ಇಂದಿನ ದೇಸಿ ಸಮ್ಮೇಳನ ಉದ್ಘಾಟನೆಯನ್ನು ನಾನು ಅತೀ ಸಂತೋಷದಿಂದ ಮಾಡಿರುತ್ತೇನೆ. ಇಂದಿನ ಅಧ್ಯಕ್ಷ ಸ್ಥಾನ ವಹಿಸಿರುವ ಡಾ. ಎಚ್.ಜೆ. ಲಕ್ಕಪ್ಪಗೌಡರೇ, ಸರ್ವಾಧ್ಯಕ್ಷರಾದ ಬಿ.ಎ. ವಿವೇಕ ರೈಯವರೇ, ಇಂದಿನ ಶ್ರೀ ಚನ್ನಬಸಪ್ಪ ಹಾಲಹಳ್ಳಿಯವರೆ, ಶಾಸಕರಾದ ರಮೇಶ್ ಪಾಂಡೆಯವರೇ, ಮುಖ್ಯ ಅತಿಥಿಯಾಗಿ ಆಗಮಿಸಿರುವ ಮಾಜಿ ಮಂತ್ರಿಗಳಾದ ಶ್ರೀ ಗುರುಪಾದ ನಾಗಮಾರಪಳ್ಳಿಯವರೇ, ಗಂಗಾಂಬಿಕೆಯವರೇ, ಜಗನ್ನಾಥ ಹೆಬ್ಬಾಳೆಯವರೇ, ವೇದಿಕೆಯ ಮೇಲಿನ ಎಲ್ಲ ಗಣ್ಯರೇ. ನಮ್ಮ ದೇಶ ಯಾವುದರಲ್ಲಿ ಪ್ರಸಿದ್ಧಿಯನ್ನು ಹೊಂದಿದೆ? ಆರ್ಥಿಕವಾಗಿ ಶ್ರೇಷ್ಠವಾಗಿದೆಯೇ? ಅಥವಾ ಶೈಕ್ಷಣಿವಾಗಿ ಶ್ರೇಷ್ಠವಾಗಿದೆಯೇ? ಇಲ್ಲ! ಆದರೆ ಸಂಸ್ಕೃತಿಯಲ್ಲಿ ನಮ್ಮ ದೇಶ ಪ್ರಪಂಚದಲ್ಲಿಯೇ ಉಚ್ಛ ಸ್ಥಾನದಲ್ಲಿದೆ. ಇದು ಭಾರತೀಯರಿಗೆ ಅತ್ಯಂತ ಅಭಿಮಾನದ ಸಂಗತಿ. ನಮ್ಮ ಹಿಂದೂ ಭಾರತೀಯ ಸಂಸ್ಕೃತಿ, ಪರಂಪರೆ ವಿದೇಶಿ ಸಂಸ್ಕೃತಿಯ ಪ್ರಾಬ್ಯದಿಂದ ಕಡಿಮೆಯಾಗುತ್ತಾ ಬಂದಿದೆ. ಆದರೆ ಹಳ್ಳಿಗಳಲ್ಲಿ ಮಾತ್ರ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ – ಮಹಿಳೆಯರು ಆ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಈಗಿನ ಭಾರತದ ಸ್ಥಿತಿಗತಿಯನ್ನು ನೋಡಿದರೆ ಒಬ್ಬ ಲೇಖಕರ ಮಾತು ನೆನಪಿಗೆ ಬರುತ್ತದೆ. A Man has learnt to fly like a bird in the sky – he has also learnt to swim like a fish in water, but he had not learnt to live like man on earth. ಬರುಬರುತ್ತಾ ಮನುಷ್ಯ ಎಲ್ಲವನ್ನೂ ಕಲಿತಿದ್ದಾನೆ. ಆದರೆ ಮನುಷ್ಯನಾಗಿ ಬಾಳುವುದನ್ನು ಕಲಿತಿಲ್ಲ. ಮನುಷ್ಯ ಇಂದು ಮನುಷ್ಯ ಸಂಬಂಧಗಳನ್ನು ಕಳೆದು ಕೊಳ್ಳುತ್ತಿದ್ದಾನೆ. ಅದನ್ನು ಮೀರಿ ಪರರಲ್ಲಿ ಪ್ರೀತಿ ವಿಶ್ವಾಸವನ್ನು ಮರಳಿಸಲು ಈ ಸಮ್ಮೇಳನವನ್ನು ಲಕ್ಕಪ್ಪಗೌಡರು ನಡೆಸಿಕೊಟ್ಟಿದ್ದರಿಂದ ಅವರಿಗೆ ಅಭಿನಂದನೆಗಳು. ಬೀದರ್ ಅನೇಕ ಭಾಷೆ, ಧರ್ಮ, ಜಾತಿಗಳ ಸಮನ್ವಯತೆಯ ತವರೂರು. ಜನಪದ ಸಂಸ್ಕೃತಿಯೂ ಇಲ್ಲಿ ಸಮೃದ್ಧವಾಗಿದೆ. ಗಡಿ ಪ್ರದೇಶ ಆಗಿರುವುದರಿಂದ ಹಲವಾರು ಭಾಷೆಗಳಿವೆ. ನಾನು ಕನ್ನಡ ಮಾತಾಡಿದರೂ ಅದು ಶುದ್ಧವಾದ ಕನ್ನಡ ಅಲ್ಲ. ಯಾಕೆಂದರೆ ನಾನು ಕನ್ನಡ ಓದಿದವಳೂ ಅಲ್ಲ. ಆದರೆ ಬೀದರಿನ ‘ಮಿಕ್ಸ್‌ಡ್ ವೆಜಿಟೇಬಲ್ ಕಸಿ’ ಹೇಗೆ ರುಚಿಕರವಾಗಿರುತ್ತೋ ಹಾಗೆ ಬೀದರಿನ ಭಾಷೆ. ನನ್ನ ಭಾಷೆಯೂ ಕೂಡ ಈ ತರಹ ರುಚಿಕರವಾದದ್ದೆಂದು ತಿಳಿಯುತ್ತೀರೆಂದು ನಂಬಿದ್ದೇನೆ. ಈ ಸಮ್ಮೇಳನಕ್ಕೆ ಯಶಸ್ಸು ಸಿಗಲೆಂದು ಆಶಿಸುತ್ತಾ ನನ್ನ ಮಾತನ್ನು ಮುಗಿಸುತ್ತೇನೆ.

ಲಿಪ್ಯಂತರ : ಅರುಣ ಜೋಳದ ಕೂಡ್ಲಿಗಿ

* * *