ಆಧುನಿಕ ಜಗತ್ತಿನ ವ್ಯವಸ್ಥೆಯಿಂದಾಗಿ ಪಾರಂಪರಿಕ ಜ್ಞಾನ ತಿಳುವಳಿಕೆಗಳು ವಿಸ್ಮೃತಿಗೆ ಒಳಗಾಗುತ್ತಿವೆ. ಎಲ್ಲವನ್ನು ವ್ಯಾಪಾರಿ ಮನೋಭಾವದಿಂದ ನೋಡುವ ಕ್ರಮದಿಂದಾಗಿ ನಮ್ಮದೇಸಿ ಜ್ಞಾನ ಪರಂಪರೆಯನ್ನು ಕಡೆಗಣಿಸಲಾಗುತ್ತಿದೆ. ಜೀವಪೋಷಕ ಜ್ಞಾನವನ್ನು ಗೌರವಿಸಿ, ಅದರ ಉತ್ಪಾದಕ ಗುಣವನ್ನು ಮತ್ತು ಸೃಜನಾತ್ಮಕ ನೆಲೆಗಳನ್ನು ಕಂಡುಕೊಳ್ಳಬೇಕು. ಮನುಷ್ಯ ಮನುಷ್ಯನ ನಡುವಿನ ಸಂಬಂಧವನ್ನು ಹೆಚ್ಚಿಸಬೇಕು. ಮಾನವ ಪ್ರಾಣಿ ಮತ್ತು ಪರಿಸರ ರಕ್ಷಣೆಗೆ ನಿಂತ ಹೆಬ್ಬಾಚರಣೆಗಳ ಹಿಂದಿನ ಸತ್ಯವನ್ನು ಅರಿತುಕೊಳ್ಳಬೇಕಾಗಿದೆ. ಮನುಷ್ಯನ ಅತೀ ಆಸೆಯಿಂದಾಗಿ ಮಳೆ ಇಲ್ಲದೆ ಅಂತರ್ಜಲ, ನದಿ, ಕೆರೆ, ಝರಿಗಳು ಬತ್ತಿಹೋಗಿವೆ. ಕಾಡು, ಬೆಟ್ಟ, ಗುಡ್ಡ ಕರಗಿಹೋಗಿವೆ. ಓಜೋನ್ ಪದರ ಹರಿದು, ಬಿಸಿಲು ಹೆಚ್ಚಾಗಿ ಪ್ರಾಕೃತಿಕ ಅಸಮತೋಲನ ಉಂಟಾಗಿ ಜೀವಜಾಲ ಬಲಿಯಾಗುತ್ತಿದೆ. ಹಿಂದೆಂದೂ ಕಾಣದ, ಕೇಳದ ರೋಗಗಳೂ ಮಾನವ ಕುಲದ ಮೇಲೆ ದಾಳಿ ಮಾಡುತ್ತಿವೆ. ಮಾನವ ಪ್ರಕೃತಿಯ ಮೇಲೆ ನಡೆಸಿದ ದಾಳಿಯಿಂದಾಗಿ ಬರಗಾಲದ ಕರಿ ನೆರಳು ಮುಚ್ಚಿಕೊಂಡಿದೆ. ಇಂತಹ ವಿಚಾರಗಳತ್ತ ಈ ಸಮ್ಮೇಳನದಲ್ಲಿ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ.

ಜನಪದ ಕಲಾ ತಂಡಗಳನ್ನು ಉದ್ದೀಪನಗೊಳಿಸಿ, ಪ್ರೋತ್ಸಾಹ ನೀಡುವುದು, ದೇಸಿ ಅಡುಗೆಗಳನ್ನು ಪರಿಚಯಿಸಿ, ಅವುಗಳ ಜೀವಪರ ಪೌಷ್ಟಿಕಾಂಶಗಳ ಮಹತ್ವವನ್ನು ತಿಳಿಸುವುದು, ದೇಸಿ ಉಪಕರಣಗಳ ಪ್ರದರ್ಶನ ಮತ್ತು ಅವುಗಳ ಮಹತ್ವಗಳ ಮೇಲೆ ಬೆಳಕು ಚೆಲ್ಲುವುದು ಇನ್ನೂ ಮುಂತಾದ ದೇಸಿ ಜ್ಞಾನಗಳ ಬಗೆಗೆ ತಿಳುವಳಿಕೆ ನೀಡುವುದೇ ದೇಸಿ ಸಮ್ಮೇಳನದ ಉದ್ದೇಶಗಳಾಗಿವೆ. ಹೀಗೆ ಅವಜ್ಞೆಗೆ, ಅಲಕ್ಷತೆಗೆ ಗುರಿಯಾಗಿದ್ದ ವಿಚಾರಗಳ ಮೇಲೆ ಜ್ಞಾನದ ಬೆಳಕನ್ನು ಹರಿಸಿ, ಆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಾಯಕವಾಗುವುದು. ಜನಪದರ ಜ್ಞಾನ ತಿಳುವಳಿಕೆಗಳಿಗೆ ತಾರ್ಕಿಕವಾದ ಸಂಸ್ಕಾರ ನೀಡಿ, ಮತ್ತೆ ಅದನ್ನು ಜನಪದರಿಗೆ ದೇಸಿ ಸಮ್ಮೇಳನದ ಮೂಲಕ ಪ್ರಸಾರ ಮಾಡುವುದು ವಿಭಾಗದ ಮಹತ್ವದ ಕೆಲಸಗಳಲ್ಲಿ ಒಂದು.

ಅಲಕ್ಷಿತವಾಗಿರುವುದರಲ್ಲಿ ಕೆಲವು ವೇಳೆ ಅನರ್ಘ್ಯವಾದುದು ಅಡಗಿರುತ್ತದೆ. ಅದನ್ನು ಗುರುತಿಸುವುದು ಕೂಡ ಕಷ್ಟದ ಕೆಲಸವೇ ಆಗಿರುತ್ತದೆ. ಒಂದು ರೀತಿಯಲ್ಲಿ ಸಾಗರದ ಆಳದಲ್ಲಿ ಅಡಗಿರುವ ಮುತ್ತುಗಳನ್ನು ಸಂಗ್ರಹಿಸಿದಂತೆ. ಸಮುದ್ರದ ಉಪ್ಪಿಗೂ ಬೆಟ್ಟದ ನೆಲ್ಲಿ ಕಾಯಿಗಳಿಗಿರುವ ಸಂಬಂಧದ ಹಾಗೆ ಅಲಕ್ಷಿತ ಮತ್ತು ಅನರ್ಘ್ಯ. ಈ ಮಾತುಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯ ಏನು ಎಂದು ಪ್ರಶ್ನಿಸಬಹುದು. ಆದರೆ ನಮ್ಮ ಆಧುನಿಕ ಬದುಕಿನ ಸುಖಗಳ ಜೊತೆಗೆ ಸಂಕಷ್ಟಗಳು, ಆರ್ಥಿಕ ಹೊರೆ, ಅವಲಂಬನೆ ಇತ್ಯಾದಿಗಳ ಸುಳಿಯಿಂದ ತಪ್ಪಿಸಿಕೊಂಡು ನೆಮ್ಮದಿಯ ಬದುಕಿಗೆ ದಾರಿ ಕಾಣಬೇಕಾಗಿದೆ. ಅಲಕ್ಷಿತರನ್ನು ಬಹುಪಾಲು ಅಕ್ಷರ ಜಗತ್ತು ಕಡೆಗಣಿಸಿದೆ. ಆದರೆ ಈಚಿನ ದಿನಗಳಲ್ಲಿ ಅಕ್ಷರ ಜಗತ್ತಿನ ಕೆಲವು ಕಣ್ಣುಗಳು ಅಲಕ್ಷಿತ ವಿಚಾರಗಳತ್ತ ದೃಷ್ಟಿ ಹಾಯುಸುತ್ತಿದೆ. ಸಂಸ್ಕೃತಿ ಪ್ರಿಯರಿಗೆ ಇದು ನೆಮ್ಮದಿಯನ್ನುಂಟು ಮಾಡಿದೆ.

ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ಪ್ರತಿ ವರ್ಷ ದೇಸಿ ಸಮ್ಮೇಳನದಲ್ಲಿ ಅಲಕ್ಷಿತ ವಿಚಾರಗಳನ್ನು ಆಯ್ಕೆ ಮಾಡಿಕೊಂಡು ವಿಚಾರಮಂಥನ ಮಾಡುತ್ತಿದೆ. ಡಾ. ಚಂದ್ರಶೇಖರ ಕಂಬಾರರ ದೇಸಿ ಕಲ್ಪನೆ, ಈ ಬಗೆಗಿನ ಅವರ ಆಸಕ್ತಿ, ಕನ್ನಡ ವಿಶ್ವವಿದ್ಯಾಲಯದ ವಿದ್ವಾಂಸರ ಅಧ್ಯಯನದ ಎಲ್ಲ ವಿಚಾರಗಳಲ್ಲೂ ನೆಲದ ಮರೆಯ ನಿಧಾನದಂತೆ ಕಾಣುತ್ತಿದೆ. ಸಂಸ್ಕೃತಿ ಚಿಂತನೆಯಲ್ಲಿ ಆಗುವ ಖರ್ಚು ಖರ್ಚಲ್ಲ, ಅದು ಆರ್ಥಿಕ ದೃಷ್ಟಿಯಿಂದ ಮಾತ್ರ. ಆದರೆ ಅರ್ಥದ ದೃಷ್ಟಿಯಿಂದ ಲಾಭವೆಂದು ಹೇಳಬೇಕು. ಜಾನಪದ ಅಧ್ಯಯನ ವಿಭಾಗ, ಬುಡಕಟ್ಟು ಅಧ್ಯಯನ ವಿಭಾಗ ಮತ್ತು ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರು ಸಂಗ್ರಹಿಸಿದ ಜನಪದ ಮಹಾಕಾವ್ಯಗಳು ಬೆಲೆ ಕಟ್ಟಲಾಗದ ಆಸ್ತಿಗಳು. ಜನಪದ ಮಹಾಕಾವ್ಯವನ್ನು ಆರ್ಥಿಕ ದೃಷ್ಟಿಯಿಂದ ನಷ್ಟವೆಂದು ತಿಳಿಯದೆ, ಅರ್ಥದ ದೃಷ್ಟಿಯಿಂದ ಪರಿಗಣಿಸಿ ಮುದ್ರಿಸಿದ ಕೀರ್ತಿ ಡಾ. ಚಂದ್ರಶೇಖರ ಕಂಬಾರರಿಗೆ ಸೇರಬೇಕು. ಇನ್ನೊಂದು ಸಂತೋಷದ ಸಂಗತಿ ಎಂದರೆ ಕಂಬಾರರ ನಂತರ ಬಂದ ಎಲ್ಲ ಕುಲಪತಿಗಳು ದೇಸಿ ಪ್ರಿಯರು, ಸಂಸ್ಕೃತಿ ಪ್ರಿಯರು ಆಗಿರುವುದು. ಈ ಹಿನ್ನೆಲೆಯಲ್ಲಿ ಎಂ.ಎಂ.ಕಲಬುರ್ಗಿಯವರ ಕಾಲದಲ್ಲಿ ‘ದೇಸಿ ಸಮ್ಮೇಳನ’ ಅರಳಿ ನಿಂತಿದೆ. ‘ಮಾಟ-ಮಂತ್ರ-ಮೋಡಿ’ ದೇಸಿ ಸಮ್ಮೇಳನಕ್ಕೆ ಆಯ್ಕೆ ಮಾಡಿಕೊಂಡ ವಿಷಯ. ಸಮ್ಮೇಳನದ ಸಮಾರಂಭ ಜರಗಿರುವುದು ಗಂಗಾವತಿಯ ಸಂಸ್ಕೃತಿ ಪ್ರಿಯರಿಂದ. ಅಂದಿನಿಂದ ವಿಭಾಗವು ಮೂರು ಸಮ್ಮೇಳನಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಡಾ. ಎಚ್.ಜೆ. ಲಕ್ಕಪ್ಪಗೌಡ ಅವರ ದೇಸಿ ಪ್ರಿಯತೆಯಿಂದಾಗಿ ವಿಜಾಪುರದ ಸಂಖದಲ್ಲಿ ‘ಆಹಾರ ಸಂಕಥನ’ ಎಂಬ ವಿಷದ ಕುರಿತು ಹಾಗೂ ಬೀದರಿನಲ್ಲಿ ‘ಸಮಕಾಲೀನ ಸಮಾಜ ಮತ್ತು ಅಲೆಮಾರಿಗಳು’ ಎಂಬ ವಿಷಯಗಳನ್ನು ಕುರಿತು ವಿಚಾರಮಂಥನ ನಡೆಸಲಾಗಿದೆ. ಅಲೆಮಾರಿಗಳ ಪಾರಂಪರಿಕ ಜ್ಞಾನಗಳನ್ನು ಅವರ ಬದುಕಿನ ವಿವರಗಳನ್ನು ಸಮ್ಮೇಳನದ ವಿವಿಧ ಗೋಷ್ಠಿಗಳಲ್ಲಿ ಚರ್ಚಿಸಲಾಯಿತು. ಬೇಟೆಯಲ್ಲಿ, ವೈದ್ಯದಲ್ಲಿ ನಿಷ್ಣಾತರಾದ ಅಲೆಮಾರಿಗಳ ಜ್ಞಾನವನ್ನು ಆಧುನಿಕ ಜಗತ್ತು ಬಳಸಿಕೊಂಡು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ಬಗೆಗೆ ಚಿಂತಿಸಬೇಕಾಗಿದೆ. ನುರಿತ ಬೇಟೆಗಾರನೊಬ್ಬ ದೂರದ ಕಾಡಿನಲ್ಲಿ ಕೂಗಿದ ಹಕ್ಕಿಯ ಧ್ವನಿಯಿಂದ ತನ್ನ ಮನೆಯಲ್ಲಿಯೇ ಕುಳಿತೇ ಅಲ್ಲಿನ ವಿದ್ಯಮಾನಗಳನ್ನು ತಿಳಿಯುವ ಶಕ್ತಿಯನ್ನು ಪಡೆದಿರುತ್ತಾನೆ. ಹಕ್ಕಯ ಕೂಗಿನ ಧ್ವನಿ ತರಂಗಗಳ ಏರಿಳಿತದಿಂದ ಆನೆ, ಕುದುರೆ, ಹಂದಿ, ಹುಲಿ, ಚಿರತೆ ಅಥವಾ ಮನುಷ್ಯ ಚಟುವಟಿಕೆ ಎಂಬ ನಿಖರತೆಯನ್ನು ಅರಿಯುವ ಜಾಣತನ ಅವನಿಗೆ ತಲೆಮಾರಿನಿಂದ ಬಂದ ಕಲೆ. ಈ ಜ್ಞಾನವನ್ನು ದೇಶದ ರಕ್ಷಣೆಯಲ್ಲಿ ಬಳಸಿಕೊಳ್ಳಬಹುದು. ಆತ ಕಡಿಮೆ ಖರ್ಚಿನಲ್ಲಿ ರಾಡಾರ್‌ನಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಅಪಾರ ಹಣ ಉಳಿಯುತ್ತದೆ. ಹೀಗೆ ಉಳಿಸಿದ ಹಣದಿಂದ ಅಲೆಮಾರಿಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಆಧುನಿಕ ಜಗತ್ತಿನ ಅತಿರೇಕರಿಂದುಂಟಾದ ಅನೇಕ ಜೀವ ವಿರೋಧಿ ಸಂಕಷ್ಟಗಳಿಗೆ ಪರಿಹಾರ ಹಾಗೂ ಪರ್ಯಾಯವಾಗಿ ಪಾರಂಪರಿಕ ಜ್ಞಾನ ಸಹಾಯಕ್ಕೆ ಬರುತ್ತದೆ. ವಿವಿಧ ಗೋಷ್ಠಿಗಳಲ್ಲಿ ಹಲವು ಇಂತಹ ವಿಚಾರಮಂಥನ ನಡೆಸಲಾಗಿದೆ. ಬೀದರಿನ ದೇಸಿ ಸಮ್ಮೇಳನದಲ್ಲಿ ಈ ಕೆಳಗಿನ ಫಲಿತಗಳನ್ನು ಕಂಡುಕೊಳ್ಳಲಾಗಿದೆ. ಇದನ್ನು ಸಂಬಂಧಪಟ್ಟ ಇಲಾಖೆಗೆ ರವಾನಿಸಲಾಗಿದೆ.

ದೇಸಿ ಸಮ್ಮೇಳನ ೨೦೦೩ ನಿರ್ಣಯಗಳು

೧. ಕರ್ನಾಟಕದಾದ್ಯಂತ ಚದುರಿಹೋಗಿರುವ ಎಲ್ಲ ಮಾದರಿಯ ಸಮಸ್ತ ಅಲೆಮಾರಿ ಜನಸಮುದಾಯಗಳ ಸಮಗ್ರ ಸಮೀಕ್ಷೆಗೆ ಕೂಡಲೇ ಸರ್ಕಾರ ಕ್ರಮಕೈಗೊಳ್ಳಬೇಕು. ಸಮೀಕ್ಷೆಯ ಸಂದರ್ಭದಲ್ಲಿ ಅವರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿಗಳ ಸಮಗ್ರಸ್ವರೂಪದ ವಿಸ್ತೃತ ವರದಿ ಸಿದ್ಧಿಪಡಿಸಬೇಕು. ಸಮೀಕ್ಷೆಗೆ ಅಗತ್ಯ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಈ ಕಾರ್ಯವನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ವಹಿಸಬೇಕು.

೨. ಶಾಶ್ವತ ನೆಲೆ ಮತ್ತು ಗುರುತು ಎರಡರಿಂದಲೂ ವಂಚಿತರಾದ ಇವರಿಗೆ ಕರ್ನಾಟಕದ ಎಲ್ಲೇ ಇದ್ದರೂ ಗುರುತಿಸಲು ಸಾಧ್ಯವಾಗುವಂತೆ ಮತ್ತು ಅವರ ಹಕ್ಕುಗಳನ್ನು ಪಡೆಯಲು ಹಾಗೂ ರಕ್ಷಿಸಿಕೊಳ್ಳಲು ಅನುವಾಗುವಂತೆ ವಿಶೇಷ ಗುರುತು ಚೀಟಿ ನೀಡಬೇಕು.

೩. ಪರಿಶಿಷ್ಟ ಪಂಗಡಗಳಿಗೆ ಪ್ರಸ್ತುತ ಇರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ, ಅದರಲ್ಲಿ ಅಲೆಮಾರಿ ಸಮುದಾಯಗಳಿಗಾಗಿಯೇ ವಿಶೇಷ ಒಳ ಮೀಸಲಾತಿಯನ್ನು ಒದಗಿಸಬೇಕು.

೪. ಸಾಮಾಜಿಕವಾಗಿ ಸಂಪೂರ್ಣವಾಗಿ ತುಳಿತಕ್ಕೆ ಒಳಗಾದ ಅಲೆಮಾರಿ ಸಮುದಾಯಗಳ ಮೇಲೆ ದೌರ್ಜನ್ಯ ನಡೆಸುವ ಪಟ್ಟಭದ್ರರ ಮೇಲೆ ತೀವ್ರ ಸ್ವರೂಪದ ಕಠಿಣ ಕ್ರಮಕೈಗೊಳ್ಳಲು ಅನುವು ಮಾಡಿಕೊಡುವ ವಿಶೇಷ ಕಾನೂನು ರೂಪಿಸುವ ಮೂಲಕ ಅವರ ಭಯ ಮತ್ತು ಅಭದ್ರತೆಯ ಜೀವನಕ್ಕೆ ಕೊನೆ ಹಾಡಬೇಕು.

೫. ಅಲೆಮಾರಿ ಸಮುದಾಯಗಳ ವೈದ್ಯ ಕರಕುಶಲ ಕಲೆ, ಪ್ರದರ್ಶನ ಕಲೆ, ನಿಸರ್ಗ ವಿನ್ಯಾಸ ಮುಂತಾದ ಜ್ಞಾನ ಪರಂಪರೆಗಳನ್ನು ಉಳಿಸಿ ಬೆಳೆಸುವ ಪ್ರೋತ್ಸಾಹದಾಯಕ ಯೋಜನೆಗಳನ್ನು ರೂಪಿಸುವುದಲ್ಲದೆ ಅಂಥ ಯೋಜನೆಗಳು ಅವರ ಆರ್ಥಿಕ ಭದ್ರತೆಗೆ ದಾರಿಯಾಗುವಂತೆ ಕ್ರಮಕೈಗೊಳ್ಳಬೇಕು.

೬. ಜನಪದ ಕಲೆಗಳನ್ನು ಬೆಳೆಸಿ ಪ್ರೋತ್ಸಾಹ ನೀಡುವುದಕ್ಕಾಗಿ ಜನಪದ ರಂಗಾಯಣವನ್ನು ಕರ್ನಾಟಕ ಸರ್ಕಾರ ನಿರ್ಮಿಸಬೇಕು.

ಪ್ರತಿ ವರ್ಷ ನಡೆಯುವ ದೇಸಿ ಸಮ್ಮೇಳನದಲ್ಲಿ ಮಂಡಿತವಾದ ಪ್ರಬಂಧ, ಚಿಂತನ ಮಂಥನ ಹಾಗೂ ಭಾಷಣಗಳನ್ನು ಪುಸ್ತಕ ರೂಪದಲ್ಲಿ ತರುವುದು ಹಾಗೂ ಆ ಪುಸ್ತಕವನ್ನು ಸಮ್ಮೇಳನದಲ್ಲಿ ಬಿಡುಗಡೆ ಮಾಡುವುದು ಜಾನಪದ ಅಧ್ಯಯನ ವಿಭಾಗದ ಸಂಪ್ರದಾಯ. ಈ ಹಿನ್ನೆಲೆಯಲ್ಲಿ ‘ಮಾಟ-ಮಂತ್ರ-ಮೋಡಿ’ ಹಾಗೂ ‘ಅಲೆಮಾರಿಗಳ ಸ್ಥಿತಿಗತಿ’ ಅರಳಿವೆ. ಪ್ರಸ್ತುತ ಗ್ರಂಥದಲ್ಲಿ ಮೂರು ಭಾಗಗಳಾಗಿ ಆಯೋಜಿಸಲಾಗಿದೆ. ಮೊದಲ ಭಾಗದಲ್ಲಿ ಉದ್ಘಾಟನಾ ಸಮಾರಂಭ ಭಾಷಣಗಳನ್ನೂ ಮುದ್ರಿಸಲಾಗಿದೆ. ಇದರಲ್ಲಿ ಅನೇಕ ಭಾಷಣಗಳನ್ನು ಧ್ವನಿ ಸುರುಳಿಯಿಂದ ಲಿಪ್ಯಂತರ ಮಾಡಿಕೊಂಡಂಥವು. ಎರಡನೇ ಭಾಗದಲ್ಲಿ ಗೋಷ್ಠಿಗಳಲ್ಲಿ ಮಂಡಿಸಲಾದ ಪ್ರಬಂಧಗಳು, ಟಿಪ್ಪಣಿಗಳು, ಸಂವಾದಗಳು ಹಾಗೂ ಅಧ್ಯಕ್ಷ ಭಾಷಣಗಳಿವೆ. ಇದರಲ್ಲಿನ ಕೆಲವು ಅಧ್ಯಕ್ಷ ಭಾಷಣಗಳು ಲಿಪ್ಯಂತರ ಗೊಂಡವು. ಮೂರನೇ ಭಾಗದಲ್ಲಿ ಸಮಾರೋಪ ಸಮಾರಂಭದಲ್ಲಿನ ಭಾಷಣಗಳನ್ನು ನೀಡಲಾಗಿದೆ. ಇಲ್ಲಿಯೂ ಕೂಡ ಭಾಷಣಗಳನ್ನು ಲಿಪ್ಯಂತರಗೊಳಿಸಿಕೊಳ್ಳಲಾಗಿದೆ. ಧ್ವನಿ ಸುರುಳಿಯಿಂದ ಲಿಪ್ಯಂತರ ಗೊಳಿಸಿದವರ ಹೆಸರುಗಳನ್ನು ಆಯಾಯ ಭಾಷಣಗಳ, ಸಂವಾದಗಳ, ಟಿಪ್ಪಣಿಗಳ ಮತ್ತು ಪ್ರಬಂಧಗಳ ಕೆಳಗೆ ನೀಡಲಾಗಿದೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳಿಗೆ ಸಂಬಂಧ ಪಟ್ಟ ಭಾಷಣಕಾರರು, ಟಿಪ್ಪಣಿ ಮಂಡಿತರು, ಸಂವಾದಕರು ಹಾಗೂ ಪ್ರಬಂಧಕಾರರೇ ಜವಾಬ್ದಾರರಾಗಿರುತ್ತಾರೆ.

ಸಮ್ಮೇಳನದ ಸಭಾಧ್ಯಕ್ಷರಾದ ಡಾ. ಬಿ.ಎ. ವಿವೇಕ ರೈ ಅವರು ಕನ್ನಡ ಸಾಹಿತ್ಯ ಹಾಗೂ ಜಾನಪದದಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಬರೆದಿದ್ದಾರೆ. ಇಂಥ ಪರಿಣಿತ, ಸಂಸ್ಕೃತಿ ಪ್ರಿಯ, ಚಿಂತನಾಶೀಲ ತಜ್ಞ ಸಮ್ಮೇಳನದ ಅಧ್ಯಕ್ಷರಾಗಿರುವುದು ದೇಸಿ ಸಮ್ಮೇಳನಕ್ಕೆ ಮೆರಗನ್ನು ತಂದಿದೆ. ಈ ಮೂಲಕ ಜಾನಪದ ಲೋಕವನ್ನು ಗೌರವಿಸಿದಂತಾಗಿದೆ. ವಿಭಾಗವು ಇನ್ನು ಮುಂದೆಯೂ ಇಂತಹ ತಜ್ಞರನ್ನು ಆಯ್ಕೆ ಮಾಡಿ ತನ್ನ ಸಂಪ್ರದಾಯವನ್ನು ಮುಂದುವರೆಸುತ್ತದೆ. ಮಾನ್ಯ ಕುಲಪತಿಗಳು, ಜಾನಪದ ವಿದ್ವಾಂಸರೂ ಆದ ಡಾ. ಬಿ.ಎ. ವಿವೇಕ ರೈ ಅವರು ಪ್ರಿಯ ನುಡಿಗಳನ್ನು ಬರೆದು ಪ್ರೋತ್ಸಾಹಿಸಿದ್ದಾರೆ. ಅವರಿಗೆ, ಈ ಗ್ರಂಥವನ್ನು ಸಂಪಾದಿಸಲು ಅನುವು ಮಾಡಿಕೊಟ್ಟ ಹಿಂದಿನ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರಿಗೆ, ಕೃತಿಯ ಪ್ರಕಟಣೆಗೆ ಆಡಳಿತಾತ್ಮಕ ಅನುಮೋದನೆ ನೀಡಿದ ಮಾನ್ಯ ಕುಲಸಚಿವರಾದ ಡಾ. ಕರೀಗೌಡ ಬೀಚನಹಳ್ಳಿ ಅವರಿಗೆ, ಪುಸ್ತಕ ಅರ್ಥಪೂರ್ಣವಾಗಿ ರೂಪುಗೊಳ್ಳಲು ಕಾರಣರಾದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ, ಪ್ರಸಾರಾಂಗದ ಹಿಂದಿನ ನಿರ್ದೇಶಕರುಗಳಾದ ಡಾ. ಹಿ.ಚಿ.ಬೋರಲಿಂಗಯ್ಯ ಮತ್ತು ಪ್ರೊ. ಎ.ವಿ. ನಾವಡ ಅವರುಗಳಿಗೆ ಕೃತಜ್ಞತೆಗಳು.

ಈ ಕೃತಿ ಅಂದವಾಗಿ ಬರಲು ಕಾರಣರಾದ ಪ್ರಸಾರಾಂಗದ ಸಹಾಯಕ ನಿರ್ದೇಶಕ ಶ್ರೀ ಬಿ.ಸುಜ್ಞಾನಮೂರ್ತಿ ಮತ್ತು ಶ್ರೀ ಎಚ್.ಬಿ. ರವೀಂದ್ರ ಅವರಿಗೆ ಮುಖಪುಟ ವಿನ್ಯಾಸ ಮಾಡಿದ ಕಲಾವಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ, ಅಕ್ಷರ ಸಂಯೋಜನೆಯನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ವಿದ್ಯಾರಣ್ಯ ಗಣಕ ಕೇಂದ್ರದ ಶ್ರೀ ಜೆ. ಬಸವರಾಜ ಅವರಿಗೆ ವಿಭಾಗದ ಸಹೋದ್ಯೋಗಿಗಳಾದ ಡಾ. ಮಂಜುನಾಥ ಬೇವಿನಕಟ್ಟಿ, ಡಾ. ಹೆಬ್ಬಾಲೆ ಕೆ. ನಾಗೇಶ್, ಡಾ|| ಸಿ.ಟಿ. ಗುರುಪ್ರಸಾದ್, ಡಾ|| ಹರಿಶ್ಚಂದ್ರ ಎಸ್. ದಿಗ್ಸಂಗಿಕರ್ ಅವರಿಗೆ ಕೃತಜ್ಞತೆಗಳು.

ಈ ಪುಸ್ತಕ ಸಿದ್ಧಗೊಳ್ಳಲು ಹಲವು ಹಂತಗಳಲ್ಲಿ ಸಹಕರಿಸಿದ ವಿದ್ಯಾರ್ಥಿ ಮಿತ್ರರಾದ ಮೋಹನ್ ಎಸ್., ದುರ್ಗಾ ಪ್ರವೀಣ, ಚಂದ್ರಪ್ಪ ಸೊಬಟಿ, ಅರುಣ್‌ಕುಮಾರ್ ಜೋಳ ಕೂಡ್ಲಿಗಿ, ನಿಸಾರ್ ಅಹಮದ್, ಸುಮಂಗಲ ಅತ್ತಿಗೇರಿ, ಲಿಂಗಪ್ಪ, ಸುನಂದಾ ಎಂ., ತಾರಾಮತಿ, ಶಮೀನಾಬಾನು, ನೇತ್ರಾವತಿ, ಗವಿಸಿದ್ದಪ್ಪ, ನಾಗವರ್ಮ, ವಸಂತ ಕುಮಾರ ಪುತ್ತಿ, ರುದ್ರಮುನಿ. ಎಲ್, ಇಸ್ಮಾಯಿಲ್ ಜಬ್ಬೀರ್‌, ಹಂದ್ರಾಳ ಮಾರ್ಕಂಡೇಯ ರಾಜಶೇಖರಪ್ಪ, ರಾಧಮ್ಮ, ಕೃಷ್ಣವೇಣಿ, ಗುರುಪ್ರಸಾದ್, ಕೃಷ್ಣಹರಿ, ಕರಣಂ ಪ್ರಭಾಕರ ದೇವರಕುರಿ ಓಬಯ್ಯ ಇವರೆಲ್ಲರನ್ನೂ ಪ್ರೀತಿಯಿಂದ ನೆನೆಯುತ್ತೇನೆ.

* * *