ಪ್ರಸ್ತುತ ಸಂದರ್ಭದಲ್ಲಿ ಭಾಷೆ ಸಂವಹನ ಸಾಧನವಾಗಿ ಮಾತ್ರ ಉಳಿದಿಲ್ಲ. ಭಾಷೆಗೆ ಅದರ ಕಾರ್ಯವ್ಯಾಪ್ತಿಯನ್ನು ಅನುಸರಿಸಿ ಹೊಸ ವ್ಯಾಖ್ಯಾನವನ್ನು ರೂಪಿಸಿಕೊಳ್ಳುವ ಅಗತ್ಯವಿದೆ. ಭಾಷೆಯ ಈ ಕಾರ್ಯವ್ಯಾಪ್ತಿ ಈ ಕಾಲದಲ್ಲಿಯೇ ರೂಪುಗೊಂಡಿದ್ದಲ್ಲ. ಸಾಮಾಜಿಕ ಜೀವನದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಅದರ ಬದಲಾವಣೆ, ಬೆಳವಣಿಗೆ ಪ್ರಾಬಲ್ಯಗಳ ಹಿನ್ನೆಲೆಯಲ್ಲಿ ಪೂರಕವಾಗಿ, ಅಂತರ್ಗತವಾಗಿ ಭಾಷಿಕ ಸಮುದಾಯಗಳ ಸಾಮಾಜಿಕ ಮೇಲಾಟಕ್ಕೆ ಅಸ್ತ್ರವಾಗಿ ಹಿಂದಿನಿಂದಲೂ ಕೆಲಸ ನಿರ್ವಹಿಸಿದೆ. ಈ ಹೊತ್ತಿನ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಮುದಾಯಗಳ ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳ ಬೆಳವಣಿಗೆಗೂ, ಅಸ್ತಿತ್ವಗಳಿಗೂ, ಭಾಷೆಗೂ ನಿಕಟ ಸಂಬಂಧವಿದೆ. ಹಾಗಾಗಿ ಈ ಎಲ್ಲಾ ವಿಷಯಗಳಿಂದ ಹೊರತುಪಡಿಸಿ ಭಾಷೆಯನ್ನು ಪ್ರತ್ಯೇಕ ಘಟಕವನ್ನಾಗಿ ಭಾವಿಸಲು ಸಾಧ್ಯವಾಗದು. ಅಂದರೆ ಈ ಸಂದರ್ಭದಲ್ಲಿ ಭಾಷೆಯನ್ನು ಸಾಮಾಜಿಕ ಚಹರೆಗಳನ್ನು ಕಾಣಿಸುವ ಕನ್ನಡಿಯಾಗಿ ಮಾತ್ರ ಭಾವಿಸುವ ಬದಲು ಭಾಷೆ ಸಾಮಾಜಿಕ ವಲಯದ ವಿವಿಧ ಕ್ಷೇತ್ರಗಳಿಂದ ಸಮುದಾಯಗಳ ಸ್ಥಾನಮಾನ ನಿರ್ದಿಷ್ಟಪಡಿಸುವ ಅಸ್ತ್ರವಾಗಿ ಬಳಕೆಯಾಗುತ್ತಿರುವುದರ ಕಡೆಗೆ ಗಮನ ಕೊಡುವ ಅಗತ್ಯವಿದೆ. ಈ ವಿಷಯದಲ್ಲಿ ಬಹುಸಂಖ್ಯಾತರಿಂದ ಆಡುವ ಭಾಷೆಗಳು ಭಾಷಿಕ ಸಮುದಾಯಗಳು ಎಚ್ಚರಗೊಂಡಿವೆ. ಅಂತೆಯೇ ತಮ್ಮ ತಮ್ಮ ಅಸ್ತಿತ್ವ ಮತ್ತು ಸ್ಥಾನಮಾನಗಳನ್ನು ಉಳಿಸಿಕೊಳ್ಳುವುದಕ್ಕೆ ಪೂರಕವಾಗಿ ಶೈಕ್ಷಣಿಕ, ರಾಜಕೀಯ ಮತ್ತು ವ್ಯವಹಾರಿಕ ವಲಯಗಳಲ್ಲಿ ಬೇಕಾದ ಮತ್ತು ಅಗತ್ಯವಿರುವ ತಂತ್ರ ಹುನ್ನಾರಗಳನ್ನು ರೂಪಿಸುವ ಮೂಲಕ ಕಾರ್ಯೋನ್ಮುಖವಾಗುತ್ತವೆ. ಇದು ಒಂದು ಭಾಷೆಗೆ ಬಹುಸಂಖ್ಯಾತ ಆಡುಗರಿದ್ದು ಮತ್ತು ಮೇಲೆ ಹೇಳಿದ ವಲಯಗಳ ಸಾಮಾಜಿಕ ಪ್ರಾಬಲ್ಯವಿರುವ ಭಾಷೆಗಳಿಗೆ ಸಾಧ್ಯ. ಈ ಹಿನ್ನೆಲೆಯಲ್ಲಿ ಅಲೆಮಾರಿ ಸಮುದಾಯವನ್ನು ಪರಿಗಣಿಸುವಾಗ ಇಂತಹ ಶಕ್ತಿವಂತ ಭಾಷೆ ಸಾಮಾಜಿಕ ಹಿನ್ನೆಲೆಯ ಸಮುದಾಯಗಳ ಭಾಗವಾದ ‘ಅಲೆಮಾರಿ’ ಸಮುದಾಯಗಳನ್ನು ಗಣಿಸುವ ಅಗತ್ಯವಿಲ್ಲ. ಯಾಕೆಂದರೆ ಇಂತಹ ಅಲೆಮಾರಿ ಸಮುದಾಯಗಳು – ವಿವಿಧ ಕಾರಣಗಳಿಂದ ತಮ್ಮ ಮೂಲಭಾಷೆಯ ನೆಲೆಯಾದ ಭೌಗೋಳಿಕ ಪ್ರದೇಶವನ್ನು ಬಿಟ್ಟು ಹೋದರೂ ಆ ಭಾಷೆಗೆ ಸೇರಿದ ಅಲೆಮಾರಿ ಸಮುದಾಯಕ್ಕಾಗಲೀ, ಆ ಅಲೆಮಾರಿ ಸಮುದಾಯದ ಭಾಷೆಗಾಗಲೀ ಒಟ್ಟಾಗಿ ಯಾವುದೇ ಗಂಭೀರ ಪರಿಣಾಮವಾಗುವುದಿಲ್ಲ. ಉದಾ:- ಮಲೆಯಾಳಂ ಭಾಷಿಕರು, ತಮಿಳು ಭಾಷಿಕರು ತಮ್ಮ ಭಾಷೆಗಳ ಭೌಗೋಳಿಕ ವಲಯದಿಂದ ಎಷ್ಟೋ ದೂರದ ಪ್ರದೇಶಗಳಲ್ಲಿ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಇಂತಹ ಜನರ ಸಂಖ್ಯೆ ಕಡಿಮೆಯಿದ್ದಾಗ ದ್ವಿಭಾಷಿಕರಾಗಿಯೋ ಬಹುಭಾಷಿಕರಾಗಿಯೋ ಆಯಾ ಪರಿಸರದ ಭಾಷಿಕರೊಂದಿಗೆ ವ್ಯವಹರಿಸುತ್ತಾ ನೆಲೆಯಾಗುತ್ತಾರೆ. ಇವರು ಎಲ್ಲೇ ನೆಲೆಯಾದರೂ ತಮ್ಮ ಸಾಮಾಜಿಕ, ರಾಜಕೀಯ ಅಸ್ತಿತ್ವವನ್ನೂ ಹಾಗೆಯೇ ಭಾಷಿಕ ಅಸ್ತಿತ್ವವನ್ನೂ ಹಿತಾಸಕ್ತಿಗಳನ್ನೂ ತಮ್ಮ ಮೂಲಭಾಷೆಯ ಪ್ರದೇಶದ ಜತೆಗಿನ ಸಂಬಂಧಗಳಿಂದ ರಾಜಕೀಯ ಒತ್ತಾಸೆಗಳಿಂದ ರಕ್ಷಿಸಿಕೊಳ್ಳಬಲ್ಲರು. ಉದಾ: ವಿದೇಶಿ ಕನ್ನಡಿಗರು, ಕರ್ನಾಟಕದಲ್ಲಿ ವಾಸಿಸುವ ಮಲೆಯಾಳಿಗಳು, ಇಂತಹ ಪ್ರಬಲ ಸಮುದಾಯಗಳು ಭಾಷೆಯಿಂದಾಗಲೀ, ಸಾಮಾಜಿಕ ಸ್ಥಾನಮಾನಗಳಿಂದಾಗಲೀ ವಂಚಿತರಾಗುವುದಿಲ್ಲ. ಹಾಗೇನಾದರೂ ಆಗಿದ್ದರೆ ಅದು ವ್ಯಕ್ತಿಗತ ಆಯ್ಕೆಯ ಕಾರಣಗಳಿಂದ ಮಾತ್ರ.

ಆದರೆ, ನಿಜವಾದ ಅಲೆಮಾರಿ ಸಮುದಾಯಗಳ ಇಂದಿನ ಸ್ಥಿತಿ ಪಾರಂಪರಿಕ ಸಾಮಾಜಿಕ ಸಂರಚನೆಯ ವಿನ್ಯಾಸದಲ್ಲಿ ಇದ್ದುದಕ್ಕಿಂತ ಬೇರೆ ತೆರನಾಗಿದೆ. ಅಂದರೆ ಅಲೆಮಾರಿ ಸಮುದಾಯಗಳಿಗೆ ಆಧುನಿಕ ಪೂರ್ವ ಸಮಾಜದಲ್ಲಿ ನಿರ್ದಿಷ್ಟ ಕರ್ತವ್ಯ ಮತ್ತು ಹಕ್ಕುಗಳು ಸಮುದಾಯಗಳಿಗಿದ್ದವು. ಅಂದರೆ ಈ ಕರ್ತವ್ಯಗಳು ಒಟ್ಟು ಸಮಾಜ ರಚನೆಯಲ್ಲಿ ಸಮುದಾಯಗಳ ಪರಸ್ಪರ ಕೊಡು ಕೇಳುವಿಕೆಯ ವಿಧಾನದಲ್ಲಿಯೇ ಅಸ್ತಿತ್ವವನ್ನು ಕಂಡುಕೊಂಡಿದ್ದವರು. ಆ ಸಮಯದಲ್ಲಿ ಭಾಷೆಯಾಗಲೀ ಸಮುದಾಯವಾಗಲೀ ತಮ್ಮ ಅಸ್ತಿತ್ವವನ್ನು ಪ್ರತ್ಯೇಕವಾಗಿ ಉಳಿಸಿ ಬೆಳೆಸುವ ಪ್ರತ್ಯೇಕ ಪ್ರಯತ್ನಗಳ ಅಗತ್ಯವಿರದೆ ಸಮಾಜದ ರಚನೆ ಯೊಳಗಡೆಯೇ ಅಂತಹ ಉಳಿಯುವಿಕೆ ಬೆಳೆಯುವಿಕೆಗೆ ಸ್ಥಿರವಾದ ಸ್ಥಿತಿಯಿತ್ತು. ಅಲೆಮಾರಿ ಸಮುದಾಯಗಳು ಯಾವುದೇ ಭಾಷಿಕ ಸಮುದಾಯಗಳಿಗೆ ಸೇರಿದ್ದರೂ ಯಾವುದೇ ಭಾಷಿಕ ಸಮುದಾಯಗಳೊಡನೆ ವ್ಯವಹರಿಸುತ್ತಿದ್ದರೂ ಪ್ರತಿಯೊಂದು ಸಮಾಜಕ್ಕೂ ಕೆಲವು ನಿರ್ದಿಷ್ಟ ಅಗತ್ಯಗಳ ಪೂರೈಕೆಗೆ ಅಗತ್ಯವಿರುತ್ತಿತ್ತು. ಉದಾ: ವ್ಯಾಪಾರ, ಔಷಧಿ ಪೂರೈಕೆ, ಪ್ರದರ್ಶನ ಕಲೆಯಂತಹ ಅಗತ್ಯಗಳನ್ನು ಪೂರೈಸುತ್ತಿದ್ದರು. ಆಧುನಿಕ ಸಮಾಜದ ಅಗತ್ಯದ ಉತ್ಪಾದನೆ, ವಿತರಣೆ ಕೇಂದ್ರೀಕೃತ ವ್ಯವಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದು ಸಮುದಾಯ ಘಟಕಗಳ ಪರಸ್ಪರ ಅವಲಂಬನೆಯ ಅಗತ್ಯ ಕಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳು ಯಾವುದೇ ಸಮಾಜದ ಅಗತ್ಯದ ಭಾಗವಾಗಿ ಉಳಿದಿಲ್ಲ. ಹೀಗಾಗಿ ಅಲೆಮಾರಿ ಸಮುದಾಯಗಳು ತಮ್ಮ ಸಾಮಾಜಿಕ ಅಸ್ತಿತ್ವವನ್ನು ಕಳೆದುಕೊಂಡಿವೆ. ಪ್ರಧಾನ ಸಮಜ ವ್ಯವಸ್ಥೆಯಿಂದ ಪರೋಕ್ಷವಾಗಿ ಹೊರಹಾಕಲ್ಪಟ್ಟ ಈ ಸಮುದಾಯಗಳು ಬಹುತೇಕವಾಗಿ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಸ್ತಿತ್ವವಿಲ್ಲದ ದುರ್ಬಲ ಸಮುದಾಯಗಳು. ಹಾಗೆಯೇ ಭಾಷಿಕವಾಗಿಯೂ ನಿರ್ದಿಷ್ಟ ಮಾತೃಭಾಷೆಯಿದ್ದರೂ ಈಗ ವ್ಯಾಖ್ಯಾನಿಸುತ್ತಿರುವ ಸಮೃದ್ಧ, ಶ್ರೀಮಂತ, ಶಾಸ್ತ್ರೀಯ ಮುಂತಾದ ರಾಷ್ಟ್ರಮಾನ್ಯತೆ, ರಾಜಕೀಯ ಮಾನ್ಯತೆಯ ಚೌಕಟ್ಟಿನ ಒಳಗೆ ಸೇರದಂತಹವು. ಇಲ್ಲಿ ಭಾಷೆಯನ್ನು ಅಸ್ತ್ರವಾಗಿ ಬಳಸಿ ತಮ್ಮ ಪ್ರಾಬಲ್ಯ ಮೆರೆಯುವ ಸಮುದಾಯಗಳ ನಡುವೆ ಎಲ್ಲಾ ರೀತಿಯಿಂದಲೂ ದುರ್ಬಲವಾಗಿರುವ ಅಲೆಮಾರಿ ಸಮುದಾಯಗಳು ಈ ಜಗತ್ತಿನಲ್ಲಿ ನಡೆಯುತ್ತಿರುವ ಪರಿಧಿಯಿಂದಾಚೆಗೆ ಉಳಿಯುತ್ತಿವೆ. ಪುನರ್ವಸತಿಯ ಸರ್ಕಾರಿ ಘೋಷಿತ ಯೋಜನೆಗಳಲ್ಲಿ ತಮ್ಮ ಭಾಷೆಗಳ ರಕ್ಷಣೆ ಯೋಜನೆಗೆ ಅವಕಾಶಗಳಿವೆಯೇ? ಇವರ ಶಿಕ್ಷಣದ ಸ್ಥಿತಿ ಏನು? ಇದರ ರಾಜಕೀಯ, ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಭಾಷೆಯ ಪಾತ್ರವೇನು? ಎಂಬುದರ ಕಡೆ ಗಂಭೀರವಾಗಿ ಮತ್ತು ಸೂಕ್ಷ್ಮವಾಗಿ ಆಲೋಚಿಸುವ ಅಗತ್ಯ ತುರ್ತಾಗಿದೆ.

ಅಲೆಮಾರಿ ಸಮುದಾಯದ ಭಾಷೆಯ ಲಕ್ಷಣಗಳು, ಪರಿವರ್ತನೆಗಳನ್ನು ಈ ಟಿಪ್ಪಣಿಯಲ್ಲಿ ಗಮನಿಸಿಲ್ಲ. ಕಾರಣ ಅದು ಭಾಷಾಧ್ಯಯನಕ್ಕೆ ಆಕರವಾಗಬಲ್ಲದು ಅಷ್ಟೇ. ಪ್ರಬಲ ಭಾಷೆ ಸಂಸ್ಕೃತಿಗಳ ನೆರಳಲ್ಲಿ ಬದುಕುವ ಒತ್ತಾಯದ ಸ್ಥಿತಿಯಲ್ಲಿರುವ ಇಂತಹ ಸಮುದಾಯಗಳು ತಮ್ಮ ಭಾಷಿಕ ಚಹರೆಗಳನ್ನು ದಿನೇ ದಿನೇ ಕಳೆದುಕೊಳ್ಳುತ್ತಾ ಬೇರೆ ಬೇರೆ ಪ್ರಧಾನ ಭಾಷೆಗಳ ನೆರಳಿನಲ್ಲಿ ನಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಮುದಾಯಗಳ ಅಂತಸ್ಸತ್ವದ ಮೇಲೆ ಉಂಟಾಗುವ ಪರಿಣಾಮಗಳ ಬಗೆಗೂ ಎಚ್ಚರ ವಹಿಸುವ ಅಗತ್ಯವಿದೆ.

* * *