ನಮಗೆ ೧೯೪೭ ಆಗಸ್ಟ್‌೧೫ ರಂದು ಸ್ವಾತಂತ್ರ್ಯ ದೊರೆಯಿತು. ಆ ದಿನದಿಂದ ನಮ್ಮ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸುವುದು ವಾಡಿಕೆ. ಆದರೆ ನಾನು ಮಾತ್ರ ವಂದನೆಯನ್ನು ಸಲ್ಲಿಸುವುದಿಲ್ಲ. ಏಕೆಂದರೆ ನಾವಿನ್ನೂ ಸ್ವತಂತ್ರವಾಗಿಲ್ಲ. ೧೯೫೧ ಆಗಸ್ಟ್ ೨೧ ರಂದು ಕಾನೂನಿನ ಚೌಕಟ್ಟಿನಲ್ಲಿ ಸೂಚಿತವಾಗಿದ್ದ ಸಮುದಾಯಗಳನ್ನು ಸೂಚಿತವಲ್ದ ಸಮುದಾಯಗಳನ್ನು ಪರಿಗಣಿಸಲಾಯಿತು. ಹಾಗೆಯೇ ಇಡೀ ದೇಶದ ತುಂಬೆಲ್ಲಾ ಜನರು ಮುಕ್ತರಾದರು. ಆಗ ಪಂಡಿತ ಜವಹರ್‌ಲಾಲ್ ನೆಹರುರವರು ನಾವು ಬರೀ ಮುಕ್ತರಾದವರು ಆದರೆ, ನೀವು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಜನರು ಹೀಗಾಗಿ ಅಂದಿನಿಂದ ವಿಶೇಷ ಮುಕ್ತತೆಯನ್ನು ಹೊಂದಿದ್ದೀರೆಂದು ಘೋಷಿಸಿದರು. ಅಂದರೆ ೧೯೪೯ ರಲ್ಲಿ ಸಂವಿಧಾನ ರಚನೆಯಾಯಿತು. ನಮಗೆಲ್ಲ ಸ್ವತಂತ್ರವಿರಲಿಲ್ಲ. ಈಗಲೂ ಸುಮಾರು ೪ ಕೋಟಿ ಜನರು ಭಾರತದ ಪರಮಾಧಿಕಾರ ನಾಗರಿಕತ್ವದಿಂದ ಹೊರಗುಳಿದಿದ್ದಾರೆ. ಹೀಗಾಗಿ ೪ ಕೋಟಿ ಜನರಿಗೆ ನಾಗರಿಕತ್ವವೇ ಇಲ್ಲವಾಗಿದೆ. ಈ ಸಂಬಂಧವಾಗಿ ಕಳೆದ ೨೫-೨೬ ವರ್ಷಗಳಿಂದ ಸತತವಾಗಿ ಹೋರಾಡುತ್ತಿದ್ದರೂ ನಮ್ಮಂತಹವರಿಗೆ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿಲ್ಲ. ಆದರೆ ಇತ್ತೀಚೆಗೆ ಭಾರತ ಸರ್ಕಾರವು ಒಂದು ಆಯೋಗವನ್ನು ರಚಿಸಲು ಕರೆಕೊಟ್ಟಿದೆ. ಇದಕ್ಕೆ ಮುಂಚೆ ಬಹಳಷ್ಟು ಆಯೋಗಗಳು ಬಂದು ಹೋಗಿವೆ. ಅವುಗಳಲ್ಲಿ ಅನುಸೂಚಿತ ಅಲೆಮಾರಿ ಬುಡಕಟ್ಟುಗಳ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಕೆಲವು ಅಲೆಮಾರಿ ಬುಡಕಟ್ಟು ಸಮುದಾಯಗಳು ಬುಡಕಟ್ಟುಗಳಿಂದ ದೂರ ಉಳಿದಿವೆ. ಇಂತಹವುಗಳ ಬಗ್ಗೆ ಮಾತನಾಡುವುದಾಗಲಿ, ಬೆಂಬಲ ವ್ಯಕ್ತಪಡಿಸುವುದಾಗಲಿ ಆಯೋಗಗಳಲ್ಲಿ ಕಂಡುಬರುತ್ತಿಲ್ಲ. ಹೊಟ್ಟೆಗೆ ಅನ್ನವಿಲ್ಲದ ಜನರನ್ನು ಅಲೆಮಾರಿಗಳೆಂದು, ಅನುಸೂಚಿತ ಸಮುದಾಯಗಳೆಂದು ಕರೆಯಲಾಗುತ್ತಿದೆ. ಇಂದಿಗೂ ಇಂತಹ ಸಮುದಾಯಗಳು ಆಹಾರಕ್ಕಾಗಿ ಒಂದು ಪ್ರದೇಶದಿಂದ, ಮತ್ತೊಂದು ಪ್ರದೇಶಕ್ಕೆ ಕುಟುಂಬ ಸಮೇತ ಸತತವಾಗಿ ಅಲೆಯುತ್ತಿದ್ದಾರೆ. ಸ್ವತಂತ್ರ ನಂತರ ಇವರಿಗಾಗಿ ಯಾವುದೇ ಕಾಯ್ದೆ ಕಾನೂನುಗಳು ರಚನೆಯಾಗಿಲ್ಲ. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮಗೆ ಬಹಳಷ್ಟು ಖುಷಿ ಕೊಡುವ ಸಂಗತಿಯೆಂದರೆ, ನಿನ್ನೆ ದಿನ ಮಿತ್ರರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಭೇಟಿಯಾದಾಗ ಹೇಳಿದರು – ಹಂಪಿ ವಿಶ್ವವಿದ್ಯಾಲಯವು ಅಲೆಮಾರಿಗಳ ಬಗ್ಗೆ, ವಿವಿಧ ಬುಡಕಟ್ಟುಗಳ ಬಗ್ಗೆ ಅಧ್ಯಯನ, ಚಿಂತನೆ, ಚರ್ಚೆಗಳು ನಡೆಸುತ್ತಿದೆ ಎಂದು. ಹಾಗೂ ಜಿಲ್ಲಾಧಿಕಾರಿಗಳು ಬಂದು ಈ ವಿಷಯದ ಬಗ್ಗೆ ಚರ್ಚಿಸುತ್ತಿರುವುದು ಸಂತೋಷವೆಂದೇ ಹೇಳಬಹುದು. ನಿಜ ಹೇಳಬೇಕೆಂದರೆ, ಈಗಲೂ ಜಿಲ್ಲಾಧಿಕಾರಿಗಳ ಮುಂದೆ ನಮ್ಮನ್ನು ಅಪರಾಧಿಗಳು, ದರೋಡೆಕೋರರು ಹಾಗೂ ಕಳ್ಳಕಾಕರೆಂದು ಗುರುತಿಸಲಾಗುತ್ತಿದೆ. ಅಂದರೆ ಈವರೆಗೂ ನಮ್ಮನ್ನು ಮನುಷ್ಯರೆಂದು ಗುರುತಿಸದೇ ಇರುವುದು ಖೇದದ ಸಂಗತಿಯೆಂದು ಹೇಳಬಹುದು. ಆದರೆ ಇಂದಿನ ಸಮಾವೇಶದಲ್ಲಿ ಸೂಚಿತವಲ್ಲದ ಸಮುದಾಯಗಳ ಬಗ್ಗೆ, ಅವುಗಳ ಸ್ಥಿತಿ-ಗತಿಗಳ ಬಗ್ಗೆ ಚರ್ಚಿಸುವುದು, ಸರ್ಕಾರ ಏನು ಮಾಡಬೇಕು. ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಆದೇಶಗಳನ್ನು ಹೊರಡಿಸಲಾಗುತ್ತಿದೆ. ಹಿಂದೊಮ್ಮೆ ಬೆಳಗಾಂ ಜಿಲ್ಲೆಯನ್ನು ಮಹಾರಾಷ್ಟ್ರದಲ್ಲಿ ಸೇರಿಸಿಕೊಳ್ಳಬೇಕೆಂದು ದೊಡ್ಡ ಗಲಾಟೆ ನಡೆಯುವ ಸಮಯದಲ್ಲಿ ನಾನೊಬ್ಬನೆ ಮಹಾರಾಷ್ಟ್ರದಲ್ಲಿದ್ದೆ. ಆಗ ಬೆಳಗಾಂವನ್ನು ಮಹಾರಾಷ್ಟ್ರದಲ್ಲಿ ಸೇರಿಸುವುದನ್ನು ವಿರೋಧಿಸಿದ್ದೆ. ಅದಕ್ಕೆ ಕಾರಣ ಬೆಳಗಾಂನಲ್ಲಿರುವ ಬಹಳಷ್ಟು ಅಲೆಮಾರಿಗಳು, ಬುಡಕಟ್ಟುಗಳು ಪ.ಜಾ. ಪ.ಪಂ.ಗಳಲ್ಲಿ ಸೇರಲ್ಪಟ್ಟಿದ್ದಾರೆ. ಒಂದು ವೇಳೆ ಬೆಳಗಾಂನ್ನು ಮಹಾರಾಷ್ಟ್ರದಲ್ಲಿ ಸೇರಿಸಿದರೆ ಇವೆಲ್ಲವು ಮುಂದುವರೆದ ಜಾತಿಗಳ ಸಾಲಿನಲ್ಲಿ ಸೇರಬೇಕಾಗುತ್ತದೆ. ಇಂತಹ ಕಾನೂನು ಮಹಾರಾಷ್ಟ್ರ ಸರ್ಕಾರದ ಪಟ್ಟಿಯಲ್ಲಿ ಇದ್ದಿದ್ದರಿಂದ ನಾನು ಬೆಳಗಾಂನ್ನು ಯಾವ ಕಾರಣಕ್ಕೂ ಮಹಾರಾಷ್ಟ್ರದಲ್ಲಿ ಸೇರಿಸಿಕೊಳ್ಳಬಾರದೆಂದು ಒತ್ತಾಯಿಸಿದ್ದೆ. ಏಕೆಂದರೆ ನಾವೆಲ್ಲರೂ ನಮ್ಮ ದೇಶದಲ್ಲಿದ್ದೇವೆ. ಎಲ್ಲಿ ನಾವು ಹೊರಗಡೆ ಹೋಗುತ್ತಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟೆನು.

ಅಲೆಮಾರಿ ಬುಡಕಟ್ಟುಗಳು ಹತ್ತಾರು ಭಾಷೆಗಳನ್ನು ಮಾತನಾಡುತ್ತಿದ್ದರೂ ಅವರಿಗೆ ಅವರದೇ ಆದ ಒಂದು ಭಾಷೆಯೂ ಇದೆ. ಹೀಗಾಗಿ ನಮಗೆ ಭಾಷೆಯ ಆಧಾರದ ಮೇಲೆ ಗುರುತಿಸುವ, ರಕ್ಷಿಸುವ, ಯಾವುದೇ ಕಾರ್ಯಯೋಜನೆಗಳನ್ನು ರೂಢಿಸಲಾಗಲಿಲ್ಲ. ಸಂತೋಷದ ವಿಷಯ ಒಂದಿದೆ, ಸಮಾರಂಭದಲ್ಲಿ ದುರುಗ ಮುರುಗಿಯ ಚಿತ್ರವಿರುವುದು. ಇಂತಹ ದುರುಗ ಮುರುಗಿಯವರು ನಮ್ಮ ಪ್ರದೇಶದ ಒಳಗೆ ಬರುತ್ತಿದ್ದಾರೆ. ಅವರು ಸಂಸ್ಕೃತಿಯ ಹೆಸರಿನಲ್ಲಿ ತಮ್ಮ ಮೈಗೆ ಚಾಟಿ ಹೊಡೆದುಕೊಳ್ಳುವುದು ವಾಡಿಕೆ. ಇಂತಹ ಕ್ರಮವನ್ನು ಅನುಸರಿಸಿ ಅನ್ನಕ್ಕಾಗಿ ಭಿಕ್ಷೆಯನ್ನು ಬೇಡುತ್ತಿದ್ದಾರೆ ಹಾಗೂ ತಮ್ಮ ಮೈಯಲ್ಲಿನ ರಕ್ತವನ್ನು ಜನರಿಗೆ ತೋರಿಸಿದಾಗ ಜನರು ರೊಟ್ಟಿಯನ್ನು ಕೊಡುತ್ತಾರೆ. ಅಂದರೆ ಯಾರ ಹತ್ತಿರ ರಕ್ತವಿಲ್ಲವೊ ಅಂತಹವರು ರಕ್ತ ಉಳ್ಳವರ ರಕ್ತವನ್ನು ನೋಡಿ ಭಿಕ್ಷೆ ಹಾಕುತ್ತಿರುವುದು ನಮ್ಮ ಸಂಸ್ಕೃತಿಯಲ್ಲ, ಅದು ನಮ್ಮ ವಿಕೃತಿ ಮನಸ್ಸು. ಏಕೆಂದರೆ ಸಂಸ್ಕೃತಿಯ ಹೆಸರಿನ ಮೇಲೆ ಸೂಚಿತವಲ್ಲದ ಅಲೆಮಾರಿಗಳನ್ನು ಸಮಾಜವು ಶೋಷಿಸುವ ಹುನ್ನಾರಗಳನ್ನು ನಿರಂತರವಾಗಿ ಕೈಗೊಂಡಿದೆ. ನಮ್ಮ ದೇಶದ ಆಂಧ್ರಪ್ರದೇಶ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಬಹಳಷ್ಟು ಅಲೆಮಾರಿ ಬುಡಕಟ್ಟುಗಳನ್ನು ಪ.ಜಾ. ಪ.ಪಂ.ಕ್ಕೆ ಸೇರಿಸಲಾಗಿದೆ. ಆದರೆ ಬಹಳಷ್ಟು ರಾಜ್ಯಗಳಲ್ಲಿ ಇವುಗಳ ಬಗ್ಗೆ ಯಾವುದೇ ಮೀಸಲಾತಿಗಳಿಲ್ಲದಿರುವುದನ್ನು ಕಾಣಬಹುದಾಗಿದೆ. ಅವುಗಳ ಬಗ್ಗೆ ಅಧ್ಯಯನಗಳಾಗಲಿ, ಚರ್ಚೆಗಳಾಗಲಿ ನಡೆಯುತ್ತಿಲ್ಲ. ನಮ್ಮ ದೇಶದಲ್ಲಿರುವ ಅನೇಕ ಬುಡಕಟ್ಟುಗಳ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಗಳೇ ಇಲ್ಲ. ಬೇಟೆಯಾಡುವ ಜನಾಂಗದ ಬಗ್ಗೆಯಾಗಲೀ, ನಂದಿಬೈಲ್ ಸಮುದಾಯದ ಬಗ್ಗೆಯಾಗಲಿ ಎಲ್ಲೂ ಉಲ್ಲೇಖಗಳಿಲ್ಲ. ಇಂತಹ ಎಲ್ಲ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ನಮ್ಮ ದೇಶದಲ್ಲಿ ಬಹಳಷ್ಟು ಕೆಲಸಗಳಾಗಬೇಕಾಗಿದೆ. ಹೀಗಾಗಿ ಒಂದೊಂದು ಸಮುದಾಯಗಳ ಬಗ್ಗೆ ಪಿ.ಎಚ್.ಡಿ. ಮಾಡುವುದಾದರೆ ಅಂತಹ ಸಂಶೋಧಕರು ಇತಿಹಾಸದಲ್ಲಿ ದಾಖಲಾಗುತ್ತಾರೆ. ಜೊತೆಗೆ ಪದವಿಗಯೂ ಬೇಗ ದಕ್ಕುತ್ತದೆ.

ನಿಜ ಹೇಳುವಾದರೆ ಜನರು ನಮ್ಮನ್ನು ಅಪರಾಧಿಗಳೆಂದು ಕರೆಯುತ್ತಾರೆ. ಆದರೆ ನಾವುಗಳು ಅಪರಾಧಿಗಳಲ್ಲ. ನಾನು ‘ಉಚಲ್ಯ’ ಪುಸ್ತಕ ಬರೆದಾಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಹಾಗೆಯೇ ರಾಷ್ಟ್ರಪತಿಗಳಿಂದ ‘ಸಾರ್ಕ್‌ಪ್ರಶಸ್ತಿ’ ಪ್ರಕಟಗೊಂಡಾಗ ಜನರು ಈ ರೀತಿ ಹೇಳಿದರು: “ಇಂದಿನ ದಿನಗಳಲ್ಲಿ ಕಳ್ಳರಿಗೂ ಪ್ರಶಸ್ತಿ ದೊರೆಯುತ್ತಿವೆ”. ನಾನು ಹೇಳಿದೆ : “ಅಣ್ಣಂದಿರ, ಕಳ್ಳತನವನ್ನು ಸೃಷ್ಟಿಸಿದವರು ಯಾರು? ನೀವೇ ತಾನೆ? ನಮ್ಮ ದೇಶದಲ್ಲಿ ‘ಚೇತನ್ ಪಾರೇಕ್’, ‘ಹರ್ಷದ್ ಮೆಹತಾ’ ಮುಂತಾದವರಿಗೆ ತುಂಬಾ ಗೌರವ ಸಿಗುತ್ತಿದೆ. ಏಕೆಂದರೆ ಅವರು ಇಡೀ ದೇಶದ ಜನರ ಜೇಬನ್ನು ಕತ್ತರಿಸಿದರು. ಅಂತಹವರನ್ನು ಬುದ್ಧಿವಂತರೆಂದು ಗುರುತಿಸುತ್ತಿದ್ದಾರೆ. ಆದರೆ ನಾವು ಒಂದು ಹೊತ್ತಿನ ಅನ್ನಕ್ಕಾಗಿ ಚಿಕ್ಕಪುಟ್ಟ ಕಳ್ಳತನವನ್ನು ಮಾಡಿದರೆ, ನಮ್ಮನ್ನು ಅಪರಾಧಿಗಳೆಂದು, ಕಳ್ಳರೆಂದು ಗುರುತಿಸುತ್ತಿದ್ದಾರೆ. ಸ್ವಾಮಿ ನಾನು ಹೇಳುತ್ತೇನೆ – ಅನ್ನಕ್ಕಾಗಿ ಯಾರು ಕಳ್ಳತನವನ್ನು ಮಾಡುತ್ತಾರೆಯೋ ಅವರು ನಿಜವಾಗಿಯೂ ಅಪರಾಧಿಗಳಲ್ಲ, ಅವರು ಮನುಷ್ಯರ ಅನ್ನವನ್ನು ಕದ್ದು ಮನೆಯಲ್ಲಿ ಸಂಗ್ರಹಿಸಿಕೊಳ್ಳುತ್ತಾರೆಯೋ ಅಂತಹವರು ದೇಶದ ಹಾಗೂ ಸಮುದಾಯದ ಅಪರಾಧಿಗಳಾಗುತ್ತಾರೆ”. ನಾನು ಹೇಳುವುದೇನೆಂದರೆ ಎಲ್ಲಾ ದೇಶದಲ್ಲಿರುವ ಜನರ ನೋವು-ನಲಿವು ಒಂದೇ ಆಗಿವೆ. ಆದರೆ ಅವುಗಳನ್ನು ಬೇರೆ ಬೇರೆಯೆಂದು ಪ್ರತ್ಯೇಕಿಸಲಾಗುತ್ತಿದೆ. ಕರ್ನಾಟಕದಿಂದ ಬರುವವರೆಲ್ಲರೂ ರಾಮ, ಲಕ್ಷ್ಮಣ, ಸೀತೆಯ ವೇಷವನ್ನು ಧರಿಸಿಕೊಂಡು ಬರುತ್ತಾರೆ. ಅವರು ಈಗಲೂ ರಾಮಾಯಣ, ಮಹಾಭಾರತದ ಕಥೆಗಳನ್ನು ಮೌಖಿಕವಾಗಿ ಪ್ರಸ್ತುತಪಡಿಸುತ್ತಾರೆ. ಆದರೆ ಇಂದು ನಮ್ಮ ದೇಶದಲ್ಲಿ ರಾಮನ ಹೆಸರಿನ ಮೇಲೆ ಇಟ್ಟಿಗೆಗಳನ್ನು ಸಂಗ್ರಹಿಸುತ್ತಾ, ಇನ್ನೊಬ್ಬರ ಮಸೀದಿಯನ್ನು ಹೊಡೆದು ಹಾಕಿ ರಾಮ ಮಂದಿರವನ್ನು ಕಟ್ಟಲು ಹೋಗುತ್ತಿದ್ದಾರೆ. ಅಂತಹವರಿಗೆ ಹೀಗೆ ಹೇಳುತ್ತೇನೆ, ನಿಜವಾಗಿಯೂ ನಿಮಗೆ ರಾಮನ ಮೇಲೆ ಪ್ರೀತಿ, ಭಕ್ತಿ, ಇದ್ದರೆ ಬನವಾಸಿಯಲ್ಲಿರುವ ಕೆಲವು ನಿರ್ಗತಿಕರಿಗೆ ಒಂದೊಂದು ಇಟ್ಟಿಗೆಯನ್ನು ತೆಗೆದುಕೊಂಡು ಹೋಗಿ ಅವರಿಗೆ ಮನೆಯನ್ನಾದರೂ ಕಟ್ಟಿಕೊಡಿ, ಆಗ ರಾಮನನ್ನು ಪ್ರೀತಿಸುವ, ಒಲಿಸುವ ಭಾಗ್ಯ ದೊರಕೀತು. ಅದನ್ನು ಬಿಟ್ಟು ದೇಶದ ತುಂಬೆಲ್ಲ ದಂಗೆ, ದರೋಡೆ, ಮತ್ತೊಬ್ಬರ ಅನ್ನವನ್ನು ಕಸಿದು ಕೊಳ್ಳುವ ಕೆಲಸವನ್ನು ಮಾಡಬೇಡಿ. ನೀವು ಜನರಿಗೆ ತ್ರಿಶೂಲವನ್ನು ಹಂಚುವ ಬದಲು, ಪುಸ್ತಕ, ಪೆನ್ಸಿಲು ಪಾಟಿಗಳನ್ನು ಕೊಡಿ ಎಂದು ಹೇಳುತ್ತೇನೆ. ಭಾರತದಲ್ಲಿ ಅನ್ನಕ್ಕಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅಲೆಯುತ್ತಿರುವ ಸಮುದಾಯಗಳು ಕೆಲವು ಜನರಿಗೆ ಬಂಡವಾಳದ ರೂಪದಲ್ಲಿ ಕಂಡು ಬರುತ್ತಿದ್ದಾರೆ. ಕೆಲವು ಅಲೆಮಾರಿಗಳ ಬಗ್ಗೆ ಚಿಕ್ಕಪುಟ್ಟ ಸಹಾಯ ಮಾಡುವ ಮೂಲಕ ಕೋಟಿಗಟ್ಟಲೆ ಹಣವನ್ನು ವಿದೇಶಗಳಿಂದ ತರಿಸಿಕೊಳ್ಳುತ್ತಿದ್ದಾರೆ. ಆದರೆ ಆ ಅಲೆಮಾರಿಗಳ ಬದುಕು ಪರಿವರ್ತನೆಗೊಳ್ಳದೆ ಹಾಗೆಯೇ ಉಳಿದುಕೊಂಡಿದೆ.

ಕೆಲವರು ಅನ್ನಕ್ಕಾಗಿ ವಿಷದ ಸರ್ಪಗಳನ್ನು, ಕರಡಿಗಳನ್ನು ಆಡಿಸುವ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಅಂತಹವರಿಗೆ ಸರಿಯಾದ ದಾರಿ ತೋರಿಸಲು ಶಿಕ್ಷಣವನ್ನು ಕೊಡುವ, ಮಾನವರನ್ನಾಗಿ ಮಾಡುವ ಬಗ್ಗೆ ಯಾವುದೋ ರೀತಿಯ ಚಳುವಳಿಗಳು ದೇಶದಲ್ಲಿ ನಡೆಯುತ್ತಿಲ್ಲ. ಆದರೆ ನಮ್ಮ ದೇಶದ ತುಂಬೆಲ್ಲಾ ಧರ್ಮ, ಜಾತಿ ಆಧಾರಿತ ಚಳುವಳಿಗಳು ನಿರಂತರವಾಗಿ ಹೆಚ್ಚುತ್ತಿವೆ. ಸುಮಾರು ೭೦೦ ವರ್ಷಗಳ ಹಿಂದೆ ಬಸವೇಶ್ವರರು ತಮ್ಮ ವಚನಗಳಲ್ಲಿ ಕಾಗೆಯ ಉದಾರತೆಯ ಗುಣವನ್ನು ಹೋಲಿಕೆಯಾಗಿ ತೆಗೆದುಕೊಂಡು ಮಾನವ ಅದನ್ನು ಹೇಗೆ ಪಾಲಿಸಬೇಕೆಂದು ತುಂಬಾ ವಿಸ್ತೃತವಾಗಿ ವಿವರಿಸಿದ್ದಾರೆ.

ಈ ನಿಯಮದ ಪ್ರಕಾರ ಸುತ್ತಮುತ್ತಲಿರುವ ಉಪವಾಸವಿರುವ ಜನರಿಗೆ ಒಂದು ತುತ್ತು ಅನ್ನವಾದರೂ ಕೊಡುವ ಉದಾರತೆಯನ್ನು ಪ್ರದರ್ಶಿಸಿದರೆ ಪ್ರತಿಯೊಬ್ಬರೂ ಸಂತೋಷದಿಂದ ಬದುಕಬಹುದು. ನಮ್ಮ ದೇಶದ ನಾಯಕರು, ಬುದ್ಧಿಜೀವಿಗಳೆಲ್ಲರೂ ಬುಡಕಟ್ಟು ಜನರಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲ ಎನ್ನುತ್ತಾರೆ. ಆದರೆ ಭಾರತದ ಕಲೆ-ಸಂಸ್ಕೃತಿ ಉಳಿದುಕೊಂಡು, ಬೆಳೆದುಕೊಂಡು ಬರುತ್ತಿರುವುದು ಇಂತಹ ಬುಡಕಟ್ಟು ಜನರಿಂದಲೇ ಎಂಬುದನ್ನು ಮರೆಯಬಾರದು. ಅದಕ್ಕಾಗಿ ಇಂದಿನ ಚಳುವಳಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ, ಪುಲೆಯವರ ವಿಚಾರಗಳನ್ನಾಧರಿಸಿ ನಡೆಯುತ್ತಿವೆ. ಬುಡಕಟ್ಟು ಸಂಸ್ಕೃತಿಯಲ್ಲಿ ಬೇಟೆ ಕೈಗೊಂಡಾಗ ಅದನ್ನು ಸಮಸ್ತ ಜನರಿಗೆ ಹಂಚಿ ತಿನ್ನುವ ನಿಯಮವಿದೆ. ಏಕವ್ಯಕ್ತಿಯೇ ಒಂದೇ ಕುಟುಂಬವೇ, ತಿನ್ನುವುದನ್ನು ನಿಷೇಧಿಸಲಾಗಿದೆ. ಹಾಗೆಯೆ ಕಳ್ಳತನವೇ ಆಗಲಿ, ಪಿಕ್‌ಪಾಕೆಟ್‌ನಿಂದ ದೊರೆತ ಹಣವನ್ನು ಪ್ರತಿಯೊಬ್ಬರಿಗೂ ಹಂಚುತ್ತೇವೆ. ಇದು ನಿಜವಾದ ಸಮಾಜವಾದಿ ಧೋರಣೆಯ ಸಿದ್ಧಾಂತ, ಅದು ನಮ್ಮ ಬುಡಕಟ್ಟುಗಳಲ್ಲಿ ಮಾತ್ರ ಸಾಧ್ಯ. ಇಂದಿಗೂ ನಮ್ಮ ನ್ಯಾಯಪದ್ಧತಿಯು ಶ್ರೇಷ್ಠ ನ್ಯಾಯಾಲಯಕ್ಕಿಂತಲೂ ಉತ್ತಮವಾದ ನ್ಯಾಯ ತೀರ್ಮಾನಗಳನ್ನು ಕೊಡುತ್ತದೆ. ಇಂದಿಗೂ ನಮ್ಮ ಸಮಾಜದಲ್ಲಿ ಮೋಸ, ವಂಚನೆ ಮಾಡುವುದನ್ನು, ಮಹಿಳೆಯರ ವಿರುದ್ಧದ ಯಾವುದೇ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವುದು ಅಪರಾಧವೆಂದು ಭಾವಿಸಲಾಗುತ್ತಿದೆ.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಬುಡಕಟ್ಟುಗಳಲ್ಲಿ ಪ್ರಾಮಾಣಿಕತೆ ಹಾಗೂ ಮೇಲ್ಜಾತಿಯಲ್ಲಿರುವ ಅಪ್ರಾಮಾಣಿಕತೆಯ ಬಗ್ಗೆ ನಾನು ಹೇಳಿದ್ದೆ. ಮಾತಿನ ಪ್ರಕಾರ ನಡೆಯುವವರು ನಾವು. ಉದಾಹರಣೆಗೆ ಮದುವೆ ಅಥವಾ ವ್ಯವಹಾರದ ವಿಷಯದಲ್ಲಿ ಕೈಗೊಂಡ ತೀರ್ಮಾನಗಳನ್ನು ಕಾನೂನು ಸಹಾ ಬದಲಾಯಿಸಲಾಗುವುದಿಲ್ಲ. ಆದರೆ ಮುಂದುವರೆದ ಜಾತಿಗಳಲ್ಲಿ ಹತ್ತು ನೂರು ರೂಗಳ ಬಾಂಡ್ ಪೇಪರ್‌ಗಳಲ್ಲಿ ಮಾಡಿಕೊಂಡ ಅಗ್ರಿಮೆಂಟ್ ಸಹಾ ಕೆಲಸಕ್ಕೆ ಬಾರದಾಗಿವೆ. ಇದಕ್ಕಾಗಿ ಕೋರ್ಟ್‌‌ಗಳಲ್ಲಿ ಬಹಳಷ್ಟು ಮೊಕದ್ದಮೆಗಳನ್ನು ನೋಡಬಹುದು. ಆದರೆ ಬುಡಕಟ್ಟು ಜನರು ಕೊಟ್ಟ ಮಾತಿಗಾಗಿ ಪ್ರಾಣವನ್ನಾದರೂ ಬಲಿಕೊಟ್ಟಾರೇ ವಿನಃ ಮಾತಿಗೆ ತಪ್ಪುವರಲ್ಲ. ಹೀಗಾಗಿ ಪ್ರಾಮಾಣಿಕತೆ ಹೆಚ್ಚು ಇದೆ. ಜೊತೆಗೆ ಹಂಚಿ ತಿನ್ನುವ ಮನಸ್ಥಿತಿಯುಳ್ಳವರಾಗಿದ್ದಾರೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ನನಗೆ ಬ್ರಿಟಿಷರ ಆಳ್ವಿಕೆಯು ಸ್ವತಂತ್ರ ಭಾರತಕ್ಕಿಂತಲೂ ಉತ್ತಮವಾಗಿತ್ತು ಎನಿಸಿತು. ಕಾರಣ ನಮ್ಮನ್ನು ಬ್ರಿಟಿಷರು ಕ್ರಿಮಿನಲ್ ಆಗಿ ಕಂಡರೂ ಸಹಾ ಅವರು ಶಿಕ್ಷೆಗಳು ಮೃದು ಸ್ವರೂಪವನ್ನು ಹೊಂದಿತ್ತು. ಸ್ವತಂತ್ರ ನಂತರ ಅನುಸೂಚಿತಗೊಂಡಿದ್ದ ಸಮುದಾಯಗಳನ್ನಾಗಿ ಸೂಚಿತವಲ್ಲದ ಸಮುದಾಯಗಳನ್ನು ಪರಿವರ್ತಿಸಲಾಯಿತು. ಜೊತೆಗೆ ಬಹಳಷ್ಟು ಕಠಿಣ ಕ್ರಮಗಳುಳ್ಳ ಶಿಕ್ಷೆಯನ್ನು ವಿಧಿಸಲಾಗುತ್ತಿದೆ. ಬಹಳಷ್ಟು ಅಲೆಮಾರಿ ಬುಡಕಟ್ಟುಗಳಿಗೆ ನಮ್ಮ ದೇಶದಲ್ಲಿ ಯಾವುದೇ ರಕ್ಷಣೆಯಾಗಲಿ, ಶಿಕ್ಷಣವಾಗಲಿ ದೊರೆಯುತ್ತಿಲ್ಲ. ಅಂದರೆ ಮುಖ್ಯವಾಹಿನಿಯಲ್ಲಿ ಬದುಕಲು ನಮ್ಮನ್ನು ಬಿಡುತ್ತಿಲ್ಲ.

ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಸಂಸ್ಕೃತಿ ಉತ್ತಮವಾಗಿದೆ. ಹೇಗೆ ಅಂದರೆ ಅವರ ಸಂಗೀತ, ಊಟ-ಉಪಚಾರ, ನಡೆ-ನುಡಿ, ಪ್ರತಿಯೊಂದು ವಿಚಾರ ಉತ್ತಮವಾಗಿದೆ. ಮಹಾರಾಷ್ಟ್ರದಲ್ಲಿರುವ ವಡ್ಡರು, ಕಪ್ಪು ವಡ್ಡರು ತುಂಬಾ ಬುದ್ಧಿವಂತರು, ಅವರು ಓಡುವಾಗಲೂ ಬುದ್ಧಿಯನ್ನು ಉಪಯೋಗಿಸುವರು, ಹಿಂದೆ ಬರುವ ಪೋಲೀಸರಿಗೆ ಬೀಳುವ ಹಾಗೆ ಓಡುತ್ತಾರೆ. ಹೀಗಾಗಿ ನಮ್ಮಲ್ಲಿ ಪೋಲೀಸರು ಹಿಂದೆ ಓಡುವುದಿಲ್ಲ. ಇಂತಹ ಒಳ್ಳೆ ಕೌಶಲ್ಯ ಹೊಂದಿದ ಜನರ ಕೈಯಲ್ಲಿ ಚೆಂಡು ಕೊಟ್ಟರೂ ಖಂಡಿತವಾಗಿಯೂ ಜನ ನಮ್ಮದೇ ಆಗುತ್ತದೆ. ಕ್ರಿಕೆಟ್‌ನಲ್ಲಿ ಹೋಗುತ್ತಿರುವ ನಮ್ಮ ದೇಶದ ಮರ್ಯಾದೆಯನ್ನು ಮತ್ತೆ ನಾವು ಪಡೆಯಬಹುದು. ಬಾಲ್‌ಗೊಂದು ವಿಕೆಟ್ ಪಡೆಯುವ ಮೂಲಕ ಪ್ರಪಂಚದಲ್ಲಿ ಇರುವ ಎಲ್ಲಾ ರೀತಿಯ ಪ್ರಶಸ್ತಿಗಳು ನಮಗೆಯೇ ದಕ್ಕುತ್ತವೆ. ನಾನು ಬೀದರ್‌ಗೆ ಬರುವಾಗ ತುಂಬಾ ದೊಡ್ಡ ಕ್ರಿಮಿನಲ್ ಒಬ್ಬ ಸಿಕ್ಕಿದ್ದ. ಮಹಾರಾಷ್ಟ್ರದ ಉಸ್ಮಾನ್‌ಬಾದ್ ಜಿಲ್ಲೆಯಲ್ಲಿ ೫ ಕೊಲೆಗಳನ್ನು ಮಾಡಿದ ಒಬ್ಬ ಅಪರಾಧಿಯನ್ನು ಜನರು ಕಲ್ಲಿನಿಂದ ಹೊಡೆಯುವ ಮೂಲಕ ಕೊಂದು ಹಾಕಿದರು. ಆ ಪ್ರದೇಶದ ಸರ್‌ಪಂಚ್ ಆದವರು ಅಪರಾಧಿಯನ್ನು ಶಿಕ್ಷಿಸಲು ಜನರಿಗೆ ಆಜ್ಞೆಯನ್ನು ನೀಡಿದ್ದರಿಂದ ಹೀಗಾಗಿ ಇಂಥಹ ಘಟನೆ ನಡೆಯಿತು. ಅದು ಮೇಲ್ಜಾತಿಯ ಜನರಿಂದಾದ ಸಂಚಾಗಿತ್ತು. ಹೇಗೆಂದರೆ ಸರ್ಕಾರದ ಮೀಸಲಾತಿ ನಿಯಮದ ಆಧಾರದ ಮೇಲೆ ಒಬ್ಬ ಕೆಳಜಾತಿಯ ವ್ಯಕ್ತಿಯೊಬ್ಬ ‘ಸರ್‌ಪಂಚ್’ ಆಗಿದ್ದರಿಂದಲೇ ಇಂತಹ ಆಜ್ಞೆ ಹೊರಡಿಸಿ, ಆ ಅಪರಾಧಿ ವ್ಯಕ್ತಿಯ ಮರಣ ನಂತರ ಕೊಲೆ ಆರೋಪದ ಮೇಲೆ ಅವನನ್ನು ಜೈಲಿಗೆ ಅಟ್ಟಲಾಯಿತು ಎಂಬುದನ್ನು ತಿಳಿದಾಗ ಮೇಲ್ವರ್ಗದ ಜನರ ಮಹಾತ್ವಾಕಾಂಕ್ಷೆಗಳಿಗೆ ನಮ್ಮನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಅರಿಯಬಹುದು.

ನಮ್ಮ ಸರ್ಕಾರವು ಸೂಚಿತವಲ್ಲದ ಜನ ಜಾತಿಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ನಮ್ಮವರಿಗೆ ಇಲ್ಲದ ಕಾನೂನಿನ ಅರಿವು, ಶಿಕ್ಷಣ, ಮತದಾನದ ಹಕ್ಕು, ರೇಷನ್ ಕಾರ್ಡ್ ಕೊಡಬೇಕು. ಒಂದು ನಿರ್ದಿಷ್ಟವಾದ ಊರಲ್ಲಿ ಅವರಿಗೆ ಸ್ವಂತ ಮನೆ, ಹೊಲ ಇಲ್ಲದಿರುವಾಗ ಸರ್ಕಾರ ಇಂತಹ ಅನುಸೂಚಿತವಲ್ಲದ ಜಾತಿಗಳನ್ನು ಸಂವಿಧಾನದಲ್ಲಿ ಸೇರಿಸುವ ಮೂಲಕ ಮೇಲಿನ ಸೌಲಭ್ಯಗಳು ಲಭಿಸಲು ಸಾಧ್ಯವಾಗುತ್ತದೆ.

ನಮ್ಮ ಸಂಸ್ಕೃತಿಯ ಹೆಸರಿನಲ್ಲಿ ಜನವರಿ ೨೬ ಹಾಗೂ ಆಗಸ್ಟ್ ೧೫ನೇ ದಿನಗಳಂದು ದೇಶದಲ್ಲಿರುವ ಲಂಬಾಣಿ ಜನರ ವೇಷ ಭೂಷಣಗಳನ್ನು ತೆಗೆದುಕೊಂಡು ಅದ್ಧೂರಿಯ ಮೆರವಣಿಗೆಯನ್ನು ತರಲಾಗುತ್ತದೆ. ಅದರಲ್ಲಿನ ನೃತ್ಯ, ಹಾವಭಾವಗಳನ್ನು ಕಂಡು ನನಗೆ ತುಂಬಾ ಕೋಪ ಬರುತ್ತದೆ. ಮಾಧುರಿ ದೀಕ್ಷಿತ್, ಐಶ್ವರ್ಯ ರೈಯವರು ಲಂಬಾಣಿ ಉಡುಪು ಧರಿಸಿದಾಗ ಬಹಳ ಚೆನ್ನಾಗಿದೆ, ಉತ್ತಮ ಸಂಸ್ಕೃತಿಯ ಹೆಗ್ಗಳಿಕೆ ಎಂಬ ಹೊಗಳಿಕೆ ಪ್ರತಿಯೊಬ್ಬರಿಂದ. ಆದರೆ ಅದೇ ನಮ್ಮ ಲಂಬಾಣಿ ಜನರನ್ನು ತುಚ್ಛವಾಗಿ ಕಾಣುತ್ತಾರೆ. ಇವರು ಉಡುಪು ಧರಿಸಿದಾಗ ದೇಶೀಯತೆ ಎಂದು ಕರೆದವರೂ ಮೂಗುಮುರಿಯುತ್ತಾರೆ, ರಾಷ್ಟ್ರೀಯ ಹಬ್ಬಗಳಲ್ಲಿ ಇವರನ್ನು ಕುಣಿಯಲು, ನೃತ್ಯ ಮಾಡಲು, ವಾಹನಗಳಲ್ಲಿ ಹೊತ್ತೊಯ್ಯುತ್ತಾರೆ. ಎಂತಹ ವಿಚಿತ್ರ! ವಡ್ಡರ ಜಾತಿಯೊಂದು ಎಂತಹ ಮಹತ್ವವನ್ನು ಪಡೆದುಕೊಂಡಿದೆ ಎಂದರೆ ನಮಗೆಲ್ಲಾ ಭೂಮಿಯೊಳಗಿನ ಕಲ್ಲನ್ನು ಅಗೆದು ಮನೆಗಳನ್ನು ಹಾಗೆಯೇ ಬೀಸುವ ಕಲ್ಲು, ಕುಟ್ಟುವ ಇತ್ಯಾದಿ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ. ನಮಗೆಲ್ಲಾ ದೇವರ ಕಲ್ಪನೆಯೇ ಇಲ್ಲದ ಸಂದರ್ಭದಲ್ಲಿ ಭಗವಾನ್ ಈಶ್ವರ ಮುಂತಾದ ದೇವರ ಕೃತಿಗಳನ್ನು ಸೃಷ್ಠಿಸಿ, ಗುಡಿ-ಗೋಪುರಗಳನ್ನು ಕಟ್ಟಿಕೊಟ್ಟ ಅವರಿಗೆ ಗುಡಿಯೊಳಗೆ ಪ್ರವೇಶವ್ನು ನಿರಾಕರಿಸಲಾಗುತ್ತಿದೆ. ಇಂತಹುದೆಲ್ಲಾ ಕಾರ್ಯಗಳನ್ನು ಕೈಗೊಂಡವರಿಗೆ ಗೌರವಿಸದೇ ನಮ್ಮ ದೇಶದಲ್ಲಿ ‘ಕರಿವಡ್ಡ’ ಇತ್ಯಾದಿ ಅವಾಚ್ಯ ಶಬ್ದಗಳಿಂದ ತೆಗಳಲಾಗುತ್ತದೆ. ಇಂತಹವರನ್ನು ಮನುಷ್ಯರೆಂದು ಪರಿಗಣಿಸಿ ಯಾರೂ ಅವರನ್ನು ಅಭಿವೃದ್ಧಿಗೊಳಿಸಲು ಮುಂದೆ ಬರುವುದಿಲ್ಲ. ನಿಮ್ಮಲ್ಲಿ ಒಂದು ವಿನಂತಿಯೆಂದರೆ ಅನ್ನವಿಲ್ಲದೆ ಅಲೆಯುತ್ತಿರುವ ಜನ ಸಮುದಾಯದವರು ಒಳ್ಳೆಯವರಾಗಿದ್ದಾರೆ. ನಮಗೆ ಕೆಟ್ಟವರೆಂದೇನು ಹೇಳಿಕೊಟ್ಟಿದ್ದಾರೆ ಅದೆಲ್ಲವೂ ಸುಳ್ಳು ಎಂಬುದನ್ನು ತಿಳಿಯಬೇಕು. ಇಲ್ಲಿರುವ ಎತ್ತು ಹಾಗೂ ಕತ್ತೆಯ ಚಿತ್ರಗಳನ್ನು ನೋಡಿದಾಗ ದುರುಗಮ್ಮ, ಮಾರೆಮ್ಮ, ಮುಂತಾದ ನಮ್ಮೆಲ್ಲರ ಹೆಸರುಗಳನ್ನು ಒಮ್ಮೆ ಪರಿಶೀಲಿಸಿದಾಗ ಹಿಂದೂ ಧರ್ಮದ ಅಸಮಾನತೆಗಳು ಹೇಗೆ ವ್ಯವಸ್ಥಿತವಾಗಿ ಹೆಣೆಯಲ್ಪಟ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಕೆಲವು ದೇವರನ್ನು ಉಗ್ರವಾಗಿ ಚಿತ್ರಿಸಲಾಗಿದೆ. ಆದರೆ ಲಕ್ಷ್ಮೀ, ಸರಸ್ವತಿ, ವಿಷ್ಣು ದೇವರ ಚಿತ್ರಗಳು ಯಾವಾಗಲೂ ಸುಂದರವಾಗಿರುವಂತೆ ಮಾಡಲಾಗಿದೆ. ಈ ಮೂಲಕ ಚರಿತ್ರೆಯನ್ನು ಕಟ್ಟಿ ನಾವೆಲ್ಲಾ ಹಿಂದುಗಳು ಒಂದು ಎಂದು ಹೇಳುತ್ತಿರುವುದು ಎಷ್ಟು ಹಾಸ್ಯಾಸ್ಪದವಲ್ಲವೆ? ಮುಂದುವರೆದ ಜನರೆಲ್ಲರ ದೇವರುಗಳು ಸುಂದರ ಹಾಗೆಯೇ ಹೆಸರುಗಳೂ ಇಂಪಾಗಿವೆ. ಆದರೆ ನಮ್ಮ ದೇವರು ಕ್ರೂರಿ, ಹೆಸರುಗಳು ವಿಚಿತ್ರ ಎಂದು ಜಾತಿಗಳೂ ಕೆಟ್ಟವು! ಹಾಗೆ ನೋಡಿದರೂ ನಾವೆಲ್ಲಾ ಒಂದೇ! ಹಿಂದೂಗಳೆಲ್ಲಾ ಅಣ್ಣ ತಮ್ಮಂದಿರೆಂದ ಹೇಳುತ್ತಿದ್ದಾರೆ. ಅಂದರೆ ಬಾಯಿ ಮಾತಿನಿಂದ ಹೇಳುವುದೊ, ಕಾಲಿನಿಂದ ಒದೆಯುವುದು ಇನ್ನೊಂದು! ಅದಕ್ಕೆ ನಾನು ಹೇಳುತ್ತೇನೆ, ಇನ್ನು ಮೇಲಾದರೂ ನಿಮ್ಮ ವರ್ತನೆಗಳನ್ನು ಸುಧಾರಿಸಿಕೊಳ್ಳಿ. ದೇಶದಲ್ಲಿರುವ ಲಂಬಾಣಿ, ವಡ್ಡರು, ಕಿಸಾಡಿ, ಕೈಕಾಡಿ, ಪಾರ್ದಿ, ಮುಂತಾದವರಿಗಾಗಿ ಹೊಸ ಕಾಯಿದೆಗಳನ್ನು ರೂಪಿಸಬೇಕಾಗಿದೆ. ಈ ದೇಶದ ಮಹಾತ್ಮಾ ಡಾ. ಬಾಬಾಸಾಹೇಬ್ ಅವರು ಹೇಳಿರುವಂತೆ, ಜನರಿಗೆ ಶಿಕ್ಷಣ, ಗೌರವ, ಸಮಾನತೆಯನ್ನು ಕೊಡಿ. ಈಗಾಗಲೇ ದೇಶದಾದ್ಯಂತ ತ್ರಿಶೂಲಗಳನ್ನು ಹಂಚಲಾಗುತ್ತಿದೆ. ಕೆಲವೊಬ್ಬರ ನಮ್ಮ ಸಹಾಚಾರಿ ಪ್ರಾಣಿಗಳನ್ನು-ಕತ್ತೆ, ಎತ್ತುಗಳನ್ನು ತುಚ್ಛವಾಗಿ ಕಾಣಲಾಗುತ್ತಿದೆ. ಬ್ರಾಹ್ಮಣರು ಹಸುಗಳನ್ನು ಪೋಷಿಸಿ, ರಕ್ಷಿಸಿ ಎಂದೂ ಹೇಳುತ್ತಾರೆ. ಆಕಳು ಗೋಮಾತೆ ಎಂದು ಹೇಳುತ್ತಾ ಹಸುಗಳನ್ನು ತಿನ್ನುವುದು, ಶಿಕ್ಷಿಸುವುದು ಘೋರ ಅಪರಾಧವೆಂದೂ ಸಾರುತ್ತಾರೆ. ಅದೇ ಹರಿಯಾಣದಲ್ಲಿ ಸತ್ತ ಹಸುವಿನ ಚರ್ಮವನ್ನು ಸುಲಿದಿದ್ದಕ್ಕೆ ನಾಲ್ಕು ಜನರನ್ನು ಜೀವಂತವಾಗಿ ಸುಡಲಾಯಿತು. ಆಕಳನ್ನು ತಾಯಿ ಎಂದು ಕರೆಯುವುದಾದರೆ, ನಂದಿಬೈಲ್ ಸಮುದಾಯದವರ ಎತ್ತು ದೇಶಕ್ಕೆಲ್ಲಾ ಏಕೆ ತಂದೆಯಾಗುತ್ತಿಲ್ಲ? ಇಂತಹ ವಿಷಯವನ್ನು ಹೇಳಿದಾಗ ಬಹಳಷ್ಟು ವಿರೋಧ ವ್ಯಕ್ತವಾಗುತ್ತದೆ. ಒಂದು ವೇಳೆ ತಂದೆ ಇಲ್ಲದಿದ್ದರೆ ತಾಯಿಯ ಸ್ಥಾನ ಎಲ್ಲಿ ಇರುತ್ತದೆ? ಹಾಗೆಯೇ ತಾಯಿಯೇ ಇಲ್ಲದಿದ್ದರೆ ತಂದೆ ಏಕೆ ಬೇಕು ಎಂಬುದನ್ನು ತಿಳಿಯದಷ್ಟು ಕುತಂತ್ರವನ್ನು ಹೆಣೆಯುತ್ತಾ ಒಬ್ಬರಿಗೊಬ್ಬರಿಗೆ ಜಗಳವನ್ನು ಹಚ್ಚಲಾಗುತ್ತಿದೆ. ನಾವೆಲ್ಲರೂ ಒಂದೇ ಆಗಿರಬೇಕು. ಹಿಂದು, ಮುಸ್ಲಿಂ, ಕ್ರೈಸ್ತ, ಬುಡಕಟ್ಟುಗಳು ಒಂದಾಗ ಬೇಕು. ಇವರೆಲ್ಲರೂ ನಮ್ಮ ದೇಶದವರೆ ಆಗಿದ್ದರಿಂದ ಇವರನ್ನೆಲ್ಲಾ ಪ್ರೀತಿಯಿಂದ ಕಾಣಬೇಕಾಗಿದೆ. ಬರುವ ದಿನಗಳಲ್ಲಿ ಆಹಾರವಿಲ್ಲದ, ಅನುಸೂಚಿತವಲ್ಲದ ಜಾತಿಗಳ ಜನರನ್ನು ಬೇರೆಯಾಗಿ ಪರಿಗಣಿಸದೇ ಅವರನ್ನೆಲ್ಲಾ ಒಂದಾಗಿ ಕಾಣುವ ಮನೋಸ್ಥೈರ್ಯವನ್ನು ರೂಢಿಸಿಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಶಾಂತಿಯಿಂದ ಜೀವಿಸಲು ಸಾಧ್ಯವಾಗಲಾರದು. ಏಕೆಂದರೆ ನಾವೆಲ್ಲರೂ ಅಪರಾಧಿಗಳು, ಕ್ರೂರಿಗಳೆಂದು ಬ್ರಿಟಿಷರೊಂದಿಗೆ ಹೋರಾಡಿದ್ದೇವೆ. ಆದರೂ ನಮ್ಮ ಪರಿಸ್ಥಿತಿಯು ಉತ್ತಮವಾಗದಿದ್ದಲ್ಲಿ ಹೇಗೆ ತಾನೇ ಪರಿಸ್ಥಿತಿ ತಿಳಿಗೊಳ್ಳಲು ಸಾಧ್ಯ? ನೀವೇ ಯೋಚಿಸಿ. ಇಂದು ಒಂದೊಂದು ನಾಯಿಯ ಬೆಲೆಯೂ ಒಂದೊಂದು ಲಕ್ಷ ರೂಪಾಯಿಯಷ್ಟಿದೆ, ಅವುಗಳ ಆಹಾರಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಹೀಗೆ ಕೆಲವು ವರ್ಗಗಳು ವಿಲಾಸೆ ಜೀವನದಲ್ಲಿ ತಲ್ಲಿನವಾಗಿ, ಬುಡಕಟ್ಟು ಸಮುದಾಯಗಳ ಬದುಕು ಸುಧಾರಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸದೇ ಹೋದಾಗ, ಹಸಿವಿನಿಂದ ಕಂಗೆಟ್ಟ ನಾವೆಲ್ಲಾ ಉಳ್ಳವರ ಮನೆಯನ್ನು ಹುಡುಕಿ ಹೊತ್ತೊಯ್ಯುವ ಕಾಲ ಬಂದಲ್ಲಿ ಆಶ್ಚರ್ಯಪಡಬೇಕಾಗಿಲ್ಲ. ಆದ್ದರಿಂದ ನೀವು ಬದುಕಿ, ಹಾಗೆಯೇ ಮತ್ತೊಬ್ಬರಿಗೂ ಬದುಕಲು ಅವಕಾಶ ಮಾಡಿಕೊಡಿ. ಬಸವಣ್ಣ, ವಿನೋಭಾವೆ ಮುಂತಾದ ಸಾಧು ಸಂತರಿಂದೊಡಗೂಡಿದ ಈ ನಾಡಿನಲ್ಲಿ ಮರಾಠಿ ಸಂತ ತುಕಾರಂ ಹೀಗೆ ಹೇಳುತ್ತಾರೆ: “ಕಿ ಜೋಕ, ರಂಜಲೇ, ಗಾಂಜಲೇ ತ್ಯಸೆ, ಮುನಿಚಾ ಪುಲೆ, ದೋಚಿ ಸಾದು ವಳ್ಳವ್, ಆನಿ ದೇವತೇತಿ ಚೀ ಜಾನ್‌ವಾ” ಸಮಾಜದಲ್ಲಿ ಯಾರು ಹಸಿವೆಯಿಂದ, ದುಃಖದಿಂದ ಇರುತ್ತಾರೋ ಅಂಥವರನ್ನು ನೀವು ಕರುಣೆ, ಗೌರವ, ಅಂತಃಕರುಣೆಯಿಂದ ಕಂಡಾಗ ಎಲ್ಲರೂ ಪ್ರೀತಿ ಸಂತೋಷದಿಂದ ಇರಲು ಸಾಧ್ಯವಾಗುತ್ತದೆಂದು ನಮ್ಮ ಸಾಧು-ಸಂತರು ಹರಿಸಿದ್ದಾರೆ. ನಮ್ಮ ಭೂಮಿಯು ಬಸವೇಶ್ವರರಂತಹ ಮಹಾನ್ ವ್ಯಕ್ತಿಗಳನ್ನು ಪಡೆದು ದ್ರಾವಿಡರೊಂದಿಗಿನ ಬೃಹತ್ ಸಂಸ್ಕರತಿಯೊಂದಿಗೆ ಸಮ್ಮಿಲನಗೊಂಡಿದೆ. ಆಂಧ್ರದವರು, ತಮಿಳುನಾಡಿನವರೆಂದು ಭೇದ ಭಾವ ಮಾಡದೇ, ಜಾತಿ ಹೆಸರಿನಲ್ಲಿ ರಾಮಮಂದಿರಗಳಂತಹ ದೇವಾಲಯಗಳನ್ನು ಕಟ್ಟದೇ ಎಲ್ಲರೂ ಒಂದೇ ಎಂಬ ಭಾವನೆಯುಳ್ಳ ದೇವಾಲಯಗಳನ್ನು ರೂಪಿಸುವಂತಾದರೆ ಹಸಿವೆಯಿಂದ ಊರೂರು ಅಲೆಯುವ ಸಮುದಾಯಗಳು ಇಲ್ಲವಾಗಲು ಸಾಧ್ಯವಾಗುತ್ತದೆ. ಏಕೆಂದರೆ ಇಂದು ಮಾನವರನ್ನು ಸಮಾನವಾಗಿ – ಮನುಷ್ಯರೆಂದು ಕಾಣುವುದು ಅತ್ಯಂತ ಅವಶ್ಯಕತೆ.

ಇನ್ನು ಸಾಹಿತ್ಯದ ಬಗ್ಗೆ ಹೇಳುವುದಾದರೆ ಬೇರೆಯವರ ದುಃಖದಲ್ಲಿ ಪಾಲ್ಗೊಳ್ಳುವ, ಅವರ ಹಿತವನ್ನು ಕಾಪಾಡಲು ಸಿದ್ಧವಿರುವರು ಮಾತ್ರ ಶ್ರೇಷ್ಠ ಸಾಹಿತಿಯೆನಿಸಿಕೊಳ್ಳುತ್ತಾರೆ. ನನಗೆ ಕೆಲವು ಸಾಹಿತಿ ಮಿತ್ರರಿದ್ದಾರೆ. ಅವರಲ್ಲಿ ಯು.ಆರ್. ಅನಂತಮೂರ್ತಿ, ಡಿ.ಆರ್.ನಾಗರಾಜ್, ಡಾ. ಸಿದ್ಧಲಿಂಗಯ್ಯ, ಡಾ. ಹಿ.ಚಿ. ಬೋರಲಿಂಗಯ್ಯ ಮುಂತಾದವರಿದ್ದಾರೆ. ನಾನು ದೇಶದಲ್ಲೆಲ್ಲಾ ಪಾಲ್ಗೊಳ್ಳುವ ಸಭೆ, ಸಮಾರಂಭಗಳಲ್ಲಿ ಹಂಪಿ ವಿಶ್ವವಿದ್ಯಾಲಯದ ಕಾರ್ಯಕ್ರಮಗಳ ಬಗೆಗೆ ಘಂಟಾ ಘೋಷವಾಗಿ ಹೇಳುತ್ತೇನೆ. ಇಲ್ಲಿ ಅನುಸೂಚಿತ ಜಾತಿಗಳ ಬಗ್ಗೆ ಸಂಶೋದನೆ, ಚರ್ಚೆ ನಡೆಯುವುದನ್ನು ತಿಳಿಸುತ್ತೇನೆ.

ನಿಜ ಹೇಳುವುದಾದರೆ ‘ಭಾಷೆ’ ಎಂಬುದು ತುಂಬಾ ಕಠಿಣ ಸನ್ನಿವೇಶಗಳಿಗೆ ಕಾರಣವಾಗುತ್ತದೆ. ಭಾಷೆಯ ಒಂದು ಸಂಪರ್ಕ ಸಾಧಿಸುವ ಪ್ರಮುಖ ಸಾಧನವಾಗಿದೆ. ನಾನು ಪದೇ, ಪದೇ ಈ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ, ಇಲ್ಲಿರುವ ಬುದ್ಧಿ ಜೀವಿಗಳೊಂದಿಗೆ ಚರ್ಚಿಸುವ ಅವಕಾಶಗಳು ಮತ್ತೆ ಮತ್ತೆ ಬಂದೊದಗಲೆಂಬ ಆಶಯದೊಂದಿಗೆ ಸರ್ವರಿಗೂ ನಮಸ್ಕಾರಗಳು.

ಜೈ ಹಿಂದ್
ಜೈ ಭಾರತ್

ಅನುವಾದ : ಷಮೀನಬಾನು.ಎಸ್.

* * *