ಅಲೆಮಾರಿಗಳ ಬದುಕಲ್ಲಿ ಸಂಭವಿಸಿರುವ ಆರ್ಥಿಕ ರೂಪಾಂತರಗಳನ್ನು ನನ್ನ ಈ ಪ್ರಬಂಧದಲ್ಲಿ ವಿವರಿಸಲು ಯತ್ನಿಸಿದ್ದೇನೆ. ಆರ್ಥಿಕ ಸ್ಥಿತ್ಯಂತರಗಳೆಂದರೆ, ಅವ ವೃತ್ತಿ ಬದುಕಿನಲ್ಲಿ ನಡೆದ ಬದಲಾವಣೆಗಳನ್ನು ಈ ಪ್ರಬಂಧದಲ್ಲಿ ಗ್ರಹಿಸಲೆತ್ನಿಸಲಾಗಿದೆ. ಅಲೆಮಾರಿಗಳು ಭಾರತದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಯಾವ ಬಗೆಯಲ್ಲಿ ರೂಪಗೊಂಡರು? ಅಲೆಮಾರಿಗಳೆಂದರೆ ಯಾರು? ಅಲೆಮಾರಿತ್ವ ಎಂದರೇನು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೆತ್ನಿಸೋಣ. ಮೊದಲಿಗೆ ಅಲೆಮಾರಿಗಳೆಂದರೆ ಯಾರು? ಎಂಬ ಪ್ರಶ್ನೆ. ದುಡುಕಿನ ಉತ್ತರವನ್ನು ಬಯಸುವ ಪ್ರಶ್ನೆಯಲ್ಲ ಇದು. ಭಾರತದ ಸಾಮಾಜಿಕ ವ್ಯವಸ್ಥೆ ಎಷ್ಟು ಸಂಕೀರ್ಣವೋ, ಆ ವ್ಯವಸ್ಥೆಯ ಅಂತರ್ಗತ ಭಾಗವಗಿರುವ ಅಲೆಮಾರಿಗಳು ರೂಪಗೊಳ್ಳವುದಕ್ಕೆ ಕಾರಣವಾಗಿರುವ ಸಾಮಾಜಿಕ ಮತ್ತು ರಾಜಕೀಯಾರ್ಥಿಕ ಸಂಗತಿಗಳೂ ಸಹ ಅಷ್ಟೇ ಸಂಕೀರ್ಣವಾಗಿವೆ. ಶ್ರೇಣೀಕರಣದ ಕಾರಣಕ್ಕಾಗಿ ಇಂಡಿಯಾದಲ್ಲಿ ಬದುಕುತ್ತಿರುವ ದುಡಿವ ಕೆಳಜಾತಿ ಸಮುದಾಯಗಳು ಯಾವ ಯಾವ ಹಂತಗಳನ್ನು ದಾಟಿ ಬಂದಿರುವರೋ ಆ ಎಲ್ಲ ಹಂತಗಳನ್ನು ಅಲೆಮಾರಿಗಳೂ ಸಹ ಹಾದು ಬಂದಿದ್ದಾರೆ. ಅಂದರೆ ಭಾರತದ ರಾಜಕೀಯಾರ್ಥಿ ಚಲನೆಗಳು ಇಲ್ಲಿನ ಸಾಮಾಜಿಕ ಸಂಬಂಧಗಳನ್ನು ಸ್ಪಷ್ಟವಾಗಿಯೇ ನಿಯಂತ್ರಿಸಿವೆ. ಹೀಗಾಗಿ ಭಾರತದ ಸಮಾಜದ ಪ್ರಧಾನ ಲಕ್ಷಣವೆಂದರೆ ಜಾತಿವ್ಯವಸ್ಥೆ. ಜಾತಿ ವ್ಯವಸ್ಥೆಯ ಮುಖ್ಯ ಉದ್ದೇಶ ಸಮಾಜದ ಒಟ್ಟು ರಾಜಕೀಯಾರ್ಥಿಕ ಸ್ಥಿತಿಯನ್ನು ಸಾಮಾಜಿಕ ಶ್ರೇಣೀಕರಣದ ಮೂಲಕ ಸಮರ್ಥಿಸುವುದು. ಬಹುಸಂಖ್ಯಾತ ದುಡಿವ ವರ್ಗದ ಜನರ ಶ್ರಮವನ್ನು ಬಂಡವಾಳವನ್ನಾಗಿಸಿಕೊಂಡು ಬದುಕುವ ಅಲ್ಪಸಂಖ್ಯಾತ ಆಳುವ ವರ್ಗ, ಯಾವುದೋ ಮಾಯೆಯ ಮೂಲಕ ಅಸಮಾನತೆಯನ್ನು ಚಿರಂತನಗೊಳಿಸಲು, ಶ್ರೇಣೀಕರಣವನ್ನು ಸಮರ್ಥಿಸುವ ಪ್ರಯತ್ನಗಳು ಭಾರತದ ಸಮಾಜದ ಚರಿತ್ರೆಯಲ್ಲಿ ನಿರಂತರವಾಗಿ ನಡೆದಿವೆ. ಜಾತಿವ್ಯವಸ್ಥೆ ದುಡಿವವರ ಮತ್ತು ದುಡಿಸಿಕೊಳ್ಳುವವರ ಮಧ್ಯೆ ಒಂದು ಅಸಹಜ ಸಾಮಾಜಿಕ ಸಂಬಂಧವಾಗಿ ಏರ್ಪಟ್ಟಿತು. ಈ ಕಾರಣದಿಂದಾಗಿ ಭಾರತದ ಶ್ರೇಣೀಕರಣವು ಜಗತ್ತಿನ ಎಲ್ಲ ತರತಮ ವ್ಯವಸ್ಥೆಗಳಿಗಿಂತ ಹೆಚ್ಚು ಸಂಕೀರ್ಣ ಮತ್ತು ಅಷ್ಟೇ ಕ್ರೂರ ವ್ಯವಸ್ಥೆಯಾಗಿದೆ.

ಭಾರತದಲ್ಲಿ ಒಂದು ಜಾತಿಯೆಂದರೆ, ಶ್ರಮ ವಿಭಜನೆಯ ಆಧಾರದಲ್ಲಿ ರೂಪಗೊಂಡ ಒಂದು ಉತ್ಪಾದನಾ ಘಟಕ. ಪ್ರತಿಯೊಂದು ಜಾತಿ, ಒಂದು ಸ್ವಯಂಪೂರ್ಣ ಉತ್ಪಾದನಾ ಘಟಕವಾಗಿ ತನ್ನ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳುತ್ತಲೆ ಬಂದಿದೆ. ಜಾತಿಯೊಂದು ತನ್ನ ಆಚರಣೆ, ಲಾಂಛನ, ಭಾಷೆ ಇವುಗಳ ಮೂಲಕ ಭಾವನಾತ್ಮಕವಾಗಿ ತನ್ನ ಅಸ್ತಿತ್ವವನ್ನು ನಿಖರಗೊಳಿಸಿಕೊಳ್ಳುತ್ತಲೇ ಬಂದಿದೆ. ತಾನು ಅನುಸರಿಸುವ ಕಸುಬಿನಿಂದಾಗಿ ಒಂದು ಸಾಮಾಜಿಕ ಗುಂಪು ಸ್ವಯಂಪೂರ್ಣವಾಗಿ ಇನ್ನೊಂದು ಜಾತಿ ಸಮುದಾಯದಿಂದ ಅನೇಕ ಬಗೆಗಳಲ್ಲಿ ಭಿನ್ನವಾಗಿ ನಿಲ್ಲಲು ಯತ್ನಿಸುತ್ತದೆ. ಇದನ್ನೆ ಅಂಬೇಡ್ಕರ್ “ಪ್ರತ್ಯೇಕತೆ ಎಂಬುದು ಜಾತಿಯ ಒಂದು ಸ್ವಾಭಾವಿಕ ಪರಿಣಾಮ”

[1] ಎನ್ನುತ್ತಾರೆ. ಯಾರು ಯಾವ ಯಾವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಯಾರು ಯಾವುದನ್ನು ಮಾಡಬಾರದು ಎಂಬ ನಿಯಮಗಳೇ ಭಾರತದ ಶ್ರೇಣೀಕರಣವನ್ನು ಜಾರಿಗೆ ತಂದವು. ಯಾವ ಗುಂಪಿನ ಜನ ಯಾವ ಬಗೆಯ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧಾರವಾದದ್ದು, ಆಯಾ ಸಾಮಾಜಿಕ ಗುಂಪುಗಳು ಅಂದಂದಿನ ಚಾರಿತ್ರಿಕ ಘಟ್ಟದಲ್ಲಿ ಸಾಧಿಸಿದ ನಿರ್ಣಾಯಕ ಗೆಲುವು ಮತ್ತು ಸೋಲುಗಳನ್ನೇ ಅವಲಂಬಿಸಿತ್ತು. ಸೋತ ಸಮುದಾಯಗಳು ನಿಮಗೆ ದಕ್ಕಿದ ಇಲ್ಲವೆ ಹೇರಲ್ಪಟ್ಟ ಕೆಲಸಗಳನ್ನು ಅನಿವಾರ್ಯವಾಗಿ ನಿರ್ವಹಿಸಲೇಬೇಕಾಯಿತು. ಇಲ್ಲಿ ಕೆಲವು ಸಮುದಾಯಗಳ ಗೆಲುವು ಎಂದರೆ, ಅಂದಂದಿನ ಒಟ್ಟು ಸಮಾಜದ ಹಣೆಬರಹವನ್ನು ರೂಪಿಸುವ ಆರ್ಥಿಕ ಮೂಲಗಳ ಮೇಲೆ ಸಾಧಿಸುವ ಹಿಡಿತವೇ ಆಗಿದೆ. ಯಾವ ಉತ್ಪಾದನಾ ವಿಧಾನದಿಂದಾಗಿ ಸಮಾಜದಲ್ಲಿ ಅಧಿಕ ಉತ್ಪಾದನೆಯಾಗುವುದೋ, ಆ ಉತ್ಪಾದನಾ ವಿಧಾನದ ಮೇಲೆ ನಿಶ್ಚಿತ ಒಡೆತನ ಸಾಧಿಸುವುದು ಗೆದ್ದ ಸಮುದಾಯಗಳ ಪರಿಪಾಠ. ಸಮಾಜದ ಮೇಲೆ ಒಡೆತನ ಸಾಧಿಸಿದ ಸಮುದಾಯಗಳ ಬಹುಮುಖ್ಯ ಕೆಲಸ, ದುಡಿವ ಉತ್ಪಾದಕ ಸಮುದಾಯಗಳ ಕಾರ್ಯವೈಖರಿಯನ್ನು ಪರಂಪರೆಯ ಹೆಸರಲ್ಲಿ ಸಮರ್ಥಿಸುತ್ತ ಅದರ ಸಾತತ್ಯವನ್ನು ಪೋಷಿಸುವುದು. ಇದೇ ಕಾರಣದಿಂದಾಗಿ ಜಗತ್ತು ತಂತ್ರಜ್ಞಾನದ ಹೆಸರಲ್ಲಿ ಎಷ್ಟೇ ಮುಂದುವರೆದಿದ್ದರೂ ಭಾರತ ಇ‌ನ್ನೂ ಸಾಂಪ್ರದಾಯಿಕ ಉತ್ಪಾದನಾ ವಿಧಾನವನ್ನು ಸಮರ್ಥಿಸುತ್ತಲೇ ಇದೆ. ಹೀಗಾಗಿ ಭಾರತದ ಉತ್ಪಾದನಾ ಕ್ಷೇತ್ರಗಳಲ್ಲಿ ಅಗಾಧ ಪ್ರಮಾಣದ ಕ್ರಾಂತಿಗಳು ಸಂಭವಿಸಲಿಲ್ಲ. ಆಗಾಗ ನಡೆದುಹೋದ ಬದಲಾವಣೆಗಳು ಇಂಡಿಯಾದ ಸಮಾಜದ ದುಡಿವ ವರ್ಗಗಳ ಬದುಕಲ್ಲಿ ಯಾವ ಗಮನಾರ್ಹ ಹೊಸತನವನ್ನು ತರಲಿಲ್ಲ. ಕುಲಕಸುಬಿನ ಆಧಾರದ ಮೇಲೆ ಒಂದು ಜಾತಿಗೆ ಪ್ರಾಪ್ತವಾಗಿದ್ದ ಹೀನ ವೃತ್ತಿಗಳು, ಆಧುನಿಕ ಜಗತ್ತಿನಲ್ಲಿ ಇಲ್ಲವಾಗಿ ಅಂತಹ ಜಾತಿಗಳು ಸಾಮಾಜಿಕ ಅವಮಾನಗಳನ್ನು ಮೀರಿ ನಿಲ್ಲಲು ಸಾಧ್ಯವಾಯಿತಾದರೂ, ಆ ಜಾತಿಗಳ ಒಟ್ಟು ಆರ್ಥಿಕ ಸ್ಥಿತಿಗಳಲ್ಲಿ ಯಾವ ಬದಲಾವಣೆಗಳಾಗಲಿ‌ಲ್ಲ.

ಹೀಗಾಗಿ ಮಾನವ ಸಮಾಜದ ಚರಿತ್ರೆಯಲ್ಲಿ ಭಾರತದ ಶ್ರೇಣೀಕರಣಕ್ಕೆ ಒಂದು ವಿಶಿಷ್ಠ ಸ್ಥಾನಮಾನ ಪ್ರಾಪ್ತವಾಗಿದೆ. ಕಾಲ ಬದಲಾದರೂ, ಜಾಗತಿಕ ಮಟ್ಟದ ಉತ್ಪಾದನಾ ವ್ಯವಸ್ಥೆಯಲ್ಲಿ ಕ್ರಾಂತಿಗಳು ನಡೆದು ಹೋದರೂ, ಭಾರತದ ಜಾತಿಗಳು ನಮ್ಮ ಪಾರಂಪರಿಕ ಆರ್ಥಿಕ ಅವಲಂಬನೆಯನ್ನು ಕಾಯ್ದುಕೊಂಡೇ ಬಂದಿವೆ. ಇದಕ್ಕೆ ಅಲೆಮಾರಿಗಳು ಹೊರತಾಗೇನೂ ಇಲ್ಲ. ಇಡೀ ಜಗತ್ತಿನಲ್ಲಿ ಕೃಷಿಕರನ್ನು ಬಿಟ್ಟರೆ, ತಮ್ಮ ಸಂಪ್ರದಾಯಿಕ ಆರ್ಥಿಕ ಮೂಲಗಳನ್ನು ಉಳಿಸಿಕೊಂಡು ಬಂದವರೆಂದರೆ ಅಲೆಮಾರಿಗಳು ಮಾತ್ರ. ತಮ್ಮ ತಮ್ಮ ಆರ್ಥಿಕ ಮೂಲಗಳನ್ನು ಚಾರಿತ್ರಿಕವಾಗಿ ಅವಶೇಷಗಳ ಮಾದರಿಯಲ್ಲಿ ಅಲೆಮಾರಿಗಳು ಉಳಿಸಿಕೊಳ್ಳಲು ಕಾರಣ, ಭಾರತವೆಂಬ ಸಂಪ್ರದಾಯಶೀಲ ಸಮಾಜದಲ್ಲಿ ಯಾವತ್ತೂ ಬಹುದೊಡ್ಡ ಆರ್ಥಿಕ ಉತ್ಕ್ರಾಂತಿ ಸಂಭವಿಸದೇ ಹೋದದ್ದು. ಈ ಕಾರಣದಿಂದಾಗಿ ಸಾಮಾಜಿಕ ಅಸಮಾನತೆಯು ತನ್ನ ಅತ್ಯಂತ ಹೇಯ ಆಯಾಮಗಳನ್ನು ವಿಕಸಿಸಿಕೊಳ್ಳುತ್ತಲೇ ಹೋಯಿತು. ಹೀಗಾಗಿ ಭಾರತದ ಸಮಾಜದಲ್ಲಿ ಅಲೆಮರಿಗಳು ಸಹ ಈ ಶ್ರೇಣೀಕೃತ ಸಮಾಜದ ಒಂದು ಭಾಗವಾಗಿಯೇ ರೂಪಗೊಂಡಿದ್ದಾರೆ. ಅಲೆಮಾರಿಗಳು ಎಂದಾಕ್ಷಣ ಜೀವನ ನಿರ್ವಹಣೆಗಾಗಿ ಭಾರೀ ಡಿಗ್ರಿಗಳನ್ನು ಪಡೆದು ಅಮೇರಿಕಾ, ಜಪಾನುಗಳನ್ನು ತಿರುಗುವ ಆಧುನಿಕ ಅಲೆಮಾರಿ ಜನ ಈ ಪ್ರಬಂಧದ ಕಕ್ಷೆಗೆ ಬರುವುದಿಲ್ಲ. ಪಾರಂಪರಿಕ ಸಮಾಜದಲ್ಲಿ ನಿತ್ಯದ ಬದುಕಿನ ನಿರ್ವಹಣೆಗೆ, ಒಪ್ಪತ್ತಿನ ಊಟದ ಅನ್ವೇಷಣೆಯಲ್ಲಿ ೨೧ನೇ ಶತಮಾನದಲ್ಲೂ ಅಲೆದಾಡುವ ಸಾಮಾಜಿಕ ಅನಿವಾರ್ಯತೆಯನ್ನು ಅನುಭವಿಸುತ್ತಿರುವ ಸಮುದಾಯಗಳನ್ನು ಇಲ್ಲಿ ಅಲೆಮಾರಿಗಳು ಎಂದು ಪರಿಭಾವಿಸಲಾಗಿದೆ. ಅಲೆಮಾರಿತನ ಭಾರತದ ಅಸಮಾನ ಸಮಾಜದ ಒಂದು ಭಾಗವಾಗಿ ರಚನೆಗೊಂಡ ಸ್ಥಿತಿಯಾಗಿದೆ. ಅಲೆಮಾರಿಗಳ ಆರ್ಥಿಕ ಬದುಕಿನಲ್ಲಿ ಸಂಭವಿಸಿರುವ ರೂಪಾಂತರಗಳನ್ನು ಕಟ್ಟಿಕೊಡುವ ಹಂತದಲ್ಲಿ ನಾವು ಸ್ಪಷ್ಟ ಪುರಾವೆಗಳ ಸಮಸ್ಯೆಯನ್ನು ಎದುರಿಸುತ್ತೇವೆ. ಅಲೆಮಾರಿಗಳ ಮತ್ತು ಕೆಳಜಾತಿಗಳ ಬದುಕಿನ ಚರಿತ್ರೆಯನ್ನು ರೂಪಿಸಲು ಕ್ಲಾಸಿಕಲ್ ಆಕರಗಳ ಕೊರತೆ ಇದೆ ಎಂದು ಖ್ಯಾತ ವಿದ್ವಾಂಸರಾದ ಚಿದಾನಂದಮೂರ್ತಿಯವರೇ ಒಪ್ಪಿಕೊಳ್ಳುತ್ತಾರೆ.[2] ಪ್ರಾಚೀನ ಶಾಸನ ಮತ್ತು ಸಾಹಿತ್ಯ ಕೃತಿಗಳನ್ನು ಅವಲಂಬಿಸಿಯೇ ಇವರ ಚರಿತ್ರೆಯನ್ನು ಕಟ್ಟಿಕೊಡಲು ಹೋದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಪರ್ಯಾಯ ಆಕರಗಳಾಗಿ ಅಲೆಮಾರಿಗಳೇ ಕಟ್ಟಿಕೊಂಡ ತಮ್ಮ ಸೃಷ್ಟಿಪುರಾಣಗಳನ್ನೇ ಬಳಸಿ ನಾವು ಇವರ ಆರ್ಥಿಕ ಚರಿತ್ರೆಯನ್ನು ಕಟ್ಟಿಕೊಡಬಹುದಾಗಿದೆ. ಈ ಸೃಷ್ಟಿ ಪುರಾಣಗಳ ಮೂಲಕ ತಮ್ಮ ಜಾತಿ ಅನುಸರಿಸಿಕೊಂಡು ಬಂದ ಆರ್ಥಿಕ ಚಟುವಟಿಕೆಗಳಿಗೆ ಇವರು ಒಂದು ಚರಿತ್ರೆಯ ಆಯಾಮವನ್ನು ಕಲ್ಪಿಸುತ್ತಾರೆ. ಅಂತಹ ಒಂದೆರಡು ಉದಾಹರಣೆಗಳನ್ನು ನೋಡೋಣ.

ಶಾಪಗ್ರಸ್ತ ಪಯಣ

ಅಲೆಮಾರಿಗಳು ತಮ್ಮ ಸಮುದಾಯದ ಸೃಷ್ಟಿಪುರಾಣಗಳನ್ನು ಕಟ್ಟಿಕೊಂಡು ಬಂದಿದ್ದಾರೆ. ವಿಚಿತ್ರವೆಂದರೆ, ಬಹುತೇಕ ಎಲ್ಲ ಅಲೆಮಾರಿಗಳ ಮೂಲಪುರುಷನ ಹುಟ್ಟು ಒಂದು ಶಾಪದಿಂದ ಸಂಭವಿಸುತ್ತದೆ. ಈ ಮೂಲಪುರುಷ ಒಂದು ವಿಲಕ್ಷಣ ಚಾರಿತ್ರಿಕ ಅಥವಾ ಪೌರಾಣಿಕ ಸಂದರ್ಭದಲ್ಲಿ ಜನಿಸುತ್ತಾನೆ. ಒಂದು ಸಮುದಾಯದ ಮೂಲಪುರುಷ ಶಾಪಗ್ರಸ್ತನಾಗಿಯೇ ಹುಟ್ಟಿ, ತನ್ನ ಸಮುದಾಯದ ಬೆಳವಣಿಗೆಗೆ ಕಾರಣನಾಗುತ್ತಾನೆ. ಹೀಗೆ ಇವರಿಗೆ ಪ್ರಾಪ್ತವಾಗುವ ಶಾಪ ಅವರ ಆರ್ಥಿಕ ಚಟುವಟಿಕೆಗಳನ್ನು ಪ್ರತಿನಿಧಿಸುತ್ತದೆ. ಸೃಷ್ಟಿಪುರಾಣಗಳ ರಮ್ಯ ಜಗತ್ತಿನ ಒಳಗೂ ಅಲೆಮಾರಿಗಳ ಆರ್ಥಿಕ ಚಟುವಟಿಕೆಗಳು ಊನಗೊಂಡ ಸ್ಥಿತಿಯಲ್ಲಿಯೇ ದಾಖಲಾಗಿವೆ. ಅಲ್ಲದೆ ಅಲೆಮಾರಿಗಳ ಸದ್ಯದ ಸ್ಥಿತಿಗೂ ಅವರು ಕಟ್ಟಿಕೊಂಡು ಬಂದ ಸೃಷ್ಟಿ ಪುರಾಣಗಳಲ್ಲಿನ ತಮ್ಮ ಹುಟ್ಟಿನ ಮೂಲಗಳಿಗೂ ಸಂಬಂಧವಿರುವುದರಿಂದ ಕೆಲವು ಸೃಷ್ಟಿ ಪುರಾಣಗಳನ್ನು ಪರಿಶೀಲಿಸಬಹುದಾಗಿದೆ.

ಅಲೆಮಾರಿಗಳಾದ ಹೆಳವರು, ತಮ್ಮ ಹೆಳವ ವೃತ್ತಿಯನ್ನು ಅನುಸರಿಸಲಾಗಿದ್ದು ಹೀಗೆ, ಒಂದೇ ಕುಟುಂಬದಲ್ಲಿ ಹುಟ್ಟುವ ನಾಲ್ಕು ಮಕ್ಕಳಲ್ಲಿ ಕೊನೆಯವನು ಕುಂಟನಾಗಿರುತ್ತಾನೆ. ಮೂರು ಜನ ದುಡಿದರೆ ಈ ಕಾಲಿಲ್ಲದವ ಮಾತ್ರ ಅಸಹಾಯಕನಾಗಿರುತ್ತಾನೆ. ಮುಂದೆ ಮೂರು ಜನ ದೊಡ್ಡವರಾದ ಮೇಲೆ ಆಸ್ತಿಯನ್ನು ಸಮಪಾಲು ಮಾಡಿಕೊಂಡು ಅಂಗವಿಕಲನಾದ ಕೊನೆಯವನಿಗೆ ಆಸ್ತಿ ಕೊಡುವುದಿಲ್ಲ. ಸಿಕ್ಕುವುದು ಒಂದು ಎತ್ತು ಮಾತ್ರ. ಕಾಲಿಲ್ಲದ ಅವನು ಎತ್ತಿನ ಮೇಲೆ ಹತ್ತಿಕೊಂಡು ಮನೆಮನೆಗೆ ಹೋಗಿ ಭಿಕ್ಷೆ ಬೇಡಿ ಬದುಕಲಾರಂಭಿಸಿದ, ಇವನ ಸಂತತಿಯೇ ಮುಂದೆ ಹೆಳವರೆಂದು ಗುರುತಿಸಿಕೊಂಡಿತು.[3] ಇದೇ ರೀತಿ ಹಕ್ಕಿಪಿಕ್ಕಿಗಳು, ತಮ್ಮ ಸಹೋದರರಾದ ಮಾರ್ವಾಡಿಗಳು ತಮ್ಮ ಆಸ್ತಿಯನ್ನು ಅಪಹರಿಸಿದ್ದರಿಂದ ದಕ್ಷಿಣಕ್ಕೆ ವಲಸೆ ಬಂದು, ಬದುಕಿನ ನಿರ್ವಹಣೆಗೆ ಬೇಟೆಯನ್ನೇ ಅವಲಂಬಿಸಬೇಕಾಯ್ತು ಎಂದು ಹೇಳುತ್ತಾರೆ.[4] ಶಿವನ ಸೇವೆಯನ್ನು ಮಾಡಲೆಂದೇ ಸುಡುಗಾಡು ಸಿದ್ಧರು ತಮ್ಮ ಕೃಷಿ ಭೂಮಿಯನ್ನು ಕಳೆದುಕೊಳ್ಳುವ ಶಾಪಕ್ಕೆ ಒಳಗಾಗುತ್ತಾರೆ, ಪಾರ್ವತಿಯಿಂದ ಶಪಿಸಲ್ಪಡುವ ಇವರು ಶಿವನ ಸೇವೆಗಾಗಿಯೇ ನೇಮಿಸಲ್ಪಡುತ್ತಾರೆ.[5] ವ್ಯಾಘ್ರಾಸುರನ ಸಂಹಾರಕ್ಕೆ ಭೂಮಿಗೆ ಇಳಿದುಬಂದು, ವ್ಯಾಘ್ರಾಸುರನನ್ನು ಕೊಂದ ನಂದಿಯನ್ನು ಲೋಕದ ಕಲ್ಯಾಣಕ್ಕಾಗಿ ಊರೂರಲ್ಲಿ ಆಡಿಸಲೆಂದೇ ಕವಲೆತ್ತಿನವರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ.[6]

ಹೀಗೆ ಅಲೆಮಾರಿಗಳ ಸೃಷ್ಟಿ ಪುರಾಣಗಳಲ್ಲಿ, ಅಲೆಮಾರಿಗಳು ಯಾರದೋ ಶಾಪಕ್ಕೆ ತಮ್ಮ ಆರ್ಥಿಕ ಮೂಲಗಳನ್ನು ಕಳೆದುಕೊಳ್ಳುತ್ತಾರೆ. ಇಲ್ಲವೆ ಹುಟ್ಟುತ್ತಲೇ ಬರುವ ಅಂಗವೈಕಲ್ಯದಿಂದಾಗಿ ಆರ್ಥಿಕವಾಗಿ ಪರವಾಲಂಬಿತವನ್ನು ಅನುಭವಿಸಲಾರಂಭಿಸುತ್ತಾರೆ. ಮತ್ತು ಯಾರದೋ ಸೇವೆಗಾಗಿ, ಇಲ್ಲವೆ ಲೋಕದ ಒಳಿತಿಗಾಗಿ ತಿರುಗುತ್ತಾ ಅಲೆಮಾರಿಗಳಾಗಿರುವ ತಮ್ಮ ಸ್ಥಿತಿಯನ್ನು ತಮ್ಮ ಸೃಷ್ಟಿ ಪುರಾಣಗಳಲ್ಲಿ ಅಲೆಮಾರಿಗಳು ದಾಖಲಿಸಿದ್ದಾರೆ. ಆದರೆ ಈವತ್ತು ನಮ್ಮ ಕಣ್ಣ ಮುಂದಿರುವ ಅಲೆಮಾರಿಗಳು, ಆಧುನಿಕ ಪೂರ್ವ ಇಂಡಿಯಾದಲ್ಲಿ ಹೇಗಿದ್ದರು? ಸರಿಸುಮಾರು ಎರಡು ಸಾವಿರ ವರ್ಷಗಳ ರಾಜರ ಆಳ್ವಿಕೆಯಲ್ಲಿ ಸಮಾಜದ ಅಂಚಿನ ಸಮುದಾಯಗಳಾದ ಅಲೆಮಾರಿಗಳು ಯಾವ ಬಗೆಯಲ್ಲಿ ಬದುಕಿದ್ದರು? ರಾಜ್ಯದ ಒಟ್ಟು ಉತ್ಪಾದನಾ ವ್ಯವಸ್ಥೆಯಲ್ಲಿ ಅವರ ಪಾತ್ರವೇನು? ಇಂಡಿಯಾದ ಚರಿತ್ರೆಯ ಯಾವ ಯಾವ ಕಾಲಘಟ್ಟಗಳಲ್ಲಿ ಅಲೆಮಾರಿಗಳು ಯಾವ ಬಗೆಯ ವೃತ್ತಿಗಳಲ್ಲಿ ತೊಡಗಿಸಿ ಕೊಂಡಿದ್ದರು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಚಿತ್ರಣ ಕೊಡಲು ಪ್ರಾಯಶಃ ಸಾಧ್ಯವಾಗಲಾರದು. ಆದರೆ ನಮ್ಮ ಪ್ರಾಚೀನ ಕೃತಿಗಳಲ್ಲಿ ಕ್ವಚಿತ್ತಾಗಿ ಅಲೆಮಾರಿಗಳು ಉಲ್ಲೇಖಗೊಳ್ಳುತ್ತಾರೆ. ಈ ಕ್ವಚಿತ್‌ಉಲ್ಲೇಖಗಳ ಮೂಲಕ ಆಯಾ ಕಾಲಘಟ್ಟದ ಅಲೆಮಾರಿಗಳ ಆರ್ಥಿಕ ಚಟುವಟಿಕೆಗಳನ್ನು ವಿವರಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಒಂದು ಸಮುದಾಯವನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ಕರ್ನಾಟಕದ ಅಲೆಮಾರಿ ಸಮುದಾಯಗಳಲ್ಲಿ ಒಂದಾದ ಡೊಂಬರು ಕರ್ನಾಟಕದ ಸಂಸ್ಕೃತಿ ಚರಿತ್ರೆಯ ವಿವಿಧ ಹಂತಗಳಲ್ಲಿ ಯಾವ ಬಗೆಯ ಆರ್ಥಿಕ ಮೂಲಗಳನ್ನು ಅವಲಂಬಿಸಿದ್ದರು ಎಂಬುದನ್ನು ನೋಡೋಣ. ಡೊಂಬರ ಕುರಿತು ಅತ್ಯಂತ ಪ್ರಾಚೀನ ಉಲ್ಲೇಖ ಸಿಗುವುದು ಪಂಪನ ವಿಕ್ರಮಾರ್ಜುನ ವಿಜಯದಲ್ಲಿ.

ವಿಕ್ರಮಾರ್ಜುನ ವಿಜಯದಲ್ಲಿ ಪಂಪ ‘ಮೀನಾವೇ ಪಂದಿಯೆಂದೆನಿತಾನುಂ ತೆರನಾಗಿ ಡೊಂಬ ವಿದ್ದೆಯ ನಾಡಲ್ ನೀನರಿವೆ’ ಎನ್ನುತ್ತಾನೆ.

ಶಾಂತಿನಾಥನ ಸುಕುಮಾರ ಚರಿತ್ರೆಯಲ್ಲಿ ‘ಕಾಶಂಬೀ ಪುರದೋಳ್ ಬಹುಕರ್ಮಿಯೆಂಬ ಡೊಂಬನ ಮನೆಯೋಳ್ ಸ್ತ್ರೀ ವೇಷದಿಂ ಬೆಳ್ಗಿತ್ತೆಯಾಗಿ ಪುಟ್ಟು’ ಎಂಬ ಉಲ್ಲೇಖವಿದೆ.

‘ಡೊಂಬರ ಮಗುವಿಗೆ ತಂತಿಯೇ ನೆಲ ಡೊಂಬನ ಪೆಸರ್ ತವೆ ಕೊಲ್ಗಸಿಗ ನಕ್ಕುಂ’ ಎಂದು ಅಂಡಯ್ಯ ಕಬ್ಬಿಗರ ಕಾವ್ಯದಲ್ಲಿ ಡೊಂಬರನ್ನು ಉಲ್ಲೇಖಿಸುತ್ತಾನೆ.

೧೧ನೇ ಶತಮಾನದ ಕಲ್ಹಣನ ರಾಜ ತರಂಗಿಣಿ ಕೃತಿಯಲ್ಲಿ ಚಾಂಡಾಲ, ಚರ್ಮಕಾರರಲ್ಲದೆ ಡೊಂಬರೂ ಸಹ ಅಸ್ಪೃಶ್ಯರು ಎನ್ನುತ್ತಾನೆ.

ಮಡಿವಾಳ ಮಾಚಿದೇವ ತಮ್ಮ ವಚನದಲ್ಲಿ ‘ಊರಿಂದ ಹೊರಗಣ ಡೊಂಬ’ ಎನ್ನುತ್ತಾರೆ.

‘ಡಂಭಕ ಭಕ್ತಿಗೆ ಡೊಂಬ ಲಾಗವ ಹಾಕಿ’ ಪುರಂದರದಾಸರ ಕೀರ್ತನೆಗಳಲ್ಲಿನ ಉಲ್ಲೇಖ.

೧೬ನೇ ಶತಮಾನದ ನಂಜುಂಡ ಕವಿಯ ಕುಮಾರರಾಮ ಸಾಂಗತ್ಯದಲ್ಲಿ.

೧೭ನೇ ಶತಮಾನದ ಪಾಂಚಾಳರಂಗನ ಚೆನ್ನರಾಮ ಸಾಂಗತ್ಯದಲ್ಲಿ.

೧೯ನೇ ಶತಮಾನದ ಮಹಾಲಿಂಗ ಸ್ವಾಮಿಯ ಬಲರಾಮನ ಸಾಂಗತ್ಯದಲ್ಲಿ ಮತ್ತು ದೇವಚಂದ್ರನ ರಾಜಾವಳಿ ಕಥಾಸಾರದಲ್ಲಿ ಅಲ್ಲದೆ, ಸ್ವಾತಂತ್ರ್ಯಪೂರ್ವ ಕರ್ನಾಟಕದ ಸಮುದಾಯ ಅಧ್ಯಯನಗಳಲ್ಲೂ ಸಹ ಡೊಂಬರು, ಡೊಂಬರಾಟವನ್ನು ನೆಚ್ಚಿಕೊಂಡ ಉಲ್ಲೇಖಗಳನ್ನು ನೋಡಬಹುದು. ಅಲ್ಲದೆ ಇನ್ನೂ ಸಹ ಬೀದಿ ಬದಿಯಲ್ಲಿ ಡೊಂಬರಾಟ ವಾಡವು ಹಲವು ಗುಂಪುಗಳನ್ನು ಕರ್ನಾಟಕದದ್ಯಾಂತ ನೋಡಬಹುದು.

ಮೇಲಿನ ಸಾಹಿತ್ಯ ಕೃತಿಗಳಲ್ಲೆಲ್ಲ ಅಲೆಮಾರಿ ಡೊಂಬರು ತಮ್ಮ ಪಾರಂಪರಿಕ ಆರ್ಥಿಕ ಮೂಲವಾದ ಡೊಂಬರಾಟವನ್ನೇ ನಂಬಿಕೊಂಡು ಬಂದಿರುವುದು ಕಂಡುಬರುತ್ತದೆ. ಕೆಲವು ರಾಜರು ಇವರ ವೃತ್ತಿಯನ್ನು ಪ್ರೋತಸಾಹಿಸಿರುವುದು, ಕೆಲವು ದಾನಗಳನ್ನು ಇವರಿಗಾಗಿ ಕೊಡಮಾಡಲಾಗಿರುವುದು ಸಹ ಕಂಡುಬರುತ್ತದೆ. ಥರ್ಸಟನ್, “ನೆಲ್ಲೂರು ತಹಶೀಲ್ದಾರರು ಡೊಂಬರಿಗೆ ‘ಮಿರಾಸಿ’ ಎಂಬ ಕರವನ್ನು ಕಾಣಿಕೆ ರೂಪದಲ್ಲಿ ಪಡೆಯಲು ಅನುವು ಮಾಡಿಕೊಟ್ಟಿದ್ದರು. ಮೈಸೂರು ಜಿಲ್ಲೆಯಲ್ಲೂ ಸಹ ‘ಡೊಂಬರ ಲಿಂಗದ ವೀರಕಾಣಿಕೆ’ ಎಂಬ ಕರವನ್ನು ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಇವರು ಸ್ಥಳೀಯ ಜಮೀನ್ದಾರರ ಮನೆ ಮಕ್ಕಳಂತಿದ್ದು, ಅವರ ನಿಯಮಗಳಿಗೆ ಬದ್ಧವಾಗಿರಬೇಕಿತ್ತು.”[7] ೧೮೯೧ ರವರೆಗೂ ಆಂಧ್ರದ ಗಡಿಭಾಗದುದ್ದಕ್ಕೂ ಡೊಂಬರಾಟಕ್ಕೆ ಪ್ರತಿಯಾಗಿ ಡೊಂಬರು ಹಳ್ಳಿಗಳಿಂದ ಈ ಕರವನ್ನು ಪಡೆದು ಜೀವಿಸುತ್ತಿದ್ದರೆಂದು ಥರ್ಸಟನ್ ಹೇಳುತ್ತಾನೆ. ಅಲ್ಲದೆ ಸೈನ್ಯದಲ್ಲಿ ಸೈನಿಕರಾಗಿಯೂ, ದೇವಾಲಯಗಳನ್ನು ಕಟ್ಟುವಾಗ ಶಿಲ್ಪಿಗಳಾಗಿಯೂ ಡೊಂಬರು ಕೆಲಸ ಮಾಡಿದ್ದಾರೆ. ಅಂದರೆ ಒಟ್ಟಾರೆಯಾಗಿ ಡೊಂಬರಂತಹ ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಕ್ಕೆ ರಾಜನ ಪ್ರೋತ್ಸಾಹ ಮತ್ತು ಮನ್ನಣೆ ಇದ್ದ ಕಾರಣಕ್ಕೆ ಈ ಸಮುದಾಯ ತನ್ನ ವೃತ್ತಿಯನ್ನು ಪೋಷಿಸಿಕೊಂಡು ಬರಲು ಸಾಧ್ಯವಾಯಿತು. ಆದರೆ ಅದು ಸಾಮಾಜಿಕ ಅವಮಾನಗಳಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅಲ್ಲದೆ ಈ ಸಮುದಾಯಕ್ಕೆ ಚರಿತ್ರೆಯಲ್ಲಿ ನಿಶ್ಚಿತ ಆದಾಯ ಮೂಲಗಳು ಸಿಗಲೇ ಇಲ್ಲ. ಅಂದಿನ ಸಮಾಜದ ಮುಖ್ಯ ಆರ್ಥಿಕ ಮೂಲವಾಗಿದ್ದ ಕೃಷಿ ಜಮೀನನ್ನು ಪಡೆಯಲು ಈ ಸಮುದಾಯ ಸತತವಾಗಿ ಪ್ರಯತ್ನಿಸಿದೆ ಎಂಬುದಕ್ಕೆ ಕರ್ನಾಟಕದಾದ್ಯಂತ ಈಗ ಪ್ರಚಲಿತವಿರುವ ರೆಕ್ಕೆ ಕಟ್ಟಿಕೊಂಡು, ಭೂಮಿ ಪಡೆಯಲೆಂದು ಹಕ್ಕಿಯಂತೆ ಹಾರಲೆತ್ನಿಸಿ ಸತ್ತು ಹೋದ ಡೊಂಬರವನ ಕಥೆ ಎಲ್ಲರಿಗೂ ಚಿರಪರಿಚಿತವಾದದ್ದು. ಈ ಕಥೆ ಅಲೆಮಾರಿಯೊಬ್ಬ ನಿಶ್ಚಿತ ಆದಾಯ ಮೂಲವನ್ನು ಕಂಡುಕೊಳ್ಳಲು ನಡೆಸಿದ ಸಾಹಸವನ್ನು ಚಿತ್ರಿಸುತ್ತದೆ. ಈ ಡೊಂಬರವನು ಬಹುತೇಕ ಎಲ್ಲ ಅಲೆಮಾರಿಗಳ ಪ್ರತಿನಿಧಿಯಂತೆ ಕಂಡುಬರುತ್ತಾನೆ. ಈವತ್ತೂ ಕರ್ನಾಟಕದ ಅನೇಕ ಕಡೆ ‘ಡೊಂಬರಿಗಾಗಿ ದಾನ ಕೊಟ್ಟ ಜಮೀನು ಇದು’ ಎಂದು ಹೇಳುವ ಕೃಷಿ ಜಮೀನುಗಳಿವೆ. ಚೆನ್ನಪಟ್ಟಣ ತಾಲೂಕಿನ ಭೈರಾಪಟ್ಟಣ ಎಂಬ ಗ್ರಾಮದಲ್ಲಿ ಹೀಗೆ ರೆಕ್ಕೆ ಕಟ್ಟಿಕೊಂಡು ಆಕಾಶಕ್ಕೆ ಜಿಗಿದ ಡೊಂಬರವರ ಕುರಿತ ಕಥೆ ಮತ್ತು ಸ್ಮಾರಕವೂ ಅಲ್ಲದೆ ಅವನಿಗಾಗಿ ಬಿಟ್ಟ ಜಮೀನು ಇನ್ನೂ ಇದೆ. ಇಲ್ಲಿನ “ಗ್ರಾಮಸ್ಥರು ಸುಮಾರು ನೂರಾ ಹತ್ತು ಎಕರೆಯಷ್ಟು ವಿಸ್ತಾರವಾದ ‘ದೊಂಬನ ಕೊಡುಗೆ’ಯ ಪ್ರದೇಶವ್ನು ತಲೆತಲಾಂತರಗಳಿಂದ ಉಳುಮೆ ಮಾಡದೆ ಬಿಟ್ಟು ಬಿಟ್ಟಿದ್ದರು… ೧೯೬೮ನೇ ಇಸ್ವಿಯಲ್ಲಿ ತೋಟಗಾರಿಕೆ ಇಲಾಖೆಯವರು ೪೦ ಎಕರೆ ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು”[8] ಬಹುತೇಕ ಇಂದು ಅಲೆಮಾರಿಗಳಾಗಿರುವ, ರಾಜಶಾಹಿಯ ಕಾಲಘಟ್ಟದಲ್ಲಿ ಪ್ರದರ್ಶಕ ಮತ್ತು ಕರಕುಶಲ ಕಲೆಗಳನ್ನು ನಂಬಿದ್ದ ಸಮುದಾಯಗಳು, ರಾಜನ ದತ್ತಿಗಳನ್ನು ಅವಲಂಬಿಸಿಯೇ ತಮ್ಮ ವೃತ್ತಿಗಳಲ್ಲಿ ಮುಂದುವರಿದುಕೊಂಡು ಬಂದಿರುವುದು ಕಂಡು ಬರುತ್ತದೆ. “ಡೊಂಬರು ಜೈಪುರದ ಮಹಾರಾಜರ ಆಸ್ಥಾನದಲ್ಲಿ ಪಾರಂಪರಿಕವಾಗಿ ಸಂಗೀತಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವರು ಮನೆಯಿಂದ ಮನೆಗೆ ಸುತ್ತಿ, ಕೊಳಲು ನುಡಿಸಿ ಭಿಕ್ಷೆ ಬೇಡುತ್ತಿದ್ದರು”[9] ಎಂದು ಥರ್ಸಟನ್ ಉಲ್ಲೇಖಿಸುತ್ತಾನೆ. ಬಳ್ಳಾರಿ ಜಿಲ್ಲೆಯಲ್ಲಿನ ಡೊಂಬರೂ ಸಹ ಸಂಡೂರು ಸಮೀಪ ವಿಜಯನಗರದ ಅರಸರು ತಮಗೆ ದತ್ತಿ ಕೊಟ್ಟಿದ್ದ ಗ್ರಾಮವೊಂದರ ಕುರಿತು ಹೇಳುತ್ತಾರೆ. ಅಲ್ಲದೆ ಕೃಷ್ಣದೇವರಾಯನಿಗೆ ಪ್ರಿಯವಾಗಿದ್ದ ಈ ಸಮುದಾಯಕ್ಕೆ ಆತ ಸಂಡೂರಿನ ಬಳಿ ದತ್ತಿ ಜಮೀನನ್ನು ಕೊಟ್ಟ ಕುರಿತು ಮತ್ತು ಅದು ಅನಂತರ ಬಂದ ಪಾಳೇಗಾರರ ವಶವಾಗಿ ಹೋದದ್ದರ ಕುರಿತು ಹೇಳುತ್ತಾರೆ. ಒಟ್ಟಿನಲ್ಲಿ ಈ ಅಲೆಮಾರಿಗಳು ನಿಶ್ಚಿತ ಆದಾಯ ಮೂಲವಿಲ್ಲದ ತಮ್ಮ ವೃತ್ತಿಯಿಂದಾಗಿ ಸ್ಥಳೀಯ ಉತ್ಪಾದಕ ವರ್ಗಗಳನ್ನು ಆಶ್ರಯಿಸಿಯೇ ಬದುಕಬೇಕಿತ್ತು.

ಇನ್ನು ಅಲೆಮಾರಿಗಳ ಆರ್ಥಿಕ ಮೂಲಗಳು ಮತ್ತು ಅವು ಬೆಳೆದು ಬರಲು ಕಾರಣವಾದ ಚಾರಿತ್ರಿಕ ಅನಿವಾರ್ಯತೆಗಳನ್ನು ಗಮನಿಸಬಹುದಾಗಿದೆ. ಅಲೆಮಾರಿಗಳನ್ನು ನಾನು ಇಲ್ಲಿ ಐದು ಭಾಗಗಳಲ್ಲಿ ವಿಂಗಡಿಸಿದ್ದೇನೆ.

೧. ಪ್ರದರ್ಶಕ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

೨. ಕರಕುಶಲ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

೩. ಧಾರ್ಮಿಕ ಸಂಬಂಧೀ ವೃತ್ತಿಗಳನ್ನು ಅವಲಂಬಿಸಿರುವವರು

೪. ಪಾರಂಪರಿಕ ಮೂಲ ವೃತ್ತಿಗಳಲ್ಲೇ ಇರುವ ಸಮುದಾಯಗಳು

೫. ಬೇಟೆ, ಪಶುಪಾಲನೆ ಮತ್ತು ಆಹಾರ ಸಂಗ್ರಹಣೆಯಂತಹ ಮೂಲ ಕಸುಬುಗಳನ್ನು ಇನ್ನೂ ಅವಲಂಬಿಸಿರುವವರು.

ಹೀಗೆ ಐದು ವಿಧಗಳಲ್ಲಿ ಅಲೆಮಾರಿಗಳನ್ನು ವಿಂಗಡಿಸಬಹುದು. ಈ ವಿಂಗಡಣೆಯ ಚೌಕಟ್ಟಿಗೆ ಬಾರದ ಅಲೆಮಾರಿಗಳೂ ಸಹ ಕರ್ನಾಟಕದಲ್ಲಿರಬಹುದು. ಮೊದಲನೆಯದಾಗಿ ಪ್ರದರ್ಶಕ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳನ್ನು ನೋಡೋಣ.

. ಪ್ರದರ್ಶಕ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

ಮುಖ್ಯವಾಗಿ ಇವರು ತಮ್ಮ ಪಾರಂಪರಿಕ ಸರಂಜಾಮುಗಳನ್ನು ಬಳಸಿಯೇ ಜನರನ್ನು ರಂಜಿಸಲೆತ್ನಿಸುತ್ತಾರೆ. ಆಧುನಿಕ ಮನರಂಜನಾ ಮಾಧ್ಯಮಗಳು ವಿಧಿಸುವ ನಿರ್ಶಚಿತ ಶುಲ್ಕ, ಇಲ್ಲವೆ ನಿಯಮಗಳು ಇಲ್ಲಿರುವುದಿಲ್ಲ. ಡೊಂಬರಾಟದವನಿಗೆ, ಜಾತಿಗಾರರಿಗೆ, ಕಸರತ್ತುಗಳನ್ನು ಪ್ರದರ್ಶಿಸಲು ಬೀದಿಯ ಪಕ್ಕದ ಯಾವುದೇ ಬಯಲಾದರೂ ಆದೀತು. ಇಲ್ಲಿ ಪ್ರೇಕ್ಷಕ ತನಗಿಚ್ಛೆ ಬಂದಂತೆ ಹಣ ನೀಡಬಹುದು. ಇಲ್ಲವೆ ನೀಡದೆಯೂ ಇರಬಹುದು. ಈ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳೆಂದರೆ, ಡೊಂಬರು, ಜಾತಿಗಾರರು, ಕಿಳ್ಳೆಕ್ಯಾತರು, ಹಗಲುವೇಷಗಾರರು, ಕವಲೆತ್ತಿನವರು, ದೊಂಬಿದಾಸರು, ಕಿನ್ನರಿ ಜೋಗಿಗಳು, ಬುಡುಬುಡಿಕೆ, ಗೊಂದಲಿಗರು, ಮೋಡಿಕಾರರು ಮುಂತಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ.

. ಕರಕುಶಲ ಕಲೆಗಳನ್ನು ಅವಲಂಬಿಸಿರುವ ಸಮುದಾಯಗಳು

ಇವರು ಪಾರಂಪರಿಕವಾಗಿ ತಮ್ಮ ಕರಕುಶಲ ವೃತ್ತಿಗಳನ್ನೇ ಅವಲಂಬಿಸಿಕೊಂಡಿರುವಂಥವರು. ಸಾಂಪ್ರದಾಯಿಕ ಉತ್ಪಾದನಾ ಸಾಧನಗಳಿಂದ ಹಳ್ಳಿಗರಿಗೆ ಉಪಯುಕ್ತವಾಗಬಲ್ಲ, ಕೃಷಿ ಸಂಬಂಧಿ ಇಲ್ಲವೆ ಗೃಹೋಪಯೋಗಿ ಉಪಕರಣಗಳನ್ನು ತಯಾರಿಸುತ್ತಾರೆ. ಇವರಲ್ಲಿ ಪ್ರಮುಖರು ಬಯಲು ಪತ್ತಾರ, ಬಯಲು ಕಮ್ಮಾರ, ಮೇದರು, ಪಿಂಜಾರರು, ಮುದ್ದೆಕಮ್ಮಾರರು, ಹಂಡಿಜೋಗಿಗಳು ಮುಂತಾದ ಸಮುದಾಯಗಳು ಈ ಗುಂಪಿಗೆ ಸೇರುತ್ತವೆ.

. ಧಾರ್ಮಿಕ ಸಂಬಂಧೀ ವೃತ್ತಿಗಳನ್ನು ಅವಲಂಬಿಸಿರುವವರು

ಇವರು ಮುಖ್ಯವಾಗಿ ಕೆಲವು ಅನುಭಾವಿ ಪಂಥಗಳಿಗೆ ಸೇರಿದವರು. ಅಲ್ಲದೆ ಶಕ್ತಿ ಆರಾಧಕರು. ಇವರು ದಾಸರ ಮತ್ತು ಅನುಭಾವಿಗಳ ಕಾವ್ಯಗಳನ್ನು, ತತ್ವಪದಗಳನ್ನು ಹಾಡುತ್ತ ಊರೂರು ಅಲೆಯುವವರು. ಇವರಲ್ಲಿ ದುರುಗ ಮುರುಗಿಯರು, ಗೊರವರು, ದೊಂಬಿದಾಸರು, ಸುಡುಗಾಡು ಸಿದ್ದರು, ಅರ್ಜುನ ಜೋಗಿಗಳು, ಭೈರಾಗಿಗಳು ಮುಂತಾದವರು ಮುಖ್ಯರು.

. ಪಾರಂಪರಿಕ ಮೂಲ ವೃತ್ತಿಗಳಲ್ಲೇ ಇರುವ ಸಮುದಾಯಗಳು

ಈ ಗುಂಪಿಗೆ ಸೇರಿದ ಸಮುದಾಯಗಳು ಆರ್ಥಿಕವಾಗಿ ಸಮಾಜದ ಪ್ರಬಲ ಸಮುದಾಯಗಳನ್ನು ಪಾರಂಪರಿಕವಾಗಿ ಅವಲಂಬಿಸಿರುವವರು. ಅವರಲ್ಲಿ, ಹೆಳವರು, ದಕ್ಕಲರು, ಮೊಂಡರು ಪ್ರಮುಖರು. ಹಲವು ಪಾಳೇಗಾರರಿಗೆ, ಭೂಮಾಲಿಕರಿಗೆ ‘ಮನೆ ಮಕ್ಕಳಾಗಿ’ ಇವರು ಸೇವೆ ಸಲ್ಲಿಸುತ್ತಾರಲ್ಲದೆ, ಊರೂರು ಸುತ್ತಿ ಅವರ ವಂಶಾವಳಿಯನ್ನು ದಾಖಲಿಸುತ್ತಾರೆ.

. ಬೇಟೆ, ಪಶುಪಾಲನೆ ಮತ್ತು ಆಹಾರ ಸಂಗ್ರಹಣೆಯಂತಹ ಮೂಲ ಕಸುಬುಗಳನ್ನು ಇನ್ನೂ ಅವಲಂಬಿಸಿರುವವರು.

ಈ ಗುಂಪಿಗೆ ಸೇರಿದ ಸಮುದಾಯಗಳು ಇನ್ನೂ ಬೇಟೆಯನ್ನು, ಪಶುಪಾಲನೆಯನ್ನು ಮತ್ತು ಆಹಾರ ಸಂಗ್ರಹಣೆಯನ್ನು ನಂಬಿದವರು. ಅಡುವಿ ಚೆಂಚರು, ಯಾನಾದಿಗಳು, ಹಕ್ಕಿಪಿಕ್ಕಿಗಳು ಇನ್ನೂ ಬೇಟೆಯನ್ನೇ ನಂಬಿಕೊಂಡಿದ್ದಾರೆ. ಅಲೆಮಾರಿ ಕುರುಬರು ಪಶುಪಾಲನೆಯನ್ನು, ಗೋಸಂಗಿಗಳು, ಕಿಳ್ಳೆಕ್ಯಾತರು, ಒಳನಾಡ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಇನ್ನೂ ಪಾರಂಪರಿಕ ವೈದ್ಯವನ್ನೇ ನಂಬಿರುವ ರಾಜಗೊಂಡರು ಮತ್ತು ಅಲೆಮಾರಿ ವರ್ತಕರಾಗಿಯೇ ಜೀವಿಸುತ್ತಿರುವ ೨೪ ಮನೆ ತೆಲುಗು ಶೆಟ್ಟರು ಸಹ ಕರ್ನಾಟಕದಲ್ಲಿದ್ದಾರೆ.

ಈ ವಿಂಗಡಣೆಯನ್ನು ನಾವು ಇನ್ನೂ ಸೂಕ್ಷ್ಮವಾಗಿ ಪರಿಶೀಲಿಸಬಹುದಾಗಿದೆ. ಮೇಲೆ ನಾನು ಐದು ಭಾಗದಲ್ಲಿ ಪಟ್ಟಿಮಾಡಿರುವ ಅಲೆಮಾರಿ ಸಮುದಾಯಗಳನ್ನು ಮತ್ತು ಅವುಗಳ ಆರ್ಥಿಕ ಮೂಲಗಳನ್ನು ಗಮನಿಸಿ. ಕೆಲವು ಅಲೆಮಾರಿಗಳ ಕಸುಬುಗಳನ್ನು ಕೈಗಾರಿಕೀಕರಣ ತನ್ನೆಲ್ಲ ಚಮತ್ಕಾರಿಕ ತಂತ್ರಜ್ಞಾನದ ಮೂಲಕ ಬಂಡವಾಳಶಾಹಿಗಳ ಕೈಗೆ ಒಪ್ಪಿಸಿಯಾಗಿದೆ. ಏಕೆಂದರೆ ಇಂಡಿಯಾದ ಅಸಮಾನ ಸಮಾಜದಲ್ಲಿ ಯಾವ ಬಗೆಯ ಆರ್ಥಿಕ ಅಧಿಕಾರಗಳನ್ನು ಹೊಂದದ ಇಲ್ಲಿನ ಕುಶಲಕರ್ಮಿಗಳಿಗೆ ತಮ್ಮ ಪಾರಂಪರಿಕ ಕೌಶಲಗಳನ್ನು ಉದ್ಯಮವಾಗಿಸುವ ಅವಕಾಶಗಳೇ ಇರಲಿಲ್ಲ. ಆಧುನಿಕ ಉದ್ಯಮಗಳು ಸ್ಥಳೀಯ ಕೌಶಲಗಳನ್ನು ಮಾತ್ರ ಅಳವಡಿಸಿಕೊಂಡು, ಅಕೌಶಲಗಳನ್ನು ರೂಪಿಸಿಕೊಂಡು ಬಂದಿದ್ದ ಸಮುದಾಯಗಳನ್ನು ಕೈಬಿಟ್ಟವು. ಇನ್ನು ಪ್ರದರ್ಶಕ ಕಲೆಗಳನ್ನು ನಂಬಿಕೊಂಡು ಬಂದಿದ್ದ ಸಮುದಾಯಗಳ ಕಥೆ ಇನ್ನೂ ಚಿಂತಾಜನಕವಾದದ್ದು. ಆಧುನಿಕ ಮಾಧ್ಯಮಗಳು ತಮ್ಮೆಲ್ಲ ಥಳುಕಗಳಿಂದ ಈ ಪಾರಂಪರಿಕ ಪ್ರದರ್ಶನಕಾರರನ್ನು ಮೂಲೆಗೆ ತಳ್ಳಿದವು. ಪಾರಂಪರಿಕ ಪ್ರದರ್ಶನ ಕಲೆಗಳಿಗೆ, ಆಧುನಿಕ ಮಾಧ್ಯಮಗಳು ಹಂಚುವ ರೋಮಾಂಚನಗಳನ್ನು ನೀಡಲು ಸಾಧ್ಯವಾಗಲೇ ಇಲ್ಲ. ಇನ್ನು ಇಲ್ಲಿನ ಊಳಿಗಮಾನ್ಯ ವ್ಯವಸ್ಥೆಯ ಭಾಗವಾಗಿ ತಮ್ಮ ವೃತ್ತಿಗಳಲ್ಲಿ ತೊಡಗಿದ್ದ ಹೆಳವರನ್ನು, ದಕ್ಕಲರನ್ನು ಸಾಕುವಷ್ಟು ಶಕ್ತಿಯನ್ನು ಊಳಿಗಮಾನ್ಯ ಪ್ರಭುಗಳು ಹಂತಹಂತವಾಗಿ ಕಳೆದುಕೊಳ್ಳುತ್ತಾ ಬಂದರು. ಇನ್ನೂ ಮುಖ್ಯವಾದ ಸಂಗತಿಯೆಂದರೆ, ಉಚಲ್ಯಾದಂತಹ ಸಮುದಾಯಗಳು ತಮಗೆ ಶಾಪದಂತೆ ಅಂಟಿಕೊಂಡು ಬಂದಿದ್ದ ತಮ್ಮ ಕಸುಬುಗಳನ್ನು ತಾವೇ ಬಿಟ್ಟುಕೊಡಲು ಸಿದ್ಧವಾದವು. ಮಲ ಹೊರುವ, ಆ ಕಾರಣಕ್ಕಾಗಿಯೇ ಅಸ್ಪೃಶ್ಯರಾಗಿಯೇ ಉಳಿವ ಸಮುದಾಯಗಳು ಹೇಗೆ ತಾನೇ ತಮ್ಮ ಮೂಲವೃತ್ತಿಗಳಲ್ಲಿ ಉಳಿಯಲು ಸಾಧ್ಯ? ಒಟ್ಟಿನಲ್ಲಿ ಇಲ್ಲಿನ ಸಮುದಾಯಗಳು ಬದಲಾದ ಸಂದರ್ಭಗಳಲ್ಲೆಲ್ಲ ತಮ್ಮ ತಮ್ಮ ಪಾರಂಪರಿಕ ಆರ್ಥಿಕ ಮೂಲಗಳನ್ನು ಉಳಿಸಿಕೊಳ್ಳುವ ಇಲ್ಲವೆ ಬಿಟ್ಟು ಕೊಡುವ ಸಂದಿಗ್ಧಗಳಿಗೆ ಮುಖಾಮುಖಿಯಾಗುತ್ತಲೇ ಬಂದಿವೆ. ಹೀಗಾಗಿ ಅಲೆಮಾರಿಗಳು ಚರಿತ್ರೆಯ ಉದ್ದಕ್ಕೂ ಅತ್ಯಂತ ಅನಿಶ್ಚಿತ ಆರ್ಥಿಕ ಮೂಲಗಳನ್ನೇ ನಂಬಿಕೊಂಡು ಬಂದಿದ್ದಾರೆ.

ದುರ್ಗಮ ಹಾದಿಯ ಪಥಿಕರು

ಈವತ್ತು ಅಲೆಮಾರಿಗಳೆಂದು ಕರೆಸಿಕೊಳ್ಳುವ ಬಹುತೇಕ ಎಲ್ಲ ಸಮುದಾಯಗಳಿಗೆ ಅವುಗಳ ಚರಿತ್ರೆಯಲ್ಲಿ ನಿಶ್ಚಿತ ಆದಾಯವನ್ನು ತಂದುಕೊಡುವ ಸ್ಥಿರಾಸ್ತಿಗಳಿರಲಿಲ್ಲ. ಆರ್ಥಿಕವಾಗಿ ಅಲೆಮಾರಿಗಳು ಉತ್ಪಾದಕ ಸಮುದಾಯಗಳನ್ನು ಅವಲಂಬಿಸಲೇಬೇಕಿತ್ತು. ಭಾರತದ ಸಮುದಾಯಗಳ ಮೂಲ ಕಸುಬಾದ ಕೃಷಿಯನ್ನು ಇವರು ಕೈಗೊಳ್ಳುವ ಯಾವ ಪಾರಂಪರಿಕ ಸಿದ್ಧತೆಗಳೂ ಇಲ್ಲದ ಕಾರಣಕ್ಕಾಗಿ ಅವರು ಕೃಷಿಕರಾಗುವ ಸಾಧ್ಯತೆಗಳಿರಲಿಲ್ಲ. ದತ್ತಿಯ ಮೂಲಕ ಬಂದ ಜಮೀನನ್ನು ಅವರು ಉಳುಮೆ ಮಾಡಲಿಲ್ಲ. ಡೊಂಬರ ಸಮುದಾಯದಿಂದ ಪ್ರತ್ಯೇಕಗೊಂಡು, ಇನ್ನೂ ಅಲೆಮಾರಿಗಳಾಗಿರುವ ಮತ್ತು ಬೀದಿ ಬದಿಯ ಕಸರತ್ತುಗಳನ್ನೇ ಅವಲಂಬಿಸಿರುವ ಜಾತಿಗಾರರು ಈವತ್ತು ಇದೇ ಸಮಸ್ಯೆಯಿಂದ ಚಡಪಡಿಸುತ್ತಿದ್ದಾರೆ. ಯಾವುದೋ ಹಂತದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಡೊಂಬರೇ ಜಾತಿಗಾರರಾಗಿ ರೂಪಗೊಂಡಿದ್ದಾರೆ. ಅವರು ಸಾಹಸಗಳನ್ನು, ಕಸರತ್ತುಗಳನ್ನು ತಮ್ಮ ವೃತ್ತಿಯನ್ನಾಗಿಸಿಕೊಂಡವರು. ಇವರಿಗೆ ದಾನವಾಗಿ ಕೃಷಿ ಜಮೀನು ಸಿಕ್ಕರೂ ಅವರು ಕೃಷಿಕರಾಗಲಿಲ್ಲ. ಮಧ್ಯಕಾಲದ ಆರ್ಥಿಕ ವ್ಯವಸ್ಥೆಯೇ ಅವರನ್ನು ತಮ್ಮ ಮೂಲ ವೃತ್ತಿಯಲ್ಲೇ ಮುಂದುವರಿಯುವಂತೆ ಪ್ರೇರೇಪಿಸಿದಂತಿದೆ. ಭೂಮಿ ಸಿಕ್ಕರೂ ಅವರು ಕೃಷಿಕರಾಗಿಲ್ಲ. “ಮುಧೋಳ್ ತಾಲೂಕಿನ ಮಂಟೂರು, ಜಮಖಂಡಿ ತಾಲೂಕಿನ ಸಾವಳಗಿ, ಗೋಠೆ, ಗದ್ಯಾಳ ಮುಂತಾದ ಹಲವು ಕಡೆ ತಮ್ಮ ಜಾತಿಯಲ್ಲಿಯ ಶ್ರೇಷ್ಠರಾದ ಹಿರಿಯರಿಗೆ ಇನಾಮಾಗಿ ದೊರೆತ ಭೂಮಿಗಳಿರುವುದಾಗಿ ಈ ಜಾತಿಗಾರರಲ್ಲಿಯ ವಯೋವೃದ್ಧರು ಅತ್ಯಂತ ಅಭಿಮಾನದಿಂದ ಹೇಳುತ್ತಾರೆ. ಹೀಗೆ ಇನಾಮು ದೊರೆತ ಜಮೀನುಗಳು ಹೆಚ್ಚಾಗಿ ವಿಜಾಪುರ ಜಿಲ್ಲೆಯಲ್ಲಿಯೇ ಇರುವುದು ಗಮನಾರ್ಹ ಸಂಗತಿಯಾಗಿದೆ. ಆದರೆ ಇಂಥ ಬಹುಪಾಲು ಜಮೀನುಗಳು ಇಂದು ಅವರ ಕೈಯಲ್ಲಿ ಉಳಿದಿಲ್ಲ. ಕೆಲವನ್ನು ಇವರು ಎಂದೋ ಮಾರಿಕೊಂಡಿದ್ದಾರೆ.ಇನ್ನು ಕೆಲವು ಜಮೀನುಗಳು ರೈತರಿಗೆ ದಕ್ಕಿಹೋಗಿವೆ. ಏಕೆಂದರೆ ಜಮೀನುಗಳನ್ನು ಇನಾಮಾಗಿ ಪಡೆದ ಮೇಲೆಯೂ ಇವರಾರೂ ಸಾಮಾನ್ಯವಾಗಿ ಒಕ್ಕಲುತನ ವೃತ್ತಿಗಿಳಿದಿಲ್ಲ. ಮತ್ತು ಆ ಊರುಗಳಲ್ಲಿ ಇವರು ಶಾಶ್ವತವಾಗಿ ನೆಲೆಸಿಯೂ ಇಲ್ಲ. ತಮ್ಮ ಕಸರತ್ತು ಮತ್ತು ಸೋಗುಗಳನ್ನು ಪ್ರದರ್ಶಿಸುತ್ತ ಊರಿಂದೂರಿಗೆ ಅಲೆದಾಡುವ ವೃತ್ತಿಯನ್ನೇ ಜಾತಿಗಾರರು ಒಗ್ಗಿಸಿ ಕೊಂಡಿದ್ದಾರೆ”[10] ಹೀಗಾಗಿ ಇಂತಹ ಅಲೆಮಾರಿಗಳಿಗೆ ಭೂಮಿ ದಕ್ಕಿದರೂ ಅವರಿಗೆ ಅದು ಆರ್ಥಿಕ ಮೂಲವಾಗಲಿಲ್ಲ. ಅಲ್ಲದೆ “ಕೃಷಿ ಪೂರಕ ಚಟುವಟಿಕೆಗಳನ್ನು ಅವಲಂಬಿಸಿದ್ದ ಕರಕುಶಲ ಕರ್ಮಿಗಳಿಗೆ ಮತ್ತು ಮನರಂಜಕ ಸಮುದಾಯಗಳಿಗೆ ಕೊಡುತ್ತಿದ್ದ ಕೃಷಿ ಭೂಮಿಯು ಸ್ಥಳೀಯ ಭೂಮಾಲಿಕನ ವಿವೇಚನೆಗೆ ಒಳಪಡುತ್ತಿತ್ತು ಮತ್ತು ಅದು ಭೂಮಾಲಿಕ ವ್ಯವಸ್ಥೆಯ ಎಲ್ಲ ಕಾನೂನುಗಳಿಗೂ ಬದ್ಧವಾಗಿರುತ್ತಿತ್ತು. ಅಲ್ಲದೆ ನಿಯಮಕ್ಕೊಳಪಟ್ಟ ಗ್ರಾಮದ ಒಟ್ಟು ಉತ್ಪಾದನಾ ಚಟುವಟಿಕೆಗಳ ಭಾಗವಾಗಿ ಈ ದಾನದ ಪ್ರಕ್ರಿಯೆ ಜಾರಿಯಲ್ಲಿರುತ್ತಿತ್ತು. ಭೂಮಾಲಿಕ ಇಚ್ಛೆಪಡದ ಸಂದರ್ಭದಲ್ಲಿ ಈ ದಾನದ ಜಮೀನು ಬೇರೆಯವರಿಗೆ ಸಂದಾಯವಾಗುತ್ತಿತ್ತು, ಇಲ್ಲವೆ ರದ್ದಾಗತ್ತಿತ್ತು.”[11] ಮಧ್ಯಕಾಲದ ಭೂಮಾಲಿಕ ವ್ಯವಸ್ಥೆಯು, ಭೂಮಿಯನ್ನು ಮತ್ತು ಕೃಷಿಕ ಸಮುದಾಯಗಳ ಒಟ್ಟು ವ್ಯವಸಾಯೀ ಚಟುವಟಿಕೆಗಳನ್ನು, ಅಂದಿನ ಮೊಘಲ್ ಆಡಳಿತ ರೂಪಿಸಿದ್ದ ಭೂನಿಯಮಗಳನ್ನು ವಿಕೃತಗೊಳಿಸಿಕೊಂಡು ನಿಯಂತ್ರಿಸುತ್ತಿತ್ತು. ಹೀಗೆ ಈ ಬಗೆಯ ಸಮುದಾಯಗಳಿಗೆ ನೀಡುತ್ತಿದ್ದ ದಾನದ ಜಮೀನು ಸಹ ಅನೇಕ ರೀತಿಯ ನಿಯಮಗಳಿಗೆ ಬದ್ಧವಾಗಿರಬೇಕಿತ್ತು.

“ಎರಡು ಬಗೆಯಲ್ಲಿ ಭೂಮಿಯನ್ನು ದಾನ ಮಾಡಲಾಗುತ್ತಿತ್ತು. ಒಂದನೆಯದು ಒಂದು ಗ್ರಾಮದ ಒಟ್ಟು ಕೃಷಿ ಉತ್ಪಾದನೆಯಲ್ಲಿ ಸಹಾಯಕರಾಗಿರುತ್ತಿದ್ದ ಭೂರಹಿತ ಸಮುದಾಯಗಳಿಗೆ ಕೃಷಿ ಭೂಮಿಯನ್ನು ದಾನ ಮಾಡಲಾಗುತ್ತಿತ್ತು. ಎರಡನೆಯದು, ದತ್ತಿದಾನವಾಗಿತ್ತು. ಈ ದತ್ತಿ ಭೂಮಿಯನ್ನು ಪುರೋಹಿತರಿಗೆ, ಮಠಗಳಿಗೆ ಕೊಡಲಾಗುತ್ತಿತ್ತು. ಇಂತಹದನ್ನು ಇನಾಮು ಭೂಮಿ ಎಂದು ಕರೆಯಲಾಗುತ್ತದೆ. ಆದರೆ ಈ ಎರಡು ಭೂದಾನಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಮೊದಲನೆಯ ಭೂದಾನದಲ್ಲಿ, ಕೃಷಿಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಸಮುದಾಯಗಳಿಗೆ ಮತ್ತು ವೈದ್ಯರಿಗೆ, ಪ್ರದರ್ಶಕ ಕಲೆಗಳನ್ನು ಅವಲಂಬಿಸಿದವರಿಗೆ, ಉದಾ. ಡೊಂಬರಂತಹ ಸಮುದಾಯಗಳಿಗೆ ಕೊಡುವ ದಾನವು ಪಾರಂಪರಿಕವಾಗಿ ‘ಶ್ರಮವನ್ನು ತೆಗೆದುಕೊಳ್ಳುವ ಮತ್ತು ಕೊಡುವ’ ಪ್ರಕ್ರಿಯೆಯನ್ನು ಅವಲಂಬಿಸಿರುತ್ತದೆ. ಅಂದರೆ ಇಡೀ ಗ್ರಾಮದ ಉತ್ಪಾದನೆಯಲ್ಲಿ ಪೂರಕ ಕೆಲಸಗಳನ್ನು ನಿರ್ವಹಿಸುವ ಸಮುದಾಯಗಳಿಗೆ ಕೊಡಲೇ ಬೇಕಾದ ದಾನವಾಗಿರುತ್ತದೆ. ಆದರೆ ಹಳ್ಳಿಯ ಮುಖ್ಯಸ್ಥ ಅಥವಾ ಅಧಿಕಾರಿ ವರ್ಗ ಈ ಜಮೀನುಗಳನ್ನು ಕೆಲವು ಶರತ್ತುಗಳ ಮೇಲೆಯೇ ದಾನ ಮಾಡಿರುತ್ತದೆ. ಶರತ್ತುಗಳು ಉಲ್ಲಂಘನೆಯಾದಾಗ ಸಹಜವಾಗಿಯೇ ಅಧಿಕಾರಿ ವರ್ಗ ತನ್ನ ನಿಯಮದ ಪ್ರಕಾರ ದಾನ ಮಾಡಿದ ಜಮೀನನ್ನು ಮರುವಶಪಡಿಸಿಕೊಳ್ಳುವ ಅಧಿಕಾರವನ್ನೂ ಪಡೆದುಕೊಂಡಿತ್ತು”[12] ಹೀಗೆ ದಾನವಾಗಿ ಬಂದ ಕೃಷಿ ಭೂಮಿಯಿಂದಸಹ ಈ ಸಮುದಾಯಗಳಿಗೆ ನಿಶ್ಚಿತ ಆದಾಯ ಬರುವ ಭರವಸೆಯೇನೂ ಇರಲಿಲ್ಲ. ಈ ಜಮೀನುಗಳು ಮೇಲು ನೋಟಕ್ಕೆ ತೆರಿಗೆ ಮುಕ್ತ ಅಥವಾ ಕಂದಾಯ ರಹಿತ ಜಮೀನುಗಳಾಗಿದ್ದರೂ, ಅದರ ಎಲ್ಲ ಅನುಕೂಲಗಳನ್ನೂ ಅನುಭವಿಸುತ್ತಿದ್ದವರು ಮಾತ್ರ ಸ್ಥಳೀಯ ಭೂಮಾಲಿಕ ವರ್ಗವೇ ಆಗಿರುತ್ತಿತ್ತು. “ಹೀಗೆ ತೆರಿಗೆ ಮುಕ್ತವಾಗಿ ಸಿಕ್ಕ ಕೃಷಿ ಭೂಮಿಯನ್ನು ಈ ಕುಶಲಕರ್ಮಿ ಮತ್ತು ಮನರಂಜಕ ವರ್ಗಗಳು ಉಳುಮೆ ಮಾಡುತ್ತಿರಲಿಲ್ಲ. ಬದಲಿಗೆ ಇಡೀ ಹಳ್ಳಿ ಆ ಜಮೀನುಗಳ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಮತ್ತು ಸುಗ್ಗಿಯ ಸಂದರ್ಭದಲ್ಲಿ ಕುಶಲಕರ್ಮಿಗಳಿಗೆ ಇಂತಿಷ್ಟು ಎಂದು ಪಾಲನ್ನು ನೀಡಲಾಗುತ್ತಿತ್ತು. ಆದರೆ ಪಾಲು ಅಥವಾ ಆಯ ಪಡೆಯುತ್ತಿದ್ದ ಈ ಅವಲಂಬಿತ ಸಮುದಾಯಗಳಲ್ಲೂ ಸಮಾನತೆ ಇರಲಿಲ್ಲ. ಇವರು ತಮ್ಮ ಗ್ರಾಮದ ಕೃಷಿಕರ ಕೃಪಾಕಟಾಕ್ಷಕ್ಕೆ ಒಳಗಾಗಿಯೇ ಬದುಕಬೇಕಿತ್ತು. ಅಲ್ಲದೆ ಗ್ರಾಮದ ಮುಖ್ಯಸ್ಥ ಮೇಲ್ಜಾತಿಯವನೇ ಆಗಿದ್ದರಿಂದಾಗಿ ಈ ಕೆಳಜಾತಿಯ ಜನ, ಭೂಮಾಲಿಕನಿಂದ ಸತತ ಶೋಷಣೆಗೆ ಒಳಗಾಗಲೇ ಬೇಕಿತ್ತು.”[13] ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಈ ಸಮುದಾಯಗಳು ಆರ್ಥಿಕವಾಗಿ ಪರಾವಲಂಬಿಗಳಾಗಿಯೇ ಇರಬೇಕಿತ್ತು. ಭೂಮಿ ಸಿಕ್ಕರೂ ಅವರು ಅದರ ಒಡೆಯರಾಗುವ ಅವಕಾಶವಿರಲಿಲ್ಲ. “ಕರ್ನಾಟಕದ ಯಾವ ಶಾಸನದಲ್ಲಾಗಲಿ, ಸಾಹಿತ್ಯ ಕೃತಿಯಲ್ಲಾಗಲಿ ಹೊಲೆಯರು ಭೂಮಿಗೆ ಒಡೆಯರಾಗಿದ್ದರೆಂಬು ದಕ್ಕೆ ಯಾವುದೇ ಸೂಚನೆ ಇಲ್ಲ. ವೃತ್ತಿಯಾಗಿ ವ್ಯವಸಾಯ ಅವರಿಗೆ ನಿಷಿದ್ಧ”[14] ಈ ಬಗೆಯ ನಿಷೇಧಕ್ಕೂ ಹಿಂದೂ ಧರ್ಮಶಾಸ್ತ್ರ ಗ್ರಂಥಗಳು ಹೇಳುವ ಇಂಡಿಯಾದ ಸಾಮಾಜಿಕ ಕಾನೂನುಗಳಿಗೆ ನೇರ ಸಂಬಂಧವಿದೆ. ಕುಶಲಕರ್ಮಿ ಮತ್ತು ಪ್ರದರ್ಶಕ ಕಲೆಗಳನ್ನು ನಂಬಿದ್ದ ಸಮುದಾಯಗಳು ಯಾವತ್ತೂ ಜಾತಿ ಶ್ರೇಣೀಕರಣದ ಅಂಚಿನ ಸಮುದಾಯಗಳಾಗಿಯೇ ಇದ್ದವು. “ಇವರಿಗೆ ಗ್ರಾಮದ ಹೊರಗೆ ಮನೆಗಳನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿತ್ತು ಮತ್ತು ಇವರಿಗೆ ಕೊಡುವ ದಾನದ ಕೃಷಿ ಜಮೀನು ಸಹ ಉತ್ಕೃಷ್ಟವಾಗೇನು ಇರುತ್ತಿರಲಿಲ್ಲ. ಜೊತೆಗೆ ಈ ಜಮೀನಿನ ಮೇಲೆ ಅವರಿಗೆ ಒಡೆತನವೂ ಇರದ ಕಾರಣ, ಕೃಷಿಕರೇ ಆ ಜಮೀನನ್ನು ಉತ್ತು ಸುಗ್ಗಿಯ ಸಂದರ್ಭದಲ್ಲಿ ಇಂತಿಷ್ಟು ಎಂದು ಪಾಲು ಕೊಡುತ್ತಿದ್ದರು”[15] ಈ ಕಾರಣದಿಂದಾಗಿ ಕುಶಲಕರ್ಮಿ ಮತ್ತು ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳ ಆರ್ಥಿಕ ಸ್ಥಿತಿಗತಿಗಳನ್ನು ಇಂಡಿಯಾದ ಪಾರಂಪರಿಕ ಸಮಾಜದ ನಿಯಮಗಳ ಆಚೆಗಿಟ್ಟು ನೋಡಲಾಗುವುದಿಲ್ಲ. “ಈ ಸಮುದಾಯಗಳು ಹಳ್ಳಿಗಳಿಗೆ ಸಲ್ಲಿಸುತ್ತಿದ್ದ ಸೇವೆಯನ್ನು ಭೂಮಾಲಿಕ ವರ್ಗವು ಗುತ್ತಿಗೆ ಆಳಿನ ಸೇವೆಯನ್ನು ಪಡೆದಂತೆಯೇ ಪಡೆಯುತ್ತಿತ್ತು”[16] ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಪ್ರತಿಯಾಗಿ ನಿಯಮಬದ್ಧ ದಾನಗಳನ್ನು ಮಾತ್ರ ಪಡೆಯಲು ಈ ಸಮುದಾಯಗಳಿಗೆ ಸಾಧ್ಯವಿತ್ತು. ಶ್ರೇಣೀಕರಣದ ಕೊನೆಯಲ್ಲಿರುವ ಜನ ಮೇಲ್ಜಾತಿಗಳ ಸೇವೆಯನ್ನು ಮಾಡಲೆಂದೇ ಹುಟ್ಟಿದ್ದಾರೆ ಎಂದು ಹೇಳುವ ಹಿಂದೂ ಕರ್ಮಸಿದ್ಧಾಂತಕ್ಕೆ ಮೇಲಿನ ನಿಯಮ ಪೂರಕವಾಗಿಯೇ ಇದೆ. ಮಧ್ಯಕಾಲೀನ ಭೂಮಾಲಿಕ ವ್ಯವಸ್ಥೆ ತನ್ನನ್ನು ಸಮರ್ಥಿಸಿಕೊಳ್ಳಲು ಪರಂಪರೆಯಲ್ಲಿನ ಪುರಾವೆಗಳನ್ನೇ ಬಳಸಿಕೊಂಡಿತ್ತು. ಆದ್ದರಿಂದ “ಜಾತಿವ್ಯವಸ್ಥೆಯನ್ನು ಬದಿಗಿಟ್ಟು ಭೂಮಾಲಿಕ ವ್ಯವಸ್ಥೆಯನ್ನು ನೋಡಲು ಸಾಧ್ಯವಿಲ್ಲ. ಭೂಮಾಲಿಕತ್ವವು ಭಾರತದ ಶ್ರೇಣೀಕರಣದ ಅವಿಭಾಜ್ಯ ಅಂಗ”[17] ಈ ಕಾರಣಕ್ಕಾಗಿ ಸೇವೆಯನ್ನು ಒದಗಿಸುವ ಈ ಸಮುದಾಯಗಳು ಆರ್ಥಿಕವಾಗಿ ಪರಾವಲಂಬಿಗಳಾಗುವ ಅನಿವಾರ್ಯತೆಯನ್ನು ಭೂಮಾಲಿಕ ಪ್ರಧಾನ ಸಮಾಜ ಸೃಷ್ಟಿಸಿಬಿಟ್ಟಿತ್ತು.

ಮಧ್ಯಕಾಲೀನ ಭಕ್ತಿ ಚಳುವಳಿಗಳು ಮತ್ತು ಸಮಾಜ ಸುಧಾರಕ ಪಂಥಗಳು ಈಬಗೆಯ ಸಮುದಾಯಗಳ ಸಬಲೀಕರಣಕ್ಕೆ ಯತ್ನಿಸಿದವಾದರೂ, ಅಂತಹ ದೊಡ್ಡ ಯಶಸ್ಸನ್ನು ಅವು ಕಾಣಲಾಗಲಿಲ್ಲ. ಕಾರಣ ಈ ಚಳುವಳಿಗಳಿಗೆ ಸ್ಪಷ್ಟ ರಾಜಕೀಯ ಸಿದ್ಧಾಂತದ ತಳಹದಿಯ ಕೊರತೆ ಇತ್ತು. ಕೆಳಜಾತಿ ಸಮುದಾಯಗಳ ಬಡತನವನ್ನೇ ಅವು ವೈಭವೀಕರಿಸಿ, ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದವು. ಆದರೆ ಸಾಮಾಜಿಕ ಸ್ಥಾನಮಾನಗಳನ್ನು ಉನ್ನತೀಕರಿಸುವ ಆರ್ಥಿಕತೆಯ ಕುರಿತು ಈ ಚಳುವಳಿಗಳು ಅಷ್ಟಾಗಿ ಗಮನಹರಿಸಲಿಲ್ಲ. ಇದ್ದ ವ್ಯವಸ್ಥೆಯಲ್ಲಿಯೇ ಸುಧಾರಣೆ ತರುವುದು ಈ ಚಳುವಳಿಗಳ ಮುಖ್ಯ ಉದ್ದೇಶವಾಗಿತ್ತು. ಈ ಚಳುವಳಿಗಳು “ಸಾಮಾಜಿಕ ಅಸಮಾನತೆಯನ್ನು ಖಂಡಿಸಿದಂತೆ ಆರ್ಥಿಕ ಅಸಮಾನತೆಯನ್ನು ಖಂಡಿಸಲಿಲ್ಲ. ಟೀಕೆ ಆಕ್ರೊಶ, ಕ್ರೋಧಗಳಿಗೆ ಬ್ರಾಹ್ಮಣ ಗುರಿಯಾದಂತೆ ವೈಶ್ಯನೋ ಬಣಜಿಗನೋ ಅಧಿಕಾರಿಯೋ ರಾಜನೋ ಗುರಿಯಾಗಲಿಲ್ಲ. ಅದಕ್ಕೆ ಅಂದಿನ ಚಳುವಳಿಯ ಚೌಕಟ್ಟಿನ ಮಿತಿ ಕಾರಣ”[18] ಇದರಿಂದಾಗಿ ಕೆಳಜಾತಿ ಮತ್ತು ಕರಕಶಲ ಕರ್ಮಿ ಸಮುದಾಯಗಳಿಗೆ ಒಂದು ಬಗೆಯಲ್ಲಿ ಅತ್ಮಪ್ರತ್ಯಯವನ್ನು ತರುವ ಪ್ರಯತ್ನ ಈ ಚಳುವಳಿಗಳಿಂದ ನಡೆಯಿತೇ ಹೊರತು, ಆರ್ಥಿಕ ಸಮಾನತೆಯು ಸಂಘರ್ಷದಿಂದ ಲಭಿಸುತ್ತದೆ. ಆದರೆ ಭಕ್ತಿ ಚಳುವಳಿಗಳು ಅತ್ಯಂತ ಸಾತ್ವಿಕ ನೆಲೆಯಲ್ಲಿ ಸಮಾಜ ಸುಧಾರಣೆಗೆ ಪ್ರಯತ್ನಿಸಿದವು. ಇದರಿಂದಾಗಿ ಮಧ್ಯಕಾಲದಲ್ಲಿ ಕೆಳಜಾತಿಗಳು ಮತ್ತು ಆರ್ಥಿಕವಾಗಿ ಭೂಮಾಲಿಕತ್ವವನ್ನು ಅವಲಂಬಿಸಿದ್ದ ಸಮುದಾಯಗಳು “ತಮ್ಮ ಪಾರಂಪರಿಕ ಉದ್ಯೋಗಗಳನ್ನು ಕೈಬಿಡಲು ಅವರಿಗೆ ಆ ದಿನಗಳಲ್ಲಿ ಅವಕಾಶವಿರಲಿಲ್ಲ”[19] ಹೀಗಾಗಿ ಮಧ್ಯಕಾಲೀನ ಭಾರತದಲ್ಲಿ ಇಂತಹ ಸಮುದಾಯಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಸಾಧ್ಯತೆಗಳಿರಲಿಲ್ಲ. ಒಂದೆಡೆ ಹುಟ್ಟಿನ ಕಾರಣಕ್ಕಾಗಿ ಹೇರಲ್ಪಟ್ಟ ಕೆಳಜಾತಿಯ ಸ್ಥಾನಮಾನ ಮತ್ತು ಅದೇ ಕಾರಣಕ್ಕೆ ಅವಲಂಬಿಸಿದ ವೃತ್ತಿಯಿಂದಾಗಿ ಪ್ರಾಪ್ತವಾಗಿದ್ದ ಆರ್ಥಿಕ ಪರಾವಲಂಬಿತನಗಳು ಈ ಸಮುದಾಯಗಳಿಗೆ ಸ್ಥಿರತೆಯನ್ನು ತರುವುದು ಸಾಧ್ಯವಿರಲಿಲ್ಲ.

“ವೃತ್ತಿಗಾಯಕರು ಮತ್ತು ಪ್ರದರ್ಶಕ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳು ಸಾಮಂತಶಾಹಿ ಮತ್ತು ರಾಜಶಾಹಿಯನ್ನು ಅವಲಂಬಿಸಿಯೇ ಬದುಕಬೇಕಿತ್ತು. ಅವರ ದತ್ತಿ, ದಾನಗಳನ್ನು ಸದಾ ನಿರೀಕ್ಷಿಸುತ್ತಲೇ ಇರಬೇಕಿತ್ತು. ಶ್ರೀಮಂತರು, ಭೂಮಾಲಿಕರು ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಕಲಾವಿದರನ್ನು ಕರೆಸಿ ಹಾಡಿಸಿ ಕುಣಿಸಿ ಆನಂದಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಜೊತೆಗೆ ಹಳ್ಳಿಗರು ‘ಆಯ’ಕೊಟ್ಟು ಇವರನ್ನು ಪೋಷಿಸುತ್ತಿದ್ದರು. ಇಂತಹ ಅವಕಾಶಗಳನ್ನು ಈ ಸಮುದಾಯಗಳು ಎದುರು ನೋಡುತ್ತಾ ಬದುಕಬೇಕಿತ್ತು. ವೃತ್ತಿ ಸಂಗೀತಗಾರರು, ವೇಷಗಾರರು, ಕಸರತ್ತುಗಳನ್ನು ಮಾಡುವರು, ಡೊಂಬರಾಟದವರು ತಮ್ಮ ಸುತ್ತಲ ಜನಸಮುದಾಯಗಳನ್ನು ರಂಜಿಸುತ್ತಲೇ ಬದುಕಿ ಬಂದರು. ಅವರಿಗೆ ರಾಜ ಇಲ್ಲವೆ ಭೂಮಾಲಿಕರಿಂದ ಊಳಿಗ ಮತ್ತು ದತ್ತಿಗಳು ಅಲ್ಪಸ್ವಲ್ಪವಾದರೂ ದಕ್ಕುತ್ತಿದ್ದವು. ಆದರೆ ಯಾವತ್ತೂ ಭೂಮಿ ಮುಖ್ಯ ಆರ್ಥಿಕ ಮೂಲವಾಗಿ ಪರಿಗಣಿತವಾಯಿತೋ ಅಂದಿನಿಂದ ಈ ಅವಲಂಬಿತ ‘ಅನುತ್ಪಾದಕ’ ಸಮುದಾಯಗಳು ಆರ್ಥಿಕವಾಗಿ ಕುಸಿದು ಹೋದವು. ನಿಶ್ಚಿತ ಆರ್ಥಿಕ ಮೂಲಗಳನ್ನು ಹುಡುಕಿಕೊಂಡು ಹೋಗುವುದು ಈ ಸಮುದಾಯಗಳಿಗೆ ಅನಿವಾರ್ಯವೂ ಆಯಿತು”[20] ಈ ಕಾರಣದಿಂದಾಗಿ ಇಂಡಿಯಾದ ಮಧ್ಯಕಾಲೀನ ಚರಿತ್ರೆ ಯುದ್ದಕ್ಕೂ ಅಲೆಮಾರಿಗಳು ಆರ್ಥಿಕವಾಗಿ ಪರಾವಲಂಬಿಗಳಾಗಿಯೂ ಮತ್ತು ಸಮಾಜದ ಒಟ್ಟು ಉತ್ಪಾದನಾ ವ್ಯವಸ್ಥೆಯಲ್ಲಿ ‘ಅನುತ್ಪಾದಕ’ ಗುಂಪುಗಳಾಗಿಯೂ ಬದುಕಿ ಬಂದವು. ಇವರ ಪಾರಂಪರಿಕ ವೃತ್ತಿಗಳು ಆಳುವ ವರ್ಗವನ್ನು ಆರ್ಥಿಕವಾಗಿ ಅವಲಂಬಿಸಲೇಬೇಕಿತ್ತು. ಆಳುವ ವರ್ಗಗಳ ದತ್ತಿ, ದಾನಗಳನ್ನು, ಊಳಿಗವನ್ನು ನಿರೀಕ್ಷಿಸಲೇ ಬೇಕಿತ್ತು. ಈ ಕಾರಣದಿಂದಾಗಿ ಮಧ್ಯಕಾಲೀನ ಭಾರತದ ಕಾಲಘಟ್ಟದಲ್ಲಿ ಕರಕುಶಲ ಕರ್ಮಿಗಳು ಮತ್ತು ಪ್ರದರ್ಶಕ ಕಲೆಗಳನ್ನು ನಂಬಿದ್ದ ಸಮುದಾಯಗಳು ನಿಶ್ಚಿತ ಆರ್ಥಿಕ ಮೂಲಗಳನ್ನು ಹುಡುಕಿಕೊಂಡು ವಲಸೆ ಹೋಗುವುದು ಅನಿವಾರ್ಯವಾಯಿತು. ಏಕೆಂದರೆ ಅಲೆಮಾರಿಗಳೆಂದು ನಾವು ಈಗ ಪಟ್ಟಿ ಮಾಡಿರುವ ಸಮುದಾಯಗಳು ಆಳುವ ವರ್ಗದ ಕೆಲವು ಅನಿಶ್ಚಿತ ಆರ್ಥಿಕ ಕೊಡುಗೆಗಳನ್ನೇ ನಂಬಿಕೊಂಡು ಬಂದಿರುವುದನ್ನು ನಾವೀಗಾಗಲೇ ನೋಡಿದ್ದೇವೆ. ರಾಜರ ದತ್ತಿಗಳನ್ನು, ಇನಾಮು ಭೂಮಿಗಳನ್ನು ನಂಬಿಕೊಂಡು ಬಂದ ಈ ಸಮುದಾಯಗಳು ಭಾರತದ ಮಧ್ಯಕಾಲೀನ ಆರ್ಥಿಕ ಚಟುವಟಿಕೆಗಳಿಂದ ತಲ್ಲಣಗೊಂಡವು. ಮೊಘಲ್ ಆಡಳಿತಾವಧಿಯಲ್ಲಿ ರೂಪಗೊಂಡ ಭೂಮಿಗೆ ಸಂಬಂಧಿಸಿದ ಕಾನೂನುಗಳು ಈ ಸಮುದಾಯಗಳ ಪಾರಂಪರಿಕ ಹಕ್ಕುಗಳನ್ನು ಇಲ್ಲವಾಗಿಸಿದವು. ಈ ಕುರಿತು ಖ್ಯಾತ ಇತಿಹಾಸಕಾರರಾದ ಇರ್ಫಾನ್ ಹಬೀಬರ ಮತ್ತು ರಷ್ಯಾದ ಲೇಖಕ ಮಿದವೊಯ್‌ರವರ ಬರಹಗಳನ್ನು ಪರಿಶೀಲಿಸಬಹುದಾಗಿದೆ. “ಮಧ್ಯಕಾಲೀನ ಮೊಘಲ್ ಆಳ್ವಿಕೆಯ ಸಂದರ್ಭದಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಕೃಷಿ, ಒಟ್ಟು ರಾಜ್ಯದ ರಾಜ್ಯದಾಯವನ್ನು ನಿರ್ಣಯಿಸುವ ಉದ್ಯಮವಾಗತೊಡಗಿದ ಮೇಲೆ, ಕೃಷಿಗೆ ವಿಶೇಷ ಮಹತ್ವ ಒದಗತೊಡಗಿತು. ಅಲ್ಲದೆ ಹೆಚ್ಚಿನ ಭೂಮಿ ಕೃಷಿಗೆ ಒಳಪಟ್ಟಿತು.”[21] ಅಲ್ಲದೆ ಕೃಷಿ ಭೂಮಿಗೆ ಸಂಬಂಧಿಸಿದ ಮತ್ತು ಭೂಕಂದಾಯಕ್ಕೆ ಸಂಬಂಧಿಸಿದ ಕಾನೂನುಗಳು ರೂಪಗೊಂಡವು. ಮೊಘಲರ ಜಮೀನ್ದಾರಿ ಪದ್ಧತಿ ಮೊದಲ ಬಾರಿಗೆ ಭೂಮಿಯನ್ನು ಖಾಸಗಿ ಆಸ್ತಿಯನ್ನಾಗಿ ಪರಿಗಣಿಸಿತು. ರೈತರು ಕೇವಲ ಗೇಣಿದಾರರಾದರು. ಇನಾಮು ಭೂಮಿಗಳು ಜಮೀನ್ದಾರರ ವಶವಾದವು. ಏಕೆಂದರೆ ಯಾವ ಸಮುದಾಯಗಳು ಕಂದಾಯ ಪಾವತಿಸಲು ವಿಫಲವಾಗುತ್ತಿದ್ದವೋ ಆ ಸಮುದಾಯಗಳ ಜಮೀನುಗಳನ್ನು ಜಮೀನ್ದಾರರು ವಶಪಡಿಸಿಕೊಳ್ಳುತ್ತಿದ್ದರು. ಹೀಗೆ ವಶಪಡಿಸಿಕೊಂಡ ಜಮೀನುಗಳು, ಬಹುತೇಕ ಕುಶಲಕರ್ಮಿಗಳು ಮತ್ತು ಪ್ರದರ್ಶಕ ಕಲೆಗಳನ್ನು ನಂಬಿಕೊಂಡು ಬಂದಿದ್ದ ಸಮುದಾಯಗಳು ವಂಶಪಾರಂಪರ್ಯವಾಗಿ ರಾಜರುಗಳಿಂದ ಪಡೆದ ಇನಾಮು ಜಮೀನುಗಳೇ ಆಗಿದ್ದವು. ಈ ಬಗೆಯಲ್ಲಿ ಕುಶಲ ಕರ್ಮಿ ಮುಂತಾದ ಕೃಷಿಯೇತರ ಸಮುದಾಯಗಳಿಗೆ ಭೂಮಿಯನ್ನು ಕೆಲವು ನಿಯಮಗಳ ಕೊಡಲಾಗುತ್ತಿತ್ತು. ಮಧ್ಯಕಾಲೀನ ದಕ್ಷಿಣ ಭಾರತದ ವ್ಯವಸಾಯ ಸಂರಚನೆಯ ವಿಶೇಷ ಅಧ್ಯಯನ ಮಾಡಿರುವ ಹಿರೋಷಿ ಫರಜವಾ ಮೂರು ತರಹದ ಭೂಹಿಡುವಳಿಯನ್ನು ಉಲ್ಲೇಖಿಸುತ್ತಾನೆ. ‘ಮಿರಾಸಿಗಳು’, ಅಂದರೆ ಶಾಶ್ವತವಾಗಿ ಭೂಒಡೆತನವನ್ನು ವಂಶ ಪಾರಂಪರ್ಯವಾಗಿ ಹೊಂದಿದವರು. ‘ಉಪೇರರು’ ಅಂದರೆ ರೈತರು. ಇವರು ಸರಕಾರದಿಂದ ಭೂಮಿಯನ್ನು ಕೃಷಿಗಾಗಿ ಪಡೆದುಕೊಂಡು ನಿಶ್ಚಿತ ಕಂದಾಯವನ್ನು ಕಟ್ಟುವ ಸಾಮಾನ್ಯ ರೈತರು. ಮೂರನೆಯ ಗುಂಪಿನವರು ಇನಾಮ್‌ದಾರರು. ಇವರು ತೆರಿಗೆರಹಿತ ಮತ್ತು ಕೆಲವು ಸಲ ಅಲ್ಪ ತೆರಿಗೆ ಕಟ್ಟುವುದರ ಮೂಲಕ ಕೃಷಿ ಭೂಮಿಯನ್ನು ಸರಕರದಿಂದ ಪಡೆದವರು. ಇವರಿಗೂ ಕೃಷಿ ಜಮೀನು ಅನುವಂಶಿಕವಾಗಿಯೇ ಇರುತ್ತದೆ.[22] ಆದರೆ ಈ ಬಗೆಯ ಅನುವಂಶಿಕ ಒಡೆತನಕ್ಕೆ ಅನೇಕ ನಿಯಮಗಳಿರುವುದನ್ನು ಹಿರೋಷಿ ದಾಖಲಿಸುತ್ತಾರೆ. ಈ ‘ಇನಾಮು’ದಾರರು ಸಾಮಾನ್ಯವಾಗಿ ಕರಕುಶಲ ಮತ್ತು ಪ್ರದರ್ಶನ ಕಲೆಗಳನ್ನೇ ಅವಲಂಬಿಸಿದವರು. ಇವರು ಕೆಲವು ಸಲ ವಲಸೆ ಹೋಗುವುದು ಸಾಮಾನ್ಯ. ಇಂತಹ ಸಮುದಾಯಗಳು ದೀರ್ಘಕಾಲದವರೆಗೆ ಕಣ್ಮರೆಯಾಗುವ ಸಂದರ್ಭಗಳು ಒದಗುತ್ತವೆ. ಹಿರೋಷಿ ಇಂತಹ ಸಮುದಾಯಗಳನ್ನ ಕಣ್ಮರೆಯಾದ ಸಮುದಾಯ (Extinct Families) ಎಂದು ಕರೆಯುತ್ತಾನೆ. “ಹೀಗೆ ವಂಶ ಪಾರಂಪರ್ಯ ಒಡೆತನವಿರುವ ಭೂಮಿಯನ್ನು ಅನುಭವಿಸುವ ಕುಟುಂಬ ಕಣ್ಮರೆಯಾದರೆ, ದೀರ್ಘಕಾಲದವರೆಗೆ ಕಾಣೆಯಾದರೆ ಆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಮತ್ತು ಅದನ್ನು ತನ್ನ ಖಾಸಗಿ ಆಸ್ತಿಯನ್ನಾಗಿಸಿಕೊಳ್ಳುವ ಅಧಿಕಾರವನ್ನು ಊರ ಪಟೇಲನಿಗೆ ಅಥವಾ ಗ್ರಾಮದ ಮುಖ್ಯಸ್ಥನಿಗೆ ಕೊಡ ಮಾಡಲ್ಪಟ್ಟಿರುತ್ತದೆ. ಅಲ್ಲದೆ ಗ್ರಾಮದ ಬಂಜರು, ಇಲ್ಲವೆ ಕೃಷಿಯೇತರ ಭೂಮಿಯನ್ನೂ ಸಹ ಪಟೇಲನ ಗ್ರಾಮಾಧಿಕಾರದ ವ್ಯಾಪ್ತಿಗೆ ಅಂದಿನ ಸರಕಾರ ಒಳಪಡಿಸಿತ್ತು.”[23] ಈ ಎಲ್ಲ ಕಾರಣಗಳಿಂದಾಗಿ ಕೃಷಿಯೇತರ ಸಮುದಾಯಗಳಿಗೆ ಇನಾಮಾಗಿ ಬರುತ್ತಿದ್ದ ಕೃಷಿ ಜಮೀನಿನ ಮೇಲೆ ಯಾವ ನ್ಯಾಯಬದ್ಧ ಅಧಿಕಾರಗಳಿರುತ್ತಿರಲಿಲ್ಲ. ಅದರಲ್ಲೂ ಕಂಪನಿ ಆಡಳಿತದ ಸಂದರ್ಭದಲ್ಲಿ ಕೃಷಿ ಸಂಬಂಧಗಳು ಇನ್ನೂ ನಿಯಮಕ್ಕೊಳಪಟ್ಟ ಮೇಲೆ ಮೊದಲ ಬಾರಿಗೆ ಈ ಸಮುದಾಯಗಳ ನಿಶ್ಚಿತ ಆದಾಯದ ಮೇಲೆ ಹೊಡೆತ ಬಿದ್ದಿತು. ಅವರ ಪಾಲಿಗೆ ತಮ್ಮ ಪಾರಂಪರಿಕ ವೃತ್ತಿ ಮಾತ್ರ ಉಳಿಯಿತು. ಆ ಪಾರಂಪರಿಕ ವೃತ್ತಿಗಳನ್ನು ಸದರಿ ಸಮುದಾಯಗಳು ಅವಲಂಬಿಸಲೇಬೇಕಾಯ್ತು. ಆದ್ದರಿಂದ ಅಲೆಮಾರಿಗಳಾಗದೆ ಇರುವ ಯಾವ ಸಾಧ್ಯತೆಗಳೂ ಇವರಿಗಿರಲಿಲ್ಲ.

ಇನ್ನು ಮೊಘಲ್ ಆಳ್ವಿಕೆಯ ನಂತರದ ವಸಾಹತುಶಾಹಿ ಕಾಲಘಟ್ಟದಲ್ಲಿ ಭೂಮಿ ಮತ್ತು ಭೂಕಂದಾಯಕ್ಕೆ ಸಂಬಂಧಿಸಿದ ಕಾಯ್ದೆಗಳು ಇನ್ನೂ ಕಠಿಣಗೊಂಡವು. ಏಕೆಂದರೆ ಬ್ರಿಟಿಷರು ಭಾರತದ ನೈಸರ್ಗಿಕ ವೈವಿಧ್ಯತೆಯನ್ನು ಕೊಳ್ಳೆ ಹೊಡೆಯಲೆಂದೇ ಇಲ್ಲಿಗೆ ಬಂದವರಾದ್ದರಿಂದ, ಆದಿವಾಸಿಗಳ ಮತ್ತು ಕೃಷಿಯೇತರ ಸಮುದಾಯಗಳ ಜಮೀನುಗಳನ್ನು ಹಿಂಸಾತ್ಮಕವಾಗಿಯೇ ವಶಪಡಿಸಿಕೊಂಡರು. ಮೊಘಲರ ಭೂಕಾಯ್ದೆಗೆ ೧೭೯೩ ರಲ್ಲಿ ವಾರನ್ ಹೇಸ್ಟಿಂಗ್ಸ್ ಹಲವು ತಿದ್ದುಪಡಿಗಳನ್ನು ಮಾಡಿ ಜಾರಿಗೆ ತರುತ್ತಾನೆ. ವಸಾಹತುಶಾಹಿ ಕಾಲಘಟ್ಟದ ಭಾರತದ ಆರ್ಥಿಕ ಸ್ಥಿತಿಗತಿಗಳನ್ನು ವಿಶೇಷವಾಗಿ ಅಧ್ಯಯನ ಮಾಡಿರುವ ರಷ್ಯನ್ ಲೇಖಕ ಎ.ಐ.ಮಿದವೋಯ್ ಅವರು ಹೀಗೆ ವಿವರಿಸುತ್ತಾರೆ.

“೧೭೯೩ ರಲ್ಲಿ ಜಾರಿಗೆ ಬಂದ ‘ಶಾಶ್ವತ ಜಮೀನ್ದಾರಿ’ ಶಾಸನವು ಕಟ್ಟುನಿಟ್ಟಾಗಿ ಜಾರಿಗೆ ಬಂದದ್ದು ಉತ್ತರ ಭಾರತದಲ್ಲಿ. ಈ ಶಾಸನದಿಂದಾಗಿ, ಇನಾಮು ಭೂಮಿಗಳನ್ನು ಪಡೆದು, ಅನುವಂಶಿಕವಾಗಿ ಅದರ ಒಡೆತನವನ್ನು ಹೊಂದಿದ್ದ ಪ್ರದರ್ಶಕ ಕಲೆ ಮತ್ತು ಕರಕುಶಲ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳ ಜಮಿನುಗಳು ಶಾಶ್ವತವಾಗಿ ಜಮೀನ್ದಾರರ ಮತ್ತು ಕಂದಾಯ ವಸೂಲಿದಾರರ ವಶವಾದವು. ಬ್ರಿಟೀಷರು ತಮ್ಮ ಕಂಪನಿಗೆ ಬರಬೇಕಿದ್ದ ಭೂಕಂದಾಯವನ್ನು ನಿರಾಯಾಸವಾಗಿ ಖಜಾನೆಗೆ ತುಂಬಿಕೊಳ್ಳುವ ನಿಟ್ಟಿನಲ್ಲಿ ತಂದ ಅಪ್ಪಟ ಊಳಿಗಮಾನ್ಯ ಗುಣವುಳ್ಳ ಭೂಕಾಯ್ದೆ ಇದು. ಇದರಿಂದಾಗಿ ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ಓರಿಸ್ಸಾ ಮತ್ತು ಆಂಧ್ರಪ್ರದೇಶದಿಂದ ಅನೇಕ ಸಮುದಾಯಗಳು ದಕ್ಷಿಣಕ್ಕೆ ವಲಸೆ ಬರಬೇಕಾಯ್ತು. ಅಲ್ಲದೆ ಉತ್ತರ ಭಾರತವನ್ನು ದಿಢೀರನೆ ಲಗ್ಗೆ ಹಾಕಿದ ಕೈಗಾರಿಕೆಗಳಿಂದಾಗಿ ಗುಡಿಕೈಗಾರಿಕೆಗಳನ್ನು ನಂಬಿದ್ದ ಸಮುದಾಯಗಳ ವಲಸೆ ಅನಿವಾರ್ಯವೂ ಆಗಿತ್ತು.”[24] ಇದಕ್ಕೆ ಪೂರಕವಾಗಿ ಇರ್ಫಾನ್ ಹಬೀಬ್ ಅವರು “೧೮೨೦ ರಿಂದ ೧೮೫೦ರ ನಡುವೆ ಉತ್ತರ ಭಾರತದ ವಾಯುವ್ಯ ಮತ್ತು ಪಶ್ಚಿಮ ರಾಜ್ಯಗಳಲ್ಲಿ ವಿಶೇಷವಾಗಿ ಭೂಕಂದಾಯ ಅತಿ ಹೆಚ್ಚಿನ ಪ್ರಮಾಣದ್ದಾಗಿತ್ತು.”[25] ಎನ್ನುತ್ತಾರೆ. ವಾಣಿಜ್ಯ ಬೆಳೆಗಳನ್ನು ಬೆಳೆಯುವ ಬ್ರಿಟಿಷರ ದುರಾಸೆಗೆ ಎಲ್ಲ ದುರ್ಬಲ ವರ್ಗಗಳ ಜಮೀನುಗಳು ವಶವಾಗಿ ಹೋದವು. ಹೀಗೆ ಮಧ್ಯ ಮತ್ತು ಉತ್ತರ ಭಾರತದ ವ್ಯವಸಾಯೀ ಸಂರಚನೆಯಲ್ಲಾದ ಬದಲಾವಣೆಗಳು ಅವಲಂಬಿತ ಸಮುದಾಯಗಳನ್ನು ತೊಂದರೆಗೀಡು ಮಾಡಿದವು. ದತ್ತಿ, ಇನಾಮು ಮತ್ತು ಊಳಿಗಗಳು ನಿಂತುಹೋದ ಮೇಲೆ, ಮೊಘಲ್ ಆಡಳಿತ ಅಷ್ಟು ಪ್ರಬಲವಾಗಿಲ್ಲದಿದ್ದ ದಕ್ಷಿಣ ಭಾರತಕ್ಕೆ ಈ ಸಮುದಾಯಗಳು ವಲಸೆ ಬರುವುದು ಅನಿವಾರ್ಯವಾಯಿತು. ಈವತ್ತು ಕರ್ನಾಟಕ ದಲ್ಲಿರುವ ಬಹುತೇಕ ಅಲೆಮಾರಿಗಳು ಮಹಾರಾಷ್ಟ್ರ, ಓರಿಸ್ಸಾ, ಅಸ್ಸಾಂ, ಬಂಗಾಳ, ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ಉತ್ತರ ಭಾಗದಿಂದ ವಲಸೆ ಬಂದಿರುವುದಾಗಿ ಹೇಳಿಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ವ್ಯವಸಾಯೀ ಸಂಬಂಧಗಳು ಮೊಘಲ್ ಮತ್ತು ಕಂಪನಿ ಆಡಳಿತದ ಸಂದರ್ಭದಲ್ಲಿ ಹೆಚ್ಚು ಸಂಕೀರ್ಣಗೊಂಡದ್ದು. “ಆಧುನಿಕ ಭೂಮಾಲಿಕತ್ವದಿಂದ ಕೃಷಿಯು ಹೆಚ್ಚು ವಾಣಿಜ್ಯೀಕೃತಗೊಂಡಿತು. ಭೂಮಿಯಿಂದ ಅಧಿಕ ಲಾಭ ಬರಲಾರಂಭಿಸಿದ ಮೇಲೆ, ಭೂಮಿಯ ಮೇಲಿನ ಒಡೆತನದ ಕುರಿತ ನಿಯಮಗಳೂ ನಿಖರವಾದವು. ಕಂಪನಿ ಆಡಳಿತದ ಅವಧಿಯಲ್ಲಿ ಕೃಷಿ ಹೆಚ್ಚು ವಾಣಿಜ್ಯೀಕರಣಗೊಂಡ ಮೇಲೆ ಚಿಕ್ಕ ರೈತರೆಲ್ಲ ಭೂಮಿಯನ್ನು ಕಳೆದುಕೊಂಡು. ೧೯ನೇ ಶತಮಾನದ ಹೊತ್ತಿಗೆ ಭೂಮಾಲೀಕರು ಮತ್ತು ಭೂರಹಿತರು ಎಂಬ ಪ್ರಬಲ ವರ್ಗಗಳು ಬೆಳೆದು ನಿಂತವು”[26] ಈ ಹಂತದಲ್ಲಿಯೇ ಭಾರತದಲ್ಲಿ ಆದಿವಾಸಿಗಳ ಭೂಹೋರಾಟಗಳು ಪ್ರಾರಂಭವಾದವು. ಭೂಮಿಯನ್ನು ಕಳೆದುಕೊಂಡ ಅನೇಕ ಆದಿವಾಸಿಗಳು ಮತ್ತು ಕೆಳಜಾತಿಗಳು ಕಂಪನಿ ಆಡಳಿತದ ವಿರುದ್ಧ ಬಂಡದ್ದರು. ಇದೇ ಹೊತ್ತಿಗೆ ಉತ್ತರ ಭಾರತದಲ್ಲಿ ಮೊದಲ ಬಾರಿಗೆ ಒಂದು ಮಾರಾಣಾಂತಿಕ ಕಾಯ್ದೆಯನ್ನು ತರಲಾಯಿತು. ಅದು ೧೮೭೧ರ Criminal Tribal Act. ಈ ಅಪರಾಧಿ ಬುಡಕಟ್ಟುಗಳ ಕಾಯ್ದೆಯಡಿ ಬಂದ ಸಮುದಾಯಗಳನ್ನು ಜಿ.ಎನ್. ದೇವಿ ಹೀಗೆ ಪಟ್ಟಿ ಮಾಡಿದ್ದಾರೆ. “ಅಲೆಮಾರಿ ಗಾಯಕ ಪರಂಪರೆಯ ಸಮುದಾಯಗಳು, ಪಕ್ಕೀರರು, ಚಿಕ್ಕ ವರ್ತಕರು, ಪ್ರದರ್ಶನ ಕಲೆಗಳನ್ನು ಅವಲಂಬಿಸಿದ್ದ ಸಮುದಾಯಗಳು, ಸಾಮಾನು ಸರಂಜಾಮುಗಳನ್ನು ಸಾಗಿಸುತ್ತಿದ್ದವರನ್ನು ಈ ಅಪರಾಧಿ ಬುಡಕಟ್ಟುಗಳ ಕಾಯ್ದೆಯಡಿ ತರಲಾಯಿತು. ಈ ಕಾಯ್ದೆ ಮೊದಲ ಬಾರಿಗೆ ಜಾರಿಗೆ ಬಂದದ್ದು ಉತ್ತರ ಭಾರತ, ಮಧ್ಯಭಾರತ ಮತ್ತು ವಾಯುವ್ಯ ಭಾರತದ ರಾಜ್ಯಗಳಲ್ಲಿ.”[27] ಕಾನೂನುಬದ್ಧ ಜಮೀನ್ದಾರಿ ಪದ್ಧತಿಯಿಂದಾಗಿ ಮತ್ತು ವಾಣಿಜ್ಯೀಕೃತ ಕೃಷಿ ಜಾರಿಗೆ ಬಂದ ಮೇಲೆ ಕರಕುಶಲ ಕರ್ಮಿಗಳು ಮತ್ತು ಪ್ರದರ್ಶಕ ಕಲೆಗಳನ್ನು ಅವಲಂಬಸಿದ್ದ ಸಮುದಾಯಗಳ ಆರ್ಥಿಕ ವ್ಯವಸ್ಥೆಯೇ ಕುಸಿದು ಬಿದ್ದಿತು. ಯಾವ ವರ್ಗವನ್ನು ತಾವು ಆರ್ಥಿಕವಾಗಿ ಅವಲಂಬಿಸಿದ್ದರೋ, ಆ ಆಳುವ ವರ್ಗ ಹೆಚ್ಚು ಅಮಾನವೀಯವೂ, ಯಾಂತ್ರಿಕವೂ ಆದ ಸಮಾಜವನ್ನು ರೂಪಿಸಲಾರಂಭಿಸಿದ ಮೇಲೆ ಈ ಸಮುದಾಯಗಳ ಬದುಕುಗಳು ದಿಕ್ಕೆಟ್ಟು ಹೋದವು. ಕೊಡುಕೊಳುವಿಕೆಯ ಮೇಲೆ ನಿಂತಿದ್ದ ಮತ್ತು ಹೆಚ್ಚು ಮಾನವೀಯವಾಗಿದ್ದ ಭಾರತದ ಪಾರಂಪರಿಕ ಕೃಷಿಯು ಬಂಡವಾಳಶಾಹಿ ಕೃಷಿಯಾಗಿ ಮಾರ್ಪಟ್ಟ ಮೇಲೆ, ಅದು ತನ್ನ ಪರಂಪರೆಯ ಗುಣಗಳನ್ನು ಕಳಚಿಕೊಂಡಿತು. ಬಂಡವಾಳಶಾಹಿ ಕೃಷಿಗೆ ಅಧಿಕ ಉತ್ಪಾದನೆ ಮತ್ತು ಅಧಿಕ ಲಾಭ ಮಾತ್ರ ಗುರಿಯಾಗಿತ್ತೇ ವಿನಹ, ಉಳಿದ ವಿಷಯಗಳು ಗೌಣವಾದವು. ಅಲ್ಲದೆ ಕೃಷಿಯಲ್ಲಿ ಯಂತ್ರಗಳನ್ನು ಬಳಸಲು ಪ್ರಾರಂಭಿಸಿದ ಮೇಲೆ ಕರಕುಶಲಕರ್ಮಿಗಳು, ವ್ಯವಸಾಯೀ ಸಂರಚನೆಯ ಪಾರಂಪರಿಕ ಸಂಬಂಧಗಳಿಂದ ಕಳಚಿಬಿದ್ದರು. ಅಲ್ಲದೆ ಮನರಂಜನೆಯ ಮಾಧ್ಯಮಗಳೂ ಹೆಚ್ಚು ತಾಂತ್ರೀಕೃತವಾದ ಮೇಲೆ ಪಾರಂಪರಿಕ ಮನರಂಜಕರು ಇಡಿಯಾಗಿ ತಮ್ಮ ರೂಢಿಗತ ಅವಲಂಬನೆಯಿಂದ ವಂಚಿತರಾದರು. ಈ ಹಂತದಲ್ಲಿ ಇಂತಹ ಸಮುದಾಯಗಳು ಅನಿವಾರ್ಯವಾಗಿ ಅಲೆಮಾರಿಗಳಾಗಿ ಪರಿವರ್ತನೆಗೊಂಡವು. ಅಲ್ಲದೆ ತಮ್ಮ ಪಾರಂಪರಿಕ ಅವಲಂಬನೆಯನ್ನು ನಾಶ ಮಾಡಿದ ಆಧುನಿಕ ವ್ಯವಸ್ಥೆಯ ಮೇಲೆ ಇವರು ಸಹಜವಾಗಿಯೇ ಕೋಪಗೊಂಡಿದ್ದರು, ಸಮಯ ಸಿಕ್ಕಾಗಲೆಲ್ಲಾ ಈ ದಿಕ್ಕಟ್ಟ ಸಮುದಾಯಗಳು ವ್ಯವಸ್ಥೆಯನ್ನು ಉಗ್ರವಾಗಿ ಪ್ರತಿಭಟಿಸಲಾರಂಭಿಸಿದವು. “ಉತ್ತರಭಾರತದಲ್ಲಿ ರಜಪೂತರ ಅವನತಿಯ ನಂತರ ‘ಅಪರಾಧಿ ಗುಂಪುಗಳು’ ಎಂದು ಹೆಸರಿಸಲ್ಪಡುವ ಸಮುದಾಯಗಳು ಅಸ್ತಿತ್ವಕ್ಕೆ ಬಂದವು. ಈ ಗುಂಪುಗಳು ತಮ್ಮ ಮೂಲವನ್ನು ರಜಪೂತತೊಂದಿಗೆ ಗುರಿತಿಸಿಕೊಳ್ಳುತ್ತವೆ. ರಜಪೂತ ಆಳ್ವಿಕೆ ಕೊನೆಗೊಂಡು, ಮುಸ್ಲಿಂ ಆಳ್ವಿಕೆಯ ಮತ್ತು ಕಂಪನಿ ಆಡಳಿತದ ಸಂದರ್ಭದಲ್ಲಿ ಇಲ್ಲಿನ ಕೃಷಿಕ ಸಮುದಾಯಗಳೂ ಸಹ ತಮ್ಮ ಕೃಷಿ ಜಮೀನುಗಳನ್ನು ಕಳೆದುಕೊಂಡವು. ಈ ನೆಲೆ ಕಳೆದುಕೊಂಡ ಸಮುದಾಯಗಳೇ ನಂತರ ಅಪರಾಧಿ ಚಟುವಟಿಎಕಗಳಲ್ಲಿ ತೊಡಗಿದವು”[28] ಹೀಗೆ ಉತ್ತರಭಾರತದಲ್ಲಿ ತಮ್ಮ ಆರ್ಥಿಕ ನೆಲೆಗಳನ್ನು ಕಳೆದುಕೊಂಡ ಅನೇಕ ಸಮುದಾಯಗಳು ಕಂಪನಿ ಆಡಳಿತದ ವಿರುದ್ಧ ಸಹಜವಾಗಿಯೇ ತಿರುಗಿಬಿದ್ದವು. ಅಲ್ಲದೆ ಸ್ಥಳೀಯ ಪಾಳೇಗಾರರ ಸೈನ್ಯದಲ್ಲಿ ಈ ಪ್ರತಿಭಟನೆಗಳು ಕಂಪನಿ ಆಡಳಿತದ ವಿರುದ್ಧ ಉಗ್ರವಾಗಿಯೇ ವ್ಯಕ್ತವಾಗತೊಡಗಿದವು. ಈ ಹಂತದಲ್ಲಿ ಕಂಪನಿ ಆಡಳಿತವು ದೇಶೀಯ ಸಂಸ್ಥಾನಗಳನ್ನು ವಶಪಡಿಸಿಕೊಳ್ಳಲು ಅನೇಕ ಕಾನೂನುಗಳನ್ನೇ ಜಾರಿಗೆ ತಂದಿತು. ಸಹಾಯಕ ಸೈನ್ಯ ಪದ್ಧತಿ, ರೌಲತ್ ಕಾಯ್ದೆ ಇವೆಲ್ಲ ಸ್ಥಳೀಯ ಸೈನ್ಯವನ್ನು ರದ್ದು ಪಡಿಸುವ ಮತ್ತು ಸ್ಥಳೀಯರು ಆಯುಧಗಳನ್ನು ಹೊಂದುವುದನ್ನು ನಿಷೇಧಿಸುವುದಕ್ಕಾಗಿಯೇ ರೂಪಗೊಂಡ ಕಾಯ್ದೆಗಳಾಗಿವೆ.

ಅಪರಾಧೀ ಪಯಣ

“೧೭೭೪ ಮತ್ತು ೧೮೭೧ರ ನಡುವಿನ ಭಾರತದ ಇತಿಹಾಸ ಅತ್ಯಂತ ರಕ್ತಪಾತದಿಂದ ಕೂಡಿದ ಇತಿಹಾಸವಾಗಿದೆ. ಭಾರತದ ಸ್ಥಳೀಯ ರಾಜ್ಯಗಳ ವಿರುದ್ಧ ಈ ಅವಧಿಯಲ್ಲಿ ಕಂಪನಿ ಆಡಳಿತವು ಅತ್ಯಂತ ಕ್ರೂರ ಯುದ್ಧಗಳನ್ನು ಮಾಡಿತು. ಆಂಗ್ಲೋ ಮರಾಠ ಯುದ್ಧ, ಮೈಸೂರು ಯುದ್ಧ, ಹೋಳ್ಕರ ಶರಣಾಗತಿ, ಪೇಶ್ವೇಗಳ ಸೋಲು, ವೆಲ್ಲೂರಿನ ಸಿಪಾಯಿದಂಗೆ, ಮೈಸೂರು ಮತ್ತು ಕೂರ್ಗ್‌‌ಗಳನ್ನು ವಶಪಡಿಸಿಕೊಂಡದ್ದು, ಸಿಂಧ್, ಸಿಖ್, ಔಧ್ ಪ್ರದೇಶಗಳನ್ನು ಯುದ್ಧಗಳ ಮೂಲಕ ವಶಪಡಿಸಿಕೊಂಡದ್ದು ಮತ್ತು ೧೮೫೭ರಲ್ಲಿ ನಡೆದ ಸಿಪಾಯಿ ದಂಗೆಗಳು, ಹಲವು ಸ್ಥಳೀಯ ಸಮುದಾಯಗಳನ್ನು ನೆಲೆ ಇಲ್ಲದಂತೆ ಮಾಡಿದವು. ಈ ಸಮುದಾಯಗಳೇ ಮುಂದೆ ಅಲೆಮಾರಿಗಳಾಗಿ ಪರಿವರ್ತಿತವಾದವು.”[29] ಮುಖ್ಯವಾಗಿ ಆಧುನಿಕಪೂರ್ವ ಭಾರತದ ಅನೇಕ ಪಾಳೆಪಟ್ಟುಗಳು ಮತ್ತು ಸ್ಥಳೀಯ ರಾಜರು ಅನಿವಾರ್ಯವಾಗಿ ಕಂಪನಿ ಆಡಳಿತದ ಜೊತೆ ಕೈಜೋಡಿಸಬೇಕಿತ್ತು. ಇಲ್ಲವೆ ಅವರೊಡನೆ ಕಾದಾಡಬೇಕಿತ್ತು. ಈ ಎರಡೂ ಸಂದರ್ಭದಲ್ಲಿ ದೇಶೀಯ ಶ್ರಮ ಜೀವಿಗಳು ಆರ್ಥಿಕವಾಗಿ ಕುಸಿದು ಹೋಗುವುದು ಅನಿವಾರ್ಯವಾಗಿತ್ತು. ಕಂಪನಿ ಆಡಳಿತವನ್ನು ಒಪ್ಪಿಕೊಂಡರೆ ಅದರ ಸೈನ್ಯವನ್ನು ಸ್ಥಳೀಯ ರಾಜರು ಸಾಕಬೇಕಿತ್ತು. ಅಕಸ್ಮಾತ್ ಕಂಪನಿ ಆಡಳಿತದ ವಿರುದ್ಧ ತಿರುಗಿ ಬಿದ್ದು ಕಾದಿದರೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯದಲ್ಲಿ ಇಂಡಿಯಾದ ಎಲ್ಲ ಸ್ಥಳೀಯ ಸಂಸ್ಥಾನಗಳು ಸಿಲುಕಿಕೊಂಡವು. ಆದರೆ ಬಹುತೇಕ ಎಲ್ಲ ಸಂಸ್ಥಾನಗಳನ್ನು ಬ್ರಿಟೀಷ್ ಆಡಳಿತ ತನ್ನ ತಂತ್ರಗಳ ಮೂಲಕ ವಶಪಡಿಸಿಕೊಳ್ಳುತ್ತಲೇ ಹೋಯಿತು. ತಿರುಗಿಬಿದ್ದ ಸಮುದಾಯಗಳನ್ನು ಕಾನೂನುಗಳ ಮೂಲಕ ಹತ್ತಿಕ್ಕಲು ಕೆಲವು ನಿಯಮಗಳನ್ನು ರೂಪಿಸಿತು. ಈ ಹಂತದಲ್ಲಿಯೇ Criminal Tribal Act ಜಾರಿಗೆ ಬಂದಿತು.

“೧೮೭೧ರಲ್ಲಿ Criminal Tribal Act ಜಾರಿಗೆ ಬಂದರೂ, ಉತ್ತರ ಭಾರತದಲ್ಲಿ ಕಂಪನಿ ಸರಕಾರವು ೧೭೯೩ರಲ್ಲಿಯೇ ಕೆಲವು ಸಮುದಾಯಗಳನ್ನು ಪಟ್ಟಿ ಮಾಡಿ ಇವು ಅಪಾಯಕಾರಿಗಳೆಂದು ಗುರುತಿಸಿತು. ಆ ಪಟ್ಟಿ ನಮಗೆ ಈಗ ಲಭ್ವಿಲ್ಲ. ಆದರೆ ಅತ್ಯಂತ ಶಾಂತವಾಗಿದ್ದ, ಶ್ರಮಜೀವಿಗಳೇ ಬದುಕುತ್ತಿದ್ದ ರೋಹಿಲ್‌ಖಂಡ್‌ನ್ನು ವಶಪಡಿಸಿಕೊಳ್ಳಲು ಬ್ರಿಟೀಷ್‌ರು ೧೭೭೦ ರಲ್ಲಿ ಒಂದು ಭೀಕರ ಯುದ್ಧವನ್ನೇ ನಡೆಸಿದರು. ಭಯಂಕರ ರಕ್ತಪಾತ ಮತ್ತು ಸಾವುನೋವುಗಳ ಸಂಭವಿಸಿದವು. ರೋಹಿಲ್‌ಖಂಡ್‌ಬ್ರಿಟೀಷ್ ವಶವಾಯಿತು. ಆದರೆ ಅಲ್ಲಿ ಮುಗ್ಧವಾಗಿ ಬದುಕಿ ಬಂದಿದ್ದ ದುಡಿಮೆಗಾರರು ದಿಕ್ಕೆಟ್ಟು ಹೋದರು. ಅಲ್ಲದೆ ಇವರು ಕಂಪನಿ ಆಡಳಿತದ ಮೇಲೆ ಉಗ್ರವಾದ ಸಿಟ್ಟನ್ನು ಬೆಳೆಸಿಕೊಂಡರು. ಬ್ರಿಟೀಷರ ಮೇಲೆ ಸೇಡುತೀರಿಸಿಕೊಳ್ಳಲು ಹವಣೀಸಲಾರಂಭಿಸಿದರು ಮತ್ತು ಇಲ್ಲಿನ ಬಹುತೇಕ ಶ್ರಮಜೀವಿಗಳು ಮತ್ತು ಆದಿವಾಸಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡು ಅಲೆಮಾರಿಗಳಾದರು.”[30] ಕಂಪನಿ ಆಡಳಿತ ಪ್ರಬಲವಾಗುತ್ತಿದ್ದಂತೆ ಈ ದೇಶದ ಸ್ಥಳೀಯ ರಾಜರು ನಿವೃತ್ತರಾಗಿ ಪಿಂಚಣಿ ಪಡೆಯಲಾರಂಭಿಸಿದರು. ಭೂಮಾಲಿಕರು ರಾಜಿ ಮಾಡಿಕೊಂಡು ತಮ್ಮ ಆಸ್ತಿಗಳನ್ನು ರಕ್ಷಿಸಿಕೊಂಡರು. ಆದರೆ ಎಲ್ಲವನ್ನೂ ಕಳೆದುಕೊಂಡದ್ದು ಶ್ರಮಜೀವಿ ವರ್ಗ ಮಾತ್ರ. ಕಂಪನಿ ಆಡಳಿತದ ವಿರುದ್ಧ ಇವರು ಹೋರಾಡಲೇಬೇಕಾದ ಚಾರಿತ್ರಿಕ ಅನಿವಾರ್ಯತೆ ಏರ್ಪಟ್ಟಿತು. ಮತ್ತು ಈ ಹೋರಾಟ ಸ್ಪಷ್ಟ ರಾಜಕೀಯ ತಳಹದಿಯ ಮೇಲೆ ರೂಪಗೊಂಡಿತ್ತು. ಮನುಷ್ಯನ ಸಹಜ ಹಕ್ಕುಗಳಾದ, ಮಾತನಾಡುವ, ಪ್ರಶ್ನಿಸುವ, ಸ್ವತಃ ತಮ್ಮನ್ನು ಆಳಿಕೊಳ್ಳುವ, ತ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳುವ ಮತ್ತು ತಮ್ಮ ಅನನ್ಯತೆಗಳನ್ನು ಉಳಿಸಿಕೊಳ್ಳುವ ಜನತಾಂತ್ರಿಕ ಆಶಯಗಳಿಂದಲೇ ಈ ಹೋರಾಟಗಳು ರೂಪಗೊಂಡಿದ್ದವು. ಆದರೆ ಅರಾಜಕಗೊಂಡಿದ್ದ ಭಾರತದ ರಾಜಕೀಯ ಸಂದರ್ಭವು ಶೂನ್ಯಾವಸ್ಥೆಗೆ ತಲುಪಿಬಿಟ್ಟಿತ್ತು. ಆದರೆ ಅಲ್ಲಲ್ಲಿ ಜೀವಂತವಿದ್ದ ಸ್ವಾಭಿಮಾನಿ ಸಂಸ್ಥಾನಗಳು ಮಾತ್ರ ಬ್ರಿಟೀಷ್ ಆಡಳಿತದ ವಿರುದ್ಧ ಉಗ್ರವಾಗಿಯೇ ತರುಗಿ ಬೀಳುತ್ತಿದ್ದವು. “ಯಾವ ಸಮುದಾಯಗಳು ಸ್ಥಳೀಯ ರಾಜರ ಸೈನ್ಯದಲ್ಲಿದ್ದ ಕಂಪನಿ ಆಡಳಿತದ ವಿರುದ್ಧ ಹೋರಾಡುತ್ತಿದ್ದವೋ ಆ ಎಲ್ಲ ಸಮುದಾಯಗಳನ್ನು ಕಂಪನಿ ಸರಕಾರ ಯುದ್ಧಾನಂತರ ಅನೇಕ ಬಗೆಯಲ್ಲಿ ಹಿಂಸಿಸುತ್ತಿತ್ತು. ಉದಾ. ಹೈದರ್ ಆಲಿ ಮತ್ತು ಟಿಪ್ಪುವಿನ ಸೋಲಿನ ನಂತರ ಅವರ ಸೈನ್ಯವನ್ನು ಬ್ರಿಟೀಷರು ಇನ್ನಿಲ್ಲದಂತೆ ನಾಶಮಾಡಿದರು. ಅವರಿಗೆ ಭಾರತದ ಸಮಾಜದ ಕುರಿತು ಸರಿಯಾದ ಕಲ್ಪನೆಯೇ ಇರಲಿಲ್ಲ. ಅಲೆಮಾರಿ ಪಶುಪಾಲಕರು, ವೃತ್ತಿ ಸಂಗೀತಗಾರರು, ಆದಿವಾಸಿಗಳು, ದೊಂಬರಾಟದವರು, ಜಿಪ್ಸಿಗಳು, ಹಾವಾಡಿಸುವವರು, ಅಲೆಮಾರಿ ವೈದ್ಯರು, ಈ ಸಮುದಾಯಗಳನ್ನು ಬ್ರಿಟೀಷ್‌ರು ಅರ್ಥಮಾಡಿಕೊಳ್ಳಲಿಲ್ಲ. ಈ ಸಮುದಾಯಗಳನ್ನು ಅವರು ಸದಾ ಅನುಮಾನಿಸುತ್ತಲೇ ಬಂದರು. ಸಹಜವಾಗಿಯೇ ಈ ಸಮುದಾಯಗಳು ಅಪರಾಧಿ ಸಮುದಾಯಗಳ ಪಟ್ಟಿಗೆ ಸೇರಿಸಲ್ಪಟ್ಟವು.”[31]

೧೮೭೧ರಲ್ಲಿ ಕ್ರಿಮಿನಲ್ ಟ್ರೈಬಲ್ ಕಾಯ್ದೆ ಸಿದ್ಧವಾಗಿ ಜಾರಿಗೆ ಬಂದಿತು. ದುರಂತವೆಂದರೆ ಈ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಕಂಪನಿ ಸರಕಾರವು ಜನ್ಮತಃ ಅಪರಾಧಿಗಳು (Born criminals) ಎಂದು ಪರಿಗಣಿಸಿಬಿಟ್ಟಿತು. ಪೊಲೀಸರಿಗೆ ತರಬೇತಿ ಕೊಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಪಠ್ಯಕ್ರಮದಲ್ಲಿ, ಅಪರಾಧಿ ಬುಡಕಟ್ಟುಗಳನ್ನು ಗುರುತಿಸುವುದು ಮತ್ತು ಕಾನೂನಿನ ಮೂಲಕ ಅವರನ್ನು ಹೇಗೆ ನಿಯಂತ್ರಿಸುವುದು ಎಂಬ ಕುರಿತು ಪಾಠಗಳನ್ನು ಸೇರಿಸಿತು. ತಮಾಷೆಯೆಂದರೆ, ಸ್ವಾತಂತ್ರ್ಯ ನಂತರ ೧೯೫೨ರಲ್ಲಿ ಈ ಕಾಯ್ದೆ ರದ್ದಾದರೂ ಸಹ ಪೊಲೀಸ್ ತರಬೇತಿಯ ಪಠ್ಯಕ್ರಮದಿಂದ ‘ಅಪರಾಧಿ ಬುಡಕಟ್ಟು ಕಾಯ್ದೆ’ಯ ಪಾಠಗಳು ತೊಲಗಲಿಲ್ಲ. ಅವರನ್ನು ಸ್ವತಂತ್ರ ಭಾರತದ ಸರಕಾರವು ‘ಪಾರಂಪರಿಕ ಅಪರಾಧಿ ಕಾಯ್ದೆ’ಯ (Habitual offender Act) ಅಡಿಯಲ್ಲಿ ಗುರುತಿಸಬೇಕೆಂದು ತಮ್ಮ ಪೊಲೀಸರಿಗೆ ಬೋಧಿಸಲಾರಂಭಿಸಿತು. ಸ್ವಾತಂತ್ರ್ಯ ಬಂದರೂ ಈವತ್ತೂ ಕೆಲವು ಸಮುದಾಯಗಳು ಅಮವಾಸ್ಯೆಯ ದಿನ ಪೊಲೀಸ್ ಠಾಣೆಗೆ ಹೋಗಿ ಮಲಗುವ ನಿಯಮಗಳು ಜಾರಿಯಲ್ಲಿವೆ.

“೧೯೨೧ರಲ್ಲಿ Criminal Tribal Act ಮದ್ರಾಸ್, ಹೈದರಾಬಾದ್ ಮತ್ತು ಮೈಸೂರು ಪ್ರಾಂತ್ಯಗಳಿಗೆ ವಿಸ್ತರಿಸಲ್ಪಟ್ಟಿತು. ಭಾರತದ ಸ್ವಾತಂತ್ರ್ಯಾ ಸಂಗ್ರಾಮಕ್ಕೆ ಮಹಾತ್ಮಾ ಗಾಂಧೀಜಿಯ ಪ್ರವೇಶವಾಗುವ ಸಂದರ್ಭವದು, ಭಾರತದ ಎಲ್ಲ ನಾಗರಿಕರು ಅಪರಾಧಿ ಬುಡಕಟ್ಟುಗಳನ್ನು ನಿರ್ವಿಕಾರ ಸ್ಥಿತಿಯಲ್ಲಿಯೇ ನೋಡುತ್ತಿದ್ದರು. ಆದರೆ ವಸಾಹತು ಸರಕಾರ ದಕ್ಷಿಣದಲ್ಲೂ ಅನೇಕ ಶ್ರಮಜೀವಿಗಳನ್ನು ‘ಅಪರಾಧಿಗಳ ಪಟ್ಟಿಗೆ’ ಸೇರಿಸುತ್ತಲೇ ಹೋಯಿತು”[32]

ನಿಲ್ಲದ ಯಾತನೆಯ ಪಯಣ

ಇಂತಹ ಸಂದರ್ಭದಲ್ಲಿ ಈ ಸಮುದಾಯಗಳು ಮುಖ್ಯವಾಹಿನಿಯ ಕಣ್ಣುತಪ್ಪಿಸಿ ಊರಿಂದ ಹೊರಗೆ ಕಾಡುಗಳಲ್ಲಿ ಬದುಕಲಾರಂಭಿಸಿದವು. ಅಪರಾಧಿ ಬುಡಕಟ್ಟು ಕಾಯ್ದೆಯು, ಪೊಲೀಸರಿಗೆ ಈ ಸಮುದಾಯಗಳನ್ನು ವಿಶೇಷ ಸಂದರ್ಭದಲ್ಲಿ ಕಂಡಲ್ಲಿ ಕೊಂದು ಹಾಕುವ ಅಧಿಕಾರವನ್ನೂ ಕೊಟ್ಟುಬಿಟ್ಟಿತ್ತು. ಈ ಕಾಲಘಟ್ಟದಲ್ಲಿ ‘ಅಲೆಮಾರಿತ್ವ’ ಸಹಜವಾಗಿಬಿಟ್ಟಿತು. ಕೇವಲ ಆರ್ಥಿಕ ಮೂಲಗಳನ್ನು ಮಾತ್ರ ಈ ಸಮುದಾಯಗಳು ಕಳೆದುಕೊಳ್ಳಲಿಲ್ಲ, ಬದುಕಲು ನೆಲ ಮತ್ತು ಬದುಕುವ ಅವಕಾಶ ಎರಡನ್ನೂ ಕಳೆದು ಕೊಂಡು ಸುರಕ್ಷಿತ ನೆಲೆಗಳನ್ನು ಹುಡುಕಿಕೊಂಡು ಅಲೆಯಲಾರಂಭಿಸಿದವು. “ಅಲೆಮಾರಿ ಸಮುದಾಯಗಳನ್ನು ‘ಕ್ರಿಮಿನಲ್ ಜಾತಿಗಳು’ ಎಂದು ಪರಿಗಣಿಸಿ ಅವರ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಯ್ತು. ಈ ವಿಪರೀತ ಕಾನೂನಿನ ಅಮಾನವೀಯ ನಿಯಮಗಳ ಮೂಲಕ ಸದರಿ ಸಮುದಾಯಗಳನ್ನು ನಡೆಸಿಕೊಳ್ಳಲಾಯ್ತು. ಅವರ ಆರ್ಥಿಕ ಅವಲಂಬನೆಗಳು ನಾಶವಾದ ಮೇಲೆ, ಸಹಜವಾಗಿಯೇ ಅವರು ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿದರು. ಅಪರಾಧ ಮಾಡಲು ಈ ವ್ಯವಸ್ಥೆಯೇ ಅವರನ್ನು ಪ್ರೇರೇಪಿಸಿತು.”[33] ಒಂದು ಕಾಲದಲ್ಲಿ ಇದ್ದುದರಲ್ಲಿಯೇ ಸ್ವಾವಲಂಬಿಗಳಾಗಿ, ಶ್ರಮಜೀವಿಗಳಾಗಿ ಬದುಕುತ್ತಿದ್ದ ಸಮುದಾಯಗಳು ತಾವು ಕಳೆದುಕೊಂಡಿದ್ದ ಆರ್ಥಿಕ ಮೂಲಗಳನ್ನು ಮರಳಿ ಪಡೆಯಲು ಪ್ರತಿಭಟಿಸಿದ್ದಕ್ಕಾಗಿ ಅಪರಾಧಿಗಳಾಗಿ ಬಿಟ್ಟವು. ಜಗತ್ತಿನಲ್ಲಿ, ಮಾನವಹಕ್ಕುಗಳ ಮೇಲಿನ ದಾಳಿ ಇದಕ್ಕಿಂತ ಭೀಕರವಾದದ್ದು ಇನ್ನೊಂದು ನಡೆದಿರಲು ಸಾಧ್ಯವಿಲ್ಲ. ತಮ್ಮ ಹಕ್ಕುಗಳಿಗೆ ಹೋರಾಡಿದವರನ್ನು ಕಾನೂನಿನ ದೃಷ್ಟಿಯಲ್ಲಿ ಅಪರಾಧಿಗಳನ್ನಾಗಿಸಿ ಅವರ ಆತ್ಮಪ್ರತ್ಯಯವನ್ನು ನಾಶಪಡಿಸಲಾಯ್ತು. ಈ ಜನ ಒಂದು ಕಾಲದಲ್ಲಿ, ತನ್ನ ಸುತ್ತಲ ಜಗತ್ತನ್ನು ಕಟ್ಟಿ ಎತ್ತಿ ನಿಲ್ಲಿಸಿದವರು, ಆ ಜಗತ್ತನ್ನು ರಂಜಿಸಿದವರು, ಆ ಜಗತ್ತಿನ ಒಳಿತಿಗಾಗಿ ಬೆವರು ಹರಿಸಿದವರು, ಸೈನ್ಯದಲ್ಲಿದ್ದುಕೊಂಡು ಜೀವಕೊಟ್ಟವರು, ಕೋಟೆಗಳನ್ನು ಕಟ್ಟಿದವರು. ಆದರೆ ಅವರು ಮಾತ್ರ ‘ಕೋಟೆಯ’ ಆಚೆಗೆ ಎಸೆಯಲ್ಪಟ್ಟು ನಿರ್ಗತಕರಾಗಿ ಹೋದರು.

ಇದೇ ಕಾಯ್ದೆ ದಕ್ಷಿಣಕ್ಕೆ ಬಂದದ್ದು ೧೯೨೧ ರಲ್ಲಿ. ನಾವು ಇಂದು ಯಾರನ್ನು ಅಲೆಮಾರಿಗಳೆಂದು ಪಟ್ಟಿ ಮಾಡುತ್ತೇವೋ ಅವರಲ್ಲಿ ಶೇ ೯೫ ಸಮುದಾಯಗಳೂ ಈ Criminal Tribal Act ಅಡಿಯಲ್ಲಿ ಬರುವ ಸಮುದಾಯಗಳೇ ಆಗಿವೆ. ಹೀಗಾಗಿ ಕರ್ನಟಕದಲ್ಲಿರುವ ಬಹುತೇಕ ಅಲೆಮಾರಿಗಳು, ವಾಯುವ್ಯ ಭಾರತ, ಮಧ್ಯಭಾರತ ಇಲ್ಲವೆ ಓರಿಸ್ಸಾ, ಆಂಧ್ರಪ್ರದೇಶಗಳಿಂದ ಇಲ್ಲಿಗೆ ವಲಸೆ ಬಂದವರೇ ಆಗಿದ್ದಾರೆ. ಇದಕ್ಕೆ ಕಾರಣಗಳೂ ತುಂಬಾ ಸ್ಪಷ್ಟವಾಗಿಯೇ ಇವೆ. ಲಂಬಾಣಿಗರು ವಾಯುವ್ಯ ರಾಜ್ಯಗಳಿಂದ ದಕ್ಷಿಣಕ್ಕೆ ವಲಸೆ ಬಂದ ವಿವರಗಳನ್ನು ಶ್ರೀ ಖಂಡೋಬ ಅವರ ‘ಕರ್ನಾಟಕದ ಲಂಬಾಣಿಗಳು ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ಕೃತಿಯಲ್ಲಿ ವಿವರವಾಗಿ ಗಮನಿಸಬಹುದಾಗಿದೆ.

ಇನ್ನು ವಸಾಹತುಶಾಹಿ ಆಡಳಿತದ ಭಾಗವಾಗಿ ಇಲ್ಲಿ ಸಂಭವಿಸಿದ ಕೈಗಾರಿಕೀರಣದಿಂದಾಗಿ ಭಾರತದ ಗುಡಿಕೈಗಾರಿಕೆಗಳು ನಾಶವಾಗಿ, ಕರಕುಶಲ ಕಲೆಗಳನ್ನು ನಂಬಿದ್ದ ಸಮುದಾಯಗಳು ಆರ್ಥಿಕವಾಗಿ ನೆಲೆ ತಪ್ಪಿಹೋದವು. ಗುಡಿಕೈಗಾರಿಕೆಗಳನ್ನು ಕರಕುಶಲ ಕಲೆಗಳನ್ನು, ಪ್ರದರ್ಶಕ ಕಲೆಗಳನ್ನು ಪಾರಂಪರಿಕವಾಗಿ ಅವಲಂಬಿಸಿಕೊಂಡ ಬಂದ ಸಮುದಾಯಗಳು ಆಧುನಿಕ ತಂತ್ರಜ್ಞಾನದ ಮುಂದೆ ಇನ್ನಿಲ್ಲದಂತೆ ಸೋತುಹೋದವು. ಬುಟ್ಟಿ ಹೆಣೆಯುವ ಮೇದರು, ಕೃಷಿಯ ಉಪಕರಣಗಳನ್ನು ತಯಾರಿಸುವ ಕಮ್ಮಾರ, ಡೊಂಬರಾಟವನ್ನೇ ಅವಲಂಬಿಸಿದ ಡೊಂಬರು, ತೊಗಲು ಬೊಂಬೆ ಕುಣಿಸುವ ಕಿಳ್ಳೆಕ್ಯಾತರು ಆಧುನಿಕ ತಂತ್ರಜ್ಞಾನ ಮತ್ತು ಮನರಂಜಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಮುಂದೆ ಸಪ್ಪೆಯಾದರು. ವಸಾಹತುಶಾಹಿ ಕಾಲಘಟ್ಟದ ಕೈಗಾರಿಕೀಕರಣದ ಈ ಬಿರುಸಿನ ಕಾರ್ಯಾಚರಣೆಯಿಂದಾಗಿ ಭಾರತದ ಸ್ವಯಂ ಪೂರ್ಣ ಉತ್ಪಾದನಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ವಸಾಹತುಶಾಹಿಗಳು ಮೂರನೇ ಜಗತ್ತಿನ ಮಾನವ ಸಂಪತ್ತು ಮತ್ತು ನೈಸರ್ಗಿಕ ಸಂಪತ್ತುಗಳನ್ನು ಕೊಳ್ಳೆ ಹೊಡೆಯಲೆಂದೇ ಇಲ್ಲಿ ತಮ್ಮ ಕೈಗಾರಿಕೆಗಳನ್ನು ಪ್ರಾರಂಭಿಸಿದರು.

ಈ ಪ್ರಕ್ರಿಯೆಯಲ್ಲಿ ಭಾರತದ ಪಾರಂಪರಿಕ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಗಳಾದರೂ, ಈ ಬದಲಾವಣೆಗಳು ಕೇವಲ ಆನುಷಾಂಗಿಕ. ಆಧುನಿಕ ಜಗತ್ತಿನಲ್ಲಿ ತನ್ನ ಪಾರಂಪರಿಕ ಕಸುಬನ್ನು ಎತ್ತಿ ನಿಲ್ಲಿಸಲಾರದ ಜಾತಿ ಸಮುದಾಯಗಳು ನೆಲೆ ತಪ್ಪಿಹೋದವು. ತಮ್ಮ ಪಾರಂಪರಿಕ ಆರ್ಥಿಕ ಮೂಲಗಳನ್ನು ಆಧುನಿಕ ಜಗತ್ತಿನಲ್ಲಿ ಬಂಡವಾಳವನ್ನಾಗಿ ಪರಿವರ್ತಿಸುವ ಜಾತಿಗಳು ದಿಕ್ಕೆಟ್ಟು ಹೋದವು. ಅಂತಹ ಸಮುದಾಯಗಳಲ್ಲಿ ಕರಕುಶಲ ಕಲೆಗಳನ್ನು ನಂಬಿದ್ದ ಸಮುದಾಯಗಳು ಮತ್ತು ಪ್ರದರ್ಶಕ ಕಲೆಗಳನ್ನು ರೂಢಿಸಿಕೊಂಡಿದ್ದ ಸಮುದಾಯಗಳು ಪ್ರಮುಖವಾದವು. ಆಧುನೀಕರಣ ಮತ್ತು ಕೈಗಾರೀಕರಣವು ಭಾರತದಲ್ಲಿ ಕ್ರಾಂತಿಕಾರಿ ಸಾಮಾಜಿಕ ಬದಲಾವಣೆಗಳನ್ನು ತಂದಿತು ಎನ್ನುವ ಎಂ.ಎನ್. ಶ್ರೀನಿವಾಸ್‌ರಂತಹ ಸಮಾಜಶಾಸ್ತ್ರಜ್ಞರು ಗುಡಿಕೈಗಾರಿಕೆಗಳ ನಾಶದಿಂದ, ಅವುಗಳನ್ನು ಅವಲಂಬಿಸಿದ್ದ ಸಮುದಾಯಗಳು ಯಾವ ಬಗೆಯ ತಲ್ಲಣಗಳಿಗೆ ಒಳಗಾದವು ಎಂಬುದನ್ನು ಮರೆತುಬಿಡುತ್ತಾರೆ. ಪಾರಂಪರಿಕ ಊಳಿಗಮಾನ್ಯ ಹಿಡಿತದಿಂದ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಕಡೆಗೆ ಭಾರತದ ಸಮಾಜ ನಡೆದುಹೋದರೂ ಸಹ, ಭಾರತದ ಕೆಳಜಾತಿ ಸಮುದಾಯಗಳ ಸಾಮಾಜಿಕಾರ್ಥಿಕ ಸ್ಥಿತಿಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಸಂಭವಿಸಲಿಲ್ಲ. ಕೆಳಜಾತಿಗಳಿಗೆ ಆಧುನಿಕತೆಯು ಕೆಲವು ರಿಯಾಯಿತಿಗಳನ್ನು ತೋರಿದಂತೆ ಕಂಡುಬಂದರೂ ಸಹ ಭಾರತದ ಆರ್ಥಿಕ ಅಸಮಾನತೆಯಲ್ಲಿ ಯಾವ ಮುಖ್ಯ ಬದಲಾವಣೆಗಳು ಸಂಭವಿಸಲಿಲ್ಲ. ಆಧುನಿಕತೆಯ ಕುರಿತು ನಮ್ಮಲ್ಲಿ ಅನೇಕ ಮೂಢನಂಬಿಕೆಗಳು ಬೆಳೆದು ಬಂದಿವೆ. ಆಧುನಿಕತೆ ತನ್ನೆಲ್ಲ ತಂತ್ರಜ್ಞಾನದಿಂದ, ಭಾರತದ ಸಾಂಪ್ರದಾಯಿಕ ಮತ್ತು ಅಸಮಾನ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಉತ್ಪಾದನಾ ಸಾಧನಗಳ ಕ್ರಾಂತಿಕಾರಿ ಬದಲಾವಣೆಗಳಿಂದ ಭಾರತದಂತಹ ಪಾರಂಪರಿಕ ಉತ್ಪಾದನಾ ವ್ಯವಸ್ಥೆಯಲ್ಲಿ ಅಗಾಧ ರೂಪಾಂತರಗಳು ಸಂಭವಿಸುತ್ತವೆ. ಮತ್ತು ಸಾಮಾಜಿಕ ಸಂಬಂಧಗಳ ಸ್ವರೂಪದಲ್ಲಿ ಸಹ ಅದು ನಿಚ್ಚಳ ಬದಲಾವಣೆಗಳನ್ನು ತರಬಲ್ಲದೆಂದು ನಂಬಲಾಗಿತ್ತು. ಆದರೆ ಆಧುನಿಕತೆಯು ತಂತ್ರಜ್ಞಾನದ ಜೊತೆಯಲ್ಲಿಯೇ ಬಂಡವಾಳಶಾಹಿ ಮನೋಧರ್ಮವನ್ನು ಇಂಡಿಯಾಕ್ಕೆ ಹೊತ್ತು ತಂದಿತು. ಈ ಆಧುನಿಕತೆ ಊಳಿಗಮಾನ್ಯಶಾಹಿ ಸಾಮಾಜಿ ಸಂಬಂಧಗಳನ್ನು, ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಚೌಕಟ್ಟಿಗೆ ತಂದು ಜೋಡಿಸಿತು. ಹೀಗೆ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಗೆ ಸಮಾಜ ತನ್ನನ್ನು ಹೊಂದಿಸಿಕೊಳ್ಳುವ ಹಂತದಲ್ಲಿ, ಈ ಶ್ರೇಣೀಕೃತ ವಿಷಮ ಸಾಮಾಜಿಕ ಸಂಬಂಧಗಳಲ್ಲಿ ಕೆಲವು ಬದಲಾವಣೆಗಳು ಸಂಭವಿಸಿದವು. ಆದರೆ ಭಾರತದ ಒಟ್ಟು ಆರ್ಥಿಕ ಅಸಮಾನತೆಯಲ್ಲಿ ಯಾವ ದೊಡ್ಡ ಬದಲಾವಣೆಗಳೂ ಸಂಭವಿಸಲಿಲ್ಲ.

ಇದಕ್ಕೆ ಪೂರಕವಾಗಿ ಒಂದು ಜಿಲ್ಲೆಯಲ್ಲಿ ನೆಲೆನಿಂತಿರುವ ಮತ್ತು ಈ ಹಿಂದೆ ಅಲೆಮಾರಿಯಾಗಿದ್ದ ಡೊಂಬರ ಸಮುದಾಯದ ಸಾಮಾಜಿಕಾರ್ಥಿಕ ಸ್ಥಿತಿಗತಿಗಳನ್ನು ನೋಡಬಹುದು. ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಅಲ್ಲಿನ ಸೈನ್ಯದಲ್ಲಿ ಮತ್ತು ದೇವಾಲಯಗಳನ್ನು ನಿರ್ಮಿಸುವ ಶಿಲ್ಪಿಗಳ ಜೊತೆಯಲ್ಲಿ ಕಾರ್ಯನಿರತವಾಗಿದ್ದ ಮತ್ತು ತಮ್ಮ ಪಾರಂಪರಿಕ ಡೊಂಬರಾಟದಿಂದ ಜನರನ್ನು ರಂಜಿಸುತ್ತಿದ್ದ ಈ ಸಮುದಾಯ, ವಿಜಯನಗರ ಪತನಾನಂತರ ಕರ್ನಾಟಕದಾದ್ಯಂತ ಚದುರಿ ಬಿದ್ದಿದೆ. ಸರಿಸುಮಾರು ೧೦೦ ರಿಂದ ೧೫೦ ವರ್ಷಗಳ ಹಿಂದೆ ನೆಲೆನಿಂತಿರಬಹುದಾದ ಈ ಸಮುದಾಯದ ವರ್ತಮಾನದ ಸ್ಥಿತಿಯನ್ನು ಅಂಕೆಸಂಖ್ಯೆಗಳ ಮೂಲಕ ಕಂಡುಕೊಳ್ಳೋಣ. ಈ ಅಧ್ಯಯನಕ್ಕೆ ಬಳ್ಳಾರಿ ಜಿಲ್ಲೆಯ ಡೊಂಬರ ಸಮುದಾಯವನ್ನು ಮಾತ್ರ ಆಯ್ದುಕೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯ ೫ ತಾಲ್ಲೂಕುಗಳಲ್ಲಿನ ೧೧ ಗ್ರಾಮಗಳಲ್ಲಿ ಡೊಂಬರು ವಿರಳವಾಗಿ ವಾಸಿಸುತ್ತಿದ್ದಾರೆ. ಈ ಸಮುದಾಯವು ಜಿಲ್ಲೆಯೊಂದರಲ್ಲಿ ಯಾವ ಬಗೆಯ ಆರ್ಥಿಕ ಮೂಲಗಳನ್ನು ಕಂಡುಕೊಂಡಿದೆ ಮತ್ತು ಜಿಲ್ಲೆಯಲ್ಲಿ ಅದರ ಆರ್ಥಿಕ ಸ್ಥಾನಮಾನಗಳೇನು ಎಂಬುದನ್ನು ಅಂಕೆಸಂಖ್ಯೆಗಳ ಮೂಲಕ ಕಂಡುಕೊಳ್ಳಬಹುದಾಗಿದೆ.

ಬಳ್ಳಾರಿ ಜಿಲ್ಲೆಯ ಡೊಂಬರ ಜನಸಂಖ್ಯೆ ಮತ್ತು ವಯೋಗುಂಪುಗಳು

ತಾಲೂಕು

ನೆಲೆ

ಕುಟುಂಬಗಳ ಸಂಖ್ಯೆ

ಗಂಡು

ಹೆಣ್ಣು

ಜನಸಂಖ್ಯೆ ಒಟ್ಟು

೧. ಬಳ್ಳಾರಿ ಬಳ್ಳಾರಿ
೨. ಹೊಸಪೇಟೆ ಹೊಸಪೇಟೆ ೧೦ ೧೮
ಕಮಲಾಪುರ ೧೮ ೨೦ ೩೮
೩. ಕೂಡ್ಲಿಗಿ ಕೂಡ್ಲಿಗಿ ೧೮ ೫೯ ೬೧ ೧೨೦
ನಾಗರಹುಣಸೆ ೧೨
ಎ. ದಿಬ್ಬದಹಳ್ಳಿ ೩೮ ೩೫ ೭೩
ಸೋವೆನಹಳ್ಳಿ ೧೨ ೨೯ ೩೩ ೬೨
ಮರಬನಹಳ್ಳಿ ೧೧ ೩೪ ೩೭ ೭೧
ಕರ್ನಾರಹಟ್ಟಿ ೧೯ ೪೮ ೪೦ ೮೮
೪. ಸಂಡೂರು ಸಂಡೂರು ೧೨ ೫೭ ೫೧ ೧೦೮
೫. ಸಿರುಗುಪ್ಪ ಬೂದುಗುಪ್ಪ ೩೩ ೩೨ ೬೫
ಒಟ್ಟು ೧೦೧ ೩೩೭ ೩೨೨ ೬೫೯

ಶೈಕ್ಷಣಿಕ ಸ್ಥಾನಮಾನ

ಜಿಲ್ಲೆಯ ಶೇ.೪೦ ಕ್ಕೂ ಹೆಚ್ಚು ಜನ ಅನಕ್ಷರಸ್ಥರಿದ್ದಾರೆ. ಅದರಲ್ಲಿ ಮಹಿಳೆಯರು ಹೆಚ್ಚಾಗಿ ಅನಕ್ಷರರಾಗಿದ್ದಾರೆ. ಶೇ. ೪೦ ಭಾಗ ಜನ ಪ್ರಾಥಮಿಕ ಹಂತ ದಾಟಿದ್ದಾರೆ. ಶೇ. ೯ ರಷ್ಟು ಜನ ಪ್ರೌಢ ಹಂತದ ಶಿಕ್ಷಣವನ್ನು, ಕೇವಲ೯ ಜನ ಪದವಿ ಶಿಕ್ಷಣವನ್ನು ಮತ್ತು ೬ ಜನ ಮಾತ್ರ ಉನ್ನತ ಶಿಕ್ಷಣ ಪಡೆದಿದ್ದಾರೆ. ಉನ್ನತ ಶಿಕ್ಷಣ ಪಡೆದವರೆಲ್ಲ ಹೆಚ್ಚಿನವರು ಮೊದಲ ತಲೆಮಾರಿನವರಾಗಿ ಈ ಹಂತವನ್ನು ತಲುಪಿದ್ದಾರೆ.

ಬಳ್ಳಾರಿ ಜಿಲ್ಲೆಯ ಡೊಂಬರ ಶೈಕ್ಷಣಿಕ ಸ್ಥಾನಮಾನ

ಶೈಕ್ಷಣಿಕ ಸ್ಥಾನಮಾನ ಗಂಡಸರು ಹೆಂಗಸರು ಒಟ್ಟು
ಅನಕ್ಷರಸ್ಥರು ೯೨ ೧೧೪ ೨೦೬
ಪ್ರಾಥಮಿಕ ಹಂತ ೧೩೩ ೯೭ ೨೩೦
ಪ್ರೌಢ ಹಂತ ೩೮ ೨೫ ೬೩
ಪದವಿ ಪೂರ್ವ ೧೭ ೨೬
ಪದವಿ ಶಿಕ್ಷಣ
ಉನ್ನತ ಶಿಕ್ಷಣ

ಭೂ ಹಿಡುವಳಿ

ಬಳ್ಳಾರಿ ಜಿಲ್ಲೆಯಲ್ಲಿ ೫ ತಾಲೂಕುಗಳಲ್ಲಿ ಒಟ್ಟು ೧೦೧ ಡೊಂಬರ ಕುಟುಂಬಗಳಿವೆ. ಅದರಲ್ಲಿ ೫೩ ಕುಟುಂಬಗಳಿಗೆ ಮಾತ್ರ ಕೃಷಿಭೂಮಿ ಇದೆ. ೪೮ ಕುಟುಂಬಗಳು ಭೂರಹಿತ ಕುಟುಂಬಗಳಾಗಿವೆ. ೫೩ ಕುಟುಂಬಗಳು ಒಟ್ಟಾರೆಯಾಗಿ ಹೊಂದಿರುವ ಭೂಮಿ ೨೪೪ ಎಕರೆ. ಅದರಲ್ಲಿ ೧೯೮ ಎಕರೆ ಒಣಭೂಮಿ, ೪೮ ಎಕರೆ ನೀರಾವರಿ ಭೂಮಿ. ಅದು ೪೮ ಎಕರೆ ನೀರಾವರಿ ಭೂಮಿಯು ೧೮ ಕುಟುಂಬಗಳಲ್ಲಿ ಹಂಚಿಹೋಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೃಷಿಭೂಮಿ ಹೊಂದಿರುವ ಬಹುತೇಕ ಎಲ್ಲ ಕುಟುಂಬಗಳು ಚಿಕ್ಕ ಹಿಡುವಳಿದಾರರೇ ಆಗಿದ್ದಾರೆ. ಅಂದರೆ ಕೃಷಿಯು ಈ ಕುಟುಂಬಗಳಿಗೆ ತೃಪ್ತಿಕರ ಆದಾಯದ ಮೂಲವಾಗಿ ಉಳಿದಿಲ್ಲ. ಬಹುತೇಕ ಎಲ್ಲ ಭೂರಹಿತ ಕುಟುಂಬಗಳು ಹೆಚ್ಚಾಗಿ ಕೃಷಿ ಕೂಲಿಗಳಾಗಿ ಜೀವನ ಸಾಗಿಸುತ್ತಿವೆ.

ಬಳ್ಳಾರಿ ಜಿಲ್ಲೆಯ ಭೂಹಿಡುವಳಿಯ ಪಟ್ಟಿ

ನೆಲೆಗಳು

ಕುಟುಂಬ ಗಳು

ಹೊಂದಿರುವ ಭೂಹಿಡುವಳಿ

ಭೂರಹಿತ ಕುಟುಂಬ ಗಳು

ಒಣ ನೀರಾವರಿ ಒಟ್ಟು
ಬಳ್ಳಾರಿ

ಹೊಸಪೇಟೆ

ಕಮಲಾಪುರ

ಕೂಡ್ಲಿಗಿ

೧೮

೨೮

೩೩

೧೦

ನಾಗರಹುಣಸೆ

ದಿಬ್ಬದಹಳ್ಳಿ

೪೩

೧೪

೫೭

ಸೋವೇನಹಳ್ಳಿ

೧೨

೧೭

೧೭

ಮರಬನಹಳ್ಳಿ

೧೨

೧೯

೧೯

ಕರ್ನಾರಹಟ್ಟಿ

೧೯

೨೫

೨೫

ಸಂಡೂರು

೧೨

೫೫

೩೫

ಬೂದುಗುಪ್ಪ

೨೫

೨೯

೫೪

ಒಟ್ಟು

೧೦೧

೧೯೮

೪೮

೨೪೪

೪೮

ಅವಲಂಬಿಸಿರುವ ಕಸುಬುಗಳು

ಶೇ.೪೦ ಕ್ಕೂ ಹೆಚ್ಚು ಜನ ಅನಕ್ಷರಸ್ಥರಾಗಿರುವುದರಿಂದ ಇವರು ಸರಕಾರಿ ಉದ್ಯೋಗವನ್ನು ದೊರಕಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಜಿಲ್ಲೆಯ ೪೮ ಕುಟುಂಬಗಳು ಅಂದರೆ ಸರಿಸುಮಾರು ಅರ್ಧದಷ್ಟು ಕುಟುಂಬಗಳು ಭೂರಹಿತವಾಗಿವೆ. ಈ ಎಲ್ಲ ಜನ ಜಿಲ್ಲೆಯಲ್ಲಿ ಕೃಷಿಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆ ಹೂವಿನ ವ್ಯಾಪಾರ, ಮನೆ ಕಟ್ಟುವುದು, ಸೋಡಾ ವ್ಯಾಪಾರ, ಬೀಡಾ ಅಂಗಡಿಯಂತಹ ಚಿಕ್ಕ ಚಿಕ್ಕ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಡೀ ಜಿಲ್ಲೆಯಲ್ಲಿ ೧೯ ಜನ ಮಾತ್ರ ಸರಕಾರಿ ನೌಕರಿಯಲ್ಲಿದ್ದು, ೨ ಜನ ಮಾತ್ರ ಬಿ ದರ್ಜೆಯ ನೌಕರಿಯಲ್ಲಿದ್ದರೆ, ಉಳಿದ ೧೭ ಜನ ಡಿ ದರ್ಜೆಯ ನೌಕರರಾಗಿದ್ದಾರೆ. ಅದರಲ್ಲಿ ಹೆಚ್ಚಿನವರು ಡ್ರೈವರ್‌ಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ.

ಹೀಗಾಗಿ ಭಾರತದ ಕಸುಬುದಾರ ಸಮುದಾಯಗಳು ತಮ್ಮ ಪಾರಂಪರಿಕ ವೃತ್ತಿಗಳಲ್ಲಿ ತಮಗಿಚ್ಛೆ ಬಂದಂತೆ ಮುಂದುವರಿಯುವ ಸಾಧ್ಯತೆಗಳಿರಲಿಲ್ಲ. ಅಲ್ಲದೆ ಸಾಮಾಜಿಕ ಅವಮಾನಕ್ಕೆ ಕಾರಣವಾಗುವ ತಮ್ಮ ಪಾರಂಪರಿಕ ವೃತ್ತಿಗಳನ್ನು ಬಿಟ್ಟುಕೊಡಲು ಈ ಸಮುದಾಯಗಳು ಹಾತೊರೆದವು. ವಿದ್ವಾಂಸರು ಸಂಸ್ಕೃತಿ ಚಿಂತಕರು ನಮ್ಮ ಪರಂಪರೆ, ಸಂಸ್ಕೃತಿ, ವೈವಿಧ್ಯತೆಗಳೆಲ್ಲ ಉಳಿಯಬೇಕೆಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ‘ತಾವು ಅನುಸರಿಸುತ್ತಿರುವ ವೃತ್ತಿಯ ಕಾರಣಕ್ಕಾಗಿಯೇ ಅತ್ಯಂತ ಹೀನಾಯ ಸಾಮಾಜಿಕ ಅವಮಾನವನ್ನು ಶತಮಾನಗಳಿಂದ ಅನುಭವಿಸುತ್ತಿರುವ ಸಮುದಾಯಗಳು ತಮ್ಮ ಪಾರಂಪರಿಕ ವೃತ್ತಿಗಳ ಕುರಿತು ಹೇಗೆ ಯೋಚಿಸುತ್ತಿವೆ’ ಎಂಬ ಪ್ರಾಥಮಿಕ ಪ್ರಶ್ನೆಯನ್ನು ನಾವು ಕೇಳಿಕೊಂಡಿಲ್ಲ. ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ ಯಾರು ಯಾವ ವೃತ್ತಿಯನ್ನಾದರೂ ಹಿಡಿಯಬಹುದು, ಹೇಗೆ ಬೇಕಾದರೂ ತಮ್ಮ ಬದುಕಿನ ವಿಧಾನಗಳನ್ನು ಬದಲಿಸಿಕೊಳ್ಳಬಹುದು. ಆಥಿರ್ಕವಾಗಿ ಬಲಗೊಳ್ಳಲು ಆಧುನಿಕ ಜಗತ್ತಿನ ಯಾವ ವೃತ್ತಿಯನ್ನಾದರೂ ಅವಲಂಬಿಸಬಹುದು ಎಂಬ ಸ್ವಾತಂತ್ರ್ಯವನ್ನು ‘ಆಧುನಿಕ ಸಮುದಾಯಗಳು’ ಅನುಭವಿಸುತ್ತಿವೆ. ಈ ‘ಆಧುನಿಕ ಸಮಾಜಗಳು’ ಬಿಟ್ಟುಕೊಟ್ಟಿರುವ ‘ಪರಂಪರೆ’ಯ ಕುರಿತು ಯಾವ ಸಂಸ್ಕೃತಿ ಚಿಂತಕರೂ ತಲೆಕೆಡಿಸಿಕೊಳ್ಳುವುದಿಲ್ಲ. ‘ಭಾರತೀಯ ಸಂಸ್ಕೃತಿ’ಯ ನಿರ್ಮಾತೃಗಳು ಮತ್ತು ಅದರ ನಿಜ ವಾರಸುದಾರರೆಂದು ಹೇಳಿಕೊಳ್ಳುವ ಅವರೇ ತಮ್ಮ ಪರಂಪರೆಯ ವೃತ್ತಿಗಳನ್ನು ಯಾವ ಮುಲಾಜು ಇಲ್ಲದೆ ಬಿಟ್ಟುಕೊಟ್ಟು, ವಿವಿಧ ಆಧುನಿಕ ವೃತ್ತಿಗಳನ್ನು ಹಿಡಿದು ಸಂತೃಪ್ತಿಯಿಂದಿದ್ದಾರೆ. ಇವರೆಲ್ಲ ಈ ದೇಶದ ಪ್ರಬಲ ಜಾತಿಗಳಿಗೆ ಸೇರಿದವರು. ಇವರನ್ನು ಯಾರೂ ನಿಮ್ಮ ಸಂಸ್ಕೃತಿಯನ್ನು ಯಾಕೆ ಬಿಟ್ಟುಕೊಟ್ಟಿರಿ? ಎಂದು ಪ್ರಶ್ನಿಸಲಾರರು. ಆದರೆ ಕೆಳಜಾತಿಗಳು, ಆದಿವಾಸಿಗಳು ‘ಆಧುನಿಕ’ವಾಗಲು ಹೊರಟವೆಂದರೆ ಸಾಕು ಈ ಪಂಡಿತರು ಚಡಪಡಿಸಲಾರಂಭಿಸುತ್ತಾರೆ. ಕನ್ನಡವನ್ನು ‘ದಲಿತರು ಮಾತ್ರ ಉಳಿಸಬಲ್ಲರು’ ಎಂಬ ಒಣ ತರ್ಕಗಳನ್ನು ಹರಿಬಿಡುತ್ತಾರೆ. ಈ ಆಧುನಿಕೋತ್ತರ ನವಸಂಪ್ರದಾಯವಾದಿಗಳು ಭಾರತದ ಬಹುತ್ವ ‘ಉಳಿಯಲೇಬೇಕು’, ಅದು ಉಳಿಯ ಬೇಕೆಂದರೆ ಪರಂಪರೆಯ ತಿಳುವಳಿಕೆ ಮತ್ತು ಚಹರೆಗಳು ಉಳಿಯಬೇಕು ಎನ್ನುತ್ತಾರೆ. ಇದು ಬುದ್ಧಿಜೀವಿಗಳೆನ್ನಿಸಿ ಕೊಳ್ಳುವವರ ಒಳಗೇ ಇರುವ ಸುಪ್ತ ಮೂಲಭೂತವಾದವೇ ಆಗಿದೆ. ಭಾರತದ ಬಹುತ್ವ ಅಂದೂ ಮತ್ತು ಇಂದು ಜೀವಂತವಿರುವುದು ಈ ದೇಶದ ಶ್ರಮಜೀವಿಗಳಿಂದಾಗಿ. ಅವರೇ ಈ ದೇಶದ ನಿಜ ಸಂಸ್ಕೃತಿಯ ವಾರಸುದಾರರು. ಆಳುವ ವರ್ಗದ ಎಲ್ಲ ಬಗೆಯ ಹಿಂಸೆ, ಮತ್ತು ಕ್ರೌರ್ಯಗಳನ್ನು ಅನುಭವಿಸಿಯೂ ಈ ನೆಲದ ಅನನ್ಯತೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಆ ಕಾರಣಕ್ಕಾಗಿ ಸಾಮಾಜಿಕ ಮತ್ತು ರಾಜಕೀಯಾರ್ಥಿಕ ಸ್ವಾತಂತ್ರ್ಯಗಳನ್ನು ಶತಮಾನಗಳಿಂದ ಕಳೆದುಕೊಳ್ಳುತ್ತಲೇ ಬಂದಿದ್ದಾರೆ.

ಆದರೆ ಇಂದು ದುಡಿವ ವರ್ಗದ ಜನ ತಮ್ಮ ವೃತ್ತಿಗಳನ್ನು ಬಿಟ್ಟುಕೊಡಲು ಯೋಚಿಸುತ್ತಿದ್ದಾರೆ. ಕೃಷಿಕರಲ್ಲದ, ಸಾಮಾಜಿಕವಾಗಿ ‘ಹೀನ’ ವೃತ್ತಿಗಳನ್ನು ಅವಲಂಬಿಸಿರುವ ಬಹುತೇಕ ಎಲ್ಲ ಸಮುದಾಯಗಳು ಸಾಮಾಜಿಕ ಅವಮಾನವನ್ನು ಮೀರಿ ನಿಲ್ಲಲು ತಮ್ಮ ವೃತ್ತಿಗಳನ್ನು ಬಿಟ್ಟುಕೊಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಸಮುದಾಯಗಳು, ಇಂಡಿಯಾವೆಂಬ ದೇಶವೊಂದಿದೆಯೋ ಇಲ್ಲವೋ, ಅದರ ಸಾಂಸ್ಕೃತಿಕ ಬಹುತ್ವ ಇರಬೇಕೋ. ನಾಶವಾಗಬೇಕೋ ಎಂಬುದಕ್ಕಿಂತ ಒಂದು ಹೊತ್ತಿನ ಊಟದ ಕುರಿತು, ತಲೆ ಎತ್ತಿ ನಿಲ್ಲಿಸುವ ಆತ್ಮಪ್ರತ್ಯಯದ ಕುರಿತು ಯೋಚಿಸುತ್ತಿವೆ. ಆಧುನಿಕ ಜಗತ್ತಿನಲ್ಲಿ ಬಿಡಿಗಾಸನ್ನೂ ತರದ ಮತ್ತು ಹಿಂಸಾತ್ಮಕ ಸಾಮಾಜಿಕ ಅವಮಾನಕ್ಕೆ ಕಾರಣವಾಗುವ ಪಾರಂಪರಿಕ ವೃತ್ತಿಗಳನ್ನು ಅವರು ಬಿಟ್ಟುಕೊಡುತ್ತಿದ್ದಾರೆ. ಆದರೆ ಅಲೆಮಾರಿಗಳಿಗೆ ಈ ಅನುಕೂಲತೆಯೂ ಇಲ್ಲ. ಈ ಸಮುದಾಯಗಳು ಒಪ್ಪತ್ತಿನ ಊಟಕ್ಕೆ ತಮ್ಮ ವೃತ್ತಿಗಳನ್ನು ಇನ್ನೂ ಅನುಸರಿಸಲೇ ಬೇಕಾದ ಕ್ರೂರ ಅನಿವಾರ್ಯತೆಯ ಮುಂದೆ ಮಂಡಿಯೂರಿಬಿಟ್ಟಿವೆ.

ಆದರೆ ಸ್ವಾತಂತ್ರ್ಯಾ ನಂತರದ ಕಾಲಘಟ್ಟದಲ್ಲಿ ಅಲೆಮಾರಿಗಳು ಶುದ್ಧ ಅಲೆಮಾರಿಗಳಾಗಿ ಉಳಿಯಲಿಲ್ಲ. ಅಲೆಮಾರಿಗಳ ಮೇಲ್‌ಸ್ತರದ ಜನ ಮುಖ್ಯಪ್ರವಾಹಕ್ಕೆ ಬರುವ ನಿಟ್ಟಿನಲ್ಲಿ ಯೋಚಿಸತೊಡಗಿದರು. ತಮ್ಮ ಪಾರಂಪರಿಕ ವೃತ್ತಿಗಳನ್ನು ಕೆಲವರು ಬಿಟ್ಟುಕೊಟ್ಟು ಕೃಷಿಕರಾಗಲು ಯತ್ನಿಸಿದರು. ಶಿಕ್ಷಣ ಪಡೆದು ಔದ್ಯೋಗಿಕ ರಂಗಗಳಲ್ಲಿ ಪ್ರವೇಶ ಪಡೆದರು. ಆದರೆ ಇವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ೧೯೫೨ರಲ್ಲಿ ಕ್ರಿಮಿನಲ್ ಟ್ರೈಬಲ್ ಆಕ್ಟ್‌ನ್ನು ರದ್ದುಗೊಳಿಸಿ, ಆ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಡಿನೋಟಿಫೈಡ್ ಸಮುದಾಯಗಳೆಂದು ಪರಿಗಣಿಸಲಾಯ್ತು. ಆದರೆ ಮೀಸಲತಿಗೆ ಸಂಬಂಧಿಸಿದಂತೆ ಇವರಿಗೆ ಯಾವ ಅನುಕೂಲತೆಗಳೂ ಇರಲಿಲ್ಲ. ಕರ್ನಟಕದಲ್ಲಿ ಈ ಸಮುದಾಯಗಲು ೧೯೭೮ರ ವರೆಗೂ ಸರಕಾರದ ಯಾವ ಸೌಲಭ್ಯಗಳನ್ನು ಪಡೆಯಲು ಅನರ್ಹವಾಗಿದ್ದವು. ಏಕೆಂದರೆ ಡಿನೋಟಿಫೈಡ್ ಸಮುದಾಯಗಳಿಗೆ ಕೊಡಮಾಡುವ ಯಾವ ಕಾರ್ಯಕ್ರಮಗಳಾಗಲಿ, ಯೋಜನೆಗಳಾಗಲಿ ಸರಕಾರದ ಮುಂದಿರಲಿಲ್ಲ. ಬದಲಿಗೆ ಕಂಪನಿ ಆಡಳಿತ ಈ ಸಮುದಾಯಗಳನ್ನು ಹೇಗೆ ನಡೆಸಿಕೊಂಡಿತೋ ಅದೇ ಬಗೆಯಲ್ಲಿ ಸ್ವತಂತ್ರ ಭಾರತದ ಸರಕಾರವೂ ನಡೆಸಿಕೊಂಡಿತು. ಯಾವುದೇ ಊರಲ್ಲಿ ಕಳ್ಳತನವಾದರೂ ಮೊದಲು ಬಂಧಿಸುವುದು, ಆ ಊರಿನ ಹೊರಗೆ ಗುಡಿಸಿ ಹಾಕಿಕೊಂಡು ತಾತ್ಕಾಲಿಕವಾಗಿ ಬದುಕುವ ಅಲೆಮಾರಿಗಳನ್ನ. ಹೊಸಪೇಟೆ ಬಳಿ ಇರುವ ಹಕ್ಕಿಪಿಕ್ಕಿಗಳು ಸ್ವಾತಂತ್ರ ಬಂದು ೫೭ ವರ್ಷಗಳು ಕಳೆದು ಹೋಗಿದ್ದರೂ ಅಮಾವಾಸೆಯ ರಾತ್ರಿ ಪೊಲೀಸ್ ಠಾಣೆಯಲ್ಲಿ ಹೋಗಿ ಮಲಗುವ ಪರಿಸ್ಥಿತಿ ಇತ್ತು. ಹೊಟ್ಟೆ ಪಾಡಿಗೆ ಯಾರಾದರೂ ಹಕ್ಕಿಪಿಕ್ಕಿಗಳು ಯಾವುದೋ ಪಕ್ಷಿಯನ್ನು ಹೊಡೆದು ತಿಂದು ಬಿಟ್ಟರೆ ಅವರನ್ನು ಬಂಧಿಸಿ ಫೋಟೋ ತೆಗೆಸಿ ನಮ್ಮ ಪೊಲೀಸರು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳಲು ಈಗಲೂ ಹಾತೊರೆಯುತ್ತಾರೆ. ಒಂದು ಅಮಾಯಕ ಸಮುದಾಯದ ಬದುಕನ್ನು ಹಸನು ಮಾಡದ ವ್ಯವಸ್ಥೆಗೆ ಎಷ್ಟೇ ವರ್ಷದ ಇತಿಹಾಸವಿದ್ದರೂ, ಅದಕ್ಕೆ ಮಾನವಂತ ಭವಿಷ್ಯ ರೂಪಗೊಳ್ಳಲಾರದು. ಹಕ್ಕಿಪಿಕ್ಕಿಯಂತಹ ಸಮುದಾಯಗಳಿಗೆ ಈ ದೇಶದ ಯಾವ ಹಕ್ಕುಗಳು ದಕ್ಕದೇ ಇದ್ದ ಸಂದರ್ಭದಲ್ಲಿ ಅವರನ್ನು ಕಾನೂನಿನ ಮೂಲಕ ದಂಡಿಸುವ ಯೋಚನೆಯೇ ಅತ್ಯಂತ ಅಮಾನವೀಯವಾದದ್ದು. ನಾಗರಿಕವಾಗಿ ಈ ದೇಶದ ಸಂಪತ್ತಿನಲ್ಲಿ ಅವರಿಗೆ ಸಮಪಾಲಿದೆ. ಬದುಕುವ ಹಕ್ಕು, ಶಿಕ್ಷಣ ಪಡೆವ ಹಕ್ಕು, ಮಾತನಾಡುವ ಹಕ್ಕುಗಳಿವೆ. ಆದರೆ ನಮ್ಮ ಸರ್ಕಾರ ಇನ್ನೂ ಕಂಪನಿ ಆಡಳಿತದ ಕಾನೂನುಗಳ ಗುಂಗಿನಿಂದೆ ಹೊರ ಬಂದಿಲ್ಲ.

ಬಳ್ಳಾರಿ ಜಿಲ್ಲೆಯ ಡೊಂಬರು ಅವಲಂಬಿಸಿರುವ ಕಸುಬುಗಳು

ನೆಲೆ ಕುಟುಂಬಗಳ

ಸಂಖ್ಯೆ

ಕೃಷಿ ಕಸುಬು

ಕೃಷಿ ಕೂಲಿ

ವ್ಯಾಪಾರಸ್ಥರು

ಸರಕಾರಿ ಹುದ್ದೆ

ಇತರೆ ಖಾಸಗಿ

ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು ಗಂಡು ಹೆಣ್ಣು ಒಟ್ಟು
ಬಳ್ಳಾರಿ
ಹೊಸಪೇಟೆ
ಕಮಲಾಪುರ ೧೨
ಕೂಡ್ಲಿಗಿ ೧೮
ನಾಗರಹುಣಸೆ
ಎ. ದಿಬ್ಬದಹಳ್ಳಿ ೧೫ ೧೩ ೨೮
ಸೋವೆನಹಳ್ಳಿ ೧೨ ೧೮
ಮರಬನಹಳ್ಳಿ ೧೧ ೧೩ ೧೭
ಕರ್ನಾರಹಟ್ಟಿ ೧೯ ೧೩ ೧೬ ೨೯
ಸಂಡೂರು ೧೨ ೧೫ ೧೨ ೧೫
ಬೂದುಗುಪ್ಪ ೧೨
ಒಟ್ಟು ೧೦೧ ೩೯ ೩೭ ೭೬ ೬೦ ೧೧೬ ೨೨ ೨೯ ೧೪ ೧೯ ೩೬ ೪೪

ಈವತ್ತು ಒಂದು ಕಾಲದ ಅಲೆಮಾರಿಗಳು ನೆಲೆನಿಲ್ಲಲು ಇನ್ನಿಲ್ಲದಂತೆ ಯತ್ನಿಸುತ್ತಿದ್ದಾರೆ. ಈಗಾಗಲೆ ಬಹುತೇಕ ಅಲೆಮಾರಿಗಳು ನೆಲೆ ನಿಂತಿದ್ದಾರೆ. ಆದರೆ ಮುಖ್ಯವಾಹಿನಿಯ ಆರ್ಥಿಕ ಚಲನೆಗಳ ಜೊತೆ ಅವರಿಗೆ ಅನುಸಂಧಾನ ಸಾಧ್ಯವಾಗುತ್ತಿಲ್ಲ. ಅಲೆಮಾರಿಗಳ ವರ್ತಮಾನದ ಸ್ಥಿತಿಗತಿಗಳಿಗೂ ಮತ್ತು ಕೆಳಜಾತಿ ಸಮುದಾಯಗಳ ಸ್ಥಿತಿಗತಿಗಳಿಗೂ ಭಾರತದ ಸಾಮಾಜಿಕ ಅಧಿಕಾರದ ಹಂಚಿಕೆಯ ವ್ಯವಸ್ಥೆಯಲ್ಲಿ ಒಂದೇ ಬಗೆಯ ಕಾರಣಗಳಿದ್ದರೂ ಸಹ, ಆರ್ತಿಕ, ರಾಜಕೀಯ ಮತ್ತು ಶೈಕ್ಷಣಿಕ ವಲಯಗಳಲ್ಲಿ ಅರ್ಹ ಸೌಲಭ್ಯಗಳನ್ನು ಪಡೆಯುವಾಗ ಈ ಸಮುದಾಯಗಳು ತಲ್ಲಣಗೊಳ್ಳುತ್ತವೆ. ಜಾತಿಪ್ರಮಾಣ ಪತ್ರ ಪಡೆಯುವ ಪ್ರಾಥಮಿಕ ಹಂತದಿಂದಲೂ ಇವು ಹೋರಾಟ ನಡೆಸಬೇಕಿದೆ. ಇನ್ನು ಮೀಸಲಾತಿಯೊಂದಿಗೆ ಮುಖ್ಯಪ್ರವಾಹದ ವೇಗದ ಲಯಕ್ಕೆ ಅಲೆಮಾರಿಗಳು ಒಗ್ಗುವುದಕ್ಕೆ ಎಷ್ಟು ತಲೆಮಾರುಗಳು ಬೇಕು? ನಾವೆಲ್ಲ ಮತ್ತೆ ಮತ್ತೆ ಈ ಕುರಿತು ಯೋಚಿಸಬೇಕಿದೆ.

ಪರಾಮರ್ಶನಗ್ರಂಥಗಳು

೧. ಅಂಬೇಡ್ಕರ್‌ ಬರಹಗಳು ಮತ್ತು ಭಾಷಣಗಳು, ಸಂ.೧, ಕನ್ನಡ ಸಂಸ್ಕೃತಿ ಇಲಖೆ, ಬೆಂಗಳೂರು, ೧೯೯೦

೨. ಭಾರತದ ಆರ್ಥಿಕ ವ್ಯವಸ್ಥೆ, ಎ.ಐ. ಮಿದವೊಯ್, ಅನು. ಕೆ.ಎಲ್. ಗೋಪಾಲಕೃಷ್ಣ ರಾವ್, ಪ್ರಗತಿ ಪ್ರಕಾಶನ, ೧೯೮೭

೩. ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಡಾ. ಎಂ. ಚಿದಾನಂದಮೂರ್ತಿ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೮೫

೪. ಜಾನಪದ ೧೯೯೨, ಸಂ.ಡಾ. ವೀರಣ್ಣ ದಂಡೆ, ಕರ್ನಾಟಕ ಜನಪದ ಮತ್ತು ಯಕ್ಷಗಾನ ಅಕಾಡೆಮಿ, ೧೯೯೫

೫. ಜಾನಪದ ಸಾಹಿತ್ಯ ದರ್ಶನ ೧೭, ಸಂ. ಸೋಮಶೇಖರ ಇಮ್ರಾಪುರ, ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೬. ಹೆಳವರ ಸಂಸ್ಕೃತಿ ಡಾ. ಹರಿಲಾಲ್‌ಪವಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೭. ಹಕ್ಕಿಪಿಕ್ಕಿಯರ ಸಂಸ್ಕೃತಿ, ಡಾ. ರಾಜ್ಪ ದಳವಾಯಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೮. ಗೊಂಬೆರಾಮರ ಸಂಸ್ಕೃತಿ, ಟಿ.ಗೋವಿಂದರಾಜು, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೯. ದುರುಗಮುರುಗಿಯರ ಸಂಸ್ಕೃತಿ, ಗೀತಾನಾಗಭೂಷಣ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೦. ಸುಡುಗಾಡು ಸಿದ್ಧರ ಸಂಸ್ಕೃತಿ, ಡಾ. ಪಿ.ಕೆ. ಖಂಡೋಬ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೧. ಗೊರವರ ಸಂಸ್ಕೃತಿ, ಡಾ. ಚಕ್ಕೆರೆ ಶಿವಶಂಕರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೨. ಯಾನಾದಿಗರ ಸಂಸ್ಕೃತಿ, ಡಾ. ಟಿ. ನಾರಾಯಣ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೩. ಹಗಲುವೇಷಗಾರರ ಸಂಸ್ಕೃತಿ, ಯಳನಾಡು ಅಂಜಿನಪ್ಪ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೪. ಡೊಂಬರ ಸಂಸ್ಕೃತಿ, ದೇವೇಂದ್ರ ಕುಮಾರ ಹಕಾರಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೫. ಅಡವಿ ಚೆಂಚರ ಸಂಸ್ಕೃತಿ, ಪ್ರಹ್ಲಾದ್ ಬೆಟಗೇರಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೬. ಮೊಂಡರ ಸಂಸ್ಕೃತಿ, ಎನ್. ಚಂದ್ರಪ್ಪ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೭. ದಕ್ಕಲರ ಸಂಸ್ಕೃತಿ, ಚಲುವರಾಜು, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೮. ಗೊಂದಲಿಗರ ಸಂಸ್ಕೃತಿ, ಡಾ. ನಿಂಗಣ್ಣ ಸಣ್ಣಕ್ಕಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೯೯೩

೧೯. ದಲಿತರ ಬದುಕು ಮತ್ತು ಸಂಸ್ಕೃತಿ, ಡಾ. ಅರ್ಜುನ ಗೊಳಸಂಗಿ, ವಿಮೋಚನ ಪ್ರಕಾಶನ, ಅಥಣಿ, ೨೦೦೦

೨೦. ಸುವರ್ಣ ಜಾನಪದ ಸಂ.೧, ಸಂ. ಡಾ. ಹಿ.ಶಿ. ರಾಮಚಂದ್ರೇಗೌಡ, ಕೃಷ್ಣಮೂರ್ತಿ ಹನೂರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ೧೯೯೮

೨೧. ಕರ್ನಾಟಕ ಲಂಬಾಣಿಗರು ಒಂದು ಸಾಂಸ್ಕೃತಿಕ ಅಧ್ಯಯನ, ಡಾ. ಪಿ.ಕೆ.ಖಂಡೋಬಾ, ದಿ. ತೇಜಸಿಂಗ್‌ರಾಠೋಡ್, ಮೆಮೋರಿಯಲ್ ಟ್ರಸ್ಟ್, ಗುಲ್ಬರ್ಗಾ, ೧೯೯೧

೨೨. ಜಾತಿಗಾರರ ಜಾತಕ, ಜ್ಯೋತಿ ಹೊಸೂರು, ಜಾನಪದ ಮಂಟಪ, ಕಾಲಗತಿ ಪ್ರಕಾಶನ ರಾಯಬಾಗ, ೧೯೮೫

೨೩. ಜಾನಪದ ಜಗತ್ತು, ಸಂ: ಎಚ್.ಜೆ.ಲಕ್ಕಪ್ಪಗೌಡ, ಗೊ ರು ಚನ್ನಬಸಪ್ಪ, ಜಾನಪದ ಪರಿಷತ್ತು, ೧೯೮೦

೨೪. ಬದಲಾಗುತ್ತಿರುವ ಸಂದರ್ಭದಲ್ಲಿ ಡೊಂಬರ ಸಾಮಾಜಿಕಾರ್ಥಿಕ ಸ್ಥಿತಿಗತಿಗಳು (ಬಳ್ಳಾರಿ ಜಿಲ್ಲೆಯನ್ನು ಪರಿಗಣಿಸಿ) ಎಚ್.ಹನುಮೇಶ್‌, ಅಪ್ರಕಟಿತ ಎಂ.ಫಿಲ್ ಸಂಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨೫. Cate in Modern India, M.N. Srinivas, Media promoters & Publishers PVT LTD, Bombay 1992

೨೬. The Nomadic alternative, Ed: Woldaana Weissleder, Moutan Publishers, Chicago – 1977

೨೭. Social life in Medival Karnataka Jyotsna, K. Kamat, Abhinav Publications, New Delhi, 1980

೨೮. Budhan, Ed: G.N. Devy, No.3, June, 1998, The DNT Rights Action Groop News Letter.

೨೯. At the Bottom of Indian Society, Stephen Fuchs, Munshiram Manoharlal Publishers pvt Ltd, 1981

೩೦. Essays on Indian History, Irfan Habib, Tulika, 1995

೩೧. The Agrarian System of Mughal Inida 1556-1707, Irfan Habib, Oxford University Press, 1999

೩೨. Making History, Karnataka’s People and their past, Vol-1, Saki, Vimukthi Prakashana, Bangalore, 1998

೩೩. Land and Souereignty in India, Agrarian Society and politics under the 18th century Maratha Svarajya, Andre Wink, Cambridge University Press, 1996.

೩೪. Castes & Tribes of Southern India, Edgar Thurston, K. Rangachari, Asisan Educational services, New Delhi, 1909

೩೫. Social and Economic History of Early Deccan, Ed: Alok parasher Sen, Manohar, 1993.

೩೬. The Mysore Tribes and Castes, H.V. Nanjundiah, Anath Krishnna Iyer, Mittal Publications, New Delhi

೩೭. The Medieval Deccan, Peasants, Social Systems and States, Sixteenth to Eighteenth centuries, Hiroshi Fukazawa, Oxford University Press, 1998.

* * *

 

 


[1] ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂ.೧, ಅಂಬೇಡ್ಕರ್ ಪು. ೭, ೧೯೯೦

[2] ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ ಡಾ. ಎಂ. ಚಿದಾನಂದಮೂರ್ತಿ, ಪು. ೪, ೧೯೮೫.

[3] ಹೆಳವರ ಸಂಸ್ಕೃತಿ, ಡಾ. ಹರಿಲಾಲ್ ಪವಾರ್, ೧೯೯೩

[4] ಹಕ್ಕಿಪಿಕ್ಕಿಯರ ಸಂಸ್ಕೃತಿ, ಡಾ. ರಾಜಪ್ಪ ದಳವಾಯಿ, ೧೯೯೩

[5] ಸುಡುಗಾಡುಸಿದ್ಧರ ಸಂಸ್ಕೃತಿ, ಡಾ. ಖಂಡೋಬ ೧೯೯೩

[6] ಕವಲೆತ್ತಿನವರು, ಸುವರ್ಣ ಜಾನಪದ ಸಂ.೧, ಎಂ.ಎಸ್. ಲಠೆ, ೧೯೯೮.

[7] ಕ್ಯಾಸ್ಟ್‌ಆಂಡ್ ಟ್ರೈಬ್ಸ್ ಆಫ್ ಸದರ್ನ್ ಇಂಡಿಯಾ, ಸಂ. ೧. ಥರ್ಸಟನ್, ಪು. ೧೯೭, ೧೯೦೯

[8] ದೊಂಬನ ಕೊಡುಗೆ, ಜಾನಪದ ಜಗತ್ತು, ಸಿ.ಪಿ. ನಾಗರಾಜು ಪು.೪೦-೪೧, ೧೯೮೦

[9] ಕ್ಯಾಸ್ಟ್ ಆಂಡ್ ಟ್ರೈಬ್ಸ್ ಆಫ್ ಸದರ್ನ್‌ಇಂಡಿಯಾ, ಸಂ.೧ ಥರ್ಸಟನ್, ಪು ೧೭೬. ೧೯೦೯

[10] ಜಾತಿಗಾರರ ಜಾತಕ, ಜ್ಯೋತಿಹೊಸೂರು, ಪು.೧೦-೧೧, ೧೯೮೫

[11] ಮೇಕಿಂಗ್ ಹಿಸ್ಟ್ರಿ, ಕರ್ನಾಟಕಾಸ್ ಪೀಪಲ್ ಆಂಡ್ ದೇರ್ ಪಾಸ್ಟ್, ಸಂ. ೧, ಸಾಕಿ, ೧೭೩, ೧೯೯೮.

[12] ಲ್ಯಾಂಡ್ ಆಂಡ್ ಸಾವರಂಟಿ ಇನ್ ಇಂಡಿಯಾ, ಆಗ್ರೇರಿಯನ್ ಸೊಸೈಟಿ ಆಂಡ್ ಪಾಲಿಟಿಕ್ಸ್ ಅಂಡರ್ ದಿ ಎಹ್ಟೀನ್ತ್ ಸೆಂಚುರಿ ಮರಾಠ ಸ್ವರಾಜ್, ಆಂಡ್ರೆ ವಿಂಕ್. ಪು. ೨೧೪-೨೧೫, ೧೯೯೬

[13] ದಿ ಆಗ್ರೇರಿಯನ್ ಸಿಸ್ಟಮ್ ಆಫ್ ಮೊಗಲ್ ಇಂಡಿಯಾ, ೧೫೫೬-೧೭೦೭, ಇರ್ಫಾನ್ ಹಬೀಬ್, ಪು. ೧೫೭-೧೫೮. ೧೯೯೯

[14] ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಚಿದಾನಂದಮೂರ್ತಿ, ಪು. ೫೬-೫೭, ೧೯೮೫

[15] ದಿ ಆಗ್ರೇರಿಯನ್ ಸಿಸ್ಟಮ್ ಆಫ್ ಮೊಗಲ್ ಇಂಡಿಯಾ, ೧೫೫೬-೧೭೦೭, ಇರ್ಫಾನ್ ಹಬೀಬ್, ಪು. ೧೫೬. ೧೯೯೯

[16] ಮೇಕಿಂಗ್ ಹಿಸ್ಟ್ರಿ, ಕರ್ನಾಟಕಾಸ್ ಪೀಪಲ್ ಆಂಡ್ ದೇರ್ ಪಾಸ್ಟ್, ಸಂ. ೧, ಸಾಕಿ, ೧೭೫, ೧೯೯೮.

[17] ಅದೇ- ಪು.೧೭೫

[18] ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ ಡಾ. ಎಂ. ಚಿದಾನಂದಮೂರ್ತಿ, ಪು. ೧೦೯ – ೧೯೮೫.

[19] ಅದೇ – ಪು.೧೪೩

[20] ಅಟ್ ದಿ ಬಾಡಮ್ ಆಫ್ ಇಂಡಿಯನ್ ಸೊಸೈಟಿ, ಸ್ಟೀಫನ್ ಫಕ್ಸ್, ಪು.೧೨೭, ೧೯೮೧

[21] ಎಸ್ಸೇಸ್ ಆನ್ ಇಂಡಿಯನ್ ಹಿಸ್ಟ್ರಿ, ಇರ್ಫಾನ್‌ಹಬೀಬ್, ಪು.೯೨ ೧೯೯೫

[22] ದಿ ಮಿಡಿವಲ್ ಡೆಕ್ಕನ್, ಪೀಸೆಂಟ್, ಸೋಸಿಯಲ್ ಸಿಸ್ಟಮ್ಸ್ ಆಂಡ್ ಸ್ಟೇಟ್ಸ್, ಸಿಕ್ಸ್‌ಟೀನ್ ಟು ಸೆವೆಂಟೀನ್ತ್ ಸೆಂಚುರೀಸ್, ಹಿರೀಷಿ ಫಕಜವಾ, ಪು. ೧೫೩, ೧೯೯೮.

[23] ದಿ ಮಿಡಿವಲ್ ಡೆಕ್ಕನ್, ಪೀಸೆಂಟ್, ಸೋಸಿಯಲ್ ಸಿಸ್ಟಮ್ಸ್ ಆಂಡ್ ಸ್ಟೇಟ್ಸ್, ಸಿಕ್ಸ್‌ಟೀನ್ ಟು ಸೆವೆಂಟೀನ್ತ್ ಸೆಂಚುರೀಸ್, ಹಿರೀಷಿ ಫಕಜವಾ, ಪು. ೧೫,೪ ೧೯೯೮.

[24] ಭಾರತದ ಆರ್ಥಿಕ ವ್ಯವಸ್ಥೆ, ಎ.ಪಿ. ಮಿದವೋಯ್, ಪು.೩೯, ೧೯೮೭

[25] ಎಸ್ಸೇಸ್ ಆನ್ ಇಂಡಿಯನ್ ಹಿಸ್ಟ್ರಿ, ಇರ್ಫಾನ್ ಹಬೀಬ್, ಪು. ೩೧೩, ೧೯೯೫

[26] ದಿ ಆಗ್ರೇರಿಯನ್ ಸಿಸ್ಟಮ್ ಆಫ್ ಮೊಗಲ್ ಇಂಡಿಯಾ, ೧೫೫೬-೧೭೦೭, ಇರ್ಫಾನ್ ಹಬೀಬ್, ಪು. ೧೪೩. ೧೯೯೯

[27] ದಿ ಬ್ಯಾಡಂಡ್ ಟ್ರೈಬ್ಸ್ ಆಫ್ ಇಂಡಿಯಾ, ಜಿ.ಎನ್.ದೇವಿ, ಪು. ೧, ೧೯೯೮

[28] ಅಟ್ ದಿ ಬಾಟಮ್ ಆಫ್ ಇಂಡಿಯನ್ ಸೊಸೈಟಿ, ಸ್ಟೀಫನ್ ಫಕ್ಸ್, ಪು. ೫೪, ೧೯೮೧

[29] ಆನ್ ಆಕ್ಟ್ ವಾಸ್ ಬಾರ್ನ್, ಮಹಾಶ್ವೇತಾ ದೇವಿ, ಪು.೩, ೧೯೯೮

[30] ಅದೇ ಪು.೩

[31] ಅದೇ ಪು.೩

[32] ದಿ ಬ್ಯಾಡಂಡ್ ಟ್ರೈಬ್ಸ್ ಆಫ್ ಇಂಡಿಯಾ, ಜಿ.ಎನ್.ದೇವಿ, ಪು. ೧, ೧೯೯೮

[33] ಅಟ್ ದಿ ಬಾಟಮ್ ಆಫ್ ಇಂಡಿಯನ್ ಸೊಸೈಟಿ, ಸ್ಟೀಫನ್ ಫಕ್ಸ್, ಪು. ೫೫, ೧೯೮೧