ದೇಸಿ ಸಮ್ಮೇಳನದ ಸರ್ವಾಧ್ಯಕ್ಷರೂ ಹಿರಿಯ ಸ್ನೇಹಿತರೂ ಆಗಿರುವಂತಹ ಡಾ. ವಿವೇಕ ರೈ ಅವರೇ, ವೇದಿಕೆಯ ಮೇಲಿರುವ ನನ್ನ ಆತ್ಮೀಯ ಜಾನಪದ ವಿದ್ವಾಂಸರೇ, ಕನ್ನಡ ವಿಶ್ವವಿದ್ಯಾಲಯದ ಸನ್ಮಾನ್ಯ ಕುಲಪತಿ ಡಾ. ಲಕ್ಕಪ್ಪಗೌಡ ಅವರೇ, ಇಲ್ಲಿ ನೆರೆದಿರುವಂತಹ ಹಿರಿ-ಕಿರಿಯ ವಿದ್ವಾಂಸರೇ ಹಾಗೂ ಸ್ನೇಹಿತರೇ, ನಾನು ಎರಡೇ ಎರಡು ಮಾತುಗಳನ್ನು ಹೇಳಿ ನನ್ನ ಅಧ್ಯಕ್ಷೀಯ ಸಮಾರೋಪ ಮಾಡಬೇಕು ಅಂತಾ ಅಂದುಕೊಂಡಿದ್ದೇನೆ. ಒಂದು, ಗೋಷ್ಠಿಯಲ್ಲಿ ಮಂಡನೆಯಾಗಿರುವಂತಹ ವಿಚಾರಗಳನ್ನು ಕುರಿತು ನನ್ನ ಅಭಿಪ್ರಾಯ. ಇನ್ನೊಂದು, ನನ್ನದೇ ಆಗಿರುವಂತಾ ಕೆಲವು ವಿಚಾರಗಳು. ಬೆಳಗಿನ ಗೋಷ್ಠಿ ನಡೆದಿರುವ ಸಂದರ್ಭದಲ್ಲಿ ಪಕ್ಕದಲ್ಲಿದ್ದ ನಮ್ಮ ಸ್ನೇಹಿತರು ನೀವೆಲ್ಲ ಎರಡು ದಿವಸದಿಂದ ಅಲೆಮಾರಿಗಳ ಬಗ್ಗೆ ಮಾತನಾಡುತ್ತಿದ್ದಿರಲ್ಲ ಏನು ಮಾಡಬೇಕು ಅಂತಾ ಮಾಡಿದ್ದೀರಿ ಎಂದು ಕೇಳಿದರು. ತಕ್ಷಣಕ್ಕೆ ನನಗೆ ಏನೂ ಉತ್ತರ ಕೊಡಲಿಕ್ಕಾಗಲಿಲ್ಲ. ಅವರ ಮಾತಿನ ಹಿಂದಿರುವಂತಹ ಸತ್ಯವನ್ನು ನಾನು ಆಗಲಿಂದ ಯೋಚಿಸುತ್ತಿದ್ದೆ. ನಿನ್ನೆಯಿಂದ ಇವತ್ತಿನವರೆಗೂ ಅಲೆಮಾರಿಗಳ ಬಗೆಗೆ, ಅವರ ಜ್ಞಾನ ಪರಂಪರೆಯ ಬಗೆಗೆ ಬಹಳ ಭಾಷಣಗಳನ್ನು ಮಾಡುತ್ತಿದ್ದೇವೆ. ಬಹಳ ವಿಚಾರಗಳನ್ನು ಹೇಳುತ್ತಿದ್ದೇವೆ. ಆದರೆ ಈ ಅಲೆಮಾರಿಗಳನ್ನು ಏನು ಮಾಡಬೇಕು ಎನ್ನುವುದರ ಬಗೆಗೆ ಬಹಳ ಗಂಭೀರವಾಗಿ ಚಿಂತನೆಯನ್ನು ಮಾಡಬೇಕಿದೆ, ಈ ಪ್ರಶ್ನೆಗೆ ಉತ್ತರ ಕೊಡಬೇಕಾಗುತ್ತದೆ. ಈ ಸಮ್ಮೇಳನದ ಗೋಷ್ಠಿಯಲ್ಲಿ ಮೌಖಿಕ ಪರಂಪರೆಯ ಬಹುಮುಖ್ಯ ವಿಷಯವನ್ನು, ಅಲೆಮಾರಿಗಳ ನಾಟಿ ವೈದ್ಯ ಪರಂಪರೆಯನ್ನು ಚರ್ಚಿಸಿದ್ದರೆ ಹೆಚ್ಚು ಸೂಕ್ತವೆನಿಸುತ್ತಿತ್ತು. ಈ ಕುರಿತು ಮುಂದಿನ ದಿನಗಳಲ್ಲಿ ಗಂಭೀರವಾಗಿ ಯೋಚಿಸಬೇಕಾಗಿದೆ. ಡಾ. ಮಲಶೆಟ್ಟರು ಇವೆಲ್ಲ ಅಲೆಮಾರಿಗಳ ಕಲಾ ಪರಂಪರೆಯ ಬಗೆಗೆ ಹೇಳಿದರು. ಅಲೆಮಾರಿಗಳ ಕಲಾ ಪ್ರಪಂಚದ ಅನ್ನುವಂತಹದ್ದು ಬಹಳ ದೊಡ್ಡದು. ಅಂತಹದ್ದರಲ್ಲಿ ಯಾವುದಾದರೂ ಒಂದನ್ನು ಅವರು ಗಮನಿಸಿದ್ದರೆ ಸೂಕ್ತವಾಗುತ್ತಿತ್ತು. ಆದಾಗ್ಯೂ ಬೇರೆ ಬೇರೆ ಕೆಲವು ಅಲೆಮಾರಿಗಳನ್ನು ಕುರಿತಂತೆ ಅವರ ಕಲೆಗಳನ್ನು ಕುರಿತಂತೆ ಕೆಲವು ವಿಚಾರಗಳನ್ನು ಬಹಳ ಸ್ಪಷ್ಟವಾಗಿ ಮಂಡಿಸಿದರು.

ಕುರುವ ಬಸವರಾಜು ಅವರು ಸಾಮಾಜಿಕ ಪರಂಪರೆಯ ಬಗೆಗೆ ಸ್ವಲ್ಪಮಟ್ಟಿಗೆ ಪ್ರವೇಶ ಒದಗಿಸಿದರು. ಸ್ಥೂಲವಾಗಿ ಭಿನ್ನ ಭಿನ್ನ ವಿಚಾರಗಳು ಚರ್ಚೆಯಲ್ಲಿ ಬಂದವು ಎನ್ನುವುದನ್ನು ಗಮನಿಸಬೇಕು. ಇದು ಬಹಳ ಮುಖ್ಯವಾದಂತಹ ಗೋಷ್ಠಿಯಾಗಿತ್ತು. ಇಡೀ ಸಮಕಾಲೀನ ಸಂದರ್ಭದಲ್ಲಿ ನಮ್ಮ ಅಲೆಮಾರಿಗಳ ಜ್ಞಾನ ಪರಂಪರೆಯನ್ನು ಕುರಿತಾಗಿ ಮಾತನಾಡುವಂತಹದ್ದೇನಿದೆಯಲ್ಲಾ ಬಹಳ ಮುಖ್ಯವಾದಂತಹ ಆಶಯ. ಒಬ್ಬೊಬ್ಬ ಪ್ರಬಂಧಕಾರರು ಬರದೇ ಹೋದಾಗ ಯಾವ ವಿಷಯವನ್ನು ಮಾತನಾಡೋದು, ಯಾವ ವಿಷಯವನ್ನು ಬಿಡುವುದು, ನಮ್ಮ ಮಿತಿ ಎಷ್ಟು ಎಂಬುದನ್ನು ಗುರುತಿಸಿಕೊಳ್ಳುವುದು ಇಲ್ಲಿ ಬಹಳ ಕಷ್ಟವಾಗುತ್ತದೆ. ಈ ಹಿನ್ನೆಲೆಯೊಳಗೆ ಕೆಲವು ವಿಚಾರಗಳನ್ನು ಕೆಲವು ಪ್ರಬಂಧಕಾರರು ಇಲ್ಲಿ ಮಂಡಿಸಿದ್ದಾರೆ, ಪ್ರತಿಕ್ರಿಯೆಯನ್ನು ವ್ಯಕ್ತ ಮಾಡಿದ್ದಾರೆ ಎಂಬುದನ್ನು ನಾವಿಲ್ಲಿ ಗಮನಿಸಲೇಬೇಕಾಗಿದೆ. ಬೆಳಿಗಿನ ಗೋಷ್ಠಿಯ ಕೆಲವು ವಿಚಾರಗಳು ಮಾನವ ಸಂಬಂಧಿ ಲೋಕದೃಷ್ಟಿಯಾಗಲಿ, ದೈವ ಸಂಬಂಧಿ ಲೋಕದೃಷ್ಟಿಯಾಗಲಿ, ಪರಿಸರ ಸಂಬಂಧಿ ಲೋಕದೃಷ್ಟಿಯಾಗಲಿ ಇವೆಲ್ಲಾ ಈ ಹಿನ್ನೆಲೆಯಲ್ಲಿ ಅಲೆಮಾರಿಗಳ ಜ್ಞಾನ ಪರಂಪರೆ ಏನು ಎಂಬುದನ್ನೇ ವ್ಯಕ್ತಪಡಿಸುತ್ತವೆ ಎಂಬುದು ಮುಖ್ಯ. ಅಲೆಮಾರಿಗಳು ಅಂದಾಕ್ಷಣ ಇಲ್ಲಿನ ನಮ್ಮ ಒಟ್ಟು ಲೋಕದೃಷ್ಟಿ ಏನು ಇದೆಯಲ್ಲಾ ಅದು ನೂರಕ್ಕೆ ನೂರು ಸತ್ಯವಾಗಿದೆ, ನಿಷ್ಕಲ್ಮಶವಾಗಿದೆ ಎನ್ನುವಂತಹ ಮಾತು ಕೂಡಾ ಅಲ್ಲಿ ಇಲ್ಲ. ಒಂದರ್ಥದೊಳಗೆ ನಾವು ಹಿತ್ತಲ ಗಿಡ ಮದ್ದಲ್ಲ ಎನ್ನುವಂತಹ ಮಾತು ಬಳಸುತ್ತೇವೆ, ಎಷ್ಟೋ ಸಲ. ಆದರೆ ಹಿತ್ತಲದಲ್ಲಿರುವ ಎಲ್ಲಾ ಗಿಡಗಳು ಮದ್ದಾಗಲಿಕ್ಕೆ ಸಾಧ್ಯವೇ ಇಲ್ಲ. ಕೆಲವು ಗಿಡಗಳು ಮದ್ದಾಗುತ್ತವೆ, ಕೆಲವು ಗಿಡಗಳು ಮದ್ದು ಆಗೋದಿಲ್ಲ. ನಿಷ್ಕ್ರಿಯವಾಗಿರುತ್ತವೆ. ಈ ದೃಷ್ಟಿಯಿಂದ ನೂರಕ್ಕೆ ನೂರು ಸತ್ಯವನ್ನು ನಾವು ಈ ಜ್ಞಾನ ಪರಂಪರೆಯಲ್ಲಿ ಕಾಣಲಿಕ್ಕೆ ಸಾಧ್ಯವಾಗೋದಿಲ್ಲ. ಆದರೆ ಇವತ್ತು ಈ ಜ್ಞಾನ ಪರಂಪರೆಯನ್ನು ಇಟ್ಟುಕೊಂಡು ಯೋಚನೆ ಮಾಡುವಂತಹ, ಆಲೊಚನೆ ಮಾಡುವಂತಹ, ಚಿಂತನೆ ಏನು ಬಂದಿದೆಯಲ್ಲಾ ಕನ್ನಡ ವಿಶ್ವವಿದ್ಯಾಲಯದವರು ಅಂತಹ ಒಂದು ಸನ್ನಿವೇಶವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರಲ್ಲ ಅದು ಬಹಳ ಅನಿವಾರ್ಯವಾದಂತಹ ಸನ್ನಿವೇಶ ಅಂತ ನಾನು ಅಂದುಕೊಳ್ಳುತ್ತೇನೆ. ಬಹುಶಃ ಈ ಕಾಲದ ವಿಪರ್ಯಾಸ ಅಂತಾ ನಾನು ಅನ್ಕೊತೇನಿ. ವಿಲಕ್ಷಣ ಅಂತಾ ಕೂಡಾ ಅನ್ಕೊತೇನಿ. ಇವತ್ತು ನಮ್ಮನ್ನು ನಾವು ಮರೆಯುವಂತಹ ಸಂದರ್ಭದ ನಮಗೆ ಬಂದಿದೆ. ಯಾಂತ್ರಿಕ ಜಗತ್ತಿನಲ್ಲಿ ನಗರೀಕರಣದ ಸಂದರ್ಭದಲ್ಲಿ ಅಥವಾ ಆಧುನಿಕ ಸಂದರ್ಭದಲ್ಲಿ ಯೋಚನೆ ಮಾಡಿದಾಗ ನಮ್ಮನ್ನು ನಾವು ಮರೀತಾ ಇದ್ದೀವಿ, ನಮ್ಮ ತನವನ್ನು ಇವತ್ತು ಮರೀತಾ ಇದ್ದೀವಿ, ನಮ್ಮ ಸ್ವಂತಿಕೆಯನ್ನು ನಾವು ಮರೀತಾ ಇದ್ದೀವಿ. ನಮ್ಮ ಒಟ್ಟು ಜ್ಞಾನ ಪರಂಪರೆಯನ್ನು ಹಿಂದಕ್ಕೆ ತಳ್ಳುತ್ತಿದ್ದೇವೆ. ನಮ್ಮ ಐಡೆಂಟಿಟಿಯನ್ನು ಸಂಪೂರ್ಣವಾಗಿ ಕಳೆದುಕೊಂಡು ಅನ್ಯತನವನ್ನು ನಾವು ನಮ್ಮದನ್ನಾಗಿ ಮಾಡಿಕೊಳ್ಳುತ್ತಿದ್ದೀವಿ. ಇಂತಹ ಕಾಲದಲ್ಲಿ ನಾವು ನಿಂತುಕೊಂಡು ಅಲೆಮಾರಿಗಳ ಜ್ಞಾನ ಪರಂಪರೆಯನ್ನು ಚಿಂತನೆ ಮಾಡುತ್ತೇವೆ.

ಎಲ್ಲಾ ಜನಾಂಗಗಳು ಇವತ್ತು ನೆಲೆ ಕಂಡುಕೊಂಡಿವೆ. ಊರುಗಳಲ್ಲಿ ಅವರು ಒಂದಾಗಿದ್ದಾರೆ. ತಮ್ಮ ಜ್ಞಾನ ಪರಂಪರೆಯ ಮೇಲೆ ಒಂದು ಬಹಳ ದೊಡ್ಡದಾಗಿರುವಂತಹ ಪರದೆಯನ್ನು ಎಳೆದುಕೊಂಡು ಬಿಟ್ಟಿದ್ದಾರೆ. ಇವತ್ತು ಆಧುನಿಕತೆಗೆ, ನಾಗರೀಕತೆಗೆ ನಮ್ಮ ಜನ ಆಕರ್ಷಿತರಾಗುತ್ತಿದ್ದಾರೆ, ಅಲಕ್ಷಿತರಾಗುತ್ತಿದ್ದಾರೆ. ದಿನೇದಿನೇ ನಮ್ಮ ಜ್ಞಾನ ಪರಂಪರೆ ಒಂದೊಂದಾಗಿ ಕೊಂಡಿ ಕಳಚಿಕೊಳ್ಳುತ್ತಾ ಇವೆ ಎಂಬ ಆತಂಕ ನಮ್ಮೆಲ್ಲರಲ್ಲಿ ಕೂಡಾ ಇವತ್ತಿದೆ. ಒಂದು ಹಂತದಲ್ಲಿ ಅದು ನಿಜ. ಆದರೆ ಇನ್ನೊಂದು ಹಂತದಲ್ಲಿ ನಮ್ಮ ಸ್ನೇಹಿತರು ಕೇಳಿದ ಹಾಗೆ ನೀವೆಲ್ಲಾ ಸೇರಿ ಅಲೆಮಾರಿಗಳನ್ನು ಎನ್ ಮಾಡಬೇಕಂತಿದ್ದೀರಿ? ಅಂದರೆ ನಾವು ಅವರನ್ನು ಮತ್ತೆ ಅಲೆಮಾರಿತನಕ್ಕೆ ಹಚ್ಚಬೇಕೆ? ಇಲ್ಲ, ಖಂಡಿತವಾಗ್ಯೂ ಅಲ್ಲಾ. ನಮ್ಮ ಅಲೆಮಾರಿಗಳಲ್ಲಿ ಇರುವಂತಹ ಜ್ಞಾನಪರಂಪರೆಯಲ್ಲಿ ನೂರಕ್ಕೆ ನೂರು ಸತ್ಯ ಇಲ್ಲ ಎನ್ನುವಂತಹ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ. ಇವತ್ತು ಅವರಲ್ಲಿನೂ ಕೂಡಾ ಕೆಲವು ಅಜ್ಞಾನ, ಮೌಢ್ಯ ಬೇಕಾದಷ್ಟಿದೆ. ಎಲ್ಲೆಲ್ಲಿ ಏನೇನಿದೆ ಎಂಬುದನ್ನು ಗುರುತಿಸಬೇಕಿದೆ ಇವತ್ತು. ನಮ್ಮ ಅಲೆಮಾರಿಗಳಲ್ಲಿ ಅಥವಾ ಜನಪದ ಪರಂಪರೆಯಲ್ಲಿ ಯಾವುದು ಸ್ವೀಕರತ ಯಾವುದು ತಿರಸ್ಕೃತ ಎನ್ನುವಂತಹದ್ದನ್ನು ಗಮನಿಸಿ ನಾವು ನಮ್ಮ ಜನಕ್ಕೆ ಇವತ್ತು ತಿಳುವಳಿಕೆಯನ್ನು ಕೊಡಬೇಕಾಗಿದೆ. ಮುಖ್ಯ ಪ್ರವಾಹದಲ್ಲಿ, ಮುಖ್ಯವಾಹಿನಿಯಲ್ಲಿ ಅವರನ್ನು ಕರೆದುಕೊಂಡು ಬರಬೇಕಿದೆ. ಅವರನ್ನು ಪುನಃ ಅಲೆಮಾರಿತನಕ್ಕೆ ಹಚ್ಚುವಂತಹದ್ದಲ್ಲ. ಅಲೆಮಾರಿ ಬದುಕಿಗೆ ಅವರನ್ನು ಒಯ್ಯುವಂತಹದ್ದಲ್ಲ ಅಥವಾ ನಾವು ಯಾರೂ ಅಲೆಮಾರಿಯಾಗುವುದಕ್ಕೂ ಅಲ್ಲ, ನಾವಿವತ್ತು ಚಿಂತನೆಯನ್ನು ಮಾಡ್ತಾ ಇರೋದು. ಬಹಳ ಮುಖ್ಯವಾದ ಸಂಗತಿ ಇದು. ಕೆಲವು ಅಸಂಗತತೆ ಇದೆ. ಇಲ್ಲಂತಾ ಅಲ್ಲಾ. ಕೆಲವು ಅವೈಜ್ಞಾನಿಕವಾಗಿರುವಂತಹ ಸಂಗತಿಗಳು ಅವರಲ್ಲಿವೆ. ಅವುಗಳನ್ನೆಲ್ಲ ತೊಡೆದು ಹಾಕಬೇಕಾಗಿದೆ. ಅದು ಬಹಳ ಮುಖ್ಯವಾದ ಕೆಲಸ. ಯಾರು ಅವನ್ನ ಮಾಡೋರು? ಕಲೆಯನ್ನು ಕುರಿತು ಮಾತನಾಡುವಂತಹ ಸಂದರ್ಭದಲ್ಲಿ ಬಹಳ ದೊಡ್ಡ ಆತಂಕ ನಮ್ಮಲ್ಲಿದೆ. ನಮ್ಮ ಕಲಾವಿದರ ನಶಿಸಿ ಹೋಗುತ್ತಾರೆ. ನಮ್ಮ ಕಲಾ ಪ್ರಕಾರಗಳೆಲ್ಲವೂ ನಶಿಸಿ ಹೋಗುತ್ತವೆ ಎನ್ನುವಂತಹ ಆತಂಕ ಎಲ್ಲರಲ್ಲಿಯೂ ಇದೆ. ಆದರೆ ಚರ್ಚೆಗೆ ಒಳಗಾಗಿ ಯಾವ ಕಲೆಯೂ, ಯಾವ ಕಲಾವಿದನೂ ಇವತ್ತು ನಮ್ಮಿಂದ ಮರೆಯಾಗಿಲ್ಲ, ಮರೆಯಾಗೋದು ಇಲ್ಲಾ ಒಂದು ಅರ್ಥದೊಳಗೆ. ಅಂದರೆ ನಮ್ಮ ಈ ಕಲೆ ಮತ್ತು ನಮ್ಮ ಈ ಕಲಾವಿದರು ಇವತ್ತಿನ ಸಮಕಆಲೀನ ಸಂದರ್ಭಕ್ಕೆ ತಕ್ಕ ಹಾಗೆ ಮೂಲ ಸತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನಿಕತೆಯನ್ನು ಮೂರ್ತೀಭವಿಸಿ ಕೊಳ್ಳದೆ ಹೋದರೆ ನಮ್ಮಿಂದ ದೂರವಾಗುತ್ತಾರೆ. ಎಲ್ಲಾ ಕಲೆಗಳೂ ನಮ್ಮಿಂದ ದೂರವಾಗುತ್ತವೆ. ಸಂರಕ್ಷಣೆ ಸಂವರ್ಧನೆಯನ್ನು ಕುರಿತು ನಾವು ಎಷ್ಟೋ ಸಲ ಮಾತನಾಡುತ್ತೇವೆ. ಆದರೆ ಆಧುನಿಕ ಕಲೆಯ ಸೋಗು ಅಲ್ಲಿರಬಾರದು ಅಷ್ಟೆ. ಮೂಲ ಸತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಏನೇನು ಮಾರ್ಪಾಟು ಮಾಡಬಹುದೊ ಏನೇನು ಪರಿವರ್ತನೆ ಮಾಡಲಿಕ್ಕೆ ಸಾಧ್ಯವೋ, ಮುಂದಿನ ಜನಾಂಗ ಅದನ್ನ ಹೇಗೆ ಸ್ವೀಕರಿಸುವರು ಅನ್ನುವುದನ್ನ ಚಿಂತನೆ ಮಾಡಿದರೆ ಮಾತ್ರ ಎಲ್ಲಾ ಕಲೆಗಳು ಇವತ್ತು ಉಳಿದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ.. ಇವತ್ತು ನಾವೆಲ್ಲ ಆ ನಿಟ್ಟಿನಲ್ಲಿ ಚಿಂತನೆಯನ್ನು ಮಾಡಬೇಕು. ನಾನು ಹೇಳ್ತಾ ಇದ್ದೆ. ನಾವು ನಮ್ಮ ತನವನ್ನು ಮರೀತ್ತಿದ್ದೇವೆ ಅನ್ನುವಂತಹ ವಿಚಾರವನ್ನು ಮತ್ತೆ ಮತ್ತೆ ಆಲೋಚನೆ ಮಾಡಬೇಕಾದ ಸಂಗತಿ ಅದು. ಇವತ್ತು ಎಷ್ಟರಮಟ್ಟಿಗೆ ನಾವು ಕೃತ್ರಿಮವಾಗಿ ಬಿಟ್ಟಿದ್ದೇವೆಂದರೆ, ಪ್ರತಿಯೊಂದು ನಮ್ಮ ಹಾವಭಾವ, ನೋಟ, ನಡೆ, ನುಡಿ ಆಚಾರ, ವಿಚಾರ, ಜೀವನ ವಿಧಾನ ಎಲ್ಲವೂ ಒಂದು ರೀತಿಯಲ್ಲಿ ಆರ್ಟಿಫಿಷಿಯಲ್ ಆಗಿ ಹೋಗ್ತಾ ಇದೆ. ಲಂಬಾಣಿಗಳ ಕಸೂತಿ ಕಲೆ ಕುರಿತು ಡಾ. ಮಲಶೆಟ್ಟಿಯವರು ಮಾತನಾಡುತ್ತಿದ್ದರು. ಒಂದು ಪೋಷಾಕು ತಯಾರಿ ಮಾಡಬೇಕೆಂದರೆ ಕನಿಷ್ಟ ಮೂರು ತಿಂಗಳಾದರೂ ಅವರಿಗೆ ಬೇಕಾಗುತ್ತದೆ. ಇದನ್ನು ಮಾಡ್ತಾ ಕುಳಿತರೆ ಇವತ್ತು ಅವರು ಮುಖ್ಯವಾಹಿನಿಗೆ ಬರಲಿಕ್ಕೆ ಸಾಧ್ಯಾನೇ ಇಲ್ಲ. ಮೂರು ಮೂರು ತಿಂಗಳು ಅವರ ಪೋಷಾಕುಗಳನ್ನು ಮಾಡ್ತಾ ಕುಳಿತರೆ ಮತ್ತು ಪೋಷಾಕು ಮಾಡಿದ ಮೇಲೆ ಅದನ್ನು ಹಾಕ್ಕೊಂಡು ಒಗೆದು ಮತ್ತೆ ಹಾಕ್ಕೋಬೇಕೆಂದರೆ ಕನಿಷ್ಟ ಎಂಟು ದಿವಸ ಬೇಕು. ಅದು ಈ ಮಳೆಗಾಲದಲ್ಲಂತೂ ೧೫ ದಿನಗಳವರೆಗೆ ಒಣಗೋದಿಲ್ಲ. ಇಂತಹ ಸಂದರ್ಭಗಳಲ್ಲಿ ನಮ್ಮ ಕಲಾವಿದರು, ನಮ್ಮ ಅಲೆಮಾರಿಗಳು ವಾಸ್ತವ ಸತ್ಯವನ್ನು ರೂಢಿಸಿಕೊಳ್ಳಬೇಕಾಗುತ್ತೆ, ವಾಸ್ತವತೆಯನ್ನು ರೂಢಿಸಿಕೊಳ್ಳಬೇಕಾಗುತ್ತೆ. ಇವತ್ತುಮೂಲದ ಲಂಬಾಣಿ ವೇಷ ಭೂಷಣಗಳು ಉಳಿದಿಲ್ಲ. ಶೇ. ೭೫%ರಷ್ಟು ಮಾಯವಾಗಿವೆ. ೨೫% ಮಾತ್ರ ಅವರಲ್ಲಿ ಉಳಿದುಕೊಂಡಿದೆ. ಅದು ಅನಿವಾರ್ಯ. ಕಾಲಕ್ಕೆ ತಕ್ಕ ಹಾಗೆ ಅವರು ಬದಲಾವಣೆ ಆಗದೆ ಹೋದರೆ ಮುಖ್ಯವಾಹಿನಿಯಲ್ಲಿ ಅವರು ಬರುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಇವತ್ತಿನ ಅನಿವಾರ್ಯತೆ ಅದು. ಸಮಕಾಲೀನ ಸಂದರ್ಭದಲ್ಲಿ ಆ ಜನ ಮೇಲಕ್ಕೆ ಬರಬೇಕು ಅಂದ್ರೆ ಅವನ್ನೆಲ್ಲವನ್ನೂ ಬಿಟ್ಟು ಬರಬೇಕಾಗುತ್ತದೆ, ದುಡಿಬೇಕಾಗುತ್ತದೆ, ಮತ್ತೊಬ್ಬರ ಜೊತೆಯಲ್ಲಿ ಸ್ಪರ್ಧೆಗೆ ಇಳಿಯಬೇಕಾಗುತ್ತದೆ. ನಮ್ಮ ವಾದ್ಯ ಪರಿಕರಗಳು ಅಷ್ಟೇ. ನಾವು ಅದೇ ವಾದ್ಯ ಪರಿಕರಗಳನ್ನು ನುಡಿಸ್ತಾ ಇದ್ದರೆ ನಮ್ಮ ಕಿವಿಗಳನ್ನು ಮುಚ್ಚಿಕೊಳ್ಳುತ್ತೇವೆ. ಇವತ್ತಿನ ಸಂದರ್ಭಕ್ಕೆ, ಇವತ್ತಿನ ಮನಸ್ಸುಗಳಿಗೆ, ಇವತ್ತಿನ ಸಮಾಜಕ್ಕೆ ಏನು ಬೇಕು ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳದೇ ಹೋದರೆ ನಮ್ಮ ವಾದ್ಯಗಳು ಹೋಗುತ್ತವೆ. ನಮ್ಮ ಕಲೆಗಳು ನಾಶವಾಗಿ ಹೋಗುತ್ತವೆ. ಎಲ್ಲವೂ ನಾಶವಾಗಿ ಹೋಗುತ್ತವೆ. ಅದು ಅನಿವಾರ್ಯವಾಗುತ್ತದೆ. ಅದಕ್ಕಾಗಿಯೇ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಈ ಕಲೆಗಳನ್ನು, ಜ್ಞಾನ ಪರಂಪರೆಯನ್ನು, ಕರಕುಶಲ ಕಲೆಗಳನ್ನು, ಮೌಖಿಕ ಪರಂಪರೆಯನ್ನು ಇವೆಲ್ಲವನ್ನೂ ಕಾಲಕ್ಕೆ ತಕ್ಕ ಹಾಗೆ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ನೂರಕ್ಕೆ ನೂರು ನಾವು ಅನುಸರಿಸಲಿಕ್ಕೆ ಆಗೋದಿಲ್ಲ. ಇವರನು ಒಬ್ಬ ಜಾನಪದ ವಿದ್ವಾಂಸರಾಗಿ ಹೀಗೆ ಮಾತಾಡುತ್ತಿದ್ದಾರೆ ಅಂತಾ ಕೆಲವು ಜನ ಯೋಚನೆ ಮಾಡಬಹುದು. ಆದರೆ ಇವತ್ತಿನ ಕಾಲದ ಅಗತ್ಯತೆಯನ್ನು ಕಂಡು ನಾವು ಜಾನಪದದಲ್ಲಿ ನಮ್ಮ ಜ್ಞಾನ ಪರಂಪರೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದದ್ದು ತೀರಾ ಅಗತ್ಯವಾಗಿದೆ. ಆ ದೃಷ್ಟಿಯಿಂದ ಯೋಚನೆ ಮಾಡಬೇಕು ಮತ್ತು ಇಂಥ ಸನ್ನಿವೇಶಗಳಲ್ಲಿ ನಾವು ನಿಜವಾದ ಅಲೆಮಾರಿಗಳನ್ನು ಕೆಲವರನ್ನಾದರೂ ಇಲ್ಲಿ ಆಹ್ವಾನ ಮಾಡಬಹುದಿತ್ತು. ಕೆಲವು ಗೊಂಡರನ್ನು, ಲಂಬಾಣಿ ಗರನ್ನು, ಕಿಳ್ಳೇಕ್ಯಾತರನ್ನ, ಬುಡುಬುಡಕಿಯರನ್ನು, ಸುಡಗಾಡು ಸಿದ್ಧರನ್ನು, ಕೆಲವರನ್ನಾದರೂ ನಾವು ಇಲ್ಲಿ ಕರೆಸಬಹುದಿತ್ತು. ಇಂದು ಬರಿ ಚರ್ಚೆ, ಗೋಷ್ಠಿ ಆಗ್ತಾ ಇದೆಯೇ ಹೊರತು ಇದು ಎಲ್ಲಿಗೆ ಮುಟ್ಟಬೇಕೋ ಅಲ್ಲಿಗೆ ಮುಟ್ಟೋದಿಲ್ಲ. ಬಹಳ ಮುಖ್ಯವಾದ ವಿಚಾರ ಅಂದ್ರೆ. ಯಾರಿಗೆ ಅವು ಮುಟ್ಟಿರಬೇಕು ಅಂತಾ ಪ್ರಯತ್ನ ಮಾಡ್ತಿದ್ದೇವಿ, ಈ ವಿಚಾರಗಳು ಅವರಿಗೆ ಮುಟ್ಟೋದಿಲ್ಲ. ಈ ರೀತಿಯಲ್ಲಿ ನಾವು ಯೋಚನೆ ಮಾಡಬೇಕಾಗುತ್ತೆ. ಅವರ ಜೀವನ ವಿಧಾನವನ್ನು ಬದಲಿಸುವುದು ಹೇಗೆ? ಪಾರಂಪರಿಕ ಜ್ಞಾನವನ್ನು ಬದಲಾಯಿಸುವುದು ಹೇಗೆ? ಸಾಮಾಜಿಕ ಪರಂಪರೆಯನ್ನು ಬದಲಾಯಿಸುವುದು ಹೇಗೆ? ದೈನಂದಿನ ವ್ಯವಹಾರಗಳನ್ನು ಬದಲಾಯಿಸುವುದು ಹೇಗೆ? ಎನ್ನುವುದರ ಕಡೆಗೂ ನಾವು ಗಮನ ಹರಿಸಬೇಕಾಗುತ್ತದೆ, ಅವುಗಳ ಕಡೆಗೆ ನಾವು ಗಂಭೀರವಾಗಿ ಚಿಂತನೆ ಮಾಡಿದಾಗ ಮಾತ್ರ ಇಂತಹ ಸಮಾವೇಶಗಳು ಅರ್ಥಪೂರ್ಣವಾಗುತ್ತವೆ.

ಹಬ್ಬ-ಆಚರಣೆಗಳನ್ನು ನಾವು ಗಮನಿಸಬೇಕು. ನಮ್ಮ ಅಲೆಮಾರಿಗಳ ಅಥವಾ ನಮ್ಮ ಜನಪದರ ಹಬ್ಬ-ಆಚರಣೆಯ ಹಿನ್ನೆಲೆಯನ್ನು ನಾವು ಗಮನಿಸಬೇಕು. ಒಂದೊಂದು ಹಬ್ಬಗಳು ಒಂದೊಂದು ಅರ್ಥವನ್ನು ಕೊಡುತ್ತವೆ. ವಿಶಿಷ್ಟ ಸಂದರ್ಭದಲ್ಲಿ ವಿಶಿಷ್ಟವಾದ ಹಬ್ಬಗಳನ್ನು ಆಚರಣೆಗಳನ್ನು ಮಾಡಿಕೊಂಡು ಬರುತ್ತವೆ. ಸುಮ್ಮನೆ ಮಾಡಿಕೊಂಡಿರುವ ಹಬ್ಬ-ಆಚರಣೆಗಳಲ್ಲ ಅವು. ಕಾಲ ಕಳೆಯೋದಕ್ಕೆ ಮಾಡಿಕೊಂಡ ಹಬ್ಬ-ಆಚರಣೆಗಳಲ್ಲ. ಮನುಷ್ಯ ಮನುಷ್ಯರ ನಡುವೆ ಗಾಢವಾದ ಸಂಬಂಧವನ್ನು ಬೆಸೆಯಲು ಮಾಡಿಕೊಂಡಿರುವ ಆಚರಣೆಗಳು. ಮನುಷ್ಯ-ಪ್ರಾಣಿ, ಮನುಷ್ಯ-ಸಸ್ಯ ಇವುಗಳ ಜೊತೆಯಲ್ಲಿ ಸಂಬಂಧ ಬೆಸೆಯೋದಕ್ಕೆ ಮಾಡಿಕೊಂಡ ಹಬ್ಬ-ಆಚರಣೆಗಳೆಲ್ಲ ಅವು. ಪ್ರತಿಯೊಂದು ಹಬ್ಬಾಚರಣೆಗೂ ವಿಶಿಷ್ಟವಾದ ಅರ್ಥಗಳಿವೆ. ಅವುಗಳನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ ಮತ್ತು ಮನವರಿಕೆ ಮಾಡಿ ಕೊಡಬೇಕಾಗಿದೆ. ನಮ್ಮ ಜನಪದರು ಇವತ್ತಿಗೂ ಕೂಡ ಮಾಡುತ್ತಾರೆ. ಯಾಕೆ ಮಾಡ್ತಾರವರು? ನಮಗೆ ಗೊತ್ತಿಲ್ಲಪ್ಪ! ಹಿಂದಿನವರು ಮಾಡಿಕೊಂಡು ಬಂದ್ರು ನಾವು ಮುಂದುವರೆಸಿಕೊಂಡು ಹೋಗ್ತಿದ್ದೇವೆ ಅಂತಾರೇ. ನಮಗೆ ಗೊತ್ತಿಲ್ಲಾ ಅಂತಾರವರು. ಆದರೆ ನಿಜ ಆಗಲೂ ಅದರ ಹಿಂದಿರುವಂತಾ ಆಶಯವೇನು? ಅದರ ಹಿಂದಿರುವ ಅರ್ಥ ಏನು? ಜೀವನ ದರ್ಶನ ಏನು? ಅನ್ನುವುದನ್ನು ನಾವಿವತ್ತು ಮನಗಾಣಬೇಕಿದೆ. ಮನುಷ್ಯ ಮನುಷ್ಯನ ಸಂಬಂಧವನ್ನು ಗಾಢವಾಗಿ ಬೆಸೆಯಬೇಕಾಗುತ್ತದೆ. ಬಹಳ ಸೌಹಾರ್ದತೆಯನ್ನು ನಾವು ಕಾಣುತ್ತೇವೆ. ಹೋಳಿ ಮುಂತಾದ ಸಂದರ್ಭಗಳಲ್ಲಿ ಎಲ್ಲಾ ಜನಾಂಗಗಳು ಒಂದಾಗಿ ಬೆರೆಯುವಂತಹದ್ದು. ದೀಪದ ಹಬ್ಬ ದೀಪಾವಳಿ ಮಾಡುವಾಗಲೂ ಕೂಡ ಬಹಳ ವಿಶಿಷ್ಟವಾದ ಆಶಯ ಅಲ್ಲಿರುತ್ತದೆ. ಅಲೆಮಾರಿಗಳದೇ ಆದಂತಹ ಕೆಲವು ಹಬ್ಬಾಚಾರಣೆಗಳಿವೆ. ಬಹಳ ವಿಶಿಷ್ಟವಾದ ಸಂದರ್ಭದಲ್ಲಿ ಅವರು ಆಚರಣೆ ಮಾಡಿಕೊಂಡು ಬರುತ್ತಾರೆ. ಅವುಗಳ ಹಿಂದಿರುವಂತಹ ಆಶಯ, ಅವುಗಳ ಹಿಂದಿರುವಂತಹ ಸಂಬಂಧ ಮನುಷ್ಯನಿಗೂ ಪ್ರಾಣಿಗಳಿಗೂ, ಮನುಷ್ಯನಿಗೂ, ಸಸ್ಯಗಳಿಗೂ, ಮನುಷ್ಯನಿಗೂ ಈ ಭೂಮಿಗೂ ಇರುವಂತಹ ಸಂಬಂಧವನ್ನು ಬೆಸೆಯೋದಕ್ಕೆ ಮಾಡಿಕೊಂಡಿರುವಂತಹ ಕೆಲವು ಹಬ್ಬಾಚರಣೆಗಳಾಗಿವೆ. ಅವುಗಳ ಕಡೆಗೆ ನಾವು ಇವತ್ತು ಆಲೋಚನೆ ಮಾಡ್ತಿದ್ದೇವೆ. ಅವುಗಳ ಬಗೆಗೆ ನಮ್ಮ ಜನಪದರಿಗೆ ನಮ್ಮ ಅಲೆಮಾರಿಗಳಿಗೆ, ಬುಡಕಟ್ಟಿನವರಿಗೆ ಅಲ್ಲಿರುವ ಅನಿಷ್ಟ ಪದ್ಧತಿಗಳ ಬಗ್ಗೆ ನಾವು ತಿಳಿಸಿಕೊಡಬೇಕು. ಎಲ್ಲವನ್ನೂ ಸ್ವೀಕಾರ ಮಾಡಬೇಕು ಅನ್ನುವಂತಹದ್ದಲ್ಲ. ಅಲ್ಲಿರುವಂತಹ, ಅದರ ಹಿಂದಿರುವಂತಹ ಕೆಲವು ಬೆತ್ತಲೆ ಸೇವೆ ಇತ್ಯಾದಿಗಳು ಏನೇನಿವೆ ಆ ಎಲ್ಲಾ ಅನಿಷ್ಟ ಪದ್ಧತಿಯ ಬಗೆಗೆ ನಾವು ತಿಳುವಳಿಕೆ ಕೊಡಬೇಕಾಗುತ್ತದೆ. ಬಲಿ ಕೊಡಬೇಕಾದ ಸಂಪ್ರದಾಯ ಇತ್ಯಾದಿಗಳ ಬಗೆಗೆ ತಿಳಿಹೇಳಕೊಡಬೇಕಾಗುತ್ತದೆ. ಹೇಳಿ ಕೊಡದೆ ಹೋದರೆ ಈ ಅಲೆಮಾರಿ ಜನಾಂಗ ತಿಳೀದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ವಿದ್ವಾಂಸರಾದಂತವರು, ನಮ್ಮಂತಹ ಅಕ್ಷರ ಜ್ಞಾನಿಗಳು ಅವರ ಹಟ್ಟಿಗಳಿಗೆ ಹೋಗಿ, ಅವರ ನೆಲೆಗಳಿಗೆ ಹೋಗಿ ಅವರನ್ನು ಜ್ಞಾನವಂತರನ್ನಾಗಿ ಮಾಡುವಂತಹದ್ದು ಇವತ್ತು ತೀರಾ ಅಗತ್ಯವಿದೆ ಎನ್ನುವಂತಹ ಮಾತನ್ನು ಈ ಸಂದರ್ಭದಲ್ಲಿ ಹೇಳಲಿಕ್ಕೆ ಇಷ್ಟಪಡುತ್ತೇನೆ. ಬಹುಶಃ ನಾವು ಹೀಗೆ ಮಾಡದೇ ಹೋದರೆ ನಮ್ಮ ಅಲೆಮಾರಿಗಳ ಬದುಕನ್ನು ಎತ್ತರಿಸಲಿಕ್ಕೆ ಸಾಧ್ಯವಾಗುವುದಿಲ್ಲ. ಅವರಲ್ಲಿರುವಂತಹ ಅಜ್ಞಾನವನ್ನು, ಮೌಢ್ಯವನ್ನು ಅಸಂಗತತನವನ್ನು ತೆಗೆದು ಹಾಕೋದಕ್ಕೆ ಏನೆಲ್ಲಾ ಪ್ರಯತ್ನಗಳು ವಿತ್ತು ಆಗಬೇಕಾಗಿದೆ. ಕೆಲವು ಅಲೆಮಾರಿಗಳು ಸುಶಿಕ್ಷಿತರಾಗಿ ಮುಖ್ಯವಾಹಿನಿಗೆ ಬರೋದಕ್ಕೆ ಸಾಕಷ್ಟು ಸೆಣಸಾಟವನ್ನು ಮಾಡುತ್ತಾ ಇದ್ದಾರೆ ಇವತ್ತು. ಕೆಲವು ಅಲೆಮಾರಿಗಳಿಗೆ ಇನ್ನೂ ನಾಗರಿಕ ಪ್ರಪಂಚದ ಜ್ಞಾನವೇ ಗೊತ್ತಿಲ್ಲ. ಯಾಂತ್ರಿಕ ಜಗತ್ತನ್ನು ಅವರಿನ್ನೂ ನೋಡೇ ಇಲ್ಲಾ. ಅವರಿಗಿನ್ನೂ ಸೈಕಲ್ ಗೊತ್ತಿಲ್ಲ, ಮೋಟರ್ ಸೈಕಲ್ ಗೊತ್ತಿಲ್ಲ. ರೈಲು ಗೊತ್ತಿಲ್ಲ, ಟಿವಿ ಗೊತ್ತಿಲ್ಲ, ಮತ್ತೊಂದು ಗೊತ್ತಿಲ್ಲ, ಕಾಡುಗಳ ಮಧ್ಯದಲ್ಲಿ ನೆಲೆಯಾಗಿರುವ ಕೆಲವು ಜನಾಂಗದವರಿಗೆ ಇವತ್ತಿನವರೆಗೂ ಕೂಡಾ ಆಧುನಿಕತೆಯ ಗಾಳಿ ಮುಟ್ಟಿಲ್ಲ. ಅದಕ್ಕಾಗಿ ನಿಜವಾದ ಕಳಕಳಿ, ಬಹುಶಃ ಲಕ್ಕಪ್ಪಗೌಡರು ಉದ್ಘಾಟನೆ ಸಂದರ್ಭದಲ್ಲಿ ಹೇಳಿರುವಂತಹ ಮಾತು, ಸಹಾನುಭೂತಿ ಬೇಕಾಗಿಲ್ಲ. ಈ ಜನಾಂಗದಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅವರ ಆರ್ಥಿಕತೆಯನ್ನು ಎತ್ತಬೇಕು. ಅದರ ಬದುಕನ್ನು ಎತ್ತರಿಸಬೇಕು ಅಂದರೆ ಅವರಿಗೆ ಧೈರ್ಯವನ್ನು, ಸ್ಥೈರ್ಯವನ್ನು ತುಂಬುವಂತಹ ಕೆಲಸ ನಾವು ನೀವೆಲ್ಲಾರೂ ಮಾಡಬೇಕು ಎನ್ನುವಂತಹ ಮಾತನ್ನು ಹೇಳುತ್ತಾ ನಮ್ಮ ಸ್ನೇಹಿತರಿಗೆ ಬಹುಶಃ ಅವರ ಮಾತಿಗೆ ಉತ್ತರ ಈ ಮೂಲಕ ದೊರಕಿದೆ ಅಂತ ಅಂದುಕೊಳ್ಳುತ್ತೇನೆ. ಅಲೆಮಾರಿಗಳನ್ನು ಈ ಪ್ರಪಂಚದ ಪ್ರಮುಖ ವಾಹಿನಿಯ ಮಧ್ಯ ಕರೆದುಕೊಂಡು ಬರಬೇಕಾಗಿದೆ. ಅದರ ಜ್ಞಾನ ಪರಂಪರೆಯನ್ನು ಉಪಯೋಗಿಸಿಕೊಳ್ಳುವುದರ ಜೊತೆಗೆ ಅವರಲ್ಲಿರುವ ಕೆಲವು ಅನಿಷ್ಟ ಪದ್ಧತಿಗಳನ್ನು ದೂರ ಮಾಡಬೇಕಾಗಿದೆ. ಈ ಅವಕಾಶ ಒದಗಿಸಿದ ಕನ್ನಡ ವಿಶ್ವವಿದ್ಯಾಲಯಕ್ಕೂ ಮತ್ತು ಇಷ್ಟೊತ್ತಿನವರೆಗೂ ನನ್ನ ಮಾತನ್ನು ತಾಳ್ಮೆಯಿಂದ ಕೇಳಿದಂತಹ ನಿಮ್ಮೆಲ್ಲರಿಗೂ ವಂದಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಲಿಪ್ಯಂತರ: ಸುಮಂಗಲಾ ಬಿ. ಅತ್ತಿಗೇರಿ

* * *