ಶತ ಶತಮಾನಗಳಿಂದಲೂ ಕಡೆಗಣಿಸಿದಂತಹ ಸಮುದಾಯಗಳು. ಈ ಹೊತ್ತಿನ ಸಂದರ್ಭದಲ್ಲಿಯೂ ಬದಲಾವಣೆಗೊಂಡಿಲ್ಲವೆಂದರೆ ಅತಿಶಯೋಕ್ತಿಯೇನಿಲ್ಲ. ಭಾರತದಂತಹ ದೇಶದಲ್ಲಿ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಅವರ ಭೌತಿಕ ರಚನೆಯ ಮೂಲಕವೇ ಗುರುತಿಸುವ ಹಾಗೆ ಕಂಡುಬರುತ್ತಾರೆ. ಸಮಕಾಲೀನ ಸಂದರ್ಭದಲ್ಲಿ ಅಲೆಮಾರಿಗಳ ಸ್ಥಿತಿ-ಗತಿಯನ್ನು ಅವಲೋಕಿಸಿದಾಗ ಅವರಲ್ಲಿ ಇನ್ನೂ ಅಲೆಮಾರಿತನ ಉಳಿದುಕೊಂಡಿದೆ ಎಂದು ತಿಳಿದು ಬರುತ್ತದೆ. ಯಾವುದೇ ಒಂದು ಸಮೂಹ ಅಭಿವೃದ್ಧಿ ಹೊಂದಬೇಕಾದರೆ ನಿಶ್ಚಿತವಾದ ನೆಲೆ, ಆರ್ಥಿಕವಾದ ಅವಲಂಬನೆ. ಸಾಮಾಜಿಕವಾದ ಭದ್ರತೆ ಮುಖ್ಯವಾಗಿ ಬೇಕು. ಇದ್ಯಾವುದು ಇಲ್ಲದಿದ್ದಾಗ ಅಂತಹ ಸಮೂಹ ಅಲೆಮಾರಿಯಾಗಿ ಕಾಣುತ್ತದೆ. ಕರ್ನಾಟಕದಲ್ಲಿರುವ ಅಲೆಮಾರಿಗಳೆಂದರೆ, ದುರುಗ-ಮುರುಗಿಯರು, ಹಗಲು ವೇಷಗಾರರು, ಸುಡುಗಾಡು ಸಿದ್ಧರು, ಡೊಂಬರು, ಹಾವಾಡಿಗರು, ಹೆಳವರು, ಗೋಸಂಗಿಗಳು ಮುಂತಾದ ಅಲೆಮಾರಿ ಸಮುದಾಯಗಳು ನಮ್ಮ ಮುಂದಿವೆ.

ಒಂದು ಕಾಲದಲ್ಲಿ ಇವರ ಉಪಜೀವನಕ್ಕೆ ಆಧಾರವಾಗಿದ್ದ ಕುಲಕಸುಬುಗಳನ್ನು ಕಲೆಯನ್ನು ನಂಬಿಕೊಂಡು ಬದುಕುತ್ತಿದ್ದರು. ಹಿರಿಯ ತಲೆಮಾರಿನ ಜನ ಸಂಪೂರ್ಣವಾಗಿ ಈ ಪ್ರವೃತ್ತಿಗಳನ್ನು ಇನ್ನೂ ಬಿಟ್ಟಿಲ್ಲ. ಆಧುನಿಕತೆಯ ಪ್ರಭಾವದಿಂದ ಜನಪದ ಕಲೆಗಳು ಮೂಲೆ ಗುಂಪಾಗುತ್ತಿವೆ. ಅನಕ್ಷರಸ್ಥರು ತೋರಿಸುವ ಕಲೆಗಳು ಅಲಕ್ಷ್ಯಕ್ಕೆ ಗುರಿಯಾಗುತ್ತಿವೆ. ಹಾಗಾಗಿ ಬದುಕಿನ ಆಧಾರ ಸ್ಥಂಭವೆ ಕುಸಿದ ಮೇಲೆ ನಿಶ್ಚಿತ ಆದಾಯ ತರುವ ಸಂಪನ್ಮೂಲಗಳಿಲ್ಲದೆ ಅಲೆಮಾರಿಗಳು ಕಂಗಾಲಾಗಿದ್ದಾರೆ.

ಮೂಲಭೂತವಾಗಿ ಮನುಷ್ಯನಿಗೆ ಬೇಕಾಗಿರುವುದು ರೊಟ್ಟಿ, ಬಟ್ಟೆ, ತಲೆಯ ಮೇಲೊಂದಿಷ್ಟು ಸೂರು. ಭಾರತದ ಗಣತಿಯ ಸಮೀಕ್ಷೆ ಪ್ರಕಾರ ಅಲೆಮಾರಿಗಳು ಬಡತನ ರೇಖೆಗಿಂತಲೂ ಅತೀ ಕೆಳಸ್ತರದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿರುವವರು ಕೃಷಿ ಕೂಲಿಯನ್ನೆ ಅವಲಂಬಿಸಿದ್ದಾರೆ. ಯಾವಾಗ ಸ್ಥಿರವಾಗಿ ನೆಲೆ ನಿಲ್ಲಲು ಬಯಸಿ ಆಯಾ ಪ್ರಾದೇಶಿಕ ನೆಲೆಯಲ್ಲಿ ವಾಸವಾಗತೊಡಗಿದರೋ (೮೦ರ ದಶಕ) ಆವಾಗಲೆ ಕೃಷಿಯಲ್ಲಿ ಆಧುನಿಕ ಯಂತ್ರೋಪಕರಣಗಳು ಬಳಕೆಗೆ ಬಂದವು. ಸತತವಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದಾದಾಗ ಅಲೆಮಾರಿಗಳಿಗೆ ಕೆಲಸ ಕೊಡುವವರಾರು? ಕೃಷಿ ಕೂಲಿಯನ್ನೆ ನಂಬಿಕೊಂಡಿದ್ದ ಬಡ ಜನರೆ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವಾಗ, ನಿಶ್ಚಿತವಾದ ಒಂದು ನೆಲೆಯೇ ಇರದ ಅಲೆಮಾರಿಗಳು ತಾವು ಕೂಡ ಪಟ್ಟಣವನ್ನೆ ಆಶ್ರಯಿಸಬಯಸಿದರು. ಗ್ರಾಮೀಣ ಪ್ರದೇಶದ ಮೇಲೆ ಹೆಚ್ಚಿನ ವ್ಯಾಮೋಹ ಇರುವುದು ಜಮೀನ್ದಾರರಿಗೆ ಮತ್ತು ನಿಶ್ಚಿತ ಆದಾಯ ಹುಡುಕುವ ಬಂಡವಾಳಶಾಹಿಗಳಿಗೆ, ಸದಾ ಸಂಚಾರದಲ್ಲಿಯೇ ತೊಡಗಿರುವ ಅಲೆಮಾರಿಗಳಿಗೆ ಯಾವ ಊರಾದರೇನು, ದಿನದ ಹೊಟ್ಟೆ ಹೊರೆದರೆ ಸಾಕು. ಹಾಗಾಗಿ ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಪ್ರದೇಶದ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ದಿನದ ಹೆಚ್ಚಿನ ಕೂಲಿ, ನಗದು ವ್ಯಾಪಾರ, ಸಾಮಾಜಿಕ ಕೀಳರಿಮೆಯಿಂದ ದೂರವಾಗಿ ಸ್ವತಂತ್ರವಾಗಿ ಬದುಕುವ ನೆಮ್ಮದಿ ಹುಡುಕುತ್ತದ್ದಾರೆ.

ಗ್ರಾಮೀಣ – ನಗರ ಯಾವುದೇ ಪ್ರದೇಶದಲ್ಲಿದ್ದರೂ, ಇಂದಿಗೂ ಕೂಡ ನಮ್ಮದೆಯಾದ ಗುಂಪಿನೊಡನೆ ಇರಲು ಬಯಸುತ್ತಾರೆ. ಸಂಚಾರಿಯಾದವರಿಗೆ ಸದಾ ಪರಕೀಯತೆ, ಹೆದರಿಕೆಯಿಂದ ಜನಸಾಮಾನ್ಯರ ಜೊತೆ ಬೆರೆಯಲು ಇಷ್ಟಪಡದ ಈ ಜನರು ಸಮಾಜದಲ್ಲಿ ತಮ್ಮ ಸ್ಥಾನಮಾನ ಗಳಿಸಿಕೊಳ್ಳುವುದಾಗಲಿಲ್ಲ. ಪ್ರತ್ಯೇಕತೆಯೇ ಇವರ ಒಂಟಿತನಕ್ಕೂ ಕಾರಣವಾಗಿರಬೇಕು ಎನಿಸುತ್ತದೆ.

ಪಟ್ಟಣಗಳಿಗೆ ವಲಸೆ

ಇಂದಿನ ಯುವ ಪೀಳಿಗೆ ಪಟ್ಟಣಗಳಿಗೆ ಹೆಚ್ಚು ಮಾರು ಹೋಗುತ್ತಿದ್ದಾರೆ. “ಅಲೆಮಾರಿಗಳು ಸದಾ ಸಂಚಾರಿಗಳಾಗಿದ್ದು ಎಲ್ಲಿಯೂ ಶಾಶ್ವತವಾಗಿ ನೆಲೆ ಊರುವುದಿಲ್ಲ. ಆದರೆ ಪ್ರಾದೇಶಿಕವಾಗಿ ಅಲ್ಲಲ್ಲಿ ಅವರದೆಯಾದ ಪ್ರತ್ಯೇಕ ಸ್ಥಳಗಳಿದ್ದು ವರ್ಷಕ್ಕೊಮ್ಮೆ ಸಂಚಾರ ಮುಗಿಸಿಕೊಂಡು ಸ್ವಂತ ಸ್ಥಾನಕ್ಕೆ ಮರಳುತ್ತಾರೆ” (ಪಿ.ಕೆ.ಕೆ.) ಅಲ್ಲದೆ ಆ ಸ್ಥಳದಲ್ಲಿ ತಮ್ಮ ಕುಟುಂಬದ ಹಿರಿಯರನ್ನು ಬಿಟ್ಟು ತಾವು ಪಟ್ಟಣ ಪ್ರದೇಶವನ್ನು ಆಯ್ಕೆ ಮಾಡಿಕೊಂಡು ವರ್ಷದ ಹಬ್ಬ, ಆಚರಣೆ, ಸಂಸ್ಕಾರದಂತಹ ಸಂದರ್ಭಗಳಲ್ಲಿ ತಮ್ಮೂರಿಗೆ ಹೋಗಿ ಬರುವವರು ಇದ್ದಾರೆ. ಇವರು ದೈನಂದಿನದಲ್ಲಿ ವ್ಯಾಪಾರ ಮನೋವೃತ್ತಿ ತಾಳಿದ್ದಾರೆ. ನಗರದಲ್ಲಿ ತಮ್ಮ ವ್ಯಾಪಾರಕ್ಕಾಗಿ ಊರಿಂದ-ಊರಿಗೆ ಅಲೆದಾಡಲು ಬಸ್ಸಿನ ಸೌಕರ್ಯ ಇರುತ್ತದೆ. ಪಟ್ಟಣದ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರಬಹುದೆಂಬ ಮನೋಭಾವನೆಯಿಂದ. ಬದುಕಿಗಾಗಿ ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಗಂಡು-ಹೆಣ್ಣು ಪ್ರತಿಯೊಂದು ಜೀವಿಗೂ ನಾಳಿನ ಉಪಜೀವನದ ಚಿಂತೆ ಸದಾ ಕಾಡುತ್ತಿರುತ್ತದೆ. ಎಷ್ಟೇ ದುಡಿದರೂ ಅವರ ಹೊಟ್ಟೆಪಾಡಿಗಾಗಿಯೇ ಹೊರತು ಜೋರಾಗಿ ಆದರೆ ಬಿಡಿಯ ಬದಲಿಗೆ ಸಿಗರೇಟು, ಮದ್ಯ, ಮಾಂಸ, ಸೇವನೆಯಂತಹ ಚಟಗಳು ಕಂಡುಬರುತ್ತವೆ.

ಗಂಡು-ಹೆಣ್ಣು ನಿರಂತರ ದುಡಿಮೆಯಲ್ಲಿ ತೊಡಗುತ್ತಾರೆ. ಗಂಡಸರು ಪ್ಲಾಸ್ಟಿಕ್ ಕೂಡ ಮಾರಾಟ, ಫ್ಯಾಕ್ಟರಿ ಕೆಲಸ, ಮನೆ ಕಟ್ಟಡ ಕೆಲಸ, ಹಮಾಲಿ, ಎತ್ತಿನಗಾಡಿ, ರಿಕ್ಷಾಗಳನ್ನು ಅವಲಂಬಿಸಿದರೆ, ಹೆಂಗಸರು ಟಿಕಳಿ, ಸ್ನೋಪೌಡರ್ ಚಾಪೆ ಹೆಣೆದು ಮಾರಾಟ ಮಾಡುವುದು. ಅಲ್ಲದೆ ನಗರದ ಸುತ್ತಮುತ್ತಲಿನಲ್ಲಿಯೇ ಪ್ಲಾಸ್ಟಿಕ್ ಕೂಡ ವ್ಯಾಪಾರ ಮಾಡುವರನ್ನು ರೂಢಿಸಿಕೊಂಡಿದ್ದಾರೆ.

ಇವರು ದೈನಂದಿನ ದುಡಿಮೆಗಾಗಿ ತಮ್ಮ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುವದು, ವ್ಯಾಪಾರಕ್ಕೆಂದು ಊರೂರು ಅಲೆದಾಡಲು ಹೋದಾಗ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಉಳಿದ ಮಕ್ಕಳನ್ನು ಗುಡಿಸಲಿನಲ್ಲಿಯೇ ಬಿಟ್ಟು ಹೋಗುವುದು, ಆ ಮಕ್ಕಳು ವಯಸ್ಸಿಗೆ ಬಂದಾಗ ಕುಟುಂಬದ ಬಾರ ತಾಳದಾಗದೆ ಮಕ್ಕಳನ್ನು ದುಡಿಮೆಗೆ ಸೇರಿಸುವುದು, ಇಂತಹ ಮಕ್ಕಳೆ ಬಾಲ ಕಾರ್ಮಿಕರಾಗಿ, ಭಿಕ್ಷಾ ವೃತ್ತಿಯನ್ನು, ಪ್ಲಾಸ್ಟಿಕ್ ಆಯುವುದನ್ನು ರೂಢಿಸಿಕೊಳ್ಳುತ್ತಿದ್ದಾರೆ. ಮಕ್ಕಳಿಂದ ಬರುವ ಆದಾಯದ ೧೦-೨೦ ರೂ ನಿರೀಕ್ಷಿಸಿ ಪೋಷಕರೆ ಅವರ ಭವಿಷ್ಯದ ಮೇಲೆ ಬರೆ ಎಳೆಯುತ್ತಿದ್ದಾರೆ.

ಮನೆಗಳು

ಅಲೆಮಾರಿಗಳ ಮನೆಗಳು ಇಂದಿಗೂ ಗುಡಿಸಲು ಮತ್ತು ಗುಡಾರಗಳಿಂದ ಕೂಡಿವೆ. ಅವರಿರುವ ಭೌತಿಕ ರಚನೆಯೇ ಅಲೆಮಾರಿಗಳೆಂದು ಸ್ಪಷ್ಟಪಡಿಸುತ್ತದೆ. ಮನೆಯಲ್ಲಿ ಬೆಲೆ ಬಾಳುವ ಯಾವ ವಸ್ತುಗಳು ಇರುವುದಿಲ್ಲ. ಹಗುರವಾದ ಸಾಮಾನು ಸಲಕರಣೆಗಳನ್ನು ಇಟ್ಟಿರುತ್ತಾರೆ. ಸರಳವಾದ ಜೀವನ ಸಾಗಿಸುತ್ತಾರೆ. ಅಡುಗೆಗಾಗಿ ಎರಡು-ಮೂರು ಪಾತ್ರೆ ಇಡೀ ಕುಟುಂಬಕ್ಕೆ ಒಂದೆ ಗುಡಿಸಲು, ಇಕ್ಕಟ್ಟಾದ ಗುಡಿಸಲ್ಲಿನಲ್ಲಿಯೇ ಮಲಗಿಕೊಳ್ಳುತ್ತಾರೆ. ಇಲ್ಲದಿದ್ದರೆ ಸರಕಾರಿ ಕಟ್ಟಡಗಳ ಛಾವಣಿಯನ್ನು ಆಶ್ರಯಿಸುತ್ತಾರೆ. ಮನೆಯ ಹೊರಗಡೆಯೇ ಅಡುಗೆ ಮಾಡಬೇಕು. ಹೆಚ್ಚಾಗಿ ಪ್ಲಾಸ್ಟಿಕ್ ಮತ್ತು ಹಿತ್ತಾಳೆ ಸಾಮಾನುಗಳನ್ನೆ ಬಳಕೆ ಮಾಡುತ್ತಾರೆ. ಅಂದಂದಿನ ದುಡಿಮೆ ಅಂದಂದಿಗೆ ಆಹಾರವಾಗಿರುವುದರಿಂದ ಮಳೆಗಾಲದಲ್ಲಿ ಇವರ ಸ್ಥಿತಿ- ಹೇಳತೀರದು. ಕೈಗೆ ಕೆಲಸವಿಲ್ಲದೆ ಅನ್ನಸಿಗದಿದ್ದರೂ ಉಪವಾಸ. ಅನ್ನ ಬೆಯಿಸಿಕೊಳ್ಳಲು ಬಯಲನ್ನೆ ಆಶ್ರಯಿಸಿದ್ದರಿಂದ ಮಳೆಯಲ್ಲಿ ಕಟ್ಟಿಗೆ ತೊಯ್ದರು ಉಪವಾಸ. ಇಂತಹ ಸ್ಥಿತಿಯಲ್ಲಿ ಅಲೆಮಾರಿಗಳು ಜೀವನ ಸಾಗಿಸುತ್ತಿದ್ದಾರೆ.

“ಭಾರತೀಯ ಸಂವಿಧಾನ ಅನುಚ್ಛೇದ – ೪೭ ರಲ್ಲಿ ಪ್ರಜೆಗಳ ಆಹಾರ ಪುಷ್ಠಿಯ ಮಟ್ಟ ಹೆಚ್ಚಿಸುವುದು. ಜೀವನ ಮಟ್ಟ ಹೆಚ್ಚಿಸುವುದು ರಾಜ್ಯದ ಪ್ರಥಮ ಕರ್ತವ್ಯವಾಗಿದೆ” ಎಂದು ಹೇಳಲಾಗುತ್ತದೆ. (ಆರಾಧ್ಯ) ಆಹಾರವೆ ಸಿಗದಿದ್ದಾಗ ಪುಷ್ಠಿಯ ಮಟ್ಟ ಎಲ್ಲಿಯದು? ಸರಕಾರದ ಪುಷ್ಠಿಯ ಗುಣ ಶಾಲಾ ಮಕ್ಕಳ ಬಿಸಿಯೂಟದಂತೆ ಜೀವನ ಮಟ್ಟ ರೈತರ ಆತ್ಮಹತ್ಯೆಯನ್ನು ಹೆಚ್ಚಿಸಿದಂತೆ ಸಾಮಾನ್ಯ ನಾಡಾಡಿಗಳ ಪಾಡೇ ಹೀಗಿರುವಾಗ ಅಲೆಮಾರಿಗಳು ಯಾವ ಮಟ್ಟದಲ್ಲಿರಬೇಕೆಂಬ ಸಂಗತಿ ಚಿಂತಿಸಬೇಕಾದಂತಹ ವಿಷಯ ನಮ್ಮ ಮುಂದಿದೆ.

ಮೂಲಭೂತ ಸೌಲಭ್ಯಗಳ ಕೊರತೆ

ಊರಿನ ಸುಡುಗಾಡಿನಂತಹ ಪ್ರದೇಶದಲ್ಲಿ ಬದುಕುವ ಸ್ಥಿತಿ ಸಹಜವಾಗಿ ಕಣ್ಮರೆಯಾಗುತ್ತಿದೆ. ಇವರನ್ನು ಸಂದರ್ಶಿಸಿದಾಗ ತಮ್ಮ ಹಿರಿಯರು ಯಾವ ಊರಲ್ಲಿಯೂ ನೆಲೆ ನಿಲ್ಲದೆ ಅಲೆಮಾರಿಗಳಾಗಿಯೇ ಬಂದಿದ್ದಾರೆ. ನಾವಾದರೂ ಒಂದು ಕಡೆ ನೆಲೆ ನಿಲ್ಲಬೇಕು ಎಂದು ಹೇಳುತ್ತಾರೆ. ಕಳೆದ ಹತ್ತು ವರ್ಷಗಳಿಂದ ಅಲ್ಲಲ್ಲಿ ನೆಲೆ ನಿಂತು ಬದುಕಬೇಕೆಂಬ ಕಾತುರದಲ್ಲಿದ್ದಾರೆ.

ಈಗಾಗಲೆ ಕೆಲವು ಕಡೆ ನೆಲೆ ನಿಲ್ಲಬೇಕೆಂದು ಬಯಸಿ ವಾಸಿಸುತ್ತಿರುವಂತಹ ಸ್ಥಳದ ಪರಿಸ್ಥಿತಿಯು ಹದಗೆಟ್ಟಿರುವಂತದ್ದು, ಸಾಮಾನ್ಯ ಮನುಷ್ಯ ಬದುಕಬೇಕಾದ ಮೂಲಭೂತ ಸೌಲಭ್ಯಗಳು ಅಲ್ಲಿಲ್ಲ. ರಸ್ತೆ, ಚರಂಡಿ, ಬೀದಿ ದೀಪ, ವಿದ್ಯುತ್ ಇವ್ಯಾವು ಕಾಣುವುದಿಲ್ಲ. ಕೊಚ್ಚೆ ಗುಂಡಿಗಳಲ್ಲಿಯೇ ವಾಸವಾಗಿದ್ದಾರೆ. ನಗರ ಪ್ರದೇಶಗಳ ಮಧ್ಯೆ ವಾಸಿಸುವಂತಹ ಅಲೆಮಾರಿ ಸಮುದಾಯಗಳನ್ನು ಬೇರೆ ಕಡೆಗೆ ವರ್ಗಾಯಿಸುವ ಹುನ್ನಾರಗಳು ನಡೆಯುತ್ತಿರುತ್ತವೆ.

ಬೇಟೆ

ಅಲೆಮಾರಿಗಳು ನಗರವಾಗಿರಲಿ, ಪಟ್ಟಣವಾಗಿರಲಿ ಊರಾಚೆಯ ಅಂಚಿನಲ್ಲಿಯೇ ಬದುಕುವವರು. ಅವರಿಗೆ ಪ್ರತ್ಯೇಕವಾದಂತಹ ಸ್ಥಳವೆ ಬೇಕು. ನಗರದಲ್ಲಿಯಾದರೂ ಇವರನ್ನು ಅಲೆಮಾರಿಗಳೆಂದು ಇವರ ಇರುವಿಕೆಯಿಂದಲೆ ಗುರುತಿಸುವಷ್ಟು ಸ್ಪಷ್ಟತೆ ಕಾಣುತ್ತೇವೆ. ಇವರಲ್ಲಿರುವ ಬೇಟೆಯ ಸಾಧನ ಸಾಮಗ್ರಿಗಳಿಂದ, ಒಂದು ಕಾಲದಲ್ಲಿ ಬೇಟೆಯೇ ಪ್ರಧಾನವಾಗಿದ್ದ ಅಲೆಮಾರಿಗಳಲ್ಲಿ ಇಂದು ಕ್ರಮೇಣ ಕಡಿಮೆಯಾಗುತ್ತಾ ಬರುತ್ತಿದೆ. ಅದೊಂದು ಹವ್ಯಾಸದ ಜೊತೆಗೆ ಅನಿವಾರ್ಯವು ಕೂಡ ಎನಿಸುತ್ತದೆ. ದೈನಂದಿನ ಆಹಾರ ಸಂಗ್ರಹಣೆಗೆ ಮಾಡಿಕೊಳ್ಳುವ ಇವರು ಒಂದೇ ದಿನ ಕೂಲಿ ಕೆಲಸ ಇಲ್ಲದಿದ್ದರೂ ಆ ದಿನ ಮನೆಯಲ್ಲಿ ಸೋಮಾರಿತನದಿಂದ ಕಾಲ ಕಳೆಯುವುದಿಲ್ಲ. ಬೇಟೆಯಾಡಲು ಹೋಗುತ್ತಾರೆ. ಮೊಲ, ಕೌಜುಗ, ಪಾರಿವಾಳ, ಮೀನು, ಮುಂತಾದವುಗಳನ್ನು ಹಿಡಿದು ತರುತ್ತಾರೆ. ಅಲೆಮಾರಿಗಳ ಗುಂಪಿನಲ್ಲಿ ಯಾರೆ ಬೇಟೆಯಾಡಿಕೊಂಡು ಬಂದರೂ ಅನ್ಯೋನ್ಯವಾಗಿ ಹಂಚಿಕೊಂಡು ತಿನ್ನುವಂತಹ ಬಂಧುತ್ವ ಅವರಲ್ಲಿದೆ.

ಶಿಕ್ಷಣದ ಕೊರತೆ

ಅಲೆಮಾರಿ ಸಮೂಹಗಳಲ್ಲಿ ಬಹು ದೀರ್ಘಕಾಲದಿಂದ ಒಂದೇ ಸ್ಥಳದಲ್ಲಿ ನೆಲೆ ನಿಂತ ಕುಟುಂಬಗಳ ಮಕ್ಕಳು ಮಾತ್ರ ಶಿಕ್ಷಣ ಪಡೆದವರಾಗಿದ್ದಾರೆ. ಅದು ಬೆರಳೆಣಿಕೆಯಷ್ಟು ಮಾತ್ರ. ಇಡೀ ಸಮೂಹದ ಅದೆಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಲ್ಲಿರುವ ಹೊಟ್ಟೆಪಾಡಿನ ಬಡಿದಾಟ. ನೆಲೆಸಿರುವಂತಹ ಪರಿಸರ, ಅತಿಯಾದ ಮಕ್ಕಳ ಸಂಖ್ಯೆ ಇವೆ ಶಿಕ್ಷಣಕ್ಕೆ ಅಡ್ಡಿ ಮಾಡಿವೆ. ಕಡ್ಡಾಯ ಶಿಕ್ಷಣ ಗೊತ್ತಿಲ್ಲ. ಶಿಕ್ಷಣ ಅಭಿಮಾನದಂತಹ ಸೌಲಭ್ಯಗಳು ಸಿಗುವ ಮಾಹಿತಿ ಇಲ್ಲ. ಇವರಿಗಿರುವ ಆರ್ಥಿಕ ದುಸ್ಥಿತಿಯಿಂದ ಮಕ್ಕಳ ದುಡಿಮೆ ಬಯಸುವ ಪೋಷಕರೆ ಹೆಚ್ಚಾಗಿದ್ದಾರೆ.

ಶಿಕ್ಷಣ ಮಾನವನ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. “ನಿಮ್ನ ವರ್ಗಗಳಂತೂ ಶಿಕ್ಷಣ, ಹೋರಾಟ ಮತ್ತು ಸಂಘಟನೆಯಿಂದಲೆ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕು”. ಇಂದು ಆಧುನಿಕತೆಯ ತಂತ್ರಜ್ಞಾನದಿಂದ ಲೋಕವೆ ಒಂದು ಮುಷ್ಠಿಯಲ್ಲಿ ಹಿಡಿದಿಡುವಾಗ ಶಿಕ್ಷಣದಿಂದ ಬಹುದೂರ ಉಳಿದಿರುವ ನಿರ್ಗತಿಕ ಅಲೆಮಾರಿಗಳ ಮಕ್ಕಳು ಚಿಂದಿ ಪ್ಲಾಸ್ಟಿಕ್ ಆಯುವಂತಹ ಸ್ಥಿತಿಯನ್ನು ಇನ್ನೂ ಜೀವಂತವಾಗಿಯೇ ಇದೆ.

ಅಲೆಮಾರಿಗಳು ಎರಡು-ಮೂರು ಭಾಷೆ ಬಲ್ಲವರಾಗಿದ್ದರಿಂದ ಪ್ರದೇಶದಿಂದ ಪ್ರದೇಶಕ್ಕೆ ಅಲೆದಾಡುವ ಸಂದರ್ಭದಲ್ಲಿ ಬಹು ಭಾಷೆ ತುಂಬಾ ಅಗತ್ಯ. ತೆಲುಗು, ಮರಾಠಿ, ಕನ್ನಡ ಅಲ್ಲದೆ ತಮ್ಮದೆಯಾದ ಭಾಷೆಯನ್ನು ಇಂದಿಗೂ ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳಿಗೆ ಯಾವ ಭಾಷೆಯಲ್ಲಿ ಶಿಕ್ಷಣ ಕೂಡಿಸಬೇಕೆಂಬ ಅಸಡ್ಡೆಯಿಂದಲೂ ದೂರ ಉಳಿದಿರುವ ಸಾಧ್ಯತೆಗಳಿವೆ.

ಸ್ವಾತಂತ್ರ್ಯ ಬಂದು ಅರವತ್ತರ ದಶಕದಲ್ಲಿದ್ದರೂ ಇನ್ನೂ ಅತಂತ್ರ ಸ್ಥಿತಿಯಲ್ಲಿಯೇ ಬದುಕುವಂತಹ ಸಮೂಹಗಳು ನಮ್ಮ ಮುಂದಿವೆ. ಅಲೆಮಾರಿಗಳ ಭವಿಷ್ಯದ ಬದುಕು ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವ ಜರೂರಿ ಆಗಬೇಕಾಗಿದೆ.

ಸರಕಾರ ಮತ್ತು ಅಲೆಮಾರಿಗಳು

ಸರಕಾರ ಅಲೆಮಾರಿಗಳಿಗಾಗಿ ಅನೇಕ ರೀತಿಯ ಯೋಜನೆಗಳನ್ನು ಹಾಕಿಕೊಂಡರು ಯೋಜನೆಯ ಫಲಶೃತಿಯಾಗುತ್ತಿಲ್ಲ. ಅಲೆಮಾರಿಗಳಾಗಿದ್ದಂತವರಿಗೆ ಆಶ್ರಯ ಯೋಜನೆಯಂತಹ ಒಂದು ಮನೆಯಾದರೆ ಸಾಕೆ? ನಿಶ್ಚಿತ ನೆಲೆಯಿಂದ ಅಲೆಮಾರಿಗಳನ್ನು ಒಂದು ಕಡೆ ನಿಲ್ಲಿಸಲು ಸಾಧ್ಯವಿಲ್ಲ. ಅನ್ನ, ಬಟ್ಟೆಯ ಪೂರೈಕೆಯಾಗಬೇಕು. ಹಾಗಾಗಿ ಇವೆಲ್ಲವನ್ನು ನೀಗಿಸಲು ದುಡಿಯುವ ಕೈಗಳಿಗೆ ಕೆಲಸ ಕೊಟ್ಟಾಗ ಮಾತ್ರ ಸಾಧ್ಯವಾಗುತ್ತದೆ. ದೇಶದ ಬಡತನ ಎಲ್ಲಿಯವರೆಗೆ ನಿರ್ಮೂಲನೆ ಆಗುವುದಿಲ್ಲವೋ, ಅಲ್ಲಿಯವರೆಗೂ ಅಲೆಮಾರಿಗಳು ಅತಂತ್ರ ಸ್ಥಿತಿಯಿಂದಲೆ ಬದುಕಬೇಕಾಗುತ್ತದೆ ಎನಿಸುತ್ತದೆ.

ಅಲೆಮಾರಿಗಳಿಗೆ ಸರಕಾರದ ಸೌಲಭ್ಯ ದಕ್ಕಬೇಕಾದರೆ ಒಂದೇ ಸ್ಥಳದಲ್ಲಿ ವಾಸ ಮಾಡಬೇಕು. ಇಂತಹ ಸೌಲಭ್ಯವನ್ನು ಬಹಳ ದಿನಗಳಿಂದ ನೆಲೆಸಿರುವ ಅಲೆಮಾರಿಗಳು ಪಡೆದುಕೊಂಡು, ನಿರ್ಗತಿಕರಾದ ಅಲೆಮಾರಿಗಳಿಗೆ ಯಾವುದು ಸಿಗುವುದೇ ಇಲ್ಲ. ಸರಕಾರದ ಸೌಲಭ್ಯಕ್ಕೆ ಕಡ್ಡಾಯವಾಗಿ ವಾಸಸ್ಥಳ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಬೇಕು. ಅಲೆಮಾರಿಗಳಲ್ಲಿ ಈ ಎಲ್ಲಾ ಪ್ರಮಾಣ ಪತ್ರಗಳು ಎಲ್ಲಿಂದ ತರಬೇಕು ಎಂದು ಕೇಳುವವರೆ ಇದ್ದಾರೆ. ಇದರ ಪರಿಪೂರ್ಣ ಮಾಹಿತಿ ಅವರಿಗಿಲ್ಲ. ಅಲೆಮಾರಿಗಳಲ್ಲಿಯೇ ಇನ್ನೂ ಅಲೆಮಾರಿತನ ಮುಂದುವರೆಸಿಕೊಂಡು ಬರುತ್ತಿರುವವರಿಗೆ ಸರಕಾರದ ಹೆಚ್ಚಿನ ಸೌಲಭ್ಯ ಲಭ್ಯವಾಗಬೇಕು. ಬ್ಯಾಂಕಿನ ಸಾಲ, ವೃದ್ಧಾಪ್ಯವೇತನ, ಜವಾಹರ ರೋಜಗಾರ ಯೋಜನೆಯ ಸಾಲ, ಪ.ಜಾ. ಪ.ಪಂ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಅಲೆಮಾರಿಗಳಿಗೆ ಮೊದಲ ಆದ್ಯತೆ ಕೊಡಬೇಕು. ಅವರ ಜೀವನಮಟ್ಟ ಹೆಚ್ಚಿಸುವಂತಹ ಕಡೆಗೆ ಗಮನ ಕೊಡಬೇಕು. ಇಲ್ಲಿಯವರೆಗೂ ಇವರು ಆಶ್ರಯ ಯೋಜನೆಯ ಮನೆಗಳ ಮಿತಿಯಲ್ಲಿಯೇ ಇದ್ದಾರೆ. ಅದು ಕೂಡ ಪರಿಪೂರ್ಣವಾಗಿ ದಕ್ಕಿಲ್ಲ.

ನಿರಾಶ್ರಿತರ ಸಮುದಾಯಗಳ ಕ್ಷೇಮಾಭಿವೃದ್ಧಿಗಾಗಿ ರೂಪಗೊಂಡ ಸರಕಾರದ ಯೋಜನೆಗಳು ಮಧ್ಯವರ್ತಿಗಳ ಪಾಲಾಗುವುದನ್ನು ತಪ್ಪಿಸಬೇಕು. ಅದಕ್ಕಾಗಿ ಕಟ್ಟುನಿಟ್ಟಿನ ಕ್ರಮ ಅಗತ್ಯ. ಅಲ್ಲದೆ ಆ ಸಮುದಾಯಗಳ ಜೊತೆ ನೇರ ಸಂಪರ್ಕ ಬೆಳೆಸುವುದರಿಂದಲೂ ಸೌಲಭ್ಯಗಳನ್ನು ತಲುಪಿಸಬಹುದು.

ಆಧುನಿಕತೆಯ ಸ್ಪಂದನೆಯಲ್ಲಿ ಅಲೆಮಾರಿಗಳು

ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ಇವರು ನಂಬಿಕೊಂಡು ಬಂದಿರುವ ಕ್ರೂರ ಆಚರಣೆಗಳು, ನಂಬಿಕೆಗಳು, ಸಂಪ್ರದಾಯಗಳು ಮರೆಯಾಗುತ್ತಿವೆ. ಅವುಗಳಿಂದ ಯಾವ ಪ್ರಯೋಜನವು ಇಲ್ಲವೆಂಬ ನಿಲುವು ತಾಳಿದ್ದಾರೆ. ಹಿಂದಿನ ವ್ಯವಸ್ಥೆಯನ್ನು ಅಲ್ಲಗಳೆದು ಇಂದಿನ ಯುವ ಶಕ್ತಿಗಳು ಆಲೋಚನೆ ಮಾಡುವ ಹಂತ ತಲುಪಿದ್ದಾರೆ. ಇಪ್ಪತ್ತು ವರ್ಷಗಳ ಹಿಂದಿನ ಸ್ಥಿತಿ ಈಗಿರುವ ಯಾವುದೇ ಅಲೆಮಾರಿಗಳಲ್ಲಿ ಕಾಣುವುದಿಲ್ಲ. ಸಂಪೂರ್ಣ ಅಲ್ಲದಿದ್ದರೂ ಬದಲಾಗುತ್ತಿರುವ ಹಂತದಲ್ಲಿದ್ದಾರೆಂದು ಹೇಳಬಹುದು.

ಸಮೂಹ ಸಂವಹನ ಮಾಧ್ಯಮಗಳು ಬಳಕೆ ಮಾಡಿಕೊಳ್ಳುವುದರಿಂದ ಆಧುನಿಕತೆಯ ಗಾಳಿ ಈ ಜನರ ಮೇಲೂ ತೀವ್ರವಾದ ಪ್ರಭಾವ ಬೀರಿದೆ. ಇನ್ನುಳಿದ ಸಮಾಜದವರಂತೆ ಈ ಸಮಾಜವು ಪರಿವರ್ತನೆಗೊಳ್ಳುತ್ತಿವೆ. ಸಮಕಾಲೀನ ಸಮಾಜದ ಆಚಾರ, ವಿಚಾರ, ಸಂಪ್ರದಾಯಗಳಿಂದ ಇಂದಿನ ಯುವ ಪೀಳಿಗೆಯವರು ಸಾಕಷ್ಟು ಪ್ರಭಾವಿತರಾಗುತ್ತಿದ್ದಾರೆ. ಇವರಲ್ಲಿ ಹಿಂದಿನ ಪರಂಪರೆ ಉಳಿಸಿಕೊಂಡು ಬರಬೇಕೆಂಬ ಆಸಕ್ತಿ ಖಂಡಿತವಾಗಿಯೂ ಉಳಿದಿಲ್ಲ. ಭಿಕ್ಷಾವೃತ್ತಿಯನ್ನು ಬದಿಗೊತ್ತಿದ್ದಾರೆ. ಸ್ವಾಭಿಮಾನದಿಂದ ಬದುಕಬೇಕೆಂಬ ಛಲ ಹೊತ್ತಿದ್ದಾರೆ. ತಮ್ಮ ಹಿರಿಯರ ಜೊತೆ ಅನುಭವಿಸಿದ ಸಾಮಾಜಿಕ ಅವಮಾನಗಳನ್ನು ಮೆಲಕು ಹಾಕುತ್ತಾರೆ. ಆ ಸ್ಥಿತಿ ಬೇಡವೆಂಬ ಅಲೆಮಾರಿಗಳ ಬದುಕು ನಮ್ಮಲ್ಲಿ ಆಶಾಭಾವನೆಯನ್ನು ಮೂಡಿಸುತ್ತವೆ.

ಗ್ರಂಥಗಳು

೧. ಡಾ. ಪಿ.ಕೆ. ಖಂಡೋಬಾ, ಸುಡುಗಾಡು ಸಿದ್ಧರ ಸಂಸ್ಕೃತಿ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೨. ಗೀತಾ ನಾಗಭೂಷಣ, ದುರುಗ ಮುರುಗಿ ಸಂಸ್ಕತಿ,ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೩. ಡಾ. ಹರಿಲಾಲ್ ಪವಾರ್, ಹಳವರು ಒಂದು ಅಧ್ಯಯನ, ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು.

೪. ಡಾ. ಟಿ.ಎಂ. ಭಾಸ್ಕರ್, ಸುಡುಗಾಡು ಸಿದ್ಧರು, ಮುರುಗ ಪ್ರಕಾಶನ, ಗುಲಬರ್ಗಾ.

೫. ರಾಜಪ್ಪ ದಳವಾಯಿ, ಹಕ್ಕಿಪಿಕ್ಕಿಯರು, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೬. ಯಳನಾಡು ಅಂಜನಪ್ಪ, ಹಗಲು ವೇಷಗಾರರು, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೭. ವೀ.ಸಿ. ಮಾರುತಿ, ಗೋಸಂಗಿಗಳು, ಅಪ್ರಕಟಿತ ಪಿಎಚ್‌.ಡಿ. ಪ್ರಬಂಧ.

೮. ಡಾ. ದೇವೇಂದ್ರ ಕುಮಾರ.ಸಿ., ಡೊಂಬರ ಸಂಸ್ಕೃತಿ, ಹಕಾರಿ, ಕನ್ನಡ ಸಾಹಿತ್ಯ ಅಕಾಡೆಮಿ, ಬೆಂಗಳೂರು.

ವಕ್ತೃಗಳು

೧. ನಾಗೇಶ, ಹಗಲು ವೇಷಗಾರ ಸಮುದಾಯ, ಹೊಸಪೇಟೆ.

೨. ಶಿವಪ್ಪ, ಹಗಲು ವೇಷಗಾರ ಸಮುದಾಯ, ಹೊಸಪೇಟೆ.

* * *