ಈ ಸಮ್ಮೇಳನದ ಸವಾಧ್ಯಕ್ಷರೂ, ಆತ್ಮೀಯರೂ, ನನ್ನ ಎಲ್ಲಾ ಸಂಶೋಧನೆಗಳಿಗೂ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಿರುವ ಹಿರಿಯರೂ ಆದ ಡಾ. ಬಿ.ಎ. ವಿವೇಕ ರೈ ಅವರೇ, ಇವತ್ತು ಅತ್ಯಂತ ಹೊಸ ವಿಚಾರಗಳನ್ನು ಹಾಗೂ ನಿಜವಾಗಿ ನಮ್ಮ ಸಂಶೋಧನೆಗಳು ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ತೋರಿಸಿದ ಗೆಳೆಯ ಡಾ. ಚಕ್ಕೆರೆ ಶಿವಶಂಕರ್ ಅವರೇ ಮತ್ತು ಇವತ್ತಿನ ಮುಖ್ಯ ಅತಿಥಿಗಳು ಕರ್ನಾಟಕ ವಿಶ್ವವಿದ್ಯಾಲಯದ ಜಾನಪದ ಪ್ರಾಧ್ಯಾಪಕರೂ ಆದ ಶ್ರೀಮತಿ ಡಾ. ಶಾಲಿನಿ ರಘುನಾಥ ರವರೇ ಹಾಗೂ ಎಲ್ಲಾ ಮಿತ್ರರೇ.

ಬುಡಕಟ್ಟು ಹಾಗೂ ಅಲೆಮಾರಿಗಳನ್ನು ಕುರಿತು ತಮ್ಮ ವಿಶ್ವವಿದ್ಯಾಲಯವು ಈಗಾಗಲೇ ಹತ್ತು ವರ್ಷಗಳಿಂದ ಒಂದು ರೀತಿಯಲ್ಲಿ ನಿರಂತರ ಅಧ್ಯಯನ ಮಾಡುತ್ತಲೇ ಬಂದಿದೆ. ಇಷ್ಟರಲ್ಲಿ ನಾವು ಏನಾದರೂ ಸಾಧಿಸಿದ್ದೇವೆ ಎಂದರೆ ಗೆಳೆಯ ಚಕ್ಕೆರೆಯವರು ಹೇಳಿದ ಹಾಗೆ ನಾವು ಕೇವಲ ದಾಖಲೀಕರಣವನ್ನು ಮಾಡಿದ್ದೇವೆ. ಆದರೆ ಎಷ್ಟರಮಟ್ಟಿಗೆ ನಾವು ಅನುಷ್ಠಾನಕ್ಕೆ ತಂದಿದ್ದೇವೆ ಎಂಬುವುದು ಪ್ರಶ್ನೆಯಾಗಿಯೇ ಉಳಿದಿದೆ. ಏಕೆಂದರೆ ನಮ್ಮ ವ್ಯವಸ್ಥೆಯೂ ಹಾಗೆಯೇ ಇದೆ. ಸುಮಾರು ೫ ವರ್ಷಗಳ ಹಿಂದೆ ಡಾ. ಚಂದ್ರಶೇಖರ ಕಂಬಾರರ ಅವಧಿಯ ಕೊನೆಯ ವರ್ಷದಲ್ಲಿ ನಾವು ಒಂದು ಯೋಜನೆಯನ್ನು ತಯಾರು ಮಾಡಿದೆವು. ಬುಡಕಟ್ಟು ಹಾಗೂ ಅಲೆಮಾರಿ ಬುಡಕಟ್ಟುಗಳನ್ನು ಕುರಿತಂತೆ ಒಂದು ಸಮಗ್ರ ಸಮೀಕ್ಷೆಯನ್ನು ಮಾಡಿ ಏನು ಕೊರತೆಗಳಿವೆ, ನಿಜವಾಗಿ ಯಾರು ನಿರ್ಲಕ್ಷಕ್ಕೆ ಒಳಗಾಗಿದ್ದಾರೆ, ಸರ್ಕಾರ ಅವರಿಗೆ ಮಾಡಬೇಕಾದ ಕರ್ತವ್ಯ ಏನು ಎಂದು ನೆನಪಿಸಿಕೊಡುವ ಹಾಗೆ ಒಂದು ಸಮಗ್ರ ಯೋಜನೆಯನ್ನು ಹಾಕಿಕೊಳ್ಳುತ್ತೇವೆ. ಹಾಗೆಯೇ ಅದನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ. ದಯಮಾಡಿ ಈ ಯೋಜನೆಗೆ ಅನುದಾನವನ್ನು ಕೊಡಿ ಹಾಗೂ ಅನುವು ಮಾಡಿಕೊಡಿ ಎಂದು ಸರ್ಕಾರವನ್ನು ಕೇಳಿಕೊಂಡೆವು. ಇಷ್ಟು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆಯಿಂದಾಗಲಿ, ಸಚಿವಾಲಯದಿಂದಾಗಲಿ, ಸರ್ಕಾರದಿಂದಾಗಲಿ ಒಂದು ಸಣ್ಣ ಉತ್ತರವೂ ಬರಲಿಲ್ಲ. ಅನೇಕ ಸಲ ಪ್ರಯತ್ನಪಟ್ಟರೂ ಬರಲಿಲ್ಲ. ಅಂದರೆ ನಮ್ಮ ಸರ್ಕಾರಗಳಿಗೆ ಓಟನ್ನು ನೀಡುವ ಜನ ಸಾಂದ್ರತೆ ಬಲಿಷ್ಠ ವರ್ಗ ಬೇಕೇ ಹೊರತು ಈ ರೀತಿಯ ವರ್ಗ ಅವರಿಗೆ ಬೇಕಾಗಿಲ್ಲ. ಯಾಕೆಂದರೆ ಅವರಿಂದ ಯಾವ ಅನುಕೂಲವೂ ಆಡಳಿತ ನಡೆಸುವವರಿಗೆ ಆಗುವುದಿಲ್ಲ ಮತ್ತು ಆರಿಸಿಕೊಂಡು ಬರುವ ಬಲಿಷ್ಠ ಜನವರ್ಗವನ್ನು ನೋಡುವ ದೃಷ್ಟಿಕೋನ ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಈ ಸಂದರ್ಭದಲ್ಲಿ ಅಲೆಮಾರಿ ಜನಸಮುದಾಯಗಳನ್ನು ಕುರಿತು ಮಾತನಾಡುವಾಗ ಕೆಲವು ಬಹಳ ಮುಖ್ಯವಾದ ಮೂಲಭೂತವಾದ ವಿಚಾರಗಳನ್ನು ನಾವು ಚರ್ಚೆ ಮಾಡಬೇಕಾಗುತ್ತದೆ. ಒಂದು ಕಾಲಕ್ಕೆ ಇಡೀ ಮನುಷ್ಯ ಸಮುದಾಯವೇ ಅಲೆಮಾರಿಯಾಗಿತ್ತು. ಬರಬರುತ್ತಾ ಅದು ಬದಲಾದ ರೀತಿ ಬೇರೆ. ಒಂದು ಭೂ ಪ್ರದೇಶದಲ್ಲಿ ಈಗ ಪ್ರಾಣಿಗಳು ಹೇಗೆ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿವೆಯೋ ಅದೇ ರೀತಿಯಾಗಿ ಇದ್ದಂತಹ ಮನುಷ್ಯ ಮುಂದೆ ಮೂರು ವಿಷಯಗಳಿಗೆ ಬಲಿಯಾದ. ಅದನ್ನು ನಮ್ಮ ಆಧ್ಯಾತ್ಮಕಾರರು ಬಹಳ ಚೆನ್ನಾಗಿ ಹೇಳುತ್ತಾರೆ. ಅದು ಹೆಣ್ಣು, ಹೊನ್ನು, ಮಣ್ಣು. ಈ ಹೆಣ್ಣು ಅವನ ಜೊತೆಯ ಸಂಗಾತಿಯಾಗಿ ಇದ್ದಳು. ಹೆಣ್ಣನ್ನು ಬರುತ್ತಾ ಬರುತ್ತಾ ತನ್ನ ಹೆಂಡತಿಯಾಗಿ ಮಾಡಿಕೊಂಡ. ತನ್ನ ಆಸ್ತಿಯ ಭಾಗವಾಗಿ ಮನುಷ್ಯ ಮಾಡಿಕೊಂಡ. ಎರಡನೆಯದು ಮಣ್ಣು, ಅದರ ಪಾಡಿಗೆ ಅದು ಇತ್ತು. ಎಲ್ಲೂ ಒಂದು ಕಡೆ ಕೃಷಿ ಬುಡಕಟ್ಟುಗಳು ಸಹ ತಮಗೆ ಬೇಕಾದ ಸಂದರ್ಭದಲ್ಲಿ ನೀರಿರುವ ಕಡೆ ಒಂದಿಷ್ಟು ಬೆಳೆಯನ್ನು ಬೆಳೆದುಕೊಂಡು ವರುಷದಿಂದ ವರುಷಕ್ಕೆ ಬೇರೆ ಪ್ರದೇಶಗಳಿಗೆ ಹೋಗುತ್ತಾ ಪ್ರಕೃತಿಯ ಯಾವ ಅಂಶಗಳು ಕೆಡದೇ ಇರುವ ರೀತಿಯಲ್ಲಿ, ಆದರೆ ಮಣ್ಣು ನನ್ನದಲ್ಲ ಅದರ ಮೇಲೆ ನಾನಿದ್ದೇನೆ ಎಂಬ ಕಲ್ಪನೆಯಲ್ಲಿದ್ದ. ಆದರೆ ಬರುತ್ತಾ ಬರುತ್ತಾ ಆಸ್ತಿ ಕಲ್ಪನೆ ಬಂದು ನನ್ನದು, ಇದಷ್ಟು ನನ್ನದು ಎನ್ನುವ ಕಲ್ಪನೆ ಬಂದಾಗ ಮಣ್ಣು ಅವನಿಗೆ ಬಲಿಯಾಯಿತು. ಇನ್ನೂ ಹೊನ್ನು. ಹೊನ್ನಿಗಾಗಿ ಜನ ಬದುಕುತ್ತಿರುವ ರೀತಿಯನ್ನು ನಮ್ಮ ಆಧ್ಯಾತ್ಮಿಕಕಾರರು ಹೆಣ್ಣು ಹೊನ್ನು ಮಣ್ಣಿನ ಬಗ್ಗೆ ಏನು ಹೇಳುತ್ತಿದ್ದಾರೆ? ಅದಕ್ಕೆ ಬಲಿಯಾದ ಕಾರಣ ಇವತ್ತು ಸ್ಥಿರ ಸಮುದಾಯಗಳು ಹುಟ್ಟಿಕೊಂಡವು. ಅಂದರೆ ನಗರಗಳು, ಪಾಳೇಪಟ್ಟಗಳು, ಹಳ್ಳಿಗಳು, ನಿರ್ಮಾಣವಾದವು. ಹೀಗೆ ಸಮ್ರಾಜ್ಯಶಾಹಿ ನಿರ್ಮಾಣದೊಂದಿಗೆ ಈ ವ್ಯವಸ್ಥೆ ಇವತ್ತಿನವರೆಗೆ ಬೆಳೆಯುತ್ತಾ ಬಂದಿದೆ. ಅಂದರೆ ಸಾಮ್ರಾಜ್ಯಶಾಹಿ ಅಶೋಕನಿಂದ ಗುಪ್ತನಿಂದ ಅದೇ ರೀತಿ ಬೇರೆ ಬೇರೆ ರೀತಿಯ ಅನೇಕ ರೀತಿಯ ಸಾಮ್ರಾಜ್ಯಶಾಹಿಗಳಿಂದ ಹಿಡಿದು ಇವತ್ತು ಅಮೇರಿಕದಂತಹ ದೊಡ್ಡ ಸಾಮ್ರಾಜ್ಯ ಇಡೀ ಪ್ರಪಂಚವನ್ನು ನಿರ್ಮಾಣ ಮಾಡುವ ರೀತಿಯಲ್ಲಿ ಒಂದು ಸಾಮ್ರಾಜ್ಯಶಾಹಿ ನಿರ್ಮಾಣವಾಯಿತು. ಈ ರೀತಿ ಹೆಣ್ಣು ಹೊನ್ನು ಮಣ್ಣಿನ ಪರಿಕಲ್ಪನೆಗಳು ಬದಲಾಗುತ್ತಾ ಬಂದಾಗ ಈ ಮೂರು ಒಂದು ದೊಡ್ಡ ಸಾಮ್ರಾಜ್ಯಶಾಹಿ ವ್ಯವಸ್ಥೆಯ ಉದಯಕ್ಕೆ ಕಾರಣವಾದವು. ಅಂತಹ ಸಂದರ್ಭದಲ್ಲಿ ಅವನ್ನು ಬಿಟ್ಟು ಇರುವ, ಈ ಆಧ್ಯಾತ್ಮಿಕಾರರು ನಿಜವಾದ ಆಧ್ಯಾತ್ಮಿಕಕಾರರು ಯಾರೆಂದರೆ ಈ ಅಲೆಮಾರಿ ಸಮುದಾಯಗಳು. ಇಂತಹವರನ್ನು ಇವತ್ತು ಯಾರೂ ನೋಡದೇ ಇರುವ ಸ್ಥಿತಿಯಲ್ಲಿ ನಾವು ಇದ್ದೇವೆ. ಅವರು ಈಗ ಏನು ಮಾಡಬೇಕು.

ಈ ರೀತಿಯ ಅಸ್ಥಿರತೆಯಲ್ಲಿರುವ ಸದಾ ಭಯದ ನೆರಳಲ್ಲಿರುವ, ಸದಾ ಅನಾಥಪ್ರಜ್ಞೆಯನ್ನು ಕಾಣುತ್ತಿರುವ ಈ ಜನ ಹೇಗೆ ಬದುಕಬೇಕು? ಹೇಗಾದರೂ ಸರಿ ಅವರನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವುದು ಇವತ್ತಿನ ಪ್ರಶ್ನೆ. ಇಡೀ ಭಾರತದಲ್ಲಿ ಬುಡಕಟ್ಟುಗಳಲ್ಲಿ ಪ್ರಶ್ನೆ ಕಾಡುತ್ತಿರುವುದೇನೆಂದರೆ ಮುಖ್ಯವಾಹಿನಿಗೆ ತರುವುದು ಹೇಗೆ? ಇಲ್ಲಿ ಎರಡು ವೈರುಧ್ಯವಿದೆ. ಅವರ ಜ್ಞಾನ ಪರಂಪರೆ ಉಳಿಯಬೇಕು ಮತ್ತು ಅವರು ಸಬಲರೂ ಆಗಬೇಕು. ಹಾಗಾದರೆ ಇವುಗಳು ಒಂದಕ್ಕೊಂದು ತದ್ವಿರುದ್ದ ಇವುಗಳನ್ನು ಮುಖ್ಯವಾಹಿನಿಗೆ ತರುವುದು ಹೇಗೆ ಎಂದು ಹೇಳಿ? ನಮ್ಮಲ್ಲಿನ ಕೆಲವರು, ಅವರು ಇದ್ದ ಹಾಗೆ ಇರಲಿ. ನಮ್ಮ ಸಂಸ್ಕೃತಿ ಅವರ ಮೂಲಕವಾದರೂ ಉಳಿಯಲಿ. ಇನ್ನೂ ಕೆಲವರು ಅವರು ಮುಖ್ಯ ಪ್ರವಾಹಕ್ಕೆ ಬರಲಿ. ಅವರ ಜ್ಞಾನ ಪರಂಪರೆ ಇದ್ದರೇನು ಬಿಟ್ಟರೇನು ಈ ರೀತಿ ಎರಡು ಪಂಥಗಳು ಒಂದು ಉತ್ತರ ಒಂದು ದಕ್ಷಿಣವಾಗಿವೆ. ಇಂತಹವರಿಗೆ ಸುಮಾರು ೫೦-೬೦ ವರ್ಷಗಳ ಹಿಂದೆ ಒಬ್ಬ ವ್ಯಕ್ತಿ ಉತ್ತರ ಕೊಟ್ಟ. ಅವರು ಯಾರೆಂದರೆ ವೆರಿಯರ್ ಎಲ್ವಿನ್ ಎಂಬುವ ವ್ಯಕ್ತಿ. ಬ್ರಿಟಿಷರ ರೀತಿಯಲ್ಲಿ ಈ ದೇಶದಲ್ಲಿ ಇರಲು ಬಂದ ವ್ಯಕ್ತಿ ಈ ದೇಶದ ಸ್ಥಿತಿಯನ್ನು ನೋಡಿ ಇಂಗ್ಲೆಂಡಿನ ವ್ಯಾಮೋಹವನ್ನು ತೊರೆದು ಈ ದೇಶದಲ್ಲಿಯೇ ನೆಲೆಸಿ ಬುಡಕಟ್ಟಿನ ಹೆಣ್ಣು ಮಗಳನ್ನೇ ಮದುವೆಯಾಗಿ ಅವರಲ್ಲಿ ನೆಲೆಸಿದ ಬಹುದೊಡ್ಡ ವ್ಯಕ್ತಿ. ಇವರ ಬಗ್ಗೆ ವ್ಯಾಖ್ಯಾನ ಕೊಟ್ಟ. ಅವರ ಅಭಿವೃದ್ಧಿ ಮತ್ತು ಅವರ ಎಲ್ಲ ಪರಂಪರೆಯನ್ನು ಉಳಿಸಿಕೊಳ್ಳುವುದು ಹೇಗೆ? ಇದು ಬಹಳ ಮುಖ್ಯವಾದ ಪ್ರಶ್ನೆ. ಆಗ ನೆಹರು ಆಡಳಿತ ಇತ್ತು. ಅವರು ಎಲ್ವಿನ್‌ಗೆ ಸ್ನೇಹಿತರಾಗಿದ್ದರು. ಎಲ್ವಿನ್ ನೆಹರುರವರ ಮೇಲೆ ಪ್ರಭಾವ ಬೀರಿದರು. ನೀವು ಅವರಿಗೆ ಅನೇಕ ಯೋಜನೆಗಳಣ್ನು ಕೊಡಿ ಆ ಮೂಲಕ ಸಮುದಾಯಗಳು ಒಳ್ಳೆಯ ಸ್ಥಿತಿಗೆ ಬರಲಿ. ನೆಹರು ಅವರ ಕೆಳಗಿನವರಿಗೆ ಹೇಳಿ ಸಮುದಾಯಗಳಿಗೆ ಈ ರೀತಿಯ ಕೆಲಸ ಮಾಡಬೇಕು ಎಂದ್ಹೇಳಿ ಬಹಳ ದೊಡ್ಡ ಪ್ರಮಾಣದ ಹಣವನ್ನು ಮೀಸಲಿರಿಸಿದರು. ಆದರೆ ಅಧಿಕಾರಿಶಾಹಿಗಳು ಮಧ್ಯಪ್ರದೇಶ, ದೊಡ್ಡ ಗೊಂಡರ ಸಮುದಾಯವನ್ನು ಬಿಲ್ಲರ ಸಮುದಾಯವನ್ನು, ಗುರುತಿಸಿ ಕೋಟ್ಯಾಂತರ ರೂಪಾಯಿ ಬಟ್ಟೆಯನ್ನು ಕೊಟ್ಟರು. ಎಲ್ಲರಿಗೂ ಬಿಳಿಬಟ್ಟೆ ಕೊಟ್ಟರು. ಇವರು ನೆರವನ್ನು ಕೊಡುವ ನೆಪದಲ್ಲಿ ಮುಖ್ಯ ಪ್ರವಾಹಕ್ಕೆ ತರುತ್ತೇವೆ ಎಂದು ಹೇಳುತ್ತಾ ಇವರಿಗೆ ಬೇಕಾದ ರೀತಿಯಲ್ಲಿ ಅವರನ್ನು ನಡೆಸಿಕೊಂಡರು. ವೆರಿಯರ್ ಎಲ್ವಿನ್ ಹೇಳುತ್ತಾರೆ: ಅಭಿವೃದ್ಧಿ ಎಂದರೆ ಇದಲ್ಲ. ಅಭಿವೃದ್ಧಿ ಎಂಬುದು ಅವರಲ್ಲಿರುವ ಸೌಂದರ್ಯವನ್ನು ಕಾಪಾಡುವುದರ ಮೂಲಕ ಅಭಿವೃದ್ಧಿಗೊಳಿಸಬೇಕು. ಅವರಲ್ಲಿರುವ ಜ್ಞಾನ ಪರಂಪರೆಗಳನ್ನು ಕಾಪಾಡುವುದರ ಮೂಲಕ ಅಭಿವೃದ್ಧಿಪಡಿಸಬೇಕು ಅದು ಹೇಗೆ? ಅದಕ್ಕೆ ಅವರು ಹೇಳುತ್ತಾರೆ. ಅವರಿಗೆ ಬಟ್ಟೆ ಕೊಡುವ ಅಗತ್ಯವಿಲ್ಲ. ಅವರ ಬಟ್ಟೆಯನ್ನು ಅವರೇ ನೇಯ್ದು ಕುಸುರಿ ಕೆಲಸ ಮಾಡಿ ಕೊಳ್ಳುತ್ತಾರೆ. ಅವನಿಗೆ ಬೇಕಾದ ರೀತಿಯಲ್ಲಿ ಅವನೇ ಬಣ್ಣ ಬಣ್ಣದ ವೇಷ ಭೂಷಣಗಳನ್ನು ಮಾಡಿಕೊಳ್ಳುತ್ತಾನೆ. ನೀವು ಮಾಡಬೇಕಾದ ಕೆಲಸವೆಂದರೆ ಯಾವ ಹೊರಗಿನ ಪ್ರಪಂಚದಿಂದ ಅವನ ಮೇಲೆ ಅವ್ಯಾಹತವಾದಂತಹ ಘರ್ಷಣೆ ನಡೆಯುತ್ತಿರುವುದನ್ನು ನಿಲ್ಲಿಸಿ ಅವರನ್ನು ನಿಮ್ಮಂತೆಯೇ ನೋಡಿ ಮತ್ತು ಅವರಲ್ಲಿರುವುದನ್ನು ಉಳಿಸಿಕೊಳ್ಳುವುದಕ್ಕೆ ಯಾವ ಕ್ರಿಯಾ ಯೋಜನೆಗಳನ್ನು ಮಾಡಬೇಕು. ಅವುಗಳನ್ನು ನೋಡಿ, ಅವರಲ್ಲಿರುವ ಕುಸುರಿ ಕೆಲಸ, ವೈದ್ಯ ಪದ್ಧತಿ, ಮುಂತಾದವುಗಳಿಗೆ ಆರ್ಥಿಕ ಸಹಾಯವನ್ನು ಮಾಡಬೇಕು ಮತ್ತು ಅಂತಹ ಸಂಘಟನೆಗಳನ್ನು ಕಟ್ಟಬೇಕು. ಅದಕ್ಕಾಗಿಯೇ ಸಂಘ ಸಂಸ್ಥೆಗಳು ಹುಟ್ಟಬೇಕು. ಆ ಸಂಘ ಸಂಸ್ಥೆಗಳು ಅವರಲ್ಲಿಯೇ ಉತ್ಪನ್ನ ಮಾಡುವ ಹಾಗೆ ಮಾಡಿ ಆ ಉತ್ಪನ್ನಗಳು ಈ ಸ್ಥಿರ ಸಮುದಾಯಗಳಿಗೆ ತಲುಪುವ ಹಾಗೆ ಮಾಡಬೇಕು. ಅವರ ಸಂಸ್ಕೃತಿಗಳನ್ನು ಉಳಿಸಿಕೊಂಡೇ ಈ ವ್ಯವಹಾರ ಬಹುಮುಖಿ ಹಾಗೂ ಸ್ಥಿರ ಸಮುದಾಯಗಳ ನಡುವೆ ಕೊಂಡಿಯಾಗಬೇಕು. ಅಂದರೆ ಆ ರೀತಿಯ ಗುಣಾತ್ಮಕ ಸೇತುವೆಯನ್ನು ನಿರ್ಮಾಣ ಮಾಡುವುದರ ಮೂಲಕ ಆರ್ಥಿಕವಾಗಿ ಭದ್ರರಾಗಬೇಕು ಮತ್ತು ಸಾಂಸ್ಕೃತಿಕವಾಗಿ ಅವರನ್ನು ಉಳಿಸಿಕೊಳ್ಳಬೇಕು. ಆರ್ಥಿಕ ಮತ್ತು ಸಾಮಾಜಿಕ ಎಂಬ ಎರಡು ದಿಕ್ಕನ್ನು ಸೇರಿಸುವ ರೀತಿಯಲ್ಲಿ ನಿಜವಾಗಿ ಯೋಜನೆ ಮಾಡುವ ಕ್ರಿಯಾಶೀಲರು ಅಲ್ಲಿ ಬರಬೇಕು. ಆದ್ದರಿಂದಲೇ ವೆರಿಯರ್ ಎಲ್ವಿನ್ ಹೇಳುತ್ತಾರೆ: ಈ ಆಡಳಿತವನ್ನು ಕವಿಗಳಿಗೂ, ಸಾಂಸ್ಕೃತಿಕ ನಾಯಕರಿಗೂ ಕೊಡಬೇಕು. ಐ.ಎ.ಎಸ್. ಅಧಿಕಾರಿಗಳಷ್ಟೇ ಅಲ್ಲ. ಅಧಿಕಾರಿಗಳಿಗೆ ಸ್ಥಿರ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಅವರಿಗೆ ಮನೆಗಳನ್ನು ಕಟ್ಟಿಕೊಡಲಾಗಿದೆ. ಅಲ್ಲಿ ಏನು ಮಾಡಿದ್ದಾರೆ. ಅಂದರೆ ೨೦ x ೨೦ ಅಡಿಯ ಮನೆಗಳನ್ನು ಅರಣ್ಯದಲ್ಲಿ ಕಟ್ಟಿ ನೀವು ವಾಸ ಮಾಡಿ ಅಂತ ಹೇಳುತ್ತಾರೆ. ಗೌಳಿಗರು ಎಮ್ಮೆಗಳನ್ನು ಹಸುಗಳನ್ನು ಸಾಕಿಕೊಂಡು ಬದುಕುವಂತಹವರು ಆ ರೀತಿಯಲ್ಲಿ ಜೀವನ ಸಾಗಿಸುವಂತಹವರು ೨೦ x ೨೦ ಅಡಿ ಮನೆಯಲ್ಲಿ ಅವರು ಎಲ್ಲಿ ಇರಲಿಕ್ಕೆ ಸಾಧ್ಯ? ದಾಂಡೇಲಿ ಅರಣ್ಯದಲ್ಲಿ ೫೦೦ ರಿಂದ ೬೦೦ ಮನೆಗಳೂ ಎಲ್ಲಾ ಬೀಳುಬಿಟ್ಟಿರುವುದನ್ನು ನೋಡುತ್ತೇವೆ. ಅವುಗಳಿಗೆ ಅವರು ಹೋಗಿಲ್ಲ. ಹಾಗೆಯೇ ಅಭಯಾರಣ್ಯ ಮಾಡುವುದಕ್ಕೋಸ್ಕರ ಇಡೀ ಜನರಿಗೆ ಹುಣಸೂರಿನ ಹತ್ತಿರ ಒಂದು ಊರು ಕಟ್ಟಿಕೊಟ್ಟಿದ್ದಾರೆ. ಗಿರಿಜನರಿಗೆ ಅದರಲ್ಲೂ ಜೇನು ಕುರುಬ, ಕಾಡು ಕುರುಬರು ಅರಣ್ಯದಲ್ಲಿ ಬದುಕಿದ್ದಂತಹವರು, ಅವರು ಕೆಲಸ ಗೊತ್ತಿಲ್ಲದವರು. ಅವರು ಅರಣ್ಯದಲ್ಲಿರುವ ಜೇನನ್ನು ಹಾಗೂ ಅರಣ್ಯದಲ್ಲಿರುವ ಅನೇಕ ವಸ್ತುಗಳನ್ನು ಸಂಗ್ರಹ ಮಾಡಿಕೊಂಡು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಈ ಸ್ಥಿರ ಸಮುದಾಯಗಳ ಕಡೆ ಸಾಗಿಸಿ ಬದುಕುತ್ತಿದ್ದವರು ಅವರು. ಅವರನ್ನು ಏಕಾಏಕಿ ಎತ್ತಿಕೊಂಡು ಬಂದು ನಮ್ಮ ಅಭಯಾರಣ್ಯ ಕಲ್ಪನೆಗಳು ನಮ್ಮ Five star ಹೊಟೇಲಿನ ಕಲ್ಪನೆಗಳು ಪ್ರವಾಸೋದ್ಯಮವನ್ನು ಬಹಳ ದೊಡ್ಡದು ಮಾಡಬೇಕು ಎಂಬ ಕಲ್ಪನೆಯೊಳಗೆ ಅಲ್ಲಿರುವಂತಹ ಸಣ್ಣ ಸಮುದಾಯಗಳನ್ನು ಸರ್ವನಾಶ ಮಾಡಬಹುದಾದಂತಹ ನಮ್ಮ ವಿಚಾರ ಎಷ್ಟರಮಟ್ಟಿಗೆ ಸರಿ? ಕಾರಣ ಏನೆಂದರೆ ಇವರಿಗೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಯಾವುದೇ ರೀತಿಯ ಐಡೆಂಟಿಟಿ ಇಲ್ಲ. ಆದ್ದರಿಂದ ಇವರಿಗೆ ಮೀಸಲಾತಿಗೆ ಸರಿಯಾದ ರೀತಿಯಲ್ಲಿ ಅನ್ವಯವಾಗುವ ಹಾಗೆ ಮಾಡಬೇಕು. ಸಾಧ್ಯವಾದರೆ ಅದರಲ್ಲಿ ಒಳಮೀಸಲಾತಿ ಕೊಡಬೇಕು. ಅಲೆಮಾರಿ ಸಮುದಾಯಗಳಿಗೆ ಇಷ್ಟು ಅಂತ ಇಡಲೇಬೇಕು. ಮೀಸಲಾತಿ ಕೊಡುವುದರ ಮೂಲಕ ನಾವು ಆಧುನಿಕ ಪರಿಸ್ಥಿತಿಯಲ್ಲಿ ಅವರೂ ಸಹ ಜೀವನ ಮಾಡಲು ಹಕ್ಕನ್ನು ಕೊಡ ಬೇಕಾಗುತ್ತದೆ. ಇಂತಹ ಮೂಲಭೂತ ವಿಷಯಗಳನ್ನು ನಮ್ಮ ಸರ್ಕಾರ ಇವತ್ತಿಗೂ ಚರ್ಚೆ ಮಾಡಿಲ್ಲ. ಏಕೆಂದರೆ ಅವರ ದೃಷ್ಟಿಯೆಲ್ಲಾ ಈ ಸ್ಥಿರ ಸಮುದಾಯಗಳು ಮತ್ತು ಬಲಾಢ್ಯ ಸಮುದಾಯಗಳು. ಯಾರು ಭೂಮಾಲೀಕರು, ಪಟ್ಟಭದ್ರರಿದ್ದಾರೆ ಅಂತಹವರ ಪರವಾಗಿ ಇರುವುದರಿಂದ ಇಂತಹ ಸಾಮಾನ್ಯ ಸಮುದಾಯಗಳನ್ನು ನಮ್ಮ ಸರ್ಕಾರಗಳು ಯಾವತ್ತಿಗೂ ಪರಿಗಣಿಸುತ್ತಿಲ್ಲ.

ಇವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ತಮ್ಮ ಸಮುದಾಯದಿಂದಲೇ ಬಂದಂತಹವರು ಸಂಘಟನೆಗಳನ್ನು ಮಾಡಿಕೊಳ್ಳಬೇಕಾಗಿದೆ. ದುರದೃಷ್ಟ ಎಂದರೆ ಕರ್ನಾಟಕದಲ್ಲಿ ಸ್ಥಿರ ಸಮುದಾಯಗಳ ಸಂಘಟನೆಯೇ ನಡೆದಿಲ್ಲ. ಇನ್ನೂ ಅಲೆಮಾರಿ ಬುಡಕಟ್ಟುಗಳ ಸಂಘಟನೆ ಎಲ್ಲಿ ಸಾಧ್ಯ ಎನ್ನುವ ಸ್ಥಿತಿ ಇದೆ. ಆದರೆ ಮಹಾರಾಷ್ಟ್ರದಲ್ಲಿ ಲಕ್ಷ್ಮಣರಾವ್ ಗಾಯಕ್ವಾಡ್‌ರವರ ಸಲಹೆಯ ಮೇರೆಗೆ ಅಲೆಮಾರಿ ಸಮುದಾಯಗಳು ಸಂಘಟನೆಯನ್ನು ಕಟ್ಟಿಕೊಂಡಿವೆ. ನಾನು ಅವರನ್ನು ಕೇಳಿದೆ ಸಾಧ್ಯವಾದರೆ ನಿಮ್ಮ ಸಂಘಟನೆಯನ್ನು ಸಾಧ್ಯವಾದಷ್ಟು ಕರ್ನಾಟಕಕ್ಕೂ ವಿಸ್ತರಿಸಿ ನಾವೆಲ್ಲರೂ ನಿಮ್ಮ ಜೊತೆ ಇರುತ್ತೇವೆ ಎಂದು. ಅಂದರೆ ಈ ರೀತಿಯಲ್ಲಿ ಸ್ಥಿರ ಸಮುದಾಯ ಏನೋ ನಿರ್ಲಕ್ಷ್ಯದಿಂದ ಇದೆ. ಆ ನಿರ್ಲಕ್ಷತೆಯನ್ನು ಹೋಗಲಾಡಿಸುವುದಕ್ಕೆ, ಈ ರೀತಿಯ ಸಂಘಟನೆಗಳು ಬೇಕಾಗುತ್ತದೆ ಮತ್ತು ಸಾಮಾಜಿಕವಾದ ಎಚ್ಚರವನ್ನು ಮೂಡಿಸುವ ಕೆಲಸಗಳಾಗಬೇಕಾಗಿದೆ. ಕೇವಲ ವಿಶ್ವವಿದ್ಯಾಲಯದವರು ಅವರ ಬಗ್ಗೆ ಅಧ್ಯಯನ ಮಾಡಬೇಕೆಂದಲ್ಲ. ಎಲ್ಲರೂ ಅವರ ಬಗ್ಗೆ ಕಾಳಜಿಯನ್ನು ವಹಿಸಬೇಕಾಗಿದೆ. ರೈತರ ಆತ್ಮಹತ್ಯೆಗಳು ಯಾಕೆ ಹೆಚ್ಚಾಗುತ್ತಿವೆ ಅಂದರೆ ಗಾಂಧಿ ಹೇಳುತ್ತಾರೆ: ಯಾವುದೇ ಒಂದು ಹಳ್ಳಿ ಅಭಿವೃದ್ಧಿ ಆಗಬೇಕೆಂದರೆ ತನ್ನಪಾಡಿಗೆ ತಾನು ಸ್ವಯಂ ಪೂರ್ಣವಾಗಬೇಕು, ಅಲಿಖಿತವಾಗಬಾರದು ಎಂದು.

ಅಲೆಮಾರಿ ಸಮುದಾಯಗಳು ಪರಾವಲಂಬಿಗಳಲ್ಲ. ಎಲ್ಲೂ ಒಂದು ಕಡೆಗೆ ಬರ ಬಂದರೂ ಕೂಡ ಅದನ್ನು ಎದುರಿಸುವ ದಿವ್ಯಜ್ಞಾನ ಅವರಿಗೆ ಇರುತ್ತದೆ. ಒಂದು ಇಕ್ಕಟ್ಟಿನ ಪ್ರಸಂಗವನ್ನು ಎದುರಿಸುವ ಕಲ್ಪನೆ ಅವರಿಗೆ ಇರುತ್ತದೆ. ಯಾಕೆಂದರೆ ಸದಾ ಬರದ ಬದುಕಿನಲ್ಲಿರುವವರು ಇವರು. ಸದಾ ಅಸ್ಥಿರ ಬದುಕನ್ನು ಅನುಭವಿಸುವವರ ಮೈಂಡ್ ಸದಾ ಕ್ರಿಯೇಟಿವ್ ಆಗಿ ಇರುತ್ತವೆ. ಮುನ್ಸೂಚನೆಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುತ್ತವೆ. ಆದರೆ ರೈತರಿಗೆ ಒಂದು ವರ್ಷ ಬರ ಬಂದರೆ ಅವರಿಗೆ ಮುನ್ಸೂಚನೆಯೇ ಇರುವುದಿಲ್ಲ. ಯಾಕೆಂದರೆ ಸ್ಥಿರ ಸಮುದಾಯಗಳು ಪರಾವಲಂಬಿಯಲ್ಲಿಯೇ ಬದುಕಿ ಅವರಿಗೆ ಯಾವುದೇ ಮುನ್ಸೂಚನೆ ಇಲ್ಲದಾಗಿದೆ. ಒಂದು ವರ್ಷದ ಬರವನ್ನು ಇವು ತಾಳಲಾಗುತ್ತಿಲ್ಲ.

ಒಂದು ಸೂಕ್ಷ್ಮವನ್ನು ಕಳೆದುಕೊಂಡ ಸ್ಥಿರ ಸಮುದಾಯಗಳು ಹಾಗೂ ಸೂಕ್ಷ್ಮತ್ವವನ್ನು ಇಟ್ಟುಕೊಂಡು ಅದೇ ರೀತಿ ವೈದ್ಯ ವಿಜ್ಞಾನವನ್ನು, ವಿಜ್ಞಾನವನ್ನು ಹಾಗೂ ಅನೇಕ ಜ್ಞಾನ ಪರಂಪರೆಗಳನ್ನು ತಮ್ಮಲ್ಲಿ ಇಟ್ಟುಕೊಂಡು ಕೂಡ ಇವತ್ತು ಅನಾಥವಾಗಿರುವ ಈ ಬುಡಕಟ್ಟು ಸಮುದಾಯಗಳು ಈ ಅಲೆಮಾರಿ ಸಮುದಾಯಗಳು ಇವುಗಳ ನಡುವೆ ಸೇತುವೆ ಮಾಡುವ ಮೂಲಕ ಬುಡಕಟ್ಟುಗಳು ಸ್ಥಿರ ಸಮುದಾಯಗಳಿಗೆ ಪೋಷಣೆ ಮಾಡುವ ಹಾಗೆಯೇ ಸ್ಥಿರ ಸಮುದಾಯಗಳು ಅಸ್ಥಿರ ಸಮುದಾಯಗಳಿಗೆ ಬೆಳಕನ್ನು ನೀಡುವ ಕೆಲಸವಾಗಬೇಕಾಗಿದೆ.

ಲಿಪ್ಯಂತರ : ನೇತ್ರಾವತಿ ಕೆ.ವಿ.

* * *