ನಿರಂತರ ಪರಿವರ್ತನಶೀಲವಾದ ಮಾನವ ಸಂಸ್ಕೃತಿಯ ಒಳತಿರುಳನ್ನು ಅರಿಯ ಬೇಕಾದರೆ ಅಲೆಮಾರಿಗಳ ಸಂಸ್ಕೃತಿಯೆಡೆಗೆ ಆದ್ಯ ಗಮನಹರಿಸಬೇಕಾಗುತ್ತದೆ. ಸಾವಿರಾರು ವರ್ಷಗಳಿಂದ ನಗರ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೆ ತಮ್ಮದೇ ಆದ ಭಾಷೆ, ದೈವ, ನಂಬಿಕೆ, ಸಂಪ್ರದಾಯಗಳನ್ನು ಹೊಂದಿರುತ್ತಾರೆ. ತಮ್ಮದೆಯಾದ ವಿಧಿ-ನಿಷೇಧಗಳನ್ನು, ಕಾಯಿದೆ ಕಾನೂನುಗಳನ್ನು ಹೊಂದಿದ್ದು,ಅನಕ್ಷರಸ್ಥ ಸಂಸ್ಕೃತಿ ಸಂಪನ್ನರಾದ ಸಮುದಾಯಗಳೇ ಅಲೆಮಾರಿ ಸಮುದಾಯವೆಂದು ಕರೆಯಬಹುದು.

ಅಲೆಮಾರಿಗಳನ್ನು ೨ ವಿಧಗಳಲ್ಲಿ ವಿಂಗಡಿಸಲಾಗುವುದು.

೧. ಅಲೆಮಾರಿ ಸಮುದಾಯ

೨. ಅರೆ ಅಲೆಮಾರಿ ಸಮುದಾಯ

ಅಲೆಮಾರಿ ಸಮುದಾಯಕ್ಕೆ ತನ್ನದೆ ಎನ್ನುವಂತಹ ಹೊಲ, ಮನೆ ಇರುವುದಿಲ್ಲ. ಆದರೆ ಅರೆ ಅಲೆಮಾರಿ ಸಮುದಾಯಕ್ಕೆ ಸ್ವಲ್ಪ ಹೊಲ ಮನೆ ಕಂಡುಬರುತ್ತದೆ. ಅಲೆಮಾರಿ ಸಮುದಾಯದವರು ಬಿಡಾರ ಹಾಕಿದಲ್ಲಿಯೇ ಬಟ್ಟೆ ಅಥವಾ ಪ್ಲಾಸ್ಟಿಕ್‌ನಿಂದ ಮಾಡಿದ ಮನೆಯೇ ಅವರಿಗೆ ಆಶ್ರಯವಾಗಿರುತ್ತದೆ. ಅವರ ಕೆಲಸವೇ ಹೊಟ್ಟೆಗೆ ಆಹಾರ ಒದಗಿಸಲು ಹೊಲದಂತೆ ಸಹಾಯಕವಾಗುತ್ತದೆ. ನಾಳೆಯದರ ಬಗ್ಗೆ ಚಿಂತಿಸಲಾರದೆ ಇಂದಿನ ದಿವಸ ಹೊಟ್ಟೆಗೆ ದೊರೆತರೆ ಸಾಕು ಎನ್ನುವ ಸ್ವಭಾವ ಅವರದು. ಕೂಡಿಡುವ ಸ್ವಭಾವ ಅರೆ ಅಲೆಮಾರಿ, ಅಲೆಮಾರಿ ಸಮುದಾಯದಲ್ಲಿ ಎಳ್ಳಷ್ಟು ಕಂಡುಬರುವುದಿಲ್ಲ. ಒಂದು ಊರಿಗೆ ಅಲೆಮಾರಿಯಾಗಿ ಹೋಗಿ ಅಲ್ಲಿ ತಮ್ಮ ಕೆಲಸ ಮುಗಿಯುವವರೆಗೆ ಮಾತ್ರ ಆ ಊರಿನಲ್ಲಿದ್ದು ನಂತರ ಮತ್ತೊಂದು ಊರಿಗೆ ಪಯಣ ಬೆಳೆಸುತ್ತಾರೆ. ಉದಾಹರಣೆಯಾಗಿ ಗಿಸಡ್ಯಾರರನ್ನು ಗಮನಿಸಬಹುದು.

ಅವರು ರೈತನ ಕೃಷಿ ಕೆಲಸಕ್ಕೆ ಸಹಾಯಕವಾಗುವ ಕೊಡಲಿ, ಕುಡಗೋಲು, ಸಲಿಕೆ, ಗುದ್ದಲಿ ಮೊದಲಾದ ಸಾಮಾನುಗಳನ್ನು ತಯಾರಿಸುತ್ತಾರೆ. ಈ ಸಾಮಾನುಗಳನ್ನು ತಯಾರಿಸಿ ಕೊಟ್ಟಂತಹ ಸಂದರ್ಭದಲ್ಲಿ ಹಣವೇ ಬೇಕೆನ್ನುವುದಿಲ್ಲ. ಅವರಿಗೆ ರೈತನಲ್ಲಿ ಬೆಳೆದ ದವಸ ಧಾನ್ಯಗಳನ್ನು ಕೊಟ್ಟರೆ ಸಾಕೆಂದು ತೃಪ್ತರಾಗುತ್ತಾರೆ. ಅವರ ಹೆಣ್ಣು ಮಕ್ಕಳು ಗಂಡಸರಿಗೆ ಸಮಾನರಾಗಿ ದುಡಿಯುತ್ತಾರೆ. ಗಂಡಸರು ಕಬ್ಬಿಣದ ಸಾಮಾನುಗಳನ್ನು ತಯಾರಿಸಲು ಕಬ್ಬಿಣವನ್ನು ಕಾಯಿಸಿದಾಗ ಅದರ ಮೇಲೆ ಹತೋಡಿಯಿಂದ ಎಡೆಬಿಡದೆ ವಸ್ತುವಿನ ಆಕಾರ ಹೊಂದುವವರೆಗೆ ಬಡೆಯುತ್ತಾರೆ. ಹೀಗೆ ಮನೆ, ಮಕ್ಕಳ ಕೆಲಸದ ಜೊತೆಗೆ ಗಂಡಸರಿಗೆ ಸಹಾಯಕರಾಗಿ ಕೆಲಸವನ್ನು ನಿರ್ವಹಿಸುತ್ತಾರೆ.

ಅರೆ ಅಲೆಮಾರಿಗಳಿಗೆ ಉದಾಹರಣೆಯಾಗಿ ಜಾತಗಾರ ಅಥವಾ ಹಗಲು ವೇಷಗಾರರನ್ನು ಗಮನಿಸಬಹುದು.

ಅವರು ತಮಗೆ ಮಾನವಿದ್ದ ಊರುಗಳಿಗೆ ಮಾತ್ರ ಹೋಗುತ್ತಾರೆ. ಆ ಊರುಗಳಿಗೆ ಹೋಗಿ ಊರ ಹೊರಗೆ ಬಿಡಾರ ಹಾಕಿರುತ್ತಾರೆ. ಅವರು ಹತ್ತರಿಂದ ಹದಿನೈದು ದಿವಸಗಳವರೆಗೆ ಮಾತ್ರ ಒಂದೊಂದು ಊರಿನಲ್ಲಿ ಇರುತ್ತಾರೆ. ಅವರು ಹೆಸರಿಗೆ ತಕ್ಕಂತೆ ಹಗಲಿನ ಸಂದರ್ಭದಲ್ಲಿ ಬೆಳಗಿನ ಜಾವ ದಿವಸಕ್ಕೆ ಒಂದರಂತೆ ವೇಷವನ್ನು ಧರಿಸಿಕೊಂಡು ಊರಲ್ಲಿ ಪ್ರತಿಯೊಂದು ಮನೆ ಮನೆಗೆ ಹೋಗಿ ಪಾತ್ರಕ್ಕೆ ಅನ್ವಯವಾಗುವಂತೆ ಮಾತುಗಳನ್ನಾಡಿ, ನೃತ್ಯಮಾಡಿ ಜನರಿಗೆ ಮನರಂಜನೆಯನ್ನು ನೀಡುತ್ತಾರೆ. ಅವರು ಹೆಣ್ಣು ಮಕ್ಕಳ ಪಾತ್ರವನ್ನು ಗಂಡಸರೆ ನಿರ್ವಹಿಸುತ್ತಾರೆ. ರಾಮಾಯಣದಲ್ಲಿನ ಸೀತೆ, ರಾಮ, ಲಕ್ಷ್ಮಣ, ಹನುಮಂತನ ಪಾತ್ರಗಳಾಗಲಿ, ಮಹಾಭಾರತದಲ್ಲಿನ ಭೀಮಾರ್ಜುನರು, ಕೃಷ್ಣನಂತ ಪಾತ್ರಗಳನ್ನು ಹಾಕಿಕೊಂಡು ಪ್ರದರ್ಶನ ನೀಡುತ್ತಾರೆ. ಅಲ್ಲದೆ ಹಾಸ್ಯ ಪಾತ್ರಗಳನ್ನು ಧರಿಸಿ ಜನರಿಗೆ ಮನರಂಜನೆ ನೀಡುವರು.

ಕೊನೆಯ ದಿವಸ ಜನರಿಗೆ ಮನರಂಜನೆಯನ್ನು ನೀಡಿದಕ್ಕೆ ಸಂಭಾವನೆಯನ್ನು ಕೇಳುತ್ತಾರೆ. ಶ್ರೀಮಂತರಿಗೆ ಎಮ್ಮೆ, ಆಕಳ ಕರು, ರೇಷ್ಮೆ ಬಟ್ಟೆಗಳನ್ನು ಕೇಳುತ್ತಾರೆ. ಬಡವರ ಮನೆಯಲ್ಲಿ ದವಸ ಧಾನ್ಯಗಳನ್ನು ಕೇಳಿ ಪಡೆದುಕೊಳ್ಳುತ್ತಾರೆ. ಹೀಗೆ ತಮ್ಮ ಜೀವನವನ್ನು ಸಾಗಿಸಿಕೊಂಡು ಹೋಗುತ್ತಾರೆ. ಅವರನ್ನು ಅರೆ ಅಲೆಮಾರಿಗಳೆಂದು ಕರೆಯಬಹುದು. ಯಾಕೆಂದರೆ ಅವರು ತಮ್ಮದೇ ಆದ ಸ್ವಲ್ಪ ಸ್ವಂತ ಆಸ್ತಿ ಹೊಂದಿರುತ್ತಾರೆ. ಹೊಲದಲ್ಲಿನ ಕೆಲಸವನ್ನು ಮುಗಿಸಿ ಅರೆ ಅಲೆಮಾರಿಗಳಾಗಿ ಊರೂರು ತಿರುಗುತ್ತಾ ಹೋಗುತ್ತಾರೆ. ಮತ್ತೆ ತಮ್ಮ ಸ್ವಂತ ಊರಿಗೆ ಬರುತ್ತಾರೆ.

ಅಲೆಮಾರಿ ಸಮುದಾಯಕ್ಕೂ ಸ್ಥಿರ ಸಮುದಾಯಕ್ಕೂ ಅಜಗಜಾಂತರ ವ್ಯತ್ಯಾಸಗಳು ಕಂಡು ಬರುತ್ತವೆ. ದೇವರ ಬಗ್ಗೆ ಗಾಢವಾದ ನಂಬಿಕೆ ಅವರಲ್ಲಿದೆ ಹಾಗೂ ಬೇಟೆಯಾಡಿತಂದಂಥ ಪ್ರಾಣಿಗಳನ್ನು ಹಂಚಿ ತಿನ್ನುವ ಗುಣ ಅಲೆಮಾರಿಗಳಲ್ಲಿ ಕಂಡು ಬರುತ್ತವೆ. ಅವರು ವಿವಾಹ ಸಂಬಂಧವನ್ನು ಹೆಚ್ಚಾಗಿ ರಕ್ತಸಂಬಂಧದಲ್ಲಿಯೇ ಬೆಳೆಸುತ್ತಾರೆ.

ಅಲೆಮಾರಿ ಸಮುದಾಯಗಳಿಗೆ ಅಭಿವೃದ್ಧಿಪರ ಕೆಲವು ಸಲಹೆಗಳು

೧. ಅಲೆಮಾರಿ ಸಮುದಾಯದಲ್ಲಿರುವ ಋಣಾತ್ಮಕ ರೂಢಿ ಸಂಪ್ರದಾಯಗಳ ತ್ಯಾಗ ಹಾಗೂ ಧನಾತ್ಮಕ ಸಂಸ್ಕೃತಿಯ ತಕ್ಷಣೆ ಆಗಬೇಕು.

೨. ಅಲೆಮಾರಿ ಸಮುದಾಯದ ಅಂಗವಿಕಲರಿಗೆ, ಅನಾಥರಿಗೆ ಮತ್ತು ಅಸಹಾಯಕವಾದ ಆಯಾ ಕುಟುಂಬದವರಿಗೆ ಸಹಾಯ ದೊರೆಯುವಂತಾಗಬೇಕು.

೩. ವಿದ್ಯಾರ್ಹತೆಯನ್ನು ಪಡೆದ ಅರೆ ಅಲೆಮಾರಿ ಸಮುದಾಯದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗದ ತರಬೇತಿ ದೊರೆಯುವಂತಾಗಬೇಕು.

೪. ತಮ್ಮ ಸಂಸ್ಕೃತಿ, ಹಬ್ಬ-ಹರಿದಿನಗಳು ಬೇರೆಯವರಿಗೆ ಕೀಳಾಗಿ ಕಂಡರೂ ತಾವು ಅದಕ್ಕೆ ಕೀಳೆಂದು ತಿಳಿದುಕೊಳ್ಳದೇ ಅಭಿಮಾನಪಡಬೇಕು.

೫. ಧೂಮಪಾನ, ಕುಡಿತ, ಜೂಜು ಮೊದಲಾದ ದುರ್ವ್ಯಸನಗಳಿಂದ ದೂರ ಉಳಿಯುವಂತಾಗಬೇಕು.

೬. ಅವರಿಗೆ ಆರ್ಥಿಕ ನೆರವು ನೀಡಿ ಸಂಸ್ಕೃತಿಗೆ ಧಕ್ಕೆ ಬರದ ರೀತಿಯ ಸಹಾಯ ನೀಡಬೇಕಾಗಿದೆ.

* * *