ಅಲೆಮಾರಿಗಳ ಜ್ಞಾನ ಪರಂಪರೆಯನ್ನು ಅಲೆಮಾರಿಗಳ ಸಾಮಾಜಿಕ ಪರಂಪರೆಯಲ್ಲಿ ಜ್ಞಾನವನ್ನು ಗಮನಿಸಿ ಹೇಳಬೇಕಾಗಿದೆ. ವಿವಿಧ ಗೋಷ್ಠಿಗಳಲ್ಲಿ ನಡೆಯುವಾಗ ಪ್ರತಿಯೊಂದು ವಿಷಯ ಜ್ಞಾನದ ಕುರಿತು ಹೇಳುವಾಗ ಒಂದು ನಿರ್ದಿಷ್ಟವಾದ ಹೆಚ್ಚು ಸ್ಪಷ್ಟವಾದ ಚೌಕಟ್ಟಿರುವುದನ್ನು ಕಾಣಬಹುದು. ಕರಕುಶಲ ಪರಂಪರೆಯಾಗಬಹುದು, ಕಲೆಯಾಗಬಹುದು, ಮೌಖಿಕ ಪರಂಪರೆಗಳಾಗಬಹುದು. ಸಾಮಾಜಿಕ ಪರಂಪರೆಯ ಸಂದರ್ಭದಲ್ಲಿ ಜ್ಞಾನವನ್ನು ಗುರುತಿಸುವುದು ಹೇಗೆ? ಏನು ಮಾನದಂಡ ಇಟ್ಟುಕೊಳ್ಳಬೇಕಾಗುತ್ತದೆ ಅಂತ ಆಲೋಚಿಸಿದಾಗ ಕೆಲವು ಸಾರಿ ವಿಧವೆಯಾದ ನಂತರ ತಲೆ ಬೋಳಿಸುವುದು ನಮ್ಮ ಸಂಸ್ಕೃತಿಯಲ್ಲಿದೆ. ಯಾವುದೋ ಹಕ್ಕಿಪಿಕ್ಕಿ ಜನಾಂಗ ಮಾಂಕಾಳಿ ಆರಾಧನೆಗೆ ಕೊರಳು ಕೊಯ್ದ ಉಕ್ಕಿದ ರಕ್ತದ ಕುರಿತ ಆಚರಣೆಯು ಅಲೆಮಾರಿಗಳಲ್ಲಿ ರುವಂತಹ ಸಂದರ್ಭಗಳಲ್ಲಿದೆ. ಯಾವುದನ್ನು ಜ್ಞಾನ, ಯಾವುದನ್ನು ಮೌಲ್ಯ ಅಥವಾ ಯಾವುದನ್ನು ಬಹಳ ಗಂಭೀರವಾಗಿ, ತೂಕವಾಗಿ ಭಾವಿಸಬೇಕೋ ಅನ್ನೋ ಸಂದರ್ಭ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಇಂಥಾ ಸಂದರ್ಭದಲ್ಲಿ ಬಹುತೇಕ ನಾನು ಸಾಮಾಜಿಕ ಪರಂಪರೆಯಲ್ಲಿ ಮುಖ್ಯವಾಗಿ ಜೀವನ ಸಂಚಾರವನ್ನು ಗಮನಿಸುವಾಗ ಹೆಚ್ಚು ಮಾನವೀಯತೆಗೆ ಸಂಚರಿಸುವ ಗುಣಗಳನ್ನು ಬಹಳ ಗಂಭೀರವಾಗಿ ಜ್ಞಾನ ಅನ್ನುವ ಅರ್ಥದಲ್ಲಿ ಭಾವಿಸಲು ಪ್ರಯತ್ನಿಸುತ್ತೇನೆ. ಆ ಲೋಕದೃಷ್ಟಿ ಅನ್ನುವುದನ್ನು ಈ ಚೌಕಟ್ಟಿಗೆ ಅಳವಡಿಸಿ ನೋಡಿ, ಹೆಚ್ಚು ಪಾಲು ಸಾಗಿಸಿಕೊಂಡು ಹೋಗುತ್ತಾರೆ. ಅವರದೇ ಆದ ಬದುಕಿನದೇ ಇತಿಮಿತಿ ಸಾಕಷ್ಟು ಇದೆ ಅನ್ನೋದು ಅಲ್ಲಿ ಬಹಳ ಮುಖ್ಯವಾಗಿ ಕಾಣಬರುವ ಒಂದು ನಿರ್ದಿಷ್ಟ ರೂಪ.

ಸಹಜವಾಗಿ ಅಲೆಮಾರಿಗಳನ್ನು ಬೇರೆ ಬೇರೆ ಕ್ರಮದಲ್ಲಿ ಗುರುತಿಸಿರಬಹುದು. ನಾನು ಸ್ತೂಲವಾಗಿ ಅಲೆಮಾರಿಗಳನ್ನು ವ್ಯಾಪಾರಿ ಸಂಬಂಧ ಅಲೆಮಾರಿಗಳು, ಪ್ರದರ್ಶನ ಸಂಬಂಧಿ ಅಲೆಮಾರಿಗಳು, ವೈದ್ಯ ಸಂಬಂಧಿ ಅಲೆಮಾರಿಗಳು ಮತ್ತು ಇತರೆ ಎಂದು ಗುರುತಿಸಿದ್ದೇನೆ. ಆದರೆ ಈ ಎಲ್ಲಾ ಅಲೆಮಾರಿಗಳ ಕೇಂದ್ರ ಆರ್ಥಿಕತೆ ಅಂದರೆ ಆದಾಯಗಳಿಸುವುದು. ಆದಾಯ ಗಳಿಸುವುದರ ಆಧಾರದಿಂದಲೇ ಬದುಕನ್ನು ನಡೆಸುವುದು. ಅದು ಪ್ರದರ್ಶನ ಸಂಬಂಧಿ ಆಗಬಹುದು, ಸುಡಗಾಡು ಸಿದ್ಧರಾದಿಯಾಗಿ ಚಮತ್ಕಾರ ವೈದ್ಯದ ಸಂಬಂಧಿ ಆಗಬಹುದು. ಮೊಂಡರಂತಹ, ಜಗಮೊಂಡರಂತಹ ಆಕ್ರಮಣ ತಂದು ಒತ್ತಡ ತಂದು, ಆಕ್ರಮಣಶೀಲ ಅಂತ ಬೆಳಿಗ್ಗೆ ಚರ್ಚೆಯಾಯಿತು. ನಾನು ಅದನ್ನು ಆಕ್ರಮಣ ಅಂತ ಒಪ್ಪಿಕೊಳ್ಳುವುದು ಕಷ್ಟಕರವಾದ ವಿಷಯ. ಯಾಕೆಂದರೆ ಅವರು ನಮಗೆ ಒತ್ತಡ ತರ್ತಾರೆ. ಅದು ಬೇರೆ ಕ್ರಮದಿಂದ. ಆದ್ದರಿಂದ ಈ ತರದ ಒತ್ತಡ ಕ್ರಮದಿಂದ ತರುವಂತಹ ಬೇರೆ ಬೇರೆ ಭಾಗದ ಜನರು ಆಗಬಹುದು. ಅದು ಆರ್ಥಿಕ ಅನ್ನುವುದು ಆಹಾರವನ್ನು ಸೇರಿ ನಮ್ಮ ಪರಂಪರಯೆಲ್ಲಿ ಹಣವನ್ನೇ ಬೇಡುವಂತದ್ದು ಬಹಳ ಮುಖ್ಯವಾಗಿಲ್ಲ. ಕಾಳುಕಡ್ಡಿ ಬಟ್ಟೆಯನ್ನು ಬೇಡುವುದು, ಜೀವನಕ್ಕೆ ಅನಿವಾರ್ಯವಾದ ಪರಿಕರಗಳನ್ನು ಬೇಡುವುದು ಅಷ್ಟೇ ಅವರ ಉದ್ದೇಶ ಅನ್ನುವುದು ಇಲ್ಲಿ ಸ್ಪಷ್ಟ. ಅದು ಯಾವ ಅಲೆಮಾರಿಗಳನ್ನು ತೆಗೆದುಕೊಂಡರೂ ನಮಗೆ ಸುಸ್ಪಷ್ಟವಾಗಿ ಕಾಣುತ್ತದೆ. ದೊಂಬರು ಲಾಗ ಹಾಕುವುದರೊಂದಿಗೂ ನಾವು ಕೊಡುವ ಕಾಳುಕಡ್ಡಿ ಅಥವಾ ಕಾಸು ಕೇಂದ್ರವಾಗಿರುತ್ತದೆ. ಪ್ರತಿಯೊಂದು ಜನಾಂಗದ ಹಿಂದೆ ಇಂಥದೊಂದು ಕೇಂದ್ರವಾಗಿರುತ್ತೆ ಅನ್ನುವುದು ಬಹಳ ಮುಖ್ಯ.

ಹಾಗಾಗಿ ಬಹುತೇಕ ಈಗಲೂ ಇಡೀ ಭಾರತದಾದ್ಯಂತ ಸಂಚರಿಸುವ ಅಲೆಮಾರಿ ಜನಾಂಗಗಳಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದದ್ದು. ಮೊದಲನೆಯದಾಗಿ ಹಕ್ಕಿಪಿಕ್ಕಿ ಜನಾಂಗ ಬಿಟ್ಟರೆ ಬಹುತೇಕ ದೊಂಬರು ಉಳಿದಂತೆ ಹೆಚ್ಚುಪಾಲು ಜನರು ವ್ಯವಸ್ಥಿತವಾಗಿ ನಿಂತು ಈಗಾಗಲೇ ನಿಲುಗಡೆಗೆ ಒಳಗಾಗುವ ಜನಾಂಗಗಳು ಇದ್ದಾವೆ. ಇನ್ನೂ ಸಂಚಾರದ ಜನಾಂಗಗಳು ಉಳಿದಿದ್ದಾವೆ. ಹೆಚ್ಚು ಪಾಲು ಜನ ಆಗಲೆ ನಮ್ಮ ಸರ್ಕಾರದ ಯೋಜನೆಗಳ ಉಪಯೋಗ ಪಡೆದು ಕೂಡ ಸಾಕಷ್ಟು ನಿಂತಿರೋದು ಇದೆ. ಸಂಚಾರದಲ್ಲಿ ಇರುವ ಭಾಗಗಳು ಇವೆ. ಹಾಗಾಗಿ ಬಹುತೇಕ ಬಹಳ ಮುಖ್ಯವಾಗಿ ಕಾಣಬರುವ ಜನಾಂಗ ಹಕ್ಕಿಪಿಕ್ಕಿ. ಇವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಓಡಾಡುವ ರೂಪುಗಳು ಬಹಳ ಸ್ಪಷ್ಟವಾಗಿ ಸಿಗುತ್ತದೆ. ಈಚೀನವರೆಗೂ ೮೦-೯೦ ಗುಡಿಸಲುಗಳು ಒಟ್ಟಿಗೆ ಬಾಳೋದನ್ನು ನಾವು ಕಾಣುತ್ತೀವಿ. ಅವರು ಹೆಸರುಗಳು ಬಹಳ ಸ್ಪಷ್ಟವಾಗಿ ಈಗಾಗಲೇ ಹೇಳಿರಬಹುದು. ಅವರ ಮಗು ಎಲ್ಲಿ ಹುಟ್ಟುತ್ತದೊ ಹೈಕೋರ್ಟ್‌ಕೆಳಗೆ ಮಗು ಹುಟ್ಟಿದರೆ ಹೈಕೋರ್ಟ್‌ಅಂತಲೇ ಇಡ್ತಾರೆ. ಬಲ್ಪ ಕೆಳಗೆ ಹುಟ್ಟಿದರೆ ಬಲ್ಪು ಅಂತಲೇ ಇಡ್ತಾರೆ. ರಾಜಕುಮಾರ ಅಂತ ಇಡಬಹುದು. ಅಮಿತಾಬಚ್ಚನ್ ಅಂತ ಇಡಬಹುದು. ಏನು ಬೇಕಾದರೂ ಹೆಸರಿಡುವಂತಹ ಕ್ರಮಕ್ಕೆ ಒಳಪಟ್ಟ ಜನಾಂಗ.

ತುಂಬಾ ಸಂಚಾರ ಮಾಡುವಂತ ಜನಾಂಗ ಬಹುತೇಕ ಗುಜರಾತ್ ಮೂಲದವರು ಅಂತ ಭಾವಿಸುತ್ತೇವೆ. ಲಂಬಾಣಿಗರ ಹಾಗೆ ರಾಜಸ್ಥಾನ, ಮದ್ದೂರು ಹೀಗೆ ಇತರ ಜನಾಂಗಗಳೂ ಎಲ್ಲೆಡೆಗೂ ಸಂಚರಿಸುತ್ತವೆ. ಇಂತಹದೇ ಒಬ್ಬ ಅಲೆಮಾರಿಯನ್ನು ಕೇಳಿದಾಗ ಆತನಿಗೆ ಒಂಬತ್ತು ಭಾಷೆ ಬರುತ್ತೆ. ಅಕ್ಕಿಮನಿಗೆ ಒಬ್ಬನಿಗೆ, ಚಿಕ್ಕಬಳ್ಳಾಪುರದವನು. ಅವನು ತುಳು, ತೆಲುಗು, ತಮಿಳು, ಕೊಂಕಣಿ, ಹಿಂದಿ, ಉರ್ದು, ಇಷ್ಟೆಲ್ಲ ಭಾಷೆ ಮಾತನಾಡ್ತೀನಿ ಸ್ವಾಮಿ. ಆದರೆ ಇವರ ಭಾಷೆ ಗೊತ್ತಾಗಲ್ಲ. ಗುಜರಾತಿ ಬರುತ್ತೆ ನನಗೆ. ಆದರೆ ಇವರ ಭಾಷೆ ಅರ್ಥ ಆಗಲ್ಲ ಎಂದು. ಅದು ಸಹಜವಾಗಿ ಅವರ ಸಂಚಾರದ ಸಂದರ್ಭದಲ್ಲಿ ಅವರ ಭಾಷೆ ಅವರದೇ ಬೇರೆ ಬೇರೆ ಭಾಷೆಗಳ ಸಂಪರ್ಕದೊಂದಿಗೆ ಒಂದು ರೂಪ ಪಡೆದಿರಬಹುದು ಅಥವಾ ಪರಂಪರೆಯಿಂದ ಈ ತರಹದ ಸಂಚಾರದಲ್ಲಿ ಅವರದೇ ತನವನ್ನು ಅವರು ಉಳಿಸಿಕೊಂಡಿರುವ ಸಂದರ್ಭಗಳು ಇದೆ. ಹಾಗೆ ಪ್ರದರ್ಶನ ಸಂಬಂಧಿ ಅಲೆಮಾರಿಗಳನ್ನು ಈಗಾಗಲೇ ಬಹುತೇಕ ಹೆಸರು ಹೇಳಿದರು. ಯಾವ ಭಾಗದವರು, ಯಾವುದಾದರೂ ಹಗಲುವೇಷದವರಾಗಬಹುದು, ದೊಂಬರಾಗಬಹುದು, ಯಾವುದಾದರೂ ಬುರ್ರ‍ಕಥಾದವರು, ಹೆಳವರು, ದೊಂಬದಾಸರು, ಕುರುಮಾಮದವರು, ಹಾವಾಡಿಗರು. ತೊಗಲುಗೊಂಬೆಯವರಾದಿಯಾಗಿ ಹೆಚ್ಚು ಪಾಲು ಜನರು ಪ್ರದರ್ಶನ ಸಂಬಂಧಿ ಅಲೆಮಾರಿಗಳು. ಈ ಪ್ರದರ್ಶನ ಸಂಬಂಧಿ ಅಲೆಮಾರಿಗಳು ಹೆಚ್ಚು ಪಾಲು ಒಂದು ಸ್ಥಳದಲ್ಲಿ ಇದ್ದು ಅಲ್ಲಿಂದ ಒಂದು ಅವಧಿಗೆ ಪ್ರವಾಸ ಹೋಗಿ ಅಥವಾ ಅಲೆಮಾರಿಗಳಾಗಿ ಸಂಚರಿಸಿ ಅಥವಾ ಗೊತ್ತದ ಪ್ರದೇಶಗಳಲ್ಲಿ ಸಂಚರಿಸಿ ತಮ್ಮ ಸ್ವಸ್ಥಳಕ್ಕೆ ಬರುವಸಾಮಾನ್ಯ ಕ್ರಿಯೆ. ಇವರಲ್ಲಿ ನಮ್ಮ ವೃತ್ತಿಗಾಯಕರು ಬಹಳ ಮುಖ್ಯವಾದವರು. ಬಹುತೇಕ ವೃತ್ತಿ-ಗಾಯಕರು ಈ ರೀತಿಯ ಅಲೆಮಾರಿಗಳ ಸಮೀಪವಾದ ಸಂಚಾರದಲ್ಲಿ ಅವರು ಚೌಡ್ಕಿಯಿಂದ ಹಿಡಿದು ಬಹುತೇಕ ನೀಲಗಾರರಿಂದ ಹಿಡಿದು ಎಲ್ಲಾ ಭಾಗದವರು ಒಂದು ಅರೆ ಅಲೆಮಾರಿಗಳಾಗಿ ಕೆಲಸ ಮಾಡುವ ರೂಪುಗಳನ್ನು ಗಮನಿಸುತ್ತೇವೆ. ಇದರಲ್ಲಿ ಕೆಲವು ಜನಾಂಗಗಳು ತಮ್ಮ ಆಸ್ತಿಯಾಗಿ ಆ ಭಾಗದ ಊರುಗಳನ್ನು ಹಂಚಿಕೊಳ್ಳುವುದು ನಡೆದಿರುವಂತದ್ದು ಗಮನಿಸಬಹುದು.

ಬಹಳ ಮುಖ್ಯವಾದ ಈ ಜ್ಞಾನ ಪರಂಪರೆಯಲ್ಲಿ ಕಾಣಸಿಗುವಂತವರು ಬಹಳ ವಿಶೇಷವಾದವರು, ನಮ್ಮ ಇಡೀ ಅಧ್ಯಯನ ಜಾನಪದ ಅಧ್ಯಯನ ಕ್ರಿಯೆಯಲ್ಲಿಯೇ ಬಹಳ ಮರೆತು ಉಳಿದಿರುವಂತವರು. ನಮ್ಮಲ್ಲಿರುವಂತಹ ಸುಡುಗಾಡು ಸಿದ್ಧರು ಮತ್ತು ಹಕ್ಕೀಮರು. ನಾವು ಆಯುರ್ವೇದ. ನಾಟಿ ಈ ತರದ ಅನೇಕ ರೂಪುಗಳನ್ನು ಅಭ್ಯಾಸ ಅಧ್ಯಯನ ಮಾಡುತ್ತಿದ್ದೇವೆ. ಆದರೆ ತೀರ ತಳದಿಂದ ನಾಟಿಗೂ ತಳದಿಂದ ನಾಟಿ ವೈದ್ಯಕ್ಕೂ ಬಹುಶಃ ತಳವಾಗಿರುವುದಕ್ಕೆ ಸಾಧ್ಯವಾಗಿರುವಂತಹ ಈ ತರದ ಪರಂಪರೆಯನ್ನು ನಾವು ಹೆಚ್ಚು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಅವರು ಕೊಡದೇ ಇರೋ, ಔಷಧಿಯೇ ಇಲ್ಲ. ಅವರು ಔಷಧಿ ಕೊಡೋದರ ಜೊತೆಗೆ ತಂತ್ರ ಮಂತ್ರನೂ ಮಾಡುತ್ತಾರೆ. ಮಾಟ, ಮೋಡಿ ಕೆಲವು ಚಮತ್ಕಾರನೂ ಮಾಡಬಹುದು. ಆದರೆ ಬಹುತೇಕ ಕ್ರಿಯೆಗಳು ಗಿಡಮೂಲಿಕೆಗಳ ಆಧಾರದಿಂದ ಅವರಿಗೆ ಗೊತ್ತಿರುವ ಗಿಡಮೂಲಿಕೆಗಳ ಸಂಪತ್ತೇ ಅದ್ಭುತವಾದದ್ದು. ಬಹುಶಃ ಒಬ್ಬೊಬ್ಬರಲ್ಲಿರುವ ಸಂಪತ್ತನ್ನು ನಾವು ಒಬ್ಬ ತಜ್ಞರ ಸಮೇತವಾಗಿ ಗುರುತಿಸಬಹುದಾದ ಸಾಧ್ಯತೆ ಇದೆ. ನಾವು ಈಗ ಬಹುತೇಕ ಈ ಹಂತಕ್ಕೆ ಬಂದಿದ್ದೇವೆ. ಒಬ್ಬ ಮಹಾಕಾವ್ಯ ಅಥವಾ ಒಬ್ಬ ಅತ್ಯುತ್ತಮ ಹಾಡುಗಾರ ನಮ್ಮ ವೃತ್ತಿ ಸಂಬಂಧಿ ಹಾಡುವ ಬಹಳ ದೊಡ್ಡ ಹಾಡುಗಾರರನ್ನು ಅವರು ನೀಲಗಾರರು, ಕಂಸಾಳೆ, ಗೊಂದಗಲಿಗರು ಯಾರೇ ಇರಬಹುದು. ಅವರನ್ನು ಒಬ್ಬ ದೊಡ್ಡ ಕವಿಗೆ ಹೋಲಿಸಿ ಅವರು ಕವಿಗೆ ಸಮ ಎಂದು ಹೇಳುವ ಹಂತಕ್ಕೆ ನಾವು ವಿದ್ವಾಂಸರು ಮತ್ತು ಬೇರೆಯವರ ಮಧ್ಯೆ ಹಂತಕ್ಕೆ ಬಂದು ನಿಲ್ಲುವ ಎವೇರ್‌ನೆಸ್ ಜ್ಞಾನಕ್ಕೆ, ಗ್ರಹಿಕೆಗೆ ಬಂದು ನಿಲ್ತಾಇದ್ದೀವಿ. ಆದರೆ ಇದಕ್ಕೆ ಸಮ. ಇದರಿಂದ ಆಚೆಗಿರುವ ಇವರ ಜ್ಞಾನವನ್ನು ತೀರ ಮರೆತು ನಡಕೊಂಡು ಹೋಗ್ತಾ ಇದ್ದೀವೆ.

ನಮ್ಮ ಬಹುತೇಕ ವಿಶ್ವವಿದ್ಯಾನಿಲಯಗಳು ಬಹಳ ಕಡಿಮೆ ಈ ಕಡೆಗೆ ಆಲೋಚಿಸುತ್ತವೆ. ಬಹಳ ಮುಖ್ಯವಾಗಿ ವಿಜ್ಞಾನ ಕ್ಷೇತ್ರದವರು ಇಂತದ್ದನ್ನು ನಮ್ಮ ಸುತ್ತ ಇರುವ ಅದ್ಭುತತೆಯನ್ನು ಗ್ರಹಿಸುವುದರಲ್ಲಿ ಬಹಳ ಕಡಿಮೆ ಇದ್ದಾರೆ. ಈ ಕಡೆ ತಿರೋಗೋದಾದರೆ ಅದಕ್ಕಿಂತ ದೊಡ್ಡ ಆಸ್ತಿ ಸಂಪತ್ತು ಇಲ್ಲ. ಯಾಕೆಂದರೆ ಒಂದು ನೆಲಕ್ಕೆ ಒಂದು ನೆಲ ತನಗೆ ಬೇಕಾದ ಕಾಯಿಲೆಗಳಿಗೆ, ತನಗೆ ಒದಗಬಹುದಾದ ಕಾಯಿಲೆಗಳನ್ನು ತನ್ನ ನೆಲೆದಿಂದಲೇ ಔಷಧಿಯನ್ನು ಕಂಡುಕೊಳ್ಳುತ್ತ ಅಂತಾ ಎಲ್ಲಾ ಪ್ರಯೋಗಗಳನ್ನು ಇವರು ಮಾಡ್ತಾರೆ. ಸಿದ್ಧ ಪರಂಪರೆ ಬಹಳ ದೊಡ್ಡದು. ಜೈನರಲ್ಲಿ ಸಿದ್ಧರಿದ್ದಾರೆ, ಬೌದ್ಧರಲ್ಲಿ ಸಿದ್ಧರಿದ್ದಾರೆ. ಅಲ್ಲದೆ ಎಷ್ಟು ದೊಡ್ಡದು ಎಂದರೆ ಬಂಗಾರ ಮಾಡಲು ಪ್ರಯತ್ನಿಸಿದ ರಸಸಿದ್ಧರವರೆಗೂ ಈ ಪ್ರಯೋಗಶೀಲತೆ ನಡೆದು ಬರುತ್ತದೆ. ಮಾದೇಶ್ವರ, ಮಂಟೇಸ್ವಾಮಿಯಂತವರೇ ದೊಡ್ಡ ವೈದ್ಯರು ಸಿದ್ದರಾಗಿರುವ ರೂಪಗಳನ್ನು ನಾವು ಗಮನಿಸುತ್ತೇವೆ. ಇಂತೆಲ್ಲ ಸಿದ್ಧ ಪರಂಪರೆಗಳು ಬಹಳ ಗೌಣವಾಗಿ ಅವರ ಪ್ರತಿಭೆಯನ್ನು ಕಿಂಚಿತ್ತು ಗಮನಿಸೋದಿರೊತರ ಭೂಹೀಚ ಅವರು ಕಾಣಿಸೊ ಬಹುಶಃ ಹಾವು ಚೇಳನ್ನ ಮಾತ್ರ ಗಮನಿಸಿ ಚಟ್ಟನೆ ನಕ್ಕು ಬಿಡೋ ಹಾಗೆ ನಾವು ಉಳಿದಿರೋದು ಒಂದು ದುರಂತ ಎಂದು ನಾನು ಭಾವಿಸುತ್ತೀನಿ. ಈ ಜ್ಞಾನ ಪರಂಪರೆಗಳು ಇವರ ಜ್ಞಾನ ನಾವು ದುಡಿಸಿಕೊಳ್ಳುತ್ತಾ ಮುಂದೆ ಸಾಗೋಣ ಅಂತ ಭಾವಿಸುತ್ತೀನಿ. ಅಲ್ಲದೆ ಇತರೆಯಲ್ಲಿ ಮೊಂಡರು, ಹೆಳವರು ಈ ತರದ ಪದ್ಧತಿ ಇದೆ. ನಾನು ಸಾಮಾಜಿಕ ಪರಂಪರೆಯ ಸಂದರ್ಭದಲ್ಲಿ ಅಲೆಮಾರಿಗಳಿಗಿರುವ ಕೆಲವು ವಿಶಿಷ್ಟ ರೂಪಗಳನ್ನು ಗಮನಿಸುವುದಕ್ಕೆ ಇಷ್ಟಪಡ್ತೀನಿ. ಇವತ್ತು ವರದಕ್ಷಿಣೆ ಅನ್ನೋದನ್ನು ಯಾವ ಕಾನೂನು ನಿಲ್ಲಿಸೋದಕ್ಕೆ ಸಾಧ್ಯವಾಗಿಲ್ಲ. ಯಾವ ಸಾಮಾಜಿಕ ಚಳುವಳಿಗಳು ಇನ್ನು ಆಗಿಲ್ಲ. ಅಲ್ಪಸ್ವಲ್ಪ ಅಂತರಜಾತಿಯ ವಿವಾಹಗಳ ಪ್ರಯತ್ನಗಳು ನಡೀತಾ ಇವೆ. ಅದಕ್ಕೊಂದು Relax ಆದ ಬಿಡುವಾದ ಒತ್ತಡಕ್ಕೆ ಕಡಿಮೆ ಇರುವ ಸಂದರ್ಭಕ್ಕೆ ಬಂದು ನಿಂತಿರುವುದಷ್ಟೇ ನಮ್ಮ ಆರೋಗ್ಯಕರ ಸಂದರ್ಭ. ಆದರೆ ಬಹುತೇಕ ಅಲೆಮಾರಿಗಳಲ್ಲಿ ಇನ್ನು ತೆರಕೊಡುವ ಪದ್ಧತಿ ಅಥವಾ ವಧುದಕ್ಷಿಣಿ ರೂಪ ಇದೆ. ನನ್ನ ಸಂದರ್ಭದಲ್ಲಿ ವಧುದಕ್ಷಿಣಿ ಆಗಲಿ ತೆರ ಆಗಲಿ ಎರಡು ಒಂದಲ್ಲ ಒಂದು ರೂಪದಲ್ಲಿ ಸಮೀಪದವೆ. ಆದರೆ ಗಂಡಿನ ದಬ್ಬಾಳಿಕೆ ಕಡಿಮೆ ಇದೆ ಅನ್ನೋದೇ ಇಲ್ಲಿಯ ವಿಶೇಷ ಅಂತ ಭಾವಿಸಬಹುದು. ಇಲ್ಲಿನ ಬಹುತೇಕ ಅಲೆಮಾರಿಗಳಲ್ಲಿ ಹೆಣ್ಣಿನ ಖರ್ಚನ್ನು ಹೆಣ್ಣಿನವರು, ಗಂಡಿನ ಖರ್ಚನ್ನು ಗಂಡಿನವರು ಉಂಟುಮಾಡುವ ಸಂದರ್ಭ ಇರುವುದು ವಿಶೇಷ. ಅವರವರ ಖರ್ಚುಗಳನ್ನು ಅವರೇ ತೂಗಿಸಿಕೊಳ್ಳುವ ಸಂದರ್ಭ ಇದೆ. ವಧುದಕ್ಷಿಣಿ ಅಥವಾ ವರದಕ್ಷಿಣಿ ಬಹಳ ಗೌಣವಾಗಿರುವುದು ಈ ಅಲೆಮಾರಿಗಳಲ್ಲಿರುವ ಬಹಳ ವಿಶೇಷ, ವಿಚಿತ್ರ ಅದರ ಆಚೆಗೆ ಆಸ್ತಿಯೂ ಇಲ್ಲ, ಕೊಡುವ ಸಂದರ್ಭವೂ ಇಲ್ಲ. ಹಾಗೆ ಕೊಡುವ ಸಂದರ್ಭಕ್ಕೆ ಬಂದು ನಿಂತರೆ ನಮ್ಮ ನಾಗರೀಕರ ಸಹವಾಸ, ಸಂಪರ್ಕ ಅಥವಾ ಸಂಸ್ಕೃತೀಕರಣದಿಂದಾಗಿ ಅವರು ಹಾಗೆ ಆಗಿಬಿಡಬಹುದು. ಬಹುಶಃ ಸಹಜವಾಗಿರುತ್ತೇನೊ. ಇಂತಹ ಪದ್ಧತಿ ಅವರಲ್ಲಿ ಬಹಳ ವಿಶೇಷವಾದುದು. ಆದರೆ ಪ್ರತಿ ಮದುವೆಯ ನಂತರ ಮಾಂಸದ ಊಟ ಅಥವಾ ಹೆಂಡ ಸಹಜವಾದದ್ದು. ವಿಶೇಷ ಕೆಲವು ಬುಡಕಟ್ಟುಗಳಲ್ಲಿ ಬಾಲ್ಯ ವಿವಾಹ ಕೂಡ ಉಳಿದಿದೆ. ಬಾಳಸಂತರು ದೊಂಬರಲ್ಲಿ ಈ ತರದ ಕೆಲವು ಕಡೆ ಬಾಲ್ಯ ವಿವಾಹವಿದೆ. ಆದರೆ ತೀರ ವಿಶೇಷವಾದುದ್ದು ಸಮಾಜಿಕವಾಗಿ ಬಹುಶಃ ನಮ್ಮ ಎಲ್ಲಾ ನಾಗರೀಕರ ಸಮಾಜವು ಇಂದು ಕೂಡ ಈ ತರಹದ ಸಂದರ್ಭಕ್ಕೆ ಬಂದೊದಗುವ ಸ್ಥಿತಿಯಲ್ಲಿದ್ದೇವೆ. ಅಂಥ ವಿಶೇಷ ಸಾಮಾಜಿಕ ರೂಪ ಈ ಅಲೆಮಾರಿಗಳಲ್ಲಿ ಕಾಣಬಹುದು. ಕೂಡಾವಳೀ ಅಥವಾ ವಿಧವಾ ವಿವಾಹ ಯಾವುದೇ ಹೆಣ್ಣು ಗಂಡ ಸತ್ತರೆ ಹಾಗೆ ಸಂದರ್ಭ ಬಹಳ ಕಡೆ ಇವೆ. ಅವಳು ಇನ್ನೊಂದು ಗಂಡನ್ನು ಮದುವೆ ಆಗ್ತಾಳೆ. ಹಿಂದಿನ ಗಂಡಿನ ಜೊತೆಗೆ ಅಲ್ಲಿಯ ಸರಳವಾಗಿ ಆ ಗುಂಪಿನಲ್ಲಿ ಈ ಗುಂಪಿನ ನಾಯಕನೇ ನ್ಯಾಯ ತೀರ್ಮಾನಮಾಡಿ ಅವರನ್ನು ಒಪ್ಪಿಕೊಳ್ಳುತ್ತಾನೆ. ಅದರ ಮುಂದೆ ಸಣ್ಣ ನ್ಯಾಯ ತೀರ್ಮಾನ ಮಾಡ್ತಾರೆ. ಯಾರು ಗಂಡ ಸತ್ತರೆ ಹೆಂಡತಿ ಆಗ್ಲಿ, ಹೆಂಡತಿ ಸತ್ತರೆ ಗಂಡ ಆಗ್ಲಿ ಹಾಗೆ ಇರುವುದಕ್ಕಿಂತ ಕೂಡಾವಳಿ ಅಥವಾ ವಿವಾಹ ತೀರ ಸಾಮಾನ್ಯವಾದುದು. ಇದು ನಿಜವಾಗಿಯೂ ಅಲೆಮಾರಿಗಳಲ್ಲಿರುವ ತೀರ ಸಾಮಾಜಿಕ ಬಹುಶಃ ಸಾರ್ವಕಾಲಿಕ ಮೌಲ್ಯ, ತೂಕ, ಗಂಭೀರ ಮತ್ತು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿರುವ ರೂಪ ಆಗಿರೋಕೆ ಸಾಧ್ಯ ಇದೆ ಅಂತ ನಾನು ಭಾವಿಸುತ್ತೀನಿ. ಹಾಗೆಯೇ ದೊಂಬರಲ್ಲಿ ಬಸುವಿ ಬಿಡೋಪದ್ಧತಿ ನಡೆದಿರೋದು ಅದರ ಮಧ್ಯ ಕಾಣಬರುವ ಒಂದು ವೈಚಿತ್ರ‍್ಯ. ಈ ಎಲ್ಲ ಪದ್ಧತಿಗಳು ಬೇರೆ ಜನಾಂಗಗಳಲ್ಲಿ ಉಂಟಾಗುತ್ತಾ ಇರ್ತಕ್ಕಂತ ಜ್ಞಾನ, ಪರಿಜ್ಞಾನದ ಮೂಲದಿಂದ ಕಡಿಮೆ ಆಗ್ತಾ ಇರೋದು ವಿಶೇಷ. ಬಹುತೇಕ ಜನವರ್ಗಗಳು ಅಲೆಮಾರಿಗಳಿಂದ ನೆಲೆನಿಲ್ತಾ ಇದಾವೆ.

ನಿನ್ನೆ ನೋಡಿದ ಹಾಗೆ ಶಿವಾಜಿ ಮರಾಠಿ ಅಂತ ಒಂದು ಜನಾಂಗ ಬಂದು ಬೀಡುಬಿಟ್ಟಿತ್ತು. ಅವರು ಸಣ್ಣಪುಟ್ಟ ಚೌರಿ ಈ ತರದ್ದನ್ನ ಮಾರ್ತಾ ಹೋಗ್ತಾರೆ. ಜರ್ಡಿ ಮಾರುವಂತ ಜನಾಂಗ. ಮಂಡ್ಯದ ಹತ್ತಿರ ಶುಗರ ಫ್ಯಾಕ್ಟರಿ ಹತ್ತಿರ ಸುಮಾರು ೮೦ ಮನೆಗಳ ಒಂದು ಹಳ್ಳಿ ಇದೆ. ಅವರು ಅಲೆಮಾರಿಗಳಾಗಿ ರಾಮನಗರಕ್ಕೆ ಬಂದು ಇದ್ರೂ ಸಹ ಅವರ ಮಕ್ಕಳು ಮರಿಗಳು ಈ ರಜ ಅನ್ನೊ ಕಾರಣಕ್ಕೆ ಬಂದಿದ್ರು. ಈ ಅಲೆಮಾರಿಗಳ ಕಾವ್ಯ, ಕರಕುಶಲ ಕೌಶಲ್ಯಗಳ ಮೇಲೆ ಈಗಾಗಲೇ ಕೇಳಿದ್ದೀವಿ. ಹಾಗೆಯೇ ಸೃಷ್ಟಿ ಕುರಿತ ಕಾವ್ಯಗಳು, ಆ ಜನಾಂಗದ ಹುಟ್ಟಿನ ಮೇಲೆ ಇರುವ Myth ಪುರಾಣಗಳು ನಮಗೆ ಅತ್ಯಮೂಲ್ಯವಾದ ಸಾಮಗ್ರಿಯನ್ನು ಒದಗಿಸಿಕೊಡುತ್ತವೆ. ಯಾಕೆಂದರೆ ಇತಿಹಾಸ ಪ್ರಜ್ಞೆ ನಮ್ಮಲ್ಲಿ ಬಹಳ ಕಡಿಮೆ ಇರುವುದರಿಂದ ಇರುವ ಕೊಂಚ ಮಾರ್ಗವಾದರು, ದಾರಿಯಾದರೂ, ಸೌಲಭ್ಯವಾದರೂ ಅನುಕೂಲತೆ ದೊರೆಯುವುದು ಇಂತಹವುಗಳ ಮೂಲದಿಂದ. ಹಾಗಾಗಿ ಇವುಗಳು ನಮಗೆ ಆ ಜನಾಂಗದ ಅಭ್ಯಾಸ ಮಾಡಲು ಪೂರಕ ಸಾಮಗ್ರಿ ಆಗ್ತಾವೆ ಅನ್ನೋದನ್ನು ಗಮನಿಸಬೇಕು. ಹಕ್ಕಿಪಿಕ್ಕಿಗಳ ಸೃಷ್ಟಿ ಕಾವ್ಯ ಹೀಗಿದೆ. ಸ್ಥೂಲವಾಗಿ ನೋಡೋದಾದರೆ ದೇವರು ಆಕಾಶದಲ್ಲಿ ಒಂದು ಬೀಜ ಬಿತ್ತಿದನಂತೆ. ಆ ಬೀಜ ಬಿತ್ತಿದ್ದರಿಂದ ಒಂದು ಕನ್ಯೆ ಹುಟ್ಟಿದಳಂತೆ. ಆ ಕನ್ಯೆಯ ಬೆವರಿನಿಂದ ಈ ಜಗತ್ತು ಬೆಳೆಯಿತಂತೆ. ಬಹಳ ವಿಶೇಷವಾಗಿ ಗಮನಿಸಬೇಕು. ಬಹುತೇಕ ಕಡೆ ಈ ಬೆವರಿನಿಂದ ಹುಟ್ಟೋ ಕ್ರಿಯೆ ಗಮನಿಸಬಹುದು. ಸುಡುಗಾಡು ಸಿದ್ಧರು ಕೂಡ ಬೆವರಿನಿಂದ ಹುಟ್ಟುವಂತ ರೂಪವನ್ನು ಗಮನಿಸುತ್ತೇವೆ. ಹಾಗೆ ಶಿವ ಸುತ್ತಿನ ಕಥೆಗಳಲ್ಲಿ ಹೆಚ್ಚು ಕಾಣಬರುತ್ತೆ. ಗಣೇಶ ಕೂಡ ಬೆವರಿನ ರೂಪ ಹಾಗಿರುವುದು ಗಮನಿಸಬಹುದು. ಹಾಗೆ ಕನ್ಯೆಯ ಬೆವರಿಂದ ಒಬ್ಬ ಹುಟ್ಟುತ್ತಾನೆ. ಆತನನ್ನು ಕೂಡಬೇಕು ಎಂದು ಈ ಕನ್ಯೆ ಬಯಸಿದಾಗ ಆತ ಒಪ್ಪಿಕೊಳ್ಳಲ್ಲ, ಆಗ ಮತ್ತೊಬ್ಬ ಹುಟ್ಟುತ್ತಾನೆ. ಮತ್ತೊಬ್ಬನೂ ಕೂಡ ಒಪ್ಪಿಕೊಳ್ಳಲ್ಲ, ಮೂರನೆ ಮಗ ಹುಟ್ಟುತ್ತಾನೆ. ಅವನಿಂದ ಮತ್ತೆ ಸಂತತಿ ಬೆಳೆಯುತ್ತದೆ. ಈ ತರದ ಸೃಷ್ಟಿ ಕುರಿತ ಕಾವ್ಯಗಳು ಅಥವಾ ಜನಾಂಗ, ಜಾತಿ ಅಥವಾ ಆ ಪಂಗಡಗಳ ಮೂಲ ಕುರಿತು ಕಾವ್ಯಗಳು, ಪುರಾಣಗಳು ನಮಗೆ ಸಿಗುತ್ತವೆ. ಇವು ಆ ಜನಾಂಗ ಹೇಗೆ ತಮ್ಮ ಮೂಲ ಹುಟ್ಟದೋದನ್ನ ಅಂತಾ ಭಾವಿಸುತ್ತೇವೆ ಸಿಗುತ್ತೆ ಮತ್ತು ಪರಂಪರೆಯಿಂದ ಸಾಗಿ ಬಂದ ರೂಪವಾಗಿ ಕಾಣಬರಲು ಸಾಧ್ಯವಿದೆ ಅಂತಾನೂ ಕಾಣಿಸುತ್ತದೆ. ಇಂಥವು ಇಂತೆಲ್ಲದಕ್ಕೆ ಆಕರವಾಗ್ತವೆ ಅಂತ ನಾವಿಲ್ಲಿ ಗಮನಿಸಬಹುದಾಗಿದೆ. ಅಲೆಮಾರಿಗಳು ಹೀಗೆ ದೂರದೂರಿಗೆ, ಪ್ರದೇಶಗಳಿಗೆ ಸರಕು, ಸರಂಜಾಮುಗಳನ್ನು ಸಾಗಿಸುವುದು, ವೈದ್ಯ ಜ್ಞಾನ ಈತರದ ಮಾಹಿತಿಗಳ ಮೂಲಕ ನಮ್ಮಲ್ಲಿ ತಮ್ಮದೇ ಆದ ಪರಂಪರೆಯನ್ನು ಸಾಗಿಸಿ ಬಹುತೇಕ ಜನವರ್ಗಕ್ಕೂ ತಮ್ಮದೇ ಆದ ಅಂಶಗಳನ್ನು ಆಸ್ವಾದಿಸಲು ಅನುಕೂಲ ಆಗುವ ಹಾಗೆ ಉಂಟುಮಾಡಿ ಸಾಗ್ತಾ ಇರೋದು ನಮ್ಮ ಮುಂದಿನ ವಿಶೇಷ. ಅವುಗಳನ್ನು ಮತ್ತಷ್ಟು ಅಭ್ಯಾಸದತ್ತ ತಿರುಗಿಸೋಣ ಅಂತ ಭಾವಿಸುತ್ತಾ ನನ್ನ ಮಾತು ಮುಗಿಸುತ್ತೇನೆ.

ಲಿಪ್ಯಂತರ : ಸುನಂದ ಮೂಲಿಮನಿ

* * *