ಮನುಷ್ಯನ ಚರಿತ್ರೆಗೆ ಚಲನೆ ಉಂಟಾದುದೇ ವಲಸೆಯಿಂದ. ತನ್ನ ಮತ್ತು ತಾನು ಸಾಕಿದ ಪ್ರಾಣಿಗಳ ಆಹಾರ ಪ್ರಾಪ್ತಿಗಾಗಿ ವಲಸೆ ಆರಂಭಗೊಂಡಿತು. ಒಂದು ಹಂತದಲ್ಲಿ ಇಡೀ ಮಾನವ ಕುಲವೇ ವಲಸೆಯ ಚಟುವಟಿಕೆಯಲ್ಲಿ ನಿರತವಾಗಿತ್ತು. ಆಹಾರದ ನಿಶ್ಚಿತ ಮತ್ತು ಸಮೃದ್ಧ ಕೇಂದ್ರಗಳು ಗುರುತಿಸಲ್ಪಟ್ಟ ಮೇಲೆ ಮಾನವ ತನ್ನ ಅಲೆದಾಟವನ್ನು ಸ್ಥಗಿತಗೊಳಿಸತೊಡಗಿದ. ಅಲ್ಲಲ್ಲಿ ನೆಲೆ-ನಿಂತು ಹಟ್ಟಿ, ಹಳ್ಳಿ, ಊರುಗಳನ್ನು ನಿರ್ಮಿಸಿಕೊಂಡನು. ಬಹುಸಂಖ್ಯಾತ ಮಾನವ ಸಮುದಾಯ ಹೀಗೆ ಒಂದೆಡೆ ನೆಲೆನಿಂತರೂ ಒಂದಿಷ್ಟು ಗುಂಪುಗಳು ಇಂದಿನವರೆಗೂ ತಮ್ಮ ಅಲೆಮಾರಿತನವನ್ನು ಉಳಿಸಿಕೊಂಡು ಬಂದವು. ಇದಕ್ಕೆ ಅತಂತ್ರ ಬದುಕು ಮತ್ತು ಜೀವನೋಪಾಯಕ್ಕಾಗಿ ಕೈಕೊಂಡ ವೃತ್ತಿಗಳೇ ಕಾರಣ. ನಿಲ್ಲಲು ನೆಲೆಯಿಲ್ಲದೆ ತಿರುಗಾಡುತ್ತ ಬಂದ ಹಕ್ಕಿಪಿಕ್ಕಿ, ರಾಜಗೊಂಡ, ಕೊರಮ ಸಮುದಾಯಗಳು ಒಂದು ಗುಂಪಿಗೆ ಸೇರುತ್ತಿದ್ದರೆ ತಮ್ಮ ವೃತ್ತಿಯ ನಿರ್ವಹಣೆಗಾಗಿ ಅಲೆದಾಟದಲ್ಲಿ ತೊಡಗಿಕೊಂಡ ಕಿಳ್ಳೆಕ್ಯಾತರು, ಹಗಲುವೇಷದವರು, ದುಗರ ಮುರಗಿ, ಕೊರಮರು, ಕಿನ್ನರಿ ಜೋಗಿಗಳು ಇನ್ನೊಂದು ಗುಂಪಿನಲ್ಲಿ ಸೇರುತ್ತಾರೆ. ಮೂಲತಃ ಅಲೆಮಾರಿಗಳಾಗಿದ್ದ ಇವರನ್ನು ಇಂದು ಅಲೆಮಾರಿಗಳೆಂದು ಗುರುತಿಸಲಿಕ್ಕಾಗದು. ಬದಲಗಿರುವ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಂದರ್ಭದಲ್ಲಿ ಅಲೆಮಾರಿಗಳ ವೃತ್ತಿಗಳು ಪಲ್ಲಟಗೊಂಡಿವೆ. ಅವರ ಜೀವನಶೈಲಿ ಭಿನ್ನವಾಗಿದೆ. ಹೀಗಾಗಿ ಇಂದು ಅವರಿಗೆ ಅಲೆಮಾರಿತನ ಅತ್ಯವಶ್ಯಕವೆನಿಸಿಲ್ಲ. ಇಷ್ಟಿದ್ದರೂ ಅವರು ತಲೆತಲಾಂತರದಿಂದ ರೂಢಿಸಿಕೊಂಡು ಬಂದಿರುವ ಕಲೆಗಳು ಅಬಾಧಿತವಾಗಿವೆ. ಇಂದಿಗೂ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿವೆ. ಕರ್ನಾಟಕದಲ್ಲಿರುವ ಅಂಥ ಕೆಲವು ಅಲೆಮಾರಿಗಳ ಕಲೆಗಳನ್ನು ಪರಿಚಯಿಸುವುದು ಪ್ರಸ್ತುತ ಲೇಖನದ ಉದ್ದೇಶವಾಗಿದೆ.

ಲಂಬಾಣಿಗರು ನಮ್ಮಲ್ಲಿರುವ ಹಿರಿಯ ಅಲೆಮಾರಿಗರು. ರಾಜಸ್ಥಾನ ಮೂಲದ ಇವರು ಮಧ್ಯಯುಗದಲ್ಲಿ ಕರ್ನಾಟಕಕ್ಕೆ ಬಂದವರು. ಸೈನಿಕ ವೃತ್ತಿಯಲ್ಲಿದ್ದವರು ಒಂದು ಹಂತದಲ್ಲಿ ಅತಂತ್ರರಾಗಿ ಜೀವನ ನಿರ್ವಣೆಗಾಗಿ ಅಲೆಮಾರಿಗಳಾದರು. ನಿಧಾನವಾಗಿ ಅಲ್ಲಲ್ಲಿ ನೆಲೆಗೊಂಡರು. ಲಂಬಾಣಿಗರ ನೆಲೆಗಳಿಗೆ ತಾಂಡಾ ಎಂದು ಹೆಸರು. ಊರುಗಳಿಗೆ ಸಮೀಪದಲ್ಲಿ ಸ್ಥಾಪಿತಗೊಂಡಿರುವ ತಾಂಡಾಗಳು ಸಂಪೂರ್ಣ ಲಂಬಾಣಿ ವಸತಿಗಳಗಿವೆ. ದಿನನಿತ್ಯದ ಬದುಕಿನ ವ್ಯವಹಾರಕ್ಕಾಗಿ ಊರವರೊಂದಿಗೆ ಸಂಪರ್ಕ-ಸಂಬಂದ-ಕೊಡುಕೊಳಿಕೆಗಳು ಸಮೃದ್ಧವಾಗಿದ್ದರೂ ಲಂಬಾಣಿಗರು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವರ ಭಾಷೆ ಹಾಡು ಕುಣಿತಗಳು ಸ್ಥಳೀಯ ಸಾಂಸ್ಕೃತಿಕ ಪರಿಸರಕ್ಕೆ ಹೊರತಾದಂಥವು. ಲಂಬಾಣಿ ಹೆಣ್ಣುಮಕ್ಕಳ ಕುಣಿತ ಅದ್ಭುತವಾದುದು. ಹದಿನೈದು ಇಪ್ಪತ್ತು ಜನರು ವೃತ್ತಾಕಾರದಲ್ಲಿ ಕುಣಿಯುತ್ತಾರೆ. ಅವರ ಬಣ್ಣದ ಅಲಂಕೃತ ವೇಷ, ಭಾಗವೆನಿಸುವ ಬೆಳ್ಳಿಯ ಆಭರಣಗಳು, ಸಮೃದ್ಧದಂತದ ಬಳೆಗಳು, ಕುಣಿತಕ್ಕೆ ಆಕರ್ಷಣೆಯನ್ನು ನೀಡುತ್ತವೆ. ಹಾಡುತ್ತ ಕುನಿಯುವ ಹೆಣ್ಣು ಮಕ್ಕಳ ಸರಳ ರಚನೆಗಳು ಕುಣಿತದ ಆಕಾರ ರೂಪಿಸುತ್ತವೆ. ಕುಣಿತದಲ್ಲಿ ರಭಸವಿರುವುದಿಲ್ಲ – ಪ್ರಸನ್ನತಿ ಮುಗ್ಧತೆಗಳಿರುತ್ತವೆ. ಬಾಗಿ ಬಳುಕಿ, ಹಿಂದೆ ಮುಂದೆ ಸರಿದು, ಪರಸ್ಪರ ಕೈ ಕೈ ಜೋಡಿಸಿ, ಕುಣಿಯುವರು. ನಾಲ್ಕಾರು ವಿಧದ ಚಲನೆಗಳು ಕುಣಿತದ ಪ್ರಕಾರಗಳೆನಿಸುತ್ತವೆ. ಕುಣಿತಕ್ಕೆ ಹಿನ್ನೆಲೆಯಾಗಿ ನಗಾರಿ, ತಮ್ಮಟೆ ಬಾರಿಸಲಾಗುತ್ತದೆ. ಲಂಬಾಣಿಗರ ಬಿಡಿ ಹಾಡುಗಳು ಭಾವಪೂರ್ಣವಾಗಿರುತ್ತವೆ. ಗಂಗಾಳ ಇವರ ಇನ್ನೊಂದು ಖಾಸಾವಾದ್ಯ. ಇತ್ತೀಚೆಗೆ ಸ್ಥಳೀಯರ ಪ್ರೇರಣೆ -ಪ್ರಭಾವಗಳಿಂದ ನಾಟಕ ಬಯಲಾಟ ರೂಪಿಸಿಕೊಂಡು ಪ್ರದರ್ಶಿಸುತ್ತಿದ್ದಾರೆ.

ರಾಜಸ್ಥಾನದಿಂದ ಬಂದಿರುವ ಹಕ್ಕಿಪಿಕ್ಕಿ ಜನಾಂಗವನ್ನು ಹರಿಣಶಿಕಾರಿಗಳೆಂದೂ ಕರೆಯಲಾಗುತ್ತದೆ. ಬೇಟೆಯೇ ಇವರ ಪ್ರಮುಖ ವೃತ್ತಿ. ಬೇಟೆಯಾಡುತ್ತ ಸಂಚರಿಸುತ್ತ ೨೦೦ ವರ್ಷಗಳ ಹಿಂದೆ ಕರ್ನಾಟಕ್ಕೆ ಬಂದವರಿವರು. ಬೇಟೆ ಮತ್ತು ಬೇಟೆಯ ಉತ್ಪನ್ನಗಳಾದ ವಿಶಿಷ್ಟ ಕಾಡು ಪ್ರಾಣಿಗಳ ಚರ್ಮ, ಕೊಂಬು, ಕೊಬ್ಬು ಮುಂತಾದವುಗಳನ್ನು ಮಾರಾಟ ಮಾಡುತ್ತ ಉಪಜೀವನ ಸಾಗಿಸುತ್ತಿದ್ದ ಹಕ್ಕಿಪಿಕ್ಕಿಗಳಿಗೆ ಒಂದು ಹಂತದಲ್ಲಿ ಅತಂತ್ರ ಸ್ಥಿತಿ ಎದುರಾಯಿತು. ಬೇಟೆಯೊಂದಿಗೆ ಕಳ್ಳತನವನ್ನು ಆರಂಭಿಸಿದರು. ಶಿಷ್ಟ ನಾಗರಿಕ ಸಮಾಜದಲ್ಲಿ ಒಂದು ಅಪರಾಧವೆಂದು ಪರಿಗಣಿಸಲ್ಪಡುವ ಕಳತನವು ಹಕ್ಕಿಪಿಕ್ಕಿಗಳಿಗೆ ಒಂದು ವೃತ್ತಿ ಧರ್ಮವೆನಿಸಿತು. ಇವರು ತಮ್ಮ ಸಂತೋಷಕ್ಕಾಗಿ ಹಾಡು ಕುಣಿತಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಬೇರೆ ಬೇರೆ ಸಂದರ್ಭಕ್ಕೆ ತಕ್ಕ ಹಾಡುಗಳನ್ನು ಹೆಂಗಸರು ಹಾಡುವರು. ಈ ಹಾಡುಗಳಲ್ಲಿ ದಂಡಿನ ದುರಗಮ್ಮನ ಹಾಡು ಹೆಚ್ಚು ಜನಪ್ರಿಯವಾದುದು. ಅಲೆಮಾರಿ ಜನಾಂಗವೊಂದು ಸ್ಥಳೀಯ ಸಂಸ್ಕೃತಿ – ಆಚರಣೆಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಪ್ರಯತ್ನವನ್ನು ಇಲ್ಲಿ ಕಾಣಬಹುದಾಗಿದೆ. ಇವರ ಮುಖ್ಯ ಕಲೆ ಕುಣಿತ. ಸ್ತ್ರೀ ಪುರುಷರು ಗುಂಪುಗೂಡಿ ಕುಣಿಯುವರು. ಕುಣಿತದಲ್ಲಿ ವೈವಿಧ್ಯತೆ ಕಡಿಮೆ. ಆಡಂಬರ ರಹಿತ ಸರಳ ಕುಣಿತವಿದು. ತಪ್ಪಡಿ ತಾಳಗಳು ಕುಣಿತದ ಹಿಮ್ಮೇಳ ವಾದ್ಯಗಳು. ಗಂಡಸರಷ್ಟೇ ಕುಣಿಯುವ ಹೆಜ್ಜೆ ಕುಣಿತ ಆಕರ್ಷಕವಾಗಿರುತ್ತದೆ. ಹೆಜೆಗಳ ಲೆಕ್ಕಾಚಾರದ ಮೇಲೆ ಸಾಗುವ ಈ ಕಲಾಪ್ರಕಾರವನ್ನು ಹಕ್ಕಿಪಿಕ್ಕಿಯರು ಮೈಗೂಡಿಸಿಕೊಂಡಿದ್ದಾರೆ. ಇವರ ಈ ಹೆಜ್ಜೆ ಕುಣಿತ ಎಷ್ಟು ಸುಂದರವಾಗಿರುತ್ತದೆಯೆಂದರೆ ಈ ಮೇಳಗಳನ್ನು ಪರ ಊರಿನವರು ಆಮಂತ್ರಿಸುತ್ತಾರೆ. ಹಕ್ಕಿಪಿಕ್ಕಿ ಹೆಣ್ಣು ಮಕ್ಕಳ ವೃತ್ತಿಗಳೆಂದರೆ ಹಚ್ಚೆ ಹಾಕುವುದು ಮತ್ತು ಕಸೂತಿ ಹಾಕುವುದು. ಹಚ್ಚೆಯ ವೈವಿಧ್ಯತೆ ಗಮನಾರ್ಹವಾದುದು. ಕಸೂತಿಯಲ್ಲಿ ಹಲವಾರು ಜನಪದ ಚಿತ್ರಗಳನ್ನು, ಸಂಕೇತಗಳನ್ನು, ಪಕ್ಷಿಗಳನ್ನು ಹಾಕುತ್ತಾರೆ.

ಕರ್ನಾಟಕದ ಬೀದರ ಹರಿಹರ ಮುಂತಾದೆಡೆಯಲ್ಲಿ ಈಗ ನೆಲೆಗೊಂಡಿರುವ ರಾಜಗೊಂಡರು ಮೂಲತಃ ಅಲೆಮಾರಿಗಳು. ಗಿಡಮೂಲಿಕೆ ಶಾಸ್ತ್ರದಲ್ಲಿ ಇವರು ಪರಿಣಿತರು. ಕಾಡು ಬೆಟ್ಟಗಳಲ್ಲಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಸಂಸ್ಕರಿಸಿ ಔಷಧ ತಯಾರಿಸಿ ಊರೂರು ಅಲೆದಾಡುತ್ತ ಔಷಧಿ ನೀಡುವ ಆಯುರ್ವೇದಿಗಳಿವರು. ಹಳ್ಳಿಗರ ಜಡ್ಡು ರೋಗಗಳನ್ನು ಸುಲಭ-ಅಪಾಯ ರಹಿತ ರೀತಿಯಲ್ಲಿ ಗುಣಪಡಿಸುವ ಈ ಜನಾಂಗ ತನ್ನದೇ ಆದ ಕಲಾ ಪರಂಪರೆ ಹೊಂದಿದೆ. ಇವರ ಪ್ರಿಯವಾದ ಕೆಯೆಂದರೆ ಕುಣಿತ. ‘ಕುಣಿತವ ತಮಗೆ ದೇವರು ನೀಡಿದ ವರ’ ಎಂಬುದು ಅವರ ನಂಬಿಕೆ. ಗಂಡು ಹೆಣ್ಣು ಭೇದವಿಲ್ಲದೆ ಗುಂಪುಗೂಡಿ ಕುಣಿಯುವರು. ಮಧ್ಯದಲ್ಲಿ ವಾದ್ಯಮೇಳದವರಿರುತ್ತಾರೆ. ಕುಣಿಯುವವರು ವೃತ್ತಾಕಾರದಲ್ಲಿ ಕುಣಿಯುತ್ತ ಚಲಿಸುವವರು. ಅತ್ಯಂತ ಸರಳವಾಗಿರುವ ಕುಣಿತದಲ್ಲಿ ರಭಸ ಆಡಂಬರವಿರುವುದಿಲ್ಲ. ಹೆಜ್ಜೆಗಳ ಚಲನೆ ಮತ್ತು ಬಾಗು ಬಳಕುಗಳು ಇವರ ಕುಣಿತದ ಜೀವಾಳ. ಕುಣಿಯುವ ಹೆಣ್ಣು ಮಕ್ಕಳು ಹದಿನಾರು ಮೊಳದ ಸೀರೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉಟ್ಟುಕೊಂಡಿರುತ್ತಾರೆ. ತಾಳ, ಡೋಲು, ದಮ್ಮಡಿ ಇವು ಹಿಮ್ಮೇಳದ ವಾದ್ಯಗಳು. ಕುಣಿತದ ಬಗೆಗೆ ಇವರಿಗಿರುವ ಉತ್ಸಾಹ ಹೇಳತೀರದು. ವಯಸ್ಸಾದ ಮುದುಕರೊ ಕುಣಿತದ ಮೇಳದಲ್ಲಿ ಸೇರಿಕೊಂಡು ಉಮೇದಿಯಿಂದ ಕುಣಿಯುವರು.

ಜನಪದ ಮನರಂಜಕರಾದ ಸುಡಗಾಡಸಿದ್ಧರು ಆಂಧ್ರ ಮೂಲದವರೆಂದು ತಿಳಿಯಲಾಗಿದೆ. ಭಿಕ್ಷಾಟನೆ ಮಾಡುತ್ತ ಊರೂರು ಅಲೆದಾಡುವ ಸುಡುಗಾಡುಸಿದ್ಧರು ವಿಶಿಷ್ಟ ಆಚರಣೆಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ಇವರಿಗೆ ಅಷ್ಟಿಷ್ಟು ಆಯುರ್ವೇದವೂ ಗೊತ್ತು. ಜಾದೂ ಇವರ ಮುಖ್ಯ ಕಲೆ ಮತ್ತು ವೃತ್ತಿ. ಬಣ್ಣ ಬಣ್ಣದ ಆಕರ್ಷಕ ವೇಷಭೂಷಣದೊಂದಿಗೆ ಸುಡುಗಾಡುಸಿದ್ಧ ಊರಲ್ಲಿ ಕಾಣಿಸಿಕೊಂಡನೆಂದರೆ ಮಕ್ಕಳು ಅವನನ್ನು ಹಿಂಬಾಲಿಸುತ್ತವೆ. ಅವನು ಮನೆ ಮನೆಗಳ ಮುಂದೆ ತನ್ನ ಜಾದೂ ತೋರಿಸುತ್ತ ಮುಂದೆ ಸಾಗುವನು. ಊರಿನ ಪ್ರಮುಖರ ಮನೆಯ ಮುಂದೆ ಹೆಚ್ಚಿನ ಅವಧಿಯ ಜಾದೂ ಪ್ರದರ್ಶನ ನಡೆಯುತ್ತದೆ. ಜಾದೂ ಮಾಡುವ ಸುಡುಗಾಡುಸಿದ್ಧನ ಜೋಳಿಗೆಯಲ್ಲಿ ಬ್ರಹ್ಮಾಂಡವೇ ಇರುತ್ತದೆ. ಆ ಜೋಳಿಗೆಯಲ್ಲಿ ಹಲವು ಉಪ ವಿಭಾಗಗಳಿದ್ದು ಏನೆಲ್ಲ ಸಾಮಗ್ರಿಯನ್ನು ಒಳಗೊಂಡಿರುತ್ತವೆ. ಜೋಳಿಗೆ ಸುಡುಗಾಡ ಸಿದ್ಧನ ಕೈಚಳಕದ ವೇದಿಕೆಯೂ ಹೌದು. ಲಿಂಬೆಹಣ್ಣು, ವಿಭೂತಿ, ಕುಂಕುಮ, ಗುಂಡು, ಗಜಗ, ನಾಣ್ಯ, ಅಡಿಕೆ ಮುಂತಾದ ಜಾದೂ ಮಾಡಲು ಬೇಕಾದ ವಸ್ತುಗಳೆಲ್ಲ ಜೋಳಿಗೆಯಲ್ಲಿ ಆಶ್ರಯ ಪಡೆದುಕೊಂಡಿರುತ್ತವೆ. ಈ ವಸ್ತುಗಳನ್ನು ಸ್ಥಳಾಂತರಿಸುವ, ರೂಪಾಂತರಿಸುವ ಸುಡಗಾಡಸಿದ್ಧನ ಕೈಚಳಕ ಕಲೆ ಅದ್ಭುತವಾದುದು. ಅವನ ಜಾದೂ ಒಂದು ಪ್ರದರ್ಶನ ಕಲೆ. ನಾಟಕೀಯವೆನಿಸುವ ಮಾತುಗಾರಿಕೆಯಿಂದ, ನಡು ನಡುವೆ ಹಾರಿಸುವ ಹಾಸ್ಯ ಚಟಾಕಿಗಳಿಂದ, ಜಾದೂ ಪ್ರದರ್ಶನವೂ ಮನಾಕರ್ಷಕವೂ ಉತ್ಸಾಹ ಭರಿತವೂ ಆಗಿರುತ್ತದೆ.

ಗೊಂದಲಿಗರ ಉಪ ಪಂಗಡವಾದ ಬುಡಬುಡಕಿಯವರು ಮಹಾರಾಷ್ಟ್ರದಿಂದ ಬಂದವರು. ಭವಿಷ್ಯ ಹೇಳುವುದು ಇವರ ವೃತ್ತಿ ಮತ್ತು ಕಲೆ. ಇವರ ಕೈಯಲ್ಲಿರುವ ವಾದ್ಯಕ್ಕೆ ಬುಡಬುಡಿಕೆ ಎಂದು ಹೆಸರು. ಅದರಿಂದಾಗಿಯೇ ಇವರು ಬುಡಬುಡಕಿಯವರೆನಿಸಿದ್ದಾರೆ. ಬುಡಬುಡಕಿ ಡಮರಿನ ಆಕಾರ ತಂತ್ರಗಳನ್ನೊಳಗೊಂಡ ಒಂದು ಚಿಕ್ಕ ವಾದ್ಯ. ಡಮರಿನ ಹೊರಮೈ ವ್ಯಾಸ ಸು. ಆರು ಇಂಚು ಇದ್ದರೆ ಬುಡಬುಡಿಕೆಯದು ಎರಡು, ಎರಡೂವರೆ ಇಂಚು ಇರುತ್ತದೆ. ತಾರಸ್ವರದಲ್ಲಿ ಬುಡ್ ಬುಡ್ ಬುಡ್ ಎಂದು ನಾದ ಮಾಡುವ ಈ ವಾದ್ಯವನ್ನು ಅತ್ಯಂತ ಜಾಣ್ಮೆಯಿಂದ ನುಡಿಸುವರು. ಭಿಕ್ಷಾಟನೆ ಮತ್ತು ಸಕುನ ಹೇಳುವುದು ಎರಡೂ ಏಕಕಾಲಕ್ಕೆ ನಡೆಯುತ್ತವೆ. ಕಲಾವಿದನಿಗೆ ಅನೇಕ ಬಿಡಿ ಹಾಡುಗಳು ಬರುತ್ತವೆ. ಇವು ಗೊಂದಲಿಗರ ಪದಗಳಾಗಿರುವುದುಂಟು. ಬುಡುಬುಡಕಿಯ ಲಯಕ್ಕೆ ತಕ್ಕಂತೆ ಹಾಡು ಹೇಳಿ ಕೊನೆಯಲ್ಲಿ ಶಕುನಕ್ಕೆ ಪೀಠಿಕೆ ಹಾಕುವನು. ಮನೆಯವರು ಆಸಕ್ತಿ ತೋರಿಸಿದರೆ ಶಕುನ ಹೇಳಲು ಪ್ರಾರಂಭಿಸುವನು. ಎತ್ತರದ ಸ್ವರದಲ್ಲಿ, ಸಾಂದರ್ಭಿಕ ಏರು ಇವುಗಳೊಂದಿಗೆ, ಶಕುನ ಹೇಳುತ್ತ ನಡು ನಡುವೆ ಬುಡಕಿ ಬಾರಿಸವನು. ಬುಡಬುಡಿಕೆಯ ನಾದ ಶಕುನದ ನಿರೂಪಣೆಗೆ ಪೋಷಣೆ ಉತ್ಸಾಹ ನೀಡುತ್ತದೆ. ಭವಿಷ್ಯಶಾಸ್ತ್ರ ನೀರಸವಾದುದು. ಶಿಷ್ಟ ಜ್ಯೋತಿಷಿಗಳು ಅತ್ಯಂತ ನೀರಸವಾಗಿ ಹೇಳುವ ಜ್ಯೋತಿಷ್ಯವನ್ನು ಬುಡಬುಡಕಿಯವನು ಪ್ರದರ್ಶನ ಕಲೆಯನ್ನಾಗಿಸಿದ್ದಾನೆ. ಅವನ ಪ್ರತಿಭೆ ಅಗಾಧವಾದುದು. ಪಣಕಟ್ಟಿ ಶಕುನ ಹೇಳುವುದು ಇಡೀ ಊರಿಗಾಗಿ. ರಾತ್ರಿ ವಿಶಿಷ್ಟ ಆಚರಣೆಯ ಮೂಲಕ ಹಾಲಕ್ಕಿಯ ಉಲಿಯನ್ನು ಕೇಳಿ ಅದರ ವೈವಿಧ್ಯತೆಯನ್ನಾಧರಿಸಿ ಶಕುನ ಹೇಳಲಾಗುವುದು.

ಕೋರಮ / ಕೊರಚ ಅಲೆಮಾರಿ ಜನಾಂಗದವರು ಅಲ್ಲಲ್ಲಿ ನೆಲೆಗೊಂಡಿದ್ದಾರೆ. ಆಂಧ್ರದಿಂದ ಬಂದಿರುವ ಕೊರಮರ ಮನೆ ಮಾತು ತೆಲುಗು. ಕರ್ನಾಟಕದಲ್ಲಿ ಬಹಳ ದಿನಗಳಿಂದ ವಾಸವಾಗಿರುವುದರಿಂದಾಗಿ ಅವರು ಮಾತನಡುವ ತೆಲುಗು ಕನ್ನಡದ ಪ್ರಭಾವಕ್ಕೊಳಗಾಗಿದೆ. ಕಸಬರಿಗೆ,ಬುಟ್ಟಿ, ಚಾಪೆ ತಯಾರಿಸಿ ಮಾರಾಟ ಮಾಡುತ್ತ ಊರೂರುಅಲೆದಾಡುತ್ತಾರೆ. ಕೊರಮರ ಸ್ತ್ರೀಗೆ ಕೊರವಂಜಿ ಎಂದು ಹೆಸರು. ಕೊರವಂಜಿ ಭಿಕ್ಷೆಗಾಗಿ ಮನೆ ಮನೆಗೆ ಅಲೆದಾಡುವಳು. ಭಿಕ್ಷೆಯೊಂದಿಗೆ ಕಣಿ / ಶಕುನ ಹೇಳುವ ಕಲೆಯನ್ನು ಇವಳು ಕರಗತ ಮಾಡಿಕೊಂಡಿರುತ್ತಾಳೆ. ಇವಳು ಭಿಕ್ಷೆ ಕೇಳುವುದು ಹಾಡಿನಂತಹ ಸ್ವರ ವಿನ್ಯಾಸದಲ್ಲಿ ಕಣಿ ಹೇಳುವುದೂ ಅದೇ ಧಾಟಿಯಲ್ಲಿ. ಕಣಿ ಕೇಳುವವರು ಸಾಮಾನ್ಯವಾಗಿ ಹಳ್ಳಿಯ ಹೆಣ್ಣುಮಕ್ಕಳು. ಅವರ ಮನೋಗತವನ್ನು, ಚಿಂತೆ-ಆತಂಕಗಳನ್ನು ಅರ್ಥಮಾಡಿಕೊಂಡು ಅವರವರಿಗೆ ತೃಪ್ತಿಯಾಗುವಂತೆ ಕಣಿ ಹೇಳಿ ಸೈ ಅನ್ನಿಸಿಕೊಳ್ಳುವ ಕೊರವಂಜಿಯ ಜಾಣ್ಮೆ ಅಗಾಧವಾದುದು. ಇವಳು ಜನಪದ ಪ್ರಪಂಚದ ಮನೋವಿಜ್ಞಾನಿಯೇ ಸರಿ. ಕೊರವಂಜಿ ಎಂಥ ಪ್ರಭಾವಿ ಆಕರ್ಷಕ ವ್ಯಕ್ತಿಯೆಂದರೆ ಶಿಷ್ಟ ಪರಂಪರೆ ಕೂಡ ಇವಳನ್ನು ತನ್ನ ಪರಿಧಿಯಲ್ಲಿ ಸೆಳೆದುಕೊಂಡಿದೆ. ಅನೇಕ ಶಿಷ್ಟಕಾವ್ಯ-ಕತೆಗಳಲ್ಲಿ ಕೊರವಂಜಿ ಒಂದು ತಂತ್ರವಾಗಿ ರೂಪಿತನಾಗಿದ್ದಾಳೆ. ಕತೆಗೆ ಹೊಸ ತಿರುವು ನೀಡಲು, ಪಾತ್ರಗಳಲ್ಲಿ ಸಂಧಾನವೇರ್ಪಡಿಸಲು ಆತಂಕದಲ್ಲಿರುವ ಪಾತ್ರಕ್ಕೆ ಸಮಾಧಾನ ಹೇಳಿ ಭವಿಷ್ಯದ ಸೂಚನೆ ತಿಳಿಸಲು ಕೊರವಂಜಿ ಬಳಸಲ್ಪಟ್ಟಿದ್ದಾಳೆ. ದೇವತೆಗಳನ್ನು ಕೂಡ ಕೊರವಂಜಿಯ ರೂಪದಲ್ಲಿ ಚಿತ್ರಿಸಿ ಖುಷಿಪಡಲಾಗಿದೆ. ಬ್ರಹ್ಮ ಕೊರವಂಜಿ, ನಾರದಕೊರವಂಜಿ, ಕೃಷ್ಟಕೊರವಂಜಿ ಮುಂತಾದ ಹೆಸರಿನ ಕೃತಿಗಳು ಈ ಮಾತಿಗೆ ಉದಾಹರಣೆಯಾಗಿವೆ. ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ‘ಶ್ರೀ ಕೃಷ್ಣಪಾರಿಜಾತ’ ಎಂಬ ಜನಪದ ನಾಟಕದಲ್ಲಿ ಕೃಷ್ಣ ಕೊರವಂಜಿಯಾಗುವ ಸನ್ನಿವೇಶವಿದೆ. ಕೊರವಂಜಿಯ ದೃಶ್ಯ ಇಡೀ ಪ್ರದರ್ಶನದಲ್ಲಿ ಪ್ರಮುಖವಾದುದು. ಕೊರಮ ಕೊರವಂಜಿಯವರು ಕಣಿ ಹೇಳುವುದರೊಳಗೆ ಹಚ್ಚೆ ಚುಚ್ಚಿಸಿಕೊಳ್ಳುವವರಿಗೆ ನೋವಿನ ಅರಿವು ಬಾರದಂತೆ ಅತ್ಯಂತ ಜಾಣ್ಮೆಯಿಂದ ಹಚ್ಚೆ ಚುಚ್ಚಿವರು ಇವರು ಹಚ್ಚೆಯಲ್ಲಿ ಅನೇಕ ತರದ ಹೂವು ಬಳ್ಳಿ, ಪ್ರಾಣಿ, ಪಕ್ಷಿ ಸಂಕೇತಗಳನ್ನು ಚುಚ್ಚುತ್ತಾರೆ. ಇಂಥ ಸುಮಾರು ನಲವತ್ತು ವಸ್ತುಗಳನ್ನು ಇವರು ಹಚ್ಚಿಯಲ್ಲಿ ನಿರ್ಮಿಸಬಲ್ಲವರಾಗಿದ್ದಾರೆ. ಚಿತ್ರಕಲೆಯ ಹಿನ್ನೆಲೆಯಲ್ಲಿ ಇವರ ಹಚ್ಚೆ ಚಿತ್ರಗಳನ್ನು ಅಧ್ಯಯನ ಮಾಡಬೇಕಾಗಿದೆ.

ಧಾರ್ಮಿಕ ಆಚರಣೆಯೊಂದನ್ನು ಕಲೆಯಾಗಿ ಪರಿವರ್ತಿಸಿಕೊಂಡಿರುವ ದುರಗಮುರಗಿ ಯವರು ಕರ್ನಾಟಕಕ್ಕೆ ಆಂಧ್ರದಿಂದ ಬಂದವರು. ದುರಗಮ್ಮನನ್ನು ಆರಾಧಿಸುವವರು ಗುಡಿಗಳಲ್ಲಿ ಆರಾಧಿಸುವುದು ಸಹಜ. ಆದರೆ ದುರಗಮುರಗಿಯವರು ದುರಗಮ್ಮನನ್ನು ಪೆಟ್ಟಿಗೆ ಬುಟ್ಟಿಗಳಲ್ಲಿಟ್ಟುಕೊಂಡು ಓಣಿ ಓಣಿ ತಿರುಗಾಡುತ್ತ ಭಕ್ತರಿಗೆ ದರ್ಶನ ಭಾಗ್ಯ ಒದಗಿಸಿದ್ದಾರೆ. ಶುಷ್ಕವಾಗಿ ನಡೆಯಬಹುದಾದ ಆಚರಣೆಯು ಇಲ್ಲಿ ಪ್ರದರ್ಶನ ಕಲೆಯಾಗಿದೆ. ದುರಗಮುರಗಿ ದಂಪತಿಗಳು ಬಟ್ಟೆ / ಪೆಟ್ಟಿಗೆಯಲ್ಲಿರುವ ದೇವಿಯನ್ನು ಹೊತ್ತು ಕೊಂಡು ಬಂದು ಓಣಿಯ ಪ್ರಮುಖ ಸ್ಥಳದಲ್ಲಿಡುವರು. ಹೆಂಡತಿ ಉರುಮೆ ವಾದ್ಯ ಬಾರಿಸುವಳು. ಗಂಡ ಸ್ವರಬದ್ಧವಾಗಿ ಕೂಗುತ್ತ ಜನರನ್ನು ಸೇರಿಸುವನು. ಬಣ್ಣಬಣ್ಣದ ಬಟ್ಟೆಗಳನ್ನು ಸೊಂಟಕ್ಕೆ ಸುತ್ತಿಕೊಂಡು ಆಕರ್ಷಕವಾಗಿ ಗಂಡನು ಉರುಮೆ ವಾದನದ ಗತ್ತಿಗೆ ತಕ್ಕಂತೆ ಕುಣಿಯುವನು. ನಡು ನಡುವೆ ದೊಡ್ಡ ಲಡ್ಡಿನಿಂದ ತನ್ನ ಬರಿ ಮೈಮೇಲೆ ಹೊಡೆತಗಳನ್ನು ಹಾಕಿಕೊಳ್ಳುವನು. ಹೊಡೆತದಿಂದುಂಟಾದ ಬಾಸುಂಡೆಗಳನ್ನು ಭಕ್ತ-ಪ್ರೇಕ್ಷಕರಿಗೆ ಹೆಮ್ಮೆಯಿಂದ ತೋರಿಸುವನು. ಆಗ ಆ ಪ್ರೇಕ್ಷಕರಲ್ಲಿ ಅವನ ಬಗ್ಗೆ ಅನುಕಂಪ ಭಕ್ತಿ ಗೌರವಗಳು ಉಂಟಾಗುತ್ತವೆ. ಕೆಲವು ಸಲ ಒಂದು ರಾಕ್ಷಸ ಮುಖವಾಡ ಹಾಕಿಕೊಂಡು ಗತ್ತಿಗೆ ತಕ್ಕಂತೆ ಲಘುವಾಗಿ ಕುಣಿಯವನು. ಇಷ್ಟೊತ್ತಿಗೆ ಪ್ರೇಕ್ಷಕರ ಸಂಖ್ಯೆ ಗರಿಷ್ಠ ಮಟ್ಟಕ್ಕೆ ಏರಿರುತ್ತದೆ. ಪೆಟ್ಟಿಗೆಯಲ್ಲಿ / ಬುಟ್ಟಿಯಲ್ಲಿ ಜೋಪಾನವಾಗಿಟ್ಟಿರುವ ಬೆಳ್ಳಿಯ ಆಭರಣಗಳನ್ನು ಒಂದೊಂದಾಗಿ ಹೊರ ತೆಗೆದು, ಅವನ್ನೆಲ್ಲ ಬೇರೆ ಬೇರೆ ಊರಿನ ಭಕ್ತರು ಕೊಟ್ಟಿರುವುದನ್ನು ಹಾಡಿನಲ್ಲಿ ಹೇಳುವನು. ಆ ಹಾಡಿಗೆ ಅವನ ಹೆಂಡತಿ ಸ್ವರ ಬದ್ಧವಾಗಿ ಹೂಂಗುಟ್ಟುತ್ತಿರುತ್ತಾರೆ. ಈ ಆಚರಣಾತ್ಮಕ ಪ್ರದರ್ಶನದಿಂದ ಉತ್ಸಾಹಿತರಾದ ಪ್ರೇಕ್ಷಕರು ತಮ್ಮ ಮನೆಗಳಿಂದ ಕಾಳು ಬೆಲ್ಲ ಹಣ ಇತ್ಯಾದಿ ಕಾಣಿಕೆಗಳನ್ನು ತಂದು ಅರ್ಪಿಸುವರು. ಹೀಗೆ ಒಂದು ಆಚರಣೆಯು ಪ್ರದರ್ಶನ ಕಲೆಯಾಗಿ ಕೊನೆಯಲ್ಲಿ ಭಿಕ್ಷೆಯಲ್ಲಿ ಪರ್ಯಾವಸಾನಗೊಳ್ಳುವುದು.

ಗೊಲ್ಲರ ಸಮುದಾಯಕ್ಕೆ ಸೇರಿದ ಕೋಲೆ ಬಸವನ ಆಟದವರು ಪ್ರದರ್ಶಿಸುವ ಆಟ ಗ್ರಾಮೀಣ ಪ್ರೇಕ್ಷಕರಿಗೆ ತುಂಬಾ ಇಷ್ಟವಾದುದು. ಒಂದು ಸದೃಢಕಾಯದ ಎತ್ತಿಗೆ ತರಬೇತಿ ನೀಡಿ ಪಳಗಿಸಿರುತ್ತಾರೆ. ಎಡಗಾಲು ಬಲಗಾಲು ಮೇಲೆತ್ತುವ, ಕೆಲವು ಅಂತರ ಶ್ರಮಿಸಿ ನಿಂತುಕೊಳ್ಳುವ, ಕರೆದಾಗ ಹಿಂತಿರುಗಿ ಬರುವ, ಗೋಣು ಅಲ್ಲಾಡಿಸಿ ಒಪ್ಪಿಗೆ ನಿರಾಕರಣೆ ಸೂಚಿಸುವ, ಎದೆ ತೊಡೆಗಳ ಮೇಲೆ ನಿಧಾನವಾಗಿ ಕಾಲಿಡುವ, ಪ್ರದಕ್ಷಿಣೆ ಹಾಕುವ ಕ್ರಿಯೆಗಳನ್ನು ಎತ್ತು ಪ್ರದರ್ಶಿಸುತ್ತದೆ. ಸಂದರ್ಭಕ್ಕೆ ತಕ್ಕಂತೆ ಈ ಕ್ರಿಯೆಗಳನ್ನು ಬಳಸಿಕೊಂಡು ವಿವಿಧ ಅರ್ಥಗಳನ್ನು ಹೊರಹೊಮ್ಮಿಸಲಾಗುವುದು. ಎತ್ತಿನೊಂದಿಗೆ ಒಂದು ಆಕಳು ಇರುತ್ತದೆ ಎತ್ತು ರಾಮ ಆಕಳು ಸೀತೆ. ಅವರಿಬ್ಬರ ಮದುವೆಯ ಆಕರ್ಷಕ ಪ್ರದರ್ಶನವೆನಿಸುವುದು. ಆಶು ಸಂಭಾಷಣೆ ಮತ್ತು ವಾದ್ಯವಾದನಗಳಿಂದಾಗಿ ಪ್ರದರ್ಶನಕ್ಕೆ ಸಹಜವಾಗಿ ನಾಟಕದ ಕಳೆ ಬರುತ್ತದೆ. ಶಹನಾಯಿ, ಡೋಲು (ತವಿಲ್) ಇವರ ವಾದ್ಯಗಳು.

ಹಗಲು ವೇಷಗಾರರು ನಮ್ಮ ಪ್ರಾಚೀನ ಜನಪದ ರಂಗಭೂಮಿ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಕಲಾವಿದರು. ರಂಗ ಪ್ರದರ್ಶನಗಳು ರಾತ್ರಿ ನಡೆಯುವುದು ಸಹಜ. ರಾತ್ರಿಯ ರಂಗ ಪ್ರದರ್ಶನಗಳನ್ನು ಹಗಲು ಹೊತ್ತು ಪ್ರದರ್ಶಿಸುವುದರಿಂದ ಇವರು ಹಗಲು ವೇಷಗಾರರಾಗಿದ್ದಾರೆ. ವೇಷ ಎಂದರೆ ಪಾತ್ರ. ಬೇರೆ ಬೇರೆ ಪಾತ್ರಗಳನ್ನು ಧರಿಸಿ ಚಿಕ್ಕಪುಟ್ಟ ಪ್ರದರ್ಶನಗಳನ್ನು ಇವರು ಓಣಿಗಳಲ್ಲಿ ಪ್ರದರ್ಶಿಸುತ್ತಾರೆ. ಪೌರಾಣಿಕ, ಇತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡಿರುವರು. ಚಿಕ್ಕದಾದ ಏಕಾಂಕ ನಾಟಕದ ಮಾದರಿಯಲ್ಲಿರುವ ಈ ಪ್ರಸಂಗಗಳು ಪಗರಣಗಳನ್ನು ನೆನಪಿಸುತ್ತವೆ. ಪಗರಣಗಳ ಪ್ರದರ್ಶನವನ್ನು ವೃತ್ತಿಯಾಗಿಸಿಕೊಂಡವರು ಹಗಲು ವೇಷಗಾರರಾದರು. ಇವರು ಹಾಡು ಕುಣಿತ ಸಂಭಾಷಣೆಗಳಲ್ಲಿ ಪರಿಣತರಾಗಿರುತ್ತಾರೆ. ತಮ್ಮ ಮಕ್ಕಳಿಗೆ ಈ ಕಲೆಯನ್ನು ಪ್ರತ್ಯೇಕ ಶಿಕ್ಷಣ ಮೂಲಕ ನೀಡುವುದಿಲ್ಲ. ತಿಳುವಳಿಕೆ ಬಂದಾಗಿನಿಂದ ಪ್ರದರ್ಶನದಲ್ಲಿ ಭಾಘವಹಿಸುವುದರ ಮೂಲಕ ಕಲೆಯ ಶಿಕ್ಷಣ ದೊರೆಯುತ್ತದೆ. ಹಗಲು ವೇಷಗಾರರು ಒಂದೇ ಕುಟುಂಬದವರು ಆಗಿರುವುದು ಸಾಮಾನ್ಯ. ಕಲಾವಿದರು ಕಡಿಮೆ ಅನಿಸಿದಾಗ ಬಂಧು ಬಳಗದವರು ಸೇರಿಕೊಂಡು ಪ್ರದರ್ಶನ ನೀಡುವರು. ಒಂದು ಊರಿನಲ್ಲಿ ಕ್ಯಾಂಪ್ ಮಾಡಿದರೆ ಅಲ್ಲಿ ಒಂದು ತಿಂಗಳು ನೆಲೆ ನಿಂತು ಪ್ರತಿನಿತ್ಯ ಒಂದೊಂದು ವೇಷ ಪ್ರದರ್ಶಿಸುವರು. ಕ್ಯಾಂಪಿನ ಕೊನೆಯಲ್ಲಿ ಬಹುಮಾನ, ಸಂಭಾವನೆ ಸಂಗ್ರಹಿಸುವರು. ಸುಮಾರು ನಲವತ್ತರಷ್ಟು ಪ್ರಸಂಗಗಳನ್ನು ಇವರು ಪ್ರದರ್ಶಿಸುವರು. ತಮ್ಮದೇ ಆದ ಮೇಕಪ್ ಸೆಟ್, ವೇಷಭೂಷಣ ಹೊಂದಿರುತ್ತಾರೆ. ಮೊದಲು ಏಕದಾರಿ ತಾಳ ದಮ್ಮಡಿಗಳು ಇವರ ವಾದ್ಯಗಳಾಗಿದ್ದವು. ಈಗ ತಬಲಾ ಹಾರ್ಮೋನಿಯಂ ಬಳಸುತ್ತಿದ್ದಾರೆ.

ತೊಗಲುಗೊಂಬೆ ಆಟ ಪ್ರದರ್ಶಿಸುವ ಕಿಳ್ಳೆಕ್ಯಾತರಿಗೆ ಗೊಂಬೆರಾಮರು ಎಂದೂ ಹೆಸರಿದೆ. ಜಿಂಕೆಯ ತೆಳು ಚರ್ಮದ ಮೇಲೆ ಬೇರೆ ಬೇರೆ ಗೊಂಬೆಗಳನ್ನು ಚಿತ್ರಿಸಿರುತ್ತಾರೆ. ಆ ಗೊಂಬೆಗಳ ವರ್ಣ ಸಂಯೋಜನೆ ಚಿತ್ರದ ಶೈಲಿ ಅದ್ಭುತವಾಗಿರುತ್ತವೆ. ಇಂಥ ನೂರಾರು ಗೊಂಬೆಗಳ ಸಂಗ್ರಹ ಅವರಲ್ಲಿರುತ್ತದೆ. ಅವರು ಮಹಾಭಾರತ, ರಾಮಾಯಣಗಳನ್ನು ಹಲವು ರಾತ್ರಿಗಳಷ್ಟು ವಿಸ್ತರಿಸಿ ಪ್ರದರ್ಶಿಸುವರು. ಇವು ಪೂರ್ತಿ ಶಿಷ್ಟ ಕೃತಿಗಳಲ್ಲ. ಇವುಗಳಲ್ಲಿ ಹಲವಾರು ಜಾನಪದೀಯ ಅಂಶಗಳು ಸೇರಿರುವುದರಿಂದ ಇವುಗಳಿಗೆ ಒಂದು ವೈಶಿಷ್ಟ್ಯ ಪ್ರಾಪ್ತವಾಗಿದೆ. ಮಧ್ಯ ಮಧ್ಯೆ ಅಡಗತೆಗಳು ಹಾಸ್ಯ ಪ್ರಸಂಗಗಳು ಪ್ರದರ್ಶಿಸಲ್ಪಡುತ್ತವೆ. ಗೊಂಬೆ ಕುಣಿಸುವವನು ಎಲ್ಲ ಪಾತ್ರಗಳ ಮಾತು ಹೇಳುವನು. ಅವನ ಆಶು ಸಂಭಾಷಣೆಗಳಲ್ಲಿ ಸ್ಥಳೀಯ ಭಾಷೆಯ ಸೊಗಡು ಬೆರೆತುಕೊಂಡಿರುತ್ತದೆ. ಹಾಡು ಹೇಳುವ ಹಿಮ್ಮೇಳದವರು ಪರದೆಯ ಹೊರಗೆ ಕುಳಿತಿರುತ್ತಾರೆ. ತಾಳ, ಡೋಲು ಇವರ ಮುಖ್ಯ ವಾದವುಗಳು. ಪಾವರಿ ಎಂಬ ವಿಶೇಷ ಗಾಳಿ ವಾದ್ಯವನ್ನು ಯುದ್ಧದ ಸಂದರ್ಭದಲ್ಲಿ ಬಳಸುವರು.

ಕಿನ್ನರಿ ವಾದ್ಯದೊಂದಿಗೆ ಹಾಡುತ್ತ ಕಥೆಗಳನ್ನು ಪ್ರದರ್ಶಿಸುವ ಜೋಗಿ ಜನಾಂಗದ ಕಲಾವಿದರನ್ನು ಕಿನ್ನರಿ ಜೋಗಿಗಳೆಂದು ಗುರುತಿಸಲಾಗಿದೆ. ಭಿಕ್ಷಾಟನೆ ಇವರ ಮುಖ್ಯ ವೃತ್ತಿ. ಕಿನ್ನರಿ ಬಾರಿಸುತ್ತ ಬಿಡಿ ಹಾಡುಗಳನ್ನು ಹಾಡುತ್ತ ಮನೆ ಮನೆ ತಿರುಗಿ ಭಿಕ್ಷೆ ಸಂಗ್ರಹಿಸುವರು. ರಾತ್ರಿ ಹೊತ್ತು ಓಣಿಯ ಮುಖ್ಯ ಸ್ಥಳವನ್ನು ವೇದಿಕೆಯನ್ನು ಮಾಡಿಕೊಂಡು ಕತೆ ಹೇಳುವರು. ವಾಸ್ತವವಾಗಿ ಅದೊಂದು ರಂಗಪ್ರದರ್ಶನವಾಗಿರುತ್ತದೆ. ಮುಖ್ಯ ಕಲಾವಿದನ ಕೈಯಲ್ಲಿ ಕಿನ್ನರಿ ಹಿಡಿದುಕೊಂಡು ನುಡಿಸುತ್ತ ಕತೆ ನಿರೂಪಿಸುವನು. ಅವನದು ಏಕಪಾತ್ರಾಭಿನಯ ಒಂದಿಷ್ಟು ಕಥಾ ನಿರೂಪಣೆಯಾದ ಮೇಲೆ ನಡುವೆ ಹಾಡು. ಹಾಡಿನ ನಂತರ ಎರಡು ಪಾತ್ರಗಳ ಸಂಭಾಷಣೆಯನ್ನು ಅವನೇ ಹೇಳುತ್ತಾನೆ. ಈ ಆಶುಸಂಭಾಷಣೆಗಳು ನಾಟಕೀಯ ವಾತಾವರಣ ನಿರ್ಮಿಸುತ್ತವೆ. ಆಗಾಗ ಹಿಮ್ಮೇಳದವರು ಅವನಿಗೆ ಪಾತ್ರಾಭಿನಯದ ಸಂದರ್ಭದಲ್ಲಿ ನೆರವು ನೀಡುತ್ತಾರೆ. ಹಾಡನ್ನು ಪುನರಾವರ್ತಿಸುತ್ತ, ಪ್ರದರ್ಶನದುದ್ದಕ್ಕೂ ನಾದಮಯತೆಯನ್ನು ಸೃಷ್ಟಿಸಿ ನಿರ್ವಹಿಸಿಕೊಂಡು ಹೋಗುವುದು ಹಿಮ್ಮೇಳದವರ ಕರ್ತವ್ಯ. ದಮ್ಮಡಿ, ತಾಳ ತಂಬೂರಿ ಇವು ಹಿಮ್ಮೇಳದ ವಾದ್ಯಗಳು.

* * *