ಅಲೆಮಾರಿಗಳ ಸಾಂಸ್ಕೃತಿಕ ಲೋಕದೃಷ್ಟಿ ನನ್ನ ಗ್ರಹಿಕೆಯೊಂದಿದೆ. ಜೊತೆಗೆ ಇಲ್ಲಿಯವರೆಗೆ ನೀಡಿದ ಉಪನ್ಯಾಸಕರ ಗ್ರಹಿಕೆಯು ಇದೆ. ಅದೆಲ್ಲವನ್ನು ಹೊಂದಿಸಿಕೊಳ್ಳುವ ಪ್ರಯತ್ನವಿದೆ.

ಈಗ ಅಲೆಮಾರಿಗಳ ಬಗ್ಗೆ ಚರ್ಚೆ ಚಿಂತನೆ ನಡೆಯುತ್ತಲಿದೆ.ನೆಲ ಮತ್ತು ನೆಲೆ ಇಲ್ಲದೆ ಅಲೆಯುವವರು ಯಾರೋ ಅವರು ಅಲೆಮಾರಿಗಳು. ಅಲೆಗಳು ಹೇಳದೇ ಕೇಳದೇ ಬರುತ್ತವೆ, ಹೇಳದೇ ಕೇಳದೇ ಹೋಗುತ್ತವೆ ಹಾಗೆ ಅಲೆಮಾರಿಗಳು ಬರುತ್ತಾರೆ, ಹೋಗುತ್ತಾರೆ. ಹೇಗೆ ಹೊಳೆಯ ಅಲೆ ಬಂದಾಗ ಹಾನಿಯೂ ಆಗುತ್ತದೆ, ಲಾಭವು ಆಗುತ್ತದೆಯೋ ಹಾಗೆ ಅಲೆಮಾರಿ ಜನಾಂಗಗಳು ನೆಲೆಮಾರಿಗಳತ್ತ ಬಂದಾಗ ಲಾಭವು ಆಗುತ್ತದೆ, ಹಾನಿಯೂ ಆಗುತ್ತದೆ. ಬಹಳಷ್ಟು ಜನ ವಿದ್ವಾಂಸರು ಈ ಅಲೆಮಾರಿಗಳನ್ನು ಬುಡಕಟ್ಟುಗಳ ಜೊತೆ, ಆದಿವಾಸಿಗಳ ಜೊತೆ, ದಲಿತರ ಜೊತೆ, ಹಿಂದುಳಿದವರ ಜೊತೆ ಸ್ವಲ್ಪ ಕೂಡಿಸುತ್ತಾ ಕೂಡಿಸುತ್ತಾ ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಇವರೆಲ್ಲರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆಗಳು ಒಂದೇ ಆಗಿರಬಹುದು, ಆದರೂ ಕೂಡ ಇವರು ಬೇರೆ ಬೇರೆ ಅನ್ನುವುದನ್ನು ನಾವು ಗ್ರಹಿಸಿಕೊಳ್ಳಬೇಕು ಅಂತ ನಾನು ಅಂದುಕೊಳ್ಳುತ್ತೇನೆ. ಈ ಅಲೆಮಾರಿಗಳಲ್ಲಿ ಎರಡು ತರದ ಅಲೆಮಾರಿಗಳು ಇದ್ದಾರೆ. ಒಂದು ಅರೆ ಅಲೆಮಾರಿಗಳು, ಇನ್ನೊಂದು ಪೂರ್ಣ ಅಲೆಮಾರಿಗಳು. ಮನೆಯನ್ನು ಒಂದು ಕಡೆ ಇಟ್ಟು ಮನೆಗೆ ಬೇಕಾಗುವಂತಹ ಸಂಪನ್ಮೂಲಗಳನ್ನು ಕ್ರೋಢೀಕರಣ ಮಾಡುವುದಕ್ಕೆ ಅಲೆಯುವವರನ್ನು ಅರೆ ಅಲೆಮಾರಿಗಳು ಅಂದರೆ ಮನೆ ಅಂತ ಮಡದಿ ಮಕ್ಕಳು, ತಂದೆ, ತಾಯಿ, ನಾಯಿ, ಕುರಿ, ಕೋಳಿ, ಎತ್ತು, ಎಮ್ಮೆ, ಬೆಕ್ಕು ಮತ್ತು ಕೋತಿ ಆ ಒಟ್ಟು ತಮ್ಮ ಸಂಸಾರವನ್ನೇ ಹೊತ್ತುಕೊಂಡು ಅಲೆಯುವಂತವರು ಪೂರ್ಣ ಅಲೆಮಾರಿಗಳು.

‘ನೆಲೆ’ ಅಂದ್ರೆ, ‘ಊರು’, ‘ಊರೋದು’ ಒಂದು ಸ್ಥಾನದಲ್ಲಿ ಇರುವುದು ಎಂದು ಅರ್ಥ. ಈ ಅಲೆಮಾರಿಗಳ ಬಗ್ಗೆ ನೆಲೆಮಾರಿಗಳಲ್ಲಿ ವಿಚಿತ್ರವಾದಂತಹ, ಸಮ್ಮಿಶ್ರವಾದಂತಹ ಭಾವನೆಗಳು ಇವೆ. ಅಲೆಮಾರಿಗಳ ಬಗ್ಗೆ ಭಯವಿದೆ. ಕುತೂಹಲವಿದೆ, ಆಶ್ಚರ್ಯವಿದೆ, ಮನೋರಂಜನೆ ಇದೆ, ಗೌರವ ಇದೆ. ಹೀಗೆ ಸಮ್ಮಿಶ್ರವಾದಂತೆ ಭಾವನೆಗಳಿವೆ. ಏಕೆಂದರೆ ಅಲೆಮಾರಿಗಳಲ್ಲೂ ಕೂಡ ಅನೇಕ ವಿಧದ ಜನ ಮತ್ತು ಸಮುದಾಯಗಳು ಇವೆ. ಇಷ್ಟೆಲ್ಲಾ ಇದ್ದರೂ ಕೂಡ ಅಲೆಮಾರಿಗಳು ಮಾತ್ರ ತಮ್ಮ ಜೀವನ ನಿರ್ವಹಣೆಗಾಗಿ ಸರ್ಕಸ್ ಮಾಡುವಂತಹ ಜೀವಿಗಳಾಗಿದ್ದಾರೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ‘ಅಲೆ’ ಅಂತ ಹೇಳಿದರೆ ‘ಚಲನೆ’, ‘ಚಲಿಸು’ ಅಂತ ಅರ್ಥ. ತಿರುಗುವವರೂ ನೆಲೆ ನಿಲ್ಲದವರು ಅಂತ. ಯಾರು ಅಲೆಯುತ್ತಾರೆ, ಯಾರು ತಿರುಗುತ್ತಾರೆ ಅವರಿಗೆ ತಿಳುವಳಿಕೆ ಜಾಸ್ತಿ ಇರುತ್ತದೆ. ತಿಳಿಯುವುದು ಮತ್ತು ಅಲೆಯುವುದು ಎರಡು ಕೂಡಿ ಸಾಗುತ್ತಿರುತ್ತವೆ. ಅದಕ್ಕೆ ಏನು ಹೇಳುತ್ತಾರೆ ಅಂದ್ರೆ ಜ್ಞಾನವನ್ನು ಸಂಪಾದಿಸಬೇಕಾದರೆ ದೇಶವನ್ನು ನೋಡಬೇಕು ಅನ್ನುವಂತಹ ಮಾತು ಒಂದು ಇದೆ. ಈ ಹಿನ್ನೆಲೆಯೊಳಗೆ ತಿಳಿವಳಿಕೆ ಅಂದರೆ ಅದು ದೇಹಕ್ಕೆ ಸಂಬಂಧಪಟ್ಟ ತಿಳಿವಳಿಕೆಯಾಗಿರಬಹುದು, ಜೀವಿಗಳ ಬಗ್ಗೆ ಸಂಬಂಧಿಸಿದ ತಿಳುವಳಿಕೆ ಇರಬಹುದು. ಸಸ್ಯಗಳ ಬಗ್ಗೆ ಇರುವಂತೆ ತಿಳುವಳಿಕೆ ಇರಬಹುದು. ಪ್ರಕೃತಿಗೆ ಸಂಬಂಧಿಸಿದ ತಿಳಿವಳಿಕೆ ಇರಬಹುದು. ಒಟ್ಟಾರೆಯಾಗಿ ಅವರದು ಈ ನೆಲೆಮಾರಿಗಳ ತಿಳಿವಳಿಕೆಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಹೆಚ್ಚು ವಾಸ್ತವವಾಗಿರುತ್ತದೆ ಹಾಗೂ ಅರ್ಥಪೂರ್ಣವಾಗಿ ಇರುತ್ತದೆ.

ಇನ್ನೊಂದು ವಿಶೇಷ ಏನು ಅಂತ ಹೇಳಿದರೆ ಅಲೆಮಾರಿಗಳು ಬಹುಭಾಷಿಕರಾಗಿರುತ್ತಾರೆ ಮತ್ತು ಬಹು ವೇಷಗಳನ್ನು ಧರಿಸುವರು ಆಗಿರುತ್ತಾರೆ. ಮನುಷ್ಯ ಎಷ್ಟು ಎಷ್ಟು ಶ್ರಮಶೀಲನಾಗುತ್ತಾನೊ ಅಷ್ಟಷ್ಟು ಸಂಸ್ಕೃತಿ ವಿಕಾಸವಾಗುತ್ತದೆ. ಬೌದ್ಧಿಕ ಶ್ರಮ ದೈಹಿಕ ಶ್ರಮ ಹೆಚ್ಚು ಹೆಚ್ಚು ಆದ ಹಾಗೆಲ್ಲ ಸಂಸ್ಕೃತಿ ವಿಕಾಸ ಹೆಚ್ಚು ಹೆಚ್ಚು ವ್ಯಾಪಕವಾಗುತ್ತಾ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಬಹುಮುಖಿ ಸಂಸ್ಕೃತಿಯನ್ನು ಉಳಿಸುವ ಅಲೆಮಾರಿಗಳು ನಿಜವಾದ ಜೀವಪರವಾದ ವ್ಯಕ್ತಿಗಳು ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು ಅಂತ ಅನಿಸುತ್ತದೆ. ಈ ಅಲೆಮಾರಿಗಳು ಮೂರು ರೀತಿಯಲ್ಲಿರುತ್ತಾರೆ ಎನ್ನಬಹುದು. ಮೊದಲನೆಯವರು ಆಕ್ರಮಣಶೀಲ ಅಲೆಮಾರಿಗಳು. ಅವರು ಕಳವು ಮಾಡುವುದು, ಪ್ರಾಣಿಗಳನ್ನು ಕೊಲ್ಲುವುದು, ರಕ್ತಹೀರುವುದು, ಅಂಜಿಕೆ ಹುಟ್ಟಿಸುವುದು. ನೀವು ‘ದಾನ-ಧರ್ಮ ಕೊಡುವುದಿಲ್ಲ ಅಂದ್ರ ವಾಂತಿ ಮಾಡಿಕೊಳ್ಳುತ್ತೇವೆ ನೋಡು’ ಅನ್ನುವುದು. ಇಲ್ಲಂದ್ರ ನಿಮ್ಮ ಹೆಣ್ಣುಮಕ್ಕಳನ್ನು ಓಡಿಸಿಕೊಂಡು ಹೋಗುತ್ತೇವೆ ನೋಡು ಅನ್ನುವುದು. ಇಲ್ಲ ‘ನಿಮ್ಮ ಕುರಿ-ದನಗಳನ್ನು ಓಡಿಸಿಕೊಂಡು ಹೋಗುತ್ತೇವೆ ನೋಡು’ ಅನ್ನುವುದು, ಹೀಗೆ ಭಯವನ್ನು ಉತ್ಪಾದನೆ ಮಾಡಿ, ಇಲ್ಲ ಜೀವಿಗಳನ್ನು ಕೊಂದು ಅಥವಾ ಜೀವಿಗಳಿಗೆ ಭಯವುಂಟುಮಾಡಿ ಬದುಕುವಂಥ ವ್ಯಕ್ತಿಗಳು ಇವರು ಆಕ್ರಮಣಶೀಲ ಅಲೆಮಾರಿಗಳು. ಇನ್ನು ಕೆಲವರು ಕರಕುಶಲ ಅಲೆಮಾರಿಗಳು ಇದ್ದಾರೆ ಅವರೇನೂ ಆಕ್ರಮಣ ಮಾಡುವುದಿಲ್ಲ. ತಮಗೆ ಬರುವಂತಹ ಕಲೆ ಏನಿದೆ, ತಮ್ಮಲ್ಲಿ ಇರುವಂತಹ ಕೌಶಲ್ಯ ಏನಿದೆ ಅದನ್ನು ಎನ್‌ಕ್ಯಾಶ್‌ಮೆಂಟ್ ಮಾಡಿಕೊಂಡು ಬದುಕುತ್ತಾರೆ. ಅಂದರೆ ಈಗ ಹಲ್ಲು ಕಡ್ಡಿ ಮಾಡುವುದಿರಬಹುದು, ಕುಕನ ಕಡ್ಡಿ ಮಾಡುವುದಿರಬಹುದು, ಹಂಚು ಮಾಡುವುದಿರಬಹುದು ಅಥವಾ ಬೇರೆ ಬೇರೆ ಕೈ ಕಸೂತಿ ವಸ್ತುಗಳನ್ನು ಮಾರಾಟ ಮಾಡುವುದಿರಬಹುದು ಅಥವಾ ಪ್ರದರ್ಶನ ಕಲೆಯನ್ನು ಪ್ರದರ್ಶಿಸುವುದರಿಬಹುದು. ಡೊಂಬರ ಆಟವಿರಬಹುದು, ಮಾರಿವೇಷ ಹಾಕುವುದಿರಬಹುದು, ಅವುಗಳನ್ನು ತೋರಿಸಿ ಜನರಿಗೆ ಮನರಂಜನೆಯನ್ನು ಕೊಡುತ್ತಾ ತಿಳಿವಳಿಕೆಯನ್ನು ಹೇಳಿ ಸಂಪಾದನೆ ಮಾಡುವಂತದ್ದು ಒಂದು ರೀತಿ. ಇನ್ನು ಕೆಲವರು ಗಂಡಸರು, ಹೆಂಗಸರು ಇಬ್ಬರೂ ಕೂಡಿ ಕರಕುಶಲವನ್ನು ಪ್ರದರ್ಶನ ಮಾಡುತ್ತಿರುತ್ತಾರೆ ಮತ್ತು ಆಕ್ರಮಣಶೀಲ ಅಲೆಮಾರಿಗಳಾಗಿರುತ್ತಾರೆ. ಹೀಗೆ ಅವರನ್ನು ಉಭಯ ರೀತಿಯ ಅಲೆಮಾರಿಗಳು ಎನ್ನಬಹುದು. ಈ ಹಿನ್ನೆಲೆಯೊಳಗೆ ಕೆಲವು ಅಲೆಮಾರಿಗಳ ಹೆಸರುಗಳನ್ನು ಗಮನಿಸಬುದು. ಇದರಲ್ಲಿ ಕೆಲವರು ಬುಡಕಟ್ಟುಗಳಾಗಿದ್ದಾರೆ, ತಳಹಾಕಿದ್ದಾರೆ, ತಾಂಡ ಮಾಡಿದ್ದಾರೆ, ಮನೆಯನ್ನು ಕಟ್ಟಿಕೊಂಡಿದ್ದಾರೆ. ಆದರೂ ಅವರನ್ನ ಪ್ರಧಾನವಾಗಿ ಹೀಗೆ ಗ್ರಹಿಸಬಹುದು. ಬಯಲು ಕಂಬಾರರು, ಅಕ್ಕಸಾಲಿಗರು, ವೇಷಗಾರರು ದುರುಗಮುರಗಿಯವರು, ಪೋತರಾಜರು, ಡೊಂಬರು, ಅಡವಿ ಚೆಂಚರು, ಬಾಟರು, ಕೊರವಂಜಿಗಳು, ಕೊರವರು, ಜೋಗಿಗಳು ಇವರು ಒಂದು ರೀತಿಯವರು. ಇನ್ನು ಬುಡಬುಡಕಿಯವರು, ರಾಮಕುಂಡಲದವರು, ಸುಡುಗಾಡುಸಿದ್ಧರು, ಹೆಳವರು, ಗೊಂದಲಿಗರು ಬಾಳ ಸಂತೋಷಿಗಳು, ಮುತುಗಾರರು, ಕರಕರಮಂಡರು ಅಲ್ಲಿಂದ ಕಣಿ ಹೇಳುವವರು, ಮಾಡಿಕಾರರು, ಬಂಡೆ ಬೆಸ್ತರು ಮಂಡರು ಇವರು ಇನ್ನೊಂದು ರೀತಿ. ಇನ್ನೂ ಕೌಲೆತ್ತಿನವರು, ಕೋತಿ ಆಡಿಸುವವರು, ಕರಡಿ ಹಾಡಿಸುವವರು, ಹಕ್ಕಿ ಶಕುನ ಹೇಳುವವರು, ಹಾವು ಆಡಿಸುವವರು ಇವರು ಮತ್ತೊಂದು ರೀತಿ.

ಸಾಮಾನ್ಯವಾಗಿ ನಮ್ಮ ಕರ್ನಾಟಕದ ಸಂದರ್ಭದಲ್ಲಿ ಸಿಗುವಂತಹ ಬಹುತೇಕ ಅಲೆಮಾರಿಗಳಲ್ಲಿ ತೆಲುಗಿನವರು, ಮರಾಠರು ಇದ್ದಾರೆ. ಅಂದರೆ ಕನ್ನಡದ ರಿಸರದೊಳಗೆ ಬದುಕುವಂತಹ ಅಲೆಮಾರಿಗಳ ಭಾಷಿಕ ರೀತಿ ಇದಾಗಿದೆ. ಹಿರಿಯ ವಿದ್ವಾಂಸರಾದಂತಹ ದೇಶಾಂಶ ಹುಡಗಿರವರು ಒಂದು ಮಾತು ಹೇಳಿದ್ದಾರೆ. ಈ ಸಂಸ್ಕೃತಿ ಯಾವುದೆಂದರೆ ‘ಖಾವು-ಜ ಸಂಸ್ಕೃತಿ’ ಅಂತ. ಖಾವು-ಜ ಸಂಸ್ಕೃತಿ ಎಂದರೆ ‘ವುಜ’ ವುಜಾಡುಗುವುದು, ಸರ್ವನಾಶ ಮಾಡುವುದು, ಬೋಳು ಮಾಡುವುದು ಅಂತ. ಇನ್ನೂ ‘ಖಾ’ – ಖಾಸಗೀಕರಣ ‘ಉ’ – ಉದಾರೀಕರಣ ಮತ್ತು ‘ಜಾ’ – ಜಾಗತೀಕರಣ. ಸದ್ಯ ನಾವು ಖಾವುಜ ಸಂಸ್ಕೃತಿಯಲ್ಲಿ ನಿಂತಿದ್ದೇವೆ. ಈ ಖಾವುಜ ಸಂಸ್ಕರತಿಯೊಳಗೆ ಸಂಸ್ಕೃತಿ ಬೊಳ ಬೊಳ್‌ಆಗುತ್ತಿದೆ, ಎಲ್ಲಾ ಭೂಗೋಳಿಕರಣವಾಗುತ್ತಲಿದೆ. ಅಂದರೆ ವೈವಿಧ್ಯತೆ ಅನ್ನುವುದು ಹೋಗ್ತಾ ಇದೆ. ಬಹುಮುಖಿ ಸಂಸ್ಕೃತಿ, ಬಹುಭಾಷೆ, ಬಹು ರೀತಿಯ ಜೀವನ ವಿಧಾನಗಳು ಮಾಯವಾಗಿ ಹೋಗ್ತಾ ಇವೆ. ಇಂತಹ ಸಂದರ್ಭದೊಳಗೆ ಅಲೆಮಾರಿಗಳನ್ನು ಕುರಿತು ಚಿಂತನೆ ಮಾಡುವುದು ಅಂದ್ರೆ ಬಹುಮುಖಿ ಜೀವನ ವಿಧಾನವನ್ನು, ಬಹು ಭಾಷಾ ಪದ್ಧತಿಯನ್ನು, ಬಹು ಆರಾಧನೆಯನ್ನು ಗ್ರಹಿಸುವಂತಹ, ಗೌರವಿಸುವಂತಹ ಒಂದು ಕೆಲಸ ಆಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಸಾರಸ್ವತ ಲೋಕದ ಚಿಂತನೆಯ ಮುಖವಾಣಿ ಎನ್ನುವ ಹಾಗೆ ಇರುವಂತಹ ಕನ್ನಡ ವಿಶ್ವವಿದ್ಯಾಲಯವು ಬಹಳ ಮಹತ್ವಪೂರ್ಣವಾದಂತಹ ಕಾರ್ಯವನ್ನು ಮಾಡುತ್ತಿದೆ.

ದೇಸಿಯ ಜ್ಞಾನ ಪರಂಪರೆಗಳು ಸರ್ವನಾಶವಾಗಿ ಹೋಗುತ್ತಿವೆ. ನಮ್ಮ ಎಲ್ಲಾ ಜ್ಞಾನ ಪರಂಪರೆಗೆ ಒಂದು ನಮೂನೆ ವಿಸ್ಮೃತಿ ಬರುತ್ತಲಿದೆ. ಸ್ಥಳೀಯತೆ ಸರ್ವನಾಶವಾಗಿ ಜಾಗತೀಕರಣ ಆಗಮಿಸುತ್ತಲಿದೆ. ಜನ ಸಮುದಾಯಗಳು ಶತ ಶತಮಾನದಿಂದ ಬಳಸಿ ಕೊಂಡು ಬರುತ್ತಲಿರುವ ಜ್ಞಾನ ಅನ್ನುವುದು ಕಣ್ಮರೆಯಾಗುತ್ತಲಿದೆ. ಇಲ್ಲ ಅಂದರೆ ಕೊಳ್ಳೆ ಹೋಗುತ್ತಲಿದೆ. ಇಂತಹ ಸಂದರ್ಭದೊಳಗೆ ಎಲ್ಲಾ ಗ್ರಾಮೀಣರು ಪರದೇಶಿಗಳಾಗುತ್ತಿದ್ದಾರೆ. ಪರದೇಶಿ ಅಂದರೆ ಇನ್ನೊಂದು ಅರ್ಥವು ಇದೆ. ಆ ದಿಸೆಯಲ್ಲಿ ನಾವೆಲ್ಲ ಪರದೇಶಿಗಳಾಗುತ್ತಿದ್ದೇವೆ. ಇನ್ನೊಂದು ಅರ್ಥದಲ್ಲಿ ನೆಲೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಮಾನವನ ಮೂಲತಃ ಅಲೆಮಾರಿ. ಅಲೆಮಾರಿಯು ಹೌದು. ನೆಲೆಮಾರಿಯು ಹೌದು. ನೆಲೆಮಾರಿತನವು ಮರೆಯಾಗಿ ಅಲೆಮಾರಿತನವನ್ನ ಅಂಚಿಕೊಳ್ಳುವ ಈ ಸಂದರ್ಭದೊಳಗೆ ನಾವು ಅಲೆಮಾರಿಗಳಿಂದ ಸ್ಫೂರ್ತಿ ಹೊಂದಬೇಕಾದಂತಹ ಅವಶ್ಯಕತೆ ಇದೆ. ಇನ್ನೂ ಈ ಅಲೆಮಾರಿಗಳಲ್ಲಿ ಅನೇಕ ರೀತಿಯ ಜನ ಇದ್ದಾರೆ. ಅಧ್ಯಯನ ಇವತ್ತು ಆರಂಭವಾಗಿದೆ ಬಹಳ ಸಂತೋಷದ ಸಂಗತಿ. ಆದರೆ ಪ್ರಬಂಧಗಳಿಂದ ಮತ್ತು ಚರ್ಚೆಗಳಿಂದ ಎಲ್ಲವೂ ಸಾಧ್ಯವಾಗುತ್ತಿದೆ ಅಂತ ಅಲ್ಲ. ಚಾಲನೆ ಆರಂಭವಾಗಿದೆ. ಬಹುತೇಕ ಅಲೆಮಾರಿಗಳು ಮಾತೃಪ್ರಧಾನ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಅವರ ದೈವಗಳು ಹೆಣ್ಣು ದೈವಗಳಾಗಿವೆ ಮತ್ತು ಬಹುಭಾಷಾ ಸಂದರ್ಭದಲ್ಲಿ ಬದುಕುತ್ತಿದ್ದಾರೆ. ಎಲ್ಲಾ ಅಲೆಮಾರಿಗಳು ಸಂದರ್ಭ ಸನ್ನಿವೇಶ ಮತ್ತು ಪರಿಸ್ಥಿತಿಗೆ ತಕ್ಕ ಹಾಗೆ ತಮ್ಮ ಜೀವನ ಬದಲಾಯಿಸಿಕೊಳ್ಳುತ್ತಾರೆ ಹೊರತು ಯಾವುದೋ ಒಂದು ದತ್ತವದ ಜೀವನ ವಿಧಾನ ಇಟ್ಟುಕೊಂಡು ಅವರು ಹೋಗುವುದಿಲ್ಲ. ಅಲೆಮಾರಿಗಳ ಕೌಟುಂಬಿಕ ಸ್ಥಿತಿ ಬಹಳ ಗಾಢವಾಗಿರುತ್ತದೆ. ಏಕೆಂದರೆ ಅವರು ಕುಟುಂಬವನ್ನು ಬಿಟ್ಟು ಬೇರೆ ಸಂಬಂಧಗಳು ಇರುವುದಿಲ್ಲ. ಅವರು ಊರಿನವರೊಂದಿಗೆ ಸಂಬಂಧ ಇರುವುದಿಲ್ಲ. ಊರಿನವರು ಇವರೊಂದಿಗೆ ಸಂಬಂಧ ಬೆಳೆಸುವುದಿಲ್ಲ. ಅದಕ್ಕೆ ತಮ್ಮ ಕುಟುಂಬದ ಸಂಬಂಧವನ್ನು ಬಹಳ ಗಾಢವಾಗಿ ಅವರು ಇಟ್ಟುಕೊಂಡಿರುತ್ತಾರೆ. ಎಲ್ಲಿ ಹೋದರೂ ಕುಟುಂಬವನ್ನು ತೆಗೆದುಕೊಂಡು ಹೋಗಬೇಕಲ್ಲ, ಇನ್ನೂ ಅಲೆಮಾರಿಗಳಲ್ಲಿ ವಿವಾಹದ ಸಂಬಂಧ ಬಹಳ ಪ್ಲೆಜಿಬಲ್ ಆಗಿದೆ. ಈ ನೆಲೆಮಾರಿಗಳು ಹಾಗೆ ಅಲ್ಲ. ಅಲೆಮಾರಿಗಳಲ್ಲಿ ಗಂಡ, ಹೆಂಡತಿ ಹೊಂದಿಕೆಯಾಗಿ ಇರುತ್ತಾರೆ. ಬೇಕು ಅಂದರೆ ಹಿರಿಯಮ್ಮನ ತರುತ್ತಾರೆ. ಚರ್ಚೆ ಮಾಡುತ್ತಾರೆ. ಸಂಬಂಧ ಮುರಿದುಕೊಂಡು ಅದಕ್ಕೇನು ಕೊಡಬೇಕು ಕೊಟ್ಟು ಮತ್ತೆ ಬೇರೆಯವರ ಜೊತೆ ಯಾವ ರೀತಿ ಸಂಬಂಧ ಬೆಳೆಸಿಕೊಳ್ಳಬೇಕು, ಆ ಸಂಬಂಧ ಬೆಳೆಸಿಕೊಂಡು ಹೋಗಿ ಬಿಡುತ್ತಾರೆ. ಅಂದರೆ ಬಹಳ ಪ್ಲೆಜಿಬಲ್ ಆಗಿರುವಂತ ಜೀವನ ಪರವಾಗಿರುವಂತಹ ಒಂದು ರೀತಿ ಇರುವುದನ್ನು ನಾವು ಕಾಣಬಹುದು.

ಇನ್ನೂ ಅಲೆಮಾರಿಗಳಿಗೆ ಮಕ್ಕಳು ಜಾಸ್ತಿ ಇದ್ದಾರೆ. ಆರೋಗ್ಯಪಾಲನೆ ಆತ್ಮರಕ್ಷಣೆ, ವಸ್ತ್ರ ಆಭರಣ, ಆಹಾರ ಸಂಗ್ರಹಣೆ ಇಂತೆಲ್ಲಾ ವಿಷಯಗಳಲ್ಲಿ ಅವರು ಪರಿಸರವನ್ನು ಮತ್ತು ಪರಿಸ್ಥಿತಿಯನ್ನು ಅವಲಂಬಿಸಿಕೊಂಡು ಹೋಗುವುದನ್ನು ಕಾಣಬಹುದು. ಇನ್ನೂ ‘ಅಲೆಮಾರಿಗಳ ಸಾಂಸ್ಕೃತಿಕ ಲೋಕದೃಷ್ಟಿ’ ಅನ್ನುವ ವಿಷಯಕ್ಕೆ ನಮ್ಮ ಗೆಳೆಯರಿಬ್ಬರೂ ಇಂಗ್ಲೀಷಿನ ಮೂಲವನ್ನು ಹುಡುಕಿದರು. ನಾನು ನನ್ನದೇದಂತಹ ದೃಷ್ಟಿಕೋನವನ್ನು ಕೊಡುವುದಕ್ಕೆ ಇಷ್ಟಪಡುತ್ತೇನೆ. ನನ್ನದು ಅಂದರೆ ನಮ್ಮ ಕನ್ನಡದ್ದು. ಲೋಕ ಅಂದು ಕೂಡಲೇ ನಮ್ಮ ಕನ್ನಡದಲ್ಲಿ ಪರಲೋಕ ಅನ್ನುವ ಮಾತು ಬರುತ್ತದೆ. ಲೋಕ ಅಂದರೆ ಒಂದು ಇಹ ಲೋಕ ಇನ್ನೊಂದು ಪರಲೋಕ. ಪರಲೋಕ ಅಂದರೆ ಆಧ್ಯಾತ್ಮಿಕ ಅಂತ ಹೇಳಿ. ಲೌಖಿಕ ಅಂತ ಹೇಳಿದರೆ ಇಹಲೋಕದ ಬಗ್ಗೆ ಇರುವಂತಹ ದೃಷ್ಟಿಕೋನ. ಅಂದರೆ ವಾಸ್ತವ ಬದುಕಿನ ಬಗ್ಗೆ ಇರುವಂತಹ ನೆಲೆ, ನಿಲುವು, ಚಿಂತನೆ, ಏನು? ಅಂತ. ಈ ಹಿನ್ನೆಲೆಯೊಳಗೆ ‘ಅಲೆಮಾರಿಗಳ ಜೀವನ’ವನ್ನು ಹೇಗೆ ಗ್ರಹಿಸಿದ್ದಾರೆ. ಬಹಳ ಸರಳವಾಗಿ ಬದುಕುತ್ತಾರೆ. ನಾಲ್ಕು ಸತ್ತವು ಅಂದ್ರ ಸತ್ತ ಜಾಗದಲ್ಲಿ ಮಣ್ಣು ಮಾಡ್ತಾರೆ ಮುಂದೆ ಹೋಗುತ್ತಾರೆ ಇನ್ನೂ ಹುಟ್ಟಿದವು ಅಂದರೆ ಅಲ್ಲೆ ಹೆಸರು ಇಟ್ಟುಕೊಳ್ಳುತ್ತಾರೆ, ಮುಂದೆ ಹೋಗುತ್ತಾ ಇವರು ಬಹಳ ರೀತಿಯಲ್ಲಿ ಪ್ರಕೃತಿಗೆ ಬಹಳ ಸಮೀಪ ಬದುಕುವುದನ್ನು ನಾವು ಕಾಣಬಹುದು. ಅವರ ಆಹಾರ ಪದ್ಧತಿ ಇರಬಹುದು, ವಸ್ತ್ರಪದ್ಧತಿ ಇರಬಹುದು, ಆಭರಣಗಳು ಇರಬಹುದು. ಆಹಾರದಲ್ಲಿ ಅವರಲ್ಲಿ ಮಡಿಮೈಲಿಗೆ ಇರುವುದಿಲ್ಲ. ಸಸ್ಯ ಸಿಕ್ಕರೆ ಸಸ್ಯ ತಿಂತಾರೆ, ಪ್ರಾಣಿ ಸಿಕ್ಕರೆ ಪ್ರಾಣಿ ತಿಂತಾರೆ. ಯಾವ ಬಟ್ಟೆ ಸಿಗುತ್ತದೆ, ಆ ಬಟ್ಟೆ ಹಾಕಿಕೊಳ್ಳುತ್ತಾರೆ. ನಾವು ಎಷ್ಟೋ ಸಲ ಬುಡಬುಡಕಿಯವರನ್ನು ನೋಡುತ್ತೇವೆ. ಯುನಿರ್ವಸಿಟಿ ಪ್ರೊಫೆಸರ್‌ಗಳೇ ಈ ಕೋಟುಗಳನ್ನು ಹಾಕುವುದು ಬಿಟ್ಟಿದ್ದಾರೆ. ಆದರೆ ನಮ್ಮ ಬುಡಬುಡಕಿಯವರು ಬಿಟ್ಟಿಲ್ಲ. ತಲೆಗೆ ರುಮಾಲು ಸುತ್ತುತ್ತಾರೆ. ಕಾಲಿಗೆ ಎಂತೆಂತ ಚಪಲ್ಲಿಗಳನ್ನು ಹಾಕುತ್ತಾರೆ. ಅವರಿಗೇನು ಸಿಗುತ್ತದೆ. ಅದನ್ನು ಹಾಕುತ್ತಾರೆ. ಬಹಳ ವ್ಯವಹಾರ ತಜ್ಞರು. ಇಂತದ್ದೆ ಡ್ರೆಸ್ ಇರಬೇಕು ಅಂತ ಬಯಸುವುದೇ ಇಲ್ಲ. ಇದ್ದುದನ್ನೇ ಚೆನ್ನಾಗಿ ಹಾಕಿಕೊಂಡು ಪ್ರದರ್ಶನ ಮಾಡುತ್ತಾರೆ. ಇನ್ನೂ ಒಡವೆಗಳ ವಿಷಯದಲ್ಲಿ ಕಟ್ಟಿಗೆ ಬಳೆ, ಹುಲಿ ಉಗುರು, ಎಲುಬನ್ನು ತೆಗೆದುಕೊಂಡು ಆಭರಣ ಮಾಡಿಕೊಳ್ಳುತ್ತಾರೆ ಇಲ್ಲ ಚೆಂದಾದ ಕಲ್ಲು ಸಿಕ್ಕರೆ ಕಲ್ಲು ಹಾಕಿಕೊಳ್ಳುತ್ತಾರೆ. ಹೀಗೆ ಪ್ರಕೃತಿಯೊಳಗೆ ಏನು ಸಿಗುತ್ತದೆ. ಅದನ್ನು ತಮ್ಮ ರಕ್ಷಣೆಗೆ ಮತ್ತು ಆಭರಣಗಳನ್ನಾಗಿ ಮಾಡಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪರಿಸರದ ಬಗ್ಗೆ ಮಾತನಾಡಿದಂತಹ ನಮ್ಮ ವಿದ್ವಾಂಸರೊಬ್ಬ ಬಹಳ ಸರಿಯಾಗಿ ಗುರುತಿಸಿದರು – ಅಲೆಮಾರಿಗಳು ವಾಸ್ತವ ಜೀವಿಗಳು, ಪರಿಸರ ಪ್ರೇಮಿಗಳು ಮತ್ತು ಈ ಜನ ವಿರೋಧಿಯಾದಂತಹ ಸಂಗ್ರಹ ಬುದ್ಧಿ ಏನಿದೆಯಲ್ಲ, ನಾಗರೀಕ ಬುದ್ಧಿ ಇದೆಯಲ್ಲ ಇದಕ್ಕೆ ತೀರಾ ದೂರವಾದವರು ಅಂತ.

ಇನ್ನೂ ಅಲೆಮಾರಿಗಳಲ್ಲಿ ಮತ್ತು ನೆಲೆಮಾರಿಗಳಲ್ಲಿ ಒಂದು ವ್ಯತ್ಯಾಸ ಇದೆ. ಅಲೆಮಾರಿಗಳು ಸಾಹಸಿಗಳು, ಶ್ರಮಜೀವಿಗಳು, ಧೈರ್ಯಶಾಲಿಗಳು, ಆತ್ಮವಿಶ್ವಾಸಿಗಳು, ಬಿಕ್ಕಟ್ಟು ಬಂದಾಗ ಅದನ್ನು ಎದುರಿಸುವಂತಹ ಛಲಗಾರರು, ಕರಕುಶಲ ಕಲೆಗಾರರು. ಜಾದು ವಿದ್ಯೆಯನ್ನು ಬಲ್ಲವರು ಮತ್ತು ಜ್ಞಾನವನ್ನು ಸ್ಥಿರವಾಗಿಸಿಕೊಳ್ಳದೆ ಚಲನೆಯಲ್ಲಿಟ್ಟು ಕೊಂಡವರು. ಬದುಕು ‘ಹೆಂಗ್’ ಬರುತ್ತದೆ ‘ಹಂಗಾ’ ಬದುಕುವವರು. ಈ ನೆಲೆಮಾರಿಗಳು ಪುಕ್ಕರು. ಆತ್ಮವಿಶ್ವಾಸ ಕಡಿಮೆ ಇದ್ದವರು. ಪ್ರತ್ಯೇಕತೆಯನ್ನು ಬಯಸುವವರು. ವ್ಯಕ್ತಿಗತ ಸ್ವಾರ್ಥಿಗಳು ಮೌಢ್ಯ ಅಜ್ಞಾನ ಭಯದಲ್ಲಿ ತುಂಬಿದವರು. ಈಗ ಕಾಲ ಬದಲಾಗಿದೆ. ನೆಲೆಮಾರಿಗಳಲ್ಲಿ ವಿದ್ಯೆ ಬೆಳೆದಿದೆ. ನಾಗರೀಕತೆ ಬೆಳೆದಿದೆ. ಶಿಕ್ಷಣ ಸಿಕ್ಕಿದೆ. ಸಂಘಟನೆಯಾಗಿದೆ. ಅನುಕೂಲಗಳು ಹೆಚ್ಚಾಗಿವೆ. ಆದರೆ ಅಲೆಮಾರಿಗಳಲ್ಲಿ ಅನಾನುಕೂಲಗಳು ಹೆಚ್ಚಾಗಿವೆ. ಪರಿಸ್ಥಿತಿ ಬಿಗಡಾಯಿಸ ಹತ್ತಿದೆ. ಇಂತಹ ಸಂದರ್ಭದೊಳಗೆ ಮಾನವ ಸಂಬಂಧಿ ಲೋಕದೃಷ್ಟಿ, ದೈವ ಸಂಬಂಧಿ ಲೋಕದೃಷ್ಟಿಯನ್ನು ಇಟ್ಟುಕೊಂಡು ಯೋಚನೆ ಮಾಡಿರುವುದು ಬಹಳ ಅರ್ಥಪೂರ್ಣ ಅಂತ ಅನಿಸುತ್ತದೆ. ಅಸಂಗ್ರಹ ಅಲೆಮಾರಿಗಳ ಮೊದಲ ಗುಣ. ಹಿಂಸೆ ಅವರ ಗುಣ ಅಲ್ಲವೆ ಅಲ್ಲ. ಪ್ರಾಣಿಯನ್ನು ಕೊಲ್ಲುತ್ತಾರೆ ಅಂತ ಹೇಳುವುದು ತಪ್ಪಾಗುತ್ತದೆ. ಪ್ರಾಣವನ್ನು ತಿನ್ನದೇ ಇನ್ನೊಂದು ಪ್ರಾಣಿ ಬದುಕುವುದಿಲ್ಲ. ಅದು ಸಸ್ಯವೇ ಇರಬಹುದು. ಪ್ರಾಣಿ ಇರಬಹುದು. ಒಂದು ಜೀವಿಯನ್ನು ತಿಂದು ಇನ್ನೊಂದು ಜೀವಿ ಬದುಕುತ್ತದೆ. ಅಂದ್ರೆ ತಿನ್ನುವ ಸಲುವಾಗಿ ಕೊಲ್ಲುವುದು ಹಿಂಸೆಯಾಗುವುದಿಲ್ಲ. ಆದರೆ ಸೋಕಿಗಾಗಿ, ಪ್ರದರ್ಶನಕ್ಕಾಗಿ, ಅಹಂಕಾರಕ್ಕಾಗಿ, ಅಹಂಕಾರದ ಪ್ರತಿಷ್ಠಾಪನಕ್ಕಾಗಿ ಕೊಲ್ಲುವುದು ಹಿಂಸೆಯಾಗುತ್ತದೆ. ಇನ್ನೂ ಮಾನವೀಯ ಸಂಬಂಧದ ಪ್ರಶ್ನೆಯಲ್ಲಿ ತಂದೆ ತಾಯಿ ಬಂಧು ಬಳಗ ಏನು ಇದೆಯಲ್ಲ. ಇದು ನಾಗರೀಕ ಸಂಬಂಧ ನಮ್ಮ ಪ್ರಾಚೀನ ಸಂಬಂಧಕ್ಕಿಂತ ಬಹಳ ಗಾಢವಾದದ್ದು ನಾಯಕತ್ವದ ಬಗ್ಗೆ ಒಬ್ಬರು ಹೇಳಿದರು. ನಾಯಕತ್ವದ ಬಗ್ಗೆ ನಂಬಿಕೆ ಅವರಲ್ಲಿ ಎಷ್ಟು ಇದೆ ಅಂದ್ರೆ, ಪ್ರಾಣವೇ ನಾಯಕ, ನಾಯಕನೇ ಪ್ರಾಣ ಅನ್ನುವಷ್ಟರ ಮಟ್ಟಿಗೆ ಇದೆ ನಮ್ಮಲ್ಲಿ ಪ್ರದರ್ಶನ ಪರವಾದಂತವು. ಎಲ್ಲವನ್ನು ನಾವು ಇಲ್ಲಿ ತೋರಿಸುವುದಕ್ಕೆ ಮಾಡಿದರೆ ಅವರು ಅಲ್ಲಿ ಜೀವನದ ಅವಶ್ಯಕತೆಗಾಗಿ ಮಾಡುತ್ತಾರೆ. ಈ ಹಿನ್ನೆಲೆಯೊಳಗೆ ನಾವು ಅಲೆಮಾರಿಗಳನ್ನು ಗೌರವಿಸಬಹುದೇನು ಅಂತ ಅನಿಸುತ್ತದೆ.

ಇನ್ನೂ ದೈವಸಂಬಂಧಿಯಾದದ್ದು, ದೈವ ಅನ್ನುವುದೇ ಭಯ ಮೂಲವಾದದ್ದು. ಭಕ್ತಿ ಮೂಲವಾದದ್ದು. ಭಕ್ತಿಗೆ ಭಯವೇ ಮೂಲ. ಇವರಲ್ಲಿ ದೈವದ ಬಗ್ಗೆ ಇರುವಂತ ಭಯ ಏನಿದೆಯಲ್ಲ, ಅದು ಪ್ರಾಮಾಣಿಕವಾದದ್ದೇ. ನಮ್ಮ ಹಾಗೆ ಎಡಬಿಡಂಗಿಯಾದುದಲ್ಲ. ಇನ್ನು ದೈವಸಂಬಂಧಿ ಬಗ್ಗೆ ಮಾತನಾಡುವುದಾದರೆ, ನಮ್ಮ ಬಂಧುಗಳೊಬ್ಬರು ಇಲ್ಲಿ ಬಹಳ ಅರ್ಥಪೂರ್ಣವಾಗಿ ಹೇಳಿದರು. ಅವರ ದೈವಗಳು ಹೇಗೆ ಅಂದರೆ ಅಕ್ಕ, ಅವ್ವ, ತಾಯಿ, ಅಣ್ಣ, ಅಪ್ಪ. ಅಂದರೆ ದೇವರನ್ನು ಬಂಧುವಾಗಿ ಕಾಣುವಂತಹ ಆಚರಣೆ ಅವರಲ್ಲಿ ಕಂಡು ಬರುತ್ತದೆ. ಇದನ್ನು ನಾವು ಅವರಿಂದ ಕಲಿಯಬೇಕಾಗುತ್ತದೆ. ಯಾವ ಪ್ರಾಣಿಯನ್ನು, ಪಕ್ಷಿಯನ್ನು ತಿನ್ನಬೇಕು. ಯಾವುದು ಹಾನಿಕಾರಕ, ಯಾವುದು ಲಾಭದಾಯಕ ಅಂತ ಅವರಿಗೆ ಗೊತ್ತು. ಅಂದರೆ ಅವರು ಪರಿಸರದಲ್ಲಿ ಇರುವುದರಿಂದ ಪರಿಸರದ ಬಗ್ಗೆ ಅವರಿಗೆ ಸರಿಯಾದ ಪರಿಸರ ಜ್ಞಾನ ಇದೆ. ಹೀಗೆ ವೃತ್ತಿಗೆ ಬಂದರೂ ಅವರು ಅನೇಕ ರೀತಿಯಲ್ಲಿ ವೃತ್ತಿಗಳನ್ನು ಮಾಡುತ್ತಾ ಜನಕ್ಕೆ ಉಪಯೋಗವಾಗುವಂತಹ ವೃತ್ತಿಗಳನ್ನು ಮಾಡಿ ಜೀವನ ಸಾಗಿಸುವುದನ್ನು ನಾವು ಕಾಣಬಹುದು.

ಸಾಮಾನ್ಯವಾಗಿ ಸ್ವ-ವಿವರ ವೃದ್ಧಿಮಾಡಿಕೊಳ್ಳುವತ್ತ ಬಹುತೇಕ ಅಧ್ಯಯನಕಾರರ ಚಿಂತನೆಗಳು ಸಾಗುತ್ತಿವೆ. ಪ್ರಮೋಷನ್ ಪರವಾದಂತಹ ಅಧ್ಯಯನಗಳು ನಡೆಯುತ್ತಲಿದ್ದಾವೆ. ಆದರೆ ಜೀವಪರವಾದಂತಹ ಜನಪರವಾದಂತಹ ಕರುಳಿಗೆ ಅಂಟಿಕೊಂಡಿರುವಂತಹ ಅಧ್ಯಯನ ನಡೆಯಬೇಕಾದಂತಹ ಜರೂರು ಇದೆ. ಸಾಮಾನ್ಯವಾಗಿ ಸಿಕ್ಕ ಸಾಮಗ್ರಿಯಲ್ಲಿಯೇ ಕಟ್ಟುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ ಅವರ ಹತ್ತಿರ ಹೋಗಿ ಕ್ಷೇತ್ರ ಕಾರ್ಯ ಮಾಡಿ, ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಹೇಗೆ ಸಿದ್ಧಾಂತದೊಳಗೆ ಹೊಡಗೂಡಿಸಿ ಬದುಕಿಗೆ ಕಸುವನ್ನು ತಂದುಕೊಳ್ಳಬೇಕು ಅನ್ನುವುದರ ಬಗ್ಗೆ ನಮ್ಮ ಅಧ್ಯಯನಗಳು ಸಾಗಬೇಕಾದಂತಹ ಅವಶ್ಯ ಇದೆ. ಯು.ಜಿ.ಸಿ. ಬಹಳಷ್ಟು ಯೋಜನೆಗಳನ್ನು, ಹಣವನ್ನು ಕೊಡುತ್ತಿದೆ. ಬಹುತೇಕ ಡಿಗ್ರಿ ಕಾಲೇಜು ಲೆಕ್ಚರರ್‌ಗಳು ಅಧ್ಯಯನದಲ್ಲಿ ಹಿಂದಕ್ಕೆ ಉಳಿದಿದ್ದಾರೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕೂಡ ಆ ಕಡೆ ಬರುತಲಿದ್ದಾರೆ. ಆದರೆ ಹೀಗಾಗದೇ ಜ್ಞಾನವನ್ನು ಬೆಳೆಸುವಂತಹ ಹಿನ್ನೆಲೆಯೊಳಗೆ ಅಧ್ಯಯನಗಳು ನಡೆಯಬೇಕಾದಂತ ಅವಶ್ಯಕತೆ ಇದೆ. ಬದುಕನ್ನು ಕಟ್ಟುವ ಬೆಸೆಯುವ ರೀತಿಯಲ್ಲಿ ನಮ್ಮ ಅಧ್ಯಯನಗಳು ನಡೆಯಬೇಕು. ಈಗ ಸದ್ಯಕ್ಕೆ ಪರಿಸ್ಥಿತಿ ಬಹಳ ಗಂಭೀರವಾಗಿದೆ. ನಮ್ಮ ಸ್ಥಿತಿ ಸ್ಥಿತ್ಯಂತರವಾಗಿದೆ. ಬೇರು ಆಳಕ್ಕೆ ಇಳಿಯುತ್ತಲೇ ಇಲ್ಲ. ಆದರೆ ನಾವು ನೆಲವನ್ನು ಅಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಲೇ ಇಲ್ಲ. ಈ ನೆಲಕ್ಕೂ ಅಪಾಯ ಬಂದಿದೆ. ಏಕೆಂದರೆ ದೊಡ್ಡಣ್ಣ ಅಲ್ಲಿ ಕುಳಿತಿದ್ದಾನೆ. ಅವನು ಸೈನ್ಯ ಕಳುಹಿಸಬೇಕು ಅಂದ್ರೆ ಕಳುಹಿಸಬೇಕು. ಇಲ್ಲಿ ಪಕ್ಕದ ದೇಶದವನೊಂದಿಗೆ ಮಾತನಾಡು ಅಂದ್ರೆ ಮಾತನಾಡಬೇಕು. ಅವನು ಹೇಳಿದ ಮಾತನ್ನು ನಾವು ಕೇಳಬೇಕು ಅನ್ನುವ ಸ್ಥಿತಿಯೊಳಗೆ ಇದ್ದೇವೆ. ನಮ್ಮ ಸರಕಾರಗಳು ಯಾವಾಗ ಉರುಳುತ್ತವೆ. ಯಾವಾಗ ರಚನೆಗೊಳ್ಳುತ್ತವೆ, ಹೇಗೆ ರಚನೆಗೊಳ್ಳುತ್ತವೆ ಅಂತ ಹೇಳಲಿಕ್ಕೆ ಬರುವುದಿಲ್ಲ. ನಮ್ಮ ನೌಕರಿಗಳು ಯಾವಾಗ ಇರುತ್ತವೆ. ಯಾವಾಗ ಹೋಗುತ್ತವೆ ಅಂತ ಹೇಳಲಿಕ್ಕೆ ಬರಲಾದಂತಹ ಪರಿಸ್ಥಿತಿ ಇದೆ. ವ್ಯಾಪಾರ ವಾಣಿಜ್ಯಗಳು ಕೂಡ ಸರ್ವನಾಶವಾಗುತ್ತಲಿದ್ದಾವೆ. ನಾಗರೀಕತೆ ಅನ್ನುವುದೇ ಒಂದು ಅರ್ಥದಲ್ಲಿ ನೆಲೆಯನ್ನು ಕಳೆದುಕೊಂಡು ಒದ್ದಾಡುವ ಸಂದರ್ಭದೊಳಗೆ ಅಲೆಮಾರಿಗಳಿಂದ ಆಶ್ರಯ ಪಡೆಯಬೇಕು ಅಂತಾ ಹೊರಟಿದ್ದೇವೆ. ಅವರನ್ನು ಅವರ ಜಿಗಿಟುತನವನ್ನು ಅರ್ಥಮಾಡಿಕೊಳ್ಳಬೇಕು. ಅವರು ಹೇಗೆ ಈ ಪರಿಸರಕ್ಕೆ ಅಂಟಿಕೊಂಡಿರುತ್ತಾರೆ ಹಾಗೆ ನಾವು ಅಂಟಿಕೊಂಡು ಈ ಅಧ್ಯಯನವನ್ನು ಬಳಸಿಕೊಂಡು ಬೆಳೆಸಿಕೊಂಡಾಗ ಮಾತ್ರ ಇಂತಹ ಸಮ್ಮೇಳನಗಳು ಅರ್ಥಪೂರ್ಣವಾಗುತ್ತವೆ. ಏಕೆಂದರೆ ಎಲ್ಲೂ ಒಂದು ಕಡೆ ಇಡೀ ವಿಶ್ವವನ್ನೇ ಒಂದು ಗುಡಿಸಲು ಮಾಡುತ್ತೇವೆ ಅಂತ ಹೊರಟ ಸಂದರ್ಭದೊಳಗೆ ನಾವು ಗುಡಿಸಲೇ ಇಲ್ಲದಂತಹ ವ್ಯಕ್ತಿಗಳ ಬಗ್ಗೆ ಮಾತನಾಡುವುದು ಬಹಳ ಅರ್ಥಪೂರ್ಣವಾಗುವುದು ಯಾವಾಗ ಅಂತ ಹೇಳಿದರೆ ಅಲೆಮಾರಿಗಳ ತರ ನಾವು ನಮ್ಮ ಬದುಕನ್ನು ಕಟ್ಟಿಕೊಂಡಾಗ ಮಾತ್ರ.

ಈಗ ಅಧ್ಯಯನ ಆರಂಭವಾಗಿದೆ, ಕನಸುಗಳು ಇವೆ. ವಿಶ್ವವಿದ್ಯಾಲಯ ಬಹಳ ಉತ್ತಮವಾದ ಕೆಲಸವನ್ನು ಮಾಡುತ್ತಿವೆ. ನಾವೆಲ್ಲ ಈ ದಿಸೆಯಲ್ಲಿ ಕೆಲಸವನ್ನು ಮಾಡೋಣ. ನಮ್ಮ ಜೀವನ ರೂಪಿಸಿಕೊಳ್ಳುವುದಕ್ಕೆ ಅಲೆಮಾರಿಗಳ ಚಿಂತನೆಗಳನ್ನು ಬಳಸಿಕೊಳ್ಳುವುದರ ಜೊತೆಗೆ ಅಲೆಮಾರಿಗಳ ಬದುಕನ್ನು ಕಟ್ಟುವುದು ಬಹಳ ಮಹತ್ವವಾಗಿದೆ. ಅವರೆಲ್ಲ ಭಯಭೀತರಾಗಿದ್ದಾರೆ. ಅರ್ಧಂಬರ್ಧ ತಿಳಿದುಕೊಂಡು ಬಿಟ್ಟಿದ್ದಾರೆ. ಅವರ ಯಾವ ಕರಕುಶಲ ಕ್ರಿಯೆಗಳು ನಡೆಯುತ್ತಲೆ ಇಲ್ಲ. ಗಿಳಿ ಪಂಚಾಂಗ ಇಲ್ಲ. ಹಲ್ಲು ಕಡ್ಡಿಯಂತೂ ಯಾರು ತೆಗೆದು ಕೇಳುವುದು ಇಲ್ಲ. ಇನ್ನೂ ಕಳವು ಮಾಡುವ ಹಾಗೆ ಇಲ್ಲ. ಪೊಲೀಸರು ಬಹಳ ಬಂದೋಬಸ್ತ್ ಮಾಡುತ್ತಿದ್ದಾರೆ. ಹೀಗಾಗಿ ಅವರು ಅಲೆಮಾರಿಗಳ ಸ್ಥಿತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ನೆಲೆಯನ್ನು ಒದಗಿಸಿಕೊಡಬೇಕು. ನಾವು ನೆಲೆಯನ್ನು ಪಡೆದುಕೊಳ್ಳಬೇಕು. ಈ ಎರಡು ನೆಲೆ ಒಂದು ರೂಪ ಬಂದಾಗ ಈ ಅಧ್ಯಯನಕ್ಕೆ ಒಂದು ನೆಲೆ ಬರುತ್ತದೆ.

ಲಿಪ್ಯಂತರ : ಚಂದ್ರಪ್ಪ ಸೊಬಟಿ

* * *