ನಾನು ಈಗ ಬಹಳ ಪ್ರಕಾಶವಾದ ಬ್ಯಾಟರಿ ಬೆಳಕಿನಲ್ಲಿ ಮಿಣುಕು ದೀಪದಂತೆ ನಿಂತಂತಾಗಿದೆ ಆದ್ರೂ ಕೂಡ ನಾನು ನಾಲ್ಕು ಉಪನ್ಯಾಸಗಳಾದ ಮಾನವ ಸಂಬಂಧಿ ಲೋಕದೃಷ್ಟಿ ಮತ್ತು ದೈವಸಂಬಂಧಿ ಲೋಕದೃಷ್ಟಿ ವ್ಯತ್ತಿ ಸಂಬಂಧಿ ಲೋಕದೃಷ್ಟಿ ಇವುಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಾನು ಬೀದರ್ ಜಿಲ್ಲೆಗೆ ಅನ್ವಯಿಸಿದಂತೆ ನಾನು ಕಂಡ ಕೆಲವು ಅಲೆಮಾರಿಗಳ ಕುರಿತು ನನ್ನ ಅಭಿಪ್ರಾಯವನ್ನು ಮಂಡಿಸುತ್ತೇನೆ. ನಮ್ಮ ಜಿಲ್ಲೆಯಲ್ಲಿ ನಾನು ನೋಡಿದ ಅಲೆಮಾರಿಗಳನ್ನು ದಾಸರು, ಗೊಲ್ಲರು ಪ್ರಮುಖರು. ಇವರೆ ಬಾಳ ಸಂತರು ಎಂದು ಕೆಲವರು ಹೇಳ್ತಾರೆ. ಗೊಲ್ಲರಲ್ಲಿ ಎರಡು ಬಗೆ, ಕರಣೆ ಗೊಲ್ಲರು. ಯಾರಾ ಗೊಲ್ಲರು ಅಂತ. ಈ ಪ್ರಕಾರದ ಜನ ಮುಡಗಿವಾಗಿ, ಕಿಚಣಿವಾಡಿಗಿ. ಚಿಕನಗಾವಾಡಿ, ವಿಠಲಪುರ, ವಿಷವಾಲಪುರ ಸುತ್ತಮುತ್ತಲ ಪ್ರದೇಶದಲ್ಲಿ ವಾಸ ಮಾಡುತ್ತಾರೆ. ಇವರು ಮೂಲದಲ್ಲಿ ಗಂಗೆತ್ತು ಆಡಿಸುವರು. ಇವರು ಸಂಪೂರ್ಣ ಸ್ಥಾಯಿಯಾಗಿ ನೆಲಸಿದ್ದು ಕೂಡ ಆಗಾಗ ಉದ್ಯೋಗ ಅರಸಿಕೊಂಡು ನಗರಕ್ಕೆ ಹೋಗುವುದು ಖಚಿತ. ಮುಡುಬಿ ಭಾಗದಲ್ಲಿ ಏಕಬೆಳೆ ಕೃಷಿ ಇದ್ದ ಕಾರಣ ಅವರು ಕೃಷಿ ಮುಗಿಸಿ ಮುಂಬೈ, ಬೆಂಗಳೂರು, ಗೋವ, ಮುಂತಾದ ಕಡೆ ವಲಸೆ ಹೋಗುತ್ತಾರೆ. ಅವರು ಎಷ್ಟು ಜಾಣರೆಂದರೆ ನಾಲ್ಕೈದು ಭಾಷೆ ಮಾತಾಡ್ತಾರೆ. ಅವರ ಮಾತೃಭಾಷೆ ತೆಲುಗು ಇದ್ರೂ ಕೂಡ ಕನ್ನಡ ಭಾಷೆಗೂ ಒಗ್ಗಿಕೊಂಡಿದ್ದಾರೆ. ಆದ್ರೂ ಈವರೆಗೂ ಅಲೆಮಾರಿತನವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ೧೯೯೨-೯೩ರ ಸುಮಾರಿನಲ್ಲಿ ನಾನು ದಕ್ಷಿಣದ ಐದು ರಾಜ್ಯಗಳ ಪ್ರತಿನಿಧಿಗಳ ಜೊತೆಯಲ್ಲಿ ಮಧ್ಯಪ್ರದೇಶಕ್ಕೆ ಮಧ್ಯವರ್ತಿಗಳಾಗಿ ಹೋಗಿದ್ದೆ. ಹೋದಾಗ ಅಲ್ಲಿ ಒಂದು ಜನಾಂಗ ನೋಡಿದೆ. ಅವರ ಜಾತಿ ‘ಹುರ್ಕು’ ಅಂತ, ಅವರದು ಕನ್ನಡ ತೆಲುಗು ತಮಿಳು ಮಿಕ್ಸ್ ಆಗಿರುವಂತಹ ಭಾಷೆ. ಅವರುಅವರದೇ ಪ್ರಕಾರದ ಒಂದು ಅಡುಗೆ ಮಾಡಿದ್ರು ಗೋದಿ ಹಿಟ್ಟಿನಲ್ಲಿ ಕೂಕದ ಮುದ್ದೆ ಮಾಡಿದ್ರು, ಅದನ್ನು ಸುಟ್ಟಿ ಮಾಡ್ತಾರೆ. ಅವ್ರು ಅಡುಗೆ ಮಾಡುವುದರಲ್ಲಿ ನಿಷ್ಣಾತರು ಎನ್ನುವುದನ್ನು ತೋರಿಸಿಕೊಟ್ಟರು. ಅವರ ಭಾಷೆ ಕೇಳಿದಾಗ ನನ್ನ ಕನ್ನಡ ಭಾಷೆ ಕೇಳಿದಂತಾಗುತ್ತದೆ. ಅವ್ರು ಇಲ್ಲಿಗ್ಯಾಕೆ ಬಂದ್ರು ಅಂತ ಗೊತ್ತಾಗಲಿಲ್ಲ. ಅದು ಸಂಶೋಧಕರಿಗೆ ಬಿಟ್ಟಿದ್ದು. ನಮ್ಮಲ್ಲಿ ಕುರುಬರು ಇದ್ದಾರೆ. ಈಗಾಗಲೇ ಎಣ್ಣೀ ಕಂಕಣ, ಅತ್ತಿಕಂಕಣದವರು ಇದ್ದಾರೆ. ಇವರು ಮೊದಲು ಗೊಂಡರು. ಬ್ರಾಹ್ಮಣೀಕರಣಕ್ಕೆ ಮಾರುಹೋಗಿ ‘ರಾವ್’ನ್ನು ತಮ್ಮ ಹೆಸರಿಗೆ ಹಚ್ಚಿಕೊಂಡ್ರು. ಲಿಂಗಾಯಿತಿಕರಣ ಮಾರುಹೋಗಿ ತಮ್ಮ ಹೆಸರಲ್ಲಿ ಅಪ್ಪ ಹಚ್ಚಿಕೊಂಡ್ರು. ಇದರಿಂದ ಶಂಕರಗೊಂಡ, ಶಂಕರರಾವ್ ಶಂಕರಪ್ಪ ಆದ ಭೀಮಗೊಂಡ ಭೀಮ್‌ರಾವ್, ಭೀಮಪ್ಪ, ಭೀಮಣ್ಣ ಆದ. ಹೀಗೆ ಗೊಂಡರು ತಮ್ಮ ಗೊಂಡತನವೆಲ್ಲಾ ಹಾಳಾದಾಗ ತಾವು ಗೊಂಡರು ಇದ್ದೀವಿ ಅಂತ ಹೇಳಿಲಿಕ್ಕೆ ಪ್ರಯತ್ನ ಪಡ್ಲಿಕ್ಕೆ ಹತ್ತಿದ್ರು. ಅವರ ಮೂಲಗಳೆಲ್ಲ ಬೀದರ್ ಜಿಲ್ಲೆಯಲ್ಲಿ ಹಾಳಾಗಿ ಹೋದವು. ಹಾಗಾಗಿ ತಹಸೀಲ್ದಾರರು ಕುರುಬರಿಗೆ ಗೊಂಡ ಅಂತ ಪ್ರಮಾಣ ಪತ್ರ ಕೊಡುವಲ್ಲಿ ಹಿಂದು ಮುಂದು ನೋಡ್ತಾರೆ. ನಮ್ಮಲ್ಲಿಯ ಜಂಗಮರು ೧೨ನೇ ಶತಮಾನದಲ್ಲಿ ಲಿಂಗಾಯಿತರಾದವರು ಸವಲತ್ತುಗಳ ಆಸೆಯಿಂದ ‘ಬೇಡ ಜಂಗಮ’ರಾಗಲು ಪ್ರಯತ್ನಿಸುತ್ತಿದ್ದಾರೆ. ಇದು ಒಂದು ವೈಶಿಷ್ಟ್ಯ. ನಮ್ಮಲ್ಲಿ ಗೊಂಬೆ ಆಟದವಂದ್ರು ಅವರು ಮಾಯ ಆಗ್ಯಾಕ. ನಾನು ಸಣ್ಣವನಿದ್ದಾಗ ಆ ಗೊಂಬೆ ಆಟದವರು ಗೊಂಬೆ ಆಡಿಸಲು ಬಂದಿದ್ರು. ಆಗ ಒಂದು ಹಾಡು ಹಾಡಿದ್ರೂ ಅದು ಈಗ್ಲೂ ನನ್ನ ನೆನಪಿನಲ್ಲಿ ಉಳಿದಾದ ಅದೇನಂದ್ರೆ “ಸೀತೆ ಸುದ್ದಿ ತಂದೀವಿ ಎಲಗಾರ ಮನೆ ಮುಂದೆ ಕುಂತೇವ” ಅಂತ ಹಾಡಿದರು. ನಾಟಕ ಏನು ನಡೆದಿತ್ತು ಅದು ‘ಎಲಗಾರ’ ಮನೆ ಮುಂದೆ ನಡೆದಿತ್ತು. ಹಾಗಾಗಿ ಅವರು ‘ಎಲಗಾರ’ ಮನೆ ಮುಂದೆ ಎಂದು ಹಾಡಿದ್ದರು. ಆದ್ರೆ ಅವ್ರು ಹೇಳಿದ ಕಥೆ. ಈಗ್ಲೂ ನನಗೆ ರುಚಿಕಟ್ಟ ಅನ್ನಸ್ತದ. ಅವರು ಹಾಡಿನಲ್ಲಿ ಒಂದು ಕಥೆ ಹೇಳ್ತಿದ್ರು ಒಂದು ಪಟ್ಟಿ ಹಡಿತೀದ್ರು. ಒಂದು ಲೋಹ ತಟ್ಟೆಯ ಮೇಲೆ ಅದರ ಮೇಲೆ ಒಂದೊಂದು ತಾರೆ ಎಳಿತಿದ್ರು. ಒಂದೊಂದು ಕೈ ಎಳೆದಂತೆ ಒಂದೊಂದು ರಾಗ ಬರ್ತಿತ್ತು. ಶೃತಿ ಪೆಟ್ಟಿಗೆಯ ಸೂರಿನಂತೆ ರಾಗ ಬರ್ತಿತ್ತು. ಆ ರಾಗಕ್ಕೆ ತಕ್ಕಂತೆ ಅವರು ಧನಿ ಅಷ್ಟೇ ಮಟ್ಟದಲ್ಲಿತ್ತು. ಆದ್ರೆ ಈ ಕಲೆ ಈಗ ಮಾಯವಾಗಿತ್ತು. ಇನ್ನು ಬುಡುಬುಡಿಕೆಯವರನ್ನು ಜ್ಯೋಶಿ ಅಂತಲೂ ಕರೆಯುತ್ತಾರೆ. ಅವರು ಮೊದಲು ಜ್ಯೋತಿಷ್ಯ ಹೇಳುತ್ತಿದ್ದರು. ಈಗ ಅವರು ಬಂಡೇವು ಅಂಗಡಿ ಇಟ್ಟುಕೊಂಡಿದ್ದಾರೆ. ಈಗ ಅವರು ಆಗಾಗ ತಮ್ಮ ವೃತ್ತಿಯನ್ನು ಮಾಡುವುದೂ ಉಂಟು. ‘ಸಂತ’ ಅಂತ ಗುಲ್ಬರ್ಗ ಜಿಲ್ಲೆಯಲ್ಲಿದೆ. ಅಲ್ಲಿ ಈ ಜೋಶಿಯಗಳು ಬಹಳ. ಅಲ್ಲಿ ಬುಡುಬುಡಿಕೆಯವರು ಬಹಳ. ನಮ್ಮ ಇದರಲ್ಲಿ ಬಳಕೆಯಲ್ಲಿದ್ದ ಮಾತೆಂದರೆ ಬುಡಿಬುಡಿಕ್ಯಾನ ಮಾತು ಬುಡದಾಗೆ ಸುಳ್ಳಂತೆ” ಈ ಮಾತು ಆ ಬುಡು ಬುಡಿಕ್ಯಾನ ಕುರಿತು ಹೇಳಿದ್ದು ಈ ಮಾತು. ಬುಡುಬುಡಿಕೆಯವರು ಹೇಳೋದೆಲ್ಲ ನಿಜವಲ್ಲ ಅನ್ನುವಂತದ್ದು. ಈ ಚೆಂಚರಿಗೂ ಬೀದರಿ ಜಿಲ್ಲೆಯಲ್ಲಿ ಬಹಳ ಸಂಬಂಧ ಇವರು ಶ್ರೀಶೈಲ ಇರುವವರು. ನಮ್ಮ ಭಾಗದವರು ಶ್ರೀಶೈಲಕ್ಕೆ ಹೆಚ್ಚು ಹೋಗುತ್ತಿದ್ರು. ಈಗ ಕಡಿಮೆಯಾಗಿದೆ. ಈ ಪ್ರಯಾಣ ಸೌಲಭ್ಯಗಳು ಇರದ ಕಾಲದಲ್ಲಿ ಅವ್ರು ಕಾವಡಿ ಹೊತ್ತುಕೊಂಡು ಯಾತ್ರಾಗಳನ್ನು ತಕ್ಕಡಿಯಂಥ ಕಾವಡಿಯಲ್ಲಿ ಕೂಡಿಸಿಕೊಂಡು ಶ್ರೀಶೈಲ ಬೆಟ್ಟ ಹತ್ತಿಸಿಕೊಂಡು ಮಲ್ಲಯ್ಯನ ದರ್ಶನ ಮಾಡಿಸ್ತಿದ್ರು ಅವ್ರು ಈಗ ಕಾಣಿಸ್ತಾ ಇಲ್ಲ. ಇನ್ನು ನಮ್ಮ ಜಿಲ್ಲೆಯಲ್ಲಿ ತಾಂಡದವರು ಸಾಕಷ್ಟಿದ್ದಾರೆ. ಲಂಬಾಣಿಗಳು ಇದ್ದಾರೆ ನಿನ್ನೆ ಚಿಂತನೆಯಲ್ಲಿ ಕೇಳೀದೆ ಇವರು ಪೂಜೆ ಮಾಡಾದಾ ಸೇವಾಬಾಯಿ ಅಂತ. ನಮ್ಮಲ್ಲಿ ಸೇವಾಬಾಯಿ ಇಲ್ಲ ‘ಸೇವಾಲಾಲ’ ಅಂತಾರೆ. ಸೇವಾಲಾಲ ಮಹಾರಾಜ್ ಕಿ ಜೈ ಅಂತಾರೆ. ಇವ್ರು ತಮ್ಮ ಭಜನೆಗಳನ್ನು ಮಾಡೋ ಕಾಲದಲ್ಲಿ ತಾವು ಊಟ ಮಾಡುವಂತಹ ಕಂಚಿನ ತಟ್ಟೆಗಳನ್ನೇ ಬಾರಿಸುತ್ತಾರೆ. ಭಜನೆಗೆ ಕಂಚಿನ ತಟ್ಟೆ ಬಾರಿಸ್ತಾ ಇದ್ರೆ ಅವರ ಕಂಠನೂ ಕಂಚಿನ ಕಂಠ. ಹೀಗಾಗಿ ಅವರ ನಾದ ಲೋಕಕ್ಕೆ ಪರಲೋಕಕ್ಕೆ ಮುಟ್ಟುವಂತಿರುತ್ತೆ. ಅಷ್ಟು ಸೊಗಸಾಗಿ ಹಾಡ್ತಾರೆ. ನಮ್ಮ ಜನ ಅವ್ರ ಬಗ್ಗೆ ಒಂದು ನಾಣ್ಣುಡಿ ಮಾಡ್ಯಾರ “ಲಮಾಣೇರಿಗೆ ಹೆಣ್ಣು ಕೊಟ್ಟಂಗಾತು”. ಯಾಕ್ ಹಿಂಗ್ ಅಂತಾರ ಲಮಾಣೆಯ ಅಲೆಮಾರಿಗಳಿದರು. ಅವ್ರು ಒಂದು ಊರಲ್ಲಿ ಸ್ಥಾಯಿಯಾಗಿ ಇರ್ತಾ ಇರ್ಲಿಲ್ಲ. ತಮ್ಮ ಮಗಳನ್ನು ಅವರಿಗೆ ಮದುವೆ ಮಾಡಿ ಕೊಟ್ಟ ಆ ಹೆಣ್ಣು ಮಗಳು ಸಂಚಾರಿಯಾಗಿ ಅಲೆಮಾರಿಯಾಗಿ ಎಲ್ಲೆಲ್ಲೋ ಹೋಗ್ತಿದ್ದಳು. ಏನೋ ಕಷ್ಟ ತಾಯಿ ತಂದೆ ಮಗಳು ಒತ್ತಟ್ಟಿಗೆ ಸೇರಿದಾಗ ಗೋಳೋ ಎಂದು ಕೊಳ್ಳಿಗೆ ಬಿದ್ದು ಅಳ್ತಾ ಇದ್ರು. ಈಗ ಆ ಪರಿಸ್ಥಿತಿ ಇರ್ಲಿಕ್ಕಿಲ್ಲ. ಆದ್ರೆ ಅಳ್ತಿದ್ರು ನಾವು ಐವತ್ತು ವರ್ಷದ ಹಿಂದಿನಿಂದಲೂ ನೋಡ್ತಾ ಬಂದೀವಿ. ಈ ಜನರಲ್ಲಿ ಕಳ್ಳ ವ್ಯಾಪಾರ ಬಾಳ ನಡೀತಿತ್ತು ಅಂತ್ಹೇಳಿ ಹುಡುಗಿಯಲ್ಲಿದ್ದಾಗ ಕೇಳ್ತಿದ್ದೆ. ಅದು ಯಾಕ್ ನಡೀತಿತ್ತು ಅಂದ್ರ ಅವು ವೃತ್ತಿನೇ ಅದು ಇತ್ತು. ವೃತ್ತಿ ಅವರ್ದಿದ್ರ ಸರಿ ಆದ್ರೆ ಅವ್ರ ವೃತ್ತಿಯನ್ನು ತಮ್ಮ ವ್ಯಾಪ್ತಿಯನ್ನಾಗಿಸಿಕೊಂಡ ಸುಸಂಸ್ಕೃತ ಜನರು ಆ ಕಳ್ಳ ಸಾಮಾನನ್ನೆಲ್ಲಾ ಕೊಂಡುಕೊಳ್ಳೋರು ಇದ್ರು. ಅದಕ್ಕೆ ಹುಡುಬಿಗೆ ಕಳ್ಳ ಹುಡಬಿ ನಾರಾಯಣಪುರಕ್ಕೆ ಸುಳ್ಳು ನಾರಾಯಣಾಪುರ ಅಂತ ಹೆಸರು ಬಿತ್ತು. ಇದು ಯಾಕ ಬಿತ್ತು ಅಂದ್ರ ಇಲ್ಲಿ ಸುತ್ತಲೂ ಕಳ್ಳತನ ಮಾಡಿ ತಂದ ವಸ್ತುಗಳನ್ನು ಮಾರಾಟ ಮಾಡ್ತಾ ಇದ್ರು. ಅಲ್ಲಿ ಹೇಗ್‌ಗುತ್ತಿ ಅಂತ ಈಗ್ಲೊ ಇದೆ. ಅಲ್ಲಿ ಮುಂಬೈಯಿಂದ ಬರುವ ಉಪ್ಪನ್ನು ಲಮಾಣಿಗಳು ಹೊತ್ತು ತಂದು ಅದನ್ನು ಮುಂದೆ ಹೈದರಾಬಾದ್‌ವರೆಗೂ ಒಯ್ಯುತ್ತಿದ್ರು ಅಂತ ಪ್ರತೀತಿ ಇದೆ. ಇದು ನಮ್ಮ ಲಮಾಣಿಗಳು ಮಾಡಿದ ಕೆಲಸ. ಹೀಗಿದ್ರೂ ಲಮಾಣಿಗಳು ಈಗಲೂ ಅರೆ ಅಲೆಮಾರಿಗಳಾಗಿ ಜೀವಿಸ್ತಾ ಇದಾರಾ. ಇನ್ನು ಲಮಾಣಿಗಳಾದ ಮೇಲೆ ವಡ್ಡರು ಎನ್ನುವವರಿದ್ದಾರೆ. ಇಲ್ಲಿ ಕಲ್ಲು ವಡ್ಡರು ಇದ್ದಾರೆ. ನಾವು ಮಣ್ಣು ವಡ್ಡರನ್ನು ನೋಡೇ ಇಲ್ಲ. ಕಲ್ಲು ವಡ್ಡಾರು ಅಂದ್ರ ಇವರು ಗುಡ್ಡಕ್ಕೆ ಹೋಗಿ ಕಲ್ಲು ಹೊಡಕಂಡು ಬಂದು ಮನೆ ಕಟ್ಟುತ್ತಿದ್ದು, ಇವರು ಸಂಪೂರ್ಣವಾಗಿ ಒಂದೇ ಕಡೆ ಇರ್ತಾರ. ಆದ್ರ ಈ ಸುಸಂಸ್ಕೃತ ಜನರ ಜೊತೆ ಬೆರೆತು ಹೋಗಿದ್ರೂ ಅವರಲ್ಲಿ ಉದ್ಯೋಗಿಗಳನ್ನು ಇಲ್ಲಿಯವರೆಗೂ ಕಂಡಿಲ್ಲ. ನಮ್ಮ ಮನೆಯ ಜಾಗದಲ್ಲೇ ಸುಮಾರು ೩೦-೪೦ ಜನ ಬೀಡು ಬಿಟ್ಟಿದ್ರು. ಈಗ್ಲೂ ಬೀಡು ಬಿಟ್ಟಿದ್ದಾರೆ. ೫೦ ವರ್ಷವಾತು ಬೀಡು ಬಿಟ್ಟಿದ್ದಾರೆ. ಕನ್ನಡದಂತೆ ಮಾತಾಡಿದ್ರೂ ಅವರವೇ ಆದ ಪದ್ಧತಿಗಳು ಈಗಲೂ ಇವೆ. ಅವರು ಯಲ್ಲಮ್ಮನ ಪೂಜೆ ಮಾಡ್ತಾರೆ. ಆದ್ರೆ ನಮ್ಮಂತೆ ಸಣ್ಣಾಟ, ದಪ್ಪಿನಾಟ, ದೊಡ್ಡಾಟ ಎಲ್ಲ ಆಡ್ತಾರ. ಈ ಜನ ನಮ್ಮ ಅಲೆಮಾರಿ ಜನಾಂಗದವರೇ. ಈ ಜನಗಳಿಗೆ ಹೆಚ್ಚಿನ ಅವಕಾಶಗಳು ಸಿಗಲಿ ಅಂತನೇ ಹೇಳಬಹುದು. ಇನ್ನು ಸುಡುಗಾಡುಸಿದ್ಧರು. ಸುಡುಗಾಡುಸಿದ್ಧರ ವಿಷಯಕ್ಕೆ ನಾವು ಒಂದು ಕೆಲಸ ಮಾಡಿದ್ರೆ ಚೆನ್ನಾಗಿತ್ತು. ಇಲ್ಲೊಬ್ರು ಸಿ.ಪಿ.ಐ. ಇದ್ದಾರೆ. ಅವ್ರು ಸುಡುಗಾಡು ಸಿದ್ಧರ ವಂಶಜರು. ಮೈಸೂರು ಕಡೆಯವರು ಇಲ್ಲಿ ಉದ್ಯೋಗದಲ್ಲಿದ್ದಾರೆ. ಅವರನ್ನು ಕರೆಸಿದ್ರ ಸುಡುಗಾಡುಸಿದ್ಧರ ಬಗ್ಗೆ ಬಹಳ ಸೊಗಸಾಗಿ ಮಾತಾಡತಿದ್ರು ಅನ್ನಿಸ್ತಾದ. ಇನ್ನು ಮತ್ತೊಂದು ಏನಂದ್ರ ಈ ಬುರು ಬುರು ಪೋಚಮ್ಮನವರು. ಈಗ್ಲೂ ಇದ್ದಾರ. ಅಲೆಮಾರಿಗಳಂತೆ ಸಂಚಾರಿಯಾಗ್ತರೆ ಅನ್ನೋದು ಇಲ್ಲಿನ ಅಲೆಮಾರಿಗಳಿಗೂ ಅನ್ವಯವಾಗುತ್ತೆ. ಇನ್ನು ಇಲ್ಲಿನ ಅಲೆಮಾರಿಗಳನ್ನು ಗುರುತಿಸುವಲ್ಲಿ ಅನ್ಯಾಯವಾಗಿದೆ. ಕಂಬಾರರವರು ಜಾನಪದ ವಿಶ್ವಕೋಶದಲ್ಲಿ ಬೀದರ್ ಜಿಲ್ಲೆಯ ಜಾನಪದವನ್ನು ಗುರುತಿಸಲಾಗಿಯೇ ಇಲ್ಲ. ಇಲ್ಲಿಯ ಸಂಪ್ರದಾಯ, ಜಾನಪದವನ್ನು ಗುರುತಿಸಲಾಗಿಲ್ಲ. ಗೆಜೆಟಿಯರ್‌ನಲ್ಲಿ ಬೀದರ್‌ನ ಬರಹಗಾರರಿಗೆ ಪ್ರಾತಿನಿಧ್ಯ ಸಿಕ್ಕೇ ಇಲ್ಲ. ಇದು ಯಾಕ ಹೀಗಾಗ್ತದ ಅಂದ್ರೆ ಬೀದರ್ ಜಿಲ್ಲೆಯವರಿಗೆ ಈ ವಿಶ್ವಕೋಶ ಮಾಡುವ ಸಂದರ್ಭದಲ್ಲಾಗಲಿ ಮತ್ತಾವುದಾದರೂ ರಾಜ್ಯಕ್ಕೆ ಸಂಬಂಧಿಸಿದ ಕೃತಿ ಮಾಡುವಾಗಲಾಗಲಿ ಬೀದರ್ ಜಿಲ್ಲಯವರಿಗೆ ಪ್ರಾತಿನಿಧ್ಯ ಕೊಡೋದೆ ಇಲ್ಲ. ಬೀದರ್‌ಗೆ ಸಮೀಪ ಗುಲಬರ್ಗಾದವರಿಗೆ ಪ್ರಾತಿನಿಧ್ಯ ಕೊಡ್ತಾರೆ. ಮತ್ತೆ ಬೀದರ್ ಜಿಲ್ಲೆಯ ಸಂಶೋಧನೆ ಬರೀರಿ ಅಂತ ಹೇಳ್ತಾರ. ಬೇರೇರು ಬಂದು ಇಲ್ಲಿ ಸಂಶೋಧನೆ ಮಾಡ್ತಾರ… ಇಲ್ಲಿ ಇಲ್ಲಿಯ ಪರಿಸರ ಗೊತ್ತಿರಲಾರದಂತವರು ಅವರೇನು ಸಂಶೋಧನೆ ಮಾಡಬಲ್ಲರು? ಅವರೇನು ನಮ್ಮ ಪ್ರಾತಿನಿಧ್ಯ ಮಾಡಬಲ್ಲರು….? ಇಲ್ಲಿನ ಬುಡಕಟ್ಟು ಜನಾಂಗವನ್ನು ಅವರೇನು ಗುರುತಿಸಬಲ್ಲರು. ಇಲ್ಲಿಯರಿಗೆ ತೆಗೆದುಕೊಂಡರೆ ಇಲ್ಲಿಯವರು ಸರಿಯಾಗಿ ಗುರುತಿಸಬಲ್ಲರು. ಇಲ್ಲದಿದ್ದರೆ ಇದೊಂದು ಕಣ್ಣೀರು ಒರೆಸುವ ಕೆಲಸವಾಗಬಲ್ಲದು. ಈ ಒಂದು ವಿಚಾರದೊಂದಿಗೆ ನನ್ನ ಅನಿಸಿಕೆಗಳನ್ನು ಇಲ್ಲಿಗೆ ಮುಗಿಸುತ್ತೇನೆ. ಎಲ್ಲರಿಗ ನನ್ನ ವಂದನೆಗಳು.

ಲಿಪ್ಯಂತರ : ಅರುಣ ಜೋಳದ ಕೂಡ್ಲಿಗಿ

* * *