ನನ್ನ ಮಲೆನಾಡನ್ನು ನೆನಪಿಗೆ ತರುವ ಉತ್ತರ ಕರ್ನಾಟಕದ ಉತ್ತರದ ಶೃಂಗಬೀದರ ನಿಜಕ್ಕೂ ನೈಸರ್ಗಿಕ ಹವಾನಿಯಂತ್ರಿತ ಪ್ರದೇಶ. ಜಾನಪದ ಸಂಸ್ಕೃತಿಯ ತವರು. ನೂರಾರು ಕಲೆಗಳ ಆಶ್ರಯ ತಾಣ. ಅಲೆಮಾರಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಒಂದು ರೀತಿಯಲ್ಲಿ ಅಲೆಮಾರಿಗಳ ತವರೂರು ಎಂದಾರೂ ತಪ್ಪಾಗಲಾರದು. ಕನ್ನಡ ವಿಶ್ವವಿದ್ಯಾಲಯಕ್ಕೆ ಬಹುದೂರದ ದಾರಿ ಬೀದರ. ಆದರೂ ಇಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿ. ಬೀದರಿನ ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಒತ್ತಾಸೆಯಿಂದಾಗಿ ಈ ದೇಸಿ ಸಮ್ಮೇಳನ ಇಲ್ಲಿ ಜರುಗಲು ಕಾರಣವಾಗಿದೆ.

ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ಆರಂಭದಿಂದಲೂ ತನ್ನ ವಿಶಿಷ್ಟ ಅಧ್ಯಯನ, ಸಂಶೋಧನೆ ಪ್ರಕಟಣೆ, ಪ್ರಸಾರಗಳ ಮೂಲಕ ಜ್ಞಾನ ಜಗತ್ತಿನಲ್ಲಿ ತನ್ನದೇ ಆದ ಹೆಜ್ಜೆ ಗುರುತನ್ನು ಮೂಡಿಸಿದೆ. ಜನರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೊಸ ಅರಿವನ್ನುಂಟು ಮಾಡಲು ಕರ್ನಾಟಕದಾದ್ಯಂತ ಕಮ್ಮಟ, ವಿಚಾರಸಂಕಿರಣ, ಸಂವಾದ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡುತ್ತಿದೆ. ಬಹುಮುಖ್ಯವಾಗಿ ಅಲಕ್ಷಿತ ವಿಚಾರಗಳನ್ನು ಗುರುತಿಸಿ, ಅವುಗಳನ್ನು ಗಂಭೀರವಾಗಿ ಅಧ್ಯಯನಕ್ಕೆ ಗುರಿಪಡಿಸಿ, ಆ ವಿಚಾರಗಳಲ್ಲಿ ಅಡಗಿರುವ ಜೀವ ಪೋಷಕ ಜ್ಞಾನದ ಬೆಳಕಿನ ಮೂಲಕ ಇಂದಿನ ಸವಾಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಜನಪದರ ಜ್ಞಾನ ತಿಳುವಳಿಕೆಗಳಿಗೆ ತಾರ್ಕಿಕವಾದ ಸಂಸ್ಕಾರ ನೀಡಿ ಮತ್ತೆ ಅದನ್ನು ಅವರಿಗೆ ನೀಡುವ ಕಾರ್ಯವನ್ನು ಈ ದೇಸಿ ಸಮ್ಮೇಳನದ ಮೂಲಕ ಜಾನಪದ ಅಧ್ಯಯನ ವಿಭಾಗವು ಮಾಡುತ್ತಿದೆ.

ಕನ್ನಡ ವಿಶ್ವವಿದ್ಯಾಲಯ ಯಾವ ಬಗೆಯಲ್ಲಿ ಕೆಲಸ ನಿರ್ವಹಿಸಬೇಕು? ಹೇಗೆ ಚಿಂತಿಸಬೇಕು ಎನ್ನುವುದನ್ನು ಕನ್ನಡ ವಿಶ್ವವಿದ್ಯಾಲಯದ ಮೊದಲ ಕುಲಪತಿ ಡಾ. ಚಂದ್ರಶೇಖರ ಕಂಬಾರರ ಈ ಬಗೆಯಲ್ಲಿ ಕನಸು ಕಾಣುತ್ತಾರೆ. “ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಒಂದು ಸಂಸ್ಥೆಯೇ ಹೊರತು, ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ. ಒಂದು ದೃಷ್ಟಿಯಿಂದ ಇದು ವಿದ್ಯೆಯನ್ನು ನಿರ್ಮಿಸುವ ಸಂಸ್ಥೆಯಾಗಿದೆ. ನಮ್ಮ ದೇಶದಲ್ಲಿ ಹಳೆಯ ಕಾಲದ ತಿಳುವಳಿಕೆಯೊಂದಿದೆ. ಅಲ್ಲದೇ ಪಶ್ಚಿಮದಿಂದ ಹರಿದು ಬರುತ್ತಿರುವ ಜ್ಞಾನ ಪ್ರವಾಹವೂ ಇದೆ. ಈ ಎರಡೂ ತಿಳುವಳಿಕೆಗಳು ಒಂದಕ್ಕೊಂದು ಸಂಧಿಸಿ, ಬೆಳಕನ್ನು ಉಂಟುಮಾಡಿವೆ, ಜೊತೆಗೆ ದಿಗ್ಭ್ರಮೆಯನ್ನು ತಂದಿದೆ. ಈ ತಿಳುವಳಿಕೆಗಳ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ. ಇಂಥ ವಿನಿಯೋಗಕ್ಕಾಗಿ ಹೊಸ ಬಗೆಯ ಶಾಸ್ತ್ರ ವಿಧಾನಗಳು ನಮಗಿಂದು ಬೇಕಾಗಿವೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನೆಯ ಗುರಿಯೆಂದರೆ ಈ ಶಾಸ್ತ್ರ ವಿಧಾನಗಳ ನಿರ್ಮಾಣ. ಈ ಬಗೆಯ ಶಾಸ್ತ್ರ-ಕಲೆ, ಅಭಿಜಾತ-ಜಾನಪದ, ಮಾರ್ಗ-ದೇಸಿ, ಸ್ವಕೀಯ-ಪರಕೀಯ, ಪೌರ್ವಾತ್ಯ-ಪಾಶ್ಚಾತ್ಯ ಈ ಬಗೆ ದ್ವಂದ್ವಗಳ ಸಾಮರಸ್ಯ ಮತ್ತು ಸಂಘರ್ಷಗಳ ಒಡಲಿನಲ್ಲಿ ಹುಟ್ಟಿ ಬರುವ ತಿಳುವಳಿಕೆಯನ್ನು ಹಿಡಿದುಕೊಂಡು ಕನ್ನಡದಲ್ಲಿ ಅದಕ್ಕೆ ಅಭಿವ್ಯಕ್ತಿಯನ್ನು ಕೊಡಬೇಕಾಗಿವೆ. ಭಾಷೆಯಲ್ಲಿ ಮೂಡಿ ಬರುವ ತಿಳುವಳಿಕೆ ಮಾತ್ರ ಉಪಯುಕ್ತವಾಗಬಲ್ಲದು. ಅನುವಾದ, ಭಾಷಾಂತರ, ವಿವರಣೆ, ಟೀಕೆ, ವಿಮರ್ಶೆ ಇಂಥ ವಿಧಾನಗಳನ್ನು ಅನುಸರಿಸುತ್ತ ತಿಳುವಳಿಕೆಯ ಹೊಸ ಸಾಹಿತ್ಯ ನಿರ್ಮಾನವಾಗಬೇಕು. ಅಂಥ ಎಲ್ಲ ಬಗೆಯ ಸಂಶೋಧನಕ್ಕೂ ಕನ್ನಡ ವಿಶ್ವವಿದ್ಯಾಲಯದಲ್ಲಿ ಅನುಕೂಲವಿದೆ, ಅವಕಾಶವೂ ಇದೆ” ಎಂದು ದೇಸಿ ಚಿಂತನೆಗೆ ಕರೆ ನೀಡುತ್ತಾರೆ.

ಡಾ. ಚಂದ್ರಶೇಖರ ಕಂಬಾರರ ಕಾಲದಲ್ಲಿ ಅಂತರ್‌ಗಾಮಿಯಾಗಿ ಸದ್ದಿಲ್ಲದೇ ಹರಿದ ದೇಸಿ ಗಂಗೆ, ಕಲಬುರ್ಗಿ ಕಾಲದಲ್ಲಿ ಜಲ ಕಣ್ಣುಗಳಿಂದ ಹರಿಯಲಾರಂಭಿಸಿತು. ಜನಮುಖಿಯಾಗುವುದಕ್ಕೆ ಭದ್ರ ಬುನಾದಿ ಹಾಕಿದ ಮಾನ್ಯ ಕಲಬುರ್ಗಿಯವರು ಜಾನಪದ ಅಧ್ಯಯನ ವಿಭಾಗದಿಂದ ಪ್ರತಿ ವರ್ಷ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಮಾಡಲು ಅನುವು ಮಾಡಿಕೊಟ್ಟರು. ಈ ಸಮ್ಮೇಳನಕ್ಕೆ ‘ದೇಸಿ ಸಮ್ಮೇಳನ’ ಎಂಬ ಹೆಸರು ನೀಡಿದರು. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ “ಜಾನಪದ” ಶಬ್ದಕ್ಕಿಂತ “ದೇಸಿ” ಶಬ್ದದ ಬಳಕೆ ಹೆಚ್ಚು, ಅದಕ್ಕೆ ಅರ್ಥಛಾಯೆಗಳು ಹೆಚ್ಚು. ಹೀಗೆ ಪ್ರಯೋಗ ದೃಷ್ಟಿಯಿಂದ ವಿಪುಲವೂ, ಅರ್ಥ ದೃಷ್ಟಿಯಿಂದ ವೈವಿಧ್ಯಪೂರ್ಣವೂ ಆಗಿರುವ ‘ದೇಸಿ’ ಎಂಬ ಪರಂಪರೆಯ ಬೇರನ್ನು, ಅದರ ಬೆಳವಣಿಗೆಯನ್ನು ನಿರಾಕರಿಸಿದಂತಾಗುತ್ತದೆ. ಆದುದರಿಂದ “ದೇಸಿ” ಪರಿಕಲ್ಪನೆಯ ಕಾರ್ಯಕಲ್ಪ ಈ ದೇಸಿ ವಿಶ್ವವಿದ್ಯಾಲಯದ ಕರ್ತವ್ಯವಾಗಿದೆ. ಈ ಉದ್ದೇಶದಿಂದ “ಜಾನಪದ ಸಮ್ಮೇಳನ”ವೆಂದು ಕರೆಯದೆ “ದೇಸಿ ಸಮ್ಮೇಳನ”ವೆಂದು ಕರೆಯಲಾಗಿದೆ.

ಹೀಗೆ ದೇಸಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು “ಜಾನಪದ, ದೇಸಿ ಇವು ಸ್ಥೂಲವಾಗಿ ಪರ್ಯಾಯ ಪದಗಳೆನಿಸಿದರೂ ‘ದೇಸಿ’ ಎನ್ನುವುದು ಜಾನಪದವನ್ನೂ ಅದರ ಮುಂದುವರಿಕೆಯನ್ನು ಪ್ರತಿನಿಧಿಸುತ್ತದೆ. ಅಂದರೆ, ಒಂದು ದೇಶದ ಜಾನಪದವೂ ‘ದೇಸೀ’ ಆ ಜಾನಪದದಿಂದ ಬೆಳೆದುದೂ ‘ದೇಸೀ’ ಇವುಗಳನ್ನು ಕ್ರಮವಾಗಿ ‘ಪ್ರಾಕೃತಿಕ ದೇಸಿ’, ‘ಪರಿಷ್ಕೃತ ದೇಸಿ’ ಎಂದು ಕರೆಯಬಹುದು. ಸಾಹಿತ್ಯಕ್ಕೆ ಅನ್ವಯಿಸಿ ಹೇಳುವುದಾದರೆ ಹಳ್ಳಿಯ ತಾಯಿ ಹೇಳುವ ತ್ರಿಪದಿ ಪ್ರಾಕೃತಿಕ ದೇಸಿ, ಸರ್ವಜ್ಞ ಹೇಳಿದ ತ್ರಿಪದಿ ಪರಿಷ್ಕೃತ ದೇಸಿ. ಹಳ್ಳಿಗರ ಹಾಡು ಪ್ರಾಕೃತಿಕ ದೇಸಿ, ಬೇಂದ್ರೆ ಭಾವಗೀತೆಗಳು ಪರಿಷ್ಕೃತ ದೇಸಿ. ಕನ್ನಡ ಜನಪದ ಸಾಹಿತ್ಯ ಪ್ರಾಕೃತಿಕ ದೇಸಿ; ಬಸವಣ್ಣ, ಹರಿಹರ, ರಾಘವಾಂಕರಿಂದ ಜೀವ ಪಡೆದು ಕುಮಾರವ್ಯಾಸಾದಿಗಳಲ್ಲಿ ಮುಂದುವರಿದ ಕನ್ನಡ ಸಾಹಿತ್ಯ ಪರಿಷ್ಕೃತ ದೇಸಿ’ ಒಟ್ಟಾರೆ ಈ ಎರಡೂ ನೆಲೆಯ ರಚನೆಗಳು ದೇಸಿಯೇನಿಸುತ್ತೇವೆ” ಎಂದು ತಮ್ಮ ‘ದೇಸೀ’ ಪರಿಕಲ್ಪನೆಯನ್ನು ಅರ್ಥೈಸುತ್ತಾರೆ.

ಮೊಟ್ಟಮೊದಲು ದೇಸಿ ಸಮ್ಮೇಳನವು ಮೈಸೂರು ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ದೇ. ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ “ಮಾಟ-ಮಂತ್ರ-ಮೋಡಿ” ಎಂಬ ಅಲಕ್ಷಿತ ವಿಷಯವನ್ನೊಳಗೊಂಡ ಸಮ್ಮೇಳನ ಗಂಗಾವತಿಯಲ್ಲಿ ಕುಲಪತಿಗಳಾದ ಮಾನ್ಯ ಕಲಬುರ್ಗಿ ಅವರ ಜಾನಪದದ ಅತೀವ ಕಾಳಜಿಯ ಫಲವಾಗಿ ಯಶಸ್ವಿಯಾಗಿ ನೆರವೇರಿತು. ನಂತರದಲ್ಲಿ ಕುಲಪತಿಗಳಾಗಿ ಬಂದ ಮಾನ್ಯ ಡಾ. ಎಚ್.ಜೆ. ಲಕ್ಕಪ್ಪಗೌಡರು ಜಾನಪದದ ಬಗೆಗೆ ಅನುಪಮ ಪ್ರೀತಿಯುಳ್ಳವರು ಮತ್ತು ಜಾನಪದ ವಿದ್ವಾಂಸರು ಆಗಿದ್ದವರು. ಅವರ ಜಾನಪದದ ಬಗೆಗಿನ ಅಪಾರ ಕಾಳಜಿ ಮತ್ತು ಪ್ರೀತಿಯಿಂದಾಗಿ ‘ಆಹಾರ ಸಂಕಥನ’ ಎಂಬ ವಿಷಯ ಕುರಿತು ಸಮ್ಮೇಳನ ಸಂಕದಲ್ಲಿ ಡಾ. ಎಂ.ಎಸ್. ಲಠ್ಠೆಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಬೀದರನಲ್ಲಿ ಡಾ. ಬಿ.ಎ. ವಿವೇಕ ರೈ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಹಾಗೂ ಜಾನಪದ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಶ್ರೇಷ್ಠ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ ಅವರು ಸರ್ವಾಧ್ಯಕ್ಷರಾಗಿರುವುದು ಅರ್ಥಪೂರ್ಣವಾಗಿದೆ. ಅಲೆಮಾರಿಗಳ ಜಾನಪದ ಎಂಬುದು ಸಮ್ಮೇಳನದ ವಿಷಯವಾಗಿತ್ತು. ದೇಸಿ ಜ್ಞಾನ, ತಿಳುವಳಿಕೆಗಳನ್ನು ಕಡೆಗಣಿಸುವುದರಿಂದ ಆಗುವ ನಷ್ಟದ ಬಗೆಗೆ ಡಾ. ಎಚ್.ಜೆ. ಲಕ್ಕಪ್ಪಗೌಡರು “ಇಂದಿನ ಕೃಷಿ, ತಂತ್ರಜ್ಞಾನ, ಮನಃಶಾಸ್ತ್ರ, ವೈದ್ಯಶಾಸ್ತ್ರ ಮುಂತಾದ ಹಾಗೂ ನಿತ್ಯಜೀವನದ ಹಲವು ಅನಿವಾರ್ಯ ಅಗತ್ಯಗಳ ಪೂರೈಕೆಯ ತಿಳುವಳಿಕೆಯೂ ಕೂಡಾ ಈ ದೇಸಿ ಮೂಲದಿಂದಲೇ ಬಂದವುಗಳಾಗಿವೆ. ಇವುಗಳನ್ನು ಪರಿಗಣಿಸದೆ ಇವುಗಳನ್ನು ಅಜ್ಞಾನ ಮೂಲವೆಂದು, ಮೂಢನಂಬಿಕೆಯ ಜಾಲವೆಂದು ಭಾವಿಸುವ ಮೂಲಕ ಮತ್ತು ಆಧುನಿಕ ಜ್ಞಾನ ವಿಜ್ಞಾನಗಳೇ ಪರಮಪೂರ್ಣ ಎಂಬ ಮತ್ತೊಂದು ಮೂಢನಂಬಿಕೆಯ ಮೂಲಕ ಈ ಪ್ರಾಚೀನ ಸಂಸ್ಕೃತಿಯ ಹಲವು ಮೂಲಾಂಶಗಳನ್ನು ನಾವು ಕಡೆಗಣಿಸುತ್ತ ಬಂದಿದ್ದೇವೆ. ಇದರಿಂದಾಗಿ ಇನ್ನೂ ಆಧುನಿಕ ಜ್ಞಾನ ವಿಜ್ಞಾನ ಮುಟ್ಟದಿರುವ ಹಲವು ಸಾಧನೆಗಳ ಜೀವಧಾತುಗಳನ್ನು ಕಳೆದು ಕೊಳ್ಳುತ್ತಿದ್ದೇವೆ. ಆದರೆ, ಇತ್ತೀಚೆಗೆ ಆಧುನಿಕ ಜ್ಞಾನ ವಿಜ್ಞಾನಗಳ ತಾಂತ್ರಿಕ ಪರಿಭ್ರಮಣದಲ್ಲಿ ಸುತ್ತುತ್ತಿರುವ ಆಧುನಿಕ ಪ್ರಪಂಚ ಈ ವಿಜ್ಞಾಣದ ಅನುಕೂಲಗಳ ಜೊತೆಗೆ ಆಗುತ್ತಿರುವ ಅನಾಹುತಗಳ ಸೀಮಿತತೆಯನ್ನು ಕಂಡುಕೊಳ್ಳ ತೊಡಗಿದೆ. ವಿಜ್ಞಾನವೇ ಸರ್ವ ಸಮಸ್ಯೆಗಳಿಗೂ ಪರಿಹಾರದ ಸಂಜೀವಿನಿಯಲ್ಲ ಎಂಬುದು ನಿಧಾನವಾಗಿಯಾದರೂ ಅರಿವಾಗುತ್ತಿದೆ” ಎಂದು ‘ದೇಸಿ’ ಚಿಂತನೆಯಲ್ಲಿ ಅಡಗಿರುವ ವಿಚಾರಗಳ ಕಡೆಗೆ ಬೆಳಕು ಚೆಲ್ಲುತ್ತಾರೆ.

“ಸಂಸ್ಕೃತಿ ಚಿಂತನೆಯಲ್ಲಿ ಆಗುವ ಖರ್ಚು ಖರ್ಚಲ್ಲ. ಅದು ಆರ್ಥಿಕ ದೃಷ್ಟಿಯಿಂದ ಮಾತ್ರ. ಆದರೆ ಅರ್ಥದ ದೃಷ್ಟಿಯಿಂದ ಲಾಭವೆಂದು ಹೇಳಬೇಕು”. ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರ ವಿಷಯಗಳು ಅಕ್ಷರ ಸಹಃ ಸತ್ಯ. ಈ ದೃಷ್ಟಿಯಿಂದ ಜಾನಪದ ಅಧ್ಯಯನ ವಿಭಾಗವು ಹಮ್ಮಿಕೊಳ್ಳುವ ದೇಸಿ ಸಮ್ಮೇಳನ ಸಾಂಸ್ಕೃತಿಕ ಲಾಭವೇ ಸರಿ. ಅಪಾರ ಶಕ್ತಿ ಸಾಧ್ಯತೆಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡ ಜಾನಪದ ಹಲವು ಕಾರಣಗಳಿಂದ ಕ್ಷೀಣಿಸುವಂತಾಗಿದೆ. ಹಿಂಜರಿಕೆಯ ನಮ್ಮ ದೌರ್ಬಲ್ಯಗಳೇ ಇದಕ್ಕೆ ಕಾರಣ ಇವುಗಳನ್ನು ಜಾನಪದ ಚಿಂತಕರಿಂದ ಹೋಗಲಾಡಿಸಿ, ಜಾನಪದದ ಆಳ ವಿಸ್ತಾರಗಳನ್ನು ತಿಳಿಸುವುದು ಈ ಸಮ್ಮೇಳನದ ಉದ್ದೇಶಗಳಲ್ಲೊಂದು. ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ಸ್ವತಂತ್ರ ವಿಭಾಗವಾಗಿದ್ದು, ಸಮಾಜವಿಜ್ಞಾನಗಳ ನಿಕಾಯಕ್ಕೆ ಸೇರಿಕೊಂಡಿದೆ. ಈ ವಿಭಾಗೀಕರಣವೇ ಜಾನಪದನವನ್ನು ನೋಡುವ ವಿಭಿನ್ನ ಕ್ರಮವೊಂದನ್ನು ಸಂಕೇತಿಸುತ್ತದೆ. ಈ ವಿಭಾಗ ಕ್ರಮ ಜಾನಪದವನ್ನು ಸಾಹಿತ್ಯಿಕ ದೃಷ್ಟಿಯಿಂದ ನೋಡುವ ಸಾಂಪ್ರದಾಯಿಕತೆ ತಪ್ಪಿಸಿ, ಇದು ಅಂತರ್‌ಶಿಸ್ತೀಯ ಅಧ್ಯಯನಕ್ಕೆ ದಾರಿ ಮಾಡಿಕೊಟ್ಟಿದೆ.

ದೇಸಿ ಸಮ್ಮೇಳನದ ಪ್ರಮುಖವಾದ ಉದ್ದೇಶವೇ ಜನಮುಖಯಾಗುವುದು, ಜೀವಪರ ವಿಚಾರಗಳತ್ತ ಬೆಳಕು ಚೆಲ್ಲುವುದು. ಅಲಕ್ಷಿತ ವಿಚಾರಗಳನ್ನು ಸಂಶೋಧನೆಗೆ, ಚಿಂತನೆಗೆ ತೊಡಗುವುದು ಮತ್ತು ಅದರ ಮಹತ್ವವನ್ನು ಜನರಿಗೆ ತಿಳಿಸುವುದು. ಪಾರಂಪರಿಕ ಜ್ಞಾನವನ್ನು ಪುನರ್‌ಸ್ಥಾಪಿಸುವುದು, ಪ್ರೇರೇಪಿಸುವುದು ಮತ್ತು ಇಂದಿನ ಅಗತ್ಯಕ್ಕೆ ತಕ್ಕ ಹಾಗೆ ಆ ಜ್ಞಾನವನ್ನು ಬಳಸಿಕೊಳ್ಳುವುದು. ಉದಾ: ಬೇಟೆಯಲ್ಲಿ, ವೈದ್ಯದಲ್ಲಿ ನಿಷ್ಣಾತರಾದ ಅಲೆಮಾರಿಗಳ ಜ್ಞಾನವನ್ನು ಆಧುನಿಕ ಜಗತ್ತು ಬಳಸಿಕೊಂಡು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ಬಗೆಗೆ ಚಿಂತಿಸಬೇಕಾಗಿದೆ. ನುರಿತ ಬೇಟೆಗಾರನೊಬ್ಬ ದೂರದ ಕಾಡಿನಲ್ಲಿ ಕೂಗಿದ ಪಕ್ಷಿಯ ಧ್ವನಿಯಿಂದ ತನ್ನ ಮನೆಯಲ್ಲಿಯೇ ಕುಳಿತು ಅಲ್ಲಿನ ವಿದ್ಯಮಾನಗಳನ್ನು ತಿಳಿಯುವ ಶಕ್ತಿಯನ್ನು ಪಡೆದಿರುತ್ತಾನೆ. ಹಕ್ಕಿಯ ಕೂಗಿನ ಧ್ವನಿ ತರಂಗಗಳ ಏರಿಳಿತದಿಂದ ಆನೆ, ಕುದುರೆ, ಹಂದಿ, ಹುಲಿ, ಚಿರತೆ ಅಥವಾ ಮನುಷ್ಯ ಚಟುವಟಿಕೆ ಎಂಬ ನಿಖರತೆಯನ್ನು ಅರಿಯುವ ಜಾಣತನ ಅವನಿಗೆ ತಲೆಮಾರಿನಿಂದ ಬಂದ ಕಲೆ. ಈ ಜ್ಞಾನವನ್ನು ದೇಶದ ರಕ್ಷಣೆಯಲ್ಲಿ ಬಳಸಿಕೊಳ್ಳಬಹುದು. ಆತ ಕಡಿಮೆ ಖರ್ಚಿನಲ್ಲಿ ರಾಡಾರ್‌ನಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಅಪಾರ ಹಣ ಉಳಿಯುತ್ತದೆ. ಹೀಗೆ ಉಳಿಸಿದ ಹಣದಿಂದ ಅಲೆಮಾರಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಆಧುನಿಕ ಜಗತ್ತಿನ ಅತಿರೇಕದಿಂದುಂಟಾದ ಅನೇಕ ಜೀವ ವಿರೋಧಿ ಸಂಕಷ್ಟಗಳಿಗೆ ಪರಿಹಾರ ಹಾಗೂ ಪರ್ಯಾಯವಾಗಿ ಪಾರಂಪರಿಕ ಜ್ಞಾನ ಸಹಾಯಕ್ಕೆ ಬರುತ್ತದೆ. ಜನರನ್ನು ಅವಲಂಬಿತನದಿಂದ ಮುಕ್ತಗೊಳಿಸುವ ಮಾರ್ಗವನ್ನು ಹುಡುಕುವ ಪ್ರಯತ್ನ ದೇಸೀ ಸಮ್ಮೇಳನದ ಮೂಲಕ ನಡೆಸಲಾಗುವುದು. ಜಾನಪದದ ಎಲ್ಲ ಮುಖಗಳನ್ನು ಹಂತ ಹಂತವಾಗಿ ಚಿಂತನೆಗೆ ಒಳಪಡಿಸಿ ಅವುಗಳ ವೈಜ್ಞಾನಿಕ ಅಥವಾ ಜೀವಪರ ಜ್ಞಾನವನ್ನು ಶೋಧಿಸುವುದು. ದೇಸಿಯ ರೀತಿ ನೀತಿಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡುವುದು. ಇಂಥಹ ಅನೇಕ ವಿಚಾರಗಳ ಕಡೆಗೆ ಅರಿವನ್ನು ಮೂಡಿಸುವುದು ಈ ಸಮ್ಮೇಳನದ ಒಟ್ಟು ಉದ್ದೇಶ.

ಕನ್ನಡ ಹಾಗೂ ಜಾನಪದ ಎರಡು ಕ್ಷೇತ್ರಗಳಲ್ಲಿ ದುಡಿದು ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿ ಮೇಲಿನ ಎರಡು ಕ್ಷೇತ್ರಕ್ಕೆ ಕೀರ್ತಿ ತಂದ ಮಾನ್ಯ ಡಾ. ಬಿ.ಎ. ವಿವೇಕ ರೈ ಅವರು, ಈ ದೇಸಿ ಸಮ್ಮೇಳನಕ್ಕೆ ಅಧ್ಯಕ್ಷರಾದುದು ಸೂಕ್ತವಾಗಿರುವಂತೆ ನಮ್ಮೆಲ್ಲರಿಗೂ ಸಂತೋಷದ ವಿಷಯ. ಈ ಮೂರು ದಿನಗಳ ವಿಚಾರ ಸಂಕಿರಣದಲ್ಲಿ ಬೇರೆ ಬೇರೆ ಭಾಗಗಳ ಜಾನಪದ ತಜ್ಞರು ಭಾಗವಹಿಸಿ ‘ಅಲೆಮಾರಿಗಳ’ ವಿಷಯವನ್ನು ಕುರಿತು ಪ್ರಬಂಧ ಮಂಡಿಸಲಿದ್ದಾರೆ. ಅಲೆಮಾರಿಗಳ ಕಲಾ ಪ್ರದರ್ಶನ, ಅವರ ವೈದ್ಯಪದ್ಧತಿ ಇತ್ಯಾದಿಗಳ ಪ್ರದರ್ಶನದಿಂದಾಗಿ ಸಮ್ಮೇಳನಕ್ಕೆ ಕಳೆ ಬಂದಿದೆ. ಅಲೆಮಾರಿ ಜನಾಂಗದಿಂದ ಬಂದು, ಅವರ ಉದ್ಧಾರಕ್ಕಾಗಿ ದುಡಿಯುತ್ತಿರುವ ಶ್ರೀ ಲಕ್ಷ್ಮಣ ಗಾಯಕ್ವಾಡ್ ಆಗಮನದಿಂದ ಈ ಸಮ್ಮೇಳನಕ್ಕೆ ಒಂದು ವಿಶೇಷತೆ ಪ್ರಾಪ್ತವಾಗಿದೆ. ಜಾನಪದಕ್ಕೆ ಸಂಬಂಧಿಸಿದ ಇಂತಹ ಸಮ್ಮೇಳನಗಳು ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದು, ಜನರಿಗೆ ತಮ್ಮ ಪಾರಂಪರಿಕ ವಿಚಾರಗಳ ಅರಿವನ್ನುಂಟುಮಾಡಲಿ ಎಂದು ಹೇಳುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

* * *