ಜಾನಪದವನ್ನು ಕುರಿತಂತೆ ವಿಶ್ವದ ತುಂಬೆಲ್ಲ ಅಧ್ಯಯನ ಭರದಿಂದ ಸಾಗಿದೆ. ಆಯಾ ದೇಶ, ಭಾಷೆ ಪ್ರದೇಶಕ್ಕನುಗುಣವಾಗಿ ಸಾಹಿತ್ಯ ಸಂಸ್ಕೃತಿ ಉಡುಗೆ, ತೊಡುಗೆ ಹೀಗೆ ಮುಂತಾದ ಪ್ರಕಾರಗಳ ಹಿನ್ನೆಲೆಯಲ್ಲಿ ಸಂಗ್ರಹ ಸಂಪಾದನೆ ನಡೆದಿರುವುದು ಗಮನಾರ್ಹವಾದುದು. ಆಧುನಿಕ ಜಗತ್ತಿನ ಹೊಸ ಆವಿಷ್ಕಾರಗಳ ನಡುವೆ ತನ್ನ ಮೂಲ ಸಂಸ್ಕೃತಿ ಸಂಪ್ರದಾಯ ಆಚರಣೆಗಳನ್ನು ಉಳಿಸಿಕೊಳ್ಳುವ ಭರಾಟೆಯಲ್ಲಿ ಸಂಗ್ರಹ, ಸಂಪಾದನೆಗೆ ಮೊರೆಹೋಗಲಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಯನ ಮುಂದುವರೆಸಿದ ಸಂಶೋಧಕರ ವಿಚಾರಗಳು ಸಾಕಷ್ಟು ಗಂಭೀರವು ವಿಸ್ತಾರವೂ ಆದದ್ದು ಕಾಣುತ್ತೇವೆ.

ಕನ್ನಡ ನಾಡಿನಲ್ಲಿ ನಡೆಯುತ್ತಿರುವ ಜಾನಪದ ಅಧ್ಯಯನ ದೇಶದ ಉಳಿದ ರಾಜ್ಯಗಳಿಗೆ ಹೋಲಿಸಿದಾಗ ನಿಜಕ್ಕೂ ಹೆಮ್ಮೆ ಪಡುವಂತಹದ್ದು. ಜಾನಪದ ಅಧ್ಯಯನ ಸಂದರ್ಭದಲ್ಲಿ ಮೊದಲು ನಡೆದಿದ್ದು ಸಂಗ್ರಹ ಕಾರ್ಯವೆ. ಆ ನಂತರದಲ್ಲಿ ಅದನ್ನು ಚಿಂತನೆಗೆ ಸಂಶೋಧನೆ ಗೊಳಪಡಿಸಿರುವುದು ಸರ್ವವಿಧಿತವಾದುದು. ಆಧುನಿಕ ಸಂದರ್ಭದ ಹೊಸ ಗಾಳಿಗೆ ಸಿಲುಕಿದ ಜಾನಪದ ಸಂಪತ್ತು ಸಂಗ್ರಹಿಸುವುದು ಅನಿವಾರ್ಯವು ಕೂಡ.

ಜನಪದ ಸಂಗ್ರಹ ಸಂದರ್ಭದಲ್ಲಿ ಮೊದಲು ಗೀತ ಪ್ರಕಾರಕ್ಕೆ ಹೆಚ್ಚಿನ ಮಹತ್ವ ದೊರೆತಿರುವುದು ಕಾಣುತ್ತೇವೆ. ತದನಂತರದಲ್ಲಿ ಕಲೆ, ಸಂಸ್ಕೃತಿ ಉಡುಗೆ ತೊಡುಗೆಗೆ ಪ್ರಾಮುಖ್ಯತೆ ಬಂದಿತ್ತೆನ್ನಬಹುದು. ಇತ್ತೀಚಿನ ಸಂದರ್ಭದಲ್ಲಿ ದಶಕದಿಂದೀಚೆಗೆ ಬುಡಕಟ್ಟು ಸಮೂಹಗಳ ಕುರಿತು ಹಿನ್ನೆಲೆಯಲ್ಲಿ ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ ಅಧ್ಯಯನ ಸಾಗಿದೆ.

ಕನ್ನಡದ ನೆಲದಲ್ಲಿ ವಾಸ ಮಾಡುತ್ತಿರುವ ಬುಡಕಟ್ಟಿನ ವಿಭಿನ್ನ ಅಲೆಮಾರಿಗಳಲ್ಲಿ ಸುಡುಗಾಡುಸಿದ್ದರು, ಹೆಳವರು, ಗೊಂದಲಿಗರು, ಕೊರವರು, ವೇಷಗಾರರು, ದುರಗ ಮುರಗಿಯವರು, ಬುಡಬುಡಕಿಯವರು, ಗೊರವರು ರಾಮಕೊಂಡಡಿಗಳು, ಲಂಬಾಣಿಗರು, ಕವಲೆತ್ತಿನವರು ಪ್ರಮುಖರು. ಇವರು ಒಂದೇ ವಲಯ ಅಥವಾ ಸ್ಥಳದಲ್ಲಿ ನೆಲೆಯೂರಿ ನಿಲ್ಲದೆ ಜೀವನೋಪಾಯಕ್ಕಾಗಿ ಕುಟುಂಬ ಸಮೇತ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆದಾಡುವುದರಿಂದ ಅಲೆಮಾರಿಗಳೆಂದು ಕರೆಯಲಾಗಿದೆ. ತಮ್ಮದೇ ಆದ ಭಾಷೆ, ಕಲೆ ಸಾಹಿತ್ಯ ಸಂಸ್ಕೃತಿ ಹೊಂದಿರುವ ಇವರು ಭಾರತೀಯ ಸಮಾಜದ ಸಾಂಸ್ಕೃತಿಕ ಸಂಪತ್ತನ್ನು ಹೆಚ್ಚಿಸಿದ್ದಾರೆ. ಉದಾಹರಣೆಗೆ ಹೇಳುವುದಾದರೆ ಲಂಬಾಣಿಗಳು ತಮ್ಮ ರಂಗು ರಂಗಿನ ಉಡಿಗೆ-ತೊಡಿಗೆಯಲ್ಲದೆ ಹಚ್ಚೆಯಂತಹ ಪ್ರಮುಖ ಕಲಾ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವುದು ಸಂಸ್ಕೃತಿಯ ಸಂದರ್ಭದಲ್ಲಿ ಇದೊಂದು ಅಪಾರ ಕೊಡುಗೆಯಾಗಿದೆ. ಅದೇ ರೀತಿಯಾಗಿ ಹೆಳವರು ಅನಾದಿ ಕಾಲದಿಂದಲೂ ಕುಟುಂಬದ ವಂಶಾವಳಿ ಇತಿಹಾಸವನ್ನು ಸಂಗ್ರಹಿಸಿ ಚಾರಿತ್ರಿಕ ದಾಖಲೆಗಳಿಗೆ ನೆರವು ನೀಡಿದ್ದಾರೆ. ಒಂದೊಂದು ಅಲೆಮಾರಿ ಗುಂಪಿನವರು ಒಂದೊಂದು ರೀತಿಯ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕವಾದ ಕಟ್ಟಕಟ್ಟಳೆಗಳನ್ನು ಪಾಲಿಸಿಕೊಂಡು ಬಂದಿದ್ದಾರೆ. ಈ ರೀತಿಯಾಗಿ ಪ್ರತಿಯೊಂದು ಅಲೆಮಾರಿ ಸಮೂಹದವರು ತಮ್ಮ ತಮ್ಮ ಮಹತ್ವವನ್ನು ಮೆರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ಸಮಾಜಕ್ಕೆ ಅಲೆಮಾರಿಗಳು ಸಾಂಸ್ಕೃತಿಕ ಮಾಧ್ಯಮಗಳಾಗಿ ಹೊರಹೊಮ್ಮಿದ್ದಾರೆ. ಲೋಕದ ಕಲ್ಯಾಣಕ್ಕಾಗಿ ಸಾಧ್ಯವಾದಷ್ಟು ಶ್ರಮಿಸಿದ ವರ್ಗಗಳಿವು. ಸಾಮಾಜಿಕ ವ್ಯವಸ್ಥೆಯಲ್ಲಿ ಸಂಪರ್ಕ ಸೇತುವೆಯಂತೆ ರಂಜಕರಾಗಿ, ಕಲಾವಿದರಾಗಿ ಇತಿಹಾಸಕಾರರಾಗಿ ವ್ಯಾಪಾರಿಗಳಾಗಿ ಕರಕುಶಲಕರ್ಮಿಗಳಾಗಿ ದುಡಿದಿದ್ದಾರೆ. ತಮ್ಮ ಉಪಜೀವನಕ್ಕಾಗಿ ಲೋಕವನ್ನು ಸುತ್ತುವುದರೊಂದಿಗೆ ಲೋಕದ ಜ್ಞಾನವನ್ನು ಅರಗಿಸಿ ಕೊಳ್ಳುವುದರ ಮೂಲಕ ಲೋಕ ತನಗೇನು ಕೊಟ್ಟಿದೆ ಎನ್ನುವುದು ಗಣನೆಗೆ ತೆಗೆದುಕೊಳ್ಳದೆ ಲೋಕದ ಶ್ರೇಯಸ್ಸಿಗಾಗಿ ತಮ್ಮ ಸಾರ್ಥಕ ಸೇವೆಯನ್ನು ಸಲ್ಲಿಸಿದ ಸಮೂಹಗಳಾಗಿವೆ.

ಪ್ರಾಪಂಚಿಕ ಲೋಕದಲ್ಲಿ ತಮ್ಮ ವೃತ್ತಿಯೊಂದಿಗೆ ನೆಲೆ ನಿಂತುದುದರ ಬಗ್ಗೆ ವಿಶಿಷ್ಟವಾಗಿರುವಂತಹ ನಂಬಿಕೆ, ಸಂಪ್ರದಾಯ ಆಚರಣೆಗಳನ್ನು ಹೊಂದಿದ್ದಾರೆ. ಅನೆಕ ಐತಿಹ್ಯಗಳಲ್ಲದೆ ತಾವು ವೃತ್ತಿ ಮೂಲದ ಬಗ್ಗೆ ಕೇಳಿದರೆ ಚಾರಿತ್ರಿಕ ದಾಖಲೆಗಳನ್ನು ಸಹ ನೀಡುತ್ತಾರೆ. ಹೆಚ್ಚಿನದನ್ನು ಕಂಠಸ್ಥ ರೂಪದಲ್ಲಿ ಕಾಪಾಡಿಕೊಂಡು ಬಂದಿದ್ದಾರೆ. ಚಲನಶೀಲ ಸ್ಥಿತಿಯ ಮೂಲ ಶ್ರಮವಾಗಿದ್ದುದರಿಂದ ಶ್ರಮವೇ ಆಲೆಮಾರಿಗಳ ಜೀವನದ ಉಸಿರು ಶ್ರಮವಿಲ್ಲದೆ ಹೊಟ್ಟೆ ತುಂಬದು. ಹೊಟ್ಟೆ ತುಂಬದೆ ಕಲೆ ಜೀವ ಪಡೆಯದು. “ಉಪಸಂಸ್ಕೃತಿಯ ಪರಿಕಲ್ಪನೆ ಪ್ರಸ್ತುತವಾಗುವುದು ಈ ನೆಲೆಯಲ್ಲೇ….. ಮನುಷ್ಯ- ಸಂಸ್ಕೃತಿಯು ರೂಪಗೊಳ್ಳುತ್ತಿರುವಾಗ ವಿವಿಧ ಕಾರಣಗಳಿಂದ ವಿಂಗಡಣೆಗೊಳಗಾದ ಮನುಷ್ಯ ಸಮಾಜ ತನ್ನ ವಿಭಜಿತ ನೆಲೆಗಳಿಗನುಗುಣವಾಗಿ ವಿಭಿನ್ನ ಸಂಸ್ಕೃತಿಗಳನ್ನು ರೂಪಿಸಿಕೊಳ್ಳುತ್ತ ಬಂದದ್ದು ಒಂದು ಚಾರಿತ್ರಿಕ ಸಂಗತಿಯೇ ಆಗಿದೆ. ಮನುಷ್ಯ ಸಮಾಜದ ಬೆಳವಣಿಗೆ ಹಿಂದೆ ಒಂದು ನಿರ್ದಿಷ್ಟ ಚರಿತ್ರೆಯಿದೆ.”

[1]

ಭಾರತದಂತಹ ಜಾತಿ ನಿಷ್ಠದೇಶದಲ್ಲಿ ಈ ಬಗೆಯ ಸಂಸ್ಕೃತಿಗಳು ಬಗೆಬಗೆಯಾಗುವುದರ ಜೊತೆಗೆ ಚಾರಿತ್ರಿಕವಾಗಿ ಶ್ರೇಣಿಕರಣಕ್ಕೂ ಒಣಗಾದವು. ಈ ಶ್ರೇಣೀಕರಣದ ಮೇಲ್ತುದಿಯಲ್ಲಿ ಬ್ರಾಹ್ಮಣರಿದ್ದರೆ, ಅದರ ಕೆಳತುದಿಯಲ್ಲಿ ದಲಿತರಿದ್ದಾರೆ. ಪರಂಪರೆಯ ಹಲವು ಕಾರಣಗಳಿಂದ ಬೆಳೆದು ಬಂದ ಬಗೆಯಲ್ಲಿಯೇ ನಿಂತು ನೋಡಿದಾಗ, ಮೇಲ್ತುದಿಯ ಬ್ರಾಹ್ಮಣರು ಸಂಪೂರ್ಣವಾಗಿ ಮಡಿಯೆಂದೂ, ಕೆಳತುದಿಯ ದಲಿತರು ಸಂಪೂರ್ಣ ಮೈಲಿಗೆ ಎಂದು ಗುರುತಿಸಲ್ಪಟ್ಟರು. ಹಾಗಾಗಿಯೇ ಕೆಲವು ಸಮಾಜ ವಿಜ್ಞಾನಿಗಳು ಭಾರತೀಯ ಸಮಾಜವು ಮಡಿ-ಮೈಲಿಗೆಯ ವಿರೋಧ ದ್ವಂದ್ವವನ್ನು ನಿರಂತರವಾಗಿ ಕಾಪಾಡಿಕೊಂಡು ಬರಲು ಹವಣಿಸುತ್ತದೆ ಎಂದು ಈ ಸಮಾಜವನ್ನು ವಿಶ್ಲೇಷಿಸಿದರು. ಅದೇನೇ ಇರಲಿ ವರ್ಗ ಸಮಾಜದಲ್ಲಿ ಆಳುವ ವರ್ಗವು ಸಮಾಜವನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುತ್ತದೆ ಎಂದು ಮಾತಂತೂ ನಿಜ. ಈ ಕಾರಣದಿಂದಾಗಿ ಭಾರತದಲ್ಲಿ ಆಳುವ ವರ್ಗವಾದ ಮೇಲ್ಜಾತಿಗಳು ತಮ್ಮ ಜೀವನಾವರ್ತನ ಮತ್ತು ವಾರ್ಷಿಕಾವರ್ತನದ ಆಚರಣೆಗಳನ್ನು ಆ ಮೂಲಕ ತಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಶ್ರೇಷ್ಠವೆಂದು ಸ್ಥಾಪಿಸಿದರು. ಈ ಜನವರ್ಗಕ್ಕೆ ಅಕ್ಷರ ದೊರೆತದ್ದರಿಂದ ಅವುಗಳು ಬರಹದ ಮೂಲಕ ದಾಖಲಾದವು. ಈ ಬರಹಗಳೇ ನಮ್ಮ ಕಲೋನಿಯಲ್ ಚರಿತ್ರೆಕಾರರ ಆಕರ ಸಾಮಗ್ರಿಗಳಾದವು. ಹೀಗಾಗಿ ಇಂದು ನಾವು ಯಾವುದನ್ನು ಚರಿತ್ರೆ ಎನ್ನುತ್ತೇವೆಯೋ, ಯಾವುದನ್ನು ಭಾರತೀಯ ಸಂಸ್ಕೃತಿ ಎನುತ್ತೇವೆಯೋ, ಅವು ಕೇವಲ ಅಲ್ಪಸಂಖ್ಯಾತ ವರ್ಗದ ಚಿಂತನೆಗಳಾಗಿ ಬಿಟ್ಟವು. ಬಹುಸಂಖ್ಯಾತ ವರ್ಗದ ಸಾಂಸ್ಕೃತಿಕ ಮೌಲ್ಯಗಳು ಈ ದೇಶದ ಚರಿತ್ರೆಯಲ್ಲಾಗಲಿ, ಸಂಸ್ಕೃತಿಯ ಭಾಷ್ಯದಲ್ಲಾಗಲೀ ದಾಖಲಾಗದೇ ಹೋಯಿತು. ಇದರಿಂದಾಗಿ ನಮ್ಮ ಚಿಂತನೆಗಳು ಪಾರ್ಶ್ವಿಕವೂ ಬಡಕಲೂ ಆಗಿ ಸೊರಗಿದವು. ಬಹುಸಂಖ್ಯಾತರ ಸಂಸ್ಕೃತಿ ಮತ್ತು ಜ್ಞಾನವು ನಿರ್ಲಕ್ಷಕ್ಕೆ ಒಳಗಾಗಿ ಮುದುಡಿದವು.[2] ಅಕ್ಷರ ಲೋಕದ ಮಡಿವಂತ ಸಮಾಜದ ಸಂಸ್ಕೃತಿಗಿಂತಲೂ, ಜೀವಪರ ನೆಲೆಯ ಜಾನಪದ ಲೋಕವನ್ನು ಶ್ರೀಮಂತಗೊಳಿಸಿದ ಅಲೆಮಾರಿಗಳಾದ ಗೊರವರು, ಹೇಳವರು, ಗೊಂದಲಿಗರು, ಹಗಲು ವೇಷಗಾರರು, ಸುಡುಗಾರು ಸಿದ್ಧರು ಈ ಮುಂತಾದವರ ವೃತ್ತಿಗೆ ಸಂಬಂಧಿಸಿದಂತೆ ಲೋಕದ ದೃಷ್ಟಿ ಏನು? ಲೋಕವನ್ನು ಅಲೆಮಾರಿಗಳು ಹೇಗೆ ಗ್ರಹಿಸಿದ್ದಾರೆ ಎನ್ನುವುದರ ಕುರಿತು ಪ್ರಸ್ತುತ ಪ್ರಬಂಧದಲ್ಲಿ ವಿವೇಚಿಸಲಾಗಿದೆ.

ಲೋಕದೃಷ್ಟಿ

ಕನ್ನಡ ಜಾನಪದ ಕ್ಷೇತ್ರಕ್ಕೆ ಲೋಕದೃಷ್ಟಿ ಎಂಬ ಪದ ಹೊಸದು ಇಂಗ್ಲಿಷ್‌ನಲ್ಲಿ ಜನಪ್ರಿಯವಾಗಿರುವ World View ಎಂಬ ಪದಕ್ಕೆ ಸಂವಾದಿಯಾಗಿ ನಾವಿದನ್ನು ಬಳಸಿಕೊಳ್ಳುತ್ತಿದ್ದೇವೆ. ವಿಶ್ವಕಲ್ಪನೆ ಎಂಬ ಪದಗಳನ್ನು ಕೆಲವರು ಕ್ವಚಿತ್ತಾಗಿ ಬಳಸುತ್ತಿದ್ದಾರೆ. ಇದಕ್ಕೆ ಕಾರಣ ಮತ್ತೆ ಇಂಗ್ಲಿಷಿನಲ್ಲಿರುವ ಮೂಲಪದ World Conception ಎಂಬುದು ಆಗಿದೆ. ಇಲ್ಲಿ Concept ಎಂಬುದಕ್ಕೆ ಪರಿಕಲ್ಪನೆ ಎಂಬ ಪದ ಸರಿಯಾಗಿ ಹೊಂದುತ್ತದೆ. ಯಾದರೂ ಅದಕ್ಕೆ ಬಹಳ ಸೀಮಿತವಾದ ಅರ್ಥವ್ಯಾಪ್ತಿ ಬರುತ್ತದೆ. ಲೋಕದ ಹುಟ್ಟು ಮತ್ತು ಸಾವಿನ ಬಗೆಗೆ….. ಲಾಜೊಸ್ ಅಮಿಯ ಅಭಿಪ್ರಾಯಗಳನ್ನು ಆಧರಿಸಿ ಸ್ಯಾಂಡರ್‌ಎರ್ಡೆಸನ್ನು ಈ ವಿಚಾರವನ್ನು ಪ್ರಕಟಪಡಿಸಿದ. ಅಲೆನ್ ಡಂಡೆಸರು ಲೋಕದೃಷ್ಟಿಯ ಕುರಿತು ಅಮೇರಿಕನ್ನರು ಭವಿಷ್ಯದ ಬಗೆಗೆ ಹೇಗೆ ಯೋಚಿಸುತ್ತಾರೆನ್ನುವ ಬಗ್ಗೆ ಅತ್ಯಂತ ಕುತೂಹಲದ ವಿವರಗಳನ್ನು ನೀಡುತ್ತಾರೆ. ಅಮೇರಿಕ ಬಾಲಕರ ಜೀವನಕ್ರಮ ಶುಭಾಶಯ ಪತ್ರ, ವಿದಾಯ ಹೇಳುವ ಮಂದಿಗಳ ವರ್ತನೆ ಆಗಾಗ ಜನರು ಬಳಸುವ ನುಡಿಗಟ್ಟುಗಳು, ಜನರ ತಮಾಷೆ ಮಾತುಗಳು ಇವುಗಳಿಂದ ಸಾಮಗ್ರಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಡಂಡಸರ ಈ ವಿಶಾಲ ನೋಟವನ್ನು ಗಮನಿಸಿದರೆ ವಿಶ್ವದ ಸೃಷ್ಠಿಲಯಗಳಷ್ಟೇ ಲೋಕದೃಷ್ಟಿಯ ಚೌಕಟ್ಟಿಗೆ ಬರಬೇಕೆಂದಿಲ್ಲವೆಂಬುದು ಸ್ಪಷ್ಟವಾಗುತ್ತದೆ. ವಿಸ್ತಾರವಾದ ಜನಪದ ಲೋಕದ ಎಲ್ಲಾ ಆಯಾಮಗಳನ್ನು ಅದು ಒಳಗೊಳ್ಳುತ್ತದೆ. ಈ ಕಾರಣಕ್ಕಾಗಿ World View ಎಂಬ ಪದಕ್ಕೆ ಸಂವಾದಿಯಾಗಿ ಲೋಕದೃಷ್ಟಿ ಎಂಬ ಪದವನ್ನು ಕನ್ನಡದಲ್ಲಿ ಬಳಸಿದೆ. ಜನಪದರು ಲೋಕವನ್ನು ಕಂಡ ಬಗೆಯದು. ಈ ಬಗೆ ಪ್ರಜ್ಞಾಪೂರ್ವಕವಾಗಿಯಾದರೂ ಅಪ್ರಜ್ಞಾಪೂರ್ವಕವಾಗಿಯಾದರೂ ಪ್ರಕಟವಾಗಬಹುದು ಅಥವಾ ಅವರು ಇರುವ ಬಗೆಯಲ್ಲಿ ಅದು ಗೋಚರವಾಗಬಹುದು. ಲೋಕದೃಷ್ಟಿಯ ಕುರಿತಂತೆ ಮೊದಲು ನಿರ್ವಚಿಸಲು ಯತ್ನಿಸಿದವರು ಮಾನವಶಾಸ್ತ್ರಜ್ಞರು. ಜನರು ಜಗತ್ತನ್ನು ಗ್ರಹಿಸುವ ಬಗೆ ಮತ್ತು ಜಗತ್ತಿನಲ್ಲಿಯ ಮಾನವ ಸ್ಥಾನಮಾನಗಳ ಬಗೆಗೂ ವಿಚಾರಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಮಾಲಿನೋವಸ್ಕಿಯು ೧೯೨೨ ರಷ್ಟು ಹಿಂದೆಯೇ ಪ್ರತಿಯೊಂದು ಮಾನವ ಸಂಸ್ಕೃತಿಯ ಸಂಸ್ಕೃತಿಯು ತನ್ನ ಸದಸ್ಯರಿಗೆ ಲೋಕದ ಬಗೆಗೆ ಒಂದು ನಿರ್ದಿಷ್ಟವಾದ ದರ್ಶನವನ್ನು ನೀಡುತ್ತದೆ ಎನ್ನುತ್ತಾರೆ.

ರೆಡ್‌ಫಿಲ್ಡ್‌ನ ಲೋಕದ ಶೀಲ ಸ್ವಭಾವದ ಕುರಿತಾದ ಜನರ ನೋಟವೇ ಲೋಕದೃಷ್ಟಿಯೆಂದಿದ್ದಾರೆ. ಗರ್ಟಜನು ಲೋಕದೃಷ್ಟಿಯೆಂದರೆ ಜನರು ಪ್ರಕೃತಿಯ ಬಗೆಗೆ ತಮ್ಮ ಸ್ವಂತದ ಬಗೆಗೆ ಮತ್ತು ಸಮಾಜದ ಬಗೆಗೆ ಪ್ರಕಟಿಸಿದ ನೈಜವಸ್ತು ಚಿತ್ರಗಳು ಎಂದು ಹೇಳಿದ್ದರೆ, ಮೈಕೆಲ್ ಕರ್ನಿ, ಮಾರ್ಸೆಲ್ ಗ್ರೂಲೆ ಮೊದಲಾದ ಮಾನವಶಾಸ್ತ್ರಜ್ಞರು ಹೆಚ್ಚು ಕಡಿಮೆ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಇದನ್ನು ಗಮನಿಸಿದರೆ ಜನಪದರು ನೇರವಾಗಿ ಅಥವಾ ಪರೋಕ್ಷವಾಗಿ ಲೋಕದ ಸಮಸ್ತದ ಬಗೆಗೆ ಹೊಂದಿರುವ ದರ್ಶನವನ್ನು ಲೋಕದೃಷ್ಟಿ ಎಂದು ಕರೆಯಬಹುದು. ಇದು ಜನಾಂಗದಿಂದ ಜನಾಂಗಕ್ಕೆ ಸಂಸ್ಕೃತಿಯಿಂದ ಸಂಸ್ಕೃತಿಗೆ ಭಿನ್ನರೂಪ ಹೊಂದಬಹುದು. ಲೋಕದೃಷ್ಟಿಯ ಆಳದಲ್ಲಿ ಸಂಸ್ಕೃತಿ ನಿಷ್ಟವಾಗಿರುವುದರಿಂದ ಆಯಾ ಸಂಸ್ಕೃತಿಯ ಒಳಗಿನವರಿಗೆ ಅದು ಪರಮಸತ್ಯವೆಂದು ಅದು ಹೊರಗಿನವರಿಗೆ ಅವೈಜ್ಞಾನಿಕವೆಂದೂ ತೋರುವ ಸಾಧ್ಯತೆಯಿದೆ.[3] ಒಂದು ಮಾತಂತು ನಿಜ ಜಾನಪದ ಲೋಕದೃಷ್ಟಿಯ ಅಂತಿಮ ಸ್ವರೂಪ ಒಂದೇ ಆಗಿದ್ದರೂ ಅದು ಆಯಾ ಸಂಸ್ಕೃತಿಯ ಬಿಡಿ ಘಟಕಗಳಲ್ಲಿ ಪ್ರಕಟವಾದಾಗ ತನ್ನದೇ ಆದ ಪ್ರಾದೇಶಿಕ ಜನಾಂಗೀಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಜಾಗತಿಕ ಮಟ್ಟದಲ್ಲಿ ಆಗಲೀ ಕನ್ನಡ ಸಂದರ್ಭದಲ್ಲಾಗಲೀ ಜನಪದ ಲೋಕದೃಷ್ಟಿಯ ಬಗೆಗೆ ನಡೆದ ಅಧ್ಯಯನಗಳು ಕಡಿಮೆ ಎಂದರೂ ೧೯೭೦ ರಿಂದೀಚಿಗೆ ಕನ್ನಡ ಜನಪದದಲ್ಲಿ ಚಿಂತನೆ ನಡೆದಿದೆ. ಪ್ರಮುಖವಾಗಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜೀ. ಶಂ. ಪರಮಶಿವಯ್ಯ, ಚಂದ್ರಶೇಖರ ಕಂಬಾರ, ವಿವೇಕ ರೈ, ಪೀಟರ್ ಜೆ ಕ್ಲಾಸ್, ಎ.ಕೆ. ರಾಮಾನುಜನ್, ಎಚ್.ಜೆ. ಲಕ್ಕಪ್ಪಗೌಡ, ಟಿ.ಎಸ್. ಸತ್ಯನಾಥ ಮೊದಲಾದವರು ಲೋಕದೃಷ್ಟಿ ಎಂಬ ಪದವನ್ನು ಬಳಸದೇ ಆ ಬಗೆಗೆ ತಮ್ಮ ವಿಮರ್ಶೆಯನ್ನು ಕೇಂದ್ರಿಕರಿಸಿದ್ದಾರೆ.

ವೃತ್ತಿಯೊಂದಿಗೆ ಲೋಕದಲ್ಲಿ ನೆಲೆ ನಿಂತ ರೀತಿ

‘ಭಾರತೀಯ ಸಂಸ್ಕೃತಿಯ ವ್ಯಾಖ್ಯೆ ಸೀಮಿತ ಚೌಕಟ್ಟಿನೊಳಗೆ ಸಿಲುಕಿಕೊಂಡು ಕಿರು ಸಂಸ್ಕೃತಿಗಳು ಅಪ್ರಧಾನವಾಗಿ ಪರಿಣಮಿಸಿದವು. ಕಿರು ಸಂಸ್ಕೃತಿಗಳನ್ನು ಕ್ಷುದ್ರ, ಕ್ಷುಲ್ಲಕ ಆಚರಣೆಗಳ ಗೂಡೆಂದು ಕರೆದ ಆರ್ಯರು ವೈದಿಕ ಸಂಸ್ಕೃತಿಯೇ ಈ ದೇಶದ ನಿಜವಾದ ಸಂಸ್ಕೃತಿ ಸನಾತನ ಸಂಸ್ಕೃತಿ ಎಂದೆಲ್ಲಾ ಸಾರಿದರು. ಸಮುದಾಯದ ಮನಸ್ಸಿನಲ್ಲಿ ಇದೇ ಭಾವನೆಯನ್ನು ಬಿತ್ತಿಬೆಳೆದರು. ಉಚ್ಛ ವರ್ಗದ ಅಚರಣೆಗಳೇ ನಿಜವಾದ ಸಂಸ್ಕೃತಿಯೆಂದು ಭ್ರಮೆಗೆ ತಳ್ಳಿದ್ದಲ್ಲದೆ, ಅದರ ಅನುಕರಣೆಯಲ್ಲಿಯೇ ಕಿರು ಸಂಸ್ಕೃತಿಗಳ ನಾಶಕ್ಕೆ ಕಾರಣರಾದರು. ಹೀಗೆ ಕಿರು ಸಂಸ್ಕೃತಿಗಳ ಮೇಲೆ ಪ್ರಧಾನ ಸಂಸ್ಕೃತಿಯೆಂದು ಯಜಮಾನಿಕ ನಡೆಸಿದರ ಫಲವಾಗಿ ಕೆಳವರ್ಗದ ಸಂಸ್ಕೃತಿಗಳು ನಿರಂತರವಾಗಿ ದಾಳಿಗೆ ಒಳಗಾಗುತ್ತಲಿವೆ.’[4]

ಜಾನಪದ ಜಗತ್ತಿನ ಅನೇಕ ಬುಡಕಟ್ಟಿನ ಅಲೆಮಾರಿಗಳಲ್ಲಿ ಅಲೆಮಾರಿ ವರ್ಗದವರೇ ತಮ್ಮ ಸಾಂಸ್ಕೃತಿಕ ಲೋಕಕ್ಕೆ ವಾರಸುದಾರರು ಅನೇಕ ಉಪ ಸಂಸ್ಕೃತಿಗಳಲ್ಲಿ ಹೆಣ್ಣು ಅಥವಾ ಹೊಲೆಯ ಮಾದಿಗ ದೀಕ್ಷೆ ಪಡೆಯುವ ಹಾಗೂ ದೀಕ್ಷೆ ಕೊಡುವ ಅಧಿಕಾರವನ್ನು ಹೊಂದುವ ಸ್ವಾತಂತ್ರ್ಯ ಬಹುಶಃ[5] ಅದು ಜಾನಪದ ಉಪ ಸಂಸ್ಕೃತಿಗಳಲ್ಲಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಯಾವುದನ್ನು ನಾವು ಇಂದು ಉಪ ಸಂಸ್ಕೃತಿಯೆಂದು ಕರೆಯುತ್ತಿದ್ದೇವೆ ಅದು ಒಂದು ಕಾಲದಲ್ಲಿ ಈ ನಾಡಿನ ಪ್ರಧಾನ ಸಂಸ್ಕೃತಿಯಾಗಿತ್ತು.

“ಭಾರತದಂಥ ದೇಶದಲ್ಲಿ ಜನಪದರ ಲೋಕದೃಷ್ಟಿಯ ಅಧ್ಯಯನದ ಅಗತ್ಯ ಬಹಳಷ್ಟಿದೆ. ಇಲ್ಲಿರುವ ಅಸಂಖ್ಯಾ ಜನವರ್ಗದಲ್ಲಿ ಇದುವರೆಗೆ ವೈದಿಕರ ಲೋಕದೃಷ್ಟಿಯ ಬಗೆಗೆ ಮಾತ್ರ ಸ್ವಲ್ಪ ಮಟ್ಟಿನ ವಿವೇಚನೆ ನಡೆದಿದೆ. ಐತಿಹಾಸಿಕವಾಗಿಯೂ ವೈದಿಕರ ಲೋಕದೃಷ್ಟಿಗೆ ರಾಜತ್ವದ ರಕ್ಷಣೆ ದೊರೆತಿದೆ. ಆ ಮೂಲಕ ಅದು ಸಾಮಾಜಿಕ ಮನ್ನಣೆಗೆ ಪಾತ್ರವಾಗಿದೆ. ಅನೇಕ ಪುರಾಣಗಳು ಈ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿವೆ. ಎಷ್ಟೋ ಬಾರಿ ವೈದಿಕರ ಲೋಕದೃಷ್ಟಿಯೇ ಸಮಗ್ರ ಭಾರತದ ಲೋಕದೃಷ್ಟಿಯೆಂದು ಸಾಲು ದೇಶಿಯ ಮತ್ತು ಪಾಶ್ಚಾತ್ಯ ವಿದ್ವಾಂಸರ ವಿಶ್ಲೇಷಣೆಗೆ ಮೈ ಒಡ್ಡಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಪ್ರಬಲವಾಗುತ್ತಿರುವ ವಿಶ್ವ ಹಿಂದೂ ಪರಿಷತ್ತು ಆರ್.ಎಸ್.ಎಸ್. ನಂಥ ಬಲಪಂಥೀಯ ಸಂಘಟನೆಗಳು ವೈದಿಕರ ಲೋಕದೃಷ್ಟಿಯನ್ನು ಹಿಂದೂ ಲೋಕದೃಷ್ಟಿಯೆಂದು ಮಾನ್ಯ ಮಾಡುತ್ತಾ ಅದನ್ನೇ ಅಖಿಲ ಭಾರತದ ಏಕೈಕ ಲೋಕದೃಷ್ಟಿಯೆಂದು ಸಾರತೊಡಗಿವೆ. ಸೃಷ್ಟಿಯ ಆದಿಯಲ್ಲಿ ಕೇವಲ ನೀರು ಇದ್ದು ಅದರ ಮೇಲೆ ತೇಲುತ್ತಿರುವ ಆಲದ ಎಲೆಯಲ್ಲಿ ಭಗವಂತನು ಕಾಲುಬೆರಳನ್ನು ಚೀಪುತ್ತಾ ಮಲಗಿದ್ದನು ಎಂಬ ಕಥೆಯನ್ನು ಅಖಿಲ ಭಾರತದ ಮಟ್ಟದಲ್ಲಿ ನಂಬುವಂತೆ ಮಾಡುವರ ಇವರಿಗೆ ಸೃಷ್ಟಿಯ ಆದಿಯಲ್ಲಿ ನೀರೇ ಇತ್ತು ಅದರಲ್ಲಿ ಒಂದು ಡೋಲು ತೇಲುತ್ತಿತ್ತು ಆ ಡೋಲಿನಲ್ಲಿ ಅಣ್ಣ ತಂಗಿಯರು ಇದ್ದರು ಎಂಬ ಕೊರಗರ ವಿಶ್ವದ ಹುಟ್ಟಿನ ಕಥೆ ಮರೆತು ಹೋಗುತ್ತಿದೆ. ಭಾರತದ ಬಹುರೂಪಿ ಸಂಸ್ಕೃತಿಯನ್ನು ನಾಶಮಾಡಿ ಅದಕ್ಕೊಂದು ಏಕರೂಪವನ್ನು ಕೊಡುತ್ತಿರು ಬಂಡವಾಳಶಾಹಿ ಫ್ಯಾಸಿಸ್ಟ್ ಪುರುಷ ಚಿಂತಕರಿಂದ ಈ ದೇಶದ ಬಹುಸಂಖ್ಯಾತ ಜನಪದರ ಲೋಕದೃಷ್ಟಿ ದಿನೇ ದಿನೇ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ಮಾತ್ರವಲ್ಲ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಸೊರಗುತ್ತಿದೆ.”[6] ಪಾಳೇಗಾರರ ಆಳರಸರ ಕಾಲದಲ್ಲಿ ಅಲ್ಲದೆ ವಸಾಹತುಶಾಹಿ ಕಾಲಘಟ್ಟದ ಮತ್ತು ವಸಹಾತ್ತೋತ್ತರ ಕಾಲಘಟ್ಟದಲ್ಲಿಯೂ ವೈದಿಕರು ಜಾನಪದರ ಚಿಂತನೆಗಳನ್ನು ಕಾಲಕಸವಾಗಿ ಕಂಡಿದ್ದು ಆ ನಿಟ್ಟಿನಲ್ಲಿ ಅಸಡ್ಡೆತೆಯನ್ನು ಮೆರೆದಿದ್ದಾರೆ. ಜಾನಪದದ ಪ್ರತಿಯೊಂದು ಅಲೆಮಾರಿ ಗುಂಪಿನವರು ಲೋಕದೊಳಗೆ ನೆಲೆ ನಿಂತುದುದರ ಬಗ್ಗೆ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಆ ಹಿನ್ನೆಲೆಯಲ್ಲಿ ಚಾರಿತ್ರಿಕ ಮತ್ತು ಪೌರಾಣಿಕವಾಗಿರುವಂತಹ ಇಲ್ಲವೇ ಜಾನಪದ ಕತೆಗಳ ಮೂಲಕ ವೃತ್ತಿಯನ್ನು ಪಡೆದ ರೀತಿಯು ಅವರದೇ ಆದ ಲೋಕದೃಷ್ಟಿ ಎಂದು ಹೇಳಬಹುದಾಗಿದೆ.

ಗೊರವರು

ಪ್ರತಿಯೊಂದು ಜನಾಂಗವು ತನ್ನನ್ನಾವರಿಸಿರುವ ನಿಸರ್ಗದೊಂದಿಗೆ ವಿಶಿಷ್ಟ ಸಂಬಂಧವನ್ನು ಕಲ್ಪಿಸಿಕೊಳ್ಳುವುದರ ಮೂಲಕ ಧರ್ಮ ದೇವರುಗಳನ್ನು ಸೃಷ್ಟಿಸಿಕೊಂಡಿದೆ. ಹಾಗೆ ಸೃಷ್ಟಿಸಿಕೊಳ್ಳುವುದರಲ್ಲಿ ತಮ್ಮ ವೃತ್ತಿ ಮೂಲವನ್ನು ಕಂಡುಕೊಂಡಿದ್ದಾರೆ.

ಗೊರವರ ಸಂಸ್ಕೃತಿಯೂ ಮಧುರ ಕವಿಯಂತಹವರಿಂದ ಟೀಕೆಗೊಳಗಾಗಿದ್ದನ್ನು ನಾವು ಗಮನಿಸಬಹುದು. ಗೊರವರ ಡುಂಡೂಚಿಯೇ ಬೀದಿವರೆಯ ಬೀರನ ಕಥೆಯೇ ಎಂಬಿತ್ಯಾದಿ ಇದರಿಂದಾಗಿ ಗೊರವ ಸಂಸ್ಕೃತಿಯ ಹಳಮೆ ಮತ್ತು ಮಹತ್ವ ನಮಗೆ ದೊರೆಯುತ್ತದೆ. ಮೈಲಾರಲಿಂಗನ ಭಕ್ತರು ಒಂದೇ ಜಾತಿ ಒಂದೇ ಮತದವರು ಇರಬೇಕೆಂಬ ನಂಬಿಕೆ ಸಂಪ್ರದಾಯವಿಲ್ಲ. ಯಾವುದೇ ಜಾತಿಯ ವ್ಯಕ್ತಿ ಮೈಲಾರಲಿಂಗನ ಭಕ್ತನಾಗಬಹುದು. ಗೊರವರು ತಮ್ಮ ವೃತ್ತಿಯೊಂದಿಗೆ ಲೋಕದಲ್ಲಿ ಹೇಗೆ ನೆಲೆ ನಿಂತರು ಎಂಬುದನ್ನು ಅನೇಕ ಐತಿಹ್ಯ ಪುರಾಣ ಕಥೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದು.

ಬ್ರಹ್ಮಾಂಡ ಪುರಾಣದ ಕ್ಷೇತ್ರ ಖಂಡದೊಳಗೆ ಇಪ್ಪತ್ತೆರಡು ಅಧ್ಯಾಯಗಳಲ್ಲಿ ಮೈಲಾರಲಿಂಗನ ವಿವಿಧ ಲೀಲೆಗಳನ್ನು ವೈವಿಧ್ಯಮಯವಾಗಿ ಬಣ್ಣಿಸಲಾಗಿದೆ. ಮಣಿಚೂಲ ಪರ್ವತದಲ್ಲಿ ಏಳು ಜನ ಧರ್ಮಪುತ್ರರು ತಪಸ್ಸು ಮಾಡುತ್ತಿದ್ದಾಗ ಮಲ್ಲನೆಂಬ ದೈತ್ಯನು ಬೇಟೆಗೆ ಬಂದವನು. ಈ ಧರ್ಮಪುತ್ರರನ್ನು ಹಿಂಸಿಸಲಾರಂಭಿಸಿದನು. ಮಲ್ಲನನ್ನು ಹೆದರಿಸಲು ಯಾವ ದೇವತೆಗಳು ಮುಂದಾಗದಿದ್ದಾಗ ಋಷಿಗಳು ಶಿವನನ್ನು ನಾನಾ ಬಗೆಯಾಗಿ ಸ್ತುತಿಸಿ ತಮ್ಮ ತೊಂದರೆಯನ್ನು ನಿವೇದಿಸಿಕೊಂಡರು. ಆಗ ಶಿವನು ಉಗ್ರರೂಪಿಯಾಗಿ ತನ್ನ ಜಡೆಯನ್ನು ನೆಲಕ್ಕಪ್ಪಳಿಸಲು ಘೋರರೂಪಿಯಾದ ಮಹಾಮಾರಿ ಜನಿಸಿದಳು. ಅವಳ ಉಗ್ರರೂಪವನ್ನು ಕಂಡು ಹೆದರಿದ ಮುನಿಗಳು, ದೇವತೆಗಳು, ಮಹಾಮಾರಿಗೆ ತುಪ್ಪದ ದೇವತೆಗಳ ಸೈನ್ಯಕ್ಕೆ ಸಹಾಯಕಳಾಗಿ ನಡೆದಳು. ಶಿವನು ಮಾರ್ತಾಂಡಭೈರವನ ರೂಫತಾಳಿ ಅಶ್ವರೋಹಿಯಾಗಿ ಖಡ್ಗ ಮುಂತಾದ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧಕ್ಕೆ ಹೊರಟನು. ಪರ್ವತಿಯು ಗಂಗಾ ಮ್ಹಾಲಸಿಕಾ ರೂಪಧರಿಸಿ ಶಿವನೊಡನೆ ಯುದ್ಧ ಸನ್ನದ್ಧಳಾದಳು. ವಿಷ್ಣು ಶಿವನ ಸೇನಾಪತಿಯಾಗಿ ಸೈನ್ಯದ ಶಿಸ್ತನ್ನು ನೋಡಿಕೊಳ್ಳಲು ಅಣಿಯಾದನು. ಈ ರೀತಿ ಸಜ್ಜಾದ ಏಳು ಕೋಟಿ ದೇವ ಸೇನೆ ಮಲ್ಲಾಸುರನ ಮೇಲೆ ದಾಳಿಗೆ ಹೊರಟಿತು.

ದೇವತೆಗಳ ದಾಳಿಯ ಸುದ್ದಿ ತಿಳಿದ ಮಲ್ಲಾಸುರನು ತನ್ನ ತಮ್ಮ ಮಣಿಕಾಸುರನ ಖಡ್ಗದಂಷ್ಟ್ರ, ಉಲ್ಕಾಮುಖ, ಕುಂತಲೋಮರೊಂದಿಗೆ ಯುದ್ಧಕ್ಕೆ ಸಿದ್ಧನಾದನು. ಘೃತಮಾರಿ ರಾಕ್ಷಸ ಸೈನ್ಯದೊಂದಿಗೆ ಭೀಕರವಾಗಿ ಹೋರಾಡಿದಳು. ಮಾರ್ತಾಂಡಭೈರವು ತನ್ನ ತ್ರಿಶೂಲದಿಂದ ಮಣಿಕಾಸುರನ ಎದೆಯನ್ನು ಸೀಳಿದನು. ಮೆಟ್ಟಿ ತುಳೀಯಲೆಂದು ಅವನ ತಲೆಯ ಮೇಲೆ ಭರವನು ಪಾದವನ್ನು ಇಟ್ಟಕೂಡಲೇ ಮಣಿಕಾಸುರನಿಗೆ ಜ್ಞಾನೋದಯವಾಯಿತು. ಶಿವನು ತನ್ನ ತಲೆಯ ಮೇಲೆಟ್ಟಿರುವ ಪಾದದಿಂದ ತಾನು ಧನ್ಯನಾದೆನೆಂದು ಇದೇ ರೀತಿ ತನ್ನ ತಲೆಯ ಶಿವನ ಪಾದ ಸದಾ ಇರಲೆಂದು ಮತ್ತು ತನ್ನನ್ನು ವಾಹನವಾಗಿ ಸ್ವೀಕರಿಸಬೇಕೆಂದು ಕೋರಿಕೊಂಡನು. ಅದರಂತೆ ಮಣಿಕನು ಮರಣಾನಂತರ ಕುದುರೆಯ ರೂಪದಲ್ಲಿ ಶಿವನಿಗೆ ವಾಹನವಾದನು.

ಮಣಿಕಾಸುರ ವಧೆಯ ನಂತರ ಶಿವನು ಕರಣೆಯಿಂದ ಸಂಧಿಗಾಗಿ ಮಲ್ಲಾಸುರನ ಬಳಿಗೆ ವಿಷ್ಣುವನ್ನು ಕಳುಹಿಸಿದನು. ಮದೋನ್ಮತ್ತನು ತಮ್ಮಂದಿರ ಸಾವಿನಿಂದ ಕಂಗೆಟ್ಟವನು ಆದ ಮಲ್ಲಾಸುರ ಸಂಧಿಗೆ ಒಪ್ಪಲಿಲ್ಲ. ಮತ್ತೆ ಯುದ್ಧ ಆರಂಭವಾಯಿತು. ಭೈರವನಿಂದ ಹತನಾದ ಮಲ್ಲನು ಶಿವನನ್ನು ಪ್ರಾರ್ಥಿಸಿ ಪರಶಿವನ ಹೆಸರಾದ ಪೂರ್ವಾರ್ಧದಲ್ಲಿ ತನ್ನ ಹೆಸರು ಉಳಿಯುವಂತೆ ಬೇಡಿಕೊಂಡನು. ಅದರಂತೆ ಪರಶಿವನು ಮಲ್ಲಾರಿಯೆಂಬ ನಾಮಧ್ಯೇಯ ಪಡೆದುಕೊಂಡನು ಮತ್ತು ಮಲ್ಲನ ಶಿರವು ಸಹ ಭೈರವನ ಪಾದದಡಿಯಲ್ಲಿ ಉಳಿಯುವಂತಾಯಿತು.

ಸಂಸ್ಕೃತದ ಮಲ್ಲಾರಿ ಮಹಾತ್ಮೆಯು ಮೇಲಿನ ಪುರಾಣವನ್ನು ವಿಶದಪಡಿಸುತ್ತದೆ. ಪರಶಿವನು ರಾಕ್ಷಸರ ಸಂಹಾರಕ್ಕಾಗಿ ಭೂಲೋಕಕ್ಕೆ ಬಂದಾಗ ಗೊರವಯ್ಯನ ವೇಷಧರಿಸಿ ಬಂದವನಾದುದರಿಂದ ಗೊರವಯ್ಯನ ಉಡುಗೆ ತೊಡುಗೆಗಳು, ಈ ಸಂಸ್ಕೃತಿಯ ಬಿರುದು ಬಾವಾಲಿಗಳಾದವು. ಗೊರವರು ಆಚರಿಸುವ ಆಚರಣೆಗಳು ಮೇಲಿನ ಪುರಾಣದ ಪ್ರತಿಯೊಂದು ಘಟನೆಯ ಅನುಕರಣೆಗಳಾಗಿವೆ. ತುಪ್ಪದ ಮಾಳಮ್ಮನನ್ನು ಲಗ್ನವಾಗುವಾಗ ಬೆನ್ನಟ್ಟಿ ಬಂದ ಅವಳ ಅಣ್ಣಂದಿರಿಗೆ ಪರಶಿವನೇ ಐದು ಜನ ಅಣ್ಣಂದಿರ ಕೊರಳಗಳಿಗೂ ಮೂರು ಮೂರು ಕವಡೆ ಕಟ್ಟಿ ಐದು ಭಂಡಾರದ ಬಟ್ಟಲು, ಐದು ಡಮರುಗ, ತ್ರಿಶೂಲಗಳನ್ನು ಕೊಟ್ಟು ದೋಣಿ ಸೇವೆ ಮಾಡಿಸಿದನಾದ್ದರಿಂದ ಮೂಲತಃ ಗೊರವರಿಗೆ ಮೈಲಾರಲಿಂಗನೇ ಗೊರವ ದಿಕ್ಷೆ ಕೊಟ್ಟನೆನ್ನುವ ಪುರಾಣ ಕಥೆಯನ್ನು ಗೊರವರು ಹೇಳುತ್ತಾರೆ.[7] ಇದರಿಂದಾಗಿ ಮೈಲಾರಲಿಂಗನ ಭಕ್ತರಾದ ಗೊರವರು ಮೈಲಾರಲಿಂಗನ ಲಾಂಛನವಾದ ನಾಯಿಯಂತೆ ಬೊಗಾಳಾಟ ನಡೆಸುವುದು, ಅಲ್ಲದೆ ಕುದುರೆ ದೇವರ ವಾಹನವಾಯಿತು. ಅದರಂತೆ ಕುದುರೆಕಾರನ ಸೇವೆ ನಡೆಸುವುದು ಕಾಣುತ್ತೇವೆ. ಈ ತರಹದ ಪುರಾಣ ಕಥೆಗಳ ಹಿನ್ನೆಲೆಯಿಂದ ಲೋಕದಲ್ಲಿ ತಮ್ಮದೇ ಒಂದು ರೀತಿಯ ಸಾಂಸ್ಕೃತಿಕ ಅನನ್ಯತೆಯಿಂದ ತಮ್ಮ ಆರಾಧ್ಯ ದೈವದ ನೆಲೆಯಲ್ಲಿ ನೆಲೆ ನಿಂತು ಕಲ್ಯಾಣಕ್ಕಾಗಿ ದುಡಿಯುತ್ತ ಬಂದಿ‌ದ್ದಾರೆ.

ಸುಡುಗಾಡು ಸಿದ್ಧರು

ಅಲೆಮಾರಿ ಬುಡಕಟ್ಟಿನ ಪ್ರತಿಯೊಂದು ಸಮೂಹದವರು ತಮ್ಮ ಮೂಲದ ಕುರಿತಂತೆ ವಿಶಿಷ್ಟವಾಗಿರುವಂಥ ವಿಚಾರ ಸಂಗತಿಗಳನ್ನು ಹೊತ್ತು ತಂದಿದ್ದಾರೆ. ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವಲ್ಲಿ ಪುರಾಣ, ಐತಿಹ್ಯ ಮತ್ತು ಅಲ್ಪಸ್ವಲ್ಪ ಚಾರಿತ್ರಿಕ ಅಂಶಗಳ ಆಧಾರದ ಮೇಲೆ ತಮ್ಮ ತನವನ್ನು ಮೆರೆದಿದ್ದಾರೆ ಅಂತಹವರಲ್ಲಿ ಸುಡುಗಾಡು ಸಿದ್ಧರು ಒಬ್ಬರು.

ಈಶ್ವರ ತಪಸ್ಸು ಮಾಡುವಾಗ ಅವನ ಸೇವೆಗಾಗಿ ಪಾರ್ವತಿ ಈ ನವಕೋಟಿ ಸಿದ್ಧರನ್ನು ಸೃಷ್ಟಿಸಿದಳೆಂದೂ, ಈ ಕಾರ್ಯ ಮುಗಿದ ನಂತರ ವಿಭೂತಿ, ಕಾವಿ, ರುದ್ರಾಕ್ಷಿ ಶಿವ ಗಂಟೆಯನ್ನು ಕೊಟ್ಟು ಭೂಲೋಕಕ್ಕೆ ಕಳುಹಿಸಿದಳೆಂದೂ ಹೇಳುತ್ತಾರೆ.[8]

‘ಒಂದು ಸಲ ತೀರ ಬಡತನಕ್ಕೆ ಒಳಗಾಗಿರುವ ದಂಪತಿಗಳಿಬ್ಬರು ತಮ್ಮ ಮಗನ ಮರಣ ಶವಸಂಸ್ಕಾರವನ್ನು ಮಾಡಲು ತುಂಬಾ ದುರವಸ್ಥೆಗೊಳಗಾಗಿದ್ದರು. ಅದನ್ನು ಗಮನಿಸಿದ ಶಿವಪಾರ್ವತಿಯರು ಅಲ್ಲಿಗೆ ಬಂದು ಅವರ ದುರವಸ್ಥೆಯನ್ನು ಕಂಡು ಮರುಗಿ ಸತ್ತ ಮಗನನ್ನು ಮತ್ತೆ ಬದುಕಿಸಿಕೊಟ್ಟು ಅವನನ್ನು ಮಸಣದ ಒಡೆಯನನ್ನಾಗಿ ನಿಯಮಿಸಿದರು. ಅಂದಿನಿಂದ ಶವಸಂಸ್ಕಾರಕ್ಕೆ ಬರುವ ಮೃತ ದೇಹದ ಮೇಲಿನ ಬಟ್ಟೆ ಬರೆ ಹಾಗೂ ತೆರಿಗೆಯನ್ನು ಪಡೆಯುವ ಹಕ್ಕನ್ನು ಅವನಿಗೆ ನೀಡಲಾಯಿತು.’[9]

ಒಂದು ಕಥೆಯ ಪ್ರಕಾರ ಘೋರಕ್ಷ ಎಂಬ ರಾಕ್ಷಸ ದೇವಾನುದೇವತೆಗಳಿಗೆ ತುಂಬಾ ಕಷ್ಟ ಕೊಡುತ್ತಿದ್ದನಂತೆ. ಸಿದ್ಧರನ್ನು ಈತ ಮನೆಯ ಕಾವಲಿಗಾಗಿ ಇಟ್ಟುಕೊಂಡಿದ್ದನಂತೆ ಘೋರಕ್ಷನ ಉಪಟಳ ತಾಳಲಾರದೇ ಅವರು ಪರಶಿವನ ಮೊರೆಹೊಕ್ಕರು. ಆತ ರೇವಣಸಿದ್ಧನನ್ನು ಕಳುಹಿಸಿದ ಈಶ್ವರ ಮಾಯಜಾಲದಿಂದ ಹಾವು ಚೇಳುಗಳನ್ನು ಸೃಷ್ಟಿಸಿದ ಘೋರಕ್ಷನ ಸಂಹಾರಕ್ಕಾಗಿ ಬರುತ್ತಿದ್ದ ರೇವಣಸಿದ್ಧನಿಗೆ ಕಾವಲು ಕಾಯುತ್ತಿದ್ದ ಸಿದ್ಧರು ತುಂಬ ತೊಂದರೆ ಕೊಟ್ಟರು. ಕೊನೆಗೆ ಸಿಟ್ಟಿನಿಂದ ಉರಿನೇತ್ರ ಬಿಟ್ಟು ಎಲ್ಲರನ್ನು ಭಸ್ಮ ಮಾಡಿದ ನಂತರ ಘೋರಕ್ಷ ರಾಕ್ಷಸನನ್ನು ಸಂಹರಿಸಿ ಬರುವಾಗ ಸ್ಮಶಾನದಲ್ಲಿ ಬೂದಿಯಾಗಿ ಬಿದ್ದಿದ್ದ ಸಿದ್ಧರನ್ನು ನೋಡಿ ಕರುಣೆ ಬಂದು ಬದುಕಿಸಿದನಂತೆ. ಜನರಿಗೆ ಧರ್ಮಭೋಧೆ ಮಾಡಿ ಸತ್ಯ, ನ್ಯಾಯ, ನೀತಿಯಿಂದ ನಡೆಯಿರಿ ಎಂದು ಜೋಳಿಗೆ ವಿಭೂತಿ, ರುದ್ರಾಕ್ಷಿಯನ್ನು ಪೂಜೆಗಾಗಿ ಭೂತಲಿಂಗವನ್ನು ಕೊಟ್ಟು ಹರಸಿ ಹೋದರಂತೆ ಇವರು ಸುಡುಗಾಡಿನಲ್ಲಿ ಜನಿಸಿದ್ದರಿಂದ ಸುಡುಗಾಡು ಸಿದ್ಧರೆಂದು ನಾಮಕರಣವಾಯಿತು ಎಂದು ತಾವು ಶಿವನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ.[10]

ಸುಡುಗಾಡು ಸಿದ್ಧರು ತಾವು ಹರಿಶ್ಚಂದ್ರನ ಪರಂಪರೆಯವರು ಎಂದು ಹೇಳಿಕೊಳ್ಳುವುದುಂಟು. ಅಲ್ಲದೆ ಕುರುಬರ ಸಂತತಿಯ ಇನ್ನೊಂದು ರೂಪವೇ ಸಿದ್ಧರು ಎಂಬ ಕಥೆಯನ್ನು ಹೇಳುತ್ತಾರೆ. ಒಂದು ದಿನ ಸಿದ್ಧನೆಂಬ ಕುರುಬನು ವಿಧಿವತ್ತಾಗಿ ಸಾಯಲು ಶವ ಸಂಸ್ಕಾರಕ್ಕೆ ಅವನ ಹೆಣವನ್ನು ಸ್ಮಶಾನಕ್ಕೆ ಒಯ್ಯುತ್ತಾರೆ. ಗಂಡನಿಗಾಗಿ ಗೋಳಿಡುತ್ತಿರುವ ಹೆಂಡತಿ ಮಾಳಮ್ಮನನ್ನು ಕಂಡ ಶಿವ ಭಕ್ತರೊಬ್ಬರು ಹೀಗೆ ಹೇಳುತ್ತಾರೆ. ನೋಡು ತಾಯಿ ನೀನು ಈಗಲೇ ಹೋಗಿ ಭಕ್ತಿ ಭಂಡಾರಿ ಬಸವಣ್ಣನನ್ನು ಕಂಡು ನಿನ್ನ ದುಃಖ ಹೇಳಿಕೊ ಕರುಣಾಮಯಿ ಅಣ್ಣನವರು ಖಂಡಿತವಾಗಿ ನಿನ್ನ ದುಃಖವನ್ನು ನಿವಾರಣೆ ಮಾಡುವರು. ಆಗ ಮಾಳಮ್ಮನ ಗೋಳು ಕೇಳಿದ ಬಸವಣ್ಣ ತನ್ನ ಆತ್ಮಜ್ಯೋತಿಯಿಂದ, ವಾಣಿಯ ಮಹಿಮೆಯಿಂದ ಸಿದ್ಧನು ಬದುಕಿ ಉಳಿಯುತ್ತಾನೆ. ಮತ್ತೆ ಜೀವದಾನ ಪಡೆದ ಸಿದ್ಧನು ಶಿವದೀಕ್ಷೆಯನ್ನು ಪಡೆದು ವಿಭೂತಿ ರುದ್ರಾಕ್ಷಿಯನ್ನು ಧರಿಸಿ ಸುಡುಗಾಡಿನಲ್ಲೆ ವಾಸ ಮಾಡತೊಡಗುತ್ತಾನೆ. ಮುಂದೆ ಇವರ ಸಂತತಿಯೇ ಸುಡುಗಾಡು ಸಿದ್ಧರು[11] ಎಂದು ಹೇಳಲಾಗುತ್ತಿದೆ. ಇದಲ್ಲದೆ ಶಿವನು ಶನಿದೇವರಿಗೆ ಹೆದರಿ ಸ್ಮಶಾನದಲ್ಲಿ ಅಡಗಿ ಕುಳಿತಾಗ ಬೆವರ ಹನಿಯಿಂದ ಹುಟ್ಟಿಬಂದ ನವಕೋಟಿ ಸಿದ್ಧರೇ ಸುಡುಗಾಡು ಸಿದ್ಧರು ಎಂದು ನಿರ್ವಚಿಸಿಕೊಳ್ಳುತ್ತಾರೆ.

ಹೀಗೆ ಚಾರಿತ್ರಿಕ ಪೌರಾಣಿಕ ಹಿನ್ನೆಲೆಗಳ ಮೂಲಕ ಲೋಕದಲ್ಲಿ ನೆಲಗೊಂಡ ಬಗೆಯನ್ನು ಕಂಡುಕೊಳ್ಳುವ ಇವರು ಲೋಕದ ಸಂಚಾರ ಮಾಡುತ್ತಾ ಜನಸಮೂಹದ ಸಂಪರ್ಕ ಸೇತುವೆಯಾಗಿ ನಿಂತಿದ್ದಾರೆ. ತಾವು ತಮ್ಮ ವೃತ್ತಿಯೊಂದಿಗೆ ಸಂಪರ್ಕ ಹೊಂದಿದ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಲೋಕವನ್ನು ಕಂಡ ರೀತಿ ವಿಶಿಷ್ಟವಾಗಿದೆ.

ಕೊರವರು

ಕೊರವ ಜನಾಂಗದ ಮೂಲ ಹಾಗೂ ಇತಿಹಾಸದ ಬಗ್ಗೆ ಹಲವಾರು ಐತಿಹ್ಯಗಳಿವೆ. ರಾಮಾಯಣ, ಮಹಾಭಾರತ, ಭಾಗವತ ಜನಪದ ಈ ಮುಂತಾದವುಗಳಲ್ಲಿ ಕೊರವ ಜನಾಂಗದ ಬಗೆಗಿನ ಮಾಹಿತಿ ದೊರೆಯುತ್ತದೆ.

ಬ್ರಹ್ಮದೇವನಿಂದ ನೇರವಾಗಿ ಭೂಮಿಗೆ ಇಳಿದು ಬಂದವನು ಅಗ್ನೇಶ್ವಶು ಮಗ ವೇಣುಡು. ವೇಣೂಡು ಭೂಮಂಡಲದ ಸಿಂಹಾಸನಾಧಿಪತಿಯಾಗಿ ಆಳುತ್ತಿದ್ದನು. ಒಂದು ದಿನ ಇವನು ಸತ್ತು ಹೋದ ವೇಣುಡುವಿಗೆ ಮಕ್ಕಳು ಇರಲಿಲ್ಲ ಅದುದರಿಂದ ಉತ್ತರಾಧಿಕಾರಿಯ ಸಮಸ್ಯೆ ಎದುರಾಯಿತು. ಈ ಜಟಿಲ ಸಮಸ್ಯೆ ಪ್ರಜೆಗಳಿಂದ ಬಗೆಹರಿಯದಾದಾಗ ಪ್ರಜೆಗಳು ವೇಣುಡುವಿನ ದೇಹವನ್ನು ಸುಡಲು ಇಲ್ಲ ಹೂಳಲೂ ಇಲ್ಲ. ಸ್ವಲ್ಪ ಕಾಲ ಹೆಣವನ್ನು ಹಾಗೇ ರಕ್ಷಿಸಿದರು. ಭೂಲೋಕದಲ್ಲಿ ಉದ್ಭವಿಸಿದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಏಳು ಗ್ರಹಗಳು ಏಕಾಂತದಲ್ಲಿ ಸಭೆ ಸೇರಿದವು. ಸುದೀರ್ಘ ಚಿಂತನೆಯ ನಂತರ ಗ್ರಹಗಳು ಒಂದು ನಿರ್ಣಯಕ್ಕೆ ಬಂದವು ವೇಣುಡುವಿನ ಬಲ ತೊಡೆಯಿಂದ ಒಂದು ಜೀವಿಯನ್ನು ಸೃಷ್ಟಿಸಿದರು ಗ್ರಹಗಳು ನಡೆಸಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಬಲತೊಡೆಯಿಂದ ಸೃಷ್ಟಿಯಾದ ಜೀವಿಯ ದೇಹ ವಿರೂಪವಾಗಿದ್ದುದಲ್ಲದೆ ಮುಖ ಅತ್ಯಂತ ವಿಕಾರವಾಗಿತ್ತು. ಆದ್ದರಿಂದ ಸಿಂಹಾಸನಾಧೀಶನಾಗಲು ಇವನು ಅರ್ಹನಲ್ಲವೆಂದು ಮತ್ತೆ ಸಭೆ ಸೇರಿ ವೇಣುಡುವಿನ ಬಲ ತೋಳಿನಿಂದ ಮತ್ತೊಬ್ಬನನ್ನು ಸೃಷ್ಟಿಸಿದರು ಸ್ಫುರದ್ರೂಪಿಯಾದ ತುಂಬ ತೇಜಸ್ವಿಯಾದವನಾಗಿದ್ದನು. ಇವನನ್ನು ಪ್ರೂತು ಚಕ್ರವರ್ತಿ ಎಂದು ನಾಮಕರಣ ಮಾಡಿ ಸಿಂಹಾಸನದ ಮೇಲೆ ಕೂರಿಸಿದರು.

ಈ ದಿಢೀರ್ ಬದಲಾವಣೆಯಿಂದ ನಿಶಡು ಎಂಬುವವನು ಬಹಳ ನಿರಾಶೆಗೊಂಡನು. ಸುಮ್ಮನೆ ಕೂಡದೇ ನಾನು ರಾಜನಾಗದೇ ಹೋದರೆ ತನ್ನ ಸೃಷ್ಟಿಯಾದರೂ ಏತಕ್ಕಾಯಿತು ಎಂದು ದೇವರಲ್ಲಿ ಕಾಡಿ ಬೇಡಿಕೊಂಡನು. ನ್ಯಾಯಬದ್ಧವಾದ ಬೇಡಿಕೆಗೆ ದೇವರು ಓಗೊಟ್ಟು ಪ್ರೂತು ಚಕ್ರವರ್ತಿಯು ಈ ಭೂಮಿಯ ರಾಜನಾಗಿರುವುದರಿಂದ ನಿನ್ನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಲು ಸಾಧ್ಯವಿಲ್ಲ. ಊರನ್ನು ಆಳುವ ಬದಲು ಕಾಡನ್ನು ಆಳಬಹುದು ಎಂದು ಆಜ್ಞಾಪಿಸಿದ. ಅಂದಿನಿಂದ ನಿಶಡುವು ಕಾಡಿಗೆ ರಾಜನಾದ. ಅವನಿಗೆ ಚೆಂಚು, ಯಾನಾಡಿ ಮತ್ತು ಕೊರವ ಎಂಬ ಮಕ್ಕಳು ಹುಟ್ಟಿದ್ದರು.[12] ಹೀಗೆ ಪೌರಾಣಿಕ ಹಾಗೂ ಕಾಲ್ಪನಿಕ ನೆಲೆಯಲ್ಲಿ ಕೊರವ ಜನಾಂಗದ ಉಲ್ಲೇಖ ದೊರಕುತ್ತದೆ.

ಇನ್ನೊಂದು ಐತಿಹ್ಯದ ಪ್ರಕಾರ ಬದ್ಧ ವೈರಿಗಳಾದ ಪಾಂಡವರ ಕೌರವರ ನಡುವಿನ ದ್ವೇಷ ಹೆಚ್ಚುತ್ತಿರುವುದನ್ನು ಕಂಡ ಧರ್ಮರಾಜನು ದುರ್ಯೋಧನನ ಮುಖ ನೋಡಬಾರದೆಂಬ ಉದ್ದೇಶದಿಂದ ಕಾಡಿಗೆ ಹೊರಟು ಹೋಗುತ್ತಾನೆ. ಆದರೆ ಧರ್ಮರಾಜನನ್ನು ಒಬ್ಬ ಹುಡುಗಿ ಗಾಢವಾಗಿ ಪ್ರೀತಿಸುತ್ತಿರುತ್ತಾಳೆ. ಹೊರಡುವಾಗ ಧರ್ಮರಾಜ ಅವಳನ್ನು ಮರೆತಿರುತ್ತಾನೆ. ಈ ಸುದ್ಧಿ ತಿಳಿದ ಹುಡುಗಿ ಧರ್ಮರಾಯನನ್ನು ಸಂಪೂರ್ಣವಾಗಿ ಮರೆಯದೇ ತೊಳಲಾಟಕ್ಕೆ ಸಿಲುಕಿಕೊಳ್ಳುತ್ತಾಳೆ. ಕೊನೆಗೆ ಒಂದು ದಿನ ಧರ್ಮರಾಯನನ್ನು ಹುಡುಕುತ್ತ ಹೊರಟು ಹೋಗುತ್ತಾಳೆ. ಭವಿಷ್ಯ ನುಡಿಯುವಂತೆ ವೇಷ ಹಾಕಿಕೊಂಡು ಊರೂರು ಬೀದಿ ಬೀದಿ ಅಲೆಯುತ್ತಾ ಕೊನೆಗೆ ಧರ್ಮರಾಜನನ್ನು ಸೇರುತ್ತಾಳೆ, ಕಾಲಗತಿಸಿದಂತೆ ಗರ್ಭಿಣಿಯಾಗುತ್ತಾಳೆ. ಈ ಸಂದರ್ಭದಲ್ಲಿ ಇವರಿಬ್ಬರಿಗೆ ಹುಟ್ಟಿದ ಸಂತಾನವೇ ಕೊರವ ಎಂಬ ಹೆಸರು ಪಡೆಯಿತು. ಇದಲ್ಲದೆ ಯಾವುದೋ ಒಂದು ದಿನ ಪಾರ್ವತಿ ಕೊರವಂಜಿ ವೇಷ ಧರಿಸಿ ಶಿವನಿಗೆ ಭವಿಷ್ಯ ಹೇಳಿದಳಂತೆ ಇವರು ಆಕೆಯ ಮಕ್ಕಳಾಗಿದ್ದರಿಂದ ಅಂದಿನಿಂದ ಅವರಿಗೆ ಕೊರವರು, ಕೊರವ ಎಂಬ ಹೆಸರು ಬಂತೆಂದು ರೂಢಿಯಿದೆ.

ಹೆಳವರು

ಅಲೆಮಾರಿ ಬುಡಕಟ್ಟಿನ ಕುರಿತು ಇರುವ ಐತಿಹ್ಯ ನಂಬಿಕೆಗಳಂತೆ ಹೆಳವರ ಕುರಿತು ಅನೇಕ ನಂಬಿಕೆ ಐತಿಹ್ಯಗಳು ಜನಮಾನಸದಲ್ಲಿ ನೆಲೆಯೂರಿ ನಿಂತಿವೆ. ಬಸವಣ್ಣನವರ ಕಾಲದಲ್ಲಿ ಒಕ್ಕಲು ಗೌಡನೆಂಬುವನಿಗೆ ಏಳು ಜನ ಗಂಡು ಮಕ್ಕಳಿದ್ದರು. ಅದರಲ್ಲಿ ಕಿರಿಯವನು ಹುಟ್ಟಿನಿಂದಲೇ ಅಂಗಹೀನನಾಗಿದ್ದನು. ಈ ಹೆಳವನಿಗೆ ಯಾರೊಬ್ಬರೂ ಕನ್ಯೆಯನ್ನು ಕೊಡದಿದ್ದರಿಂದ ಆಗ ಹೆಳವನು ಬಸವಣ್ಣನವರ ಬಳಿ ಬಂದು ಶರಣರೊಂದಿಗೆ ಇರತೊಡಗಿದ ಆಗ ಬಸವಣ್ಣನು ಹೆಳವನಿಗೆ ನಂದಿಯೊಂದನ್ನು ಕೊಟ್ಟು ಶರಣರ ಮನೆಗಳಿಗೆ ಹೋಗಿ ಅವರವರ ಆಗುಹೋಗುಗಳನ್ನು ವಿಚಾರಿಸಿಕೊಂಡು ಬರುವ ಕಾರ್ಯವನ್ನು ಹಚ್ಚಿದ ನಂತರ ಅವನಿಗೆ ಮದುವೆಯಾಗಿ ಮಕ್ಕಳಾದವು ಅವರೇ ಹೆಳವ ಸಂತತಿಯೆಂದು ಐತಿಹ್ಯಗಳಿವೆ.[13]

ಹಳ್ಳಿಗಳಿಗೆ ಹೋಗಿ ಅಲ್ಲಿಯ ಮನೆತನಗಳ ಪೂರ್ವಕಥೆಯನ್ನು ವಿವರವಾಗಿ ಹೇಳುವ ಹೆಳವರು ಮೌಖಿಕ ಇತಿಹಾಸದ ದಾಖಲೆಗೆ ಪ್ರಮುಖ ಉದಾಹರಣೆಯಾಗಿದ್ದಾರೆ. ಹಳ್ಳಿಗಳಿಗೆ ಹೋಗಿ ಪ್ರತಿಯೊಂದು ಮನೆಯವರ ವಂಶದ ವಿವರಗಳನ್ನು ಪಡೆದುಕೊಂಡು ಅದನ್ನೆ ವೃತ್ತಿಯನ್ನಾಗಿ ಮಾಡಿಕೊಂಡ ಹೆಳವರು ಶಿವಶರಣರಿಂದ ಪ್ರಭಾವಿತರಾಗಿದ್ದಾರೆ.[14] ಇವರು ೧೨ನೇ ಶತಮಾನದ ಸಂದರ್ಭದಲ್ಲಿ ಕನ್ನಡದ ನೆಲದಲ್ಲಿ ನೆಲಸಿರಬೇಕೆಂಬುದಕ್ಕೆ ಅನೇಕ ಚಾರಿತ್ರಿಕ ದಾಖಲೆಗಳು ದೊರೆಯುತ್ತವೆ.

ಇನ್ನೊಂದು ಪ್ರಮುಖ ಅಲೆಮಾರಿ ಜನಾಂಗವಾದ ದುರುಗಮುರುಗಿಯರು ಶಕ್ತಿಯ ಆರಾಧಕರಾಗಿದ್ದಾರೆ. ದುರುಗಮ್ಮ-ಮರುಗಮ್ಮ ಭಕ್ತರಾದ ಇವರು ದುರುಗಮ್ಮ – ಮರುಗಮ್ಮ ದೇವರುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಬಂದು ಬೀದಿ ಬೀದಿಗಳಲ್ಲಿ ದೇವರನ್ನು ಪ್ರದರ್ಶಿಸುತ್ತಾ ದೇವರನ್ನು ಸಾಮಾನ್ಯರ ಮನೆ ಬಾಗಿಲಿಗೆ ಒಯ್ದ ಶ್ರೇಯಸ್ಸು ಈ ಜನಾಂಗಕ್ಕೆ ಸಲ್ಲುತ್ತದೆ.

ಅಲೆಮಾರಿಗಳಾದ ವೇಷಗಾರರು (ಬಹುರೂಪಿಗಳು) ಸಾಮಾನ್ಯ ಜನರ ಮನರಂಜಕವಾಗಿ ದುಡಿದಿದ್ದಾರೆ. ದುರುಗಮುರುಗಿಯವರು, ದುರುಗಮ್ಮ-ಮರುಗಮ್ಮ, ದೇವತೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಮನೆ ಮನೆಗೆ ಓಣಿಗಳಿಗೆ ತಂದು ಸಾಮಾನ್ಯರಿಗೆ ಮುಟ್ಟಿಸಿದರು. ಆ ಮೂಲಕ ರೋಗ ರುಜಿನಗಳ ಬಾಧೆಗಳನ್ನು ನಿವಾರಣೆಗೆ ಕಾರಣವಾಗಿದ್ದಾರೆ. ಗ್ರಾಮದವರು ಕೊಟ್ಟ ದವಸ ಧಾನ್ಯಗಳನ್ನು ಪಡೆದು ಜೀವನ ಸಾಗಿಸಿದ್ದಾರೆ. ಸುಡುಗಾಡು ಸಿದ್ಧರು, ಹೆಳವರು ಇದೇ ರೀತಿಯ ವೃತ್ತಿಯ ಹಿನ್ನೆಲೆಯಲ್ಲಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ಅಲೆಮಾರಿ ಸಂಸ್ಕೃತಿ: ಲೋಕದೃಷ್ಟಿ

ಕೃಷಿ ಪ್ರಧಾನವಾದ ದೇಶ ನಮ್ಮದು. ಈ ಒಕ್ಕಲು ಹಿನ್ನೆಲೆಯಲ್ಲಿ ಹುಟ್ಟಿದ ಕಲೆಗಳು ಅಪಾರ ಅವು ವಿಭಿನ್ನ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದವುಗಳು. ಇಂದು ರೈತನ ಮಡಿಲಲ್ಲಿ ಕಲೆ ಉಳಿಯುವುದು ಕಷ್ಟ ಸಾಧ್ಯವಾಗಿದೆ. ಅಲೆಮಾರಿ ವರ್ಗದವರು ಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದ್ದರೂ ರೈತಾಪಿ ವರ್ಗದ ದುಡಿಮೆಯನ್ನೇ ಆಧರಿಸಿದಂತಹವರು ಹೆಳವರು, ಕೊರವರು, ಗೊಂದಲಿಗರು, ದುರುಗ-ಮುರುಗಿಯವರು ಈ ಮುಂತಾದವರು ತಮ್ಮ ವೃತ್ತಿಸಂಬಂಧಿ ಸಾಂಸ್ಕೃತಿಕ ಲೋಕವು ಸಹ ಆಧುನಿಕ ದರ್ಬಾರಿಗೆ ತಲೆಬಾಗಿದೆ.

ಈ ಹಿಂದೆ ಹಳ್ಳಿಗಳಲ್ಲಿ ದಿನ ಬೆಳಗಾದರೆ ಸಾಕು, ರೈತನ ಧ್ವನಿ ಎಲ್ಲೆಲ್ಲಿಯೂ ಕೇಳಿಬರುತ್ತಿತ್ತು. ಹೊಲ-ಗದ್ದೆಗಳಲ್ಲಿ ಗೊಬ್ಬರ ಹೊಡೆಯುವಾಗ, ಕಳೆ ಕೀಳುವಾಗ, ನೆಡುವಾಗ, ಬಿತ್ತುವಾಗ, ಕೊಯ್ಲು ಮಾಡುವಾಗ, ಮಟ್ಟೆ ಹೊಡೆಯುವಾಗ, ಹೀಗೆ ಹತ್ತು ಹಲವಾರು ಸಂದರ್ಭದಲ್ಲಿ ರೈತ ಹೊಲದಲ್ಲಿ ಪಾದ ಇಟ್ಟರೆ ಸಾಕು ಪಾದಕ್ಕೊಂದು ಹಾಡು ಹೊರಹೊಮ್ಮುತ್ತಿತ್ತು.

ರೈತ ಋತುಗಳಿಗೆ ಅನುಸಾರವಾಗಿ ಬೆಳೆಗಳನ್ನು ಬೆಳೆದು ಆನಂದವಾದಾಗಲೂ ಹಾಡಿ ಕುಣಿದವ, ಶ್ರಮವಾದಾಗಲೂ ಹಾಡಿದವ, ಬೆಳೆಕೊಯ್ಲು ನಡೆದಾಗ ಹೆಳವರು, ಕೊರವರು, ಗೊಂದಲಿಗರು, ದುರುಗ-ಮುರುಗಿಯವರು, ಸುಡುಗಾಡುಸಿದ್ಧರು, ಇವರಲ್ಲದೇ ಆಯಾಗಾರರಾದ ನಾವಿಕ, ಕಂಬಾರ, ಕುಂಬಾರ, ಬಡಿಗ ಈ ಮುಂತಾದ ಕಲಾವಿದರು ಆಯಾಗಾರರು ರೈತನ ಹೊಲಗದ್ದೆಗಳಿಗೆ ಹೋಗಿ ದಾನ ಸ್ವೀಕರಿಸುವ ಪರಿ ಅನನ್ಯ. ಈ ರೀತಿಯಾಗಿ ಅಲೆಮಾರಿಗಳಿಗೂ ಆಯಾಗಾರರಿಗೂ ಸಾಧ್ಯವಾದಷ್ಟು ದವಸ-ಧಾನ್ಯಗಳನ್ನು ಕೊಡಮಾಡಿ ತೃಪ್ತಿ ಪಡುವ ಪದ್ಧತಿ ಇಂದು ಮಾಯವಾಗಿದೆ.

ತಮ್ಮ ಜೀವನಕ್ಕೆ ನೇರವಾಗಿ ಹೊಂದಿಕೊಂಡಂತಹ ಉಳುಮೆ, ಬಿತ್ತನೆ, ಕೊಯ್ಲು, ಒಕ್ಕಣಿಕೆ, ಭೀಸುವಿಕೆ, ಮುಂತಾದ ಪರಿಶ್ರಮಗಳಲ್ಲಿ ಕೆಲಸದ ಭಾರವನ್ನು ಹಗುರ ಮಾಡಿಕೊಳ್ಳುವುದಕ್ಕಾಗಿ ಸಹಜವಾಗಿ ಹೊರಹೊಮ್ಮುತ್ತಿದ್ದ ಹಾಡುಗಳು ಮತ್ತಿತರ ಆ ಸಂದರ್ಭದಲ್ಲಿ ಆಚರಣೆಗೆ ಸಂಬಂಧಿಸಿದ ಆ ಕಲೆಗಳನ್ನು ಯಂತ್ರಗಳೇ ನಿರ್ವಹಿಸಲು ತೊಡಗಿದಾಗ ಸಹಜ ಹಾಡು, ಆಟಿಕೆಗಳು ಮರೆಯಾದವು. ಕಾಲ ಕಳೆದಂತೆ ಮರೆತು ಹೋಗುವಂತೆ ಆದವು[15] ಎನ್ನುವುದು ಗಮನಾರ್ಹವಾಗಿದೆ.

ರೈತರ ವಾರ್ಷಿಕಾವರ್ತನದ ಸಂದರ್ಭದಲ್ಲಿ ಬೇಸಿಗೆಯಲ್ಲಿ ಊರವರು ಮನರಂಜಕರನ್ನು ಕರೆಸಿ ಊರಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರನ್ನು ಸನ್ಮಾನಿಸಿ ಕಳುಹಿಸುವ ಕಾಲವೊಂದಿತ್ತು. ಜಾತ್ರೆ, ಉತ್ಸವ, ಹರಕೆಯಂತಹ ಮನಮೋಹಕ ಸಂದರ್ಭದಲ್ಲಿ ನಡೆಯುವ ಕಲಾಪ್ರದರ್ಶನ ಹೊರಹೊಮ್ಮುವ ಹಾಡುಗಳು ಇನ್ನಿಲ್ಲದಂತಾಗಿವೆ. ಜನಪದ ಕಲೆ ಸಾಹಿತ್ಯ ಸಂಸ್ಕೃತಿಯ ಅವನತಿಗೆ ಆಧುನಿಕ ಯುಗದ ಜಾಗತೀಕರಣ, ಕಂಪ್ಯೂಟರೀಕರಣ, ಮುಂತಾದವುಗಳು ಒಂದೆಡೆ ಕಾರಣವಾದರೆ ಸಮಾಜಿಕವಾದ ಅಸಮಾನತೆ ಇನ್ನೊಂದೆಡೆ ಕಾರಣವಾಗಿದೆ.

ಜಾತಿ ಮತ ಭೇದಗಳು ಎಂದಿನಿಂದಲೂ ನಮ್ಮ ನಾಡಿನಲ್ಲಿ ಬೆಳೆದುಕೊಂಡು ಬಂದವುಗಳಾಗಿವೆ. ಅಲ್ಲದೆ ಇಂದಿಗೂ ಪ್ರಚಲಿತದಲ್ಲಿವೆ. ಈ ಜಾತಿ ಮತ ಭೇದಗಳನ್ನು ಬಾಹ್ಯವಾಗಿ ತೋರಗೊಂಡದಿದ್ದರೂ ಆಂತರಿಕವಾಗಿ ನಮ್ಮ ದೇಶದಲ್ಲಿ ನಿರಂತರವಾಗಿ ನಮ್ಮಲ್ಲೆಲ್ಲರ ಮಧ್ಯದಲ್ಲಿ ವ್ಯವಹರಿಸುತ್ತವೆ ಎನ್ನುವ ಮಾತು ಊಹೆಯಾಗಲಾರದು. ಅದರಂತೆ ಸಾಹಿತ್ಯ, ಕಲೆ, ಸಂಸ್ಕೃತಿ, ಸಂಗೀತ ಮಾನವನ ಹುಟ್ಟಿನಿಂದಲೇ ನಮ್ಮ ಸಮಾಜದಲ್ಲಿ ವ್ಯವಹರಿಸುತ್ತ ಬಂದವುಗಳಾಗಿವೆ. ಈ ಸಾಹಿತ್ಯ, ಕಲೆ, ಸಂಸ್ಕೃತಿ, ಸಂಗೀತ ಮಾಧ್ಯಮದಲ್ಲಿ ಜಾತಿ ಮತ ಬೇಧ, ಕನಿಷ್ಠ ಶ್ರೇಷ್ಠ, ಮೇಲು ಕೀಳು ಎನ್ನುವ ಭಾವನೆ ತಾಂಡವಾಡುತ್ತಾ ಬಂದಿದೆ. ಶಿಷ್ಟ, ಸಾಹಿತ್ಯ, ಜನಪದ ಸಾಹಿತ್ಯ, ಶಿಷ್ಟ ಕಲೆ, ಜನಪದ ಕಲೆ, ಜನಪದ ಸಂಗೀತ, ಶಿಷ್ಟ, ಸಂಗೀತ, ಜನಪದ ಸಂಸ್ಕೃತಿ, ಶಿಷ್ಯಸಂಸ್ಕರತಿ ಹೀಗೆ ಇವುಗಳು ಒಂದನ್ನೊಂದು ಆಶ್ರಯಿಸಿಕೊಂಡು ಜೀವತಳೆದರೂ ಇಲ್ಲಿಯೂ ಕೂಡ ಮೇಲು-ಕೀಳು ಭಾವನೆ ದೂರವಾಗಿಲ್ಲ.

ಶಿಷ್ಯಸಾಹಿತ್ಯ, ಶಿಷ್ಟಕಲೆ, ಶಿಷ್ಟಸಂಸ್ಕೃತಿ ಇವುಗಳಲ್ಲೆವುಗಳಿಗೆ ಜನಪದ ಸಮಾಜವೇ ಮೂಲವೆಂದು ಒಪ್ಪುವ ನಾವುಗಳೇ ನಿಂತ ನೆಲೆಯಾದ ಜನಪದ ಸಮಾಜವನ್ನು ಸಂಸ್ಕೃತಿ ಸಾಹಿತ್ಯವನ್ನು ಕೀಳಾಗಿ ಕಾಣುತ್ತಿದ್ದೇವೆ. ಕಲೆಯ ಹಿನ್ನೆಲೆಯಲ್ಲಿರುವ ಜನಪದ ಕಲಾಕಾರರನ್ನು ದೂಡುತ್ತಿದ್ದೇವೆ, ತಿರಸ್ಕರಿಸುತ್ತೇವೆ. ಇದಕ್ಕೆಲ್ಲಾ ಮಾನವ ಸ್ವಾರ್ಥವೇ ಪ್ರಮುಖ ಕಾರಣವಾಗಿರುತ್ತದೆ. ಇನ್ನೊಂದು ಮೂಲದಿಂದ ನಾವು ಇದನ್ನು ಗಮನಿಸಿದಾಗ ಮಾನವ ಮನಸ್ಸು, ಹೊಸದನ್ನು ಕಾಣುವುದು. ಕಟ್ಟುವುದು ಸಹಜ ಗುಣವಾಗಿದೆ. ಈಗಾಗಲೇ ಪ್ರಸ್ತಾಪಿಸಿದಂತೆ ಬಹು ಹಿಂದೆಯೇ ಮಧುರ ಕವಿ-

ಕಂಡರ್ ಕೇಳ್ವೊಡೆ ಗೊರವರ
ಡುಂಡೂಚಿಯೇ ಬೀದಿವರೆಯ ಬೀರನ ಕಥೆಯೇ

ಎಂದು ಜನಪದ ಕಲಾಕಾರರನ್ನು ಕೀಳಾಗಿ ಕಂಡದ್ದುಂಟು. ಒಂದು ಕಾಲದಲ್ಲಿ ಪ್ರಧಾನ ಸ್ಥಾನದಲ್ಲಿದ್ದ ಸಂಸ್ಕೃತಿಯನ್ನು ಅವಹೇಳನ ಮಾಡಿದಂತಾಗಿದೆ. ಸಮಾಜದ ಹಿಂದುಳಿದ ಹಾಗೂ ಜಾತಿಯಿಂದ ಕೀಳೆನೆಸಿಕೊಂಡ ಹೊಲೆ-ಮಾದಿಕ, ಮಚಗಾರ, ಸಮಗಾರ, ಡೋಹರರಲ್ಲದೇ ಅನೇಕ ಅಲೆಮಾರಿಗಳ ಗುಂಪುಗಳಲ್ಲಿ ಜನಪದ ಕಲೆ ಸಂಗೀತಗಳಲ್ಲದೇ ನೃತ್ಯಗಳು ಅವರ ಶ್ರಮದ ಭಯ-ಭಕ್ತಿಗಳ ಹಿನ್ನೆಲೆಯಲ್ಲಿ ಹುಟ್ಟು ತಳೆದಿವೆ ಎಂಬುದು ಮಧುರ ಕವಿಯ ಟೀಕೆಯ ಹಿನ್ನೆಲೆಯಲ್ಲಿ ನಾವು ವಿಚಾರಿಸಿದಾಗ ಸುಳ್ಳಾಗಲಾರದು. ಜನಪದರ ಸಮಸ್ತ ವಾದ್ಯಮೇಳಗಳು ಹಲವಾರು ಗೀತಮೇಳಗಳು ಇವರಿಂದಲೇ ಹುಟ್ಟು ಪಡೆದಿವೆ. ಆ ಸಮೂಹಗಳ ಮಧ್ಯದಲ್ಲಿಯೇ ಉಳಿದುಕೊಂಡಿವೆ. ಸಮಾಜದ ಎಲ್ಲಾ ಕೋಮುಗಳಲ್ಲಿ ಹುಟ್ಟಿನಿಂದ ಸಾವಿನವರೆಗೆ ಇರುವ ಸಾಂಸ್ಕೃತಿಕ ಕಾರ್ಯಕಲಾಪಗಳಲ್ಲಿ ಈ ಸಮೂಹಗಳಲ್ಲಿರುವ ವಾದ್ಯ ಮೇಳದವರು ವಾದ್ಯವನ್ನು ಮೊಗಳಿಸಿದೇ ಹೊರತು ಆ ಕಾರ್ಯಗಳು ನಡೆಯಲಾರವು.

ಉಪಸಂಸ್ಕೃತಿ ಸಮುದಾಯದ ಕಲಾಕಾರರು ಪ್ರತಿಬಿಂಬಿಸುವ, ನುಡಿಸುವ, ಕಲೆಯನ್ನು ಪ್ರೀತಿಸಿ ಕೇಳಿ ಆನಂದ ಪಡುವ ಮುಂದುವರೆದ ಹಾಗೂ ಮೇಲ್ಜಾತಿಯ ಜನರು ಎಲೆಮರೆ ಕಾಯಿಯಂತಿರುವ ಕಲೆ ವಾದ್ಯಗಳ ಹುಟ್ಟಿಗೆ ಕಾರಣರಾದ ಗೊರವ, ಕೊರವ, ಗೊಂದಲಿಗ, ಹೆಳವ, ಹೊಲೆ-ಮಾದಿಗ, ಮಚಗಾರ, ಸಮಗಾರ, ಡೋಹರರನ್ನು ಅತೀ ಕೀಳಾಗಿ ಕಂಡದ್ದುಂಟು. ಅವರನನ್ನು ಸಮಾಜದಿಂದ ಬಹಿಷ್ಕಾರ ಹಾಕಿರುವ ಉದಾಹರಣೆಗಳು ಅನೇಕ. ಇದು ಅನಾದಿ ಕಾಲದಿಂದ ಇಂದಿನವರೆಗೆ ಅವ್ಯಾಹತವಾಗಿ ನಡೆದು ಬಂದುದಾಗಿದೆ. ಇದರಿಂದ ನೊಂದ ಜನರು ಇಂದು ಈ ಕಲೆಗಳನ್ನು ತಿರಸ್ಕರಿಸಿದ್ದರಿಂದ ಜನಪದ ಪ್ರದರ್ಶನ, ಕಲಾಮೇಳಗಳು, ವಾದ್ಯ ಮೇಳಗಳು, ನೃತ್ಯ ಗೀತೆಗಳು ಅಲ್ಲದೇ ಅಲೆಮಾರಿ ಸಂಸ್ಕೃತಿ ಸಂಪತ್ತುಗಳು ಮೂಲೆ ಗುಂಪಾಗಿವೆ. ಇದರ ಜೊತೆಗೆ ಕಲೆಗಳ ಅಳಿವಿಗೆ ಬಡತನವೂ ಒಂದು ಪ್ರಮುಖ ಕಾರಣವಾಗಿದೆ.[16]

ಜನಪದ ಕಲೆಯನ್ನೇ ಅವಲಂಬಿಸಿ ಕುಳಿತರೆ ನಮ್ಮ ಜೀವನ ನಡೆಯಲಾರದೆಂದು ತಿಳಿದ ಮೇಳಗಾರರು ಅಲೆಮಾರಿಗಳು ಕೂಲಿ ಮಾಡುವುದು, ದುಡಿಯಲು ರಾಜ್ಯಬಿಟ್ಟು ರಾಜ್ಯಕ್ಕೆ ಹೊಟ್ಟೆಪಾಡಿಗಾಗಿ ವಲಸೆ ಹೋಗುವುದರಿಂದ ಅನುವಂಶಿಕವಾಗಿ ಬಂದ ಅಲೆಮಾರಿ ವೃತ್ತಿಕಲೆಗಳಿಗೆ ಆಸರೆಯಿಲ್ಲದಂತಾಗಿದೆ. ಅಲ್ಲದೇ ಈ ಸಮಾಜದ ಜನರು ಕಲೆ ಸಂಸ್ಕೃತಿಗಳನ್ನು ತಿರಸ್ಕರಸಲಿಕ್ಕೆ ಇನ್ನೊಂದು ಪ್ರಮುಖ ಕಾರಣ ಅಕ್ಷರ ಕಲಿಕೆ ಶಿಕ್ಷಣವೆಂದು ಹೇಳಬೇಕು. ಕಲೆ, ಸಂಗೀತ, ವಾದ್ಯ ವಾದಗಳನ್ನು ನುಡಿಸಿ ಇನ್ನೊಬ್ಬರನ್ನು ತೃಪ್ತಿಪಡಿಸುವುದರಿಂದ ಆ ಸಮಾಜದಿಂದ ಅವರಿಗೆ ಯಾವುದೇ ಸಾಂಸ್ಕೃತಿಕ, ಸಾಮಾಜಿಕ, ಸ್ಥಾನಮಾನಗಳು ದೊರಕುತ್ತಿಲ್ಲ. ಬದಲಾಗಿ ಬಹಿಷ್ಕಾರ ಹಾಕಿ ಕೀಳು ಜಾತಿಯವನೆಂದು ಅವನತ್ತ ಬೆರಳು ತೋರಿಸುವುದು ಕಾಣುತ್ತೇವೆ. ಇದು ಕೂಡ ಅವರ ಮಾನಸಿಕ ಹಿಂಸೆಗೆ ಕಾರಣವಾಗಿರುವುದರಿಂದ ಇಂದು ಕಲೆಗಳು ತಾವು ಹುಟ್ಟಿದಲ್ಲಿಯೇ ಕಮರಿ ಹೋಗುತ್ತಲಿವೆ.

ಒಟ್ಟಿನಲ್ಲಿ ಜನಪದ ಕಲೆಗಳನ್ನು ಉಳಿಸಿ ಬೆಳಸಿ ನಮ್ಮ ಸಂಸ್ಕೃತಿಯನ್ನು ಅಲ್ಲದೇ ನಮ್ಮ ಪೂರ್ವಜರ ಅಪಾರವಾದ ಕೊಡುಗೆಗಳನ್ನು ಸಂರಕ್ಷಿಸಬೇಕಾದರೆ ಜಾತಿ, ಮತ, ಭೇದ, ಮೇಲು-ಕೀಳು, ಅಪ್ರಮಾಣಿಕ ಮನೋಭಾವನೆಯನ್ನು ತೊರೆದಾಗ ಮಾತ್ರ ನಾವು ಹರಿದು ಬಂದ ಮೂಲ ಸೆಲೆಯನ್ನು ಕಾಪಾಡಿದಂತಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ಜನಪದ ಜೀವನ ಮೌಲ್ಯಗಳ ಸಂಬಂಧ ಕಡಿಮೆ ಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಜನಪದ ಸಂಸ್ಕೃತಿಯನ್ನು ಪ್ರಾಮಾಣಿಕವಾಗಿ ಪ್ರೀತಿಸಿ ಗೌರವಿಸಬೇಕಾದುದು ಅನಿವಾರ್ಯವಾಗಬೇಕು. ಮೌಖಿಕ ಪರಂಪರೆಯಲ್ಲಿ ಸಾಧುವಾದುದನ್ನು ಉಳಿಸಿಕೊಳ್ಳುವುದಾಗಬೇಕು. ಅಸಾಧುವಾದುದನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಚಿಂತನೆ ನಡೆಯಬೇಕು.

* * *

 


[1] ಬರಗೂರು ರಾಮಚಂದ್ರಪ್ಪ ಅವರ ಪ್ರಧಾನ ಸಂಪಾದಕತ್ವದ ಉಪ ಸಂಸ್ಕೃತಿ ಅಧ್ಯಯನ ಮಾಲೆಯ ‘ಹೆಳವರ ಸಂಸ್ಕೃತಿ’, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೧೬ ವರ್ಷ, ೧೯೯೩.

[2] ಬಿಳಿಮಲೆ ಪುರುಷೋತ್ತಮ ‘ಕರಾವಳಿ ಜಾನಪದ’, ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಪುಟ-೧೧೧, ವರ್ಷ – ೧೯೯೦.

[3] ಬಿಳಿಮಲೆ ಪುರಷೋತ್ತಮ ‘ಕರಾವಳಿ ಜಾನಪದ’, ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಪುಟ-೧೫೩, ವರ್ಷ -೧೯೯೦.

[4] ಚಕ್ಕೆರೆ ಶಿವಶಂಕರ, ‘ಗೊರವರ ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೨, ವರ್ಷ-೧೯೯೩.

[5] ಚಕ್ಕರೆ ಶಿವಶಂಕರ, ‘ಗೊರವರ ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೩, ವರ್ಷ-೧೯೯೩.

[6] ಬಿಳಿಮಲೆ ಪುರುಷೋತ್ತಮ, ‘ಕರಾವಳಿ ಜಾನಪದ’, ಮಂಗಳ ಗಂಗೋತ್ರಿ, ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು, ಪುಟ-೧೫೬, ವರ್ಷ-೧೯೯೦.

[7] ಚಕ್ಕೆರೆ ಶಿವಶಂಕರ, ‘ಗೊರವರ ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೮-೯, ವರ್ಷ-೧೯೯೩.

[8] ನೆಲ್ಲಿಸರ್‌ಬಸವರಾಜ, ‘ಸುಡುಗಾಡು ಸಿದ್ಧರು’, ಐ.ಬಿ.ಹೆಚ್. ಪ್ರಕಾಶನ, ಬೆಂಗಳೂರು ಪುಟ-೧, ವರ್ಷ -೧೯೮೪.

[9] ಖಂಡೋಬಾ ಪಿ.ಕೆ., ‘ಸುಡುಗಾಡು ಸಿದ್ಧರು ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೧೦, ವರ್ಷ-೧೯೯೩

[10] ನೆಲ್ಲಿಸರ್‌ಬಸವರಾಜ, ‘ಸುಡುಗಾಡು ಸಿದ್ಧರು ಸಂಸ್ಕೃತಿ’, ಐ.ಬಿ.ಹೆಚ್. ಪ್ರಕಾಶನ, ಬೆಂಗಳೂರು ಪುಟ-೩-೪, ವರ್ಷ -೧೯೮೪.

[11] ಖಂಡೋಬಾ ಪಿ.ಕೆ., ‘ಸುಡುಗಾಡು ಸಿದ್ಧರು ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೧೨, ವರ್ಷ-೧೯೯೩.

[12] ಮಾನಸ, ‘ಕೊರವರ ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೨೯, ವರ್ಷ-೧೯೯೩

[13] ಪವಾರ ಹರಿಲಾಲ, ‘ಹೆಳವರ ಸಂಸ್ಕೃತಿ’, ಉಪ ಸಂಸ್ಕೃತಿ ಅಧ್ಯಯನ ಮಾಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಪುಟ-೧೩, ವರ್ಷ-೧೯೯೩.

[14] ಬಸವರಾಜ ಸಬರದ, ‘ಗಿರಿಜನ ಸಿರಿ’, ಡಾ. ಪಿ.ಕೆ. ಖಂಡೋಬಾ ಅಭಿನಂದನ ಸಂಪುಟ, ಗುಲಬರ್ಗಾ ವಿಶ್ವವಿದ್ಯಲಯ, ಗುಲಬರ್ಗಾ, ಪುಟ-೩೬೫, ವರ್ಷ-೨೦೦೩.

[15] ಲಕ್ಕಪ್ಪಗೌಡ ಎಚ್‌.ಜೆ., ವಂದನೆ, ಡಾ. ಬಿ.ಬಿ. ಹೆಂಡಿಯವರ ಅಭಿನಂದನ ಗ್ರಂಥ, ಗುಲಬರ್ಗಾ, ಪುಟ-೧೦೦, ವರ್ಷ-೧೯೮೮.

[16] ಪೋತೆ ಎಚ್.ಟಿ. ‘ಹೈದ್ರಾಬಾದ್ ಕರ್ನಾಟಕದ ಜನಪದ ಪ್ರದರ್ಶನ ಕಲೆಗಳು’, ಅಂಬು ಪ್ರಕಾಶನ, ಸ್ನಾತಕೋತ್ತರ ಕೇಂದ್ರ, ರಾಯಚೂರು, ಪುಟ-೩೯, ವರ್ಷ-೨೦೦೦.