‘ಸಿರಿಗನ್ನಡಂ ಗೆಲ್ಗೆ’, ಇಂದಿನ ಈ ದೇಸಿ ಸಮ್ಮೇಳನದ ಸರ್ವಾಧ್ಯಕ್ಷರಾದಂತಹ ಡಾ. ಬಿ.ಎ. ವಿವೇಕ ರೈ ಅವರಿಗೆ ವಂದಿಸುತ್ತಾ ಈ ಒಂದು ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವಂತಹ ಶ್ರೀ ಎಂ.ಜಿ. ಈಶ್ವರಪ್ಪನವರೇ, ಉದ್ಘಾಟಕರಾದಂತಹ ಡಾ. ಚೆನ್ನಣ್ಣವಾಲೀಕಾರ ಅವರೇ, ಇಲ್ಲಿ ನಡೆದಿರುವ ಎಲ್ಲಾ ಸಭಿಕರೇ, ಪತ್ರಕರ್ತರೇ ಇವತ್ತು ಬೀದರ ಜನತೆಗೆ ಒಂದು ವಿಶೇಷ ಔತಣ. ಬುಡಕಟ್ಟು ಜನಾಂಗ ಅಥವಾ ಅಲೆಮಾರಿ ಜನಾಂಗದ ಬದುಕು ಹಾಗೂ ಸಮಕಾಲೀನ ಸಮಾಜದ ಒಂದು ಚಿತ್ರ ಇವೆರಡರಲ್ಲಿ ಸಮನ್ವಯತೆಯನ್ನು ಸಾಗಿಸುವಂತ ದಿಕ್ಕಿನಲ್ಲಿ ಇವತ್ತು ಇಲ್ಲಿ ಹಲವಾರು ವಿದ್ವಾಂಸರುಗಳಿಂದ ಸಂವಾದ ಗೋಷ್ಠಿಗಳು ನಡೆಯಲಿವೆ. ನಮ್ಮ ಜನಪದರು ಬಹಳ ವಿಶಿಷ್ಟರೂಪದ ಬದುಕನ್ನು ಬದುಕಿದ್ದರು. ಅಲ್ಲಿ ಅಪರೂಪದ ಮೌಲ್ಯಗಳಾದ ನಂಬಿಕೆ, ಸತ್ಯ, ಶಿಸ್ತು, ಪ್ರಾಮಾಣಿಕತೆ ಇಂಥಾ ಮೌಲ್ಯಗಳನ್ನಿಟ್ಟುಕೊಂಡು ಬದುಕಿದಂತಹ ನಮ್ಮ ಒಂದು ಭಾರತದ ಸಂದರ್ಭಕ್ಕೆ ಇವತ್ತು ಐವತ್ತು ವರ್ಷಗಳ ಒಂದು ಅವಧಿಯಲ್ಲಿ ಈ ಎಲ್ಲಾ ಮೌಲ್ಯಗಳಿಗೆ ಸ್ವಲ್ಪಮಟ್ಟಿಗೆ ಧಕ್ಕೆ ಬಂದಿದೆ. ಇವತ್ತಿನ ಒಂದು ಸಂದರ್ಭ ಈ ನಾಗರೀಕತೆ ಹೆಸರಿನಲ್ಲಾಗಲೀ, ಆಧುನಿಕತೆಯ ಹೆಸರಿನಲ್ಲಾಗಲೀ ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದಂತಹ ಈ ಮೌಲ್ಯಗಳು ಇವತ್ತು ವಿಚಾರ ಸಂಕಿರಣದಲ್ಲಿ ವಿಚಾರ ಮಂಡನೆಯಲ್ಲಿ ಚರ್ಚಿಸುವಂತಹ ಅನಿವಾರ್ಯ ಪ್ರಸಂಗಕ್ಕೆ ಬಂದು ನಿಂತಿದ್ದೇವೆ.

ಭಾರತ ನಿಜವಾಗಿಯೂ ಜಗತ್ತಿನಲ್ಲಿಯೇ ಒಂದು ಶ್ರೀಮಂತ ರಾಷ್ಟ್ರ. ನಮ್ಮ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಮಾತನಾಡಬೇಕಾದರೆ ನಾವು ನಿಜವಾಗಿಯೂ ಶ್ರೀಮಂತರು. ಆದರೆ ಬೇರೆ ದೃಷ್ಟಿಯಿಂದ ಮಾತನಾಡಲಿಕ್ಕೆ ಹೋದಾಗ ನಾವು ಬಡವರು ಅಂತಾ ಕರೆದುಕೊಳ್ಳುತ್ತಾ ಇದೀವಿ. ಇದು ಒಂದು ದುರ್ದೈವ ಸಂಗತಿ. ಸ್ವಾತಂತ್ರ್ಯ ನಂತರದ ಈ ಆಧುನಿಕತೆಯ ಪ್ರಭಾವದಲ್ಲಿ ಎಲ್ಲಾ ಮೌಲ್ಯಗಳು ಕೊಚ್ಚಿಕೊಂಡು ಹೋಗ್ತಾ ಇವೆ. ಆದರೂ ಸಾವಿರಾರು ವರ್ಷಗಳಿಂದ ಕಟ್ಟಿದಂತಹ ಈ ಒಂದು ಸಾಮಾಜಿಕ ಸ್ಥಿತಿಗೆ ಅಷ್ಟು ಸುಲಭವಾಗಿ ಆ ಪ್ರವಾಹ ಕೊಚ್ಚಿಕೊಂಡು ಹೋಗದೆ, ಸ್ಥಿರವಾಗಿ ನಿಂತು ಇಂಥ ಒಂದು ಸಂದರ್ಭಗಳು ನಾವು ಇವತ್ತು ನಿರ್ಮಾಣ ಮಾಡಿಕೊಂಡು ಆ ಕುರಿತು ಚಿಂತನೆ ಮಾಡ್ತಾ ಇದೀವಿ.

ಆಧುನಿಕತೆ ಹಾಗೂ ಅಲೆಮಾರಿತನ ಈ ಎರಡರ ಮಧ್ಯದಲ್ಲಿ ಇವತ್ತು ನಾಗರೀಕ ಜೀವನ ನಿಂತಿದೆ. ನಾಗರೀಕ ಅನ್ನೋದು ಸಹ ಇವತ್ತು ನಾವುಗಳು ಸಹ ಒಂದು ಅಲೆಮಾರಿಯ ಜೀವನವನ್ನು ಅನುಭವಿಸುವ ಸ್ಥಿತಿಯಲ್ಲಿದ್ದೇವೆ. ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬಂದವರು. ನಗರದಿಂದ ಮಹಾನಗರಕ್ಕೆ, ಮಹಾನಗರದಿಂದ ಇನ್ನು ವಿದೇಶಕ್ಕೆ ಹೋಗಬೇಕು. ಅಂತಹ ತವಕದಲ್ಲಿ ಇಡೀ ಮಾನವ ಜನಾಂಗ ಚಿಂತನೆ ಮಾಡ್ತಾ ಇದೆ. ಇಂಥಾ ಒಂದು ಸಂದರ್ಭದಲ್ಲಿ ಹಿರಿಯ ಜಾನಪದ ವಿದ್ವಾಂಸರಾದಂತಹ ಹಂಪಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಇಂಥಾ ಒಂದು ಚಿಂತನೆಗಾಗಿ ಜನರ ಮುಂದೆ ಸುಮಾರು ಮೂರು ದಿನದ ಸಮ್ಮೇಳನವನ್ನು ಹಮ್ಮಿಕೊಂಡಿದ್ದಾರೆ. ಇವತ್ತು ನಾವುಗಳೆಲ್ಲ ಇಂಥ ಒಂದು ಸಂದರ್ಭ ಸದುಪಯೋಗ ಮಾಡಿಕೊಂಡು ನಾಗರೀಕ ಜನಾಂಗವಾಗಲಿ, ವೈಚಾರಿಕತೆ ಕಡೆ ಹೋಗುವಂತ ಜನಾಂಗವಾಗಲಿ ನಾವೆಲ್ಲ ಸೇರಿಕೊಂಡು ನಮ್ಮ ಭವಿಷ್ಯದ ಜೀವನ, ನಮ್ಮ ಮುಂದಿನ ಜೀವನ ಯಾವ ಸ್ವರೂಪದಲ್ಲಿರಬೇಕು ಅಂತಹ ಸ್ಪಷ್ಟವಾದ ಕಲ್ಪನೆ ಇಟ್ಟುಕೊಂಡು ಈ ಚರ್ಚೆ ಮೂಲಕ ರೂಪಿಸಿಕೊಳ್ಳಬೇಕಾದಂತಹ ಸಂದರ್ಭ ಇದು. ಇಂಥ ಒಂದು ಸಂದರ್ಭ ನಮಗೆ ಹಂಪಿ ವಿಶ್ವವಿದ್ಯಾಲಯದವರು ಒದಗಿಸಿಕೊಟ್ಟಿದ್ದಾರೆ. ಅದಕ್ಕಾಗಿ ನಾನು ನನ್ನ ಪರವಾಗಿ ವಿಶ್ವವಿದ್ಯಾಲಯದ ಎಲ್ಲಾ ಮಹನೀಯರಿಗೆ ವಂದನೆಗಳನ್ನು ಅರ್ಪಿಸುತ್ತೇನೆ. ಇವತ್ತು ಡಾ. ಚೆನ್ನಣ್ಣವಾಲೀಕಾರ ಅಂತವರಾಗಲೀ, ಡಾ. ಹಿ.ಶಿ. ರಾಮಚಂದ್ರೇಗೌಡರಂತಹ ವಿದ್ವಾಂಸರು ಬೀದರಿಗೆ ಬಂದಿದ್ದಾರೆ. ನಮ್ಮೆಲ್ಲರ ಸೌಭಾಗ್ಯ. ಅದರಲ್ಲಿಯೂ ಡಾ. ಬಿ.ಎ. ವಿವೇಕ ರೈ ಅವರು ಜಾನಪದ ಮತ್ತು ಶಿಷ್ಟ ಸಾಹಿತ್ಯಗಳೆರಡರಲ್ಲಿ ಸಾಕಷ್ಟು ಕೆಲಸ ಮಾಡಿದಂತಹ ಮಹಾನುಭಾವರು. ಅಂಥ ಮಹಾನುಭಾವರೆಲ್ಲರ ಉಪನ್ಯಾಸವನ್ನು ಬೀದರ ಜನತೆಯು ಕೇಳಿ ಬಹಳಷ್ಟು ಸಂತೋಷಪಟ್ಟಿದ್ದಾರೆ. ಇಂಥ ಪ್ರಸಂಗಗಳು ಮತ್ತೊಂದು ಸಲ ಬೀದರಲ್ಲಿ ಒದಗಿಬರಲಿ ಅಂತ ಆಶಿಸುತ್ತಾ ನಮಗೆ ಮಾತನಾಡಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ಧನ್ಯವಾದಗಳನ್ನರ್ಪಿಸುತ್ತಾ ನನ್ನ ನಾಲ್ಕು ಮಾತು ಮುಗಿಸುತ್ತೇನೆ. ನಮಸ್ಕಾರ.

* * *