ಈ ಕರಣಳೆಂಬ ಕಠೋರತೆಯಿಂದ ಸಮಾಜದಲ್ಲಿ ನೆಲೆನಿಂತಿರುವ ಅಲೆಮಾರಿಗಳು ಮೂರಾ ಬಟ್ಟೆಯಿಂದ ತತ್ತರಿಸುತ್ತಿದ್ದಾರೆ. ಆದುದರಿಂದ ಹಮ್ಮಿಕೊಂಡಿರುವ ಈ ದೇಸಿ ಸಮ್ಮೇಳನ ಮಹತ್ವಪೂರ್ಣದ್ದಾಗಿದೆ. ವಿದ್ವಾಂಸರಿಂದ ಮಂಡಿತವಾದ ಈನಾಲ್ಕು ಪ್ರಬಂಧಗಳು ಭಿನ್ನ ಮತ್ತು ಗಟ್ಟಿತನದಿಂದ ಪರಿಪಕ್ವವಾಗಿವೆ.

ಮೊದಲನೇ ಪ್ರಬಂಧವನ್ನು ಪ್ರೊ. ಡಿ.ಬಿ.ನಾಯಕರು ಮಂಡಿಸಿದ್ದಾರೆ. ಅವರು ಅಲೆಮಾರಿಗಳ ಸೂಕ್ಷ್ಮವಾದ ಒಟ್ಟು ಸಮೀಕ್ಷೆಯನ್ನು ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅಲೆಮಾರಿಗಳನ್ನು ಹತ್ತಿರದಿಂದ ಬಲ್ಲವರಾದ್ದರಿಂದ ಅವರ ಬದುಕಿನ ವಿರಾಟ್ ರೂಪವನ್ನು ತೆರಿದಿಟ್ಟು ಆಧುನಿಕ ಸಂದರ್ಭದಲ್ಲಿ ಅವರ ರೂಪಾಂತರಗಳ ಅವಾಂತರವನ್ನು ಬಿಚ್ಚಿಟ್ಟಿರುವುದು ಪ್ರಸ್ತುತವಾಗಿರುತ್ತದೆ.

ಎರಡನೇ ಪ್ರಬಂಧವನ್ನು ಅಧ್ಯಾಪಕರಾದ ಟಿ.ಎಂ.ಭಾಸ್ಕರ ಅವರು ಮಂಡಿಸಿದ್ದಾರೆ. ಅಲೆಮಾರಿಗಳ ಹುಟ್ಟಿನಿಂದ ಅಂತ್ಯದವರೆಗಿನ ಅಂಶಗಳನ್ನು ಹೊರಚೆಲ್ಲಿದ್ದಾರೆ. ಅಲ್ಲದೆ ಅವರ ‘ಮೊಬೈಲ್’ ಬದುಕಿನ ನಿಜ ಸ್ವರೂಪವನ್ನು ಕಣ್ಣು ಕುಕ್ಕುವಂತೆ ನಮ್ಮ ಮುಂದೆ ಹೊರಗೆಡವಿದ್ದಾರೆ.

ಮೂರನೆಯದಾಗಿ ನಮ್ಮವರೇ ಆದ ಜೊತೆಗೆ ನನ್ನ ಗೆಳೆಯರಾದ ಡಾ. ಹರಿಶ್ಚಂದ್ರ ದಿಗ್ಸಂಗೀಕರ ಅವರು ಸಮಕಾಲೀನ ಸಂದರ್ಭದಲ್ಲಿ ಅಲೆಮಾರಿಗಳ ಸ್ಥಿತಿಗತಿಯ ವೃತ್ತಾಂತವನ್ನು ಕ್ಷೇತ್ರಕಾರ್ಯ ಮಾಡಿ ವಾಸ್ತವ ಬದುಕನ್ನು ಅವರ ಒಡನಾಟವನ್ನು ಜೊತೆಗೆ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತವನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ತಲಸ್ಪರ್ಶಿ ಪ್ರಬಂಧಗಳೆನ್ನಬಹುದು. ಈ ಮೇಲೆ ಹೇಳಲಾದ ಎಲ್ಲಾ ಅಂಶಗಳನ್ನು ಗಮನಿಸಿ ನನ್ನದೇ ಆದ ಕೆಲವು ಅಂಶಗಳನ್ನು ಇಟ್ಟುಕೊಂಡು ತಾತ್ವಿಕ ನೆಲೆಗಟ್ಟಿನಲ್ಲಿ ಪ್ರತಿಕ್ರಿಯೆಗಳನ್ನು ಬಿಚ್ಚಿಡುವ ಇರಾದೆ ನನ್ನದಾಗಿದೆ.

೧. ಸ್ಥಳೀಯ ನೆಲದಲ್ಲೇ ಪರಕೀಯರು

೨. ಕರಣಗಳೆಂಬ ಕಠೋರತೆ

. ಸ್ಥಳೀಯ ನೆಲದಲ್ಲೇ ಪರಕೀಯರು

ಬ್ರಿಟೀಷ್ ಸರಕಾರ ತನ್ನ ಸ್ವಾಧೀನದಲ್ಲಿ ಭಾರತದ ಆಡಳಿತದ ಚಿಕ್ಕಾಣಿ ಹಿಡಿದು ಕೊಂಡಿತು. ಈ ಸಂದರ್ಭದಲ್ಲಿ ನಮ್ಮದೇ ರಾಜ್ಯಗಳಲ್ಲಿ ಕೆಲವು ಪಾಳೆಗಾರರು ಹಾಗೂ ಆಳರಸರು, ಯುದ್ಧನಿರತರಾಗಿದ್ದವರು, ಅವನತಿ ಹೊಂದಿದವರು, ಜಮೀನ್ದಾರರಾದವರು, ಇಲ್ಲಿ ರಾಜರಾಗಿ ಬಡ್ತಿ ಪಡೆದುಕೊಂಡರು. ಇದೇ ಕಾಲಘಟ್ಟದ್ಲಿ ಭೂ ಹಿಡುವಳಿಕ್ರಮ ಜಾರಿಗೆ ಬಂತು. ಸಾಮಾನ್ಯವಾಗಿ ಅದು ಮೇಲ್ಜಾತಿಯವರಿಂದ ಕೂಡಿದ್ದಾಗಿತ್ತು. ಅಲ್ಲಿ ಯಜಮಾನ, ರೈತ, ಕಾರ್ಮಿಕ ವರ್ಗಗಳು ಸೃಷ್ಠಿಗೊಂಡವು. ಬ್ರಿಟಿಷರು ಹಾಗೂ ದೇಸಿ ಬಂಡವಾಳಗಾರರು, ಭೂ ಒಡೆಯರು, ಮಾರವಾಡಿಗಳು, ಧರ್ಮಾಧಿಕಾರಿಗಳು, ಪುರೋಹಿತರು ಅಧಿಕಾರದ ಚುಕ್ಕಾಣಿ ಹಿಡಿದುಕೊಂಡರು. ಅದರಲ್ಲೂ ಭೂ ಒಡೆಯರು ಭೂಮಿಯ ಒಡೆತನದಿಂದಾಗಿ ಕೆಳಜಾತಿ, ವರ್ಗ, ವರ್ಣದವರಿಗೆ ಭೂಮಿಯು ಕನಸಾಯಿತು. ಒಟ್ಟಾರೆಯಾಗಿ ಸಂಪ್ರದಾಯಕವಾಗಿ ಬದುಕುವುದೇ ದುಸ್ಥರವಾಗಿ ಹೋಯಿತು.

ಅಲ್ಲದೆ ಬ್ರಿಟಿಷರ ವಾಣಿಜ್ಯ ಮತ್ತು ರಾಜಕೀಯ ಹಿತಾಶಕ್ತಿಗಳು ಬಳಕೆಗೊಂಡಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಕಗ್ಗಂಟುಗಳು ಇರಿಯುತ್ತಿದ್ದವು. ಇವರ ನೇರಪೆಟ್ಟಿಗೆ ಸಿಕ್ಕಿಕೊಂಡವರೆಂದರೆ ಅಲೆಮಾರಿಗಳು. ವಸಾಹತು ಆಳ್ವಿಕೆ ಹುಟ್ಟುಹಾಕಿದ ವಾಣಿಜ್ಯ, ಕೃಷಿ, ಕೈಗಾರಿಕೆ, ಉದ್ಯಮ, ಮಧ್ಯವರ್ತಿಗಳು, ಬಡ್ಡಿ ಸಾಲ ಕೊಡುವವರು, ವ್ಯಾಪಾರಿಗಳು, ಅರಣ್ಯ ಗುತ್ತಿಗೆದಾರರು, ಸರಕಾರಿ ಅಧಿಕಾರಿಗಳು, ಅಲೆಮಾರಿಗಳನ್ನು ಅಲೆಮಾರಿಗಳಾಗಿ ಉಳಿಸಿಕೊಂಡು ತಮ್ಮ ಹಿತಾಸಕ್ತಿಗಳ ಪೂರೈಕೆಯ ವಸ್ತುಗಳಾಗಿ ಬಳಸಿಕೊಂಡರು.

ಒಟ್ಟಿನಲ್ಲಿ ವಂಚನೆ ಮತ್ತು ಭ್ರಷ್ಟತೆಯಿಂದ ಆ ಕಾಲ ಕೂಡಿತೆನ್ನಬಹುದಾಗಿದೆ. ೧೯ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಬ್ರಿಟಿಷ್ ಆಡಳಿತದ ವ್ಯವಸ್ಥೆ ಹತ್ತಿರದ ದೇಸಿಯ ತಂಡವನ್ನು ಸೃಷ್ಟಿ ಮಾಡಿ ಇಲ್ಲಿನ ಸಂಪತ್ತನ್ನು ಹಂಚಿಕೊಂಡು ಜನಸಾಮಾನ್ಯರನ್ನು, ಹಿಂದುಳಿದ ವರ್ಗದವರನ್ನೂ, ಅಲೆಮಾರಿಗಳಲ್ಲಿ ಅಲೆಮಾರಿಯರನ್ನು ಕೀಳು ದೃಷ್ಟಿಯಿಂದ ನೋಡುವ ಮಟ್ಟುಗಳು ಆರಂಭವಾದವು.

. ಕರಣಗಳೆಂಬ ಕಠೋರತೆ

ಇಂದು ಬಿಳಿ ದೇಶವೆಂದರೆ ಅಮೇರಿಕ. ಇದನ್ನು ಹಿಂಡಿನಲ್ಲಿ ಕರೆಯುವುದಾದರೆ ಅಮೇರಿಕೀಕರಣ. ಇದರ ಬೆನ್ನೆಲುಬಾಗಿ ಜಾಗತೀಕರಣ, ಆಧುನೀಕರಣ, ಉದಾರೀಕರಣದಿಂದಾಗಿ ಎಲ್ಲೆಂದರಲ್ಲಿ ಬಂಗಲೆಗಳು. ಟೆಲಿವಿಷನ್, ಹೈಟಕ್ ರಸ್ತೆಗಳು, ಇಂಟರ್‌ನೆಟ್, ರೌಂಡ್‌ಕ್ಲಾಕ್ ವಾಟರ್ ಸಪ್ಲೈ, ಫಿಲ್ಟರ್‌ಇಂಗ್ಲೆಂಡ್ ವಸ್ತುಗಳು, ಇಂಗ್ಲಿಷ್ ಮಿಡಿಯಂ ಸ್ಕೂಲ್‌ಗಳು ತಲೆಎತ್ತಿ ನಿಂತಿವೆ. ಈ ಎಲ್ಲಾ ಅಂಶಗಳಿಂದ ತಳದಲ್ಲಿ ಬೇರೂರಿರುವ ಕೆಳ ವರ್ಗದವರೂ, ಕೆಳ ಸಮುದಾಯಗಳು, ಅಲ್ಪಸಂಖ್ಯಾತರು, ಅದರಲ್ಲೂ ಅಲೆಮಾರಿಗಳೂ ಎಲ್ಲೆಂದರಲ್ಲಿ ಹೀನಾಯವಾದ ಬದುಕನ್ನು ಸವೆಸುವಂತಾಗಿದೆ. ಅಲೆಮಾರಿಗಳು ಪರಂಪರಗತವಾಗಿ ರೂಢಿಸಿಕೊಂಡು ಬಂದ ಅನೇಕ ಸಂಪ್ರದಾಯಗಳನ್ನು, ವೃತ್ತಿಗಳನ್ನು ನಾಶಗೊಳಿಸಿರುತ್ತವೆ.

ಅವರು ಮೂಲವಾಗಿ ಉಳಿಸಿಕೊಂಡು ನೈಸರ್ಗಿಕವಾಗಿ ವಾಸ ಮಾಡಿಕೊಂಡುಬಂದಂತಹ ಮನೆಗಳು ಕಣ್ಮರೆಯಾಗಿ ಸರಕಾರ ಆಶ್ರಯ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಜೊತೆಗೆ ಅವರನ್ನು ಅನಾಗರಿಕರು, ಅಚ್ಚುಕಟ್ಟಿಲ್ಲದವರು, ಅವಿದ್ಯಾವಂತರು, ಕೀಳು ಕುಲದವರು. ಹೀಗೆ ಅನೇಕ ತಾತ್ಸರವಾದ ಈಟಿಯಿಂದ ಇರಿಯುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಅಲೆಮಾರಿಗಳಿಂದ ಬೆಲೆಕಟ್ಟಲಾಗದ ಸಕಲ ಸಂಪತ್ತುಗಳಾದ ನೆಲ, ಜಲ, ಸಂಸ್ಕೃತಿಯನ್ನು ಕಸಿದುಕೊಳ್ಳಲಾಗುತ್ತಿದೆ. ಅವರ ಕಡೆಗೆ ಬಿಡಿಗಾಸು ಎಸೆದು ಇನ್ನೂ ದಾಸರನ್ನಾಗಿ ಪರಿವರ್ತಿಸಲಾಗುತ್ತಿದೆ. ಎಲ್ಲವನ್ನು ಕಳೆದುಕೊಂಡು ಅಲೆಮಾರಿಗಳು ಇಂದಿನ ಸ್ಥಿತಿ ಏನಾಗಿದೆ ಎಂದರೆ ಅವರು ಕೃಷಿ ಕಾರ್ಮಿಕರಾಗಿ, ಅರಣ್ಯ ಇಲಾಖೆಯಲ್ಲಿ ಕೂಲಿಯಾಳುಗಳಾಗಿ, ತೋಟದಲ್ಲಿ ಕೆಲಸಗಾರರಾಗಿ, ಕಟ್ಟಡ ಕಾರ್ಮಿಕರಾಗಿ, ಮನೆ ಕೆಲಸದಾಳುಗಳಾಗಿ ದುಡಿಯುತ್ತಿದ್ದಾರೆ. ಒಟ್ಟಿನಲ್ಲಿ ಕಡಿಮೆ ಕೂಲಿಗೆ ಉತ್ತಮ ಸೇವೆಯನ್ನು ಸಮಾಜದಲ್ಲಿರುವ ಬಲಿಷ್ಠ ವರ್ಗದವರು ಪಡೆಯುತ್ತಿದ್ದಾರೆ. ಅಲೆಮಾರಿಗಳು ಒಂದು ಹೊತ್ತಿನ ಆಹಾರಕ್ಕೂ ಹಪಹಪಿಸುವಿಕೆ ತಾಂಡವಾಡುತ್ತಿದೆ. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಕ ಪರಿಹಾರವನ್ನು ಸಮಾಜ ತೆಗೆದುಕೊಳ್ಳಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಸೂಕ್ಷ್ಮತಜ್ಞರು ಈ ತೆರನಾದ ಸಮುದಾಯವನ್ನು ಇಟ್ಟುಕೊಂಡು ಅದರ ಪೂರಕವಾಗಿ ವಾದವನ್ನು ಮಂಡಿಸುತ್ತಿದ್ದಾರೆ. ಅಂತಹುದನ್ನು ಆಧುನಿಕವಾದ(Modernism) ಅಂತಲೂ ಸಂಭೋದಿಸಲಾಗಿದೆ. ಈ ವಾದದ ತಾತ್ಪರ್ಯ ಎಂದರೆ ಆಧುನಿಕತೆಯ ಎಲ್ಲ ಸೌಲಭ್ಯಗಳು, ಸವಲತ್ತುಗಳು ಎಲ್ಲಾ ಸಮುದಾಯದವರಿಗೂ, ಸಮವಾಗಿ ಹಂಚಿಕೆಯಾಗಬೇಕೆಂದು ಹೇಳುವರು. ಅವರುಗಳಲ್ಲಿ ರೇಮಂಡ್ ವಿಲಿಯಮ್ಸ್, ರೋಲಾಂಡ್ ಬಾರ್ತ್, ರಿಚರ್ಡ್ಸ್ ಹೊಗ್ಗಾರ್ಟ್ ಮೊದಲಾದವರು ಒಂದೆಡೆಗೆ ಇನ್ನೊಂದು ಬದಿಯಲ್ಲಿ ಈ ಸಾಂಪ್ರದಾಯಿಕ ವಾದಿಗಳು (Traditionalists) ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಂತಹ ವೃತ್ತಿಗಳನ್ನು ಉಳಿಸಿಕೊಂಡು ಹೋಗದಿದ್ದರೆ ಅವರ ಸಂಸ್ಕೃತಿಯೇ ಹೇಳ ಹೆಸರಿಲ್ಲದೆ ಹೊರಟು ಹೋಗುತ್ತದೆ ಎಂಬ ಮಾತನ್ನು ವ್ಯಕ್ತಪಡಿಸಿರುತ್ತಾರೆ. ಅವರಗಳೆಂದರೆ ಈ.ಬಿ. ಟೈಲರ್, ಎಡ್ವರ್ಡ್, ಥರ್ಸ್ಟನ್ ಇನ್ನೂ ಹಲವರು. ಅವರುಗಳಲ್ಲಿ ಈ.ಬಿ. ಟೈಲರ್‌ರವರ ಕೋಟ್‌ನ್ನು ಉಲ್ಲೇಖಿಸಬಹುದು. “These People are Suffering from Hunger, Disease,Exploitation, Ignorance, Isolation are evils whose cure cannot be delegate, they must be treatid rapidly and efficiently” ನಮ್ಮಲ್ಲಿ ಅನೇಕ ಅಂಶಗಳು ಎಲೆಮರೆಕಾಯಿಯಂತೆ ಇದ್ದು ಬಿಡಿಸಲಾರದರ ಕಗ್ಗಂಟಾಗಿದೆ ಅನ್ನಿಸುತ್ತದೆ. ಈ ಮಾತನ್ನು ಅಲೆಮಾರಿಗಳ ತಾತ್ವಿಕ ನೆಲೆಯಲ್ಲಿ ಬಗೆಯುವಾಗ ಅವರ ಹೀನಾಯವಾದ ಬದುಕು ಇವತ್ತಿನದೂ, ಇಂದಿನದೂ, ನೆನ್ನೆಯದಲ್ಲವಾಗಿದೆ. ಅನೇಕ ಶತಮಾನಗಳಿಂದಲೂ ಕೀಳು ದೃಷ್ಟಿಯಿಂದಲೆ ಬದುಕನ್ನು ಸವೆಸುತ್ತಾ ಬಂದಿದ್ದಾರೆ. ಈ ಹೊತ್ತಿನಲ್ಲಿಯೂ ಅವರ ಬದುಕು ಅನಿಶ್ಚಿತವಾಗಿದೆ. ಸಮಾಜದ ಸವರ್ಣೀಯರು ನಿರ್ಲಕ್ಷತೆ ಭಾವನೆಯಿಂದ ತೆರೆಹಿಂದೆ ಇಟ್ಟಿದ್ದಾರೆ. ಒಂದೊತ್ತಿನ ಅನ್ನಕ್ಕೂ ಅಭಾವವನ್ನು ಕಾಣಬಹುದಾಗಿದೆ. ಆರಡಿ ಮೂರಡಿ ಜಮೀನು ಕೂಡ ಇಲ್ಲದಂತಹ ಸ್ಥಿತಿ ಸ್ಥಿರವಾಗಿದೆ. ರಾಜಕೀಯದ ರಾಕ್ಷಸತನದಿಂದ ಅಸ್ಥಿರತೆ ತಾಂಡವಾಡುತ್ತಿದೆ. ಇವೆಲ್ಲವೂ ಜೊತೆಗೆ ಹಿಂದುಗಳೇ ಅವರನ್ನು ಅಲೆಮಾರಿಗಳಾಗಿ ನೋಡುವ ರೀತಿ ಭೀಭತ್ಸತೆ ಜೀವನವಾಗಿದೆ.

ನನ್ನ ಮಾತುಗಳನ್ನು ತರ್ಕದೊಂದಿಗೆ ಪ್ರತಿಕ್ರಿಯಿಸಿ ಮುಗಿಸುತ್ತೇನೆ. ಇಂದಿನ ಸಮಕಾಲೀನತೆಯ ಸಂದರ್ಭದಲ್ಲಿಯೂ ಸವಲತ್ತುಗಳಿದ್ದರೂ ಅಲೆಮಾರಿಗಳು ಅಲೆಮಾರಿಗಳಾಗಿಯೇ ಏಕೆ ಉಳಿದಿದ್ದಾರೆ? ಅವರು ಬದಲಾಗುತ್ತಿರುವ ಇಂಡಿಯಾದ ಪರಿಕಲ್ಪನೆಯ ಹಿಂದುತ್ವದಲ್ಲಿ ಅವರ ಬದಲಾಣೆ ಹೊಂದಲು ಸಾಧ್ಯವೆ? ಅಥವಾ ಹಿಂದುತ್ವ ಯಾವ ರೀತಿಯಲ್ಲಿ ಅವರನ್ನು ಸ್ವೀಕರಿಸಿದರೆ ಅವರ ಸಮಸ್ಯೆಗಳು ಬಗೆಹರಿಯುತ್ತವೆ? ಅಥವಾ ಯಾವ ತೆರನಾದ ಮಗ್ಗಲುಗಳಲ್ಲಿ ಸಹಾಯ ಮಾಡಬೇಕು? ಈ ದೃಷ್ಟಿಯಲ್ಲಿ ಆಲೋಚನೆಗಳನ್ನು ಸರಕಾರ, ಸಮಾಜ, ಹಾಗೂ ವಿದ್ವಾಂಸರು ಮಾಡಿದಾಗ ಮಾತ್ರ ಅಲೆಮಾರಿಗಳು ಸಕಲ ಸಮೃದ್ಧಿಯತ್ತ ದಾಪುಗಾಲನ್ನು ಹಾಕಬಹುದು.

* * *