ನಾಗರಿಕ ಸಮಾಜದಿಂದ ಬಹುದೂರ ಉಳಿದುಕೊಂಡು ಕಾಡು, ಗುಡ್ಡ, ಬೆಟ್ಟ-ಅರಣ್ಯ, ದುರ್ಗಮ ಕಣಿವೆಗಳ ಪ್ರದೇಶಗಳಲ್ಲಿ ಜೀವನ ಸಾಗಿಸುವವರಿಗೆ ಆದಿವಾಸಿಗಳು ಇಲ್ಲವೆ ಅಲೆಮಾರಿಗಳೆಂದು ಕರೆಯುತ್ತಾರೆ. ಪ್ರಪಂಚದ ಎಲ್ಲ ಪ್ರದೇಶಗಳಲ್ಲಿಯೂ ಇಂತಹ ಸಾವಿರಾರು ಅಲೆಮಾರಿಗಳು ತಮ್ಮ ಅಲೆದಾಡುವಿಕೆಯ ಜೀವನವನ್ನು ಕಳೆಯುತ್ತ ಜೀವಿಸುತ್ತಿದ್ದಾರೆ.

ಊರು, ಗ್ರಾಮ, ಪಟ್ಟಣ, ನಗರ, ನಾಡು ಕಟ್ಟಿಕೊಂಡು ಜೀವಿಸುತ್ತ ಕಾಲ ಕಳೆಯುತ್ತಿರುವ ಇತ್ತೀಚಿನ ಮಾನವನ ಮೂಲ ಕುರಿತು ತಿಳಿದುಕೊಳ್ಳಬೇಕಾದರೆ ಬುಡಕಟ್ಟು ಇಲ್ಲವೆ ಅಲೆಮಾರಿ ಜನಾಂಗಗಳ ಅಧ್ಯಯನ ಮಾಡುವುದು ಅವಶ್ಯವಾಗಿದೆ. ಇದರಿಂದ ನಮಗೆ ಮೂಲದ ಜನಾಂಗಗಳು ಹೇಗೆ ಜೀವಿಸುತ್ತಿದ್ದವು. ಅವರ ಭೌಗೋಳಿಕ ಪರಿಸರ ಹೇಗಿತ್ತೆಂಬುದು ತಿಳಿಯುತ್ತದೆ. ಅವರು ಪರಿಪಾಲಿಸಿಕೊಂಡು ಬರುತ್ತಿರುವ ತಂದೆ, ಮಗನ ಪ್ರೀತಿವಾತ್ಸಲ್ಯ, ತಾಯಿ ಮಕ್ಕಳ ಆತ್ಮೀಯ ಸಂಬಂಧ ಇಂದಿನ ನಮಗೆ ನಾಚಿಸುವಂತಿವೆ. “ಭಾರತದಲ್ಲಿ ಸುಮಾರು ೨೨ ಮಿಲಿಯನ್ ಜನ ಆದಿವಾಸಿಗಳಿದ್ದಾರೆಂಬುದು ಜನಗಣತಿಯ ವರದಿಯು ಸೂಚಿಸಿದೆ” (ಸ.ಮಾ.ಶಾಸ್ತ್ರ, ೧೬೮).

ಒಂದು ಕಡೆ ತಮ್ಮದೇ ಆಗಿರುವ ಜನ ಸಮುದಾಯವನ್ನು ಹೊಂದಿರುವ ಮತ್ತು ಪ್ರತ್ಯೇಕವಾದ ಭಾಷೆಯನ್ನು ಮಾತನಾಡುವ ಜನಗಳಿಗೆ ನಾವು ಅಲೆಮಾರಿಗಳೆಂದು ಕರೆಯುತ್ತೇವೆ. ಅಲೆಮಾರಿಗಳಿಗೆ ತಮ್ಮದೇ ಆಗಿರುವ ಒಂದೊಂದು ನಿರ್ದಿಷ್ಟ ಪ್ರದೇಶ ಇರುತ್ತದೆ. ಮೂಲತಃ ನಿಸರ್ಗದ ಮಡಿಲಿನಲ್ಲಿ ಜೀವನ ಸಾಗಿಸುವ ಇವರು ಸದಾ ನಿಸರ್ಗವನ್ನೂ ಪೂಜಿಸುತ್ತ ಬಂದವರಾಗಿದ್ದಾರೆ. ಪ್ರತಿಯೊಂದು ಅಲೆಮಾರಿಗಳಿಗೂ ಅವರವರದೇ ಆದ ಒಂದೊಂದು ಹೆಸರುಗಳಿರುವುದು ಕಂಡು ಬರುತ್ತದೆ. ಸದಾ ನಿಸರ್ಗದ ಮಡಿಲಿನಲ್ಲಿರುವುದರಿಂದ ಅದರಲ್ಲಿ ಬೆಳೆಯುವ ಗೆಡ್ಡೆ-ಗೆಣಸುಗಳನ್ನು ಹೆಕ್ಕಿ ತೆಗೆದು ತಿಂದು ಜೀವಿಸುತ್ತಾರೆ. ಅವುಗಳ ಕೊರತೆ ಕಂಡು ಬಂದಾಗ ಹುಡುಕಾಟ ಪ್ರಾರಂಭಿಸುತ್ತಾರೆ. ಅದಕ್ಕಾಗಿ ಸಂಚಾರ ಜೀವನಕ್ಕೆ ಒಳಗಾಗುತ್ತಾರೆ. ಹೀಗಾಗಿ ಆಹಾರದ ಹುಡುಕಾಟ ಅಲೆಮಾರಿಗಳ ಅಲೆದಾಟಕ್ಕೆ ಪ್ರಮುಖ ಕಾರಣವಾಗುತ್ತದೆಂಬುದು ಗಮನಿಸುವ ಅಂಶವಾಗಿದೆ.

ಅಲೆಮಾರಿ ಜನಾಂಗ ಮತ್ತು ಅದರ ವಿಶಿಷ್ಟ ಲಕ್ಷಣಗಳು (The Trible and its Characteristics)

ನಿರ್ದಿಷ್ಟ ಭೂ ಪ್ರದೇಶ ಒಂದರಲ್ಲಿ ಗುಡಿಸಲು (tent) ಹಾಕಿಕೊಂಡು ಜೀವನ ಸಾಗಿಸುವ ಅಲೆಮಾರಿಗಳ ವಿಶಿಷ್ಟ ಗುಣಲಕ್ಷಣಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಒಂದು ನಿರ್ದಿಷ್ಟ ಸಾಮಾನ್ಯ ಭೌಗೋಳಿಕ ನೆಲೆ (Definite Common Topography)

ಸಾಮಾನ್ಯವಾಗಿ ಅಲೆಮಾರಿಗಳು ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ಜೀವಿಸಲು ಇಷ್ಟ ಪಡುತ್ತಾರೆ. ಅವರ ಜೊತೆಗೆ ಬೇರೆ ಬೇರೆ ಜಾತಿ, ಜನಾಂಗದವರು ಇರುವುದಕ್ಕೆ ಅವರ ಮನಸ್ಸು ಒಪ್ಪುವುದಿಲ್ಲ. ಜೊತೆಗೆ ಕಾಡು, ಗುಡ್ಡ ಬೆಟ್ಟಗಳಲ್ಲಿ ವಾಸಿಸುವುದಕ್ಕೆ ಪ್ರಯತ್ನಿಸುತ್ತಾರೆ. ಬಹು ಹಿಂದಿನಿಂದಲೂ ಬಂದಿರುವಂತೆ ಗುಡ್ಡ-ಬೆಟ್ಟಗಳಲ್ಲಿಯೇ ಜೀವಿಸುತ್ತಾರೆ. ಅನ್ಯಮತೀಯರ ಸಂಪರ್ಕ ಇಲ್ಲದಿರುವುದರಿಂದ ತಾವು ಒಂದು ಮೂಲಕ್ಕೆ ಸೇರಿದವರೆಂದು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಇದಕ್ಕೆ ಇನ್ನಷ್ಟು ಬಲ ಎಂಬಂತೆ ಅಲೆಮಾರಿಗಳು ತಮ್ಮದೇ ಆಗಿರುವ ಭಾಷೆಯನ್ನು ಮಾತಾಡುವುದರಿಂದ ಬಹುಬೇಗ ಒಂದು ಕಡೆಗೆ ಕೂಡಿಕೊಳ್ಳುತ್ತಾರೆ. ತಮ್ಮ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುತ್ತಾರೆ.

ಸಾಮಾನ್ಯ ಭಾಷೆ (Common Language)

ಅಲೆಮಾರಿ ಸಮುದಾಯಗಳಿಗೆ ಅವರದೇ ಆದ ಒಂದೊಂದು ಭಾಷೆ ಇರುತ್ತದೆ. ಕೆಲವು ಅಲೆಮಾರಿಗಳಿಗೆ ಪ್ರತ್ಯೇಕ ಭಾಷೆ ಇರದೆ ಇರಬಹುದು. ತಮ್ಮ ಸಾಮಾಜಿಕ ಆಗು-ಹೋಗುಗಳನ್ನು ಬಹುಬೇಗ ಅರ್ಥಮಾಡಿಕೊಳ್ಳಲು ಈ ಭಾಷೆ ಸಹಾಯಕಾರಿಯಾಗುತ್ತದೆ. ತಮ್ಮ ಸಮಾಜದ ಒಳಗಿನ ಸೂಕ್ಷ್ಮಾತಿಸೂಕ್ಷ್ಮ ವಿಷಯ ಸಂಗತಿಗಳನ್ನು ಅನ್ಯರಿಗೆ ತಿಳಿಯದಂತೆ ಈ ಭಾಷೆ ಅದರ ಕವಚವಾಗಿ ಕೆಲಸ ನಿರ್ವಹಿಸುತ್ತದೆ.

ಏಕ ಪ್ರಕಾರವಾದ ಪೂಜಾ ಪದ್ಧತಿ (Common Worship)

ನಿಸರ್ಗದ ಮಡಿಲಿನಲ್ಲಿ ಜೀವಿಸುವುದರಿಂದ ಅಲೆಮಾರಿಗಳಿಗೆ ಅವರದೇ ಆಗಿರುವ ದೇವಾ ಪೂಜೆಗಳಿರುತ್ತವೆ. ಬಹುಮುಖ್ಯವಾಗಿ ಮೊದಲು ಅವರು ನಿಸರ್ಗ ಪೂಜಕರಾಗಿರುತ್ತಾರೆ. ಗಿಡ, ಮರ, ಸೂರ್ಯ, ಚಂದ್ರ, ಗಾಳಿ, ನೀರು ಮುಂತಾದ ಶಕ್ತಿಗಳನ್ನು ದಿನ ಪೂಜಿಸುತ್ತಾರೆ. ಜೊತೆಗೆ ತಮ್ಮ ತಮ್ಮ ಪೂರ್ವಜರನ್ನು ಅವರು ಪೂಜಿಸುತ್ತಾರೆ. ಏಕೆಂದರೆ ಅವರ ಪೂರ್ವಜರು ಅವರನ್ನು ಮುನ್ನಡೆಸಿಕೊಂಡು ಬಂದಿದ್ದಾರೆಂದು ತಿಳಿದು ಕೊಂಡವರಾಗಿದ್ದಾರೆ.

ಏಕರೂಪವಾದ ಸಂಸ್ಕೃತಿ (Common Culture)

ಪ್ರತಿಯೊಂದು ಅಲೆಮಾರಿ ಜನಾಂಗಕ್ಕೂ ಅವರವರದೇ ಆಗಿರುವ ಪ್ರತ್ಯೇಕ ಸಂಸ್ಕೃತಿ ಎಂಬುದೊಂದಿರುತ್ತದೆ. ಉದಾ: ಸುಡುಗಾಡು ಸಿದ್ಧರ ಸಂಸ್ಕೃತಿ, ಲಂಬಾಣಿಗಳ ಸಂಸ್ಕೃತಿ, ಪಾರ್ದೆಗಳ ಸಂಸ್ಕೃತಿ, ಚೆಂಚರ ಸಂಸ್ಕೃತಿ, ಮೇದರ ಸಂಸ್ಕೃತಿ, ಇತ್ಯಾದಿ, ಏಕೆಂದರೆ ಒಂದು ಜನಾಂಗ ತನ್ನದೇ ಆಗಿರುವ ರೂಢಿ ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿರುತ್ತದೆ. ಎಂಥದೇ ಆಘಾತಕಾರಿ ಹೊಡೆತಗಳು ಬಂದು ಅಪ್ಪಳಿಸಿದರೂ ಕೂಡಾ ಅವರು ತಮ್ಮದನ್ನು ಬಿಡುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ಸ್ಥಳವನ್ನೇ ಬಿಟ್ಟು ಬೇರೆ ಕಡೆಗೆ ಪ್ರಯಾಣ ಬೆಳೆಸುತ್ತಾರೆ ವಿನಾಃ ಅನ್ಯ ಸಂಸ್ಕೃತಿಯನ್ನು ಸ್ವೀಕರಿಸುವುದಿಲ್ಲ. ತಲಾತಲಾಂತರಗಳಿಂದಲೂ ತಮ್ಮ ಆಚಾರ-ವಿಚಾರ, ಪೂಜಾ ವಿಧಿ-ವಿಧಾನ, ಹಬ್ಬ-ಹರಿದಿನ, ಜಾತ್ರೆ-ಉತ್ಸವಗಳನ್ನು ಮತ್ತ ಮದುವೆ, ಮರಣ, ಸಂಪ್ರದಾಯ, ಸಂಸ್ಕಾರಗಳಿಗೆ ಸಂಬಂಧಿಸಿದಂತೆ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಾರೆ. ಹೀಗಾಗಿ ಪ್ರತಿಯೊಂದು ಅಲೆಮಾರಿಗಳ ಸಂಸ್ಕೃತಿಯು ವಿಶಿಷ್ಟವಾಗಿಯೇ ಇರುತ್ತದೆ.

ಒಂದು ಸಾಮಾನ್ಯ ಹೆಸರು (Common Name)

ದೇಶದ ತುಂಬೆಲ್ಲಾ ವಾಸಿಸುವ ಅಲೆಮಾರಿಗಳು, ಪ್ರತ್ಯೇಕ ಭೂ ಪ್ರದೇಶದಲ್ಲಿ ವಾಸಿಸುವಕ್ಕೆ ಇಷ್ಟ ಪಡುತ್ತಾರೆ. ಕೆಲವರು ಗಿರಿಗಳಲ್ಲಿ ವಾಸವಾಗಿ ಜೀವನ ಸಾಗಿಸಿದರೆ, ಇನ್ನೂ ಕೆಲವರು ಭಿಕ್ಷಾಟನೆಯನ್ನೇ ತಮ್ಮ ಮೂಲಾಧಾರವಾಗಿರಿಸಿಕೊಂಡವರು ಊರ ಹೊರಗಿನ ಸರಕಾರಿ ಜಮೀನುಗಳಲ್ಲಿ ಗುಡಿಸಲು (tent) ಹಾಕಿಕೊಂಡು ಜೀವಿಸುತ್ತಾರೆ. ಹೀಗಾಗಿ ಪ್ರತಿಯೊಂದು ಅಲೆಮಾರಿಗೂ ಅವರವರ ಭೌಗೋಳಿಕ ವ್ಯಾಪ್ತಿಯಲ್ಲಿ ಒಂದು ಸಾಮಾನ್ಯ ಹೆಸರಿನಿಂದ ಜನ ಅವರನ್ನು ಗುರುತಿಸುತ್ತಾರೆ. ಕೆಲವರಿಗೆ ಆಯಾ ರಾಜ್ಯಗಳಲ್ಲಿ ಒಂದು ಹೆಸರಿನಿಂದ ಗುರುತಿಸಿದರೆ ಕೆಲವರಿಗೆ ದೇಶದ ತುಂಬೆಲ್ಲ ಏಕ ರೀತಿಯಲ್ಲಿಯೇ ಹೆಸರು ಇರುವುದು ಕಂಡುಬರುತ್ತದೆ.

ಭೌಗೋಳಿಕ ನೆಲೆ (Geographical Location)

ಅಲೆಮಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಗುಡ್ಡಬೆಟ್ಟಗಳಲ್ಲಿ ವಾಸಿಸುವರಾಗಿದ್ದಾರೆ. ಇದಕ್ಕೆ ಅಲ್ಲಿಯ ಸಂಪನ್ಮೂಲವೇ ಕಾರಣವೆಂದು ಹೇಳಬಹುದು. ಬೇಟೆಯಾಡುವುದು ಅವರಿಗೆ ಹಿಂದಿನಿಂದಲೂ ಬಂದಿರುವ ಮೂಲ ವೃತ್ತಿಯಾಗಿರುವುದರಿಂದ ಕಾಡಿನಲ್ಲಿ ವಾಸಿಸುವ ಚಿಕ್ಕ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ಹೊರೆದುಕೊಳ್ಳುತ್ತಾರೆ. ಹಿಂದಿನ ಕಾಲ ಸಂದರ್ಭದಲ್ಲಿ ಕ್ರೂರ ಮತ್ತು ದೊಡ್ಡ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಈಗ ಇದು ಕಣ್ಮರೆಯಾಗಿದೆ. ಅರಣ್ಯ ಇಲಾಖೆಯ ಕಾನೂನುಗಳು ಕಠಿಣವಾಗಿರುವುದರಿಂದ ಅಲೆಮಾರಿಗಳು ಅದಕ್ಕೆ ಒಗ್ಗಿದಂತೆ ಕಾಣಿಸುತ್ತದೆ. ಹೀಗಾಗಿ, ನರಿ, ಮೊಲ, ಉಡ, ಕಾಡುಬೆಕ್ಕು, ಇಲಿ, ಚಿಗರೆ, ಕಾಡುಹಂದಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ಬುಡಕಟ್ಟುಗಳು ವಾಸಿಸುವ ಭೂ ಪ್ರದೇಶವನ್ನು ಗಮನದಲ್ಲಿರಿಸಿಕೊಂಡು ಮೂರು ಮುಖ್ಯ ವಲಯಗಳಲ್ಲಿ ವಿಂಗಡಿಸಲಾಗಿದೆ. ೧. ಈಶಾನ್ಯ ವಲಯ, ೨. ಮಧ್ಯವಲಯ ಮತ್ತು ೩. ದಕ್ಷಿಣ ವಲಯ. ಈ ಮೂರು ಮುಖ್ಯ ವಲಯಗಳಲ್ಲದೆ ಬಂಗಾಲ ಉಪಸಾಗರದಲ್ಲಿರುವ ಅಂಡಮಾನ ಮತ್ತು ನಿಕೋಬಾರ ದ್ವೀಪಗಳಲ್ಲಿ ಅಂಗೆ ಮತ್ತು ಜಾರವ ಎಂಬ ಆದಿವಾಸಿ ಪಂಗಡಗಳಿವೆ. (ಸಾ.ಮಾ.ಶಾಸ್ತ್ರ ೧೭೪).

. ಈಶಾನ್ಯ ವಲಯ

ಈ ವಲಯದಲ್ಲಿ ನಾಗಾ, ಖಾಸಿ, ಅಕಾ, ಲಿಂಬೂ, ಕಚಾರಿ, ಕುಕೆಲಷಾಯ, ರಧ, ಲೆಪ್ಜ, ಗುರುಂಗ್, ಮಿಶ್ಮೀ, ಮಿಖಿರ್, ಅಕಾಗ್ಯಾರೋ, ಚಕ್ಮ ಮೊದಲಾದ ಪಂಗಡಗಳಿಗೆ ಸೇರಿದ ಜನರು ವಾಸವಾಗಿದ್ದಾರೆ. ಭಾರತದ ಉತ್ತರ ಮತ್ತು ವಾಯುವ್ಯ ಭಾಗಗಳಲ್ಲಿ ಈ ಪಂಗಡದ ಆದಿವಾಸಿಗಳೆಲ್ಲರೂ ಹರಡಿಕೊಂಡಿದ್ದಾರೆ.

. ಮಧ್ಯ ವಲಯ

ಈ ವಲಯದಲ್ಲಿ ಸಂತಾಲ, ಮುಂಡ, ಓರ್ಯಾನ್, ಬೈಗಾ, ಹೋ, ಗೊಂಡಾ, ಭಿಲ್ಲ, ಭೂಮಿಜ್, ಖರಿಯಾ, ಬಿರಹಾರ್, ಭೂಮಿಯನ್, ಕಂಢ, ಸವರ್, ಕೋಳಿ, ಮೊದಲಾದ ಪಂಗಡದ ಜನರು ಗಂಗಾನದಿ, ನರ್ಮದಾ, ಗೋದಾವರಿ, ನದಿಗಳ ನಡುವಣ ಪ್ರದೇಶಗಳಲ್ಲಿ ಪಸರಿಸಿದ್ದಾರೆ.

. ದಕ್ಷಿಣ ವಲಯ

ಈ ವಲಯದಲ್ಲಿ ತೊಡವ, ಬಡಗ, ಚೆಂಚು, ಕಾಡಾರ್, ಕಣಿಕರ್, ಮುಂತಾದ ಪಂಗಡಗಳ ಜನರು ಕೃಷ್ಣಾನದಿಯ ದಕ್ಷಿಣ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. (ಸಾ.ಮಾ.ಶಾಸ್ತ್ರ, ೧೭೪).

ಪ್ರಾಚೀನ ಗವಿಅರಣ್ಯಗಳಲ್ಲಿ ವಾಸಿಸುವವರು

ಬುಡಕಟ್ಟು ಅಥವಾ ಅಲೆಮಾರಿಗಳು ತಮ್ಮ ಅಲೆದಾಟದ ಜೀವನವನ್ನು ಕಳೆಯುವುದಕ್ಕಿಂತ ಪೂರ್ವದಲ್ಲಿ ಪ್ರಾಚೀನ ಗವಿ ಮತ್ತು ಅರಣ್ಯಗಳಲ್ಲಿ ವಾಸವಾಗಿದ್ದರೆಂಬುದಕ್ಕೆ ಮಾನವನ ಮತ್ತು ಬುಡಕಟ್ಟಿನ ಚರಿತ್ರೆಯಲ್ಲಿ ಸಾಕಷ್ಟು ಮಾಹಿತಿಗಳು ದೊರೆಯುತ್ತವೆ. ಪ್ರಾಚೀನ ಕಾಲದಿಂದಲೂ ಮೊದಲ್ಗೊಂಡು ಅರ್ವಾಚೀನ ಕಾಲದವರೆಗೆ ಅಲೆಮಾರಿಗಳ ಜೀವನ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಅವರು ಇವೆಲ್ಲವುಗಳ ಪ್ರಭಾವದ ಒಳಗಡೆಯೂ ಹೇಗೆ ತಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದರೆಂಬುದು ಮೆಚ್ಚುವಂಥದ್ದು. ನಿರಂತರ ಮಳೆ, ನಿಸರ್ಗದ ನಿಗೂಢ ರಹಸ್ಯಗಳ ಆರ್ಭಟದಿಂದ ರಕ್ಷಣೆಯನ್ನು ಪಡೆದುಕೊಳ್ಳುವುದಕ್ಕಾಗಿ ಅಂದಿನ ಅಲೆಮಾರಿ – ಬುಡಕಟ್ಟುಗಳು ತಮ್ಮ ಸಮೀಪದಲ್ಲಿಯೇ ಇರುವ ದೊಡ್ಡ ದೊಡ್ಡ ಗುಹೆಗಳಲ್ಲಿ ವಾಸಿಸುವುದಕ್ಕೆ ಪ್ರಾರಂಭಿಸಿದರು. ಇರುವ ಕೆಲವೇ ಕುಟುಂಬದ ಸದಸ್ಯರು ಮೊದಲಿಗೆ ತಮ್ಮ ವಾಸಸ್ಥಾನವನ್ನಾಗಿ ಆಯ್ಕೆ ಮಾಡಿಕೊಂಡದ್ದು. ಕೆಲವರು ಅಲ್ಲಿಯೇ ವಾಸಿಸುತ್ತಾರೆ. ಅಂದರೆ ಅದರ ಒಳಗಡೆ ಮೊದಲು ಸಾಮೂಹಿಕವಾಗಿಯೇ ವಾಸಿಸುತ್ತಿದ್ದರು. “ಇರುಳರು” ಗುಡ್ಡಗಳಲ್ಲಿ ಗವಿಗಳಲ್ಲಿ ವಾಸಿಸುತ್ತಿದ್ದ ಜನಾಂಗ. ನೂರಕ್ಕೆ ನೂರು ಜನ ಹೀಗೆ ಇದ್ದವರೇ. ರಾಜರುಗಳು ಆಳಿದ್ದೂ, ಚಕ್ರಾಧಿಪತ್ಯಗಳು ಉರುಳಿದ್ದು, ಇಂಗ್ಲೀಷರು ಬಂದದ್ದೂ ಸ್ವಾತಂತ್ರ್ಯ ಪಡೆದದ್ದೂ ಯಾವುದೊಂದು ಇವರಿಗೆ ಮುಟ್ಟದು. ಹಳ್ಳಿಗಳಲ್ಲಿ ಬಟ್ಟೆ ಹಾಕಿದ ಜನ ಕಾಣಿಸಿಕೊಂಡರೆ ಓಡಿ ಹೋಗಿ ಗವಿಗಳಲ್ಲಿ ಅಡಗುತ್ತಿದ್ದರು. ತೀರ ಇತ್ತೀಚಿನವರೆಗೆ ಅಂದರೆ ಕೇವಲ ೨೦ ವರ್ಷಗಳ ಹಿಂದೆ ಗವಿಯಲ್ಲಿ ವಾಸಿಸುತ್ತಿದ್ದ ಬಗ್ಗೆ ತಿಳಿಯುತ್ತದೆ. (ಕ.ಬು.ಸಂ. ೨-೫೭).

ಗವಿ ಮತ್ತು ಅರಣ್ಯಗಳಲ್ಲಿ ವಾಸವಾಗಿದ್ದು ಅಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಅನೇಕ ಬುಡಕಟ್ಟುಗಳು ತಮ್ಮ ಜೀವನ ನೂಕುತ್ತಿದ್ದಾರೆ. ಆ ಭೌಗೋಳಿಕ ಪರಿಸರದಲ್ಲಿ ಬಹಳ ಸ್ವಚ್ಛಂದ ಮತ್ತು ಸ್ವಾತಂತ್ರ್ಯದಿಂದ ಬದುಕುತ್ತ ಬಂದವರಿವರು. ಅಲ್ಲಿಯ ಪ್ರತಿಯೊಂದು ಜಾಗ-ಸ್ಥಳ, ಗಿಡ, ಮರ, ಬಳ್ಳಿ, ಕಾಡುಮೃಗಗಳ ಪರಿಚಯವನ್ನು ಹೊಂದಿದವರು. ಸಿಗುವ ಗೆಡ್ಡೆ-ಗೆಣಸುಗಳನ್ನು ತಿಂದು-ಗಂಜಿಯನ್ನು ಕುಡಿದು ಹೊತ್ತು ಕಳೆಯುವ ಇವರು ಜೇನು ಬಿಡಿಸಿಕೊಂಡು ದೂರದ ಹಳ್ಳಿಗೆ-ಪಟ್ಟಣಕ್ಕೆ ಹೋಗಿ ಮಾರಾಟ ಮಾಡಿ ದಿನದ ಸಂಸಾರದ ಹಸಿವನ್ನು ನೀಗಿಸುವವರು. ಇಂತಹ ಸಂದರ್ಭದಲ್ಲಿಯೇ ಕಾಡಿನಲ್ಲಿರುವ ಕಾಡ್ನಾಳು ದೇವರುಗಳನ್ನು ಪತ್ತೆ ಹಚ್ಚಿದವರು, ಇವರಾಗಿದ್ದಾರೆಂಬುದಕ್ಕೆ ಇರುಳರು ಕಂಡು ಹಿಡಿದ ಕೆಲವು ದೇವರು ಮತ್ತು ಯಾತ್ರಾಸ್ಥಳಗಳನ್ನು ಹೆಸರಿಸಬಹುದು. “ಕಾಡ್ನಲ್ಲಿ ವಾಸವಿದ್ದಾಗ ಕಾಡ್ನಾಳ ದೇವರುಗಳನ್ನೆಲ್ಲಾ ಪತ್ತೆ ಮಾಡ್ಡೋರುನಾವು. ಅದ್ಕೆ ನಮ್ಮನ್ನು ಕಾಡು ಪೂಜಾರ್‌ರೂ ಅಂತಾರೆ. ಇದಕ್ಕೆ ಪೂರಕವಾಗಿ ಸಾವನದುರ್ಗದ ವೀರಭದ್ರಸ್ವಾಮಿ, ನರಸಿಂಹಸ್ವಾಮಿ, ದೇವ್ರುಗೂಳ ಪತ್ತೆ ಮಾಡ್ಡೋರು ನಾವು. ನಮ್ಮೋರು ಕಾಡಲ್ಲಿ ಗೆಣಸು ಅಗಿವಾಗ ಸಿಕ್ಕಿದ ದೇವ್ರು, ವೀರಭದ್ರಸ್ವಾಮಿ” ಎನ್ನುತ್ತಾರೆ. ಹೀಗೆ ಗೆಣಸು ಅಗಿವಾಗ ಸಿಕ್ಕು ಬಾಣಂತಿಮ್ಮ ದೇವತೆ ಆಗಿರುವುದಕ್ಕೆ ಇನ್ನೊಂದು ಉದಾ: ಕನಕಪೂರ ತಾಲ್ಲೂಕಿನ ಕುತ್ಗಾನ ಹಳ್ಳಿಯಲ್ಲಿ ಬಾಣಂತಮ್ಮ ದೇವರ ಗಮನಿಸಬಹುದು. ಹಾಗೆಯೇ ರೇವಪ್ಪ ದೇವರನ್ನು ಅಂದರೆ ರಾಮನಗರ ತಾಲ್ಲೂಕು ರೇವಣಸಿದ್ಧೇಶ್ವರ ಬೆಟ್ಟದ ರೇವಣಸಿದ್ಧರನ್ನು ಪತ್ತೆ ಮಾಡಿದವನು ಇವರ ಕಂಟಯ್ಯನೆಂಬುವವ. ಈ ಎಲ್ಲವು ಯಾರೂ ದಾಖಲಿಸಿರಿಸದ ಇತಿಹಾಸ. ಇವರು ಆದಿಯಲ್ಲಿ ಇವರೇ ಆರಾಧಿಸಿದ ದೇವರುಗಳು, ಕಂಡುಕೊಂಡ ದೇವರುಗಳು ನಂತರ ಸಂಸ್ಕೃತೀಕರಣಕ್ಕೆ ಒಳಪಟ್ಟು ಲಿಂಗಾಯಿತರು, ಒಕ್ಕಲಿಗರು ಮೊದಲಾದವರ ದೈವಗಳಾದವು. (ಕ.ಬು.ಸಂ. ೨-೬೦).

ಗವಿ-ಅರಣ್ಯಗಳಲ್ಲಿ ವಾಸಿಸುತ್ತಿದ್ದ ಇವರು ಈಗ ರಾಮನಗರದ ಆಸು-ಪಾಸಿನಲ್ಲಿ ಚಿಕ್ಕ ಚಿಕ್ಕ ಹುಲ್ಲಿನ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಕೆಲವರು ಆಗಾಗ ಗವಿಗಳಲ್ಲಿ ಉಳಿದುಕೊಂಡು ಬರುವವರಿದ್ದಾರೆ. ಇವರೂ ಕೂಡಾ ಸುಡುಗಾಡು ಸಿದ್ಧರಂತೆ ಸ್ಮಶಾನವನ್ನೇ ಬಳಸುವ ಜಾಗವನ್ನಾಗಿ ಮಾಡಿಕೊಂಡಿದ್ದಾರೆ.

ಪರ್ವತ ಗಿರಿ-ಶಿಖರಗಳಲ್ಲಿ ವಾಸಿಸುವ ಇನ್ನೊಂದು ಬುಡಕಟ್ಟು ಎಂದರೆ ಚೆಂಚು ಚೆಂಚರು. ಆಂಧ್ರಪ್ರದೇಶದ ಕರ್ನೂಲ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಹರಡಿಕೊಂಡಿರುವ ಕಾಡು ಪರ್ವತ ಶ್ರೇಣಿಗಳಲ್ಲಿ ಇವರು ಜೀವಿಸುತ್ತಿದ್ದಾರೆ. “ಕೃಷ್ಣಾ ನದಿಯ ಆಸು-ಪಾಸಿನಲ್ಲಿ ದಟ್ಟ ಅಡವಿಗಳಿಂದ ತುಂಬಿರುವ ಶ್ರೀ ಶೈಲದ ಪರ್ವತ ತಪ್ಪಲಿನವರು ಎಂಬುದರಲ್ಲಿ ಸಂಶಯವಿಲ್ಲ. ಎತ್ತರದ ಮರವನ್ನು ಸರಸರನೆ ಹತ್ತುವ ಮತ್ತು ಪ್ರಪಾತಕ್ಕೆ ಚಾಚಿಕೊಂಡಿರುವ ಪರ್ವತ ಶಿಖರಗಳ ಕೆಳಗೆ ಕಟ್ಟಿರುವ ಜೇನನ್ನು ಕೀಳುವ ಕಾಯಕದಲ್ಲಿ ನಿಷ್ಣಾತರಾಗಿರುವುದರಿಂದ ಎತ್ತರದ ಪರ್ವತ ಪ್ರಾಂತಗಳಲ್ಲಿ ಮೊದಲಿಗೆ ವಾಸಿಸುತ್ತಿದ್ದಾರೆಂಬುದರಲ್ಲಿ ಅನುಮಾನವಿಲ್ಲ.” ಸುಮಾರು ನಾಲ್ಕು ಅಥವಾ ಐದನೂರು ಅಡಿ ಎತ್ತರವಿರುವ ಪರ್ವತ ಪ್ರಾಂತಗಳಲ್ಲಿ ಅಥವಾ ಕಣಿವೆಗಳಲ್ಲಿ ವಾಸಿಸುತ್ತಾ ತಮ್ಮದೇ ಆದ ಆಚಾರ-ವಿಚಾರ ಹಾಗೂ ಆಹಾರ ಪಾನೀಯಗಳೊಂದಿಗೆ ಬದುಕು ಸಾಗಿಸುತ್ತಾರೆ. ಪ್ರಾಕೃತಿಕ ವಿಕೋಪಗಳಿಂದ ಈ ವಾಸಿಸುವ ಜಾಗಗಳನ್ನು ಬದಲಾಯಿಸಿದರೂ ಊರುಗಳಿಂದ ಹೊರಗಡೆಯೇ ವಾಸ ಮಾಡುತ್ತ ತಮ್ಮ ಪ್ರತ್ಯೇಕತೆಯನ್ನು ಅನನ್ಯತೆಯನ್ನು ಉಳಿಸಿಕೊಂಡೇ ಬರುತ್ತಿದ್ದಾರೆ. ಆಯಾ ಪರಿಸರದ ಭಾಷೆಯನ್ನು ಕಲಿಯುವುದರಿಂದ ಚೆಂಚರಿಗೆ ತಮಿಳು, ತೆಲುಗು, ಕನ್ನಡ, ಮೂರು ಭಾಷೆಗಳ ಪರಿಚಯವಿರುವುದು ಕಂಡುಬರುತ್ತದೆ.

ಪರ್ವತ ನಿವಾಸಿಗಳಾಗಿ ಬದುಕು ಸಾಗಿಸುವ ಚೆಂಚರು ತಮ್ಮ ಉಪಜೀವನಕ್ಕೆ ಬೇಟೆಯನ್ನು ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಈಗ ಅವರು ಆಯಾ ಗ್ರಾಮ-ಪಟ್ಟಣಗಳ ಹೊರಗೆ ತಮ್ಮ ಗುಡಿಸಲುಗಳನ್ನು ಹಾಕಿಕೊಂಡು ಜೀವಿಸುವುದರ ಜೊತೆಗೆ ರೈತರ ಹೊಲಗಳಲ್ಲಿ ಕೂಲಿ ಕೆಲಸದ ಆಳುಗಳಾಗಿ ಬದುಕು ಸಾಗಿಸುತ್ತಿದ್ದಾರೆ. ಇವರಂತೆಯೇ ನಾವು ಅಡವಿ ಚೆಂಚರ ಹೆಸರನ್ನು ಹೇಳಬಹುದು. ಇವರೂ ಕೂಡಾ ಅರಣ್ಯ ವಾಸಿಗಳೆ. ಅಲ್ಲಿಯೇ ಚಿಕ್ಕ ಚಿಕ್ಕ ಗುಡಿಸಲುಗಳನ್ನು ಹಾಕಿಕೊಂಡಿರುವ ಇವರು ಅರಣ್ಯದಲ್ಲಿ ದೊರಕುವ ಸಂಪನ್ಮೂಲಗಳಿಂದ ವಸ್ತುಗಳನ್ನು ತಯಾರಿಸಿಒಕಂಡು ಧರಿಸುತ್ತಿದ್ದರೆಂಬುದು ತಿಳಿದು ಬರುತ್ತದೆ. ಅರಣ್ಯದಲ್ಲಿ ದೊರಕುವ ಮೇಣದಬಟ್ಟೆ, ಜಿಂಕೆಯ ಚರ್ಮ, ಮೊದಲಾದ ಚರ್ಮದಿಂದ ಮಾಡಿದ ಟೋಪಿಗಳನ್ನು ಬಳಸುತ್ತಾರೆ. ಅಡವಿ ಚೆಂಚರ ಹೆಂಗಸರು ಮೊದಮೊದಲು ಎಲೆಗಳಿಂದ ಮೈಯನ್ನು ಮುಚ್ಚಿಕೊಳ್ಳುತ್ತಿದ್ದರು. ನಂತರ ಅವರ ಶರೀರ ಸಿಂಹದ ಚರ್ಮದಿಂದ ಮಾಡಿದ ಬಟ್ಟೆಗಳು ಮುಚ್ಚಲ್ಪಟ್ಟವು. ಸಿಂಹ ಚರ್ಮವನ್ನು ಹೆಂಗಸರು ವಿಧವೆಗೆ ಬಳಸತೊಡಗಿದರೆಂಬುದು ಅವರ ಚರಿತ್ರೆಯಿಂದ ತಿಳಿದುಬರುತ್ತದೆ. “ಅಡವಿ ಚಂಚರ ಪೂರ್ವಿಕರು ಮಧ್ಯಭಾರತದ ವಿಂಧ್ಯಪರ್ವತ ಕೊಳಗಳ ಸಮೀಪ ನೆಲೆಸಿದವರು. ಬೇಟೆಯ ಸಲುವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಿದವರು. ಈ ಕಾರಣದಿಂದಲೇ ಅವರಲ್ಲಿ ಕೆಲವರು ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳತ್ತ ಸಂಚರಿಸುತ್ತ ಬಂದರು” (ಕ.ಬು.ಸಂ. ೨-೭೪೬).

ಮಲೆನಾಡಿನ ಹಚ್ಚ ಹಸಿರಿನ ಪರ್ವತ ಶ್ರೇಣಿಗಳ ಪರಿಸರದಲ್ಲಿ ಜೀವನ ಸಾಗಿಸುತ್ತ ಬಂದಿರುವ ಒಂದು ಚಿಕ್ಕ ಬುಡಕಟ್ಟು ಹಸಲರೆಂದು ಹೇಳಬಹುದು. ಆ ಭೌಗೋಳಿಕ ಪರಿಸರಕ್ಕೆ ಹೊಂದಿಕೊಂಡಂತಹ ತಮ್ಮ ಗುಡಿಸಲುಗಳನ್ನು ರಚಿಸಿಕೊಂಡು ಏಕಾಂತದಲ್ಲಿ ವಾಸವಾಗಿರುವ ಜನಾಂಗ ಇದಾಗಿದೆ. ಸುಂದರ ಪರಿಸರದ ಜೊತೆಗಿದ್ದರೂ ಈ ಅಲೆಮಾರಿಗಳಿಗೆ ಅದರ ಒಡೆತನದ ಆಲೋಚನೆ ಮಾಡದಷ್ಟು ಮುಗ್ಧರು. ಬ್ರಿಟಿಷರು ಮತ್ತು ಭೂಮಾಲೀಕರು ಒಂದು ಕಾಫಿ ಬೆಳೆಯುವುದಕ್ಕೆಂದೋ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಬೆಳೆಬೆಳೆಯುವಾಗ ಇವರಿಗೆ ಅರ್ಥವಾಗಲು ಪ್ರಾರಂಭಿಸಿದ್ದು. ಆಗ ಗುಡಿಸಲಿನಲ್ಲಿದ್ದ ಹಸಲರು ಈಗ ಎಸ್ಟೇಟ್ ಆವರಣದಲ್ಲಿ ಚಿಕ್ಕ ಚಿಕ್ಕ ಮಣ್ಣು ಮತ್ತು ಇಟ್ಟಿಗೆಗಳಿಂದ ಕಟ್ಟಿದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಮನೆಯ ಗೋಡೆಯ ಅಲಂಕಾರಕ್ಕೆ ಹೆಚ್ಚು ಮಹತ್ವಕೊಡದಿದ್ದರೂ ತಮ್ಮ ಮನೆ ಮತ್ತು ಸುತ್ತಲಿನ ವಾತಾವರಣವನ್ನು ಬಹಳ ಶುಚಿಯಾಗಿ ಇರುವಂತೆ ಎಚ್ಚರ ವಹಿಸುತ್ತಾರೆ.

ಕಾಡಿನ ಅಸ್ತಿತ್ವಕ್ಕೆ ಧಕ್ಕೆ ಬರುವಂತೆ ಬದುಕುವವರು

ಅಲೆಮಾರಿ ಆದಿವಾಸಿ – ಬುಡಕಟ್ಟು ಜನಾಂಗಗಳು ಕಾಡನ್ನು ಅತೀವ ಪ್ರೀತಿಯಿಂದ ಕಂಡವರು. ‘ಮರ ಕಡಿದರೆ ಮಗನಿಗೆ ಕಡಿದಂತೆ’ ಎಂಬುದನ್ನು ತಿಳಿದುಕೊಂಡವರು. ನಿಸರ್ಗದ ಮಡಿಲಿನಲ್ಲಿದ್ದುಕೊಂಡು ಆ ತಾಯಿಯನ್ನು ಅತ್ಯಂತ ಗೌರವದಿಂದ ಕಂಡವರು.

“ಒಂದು ಕಾಲಕ್ಕೆ ತಮ್ಮ ಕುಲ ಹಾಗೂ ಪಂಗಡಗಳಿಗೆ ಗಿಡಮರಗಳ ಹೆಸರನ್ನೇ ಇಟ್ಟುಕೊಂಡು ಅವುಗಳ ಮೂಲಕವೇ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡ ಹತ್ತಾರು ಬುಡಕಟ್ಟುಗಳು ಇಂದಿಗೂ ಆ ಸಂಪ್ರದಾಯವನ್ನು ಅನುಸರಿಸುತ್ತಿವೆ. ದೇವರ ಹೆಸರಿನಲ್ಲಿ ಮೀಸಲಿಟ್ಟ ಕಾಡುಗಳು ಇಂದಿಗೂ ದೇವರ ಕಾಡುಗಳಾಗಿ ಉಳಿದು ಬಂದಿರುವುದನ್ನು ನಾವು ನೋಡುತ್ತಿದ್ದೇವೆ. ಮೀಸಲಿಲ್ಲದ ಕಾಡಿನಲ್ಲಿ ಒಂದು ಮರ ಕಡಿಯಬೇಕಾದ ಪ್ರಸಂಗ ಬಂದರೆ ಅದನ್ನು ಪೂಜಿಸಿ ಅತ್ಯಂತ ಗೌರವದಿಂದ ಮರಗಳನ್ನು ಕಡಿಯುತ್ತಿದ್ದ ಬುಡಕಟ್ಟುಗಳ ಮೌಲ್ಯ ಆದರ್ಶಪ್ರಾಯ. ಹೀಗೆ ಕಾಡಿನ ಆಶ್ರಯದಲ್ಲಿ ಅದರ ಗಮನಿನಂತೆ ಬೆಳೆದ ಮನುಷ್ಯ ಅದು ನೀಡುವ ಜೇನು, ಗೆಡ್ಡೆ ಗೆಣಸು, ಹಣ್ಣು ಹಂಪಲು ಹಾಗೂ ಅದರೊಳಗಿನ ಪ್ರಾಣಿ ಪಕ್ಷಿಗಳನ್ನು ಅಗತ್ಯವಿದ್ದಷ್ಟು ಸೇವಿಸ, ಬಿದಿರು, ಬೆತ್ತ ಹಾಗೂ ಹೊಂಬು ಬಳ್ಳಿಗಳಲ್ಲಿ ತಯಾರಿಸಿದ ವಸ್ತುಗಳನ್ನು ಕಾಡಿನಾಚೆಯ ಸಂತೆಗಳಲ್ಲಿ ಮಾರಿ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುತ್ತಿದ್ದರು” (ಗಿ.ಸಿ. ೨೨೬).

ಸ್ವಂತ ಆಸ್ತಿಯ ಕಲ್ಪನೆ ಇಲ್ಲದವರು

ಮೂಲತಃ ಅಲೆಮಾರಿಗಳು ಆಯಾ ಕಾಡುಗಳನ್ನು ಆಶ್ರಯಿಸಿಕೊಂಡು ಜೀವಿಸುವವರು. ಹೀಗೆ ಹಲವಾರು ಶತಮಾನಗಳು ಕಳೆದಿದ್ದಾರೆ. ಜೀವಿಸುವುದಕ್ಕೆ ಆಹಾರದ ಹುಡುಕಾಟ ಮತ್ತು ಸಂಗ್ರಹೆಯ ಜೊತೆಗೆ ಬೇಟೆಯನ್ನು ರೂಢಿಸಿಕೊಳ್ಳಲಾಗಿತ್ತು. ತಮ್ಮ ಕಣ್ಣೆದುರಲ್ಲಿಯೇ ಕಾಡಿನ ಜನ ಕಾಡನ್ನು ಕಡಿದು ನೆಲವನ್ನು ತಮ್ಮ ಆಧೀನದಲ್ಲಿ ತೆಗೆದುಕೊಂಡು ಉತ್ತುಬಿತ್ತುವ ಕಾರ್ಯದಲ್ಲಿ ತೊಡಗಿದ್ದರೂ ಅಲೆಮಾರಿಗಳು ತಮಗೂ ಒಂದಿಂಚು ಭೂಮಿಯನ್ನು ಬೇಕು ಎಂದು ಸೊಲ್ಲು ಎತ್ತದಿರುವುದು ಅವರ ಮುಗ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಡೀ ಕಾಡು ನಮ್ಮದು, ನಮ್ಮವರದು ಎಂದು ತಿಳಿದುಕೊಂಡಿರುವ ಅಲೆಮಾರಿ ಜನಾಂಗಗಳು ಅದರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ಬಂದಿದ್ದಾರೆ. ಆದರೆ ಅವರ ಮನದಲ್ಲಿ ತಪ್ಪಿಯೂ ಕಾಡನ್ನು ಕಡಿಯಬೇಕೆಂಬ ವಿಚಾರ ಹೊಳೆಯಲೇ ಇಲ್ಲ. ಹೀಗಾಗಿ ಅಲೆಮಾರಿ ಜನಾಂಗಗಳು ತಾವಿರುವಷ್ಟು ಕಾಲ ಅದನ್ನು ಪ್ರೀತಿಸುತ್ತ ಬಂದವರಾಗಿದ್ದಾರೆ. ಹಾಗೆಯೇ ಆಯಾ ಭೌಗೋಳಿಕ ಪರಿಸರವನ್ನು ಅವರು ತಮ್ಮ ಬಂಧು-ಬಾಂಧವರನ್ನು ಪ್ರೀತಿಸುವ ಹಾಗೆ, ಹಿರಿಯರನ್ನು ಗೌರವಿಸುವ ಹಾಗೆ, ತಮ್ಮ ಪ್ರಾಣಕ್ಕಿಂತಲೂ ಹೆಚ್ಚು ಅವರು ಪರಿಸರದ ಜೊತೆಗೆ ಒಡನಾಡಿಗಳಾಗುತ್ತ ಬಂದವರಾಗಿದ್ದಾರೆ. ಜೀವಿಸುವುದಕ್ಕೆ ಆಹಾರವನ್ನು ಹುಡುಕುತ್ತ ಆಗಾಗ ಬೇಟೆಯಾಡುತ್ತ ಹೊಟ್ಟೆಗೆ ಬೇಕಾಗುವಷ್ಟು ಹಿಟ್ಟನ್ನು ಸಂಪಾದಿಸುತ್ತ ಮತ್ತೆ ಪ್ರಯಾಣ ಮಾಡುತ್ತ ತಮ್ಮ ನೆಮ್ಮದಿಯ ಬದುಕನ್ನು ಬಹುಹಿಂದಿನಿಂದಲು ಕಳೆಯುತ್ತ ಬಂದವರಾಗಿದ್ದಾರೆ. ಸಂಪಾದಿಸಬೇಕು. ಆಹಾರ ಕೂಡಿಹಾಕಬೇಕು. ಜಮೀನು-ಆಸ್ತಿ ಗಳಿಸಬೇಕು, ಮಕ್ಕಳು-ಮರಿಗಳಿಗೆ ಗಳಿಸಿ ಇಡಬೇಕೆಂಬ ಮುನ್ನಾಲೋಚನೆಯನ್ನು ಇಟ್ಟುಕೊಂಡವರಲ್ಲ. ನಾಗರಿಕತೆಯಿಂದ ಬಹುದೂರ ಉಳಿದುಕೊಂಡು ಬದುಕು ಸಾಗಿಸುತ್ತ ಬಂದ ಅಲೆಮಾರಿಗಳು ಕಾಡನ್ನು ಪ್ರೀತಿಸುವ ಜನರು ಅವರಾಗಿದ್ದರು. “ಮಲೆನಾಡಿನ ಕೆಲವು ಆಯಕಟ್ಟಿನ ಜಾಗಗಳಿಗೆ ಭೂಮಾಲೀಕರು ಬರತೊಡಗಿದ್ದು ಅಥವಾ ಯೂರೋಪಿಯನ್ನರ ಬೆನ್ನ ಹಿಂದೆ ಬಂದು ಭೂಮಾಲೀಕರಾದದ್ದು ಇಲ್ಲಿ ಮುಖ್ಯ. ಈ ತೆರವಾಗಿಯಾದಾಗ ‘ವ್ಯವಹಾರಿಗಳು’ ಮಲೆನಾಡಿಗೆ ಕಾಲಿಟ್ಟರೋ ಅಂದಿನಿಂದಲೇ ಗಿರಿಜನರ ಸ್ವಚ್ಛಂದದ ಜೀವನ ಅಸ್ಥಿರವಾಗತೊಡಗಿದ್ದು. ನಮ್ಮ ಆಧುನಿಕ ವಸಾಹತುಶಾಹಿ ಎಂದು ಮನು ಈಗಾಗಲೇ ಹೇಳಿದ ನಮ್ಮ ಅರಣ್ಯ ಇಲಾಖೆಯ ಈಗಿನ ಚಟುವಟಿಕೆಗಳಿಗೆ ಪರಿಸರದಲ್ಲಿ ನೀಡಿದ ಈ ಯುರೋಪಿಯನ್ ವಸಾಹತುಶಾಹಿಯ ಪ್ರಭಾವವನ್ನು ನಾವು ಅರ್ಥಮಾಡಿಕೊಳ್ಳದೇ ಇವತ್ತಿನ ಗಿರಿಜನರ ಬದುಕನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” (ಗಿ.ಸಿ. ೨೨೯).

ಬೆಟ್ಟಗುಡ್ಡಗಳಲ್ಲಿ ಪರಿಸರದಲ್ಲಿರುವ ಅಲೆಮಾರಿಗಳು

ಅಲೆಮಾರಿ ಬುಡಕಟ್ಟುಗಳಲ್ಲಿ ಕೆಲವರು ಗವಿಗಳಲ್ಲಿಯೂ, ಕೆಲವರು ಪರ್ವತ ಶ್ರೇಣಿಗಳಲ್ಲಿಯೂ, ಕೆಲವರು ಪರ್ವತ ಶ್ರೇಣಿಗಳಲ್ಲಿಯೂ, ಕೆಲವರು ನದಿಕಣಿವೆಗಳಲ್ಲಿಯೂ, ಕೆಲವರು ಹುಲ್ಲುಗಾವಲಿನಲ್ಲಿಯೂ, ಕೆಲವರು ಊರ ಸಮೀಪದಲ್ಲಿಯೂ, ಕೆಲವರು ಸ್ಮಶಾನದಲ್ಲಿಯೂ ಜೀವಿಸುವುದನ್ನು ಕಾಣುತ್ತೇವೆ. ಇದರಲ್ಲಿ ಕೆಲವರು ವೃತ್ತಿಯನ್ನಾಧರಿಸಿದ ಮತ್ತು ವೃತ್ತಿ ರಹಿತ ಅಲೆಮಾರಿಗಳಿರುವುದು ಕಂಡುಬರುತ್ತದೆ. ನಿಸರ್ಗದ ವಿಕೋಪದಿಂದಲೋ ಅಥವಾ ಅನಾವೃಷ್ಟಿಯ ಕಾರಣದಿಂದಲೋ ದೇಶದಲ್ಲಿರುವ ಅನೇಕ ಅಲೆಮಾರಿಗಳು ತಮ್ಮ ಮೂಲವನ್ನು ಬಿಟ್ಟು ಬೇರೆ ಬೇರೆ ಕಡೆಗೆ ಸಂಚರಿಸುತ್ತ ಬಂದಿರುವುದು ತಿಳಿಯುತ್ತದೆ. ಹೀಗೆ ಬೇರೆ ನಾಡು ಮತ್ತು ಪ್ರದೇಶದಿಂದ ವಲಸೆ ಬಂದಿರುವ ಪ್ರಮುಖ ಜನಸಮುದಾಯದಲ್ಲಿ ಲಂಬಾಣಿಗಳು ಒಬ್ಬರೆಂದು ತಿಳಿದು ಬರುತ್ತದೆ. ಮೂಲತಃ ಒಂದು ಕಾಲಕ್ಕೆ ಅಲೆಮಾರಿಗಳಾದ ಇವರು ಇಂದು ದೇಶದ ತುಂಬೆಲ್ಲ ಕಂಡುಬರುತ್ತಾರೆ. ವರ್ಣರಂಜಿತ ಜೀವನ ಶೈಲಿಯನ್ನು ರೂಢಿಸಿಕೊಂಡಿರುವ ಲಂಬಾಣಿಗಳು ಪರಿಶ್ರಮ ಮತ್ತು ಧೈರ್ಯಶಾಲಿಗಳಾಗಿದ್ದಾರೆ. ಇವರು ಮೊದಲು “ದೀರ್ಘಕಾಲವಧಿಯವರೆಗೆ ಕಾಡಿನಲ್ಲಿ ವಾಸಿಸಿದ ಈ ಜನರು ಪಶುಪಾಲನೆ ಮಾಡಿರುವುದು ಸ್ವಾಭಾವಿಕ. ಅವರು ದನಕರುಗಳೊಂದಿಗೆ ಮಾತೃಭೂಮಿ ‘ರಾಜಸ್ಥಾನ’ ಹಾಗೂ ಪಹಾಡ ಪ್ರದೇಶಗಳನ್ನು ತೊರೆದು ‘ಮಾಳವಾ’ ಮೂಲಕ ಹೊರಬಿದ್ದರು. ಹೀಗೆ ಕಾಡಿನಿಂದ ಹೊರಬಿದ್ದ ಈ ಜನ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುತ್ತ ಅನೇಕ ಕಷ್ಟನಷ್ಟಗಳನ್ನು ಎದುರಿಸುತ್ತ ಸುಮಾರು ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ತಾಂಡಾದ ರೂಪದಲ್ಲಿ ನಿಶ್ಚಿತವಾಗಿ ಒಂದೊಂದು ಕಡೆಗೆ ನೆಲೆಯಾದರು” (ಕ.ಬ.ಸಂ. ೯-೧೧೨). ಹೀಗೆ ನೆಲೆಯಾಗಿ ನಿಂತುಕೊಳ್ಳುವ ಸಂದರ್ಭದಲ್ಲಿ ಅವರಲ್ಲಿಯ ಅನುಭವಸ್ಥರು ಸ್ಥಳದ ಆಯ್ಕೆಯನ್ನು ಮಾಡುತ್ತಾರೆ. ಕಿರಿದಾದ ಗುಡ್ಡ ಮತ್ತು ಅದರ ಸುತ್ತಲು ಗಿಡ, ಮರ ಮತ್ತು ತಮ್ಮ ಹಸುಗಳನ್ನು ಮೇಯಿಸಲು ಹುಲ್ಲುಗಾವಲು ಇವನ್ನು ನೋಡಿ ಗುಡ್ಡವನ್ನು ಹತ್ತುತ್ತಾರೆ. “ಲಂಬಾಣಿಗರು ತಮ್ಮ ಅಸಂಖ್ಯಾತ ಧನಕರುಗಳಿಗೆ ಸುಲಭವಾಗಿ ನೀರು, ಹುಲ್ಲು ದೊರಕುವ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ತಾಂಡೆ ಕಟ್ಟಿಕೊಳ್ಳುತ್ತಾರೆ” (ಕ.ಬು.ಸಂ. ೨-೧೨೩).

ಗುಡ್ಡ-ಬೆಟ್ಟಗಳಲ್ಲಿ ವಾಸಿಸುವ ಅಲೆಮಾರಿಗಳು ತಮ್ಮ ಜೋಪಡಿಗಳನ್ನು ಪೂರ್ವಾಭಿಮುಖವಾಗಿ ಹಾಕಿಕೊಳ್ಳುತ್ತಾರೆ. ಸಮನಾಂತರಗಳಲ್ಲಿ ಮೂರು ಸಾಲುಗಳಲ್ಲಿ ಹಾಕುವ ಪದ್ಧತಿ ಅವರಲ್ಲಿದೆ. ಸಹಜವಾಗಿಯೇ ಮನೆಕಟ್ಟಿಕೊಳ್ಳುವಾಗ ಎಲ್ಲರಂತೆ ಅವರೂ ಭೂಮಿಪೂಜೆ ಮಾಡಿ ಶಾಂತಿ ಮಾಡುತ್ತಾರೆ. (ವಿವರಗಳಿಗೆ ನೋಡಿ ಕ.ಬು.ಸಂ. ೨-೧೨೩). ಸಾಮಾನ್ಯವಾಗಿ ಆಯಾ ಗ್ರಾಮಗಳಿಂದ ಸ್ವಲ್ಪ ದೂರದಲ್ಲಿರುವ ಚಿಕ್ಕ ಗುಡ್ಡದಲ್ಲಿ ಪ್ರತ್ಯೇಕವಾಗಿ ವಾಸಿಸುವ ಇವರು ನಿಸರ್ಗದ ಮಡಿಲಿನಲ್ಲಿಯೇ ಜೀವಿಸುವುದು ಇಷ್ಟಪಡುತ್ತಾರೆ. ತಾಂಡಾ ರಚನೆಯಾಗುತ್ತಿದ್ದಂತೆ ಅಲ್ಲೊಂದು ‘ಸೇವಾಲಾಲ’ನ ಮತ್ತು ಹನುಮಂತ ದೇವಾಲಯಗಳು ನಿರ್ಮಾಣಗೊಳ್ಳುತ್ತವೆ. “ಲಂಬಾಣಿಗರು ಸಾಮಾನ್ಯವಾಗಿ ತಮ್ಮ ತಾಂಡೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಸುತ್ತಲೂ ಮುಳ್ಳು ಬೇಲಿಯನ್ನು ಹಾಕಿಕೊಂಡಿರುತ್ತಾರೆ” (ಕ.ಬು.ಸಂ. ೨-೧೨೪). ಇಂತಹ ಸುಂದರವಾದ ಭೌಗೋಳಿಕ ಪರಿಸರದಲ್ಲಿ ಲಂಬಾಣಿಗಳು ಆಕಳು, ಎತ್ತು, ಕೋಳಿ, ಕುರಿಗಳನ್ನು ಸಾಕುತ್ತಾರೆ. ಅನ್ಯಮತೀಯರಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಸದಾ ಏಳೆಂಟು ಕುಟುಂಬಗಳ ಜನರಿಂದೊಡಗೂಡಿದ ತಾಂಡಾವಿರುತ್ತದೆ. ಇಂತಹ ಚಿಕ್ಕ ತಾಂಡಾಗಳು ಬೆಳೆದು ದೊಡ್ಡ ತಾಂಡಾಗಳಾಗಿವೆ. ಕೆಲವು ತಾಂಡಾಗಳಲ್ಲಿ ವ್ಯಾಜ್ಯಗಳಾಗಿ ಒಡೆದು ಚಿಕ್ಕ ಚಿಕ್ಕ ತಾಂಡಾಗಳ ಉಗಮಕ್ಕೂ ಕಾರಣವಾಗಬಹುದಾಗಿದೆ. “ಲಂಬಾಣಿ ತಾಂಡೆಗಳಲ್ಲಿ ನಾಲ್ಕಾರು ಕುಟುಂಬಗಳಿಉವ ಅತಿಚಿಕ್ಕ ಸಮುದಾಯಗಳಿಂದ ಹಿಡಿದು ೭-೮, ನೂರು ಕುಟುಂಬಗಳಿರುವ ಅತಿದೊಡ್ಡ ಸಮುದಾಯಗಳೂ ಇವೆ. ತಾಂಡಾದ ಪ್ರಮಾಣ ಅತಿದೊಡ್ಡದಾಗಿದ್ದಲ್ಲಿ ಕೆಲವೆಡೆ ಒಳಜಗಳಗಳು ಉದ್ಭವಿಸಿ ಆ ತಾಂಡೆಯು ಇಬ್ಭಾಗವಗಿ ೨-೩ ತಾಂಡೆಗಳಾಗಿರುವ ನಿದರ್ಶನಗಳು ದೊರಕುತ್ತವೆ. ಇಂತಹ ಕಡೆಗಳಲ್ಲಿ ಸಣ್ಣ ತಾಂಡೆ ದೊಡ್ಡ ತಾಂಡೆ, ಹಿಂದಿನ ತಾಂಡೆ ಮುಂದಿನ ತಾಂಡೆಗಳೆಂದೂ ಇಲ್ಲವೆ ತಮ್ಮ ಪ್ರಮುಖ ವ್ಯಕ್ತಿಗಳ ಹೆಸರುಗಳಿಂದಲೂ ಕರೆಯುತ್ತಾರೆ” (ಕ.ಬು.ಸಂ. ೨-೧೨೪).

ಲಂಬಾಣಿಗಳಂತೆ ಕಿರಿದಾದ ಗುಡ್ಡಗಳಲ್ಲಿ ವಾಸವಾಗದಿದ್ದರೂ ಸ್ವಲ್ಪ ಎತ್ತರದ ಮತ್ತು ಊರಾಚೆಯ ಚಿಕ್ಕ ಹಳ್ಳದ ತೆವರಿನಲ್ಲಿ ಗುಡಿಸಲುಗಳನ್ನು ಹಾಕಿಕೊಂಡ ಹಕ್ಕಿ ಪಿಕ್ಕಿಯವರ ಮೂಲ ವಾಸಸ್ಥಾನ ರಾಜಸ್ಥಾನವೇ ಆಗಿದೆ. ಈಗಿನ ಸಂದರ್ಭದಲ್ಲಿ ಲಂಬಾಣಿಗಳು ಒಂದು ಕಡೆಗೆ ನೆಲೆನಿಲ್ಲುವಾಗ ಒಂದೇ ಬುಡಕಟ್ಟಿನ ಮೂಲದವರೆಂದು ಹೇಳುವ ಇವರು ಇನ್ನೂ ನೆಲೆನಿಲ್ಲದೆ ಪ್ರದೇಶದಿಂದ ಪ್ರದೇಶಕ್ಕೆ ಊರಿಂದ ಊರಿಗೆ ಪ್ರಯಾಣ ಬೆಳೆಸುತ್ತ ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಪ್ರಮುಖವಾಗಿ ನಿಸರ್ಗ ಪ್ರೇಮಿಗಳಾದ ಇವರು ಕುರುಚಲು ಗಿಡಮರಗಳಲ್ಲಿ ಆಶ್ರಯವನ್ನು ಪಡೆದುಕೊಳ್ಳುವ ಹಕ್ಕಿಗಳನ್ನು ಬೇಟೆಯಾಡುತ್ತಾರೆ. “ಬೇಟೆಯನ್ನೇ ಅವಲಂಬಿಸುವ ಸಂಚಾರಿಗಳಾಗಿ ಬದುಕುವ ಹಕ್ಕಿ ಪಿಕ್ಕಿಯವರನ್ನು ಗ್ರಾಮೀಣ ಪರಿಸರದ ಜನ ಸಂಶಯ ದೃಷ್ಟಿಯಿಂದ ಕಾಣುತ್ತಾರೆ. ಅದಕ್ಕೆ ಕಾರಣ ಅವರು ಆಗಾಗ ಸಣ್ಣಪುಟ್ಟ ಕಳವುಗಳನ್ನು ಮಾಡುವುದಾಗಿದೆ. ಹೀಗಾಗಿ ಹಕ್ಕಿಪಿಕ್ಕಿಯವರು ಹಳ್ಳಿ ಮತ್ತು ನಗರಗಳಿಂದ ದೂರದಲ್ಲಿ ತಮ್ಮದೇ ಆದ ವಾಸಸ್ಥಾನಗಳನ್ನು ನಿರ್ಮಿಸಿಕೊಳ್ಳುತ್ತಾರೆ. ತಮ್ಮ ಬೇಟೆಗೆ ಹಾಗೂ ಸಂಸ್ಕೃತಿಯ ರಕ್ಷಣೆಗೆ ಬೇಕಾದ ನೆಲೆಗಳನ್ನು ಕಂಡುಕೊಂಡು ವಾಸಿಸುತ್ತಾರೆ” (ಕ.ಬು.ಸಂ. ೨-೧೮೬).

ಲಂಬಾಣಿಗಳು ಒಂದು ಗುಡಿಸಲಿನಿಂದ ಇನ್ನೊಂದರಂತೆ ಮೂರು ಗುಡಿಸಲುಗಳನ್ನು ಸಾಲು ಸಾಲಾಗಿ ಹಾಕುವಂತೆ, ಹಕ್ಕಿಪಿಕ್ಕಿಯವರು ಒಂದರ ಹಿಂದೆ ಒಂದರಂತೆ ಗುಡಿಸಲು ಹಾಕುವುದಿಲ್ಲ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಡ ಮತ್ತು ಶಿಕ್ಷೆಯನ್ನು ವಿಧಿಸುತ್ತಾರೆ. “ಹಕ್ಕಿಪಿಕ್ಕಿನವರು ತಮ್ಮ ಗುಡ್ಡ, ಗುಡಿಸಲು, ಮನೆ, ಟೆಂಟು ಯಾವುದನ್ನೇ ಹಾಕಿದರೂ ಎದುರು-ಬದುರಾಗಿ ಹಾಕುವುದುಂಟು. ಒಬ್ಬರ ಮನೆಯ ಹಿಂದೆ ಮತ್ತೊಬ್ಬರು ಹಾಕುವುದಿಲ್ಲ. ಅದರಲ್ಲೂ ಈ ನಿಯಮವನ್ನು ಮನೆಗಿಂತಲೂ ಗುಡಾರು, ಗುಡ್ಡಲುಗಳಿಗೆ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಗುಡಿಸಲುಗಳಲ್ಲಿ ಮಲಗುವಾಗ ಎಂದೂ ಅವರು ಹಾಗೆ ತಪ್ಪು ಮಾಡಿದರೆ ಛಾವಣಿಯ ಎಲ್ಲರೂ ಸೇರಿ ಅವನನ್ನೂ ಹೊಡೆಯುವುದುಂಟು. ಅಲ್ಲದೆ ಹಡೆ ಚೆಲ್ಪಿಕೆ (ಅಂದರೆ ೪೪-೧೦ ರೂಪಾಯಿ ಎಂದರ್ಥ ಒಟ್ಟು ೫೦ ರೂಪಾಯಿಗಳು) ದಂಡ ವಿಧಿಸುತ್ತಾರೆ” (ಕ.ಬು. ೧೯೦).

ನದಿ ಮತ್ತು ಸಮುದ್ರ ತೀರದಲ್ಲಿ ನೆಲೆಸಿರುವ ಅಲೆಮಾರಿಗಳು

ವಿಂಧ್ಯದ ಗೊಂಡಾರಣ್ಯ ಮತ್ತು ಆಂಧ್ರದ ಗುಡ್ಡಗಾಡು ಪ್ರದೇಶಗಳಿಂದ ಉತ್ತರ ಕನ್ನಡದ ಕಡೆಗೆ ವಲಸೆ ಬಂದಿರುವ ಬುಡಕಟ್ಟಿನಲ್ಲಿ ಗ್ರಾಮ್ಯೊಕ್ಕಲು ಕೂಡಾ ಒಂದಾಗಿದೆ. ಇದರಲ್ಲಿ ಹತ್ತಾರು ಒಳಪಂಗಡಗಳಿದ್ದರೂ ಅದರ ಅಂತರ್ಯದಲ್ಲಿ ಒಂದೇ ಸಂಸ್ಕೃತಿಯನ್ನು ಉಳಿಸಿಕೊಂಡಿವೆ. “ಪರಸ್ಪರ ಸಂಪರ್ಕದ ಅಭಾವ ಹಾಗೂ ವಿಭಿನ್ನ ಪರಿಸರ ಪ್ರಭಾವದಿಂದ ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಬದುಕಿನಲ್ಲಿ, ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ಪಡೆದು, ಇಂದು ಒಂದೊಂದು ಪ್ರತ್ಯೇಕ ಬುಡಕಟ್ಟು ಪಂಗಡಗಳಂತೆ ಗೋಚರಿಸಿದರೂ ಆಂತರ್ಯದಲ್ಲಿ ಈ ಗುಂಪುಗಳು ತಮ್ಮ ತಮ್ಮಲ್ಲಿ ಹಲವಾರು ಸಮಾನ ಅಂತರ್ಯಗಳನ್ನು ಉಳಿಸಿಕೊಂಡಿವೆ” (ಕ.ಬು.ಸಂ. ೧-೪೭೩). ಮೂಲತಃ ಬೇಟೆಯಾಡುವುದು ಮತ್ತು ಕುಂಬ್ರಿ ಬೇಸಾಯಮಾಡಿ ನಾಶವಾಗುವುದನ್ನು ಕಂಡ ಬ್ರಿಟಿಷರು ಕುಂಬ್ರೀಬೇಸಾಯಕ್ಕೆ ನಿಷೇಧ ಹೇರಿದ್ದರಿಂದ ಈ ಬುಡಕಟ್ಟಿನವರು ಕ್ರಮೇಣ ಗುಡ್ಡ ಗಾಡುಗಳನ್ನು ಬಿಟ್ಟು ಕರಾವಳಿಯ ಬಯಲು ಪ್ರದೇಶದೆಡೆಗೆ ವ್ಯಾಪಿಸಿದಂತಿದೆ” (ಕ.ಬ.ಸಂ. ೧-೪೭೪). ಭೂಮಾಲಿಕರ ಮತ್ತು ಹವ್ಯಕರ ತೋಟ, ಗದ್ದೆಗಳಲ್ಲಿ ದುಡಿಯುವುದನ್ನು ಬಿಟ್ಟು ಆ ಭಾಗದಲ್ಲಿಯ ಗುಡ್ಡಗಾಡು ತೊರೆದು ಸ್ವಂತ ತಮ್ಮ ಕಾಲ ಮೇಲೆ ನಿಂತು ಬದುಕಬೇಕೆಂಬ ನಿರ್ಧಾರವನ್ನು ಮಾಡಿದಂತೆ ತೋರುತ್ತದೆ. ಅದಕ್ಕಾಗಿ ಬೇಸಾಯ ಮಾಡುವ ಭೂಮಿಯನ್ನು ಅರಸುತ್ತ ಜನರ – ನೆಲ ಮತ್ತು ಅಲ್ಲಿಯ ಗಿಡಗಂಟಿಗಳನ್ನು ಕಡಿದು ಭತ್ತದ ಭೂಮಿಗೆ ಯೋಗ್ಯವಾಗುವಂತೆ ಮಾಡಿದ ಇವರ ಸಾಧನೆ ಮೆಚ್ಚುವಂಥದ್ದು, ಒಟ್ಟಿನಲ್ಲಿ “ಗ್ರಾಮೊಕ್ಕಲು ಸಹ್ಯಾದ್ರಿಯ ತಗ್ಗು ದಿನ್ನೆಗಳ ಮಧ್ಯದಿಂದ ಹರಿಯುವ ಶರಾವತಿ, ಅಘನಾಶಿನಿ, ನದೀ ತೀರದಲ್ಲಿ ಈ ನದಿಗಳು ನಿರ್ಮಿಸಿದ ಕಣಿವೆಗಳಲ್ಲಿ ಗಜನೀ ಭೂಮಿಗಳಲ್ಲಿ, ಜವಳು ಪ್ರದೇಶಗಳಲ್ಲಿ, ಸಮುದ್ರ ಕಿನಾರೆಗಳಲ್ಲಿ, ಗೊಪ್ಪೆಗೊಪ್ಪೆಯಾಗಿ ಚಿಕ್ಕ ಚಿಕ್ಕ ಮನೆಗಳನ್ನು ಕಟ್ಟಿಕೊಂಡು ಕೊಪ್ಪಗ್ರಾಮವನ್ನು ನಿರ್ಮಿಸಿಕೊಂಡು, ಸಂಸ್ಕೃತಿ ಸಂಪನ್ನ ಬದುಕು ಬಾಳುತ್ತಿದ್ದಾರೆ” (ಕ.ಬ.ಸಂ. ೧-೪೭೯).

ಹಟ್ಟಿಗಳನ್ನಾಗಿಸಿಕೊಂಡು ಬದುಕುತ್ತಿರುವ ಅಲೆಮಾರಿಗಳು

ಬಹಳ ಹಿಂದಿನಿಂದಲೂ ಕಾಡು, ಗುಡ್ಡ, ಬೆಟ್ಟ, ಅರಣ್ಯಗಳ ಅಂಚಿನಲ್ಲಿ ಜೀವನ ಸಾಗಿಸುತ್ತ ಬಂದಿರುವ ಬುಡಕಟ್ಟುಗಳಾದ ಗೊಲ್ಲರು, ಕಾಡುಗೊಲ್ಲರು, ಕೊರವರು, ಬೇಡರು, ಮ್ಯಾಸಬೇಡರು, ಕಾಡು ಕೊರಬರು, ಗೊಂಡರು, ಕೊರಗರು, ಜೇನುಕುರುಬರು ಮುಂತಾದ ಅಲೆಮಾರಿಗಳೆಂದು ಹೆಸರಿಸಬಹುದು.

ಮ್ಯಾಸಬೇಡರು ಮತ್ತು ಕಾಡುಗೊಲ್ಲರು ಊರ ಹೊರಗೆ ಇಲ್ಲವೆ ಕಾಡಿನಂಚಿನ ಸಮೀಪದಲ್ಲಿನ ಪ್ರತ್ಯೇಕ ಭೂ ಪ್ರದೇಶದಲ್ಲಿ ಸುಮಾರು ೩೦ ರಿಂದ ೪೦ ಚಿಕ್ಕ ಚಿಕ್ಕ ಗುಡಿಸಲುಗಳನ್ನು ರಚಿಸಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಕರ್ನಾಟಕದ ತುಂಬೆಲ್ಲ ಕಂಡುಬರುವ ಇವರು ತಮ್ಮ ಹಟ್ಟಿಗಳನ್ನು ತಮ್ಮ ಹೆಸರಿನಿಂದಲೇ ಕರೆಯಿಸಿಕೊಳ್ಳುತ್ತಾರೆ. ಕಳ್ಳಕಾಕರು ಹಟ್ಟಿಯ ಒಳಗೆ ಪ್ರವೇಶ ಮಾಡದಿರಲಿ ಎಂದು ಸುತ್ತಲೂ ಬೇಲಿಯನ್ನು ಹಾಕಿಕೊಳ್ಳುತ್ತಾರೆ. ಆಧುನಿಕತೆಗೆ ತಮ್ಮ ಮನಸ್ಸನ್ನು ಕೊಡುತ್ತಿರುವುದರಿಂದ ಗುಡಿಸಲು ಮತ್ತು ಜೀವನ ಕ್ರಮದಲ್ಲಿ ಬದಲಾವಣೆಯಾಗುತ್ತಿದೆ ಎಂದು ಹೇಳಬಹುದಾಗಿದೆ. ಜೇನು ಕುರುಬರು ಮೈಸೂರು ಜಿಲ್ಲೆ ಮತ್ತು ಅದರ ಆಸುಪಾಸಿನ ಜಿಲ್ಲೆಗಳಲ್ಲಿ ವಾಸವಾಗಿರುವುದು ಕಂಡುಬರುತ್ತದೆ. “ಇವರು ಕಾಡಿನಲ್ಲೇ ಅರೆ ಅಲೆಮಾರಿಗಳಾಗಿ ವಾಸ ಮಾಡುತ್ತಿದ್ದರೆಂದು ತಿಳಿದುಬರುತ್ತದೆ. ಇವರಿಗೆ ತಮ್ಮದೇ ಆದ ನೆಲೆ ಇದೆ, ಎಂದು ತಿಳಿದಿಲ್ಲ ಅದಕ್ಕೆ ಯಾವ ಭೌಗೋಳಿಕವಾದ ನಿರ್ದಿಷ್ಟ ಮೇರೆ ಇಲ್ಲ; ಇವರು ಯಾವ ರಾಜರ ಕೆಳಗೆ ಬಂದರೂ ಅವರು ಯಾವ ಭೌಗೋಳಿಕ ನಿರ್ಬಂಧವನ್ನು ಹಾಕಿರಲಿಲ್ಲ. ಆದ್ದರಿಂದ ಅವರು ವಾಸಿಸುತ್ತಿದ್ದ ಕಾಡೆಲ್ಲ ತಮ್ಮದೇ ಎಂದು ತಿಳಿದಿದ್ದರು”. “ಜೇನು ಕುರುಬರು ಹತ್ತು ಹದಿನೈದು ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಈ ವಾಸ್ತವ್ಯವನ್ನು ಗ್ರಾಮ ಎಂದು ಕರೆದುಕೊಳ್ಳುತ್ತಾರೆ” (ಕ.ಬು.ಸಂ. ೧-೭೧೦-೭೧೧). ಅದೇ ರೀತಿಯಲ್ಲಿ ಕಾಡ ಕುರುಬರು ವಾಸ ಮಾಡುವ ಪ್ರದೇಶವನ್ನು ‘ಹಾಡಿ’ ಎಂಬುದಾಗಿ ಕರೆಯುತ್ತಾರೆ. ತಗ್ಗಾದ, ಚಿಕ್ಕದಾದ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತಾರೆ” (ಕ.ಬು.ಸಂ. ೧-೭೪೯).

ಸ್ಮಶಾನ ಮತ್ತು ಊರ ಹೊರಗೆ ಇರುವ ಅಲೆಮಾರಿಗಳು

ಸ್ಮಶಾನ ಮತ್ತು ನೆಲೆ, ಭಿಕ್ಷಾಟನೆಯೇ ತಮ್ಮ ವೃತ್ತಿಯನ್ನಾಗಿಸಿಕೊಂಡಿರುವ ಪ್ರಮುಖ ಅಲೆಮಾರಿಗಳಲ್ಲಿ ಸುಡುಗಾಡು ಸಿದ್ಧರೂ ಒಬ್ಬರಾಗಿದ್ದಾರೆ. ಪ್ರಾಚೀನ ಕಾಲದಲ್ಲಿ ಆಂಧ್ರಪ್ರದೇಶದ ಶ್ರೀಶೈಲ ಗುಡ್ಡ-ಬೆಟ್ಟಗಳಲ್ಲಿ ವಾಸಿಸುತ್ತಿದ್ದ ಇವರು ಮಲ್ಲಿಕಾರ್ಜುನ ಸ್ವಾಮಿಯ ಭಕ್ತರಾಗಿದ್ದರೆಂದು ಹೇಳಬಹುದು. ಕಾಡು ಕಾಯುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರು ಅಲ್ಲಿರುವ ಸುಗಂಧಭರಿತ ಗಿಡಮೂಲಿಕೆಗಳನ್ನು ಮಠಕ್ಕೆ ಅರ್ಪಿಸಿ ಸ್ವಾಮೀಜಿಗಳ ಪ್ರೀತಿ -ವಾತ್ಸಲ್ಯಕ್ಕೆ ಪಾತ್ರರಾದವರು. ಕ್ರಮೇಣ ಮುಂದೆ ನೈಸರ್ಗಿಕ ವಿಕೋಪವೋ ಅಥವಾ ಆಹಾರದ ಕೊರತೆಯೋ ಇವರು ಅಲ್ಲಿಂದ ಆಹಾರ ಹುಡುಕುತ್ತ ಕರ್ನಾಟಕ ಕಡೆಗೆ ಪ್ರಯಾಣ ಮಾಡಿದಂತೆ ಅವರ ಐತಿಹ್ಯ ಮತ್ತು ಕಥೆಗಳಿಂದ ತಿಳಿದು ಬರುತ್ತದೆ. ಆಹಾರದ ಅನ್ವೇಷಣೆಯಲ್ಲಿ ಚಿಕ್ಕ ಚಿಕ್ಕ ತಂಡೋಪಗಳಾಗಿ ಬಂದ ಇವರು ಮೊದಲು ಕಾಣಿಸಿಕೊಂಡದ್ದು ಬಳ್ಳಾರಿ ಜಿಲ್ಲೆಯ ಹರಪ್ಪನ ಹಳ್ಳಿಯಲ್ಲಿ ಮತ್ತು ಆಂಧ್ರದ ಗೋಲಕುಂಡದಲ್ಲಿ. ಹೀಗಾಗಿ ಇವರಿಗೆ ಗೋಲಕುಂಟ ಕಟ್ಟೆಯ ಸುಡುಗಾಡುಸಿದ್ಧರೆಂದು ಗುರುತಿಸಲಾಗಿದೆ. ಕ್ರಮೇಣ ಅಲ್ಲಿಂದ ಇವರು ರಾಯಚೂರು, ಬಿಜಾಪುರ, ನಿಡಗುಂದ, ಗುಲಬರ್ಗಾ, ಶಿವಮೊಗ್ಗ, ಬೆಂಗಳೂರು, ಗಿನಿವಾಲ, ಮುಂತಾದ ಪ್ರದೇಶಗಳಲ್ಲಿ ಪ್ರಸರಿಸಿದರು. ಇನ್ನೊಂದು ಪಂಗಡ ಕರ್ನೂಲ, ಗೋಲಕುಂಡ, ಮಹಿಬೂನನಗರ, ಬೀದರ, ಹುಮನಾಬಾದ, ಬಸವಕಲ್ಯಾಣ, ಮಂಠಾಳ, ಸ್ಟೇಶನ್ ಗಣಗಾಪೂರ, ಮುಂಬೈ ಮುಂತಾದ ಪ್ರದೇಶದ ಕಡೆಗೆ ಪ್ರಯಾಣ ಬೆಳೆಸಿದರು.

ಶಿವನ ರಕ್ಷಣೆಗಾಗಿ ಕಾವಲು ನಿಂತ ಇವರು ಮುಂದೆ ಶನಿ ದೇವನಿಂದ ಶಿಕ್ಷೆಗೊಳಗಾಗಿ ಮತ್ತೆ ಮರುಜನ್ಮ ಪಡೆದು ಶಿವ ಆಶೀರ್ವಾದ ಪಡೆದುಕೊಂಡು ಆತನ ಸಹಸ್ರನಾಮಾವಳಿಗಳನ್ನು ಕೊಂಡಾಡುತ್ತ ಪ್ರದೇಶದಿಂದ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಾ, ಭಿಕ್ಷೆ ಬೇಡಿಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಾರೆ.

ರುದ್ರನ ಪ್ರತಿರೂಪದಂತೆ ಕಾಣುವ ಇವರು ಸ್ಮಶಾನದಲ್ಲಿ ಮೂರು ದಿವಸ ಕಾಲ ಉಳಿದುಕೊಂಡು ಊರಲ್ಲಿ ಹರಕೆಯನ್ನು ಹಾಕಿ ಕೊನೆಯ ದಿವಸ ಭಿಕ್ಷೆಯನ್ನು ಬೇಡಿಕೊಂಡು ಬದುಕುತ್ತಾರೆ. ನಾಯಿ, ಕುರಿ, ಕೌಜುಗ, ಪುರ್ಲಿಗಳನ್ನು ಪ್ರೀತಿಯಿಂದ ಸಾಕುವ ಇವರು ಒಂದರಿಂದ ಮೂರು ಕುಟುಂಬಗಳು ಪ್ರವಾಸದಲ್ಲಿರುತ್ತಾರೆ. ಯಾವುದೇ ಕಾರಣಕ್ಕೂ ಈ ನಿಯಮವನ್ನು ಮೀರುವುದಿಲ್ಲ. ಈ ನಿಯಮ ಉಲ್ಲಂಘಿಸಿದರೆ ವರ್ಷಾಂತ್ಯದಲ್ಲಿ ನಡೆಯುವ (ದಸರಾ ಹಬ್ಬದ ಸಂದರ್ಭದಲ್ಲಿ) ತಮ್ಮ ನ್ಯಾಯಕಟ್ಟೆಯಲ್ಲಿ ದಂಡ ಮತ್ತು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಊರಾಡಲು ನಾನು ಬಂದಿದ್ದೇನೆಂದು ಸಿದ್ಧ ಆಯಾ ಊರಿನ ಪ್ರಮುಖ ಗೌಡರಿಗೆ ವಿಷಯವನ್ನು ತಿಳಿಸುತ್ತಾನೆ. ಅವರ ಅನುಮತಿಯನ್ನು ಪಡೆದುಕೊಂಡು ಸುಡಗಾಡಿನಲ್ಲಿ ತಮ್ಮ ಗುಡಿಸಲುಗಳನ್ನು ಹಾಕಿಕೊಳ್ಳುತ್ತಾರೆ. “ಸಿದ್ಧನು ಒಂದು ಸಮಾಧಿಯ ಸ್ಥಳದಲ್ಲಿ ಕೆಂಪು ಧ್ವಜವನ್ನು ಎಚ್ಚರಿಕೆಯ ಸಂಕೇತವಾಗಿ ಊರುತ್ತಾನೆ. ಮಧ್ಯರಾತ್ರಿಯಲ್ಲಿ ಒಬ್ಬನೇ ಉರಿಯುವ ಕಂದೀಲು ಬೆಳಕಿನಲ್ಲಿ ಸಮಾಧಿಯ ಮೇಲೆ ಅರಸಿಣ ಕುಂಕುಮದ ರಂಗಾ ಹಾಕುತ್ತಾನೆ. ಸ್ಮಶಾನದಲ್ಲಿಯೇ ಇರುವ ಚಟ್ಟಿನ, ಕಟ್ಟಿಗೆಗಳಿಂದ ಅಡುಗೆ ಮಾಡಿ ಎಡೆಮಾಡುತ್ತಾನೆ. ಶಂಖ, ಜಾಗಟೆ, ಮಂತ್ರಘೋಷಣೆಗಳೊಂದಿಗೆ ಭಯಾನಕ ಪೂಜೆಯಿಂದ ಮಾರಿ, ಮಸಣಿ, ಭೂತಗಳೆಲ್ಲ ಓಡುತ್ತವೆ ಎಂಬ ನಂಬಿಕೆ ಇಂದಿಗೂ ಹಳ್ಳಿಗಳಲ್ಲಿದೆ” (ಉ.ಕ.ಬು.ಸಂ – ೨-೫೪೫).

ಸುಡುಗಾಡು ಸಿದ್ಧರ ನ್ಯಾಯ ಪಂಚಾಯಿತಿ ಬಹಳ ಬಲಿಷ್ಠವಾಗಿದೆ. ಬಿಜಾಪುರ ಜಿಲ್ಲೆಯ ನಿಡಗುಂದ ಸಮೀಪದಲ್ಲಿರುವ ಆಲಮಟ್ಟಿ ಡ್ಯಾಂಮಿನ ಬಯಲು ಪ್ರದೇಶದಲ್ಲಿ ಪ್ರತಿವರ್ಷ ನ್ಯಾಯ ಪಂಚಾಯಿತಿಯನ್ನು ಹಾಕುತ್ತಾರೆ. ಹದಿನೈದು ದಿವಸಗಳ ಕಾಲ ತಮ್ಮ ಸಮಾಜದ ಆಗು-ಹೋಗುಗಳ ಕುರಿತು ಚರ್ಚಿಸುತ್ತಾರೆ. ತಪ್ಪು ಮಾಡಿದರೆ ಶಿಕ್ಷೆ ಮತ್ತು ದಂಡ ವಿಧಿಸುತ್ತಾರೆ. ಅನೈತಿಕ ಸಂಬಂಧವನ್ನರಿಸಿಕೊಂಡವರಿಗೆ ಒಂದು ಗಿಡದ ಹತ್ತಿರ ಒಯ್ದು ಆ ಗಿಡಕ್ಕೆ ಕೊಡಲಿಯಿಂದ ಕಚ್ಚು ಹಾಕಿ, ಆ ಹೆಸರಿನಿಂದಲೇ ಕರೆಯುವ ಪದ್ಧತಿ ಈಗಲೂ ಜಾರಿಯಲ್ಲಿದೆ.

ಗೋಲಕುಂಡ ಕಟ್ಟೆಯ ವ್ಯಾಪ್ತಿಯಲ್ಲಿ ಬರುವ ಸುಡುಗಾಡು ಸಿದ್ಧರು ಆಯಾ ಗ್ರಾಮದ ಸಮೀಪ ಇದ್ದು ಇನ್ನೂ ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದಾರೆ. ಅದೇ ರೀತಿಯಲ್ಲಿ ಹರಪ್ಪನಹಳ್ಳಿ ಕಟ್ಟೆಯ ವ್ಯಾಪ್ತಿಯಲ್ಲಿ ಬರುವ ಸುಡುಗಾಡು ಸಿದ್ಧರು ಕಾಡು, ಗುಡ್ಡ ಬೆಟ್ಟಗಳ ಅಂಚಿನಲ್ಲಿರುವ ಭೂಮಿಯನ್ನು ಸರಕಾರದಿಂದ ಪಡೆದುಕೊಂಡು ವ್ಯವಸಾಯ ಮಾಡಲು ತೊಡಗಿದ್ದಾರೆ. ಮಿಶ್ರಹಾರಿಗಳಾದ ಇವರು ವಾರದಲ್ಲಿ ಎರಡು ಸಲ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. ವರ್ಷದ ಎಂಟು ತಿಂಗಳು ಕಾಲ ಅಲೆಯುತ್ತಲೇ ಜೀವನ ಸಾಗಿಸುವ ಇವರು ಆರ್ಥಿಕವಾಗಿ ತುಂಬಾ ಹಿಂದುಳಿದಿದ್ದಾರೆ. ಇವರಂತೆಯೇ ಆಂಧ್ರ ಮೂಲದಿಂದಲೇ ಬಂದಿರುವ ಬುಡುಗ ಜಂಗಾಲರು ಕೂಡಾ ಕರ್ನಾಟಕದ ತುಂಬೆಲ್ಲ ಸಂಚರಿಸುತ್ತಾರೆ. “ಯಾವ ಭೌಗೋಳಿಕ ಪರಿಸರದಲ್ಲಿ ಯಾವ ಯಾವ ಬೆಳೆ ಸಮೃದ್ಧವಾಗಿದೆ ಎಂಬುದನ್ನು ತಿಳಿದುಕೊಂಡಿರುತ್ತಾರೆ. ಸಾಮಾನ್ಯವಾಗಿ ಮಳೆ ಬೆಳೆ ಸರಿಯಾಗಿ ಬಾರದೇ ಇದ್ದ ಪ್ರದೇಶಗಳಲ್ಲಿ ಜನರಲ್ಲಿ ಹೆಚ್ಚು ಕಾಡುವುದಿಲ್ಲ. ಹೆಚ್ಚು ಬೆಳೆಬಂದ ಪ್ರದೇಶಕ್ಕೆ ಮೊದಲಿಗೆ ಭೇಟಿ ನೀಡುತ್ತಾರೆ” (ಕ.ಬು.ಕ.ಸಂ. ೨-೬೨೯).

ಅತ್ಯಂತ ಬಡತನದ ರೂಪದಲ್ಲಿ ಬಿದ್ದೂ ಒದ್ದಾಡುವಂತಹ ಅಲೆಮಾರಿ ಜನಾಂಗಗಳಲ್ಲಿ ಒಂದಾದ ಕುರುಮಾಮ ಅಥವಾ ಕೊಂಡಮಾಮರು ಜನರ ಭವಿಷ್ಯವನ್ನು ಹೇಳುತ್ತ ಜೀವಿಸುತ್ತಾರೆ. ಊರಹೊರಗಿನ ಸರಕಾರಿ ಸ್ಥಳದಲ್ಲಿ ಜೋಪಡಿ ಅಥವಾ ಟೆಂಟುಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಒಂದೆರಡು ದಿವಸಗಳು ಆಯಾ ಊರುಗಳಲ್ಲಿದ್ದೂ ಮುಂದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ. “ಜನರ ಭವಿಷ್ಯವನ್ನೂ ಹೇಳುತ್ತಾ ಬದುಕುತ್ತಿರುವ ಕುರುಮಾಮರು ನಿಜವಾಗಲೂ ತಮ್ಮ ಸ್ವಂತ ಭವಿಷ್ಯವನ್ನು ಕಟ್ಟಲಾಗದೆ ನಿರ್ಲಿಪ್ತರಾದವರು. ಇವತ್ತಿಗೂ ಕುರುಮಾಮರಿಗೆ ಯಾವ ಊರಿನಲ್ಲಿಯೂ ಸ್ವಂತ ಜಮೀನಿಲ್ಲ ಮತ್ತು ಭೂಮಿಯ ಗೇಣಿದಾರರು ಕೂಡ ಇವರಲ್ಲಿ ಕಂಡು ಬರುವುದಿಲ್ಲ. ಅಲ್ಲದೆ ಇವರು ಭವಿಷ್ಯ ಹೇಳುತ್ತಾ ಭಿಕ್ಷೆ ಬೇಡಿ ಬದುಕುವ ಹೊರತಾದ ಯಾವ ವೃತ್ತಿಯನ್ನು ಅವಲಂಬಿಸಿದಂತೆ ಕಾಣುವುದಿಲ್ಲ.” (ಕ.ಬು.ಕ.ಸಂ. ೨-೩೯೫). ಇವರಂತೆ ದುರುಗ-ಮುರಗಿಯವರು, ಡೊಂಬರು ಮತ್ತು ಬುಡಬುಡಕೆಯರು ಆಯಾ ಗ್ರಾಮಗಳಲ್ಲಿ ಇದ್ದು ಭಿಕ್ಷೆ ಬೇಡಿಕೊಂಡು ಮುಂದಿನ ಊರಿಗೆ ಪ್ರಯಾಣ ಬೆಳೆಸುತ್ತಾರೆ. ಸುಡುಗಾಡು ಸಿದ್ಧ, ರಾಮಗೊಂಡ, ಊರಹೊರಗುಳಿದುಕೊಂಡರೆ ಇವರು ಧರ್ಮಶಾಲೆ, ಚಾವಡಿ, ಹಳೆಯ ಗುಡಿ-ಗುಂಡಾರಗಳಲ್ಲಿ ಉಳಿದುಕೊಂಡು ಜನರಿಗೆ ಶಕುನ, ದೇವರ ಆಟ ಹೇಳಿ ಖುಷಿಪಡಿಸಿ ಪ್ರಯಾಣಿಸುತ್ತಾರೆ.

ಆಕರಗಳು

೧. ಪ್ರೊ.ಎಚ್.ಜೆ. ಲಕ್ಕಪ್ಪಗೌಡ (ಪ್ರ.ಸಂ), ೧೯೯೮, ಕರ್ನಾಟಕ ಬುಡಕಟ್ಟುಗಳು, ಸಂ.೧, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

೨. ಪ್ರೊ.ಎಚ್.ಜೆ. ಲಕ್ಕಪ್ಪಗೌಡ (ಪ್ರ.ಸಂ), ೧೯೯೮, ಕರ್ನಾಟಕ ಬುಡಕಟ್ಟುಗಳು, ಸಂ.೧, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

೩. ಡಾ. ಮಂಜುನಾಥ ಬೇವಿನಕಟ್ಟಿ (ಸಂ), ೨೦೦೨, ಜಾನಪದ ಕರ್ನಾಟಕ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೪. ಡಾ. ಗಂಗಾಧರ ದೈವಜ್ಞ (ಸಂ), ೨೦೦೦, ಬುಡಕಟ್ಟು ಸಮಾಜ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೫. ಶ್ರೀ ಎ.ಎಸ್. ಪ್ರಭಾವಕರ (ಸಂ), ೨೦೦೦, ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೬. ಶ್ರೀ ಎಂ. ಚಂದ್ರಪೂಜಾರಿ (ಸಂ), ೨೦೦೨, ಸಮುದಾಯ ಮತ್ತು ಸಹಭಾಗಿತ್ವ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೭. ಡಾ. ಹಿ.ಚಿ.ಬೋರಲಿಂಗಯ್ಯ, ೨೦೦೦, ಬುಡಕಟ್ಟು ದೈವರಾಧನೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ ೫೮೩ ೨೭೬.

೮. ರಾಜಪ್ಪ ದಳವಾಯಿ, ೧೯೯೩, ಹಕ್ಕಿಪಿಕ್ಕಿಯವರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೯. ಟಿ.ಎಂ. ಭಾಸ್ಕರ್, ೨೦೦೦, ಸುಡುಗಾಡು ಸಿದ್ಧರು, ಮರುಗ ಪ್ರಕಾಶನ, ಗುಲಬರ್ಗಾ

೧೦. ಚ.ನ. ಶಂಕರರಾವ್, ೧೯೯೦, ಸಮಾಜಶಾಸ್ತ್ರ ಪ್ರವೇಶ, ಜೈ ಭಾರತ ಪ್ರಕಾಶನ, ಮಂಗಳೂರು.

೧೧. ಡಾ. ಪಿ.ಕೆ. ಖಂಡೋಬಾ, ೧೯೯೧, ಕರ್ನಾಟಕದ ಲಂಬಾಣಿಗಳು ಒಂದು ಸಾಂಸ್ಕೃತಿಕ ಅಧ್ಯಯನ, ದಿ, ತೇಜಸಿಂಗ್ ರಾಠೋಡ, ಮೊಮೋರಿಯಲ್ ಟ್ರಸ್ಟ್‌, ಗುಲಬರ್ಗಾ.

೧೨. ಎ.ಆರ್.ಕಟ್ಟಿ, ೧೯೮೦, ಸಮಾಜಶಾಸ್ತ್ರದ ಮೂಲ ತತ್ವಗಳು, ವಿಜಯ ಬುಕ್‌ಡಿಪೋ, ಗದಗ.

೧೩. ಬಿ.ಮೋಹನಾರಾವ್ ಮತ್ತು ರವೀಂದ್ರ ಕೊಪ್ಪರ, ೧೯೮೦, ಸಾಮಾನ್ಯ ಮಾನವಶಾಸ್ತ್ರ, ವಿಜಯ ಬುಕ್‌ಡಿಪೋ, ಗದಗ.

* * *