ಕನ್ನಡ ವಿಶ್ವವಿದ್ಯಾಲಯದ ದೇಸಿ ಸಮ್ಮೇಳನದ ಸರ್ವಾಧ್ಯಕ್ಷರೂ, ಕರ್ನಾಟಕದ ಹಿರಿಯ ಜಾನಪದ ವಿದ್ವಾಂಸರೂ ಆದ ಡಾ. ಬಿ.ಎ. ವಿವೇಕ ರೈಯವರೆ, ವೇದಿಕೆಯ ಮೇಲಿರುವ ಕಲಾವಿದರೆ, ಕಲಾ ವಿಮರ್ಶಕರೆ, ಮುಂದಿರುವ ಎಲ್ಲ ಗೆಳೆಯರೆ, ಎಲ್ಲರಿಗೂ ನಮಸ್ಕಾರ.

ಸಾಮಾನ್ಯವಾಗಿ ಧಾರ್ಮಿಕ ಗುರುಗಳು, ಸಂಸ್ಕೃತ ವಿದ್ವಾಂಸರು ಉಪನ್ಯಾಸದ ಮೊದಲಿಗೆ ಯಾವುದಾದರೂ ಸಂಸ್ಕೃತ ಶ್ಲೋಕದ ಮೂಲಕ ಇಷ್ಟದೇವತಾಸ್ತುತಿ ಮಾಡಿ ಮಾತಿಗೆ ತೊಡಗುವುದುಂಟು. ನನ್ನನ್ನು ನಿನ್ನೆಯಿಂದ ಕಾಡುತ್ತಿದ್ದ ಒಂದು ಸಂಗತಿಯೆಂದರೆ ನಮ್ಮ ಜನಪದ ಕಲಾವಿದರಿಗೆ ವಿದ್ವಾಂಸರಿಗೆ ಗೌರವವನ್ನು ತಂದು ಕೊಡುವುದರಲ್ಲಿ ಅಪಾರವಾಗಿ ಶ್ರಮಿಸಿದ ಹಿರಿಯ ಜಾನಪದ ವಿದ್ವಾಂಸ ಡಾ. ಜೀ.ಶಂ. ಪರಮಶಿವಯ್ಯ ಅವರನ್ನು ನೆನೆಯದೆ ಹೋದರೆ ಬಹಳ ದೊಡ್ಡ ತಪ್ಪಾಗುತ್ತದೆ ಎನ್ನುವುದ. ಯಾಕೆಂದರೆ ನಮ್ಮಲ್ಲಿ ಕಳೆದ ನೂರು-ನೂರಿಪ್ಪತ್ತು ವರ್ಷಗಳಿಂದ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಬೆಳೆ ತೆಗೆಯಲಾಯಿತು. ಆದರೆ ಕಲಾವಿದರ ಬಗೆಗೆ ಕಾಳಜಿ, ಆಸಕ್ತಿ ಅವರ ಬಗ್ಗೆ ಅಪಾರವಾದ ಪ್ರೀತಿ, ಗೌರವ ಇಟ್ಟುಕೊಂಡು ಕನ್ನಡ ಜಾನಪದ ಲೋಕದಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸಿದವರೆಂದರೆ ಡಾ. ಜೀ.ಶಂ.ಪ ಅವರು. ಅದಕ್ಕಾಗಿ ನಾನು ಅವರನ್ನು ಅತ್ಯಂತ ಗೌರವದಿಂದ ನೆನೆದು ನನ್ನ ಮಾತಿಗೆ ತೊಡಗುತ್ತೇನೆ.

ನಾವೆಲ್ಲ ಎಲ್ಲೋ ಒಂದು ಕಡೆ ತಪ್ಪು ಮಾಡ್ತಿದ್ದೇವೆ ಎಂದು ನನಗೆ ಅನ್ನಿಸುತ್ತದೆ. ಬಹುಶಃ ಅದು ನಮ್ಮ ಓದಿನ ಫಲ ಇರಬಹುದೇನೋ ಗೊತ್ತಿಲ್ಲ. ನಾವೆಲ್ಲ ಕಲಾವಿದರು ಸೃಷ್ಟಿ ಮಾಡಿದ ಸಾಮಗ್ರಿಗಳನ್ನು ಅಧ್ಯಯನ ಮಾಡುವುದರಲ್ಲೇ ಆಸಕ್ತರಾಗಿ, ಕ್ಷೇತ್ರಕಾರ್ಯ, ವಿಶ್ಲೇಷಣೆ, ಪುಸ್ತಕ ಪ್ರಕಟಣೆ ಆ ಮೂಲಕ ನಮ್ಮ ಹೆಸರಿನ ಸ್ಥಾಪನೆ – ಇವುಗಳಲ್ಲೇ ತೊಡಗಿಕೊಂಡು ನಾವೆಲ್ಲ ಎಲ್ಲಿಂದ ಬಂದಿದ್ದೇವೆ. ಜಾನಪದ ಲೋಕವೃಕ್ಷದ ಬೇರುಗಳು ಎಲ್ಲಿವೆ ಎನ್ನುವುದರ ತಿಳಿವು ಇಲ್ಲದೆ ವಿಸ್ಮೃತಿಗೆ ಒಳಗಾಗಿದ್ದೇವೆ. ಕಲಾವಿದರ ಜೀವ ದ್ರವ್ಯದಿಂದ ನಾವು ಈ ಸ್ಥಿತಿಗೆ ತಲುಪಿದ್ದೇವೆ ಎನ್ನುವುದನ್ನು ಮರೆತಿದ್ದೇವೆ. ನಾವೆಲ್ಲಾ ಅವರನ್ನು ಮರೀತಾ ಇದ್ದೇವೆ ಅನ್ನುವುದು ನಮ್ಮಂಥ ಅಧ್ಯಾಪಕರನ್ನ, ಜಾನಪದ ವಿದ್ವಾಂಸರನ್ನ ಕಾಡಬೇಕು. ಇದಕ್ಕೆ ರೂಪಕ ಎಂಬಂತೆ ಈ ಮೂರು ದಿನಗಳಲ್ಲಿ ಅಲೆಮಾರಿ ಸಮುದಾಯವನ್ನು ಕುರಿತ ಈ ಸಮ್ಮೇಳನ ತುಂಬ ಅರ್ಥಪೂರ್ಣವಾಗಿ ಜರುಗಿತು. ಆ ನಿರ್ಲಕ್ಷಿತ ಸಮುದಾಯವನ್ನು ಕುರಿತು ಅನೇಕ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ಆದರೆ ಇದು ಎದುರಿಗೆ ಕತ್ತಿ ಹಿಡಿದು ನಿಂತು ಎದುರಾಳಿ ಇಲ್ಲದೆ ಗಾಳಿಯೊಂದಿಗೆ ನಡೆಸಿದ ಹುಸಿ ಕಾಳಗವಾಯಿತೋ ಎನ್ನುವ ಆತಂಕ ನನಗೆ. ನಮ್ಮೆದುರು ಒಬ್ಬ ಸಾಮು ಮಾಡಿದ ಸನ್ನದ್ಧ ಸೈನಿಕನ ಜತೆ ಹೋರಾಟ ಮಾಡಿದ್ದರೆ ಅದು ಕಾಳಗ. ಆದರೆ ಇಲ್ಲಿ ಏನಾಗಿದೆ ಎಂದರೆ ನಾವು ವಿದ್ವಾಂಸರೆನ್ನಿಸಿಕೊಂಡವರು ಕಲಾವಿದರ ಬಗೆಗೆ, ‘ಅಲೆಮಾರಿ’ಗಳ ಬಗೆಗೆ ಏಕಮುಖವಾದ ವಿಚಾರಗಳನ್ನು ಹರಿಯಬಿಡುತ್ತಿದ್ದೇವೆ. ಆದರೆ ಅಲೆಮಾರಿಗಳು ಎಲ್ಲಿದ್ದಾರೆ? ನಮ್ಮೆದುರು ಹತ್ತಿಪ್ಪತ್ತು ಅಲೆಮಾರಿ ಕಲಾವಿದರನ್ನು ಕರೆಸಿ ಕೂರಿಸಿದ್ದರೆ ಅವರನ್ನು ಕುರಿತು ನಮ್ಮ ಹೇಳಿಕೆಗಳ ತಾಜಾತನ ತಿಳಿಯುತ್ತಿತ್ತು. ನಮ್ಮ ಎಷ್ಟೋ ಸಂಗತಿಗಳನ್ನು ಅವರು ಝಂಕಿಸಿ ಮಾತನಾಡುವ ಸಾಧ್ಯತೆ ಇತ್ತು. ಹೀಗಾಗಿದ್ದರೆ ಇಂದಿನ ಈ ಕಲಾವಿದರ ಜತೆಗಿನ ಸಂವಾದ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಅಂದರೆ ಈ ಸಮ್ಮೇಳನದಲ್ಲಿ ಕಲಾವಿದರ ಪಾತ್ರಾಭಿನಯ ಇನ್ನಷ್ಟು ಹೆಚ್ಚಾಗಿರಬೇಕಿತ್ತು. ಇಂದು ಇಲ್ಲಿ ಮಾತನಾಡಿದ ಕಲಾವಿದರು ತಮ್ಮ ಬದುಕಿನ ವಾಸ್ತವ ಚಿತ್ರಣವನ್ನು ನಮ್ಮ ಮುಂದಿಟ್ಟರು. ನಾವು -ಅನ್ಯರು ಅವರನ್ನು ನೋಡುವ ದೃಷ್ಟಿಕೋನದಲ್ಲಿರುವ ತಪ್ಪನ್ನು ಎತ್ತಿ ಆಡಿದರು. ಆದರೆ ಅವರಲ್ಲಿ ಇರತಕ್ಕ ವಿನಯ, ಸಜ್ಜನಿಕೆ, ಔದಾರ್ಯವನ್ನು ವಿದ್ವಾಂಸರು ಅಂತ ಅನ್ನಿಸಿಕೊಂಡ ನಾವು ತಿಳಿದುಕೊಳ್ಳಬೇಕು. ನಿನ್ನೆ- ಮೊನ್ನೆ ಚರ್ಚೆಗೆ ಬಂದಂತಹ ವಿಚಾರಗಳಲ್ಲಿ ಅವರನ್ನು ಮುಖ್ಯವಾಹಿನಿಗೆ ಸೇರಿಸಬೇಕು ಎನ್ನುವುದು ಬಹಳ ಮುಖ್ಯವಾದುದು. ಇಂದಿನ ಜಾನಪದ ಅಧ್ಯಯನದ Thrust area ಎನ್ನುವುದು ಕಲಾವಿದರ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸಬಲೀಕರಣದ ಕುರಿತಾಗಬೇಕು. ನಾವು ಎಷ್ಟೋ ಬಾರಿ ವಿದೇಶಿ ವಿದ್ವಾಂಸರ ಬಗೆಗೆ ಬಹಳ ಹಗುರವಾಗಿ ಮಾತನಾಡುತ್ತೇವೆ. ಅದು ವಾಸ್ತವವಾಗಿ ತಪ್ಪು ಕಲ್ಪನೆ ಹಾಗೂ ಅವರ ಬಗೆಗೆ ನಾವು ಇಟ್ಟುಕೊಂಡಿರುವ ಭ್ರಾಮಕ ಅಪಕಲ್ಪನೆ ಎಂದು ನಾನು ತಿಳಿಯುತ್ತೇನೆ. ವಿದೇಶಿ ವಿದ್ವಾಂಸರಿಗೆ ಕಲಾವಿದರ ಬಗೆಗೆ ಇರುವ ಪ್ರೀತಿ ಗೌರವ ನಮಗಿಲ್ಲ ಎಂಬ ವಾಸ್ತವವನ್ನು ನಾವಿಲ್ಲಿ ಹೇಳಲೇಬೇಕಾಗಿದೆ. ಈ ವಿಷಯದ ಬಗ್ಗೆ ನಮ್ಮ ಎದುರು ಕುಳಿತಿರುವ ಡಾ. ಬಿ.ಎ. ವಿವೇಕ ರೈಯವರಿಗೂ ಗೊತ್ತು. ಮಂಗಳೂರು ವಿಶ್ವವಿದ್ಯಾಲಯಕ್ಕೆ ಅನೇಕ ಪಾಶ್ಚಾತ್ಯ ಪೌರಾತ್ಯ ವಿದ್ವಾಂಸರು ಅಧ್ಯಯನಕ್ಕಾಗಿ ಬರುತ್ತಾರೆ. ಅವರು ಕಲಾವಿದರನ್ನು ಹೇಗೆ ನೋಡುತ್ತಿದ್ದಾರೆ. ಅವರ ಜತೆಗೆ ತಮ್ಮ ಕೆಲಸವಾದ ಬಳಿಕವೂ ಯಾವ ಬಗೆಯ ಸಂಬಂಧ ಇರಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಬೇಕು. ಅಮೆರಿಕಾ ದೇಶದ ಪ್ರಸಿದ್ಧ ಮಾನವಶಾಸ್ತ್ರಜ್ಞ ಡಾ. ಪೀಟರ್ ಕ್ಲಾಸ್ ಅವರು ಎರಡು ದಶಕಕ್ಕೂ ಹೆಚ್ಚು ಕಾಲ ಕರಾವಳಿ ಕರ್ನಾಟಕದಲ್ಲಿ ಓಡಾಡಿದವರು, ಅಲ್ಲಿನ ಜನಪದೀಯರಿಂದ ಬರಿಯ ಮಾಹಿತಿ ಸಂಗ್ರಹ ಮಾಡಿದ್ದಲ್ಲ, ಅವರ ಜ್ಞಾನವನ್ನು ತನ್ನ ಅಧ್ಯಯನ – ಸಂಶೋಧನೆಗೆ ಬಳಸಿಕೊಂಡರು, ಅದಕ್ಕಿಂತ ಹೆಚ್ಚು – ಅವರೀಗ ಉಡುಪಿ ಬಿಟ್ಟು ವರ್ಷ ಇಪ್ಪತ್ತಾಯ್ತು, ಆದರೆ ಇಂದಿಗೂ ಅವರು ತನ್ನ ‘ಜನಪದ ಬಳಗ’ವನ್ನು ಮರೆತಿಲ್ಲ. ರೋಮನ್ ಲಿಪಿ ಬಳಸಿ ತುಳು ಭಾಷೆಯನ್ನು ಬಲ್ಲ ಅವರು ತನಗೆ ನೆರವಾದ ಕಲಾವಿದರಿಗೆ ಪತ್ರ ಬರೆಯುತ್ತಾರೆ, ಅವರ ಸುಖಕಷ್ಟಗಳಿಗೆ ಸ್ಪಂದಿಸುತ್ತಾರೆ, ನೆರವಾಗುತ್ತಿದ್ದಾರೆ. ಅವರು ಹಣದ ನೆರವು ನೀಡುತ್ತಿದ್ದಾರೆ ಎನ್ನುವುದು ಮುಖ್ಯವಲ್ಲ. ಅದರ ಹಿಂದಿರುವ ಅವರ ಕಾಳಜಿ, ಕಲಾವಿದರ ಬಗೆಗಿನ ಕಳಕಳಿ ಅನುಕರಣೀಯ. ಇದನ್ನು ನಾವು ಗಮನಿಸಬೇಕಾಗಿದೆ.

ಇನ್ನೊಂದು ಮುಖ್ಯ ವಿಚಾರ. ನಮ್ಮ ಕಲಾವಿದರ ಬಗೆಗಿನ ನಮ್ಮ ಆಲೋಚನೆ, ಅಧ್ಯಯನಗಳು ಯಾವ ರೀತಿಯಲ್ಲಿ ಆಗುತ್ತಿವೆ ಎಂದರೆ ಅವು ‘History from above’ – ಚರಿತ್ರೆಯನ್ನು ವಾಸ್ತವವಾಗಿ ಕೆಳಗಿನಿಂದ ಕಟ್ಟಬೇಕಾಗಿದೆ. ಕಲಾವಿದರನ್ನು ನಾವು ವಿದ್ವಾಂಸರಾದವರು ಯಾವ ರೀತಿ ನೋಡಿಕೊಳ್ಳುತ್ತಿದ್ದೇವೆ ಹಾಗೂ ನೋಡಿದ್ದೇವೆ ಎನ್ನುವುದು. ಈ ಸಂದರ್ಭದಲ್ಲಿ ನನಗೆ ತುಂಬ ಸಂತೋಷದ ಸಂಗತಿಯೆಂದರೆ ಇಂಡೋ-ಫಿನ್ಲಿಕ್ ಯೋಜನೆಯಡಿ ಡಾ. ಲಾರಿ ಹಾಂಕೊ, ಡಾ. ಬಿ.ಎ. ವಿವೇಕ ರೈ, ಡಾ. ಚಿನ್ನಪ್ಪಗೌಡ ಹಾಗೂ ಅನ್ನಲಿ ಹಾಂಕೊ ಅವರು ಜತೆಗೂಡಿ ಹತ್ತು ವರ್ಷಗಳ ಸತತ ಪ್ರಯತ್ನದಿಂದ ತುಳು ಜನಪದ ಮಹಾಕಾವ್ಯ ಸಿರಿಪಾಡ್ಡನವನ್ನು ಅಚ್ಚುಕಟ್ಟಾಗಿ ಹೊರತಂದರು. ಈ ಸಂಗ್ರಹದ ಮಹತ್ವ ಎಂದರೆ ನಮ್ಮವರು ಅಲ್ಲಿಯವರೆಗೆ ಒಂದು ಕಾವ್ಯವಾಗಲಿ, ಕಥೆಯಾಗಲಿ, ಏನೇ ಆಗಲಿ ಸಂಗ್ರಹ ಮಾಡಿದವರು. ಕಲಾವಿದ ಯಾರು? ಕತೆ ಹೇಳಿದವರು ಯಾರು? ಕಾವ್ಯವನ್ನು ಪ್ರದರ್ಶಿಸಿದವರು. ಯಾರು? ಎನ್ನುವುದನ್ನು ಪುಸ್ತಕದೊಳಗೆ ದಾಖಲಿಸಿರುವುದಿಲ್ಲ. ದಾಖಲಿಸಿದ್ದರೂ ಎಲ್ಲೋ ಒಂದು ಮೂಲೆಯಲ್ಲಿ ಅಚ್ಚು ಮಾಡಿರುತ್ತಾರೆ. ಮೊದಲ ಬಾರಿ ಲಾರಿ ಹಾಂಕೊ ಬಳಗದವರು ಸುಮಾರು ಹತ್ತು ವರ್ಷಗಳ ಕಾಲ ಕಲಾವಿದನೊಬ್ಬನ ಜತೆ ‘ಸಂವಾದಿಸಿ’ ‘The Siri Epic as performed by Gopala Naika’ ಎನ್ನು ೧೫, ೬೮೩ ಸಾಲುಗಳ ಸುದೀರ್ಘ ತುಳುಕಾವ್ಯವನ್ನು ಸಂಪಾದಿಸಿದರು ೧೯೯೭ (ಮೂರು ಸಂಪುಟಗಳಲ್ಲಿ). ಇವರು ಕಲಾವಿದರಿಗೆ ಪುಸ್ತಕದೊಳಗೆ ನೀಡಿದ ಮನ್ನಣೆ ಗೌರವಗಳಿಂದ ಪ್ರೇರಿತನಾಗಿ ನಾನು ಸಂಗ್ರಹಿಸಿದ ತುಳುಪಾಡ್ಡನಕ್ಕೆ ‘ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ಡ’ನ ಎಂದು ಹೆಸರಿಟ್ಟೆ. ಮುಂದೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಈ ಪರಂಪರೆ ಮುಂದುವರಿಯಿತು. ಸುಮಾರು ಹದಿನೈದು ವರ್ಷಗಳ ಹಿಂದೆ ಖ್ಯಾತ ಜಾನಪದ ವಿದ್ವಾಂಸ ಅಲೆನ್ ಡಂಡೆಸ್ ಅವರು ತರಬೇತಿ ಶಿಬಿರವೊಂದರಲ್ಲಿ ನಮಗೆ ಹೀಗೆ ಹೇಳಿದ್ದರು. “ಜಾನಪದ ವಿದ್ವಾಂಸರಾದ ನೀವು ಜಾನಪದ ಕೃತಿಗಳ ಸಂಗ್ರಹ. ಮುದ್ರಣಗಳ ಸಂದರ್ಭದಲ್ಲಿ ಕೆಲವೊಂದು ನಿಯಮಗಳನ್ನು ಹಾಕಿಕೊಳ್ಳಬೇಕು. ಕಲಾವಿದರ ಶೋಷಣೆ ಮಾಡಬಾರದು. ಕಲಾವಿದರ ಫೋಟೋವನ್ನು ಪುಸ್ತಕದ ಮುಖಪುಟದಲ್ಲಿ ಅಚ್ಚುಮಾಡಬೇಕು. ಸಂಪಾದಕರ ಹೆಸರಿನ ಮೊದಲು ಕಲಾವಿದರ ಹೆಸರನ್ನು ಮುದ್ರಿಸಿ ದಾಖಲಿಸಬೇಕು”. ಇನ್ನೊಂದು ಸಂದರ್ಭದಲ್ಲಿ “Who owns the Folklore” ಎಂದು ಕೇಳಿದ ಅವರು “ಕಲಾವಿದನೊಬ್ಬನಿಗೆ ಗೌರವ ಸಂಭಾವನೆ ನೀಡಿ ಪ್ರದರ್ಶನವೊಂದರ ದಾಖಲುಮಾಡಿಕೊಂಡ ಕೂಡಲೇ ಅವರ ಕಾಪಿರೈಟ್ ನಿಮಗೆ ಬರುವುದಿಲ್ಲ. ಅದು ಅವನಿಗೆ / ಅವಳಿಗೆ ಸೇರಿದ್ದು, ಹೊರತು ನಿಮಗಲ್ಲ” ಎಂದಿದ್ದರು.

ನಮ್ಮಲ್ಲಿ ಜನಪದ ಪ್ರದರ್ಶಕರನ್ನು ಸಾಮಾನ್ಯವಾಗಿ ಗಾಯಕರು (ಕಾವ್ಯದ ಸಂದರ್ಭದಲ್ಲಿ), ವಕ್ತೃಗಳು (ಜನಪದ ವೈದ್ಯದ ಸಂದರ್ಭದಲ್ಲಿ) ನಿರೂಪಕರು (ಕತೆ ಹೇಳುವ ಸಂದರ್ಭದಲ್ಲಿ) ಎಂದು ಕರೆಯುವುದುಂಟು. ಹೀಗೆ ಕರೆಯುವ ಬಗ್ಗೆ ನನ್ನ ತಕರಾರು ಇದೆ. ಅವರನ್ನು ಜನಪದ ಗಾಯಕರು, ಜನಪದ ನಿರೂಪಕರು ಎಂದು ಮುಂತಾಗಿ ಕರೆಯುವುದು ಸರಿಯಲ್ಲ. ಅವರನ್ನು ಜನಪದ ಕವಿಗಳು, ಜನಪದ ಕತೆಗಾರರೆಂದು ಕರೆಯಬೇಕು. ಯಾಕೆಂದರೆ ಒಂದು ಜನಪದ ಮಹಾಕಾವ್ಯವನ್ನು ಹಾಡುವವರು ಅದು ಮಂಟೇಸ್ವಾಮಿ ಇರಲಿ, ಮಲೆಮಾದೇಶ್ವರ ಇರಲಿ, ತುಳುವಿನ ಸುದೀರ್ಘ ಪಾಡ್ದನ ಕಾವ್ಯವಿರಲಿ ಅವರು ಯಾರೂ ಹೇಳಿಕೊಟ್ಟದನ್ನು ಬಾಯಿಪಾಠ ಮಾಡಿಕೊಂಡು ಅದನ್ನು ಪ್ರೇಕ್ಷಕರೆದುರು ಹಾಡುವುದಿಲ್ಲ. ಆಯಾ ಕ್ಷಣದಲ್ಲಿ ಪ್ರದರ್ಶನದ ಸಂದರ್ಭದಲ್ಲಿ ಅವರು ಕಾವ್ಯವನ್ನು ಸೃಷ್ಟಿಸಿ ಹಾಡುತ್ತಾರೆ. ಒಂದು ಬಾರಿ ತುಳುವಿನ ಪ್ರಸಿದ್ಧ ಪಾಡ್ದನಕಾರ್ತಿ ರಾಮಕ್ಕ ಮುಗ್ಗೇರ್ತಿ ಹೇಳಿದರು. “ನೀವು ನನಗೆ ಸಿನೆಮಾದ ಒಂದು ಕತೆ ಹೇಳಿರಿ.ಅರ್ಧ ತಾಸಿನ ಬಳಿಕ ಬನ್ನಿ ಅದನ್ನು ನಿಮಗೆ ತುಳುಪಾಡ್ಡನ ಮಾಡಿ ಹೇಳುತ್ತೇನೆ” ಎಂದು. ಈ ಮಾತಿನ ಅರ್ಥ ಏನು? ಅವರು ವಾಸ್ತವವಾಗಿ ಕಾವ್ಯಕಟ್ಟುಗರು, ಕವಿಗಳು. ಈಗ ನಿರೂಪಿಸಿದ ಕಾವ್ಯವನ್ನು ನಾಳೆ ಹೇಳುವಂತೆ ಹೇಳಿದರೆ ಇಂದಿಗಿಂತ ಅದು ಬೇರೆಯೇ ಆಗಿರುತ್ತದೆ. ಸಂದರ್ಭ ಪಠ್ಯವನ್ನು ರೂಪಿಸುತ್ತದೆ. ಈ ಮಾತನ್ನು ಜನಪದ ಕತೆಯನ್ನು ಹೇಳುವವರಿಗೂ ಅನ್ವಯಿಸಬಹುದು. ಹೀಗಾತಿ ಕತೆ, ಕಾವ್ಯ ನಿರೂಪಿಸುವುದು ಸೃಜನಶೀಲ ಪ್ರಕ್ರಿಯೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಅನೇಕ ಜಾನಪದ ವಿದ್ವಾಂಸರು ಹೀಗೆ ಹೇಳಿದರೆ ವಿರೋಧ ವ್ಯಕ್ತಪಡಿಸುತ್ತಾರೆ. ಮೌಖಿಕ ಪರಂಪರೆಯಲ್ಲಿ ಸೃಜನ ಪ್ರಕ್ರಿಯೆಯ ಕಲ್ಪನೆ ಇಲ್ಲದವರು ಹೀಗೆ ಮಾತನಾಡುವುದುಂಟು. ಅದಕ್ಕಾಗಿ ನಾನು ಇನ್ನೂ ಗಟ್ಟಿಯಾಗಿ ಹೇಳುತ್ತೇನೆ. ಜನಪದ ಕಲಾವಿದರನ್ನು ಜನಪದ ಕವಿಗಳೆಂದು ಜನಪದ ಕತೆಗಾರರೆಂದು ಕರೆಯಿರಿ ಎಂದು. ಬೇಂದ್ರೆ, ಕುವೆಂಪು, ಮಾಸ್ತಿಯವರು ಅಕ್ಷರ ಮಾಧ್ಯಮದಲ್ಲಿ ಕವಿಗಳು, ಕತೆಗಾರರು ಹೇಗೋ ಹಾಗೆ ಮೌಖಿಕ ಪರಂಪರೆಯ ಹೆಬ್ಬರೆ ಮಾದಯ್ಯ, ದರೋಜಿ ಈರಮ್ಮ, ಮಾಚಾರ್ ಗೋಪಾಲ, ನಾಯಕ, ರಾಮಕ್ಕ ಮುಗ್ಗೇರ್ತಿ ಮುಂತಾದವರು ಕವಿಗಳು. ಅಕ್ಷರ ಕವಿಗಳು ತಮ್ಮ ಭಾವಾಭಿವ್ಯಕ್ತಿಯನ್ನು ಅಕ್ಷರ ಮಾಧ್ಯಮದಲ್ಲಿ ಹರಿಯಬಿಟ್ಟರೆ ಇವರು ಪ್ರದರ್ಶನ ವೊಂದರ ಸಂದರ್ಭದಲ್ಲಿ ಕುಳಿತ ಸಾವಿರಾರು ಮಂದಿ ಪ್ರೇಕ್ಷಕ / ಶ್ರೋತೃಗಳ ಎದುರು ಕಾವ್ಯಕಟ್ಟಿ ನಿರೂಪಿಸುತ್ತಾರೆ. ಜನಪದ ಕತೆ ಹೇಳುವವರನ್ನು ಕಥಾನಿರೂಪಕ, Tale Teller ಎಂದು ಜನಪದ ಕತೆಗಾರರೆಂದೇ ಕರೆಯಬೇಕು. ಕುಂದಾಪುರದ ಮೂಕಜ್ಜಿಯಿಂದ ಒಂದೇ ಕತೆಯನ್ನು ಭಿನ್ನ ಭಿನ್ನ ಸಂದರ್ಭಗಳಲ್ಲಿ ಹೇಳಿಸಿ ಅದರ ಪಠ್ಯದಲ್ಲಿ ಏರ್ಪಟ್ಟ ಬಹುರೂಪತೆ ಯನ್ನು ವಿವರವಾಗಿ ನಾನು ಅಧ್ಯಯನ ಮಾಡಿದ್ದೇನೆ. ಹೀಗಾಗಿ ಅವರನ್ನೂ ಜನಪದ ಕತೆಗಾರರೆಂದೇ ಕರೆಯಬೇಕು. ಈ ನಿಟ್ಟಿನಲ್ಲಿ ಜನಪದ ಕಲಾವಿದರನ್ನು ನೋಡುವ ದೃಷ್ಟಿಕೋನದಲ್ಲಿ ಬದಲಾವಣೆ ಆಗಬೇಕು. ನಾವು ವಿದ್ವಾಂಸರು ಮೇಲೆ, ಅವರು (ಕಲಾವಿದರು) ಕೆಳಗೆ, ಅವರಿಂದ ನಾವು ಮಾಹಿತಿ ಪಡೆದು ಜಾನಪದ ಅಧ್ಯಯನವನ್ನು ಕಟ್ಟುವವರು ಎನ್ನುವ ಪ್ರಜ್ಞೆ ನಮ್ಮಲ್ಲಿ ಕೆಲವರಲ್ಲಿದೆ. ‘ಕಲಾವಿದರಿಗೆ ನಾವು ಬೋಧನೆ ಮಾಡಬೇಕು (ಈ ಬಗೆಯ ಮಾತುಗಳು ನಿನ್ನೆ ಮೊನ್ನೆ ಇದೇ ವೇದಿಕೆಯಿಂದ ನನ್ನ ಕಿವಿಗೆ ಕೇಳಿಸಿತು), ಅವರಿಗೆ ಅಕ್ಷರ ಇಲ್ಲ, ತಿಳುವಳಿಕೆ ಸಾಲದು, ಅವರಿಗೆ ಹೇಳಿಕೊಟ್ಟು ತಿದ್ದಬೇಕು ಇತ್ಯಾದಿ….’ ಇದು ನಮ್ಮ ಅಹಂಪ್ರಜ್ಞೆಯ ಸಂಕೇತ. ಅವರಲ್ಲಿ ಇರತಕ್ಕ ಅನೇಕ ಗುಣಾತ್ಮಕ ಅಂಶಗಳು ನಮ್ಮಲ್ಲಿಲ್ಲ ಎನ್ನುವದನ್ನು ನಾವು ಗಮನಿಸಬೇಕು. ಇನ್ನೊಂದು ಸಂಗತಿಯೆಂದರೆ ನಾವು ಅವರಿಂದ ಪಡೆದ ಸಾಮಗ್ರಿಗಳನ್ನು ಬಳಸಿಕೊಂಡು ಅವಕ್ಕೆ ಪುಸ್ತಕ ರೂಪ ನೀಡುವ ಹೊತ್ತಿಗೆ ನಾವು ನಮ್ಮ ಅನೇಕ Ismಗಳನ್ನು ಅದರ ಮೇಲೆ ಹೇರುವುದಕ್ಕೆ ಹೋಗುತ್ತೇವೆ. ನಾವು ಅದರ ಮೇಲೆ ಅರ್ಥ ಕಟ್ಟುತ್ತೇವೆ. ಆದರೆ ನಿಜವಾಗಿ ಅರ್ಥವನ್ನು ಕಟ್ಟಬೇಕಾದವರು ಅವರು. ನಾವು ಎಷ್ಟೋ ಬಾರಿ ಅವರಿಗೇನು ಗೊತ್ತು, ಅವರಿಗೆ ವ್ಯಾಖ್ಯಾನ ಮಾಡಲು ಏನು ಗೊತ್ತಿದೆ. ಅವರೇನು ಮೀಮಾಂಸೆ ಕಟ್ಟುತ್ತಾರೆ, ಅರ್ಥ ಕಟ್ಟಬೇಕಾದರೆ ನಾವು ಎನ್ನುವ ಅಹಂಕಾರದ ಗೂಡಿನೊಳಗೆ ವಿರಾಜಮಾನರಾಗಿರುತ್ತೇವೆ. ಆದರೆ ನಿಜವಾಗಿ ಅವರೇ ಅದರ ವಾರಸುದಾರರು. ನಾವು ಅವರಿಂದ ಒಂದು ಕಾವ್ಯ, ಕಥೆ ಕೇಳಿಸಿಕೊಂಡ ಬಳಿಕ ಅವನನ್ನು ಮುಂದಿರಿಸಿಕೊಂಡು “ಇದರ ಅರ್ಥ ನೀನೇನು ಭಾವಿಸುತ್ತಿಯಪ್ಪ?” ಎಂದು ಕೇಳಿ ಅವನ ಮಾತುಗಳನ್ನು ದಾಖಲು ಮಾಡಿಕೊಂಡರೆ ಅಲ್ಲಿ ಅನೇಕ ಒಳನೋಟಗಳು ಸಿಗುತ್ತವೆ. ಅವರ ಸೃಜನೆಯನ್ನು ಕುರಿತು ನಾವು ಕಟ್ಟಿದ ಅರ್ಥವನ್ನು ಅವರ ಎದುರು ಹೇಳಿಬಿಡುವುದು, ಅದು ಸರಿಯಿದೆಯೇ ಎಂದು ಕೇಳುವ ಸೌಜನ್ಯ ನಮಗಿರಬೇಕು. ಅದು ನಮ್ಮಲ್ಲಿ ಅನೇಕರಲ್ಲಿ ಇರುವುದಿಲ್ಲ. ಜಾನಪದ ಅಧ್ಯಯನದಲ್ಲಿ ಈ ವೈಧಾನಿಕತೆಯನ್ನು Folk Exegesis ಅಂದರೆ ಜನಪದ ವ್ಯಾಖ್ಯಾನ ಎಂದು ಹೇಳುತ್ತೇವೆ. ಈ ವಿಧಾನಕ್ಕೆ ನಾವು ಮಹತ್ವ ನೀಡದೆ ಜಾನಪದದ ವಾರಸುದಾರರು ನಾವು ಎಂದು ವಿದ್ವಾಂಸರಾದವರು ಪರಿಭಾವಿಸುವುದು ಅಪಾಯಕಾರಿ ತಿಳಿವಳಿಕೆಯಾದೀತು. ಅವರಿಂದ ಪಡೆದ ಸಾಮಗ್ರಿಯನ್ನು ಆ ಬಳಿಕ ನಮ್ಮದು ಎಂದು ಗ್ರಹಿಸುವವರು ನಮ್ಮಲ್ಲಿ ಅನೇಕರು. ಇದು ಬಹಳ ನೋವಿನ ಸಂಗತಿ. ಅವರ ತಿಳಿವಳಿಕೆಗೆ ಗೌರವ ಮಾನ್ಯತೆ ನೀಡಿದಾಗ ಅವರಲ್ಲಿ ಆತ್ಮಸ್ಥೈರ್ಯ ಹುಟ್ಟುತ್ತದೆ, ತಮ್ಮ ಕಲೆಯ ಬಗ್ಗೆ ಅವರಲ್ಲಿ ಅಭಿಮಾನ ಮೂಡುತ್ತದೆ. ಈ ದೃಷ್ಟಿಯಿಂದ ಅವರ ಆಲೋಚನೆಗಳಿಗೆ ಬೆಲೆಕೊಟ್ಟು ಅವರೇ ನಿಜವಾದ Owners, ಅವರು ಮಾಹಿತಿದಾರರಲ್ಲ, ಅವರು ಆ ಕ್ಷೇತ್ರದ ಒಡೆಯರು ಎಂಬ ಭಾವನೆಯನ್ನು ತಾಳಬೇಕು.

ನಾವು ಸಾಹಿತ್ಯ ಲೋಕದಲ್ಲಿ ಸಾಹಿತಿ, ಕಲಾವಿದರ ಪರಿಚಯ / ಜೀವನ ಚರಿತ್ರೆಯನ್ನು ಪ್ರಕಟಿಸುತ್ತೇವೆ. ಮಾಹಿತಿ ಕೋಶವನ್ನು ನಿರ್ಮಿಸುತ್ತೇವೆ. ಆದರೆ ಜನಪದ ಕಲಾವಿದರ ವಿವರಗಳನ್ನು ಒಳಗೊಂಡಿರುವ ಒಂದು ಸಮಗ್ರ ಮಾಹಿತಿ ಕೋಶವನ್ನು ಪ್ರಕಟಿಸುವುದು ನಮಗೆ ಸಾಧ್ಯವಾಗಿದೆಯೇ? ಅದಕ್ಕೆ ನಾವು ಸರಕಾರದತ್ತ, ಕಣ್ಣು-ಕೈ ವಿಸ್ತರಿಸಬೇಕಿಲ್ಲ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾಹಿತಿ ಕ್ರೋಡೀಕರಣಗೊಂಡು ಮುಂದೆ ಜಿಲ್ಲಾ ಪಂಚಾಯತ್‌ನಲ್ಲಿ ಎಲ್ಲಾ ಮಾಹಿತಿಗಳು ಪುನರ್ ಸಂಯೋಜನೆಗೆ ಒಳಪಡಬೇಕು. ಇದು ಸರಕಾರಿ ಕೆಲಸವಾಗದೆ ಊರ ಕಲಾವಿದರ ಮೇಲಿನ ಅಭಿಮಾನದಿಂದ ನಡೆಯಬೇಕು. (ಇದಕ್ಕೆ ವಿದ್ವಾಂಸರ ಮಾಗದರ್ಶನ ಬೇಕು ಎಂದು ಮತ್ತೆ ಹೇಳಬೇಕಿಲ್ಲ) ಇಂತಹ ಕೆಲಸಗಳಲ್ಲಿ ಸಮಗ್ರತೆ ಇರಬೇಕು. ಅವಸರದ ಹೊಡಿಬಡಿಯ ಕೆಲಸವಾಗಬಾರದು. ಪ್ರತಿಯೊಬ್ಬ ಕಲಾವಿದನಿಗೂ ನ್ಯಾಯ ಸಿಗಬೇಕು. ನಮ್ಮ ಪಂಚಾಯತ್‌ವ್ಯವಸ್ಥೆಯ ಸಮಾಜದ ಆರ್ಥಿಕ – ಸಾಮಾಜಿಕ ಸಬಲೀಕರಣಕ್ಕಷ್ಟೇ ಶ್ರಮಿಸಿದರೆ ಸಾಲದು, ನಾಡಿನ ಸಾಂಸ್ಕೃತಿಕ ಸಬಲೀಕರಣವೂ ಅದರ ಕಾರ್ಯವಾಗಬೇಕು. ಈ ಬಗೆಯಲ್ಲಿ ಜಿಲ್ಲಾ ಕಲಾವಿದರ ಮಾಹಿತಿಕೋಶ ತುರ್ತಾಗಿ ಆಗಬೇಕಾಗಿದೆ. ಇದುವೇ ಅವರನ್ನು ಮುಖ್ಯವಾಹಿನಿಗೆ ಸೇರಿಸುವ ಹಲವು ಸಾಧ್ಯತೆಗಳಲ್ಲಿ ಒಂದು. ಅವರ ಅನನ್ಯತೆಯನ್ನು ದಾಖಲಿಸುವ ಮೂಲಕ ಅವರನ್ನು ಸಮಾಜದ ಮುಖ್ಯಧಾರೆಗೆ ತರಲು ಸಾಧ್ಯ. ಆಗಲೇ ಪರಿಧಿಯಿಂದ ಹೊರಗಿರುವವರು ಕೇಂದ್ರಕ್ಕೆ ಬರುವುದು.

ಜಾನಪದ ಲೋಕದಲ್ಲಿ ಪ್ರಕಾರ ಕೇಂದ್ರಿತ ಸಂಗ್ರಹ. ಅಧ್ಯಯನಗಳು ಬೇಕೆಂಬಷ್ಟು ಬರುತ್ತವೆ. ಗಾದೆ, ಒಗಟು, ಒಡಪು, ಇಂತಹವುಗಳನ್ನು ಸಂಗ್ರಹ ಮಾಡುವುದು, ಅಕಾರಾಧಿಯಾಗಿ ಜೋಡಿಸುವುದು ಒಂದು ಮಾದರಿಯ ಕೆಲಸ. ಇಂತಹ ಸಂಗ್ರಹ ಇನ್ನೂ ಆಗಬೇಕು. (ಸಂಗ್ರಹ -ವಿಶ್ಲೇಷಣೆ, ಪ್ರಕಟಣೆಗೆ ಕೊನೆಯಿಲ್ಲ) ಆದರೆ ನಿಜವಾಗಿ ನಡೆಯಬೇಕಾದುದು ಕಲಾವಿದ ಕೇಂದ್ರಿತ ಅಧ್ಯಯನ. ಈ ಆಲೋಚನೆಯನ್ನು ಕರ್ನಾಟಕದ ಸಂದರ್ಭದಲ್ಲಿ ಮೊದಲಿಗೆ ಸಾಕಾರಗೊಳಿಸಿದವರು ಡಾ. ಬಿ.ಎ. ವಿವೇಕ ರೈಯವರೇ (ಲಾರಿ ಹಾಂಕೊ ಬಳಗದೊಂದಿಗೆ). ನಾವು ಸಾಮಾನ್ಯವಾಗಿ ಒಬ್ಬ ಜನಪದ ಕವಿಯ ಸಂಗ್ರಹ ಮಾಡುವುದೆಂದರೆ ಆತನನ್ನು ಕರೆಸಿ ಅಥವಾ ಆತನಿದ್ದೆಡೆಗೆ ಹೋಗಿ ಯಂತ್ರಗಳ ಮೂಲಕ ಅವನ ಕಾವ್ಯವನ್ನು ದಾಖಲಿಸಿಕೊಂಡು ಮುಂದೆ ಲಿಪಿಕರಣಗೊಳಿಸಿ ಪ್ರಸ್ತಾವನೆಯೊಂದಿಗೆ ಮುದ್ರಿಸಿ ಬಿಡುತ್ತೇವೆ. ಇಲ್ಲಿಗೆ ನಮ್ಮ ಕೆಲಸವಾಯಿತು ಎಂದು ಭಾವಿಸುತ್ತೇವೆ. ಆದರೆ ಸಂಪಾದಕನಾದವನ ಕೆಲಸ ಇಷ್ಟಕ್ಕೇ ಮುಗಿಯುವುದಿಲ್ಲ. ಉದಾಹರಣೆಗೆ ಹೆಬ್ಬರೆ ಮಾದವಯ್ಯನವರಿಂದ ಕಾವ್ಯವನ್ನು ಸಂಗ್ರಹ ಮಾಡುವ ಜತೆಗೆ ಅವರಿಗೆ ಯಾವೆಲ್ಲ ಕಾವ್ಯ ಕಟ್ಟಲು ಬರುತ್ತದೆ, ಅವರಿಗೆ ಇನ್ನಾವ ಕಲೆಗಳಲ್ಲಿ ಪರಿಣತಿ ಇದೆ, ಅವರ ಉಪವೃತ್ತಿ ಏನು, ಅವರಿಗೆ ಕಟ್ಟಿ ಹಾಡಬಲ್ಲ ಕಾವ್ಯದ ಜತೆಗೆ ಇತರ ಏನೆಲ್ಲ ಜನಪದ ಪ್ರಕಾರಗಳಲ್ಲಿ ಪರಿಣತಿ ಇದೆ ಮುಂತಾದ ಎಲ್ಲಾ ವಿಷಯಗಳನ್ನು ಸಂಗ್ರಹ ಮಾಡಬೇಕು. ಲಾರಿ ಹಾಂಕೊ ಬಳಗ ಮಾಚಾರ್‌ಗೋಪಾಲ ನಾಯ್ಕರನ್ನು ಮುಂದಿಟ್ಟುಕೊಂಡು ಸುಮಾರು ಹತ್ತು ವರ್ಷಗಳ ಕಾಲ ಆತ ಸಮಗ್ರ ಜೀವನಾಭಿವ್ಯಕ್ತಿಯನ್ನು ದಾಖಲಿಸಿಕೊಂಡರು. ದಾಖಲಿಸಿಕೊಂಡ ಕಾವ್ಯ ಇಡೀ ಬದುಕಿನ ಒಂದು ಭಾಗ. ಈ ಮೂಲಕ ನಮ್ಮ ಜಾನಪದದ ಅಧ್ಯಯನ ಹಾಗು ಜಾನಪದ ಕಲಾವಿದರನ್ನು ನಾವು ಬಳಸಿಕೊಳ್ಳುವ ವಿಧಾನದ ಮೂಲಕ ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಈ ತೆರೆದುಕೊಳ್ಳುವಿಕೆಗೆ ನಾವು ನಮ್ಮ ಕಿವಿಗಳನ್ನು ಕೊಡಬೇಕು. ಮನಸ್ಸನ್ನು ಮುಕ್ತವಾಗಿರಿಸಿಕೊಳ್ಳಬೇಕು. ಈ ತರದಲ್ಲಿ ಹೊಸ ಹೊಸ ಆಲೋಚನೆಗಳು ಬಂದಾಗ ನಾವು ಕಲಾವಿದರನ್ನೇ ಕೇಂದ್ರವಾಗಿರಿಸಿಕೊಂಡು ಅಧ್ಯಯನದ ವೈಧಾನಿಕತೆಯನ್ನು ರೂಪಿಸಿಕೊಳ್ಳಬೇಕು.

ನಮ್ಮ ಜಾನಪದ ಅಧ್ಯಯನ ವಲಯದಲ್ಲಿ ಇನ್ನೊಂದು ಹೊಸ ಹಾದಿಯನ್ನು ರೂಪಿಸಬೇಕಾಗಿದೆ. ನಮ್ಮ ಕಲಾವಿದರ ಆತ್ಮ ಚರಿತ್ರೆಗಳು ಬರಬೇಕಾಗಿದೆ. ಕಲಾವಿದರ ಆತ್ಮಚರಿತ್ರೆಗಳು ಬಂದಾಗ ಆ ಕ್ಷೇತ್ರದಲ್ಲಿ ಅವರ ಸಾಧನೆಗಳೇನು? ಅದರ ಹಿಂದೆ ಇರುವ ನೋವಿನ-ನಲಿವಿನ ಕತೆಯೇನು? ಜನ ಕಲಾವಿದರನ್ನು ಹೇಗೆ ನಡೆಯಿಸಿಕೊಂಡರು? ಆಯಾಕಾಲದ ಪ್ರೇಕ್ಷಕ ವರ್ಗದ ರುಚಿ ವೈವಿಧ್ಯ, ಆಕಾಂಕ್ಷೆ, ನಿರೀಕ್ಷೆಗಳು ಏನಿದ್ದುವು? ಕಲ ಪ್ರಪಂಚದ ಮುಳ್ಳು ಹಾದಿಯಲ್ಲಿ ಹಾದು ಬಂದಾಗ ಸುರಿಸಿದ ರಕ್ತ, ಬೆವರುಗಳೆಷ್ಟು? ಹೂ ಚೆಲ್ಲಿದ ಹಾದಿಯಾಗಿದ್ದರೆ ಅಲ್ಲಿ ಅನುಭವಿಸಿದ ಆನಂದಾನುಭೂತಿಗಳು, ಪಡೆದ ಸಂತೃಪ್ತಿ ಜೊತೆಗೆ ಸಮಕಾಲದ ಸಾಮಾಜಿಕ ವಿದ್ಯಮಾನಗಳೆಲ್ಲವೂ ಒಂದೆಡೆ ದೊರೆಯುತ್ತದೆ. ಕಾವಿದರಿಗೆ ಬರೆಯಲು ಬಾರದೆ ಇರಬಹುದು. ಅವರ ನಿರೂಪಣೆಯನ್ನು ಕೇಳಿಸಿಕೊಂಡೋ, ರೆಕಾರ್ಡ್ ಮಾಡಿಕೊಂಡೋ ಅಕ್ಷರಕ್ಕೆ ಇಳಿಸಬೇಕು. ಸ್ವಲ್ಪ ಮಟ್ಟಿಗೆ ಸಂಪಾದನ ಪ್ರಕ್ರಿಯೆಗೆ ಗುರಿಪಡಿಸಿ (ಪಂಡಿತರು ಹೆಚ್ಚು ಕೈಯಾಡಿಸಲ ಹೋಗಬಾರದು) ಪ್ರಕಟಿಸಬೇಕು. ಈ ಸಂದರ್ಭದಲ್ಲಿ ನನಗೆ ದಕ್ಷಿಣ ಕನ್ನಡ ಜಿಲ್ಲೆಯ ಕಲಾವಿದರೊಬ್ಬರ ಆತ್ಮಚರಿತ್ರೆಯ ಗ್ರಂಥ ನೆನಪಿಗೆ ಬರುತ್ತದೆ. ಜಾನಪದಶ್ರೀ ಪ್ರಶಸ್ತಿ ವಿಜೇತ ಯಕ್ಷಗಾನ ಪ್ರಪಂಚದ ಖ್ಯಾತ ಮದ್ದಳೆಗಾರ ಹಿರಿಯಡಕ ಗೋಪಾಲರಾಯ ‘ಮದ್ದಲೆಯ ಮಾಯಾಲೋಕ’. ಅದು ಅವರೊಬ್ಬರ ಆತ್ಮಚರಿತ್ರೆ ಅಲ್ಲ. ಕರಾವಳಿ ಯಕ್ಷಗಾನ ಕಳೆದ ಎಂಬತ್ತು ವರ್ಷಗಳಲ್ಲಿ ಯಾವೆಲ್ಲ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಎದುರಿಸಿ ಈ ಸ್ಥಿತಿಗೆ ತಲುಪಿದೆ ಎನ್ನುವುದರ ಗಾಥೆ ಅದ. ಅಂದರೆ ನೆಪ ಗೋಪಾಲರಾಯರು. ವಾ‌ಸ್ತವಿಕವಾಗಿ ಅದೊಂದು ಸಾಂಸ್ಕೃತಿಕ ಚರಿತ್ರೆ. ಈ ಬಗೆಯಲ್ಲಿ ನಮ್ಮ ಕಲಾವಿದರ ಆತ್ಮಚರಿತ್ರೆಗಳು ಬರಬೇಕು. ಈ ಬಗೆಯ ಪ್ರಯತ್ನಗಳು ವಿದೇಶಗಳಲ್ಲಿ ನಡೆದಿವೆ, ನಡೆಯುತ್ತಿವೆ. ಆದರೆ ನಮ್ಮಲ್ಲಿ ಅಧ್ಯಯನದ ವಲಯಗಳಲ್ಲಿ ಕಾಲದಿಂದ ಕಾಲಕ್ಕೆ ಹೊಸ ಪಲುಕುಗಳು ಕಾಣಿಸಿಕೊಳ್ಳುತ್ತಿಲ್ಲ, ಅದು ಆಗಬೇಕು. ನಮ್ಮ ಕಲಾವಿದರನ್ನು ಈ ಬಗೆಯಲ್ಲಿ ದುಡಿಯಿಸಿಕೊಳ್ಳಬೇಕು. ಅಲ್ಲಿ ಕಡೆಗೂ ಕಲಾವಿದ ಮುಂದಿರಬೇಕು, ನಮ್ಮಂಥ ವಿದ್ವಾಂಸರು ನೇಪಥ್ಯದಲ್ಲಿ ಇರಬೇಕು. ಇದು ತಿರುಗು-ಮುರುಗು ಆಗಿಬಿಟ್ಟರೆ ಆಗ ನಮ್ಮ ಅಧ್ಯಯನದ ದಾರಿ ತಪ್ಪುತ್ತದೆ ಎಂಬ ಮಾತನ್ನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ಇಂದು ಪರಿಧಿಗೆ ತಳ್ಳಲ್ಪಟ್ಟ, ಅಂಚಿಗೆ ದೂಡಲ್ಪಟ್ಟ ಕಲಾವಿದರ ಬಗೆಗೆ ಅಧ್ಯಯನ ಮಾಡುವುದರ ಮೂಲಕ ಅವರಲ್ಲಿ ಹೊಸ ಬಗೆಯ ಆತ್ಮಾಭಿಮಾನವನ್ನು, ಆತ್ಮಸ್ಥೈರ್ಯವನ್ನು ತರಬೇಕಾಗಿದೆ. ಆ ಕೆಲಸವನ್ನು ನಾವು ಮಾಡುವ ಸಂದರ್ಭದಲ್ಲಿ ಕಲಾವಿದರ ಬಗ್ಗೆ ಗ್ರಹಿಕೆ ಹೇಗಿರಬೇಕು ಎನ್ನುವುದು ಬಹಳ ಮುಖ್ಯವಾದುದು. ನಾವು ಪಡೆದ ಇಂಗ್ಲಿಷ್ ವಿದ್ಯಾಭ್ಯಾಸದ ಫಲವಾಗಿ ಹಾಗೂ ನಮ್ಮ ಹಿರಿಯರು ಇಂಗ್ಲಿಷ್ ನೀರು ಕುಡಿದವರಾದುದರಿಂದ ರೂಪುಗೊಂಡ ಇಂಗ್ಲಿಷ್ ಜೀವನ ವಿಧಾನದ ಚಹರೆಯಿಂದ ಹೊರಬಂದು ಒಂದು ದೇಶೀಯ ಜ್ಞಾನಪರಂಪರೆಯ ಮರುಶೋಧ ಆಗಬೇಕಾಗಿದೆ.

ಕಲಾವಿದರನ್ನು ವಿದ್ವಾಂಸರನ್ನು ಒಂದೆಡೆ ಸೇರಿಸಿ ಕಲಾವಿದರ ನೋವಿನ-ನಲಿವಿನ ಕಥೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟ ಈ ‘ಸಂವಾದ ಗೋಷ್ಠಿ’ಯ ಸಂಯೋಜಕರಿಗೆ ಹಾರ್ದಿಕ ವಂದನೆಗಳು.

* * *