ಸಂಸ್ಕೃತಿ ಪ್ರತಿಯ ಬಂಧುಗಳೇ, ಮೂರು ದಿನಳಿಂದ ನಡೆಯುತ್ತಿರುವ ಈ ದೇಸಿ ಸಮ್ಮೇಳನದಲ್ಲಿ ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಶ್ರದ್ಧೆಯಿಂದ, ಉತ್ಸಾಹದಿಂದ, ಕುತೂಹಲದಿಂದ ಚಿಕಿತ್ಸದ ಮನಸ್ಸಿನಿಂದ ಕುಳಿತುಕೊಂಡು ಇಲ್ಲಿ ಎಲ್ಲ ಉಪನ್ಯಾಸಗಳನ್ನು ಕೇಳುತ್ತಾ, ಪರಸ್ಪರ ಜಿಜ್ಞಾಸೆಯನ್ನು ಮಾಡುತ್ತಾ. ನಮ್ಮ ಮಾತುಗಳಿಗೆ ನಮ್ಮ ಕ್ರಿಯೆಗಳಿಗೆ, ಪ್ರೋತ್ಸಾಹವನ್ನು ತುಂಬುತ್ತಾ ಬಂದಿರುವಂತಹ, ಬೀದರ ಸಹೃದಯ ನಾಗರಿಕರಿಗೆ, ಕನ್ನಡ ವಿಶ್ವವಿದ್ಯಾಲಯದ ಪರವಾಗಿ ಆರಂಭದಲ್ಲಿಯೇ ನನ್ನ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ಸಭೆ, ಸಮಾರಂಭ ಸಮ್ಮೇಳನಗಳನ್ನು ಏರ್ಪಡಿಸುವಂತದ್ದು, ಸುಲಭದ ಮಾತಲ್ಲ. ಹತ್ತಾರು ಅಭಿರುಚಿಯ, ಹತ್ತಾರು ಮನಸ್ಸಿನ, ಹತ್ತಾರು ದೃಷ್ಠಿಕೋನಗಳ, ಹತ್ತಾರು ಉದ್ದೇಶಗಳನ್ನು, ವ್ಯಕ್ತಿಗಳನ್ನು ಒಂದು ಕಡೆ ಕಲೆಹಾಕಿ, ಒಂದು ನಿರ್ದಿಷ್ಟ ಸಮ್ಮೇಳನದ ಉದ್ದೇಶದ ನೊಗಕ್ಕೆ ಕಟ್ಟುವುದು ತುಂಬಾ ಕಷ್ಟ ಸಾಧ್ಯವಾದ ಸಂಗತಿ ಅಂತ ನಾನು ಅಂದುಕೊಂಡಿದ್ದೇನೆ. ಪ್ರತಿ ವರ್ಷದ ದೇಸಿ ಸಮ್ಮೇಳನವನ್ನು ವಿಭಿನ್ನವಾದಂತಹ ರೀತಿಯಲ್ಲಿ ನಡೆಸುತ್ತ ಬಂದಿರುವ ಕನ್ನಡ ವಿಶ್ವವಿದ್ಯಾಲಯ ಈ ವರ್ಷ ಹೆಚ್ಚು ಅಲೆಮಾರಿ ಜನಾಂಗಗಳು ಮತ್ತು ಬುಡಕಟ್ಟು ಜನಾಂಗಗಳು ವಾಸ ಮಾಡುತ್ತಿರುವ ಬೀದರ ಜಿಲ್ಲೆಯಲ್ಲಿ ನಡೆಸಬೇಕು ಅನ್ನುವಂತಹ ಆಲೋಚನೆ ಮಾಡಿದಾಗ ಅದಕ್ಕೆ ಇಂಬುಗೊಟ್ಟವರು ಡಾ. ಜಗನ್ನಾಥ ಹೆಬ್ಬಾಳೆರವರು, ಮಾನ್ಯರಾದಂತಹ ಚೆನ್ನಬಸಪ್ಪರವರು ಮತ್ತು ಇಲ್ಲಿನ ಜಿಲ್ಲಾಧಿಕಾರಿಗಳು, ಸಂಸ್ಕೃತ ಪ್ರಿಯರಾದಂತಹ ಉತ್ಸಾಹಿ ಯುವಕರು. ಈ ಮೂರು ದಿನಗಳ ಕಾಲ ನಡೆದ ಸಮ್ಮೇಳನ ಯಶಸ್ವಿ ಆಗಿದೆಯೇ? ಅಂತ ಕೇಳಿದರೆ ಆಗಿದೆ ಮತ್ತು ಇಲ್ಲ ಎರಡು ಉತ್ತರಗಳನ್ನು ಏಕಕಾಲದಲ್ಲಿ ಹೇಳಬೇಕಾಗಿ ಬರುತ್ತದೆ.

ಹಲವಾರು ವರ್ಷಗಳಿಂದ ಜಾನಪದದ ಬಗ್ಗೆ ಬುಡಕಟ್ಟುಗಳ ಬಗ್ಗೆ ಸಾಕಷ್ಟು ಅಧ್ಯಯನವನ್ನು ಮಾಡುತ್ತ ಬಂದಿರುವ ನನಗೂ ಕೂಡ ಇಲ್ಲಿ ನಿನ್ನೆಯಿಂದ ಮಾತನಾಡಿದಂತಹ ಹಲವಾರು ಯುವಕರ ಮಾತುಗಳು, ಅವರು ಸಮಸ್ಯೆಗಳನ್ನು ಕೆದುಕುವ ವಿಶ್ಲೇಷಿಸುವ ರೀತಿ, ಅವರು ಮುಟ್ಟುವ ತೀರ್ಮಾನ, ಇವುಗಳೆಲ್ಲವನ್ನು ಕಂಡು ನಾನು ರೋಮಾಂಚಿತನಾಗಿದ್ದೇನೆ. ಈ ಯುವಕರ ಹಾಗೆ ಮಾತನಾಡುವ, ಯೋಚಿಸುವ, ವಿಶ್ಲೇಷಣೆ ಮಾಡುವ ಶಕ್ತಿಯನ್ನು ನಾನಿನ್ನು ಪಡೆದುಕೊಂಡಿಲ್ಲ ಅಂತ ನನಗೆ ಅನ್ನಿಸುತ್ತದೆ. ಆದ್ದರಿಂದಾಗಿ ಈ ವಯಸ್ಸಿನಲ್ಲಿ ಇಲ್ಲಿಗೆ ಬಂದ ನಂತರ ಸ್ವಲ್ಪ ನನ್ನ ಜ್ಞಾನದ ಮಟ್ಟ ಎತ್ತರಗೊಂಡಿದೆ ಎನ್ನುವಂತಹ ನಿಜವಾದ, ಪ್ರಾಮಾಣಿಕ ಕಾಳಜಿ ನನ್ನದು. ಆರಂಭದ ಆಶಯ ಭಾಷಣವನ್ನು ಮಾಡಿದಂತಹ ಡಾ. ರಾಮಚಂದ್ರಗೌಡರು ಚಿಂತನ ಪೂರ್ವವಾಗಿರುವಂತಹ ಮಾತುಗಳಿಂದ ಹಿಡಿದು, ಸಮ್ಮೇಳನ ಅಧ್ಯಕ್ಷರಾದಂತಹ ನನ್ನ ಆತ್ಮೀಯ ಮಿತ್ರರಾದಂತಹ ಡಾ. ಬಿ.ಎ. ವಿವೇಕ ರೈ ರವರ ನಿಧಾನಗತಿಯ, ಆಳವಾದ ಆಲೋಚನೆಗಳ ಮೇಲೆ ಹರಿದು ಬಂದ ಬುಡಕಟ್ಟು ಮತ್ತು ಅಲೆಮಾರಿ ಜನಾಂಗಗಳ ಬಗೆಗಿನ ವಿಚಾರ ಲಹರಿ ಎಲ್ಲರಿಗೂ ಒಂದು ಹೊಸ ಹೊಳಪನ್ನು, ಹೊಳಹುವನ್ನು ಕೊಟ್ಟಂತೆ ಭಾಸವಾಗುತ್ತದೆ. ಸಮ್ಮೇಳನಗಳಲ್ಲಿ ಎಲ್ಲಾ ಪ್ರಬಂಧಗಳು, ಎಲ್ಲಾ ಮಾತುಗಳು ಒಂದೇ ಮಟ್ಟದಲ್ಲಿ, ವ್ಯಾಪ್ತಿಯಲ್ಲಿ ಇರುವುದಿಲ್ಲ ಅನ್ನುವಂತದ್ದು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಸುಮಾರು ಏಳು ಗೋಷ್ಠಿಗಳಲ್ಲಿ ಉದ್ಘಾಟನೆ ಮತ್ತು ಸಮಾರೋಪ ಸೇರಿ ನಡೆದಂತಹ ಈ ವಿವಿಧ ವಯಸ್ಸಿನ, ಮನಸ್ಸಿನ ಜನಗಳ ನಮ್ಮ ಅಲೆಮಾರಿ ಜನಾಂಗದ ಹಲವಾರು ಮುಖಗಳು, ಗಂಟುಗಳು ಬಿಚ್ಚಿಕೊಂಡಿವೆ ಅನ್ನುವುದು ನನ್ನ ಅನಿಸಿಕೆ. ಈ ಭಾಷಣಗಳಲ್ಲಿ, ಈ ಪ್ರಬಂಧಗಳಲ್ಲಿ, ಅತ್ಯಂತ ಹಸಿ ಹಸಿಯಾದ ಪ್ರಬಂಧಗಳು ಇದ್ದವು. ಅರೆಬೆಂದ ಪ್ರಬಂಧಗಳು ಇದ್ದವು. ಇನ್ನೂ ಬೇಯುತ್ತಿರುವಂತಹ ಪ್ರಬಂಧಗಳು ಇದ್ದವು. ಸಾಕಷ್ಟು ಪಕ್ವವಾಗಿರುವಂತಹ, ಆಲೋಚನೆಗಳ ಫಲಿತವಾದಂತಹ ಉಪನ್ಯಾಸಗಳು ಸಹ ಇದ್ದವು. ಇದು ಪ್ರಕೃತಿಯ ಸಹಜವಾದ ವೈಶಿಷ್ಟ ಅಂತ ನಾನು ಅಂದುಕೊಂಡಿದ್ದೇನೆ. ಮತ್ತೆ ಎಷ್ಟೋ ಸಾರಿ ಇಂತಹ ಸಮಾವೇಶಗಳನ್ನು, ಸಂಘಟಿಸಿದಾಗ ಹಲವಾರು ಜನ ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾರೆ. ನೀವು ಭಾಷಣ ಮಾಡಿದರೆ, ನೀವು ಸಮ್ಮೇಳನಗಳನ್ನು ಮಾಡಿದರೆ, ಸಂಘಗಳನ್ನು ಸಂಘಟಿಸಿದರೆ ಇರುವಂತಹ ಸಮಸ್ಯೆಗಳೆಲ್ಲ ಪೂರ್ಣವಾಗುತ್ತವೆಯೇ? ಅಂತ. ಸರಿ ನೀವು ಅಡಿಗೆ ಮಾಡಿದರೆ ಊಟ ಮಾಡಿದಾಗೆ ಆಯಿತೇ. ಊಟ ಮಾಡಿದರೆ ಅದು ಜೀರ್ಣವಾದಾಗೆ ಆಯಿತೇ. ಜೀರ್ಣ ಆದರೆ ಎಲ್ಲಾ ರಕ್ತಗತವಾದಾಗೆ ಆಯಿತೇ. ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಹೊರಟರೆ ಈ ಪ್ರಶ್ನೆಗಳಿಗೆ ಕೊನೆಯೇ ಇಲ್ಲ ಅಂತ ಹೇಳಿ ನನಗನಿಸುತ್ತದೆ.

ವಿಶ್ವವಿದ್ಯಾಲಯಗಳಂತಹ ಮಟ್ಟದಲ್ಲಿ ಇಂತಹ ಸಮಾವೇಶಗಳನ್ನು ಸಂಘಟಿಸಿದಾಗ ಶೈಕ್ಷಣಿಕವಾಗಿರುವಂತಹ ಆಲೋಚನೆಗಳನ್ನು, ಚಿಂತನೆಗಳನ್ನು ಸಾಮಾನ್ಯ ಜನರಲ್ಲಿ ಮೂಡಿಸುವುರಂತಹ ಒಂದು ವ್ಯವಸ್ಥಿತ ಪ್ರಯತ್ನವನ್ನು ಮಾಡುತ್ತದೆ. ಮೊದಲು ಕುತೂಹಲವಿರಬೇಕು. ಅನಂತರ ವಿಶ್ಲೇಷಣೆ ಇರಬೇಕು. ಅದರ ಬಗ್ಗೆ ಚಿಂತನೆಗಳಿರಬೇಕು, ಪರಿಹಾರ ಮಾರ್ಗಗಳಿರಬೇಕು. ಕೊನೆಯದಾಗಿ ಅದರ ಕ್ರಿಯಾತ್ಮಕವಾದ ನೆಲೆಗೆ ನಾವು ತಲುಪಬೇಕು ಅಂತ ನನಗೆ ಅನಿಸುತ್ತದೆ. ಇದ್ದಕ್ಕೆ ಇದ್ದ ಹಾಗೆ ಹೊಟ್ಟೆ ಹಸಿಯುತ್ತದೆ. ಇದ್ದಕ್ಕೆ ಇದ್ದ ಹಾಗೆ ಎಲ್ಲನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು ಅಂತ ಹೇಳುವುದಕ್ಕೆ ಆಗುವುದಿಲ್ಲ. ಹಾಗೆ ತಿಂದರೆ ಅದು ಯಾವುದೋ ಕಾಯಿಲೆ, ಅಜೀರ್ಣದ ಕಾಯಿಲೆ ಇನ್ನೇನೂ ಆಗಿ ನಮ್ಮ ಆರೋಗ್ಯ ಕೆಟ್ಟು ಹೋಗುವಂತಹ ಸಾಧ್ಯತೆಗಳು ಇವೆ. ಅದರಲ್ಲೂ ಕೇವಲ ನಾಗರೀಕತೆಯ, ಸಂಸ್ಕೃತಿಯ, ಹೆಸರಿನಲ್ಲಿ ಮುಂಚೂಣಿಗೆ ಬಂದಂತಹ ಜನಾಂಗಗಳು ಸಹಸ್ರ ಸಹಸ್ರ ವರ್ಷಗಳಿಂದ ಎಲ್ಲಾ ರೀತಿಯ ಸವಲತ್ತುಗಳನ್ನು ಪಡೆಯುತ್ತಾ ತಿಂದು ಕೊಬ್ಬಿ ಬೊಜ್ಜು ಬೆಳೆಸಿ, ಬೆಳೆದಂತಹ ಪ್ರಕರಣಗಳು ನಮ್ಮ ಪುರಾಣಗಳಲ್ಲಿ, ಕಾವ್ಯಗಳಲ್ಲಿ ಮತ್ತು ಚರಿತ್ರೆಗಳಲ್ಲಿ ತುಂಬಿರುವುದನ್ನು ನಾವು ಕಾಣುತ್ತೇವೆ. ಆದರೆ ಯಾವುದೊ ಒಂದು ಅಂಚಿಗೆ ಸರಿದುಕೊಂಡು ದೊಡ್ಡವರ ಕಾಲನ್ನು ತೊಳೆಯುತ್ತಾ, ದೊಡ್ಡವರ ಕಾಲಿಗೆ ಬೆನ್ನಾಗುತ್ತಾ ಬಂದಂತಹ ಈ ಜನಾಂಗ ಅವರಿಗೆ ಸ್ವಾತಂತ್ರವಾಗಿರುವಂತಹ ಅಸ್ತಿತ್ವ, ಸ್ವಾತಂತ್ರವಾಗಿರುವಂತಹ ಮನಸ್ಸು, ಸ್ವಾತಂತ್ರವಾಗಿರುವಂತಹ ವಿಚಾರ, ಸ್ವಾತಂತ್ರ್ಯವಾಗಿರುವಂತಹ ಆಶೋತ್ತರಗಳು ಇಲ್ಲವೆ ಅಂತ ಹೇಳಿದರೆ ಬೇಕಾದಷ್ಟು ಇತ್ತು. ಆದರೆ ಅವರ ಧ್ವನಿಗೆ ಮರು ಧ್ವನಿ ಕೊಡುವಂತಹ ಜನ ಇತಿಹಾಸದಲ್ಲಿ ಪುರಾಣಗಳಲ್ಲಿ ಇರಲಿಲ್ಲ. ಯಾವುದೂ ಒಬ್ಬ ಗುಹನಂತವನು. ಯಾವುದೂ ಒಬ್ಬ ಏಕಲವ್ಯನಂತವನು. ಇನ್ನಾರೂ ಒಬ್ಬ ವಿಶ್ವಾಮಿತ್ರನಂತವನು, ತ್ರಿಶಂಕುನಂತವನು, ಅಲ್ಲಲ್ಲಿ ತಮ್ಮ ಅಭಿಪ್ರಾಯಗಳಿಗೆ ಧ್ವನಿಯನ್ನು ಕೊಡುತ್ತಾ ಬಂದಂತಹದ್ದು ಮತ್ತು ದೊಡ್ಡ ಕಾವ್ಯಗಳಲ್ಲಿ, ಪುರಾಣಗಳಲ್ಲಿ ಒಂದು ಪ್ರಶ್ನೆಯು ದೀರ್ಘವಾಗಿ ಉಳಿದುಕೊಂಡಿರುವಂತದ್ದು ನಮಗೆ ಎಲ್ಲಾ ಗೊತ್ತಿರುವಂತಹ ವಿಚಾರ.

ಸ್ವಾತಂತ್ರ್ಯ ಬಂದ ನಂತರ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಸೇರದೆ ಕಾಡು ಮೇಡುಗಳಲ್ಲಿ ಅಲೆಯುತ್ತಾ ತಮ್ಮ ಬದುಕನ್ನು ಪ್ರಾಣಿಗಳಿಗಿಂತ ಕಷ್ಟಕರ ಸ್ಥಿತಿಯಲ್ಲಿ ಸಾಗಿಸುತ್ತಾ ಬಂದಂತಹ ಈ ಅಲೆಮಾರಿ ಜನಾಂಗಗಳು, ಬುಡಕಟ್ಟು ಜನಾಂಗಗಳು ಬೇರೆ ಜನಾಂಗದ ರೀತಿಯಲ್ಲಿ ತಾವು ಹೆಗಲೆತ್ತಿ, ಕಣ್ಣೆತ್ತಿ, ನಿಂತುಕೊಳ್ಳುವಂತಹದ್ದು ಯಾವಾಗ ಅನ್ನುವ ಎಚ್ಚರ ಮೂಡಿದಾಗ ಮಾತ್ರ ನಿಜವಾದ ಅವರ ಜಾಗೃತಿ ಆರಂಭವಾಗುತ್ತದೆ. ಇದಕ್ಕೆ ಸಮಾಜದಲ್ಲಿ ಸುತ್ತಮುತ್ತಲಿನ ಚೌಕಟ್ಟನ್ನು ನಿರ್ಮಿಸಿರುವಂತಹ ಜನಾಂಗ ಅವರನ್ನು ಎಚ್ಚರಿವುಸುದಕ್ಕೆ ಅವರ ಪ್ರಜ್ಞೆಯನ್ನು ವಿಕಾಸಗೊಳಿಸುವುದಕ್ಕೆ ಮತ್ತು ಅವರಿಗೆ ಇರುವಂತಹ ಸಮಸ್ಯೆಗಳನ್ನು ಅವರೇ ತಿಳಿದುಕೊಳ್ಳುವುದಕ್ಕೆ ನಾವು ಪ್ರಯತ್ನ ಮಾಡಬೇಕಾದ ಅಗತ್ಯ ಇದೆ ಅಂತ ಅನ್ನಿಸುತ್ತದೆ. ಎಷ್ಟೋ ಸಾರಿ ಅಂಗವಿಕಲ ಮಕ್ಕಳನ್ನು ನಾವು ಹೆಗಲ ಮೇಲೆ ಕೂಡಿಸಿಕೊಂಡೆ ಹೋಗುತ್ತಿರುತ್ತೇವೆ. ಅಲ್ಲಿಯವರೆಗೆ ಅವರಿಗೆ ತಾವೇ ಸ್ವತಂತ್ರವಾಗಿ ನಡೆಯಬೇಕು, ನಡೆಯುವುದನ್ನು ಕಲಿಯಬೇಕು ಅನ್ನುವಂತಹ ಪ್ರಜ್ಞೆ ಬರುವುದಿಲ್ಲ. ಜೊತೆಗೆ ನಾವು ಎತ್ತಿಕೊಳ್ಳಬೇಕು, ಇಳಿಸಬೇಕು, ಅವರೇ ಹೆಜ್ಜೆ ಇಡುವ ಹಾಗೆ ಮಾಡಬೇಕು. ಯಾವ ಹೆಜ್ಜೆಯನ್ನು ಮುಂದಕ್ಕೆ ಇಟ್ಟು, ಯಾವ ಹೆಜ್ಜೆಯನ್ನು ಹಿಂದಕ್ಕೆ ಇಡಬೇಕು ಮುಂದಕ್ಕೆ ದಾರಿಯನ್ನು ಕ್ರಮಿಸುವಂತಹ ಬಗೆ ಹೇಗೆ? ಅನ್ನುವಂತಹ ಸ್ವಯಂ ಪ್ರಜ್ಞೆಯನ್ನು ಮೂಡಿಸಬೇಕಾದದ್ದು ತೀರಾ ಅಗತ್ಯ ಅನ್ನಿಸುತ್ತದೆ. ಎಷ್ಟೋ ಸಾರಿ ಹೇಳುತ್ತೇವೆ. ಇಲ್ಲಿರುವಂತಹ ಎಲ್ಲರಿಗೂ ಅಥವಾ ಅಲೆಮಾರಿ ಜನಾಂಗದವರಿಗೆ ಶಿಷ್ಯವೇತನ ಕೊಟ್ರೆ ಶಿಕ್ಷಣವನ್ನು ಕಲಿಯುವುದಕ್ಕೆ ಸಾಧ್ಯವಿಲ್ಲವೆ? ಹಾಗೆ ಇಲ್ಲಿರುವಂತಹ ಎಲ್ಲರಿಗೂ ಮನೆಗಳನ್ನು ಕಟ್ಟಿ ಕೊಟ್ಟರೆ ಶಿಕ್ಷಣವನ್ನು ಕಲಿಯುವುದಕ್ಕೆ ಸಾಧ್ಯವಿಲ್ಲವೆ? ಹಾಗೆ ಇಲ್ಲಿರುವಂತಹ ಎಲ್ಲರಿಗೂ ಮನೆಗಳನ್ನು ಕಟ್ಟಿಕೊಟ್ಟರೆ ಅವರ ವಸತಿ ಸಮಸ್ಯೆ ಬಗೆ ಹರಿಯುವುದಿಲ್ಲವೆ? ಎಲ್ಲರಿಗೂ ಬಾವಿಗಳನ್ನು ತೋಡಿಸಿಕೊಟ್ಟರೆ ಅವರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುವುದಿಲ್ಲವೆ? ಇವು ಎಲ್ಲವು ಬಗೆ ಹರಿಯಲೇಬೇಕಾದಂತಹ ಸಮಸ್ಯೆಗಳು. ಸಮಾಜ ಒಂದು ಕಡೆಯಿಂದ ಒತ್ತಾಸೆಯನ್ನು ಕೊಡುತ್ತಾ, ಆ ಸಮಸ್ಯೆಗಳ ಬಗೆ ಹರಿಯುವಿಕೆಗೆ ಸಹಾಯವನ್ನು ಮಾಡಬೇಕೆ ಹೊರತು ಪೂರ್ಣ ನಾವೇ ಮಾಡಬಾರದು. ನಮಗೆ ಆಹಾರ ರುಚಿಸಬೇಕು ಅಂದ್ರೆ ನಮ್ಮ ಬಾಯಿಯಲ್ಲಿ ಹಾಕಿಕೊಂಡಂತಹ ಆಹಾರವನ್ನು ನಾವೇ ಅಗೆದು, ನುಂಗಿ ಜೀರ್ಣಿಸಿಕೊಂಡಾಗ ಮಾತ್ರ ತಿಂದ ಆಹಾರ ಮೈಗೆ ಹತ್ತುತ್ತದೆ.

ನಾನು ಮೊದಲೆ ಹೇಳಿದ ಹಾಗೆ ಇದ್ದಕ್ಕೆ ಇದ್ದಹಾಗೆ ಅವುಗಳನ್ನೆಲ್ಲ ಒಂದು ದೊಡ್ಡ ಪಾಕೇಟ್‌ನಲ್ಲಿ ಇಟ್ಟು ಅಥವಾ ಜೀರ್ಣ ಮಾಡಿ ವಿಟಮಿನ್‌ಗಳನ್ನು ನುಂಗಿಸಿ ಬಿಟ್ಟರೆ ನಾವು ವಿಟಮಿನ್‌ಮಾತ್ರೆಯನ್ನು ನುಂಗಿಕೊಂಡು ಎಷ್ಟು ಕಾಲ ಬದುಕುವುದಕ್ಕೆ ಆಗುತ್ತದೆ ಅನ್ನುವುದನ್ನು ನಾವು ಆಲೋಚನೆ ಮಾಡಬೇಕಾಗುತ್ತದೆ ನಾನು ಯಾಕೆ ಈ ಮಾತನ್ನು ಹೇಳಿತ್ತಿದ್ದೇನೆ ಅಂದ್ರೆ, ಸರಕಾರ ಪ್ರಗತಿಶೀಲದ ಕಡೆಗೆ ಮುಖವನ್ನು ಹಾಕಿ ದಮನಿತವಾಗಿರುವಂತಹ, ಜನಾಂಗಗಳಿಗೆ ಸವಲತ್ತುಗಳನ್ನು ಕೊಡಬೇಕು ಅಂತ ಅಲ್ಲ. ಸವಲತ್ತುಗಳನ್ನು ಕೊಡುವ ಜೊತೆಯಲ್ಲಿಯೇ ಆ ಸವಲತ್ತುಗಳನ್ನು ಊರ್ಜಿತವಾಗಿ ಬಳಸಿಕೊಳ್ಳುವಂತಹ ಸೌಲಭ್ಯಗಳನ್ನು, ಕಸಿದುಕೊಳ್ಳುವಂತಹ ಜನಗಳನ್ನು, ಎಚ್ಚರಿಸುವಂತಹ ಎದೆಗಾರಿಕೆಯನ್ನು ಏಕಕಾಲದಲ್ಲಿ ನಾವು ಪಡೆದುಕೊಳ್ಳಬೇಕಾದ, ಕೊಡಬೇಕಾದ ಅಗತ್ಯ ಇದೆ. ನಾವು ಕೈಯಲ್ಲಿ ಆಹಾರ ಇದ್ರು ಸಾಲದು ಆಹಾರವನ್ನು ತಿಂದು ಜೀರ್ಣಿಸಿಕೊಳ್ಳುವಂತಹ ಶಕ್ತಿ ನಮಗೆ ಬಂದಾಗ ಮಾತ್ರ ಆಹಾರಕ್ಕೆ ಬೆಲೆ ಬರುತ್ತದೆ. ಮತ್ತೆ ಜೀರ್ಣಾಂಗಗಳಿಗೆ ಕೂಡ ಬೆಲೆ ಬರುತ್ತದೆ ಅಂತ ನಾನು ಅಂದುಕೊಂಡಿದ್ದೇನೆ.

ನಮ್ಮ ಅಲೆಮಾರಿಗಳ ಸಮಸ್ಯೆಗಳು ಬಹಳಷ್ಟು ಮುಖವಾಗಿದ್ದಾವೆ. ನಾವು ಇನ್ನೂ ಪುರಾಣದಲ್ಲಿ ಇದ್ದಂತಹ ಅಲೆಮಾರಿಗಳು. ಮಹಾಕಾವ್ಯಗಳಲ್ಲಿ ಇರುವಂತಹ ಅಲೆಮಾರಿಗಳು, ಜನಪದರಲ್ಲಿರುವಂತಹ ಅಲೆಮಾರಿಗಳು, ಮತ್ತೆ ಚರಿತ್ರೆ ಪುಟಗಳಲ್ಲಿ ಚದುರಿ ಹೋಗಿರುವಂತಹ ಅಲೆಮಾರಿಗಳು, ಇವುಗಳನ್ನು ಸಂಪೂರ್ಣವಾಗಿ ಗುರುತಿಸಲಾಗದಂತಹ ಸ್ಥಿತಿಯಲ್ಲಿ ನಾವು ಇದ್ದೇವೆ. ಅಲ್ಲೊಂದು, ಇಲ್ಲೊಂದು ವಿಶ್ವವಿದ್ಯಾಲಯಗಳಲ್ಲಿ ಅಥವಾ ವೈಯುಕ್ತಿಕವಾಗಿರುವಂತಹ ವಿದ್ವಾಂಸರು ಈ ಬಗ್ಗೆ ಪ್ರಯತ್ನಪಟ್ಟಿದ್ದರೂ ಕೂಡ, ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಕ್ಷೇತ್ರಕಾರ್ಯ ಆಗಬೇಕು ಅನ್ನುವಂತಹ ಅಗತ್ಯ ಇದೆ. ಅಂತ ನಾನು ಅಂದುಕೊಂಡಿದ್ದೆನೆ. ಈ ಅಲೆಮಾರಿಗಳ ಸಾಹಿತ್ಯ ಸಂಗ್ರಹವನ್ನು, ನಾನು ನೇರವಾಗಿ ಅಲ್ಲಿಗೆ ಬರುತ್ತಿದ್ದೇನೆ. ಬದುಕು ಇದ್ದರೆ ಅಲ್ಲವೆ ಸಾಹಿತ್ಯ? ಅಂತ ಯಾರಾದರೂ ಕೇಳ ಬಹುದು. ಸಾಹಿತ್ಯ, ಕಲೆ, ಬದುಕು, ಸಂಸ್ಕೃತಿ ಇವೆಲ್ಲ ಅವಿಭಾಜ್ಯವಾಗಿರುವಂತಹ ಅಂಗಗಳು ಅಂತ ನಾನು ಅಂದುಕೊಳ್ಳುತ್ತೇನೆ. ನಾವು ತಿನ್ನುವ ಕಾಲಕ್ಕೆ ಬಾಯಿ ಕೈ ಎರಡು ಇದ್ದರೆ ಸಾಕು ಅಂತ ಕಾಣಿಸುತ್ತದೆ. ಕಾಲಿನ ಅಗತ್ಯ ಇರುವುದಿಲ್ಲ. ಆದರೆ ಸದಾ ಕಾಲು, ಕೈ ಬಾಯಿಗಳನ್ನು ಬಳಸೆ ನಾವು ಬದುಕುವುದಕ್ಕೆ ಆಗುವುದಿಲ್ಲ ಅನ್ನುವುದನ್ನು ನಾವು ಎಚ್ಚರಿಕೆಯಿಂದ ಗಮನಿಸಬೇಕಾದಂತಹ ಅಗತ್ಯ ಇದೆ ಅಂತ ನಾನು ಅಂದುಕೊಳ್ಳುತ್ತೇನೆ. ಇದಕ್ಕೆ ಒಂದು, ಎರಡು, ಮೂರು ಅಂಶಗಳನ್ನು ಮಾತ್ರ ಹೇಳುತ್ತೇನೆ. ಈ ಅಲೆಮಾರಿಗಳ ಭಾಷೆಗಳನ್ನು ಕುರಿತಾದಂತಹ ಸಮಗ್ರವಾದ ಅಧ್ಯಯನ ಕೂಡ ಎಲ್ಲಿಯೂ ಆಗಿಲ್ಲ. ಕೆಲವರು ಕನ್ನಡ ಮಾತನಾಡಬಹುದು. ಕೆಲವರು ತಮಿಳು ಮಾತನಾಡಬಹುದು. ಇನ್ನೂ ಕೆಲವರು ತೆಲುಗು ಮಾತನಾಡಬಹುದು. ಮತ್ತೆ ಕೆಲವರು ತೆಲುಗು – ಕನ್ನಡ, ತೆಲುಗು, ಮರಾಠಿ ಮಿಶ್ರಿತ ಭಾಷೆ ಮಾತನಾಡಬಹುದು. ಹೀಗೆ ಬೇರೆ ಬೇರೆ ಮಿಶ್ರ ಭಾಷೆಗಳನ್ನು ಅವರು ಅಲ್ಲಿ ಯಾವ ಪ್ರದೇಶದಲ್ಲಿ ಇರುತ್ತಾರೆ, ಅಲ್ಲಿನ ಎಲ್ಲಾ ಭಾಷೆಗಳ ವಿಶಿಷ್ಟವಾಗಿರುವಂತಹ, ಅವರ ವೃತ್ತಿಗೆ, ಬದುಕಿಗೆ ಸಂಬಂಧಿಸಿದಂತಹ ಪದಗಳನ್ನು ಅವರು ಜೋಡಿಸಿಕೊಳ್ಳುತ್ತಾ, ಒಂದು ವಿಶಿಷ್ಟವಾದ ಭಾಷೆಯನ್ನು ಅವರು ರೂಪಿಸುತ್ತಾ ಹೋಗುತ್ತಾರೆ. ಹೀಗಾಗಿ ಈ ಅಲೆಮಾರಿಗಳ ವಿಶಿಷ್ಟವಾಗಿರುವಂತಹ ಉಪ ಭಾಷೆಗಳನ್ನು ಉಳಿದ ಭಾಷೆಗಳ ಚೌಕಟ್ಟಿನೊಳಗೆ ಪರಿಶೀಲಿಸುವ, ಸಂರಚಿಸುವ ಜೊತೆಗೆ ಅವುಗಳನ್ನು ವಿಶ್ಲೇಷಣೆ ಮಾಡುವಂತಹ ಕೆಲಸಗಳನ್ನು ನಾವು ಮಾಡಬೇಕಾಗಿದೆ. ಅಂತಹ ಕೆಲಸ ಇನ್ನೂ ಕೂಡ ಆಗಿಲ್ಲ. ಅಲೆಮಾರಿಗಳ ಉಪ ಭಾಷಾಕೋಶವೊಂದನ್ನು ಅಥವಾ ಸಮೀಕ್ಷೆಯನ್ನೂ ಸಹ ನಾವಿನ್ನೂ ಸಿದ್ಧ ಮಾಡಿಲ್ಲ ಅಂತ ಅನಿಸುತ್ತದೆ. ಸಂಸ್ಕೃತಿಯ ಬಗ್ಗೆ ಬಹಳಷ್ಟು ಮಾತನಾಡುತ್ತೇವೆ. ಸುಮಾರು ನಮ್ಮಲ್ಲಿ ಐವತ್ತು ಅರವತ್ತು ಬುಡಕಟ್ಟುಗಳು ಇದ್ರೆ ಭಾರತದಲ್ಲಿ ನೂರಾರು ಬುಡಕಟ್ಟುಗಳು ಇವೆ. ನಮ್ಮ ಕರ್ನಾಟಕದಂತಹ ರಾಜ್ಯದಲ್ಲಿಯೆ ನಲವತ್ತು ಐವತ್ತು ಬುಡಕಟ್ಟುಗಳ ಸಮಗ್ರವಾಗಿರುವಂತಹ ಸಂಸ್ಕೃತಿಯ ವಿಶ್ಲೇಷಣೆಯನ್ನು, ಸಮೀಕ್ಷೆಯನ್ನು ನಾವು ಮಾಡಿಲ್ಲ ಅಂತ ಹೇಳಬಹುದು. ಒಂದೇ ಕಲೆಯನ್ನು ಎರಡು ಜನಾಂಗಗಳು ಪ್ರದರ್ಶನ ಮಾಡುವಂತಹ ಸಂದರ್ಭದಲ್ಲಿ ಅವುಗಳನ್ನು ಜನಕ್ಕೆ ತೋರಿಸುವಂತಹ ಸಂದರ್ಭದಲ್ಲಿ ವಿಶಿಷ್ಟವಾಗಿರುವಂತಹ ವ್ಯತ್ಯಾಸಗಳನ್ನು ಅದು ಹೆಜ್ಜೆ, ಗತ್ತು, ರಾಗ, ತಾಳ ಆಗಿರಬಹುದು ಅಥವಾ ಅದರ ಅಭಿವ್ಯಕ್ತಿ ಕ್ರಮದಲ್ಲಿ ಆಗಿರಬಹುದು. ಬೇರೆ ಬೇರೆ ರೀತಿಯ ವಿನ್ಯಾಸಗಳು ಕಂಡುಬರುತ್ತವೆ. ಈ ಸೂಕ್ಷ್ಮವಾಗಿರುವಂತಹ ವಿನ್ಯಾಸಗಳನ್ನು ಕೂಡ ನಾವು ಗಮನಿಸಬೇಕಾಗಿ ಬರುತ್ತದೆ. ಬೇರೆ ಬೇರೆಯಾಗಿ ದಾಖಲು ಮಾಡಬೇಕಾಗಿ ಬರುತ್ತದೆ. ಅಂದರೆ ಸೂಕ್ಷ್ಮವಾದ ಅಧ್ಯಯನ ನಾವು ಕೈಗೊಳ್ಳಬೇಕಾದಂತಹ ಅಗತ್ಯ ಇದೆ ಅಂತ ಹೇಳಿ ನನಗೆ ಅನಿಸುತ್ತದೆ. ಹಾಗೆ ಕಲೆಗಳ ಬಗ್ಗೆ ಕೂಡ ಮಾತಾಡುವಾಗ ಒಂದೊಂದು ಪ್ರದೇಶದಲ್ಲಿ ಒಂದೇ ಅಲೆಮಾರಿ ಜನಾಂಗ ಬದುಕುತ್ತಿದ್ದಾಗ ಆ ಪ್ರದೇಶದ ವೈಶಿಷ್ಟಗಳನ್ನು ಆ ಕಲೆಗಳಲ್ಲಿ ಮೈಗೂಡಿಸಿಕೊಂಡಿರುತ್ತದೆ ಅಥವಾ ಕೆಲವು ಸಂದರ್ಭದಲ್ಲಿ ವಿಕಾಸಗೊಳಿಸುತ್ತದೆ, ಮತ್ತೆ ಕೆಲವು ಸಂದರ್ಭದಲ್ಲಿ ಸಂಕುಚಿತಗೊಳಿಸುವಂತದ್ದು ಉಂಟು. ಇದಕ್ಕೆ ಕಾರಣವೇನು ಪ್ರಾದೇಶಿಕವಾಗಿರುವಂತಹ ಒತ್ತಡವೇ, ತಿರುಗಿದಂತ ಜಾಗದ ಪರಿಣಾಮವೇ ಇತ್ಯಾದಿಗಳನ್ನು ಗಮನಿಸುವಂತಹ ಅಗತ್ಯ ನಮಗೆ ಇದೆ ಅಂತ ಕಾಣಿಸುತ್ತೆ. ಜೊತೆಗೆ ಬದುಕಿಗೆ ವೃತ್ತಿ ಬಹಳ ಮುಖ್ಯವಾಗಿರುವಂತದ್ದು. ಅದು ಬೇಟೆಯ ವೃತ್ತಿ ಆಗಿರಬಹುದು. ಹಕ್ಕುಗಳನ್ನು ಹಿಡಿಯುವಂತದ್ದು ಆಗಿರಬಹುದು. ತೊಗಲುಗೊಂಬೆ ಆಡಿಸುವಂತದ್ದು ಆಗಿರಬಹುದು, ಬುಡಬುಡುಕಿ ಮಾಡುವಂತದ್ದು ಆಗಿರಬಹುದು. ಹೀಗೆ ನೂರಾರು ರೀತಿಯ ವೃತ್ತಿಗಳು ಇವೆ. ಒಂದೊಂದು ವೃತ್ತಿ ಒಂದೊಂದು ಜನಾಂಗಕ್ಕೆ ಏಕೆ ಪ್ರಧಾನವಾಯ್ತು? ಅನ್ನುವುದನ್ನು ನಾವು ಆಲೋಚನೆ ಮಾಡಬೇಕು ಈ ವೃತ್ತಿಯಿಂದ ಇವರ ಬದುಕು ಎಷ್ಟರಮಟ್ಟಿಗೆ ಪರಿಪೂರ್ಣವಾಗಲಿಕ್ಕೆ ಸಾಧ್ಯ. ಹಾಗೆಯೇ ಸಾಮಾನ್ಯವಾಗಿರುವಂತಹ ಆಮೆಯ ವೇಗ ನಡೆಯುತ್ತ ಹೋದರೆ ಬದುಕು ಸಂಪೂರ್ಣಗೊಳ್ಳುವುದು ಯಾವಾಗ? ಉಳಿದ ನಾಗರಿಕರ ಜೊತೆಯಲ್ಲಿ ಸರಿಸಮಾನರಾಗಿ ಇವರು ಬದುಕುವುದು ಹೇಗೆ? ಅನ್ನುವಂತಹ ಆಲೋಚನೆ ನಮಗೆ ಬರಬೇಕು. ನಾನು ಯಾಕೆ ಇದನ್ನೆಲ್ಲ ಹೇಳುತ್ತಿದ್ದೇನೆ ಎಂದರೆ ಅತ್ಯಂತ ನಿಧಾನವಾಗಿ ನಾವು ಮಾಡ್ತಾ ಕುಳಿತುಕೊಂಡರೆ ಮನುಷ್ಯನ ಬದುಕು ಸಾವಿರಾರು ವರ್ಷ ಇಲ್ಲ. ಈ ನಮ್ಮ ಬದುಕಿನಲ್ಲಿ ಎಪ್ಪತ್ತು, ಎಂಬತ್ತು, ನೂರು ವರ್ಷಗಳಲ್ಲಿ ಎಷ್ಟೂ ಸಮೀಕ್ಷೆಗಳನ್ನು ಮಾಡಿ ಮುಗಿಸಬೇಕಾಗುತ್ತದೆ. ಐವತ್ತು ಅರವತ್ತು ವರ್ಷಗಳು ಮುಗಿದರೂ ಕೂಡ ಇಡೀ ಭಾರತದಲ್ಲಿ ಅಷ್ಟೇ ಏಕೆ? ನಮ್ಮ ಕರ್ನಾಟಕದಲ್ಲಿ ರಾಜ್ಯೋತ್ಸವ ಆದನಂತರ ಐವತ್ತು ವರ್ಷ ಕಳೆದಿದೆ. ಇಪ್ಪತ್ತೆರಡು ಜಿಲ್ಲೆಗಳಿವೆ. ಹಿಂದೆ ಬಹಳ ಕಡಿಮೆ ಇದ್ದವು. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ವರ್ಷ ಆಯ್ದುಕೊಂಡು ಆ ಜಿಲ್ಲೆಯಲ್ಲಿರುವಂತಹ ಒಂದೊಂದು ಅಲೆಮಾರಿಗಳ ಸಮೀಕ್ಷೆಯನ್ನು ಒಂದೊಂದು ವಿಶ್ವವಿದ್ಯಾನಿಲಯಕ್ಕೆ, ಒಂದು ಸ್ವಯಂಸೇವಾ ಸಂಸ್ಥೆಗೆ, ಒಂದೊಂದು ವಿದ್ವಾಂಸರ ತಂಡಕ್ಕೆ, ಒಂದೊಂದು ಕ್ರೀಯಾಶಾಲಿತ್ವವನ್ನು ಪಡೆದುಕೊಂಡಿರುವಂತಹ ಸಂಘಗಳಿಗೆ ಒಪ್ಪಿಸಿದರೆ ಒಂದು ವರ್ಷದಲ್ಲಿ ಅವುಗಳ ಹೆಚ್ಚಿನ ಸಮೀಕ್ಷೆ ಸಾಧ್ಯವಾಗುತ್ತದೆ. ಇರುವ ವಿಚಾರಗಳನ್ನು ದಾಖಲು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹೀಗೆ ಹತ್ತು ಹದಿನೈದು ವರ್ಷಗಳಲ್ಲಿ ಅಂದರೆ ಪ್ರತ್ಯೇಕ ಪ್ರತ್ಯೇಕವಾಗಿ ಕೆಲಸಗಳನ್ನು ಹಂಚಿ ಅವರಿಗೆ ಸಾಕಷ್ಟು ಸಾರಿಗೆಯ, ಧನದ ಎಲ್ಲಕ್ಕಿಂತ ಹೆಚ್ಚಾಗಿ ಉತ್ಸಾಹದ ಮೂಲ ಧನ, ನಮಗೆ ಬೇಕಾಗುತ್ತದೆ. ಅದನ್ನು ಕೊಟ್ಟಾಗ ಬಹಳ ಇಂತಹ ಸಮೀಕ್ಷೆಗಳ ಕಾರ್ಯ ಸಾಧ್ಯವಾಗುತ್ತದೆ ಅಂತ ಅನ್ನಿಸುತ್ತದೆ. ಜೊತೆಗೆ ಇಂತಹ ಸಮೀಕ್ಷೆಗಳನ್ನು ಮಾಡುತ್ತಾ ಮಾಡುತ್ತಾ ನಂತರ ಎರಡು ಮೂರು ವರ್ಷಗಳಲ್ಲಿ ಏನು ಬದಲಾವಣೆ ಆಗಿದೆ. ಅದು ನಾಗರೀಕತೆಯ ಪ್ರಭಾವ ಇರಬಹುದು, ಇನ್ನಾವುದೂ ಹೊರಗಡೆಯಿಂದ ಬಂದಂತಹ ಜನಗಳ ಪ್ರಭಾವ ಇರಬಹುದು, ಇನ್ನಾವುದೂ ಹೊರಗಡೆಯಿಂದ ಬಂದಂತಹ ಜನಗಳ ಪ್ರಭಾವ ಆಗಿರಬಹುದು. ಇವೆಲ್ಲದರ ಪ್ರಭಾವದಿಂದ ಯಾವುದೂ ಒಂದು ಕಲೆಯ ಮೇಲೆ, ಭಾಷೆಯ ಮೇಲೆ, ಅವರ ವೇಷಭೂಷಣಗಳ ಮೇಲೆ, ಅವರ ಮಾತಿನ ಮೇಲೆ, ನಡೆನುಡಿಯ ಮೇಲೆ ಎಂತಹ ಪ್ರಭಾವಗಳಾಗಿವೆ ಅನ್ನುವುದನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸುತ್ತ ಹೋಗಬೇಕಾಗುತ್ತದೆ. ಅದಕ್ಕೆ ಈ ವೃತ್ತಿಗಳ ಅಭ್ಯಾಸವನ್ನು ಮಾಡುತ್ತಾ ಮಾಡುತ್ತಾ ಈ ವೃತ್ತಿಗೂ ಬದುಕಿಗೂ ಇರುವಂತಹ ನಂಟಸ್ತಿಕೆಯನ್ನು ಮಾತ್ರ ವಿಶ್ಲೇಷಣೆ ಮಾಡುತ್ತಾ ಯಾವ ವೃತ್ತಿ ಇವರಿಗೆ ಹೆಚ್ಚು ಬದುಕನ್ನು ಕೊಡಬಲ್ಲದು, ಆಹಾರವನ್ನು ಕೊಡಬಲ್ಲದು, ನೆಮ್ಮದಿಯನ್ನು ಕೊಡಬಲ್ಲದು ಅನ್ನುವಂತಹದ್ದನ್ನು ನಾವು ಆಲೋಚನೆ ಮಾಡಬೇಕಾಗಿ ಬರುತ್ತದೆ. ಯಾವುದೋ ಒಂದು ವೃತ್ತಿ ಬಹಳ ಬೇಗ ಲಾಭವನ್ನು ಕೊಡುತ್ತದೆ ನಿಜ. ಆದರೆ ಇನ್ನೊಂದು ವೃತ್ತಿ ಅನ್ನುವಂತಹದ್ದು, ಈ ತಾತ್ಕಾಲಿಕ ಲಾಭದ ಜೊತೆಗೆ ಮಾನಸಿಕವಾದ ಲಾಭವನ್ನು ಅದು ಕೊಡುತ್ತಾ ಹೋಗುತ್ತದೆ ಅನ್ನುವದನ್ನು ಗಮನಿಸುತ್ತಾ ಹೋಗಬೇಕಾಗುತ್ತದೆ.

ಸಂಗೀತವನ್ನು ಹೇಳಿದರೆ ಹೆಚ್ಚೇನು ದುಡ್ಡು ಬರುವುದಿಲ್ಲ ನಿಜ. ಆದರೆ ಇನ್ನೊಂದು ಕೆಲಸವನ್ನು ಮಾಡುತ್ತಲೇ ತಾಳಗಳನ್ನು ಹಾಕುತ್ತ, ರಾಗಗಳನ್ನು ಹಾಡುತ್ತಾ ಹೋದರೆ ಏಕಕಾಲದಲ್ಲಿ ಕಲೆ ಮತ್ತು ವೃತ್ತಿ ಎರಡು ಒಂದಕ್ಕೊಂದು ಸಂಯೋಜನೆ ಹೊಂದುತ್ತಾ ಹೋಗುತ್ತದೆ. ನಮ್ಮ ದೇಶದಲ್ಲಿ ಈ ವೃತ್ತಿಗೂ ಮತ್ತು ಕಲೆಗೂ ಅವಿನಾಭಾವವಾಗಿರ ತಕ್ಕಂತಹ ಸಂಬಂಧ ಇದೆ ಅಂತ ಬಾವಿಸುತ್ತಾರೆ. ಅದು ಅವೆರಡನ್ನು ಕೂಡ ಜೊತೆ ಜೊತೆಯಲ್ಲೆ ನಾವು ಗಮನಿಸುತ್ತ ಹೋಗಬೇಕಾದ ಅಗತ್ಯ ಇದೆ. ಎಷ್ಟೋ ಸಾರಿ (ಆ ವೃತ್ತಿಗೆ) ಬೇಟೆಯಾಡತಕ್ಕಂತದ್ದು ಕೆಟ್ಟದ್ದು ಅಂತ ಕೆಲವರು ಭಾವಿಸಿಕೊಳ್ಳುತ್ತಾರೆ. ಇನ್ನೇನೊ ತೊಗಲುಗೊಂಬೆಗೆ ಬಣ್ಣ ಹಾಕ್ತಕ್ಕಂತದ್ದು ಕೆಟ್ಟದ್ದು ಅಂತ ಭಾವಿಸುತ್ತಾರೆ. ಮೀನನ್ನು ಹಿಡತಕ್ಕಂತದ್ದು ಕೆಟ್ಟದ್ದು, ಒಂದು ಘನತೆ ಅನ್ನುವಂತಹ ಮನೋಭಾವನೆ ಬರಬೇಕು. ವೃತ್ತಿಗೆ ಘನತೆಯನ್ನು ನಾವು ತಂದುಕೊಡದಿದ್ದರೆ ಅಲೆಮಾರಿಗಳ ಬದುಕಿನ ಅಥವಾ ಅಲೆಮಾರಿಗಳ ವೃತ್ತಿಗೆ ಒಂದು ಹಿರಿಮೆ ಬರುವುದಿಲ್ಲ ಹೌದು ನಾನು ಇದನ್ನು ಬರಿತೇನೆ. ಅತ್ಯಂತ ಸಂತೋಷದಿಂದ ಬರಿತೇನೆ. ನಾನು ಓದುತ್ತೇನೆ. ಅತ್ಯಂತ ಸಂತೋಷದಿಂದ ಓದುತ್ತೇನೆ. ನಾನು ಬೇರೆ ಇನ್ಯಾವುದೋ ಕಸುಬನ್ನು ಕಲಿಯುತ್ತೇನೆ. ಅಂದರೆ ತುಂಬ ಬಲವಂತದಿಂದ ನಾವು ಯಾವುದನ್ನು ಕೂಡ ಕಲಿಸುವುದಕ್ಕೆ ಆಗುವುದಿಲ್ಲ. ಆ ಕಲಿಯುವ ಪ್ರಕ್ರಿಯೆಯನ್ನು, ಕಲಿಯುವ ಪ್ರವೃತ್ತಿಯನ್ನು ಅವರ ಮನಸ್ಸಿನಲ್ಲಿ ದಟ್ಟವಾಗಿ ಜೀವಂತವಾಗಿ ಮೂಡಿಸಿದಾಗ ಮಾತ್ರ ಅವರ ಕಲೆಗೆ, ಅವರ ವೃತ್ತಿಗೆ ಹೆಚ್ಚು ವ್ಯಾಪ್ತಿ ಬರುತ್ತದೆ ಅಂತ ನಾನು ಅಂದುಕೊಂಡಿದ್ದೇನೆ.

ಹಾಗೆಯೇ ಅವರ ಆಚರಣೆ, ಸಂಪ್ರದಾಯ ಇತ್ಯಾದಿಗಳು ಆಚರಣೆಯಲ್ಲಿ ಬಾಯಿಗೆ ಬೀಗ ಹಾಕಿಕೊಳ್ಳುತ್ತಾನೆ. ಬಾಯಿ ಬೀಗ ಮುಂದುವರಿಸಿಕೊಂಡು ಹೋಗುವುದಲ್ಲ. ಬಾಯಿಗೆ ಬೀಗ ಹಾಕುವಂತಹ ಸಂದರ್ಭದಲ್ಲಿ ಆ ದಬ್ಬಳ(ಣ)ವನ್ನು ಚುಚ್ಚುವಂತ ಸಂದರ್ಭದಲ್ಲಿ ಆ ನೋವನ್ನ ಹ್ಯಾಗೆ ಇವರಿಗೆ ತಡೆದುಕೊಳ್ಳಲಿಕ್ಕೆ ಸಾಧ್ಯ ಆಯಿತು. ತಡಕೊಳ್ಳೋಕೆ ಸಾಧ್ಯ ಆಗಿರತಕ್ಕಂತ ಮಾನಸಿಕ ಸ್ಥೈರ್ಯವನ್ನು, ಮನೋಧರ್ಮವನ್ನು ಯಾವುದು ಯಾವ ಪರಿಸರ ತಂದುಕೊಟ್ಟಿದೆ ಅನ್ನೋದರ ಬಗ್ಗೆ ನಾವು ಆಲೋಚನೆ ಮಾಡಬೇಕು. ಆದರೆ ಈ ಬಾಯಿ ಬೀಗ ಚುಚ್ಚುವುದಾಗಲಿ ಇನ್ಯಾವುದೋ ಆಗಲಿ ಬೀಸೋ ಕೋಲು ಹೊಡೆದುಕೊಳ್ಳು ವುದಾಗಲಿ, ಮಾರಮ್ಮನು ಚಾಟಿಯಲ್ಲಿ ಮೈ ಸುತ್ತಿಕೊಳ್ಳುವಂತದ್ದಾಗಲಿ ಇಂತಹವುಗಳು ಯಾವ ಕಾರಣದಿಂದ ಆರಂಭವಾಯಿತು ಅನ್ನೋದನ್ನು ಕೂಡ ನಾವು ಗಮನಿಸಬೇಕು. ಅಂದರೆ ಅಲ್ಲಿಯ ಸಾಮಾಜಿಕವಾಗಿರತಕ್ಕಂತ ದೈವಿಕವಾಗಿರತಕ್ಕಂತ, ನೈತಿಕವಾಗಿರತಕ್ಕಂತಹ ಕಾಳಜಿಗಳನ್ನು ನಾವು ಗುರುತಿಸುತ್ತಾ ಹೋದಾಗಲೆಲ್ಲ ಅವುಗಳು ಆಧುನಿಕ ಲೋಕಕ್ಕೆ ಸಂಗತವಲ್ಲದ್ದು ಅಂತ ನಾವು ತಿಳಿದುಕೊಂಡಾಗಲೆಲ್ಲ ಅವುಗಳು ಬಿಳಚಿಕೊಳ್ಳುತ್ತಾ ಹೋದಂತೆಲ್ಲ ಅವು ಶುದ್ಧ ವೃತ್ತಿಗಳು ಆಗುತ್ತವೆ ಎಂದು ಅನಿಸುತ್ತದೆ. ಒಂದು ಮಾತು ಹೇಳಬೇಕು. ಸರಕಾರ ಸಾಕಷ್ಟು ಹಣ ಸಹಾಯ ಮಾಡ್ತಾ ಇಲ್ಲ ಅಂತ ಅಲ್ಲ. ಆದರೆ ಏಕರೂಪದ ಮನೆಗಳನ್ನು ಕೆಲವರಿಗೆ ಕಟ್ಟಿಕೊಡತಕ್ಕಂತದ್ದು ಗೊಲ್ಲರಾಗಿರಬಹುದು, ಇನ್ನೊಬ್ಬರಾಗಿರಬಹುದು. ಗೊಲ್ಲರಿಗೆ ಹಾಲು ಕರೆಯಲಿಕ್ಕೆ ಒಂದು ಜಾಗಬೇಕು. ಮೇವು ಇಟ್ಟುಕೊಳ್ಳೋದಿಕ್ಕೆ ಒಂದು ಜಾಗಬೇಕು. ದನಗಳನ್ನು ಕಟ್ಟಲಿಕ್ಕೆ ಒಂದು ಜಾಗಬೇಕು. ಕಸ ಬಳಿದು ಒಂದು ಕಡೆ ಹಾಕಲಿಕ್ಕೆ ಒಂದು ಕಡೆ ಜಾಗಬೇಕು. ಇದೆಲ್ಲವನ್ನು ಬಿಟ್ಟು ನಮ್ಮ ಸರ್ಕಾರ ಒಂದೇ ಮಾದರಿಯ ಅಂಬೇಡ್ಕರ ನಿವಾಸಗಳನ್ನು ಕಟ್ಟಿಕೊಡುತ್ತಾರೆ. ನಾನು ಎಷ್ಟೋ ಕಡೆ ನೋಡಿದ್ದೀನಿ ಆ ಮನೆಗಳಲ್ಲಿ ಹೋಗಿ ಅಲ್ಲಿ ಬೇರೆ ಕಡೆ ಮತ್ತು ಹೊರಗಡೆ ಅವರ ದನಗಳನ್ನು, ಆಡುಗಳನ್ನೂ, ಅವರು ಆಡಿಸತಕ್ಕಂತಹ ಮಂಗಗಳನ್ನೋ ಕಟ್ಟಿಕೊಂಡಿರುವುದನ್ನು ನಾವು ನೋಡಿದ್ದೇವೆ. ಅಂದರೆ ಮನೆ ಅನ್ನುವ ಅಷ್ಟೆ ಕಲ್ಪನೆ ಇದೆಯೇ ಹೊರತು ಅವರಿಗೆ ಬೇಕಾದ ಮನೆ ಯಾವುದು ಅಂತ ನಾವು ಆಲೋಚನೆ ಮಾಡುವುದಿಲ್ಲ ಅಂತ ಅನಿಸುತ್ತದೆ.

ಹೀಗೆ ಅವರ ಬದುಕು ಪರಿಸರವನ್ನು ಅವರ ವೃತ್ತಿಗೆ ಸಂಬಂಧಿಸಿದ ಪರಿಸರವನ್ನು ನಾವು ಕಲ್ಪಿಸಿಕೊಡಬೇಕಾದಂತ ಅಗತ್ಯ ಇದೆ. ಹಾಗಾಗಿ ಆರ್ಕೆಟೆಕ್ಟ್ ಅಂತ ನೀವು ಏನ್ ಹೇಳ್ತಿರೋ, ವಸತಿಗಳನ್ನು ನಿರ್ಮಾಣ ಮಾಡತಕ್ಕಂತಹವರು, ವಸತಿಗಳನ್ನು ನಿರ್ಮಾಣ ಮಾಡತಕ್ಕಂತಹ ಜನ ವಿವಿಧ ವೃತ್ತಿಗಳ ಜನರ ಬದುಕನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅವರವರ ಸಂಸ್ಕೃತಿಗೆ ಅವರವರ ಮನೋಧರ್ಮಕ್ಕೆ, ಅವರವರ ವೃತ್ತಿಗೆ ಅಗತ್ಯವಾಗಿರ ತಕ್ಕಂತಹ ವಸತಿಗಳನ್ನು ಅವರಿಗೆ ತಲುಪಿಸಬೇಕಾದಂತಹ ಅಗತ್ಯ ಇದೆ. ಸುಮ್ನೆ ಮುಂದಕ್ಕೆ ಹೇಳಿಕೊಂಡು ಹೋಗುತ್ತೇವೆ ಅಷ್ಟೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಗೊತ್ತೆ ಇದೆ. ಶಿಕ್ಷಣ ಸೌಲಭ್ಯ ಅನ್ನುವಂತದ್ದು ಬೇಕು ಅಂತ. ಆಧುನಿಕವಾದ ಶಿಕ್ಷಣ ಬೇಕು ಅಂತ ನಾವು ಹೇಳ್ತೀವಿ. ಆದರೆ ಇಲ್ಲಿ ಇವರ ವೃತ್ತಿಗೆ ಪೋಷಿತವಾಗಿರತಕ್ಕಂಥ ಅಭ್ಯಾಸ ಯಾವುದು. ಕೇವಲ ಅಕ್ಷರಕ್ಕೆ ಸಾರ ಅಕ್ಷರವನ್ನು ಕಲಿಯುತಕ್ಕಂತದ್ದು ಎಷ್ಟು ಸಾರ್ಥಕತೆಯಿದೆ. ಯಾಕೆಂದರೆ ವೃತ್ತಿ ಪರವಾಗಿರತಕ್ಕಂತಹ ಅಭ್ಯಾಸ ನಮ್ಮ ಅಲೆಮಾರಿಗಳ ಅಧ್ಯಯನ, ಶಿಕ್ಷಣ ನಮ್ಮ ಅಲೆಮಾರಿಗಳಿಗೆ ಸಿಗದೆ ಹೋದಾಗ, ಕೇವಲ ಅಕ್ಷರ ಕಲಿಯುವಿಕೆಯಿಂದ ಕೇವಲ ಆ ಪುಸ್ತಕ ಓದುವಿಕೆಯಿಂದ, ಏನು ಪ್ರಯೋಜನ ಆಗುವುದಿಲ್ಲ ಅಂತ ಅನಿಸುತ್ತದೆ. ನಾವು ಕಲಿಯುವ ಓದು, ನಾವು ಅರಿಯುವ ಜ್ಞಾನ ನಮ್ಮ ಬದುಕಿಗೆ ನೇರವಾಗಿ ಸಂಬಂಧಪಟ್ಟದ್ದು ಆಗಬೇಕೆಂದು ನನಗೆ ಅನಿಸುತ್ತದೆ. ನಮ್ಮ ಅಲೆಮಾರಿಗಳ ಈ ವೇಷಭೂಷಣಗಳು ನಾಗರಿಕ ವೇಷಭೂಷಣಗಳಾಗಬೇಕೆ? ಅವರು ಕಚ್ಚೆಪಂಚೆಯನ್ನು ಬಿಟ್ಟು ಕಿತ್ತು ಹೋಗಿದ್ದ ಪ್ಯಾಂಟನ್ನು ಹಾಕಬೇಕೆ? ಎನ್ನುವುದನ್ನು ನಾವು ಆಲೋಚನೆ ಮಾಡಬೇಕಾಗಿ ಬರುತ್ತದೆ. ಅಂದರೆ ಯಾವ ವೇಷಭೂಷಣಗಳಲ್ಲಿ ಅವರು ಸಂತೋಷವನ್ನು ಕಾಣಬಲ್ಲರು. ಯಾವ ವೇಷಭೂಷಣಗಳನ್ನು ಧರಿಸಿಕೊಂಡು ಹೋಗುವಾಗ ಅವರು ಹೆಮ್ಮೆಯಿಂದ ತಲೆ ಎತ್ತಿಕೊಂಡು ಹೋಗಬಲ್ಲರು. ಎಲ್ಲಕ್ಕೂ ಮುಖ್ಯವಾಗಿ ಆತ್ಮಗೌರವವನ್ನು, ಆತ್ಮ ಪ್ರತಿಷ್ಠೆಯನ್ನು ತಂದುಕೊಡುವಂತಹ ಸಾಧನಗಳಾಗಿ ಕಂಡು ಬರುತ್ತವೆ ಅನ್ನುವುದು ಮುಖ್ಯ ಅವರ ವೇಷಭೂಷಣಗಳಾಗಿರಬಹುದು. ಅವರ ಕಸುಬುಗಳಾಗಿರಬಹುದು. ಇವೆಲ್ಲವನ್ನು ಕಾಪಾಡಬೇಕಾದಂತಹ ಅಗತ್ಯ ಇರುತ್ತದೆ. ಪರಂಪರೆಯ ವೇಷಭೂಷಣಗಳ ಮೂಲ ಸೌಂದರ್ಯವನ್ನು ಬಿಟ್ಟುಕೊಡದೆ ಆಧುನಿಕ ಕಾಲಕ್ಕೆ ಸಂಗತವಾಗುವಂತಹ, ಆಧುನಿಕ ತಂತ್ರಜ್ಞಾನ ನಮಗೆ ಕಲಿಸಬಹುದಾದಂತಹ ಸುಲಭವಾಗಿರುವಂತಹ ಈ ಉಪಕರಣಗಳನ್ನು ಅಂದರೆ ವೇಷಭೂಷಣಗಳನ್ನು ತಯಾರು ಮಾಡುವಂತದ್ದು. ಆದರೆ ಮತ್ತೆ ಆರ್ಥಿಕ ಸಹಾಯ ಸಾಕಷ್ಟು ಮಾಡುತ್ತದೆ. ಆದರೆ ಮಾಡಿದಂತಹ ದುಡ್ಡಿನಲ್ಲಿ ಮಧ್ಯವರ್ತಿಗಳು ಎಷ್ಟು ತಿನ್ನುತ್ತಾರೆ. ಅವರಿಗೆ ಎಷ್ಟು ಮುಟ್ಟುತ್ತೆ ಅನ್ನುವುದು ಮಹತ್ವ. ಏಕೆಂದರೆ ಅಲೆಮಾರಿ ಜನಾಂಗಗಳ ಒಬ್ಬೊಬ್ಬರನ್ನು ಆರಿಸಿಕೊಂಡು, ಅವರು ಬೇರೆ ಬೇರೆ ಕಡೆ ಹೋಗಿ ಅವರ ಮನೋಧರ್ಮಗಳನ್ನು ತಿಳಿದುಕೊಂಡು ಅಂದರೆ ಯಾವ ವೃತ್ತಿಗೆ ಏನು ಬೇಕು? ಅನ್ನುವಂತದನ್ನು ಎಲ್ಲಾ ಆಲೋಚನೆ ಮಾಡುತ್ತ ಅವರವರನ್ನೆ ಮಧ್ಯವರ್ತಿಗಳನ್ನಾಗಿ ಮಾಡುತ್ತಾ, ಅವರನ್ನು ಉದ್ಧಾರಕರನ್ನಾಗಿ ಮಾಡುವುದರಲ್ಲಿ ಅಗತ್ಯ ಇದೆ. ನಾವು ಯಾವುದೋ ನಗರದಿಂದ ಬಂದು ನಿಮ್ಮನ್ನು ಉದ್ಧಾರ ಮಾಡುತ್ತೇವೆ ಅಂತ ಹೇಳುವುದಕ್ಕಿಂತ ಹೆಚ್ಚಾಗಿ ಅದರೊಳಗಿನ ಜನರೆ ಅವರನ್ನು ಉದ್ಧಾರ ಮಾಡುವಂತದ್ದು ಹೆಚ್ಚು ಶ್ರೇಯಸ್ಸು. ಏಕೆಂದರೆ ನಮ್ಮ ಕೈಯನ್ನು ನಮ್ಮ ಬಾಯಿಗೆ ಹಾಕಿಕೊಳ್ಳುವಂತದ್ದು ಹೆಚ್ಚು ಸುಕ್ಷಿಮವಾಗಿರುವಂತದ್ದು. ಇನ್ನೊಬ್ಬರ ಕೈಗಳನ್ನು ನಮ್ಮ ಬಾಯಿಗೆ ಹಾಕಿಕೊಳ್ಳುವಂತದ್ದು ಸರಿಯಲ್ಲ. ಹೀಗಾಗಿ ಬ್ಯಾಂಕಿಂಗ್, ಸಹಕಾರ ಸಂಘ ಮತ್ತೆ ಸರಕಾರ ಉಳಿತಾಯದ ಅಂಶಗಳು ಇತ್ಯಾದಿಗಳನ್ನೆಲ್ಲ ಮಾಡುತ್ತಾ ಹೋದರೆ ಅಂದರೆ ಒಂದೊಂದು ಪುಸ್ತಕದಲ್ಲಿ ಒಂದೊಂದು ಕೆಲಸ ಆಗಬೇಕು. ಒಂದು ಜಿಲ್ಲೆಯಲ್ಲಿ ಒಂದು ಮತ್ತೊಂದು ಜಿಲ್ಲೆಯಲ್ಲಿ ಮತ್ತೊಂದು ಹೀಗೆ ವಿದಾಯಕವಾಗಿ ಹಂಚಿಕೊಂಡು ಈ ಕಾರ್ಯಕ್ರಮಗಳನ್ನು ಮಾಡುತ್ತಾ ಹೋದರೆ ಸುಮಾರು ಹತ್ತು ಹದಿನೈದು ವರ್ಷದಲ್ಲಿ ಅವರ ಬದುಕು ಸುಧಾರಿಸುವುದಕ್ಕೆ ಸಾಧ್ಯ. ಎಲ್ಲಕ್ಕಿಂತ ಹೆಚ್ಚಾಗಿ ನಾವೆಲ್ಲ ಯಾಕೆ? ಮುಖ್ಯ ವಾಹಿನಿಗೆ ಬರಬೇಕು ಅನ್ನುವಂತಹ ಪ್ರಜ್ಞೆಯನ್ನು ಅವರಲ್ಲಿ ಮೂಡಿಸಬೇಕು. ಅವರು ಬರುವುದಿಲ್ಲ ಅಂದರೆ ನಾವೇನು ಮಾಡಲಿಕ್ಕೆ ಆಗುವುದಿಲ್ಲ.

ಹಾಗೇ ನಾಗರೀಕ ಮತ್ತು ಲೌಖಿಕ ಜ್ಞಾನದ ಪ್ರಯೋಗಿಕ ಬೋಧನೆಯನ್ನು ಅವರಿಗೆ ಕೊಡಬೇಕಾಗುತ್ತದೆ. ಕೇವಲ ಪುಸ್ತಕವನ್ನು ಕೊಟ್ಟು ಓದಿರಿ ಅಂದ್ರೆ ಅಥವಾ ಒಂದು ಗಂಟೆ ಉಪನ್ಯಾಸ ಮಾಡಿ ಅಂದ್ರೆ ಆಗುವುದಿಲ್ಲ. ನಮಗೆ ಸಂಗತವಾಗುವಂತದ್ದು, ನಮ್ಮ ಮನಸ್ಸಿಗೆ ಹಿಡಿಸುವಂತದ್ದು. ಅಂದರೆ ನಮ್ಮ ಬೋಧನೆ ಕ್ರಮ ಕೂಡ ವ್ಯತ್ಯಾಸವನ್ನು ಹೊಂದಬೇಕು. ಬದಲಾವಣೆ ಹೊಂದಬೇಕು ಅಂತ ನಾನು ಅಂದುಕೊಂಡಿದ್ದೇನೆ. ಇವೆಲ್ಲದರ ಜೊತೆಗೆ ಮೊದಲೆ ನಾನು ಅದರಲ್ಲಿರುವಂತಹ ಕೀಳರಿಮೆಯನ್ನು ನಿವಾರಣೆ ಮಾಡಬೇಕು. ನೀನು ಬುಡಬುಡಿಕೆ ಬಾರಿಸುತ್ತೀಯೋ ಅದನ್ನು ಎಷ್ಟು ಕಲಾತ್ಮಕವಾಗಿ ಬಾರಿಸುತ್ತೀರಿ ಎನ್ನಬೇಕು. ಬುಡಬುಡಿಕೆಯನ್ನು ನಿರ್ಮಾಣ ಮಾಡುವಂತವರು, ಬಾರಿಸುವಂತವರು ಇದರಿಂದ ಪ್ರಭಾವಿತರಾದಂತವರು ನಮ್ಮ ಗುರುಗಳಾದ ಪರಮಶಿವಯ್ಯನವರು ಹೇಳುತ್ತಿದ್ದರು. ಕಸ ಗುಡಿಸುತ್ತಿದ್ದಾರೆ. ಕಸಗುಡಿಸುವುದಕ್ಕೆ ಭಗವಂತ ನಮ್ಮನ್ನು ಸೃಷ್ಠಿಮಾಡಿದ್ದಾನೆ ಅಂತ ತಿಳಿದುಕೊಂಡು ಕಸಗುಡಿಸು ಅಂತ. ಎಷ್ಟು ಒಳ್ಳೆಯ ಮಾತು ನೋಡಿ ಅಂದರೆ ಒಂದು ಕೆಲಸದಲ್ಲಿ ತಲ್ಲೀನತೆ ಅನ್ನುವುದ ಮಹಾತ್ಮ. ಇನ್ನೊಂದು ಮಾತು ನೆನಪಿಗೆ ಬರತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಹಿಂದಕ್ಕೆ ಹೋಗಿ, ಹಿಂದಕ್ಕೆ ಹೋಗಿ, ಅಂದರೆ ಸದ್ಯ ಬಸ್ಸಿನಲ್ಲಾದರು ಕಂಡಕ್ಟರ್ ಮೇಲಕ್ಕೆ ಬನ್ನಿ ಮುಂದಕ್ಕೆ ಬನ್ನಿ ಅಂತಾನೆ ಅಲ್ಲ ಅಂತ. ಅಲೆಮಾರಿ ಜನಕ್ಕೆ ದಲಿತ ಜನಕ್ಕೆ ಈ ಮಾತು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಅನ್ನುವುದನ್ನು ನಾವು ಗಮನಿಸಬೇಕಾಗಿ ಬರುತ್ತದೆ. ಆಮೇಲೆ ನಾವು ಮೊದಲೆ ಹೇಳಿದಾಗೆ ಅಲೆಮಾರಿ ಕಲೆಗಳ ಪರಿಷ್ಕರಣ ಇತ್ಯಾದಿಗಳನ್ನು, ಒಂದು ಮಾತನ್ನು ಇಲ್ಲಿ ಹೇಳಬಹುದು. ದಕ್ಷಿಣ ಕರ್ನಾಟಕವನ್ನು ಯಾವತ್ತೂ ಉದಾಹರಣೆ ಕೊಡುತ್ತಿರುತ್ತೇನೆ. ಸಾಮಾನ್ಯವಾಗಿ ದಕ್ಷಿಣ ಕರ್ನಾಟಕ ಜಿಲ್ಲೆಯಲ್ಲಿ ಈಗ ಅತ್ಯಂತ ವಿದ್ಯಾವಂತರ, ಶಿಕ್ಷಣವಂತರ ಒಂದು ಕಲೆಯಾಗಿದೆ ಯಕ್ಷಗಾನ. ಆದರೆ ಮೊದಲು ಸಾಮಾನ್ಯ ಬುಡಕಟ್ಟು ಜನರ ಕಲೆಯಾಗಿತ್ತು. ಆದರೆ ಇವತ್ತು ಏನಾಗಿದೆ ಅಂದರೆ ಬೆಳಗಿನಿಂದ ಸಂಜೆಯವರೆಗೆ ಪ್ರರ್ಯಾಪನ ಮಾಡುತ್ತಿರುವಂತಹ ಒಬ್ಬ ವ್ಯಕ್ತಿ ಬೆಳಗಿನಿಂದ ಸಂಜೆಯವರೆಗೆ ಔಷಧಿ ಕೊಡುತ್ತಿರುವಂತಹ ಒಬ್ಬ ವ್ಯಕ್ತಿ, ಇನ್ನಾವುದೂ ಶಿಷ್ಟ ಸಂಗೀತವನ್ನು ಹಾಡುವಂತಹ ಒಬ್ಬ ವ್ಯಕ್ತಿ ಇನ್ನಾವುದೂ ದೊಡ್ಡ ವೃತ್ತಿಯಲ್ಲಿ ಇರುವಂತಹ ವ್ಯಕ್ತಿ ಸಂಜೆಯಾಯಿತೆಂದರೆ ಅವರ ಬಿಗುಮಾನದಿಂದ, ಹೆಮ್ಮೆಯಿಂದ, ಅಭಿಮಾನದಿಂದ ಬಂದು ರಂಗಸ್ಥಳದಲ್ಲಿ ಮೆರೆಯುತ್ತಾನೆ ಅಂದರೆ ನಮ್ಮ ಕಲೆಗೂ, ನಮ್ಮ ಬದುಕಿಗೂ ನಮಗೂ ಇರುವಂತಹ ಅವಿನಾಭಾವದ ನಂಟನ್ನು ಗುರುತಿಸುತ್ತದೆ. ಅದಕ್ಕೋಸ್ಕರ ಕಾರಂತರು ಇಡೀ ಪ್ರಪಂಚದಲ್ಲಿ ಯಕ್ಷಗಾನವನ್ನು ಮೆರಿಸಿದರು ಅನ್ನುವುದನ್ನು ನಾವು ಗಮನದಲ್ಲಿ ಇಟ್ಟುಕೊಳ್ಳಬೇಕಾಗಿ ಬರುತ್ತದೆ. ಹೀಗೆ ಮಾಡುವ ಅಗತ್ಯತೆ ಏನೆಂದರೆ, ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಈ ಶಿಕ್ಷಿತರಿಗೆ ನಮ್ಮ ರಂಗಾಯಣ ಇದೆ ನಾಟಕ ಮುಂತಾದುವುದಕ್ಕೆ ಆದರೆ ಇಡೀ ವೈವಿಧ್ಯಮಯವಾಗಿರುವಂತಹ ಇಡೀ ಕರ್ನಾಟಕವನ್ನು ಆವರಿಸಿಕೊಂಡಿರುವಂತಹ ಈ ಜನಪದ ಕಲೆಗಳು ತುಂಬಾ ವೈವಿಧ್ಯಮಯವಾಗಿವೆ. ಒಂದು ರೆಪರ್ಟರಿಗೆ ಒಂದು ರಂಗಾಯಣ ಸಾಕಾಗುವುದಿಲ್ಲ. ಕೊನೆ ಪಕ್ಷ ಕರ್ನಾಟಕ ನಾಲ್ಕು ರೆವೆನ್ಯೂ ಡಿವಿಜನ್‌ಗಳಲ್ಲಿ, ನಾಲ್ಕು ಜನಪದ ರೆಪರ್ಟರಿಗಳನ್ನು ಅಥವಾ ನಾಲ್ಕು ರಂಗಾಯಣಗಳನ್ನು ಸೃಷ್ಠಿಸುವ ಮೂಲಕವಾಗಿ ಆಯಾ ಭಾಗದ ಕಲೆಗಳಿಗೆ ಒಂದು ಸುಶಿಕ್ಷಿತವಾಗಿರುವಂತಹ ಶಿಸ್ತಿನ ರೂಪವನ್ನು ಕೊಟ್ಟು ಅವುಗಳಿಗೆ ಸುಧಾರಣೆ ಮಾಡಿ ನಾಲ್ಕು ಜನರ ಎದುರಿಗೆ ತರಬೇಕು. ಅವರಿಗೆ ವೃತ್ತಿಯೂ ಕೂಡ ಆಗುತ್ತದೆ. ಅವರಿಗೆ ಸಂತೋಷ ಸಹ ಆಗುತ್ತದೆ. ಅವರ ಸಾಮಾಜಿಕ ಸ್ಥಿತಿಯನ್ನು ಕೂಡ ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ ಅಂತ ನನಗೆ ಅನಿಸುತ್ತದೆ. ಅದಕ್ಕೋಸ್ಕರ ಅವರನ್ನು ಒಂದು ಶಿಸ್ತಿನಲ್ಲಿ ಬೆಳೆಸಿ ನಾವು ಪ್ರಶ್ನೆ ಕೇಳಿ ಆ ಪ್ರಶ್ನೆಗಳ ಮೂಲಕ ಉಪ ಪ್ರಶ್ನೆಗಳನ್ನು ಕೇಳುವಂತಹ ಮನೋಧರ್ಮವನ್ನು ಅವರಲ್ಲಿ ಮೂಡಿಸ ಬೇಕಾದಂತಹ ಅಗತ್ಯ ಇದೆ ಅನಿಸುತ್ತದೆ.

ಹಾಗಾಗಿ ಈ ಸಂವಾದ ಮೂಲಕವಾಗಿ ಸೆಮಿನಾರ್‌ಗಳ ಮೂಲಕವಾಗಿ ಅವರ ಪ್ರಜ್ಞೆಯನ್ನು ಹೆಚ್ಚಿಸಬೇಕಾಗಿ ಬರುತ್ತದೆ. ಜೊತೆಗೆ ರಾಜಕೀಯ, ಸಾಮಾಜಿಕ ಪ್ರಜ್ಞೆಯನ್ನು ಅಂದರೆ ತಂಡ ತಂಡವಾಗಿ, ಗುಂಪು ಗುಂಪಾಗಿ ನಾವು ಮೆರವಣಿಗೆ ಮಾಡುವಂತಹದ್ದು ಅಲ್ಲ. ತಂಡ ತಂಡವಾಗಿ ಮನೆ ಮನೆಗಳಲ್ಲಿ ಪ್ರವೇಶ ಮಾಡಿ ನಿಧಾನವಾಗಿ ಅವರ ಮನಸ್ಸನ್ನು ಗೆದ್ದು ಅವರ ತಲೆ ತಳಕ್ಕೆ ಇಳಿದು, ಅವರ ತಮ್ಮಷ್ಟಕ್ಕೆ ತಾವೇ ಪರಿವರ್ತನೆಗೊಳ್ಳುವುಂತಹ ಮನೋಧರ್ಮವನ್ನು ನಾವು ಸೃಷ್ಟಿಸಬೇಕಾದಂತಹ ಅಗತ್ಯತೆ ಇದೆ ಎಂದು ನಾನು ಅಂದುಕೊಂಡಿದ್ದೇನೆ. ಹಾಗಾಗಿ ತರಬೇತಿ ಶಿಬಿರಗಳನ್ನು, ಜಾಗೃತಿ ಶಿಬಿರಗಳನ್ನು ಏರ್ಪಡಿಸುವ ಮೂಲಕವಾಗಿ ಕೂಡ ನಮ್ಮ ಅಲೆಮಾರಿ ತಂಡಗಳ ಅಲೆಯುವ ಸ್ಥಿತಿ ಮಾರಿಯಾಗದೆ ಕಲಾತ್ಮಕವಾಗಿರುವಂತಹ ವ್ಯಕ್ತಿತ್ವವನ್ನು ಪಡೆದುಕೊಂಡು ಎಲ್ಲಾ ನಾಗರಿಕ ಬಂಧುಗಳಂತೆ ಬದುಕುವುದಕ್ಕೆ ಸಾಧ್ಯವಾಗುತ್ತದೆ ಅಂತ ನಾನು ಅಂದುಕೊಂಡಿದ್ದೇನೆ. ಇದು ಒಂದು ದಿನದಲ್ಲಿ ಆಗುವಂತದ್ದು ಅಲ್ಲ. ಅದರ ವಿಧಾಯಕವಾಗಿ ಸರಕಾರ, ಸಮಾಜ, ಜಿಲ್ಲಾ ಪಂಚಾಯಿತಿ ಇತ್ಯಾದಿಗಳು ಕೆಲಸ ಮಾಡ ತೊಡಗಿದರೆ ಸಾಧ್ಯವಾದಷ್ಟು ಕ್ರಿಯಾಪೂರ್ಣವಾಗಿ ಇಂತಹ ಕೆಲಸಗಳನ್ನು ಮಾಡಲಿಕ್ಕೆ ಸಾಧ್ಯವಾದಾಗ ಮಾತ್ರ ಅಲೆಮಾರಿ ಜನಾಂಗ ಬೇರೆಯವರ ಜೊತೆಯಲ್ಲಿ ಹೆಗಲೆತ್ತಿ ನಿಲ್ಲುವುದಕ್ಕೆ ಸಾಧ್ಯ ಅಂತ ಹೇಳಬಹುದು. ಇಂತಹ ಸಮ್ಮೇಳನಗಳು ಒಂದು ಜಾಗೃತಿಯನ್ನು ಎಚ್ಚರವನ್ನು ಮಾಡಿಸುವುದಕ್ಕೆ ಸಹಾಯಕವಾದರೆ ನಮ್ಮ ಈ ಒಂದು ಪ್ರಯತ್ನ ಸಾರ್ಥಕ ಅಂತ ಭಾವಿಸಿಕೊಳ್ಳುತ್ತೇನೆ. ತಮಗೆಲ್ಲರಿಗೂ ಧನ್ಯವಾದಗಳು.

ಲಿಪ್ಯಂತರ : ಚಂದ್ರಪ್ಪ ಸೊಬಟಿ

* * *