ಮಾನವರ ಬದುಕೇ ಅಲೆಮಾರತಿನದ್ದು. ಮನಸ್ಸು ಅಲೆಮಾರಿಯೇ, ಆಧುನಿಕ ಜೀವನವು ಅಲೆಮಾರಿತನವನ್ನು ಬೇರೊಂದು ಬಗೆಯಿಂದ ಅನುಭವಿಸುತ್ತದೆ. ೧೦-೧೨ ಸಾವಿರ ವರ್ಷಗಳ ಹಿಂದೆ ಕೃಷಿಯನ್ನು ಹುಟ್ಟಿ ಹಾಕಿ, ನೆಲೆಯನ್ನು ಕಟ್ಟಿಕೊಂಡ ಮಾನವರು ತನ್ನ ಅಲೆಮಾರಿತನಕ್ಕೆ ತಾನೇ ಕಡಿವಾಣ ಹಾಕಿಕೊಳ್ಳುತ್ತಾ ಬಂದರು. ಪೂರ್ವದ ನಾಗರೀಕತೆಗಳು ನೆಲೆ ಕಂಡುಕೊಂಡು ಗಮನಿಸಿ ಗುರುತಿಸಿದ ಆಹಾರದ ಬೆಳೆಗಳೇ ಇಂದಿಗೂ ಆಧುನಿಕ ಜಗತ್ತಿನ ಅತೀ ಪ್ರಮುಖ್ಯ ಬೆಳೆಗಳಾಗಿವೆ. ನೆಲೆ ಕಾಣುವ ಮೂಲಕ ತನ್ನ ಪರಿಸರದಲ್ಲಿ ಮೊದಲು ಪ್ರವೇಶಮಾಡಿ, ಒಡೆತನ ಸಾಧಿಸಿದ. ಅದಕ್ಕೂ ಮೊದಲ ಪರಿಸರದಲ್ಲಿ ತಾನೊಬ್ಬನಾಗಿದ್ದವ, ನಂತರ ಅದರಲ್ಲಿ ತನ್ನ ಹಕ್ಕನ್ನು ಚಲಾಯಿಸತೊಡಗಿದ. ಅಂದರೆ ಕೃಷಿ ಆರಂಭವಾದದ್ದೆ ಕಾಡು ಕಡಿದು ನೆಲವನ್ನು ಸ್ವಚ್ಛ ಮಾಡುವುದರ ಮೂಲಕ. ಒಂದು ಮಾತಿದೆ. ಈ ನಾಗರಿಕತೆಯು ಆರಂಭವಾದದ್ದೇ ಮೊದಲ ಮರವನ್ನು ಕಡಿಯುವುದರಿಂದ ಹಾಗೆಯೇ ಕೊನೆಯ ಮರ ಕಡಿಯುವುದರಿಂದ ಅಂತ್ಯ! ಹೀಗೆ ನೆಲೆಯೇ ಮಾನವರ ಪರಿಸರವನ್ನು ನಿರ್ಬಂಧಿಸುವ ಆರಂಭದ ಕಾರ್ಯವಾಗಿದೆ.

ಇದರಿಂದ ಭಿನ್ನವಾದ ಸಾಮಾಜಿಕ ವ್ಯವಸ್ಥೆಯನ್ನು ಅಲೆಮಾರಿಗಳ ಸಮುದಾಯ ಎನ್ನಬಹುದು. ಅಲೆಮಾರಿಗಳ ವಿವರಣೆಯನ್ನು ಹೆಚ್ಚು ಒದಗಿಸದೆ ನೇರ ಅವರ ಮತ್ತು ಪರಿಸರದ ಸಂಬಂಧದಲ್ಲಿ ವಿವರಿಸಲು ಯತ್ನಿಸಲಾಗುವುದು.

ಪರಿಸರ ಪ್ರೀತಿ ಮತ್ತು ಅಲೆಮಾರಿಗಳು

ಅಲೆಮಾರಿಗಳು ಎಂದಾಕ್ಷಣ ಒಂದೆಡೆ ನೆಲೆ ಕಂಡುಕೊಳ್ಳದವರು, ನಿಲ್ಲದವರು ಒಂದೇ ನೆಲದ ವ್ಯಾಮೋಹವಿಲ್ಲದವರು, ಎಂದೆಲ್ಲಾ ಅರ್ಥಗಳಿಲ್ಲವೆ? ಅಂದ ಮೇಲೆ ಅವರು ಯಾವುದೇ ಪ್ರದೇಶಕ್ಕೆ ನೆಚ್ಚಿಕೊಂಡವರಲ್ಲ. ಒಂದೇ ಒಂದು ನೆಲವನ್ನು ನಂಬಿ ನಡೆದವರಲ್ಲ. ಅಂದ ಮೇಲೆ ಆ ಸ್ಥಳದ ಮೇಲೆ ಎಷ್ಟರ ಪ್ರೀತಿ ಇದ್ದೀತು? ನಾಳೆ ಮುಂದಿನ ಊರಿಗೆ ಎಂಬಾತನಿಗೆ ಇಂದಿನ ಈ ಊರಿನ ಪ್ರೀತಿ ಎಷ್ಟರಮಟ್ಟಿಗಿನದು. ಅಲ್ಲಿರುವವರೆಗೆ ಮಾತ್ರವೇ ಇದ್ದೀತು. ಅಂದರೆ ಒಂದೇ ಪರಿಸರ ಮತ್ತು ನೆಚ್ಚಿಕೊಂಡ ಸಮುದಾಯ – ಅಲೆಮಾರಿಗಳದ್ದಲ್ಲ. ಹಾಗಾಗಿ ಪರಿಸರದ ಅವರ ಸಂಬಂಧ ಮತ್ತು ಲೋಕದೃಷ್ಟಿಯನ್ನು ಅವಲೋಕಿಸುವಾಗ – ಅವರ ಜತೆ ಪರಿಸರದ ಪರಿಕರಗಳ ಸಂಬಂಧಗಳೊಂದಿಗೆ ಗುರುತಿಸಬೇಕಿದೆ. ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿನ ವಾಸ್ತವವನ್ನು ಅರಿವಿನಲ್ಲಿಟ್ಟಿರಬೇಕಾಗುತ್ತದೆ. ಯಾವುದೇ ಪರಿಸರ ನೆಚ್ಚಿಕೊಳ್ಳದೆ ಎಂತಹದೇ ಪರಿಸರದಲ್ಲಿ ಬದುಕನ್ನು ಕಂಡುಕೊಳ್ಳುವರನ್ನು ವಿವಿಧ ಪರಿಸರದ ಅನಿವಾರ್ಯಗಳ ತಡೆಯುವ ಶಕ್ತಿ ಮತ್ತು ಅಂತಹ ತಿಳುವಳಿಕೆಯ ಜ್ಞಾನದಲ್ಲಿ ಲೋಕದೃಷ್ಟಿಯನ್ನು ಹುಡುಕಬೇಕಾಗುತ್ತದೆ.

ಒಂದು ಪ್ರಶ್ನೆ. ಇಡೀ ಅಲೆಮಾರಿಗಳು ಎಂತಹ ಪರಿಸರದಲ್ಲಿದ್ದಾರೆ? ಯಾಕವರು ಅಲೆಮಾರಿಗಳಾಗಿದ್ದಾರೆ? ಅಲೆಮಾರಿಗಳಾಗಿರುವುದು ಮುಂದಿನ ಸಮೃದ್ಧ ದಿನದ ಹುಡುಕಾಟದಲ್ಲಿ. ಅವರ ಪರಿಸರವು ಅತೀ ಕನಿಷ್ಠ ಅವಶ್ಯಕತೆಗಳ ಹೊಂದಿರುವುದರಿಂದ, ಹೊಸತರ ಹುಡುಕಾಟದಲ್ಲಿ ನಿರಂತರ ನಡೆದಾಟದಲ್ಲಿದ್ದಾರೆ. ಇದನ್ನು ಅವರ ಬದುಕು ಮತ್ತು ಪರಿಸರದಲ್ಲಿ ಮುಂದೆ ವಿವರವಾಗಿ ಚರ್ಚಿಸಲಾಗುವುದು.

ವಾಸ್ತವವಾಗಿ ಈಗಿರುವ ಅಲೆಮಾರಿಗಳು ಒಂದು ಸೀಮಿತ ಗಡಿಯೊಳಗೆ ನಿರಂತರ ಪಯಣದಲ್ಲಿದ್ದಾರೆ. ಈ ಗಡಿಯೊಳಗೆಯೇ ಒಮ್ಮೆ ಕಂಡ ನೆಲವನ್ನು ಮತ್ತೊಮ್ಮೆ ತುಳಿಯುವ ಸಾಧ್ಯತೆಯೇ ಹೆಚ್ಚು. ಈ ಅರ್ಥದಲ್ಲಿ – ಅವರ ಕಾಲದಲ್ಲಿ ಒಂದು ಪ್ರದೇಶದಲ್ಲಿ ನಿಯತವಾಗಿ ಅಲೆಮಾರಿಗಳಾಗಿರುವ ಈ ಅಲೆಮಾರಿಗಳು ಆಯಾ ಪ್ರದೇಶದ ಕಾಲ ಮತ್ತು ಪರಿಸರದ ಪ್ರಜ್ಞಾಪೂರ್ವಕ ತಿಳುವಳಿಕೆಯನ್ನು ಉಳ್ಳವರಾಗಿದ್ದಾರೆ.

ಕರ್ನಾಟಕದ ಭೌಗೋಳಿಕ ಹಿನ್ನೆಲೆಯಲ್ಲಿ ಅಲೆಮಾರಿ ಕುರಿ ಸಾಕುವ ಕುರುಬರನ್ನೇ ಗಮನಿಸಬಹುದು. ಅವರಲ್ಲಿ ಬಹುಪಾಲು ಮೂಲತಃ ಬೆಳಗಾಂ ಜಿಲ್ಲೆಯವರು. ತುಂಗಭದ್ರಾ ನದಿಯ ತೀರಗಳಯುದ್ದಕ್ಕೂ ಸುಮಾರು ೮ ತಿಂಗಳು ಅಲೆದಾಡುತ್ತಾ ಬರುವ ಇವರು ಮಲೆನಾಡಿನಂಚಿನವರೆಗೂ ಬರುತ್ತಾರೆ. ಜಮೀನುಗಳಲ್ಲಿ ಕುರಿ ನಿಲ್ಲಿಸುವ ಕೆಲಸದ ಮೂಲಕ ಅಲ್ಲಲ್ಲೇ ತಂಗುತ್ತಾರೆ. ನಿರಂತರ ಚಲನೆಯಲ್ಲಿದ್ದು ಮತ್ತೆ ಹಿಂದಿರುಗುವ ಮಾರ್ಗವು ಅದೇ ಆಗಿರುತ್ತದೆ. ರಾಜ್ಯದ ಈ ಪ್ರಾಂತ್ಯದ ೮ ತಿಂಗಳ ಪರಿಸರದ ಆಗು-ಹೋಗುಗಳನ್ನು ಬಲ್ಲವರಾಗಿರುತ್ತಾರೆ. ಸಾಮಾನ್ಯವಾಗಿ ಒಂದು ಗೊತ್ತಾದ ಕಾಲದಲ್ಲಿ ಗೊತ್ತಾದ ಪ್ರದೇಶದಲ್ಲಿ ಅಲೆಯುತ್ತಿರುತ್ತಾರೆ. ಮುಂದೊಂದು ದಿನ ಅದೇ ಪ್ರದೇಶಕ್ಕೆ ಬರುವ ಅನಿವಾರ್ಯತೆಯೂ ಅವರನ್ನು ಆಯಾ ಪರಿಸರದ ಪರಸ್ಪರ ಪರಿಚಯದೊಂದಿಗೆ ವಿವರಿಸಬಲ್ಲದ್ದಾಗಿರುವುದು.

ಅಲೆಮಾರಿಗಳ ಈ ಪರಿಸರದ ಪರಿಚಯ ಮತ್ತು ನಿರಂತರ ಚಲನೆ ಗಟ್ಟಿಯಾದ ಅಂಶಗಳು. ಅಂದರೆ ಕಾಲ ಮತ್ತು ಪರಿಸರದ ಸಂಬಂಧಗಳನ್ನು ನಿರೂಪಿಸುವ ಅವರ ಅರಿವೇ ಅವರ ಪ್ರಮುಖ ಪರಿಸರದ ಲೋಕದೃಷ್ಟಿಯಾಗಿದೆ. ಪರಿಸರದ ಕಾಲಜ್ಞಾನ ಬಹುಮುಖ್ಯವಾದದ್ದು. ಹಾಗಾಗಿ ಪರಿಸರದ ಕಾಳಜಿಗಿಂತ, ಅದನ್ನು ಪರಿಸರದ ಅರಿವು-ತಿಳುವಳಿಕೆ ಎಂದೇ ಗಮನಿಸುವುದು ಹೆಚ್ಚು ಯುಕ್ತವಾದದ್ದು. ಈ ಅರಿವಿನಿಂದ ಪರಿಸರದ ಆಗು-ಹೋಗುಗಳನ್ನು ಗುರುತಿಸುವುದರಿಂದ ಅದು ಕಾಳಜಿಯಾಗಿ ವಿಸ್ತಾರಗೊಳ್ಳಬಲ್ಲದು.

ಅಲೆಮಾರಿಗಳ ಬದುಕು ಬರ ಮತ್ತು ಹಸಿವೆಯ ವಿರುದ್ಧ ಹೋರಾಟ

ಅಲೆಮಾರಿಗಳ ಬದುಕು. ಆಧುನಿಕ ಸಮಾಜದ ಜೀವನಕ್ಕಿಂತ ಸಂಪೂರ್ಣ ಭಿನ್ನವಾದದ್ದು. ತನ್ನೆಲ್ಲಾ ಅವಶ್ಯಕತೆಗಳನ್ನು ಪೂರ್ಣವಾಗಿಸಿಕೊಂಡು ಆಧುನಿಕ ಸಮಾಜ ನಿರ್ಮಾಣವಾಗಿದೆ. ಆದರೆ ಕನಿಷ್ಟ ಅವಶ್ಯಕತೆಗಳಲ್ಲಿ ತಮ್ಮ ಬದುಕನ್ನು ಚಲನಾಶೀಲವಾಗಿಡುವಲ್ಲಿ ಅಲೆಮಾರಿಗಳು ಹೆಣಗುತ್ತಾರೆ ಮತ್ತು ಬದುಕುತ್ತಾರೆ. ನೆಲೆ ಇಲ್ಲದವರೆಂದರೆ ನೆರಳಿಲ್ಲದ ಬದುಕು, ಸೂರಿಲ್ಲರ ಜೀವನ, ನಿರಂತರ ವಾತಾವರಣಕ್ಕೆ ಮೈಒಡ್ಡಿ, ಮಳೆ, ಚಳಿ, ಬಿಸಿಲನ್ನು ಅನುಭವಿಸುತ್ತಾ ಬದುಕುವ ಜನ. ಹೀಗಿರುವುದರಿಂದ ಜಗತ್ತಿನ ಬಹುಪಾಲು ಅಲೆಮಾರಿ ಸಮುದಾಯಗಳು ಬರ ಮತ್ತು ಹಸಿವಿನ ವಿರುದ್ಧ ತಮ್ಮ ಬದುಕಿನ ಆಶಯವನ್ನು ನಿರೂಪಿಸುವ ಹುಡುಕಾಟದಲ್ಲಿ ತೊಡಗಿದ್ದಾರೆ.

ಒಂದೇ ಮಾತಿನಲ್ಲಿ ಹೇಳಬಹುದಾದರೆ ಅಲೆಮಾರಿಗಳ ಪರಿಸರ ಲೋಕದೃಷ್ಟಿಯು ಬರ ಮತ್ತು ಹಸಿವಿನ ವಿರುದ್ಧ ಬದುಕಿನ ಆಶಯವಾಗಿರುತ್ತದೆ. ಎರಡು ಬರಗಳ ನಡುವಿನ ಬದುಕನ್ನು ಉಳಿಸಿಕೊಳ್ಳುವ ಛಲವುಳ್ಳವರಾಗಿರುವ ಅಲೆಮಾರಿಗಳು ನಿರಂತರ ಈ ಹೋರಾಟವನ್ನು ನಡೆಸಿದ್ದಾರೆ.

ಬಹುಪಾಲು ಜಾಗತಿಕ ಅಲೆಮಾರಿ ಸಮುದಾಯಗಳು ವಿಪರೀತ ಮಳೆಯ ವೈಪರೀತ್ಯ ಪ್ರದೇಶಗಳಲ್ಲಿ ಬದುಕನ್ನು ನಡೆಸುತ್ತಿದ್ದಾರೆ. ಸುಮಾರು ೧೮೦ ಮಿ.ಮಿ. ನಿಂದ ೧೦೦೦ ಮಿ.ಮೀ. ವರೆಗೆ ಮಳೆ ಬೀಳುವ ಪ್ರದೇಶದಲ್ಲಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ ಎರಡನ್ನೂ ಅನುಭವಿಸುವ ಅನೇಕ ಸಮುದಾಯಗಳಿವೆ. ಹೀಗೆ ಬರದ ನಡುವೆ ಬದುಕುವ ಛಲವುಳ್ಳವರಾಗಿರುವ ಇವರು ನಿರಂತರ ಪರಿಸರದ ಗೂಡಚಾರಿಕೆಯನ್ನು ಮಾಡುತ್ತಾ ಸಾಗುತ್ತಾರೆ. ಹಾಗೆಂದೇ ತಮ್ಮ ನಾಯಕನಲ್ಲಿ ಅಚಲ ನಂಬಿಕೆಯನಿಟ್ಟಿರುತ್ತಾರೆ. ನಮ್ಮ ದೇಶದಲ್ಲಿ ಅಲೆಮಾರಿಗಳ ಕುರಿತು ನಡೆಸಿದ ಅಧ್ಯಯನಗಳು ಕಡಿಮೆಯೆ. ಜಗತ್ತಿನ ಇತರೆಡೆಯಲ್ಲಿಯೂ ಹೆಚ್ಚು ಅಧ್ಯಯನಗಳು ಮಾನವಶಾಸ್ತ್ರಿಯ ಅಧ್ಯಯನಗಳೇ ಆಗಿವೆ. ಅಲೆಮಾರಿ ಕುರುಬರ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಷ್ಟು ಅಧ್ಯಯನಗಳು ಆಗಿವೆ. ಇತ್ತೀಚೆಗೆ ಪರಿಸರದ ಅಧ್ಯಯನಗಳು, ಕಾಳಜಿಗಳು ಹೆಚ್ಚುತ್ತಾ ಒಂದಂತೆ ಅಲೆಮಾರಿಗಳನ್ನು ಈ ಹಿನ್ನೆಲೆಯಲ್ಲಿ ನೋಡುವಂತಾಗಿದೆ.

ಜಾನ್‌ರೀಡರ್ ಎಂಬ ಬ್ರಿಟೀಷ್ ಲೇಖಕ ಮತ್ತು ಮಾನವ ಶಾಸ್ತ್ರಜ್ಞ ಅನೇಕ ಅಲೆಮಾರಿ ಸಮುದಾಯಗಳ ದಾಖಲಿಸಿದ್ದಾರೆ. ಮೂಲತಃ ಅಲೆಮಾರಿ ಪ್ರವೃತ್ತಿಯವರಲ್ಲಿ ಕೊಬ್ಬು ಶೇಖರವಾಗದಿರುವ ಬಗ್ಗೆ ಅವರು ದಾಖಲಿಸುತ್ತಾರೆ.

ಅಲೆಮಾರಿಗಳು ಮಾಂಸಕ್ಕಿಂತ ರಕ್ತಕ್ಕೆ ಹೆಚ್ಚು ಪ್ರೀತಿಯುಳ್ಳವರು. ಒಂದು ರೀತಿಯಲ್ಲಿ ಜೀವಿಗಳನ್ನು ಮುಂದೆ ಬಳಸಿಕೊಳ್ಳುವ ಅವರ ನೀತಿ ಇದಾಗಿದೆ. ಅವಶ್ಯಕ ಸಂದರ್ಭದಲ್ಲಿ ಪ್ರೊಟ್ರಿಸ್ ಡ್ರಿಂಕ್ ಆಗಿ ಜೀವವಿರುವ ಪ್ರಾಣಿ ರಕ್ತವನ್ನು ಹೀರುವ ಬಗ್ಗೆಯು ದಾಖಲೆಗಳಿವೆ.

ಅಲೆಮಾರಿಗಳ ಪರಿಸರ ಕಾಲಜ್ಞಾನ

ಅತಿ ಕನಿಷ್ಠ ಅವಶ್ಯಕತೆಗಳ ಮೇಲೆ ಬದುಕಿನ ಆಶಯಗಳುಳ್ಳ ಅಲೆಮಾರಿಗಳು ತಮ್ಮ ಪರಿಸರದ ಮೇಲೆ ಅದ್ಭುತವಾದ ಅರಿವುಳ್ಳವರು. ಭಾರತವೂ ಸೇರಿದಂತೆ, ಆಫ್ರಿಕಾ, ದಕ್ಷಿಣ ಅಮೇರಿಕಾ ದೇಶಗಳಲ್ಲಿ ವಿವಿಧ ಅಲೆಮಾರಿಗಳ ಕುರಿತ ಅಧ್ಯಯನಗಳು ಅವರ ಪರಿಸರದ ಕಾಲಜ್ಞಾನವನ್ನು ಬಹಳ ಪ್ರಮುಖವಾಗಿ ಗುರುತಿಸುತ್ತಾರೆ.

ಮೈಬೆಲ್‌ರೀನೆ ಎಂಬ ಅಮೇರಿಕಾದ ಜೀವಶಾಸ್ತ್ರಜ್ಞ ಕೀನ್ಯಾದ ಸಂಬಾರು ಜನಾಂಗದ ಜೊತೆ ೨೦ ವರ್ಷಗಳ ಕಾಲ ಬದುಕುತ್ತಾ ಅಧ್ಯಯನ ನಡೆಸಿ ವಿವಿಧ ವಿಚಾರಗಳನ್ನು ಹೊರಗೆಡಹಿದ್ದಾರೆ. ಬಹು ಮುಖ್ಯವಾಗಿ ಹೆಚ್ಚೆಂದರೆ ಕುರುಚಲು, ಹುಲ್ಲು ಬೆಳೆಯಬಹುದಾದ ಫಲವತ್ತತೆವುಳ್ಳ ಮತ್ತು ಮಳೆಯನ್ನು ಪಡೆಯುವ ಪ್ರದೇಶದಲ್ಲೂ ಅದ್ಭುತವಾದ ಬದುಕನ್ನು ಹೈನುಗಾರಿಕೆಯಿಂದ ಸಂಬಾರು ಜನಾಂಗದ ನಡೆಸುವ ಕುರಿತು ಬೆಳಕು ಚೆಲ್ಲಿದ್ದಾರೆ. ಇದು ಅವರ ಬದುಕಿನ ಫಲ ಮತ್ತು ಚಾಣಕ್ಷತೆ. ಇದರಿಂದ ಅವರು ತಮ್ಮ ಪರಿಸರವನ್ನು ಜತನದಿಂದ ಕಾಣುತ್ತಾರೆ.

ಪಾಲ್ ರಾಬಿನ್‌ಸನ್ ಎಂಬ ಮತ್ತೋರ್ವ ಸಂಶೋಧಕ, ಆಫ್ರಿಕಾದ ‘ಗಾಬ್ರಾ’ ಜನಾಂಗದ ಬರ ಕುರಿತ ಕಾಲಜ್ಞಾನವನ್ನು ದಾಖಲಿಸಿದ್ದಾರೆ. ತುಂಬ ಬರ‍ದ ಸಂಕಷ್ಟದಲ್ಲಿ ಬದುಕುವ ಈ ಜನಾಂಗವು ವಿಚಿತ್ರವಾದ ಬರದ ಚಕ್ರಗಳನ್ನು ಗುರುತಿಸಿದೆ. ಅಲ್ಲಿ ೧೪, ೩೫, ೪೨, ೬೩, ೮೦ ಮತ್ತು ೧೦೦ ವರ್ಷಗಳ ಬರದ ಚಕ್ರಗಳನ್ನು ಗುರುತಿಸಿ ತಮ್ಮ ಬದುಕಿನ ಆಶಯವನ್ನು ಕಟ್ಟುತ್ತಾರೆ.

ಪಾಲ್ ಸ್ಪೆನ್ಸರ್‌ಎಂಬ ಮಾನವಶಾಸ್ತ್ರಜ್ಞ ಸಹ ಬರದ ಕಾಲಜ್ಞಾನದ ಅರಿವನ್ನು ಸಂಬಾರು ಸಮುದಾಯದಲ್ಲಿ ಗುರುತಿಸಿದ್ದಾರೆ. ಅವರ ಅರಿವಿನಂತೆ ಮಾನವರ ತಮ್ಮ ಜೀವಿತಾವಧಿ (ಸುಮಾರು ೭೫ ವರ್ಷ)ಯಲ್ಲಿ ೩ ಬಾರಿ ಸಾಮಾನ್ಯವಾಗಿ ಬೀಳುವ ಮಳೆಗಿಂತ ಕಡಿಮೆ ಮಳೆಯನ್ನು ಕಾಣುತ್ತಾರಂತೆ. ಯಾವ ಬರವೂ ೭ ವರ್ಷಕ್ಕಿಂತ ಹೆಚ್ಚಿರದು ಎಂಬುದು ಇವರ ತಿಳುವಳಿಕೆ.

ಕಳೆದ ಮೂರು ವರ್ಷದಿಂದ ರಾಜ್ಯ ಬರವನ್ನು ನಿರಂತರವಾಗಿ ಅನುಭವಿಸಿದೆ. ಈ ವರ್ಷವೂ ಹಲವು ತಾಲ್ಲೂಕುಗಳಿಗೆ ತನ್ನ ಕೆನ್ನಾಲಿಗೆಯನ್ನು ಚಾಚಿದೆ. ಬರವನ್ನು ಊಹಿಸುವ ಯಾವ ಅಧ್ಯಯನಗಳು ನಮ್ಮಲಿಲ್ಲ. ಅಷ್ಟೇ ಅಲ್ಲ ಬಹುಶಃ ಎಲ್ಲವು ಅಷ್ಟು ಅರ್ಥಪೂರ್ಣವಾಗಿಲ್ಲ. ಬರ ನಿರ್ವಹಣೆಯಲ್ಲಿ ಅನೇಕ ವೈಜ್ಞಾನಿಕ ವಿಧಿ-ವಿಧಾನಗಳ ಬಗ್ಗೆ ನಿರಂತರ ಅನ್ವೇಷಣೆಯಲ್ಲಿ ತೊಡಗಿರುವ ಆಧುನಿಕ ಜಗತ್ತು ಅಲೆಮಾರಿ ಜಗತ್ತನ್ನು ಈ ಕುರಿತು ಅವಲೋಕಿಸಬಹುದಾಗಿದೆ.

ಅಲೆಮಾರಿಗಳ ಬದುಕಿನಿಂದ ಒಂದು ಪಾಠ, ಆಧುನಿಕ ಜಗತ್ತಿಗೆ ತಿಳಿಯಬೇಕಿದೆ. ಹರಿವ ನೀರು ಪರಿಶುದ್ಧವೋ ಹಾಗೆ, ಅಲೆದಾಟದ ಮನುಷ್ಯ ಸಹ ಹೆಚ್ಚು ಆರೋಗ್ಯವಂತ. ಸೋಮಾರಿತನ, ಆಲಸ್ಯದ ಆಧುನಿಕ ಜೀವನಕ್ರಮವು ಅನೇಕ ಬಗೆಯ ಆರೋಗ್ಯ ಬದಲಾವಣೆಗಳನ್ನು ತಂದಿದೆ. ಆದರೆ ಇದು ಅಲೆಮಾರಿಗಳಲ್ಲಿಲ್ಲ. ಕೊಬ್ಬಿನಾಂಶ ಹೆಚ್ಚಾಗಿ ಶೇಖರಗೊಂಡು, ಸಾಮಾನ್ಯವಾಗಿ ರಕ್ತದ ಒತ್ತಡ, ಹೃದಯ ಸಂಬಂಧೀ ಕಾಯಿಲೆಗಳು ಮುಂತಾಗ ಅನುಭವಿಸುವ ಆಧುನಿಕ ಜಗತ್ತು, ವ್ಯಾಯಾಮ, ದೇಹಕಾರಕ್ಕೆ ಮತ್ತೆ ಗಮನವೀಯತೊಡಗಿದೆ. ಆದರೆ ಅಲೆಮಾರಿಗಳು ನಿರಂತರವಾಗಿ ಇದರಿಂದ ಮುಕ್ತಿ ಹೊಂದಿದವರಾಗಿದ್ದಾರೆ.

ಸದಾ ದೈಹಿಕ ಚಟುವಟಿಕೆ ಮತ್ತು ನಿರಂತರ ಚಲನಶೀಲವಾದ ಜೀವನ ಅನೇಕ ರೀತಿಯಲ್ಲಿ ಆರೋಗ್ಯಪೂರ್ಣ ಬದುಕನ್ನು ಕೊಡಬಲ್ಲದು. ದುರದೃಷ್ಟವೆಂದರೆ ಅತೀ ನಿಕೃಷ್ಟತೆಯಲ್ಲಿ, ಅತೀ ಕಡಿಮೆ ಅವಶ್ಯಕತೆಗಳಲ್ಲಿ ಅನಿವಾರ್ಯತೆಯುಳ್ಳ, ಅದರಲ್ಲೂ ಮಾನವ ಬಯಕೆಯ ಜೀವನದ ಸಮಸ್ಯೆಗಳಿರಬಹುದು, ತಮ್ಮ ಹಸಿವಿನ ವಿರುದ್ಧ ಹೋರಾಟದಲ್ಲಿ ನಿರಂತರವಾಗಿ ಅಲೆಮಾರಿಗಳಾಗಿದ್ದಾರೆ. ಪರಿಸರದ ರೀತಿ ರಿವಾಜುಗಳಲ್ಲಿ ಆಸಕ್ತವಾಗಿರುವ ಪ್ರಸ್ತುತ ಪ್ರಪಂಚವು ಅವರ ಅರಿವನ್ನು ಮುಂದಿನ ಸದುದ್ದೇಶಗಳಲ್ಲಿ ಬಳಸಬಹುದು. ಅಷ್ಟೇ ಅಲ್ಲದೆ ಅವರ ಪರಿಸರ ಲೋಕದೃಷ್ಟಿಯಲ್ಲಿನ ಅವರ ಸಮಸ್ಯೆಗಳ ಪರಿಹಾರಗಳಿಗೂ ಹುಡುಕಾಟ ನಡೆಸಬಹುದು. ಬಹು ಮುಖ್ಯವಾಗಿ ಅವರ ಆಹಾರದ ಪೌಷ್ಟಿಕತೆ ಹೆಚ್ಚುವಂತೆ ಪರಹಾರಗಳನ್ನು ಕಟ್ಟಿಕೊಡುವ ಜವಾಬ್ದಾರಿಯೂ ಇತರೆ ಸಮುದಾಯಗಳ ಮೇಲಿದೆ.

ಅಲೆಮಾರಿಗಳು ಬರದ ನಡುವೆಯೂ ಹಸಿವನ್ನು ಬಗೆಹರಿಸುವ ಛಲವುಳ್ಳವರು. ತಮ್ಮ ಜೀವನದ ಮೇಲೆ ಬದುಕಿನ ಮೇಲೆ ಇರುವ ಪರಿಸರದಲ್ಲೇ ಸಮೃದ್ಧಿಯನ್ನು ಕಟ್ಟಲು ಯತ್ನಿಸುವರು.

ಹೆಚ್ಚಿನಓದಿಗೆ

John Reader, Man on Earth, Hazper & Row Publishers, New York, 1988.

Thomas R. Degregori, A Theory of Technology, Eart Went Press, New Delhi, 1985.

Robert Chambers, to the Hands of the Poor, OXford &I.B>H. New Delhi, 1989.

* * *