ವೇದಿಕೆ ಮೇಲೆ ಇರುವ ಎಲ್ಲಾ ಗಣ್ಯ ವ್ಯಕ್ತಿಗಳೆ, ಇಲ್ಲಿಗೆ ಆಗಮಿಸಿರುವಂತಹ ಎಲ್ಲಾ ಮಹನೀಯರೆ, ಸಹೋದರ ಸಹೋದರಿಯರೆ, ಪತ್ರಕರ್ತರೇ, ಈಗಾಗಲೇ ಮಾನ್ಯ ಲಕ್ಕಪ್ಪಗೌಡರು ಮತ್ತು ಇತರರು ಈ ಸಮ್ಮೇಳನದ ಉದ್ದೇಶ, ನಾವು ಸಾಧಿಸಬೇಕಾದಂತಹ ಕೆಲಸಗಳು ಏನು ಅನ್ನುವುದರ ಬಗ್ಗೆ ವಿವರಣೆ ನೀಡಿದ್ದಾರೆ. ಕಳೆದ ಮೂರು ದಿನಗಳಿಂದ ಅನೇಕ ತರಹ ಚಿಂತನೆಗಳನ್ನು ಸನ್ಮಾನ್ಯ ಚಿಂತಕರು ಈ ಮಂಟಪದಲ್ಲಿ ತಾದಾತ್ಮಕವಾಗಿ ಸಲಹೆಗಳನ್ನು ಮಂಡಿಸಿದ್ದಾರೆ. ಒಬ್ಬ ನ್ಯಾಯಾಧೀಶನಾಗಿ ನನ್ನ ನ್ಯಾಯಾಲಯದ ಅನೇಕ ಮುಖಗಳಿಗೆ ಸ್ಪಂದಿಸುತ್ತ ಈ ಜನಗಳು ನಮ್ಮ ನ್ಯಾಯಾಲಯಗಳಲ್ಲಿ ಬರುವಂತಹ ಅನೇಕ ಕಟ್ಟಳೆಗಳಲ್ಲಿ ಯಾವ ರೀತಿ ನೋವನ್ನು ಅನುಭವಿಸುತ್ತಾರೆ ಅನ್ನುವುದಕ್ಕೆ ಕೆಲವು ಮಾತುಗಳನ್ನು ಹೇಳುವುದಕ್ಕೆ ಇಚ್ಛೆಪಡುತ್ತೇನೆ. ಈ ಬೀದರ ಜಿಲ್ಲೆಯಲ್ಲಿ ನಾನು ಜಿಲ್ಲೆಯ ನ್ಯಾಯಾಧೀಶನಾಗಿ ಕೇವಲ ಮೂರು ತಿಂಗಳಾಯ್ತು. ಈ ಮೂರು ತಿಂಗಳ ಅವಧಿಯಲ್ಲಿ ಈ ಜನಗಳ ಮೇಲೆ ಹೊರಿಸಿದಂತಹ ಅನೇಕ ತರವಾದಂತಹ ಅಪಾದನೆ ಕೇಸುಗಳು ನಮ್ಮಲ್ಲಿಗೆ ಬಂದಿವೆ. ಮೊದಲು ನಮಗೆ ಕಾಡುವುದೇನೆಂದರೆ ಇವರಿಗೆ ಯಾವುದೇ ಒಂದು ಪರ್ಮನೆಂಟ್ ಅಡ್ರಸ್ ಇಲ್ಲ. ಅಡ್ರಸ್ ಇಲ್ಲದೆ ಇರುವುದರಿಂದ ಯಾವುದಾದರೊಂದು ಕ್ರಿಮಿನಲ್ ಕೇಸ್‌ನಲ್ಲಿ ಇನ್ವಾಲ್ವ್ ಮಾಡಿಕೊಂಡು ಮುಂದೆ ತಂದರೆ ಬಹಳಷ್ಟು ಕೇಸ್‌ಗಳು ಇಂಡಿಯನ್ ಆಕ್ಟ್‌ನ ನಾರ್ಕೋಟಿಕ್ ಡ್ರಗ್ಸ್‌ಗೆ ಸಂಬಂಧಿಸಿದವು. ಗಾಂಜ ಇರಬಹುದು, ಚರಸ್ ಇರಬಹುದು. ಇಲ್ಲಿ ಸಾಕಷ್ಟು ಕಡೆ ಗಾಂಜ ಬೆಳೆಯುತ್ತಾರೆ. ಇಲ್ಲಿ ಅನೇಕ ತಾಂಡಗಳಿವೆ. ನಮ್ಮ ಪೊಲೀಸ್ ಮಹೋದಯರು ಇವರ ಮೇಲೆ ಅನೇಕ ತರವಾದಂತಹ ಅಂದರೆ ಅಕ್ರಮವಾಗಿ ಗಾಂಜವನ್ನು ಬೆಳೆದಿದ್ದಾರೆ, ಅಫೀಮ್‌ನ್ನು ಬೆಳೆಯುತ್ತಿದ್ದಾರೆ ಅಂತ ಹೇಳಿಬಿಟ್ಟು ನಮ್ಮ ಮುಂದೆ ಕೇಸ್ ಹಾಕುತ್ತಾರೆ. ಗಾಂಜ ಕೇಸುಗಳಿಗೆ ಮೊದಲೇ ಬೇಲ್ ಮತ್ತು ಜಾಮೀನು ಕೊಡಲಿಕ್ಕೆ ಬರುವುದಿಲ್ಲ. ಆದರೂ ಏನಾದರೂ ಒಂದು ಪ್ರಯತ್ನ ಮಾಡಿ ಅವನು ಬೆಳೆದಿರುವಂತಹ ಗಾಂಜ ಅಲ್ಪ ಪ್ರಮಾಣದಲ್ಲಿದೆ. ಆದ್ದರಿಂದ ಅವನಿಗೆ ‘ಹ್ಯೂಮಾನಿಟಿ’ ಆಧರದ ಮೇಲೆ ಏನಾದರೂ ಬೇಲ್ ಕೊಟ್ಟು ಕಳಿಸುವ ಅನ್ನುವುದಾದರೆ ಇವರಿಗೆ ಯಾವುದೇ ತರಹದ ‘ಪರ್ಮನೆಂಟ್ ಪ್ಲೇಸ್ ಆಫ್ ಎಬೋಡ್’ ಇಲ್ಲ ಎನ್ನುತ್ತಾರೆ. ಒಂದು ನಿರ್ದಿಷ್ಟವಾದ ಸ್ಥಳ ಇವರಿಗಿಲ್ಲ. ಠಕ್ಕ ಬಿಟ್ಟರೆ ಕೆಟ್ಟ ಅನ್ನುವ ಹಾಗೆ ಇವರನ್ನ ಬಿಟ್ಟರೆ ಮತ್ತೆ ಯಾವತ್ತು ಇವರನ್ನ ಹಿಡಿಯುವುದು? ಇವರಿಗೆ ಜಾಮೀನು ಕೊಡುವುದಕ್ಕೆ ಯಾರು ಬರುವುದಿಲ್ಲ. ಯಾವುದೇ ಒಂದು ಐಡೆಂಟಿಟಿ ಕಾರ್ಡ್‌ಇಲ್ಲ. ಇವರು ಇಂತಹವರು ಅನ್ನುವುದಕ್ಕೆ ಚುನಾವಣಾ ಗುರುತು ಪತ್ರ ಸಹ ಇಲ್ಲ. ಒಂದು ರೇಶನ್ ಕಾರ್ಡ್ ಇಲ್ಲ. ಈ ಮನುಷ್ಯ ಯಾರು ಅನ್ನುವುದಕ್ಕೆ ಯಾವುದೇ ಸರ್ಕಾರ ಮಾನ್ಯ ಮಾಡಿರುವಂತಹ ಆಧಾರಗಳು, ದಾಖಲೆಗಳು, ಇವರ ಬಳಿ ಇಲ್ಲ. ಒಬ್ಬ ನ್ಯಾಯಾಧೀಶನಾಗಿ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತಹ ನಾನು ಕರುಣೆಯೇ ಇಲ್ಲದಂತಹ ಈ ಕಾನೂನಿನಲ್ಲಿ ಇವರಿಗೆ ಯಾವ ರೀತಿಯಾಗಿ ಶಾಶ್ವತವಾದಂತಹ ಒಂದು ನ್ಯಾಯದಾನ ಮಾಡಬೇಕು ಅನ್ನುವುದರ ಬಗ್ಗೆ ಚಿಂತನೆ ಮಾಡಿದಾಗ ಮನಸ್ಸು ರೋಧಿಸುತ್ತದೆ. ಅನ್ನ ಬಟ್ಟೆ ಕೊಡಬಹುದು. ಆದರೆ ನ್ಯಾಯ ಒದಗಿಸಿಕೊಡುವುದು ಕಷ್ಟ. ನಮ್ಮ ಪೋಲೀಸ್‌ನವರು ತಮ್ಮ ಕರ್ತವ್ಯವನ್ನು ಮಾಡಿ ಕೇಸ್ ಹಾಕುವಾಗ ಇವರ ಬಗ್ಗೆ ಸ್ವಲ್ಪವಾದರೂ ಚಿಂತನೆ ಮಾಡಬೇಕು. ಇವರಿಗೋಸ್ಕರ ಯಾವುದೇ ಒಂದು ಕಾನೂ ಇಲ್ಲ. ಅನೇಕ SC. ST Attrocity Act ಕಾನೂನು ಇದೆ. ಇವತ್ತಿನ ದಿನ ಈ ಜನಗಳಲ್ಲಿ ಅನೇಕ ಮಂದಿ ST ಪಂಗಡಕ್ಕೆ ಬರುವಂತವರಿದ್ದಾರೆ. ಆದರೆ SC, ST Act ನಲ್ಲಿ ಬರುವಂತಹ ಲಾಭವನ್ನು ಇವರಿಗೆ ಗೊತ್ತುಪಡಿಸುವಂತಹ ಜನ ಎಲ್ಲಿದ್ದಾರೆ? ಅನೇಕ ಬಾರಿ ನನ್ನ ನ್ಯಾಯಾಲಯದಲ್ಲಿರುವಂತಹ ಅಂಕಿ-ಅಂಶಗಳನ್ನು ಅವಲೋಕಿಸಿ ನೋಡಿದಾಗ ವೇದ್ಯವಾಗುವಂತಹ ಒಂದು ದುಃಖದ ಸಂಗತಿ ಏನು ಅಂದರೆ ಈ ಆಕ್ಟ್‌ಏನಿದೆ, ದಿಸ್ ಈಜ್ ಮೋಸ್ಟ್ ಮಿಸ್‌ಯೂಸ್ಡ್ ಆಕ್ಟ್. ಇವತ್ತು ನಮ್ಮ ಸಮಾಜದ ಮುಂದಿನ ವರ್ಗದವರು ಅಂತ ಯಾರಿದ್ದಾರೆ, ಸಮಾಜದಲ್ಲಿ ಮುಂಚೂಣಿಯಲ್ಲಿ ಯಾರಿದ್ದಾರೆ ಅಂತವರ ಸಾಧನವಾಗಿದೆ ಈ ಕಾನೂನು. ಕೋರ್ಟಿಗೆ ಬರುವಂತಹ ಅನೇಕ ಜನಕ್ಕೆ ಅವರಿಗೆ ಇಷ್ಟೆಲ್ಲಾ ಸೌಲಭ್ಯಗಳಿಗೆ ಎಂದರೆ ಒಬ್ಬರಿಗೂ ಗೊತ್ತಿಲ್ಲ. ಈ ಕಾನೂನು ಮಾಡುವುದು ದೊಡ್ಡದಲ್ಲ, ಸೌಲಭ್ಯ ಕೊಡುವುದು ದೊಡ್ಡದಲ್ಲ, ಸರಕಾರ ಎಲ್ಲಾ ತರಹದ ಯೋಜನೆಗಳನ್ನು ಮಾಡುವುದು ದೊಡ್ಡದಲ್ಲ. ಮಾಡಿದ ಯೋಜನೆಗಳನ್ನು ಮುಟ್ಟಿಸುವಂತಹ ಜವಾಬ್ದಾರಿ ಸರಕಾರಕ್ಕೆ ಇರಬೇಕು. ಆದರೆ ಚುನಾಯಿತ ಪ್ರತಿನಿಧಿಗಳಾದಂತವರು, ಸರಕಾರದ ಕಾರ್ಯವನ್ನು ನಮ್ಮ ಮುಂಚೂಣಿಯಲ್ಲಿಟ್ಟುಕೊಂಡಿರುವಂತಹ ಅಧಿಕಾರಶಾಹಿ ವರ್ಗದವರು, ಅನೇಕ ಸಂಘಸಂಸ್ಥೆಗಳು ಈ ಬಗ್ಗೆ ತಮ್ಮದೇ ಆದಂತಹ ಗಮನವನ್ನು ಹರಿಸಿ ಈ ಜನಗಳಿಗೆ ಅದನ್ನು ಮುಟ್ಟಿಸಬೇಕಾಗುತ್ತದೆ.

ಇತ್ತೀಚೆಗೆ ನಮ್ಮ ನ್ಯಾಯಾಲಯಗಳಲ್ಲಿ ನಾವು ಕಾನೂನಿನ ಅರಿವು ಮತ್ತು ನೆರಳಿನ ಶಿಬಿರವನ್ನು ಮಾಡ್ತಾ ಇದ್ದೇವೆ. ಹಳ್ಳಿ ಹಳ್ಳಿಗೆ ಹೋಗಿ ಕಾನೂನಿನ ವಿಚಾರಗಳನ್ನು ಹಳ್ಳಿ ಜನಕ್ಕೆ ಹೇಳುತ್ತೇವೆ. ಒಂದಾನೊಂದು ಕಾಲದಲ್ಲಿ ನ್ಯಾಯಾಧೀಶರು ಎಲ್ಲಿಯೂ ಹೊರಗೆ ಬರುತ್ತಿರಲಿಲ್ಲ. ಇವತ್ತು ಆ ಸಂದರ್ಭ ಹೋಗಿದೆ. ನಾವಿನ್ನೂ ದಂತ ಗೋಪುರದಲ್ಲಿ ಕುಳಿತುಕೊಳ್ಳುವಂತಿಲ್ಲ. ಸಮಾಜದ ಎಲ್ಲಾ ವರ್ಗದವರ ಜೊತೆಗೆ ನೆಮ್ಮದಿಯಾದಂತಹ ಸಹ ಚಿಂತನೆಯನ್ನು ಸ್ಪಂದಿಸುವಂತಹ ವ್ಯಕ್ತಿಗಳು ನಾವಾಗಿದ್ದೇವೆ. ನಮಗೆ ಆ ಭುಜಬಲ ಪರಾಕ್ರಮವನ್ನು ನಮ್ಮ ವಕೀಲ ಮಿತ್ರರು ಕೊಡುತ್ತಾರೆ. ಅನೇಕ ಸಂಘ ಸಂಸ್ಥೆಗಳು ಕೊಡುತ್ತಿವೆ. ವಾರ್ತೆ ಮತ್ತು ಸಂಸ್ಕೃತಿ ಇಲಾಖೆಯವರು ಎಲ್ಲಾ ಕಡೆ ಸಹಾಯ ಮಾಡುತ್ತಿದ್ದಾರೆ. ಏಕೆಂದರೆ ಒಂದೇ ಕೈಯಿಂದ ಚಪ್ಪಾಳೆ ತಟ್ಟುವುದಕ್ಕೆ ಆಗುವುದಿಲ್ಲ. ಚಿಟಿಕೆ ಮಾತ್ರ ಹಾರಿಸಬಹುದು. ಚಿಟಿಕೆಯ ಶಬ್ದ ಚಪ್ಪಾಳೆಯ ಶಬ್ದಕ್ಕೆ ಸರಿಸಾಟಿ ಆಗಲಾರದು. ಆದ್ದರಿಂದ ಎಲ್ಲಾ ಕಡೆಗೂ ಈ ವಿಚಾರವನ್ನು ನಾವು ಹೇಳಿದ್ದೇವೆ. ಈ ನಮ್ಮಜನಾಂಗದವರು ಯಾರಿದ್ದಾರೆ, ಯಾರ್ಯಾರು ಈ ಜನಾಂಗದವರು ಅಂತ ಈ ಎರಡು ದಿವಸಗಳಲ್ಲಿ ಚಿಂತನೆಯಾಗಿದೆ. ಇವರಿಗೆ ಯಾವುದೇ ಆದಂತಹ ವಿಶಿಷ್ಟವಾದಂತಹ ಕಾನೂನನ್ನು ಮಾಡಲಿಕ್ಕೆ ಆಗುತ್ತದೆಯೇ, ಇರುವ ಕಾನೂನುಗಳನ್ನು ಅವರ ಸಬಲೀಕರಣಕ್ಕೋಸ್ಕರ ಉಪಯೋಗಿಸುವುದಕ್ಕೆ ಆಗುತ್ತಿದೆಯೇ ಎಂಬುದನ್ನು ಯೋಚಿಸಬೇಕು. ಏಕೆಂದರೆ ಒಂದು ಕಾನೂನು ಮಾಡುವುದಾದರೆ ಕೇವಲ ಒಂದು ಟೂ ಪರ್ಸೆಂಟ್ ಪೀಪಲ್‌ಗೆ ತ್ರೀ ಪರ್ಸೆಂಟ್‌ಆಫ್‌ದಿ ಎಂಟೈರ್ ಪೊಪ್ಯುಲೇಶನ್‌ಗೂ ಮಾಡುವುದಕ್ಕೆ ಆಗುವುದಿಲ್ಲ. ಇವತ್ತು ಹರಿಜನ ಗಿರಿಜನರ ಮೇಲೆ ದಬ್ಬಾಳಿಕೆ ಆಗುತ್ತಿದೆ ಅಂತ ಕೇಸುಗಳ ವೈಪರಿತ್ಯವನ್ನು ಕಂಡು ಸರಕಾರ ಅವರಿಗೋಸ್ಕರ ಒಂದು ಕಾನೂನನ್ನು ಮಾಡಿದೆ. ಯಾವುದೇ ಒಂದು ಯೋಜನೆಯನ್ನು ಮಾಡಬೇಕಾದರೆ ಒನ್ ಹ್ಯಾಸ್ ಟು ಗ್ಯಾದರ್ ಲೇಟರ್ ಸ್ಕ್ಯಾಟಿಸ್ಟಿಕ್ಸ್. ಜನ ಸೋತು ಹೋಗಿದ್ದಾರೆ. ನಿಮ್ಮ ಈ ವಿದೇದಿಯ ಭಾಷಣ ನಮಗೆ ಬೇಡ ನಮ್ಮ ಹೆಸರಿನಲ್ಲಿ ನೀವು ದುಡ್ಡು ಮಾಡಿಕೊಳ್ಳುತ್ತೀರಾ ನಮ್ಮನ್ನು ಮತ್ತೆ ಅದೇ ಸ್ಥಾನದಲ್ಲಿ ಇಟ್ಟು ನೀವು ಮಾತ್ರ ಮುಂದೆ ಬರುತ್ತೀರಾ ಎಂದು ಈ ಬಗ್ಗೆ ಒಂದು ನಿರುತ್ಸಾಹವನ್ನು ತಾಳಿದ್ದಾರೆ. ತಪ್ಪೇನಿಲ್ಲ.

ಇಲ್ಲಿ ಬಂದಿರುವಂತಹ ಅನೇಕ ಜನ, ಬಹುಶಃ ೯೦%, ಎಲ್ಲರೂ ಹೊಟ್ಟೆಬಟ್ಟೆಗೆ ಇದ್ದವರು, ಸಾಕಷ್ಟು ಇತಿಮಿತಿ ಇದ್ದವರು, ಪರ್ಮನೆಂಟ್ ಅಡ್ರಸ್ ಇಟ್ಟುಕೊಂಡವರು, ಯಾರೂ ನ್ಯಾಯಾಲಯಕ್ಕೆ ಬಾರದೇ ಇದ್ದವರು, ತಮ್ಮದೆ ಆದಂತಹ ಹಿತಚಿಂತನೆಗಳನ್ನು ರಕ್ಷಣೆ ಮಾಡಿಕೊಳ್ಳುವಂತಹ ಸ್ವಬುದ್ಧಿ ಇರುವರು. ಜನಗಳಿಗೆ ಇಂತಹ ಕಡೆ ಇಂತಹ ಜಾಗದಲ್ಲಿ ಇಂತಹ ಒಂದು ಕೆಲಸ ನಡೆಯುತ್ತದೆ ಅನ್ನುವ ತಿಳಿವಳಿಕೆ ಬಂದರೆ ಸಾಕಷ್ಟು ಜನ ಬರ್ತಾರೆ. ನಮ್ಮಲ್ಲಿ ಅನೇಕ ಜನ ಸೀನಿಯರ್ ಸಿಟಿಜೆನ್ಸ್ ಇದ್ದಾರೆ. ಆ ಸೀನಿಯರ್ ಸಿಟಿಜೆನ್ಸ್‌ಗಳಿಗೆ ಗೊತ್ತಿಲ್ಲ ತಮಗೆ ರೈಲ್ವೆನಲ್ಲಿ, ಬಸ್ಸಿನಲ್ಲಿ ಅರ್ಧ ಫೇರ್ ಬರುತ್ತೇ ಅಂತ. ಅನೇಕ ವಿಧವಾ ಪಿಂಚನಿದಾರರು ಇದ್ದಾರೆ. ಅವರಿಗೆ ಎಷ್ಟು ಪಿಂಚಣಿ ಕೊಡುತ್ತಾರೆ. ಗೊತ್ತಿಲ್ಲ. ಇಲ್ಲಿ ಏನಾಗಿದೆ ಅಂದರೆ ಸ್ವಾತಂತ್ರ ಹೋರಾಟಗಾರರು ಅಂತ ಒಂದು ಪಿಂಚಣಿ ಕೊಡುತ್ತಾರೆ ಎಂದು. ನೀವೇನಾದರೂ ಡಾಕ್ಯುಮೆಂಟ್ಸ್ ತೆಗೆದು ನೋಡಿದರೆ ಅದರಲ್ಲಿ ಪಿಂಚಣಿ ತಗೊಳ್ಳುತ್ತಿರುವಂತಹ ಅನೇಕ ಪಿಂಚಣಿದಾರರು ೧೯೪೭ ನೇ ಇಸ್ವಿಯ ನಂತರ ಹುಟ್ಟಿದವರೇ! ಯಾರ್ಯಾರು ರಿಟೈರ್ಡ್ ಆಗಿದ್ದಾರೆ ಅವರು ಪೆನ್‌ಶನ್ ತೆಗೆದುಕೊಳ್ಳುತ್ತಾರೆ, ಅದನ್ನು ತೆಗೆದುಕೊಳ್ಳಬೇಕಾದರೆ ಒಂದು ಸರ್ಟಿಫಿಕೆಟ್ ಕೊಡಬೇಕು – ನಾನು ಇನ್ನೂ ಸತ್ತಿಲ್ಲ ಬದುಕಿದೀನಿ ಅಂತ! ಅವನೇ ಹೋದರೂ ಅಲ್ಲಿ ಸರ್ಟಿಫಿಕೆಟ್ ಬೇಕು. ಯಾಕಿದು? ಅನೇಕ ಕಡೆ ಕಾನೂನು ಮಾಡುವಾಗ ಇಂತಹ ಅವ್ಯವಹಾರಗಳು ನಡಿದಿದ್ದಾವೆ ಅನ್ನುವುದಕ್ಕೋಸ್ಕರ ಕಾನೂನುಗಳನ್ನು ಮಾಡಿದ್ದಾರೆ. ಆದರೆ ಇವತ್ತು ಇಂತಹ ಕಾನೂನುಗಳನ್ನು ಮುರಿಯುವ ಜನವೇ ಜಾಸ್ತಿ ಹುಟ್ಟಿದ್ದಾರೆ. ನಾನು ಮೊನ್ನೆ ಜೈಲಿಗೆ ಹೋಗಿದ್ದೆ. ಪ್ರತಿ ಎರಡು ತಿಂಗಳಿಗೊಮ್ಮೆ ನಾವು ಜೈಲಿಗೆ ಭೇಟಿ ಕೊಡುತ್ತೇವೆ. ಅಲ್ಲಿ ಏನೆಲ್ಲಾ ಸೌಕರ್ಯಗಳು ಇದ್ದಾವೆ? ಯಾರಿಗೂ ಗೊತ್ತಿಲ್ಲ. ಗೊತ್ತಿದ್ದರೂ ಕೇಳುವ ಹಾಗಿಲ್ಲ! ಕೇಳಿದರೂ ಕೊಡುವುದಿಲ್ಲ. ಜೈಲಿನಲ್ಲಿರುವ ಅನೇಕ ಜನಗಳಿಗೆ ಇನ್ನೂ ಎಷ್ಟೋ ವಿಚಾರಗಳನ್ನು ತಿಳಿಸಬೇಕು. ನಾವು ಅಲ್ಲಿಗೆ ಹೋಗಿ ಬರುತ್ತೇವೆ. ಅವರಿಗೆ ಒಂದು ಮಾತನ್ನು ನಾನು ಹೇಳಿದೆ : ಹಣೆಯ ಮೇಲೆ ಪಟ್ಟಿಯನ್ನು ಹಚ್ಚಿಕೊಂಡಿರುವಂತಹ ನತದೃಷ್ಟ ಕೈದಿಗಳು ನೀವು, ಹಣೆಯ ಮೇಲೆ ಆರೋಪಿ ಅನ್ನುವ ಪಟ್ಟಿಯನ್ನು ಹಚ್ಚಿಕೊಂಡಿರುವ ದುರ್ದೈವಿಗಳು ನೀವು. ನಿಮಗಿಂತ ಅನೇಕ ಕ್ರಿಮಿನಲ್ಸ್‌ಗಳು ಜೈಲು ಹೊರಗಿದ್ದಾರೆ. ಆದರೆ ಕಾನೂನಿನ ಕೈ ಇದೆಯಲ್ಲ ಅದು ಉದ್ದವಾಗಿದೆ, ಲಂಬವಾಗಿದೆ. ರವಿ ಕಾಣದ್ದನ್ನು ಕವಿಕಂಡ ಅನ್ನುವ ಹಾಗೆ ನಾವು ನೀವು ಕಾಣದೆ ಇದ್ದುದನ್ನು ಕಾನೂನು ಕಾಣುತ್ತದೆ. ತುಂಬಿದ ಕೊಡ ತುಳುಕುವುದಿಲ್ಲ ಅಂದುಕೊಳ್ಳಬೇಡಿ. ನಿಮ್ಮ ಪಾಪ ಯಾವಾಗ ತುಂಬುತ್ತೊ ಆವಾಗ ಎಲ್ಲಾ ಬರುತ್ತೆ! ಏನೋ ಮಾಡಬಾರದ ಕೆಲಸ ಮಾಡಿದ್ದಾರೆ, ಎಲ್ಲೆಲ್ಲಿ ಮನೆ ಹಾಳು ಮಾಡಬಹುದು, ಅಲ್ಲೆಲ್ಲಾ ಮಾಡಿದ್ದಾರೆ. ಆದರೂ ಅವರು ಜೀವನದಲ್ಲಿ ಚೆನ್ನಾಗಿ ಇದ್ದಾರೆ. ಅವರು ಅಷ್ಟೆ ಅಲ್ಲ, ಹೆಂಡತಿ ಮಕ್ಕಳು ಚೆನ್ನಾಗಿದ್ದಾರೆ. ಯಾಕೆ ಸ್ವಾಮಿ? ಇದಕ್ಕೆ ಅನ್ನುವುದು ಪೂರ್ವಜನ್ಮದ ಕರ್ಮ ಅಂತ! ಬಹುಶಃ ಅವರು ಪೂರ್ವ ಜನ್ಮದಲ್ಲಿ ಪುಣ್ಯ ಜಾಸ್ತಿ ಮಾಡಿದ್ದಾರೆ ಅಂತ ಕಾಣಿಸುತ್ತೆ. ಈ ಜನ್ಮದ ಅಲ್ಪ ವ್ಯವಹಾರಕ್ಕೆ ಆ ಪೂರ್ವ ಜನ್ಮದ ಪುಣ್ಯ ಕಾಪಾಡುತ್ತದೆ. ಇನ್ನೂ ಒಂದೇ ಸಲ ಕಳವು ಮಾಡಿ ಸಿಕ್ಕನಲ್ಲ ಇವನಿಗೆ ಹಿಂದೆ ಒಂದು ಪೈಸೆ ಪುಣ್ಯ ಇಲ್ಲ. ಅದಕ್ಕೆ ಸಿಕ್ಕಿಬಿದ್ದ. ಅದಕ್ಕೆ ಕೃಷ್ಣ ಹೇಳಿದ. ನೀನು ನೂರೊಂದು ತಪ್ಪು ಎಂದು ಮಾಡಿ ಮುಗಿಸುತ್ತಿಯೋ ಅಂದೇ ನಿನಗೆ ಶಿರಚ್ಛೇದನ. ಹಾಗೆ ಇವರೆಲ್ಲ ಏನೋ ತಪ್ಪು ಮಾಡಿ ಉಳಿದಿದ್ದಾರೆ ನೋಡಿ. ಇವರೆಲ್ಲ ಶಿಶುಪಾಲನ ಸಂಬಂಧಿಕರು! ಇನ್ನೂ ಒಂದು ತಪ್ಪು ಮಾಡದೆ ಜೀವನದಲ್ಲಿ ಕಷ್ಟ ಅನುಭವಿಸುತ್ತಾರಲ್ಲ ಅವರು ಇವನ ಶಿಷ್ಯರಲ್ಲ, ಆ ಕೃಷ್ಣನ ಬಾಲ್ಯ ಸ್ನೇಹಿತನಾದಂತಹ ಕುಚೇಲನ ಸಂಬಂಧಿಕರು! ಕುಚೇಲ ಬೇರೆ ಕುಬೇರ ಬೇರೆ. ಒಂದೇ ಅಕ್ಷರದಲ್ಲಿ ಎಷ್ಟು ವಿಪರ್ಯಾಸ. ಆದ್ದರಿಂದ ಕುಚೇಲನಿಗೆ ಸಿಕ್ಕಂತಹ ಆ ಒಂದು ಆತ್ಮಾನಂದ, ಆ ಒಂದು ದೇವರ ಸೌಖ್ಯ ಏನಿದೆ ಅದು ಸಿಗಬೇಕಾದರೆ ಜೀವನದಲ್ಲಿ ನಂಬಿಕೆ ಹಿಡಿದುಕೊಳ್ಳಬೇಕಾಗುತ್ತದೆ. “ನಂಬಿದನು ಪ್ರಹ್ಲಾದ ನಂಬದಿದ್ದನು ತಂದೆ. ನಂಬಿಯೂ ನಂಬದಿರುವ ಇಬ್ಬಂದಿ ನೀನು ಕಂಬದೊನು ಬಿಂದೇನು ಮೋಕ್ಷ ಅವರಿಂದಾಯ್ತು. ಹಿರಣ್ಯನ ಸಿಂಬೊಳದ ನೊಣ ನೀನು ಮಂಕುತಿಮ್ಮ.” ಆ ಪ್ರಹ್ಲಾದ ಹರಿಯನ್ನ ನಂಬಿದ್ದ, ಹಿರಣ್ಯಕಶಿಪು ಅವನನ್ನು ನಂಬಲಿಲ್ಲ. ಇವನಿಗೆಷ್ಟು ಅಚಲವಾದ ನಂಬಿಕೆಯೋ ಅವನ ಅಸ್ತಿತ್ವದಲ್ಲಿ ಅಷ್ಟೇ ಅಚಲವಾದ ಅಪನಂಬಿಕೆ ಅವನ ಇರುವಿಕೆಯಲ್ಲಿ. ಎಂತಹ ಅಪ್ಪನಿಗೆ ಎಂತಹ ಮಗ! ನಂಬದಿದ್ದನು ತಂದೆ, ನಂಬಿದ್ದನು ಪ್ರಹ್ಲಾದ. ಅವರಿಬ್ಬರು ಜೀವನದಲ್ಲಿ ನಂಬಿದರು! ಒಬ್ಬರು ಇದೆ ಅಂತ ನಂಬಿದರು. ಇನ್ನೊಬ್ಬರು ಇಲ್ಲ ಅಂತ ನಂಬಿದರು. ನಂಬಿಯು ನಂಬದಿರುವ ಇಬ್ಬಂದಿ ನೀನು. ಇಲ್ಲಿ ಯಾರೊ ಒಬ್ಬ ಸ್ವಾಮಿಗಳು ಇದ್ದಾರೆ. ಒಂದು ಹೂ ಕೂಡಿ ಅಂದ್ರೆ ಚೂ ಅಂತ ಮಂತ್ರ ಹೇಳಿ ಬಂಗಾರದ ಉಂಗುರ ಕೊಡುತ್ತಾರೆ. ಅವ್ರು ಉಂಗುರ ಮಾಡಿದ್ದು ನೋಡುತ್ತೇವೆ. ಕಣ್ಣಿಗೆ ಕಾಣುತ್ತದೆ. ಆದರೂ ಏನ್ರಿ ಅಂದರೆ ‘ಏನ್ ನನ್ಮಗ ಮಾಡಿದ ಕಣ್ರಿ, ಏನ್ ಮಾಡಿದ ಗೊತ್ತಿಲ್ಲ’ ಅನ್ನುತ್ತೇವೆ. ನಮ್ಮೆದುರಿಗೆ ತೋರಿಸುತ್ತಾರೆ. ಒಂದು ಸಲ ಅಲ್ಲ. ಎರಡು ಸಲ ತೋರಿಸುತ್ತಾರೆ. ಹಿಂಗಂದ್ ಹಿಂಗ್ ಕೊಡುತ್ತಾರೆ. ನಾವು ಹಾಕಿಕೊಳ್ಳುತ್ತೇವೆ. ನೋಡುತ್ತೇವೆ. ಅವರ ಬಗ್ಗೆ ನಮ್ಮದೇ ಆದಂತಹ ಒಂದು ಪ್ರೀತಿಯನ್ನು ಒಲವನ್ನ ಭಕ್ತಿಯನ್ನು ತೋರಿಸುತ್ತೇವೆ. ಆದರೂ ಅಂತರಾಳದಲ್ಲಿ ಏನಿದು ಅಂತ ಗೊತ್ತಾಗುವುದಿಲ್ಲ. ಅದರಲ್ಲಿ ಯಾರೂ ಒಬ್ಬ ಹೇಳ್ತಾನೆ – ಇವತ್ತಿನ ದಿನದಲ್ಲಿ ಸಮಾಜದಾಗ ಬಾರಿ ಜನ ಹುಟ್ಟಿಕೊಂಡಾರ ಕಣಯ್ಯ. ಎಲ್ಲೆಲ್ಲಿಂದಲೋ ಏನೇನೂ ತರುತ್ತಾರಂತೆ. ಇದೆಲ್ಲ ಏನು ದೊಡ್ಡು. So ಇಂಥವರು ಒಂದು ಇಪ್ಪತ್ತು ಜನ ಆದರೆ ಯಾರನ್ನು ನಂಬುವುದು? ಹಾಗಾಗಿ ಯಾರಾದರೂ ಒಬ್ಬ ವ್ಯಕ್ತಿ ಒಳ್ಳೆಯವರು ಅಂದ ತಕ್ಷಣ ನಾವು ನಂಬುತ್ತೇವೆ. ಇನ್ನೊಂದು ನಾಲ್ಕು ಜನ ಕೆಟ್ಟವರು ಕಣಯ್ಯ ಅಂದ ತಕ್ಷಣ ಅವನ ಬಗ್ಗೆ ಅಪನಂಬಿಕೆ ಪಡುತ್ತೇವೆ. ಅದಕ್ಕೋಸ್ಕರ ಹೇಳುತ್ತೇನೆ – ನಂಬಿಯು ನಂಬಿದಿರುವ ಇಬ್ಬಂದಿ ನೀನು. ಇತ್ತ ನಂಬುವುದಕ್ಕೆ ಆಗುವುದಿಲ್ಲ. ನಂಬದೆ ಇರುವುದಕ್ಕೆ ಆಗುವುದಿಲ್ಲ. ಅದಕ್ಕೆ ನಂಬಿದವರಿಗೆ ಏನಾಯ್ತು. ನಂಬದೆ ಇದ್ದವರಿಗೆ ಏನಾಯ್ತು. ಕಂಬದೂನು ಬಿಂಬದೊನು ಮೋಕ್ಷ ಅವರಿಗಾಯ್ತು. ಆ ಹಿರಣ್ಯಕಶಿಪನಿಗೆ ಕಂಬದಿಂದ ಇದೇ ವಿಷ್ಣು ನರಸಿಂಹ ಅವತಾರವನ್ನು ತಾಳಿ ಅವನ ಹೊಟ್ಟೆಯನ್ನು ಬಗೆದು ಕರುಳನ್ನು ತೆಗೆದು ರಕ್ತವನ್ನು ಕುಡಿದು ಸಂಹಾರ ಮಾಡಿದ. ನಂಬದೆ ಇದ್ದುದಕ್ಕೆ ಅವನಿಗೆ ಮೋಕ್ಷ ಸಿಕ್ಕಿತು! ಇವನು ನಂಬಿದ್ದನಲ್ಲ, ಪ್ರಹ್ಲಾದ ಇವನಿಗೆ ಕಂಬದಿನು ಬಿಂಬದಿನು ಮೋಕ್ಷ ಅವರಿಗಾಯ್ತು. ಇವನಿಗೂ ಮೋಕ್ಷವಾಯ್ತು. ಆ ರೂಪವನ್ನು ನಾನು ನೋಡಲಾರೆ ಪ್ರಭು ನನಗೆ ಹೆದರಿಕೆಯಾಗುತ್ತದೆ ಅಂತ ಪ್ರಹ್ಲಾದ ಹೇಳಿದಾಗ ಅವನಿಗೆ ಕರುಣೆಯನ್ನು ತೋರಿಸಿ ನಿಜ ಸ್ವರೂಪವನ್ನು ತೋರಿಸುತ್ತಾನೆ. ನಮಗೆ ಕಂಬದೊನು ಬಿಂಬದೂನು ವೇಷ ಅವರಿಗಾಯಿತು. ನಮ್ಮ ಹಣೆಬರ ಕೇಳೀ- ಸಿಂಬಳದಿನೊಣ ನೀನು ಮಂಕುತಿಮ್ಮ. ಸಿಂಬಳಕ್ಕೆ ಅದು ಒಂದು ನೂಣ ಅದು ಬಿಟ್ಟರೆ ಸಾಯುವುದೂ ಇಲ್ಲ, ಮೇಲೂ ಬರುವುದಿಲ್ಲ, ಈ ತರಹದ ಜೀವನ ನಮ್ಮದು. ಲಕ್ಕಪ್ಪಗೌಡರು ಹೇಳಿದರು ಇವರ್ನ ತ್ರಿಶಂಕು ಅನ್ನುವುದಾ ಎಂದು. ಇವರನ್ನು ಯಾವ ಜಾತಿಗೆ ಸೇರಿಸೋದು? ಹಕ್ಕಿಪಿಕ್ಕಿ ಜನಾಂಗದವರೆಷ್ಟೇ ಅಲ್ಲ, ನಾವೂ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿಕೊಂಡು ಬಿಟ್ಟಿದ್ದೇವೆ. ನಾವೂ ಅತಂತ್ರು, ನಾವೂ ಇಬ್ಬಗೆಯ ನೀತಿಯಲ್ಲಿ ನಿಂತುಕೊಂಡಿರುವಂತವರು. ಇವತ್ತು ಸಮಾಜ ಯಾಕೆ ಅದೋಗತಿಗೆ ಹೋಗುತ್ತಾ ಇದೆ ಅನ್ನುವುದರ ಕಾರಣ ಹುಡುಕಬೇಕು. ಸಮಾಜದಲ್ಲಿ ಒಂದು ಮಟ್ಟಕ್ಕೆ ನಾವು ಬಂದಿದ್ದೇವೆ ಸರಿ. ನಮಗೆ ಈ ಜೀವನ ಬೇಡ, ಕಸದಲ್ಲಿ ನಿಂತಿರುವ ನಾಲ್ಕು ಜನ ಯಾರೂ ಸರಿಯಿಲ್ಲ ಅಂತ ಓಟು ಹಾಕದೇ ಇರುವ ಜನರೇ ಜಾಸ್ತಿಯಾಗಿದ್ದಾರೆ. ಶೇ.೪೦ ಓಟಾಯಿತು. ಅಂತ ಮೊನ್ನೆ ಒಬರು ಹೇಳಿದರು. ಅದಕ್ಕೆ ಇನ್ನೊಬ್ಬರು ಕಾಮೆಂಟ್ ಮಾಡಿದರು – ಯಾಕೆ ಹೀಗಾಗಿದೆ ಅಂದರೆ ಹಕ್ಕಿಪಿಕ್ಕಿ ಜನಾಂಗದವರಿಗೆ ಓಟು ಎಲ್ಲಿದೆ ಅಂತ. ಸಮಾಜದಲ್ಲಿ ತನ್ನದೇ ಆದಂತಹ ಪಾಪ್ಯುಲೇಶನ್ ಕ್ರಿಯೇಟ್ ಮಾಡಿಕೊಂಡಿರುವಂತಹ ಈ ಜನ ಓಟು ಹೇಗೆ ಹಾಕಬೇಕು? ಅವರಿಗೆ ಓಟರ್‌ರ್ಸ್‌ಲಿಸ್ಟ್‌ನಲ್ಲಿ ಎಲ್ಲಿದೆ ಮಾನ್ಯತೆ? ಸಿವಿಕ್ ರೈಟ್ಸ್‌ನ್ನು ಎಲ್ಲಿ ಕೊಡಲಾಗಿದೆ? ಸಮಾಜದಲ್ಲಿ ಇಂತಹ ನೂರಾರು ಜನಗಳ ಕೂಗನ್ನು, ಆರ್ತನಾದವನ್ನು ಅರ್ಥಮಾಡಿಕೊಳ್ಳಲು ಇರುವಂತಹ ಸ್ಥಿತಿಗೆ ನಾವು ಬಂದಿದ್ದೇವೆ.

ಇವತ್ತು ಓಟು ಹಾಕುವ ಜನವೇ ಕಮ್ಮಿ. ಅದರಲ್ಲಿ ಸರಿಯಾಗಿ ಓಟು ಆಗುವುದು ಇನ್ನೂ ಕಮ್ಮಿ. ಆ ಕಮ್ಮಿ ಮೆಜಾರಿಟಿಯಲ್ಲಿ ಇವರು ಮೆಜಾರಿಟಿ ಅಂದುಕೊಂಡು ಬಾಳಿದರೆ ಮೆಜಾರಿಟಿ ಜನ ಓಟು ಮಾಡದೆ ಕೂತಿದ್ದಾರಲ್ಲ ಅವರನ್ನು ಆಳುವ ಜನ ಯಾರು? ಹಾಗಾದರೆ ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗಿದೆ. ಅದಕ್ಕೋಸ್ಕರ ಇಂತಹ ಜನಾಂಗಗಳ ಬಗ್ಗೆ ಚಿಂತನೆ ಮಾಡುವಾಗ ಅವರಿಗೆ ಯಾವ ತರಹದ ಒಂದು ರಿಯಲೈಟೇಶನ್‌ನನ್ನು ಕೊಡಬೇಕಾಗುತ್ತದೆ. ಹಾಗಾದರೆ ಅವರನ್ನು ಹೇಗೆ ಮುಖ್ಯವಾಹಿನಿಗೆ ತರಬಹುದು? ಮುಖ್ಯವಾಹಿನಿ ಎಂಬುದು ಒಂದಿಲ್ಲ, ಅನೇಕ ವಾಹಿನಿಗಳಿವೆ. ಯಾವುದಾದರೊಂದು ವಾಹಿನಿ ತೆಗೆದುಕೊಂಡು ಬನ್ನಿ. ಎಲ್ಲಾ ನದಿಗಳು ಒಂದು ಗುರಿಯ ಸಾಗರವನ್ನು ಮುಟ್ಟುತ್ತವೆ. ಯಾವುದಾದರೊಂದು ನದಿಯನ್ನಾಗಿ ಮಾಡಿ, ಅವರು ಸಾಗರಕ್ಕೆ ಬರುತ್ತಾರೆ. ಅವರನ್ನು ನದಿಗೂ ತರುವುದಿಲ್ಲ, ಕೆರೆಗೂ ತರುವುದಿಲ್ಲ, ಹಳ್ಳಕ್ಕೂ ತರುವುದಿಲ್ಲ, ಗುಂಡಿಯೊಳಕ್ಕೆ ತುರುಕುವುದೇ ಆಗಿದೆಯಲ್ಲ ಜೀವನ?!

ಬಂಧುಗಳೇ ನಿಮಗೆ ಅನಿಸಬಹುದು, ಒಬ್ಬ ನ್ಯಾಯಾಧೀಶನಾಗಿ ರಾಜಕಾರಣಿಗಿಂತ ಹೆಚ್ಚು ಮಾತನಾಡುತ್ತಾರಲ್ಲ ಅಂತ. ಸಮಾಜದ ವಿವಿಧ ಅಂಗವನ್ನು ಹತ್ತಿರದಿಂದ ನೋಡಿದ್ದಕ್ಕೆ, ಕಳೆದ ಇಪ್ಪತ್ತು ವರ್ಷದಿಂದ ಒಬ್ಬ ಸಮಾಜ ಸೇವಕನಾಗಿ ನ್ಯಾಯದಾನದ ರೀತಿಯಲ್ಲಿ ನಮ್ಮದೇಯಾದಂತಹ ಸತ್‌ಪಾತ್ರವನ್ನು ಮಾಡುತ್ತಿದ್ದುದಕ್ಕೆ ಆ ಸಮಾಜದಲ್ಲೆ ಇರುವಂತಹ ನೊಂದ ಬೆಂದವರ ಆಕ್ರಂದನವನ್ನು ಪ್ರತಿದಿನ ಕೇಳಿ ಅದರ ಬಗ್ಗೆ ನಮ್ಮದೆಯಾದ ವ್ಯಾಖ್ಯಾನ ಮಾಡುವುದಕ್ಕೋ ಏನೋ? ಇದನ್ನೇನು ನನ್ನ ಜ್ಞಾನ ಅನ್ನಲೋ ಅಥವಾ ನನ್ನ ಪೂರ್ವಜನ್ಮದ ಸೌಭಾಗ್ಯ ಅನ್ನಲೋ ಅಥವಾ ಈ ಸಮಾಜದ ಎಲ್ಲಾ ಒಳ ಅರಿವನ್ನು ಅರ್ಥಮಾಡಿಕೊಳ್ಳುವಂತ ದೀನ ಸ್ಥಿತಿಗೆ ಬಂದಿದ್ದೇನೆ ಅಂತ ತಿಳಿದುಕೊಳ್ಳಲೋ ಅದರ ವಿಶ್ಲೇಷಣೆ ನಿಮಗೆ ಬಿಟ್ಟಿದ್ದು. ಆದರೆ ಸತ್ಯ ಮಾತ್ರ ಇಷ್ಟೇ – ಸಮಾಜದಲ್ಲಿ ಅಳುವ ಕಣ್ಣುಗಳು ಜಾಸ್ತಿ ಇದಾವೆ, ತೇವಗೊಂಡ ಕಣ್ಣುಗಳು ಜಾಸ್ತಿ ಇದಾವೆ, ರಿಕ್ತ ಹಸ್ತುಗಳು ಜಾಸ್ತಿ ಇದಾವೆ. ಬರಿಗೈ ಇದೆ ಕೆಲಸವಿಲ್ಲ. ಮೈಮನಸುಗಳಿಗೆ ಮುದ ಕೊಡುವಂತ ಯಾವುದೇ ಸಂಗತಿ ಸಮಾಜದಲ್ಲಿ ಬರುತ್ತಾ ಇಲ್ಲ. ಎಲ್ಲರೂ ತಮ್ಮ ಆ ಒಂದು ನೋಟವನ್ನು ಶೂನ್ಯ ಆಕಾಶದತ್ತ ನೆಡುವಂತಹ ಸ್ಥಿತಿಗೆ ಬಂದಿದ್ದಾರೆ. ಇವತ್ತಿನ ದಿವಸ ಎಲ್ಲಾ ಕಡೆ ಮಾತನಾಡುತ್ತಾರೆ – ರೈತರೇ, ನಾವು ಇದ್ದೇವೆ. ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು. ಆದರೆ ಏನು ಮಾಡಿಕೊಳ್ಳಬಾರ್ದು. ಅವರು ಏನು ಇದ್ದಾರೆ? ಇವತ್ತೆಲ್ಲ ರೈತರಿಗೆ ಗಲಾಟೆ ಮಾಡುವುದಕ್ಕೆ ಅವಕಾಶ ಕೊಟ್ಟು ಇವರು ನಮ್ಮನ್ನೇ ಆತ್ಮಹತ್ಯೆ ಮಾಡುವ ಸ್ಥಿತಿಗೆ ತಂದರಲ್ಲ ಅಂತ ಬೆಂಗಳೂರಿನಲ್ಲಿ ರಾಜಕೀಯ ವ್ಯಕ್ತಿಗಳು ಬಡಿದುಕೊಳ್ಳುತ್ತಾರೆ. ಪಾಪ ಅವರೆದೇನು ತಪ್ಪು! ಅದು ಅವರ ವ್ಯವಹಾರ?! ಇವತ್ತು ಇಷ್ಟು ಜನರಲ್ಲಿ ಯಾರಲ್ಲ ಅಂತ ಹೇಳಿ ನೋಡೋಣ! ನನ್ನಿಂದ ಹಿಡಿದು ಸಂಬಳದಲ್ಲಿ ಸ್ವಲ್ಪವಾದರೂ ದುಡ್ಡನ್ನು ಇಟ್ಟಿರುತ್ತಾರೆ. ಎಲ್ಲರೂ ಪರ್ಸೆಂಟಿಗೆ ಕೊಡುವವರೇ. ಏನೋ ದೇವರು ನಮಗೆ ಬುದ್ಧಿ ಕೊಟ್ಟಿದ್ದಾನೆ. ಪರ್ಸೆಂಟ್ ಕಮ್ಮಿ ಆದರೂ ಪರವಾಗಿಲ್ಲ. ಒಂದು ಇಂದಿರಾ ವಿಕಾಸ ಪತ್ರನೋ, N.S. ನೋ ICSC ಬಾಂಡ್ ತಗೊಂಡು ಇಟ್ಟುಕೊಳ್ಳುವ ಬುದ್ಧಿ ನಮಗೆ ಇದ್ದರೆ ಯಾರೋ ಒಂದು ನಾಲ್ಕು ಪರ್ಸೆಂಟೇಜ್ ಜಾಸ್ತಿ ಕೊಡುತ್ತಾನೆ ಅಂತ ಗಂಡನಿಗೆ ಹೆಂಡ್ತಿ ಹೇಳ್ದೆ ಹೆಂಡ್ತಿಗೆ ಗಂಡ ಹೇಳ್ದೇ ಇಬ್ಬರೂ ಹಂಚಿಕೊಂಡು ಕೊಡಬಾರ್ದ ಕಷ್ಟ ಕೊಡೋ ಜನ ಸಮಾಜದಲ್ಲಿ ಎಷ್ಟೋ ಇದ್ದಾರೆ. ಇಂತವರು ಆಳುಗಳ ತೋಳುಗಳನ್ನು ತಮ್ಮದೇ ಬಂಡವಾಳ ಮಾಡಿಕೊಂಡು ದುಡಿಸಿಕೊಳ್ಳುತ್ತಾರೆ. ಯಾಕ್ರೀ ಬೈ ಬೇಕು? ಪಾಪ! ಅವರ ಜೀವನ! ಅದು ಸಮಾಜದಲ್ಲಿ ಒಬ್ಬರ್ನ ಒಬ್ಬರು ಈ ತರ ಎಕ್ಸ್‌ಪ್ಲಾಯಿ ಮಾಡಿಕೊಂಡೇ ಇರೋದು. ಒಬ್ಬರ ಅಜ್ಞಾನ ಇನ್ನೊಬ್ಬರ ಜ್ಞಾನ. ಯಾರಿಗೆ ಒಂದು ಪ್ರಮಾಣದಲ್ಲಿ ಒಂದಿಷ್ಟು ಜ್ಞಾನ ಜಾಸ್ತಿ ಇದೆ, ಅವರು ಅದನ್ನು ಉಪಯೋಗಿಸಿಕೊಂಡು ಇನ್ನೊಬ್ಬರ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.

ಒಬ್ಬರ ಜ್ಞಾನ ಅಥವಾ ಅಜ್ಞಾನ ಇನ್ನೊಬ್ಬ ಬಂಡವಾಳ. ಆದರೆ ಏನೂ ಅರಿಯದ ಈ ಮುಗ್ಧ ಕಂದಮ್ಮಗಳಿದ್ದಾರಲ್ಲ ಇವರ ಬಗ್ಗೆ ಸ್ವಲ್ಪವಾದರೂ ಚಿಂತನೆ ಮಾಡಬೇಕು. ಸಮಾಜದ್ಲಿ ನಾವು ಏನು ದುಡಿಯುತ್ತೇವೆ, ಸಮಾಜದಲ್ಲಿ ನಮ್ಮದೇಯಾದಂತಹ ಸಭಲತೆ ಏನಿದೆ ಅದರಲ್ಲಿ ಸ್ವಲ್ಪವಾದರೂ ಇವರಿಗೋಸ್ಕರ ಕಾಣಿಕೆ ರೂಪದಲ್ಲಿ ಹಾಕೋಣ. ಎಲ್ಲವನ್ನು ಸರಕಾರದಿಂದ ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ.

ಸಮಾಜದಲ್ಲಿ ವಿಧ ವಿಧವಾದ ಹಂತದಲ್ಲಿ ಕೆಲಸ ಮಾಡುವಂತಹ ನಮ್ಮಂತಹ ಜನಗಳಿಗೆ ಏನಾಗಿದೆ ಅಂದ್ರೆ ಅವರು ಏನೇ ಕೊಟ್ಟರೂ ಅದಕ್ಕೊಂದು ಪ್ರಚಾರಬೇಕಾಗಿದೆ. ಈ ಪ್ರಚಾರ ಇಲ್ಲದೆ ಯಾರೂ ಕೊಡುವುದಿಲ್ಲ. ಕರ್ಣ ಹೇಳಿದನಂತೆ – ಎಡಗೈಯಿಂದ ಬಲಗೈಗೆ ಬರುವ ವೇಳೆಗೆ ಮನಸು ಏನಾಗುತ್ತದೆಯೋ ಗೊತ್ತಿಲ್ಲ, ಅದಕ್ಕಾಗಿ ಎಡಗೈಯಿಂದ ದಾನ ಮಾಡುವುದು ಒಳ್ಳೆಯದು ಅಂದನಂತೆ. ಇದು ದಾನದ ಒಂದು ರೂಪ. ನಮ್ಮ ಜನ ಹಾಗಲ್ಲ, ಗುಡಿಗೆ ಒಂದು ಫ್ಯಾನ್ ಕೊಡುತ್ತಾ ಅದಕ್ಕೆ ನಾಲ್ಕು ರೆಕ್ಕೆಗಳಿದ್ದರೆ ಒಂದೊಂದು ರೆಕ್ಕೆಗೂ ಇವನದು, ಹೆಂಡ್ತಿಯದು ಅಪ್ಪನದು ಮಕ್ಕಳದು ಹೆಸರು ಬರೆಯಿಸಿ ಕೊಡುತ್ತಾರೆ. ಆ ರೆಕ್ಕೆ ತಿರುಗುತ್ತಿದ್ದಾಗ ಇವರ ಮನೆಯ ಜನವೇ ತಿರುಗುತ್ತಿರಬೇಕು. ಇನ್ನು ಗಡಿಯಾರ ಕೊಡುತ್ತಾರೆ. ಅದರ ಮುಳ್ಳೇ ಕಾಣುವುದಿಲ್ಲ. ಇವರ ಸಂಸಾರದ ಹೆಸರು ಹಾಕಿಸಿ ಬಿಡುತ್ತಾರೆ; ಆಂಡ್ ಸನ್ಸ್‌ಅಂತ. ಗಡಿಯಾರ ನೋಡುವವನು ಸಣ್ಣ ಮುಳ್ಳು ಎಲ್ಲಿ, ದೊಡ್ಡ ಮುಳ್ಳು ಎಲ್ಲಿ ಎಂದು ತಿಣುಕಾಡಬೇಕಾಗುತ್ತದೆ. ಇವರೇನು ದಾನ ಹೆಸರಿಗೆ ಕೊಡುತ್ತಾರೋ, ದಾನ ಅಂತ ಕೊಡುತ್ತಾರೋ ನಾ ಕಾಣೆ. ಎಲ್ಲರಿಗೂ ಈ ಮನ್ನಣೆ ದಾಹ ಬೇಕಾಗಿದೆ. ಈ ಮನ್ನಣೆ ದಾಹಕ್ಕೋಸ್ಕರ ಇವತ್ತಿನ ಸಮಾಜ ಹಾಳಾಗುತ್ತಿದೆ. ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ. ಮನ್ನಣೆದಾಹ ಎಲ್ಲಕ್ಕಿಂತ ತೀಕ್ಷ್ಣತಮ ತಿನ್ನುವುದಾತ್ಮವನೆ ಮಂಕುತಿಮ್ಮ. ಮೊದಲು ಹಕ್ಕಿಪಿಕ್ಕಿ ಜನಾಂಗದವರನ್ನೇ ಹೋಗಿ ಕೇಳಿ ಏನು ಬೇಕಾಗಿದೆ ನಿಮಗೆ ಏನು ಬೇಕು ಅಂದ್ರೆ ಅನ್ನ ಬೇಕು ಅಂತಾರೆ. ಹೊಟ್ಟೆಗೆ ಹಿಟ್ಟಿಲ್ಲ ಸ್ವಾಮಿ ನಾವು ಏನು ಮಾಡೋಣ ಅಂತಾರೆ. ಒಂದು ಸಲ ಅವರ ಹೊಟ್ಟೆಗೆ ಎರಡೊಪ್ಪತ್ತು ಊಟಕ್ಕೆ ಸರಿ ಮಾಡಿ ನೋಡೋಣ.

ಈ ಮನ್ನಣೆ ದಾಹ ನೋಡಿ, ನಾನು ಪ್ರಸಿಡೆಂಟ್ ನನಗೆ ಗೌರವ ಕೊಡಬೇಕು. ನಾನು ಮಿನಿಷ್ಟ್ರು ನನಗೆ ಗೌರವ ಕೊಡಬೇಕು. ನಾನು ಜಡ್ಜ್ ನನಗೆ ಗೌರವ ಕೊಡಬೇಕು. ಸಮಾಜದಲ್ಲಿ ನನ್ನ ಹೆಸರು ಮುಂಚೂಣಿ ಸ್ಥಾನದಲ್ಲಿ ಇರಬೇಕು, ಎಲ್ಲರೂ ನನ್ನ ಮಾತು ಕೇಳಬೇಕು, ನನಗೆ ಗಣ್ಯತನದ ಆಹ್ವಾನ ಬರಬೇಕು ಅನ್ನುವುದು ಇದೆಯಲ್ಲ, ಸಮಾಜದಲ್ಲಿ ನನ್ನನ್ನು ನೋಡಬೇಡ ಅನ್ನುವುದು ಇದೆಯಲ್ಲ ಇದಕ್ಕೇ ಅನ್ನುತ್ತಾರೆ ಮನ್ನಣೆ ದಾಹ ಅಂತ. ಪಾಪ ಈ ಜನಗಳಿಗೆ ಮನ್ನಣೆ ದಾಹ ಇಲ್ಲ. ಇದಕ್ಕೋಕರವಾದರೂ ಬೆಳೆಸಿಕೊಳ್ಳ ಬೇಕಾಗುತ್ತದೆ. ಮನ್ನಣೆ ದಾಹಿ ಎಲ್ಲಕ್ಕಿಂತ ತೀಕ್ಷ್ಣತಮ ತಿನ್ನುವುದಾತ್ಮವನೆ ಮಂಕುತಿಮ್ಮ. ಸ್ವಲ್ಪ ಆತ್ಮದ ಚಿಂತನೆಯನ್ನು ಮಾಡಿದರೆ ಇದು ಗೊತ್ತಾಗುತ್ತದೆ. ಅದಕ್ಕೋಸ್ಕರ ಬಂಧುಗಳೇ, ನಿಮ್ಮಲ್ಲಿ ನಾನು ಕಳಕಳಿಯಿಂದ ಕೇಳಿಕೊಳ್ಳುವುದು ಇಷ್ಟು ಮಾತ್ರ ಯಾವ ಒಂದು ಸಂಕುಚಿತವಾದ, ಯಾರಿಗೂ ಕಾಣದೆ ಹೋದ, ಭೂಗರ್ಭದಲ್ಲಿ ಅಡಗಿ ಹೋದ ಈ ಕುಟುಂಬಗಳಿವೆ, ಅದರ ಬಗ್ಗೆ ನಾವು ಇವತ್ತು ಚಿಂತನೆ ಮಾಡಿದ್ದೇವೆ. ಅವರ ಬಗ್ಗೆ ಸ್ವಲ್ಪ ನಾವು ಲಹರಿಯನ್ನು ಹರಿಸೋಣ. ಅವರ ಬಗ್ಗೆ ನಮ್ಮದೇ ಆದಂತಹ ಕಾಣಿಕೆಯನ್ನು ಕೊಡೋಣ. ಇಲ್ಲಿ ಏನು ನಿರ್ಣಯಗಳನ್ನು ಕೊಟ್ಟಿದ್ದಾರೆ, ಆ ನಿರ್ಣಯದಲ್ಲಿ ಒಂದು ನಿರ್ಣಯ ಒಂದು ಕಾನೂನನ್ನು ಕೂಡ ಮಾಡಬೇಕು ಅಂತ ಇದೆ. ಕಾನೂನಿನ ಚೌಕಟ್ಟಿನ ನಿರ್ಣಯವನ್ನು ಸಾಫಲ್ಯಗೊಳಿಸಬೇಕಾದರೆ ಈ ಜನಗಳು ಎಷ್ಟಿದ್ದಾರೆ. ಅಂತ ಸಂಖ್ಯೆ ಬೇಕಾಗುತ್ತದೆ. ಏಕೆಂದರೆ ಆ ಸಂಖ್ಯೆಯ ಆಧಾರದ ಮೇಲೆ ಆ ಆಂದೋಲನದ ಕೂಗಿನಲ್ಲಿ ಬಲ ಎಷ್ಟಿದೆ ಅಂತ ಗೊತ್ತಾಗುತ್ತದೆ. ಆದ್ದರಿಂದ ನಮ್ಮ ಈ ಎಲ್ಲಾ ನಿರ್ಣಯಗಳು ಅವರಿಗೆ ಮುಟ್ಟಲಿ. ಅವರಿಗೆ ತಮ್ಮ ಜೀವನದ ಬಗ್ಗೆ ಕಳಕಳಿಯಿಂದ ಚಿಂತನೆ ಮಾಡುವಂತಹ ಕೈಗಳು, ಮನಸ್ಸುಗಳು ಇವೆ ಅನ್ನುವ ಈ ನಮ್ಮ ಕೂಗು ಕೇಳಿಸಲಿ ಅದರಿಂದ ಹುದುಗಿ ಹೋದಂತಹ, ಅಡಗಿ ಹೋದಂತಹ ಅವರ ಆತ್ಮೋದ್ಧಾರದ ದೀಪವನ್ನು ಸ್ವಲ್ಪವಾದರೂ ಹಚ್ಚಿಕೊಳ್ಳಲಿ. ಆ ಬಗ್ಗೆ ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನ ಆಗಲಿ ಅಂತ ಹೇಳುತ್ತ ನಿಮ್ಮ ಜೊತೆಗೆ ನನ್ನದು ಒಂದು ಕೈ ಇದೆ, ಎಲ್ಲರ ಕೈಗಳು ಸೇರಿದರೆ, ನಮ್ಮ ಬಾಹು ಬಂಧನವಾದರೆ ಯಾರನ್ನಾದರೂ ಎತ್ತಬಹುದು ಅಂತ ಹೇಳುತ್ತಾ, ಈ ಒಂದು ಸಮಾರಂಭಕ್ಕೆ ನನ್ನ ಕರೆದು ನಾಲ್ಕು ಮಾತನ್ನು ನಿಮ್ಮ ಜೊತೆಗೆ ಚಿಂತನೆ ಮಾಡುವುದಕ್ಕೆ ಅವಕಾಶಕೊಟ್ಟಂತಹ ಎಲ್ಲಾ ಮಹೋದಯ ಬಂಧುಗಳಿಗೆ ನಮಸ್ಕರಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಲಿಪ್ಯಂತರ : ಚಂದ್ರಪ್ಪ ಸೊಬಟಿ

* * *