ ಬಗ್ಗೆ ತಿಳಿದುಕೊಳ್ಳಿ. ನಾವು ಇವತ್ತು ಕಾಲವನ್ನು ಅಳೆಯಲಿಕ್ಕೆ ಕೈಗಡಿಯಾರಗಳನ್ನು, ಕ್ಯಾಲೆಂಡರ್‌ಗಳನ್ನು, ಡೈರಿಗಳನ್ನು, ಪಂಚಾಂಗಗಳನ್ನು ಬಳಸುತ್ತಾ ಇದ್ದೇವೆ. ಏಕೆಂದರೆ ಕಾಲ ಅನ್ನುವುದು ಮುಂದಕ್ಕೆ ಹೋಗುವಂತದ್ದು ಒಂದು ಸರಳ ರೇಖಾತ್ಮಕವಾಗಿ ನಾವು ಇವತ್ತಿನ ದಿನ ಕಳೆದರೆ ನಾಳೆ ಬರುತ್ತೇ…. ಅಂತಥವಾ ನಾಳೆಯ ದಿನ ಬರುವಂತದ್ದು ನಾಳೆ ಹೊರತು ನಿನ್ನೆ ಅಲ್ಲ.

ಆದರೆ ಎಲ್ಲಾ ನಮ್ಮ ಜನಪದರ ತಿಳಿವಳಿಕೆಯಲ್ಲಿ ಅವರದು ವೃತ್ತಾಕಾರವಾದದ್ದು. ಕಾಲ ಅನ್ನುವುದು ಮತ್ತೆ ಮತ್ತೆ ಬರುತ್ತೆ. ಒಂದು ಅಮವಾಸ್ಯೆ, ಒಂದು ಸಂಕ್ರಮಣ, ಒಂದು ಹುಣ್ಣಿಮೆ. ಒಂದು ಹಬ್ಬ ಅದಕ್ಕಾಗಿ ಅವರು ೨೦೦೩, ೨೦೦೪ ಅನ್ನುವ ಲೆಕ್ಕಗಳನ್ನು ಇಡುವುದಿಲ್ಲ. ಏಕೆಂದರೆ ಅವು ಒಂದು ಸರ್ಕಲ್‌ಗಳಾಗಿರುತ್ತವೆ. ಆ ಕಾರಣಕ್ಕಾಗಿ ನಮ್ಮ ಮನೆಗಳನ್ನು ನೋಡಿದರೂ ಈಗಿನ ಎಲ್ಲಾ ಸರಳರೇಖಾತ್ಮಕದ ರೇಖೆಗಳಿರುತ್ತವೆ. ಕಾರಣ ಈ ತೊಟ್ಟಿಲಲ್ಲಿ ಹುಟ್ಟಿರುವ ಈಗ ತೊಟ್ಟಿಲೇ ಇಲ್ಲ. ಒಂದು ವೇಳೆ ಮಲಗಿರುವ ಮಕ್ಕಳು, ಮೇಲ್ಮುಖವಾಗಿ ನೋಡಿದರೆ ಅವಕ್ಕೆಲ್ಲ ಈ ಪ್ಲಾಟ್ ಕಾಣುತ್ತವೆ. ಏಕೆಂದರೆ ಸರಳ ರೇಖಾತ್ಮಕವಾಗಿರುತ್ತವೆ. ಹಿಂದಿನ ನಮ್ಮೆಲ್ಲರ ಮನೆಗಳ ಮಾಡುಗಳು ಅವುಗಳು ವೃತ್ತಾಕಾರ ಯಾತಕ್ಕೆಂದರೆ ಆ ಮಗುವಿಗೆ ಇಡೀ ಕಲ್ಪನೆಯೇ ಒಂದು ವೃತ್ತಾಕಾರ ಒಂದಲ್ಲ ಒಂದು ದಿನ ನಾವು ನಮ್ಮ ಕಾಲ ಮತ್ತೆ ಬರುತ್ತದೆ ಅನ್ನುವಂತದ್ದು. ಆದರೆ ಈ ರೀತಿಯ ಒಂದು ಕಲ್ಪನೆ ಒಂದು ಲೋಕದೃಷ್ಟಿ. ಈ ತರದ ಅನೇಕವನ್ನು ಅಲೆಮಾರಿಗಳಲ್ಲಿ ಕಾಣುತ್ತೇವೆ. ಆದರೆ ಅಲೆಮಾರಿಗಳು ಈ ತರದ ಸುತ್ತುವರಿಯುತ್ತಿರುವ ಕಾರಣ ಸುತ್ತುವರಿಕೆಯ ಒಂದು ಹಿಡಿ ಒಂದು ದೃಷ್ಟಿ. ಅವರ ಬೇರೆ ಬೇರೆ ಬದುಕಿನ ಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತವೆ ಅನ್ನುವುದನ್ನು ಶೋಧಿಸುವುದು ನಮ್ಮ ಕೆಲಸ ಆಗಬೇಕು.

ದೈವಗಳ ಸಂಚಾರದ ಬಗ್ಗೆ ಒಂದು ಪ್ರಶ್ನೆ ಬಂತು ಮಂಜನಾಥ ಬೇವಿನಕಟ್ಟೆಯವರಿಗೆ. ವಾಸ್ತವಿಕವಾಗಿ ನಾವು ಅನೇಕ ಜನಪದರಲ್ಲಿ ಕಾಣುವಾಗಲೂ ಕೂಡ ನಮ್ಮಲ್ಲಿ ‘ಸ್ವರ್ಗ’ ಮತ್ತು ‘ನರಕ’ ಅನ್ನುವ ಕಲ್ಪನೆಗಳೆಲ್ಲ ಒಂದು ತರಹ ಶಿಷ್ಟ ಲೋಕದೃಷ್ಟಿಗಳು. ಜನಪದರಲ್ಲಿ ಆ ತರಹದ ಕಲ್ಪನೆಗಳು ಇಲ್ಲ. ಏಕೆಂದರೆ ಅವೆಲ್ಲ ಏನಾಗುತ್ತವೆ ಅಂದರೆ ‘ಆ ಲೋಕ’ ‘ಈ ಲೋಕ’ ಅನ್ನುವ ಪ್ರತ್ಯೇಕತೆ ಅನೇಕ ಬಾರಿ ಇಲ್ಲ. ಈ ಲೋಕದಲ್ಲಿ ಆ ಲೋಕವನ್ನು ಕಲ್ಪಿಸಿಕೊಳ್ಳುವ ಲೋಕದೃಷ್ಟಿ ಇದೆ. ನಾನು ನನ್ನ ಕರಾವಳಿ ಜಾನಪದದಲ್ಲಿ ಅಧ್ಯಯನ ಮಾಡಿದಾಗ ನಮ್ಮಲ್ಲಿ ‘ಜೋಗ’ ಮತ್ತು ‘ಮಾಯ’ ಅನ್ನುವ ಕಲ್ಪನೆ ಗಮನಕ್ಕೆ ಬಂತು. ನಾನೊಂದು concept ಆಗಿ ಪ್ರಬಂಧಗಳನ್ನು ಬರೆದಿದ್ದೇನೆ. ಅಂದರೆ ಮಾಯ ಅನ್ನುವಂತದ್ದು ಅದು ಕಾಣದೆ ಇರುವಂತದ್ದಲ್ಲ. ಅದು ನಮ್ಮ ನಡುವೆ ಇರುವಂತದ್ದು. ತಾತ್ಕಾಲಿಕವಾಗಿ ಕಂಡು ಆ ಮೇಲೆ ಕಾಣೆಯಾಗುವಂತದ್ದು. ಆದಕಾರಣ ಆ ಲೋಕದಲ್ಲಿರುವ ನಮ್ಮ ಎಲ್ಲಾ ಹಿರಿಯರು ಕೂಡ ನಮ್ಮ ಜೊತೆಗೆ ಬರುತ್ತಾರೆ, ಮಾತನಾಡುತ್ತಾರೆ. ವರ್ಷದಲ್ಲಿ ಒಂದು ದಿನ ಬರುತ್ತಾರೆ, ಒಂದು ತಿಂಗಳಲ್ಲಿ ಬರುತ್ತಾರೆ ಮತ್ತೆ ಹೋಗ್ತಾರೆ. ಹಾಗಾಗಿ ನಮ್ಮಲ್ಲಿ ಅಲೌಕಿಕ ಅನ್ನುವಂತಹದ್ದು ಹಿಡಿಕಲ್ಪನೆ. ಅದು ಜನಪದರದಲ್ಲ. ನಮ್ಮದು ಲೌಕಿಕದ ಒಳಗಡೆಯೇ ಅಲೌಕಿಕಕ್ಕೆ ಒಂದು ಸಣ್ಣ ಕೊನೆಯನ್ನು ಒಂದು ಸ್ಪೇಸ್‌ನ್ನು ನಾವು ಕೊಟ್ಟಿರುತ್ತೇವೆ. ಹಾಗಾಗಿ ನಮ್ಮಲ್ಲಿ ಜೋಗದ ಒಳಗಡೆಯೇ ಒಂದು ಮಾಯೆ ಇರುತ್ತದೆ. ಲೌಕಿಕದ ಒಳಗಡೆಯೆ ಅದು ಅತೀತವಾಗಿರುವಂತದಲ್ಲ. ಇದು ಆ ಕಾರಣಕ್ಕಾಗಿ ನಮಗೆ ಏನಾಗುತ್ತದೆ ಅಂದರೆ ಸಾವಿನ ಬಗ್ಗೆ ಭಯ ಇಲ್ಲದಿರುವಂತದ್ದು ನಮ್ಮ ದೃಷ್ಟಿ ಸಾವಿನ ಬಗ್ಗೆ ಸಾವಿನ ನಂತರ ಏಕೆಂದರೆ ನಾವು ಮಾಡುವ ಎಲ್ಲಾ ಆಚರಣೆಗಳಲ್ಲಿ ಕೂಡ ನಾವು ಮತ್ತೆ ಇಲ್ಲಿ ಬಂದು ಇವರೊಟ್ಟಿಗೆ ಸೇರುತ್ತೇವೆ ಅಂತ. ಮೊದಲನೆಯ ಒಂದು ಆಷಾಢ ಮಾಸದಲ್ಲಿ ಆ ವರ್ಷ ತೀರಿದ ಎಲ್ಲರನ್ನು ಕೂಡ ಒಂದು ಕಡೆ ಸೇರಿಸುವುದು. ಅದಕ್ಕಾಗಿ ಹಿರಿಯರನ್ನು ಸೇರಿಸುವುದು ಅಂತ ಹೇಳುತ್ತಾರೆ. ಬಹುಶಃ ಈ ತರಹದ ಒಂದು ಕಲ್ಪನೆಗಳು ಕುಟುಂಬವನ್ನು ನಮ್ಮ ಇರುವಂತಹ ಒಂದು ಮನುಷ್ಯರಿಗೆ ಮಾತ್ರ ಸೀಮಿತಗೊಳಿಸದೆ ನಮ್ಮನ್ನು ಅಗಲಿದವರನ್ನು ಸಹ ನಮ್ಮ ಜೊತೆ ಸೇರಿಸಿಕೊಳ್ಳುವುದು.

ಇದೇ ರೀತಿಯಲ್ಲಿ ಒಂದು ಹೆಣ್ಣು ಗಂಡಿನ ಕುರಿತದ್ದಾಗಿರಬಹುದು ಇದನ್ನು ಕುರಿತು ಅಧ್ಯಯನಗಳನ್ನು ಕೆಲವರಾದರು ಮಾಡಿದ್ದಾರೆ. ನಮ್ಮಲ್ಲಿ ಪವಿತ್ರದ ಮತ್ತು ಅಪವಿತ್ರದ ಕಲ್ಪನೆಗಳು ಇರಬಹುದು. ಹಿಂಸೆಯ ಮತ್ತು ಅಹಿಂಸೆಯ ಕಲ್ಪನೆಗಳು ಇರುವಂತದ್ದು. ಏಕೆ ಎಂದು ಹೇಳಿದರೆ ಈ ತರದ ದೃಷ್ಟಿಗಳು ನನಗಂತು ಕುತೂಹಲ ಇರುವಂತದ್ದು. ಅಲೆಮಾರಿಗಳಲ್ಲಿ ಇರುವ ದೈವಗಳು ಏನಾಗುತ್ತವೆ? ಅವರ ಜೊತೆಗೆ ಕರೆದುಕೊಂಡು ಬರುತ್ತಾರೆ. ಕೆಲವು ದೈವಗಳನ್ನು ಅವರು ಅಲ್ಲಿಯೇ ಬಿಟ್ಟು ಬರುತ್ತಾರೆ ಮತ್ತು ಒಂದು ಊರಿಗೆ ಬಂದಾಗ ಅವುಗಳನ್ನು ನೆಲೆಯೂರಿಸುತ್ತಾರೆ. ಸಾಮಾನ್ಯವಾಗಿ ಮೈಲಾರವಾಗಲಿ ಅಥವಾ ಕರಾವಳಿಯ ದೈವ ಭೂತ ಅದರ ಒಳಗಡೆ ಸಂಚಾರ ಮಾಡಿದಾಗಲೂ ಅದಕ್ಕೆ ಒಂದು ಸ್ಥೂಲವಾದ ಭ್ರಮಾತ್ಮಕವಾದ ಒಂದು ಗಡಿರೇಖೆ ಇರುತ್ತದೆ. ಅದರ ಒಳಗಡೆ ಸಂಚಾರ ಮಾಡುವಂತದ್ದು.ಈ ತರದ ಆಲೋಚನೆಗಳನ್ನು ತಂದು ದೈವಗಳ ಬಗ್ಗೆ ಇರಬಹುದು, ಕಸುಬುಗಳ ಬಗ್ಗೆ ಇರಬಹುದು. ಕಸುಬುಗಳ ಬಗ್ಗೆ ಪ್ರಸ್ತಾಪವಾಯಿತು. ಒಂಥರ ಒಂದು ಕಸುಬನ್ನು ನಂಬಿ ಬದುಕುವಂತಹ ಲೋಕದೃಷ್ಟಿಗಿಂತ ಭಿನ್ನವಾದದನ್ನು ನಾವು ಕಾಣುತ್ತೇವೆ. ಇದು ಕಸುಬುಗಳು ಬದಲಾವಣೆಯಾದ ಮೇಲೆ ಅಲ್ಲ. ಕುಸುಬು ಒಂದನ್ನೇ ಮಾಡುವಾಗಲೇ ನೀವು ನೋಡಬೇಕು, ಅವರು ಪಶುಪಾಲನೆಯನ್ನು ಬೇಟೆಯನ್ನು ಅಥವಾ ಜೇನು ಸಂಪಾದನೆಯನ್ನು ಕೃಷಿಯನ್ನು ಒಂದು ಅರ್ಥದಲ್ಲಿ ನನಗೆ ಅನಿಸುವಂತದ್ದು. ನಮ್ಮ ಆಧುನಿಕ ಸಂದರ್ಭದಲ್ಲಿ ಆರ್ಥಿಕತೆಯ ಕುರಿತ ಈ ಅಲೆಮಾರಿ ಲೋಕದೃಷ್ಟಿ ನಮಗೆ ಬಹಳ ಪ್ರಸ್ತುತ.

ನಮ್ಮಲ್ಲಿ ಕೃಷಿಯನ್ನೇ ನಂಬಿಕೊಂಡಿರುವ ಅನೇಕ ರೈತರುಗಳ ಆರ್ಥಿಕತೆಯ ಸಮಸ್ಯೆಯ ಹಿಂದೆ ನನಗೆ ಕಾಣಿಸುತ್ತಿರುವಂತದ್ದು ಅವರ ಸಂಪಾದನೆ ಅವರಿಗೆ ಮೂರು ನಾಲ್ಕು ತಿಂಗಳಿಗೆ ಹೆಚ್ಚು ಸಾಕಾಗೋಲ್ಲ. ಅವರು ಗುಡಿ ಕೈಗಾರಿಕೆಯನ್ನು ಮಾಡುವುದು ಬೇರೆಯವರ ಕೆಲಸ ಅಂದುಕೊಂಡಿರುತ್ತಾರೆ. ಕಂಸಾಳೆ ಅಥವಾ ಪಟ ಕುಣಿತ ಮಾಡುವುದು ಬೇರೆಯವರ ಕೆಲಸ. ಅದಕ್ಕೆ ಪಟ ಕುಣಿತ ಮಾಡುವವರು ಬೇರೆ, ಕಂಸಾಳೆಯವರು ಬೇರೆ, ಡೊಳ್ಳಿನವರು ಬೇರೆ. ಒಂದು ಗ್ರಾಮದಲ್ಲಿ ಒಂದು ಕುಟುಂಬ ಕೃಷಿಯನ್ನು ಕಂಸಾಳೆ ಅಥವಾ ಪಟ ಕುಣಿತವನ್ನು ಡೊಳ್ಳಿನ ಕುಣಿತವನ್ನು ಅಥವಾ ಕೆಲವು ಕೆತ್ತನೆ ಕೆಲಸವನ್ನು ಎಲ್ಲವನ್ನು ಮಾಡಿದರೆ ಬಹುಶಃ ರೈತರ ಆತ್ಮಹತ್ಯೆ ಮೊದಲಾದವುಗಳ ಬಗ್ಗೆ ಒಂದು ಆರ್ಥಿಕವಾದ ಒಂದು ಹೊಸ ಲೋಕದೃಷ್ಟಿಯನ್ನು ಕೊಡಬಹುದು. ಇದನ್ನು ಒಂದು ಮಿತಿಯಲ್ಲಿ ನಮ್ಮ ಹಿಂದಿನ ಎಲ್ಲಾ ಜನಪದ ಸಮಾಜದವರು ಮಾಡುತ್ತಾ ಇದ್ದರು. ಆದರೆ ಅದೊಂದು ಮಿತಿಯಲ್ಲಿತ್ತು. ಅವರಾರ್ಥಿಕತೆ ಅವರು ಅದನ್ನು ಶ್ರೀಪಾದ ಭಟ್ಟರು ಹೇಳಿದರಲ್ಲ ಸಂತೃಪ್ತಿಯ ಬದುಕು, ಸಂತೃಪ್ತಿ ಅನ್ನುವುದು ಕೂಡ ಕಾಲ ಬದಲಾದ ಹಾಗೆ ಅದು ಅತೃಪ್ತ ಆಗಬಹುದು. ಆದರೆ ಉಪಭೋಗದ ಸಂಸ್ಕೃತಿಗೆ ಭಿನ್ನವಾದಂತಹ ಒಂದು ತಾತ್ವಿಕತೆ ಒಂದು ಐಡಿಯಲಾಜಿಯನ್ನು ನಾವು ಒಂದು ಲೋಕದೃಷ್ಟಿಯಾಗಿ ಇವರಿಂದ ಪಡೆಯಲಿಕ್ಕೆ ಸಾಧ್ಯವಿದೆ ಮತ್ತು ಒಂದು ಜನಾಂಗ ಅಥವಾ ಒಂದು ಕುಟುಂಬ ಈ ತರಹದ ಪೂರಕವಾದ ಅನೇಕ ಕೆಲಸಗಳನ್ನು ಅವರು ಕಸುಬು ಅಂತ ಮಾಡಬಾರದು. ಉದಾಹರಣೆಗೆ ಇದೊಂದು ಉಲ್ಲಾಸದ ಕೆಲಸ. ಅದರಿಂದ ಸಂಪಾದನೆ ಇದು ಬಹುಶಃ ನಿನ್ನೆ ಯುವಕರು ಮಾಡಿರುವಂತಹ ಎರಡು ಕಲಾ ತಂಡಗಳನ್ನು ನೋಡಿದಾಗಲು ಕೂಡ ಅದನ್ನು ಒಂದು ಹಳ್ಳಿಯಲ್ಲಿ ಅನೇಕ ಕುಟುಂಬಗಳು ಮಾಡಲಿಕ್ಕೆ ಅಥವಾ ಕೆಲವು ಕುಟುಂಬಗಳು ಮಾಡಲಿಕ್ಕೆ ಹೋದರೆ ಅದರಿಂದ ರೀತಿಯಲ್ಲಿ ಹೆಚ್ಚು ಸಂತೃಪ್ತಿ ದೊರೆಯಬಹುದು. ಕೌನ್ಸಿಲಿಂಗ್‌ಗಳು ಏನಾಗುತ್ತವೆ ಅಂತ ಹೇಳಿದರೆ ಬಹುಶಃ ಅದರ ಬಗ್ಗೆ ಈಗ ಚರ್ಚೆ ಆಗುತ್ತಲಿದೆ ಅನ್ನುವಂತದ್ದು ಒಂದರ್ಥದಲ್ಲಿ ಹೊರಗಿನಿಂದ ತೆಗೆದುಕೊಂಡು ಬಂದಂತಹ ಲೋಕದೃಷ್ಟಿ ಅದು.

ಉದಾಹರಣೆಗೆ ಬೆಂಗಳೂರು ನಗರದಲ್ಲಿ ಮಂಗಳೂರು ನಗರದಲ್ಲಿ ಅನೇಕ ಕೌನ್ಸಲಿಂಗ್‌ಸೆಂಟರ್ಸ್ ಇವೆ. ಅನೇಕ ಮಂದಿ ಕುಟುಂಬದಲ್ಲಿ ಜಗಳವಾದವರು ಅಲ್ಲಿಗೆ ಹೋಗುತ್ತಾರೆ. ತಾಯಿ ತಂದೆ ಜಗಳವಾದವರು ಅಲ್ಲಿಗೆ ಹೋಗುತ್ತಾರೆ. ಡೈವರ್ಸ್ ಆದವರು ಅಲ್ಲಿಗೆ ಹೋಗುತ್ತಾರೆ. ಆದರೆ ಅದರ ಬದಲು ಒಂದು ಕುಟುಂಬದ ಒಂದು ಹಳ್ಳಿಯ ಒಳಗಡೆ ನಾವು ನಮ್ಮ ಜನಪದ ಕಲೆಗಳು ಕೊಡುವ ಲೋಕದೃಷ್ಟಿ ಬಿಡುವಿಗೆ ಒಂದು ರೀತಿಯ ಸಾಂಸ್ಕೃತಿಕವಾದ ಆಹಾರ ಕೊಡುವಂತಹ ಒಂದು ಲೋಕದೃಷ್ಟಿ ಇಂತವುಗಳನ್ನು ಮಾಡುವಂತದ್ದು ಸಂತೃಪ್ತಿಯಲ್ಲಿ. ಅದು ನಮ್ಮ ಆಧುನಿಕ ಕೌನ್ಸಲಿಂಗ್‌ಗಿಂತ ಭಿನ್ನವಾದ ಲೋಕದೃಷ್ಟಿ. ಇನ್ನೊಬ್ಬರು ಹೊರಗಿನವರು ಬಂದು ಸಮಸ್ಯೆ ಅರ್ಥಮಾಡಿಕೊಳ್ಳದೆ ಮಾಡುವ ಸಾಂತ್ವನ ಒಂದು ಕ್ಷಣದ ಸಾಂತ್ವನ ಅದರದು. ಒಂದು ತರಹ ಶಾಶ್ವತ ಸಾಂತ್ವನ ಆಗಲಿಕ್ಕೆ ಸಾಧ್ಯವಿಲ್ಲ. ಆದಕಾರಣ ಸಾಂತ್ವಾನ ಸಂತೃಪ್ತಿಗಳಿಗೆ ಕೂಡ ನಮ್ಮ ಜನಪದರಿಗೆ ಒಂದು ಲೋಕದೃಷ್ಟಿ ಇತ್ತು. ಈ ಅರ್ಥದಲ್ಲಿ ಈ ಲೋಕದೃಷ್ಟಿ ಎನ್ನುವಂತದನ್ನು ಕೇವಲ ಕ್ಷೇತ್ರಕಾರ್ಯದಿಂದ ನಾವು ಸಂಗ್ರಹಿಸುವ ಮಾಹಿತಿಯಾಗಿ ಮಾತ್ರ ಉಳಿಯುವುದಿಲ್ಲ. ಇದು ಹೆಚ್ಚು ಹೆಚ್ಚು ನಮ್ಮ ಈ ಜನಾಂಗಗಳ ಜೊತೆಗೆ ಸಂವಾದ ಮಾಡಿದಾಗ ಬೆರೆತಾಗ ಮತ್ತು ಸಂಸ್ಕೃತಿಯ ಒಳಗಡೆ ಹೋಗಿ ನಾವು ಅದನ್ನು ಗಮನಿಸಿದಾಗ ಈ ತರದ ವಿಚಾರಗಳ ರಚನೆಯನ್ನು ಪಡೆಯಬಹುದು. ನಿನ್ನೆ ಇಲ್ಲಿ ಜಾಗತೀಕರಣದ ಬಗ್ಗೆ ಮಾತು ಬಂದ ಕಾರಣ ಒಂದು ಮಾತು ಹೇಳ್ತಾ ಇದ್ದೇನೆ. ವಾಸ್ತವಿಕವಾಗಿ ಈ ಜಾಗತೀಕರಣಕ್ಕೆ ನಾವು ಬೆದರುವಷ್ಟು ಅದು ಭಯಾನಕ ಅಲ್ಲ. ಜಪಾನ್‌ದಂತ ದೇಶದ ಬಗ್ಗೆ ನಾನು ಒಂದು ಉದಾಹರಣೆ ಕೊಡುತ್ತೇನೆ. ಜಪಾನ್‌ನಲ್ಲಿ ಇವತ್ತು ಅವರು ವಿಜ್ಞಾನ ತಂತ್ರಜ್ಞಾನಕ್ಕಾಗಿ ಭಾರತದ ಕಡೆ ನೋಡುತ್ತಿಲ್ಲ. ಅವರು ಹೊಸ ಆಲೋಚನೆಗಳಿಗೆ ನಮ್ಮ ಕಡೆ ನೋಡ್ತಾ ಇದ್ದಾರೆ.

ನಾನು ಕಳೆದ ಮಾರ್ಚ್‌ತಿಂಗಳಲ್ಲಿ ಉಪನ್ಯಾಸ ಕೊಡಲಿಕ್ಕೆ ಹೋದಾಗ ಅವರು ವಿಜ್ಞಾನ ತಂತ್ರಜ್ಞಾನದಲ್ಲಿ ನಮಗೆ ಯಾರು ಕಲಿಸಬೇಕಾಗಿಲ್ಲ ಎಂದರು. ಆದರೆ ನಮಗೆ ಆಶ್ಚರ್ಯ ಭಾರತದಂತಹ ದೇಶದಲ್ಲಿ ಇಷ್ಟು ಭಾಷೆ, ಇಷ್ಟು ಜನಾಂಗ, ಇಷ್ಟು ಜಾತಿ ಇದ್ದುಕೊಂಡು ಕೂಡ ನಿಮ್ಮಲ್ಲಿ ಇಷ್ಟೊಂದು ರೀತಿಯ ಬದುಕಿನ ಸಂಬಂಧಗಳನ್ನು ಸ್ಥಾಪಿಸುತ್ತೀರಿ. ಕುಟುಂಬ ಸಂಬಂಧಗಳನ್ನು ಇದು ಏಕೆ ಅನ್ನುವುದರ ಬಗ್ಗೆ ಅಂತಹ ಪ್ರಶ್ನೆಗಳನ್ನು ನನ್ನ ಉಪನ್ಯಾಸ ಬಳಿಕ ಕೇಳಿದರು ಅವರು ಕೊನೆಗೆ ಹೇಳುತ್ತಾ ಇರುವುದು ‘ನಮಗೆ ಭಾರತದಿಂದ ಬೇಕಾಗಿರುವುದು ಈ ತರದ ಆಧುನಿಕ ಮಸ್ಯೆಗಳಿಗೆ ನಿಮ್ಮಿಂದ ನಮಗೆ ಸಾಂಸ್ಕೃತಿಕವಾದ ಒಂದು ತರಹದ ಲೋಕದೃಷ್ಟಿಗಳು ಬೇಕು’. ಅನೇಕ ಬಾರಿ ನಾವು ಕೊಡುವ ಲೋಕದೃಷ್ಟಿಗಳು ಬಹಳ ಮಿತ. ನಮ್ಮ ತಿಳುವಳಿಕೆ ಬಹಳ ಮಿತ ಆದರೆ ನಮ್ಮ ಇಡೀ ಅಲೆಮಾರಿಗಳ ಕುರಿತ ಅಧ್ಯಯನದಿಂದ ನಾವು ಪಡೆಯುವ ಲೋಕದೃಷ್ಟಿ ಇವತ್ತಿನ ನಮ್ಮ ಭಾರತದ ಜಾಗತೀಕರಣ ಮಾತ್ರ ಅಲ್ಲ ಭಾರತದ ಒಳಗಡೆ ಹುಟ್ಟು ಹಾಕಿದ ಕೋಮುವಾದದಿಂದ ಹಿಡಿದು, ಜಾತಿವಾದದಿಂದ ಮತ್ತು ಉಪಭೋಗ ಸಂಸ್ಕೃತಿಯ ಅನೇಕ ಸಂಗತಿಗಳಿಗೆ ನಾವು ಈ ತರಹದ ಲೋಕದೃಷ್ಟಿಗಳ ಮೂಲಕ ವ್ಯವಹರಿಸಬಹುದು ಅನ್ನುವುದನ್ನು ಯೋಚಿಸಬೇಕಾದ ವಿಷಯ.

ಸ್ನೇಹಿತರೇ ಮುಕ್ಕಾಲು ಘಂಟೆಯವರೆಗೆ ನಾನು ಮಾತನಾಡುತ್ತ ಇರುವಾಗ ಹಸಿವು ಅನ್ನುವುದರ ಕಲ್ಪನೆ ಕೂಡ ನಮ್ಮ ಲೋಕದೃಷ್ಟಿಗಳಿಗೆ ಸಂಬಂಧಪಟ್ಟಿದೆ. ಎಷ್ಟೋ ಮಂದಿಗೆ ಹಸಿವೆ ಆಗುವುದಿಲ್ಲ. ಕೆಲಮಂದಿಗೆ ಬಹಳ ಬೇಗ ಹಸಿವಾಗುತ್ತದೆ. ಏಕೆಂದರೆ ನಾವು ಯಾವುದೋ ಒಂದು ವಿಷಯವನ್ನು ಕುರಿತ ಯೋಚನೆ ಮಾಡುತ್ತಾ ಇದ್ದರೆ ನಮಗೆ ಹಸಿವಾಗುವುದಿಲ್ಲ. ನಾವು ಅದರ ಬಗ್ಗೆ ಯೋಚನೆ ಮಾಡುವುದು ಬಿಟ್ಟುಬಿಟ್ಟರೆ ನಮಗೆ ಹಸಿವಾಗುತ್ತದೆ. ಆ ದೃಷ್ಟಿಯಿಂದ ಈಗ ನಾವು ನಮ್ಮ ಹೊಟ್ಟೆಯ ಲೋಕದೃಷ್ಟಿಯ ಕಡೆಗೆ ಗಮನಹರಿಸೋಣ ಅಂತ ಹೇಳ್ತಾ ಎಲ್ಲಾ ಬಹಳ ವಿದ್ವಾಂಸರ ಅಭಿಪ್ರಾಯಗಳಿಗೆ ನಾನು ವಿಶೇಷವಾಗಿ ಕೃತಜ್ಞತೆ ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತಿದ್ದೇನೆ.

ಲಿಪ್ಯಂತರ : ಚಂದ್ರಪ್ಪ ಸೊಬಟಿ

* * *